ಸೋಮವಾರ, ಸೆಪ್ಟೆಂಬರ್ 11, 2017


 
ಶ್ರಾವಣ ಬಂತು ಶ್ರಾವಣ
ಶ್ರಾವಣಮಾಸ ಬಂತೆಂದರೆ ಹಬ್ಬಹರಿದಿನಗಳ ಹಾಗೂ ಶುಭಕಾರ್ಯಗಳ ಮೆರವಣಿಗೆಯೇ ನಡೆಯುತ್ತದೆ! ದೇವತೆಗಳು ಸಾಲುಸಾಲಾಗಿ ಬಂದು ಪೂಜೆಯನ್ನೊಪ್ಪಿಕೊಂಡು ವರವೀಯುವ ಈ ಮಾಸ ಭಕ್ತರ ಪಾಲಿಗೆ ಸುಗ್ಗಿಕಾಲವೇ ಸರಿ! ಹೆಂಗಳೆಯರ ಜರತಾರೀ ಸೀರೆಗಳು, ಮಿನುಗುವ ಒಡವೆಗಳು, ಕೈಬಳೆಗಳ ಸಪ್ಪಳ, ಕಾಲ್ಗೆಜ್ಜೆಗಳ ಝಂಕಾರ, ಹಾಡು-ಭಜನೆ-ಸ್ತೋತ್ರ-ಮಂತ್ರಗಳ ಕಥಾಲಾಪಗಳ ಮಂಗಳಕರ ದನಿ ಪರಿಸರದಲ್ಲಿ ರಂಗೇರಿಸುತ್ತವೆ. ಬಗೆಬಗೆಯ ಗೀತನೃತ್ಯ ಕಾರ್ಯಕ್ರಮಗಳು ಬೀದಿ-ಬಡಾವಣೆಗಳಲ್ಲಿ ಮೊಳಗುತ್ತಿರುತ್ತವೆ. ಎಳೆಯ ತಳಿರು, ಮಾವಿನ ತೋರಣ, ಬಣ್ಣದ ರಂಗೋಲಿ, ಬಾಳೆಕಂಬ, ದೀಪಗಳ ಹೊಂಬೆಳಕು, ಧೂಪಗಳ ಸುವಾಸನೆ, ಅರಸಿನ-ಕುಂಕುಮ-ಗಂಧ-ಚಂದನ-ಹೂವು-ಹಣ್ಣುಗಳು ಪರಿಸರವನ್ನು ಶೋಭೆಗೊಳಿಸುತ್ತವೆ. ಭಕ್ಷ್ಯ-ಭೋಜ್ಯ-ಪೇಯಗಳಿಂದ ಕೂಡಿದ ಮೃಷ್ಟಾನ್ನಭೋಜನದ ಮನಮೋಹಕ ಪರಿಮಳ ಎಲ್ಲರನ್ನೂ ಆಹ್ವಾನಿಸುತ್ತಿರುತ್ತವೆ! ಏನಿಲ್ಲ ಎಂದರೂ ಮಾಮೂಲಿ ಅನ್ನ-ಸಾರು-ಹುಳಿ-ಕೋಸಂಬರಿ-ಪಲ್ಯಗಳ ಜೊತೆಗೆ ಕನಿಷ್ಟ ಪಾಯಸ, ಆಂಬೊಡೆ, ಹಪ್ಪಳ, ಕಲಸಿದನ್ನ ಒಬ್ಬಟ್ಟುಗಳಾದರೂ ಇರಲೇಬೇಕು ಅನ್ನಿ! ಎಂತಹ ನಾಸ್ತಿಕರೇ ಆದರೂ ಹಬ್ಬದ ಭೋಜನವನ್ನಂತೂ ಒಲ್ಲೆ ಎನ್ನಲಾರರು! ಇದರ ಜೊತೆ ಶ್ರಾವಣವೆಂದರೆ ಮದುವೆ ಮುಂಜಿ ಗೃಹಪ್ರವೇಶಾದಿ ಶುಭಕಾರ್ಯಗಳ ಸರಮಾಲೆ. ಧರ್ಮವೇದಿಕೆಗಳಲ್ಲಂತೂ ಸಾಮೂಹಿಕ-ವಿವಾಹ, ಅನ್ನಸಂತರ್ಪಣೆಗಳು ಜರುಗುತ್ತಲೇ ಇರುತ್ತವೆ. ಹೀಗೆ ವರ್ಣ-ಲಿಂಗ-ವಯಸ್ಸುಗಳ ಭೇದವೆನ್ನದೆ ಎಲ್ಲರನ್ನೂ ತನ್ನ ಸಂತೋಷ-ಸಂಭ್ರಮದಲ್ಲಿ ತೊಡಗಿಸಿಕೊಳ್ಳುತ್ತದೆ ಈ ಶ್ರಾವಣಮಾಸ.
ಶ್ರಾವಣ ಮಾಸದ ಆಚರಣೆಗಳಿಗೆ ನೈಸರ್ಗಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳಿವೆ. ಮಳೆಗಾಲವಾದರೂ ಜನರ ಸಂತಸ ಸಂಭ್ರಮಗಳಿಗೆ ಮುಕ್ತ ಅಭಿವ್ಯಕ್ತಿ ಈ ಮಾಸದಲ್ಲಾಗುತ್ತದೆ ಎನ್ನುವುದು ಗಮನೀಯ. ಶ್ರಾವಣವನ್ನು ವೇದಗಳು ನಭಸ್ ಎಂದು ಕರೆಯುತ್ತವೆ. ಆಷಾಡದ ಗಾಳಿ ತಣಿದು ಮಳೆಗೆ ಅವಕಾಶ ಕಲ್ಪಿಸುವ ಈ ಮಾಸದ ಪ್ರಾರಂಭದಲ್ಲಿ ನಭದಂಗಳದಲ್ಲಿ ಮಳೆ-ಗಾಳಿ-ಬಿಸಿಲುಗಳು ಕಣ್ಣಾಮುಚ್ಚಾಲೆಯಾಡುವುದನ್ನು ಕಾಣಬಹುದು. ಬರಬರುತ್ತ ಮೋಡವೇ ಕವಿದಿದ್ದು, ಮಳೆ ಜಿನುಗುತ್ತಲೇ ಇದ್ದು, ಸೂರ್ಯಚಂದ್ರರು ಮಂಕಾಗಿ, ಹಗಲುರಾತ್ರಿಗಳು ಕಾಂತಿಹೀನವಾಗಿ, ನಮ್ಮನ್ನು ಮನೆಯೊಳಗೇ ಇರುವಂತೆ ಪ್ರೇರೇಪಿಸುತ್ತವೆ.
ಬಹಳ ಪ್ರಾಚೀನಕಾಲದಿಂದಲೂ ನಮ್ಮ ಕವಿಗಳು ಈ ಶ್ರಾವಣದ ಸೊಬಗನ್ನು ಬಗೆಬಗೆಯಾಗಿ ವರ್ಣಿಸುತ್ತ ಬಂದಿದ್ದಾರೆ. ಈ ಆಷಾಡ-ಶ್ರಾವಣಗಳಲ್ಲಿ ಮಧ್ಯಾಹ್ನಕಾಲ ಎರಡನೆಯ ಬೇಸಿಗೆಯೋ ಎಂಬಂತೆ ಸ್ವಲ್ಪಮಟ್ಟಿಗೆ ಕಂಡರೂ, ಆಗಾಗ ಮೋಡ-ಗಾಳಿಗಳು ಬಂದು, ರಾತ್ರಿಯೂ ಬೇಗನೆ ಆವರಿಸಿ ಹವಾಮಾನವನ್ನು ಬದಲಾಯಿಸುತ್ತ ಇರುತ್ತವೆ. ಹಣ್ಣೆಲೆಗಳು ವರ್ಣಾಂತರ ಹೊಂದುತ್ತ ಕಳಚಿ ಬೀಳುತ್ತ ಅಂಗಳವನ್ನೂ ರಸ್ತೆಗಳನ್ನೂ ಆವರಿಸಿ ವಿಶಿಷ್ಟ ಸೊಬಗನ್ನೀಯುತ್ತವೆ. ಈ ಕಾಲದಲ್ಲಿ ಸಮುದ್ರತೀರಗಳಲ್ಲಿ ಚಂಡಮಾರುತಗಳು ಅಪ್ಪಳಿಸುವುದೂ ಸರ್ವೇಸಾಮಾನ್ಯ. ಭೂಮಿಯ ಉತ್ತರಭಾಗದ ಪಕ್ಷಿಗಳು ದಕ್ಷಿಣದಿಕ್ಕಿಗೆ ವಲಸೆ ಬಂದು ನೋಡುಗರಿಗೆ ಮುದವೀಯುತ್ತವೆ.
ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ಈ ಪವಿತ್ರಮಾಸದುದ್ದಕ್ಕೂ ವ್ರತಾಚರಣೆ ಮಾಡುತ್ತ ಕೇವಲ ಫಲಾಹಾರ, ಕಡಲೆ ಹಾಗೂ ಹಾಲುಗಳ ಸೇವನೆ ಹಾಗೂ ಮಾಂಸ-ಕುಡಿತಗಳ ತ್ಯಾಗ ಮಾಡುವ ಪದ್ಧತಿ ಎಲ್ಲ ಕುಲಗಳಲ್ಲೂ ಉಂಟು. ದೇವಾಸುರರು ಸಮುದ್ರಮಂಥನ ಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಲಕ್ಷ್ಮಿಯೂ ಸೇರಿದಂತೆ ಚತುರ್ದಶರತ್ನಗಳು ಉದ್ಭವಿಸಿ  ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ ಎಲ್ಲ ನೇಮಗಳೂ ಸಮೃದ್ಧಿಕಾರಕ ಎನ್ನಲಾಗುತ್ತದೆ.  
ಶ್ರಾವಣಸೋಮವಾರಗಳು ಶಿವನಿಗೂ, ಶ್ರಾವಣಮಂಗಳವಾರಗಳು ಗೌರೀಗೂ ಹಾಗೂ ಶ್ರಾವಣಶನಿವಾರಗಳು ವಿಷ್ಣುವಿಗೂ ವಿಶೇಷವೆನಿಸುತ್ತವೆ. ನಾಗಪಂಚಮಿ, ಕೃಷ್ಣಾಷ್ಟಮೀ, ವರಮಹಾಲಕ್ಷ್ಮೀ, ಉಪಾಕರ್ಮ/ರಕ್ಷಾಬಂಧನ, ಕಲ್ಕಿಜಯಂತಿ, ಕಜ್ಜಲೀತೃತೀಯ, ಪುತ್ರೈಕಾದಶೀ, ಬುಡೀತೇಜ್, ಋಷಿಪಂಚಮೀ, ಹಿಂಡೋಲೋತ್ಸವ, ಪಿಠೋರಿ, ಫೋಲಾ, ಗೋವತ್ಸಪೂಜೆ ಮುಂತಾದವು ಶ್ರಾವಣದ ಜನಪ್ರಿಯ ಹಬ್ಬಗಳು.
ಸನಾತನ ಧರ್ಮದಲ್ಲಿನ ವ್ರತ ಹಾಗೂ ಉತ್ಸವಗಳು ಋತು, ಪ್ರಕೃತಿ, ಕುಲ, ವೃತ್ತಿ ಹಾಗೂ ಪ್ರಾದೇಶಿಕ ಪ್ರಭಾವಗಳನ್ನು ಮೈದಾಳಿ ಬರುವಂತಹವು. ವರ್ಷಾಋತುವಿನಲ್ಲಿ ಬರುವುದರಿಂದ ಶ್ರಾವಣದ ಹಬ್ಬಗಳಲ್ಲಿ ಉಪವಾಸ, ಪೂಜೆ, ಜಪ, ದಾನ, ಧ್ಯಾನ ಮುಂತಾದ ವ್ರತಾಂಶಗಳೇ ಹೆಚ್ಚು. ಬಯಲಾಟ, ಬೇಟೆ, ಕೋಲಾಟ, ಕ್ರೀಡೆಗಳು, ಉದ್ಯಾನಗಮನ ಮುಂತಾದ ಕಲಾಪಗಳು ಶರದೃತು ಹಾಗೂ ವಸಂತರ್ತುಗಳಷ್ಟು ಹೆಚ್ಚಾಗಿ ಇಲ್ಲ. ಆದರೆ ಹಾಡು, ಹಸೆ, ಭೋಜನಾದಿ ಉತ್ಸವಾಂಶಗಳು ಹೇರಳವಾಗಿ ಕಾಣುತ್ತವೆ.
ಮಳೆಯ ಕಾರಣದಿಂದಾಗಿ ಪ್ರವಾಸ ಕಡಿಮೆಯಿದ್ದು ಮನೆಮಂದಿಯೆಲ್ಲ ಒಂದೆಡೆ ಇರಲು ಅನುಕೂಲಿಸುವುದರಿಂದ ಈ ಮಾಸದಲ್ಲಿ ಕೂಡಿ ಮಾಡುವ ವ್ರತೋತ್ಸವಗಳು ಹೆಚ್ಚು. ಸಂನ್ಯಾಸಿಗಳೂ ಚಾತುರ್ಮಾಸ್ಯ ವ್ರತವನ್ನು ಹಿಡಿದು ಒಂದೆಡೆ ವಾಸಿಸುವುದರಿಂದ ಜನರಿಗೆ ಗುರುಗಳಿಂದ ಧಾರ್ಮಿಕ ಪ್ರವಚನ, ಚರ್ಚೆ ಉಪದೇಶಾದಿಗಳು ಲಭ್ಯವಾಗುತ್ತವೆ.   
ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ಮನೆಯನ್ನು ತಳಿರು-ತೋರಣ-ರಂಗವಲ್ಲಿಗಳಿಂದ ಸಿಂಗರಿಸಿ, ಪೂಜಾಮಂಟಪವನ್ನು ಅಲಂಕರಿಸಿ, ಉಪವಾಸ, ಪೂಜೆ, ದಾನಧರ್ಮಗಳಲ್ಲಿ ತೊಡಗುವುದು, ಸಾಯಂಕಾಲ ಹಾಡು, ಕಥಾಶ್ರವಣ ಹಾಗೂ ತಾಂಬೂಲ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾದ ವ್ರತಾಂಶಗಳು.
ಶ್ರಾವಣದ ವ್ರತೋತ್ಸವಗಳ ಮೇಲೊಂದು ಪಕ್ಷಿನೋಟ- (ಕೃಷ್ಣಾಷ್ತಮೀ, ಗೌರೀ ಹಾಗೂ ಶ್ರಾವಣಹುಣ್ಣಿಮೆಗಳಲ್ಲಿನ ಹಲವಾರು ಸುಂದರ ವಿಚಾರಗಳನ್ನು ಮುಂದಿನ ಅಂಕಣಗಳಲ್ಲಿ ಸವಿವರವಾಗಿ ನೋಡೋಣ)
ಸೋಮವಾರದ ವ್ರತ, ಮಂಗಳಗೌರೀವ್ರತ ಹಾಗೂ ಶ್ರಾವಣಶನಿವಾರಗಳು ಶ್ರಾವಣದ ಪ್ರಮುಖವ್ರತಗಳು.
ಶ್ರಾವಣಸೋಮರಗಳಂದು ಉಪವಾಸ, ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಕ್ಷರೀ-ಜಪ, ದಾನಧರ್ಮಾದಿಗಳು ನಡೆಯುತ್ತವೆ. ಕಾವಡಿಯನ್ನು ಹೊರುವ ಪದ್ಧತಿಯೂ ಉಂಟು. ಹದಿನಾರುಸೋಮವಾರಗಳ ವ್ರತವನ್ನು ಶ್ರಾವಣದಲ್ಲೇ ಪ್ರಾರಂಭಿಸಲಾಗುತ್ತದೆ. ಮದುವೆಯಾದ ಮೊದಲ ಐದುವರ್ಷಗಳಂದು ಸುಮಂಗಲಿಯರು ಶಿವಮುಷ್ಟಿವ್ರತವನ್ನು ಆಚರಿಸುವುದುಂಟು. ಮುಷ್ಟಿಯಷ್ಟು ಅಕ್ಕಿ, ಬಿಳಿ ಎಳ್ಳು, ತೊಗರಿ, ಗೋದಿ ಹಾಗೂ ಅರಳುಗಳನ್ನು ಒಂದೊಂದಾಗಿ ಒಂದೊಂದು ಸೋಮವಾರ ಶಿವನಿಗೆ ಅರ್ಪಿಸುತ್ತ ಬರುತ್ತಾರೆ. ಈ ಮಾಸವಿಡೀ ರುದ್ರಾಕ್ಷಿಮಾಲೆ ಧರಿಸುವವರುಂಟು.  
ಮಂಗಳಗೌರೀವ್ರತವನ್ನು ಸುಮಂಗಲಿಯರು ಸೌಮಾಂಗಲ್ಯಕ್ಕಾಗಿ ಮದುವೆಯಾದ ಮೊದಲ ಐದುವರ್ಷಗಳ ಶ್ರಾವಣಮಂಗಳವಾರಗಳಲ್ಲಿ ಮಾಡುತ್ತಾರೆ. ಹದಿನಾರು ಸಂಖ್ಯೆಯಲ್ಲಿ ಮಂಗಳದ್ರವ್ಯಗಳನ್ನೂ ಗೌರಿಗೆ ಅರ್ಪಿಸಿ, ಪೂಜಿಸಿ, ತಂಬಿಟ್ಟುದೀಪದ ಆರತಿ ಎತ್ತಿ, ಅದರ ಕಾಡಿಗೆ ಪಡೆದು, ಸುಮಂಗಲಿಯರಿಗೂ ಹಂಚುತ್ತಾರೆ. ಮಂಗಳಗೌರಿಯ ಕಾಡಿಗೆ ಪಡೆಯುವುದರಲ್ಲಿ ಹೆಂಗಳೆಯರಿಗೆ ವಿಶೇಷ ಉತ್ಸಾಹ!
ನಾಗಪಂಚಮಿಯಂದು ಆದಿಶೇಷನನ್ನು ಪೂಜಿಸಲಾಗುತ್ತದೆ. ಪಂಚಪ್ರಾಣಾತ್ಮಕವಾದ ನಮ್ಮೊಳಗಿನ ಕುಂಡಲಿನೀ ಶಕ್ತಿಯನ್ನೇ ಐದುಹೆಡೆಗಳ ಸರ್ಪದ ಪ್ರತೀಕದಲ್ಲಿ ಪೂಜಿಸುವುದು ಇಲ್ಲಿನ ಮೂಲ ತತ್ವಾರ್ಥ. ವೈದಿಕ, ಆಗಮ ಹಾಗೂ ಜಾನಪದಗಳ ಅಂಶಗಳು ಸರ್ಪಪೂಜೆಯಲ್ಲಿ ಬೆರೆತಿದ್ದು, ಮುಗ್ಧಶ್ರದ್ಧೆಯವರು ‘ನಾಗದೇವತೆಗೆ ಕೋಪ ಜಾಸ್ತಿ, ದೋಷ, ತಾಪತ್ರಯಗಳನ್ನು ಉಂಟು ಮಾಡಿಯಾನು’ ಎಂದು ಹೆದರಿಯೋ, ಸಂತಾನಪ್ರಾಪ್ತಿಗಾಗಿಯೋ, ಮಕ್ಕಳ ಉನ್ನತಿಗಾಗಿಯೋ, ದೋಷಪರಿಹಾರಕ್ಕಾಗಿಯೋ ಅಥವಾ ಮೃತ್ಯುಗಂಡನಿವಾರಣೆಗಾಗಿಯೋ ಪೂಜಿಸುವುದೇ ಹೆಚ್ಚು. ಹುತ್ತದ ಹಾವಿಗೋ, ಸರ್ಪದ ಮೂರ್ತಿಗೋ ಹಾಲನ್ನೆರೆಯಲಾಗುತ್ತದೆ. ಸ್ತ್ರೀಯರು ತಮ್ಮ ಸೋದರರ ಬೆನ್ನು ತೊಳೆದು ಶುಭ ಹಾರೈಸುತ್ತಾರೆ. ಮನೆಯ ಮುಂಬಾಗಿಲಿನ ಪಕ್ಕದಲ್ಲಿ ನಾಗದೇವತೆಯ ಒಂಭತ್ತು ಅಥವಾ ಎರಡು ಚಿತ್ರಗಳನ್ನು ಅರಸಿನದಲ್ಲಿ ರಚಿಸಿ ಪೂಜಿಸಲಾಗುತ್ತದೆ. ಈ ದಿನ ಯಾರೂ ನೆಲವನ್ನು ಅಗೆಯುವುದಾಗಲಿ, ಒತ್ತುಸಾವಿಗೆ ಅಥವಾ ಪೊಡವಲಕಾಯಿಯನ್ನಾಗಲಿ ತಿನ್ನುವುದಿಲ್ಲ. ಸತ್ಯೇಶ್ವರಿದೀವಿಯ ಪ್ರೀತಿಗಾಗಿ ಉಯ್ಯಾಲೆಯಾಟ ಆಡುತ್ತ ‘ಉಯ್ಯಾಲೆಯು ತೂರಾಡುದಂತೆಯೇ ಜೀವನವೂ ಏಳುಬೀಳುಗಳಲ್ಲಿ ಹೊಯ್ದಾಡುತ್ತಿರುತ್ತದೆ, ತಾಳ್ಮೆ ಇರಲಿ’ ಎನ್ನುವ ಭಾವದ ಸಂಪ್ರದಾಯದ ಹಾಡುಗಳನ್ನು ಹೆಂಗಳೆಯರು ಹಾಡುತ್ತಾರೆ. 
ವರಮಹಾಲಕ್ಷ್ಮೀಹಬ್ಬವನ್ನು ಎರಡನೆಯ ಶ್ರಾವಣಶುಕ್ರವಾರದಂದು ಆಚರಿಸಲಾಗುತ್ತದೆ. ಕುಲ-ವರ್ಣಭೇದವಿಲ್ಲದೆ ಎಲ್ಲರೂ ಲಕ್ಷ್ಮಿಯನ್ನು ಸಂಭ್ರಮದಿಂದ ಆರಧಿಸುತ್ತಾರೆ. ಲಕ್ಷ್ಮಿಯನ್ನು ಕಲಶದಲ್ಲಿ ಷೋಡಶೋಪಚಾರ ಪೂಜೆಗೈದು, ಸುಮಂಗಲಿಯರಿಗೆ ತಾಂಬೂಲ ವಿತರಣೆ ಮಾಡಲಾಗುತ್ತದೆ. ಸೊಸೆಯಂದಿರಿಗೆ ವಸ್ತ್ರಕಾಣಿಕೆಯನ್ನು ಕೊಡುವುದುಂಟು.
ಶ್ರಾವಣ ಹುಣ್ಣಿಮೆ- ಈ ಹಬ್ಬಕ್ಕೆ ಹಲವು ವೈಶಿಷ್ಟ್ಯಗಳು. ವೇದಕಾಲದಿಂದ ಆಚರಿಸಲಾಗುತ್ತಿರುವ ಉಪಾಕರ್ಮ, ರಕ್ಷಾಬಂಧನ, ನಾರಾಲೀ-ಪೂರ್ಣಿಮಾ, ಪೋಲಾ, ಪಾಣಿನೀಮಹರ್ಷಿಗಳ ಪುಣ್ಯದಿನ ಹಾಗೂ ಸಂಸ್ಕೃತದಿವಸಗಳು ಈ ದಿನವೇ ಆಚರಣೆಗೊಳ್ಳುತ್ತವೆ.
ಕೃಷ್ಣಜನ್ಮಾಷ್ಟಮಿಹಬ್ಬ ಭಾರತದಲ್ಲಿ ಎಲ್ಲೆಡೆ ಆಚರಿಸಲಾಗುವ ಬಲುಸಂಭ್ರಮದ ಹಬ್ಬ. ಕೆಲವರು ಉಪವಾಸ ಜಪತಪಗಳ ಮೂಲಕ ಕೃಷ್ಣಭಕ್ತಿಯನ್ನು ಮೆರೆದರೆ ಕೆಲವರು ಅನ್ನದಾನ ಗೀತನೃತ್ಯಗಳ ಸಂಭ್ರಮದಲ್ಲಿ ತೊಡಗುತ್ತಾರೆ. ನಮ್ಮ ನಾಡಿನಲ್ಲಂತೂ ಕೃಷ್ಣನನ್ನು ತೊಟ್ಟಿಲಲ್ಲಿಟ್ಟು ಹಾಡಿ ತೂಗಿ, ಪೂಜಿಸಿ, ಶ್ರಮವಹಿಸಿ ಮಾಡಿಟ್ಟ ಉಂಡೆ-ಚಕ್ಕುಲಿ-ಭಕ್ಷ್ಯಗಳನ್ನು ಬಂಧುಮಿತ್ರರಿಗೂ ನೆರೆಕೆರೆಯವರಿಗೂ ಹಂಚವುದೇ ಒಂದು ದೊಡ್ಡ ಸಂಭ್ರಮ.  
ಶ್ರಾವಣಶನಿವಾರಗಳು ಸಂಪತ್-ಶನಿವಾರಗಳೆನಿಸುತ್ತವೆ. ಮನೆಯ ಪುರುಷರು ಬೆಳಿಗ್ಗೆ ಸ್ನಾತರಾಗಿ ಶುಭ್ರವಸ್ತ್ರ ಮತ್ತು ನಾಮಗಳನ್ನು ಧರಿಸಿ, ತಂಬಿಗೆ ಹಿಡಿದು ಮಧುಕರೀಭಿಕ್ಷೆಗೆ ಹೋಗುತ್ತಾರೆ. ಸಂಗ್ರಹವಾದ ಧಾನ್ಯವನ್ನು ಬೇಯಿಸಿ ನೈವೇದ್ಯ ಮಾಡಿ ಎಲ್ಲರಿಗೂ ಹಂಚುತ್ತಾರೆ. ಹರಿನಾಮಸ್ಮರಣೆ, ವಿಷ್ಣುಸಹಸ್ರನಾಮ-ಪಾರಾಯಣ, ದಾನದಿಗಳು ಈ ವ್ರತದ ಮುಖ್ಯಾಂಶಗಳು. ಹೀಗೆ ಊಂಛವೃತ್ತಿ ಮಾಡುವುದು ಅಹಂಕಾರನಾಶಕ್ಕೆ ಸುಂದರ ಸಂಕೇತ.
ಕಜ್ಜಲೀ-ತೃತೀಯ ಎಂಬ ವಿಷ್ಣುಪೂಜೆಯ ಹಬ್ಬವನ್ನು ಕೆಲವು ಪ್ರಾಂತಗಳಲ್ಲಿ ಆಚರಿಸುತ್ತಾರೆ.
ಶ್ರಾವಣದ ಶುಕ್ರವಾರಗಳಂದು ಜೀವಂತಿಕಾಪೂಜೆಯನ್ನು ಮಾಡುವ ಪದ್ಧತಿ ಇದೆ. ಗೋಡೆ ಅಥವಾ ಪಲಕದ ಮೇಲೆ ಜೀವಂತಿಕಾದೇವಿಯ ಚಿತ್ರವನ್ನು ಶ್ರೀಗಂಧದಿಂದ ರಚಿಸಿ, ಪೂಜಿಸಿ, ಐವರು ಸಂತಾನವತಿಯರಾದ ಸುಮಂಗಲಿಯರಿಗೆ ಊಟ ಹಾಕಿ, ಹಾಲು, ಸಕ್ಕರೆ ಮತ್ತು ಉರಿಗಡಲೆಗಳೊಡನೆ ತಾಂಬೂಲವನ್ನು ಕೊಡಲಾಗುತ್ತದೆ.
ವಿಷ್ಣುವಿನ ಕಲ್ಕೀಅವತಾರದ ಜನ್ಮವೂ ಇದೇ ಮಾಸದ ಶುಕ್ಲಷಷ್ಟಿಯಲ್ಲಿ ಭವಿಷ್ಯದಲ್ಲಿ ಆಗುವುದೆಂದು ಪುರಾಣೋಕ್ತಿ. ಈ ದಿನವೂ ವಿಷ್ಣುಧ್ಯಾನಕ್ಕೆ ಪ್ರಶಸ್ತ. ‘ನಿಷ್ಕಳಂಕಾವತಾರ’ ಎನ್ನುವ ಕೀರ್ತಿಗೆ ಭಾಜನವಾದ ಈ ಕಲ್ಕಿ ಅವತಾರವು ಮ್ಲೇಚ್ಛಶಕ್ತಿಗಳು ತಂದ ಭೋಗಬುದ್ಧಿಯನ್ನೂ ತತ್ಫಲವಾದ ಅಧರ್ಮವನ್ನು ಅಳಿಸಿ ಧರ್ಮವನ್ನು ನೆಲೆಗೊಳಿಸುತ್ತದೆ.
ಬುಡೀತೇಜ್ ಎನ್ನುವ ಹಬ್ಬವನ್ನು ಉತ್ತರಭಾರತದಲ್ಲಿ ಆಚರಿಸುತ್ತಾರೆ. ವೃದ್ಧ ಮಹಿಳೆಯರು ಉಯ್ಯಾಲೆಯಾಡುತ್ತ ಸಂಪ್ರದಾಯಗೀತೆಗಳನ್ನು ಹಾಡುತ್ತಾರೆ. ಒಪ್ಪೊತ್ತು ಉಂಡು ಪೂಜೆಗೈಯುವ ಚಿಕ್ಕಪ್ರಾಯದ ಮಹಿಳೆಯರು ಇವರಿಗೆ ನಮಸ್ಕರಿಸಿ ಕಲ್ಲುಸಕ್ಕರೆ ಹಾಗೂ ಕಾಣಿಕೆಗಳನ್ನು ಕೊಟ್ಟು ಸತ್ಕರಿಸುತ್ತಾರೆ. ವೃದ್ಧೆಯರು ಪ್ರತಿಯಾಗಿ ಹಣ್ಣು ಸಿಹಿತಿನಿಸುಗಳನ್ನು ತಿನ್ನಿಸಿ ಆಶೀರ್ವದಿಸುತ್ತಾರೆ.
ಪಿತೋರೀ-ಅಮಾವಾಸ್ಯೆವ್ರತವನ್ನು ಮಕ್ಕಳ ಆಯುರಾರೋಗ್ಯಕ್ಕಾಗಿ ಮಾಡಲಾಗುತ್ತದೆ. ಹಿಟ್ಟಿನಿಂದ ಅರವತ್ತುನಾಲ್ಕು ಯೋಗಿನಿಯರ ಮೂರ್ತಿಗಳನ್ನು ನಿರ್ಮಿಸಿ, ಹಿಟ್ಟನ್ನೇ ನೈವೇದ್ಯ ಮಾಡಿ ಪೂಜೆ ಮಾಡಲಾಗುತ್ತದೆ. ದಿನವಿಡೀ ಉಪವಾಸ ಮಾಡುವವರುಂಟು. ಸಪ್ತಮಾತೃಕೆಯರ ಪೂಜೆಗೂ ಈ ದಿನ ಪ್ರಶಸ್ತ. ಪುತ್ರಪ್ರಾಪ್ತಿಗಾಗಿ ಸಾಕ್ಷಾತ್ ಶಚೀದೇವಿಯೇ ಈ ವ್ರತವನ್ನು ಆಚರಿಸಿದಳೆಂದು ಪುರಾಣೋಕ್ತಿ.
ಪುತ್ರೈಕಾದಶೀವ್ರತವನ್ನು ಶ್ರಾವಣಶುಕ್ಲಏಕಾದಶಿಯಂದು ಪುತ್ರಪ್ರಾಪ್ತಿಗಾಗಿ ಹಾಗೂ ಪುತ್ರರ ಶ್ರೇಯಸ್ಸಿಗಾಗಿ ಮಾತೆಯರು ಆಚರಿಸುತ್ತಾರೆ. ಜನ್ಮಾಂತರದ ಪ್ರಾರಬ್ಧದಕರ್ಮದಿಂದ ಸಂತಾನಹೀನತೆಯುಂತಾಗಿದ್ದಲ್ಲಿ ಈ ಏಕಾದಶಿ ಉಪವಾಸ ಮಾಡಿ ಅದನ್ನು ಬಗೆಹರಿಸಿಕೊಳ್ಳಬಹುದು ಎನ್ನುವ ನಂಬಿಕೆ ಇದೆ.  
ಸೀತಲಾಸಪ್ತಮೀಯಂದು ಸೀತಳಾದೇವಿಯನ್ನು ಮಣ್ಣಿನ ಕಲಶದಲ್ಲಿ ಆರಾಧಿಸಲಾಗುತ್ತದೆ. ಸಿಡುಬು ಕಾಯಿಲೆಯಿಂದ ರಕ್ಷಿಸುವಂತೆ ಹಲವು ದೇಗುಲಗಳಲ್ಲಿ ಸೀತಾಳೆದೇವಿಗೆ ಪೂಜೆ ಸಲ್ಲುತ್ತದೆ. ಯಾವುದೇ ಬಿಸಿಪದಾರ್ಥವನ್ನು ಪಾನೀಯವನ್ನೂ ಈ ದಿನ ಸೇವಿಸುವುದಿಲ್ಲ.
ಶ್ರಾವಣಶನಿವಾರಗಳಂದು ಶನೈಶ್ಚರನ ಆರಾಧನೆಯನ್ನು ಉಪವಾಸ, ಜಪ, ದಾನ ಹಾಗೂ ಶನಿಮಾಹಾತ್ಮ್ಯಗ್ರಂಥದ ಪುಣ್ಯಕಥಾಶ್ರವಣಗಳ  ಮೂಲಕ ಆಚರಿಸಲಾಗುತ್ತದೆ.
ಚೂಡಿಪೂಜ ಎನ್ನುವ ಹಬ್ಬವನ್ನು ಉತ್ತರಭಾರತದಲ್ಲಿ ಶ್ರಾವಣಶುಕ್ರವಾರಗಳು ಹಾಗೂ ಭಾನುವಾರಗಳಂದು ಆಚರಿಸುತ್ತಾರೆ. ತಾವೇ ಕಟ್ಟಿದ ಪುಟ್ಟ ಹೂದಾಣಿಗಳನ್ನು ತುಳಸೀದೇವಿಗೆ ಅರ್ಪಿಸಿ, ಫುಜಿಸಿ, ಆ ಚೂಡಿಗಳನ್ನು ಹಿರಿಯ ಮುತ್ತೈದೆಯರಿಗೆ ಕೊಟ್ಟು ನಮಸ್ಕರಿಸುತ್ತಾರೆ.
ಋಷಿಪಂಚಮಿಯಂದು ಕಾಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಹಾಗೂ ವಸಿಷ್ಟರೆನ್ನುವ  ಸಪ್ತರ್ಷಿಗಳಿಗೆ ತರ್ಪಣ ನೀಡಲಾಗುತ್ತದೆ. ಶ್ರೋತ್ರಿಯರನ್ನೋ, ಸದಾಚಾರಸಂಪನ್ನರಾದ ವೃದ್ಧದಂಪತಿಗಳನ್ನೋ ಅನ್ನ-ವಸ್ತ್ರ-ದಕ್ಷಿಣೆ-ಕಾಣಿಕೆಗಳಿಂದ ಸತ್ಕರಿಸಲಾಗುತ್ತದೆ. ನಮಗೆ ಐಹಿಕ ಹಾಗೂ ಪಾರಮಾರ್ಥಿಕ ವಿದ್ಯೆಗಳ ನೈಜಬೋಧೆಯನ್ನು ಪ್ರಸಾದಿಸುವ ನಿತ್ಯಗುರುಗಳಾದ ಸಪ್ತರ್ಷಿಗಳನ್ನು ಸ್ಮರಿಸಿ ಕೃತಜ್ಞಕ್ಜತೆಯನ್ನು ಸಲ್ಲಿಸುವುದೇ ಈ ಹಬ್ಬದ ಉದ್ದಿಶ್ಯ.
ಹಿಂಡೋಲೋತ್ಸವ- ಶ್ರಾವಣದ ಶುಕ್ಲಪಕ್ಷದ ಏಕಾದಶಿಯಿಂದ ಫುರ್ಣಮಿಯವರೆಗೂ ಉತ್ತರಭಾರದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬೆಳ್ಳಿಯ ಉಯ್ಯಾಲೆಗಳಲ್ಲಿ ರಾಧಾಕೃಷ್ಣರ ಪ್ರತಿಮೆಗಳನ್ನಿಟ್ಟು ಪೂಜಿಸಿ ಹಾಡಿ ತೂಗಲಾಗುತ್ತದೆ.
ಗೋವತ್ಸಪೂಜೆಯನ್ನು ಶ್ರಾವಣಕೃಷ್ಣಚತುರ್ಥಿಯಂದು ಆಚರಿಸಲಾಗುತ್ತವೆ. ಹೆಂಗಳೆಯರು ಹಸುಕರುಗಳನ್ನು ಪೂಜಿಸಿ ಹೊಟ್ಟೆತುಂಬ ತಿನ್ನಿಸುತ್ತಾರೆ. ಮನೆಯಂಗಳದಲ್ಲಿಯೂ ಗೋಪಾದವನ್ನು ರಚಿಸಿ ಪೂಜಿಸುತ್ತಾರೆ.
ಇವಲ್ಲದೆ ಶ್ರಾವಣದ ಏಕಾದಶಿಯಂದು ಕಾಮಿಕ ಏಕಾದಶೀ, ಪವಿತ್ರಏಕಾದಶೀಗಳನ್ನೂ ಆಚರಿಸಲಾಗುತ್ತದೆ. ಶ್ರಾವಣದ ಅಮಾವಾಸ್ಯೆಯನ್ನು ಸೋಮವತೀ ಅಮಾವಾಸ್ಯೆ ಎಂದೂ ಆಚರಿಸಲಾಗುತ್ತದೆ.
ಈ ಪುಣ್ಯಕರ ಶ್ರಾವಣಮಾಸದಲ್ಲಿ ನಾವು ಸ್ವಹಿತ ಹಾಗೂ ಸರ್ವಹಿತಸಾಧಕವಾದ ಪುಣ್ಯಕರ್ಮಗಲಲ್ಲಿ ತೊಡಗೋಣ. ದೇವತೆಗಳು ನಮಗೆಲ್ಲ ಸಂತೋಷ-ಸಮೃದ್ಧಿ-ಸಂತೃಪ್ತಿಗಳನ್ನೀಯಲಿ, ನಾಡಿನಲ್ಲೆಲ್ಲೆಲ್ಲೂ ಸೌಹಾರ್ದತೆ ಶಾಂತಿಗಳನ್ನು ನೆಲೆಗೊಳಿಸಲಿ ಎಂದು ಪ್ರಾಥಿಸೋಣ.

text box- ಆಚರ-ವಿಚಾರ
ಕಲ್ಲು ಪ್ರಕೃತಿ. ಅದು ಶಿಲ್ಪಿಯ ಕೈಯಲ್ಲಿ ಆಕೃತಿ ಪಡೆದಾಗ ‘ಸಂಸ್ಕೃತಿ’ ಎನಿಸುತ್ತದೆ. ಮನುಷ್ಯನು ಜೀವನವನ್ನು ಹೇಗೋ ಒಂದು ಬಗೆಯಲ್ಲಿ ಬಾಳಿ ಮುಗಿಸುವುದಂತೂ ಇದ್ದೇ ಇರುತ್ತದೆ. ಆದರೆ ಅದರಲ್ಲಿ ಧ್ಯೇಯ ಹಾಗೂ ವಿಕಾಸಪ್ರಾಯ ಜೀವನಶೈಲಿ ಇರದಿದ್ದಲ್ಲಿ ಅದು ಅರ್ಥಹೀನವೇ ಸರಿ. ಮೌಲ್ಯ, ಸಂಸ್ಕೃತಿ, ಧರ್ಮಪ್ರಜ್ಞೆ, ಸರ್ವಹಿತದೃಷ್ಟಿ ಹಾಗೂ ಪರತತ್ವದ ಜಿಜ್ಞಾಸೆಗಳೆಂಬ ‘ವಿಚಾರ’ ಹಾಗೂ ಅದರ ಅನುಷ್ಠಾನ ಎನ್ನುವ ‘ಆಚಾರ’ ಸೇರಿದಾಗಲೇ ಜೀವನಕ್ಕೆ ಒಂದು ಊರ್ಧ್ವಮುಖತೆ ಸಿಗುವುದು. ಭಾರತೀಯ ಚಿಂತನಧಾರೆಯಲ್ಲಿ ಹರಿದು ಬಂದ ಈ ‘ಆಚಾರ-ವಿಚಾರ’ಗಳ ಹಲವು ಮುಖಗಳ ಇಣುಕುನೋಟವನ್ನು ಮಾಡುವುದೇ ಈ ಅಂಕಣದ ಉದ್ದೇಶ. 


ಡಾ ಆರತಿ . ವಿ . ಬಿ