ಸೋಮವಾರ, ಸೆಪ್ಟೆಂಬರ್ 11, 2017


 
ಶ್ರಾವಣ ಬಂತು ಶ್ರಾವಣ
ಶ್ರಾವಣಮಾಸ ಬಂತೆಂದರೆ ಹಬ್ಬಹರಿದಿನಗಳ ಹಾಗೂ ಶುಭಕಾರ್ಯಗಳ ಮೆರವಣಿಗೆಯೇ ನಡೆಯುತ್ತದೆ! ದೇವತೆಗಳು ಸಾಲುಸಾಲಾಗಿ ಬಂದು ಪೂಜೆಯನ್ನೊಪ್ಪಿಕೊಂಡು ವರವೀಯುವ ಈ ಮಾಸ ಭಕ್ತರ ಪಾಲಿಗೆ ಸುಗ್ಗಿಕಾಲವೇ ಸರಿ! ಹೆಂಗಳೆಯರ ಜರತಾರೀ ಸೀರೆಗಳು, ಮಿನುಗುವ ಒಡವೆಗಳು, ಕೈಬಳೆಗಳ ಸಪ್ಪಳ, ಕಾಲ್ಗೆಜ್ಜೆಗಳ ಝಂಕಾರ, ಹಾಡು-ಭಜನೆ-ಸ್ತೋತ್ರ-ಮಂತ್ರಗಳ ಕಥಾಲಾಪಗಳ ಮಂಗಳಕರ ದನಿ ಪರಿಸರದಲ್ಲಿ ರಂಗೇರಿಸುತ್ತವೆ. ಬಗೆಬಗೆಯ ಗೀತನೃತ್ಯ ಕಾರ್ಯಕ್ರಮಗಳು ಬೀದಿ-ಬಡಾವಣೆಗಳಲ್ಲಿ ಮೊಳಗುತ್ತಿರುತ್ತವೆ. ಎಳೆಯ ತಳಿರು, ಮಾವಿನ ತೋರಣ, ಬಣ್ಣದ ರಂಗೋಲಿ, ಬಾಳೆಕಂಬ, ದೀಪಗಳ ಹೊಂಬೆಳಕು, ಧೂಪಗಳ ಸುವಾಸನೆ, ಅರಸಿನ-ಕುಂಕುಮ-ಗಂಧ-ಚಂದನ-ಹೂವು-ಹಣ್ಣುಗಳು ಪರಿಸರವನ್ನು ಶೋಭೆಗೊಳಿಸುತ್ತವೆ. ಭಕ್ಷ್ಯ-ಭೋಜ್ಯ-ಪೇಯಗಳಿಂದ ಕೂಡಿದ ಮೃಷ್ಟಾನ್ನಭೋಜನದ ಮನಮೋಹಕ ಪರಿಮಳ ಎಲ್ಲರನ್ನೂ ಆಹ್ವಾನಿಸುತ್ತಿರುತ್ತವೆ! ಏನಿಲ್ಲ ಎಂದರೂ ಮಾಮೂಲಿ ಅನ್ನ-ಸಾರು-ಹುಳಿ-ಕೋಸಂಬರಿ-ಪಲ್ಯಗಳ ಜೊತೆಗೆ ಕನಿಷ್ಟ ಪಾಯಸ, ಆಂಬೊಡೆ, ಹಪ್ಪಳ, ಕಲಸಿದನ್ನ ಒಬ್ಬಟ್ಟುಗಳಾದರೂ ಇರಲೇಬೇಕು ಅನ್ನಿ! ಎಂತಹ ನಾಸ್ತಿಕರೇ ಆದರೂ ಹಬ್ಬದ ಭೋಜನವನ್ನಂತೂ ಒಲ್ಲೆ ಎನ್ನಲಾರರು! ಇದರ ಜೊತೆ ಶ್ರಾವಣವೆಂದರೆ ಮದುವೆ ಮುಂಜಿ ಗೃಹಪ್ರವೇಶಾದಿ ಶುಭಕಾರ್ಯಗಳ ಸರಮಾಲೆ. ಧರ್ಮವೇದಿಕೆಗಳಲ್ಲಂತೂ ಸಾಮೂಹಿಕ-ವಿವಾಹ, ಅನ್ನಸಂತರ್ಪಣೆಗಳು ಜರುಗುತ್ತಲೇ ಇರುತ್ತವೆ. ಹೀಗೆ ವರ್ಣ-ಲಿಂಗ-ವಯಸ್ಸುಗಳ ಭೇದವೆನ್ನದೆ ಎಲ್ಲರನ್ನೂ ತನ್ನ ಸಂತೋಷ-ಸಂಭ್ರಮದಲ್ಲಿ ತೊಡಗಿಸಿಕೊಳ್ಳುತ್ತದೆ ಈ ಶ್ರಾವಣಮಾಸ.
ಶ್ರಾವಣ ಮಾಸದ ಆಚರಣೆಗಳಿಗೆ ನೈಸರ್ಗಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳಿವೆ. ಮಳೆಗಾಲವಾದರೂ ಜನರ ಸಂತಸ ಸಂಭ್ರಮಗಳಿಗೆ ಮುಕ್ತ ಅಭಿವ್ಯಕ್ತಿ ಈ ಮಾಸದಲ್ಲಾಗುತ್ತದೆ ಎನ್ನುವುದು ಗಮನೀಯ. ಶ್ರಾವಣವನ್ನು ವೇದಗಳು ನಭಸ್ ಎಂದು ಕರೆಯುತ್ತವೆ. ಆಷಾಡದ ಗಾಳಿ ತಣಿದು ಮಳೆಗೆ ಅವಕಾಶ ಕಲ್ಪಿಸುವ ಈ ಮಾಸದ ಪ್ರಾರಂಭದಲ್ಲಿ ನಭದಂಗಳದಲ್ಲಿ ಮಳೆ-ಗಾಳಿ-ಬಿಸಿಲುಗಳು ಕಣ್ಣಾಮುಚ್ಚಾಲೆಯಾಡುವುದನ್ನು ಕಾಣಬಹುದು. ಬರಬರುತ್ತ ಮೋಡವೇ ಕವಿದಿದ್ದು, ಮಳೆ ಜಿನುಗುತ್ತಲೇ ಇದ್ದು, ಸೂರ್ಯಚಂದ್ರರು ಮಂಕಾಗಿ, ಹಗಲುರಾತ್ರಿಗಳು ಕಾಂತಿಹೀನವಾಗಿ, ನಮ್ಮನ್ನು ಮನೆಯೊಳಗೇ ಇರುವಂತೆ ಪ್ರೇರೇಪಿಸುತ್ತವೆ.
ಬಹಳ ಪ್ರಾಚೀನಕಾಲದಿಂದಲೂ ನಮ್ಮ ಕವಿಗಳು ಈ ಶ್ರಾವಣದ ಸೊಬಗನ್ನು ಬಗೆಬಗೆಯಾಗಿ ವರ್ಣಿಸುತ್ತ ಬಂದಿದ್ದಾರೆ. ಈ ಆಷಾಡ-ಶ್ರಾವಣಗಳಲ್ಲಿ ಮಧ್ಯಾಹ್ನಕಾಲ ಎರಡನೆಯ ಬೇಸಿಗೆಯೋ ಎಂಬಂತೆ ಸ್ವಲ್ಪಮಟ್ಟಿಗೆ ಕಂಡರೂ, ಆಗಾಗ ಮೋಡ-ಗಾಳಿಗಳು ಬಂದು, ರಾತ್ರಿಯೂ ಬೇಗನೆ ಆವರಿಸಿ ಹವಾಮಾನವನ್ನು ಬದಲಾಯಿಸುತ್ತ ಇರುತ್ತವೆ. ಹಣ್ಣೆಲೆಗಳು ವರ್ಣಾಂತರ ಹೊಂದುತ್ತ ಕಳಚಿ ಬೀಳುತ್ತ ಅಂಗಳವನ್ನೂ ರಸ್ತೆಗಳನ್ನೂ ಆವರಿಸಿ ವಿಶಿಷ್ಟ ಸೊಬಗನ್ನೀಯುತ್ತವೆ. ಈ ಕಾಲದಲ್ಲಿ ಸಮುದ್ರತೀರಗಳಲ್ಲಿ ಚಂಡಮಾರುತಗಳು ಅಪ್ಪಳಿಸುವುದೂ ಸರ್ವೇಸಾಮಾನ್ಯ. ಭೂಮಿಯ ಉತ್ತರಭಾಗದ ಪಕ್ಷಿಗಳು ದಕ್ಷಿಣದಿಕ್ಕಿಗೆ ವಲಸೆ ಬಂದು ನೋಡುಗರಿಗೆ ಮುದವೀಯುತ್ತವೆ.
ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ಈ ಪವಿತ್ರಮಾಸದುದ್ದಕ್ಕೂ ವ್ರತಾಚರಣೆ ಮಾಡುತ್ತ ಕೇವಲ ಫಲಾಹಾರ, ಕಡಲೆ ಹಾಗೂ ಹಾಲುಗಳ ಸೇವನೆ ಹಾಗೂ ಮಾಂಸ-ಕುಡಿತಗಳ ತ್ಯಾಗ ಮಾಡುವ ಪದ್ಧತಿ ಎಲ್ಲ ಕುಲಗಳಲ್ಲೂ ಉಂಟು. ದೇವಾಸುರರು ಸಮುದ್ರಮಂಥನ ಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಲಕ್ಷ್ಮಿಯೂ ಸೇರಿದಂತೆ ಚತುರ್ದಶರತ್ನಗಳು ಉದ್ಭವಿಸಿ  ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ ಎಲ್ಲ ನೇಮಗಳೂ ಸಮೃದ್ಧಿಕಾರಕ ಎನ್ನಲಾಗುತ್ತದೆ.  
ಶ್ರಾವಣಸೋಮವಾರಗಳು ಶಿವನಿಗೂ, ಶ್ರಾವಣಮಂಗಳವಾರಗಳು ಗೌರೀಗೂ ಹಾಗೂ ಶ್ರಾವಣಶನಿವಾರಗಳು ವಿಷ್ಣುವಿಗೂ ವಿಶೇಷವೆನಿಸುತ್ತವೆ. ನಾಗಪಂಚಮಿ, ಕೃಷ್ಣಾಷ್ಟಮೀ, ವರಮಹಾಲಕ್ಷ್ಮೀ, ಉಪಾಕರ್ಮ/ರಕ್ಷಾಬಂಧನ, ಕಲ್ಕಿಜಯಂತಿ, ಕಜ್ಜಲೀತೃತೀಯ, ಪುತ್ರೈಕಾದಶೀ, ಬುಡೀತೇಜ್, ಋಷಿಪಂಚಮೀ, ಹಿಂಡೋಲೋತ್ಸವ, ಪಿಠೋರಿ, ಫೋಲಾ, ಗೋವತ್ಸಪೂಜೆ ಮುಂತಾದವು ಶ್ರಾವಣದ ಜನಪ್ರಿಯ ಹಬ್ಬಗಳು.
ಸನಾತನ ಧರ್ಮದಲ್ಲಿನ ವ್ರತ ಹಾಗೂ ಉತ್ಸವಗಳು ಋತು, ಪ್ರಕೃತಿ, ಕುಲ, ವೃತ್ತಿ ಹಾಗೂ ಪ್ರಾದೇಶಿಕ ಪ್ರಭಾವಗಳನ್ನು ಮೈದಾಳಿ ಬರುವಂತಹವು. ವರ್ಷಾಋತುವಿನಲ್ಲಿ ಬರುವುದರಿಂದ ಶ್ರಾವಣದ ಹಬ್ಬಗಳಲ್ಲಿ ಉಪವಾಸ, ಪೂಜೆ, ಜಪ, ದಾನ, ಧ್ಯಾನ ಮುಂತಾದ ವ್ರತಾಂಶಗಳೇ ಹೆಚ್ಚು. ಬಯಲಾಟ, ಬೇಟೆ, ಕೋಲಾಟ, ಕ್ರೀಡೆಗಳು, ಉದ್ಯಾನಗಮನ ಮುಂತಾದ ಕಲಾಪಗಳು ಶರದೃತು ಹಾಗೂ ವಸಂತರ್ತುಗಳಷ್ಟು ಹೆಚ್ಚಾಗಿ ಇಲ್ಲ. ಆದರೆ ಹಾಡು, ಹಸೆ, ಭೋಜನಾದಿ ಉತ್ಸವಾಂಶಗಳು ಹೇರಳವಾಗಿ ಕಾಣುತ್ತವೆ.
ಮಳೆಯ ಕಾರಣದಿಂದಾಗಿ ಪ್ರವಾಸ ಕಡಿಮೆಯಿದ್ದು ಮನೆಮಂದಿಯೆಲ್ಲ ಒಂದೆಡೆ ಇರಲು ಅನುಕೂಲಿಸುವುದರಿಂದ ಈ ಮಾಸದಲ್ಲಿ ಕೂಡಿ ಮಾಡುವ ವ್ರತೋತ್ಸವಗಳು ಹೆಚ್ಚು. ಸಂನ್ಯಾಸಿಗಳೂ ಚಾತುರ್ಮಾಸ್ಯ ವ್ರತವನ್ನು ಹಿಡಿದು ಒಂದೆಡೆ ವಾಸಿಸುವುದರಿಂದ ಜನರಿಗೆ ಗುರುಗಳಿಂದ ಧಾರ್ಮಿಕ ಪ್ರವಚನ, ಚರ್ಚೆ ಉಪದೇಶಾದಿಗಳು ಲಭ್ಯವಾಗುತ್ತವೆ.   
ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ಮನೆಯನ್ನು ತಳಿರು-ತೋರಣ-ರಂಗವಲ್ಲಿಗಳಿಂದ ಸಿಂಗರಿಸಿ, ಪೂಜಾಮಂಟಪವನ್ನು ಅಲಂಕರಿಸಿ, ಉಪವಾಸ, ಪೂಜೆ, ದಾನಧರ್ಮಗಳಲ್ಲಿ ತೊಡಗುವುದು, ಸಾಯಂಕಾಲ ಹಾಡು, ಕಥಾಶ್ರವಣ ಹಾಗೂ ತಾಂಬೂಲ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾದ ವ್ರತಾಂಶಗಳು.
ಶ್ರಾವಣದ ವ್ರತೋತ್ಸವಗಳ ಮೇಲೊಂದು ಪಕ್ಷಿನೋಟ- (ಕೃಷ್ಣಾಷ್ತಮೀ, ಗೌರೀ ಹಾಗೂ ಶ್ರಾವಣಹುಣ್ಣಿಮೆಗಳಲ್ಲಿನ ಹಲವಾರು ಸುಂದರ ವಿಚಾರಗಳನ್ನು ಮುಂದಿನ ಅಂಕಣಗಳಲ್ಲಿ ಸವಿವರವಾಗಿ ನೋಡೋಣ)
ಸೋಮವಾರದ ವ್ರತ, ಮಂಗಳಗೌರೀವ್ರತ ಹಾಗೂ ಶ್ರಾವಣಶನಿವಾರಗಳು ಶ್ರಾವಣದ ಪ್ರಮುಖವ್ರತಗಳು.
ಶ್ರಾವಣಸೋಮರಗಳಂದು ಉಪವಾಸ, ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಕ್ಷರೀ-ಜಪ, ದಾನಧರ್ಮಾದಿಗಳು ನಡೆಯುತ್ತವೆ. ಕಾವಡಿಯನ್ನು ಹೊರುವ ಪದ್ಧತಿಯೂ ಉಂಟು. ಹದಿನಾರುಸೋಮವಾರಗಳ ವ್ರತವನ್ನು ಶ್ರಾವಣದಲ್ಲೇ ಪ್ರಾರಂಭಿಸಲಾಗುತ್ತದೆ. ಮದುವೆಯಾದ ಮೊದಲ ಐದುವರ್ಷಗಳಂದು ಸುಮಂಗಲಿಯರು ಶಿವಮುಷ್ಟಿವ್ರತವನ್ನು ಆಚರಿಸುವುದುಂಟು. ಮುಷ್ಟಿಯಷ್ಟು ಅಕ್ಕಿ, ಬಿಳಿ ಎಳ್ಳು, ತೊಗರಿ, ಗೋದಿ ಹಾಗೂ ಅರಳುಗಳನ್ನು ಒಂದೊಂದಾಗಿ ಒಂದೊಂದು ಸೋಮವಾರ ಶಿವನಿಗೆ ಅರ್ಪಿಸುತ್ತ ಬರುತ್ತಾರೆ. ಈ ಮಾಸವಿಡೀ ರುದ್ರಾಕ್ಷಿಮಾಲೆ ಧರಿಸುವವರುಂಟು.  
ಮಂಗಳಗೌರೀವ್ರತವನ್ನು ಸುಮಂಗಲಿಯರು ಸೌಮಾಂಗಲ್ಯಕ್ಕಾಗಿ ಮದುವೆಯಾದ ಮೊದಲ ಐದುವರ್ಷಗಳ ಶ್ರಾವಣಮಂಗಳವಾರಗಳಲ್ಲಿ ಮಾಡುತ್ತಾರೆ. ಹದಿನಾರು ಸಂಖ್ಯೆಯಲ್ಲಿ ಮಂಗಳದ್ರವ್ಯಗಳನ್ನೂ ಗೌರಿಗೆ ಅರ್ಪಿಸಿ, ಪೂಜಿಸಿ, ತಂಬಿಟ್ಟುದೀಪದ ಆರತಿ ಎತ್ತಿ, ಅದರ ಕಾಡಿಗೆ ಪಡೆದು, ಸುಮಂಗಲಿಯರಿಗೂ ಹಂಚುತ್ತಾರೆ. ಮಂಗಳಗೌರಿಯ ಕಾಡಿಗೆ ಪಡೆಯುವುದರಲ್ಲಿ ಹೆಂಗಳೆಯರಿಗೆ ವಿಶೇಷ ಉತ್ಸಾಹ!
ನಾಗಪಂಚಮಿಯಂದು ಆದಿಶೇಷನನ್ನು ಪೂಜಿಸಲಾಗುತ್ತದೆ. ಪಂಚಪ್ರಾಣಾತ್ಮಕವಾದ ನಮ್ಮೊಳಗಿನ ಕುಂಡಲಿನೀ ಶಕ್ತಿಯನ್ನೇ ಐದುಹೆಡೆಗಳ ಸರ್ಪದ ಪ್ರತೀಕದಲ್ಲಿ ಪೂಜಿಸುವುದು ಇಲ್ಲಿನ ಮೂಲ ತತ್ವಾರ್ಥ. ವೈದಿಕ, ಆಗಮ ಹಾಗೂ ಜಾನಪದಗಳ ಅಂಶಗಳು ಸರ್ಪಪೂಜೆಯಲ್ಲಿ ಬೆರೆತಿದ್ದು, ಮುಗ್ಧಶ್ರದ್ಧೆಯವರು ‘ನಾಗದೇವತೆಗೆ ಕೋಪ ಜಾಸ್ತಿ, ದೋಷ, ತಾಪತ್ರಯಗಳನ್ನು ಉಂಟು ಮಾಡಿಯಾನು’ ಎಂದು ಹೆದರಿಯೋ, ಸಂತಾನಪ್ರಾಪ್ತಿಗಾಗಿಯೋ, ಮಕ್ಕಳ ಉನ್ನತಿಗಾಗಿಯೋ, ದೋಷಪರಿಹಾರಕ್ಕಾಗಿಯೋ ಅಥವಾ ಮೃತ್ಯುಗಂಡನಿವಾರಣೆಗಾಗಿಯೋ ಪೂಜಿಸುವುದೇ ಹೆಚ್ಚು. ಹುತ್ತದ ಹಾವಿಗೋ, ಸರ್ಪದ ಮೂರ್ತಿಗೋ ಹಾಲನ್ನೆರೆಯಲಾಗುತ್ತದೆ. ಸ್ತ್ರೀಯರು ತಮ್ಮ ಸೋದರರ ಬೆನ್ನು ತೊಳೆದು ಶುಭ ಹಾರೈಸುತ್ತಾರೆ. ಮನೆಯ ಮುಂಬಾಗಿಲಿನ ಪಕ್ಕದಲ್ಲಿ ನಾಗದೇವತೆಯ ಒಂಭತ್ತು ಅಥವಾ ಎರಡು ಚಿತ್ರಗಳನ್ನು ಅರಸಿನದಲ್ಲಿ ರಚಿಸಿ ಪೂಜಿಸಲಾಗುತ್ತದೆ. ಈ ದಿನ ಯಾರೂ ನೆಲವನ್ನು ಅಗೆಯುವುದಾಗಲಿ, ಒತ್ತುಸಾವಿಗೆ ಅಥವಾ ಪೊಡವಲಕಾಯಿಯನ್ನಾಗಲಿ ತಿನ್ನುವುದಿಲ್ಲ. ಸತ್ಯೇಶ್ವರಿದೀವಿಯ ಪ್ರೀತಿಗಾಗಿ ಉಯ್ಯಾಲೆಯಾಟ ಆಡುತ್ತ ‘ಉಯ್ಯಾಲೆಯು ತೂರಾಡುದಂತೆಯೇ ಜೀವನವೂ ಏಳುಬೀಳುಗಳಲ್ಲಿ ಹೊಯ್ದಾಡುತ್ತಿರುತ್ತದೆ, ತಾಳ್ಮೆ ಇರಲಿ’ ಎನ್ನುವ ಭಾವದ ಸಂಪ್ರದಾಯದ ಹಾಡುಗಳನ್ನು ಹೆಂಗಳೆಯರು ಹಾಡುತ್ತಾರೆ. 
ವರಮಹಾಲಕ್ಷ್ಮೀಹಬ್ಬವನ್ನು ಎರಡನೆಯ ಶ್ರಾವಣಶುಕ್ರವಾರದಂದು ಆಚರಿಸಲಾಗುತ್ತದೆ. ಕುಲ-ವರ್ಣಭೇದವಿಲ್ಲದೆ ಎಲ್ಲರೂ ಲಕ್ಷ್ಮಿಯನ್ನು ಸಂಭ್ರಮದಿಂದ ಆರಧಿಸುತ್ತಾರೆ. ಲಕ್ಷ್ಮಿಯನ್ನು ಕಲಶದಲ್ಲಿ ಷೋಡಶೋಪಚಾರ ಪೂಜೆಗೈದು, ಸುಮಂಗಲಿಯರಿಗೆ ತಾಂಬೂಲ ವಿತರಣೆ ಮಾಡಲಾಗುತ್ತದೆ. ಸೊಸೆಯಂದಿರಿಗೆ ವಸ್ತ್ರಕಾಣಿಕೆಯನ್ನು ಕೊಡುವುದುಂಟು.
ಶ್ರಾವಣ ಹುಣ್ಣಿಮೆ- ಈ ಹಬ್ಬಕ್ಕೆ ಹಲವು ವೈಶಿಷ್ಟ್ಯಗಳು. ವೇದಕಾಲದಿಂದ ಆಚರಿಸಲಾಗುತ್ತಿರುವ ಉಪಾಕರ್ಮ, ರಕ್ಷಾಬಂಧನ, ನಾರಾಲೀ-ಪೂರ್ಣಿಮಾ, ಪೋಲಾ, ಪಾಣಿನೀಮಹರ್ಷಿಗಳ ಪುಣ್ಯದಿನ ಹಾಗೂ ಸಂಸ್ಕೃತದಿವಸಗಳು ಈ ದಿನವೇ ಆಚರಣೆಗೊಳ್ಳುತ್ತವೆ.
ಕೃಷ್ಣಜನ್ಮಾಷ್ಟಮಿಹಬ್ಬ ಭಾರತದಲ್ಲಿ ಎಲ್ಲೆಡೆ ಆಚರಿಸಲಾಗುವ ಬಲುಸಂಭ್ರಮದ ಹಬ್ಬ. ಕೆಲವರು ಉಪವಾಸ ಜಪತಪಗಳ ಮೂಲಕ ಕೃಷ್ಣಭಕ್ತಿಯನ್ನು ಮೆರೆದರೆ ಕೆಲವರು ಅನ್ನದಾನ ಗೀತನೃತ್ಯಗಳ ಸಂಭ್ರಮದಲ್ಲಿ ತೊಡಗುತ್ತಾರೆ. ನಮ್ಮ ನಾಡಿನಲ್ಲಂತೂ ಕೃಷ್ಣನನ್ನು ತೊಟ್ಟಿಲಲ್ಲಿಟ್ಟು ಹಾಡಿ ತೂಗಿ, ಪೂಜಿಸಿ, ಶ್ರಮವಹಿಸಿ ಮಾಡಿಟ್ಟ ಉಂಡೆ-ಚಕ್ಕುಲಿ-ಭಕ್ಷ್ಯಗಳನ್ನು ಬಂಧುಮಿತ್ರರಿಗೂ ನೆರೆಕೆರೆಯವರಿಗೂ ಹಂಚವುದೇ ಒಂದು ದೊಡ್ಡ ಸಂಭ್ರಮ.  
ಶ್ರಾವಣಶನಿವಾರಗಳು ಸಂಪತ್-ಶನಿವಾರಗಳೆನಿಸುತ್ತವೆ. ಮನೆಯ ಪುರುಷರು ಬೆಳಿಗ್ಗೆ ಸ್ನಾತರಾಗಿ ಶುಭ್ರವಸ್ತ್ರ ಮತ್ತು ನಾಮಗಳನ್ನು ಧರಿಸಿ, ತಂಬಿಗೆ ಹಿಡಿದು ಮಧುಕರೀಭಿಕ್ಷೆಗೆ ಹೋಗುತ್ತಾರೆ. ಸಂಗ್ರಹವಾದ ಧಾನ್ಯವನ್ನು ಬೇಯಿಸಿ ನೈವೇದ್ಯ ಮಾಡಿ ಎಲ್ಲರಿಗೂ ಹಂಚುತ್ತಾರೆ. ಹರಿನಾಮಸ್ಮರಣೆ, ವಿಷ್ಣುಸಹಸ್ರನಾಮ-ಪಾರಾಯಣ, ದಾನದಿಗಳು ಈ ವ್ರತದ ಮುಖ್ಯಾಂಶಗಳು. ಹೀಗೆ ಊಂಛವೃತ್ತಿ ಮಾಡುವುದು ಅಹಂಕಾರನಾಶಕ್ಕೆ ಸುಂದರ ಸಂಕೇತ.
ಕಜ್ಜಲೀ-ತೃತೀಯ ಎಂಬ ವಿಷ್ಣುಪೂಜೆಯ ಹಬ್ಬವನ್ನು ಕೆಲವು ಪ್ರಾಂತಗಳಲ್ಲಿ ಆಚರಿಸುತ್ತಾರೆ.
ಶ್ರಾವಣದ ಶುಕ್ರವಾರಗಳಂದು ಜೀವಂತಿಕಾಪೂಜೆಯನ್ನು ಮಾಡುವ ಪದ್ಧತಿ ಇದೆ. ಗೋಡೆ ಅಥವಾ ಪಲಕದ ಮೇಲೆ ಜೀವಂತಿಕಾದೇವಿಯ ಚಿತ್ರವನ್ನು ಶ್ರೀಗಂಧದಿಂದ ರಚಿಸಿ, ಪೂಜಿಸಿ, ಐವರು ಸಂತಾನವತಿಯರಾದ ಸುಮಂಗಲಿಯರಿಗೆ ಊಟ ಹಾಕಿ, ಹಾಲು, ಸಕ್ಕರೆ ಮತ್ತು ಉರಿಗಡಲೆಗಳೊಡನೆ ತಾಂಬೂಲವನ್ನು ಕೊಡಲಾಗುತ್ತದೆ.
ವಿಷ್ಣುವಿನ ಕಲ್ಕೀಅವತಾರದ ಜನ್ಮವೂ ಇದೇ ಮಾಸದ ಶುಕ್ಲಷಷ್ಟಿಯಲ್ಲಿ ಭವಿಷ್ಯದಲ್ಲಿ ಆಗುವುದೆಂದು ಪುರಾಣೋಕ್ತಿ. ಈ ದಿನವೂ ವಿಷ್ಣುಧ್ಯಾನಕ್ಕೆ ಪ್ರಶಸ್ತ. ‘ನಿಷ್ಕಳಂಕಾವತಾರ’ ಎನ್ನುವ ಕೀರ್ತಿಗೆ ಭಾಜನವಾದ ಈ ಕಲ್ಕಿ ಅವತಾರವು ಮ್ಲೇಚ್ಛಶಕ್ತಿಗಳು ತಂದ ಭೋಗಬುದ್ಧಿಯನ್ನೂ ತತ್ಫಲವಾದ ಅಧರ್ಮವನ್ನು ಅಳಿಸಿ ಧರ್ಮವನ್ನು ನೆಲೆಗೊಳಿಸುತ್ತದೆ.
ಬುಡೀತೇಜ್ ಎನ್ನುವ ಹಬ್ಬವನ್ನು ಉತ್ತರಭಾರತದಲ್ಲಿ ಆಚರಿಸುತ್ತಾರೆ. ವೃದ್ಧ ಮಹಿಳೆಯರು ಉಯ್ಯಾಲೆಯಾಡುತ್ತ ಸಂಪ್ರದಾಯಗೀತೆಗಳನ್ನು ಹಾಡುತ್ತಾರೆ. ಒಪ್ಪೊತ್ತು ಉಂಡು ಪೂಜೆಗೈಯುವ ಚಿಕ್ಕಪ್ರಾಯದ ಮಹಿಳೆಯರು ಇವರಿಗೆ ನಮಸ್ಕರಿಸಿ ಕಲ್ಲುಸಕ್ಕರೆ ಹಾಗೂ ಕಾಣಿಕೆಗಳನ್ನು ಕೊಟ್ಟು ಸತ್ಕರಿಸುತ್ತಾರೆ. ವೃದ್ಧೆಯರು ಪ್ರತಿಯಾಗಿ ಹಣ್ಣು ಸಿಹಿತಿನಿಸುಗಳನ್ನು ತಿನ್ನಿಸಿ ಆಶೀರ್ವದಿಸುತ್ತಾರೆ.
ಪಿತೋರೀ-ಅಮಾವಾಸ್ಯೆವ್ರತವನ್ನು ಮಕ್ಕಳ ಆಯುರಾರೋಗ್ಯಕ್ಕಾಗಿ ಮಾಡಲಾಗುತ್ತದೆ. ಹಿಟ್ಟಿನಿಂದ ಅರವತ್ತುನಾಲ್ಕು ಯೋಗಿನಿಯರ ಮೂರ್ತಿಗಳನ್ನು ನಿರ್ಮಿಸಿ, ಹಿಟ್ಟನ್ನೇ ನೈವೇದ್ಯ ಮಾಡಿ ಪೂಜೆ ಮಾಡಲಾಗುತ್ತದೆ. ದಿನವಿಡೀ ಉಪವಾಸ ಮಾಡುವವರುಂಟು. ಸಪ್ತಮಾತೃಕೆಯರ ಪೂಜೆಗೂ ಈ ದಿನ ಪ್ರಶಸ್ತ. ಪುತ್ರಪ್ರಾಪ್ತಿಗಾಗಿ ಸಾಕ್ಷಾತ್ ಶಚೀದೇವಿಯೇ ಈ ವ್ರತವನ್ನು ಆಚರಿಸಿದಳೆಂದು ಪುರಾಣೋಕ್ತಿ.
ಪುತ್ರೈಕಾದಶೀವ್ರತವನ್ನು ಶ್ರಾವಣಶುಕ್ಲಏಕಾದಶಿಯಂದು ಪುತ್ರಪ್ರಾಪ್ತಿಗಾಗಿ ಹಾಗೂ ಪುತ್ರರ ಶ್ರೇಯಸ್ಸಿಗಾಗಿ ಮಾತೆಯರು ಆಚರಿಸುತ್ತಾರೆ. ಜನ್ಮಾಂತರದ ಪ್ರಾರಬ್ಧದಕರ್ಮದಿಂದ ಸಂತಾನಹೀನತೆಯುಂತಾಗಿದ್ದಲ್ಲಿ ಈ ಏಕಾದಶಿ ಉಪವಾಸ ಮಾಡಿ ಅದನ್ನು ಬಗೆಹರಿಸಿಕೊಳ್ಳಬಹುದು ಎನ್ನುವ ನಂಬಿಕೆ ಇದೆ.  
ಸೀತಲಾಸಪ್ತಮೀಯಂದು ಸೀತಳಾದೇವಿಯನ್ನು ಮಣ್ಣಿನ ಕಲಶದಲ್ಲಿ ಆರಾಧಿಸಲಾಗುತ್ತದೆ. ಸಿಡುಬು ಕಾಯಿಲೆಯಿಂದ ರಕ್ಷಿಸುವಂತೆ ಹಲವು ದೇಗುಲಗಳಲ್ಲಿ ಸೀತಾಳೆದೇವಿಗೆ ಪೂಜೆ ಸಲ್ಲುತ್ತದೆ. ಯಾವುದೇ ಬಿಸಿಪದಾರ್ಥವನ್ನು ಪಾನೀಯವನ್ನೂ ಈ ದಿನ ಸೇವಿಸುವುದಿಲ್ಲ.
ಶ್ರಾವಣಶನಿವಾರಗಳಂದು ಶನೈಶ್ಚರನ ಆರಾಧನೆಯನ್ನು ಉಪವಾಸ, ಜಪ, ದಾನ ಹಾಗೂ ಶನಿಮಾಹಾತ್ಮ್ಯಗ್ರಂಥದ ಪುಣ್ಯಕಥಾಶ್ರವಣಗಳ  ಮೂಲಕ ಆಚರಿಸಲಾಗುತ್ತದೆ.
ಚೂಡಿಪೂಜ ಎನ್ನುವ ಹಬ್ಬವನ್ನು ಉತ್ತರಭಾರತದಲ್ಲಿ ಶ್ರಾವಣಶುಕ್ರವಾರಗಳು ಹಾಗೂ ಭಾನುವಾರಗಳಂದು ಆಚರಿಸುತ್ತಾರೆ. ತಾವೇ ಕಟ್ಟಿದ ಪುಟ್ಟ ಹೂದಾಣಿಗಳನ್ನು ತುಳಸೀದೇವಿಗೆ ಅರ್ಪಿಸಿ, ಫುಜಿಸಿ, ಆ ಚೂಡಿಗಳನ್ನು ಹಿರಿಯ ಮುತ್ತೈದೆಯರಿಗೆ ಕೊಟ್ಟು ನಮಸ್ಕರಿಸುತ್ತಾರೆ.
ಋಷಿಪಂಚಮಿಯಂದು ಕಾಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಹಾಗೂ ವಸಿಷ್ಟರೆನ್ನುವ  ಸಪ್ತರ್ಷಿಗಳಿಗೆ ತರ್ಪಣ ನೀಡಲಾಗುತ್ತದೆ. ಶ್ರೋತ್ರಿಯರನ್ನೋ, ಸದಾಚಾರಸಂಪನ್ನರಾದ ವೃದ್ಧದಂಪತಿಗಳನ್ನೋ ಅನ್ನ-ವಸ್ತ್ರ-ದಕ್ಷಿಣೆ-ಕಾಣಿಕೆಗಳಿಂದ ಸತ್ಕರಿಸಲಾಗುತ್ತದೆ. ನಮಗೆ ಐಹಿಕ ಹಾಗೂ ಪಾರಮಾರ್ಥಿಕ ವಿದ್ಯೆಗಳ ನೈಜಬೋಧೆಯನ್ನು ಪ್ರಸಾದಿಸುವ ನಿತ್ಯಗುರುಗಳಾದ ಸಪ್ತರ್ಷಿಗಳನ್ನು ಸ್ಮರಿಸಿ ಕೃತಜ್ಞಕ್ಜತೆಯನ್ನು ಸಲ್ಲಿಸುವುದೇ ಈ ಹಬ್ಬದ ಉದ್ದಿಶ್ಯ.
ಹಿಂಡೋಲೋತ್ಸವ- ಶ್ರಾವಣದ ಶುಕ್ಲಪಕ್ಷದ ಏಕಾದಶಿಯಿಂದ ಫುರ್ಣಮಿಯವರೆಗೂ ಉತ್ತರಭಾರದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬೆಳ್ಳಿಯ ಉಯ್ಯಾಲೆಗಳಲ್ಲಿ ರಾಧಾಕೃಷ್ಣರ ಪ್ರತಿಮೆಗಳನ್ನಿಟ್ಟು ಪೂಜಿಸಿ ಹಾಡಿ ತೂಗಲಾಗುತ್ತದೆ.
ಗೋವತ್ಸಪೂಜೆಯನ್ನು ಶ್ರಾವಣಕೃಷ್ಣಚತುರ್ಥಿಯಂದು ಆಚರಿಸಲಾಗುತ್ತವೆ. ಹೆಂಗಳೆಯರು ಹಸುಕರುಗಳನ್ನು ಪೂಜಿಸಿ ಹೊಟ್ಟೆತುಂಬ ತಿನ್ನಿಸುತ್ತಾರೆ. ಮನೆಯಂಗಳದಲ್ಲಿಯೂ ಗೋಪಾದವನ್ನು ರಚಿಸಿ ಪೂಜಿಸುತ್ತಾರೆ.
ಇವಲ್ಲದೆ ಶ್ರಾವಣದ ಏಕಾದಶಿಯಂದು ಕಾಮಿಕ ಏಕಾದಶೀ, ಪವಿತ್ರಏಕಾದಶೀಗಳನ್ನೂ ಆಚರಿಸಲಾಗುತ್ತದೆ. ಶ್ರಾವಣದ ಅಮಾವಾಸ್ಯೆಯನ್ನು ಸೋಮವತೀ ಅಮಾವಾಸ್ಯೆ ಎಂದೂ ಆಚರಿಸಲಾಗುತ್ತದೆ.
ಈ ಪುಣ್ಯಕರ ಶ್ರಾವಣಮಾಸದಲ್ಲಿ ನಾವು ಸ್ವಹಿತ ಹಾಗೂ ಸರ್ವಹಿತಸಾಧಕವಾದ ಪುಣ್ಯಕರ್ಮಗಲಲ್ಲಿ ತೊಡಗೋಣ. ದೇವತೆಗಳು ನಮಗೆಲ್ಲ ಸಂತೋಷ-ಸಮೃದ್ಧಿ-ಸಂತೃಪ್ತಿಗಳನ್ನೀಯಲಿ, ನಾಡಿನಲ್ಲೆಲ್ಲೆಲ್ಲೂ ಸೌಹಾರ್ದತೆ ಶಾಂತಿಗಳನ್ನು ನೆಲೆಗೊಳಿಸಲಿ ಎಂದು ಪ್ರಾಥಿಸೋಣ.

text box- ಆಚರ-ವಿಚಾರ
ಕಲ್ಲು ಪ್ರಕೃತಿ. ಅದು ಶಿಲ್ಪಿಯ ಕೈಯಲ್ಲಿ ಆಕೃತಿ ಪಡೆದಾಗ ‘ಸಂಸ್ಕೃತಿ’ ಎನಿಸುತ್ತದೆ. ಮನುಷ್ಯನು ಜೀವನವನ್ನು ಹೇಗೋ ಒಂದು ಬಗೆಯಲ್ಲಿ ಬಾಳಿ ಮುಗಿಸುವುದಂತೂ ಇದ್ದೇ ಇರುತ್ತದೆ. ಆದರೆ ಅದರಲ್ಲಿ ಧ್ಯೇಯ ಹಾಗೂ ವಿಕಾಸಪ್ರಾಯ ಜೀವನಶೈಲಿ ಇರದಿದ್ದಲ್ಲಿ ಅದು ಅರ್ಥಹೀನವೇ ಸರಿ. ಮೌಲ್ಯ, ಸಂಸ್ಕೃತಿ, ಧರ್ಮಪ್ರಜ್ಞೆ, ಸರ್ವಹಿತದೃಷ್ಟಿ ಹಾಗೂ ಪರತತ್ವದ ಜಿಜ್ಞಾಸೆಗಳೆಂಬ ‘ವಿಚಾರ’ ಹಾಗೂ ಅದರ ಅನುಷ್ಠಾನ ಎನ್ನುವ ‘ಆಚಾರ’ ಸೇರಿದಾಗಲೇ ಜೀವನಕ್ಕೆ ಒಂದು ಊರ್ಧ್ವಮುಖತೆ ಸಿಗುವುದು. ಭಾರತೀಯ ಚಿಂತನಧಾರೆಯಲ್ಲಿ ಹರಿದು ಬಂದ ಈ ‘ಆಚಾರ-ವಿಚಾರ’ಗಳ ಹಲವು ಮುಖಗಳ ಇಣುಕುನೋಟವನ್ನು ಮಾಡುವುದೇ ಈ ಅಂಕಣದ ಉದ್ದೇಶ. 


ಡಾ ಆರತಿ . ವಿ . ಬಿ


ಶುಕ್ರವಾರ, ಮಾರ್ಚ್ 17, 2017

ಸಂನ್ಯಾಸ- ಒಂದು ಸಮೀಕ್ಷೆ
-      ಡಾ ಆರತಿ ವಿ ಬಿ
ತ್ಯಾಗೇನೈಕೇ ಅಮೃತತ್ವ ಮಾನಶುಃ--- ಎಂದು ಉಪನಿಷತ್ತುಗಳು ಘೋಷಿಸುತ್ತವೆ. ವೇದ, ಪುರಾಣ, ರಾಮಾಯಣ ಮಹಾಭಾರತ ಹಾಗೂ ಇತರ ಸಾಹಿತ್ಯಪ್ರಕಾರಗಳಲ್ಲಿ, ಇತಿಹಾಸದಲ್ಲಿ, ಜಾನಪದ ದಾಖಲೆಗಳಲ್ಲಿ ಮಹಾನ್ ತ್ಯಾಗಿಗಳ ಅಭೂತಪೂರ್ವ ಸಾಧನೆಗಳ ಚರಿತ್ರೆಗಳು ದಾಖಲಾಗಿವೆ. ಇಂತಹವರು ನಮ್ಮ ಧರ್ಮ-ಸಂಸ್ಕೃತಿಗಳನ್ನು ಕಟ್ಟಿದವರು. ಇವರ ಜೀವನ-ಸಂದೇಶಗಳ ಸ್ಫೂರ್ತಿ ಇಂದಿಗೂ ಸಾಧಕರಿಗೆ ಮಾರ್ಗದರ್ಶಕಗಳಾಗಿವೆ.
ಸಾಮಾನ್ಯವಾಗಿ ಪರಿಪೂರ್ಣ ಸಂಸಾರತ್ಯಾಗವನ್ನು ’ಸಂನ್ಯಾಸ’ ಎಂದು ಗುರುತಿಸಲಾಗುತ್ತದೆ. ಪ್ರಾಪಂಚಿಕ ಕರ್ಮಗಳಲ್ಲಿ ತೊಡಗಿದ್ದರೂ ಮಾನಸಿಕವಾಗಿ ವಿರಕ್ತಿಯನ್ನು ಬೆಳೆಸಿಕೊಳ್ಳುವ’ಆಂತರಿಕ ಸಂನ್ಯಾಸ’’ವನ್ನು ಭಗವದ್ಗೀತೆ ಬೋಧಿಸುತ್ತದೆ. ಗೃಹಸ್ಥರು ಕರ್ಮಫಲತ್ಯಾಗವನ್ನು ಮಾನಸಿಕವಾಗಿ ಅಭ್ಯಾಸ ಮಾಡಿದರೆ ಸಾಕು. ಆದರೆ ಕಾವಿಯುಟ್ಟು ತನ್ನ ವೈರಾಗ್ಯವನ್ನು ಘೋಷಿಸಿಕೊಂಡಿರುವ ಕಾರಣ ಸಂನ್ಯಾಸಿಯು ಬಾಹ್ಯದಲ್ಲೂ ಅಂತರಂಗದಲ್ಲೂ ತ್ಯಾಗ ಮಾಡಲೇಬೇಕು. ನಿಜವಾದ ಸಂನ್ಯಾಸ ಎನ್ನುವುದು ’ಮಲಗಿದವನ ಕೈಯಿಂದ ಪುಸ್ತಕ ಕಳಚಿ ಬೀಳುವಂತೆ’ ಜೀವಿಯ ಮನಸ್ಸು ಪಕ್ವವಾಗಿ ಸಹಜವಾಗಿ ಆಗಬೇಕು ಎನ್ನುತ್ತಾರೆ ಶ್ರೀರಾಮಕೃಷ್ಣರು. ಈ ಸಹಜ ವೈರಾಗ್ಯ ಸಿದ್ಧಿಸಲಿ ಎಂದೇ ಚತುರಾಶ್ರಮ ಪದ್ಧತಿ ಇರುವುದು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥಗಳಾದ ಮೇಲೆ ಅನುಭವಪಕ್ವನಾದ ಜೀವಿ ಸಹಜವಾಗಿ ಸಂನ್ಯಾಸಾಶ್ರಮಕ್ಕೆ ಅರ್ಹನಾದಾನು ಎನ್ನುವ ಭಾವ ಇಲ್ಲಿ. ಆದರೆ ಅತ್ಯುಚ್ಚ ಸಂಸ್ಕಾರದ ಪ್ರಥಮಾಧಿಕಾರಿಗಳು ಈ ನಿಯಮಕ್ಕೆ ಅಪವಾದಗಳು, ಅಂತಹವರು ಯಾವ ವಯಸ್ಸಲ್ಲಿ ಬೇಕಾದರೂ ತ್ಯಾಗಮಾಡಬಹುದು.  
ನಾಲ್ಕು ಬಗೆಯ ಸಂನ್ಯಾಸಗಳಿವೆ- ವಿದ್ವತ್, ವಿವಿದಿಶಾ, ಮರ್ಕಟ ಮತ್ತು ಆತುರ ಸಂನ್ಯಾಸಗಳು. ಜೀವನಾನುಭವದಿಂದ ಪಕ್ವನಾದ ಜೀವಿಯಲ್ಲಿ ಉಂಟಾಗುವ ಸಹಜ-ವೈರಾಗ್ಯವು ಸಂಸಾರತ್ಯಾಗಕ್ಕೆ ಕಾರಣವಾದಾಗ ಅದು ’ವಿದ್ವತ್ ಸಂನ್ಯಾಸ’. ಜಡಭರತ, ಋಷಭದೇವ, ಬುದ್ಧ, ಶಂಕರಾಚಾರ್ಯ, ರಮಣಮಹರ್ಷಿ, ರಾಮಕೃಷ್ಣ, ಅಕ್ಕಮಹಾದೇವಿ, ಅಲ್ಲಮರು, ಮಹಾವೀರ ಮುಂತಾದವರು ಉದಾಹರಣೆಗಳು. ವಿದ್ವತ್ ಸಂನ್ಯಾಸದಲ್ಲಿ ಆಂತರಿಕ ಪಕ್ವತೆ, ವಿರಕ್ತಿಗಳು ಸಹಜವಾಗಿರುವುದರಿಂದ  ಇವರು ಪತನವಾಗುವುದಿಲ್ಲ. ವಿದ್ವತ್-ಸಂನ್ಯಾಸವು ಒಂದು ಆಂತರಿಕ ಸಿದ್ಧಿಯಾದ್ದರಿಂದ ಇದಕ್ಕೆ ಏಕೈಕ ಯೋಗ್ಯತೆ ಪ್ರಖರ ವೈರಾಗ್ಯವೊಂದೇ. ಇದರಲ್ಲಿ ಲಿಂಗ, ಜಾತಿ, ವರ್ಣ, ವಯಸ್ಸು ಮುಂತಾದ ಯಾವುದೂ ಗಣನೆಗೆ ಬಾರದು. ಇಲ್ಲಿ ಕಾವಿ ತೊಡುವುದೂ ಅನಿವಾರ್ಯವಲ್ಲ. ಇಂತಹವರು ಸರ್ವತಂತ್ರಸ್ವತಂತ್ರರು.  
ಸಂನ್ಯಾಸದ ಇಚ್ಛೆಯೂ, ಉತ್ಕಟ ಸಾಧನಾಸಕ್ತಿಯೂ ಇರುವ ಯೋಗ್ಯರನ್ನು ಆಯ್ಕೆಮಾಡಿ ಸಂನ್ಯಾಸಾಶ್ರಮದಲ್ಲಿ ಸೇರಿಸುವುದು ವಿವಿದಿಶಾ-ಸಂನ್ಯಾಸ. ಇದರಲ್ಲಿ ಭಾರತಿ, ಗಿರಿ, ಪುರಿ ಮುಂತಾದ ದಶನಾಮಿಪದ್ಧತಿಯ ಪ್ರಕಾರಗಳೂ ಸೇರಿವೆ. ಇಲ್ಲಿ ಗುರುವು ಶಿಷ್ಯನಿಗೆ ಕಾವಿಬಟ್ಟೆಯನ್ನು ಕೊಟ್ಟು, ಹೊಸನಾಮವನ್ನಿಟ್ಟು, ಸಂನ್ಯಾಸಜೀವನದ ವಿಧಿವಿಧಾನಗಳನ್ನು ನಿರ್ದೇಶಿಸುತ್ತಾರೆ. ಇವರು ಸಂನ್ಯಾಸದ ಘನತೆಯನ್ನರಿತು, ಪಾಲಿಸುತ್ತ, ಸಿದ್ಧಿಗಾಗಿ ಯತ್ನಿಸಬೇಕು. ಇಲ್ಲಿ ಆಯಾ ಸಂಪ್ರದಾಯದಂತೆ ಸಂನ್ಯಾಸಸ್ವೀಕಾರಕ್ಕೆ ವರ್ಣ, ಜಾತಿ, ಲಿಂಗ, ವಯಸ್ಸುಗಳ ಅಧಿಕಾರಭೇದಗಳನ್ನು ಗಣಿಸಲಾಗುತ್ತದೆ. ಸನಾತನಧರ್ಮ, ಬೌದ್ಧಧರ್ಮ, ಜೈನಧರ್ಮಗಳಲ್ಲದೆ ಕ್ರೈಸ್ತರ ರೋಮನ್ ಕ್ಯಾಥೋಲಿಕ್-ನಲ್ಲೂ ಅವರವರದೇ ಆದ ಸಂನ್ಯಾಸಪದ್ಧತಿಗಳಿವೆ.
ಇನ್ನೊಂದು ಮರ್ಕಟ ಸಂನ್ಯಾಸ - ’ಅಶಕ್ತಸ್ತು ಭವೇತ್ ಸಾಧುಃ’—ಎಂಬಂತೆ ಕಷ್ಟಕಾಲ ಬಂದಾಗ ಜೀವನದಲ್ಲಿ ಜುಗುಪ್ಸೆ ತಾಳಿ ’ಸ್ಮಶಾನವೈರಾಗ್ಯ’, ’ಅಭಾವವೈರಾಗ್ಯ’ಗಳನ್ನು ನೆಚ್ಚಿ ಸಂನ್ಯಾಸಿಯಾಗುವುದು. ತಮ್ಮ ತಾತ್ಕಾಲಿಕ ಭಾವವನ್ನೇ ಆಧ್ಯಾತ್ಮಿಕ-ಸಂಸ್ಕಾರ ಎಂದು ಭ್ರಮಿಸಿ ಅಕಾಲದಲ್ಲಿ ಸಂನ್ಯಾಸಕ್ಕೆ ಧುಮುಕುವವರು ಇವರು. ಇಂತಹವರಲ್ಲಿ ಕರ್ಮಸಂನ್ಯಾಸವಿರದು ಬದಲಾಗಿ  ’ಸಂನ್ಯಾಸವೇ ಒಂದು ’ಆಡಂಬರದ ಕರ್ಮ’ವಾಗಿಬಿಡುತ್ತದೆ!
ಮತ್ತೊಂದು ಸಂನ್ಯಾಸವಿದೆ- ಆತುರ ಸಂನ್ಯಾಸ. ಕೆಲವರಿಗೆ ಆಧ್ಯಾತ್ಮಿಕ ಸಾಧನೆಯ ಪ್ರಾಮಾಣಿಕ ಬಯಕೆ ಇದ್ದರೂ, ಜೀವನದಲ್ಲಿ ಅದಕ್ಕಾಗಿ ಹೆಚ್ಚು ಸಮಯ ಕೊಡಲಾಗದಿದ್ದಾಗ, ಅವರು ಮರಣಶಯ್ಯೆಯಲ್ಲಿರುವಾಗ ಆಗಲಾದರೂ ಸಂಪೂರ್ಣವಾಗಿ ದೈವಚಿಂತನೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಆತುರಸಂನ್ಯಾಸ ಸ್ವೀಕರಿಸಬಹುದು.
ಸಂನ್ಯಾಸ-ಜೀವನವು ಕಠಿಣ ನಿಯಮಾವಳಿಗಳಿಂದ ಕೂಡಿರುವಂತಹದ್ದು. ಸಂನ್ಯಾಸಿಯು ಮೂರು ದಿನಕ್ಕಿಂತ ಹೆಚ್ಚಾಗಿ ಒಂದೆಡೆ ತಂಗಬಾರದು; ಅವನದು ’ತರುತಲವಾಸ ಕರತಲ ಭಿಕ್ಷಾ’ ಜೀವನ; ಯಾರ ಶಾಶ್ವತ ಬಾಂಧವ್ಯವನ್ನೂ ಕಟ್ಟಿಕೊಳ್ಳಬಾರದು; ಜನಜಂಗುಳಿಯಿಂದ ದೂರವಿದ್ದು ಅಧ್ಯಯನ, ಧ್ಯಾನಾದಿಗಳಲ್ಲಿ ತೊಡಗಿರಬೇಕು; ಧನ-ವಸ್ತುಗಳ ಸಂಚಯ ಮಾಡಕೂಡದು; ಭಿಕ್ಷಾಟನೆಯಿಂದ ಜೀವನ ಸಾಗಿಸಬೇಕು, ಕಾಮ-ಕಾಂಚನ-ಕೀರ್ತಿಗಳಾಸಕ್ತಿಯನ್ನು ಸರ್ವಥಾ ವರ್ಜಿಸಬೆಕು. “ಸಂನ್ಯಾಸಿಯಾದವನು ಇಂದ್ರಿಯಜಯಿಯೇ ಆದರೂ ಲೋಕಕ್ಕೆ ಮಾರ್ಗದರ್ಶಕನಾದ್ದರಿಂದ ಸದಾ ಎಚ್ಚರವಾಗಿರಬೇಕು. ಹೆಣ್ಣು ಬೊಂಬೆಯೊಂದು ನೆಲದಲ್ಲಿ ಮಗುಚಿ ಬಿದ್ದಿದ್ದರೂ, ಅದನ್ನು ಕುತೂಹಲದಿಂದ ಕಾಲಲ್ಲೂ ತಿರುಗಿಸಿ ನೋಡಬಾರದು!” ಎಂದು ಎಚ್ಚರಿಸುತ್ತಾರೆ ಶ್ರೀರಾಮಕೃಷ್ಣರು. ಸಂನ್ಯಾಸವ್ರತಧಾರಣೆಯ ಸಂದರ್ಭದಲ್ಲಿ ಜುಟ್ಟು-ಜನಿವಾರಗಳನ್ನು ಕಳಚಿ, ಆತ್ಮಶ್ರಾದ್ಧ ಮಾಡಿಕೊಳ್ಳಬೇಕಾಗುತ್ತಾದೆ. ಹಾಗಾಗಿ ನಿಜವಾದ ಸಂನ್ಯಾಸಿಗೆ ಯಾವ ವರ್ಣಾಶ್ರಮ-ಭೇದವೂ, ಸ್ತ್ರೀಪುರುಷ-ಭೇದವೂ, ಉಚ್ಛನೀಚ-ಭೇದವೂ ಇರಬಾರದು. ಭೇದಭಾವವಿದ್ದಲ್ಲಿ ಅಲ್ಲಿ ’ಸಂನ್ಯಾಸ’ವೇ ಪ್ರಶ್ನಾರ್ಹವಾಗುತ್ತದೆ. ಆದರೆ ಜಾತಿಗಳ ವ್ಯವಸ್ಥೆಯೊಳಗಿರುವ ಮಠದ ಸಂನ್ಯಾಸಿಗಳಾದರೋ ತಮ್ಮ ತಮ್ಮ ಜನಾಂಗಗಳ ಹಾಗೂ ಮಠದ ಪದ್ಧತಿ-ಪರಂಪರೆಯನ್ನು ಉಳಿಸುವ ಬೆಳೆಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಹಾಗಾಗಿ ಅವರಿಂದ ಈ ಎಲ್ಲ ನಿಯಮಗಳನ್ನೂ ಪಾಲಿಸುವುದು ಕಷ್ಟಸಾಧ್ಯ, ಅವರಿರುವ ಪರಿಸರ ಮತ್ತು ವ್ಯವಸ್ಥೆ ಅದಕ್ಕೆ ಅವಕಾಶ ಕೊಡುವುದಿಲ್ಲ. 
ಇಲ್ಲಿ ಮರ್ಕಟಸಂನ್ಯಾಸ ಎನ್ನುವುದೇ ಅಪಾಯಕಾರಿ. ಇದಕ್ಕೆ ವೈರಾಗ್ಯವೇ ಇರಬೇಕು ಎಂದೇನಿಲ್ಲ, ಬೇರೆ ಉದ್ದೇಶಗಳಿರಬಹುದು- 'ಕಾವಿಯುಟ್ಟಲ್ಲಿ, ಜನ ತಾವಾಗಿಯೇ ಬಂದು ಕೈಮುಗಿದು ದಕ್ಷಿಣೆ ಹಾಕಿ ಪೋಷಿಸುತ್ತಾರೆ' ಎಂದೋ, 'ಸಂನ್ಯಾಸಿಯಾದರೆ ತಮ್ಮ Cultನ್ನು ಪ್ರಚಾರ ಮಾಡಲು ಸುಲಭಸಾಧ್ಯ' ಎಂದೋ, 'ಜನಮನ್ನಣೆ ಸುಲಭದಲ್ಲಿ ಸಿಕ್ಕೀತೆಂದೋ', 'ಕರ್ತವ್ಯಗಳ ಭಾರದಿಂದ ತಪ್ಪಿಸಿಕೊಳ್ಳಬಹುದೆಂದೋ', 'ನೋವು-ನಿರಾಶೆಗಳನ್ನು ಮರೆತು ಶಾಂತವಾಗಿರಬಹುದೆಂದೋ', 'ಜೀವನದ ಸವಾಲುಗಳನ್ನು ಎದುರಿಸಲಾಗದಾಗ ಪಲಾಯನ ಮಾಡಲೆಂದೋ', 'ಜಾತಕದಲ್ಲಿ ’ಸಂನ್ಯಾಸಯೋಗ’ ಇದೆ ಎಂದು ನಂಬಿಯೋ', ಹುಚ್ಚು ಭಾವುಕತೆಯ ಭರದಲ್ಲೋ, ಹೀಗೆ ಅನೇಕ ಉದ್ದೇಶಗಳಿಂದ ಸಂನ್ಯಾಸಿಗಳಾಗಬಹುದು. ಇದಲ್ಲದೆ ಅಪಕ್ವರಾದ ಎಳೆಯರನ್ನು ಸಂನ್ಯಾಸದ ವ್ಯವಸ್ಥೆಯೊಳಗೆ ಅಕಾಲದಲ್ಲಿ ನುಗ್ಗಿಸಿ ’ಪುಣ್ಯ’ ಕಟ್ಟಿಕೊಳ್ಳುವವರೂ ಇದ್ದಾರೆ. ಇಂತಹ ಸಂನ್ಯಾಸಿಗಳು ಮೊದಮೊದಲೇನೋ ನಿಯಮಪಾಲನೆ ಮಾಡಬಹುದು. ಆದರೇ ಕ್ರಮೇಣ ತಮ್ಮ ದೇಹಮನಸ್ಸುಗಳ ಬಯಕೆಗಳ ಬಿರುಗಾಳಿ ಎದ್ದಾಗ ಸಂನ್ಯಾಸ-ನಿಯಮಗಳು ಅವರನ್ನು ಉಸಿರುಗಟ್ಟಿಸಿ ಅವರು “prisoners of the system” ಆಗಿಬಿಡುತ್ತಾರೆ. ಸಂನ್ಯಾಸದ ನಾಟಕ ಸಾಕಾಗುತ್ತ ಬಂದು ಇಂತಹವರು ಕಾಲಾಂತರದಲ್ಲಿ ಸಂನ್ಯಾಸಕ್ಕೇ ’ಸಂನ್ಯಾಸ’ ಕೊಟ್ಟು ಗೃಹಸ್ಥರಾದಾರು! ಅಥವಾ ಸಮಾಜದ ಕಣ್ಣುತಪ್ಪಿಸಿ ತಮ್ಮ ಬಯಕೆಯನ್ನು ಗುಟ್ಟಾಗಿ ಪೂರೈಸಿಕೊಂಡಾರು, ಅಥವಾ ಸಮಾಜಕ್ಕೆ ಹೆದರಿ ಮನಸ್ಸಿನಲ್ಲೇ ಮಂಡಿಗೆ ಮೇಯುತ್ತ ಉಳಿದಾರು. ಒಟ್ಟಿನಲ್ಲಿ ಇಂತಹವರು ಸತ್ವಹೀನರೂ, ಅಪಾಯಕಾರಿಗಳೂ ಆಗುತ್ತ ಸಂನ್ಯಾಸಧರ್ಮಕ್ಕೇ ಕಳಂಕವನ್ನು ತರುತ್ತಾರೆ. ಇವರಿಂದಾಗಿ ಒಳ್ಳೆಯ ಸಂನ್ಯಾಸಿಗಳ ಬಗ್ಗೆಯೂ ಅನ್ಯಾಯವಾಗಿ ಅಗೌರವಭಾವ ಮೂಡುತ್ತದೆ.  
ಮಠ, ಪೀಠ ಇತ್ಯಾದಿಗಳು ಮೊದಮೊದಲು ಇರಲಿಲ್ಲ. ಬೌದ್ಧ-ವಿಹಾರಗಳೆ ಬಹುಶಃ ಮೊದಲ ’ಸಂನ್ಯಾಸಿಗಳ ಮನೆ’ಗಳು. ಆ ಬಳಿಕ ಆದಿಶಂಕರಾಚಾರ್ಯರೇ ಮೊದಲಾಗಿ ಎಲ್ಲ ಧರ್ಮ ಬೋಧಕರು ತಮ್ಮ ಶಿಷ್ಯರಿಗೆ ಆಶ್ರಯ ನೀಡಲು, ಧರ್ಮಪ್ರಸಾರ ಮಾಡಲು ಮಠಗಳನ್ನು ಕಟ್ಟಲಾರಂಭಿಸಿದರು. ಹೀಗೆ ಸಾವಿರಾರು ಆಶ್ರಮಗಳು ನಿರ್ಮಾಣವಾಗುತ್ತ ಬಂದವು. ಇಂದು ’ಈತ ಸಂನ್ಯಾಸಿ’ ಎಂದರೆ ಸಾಕು, ’ಯಾವ ಮಠದವರು’?’ ಎನ್ನುವ ಪ್ರಶ್ನೆ ಬಂದೇ ಬರುತ್ತದೆ. ಸರ್ವತಂತ್ರಸ್ವತಂತ್ರ ಪರಿವ್ರಾಜಕರ ಸಂಖ್ಯೆ ಗೌಣವೆ.  
ಧರ್ಮಪ್ರಚಾರಕ್ಕಾಗಿ ಜನರ ನಡುವೆ ಮಠ ಕಟ್ಟಿಕೊಂಡು ವಾಸಿಸುವುದು ಒಂದು ವಿಧಾನವಾಗಿದೆ. ಜನರಿಗೆ ಶಾಂತ ಪರಿಸರವನ್ನೂ, ಅಧ್ಯಾತ್ಮ, ಸಂಸ್ಕೃತಿ, ಹಾಗೂ ಸೇವಾವಕಾಶವನ್ನೂ ಒಅದಗಿಸುವ ಪುಣ್ಯಕಾರ್ಯ ಈ ಸಂಸ್ಥೆಗಳಿಂದ ಆಗುತ್ತಲೂ ಇವೆ, ನಿಜೆ. ಆದರೆ ಸತತ ಜನ-ಧನ-ಮನ್ನಣೆ-ವ್ಯವಹಾರಗಳ ನಡುವೆ ಇರುವ ಸಂನ್ಯಾಸಿಗಳಿಗೆ ತಮ್ಮ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಸವಾಲುಗಳು ಹೆಚ್ಚು. ’ಕಾಡಿಗೆ ಕೋಣೆಯಲ್ಲಿ ಎಷ್ಟೇ ಎಚ್ಚರದಿಂದ ನಡೆದರೂ ಒಂದಿಷ್ಟು ಕಪ್ಪು ಅಂಟದಿರದು’ ಎನ್ನುತ್ತಾರೆ ರಾಮಕೃಷ್ಣರು. ಹಾಗಾಗಿ ಸಂನ್ಯಾಸಿಗಳೂ ಆಗಾಗ ನಿರ್ಜನ ಪ್ರದೇಶ- ಏಕಾಂತದಲ್ಲಿದ್ದು ಭಾವಶುದ್ಧಿ, ಆತ್ಮನಿರೀಕ್ಷಣಗಳನ್ನು ಮಾಡಿಕೊಳ್ಳುತ್ತಿರಬೇಕು. ಆದರೆ ಸಂನ್ಯಾಸಿಗಳು ಆಂತರಿಕ ಶೋಧಕ್ಕಾಗಿ ಸಮಯವನ್ನು ಒದಗಿಸಿಕೊಳ್ಳಲಾಗದಷ್ಟು ’busy’ಯಾಗಿಬಿಟ್ಟರೆ, ಅವರ ಸಂನ್ಯಾಸದ ವರ್ಚಸ್ಸು ಕ್ರಮೇಣ ಕುಗ್ಗದಿದ್ದೀತೆ? ತಪಸ್ಸಿನ ಅಭಾವದಿಂದಾಗಿ ಸತ್ವಸಂಪನ್ನ ಸಂನ್ಯಾಸಿಗಳೂ ಕ್ರಮೇಣ ಪತನವಾದರೆ ಆಶ್ಚರ್ಯವಿಲ್ಲ.’ಸಹವಾಸದಿಂದ ಸಂನ್ಯಾಸಿ ಕೆಟ್ಟ’ ಎನ್ನುವುದು ಅದಕ್ಕಾಗಿಯೇ.’ಕೊಳೆ ಬಟ್ಟೆಯಿಂದ ಹೇಗೆ ಕೊಳೆಯನ್ನು ಒರೆಸಲಾಗದೋ’, ಅಂತೆಯೇ ತಪಸ್ಸು ಹಾಗೂ ಮನಶ್ಶುದ್ಧಿಯಿಲ್ಲದ ಸಂನ್ಯಾಸಿ ಸೇವೆ-ಬೋಧನೆಗಳಿಗಿಳಿದರೆ ಅದರಿಂದ ಅವನೂ, ಅವನನ್ನು ನೆಚ್ಚಿ ಬರುವ ಭಕ್ತರೂ ದಾರಿ ತಪ್ಪುವುದು ಖಂಡಿತ.
ಉತ್ತಮ ಗುರುವು ತನ್ನ ಬಳಿಗೆ ತಾವಾಗಿ ಅರಸಿ ಬರುವ ವ್ಯಕ್ತಿಗಳನ್ನು ಬಗೆಬಗೆಯಾಗಿ ಪರೀಕ್ಷಿಸಿ, ಆಯ್ದು ದೀಕ್ಷೆ ಕೊಟ್ಟಾಗ ನಿಷ್ಕಳಂಕ ಮನಸ್ಕರಾದ ಯೋಗ್ಯರೇ ಸಂನ್ಯಾಸಿಗಳಾಗುವ ಸಂಭವ ಹೆಚ್ಚು. ಯೋಗ್ಯಾಯೋಗ್ಯತೆಗಳನ್ನೆಣಿಸದೆ ಸಂಖ್ಯಾಪ್ರೀತಿಗಾಗಿ ಕಂಡಕಂಡವರಿಗೆ ಅಕಾಲದಲ್ಲಿ ಸಂನ್ಯಾಸ ಕೊಡಿಸಿ ಶಿಷ್ಯರನಾಗಿಸಿಕೊಳ್ಳುವುದು ಅಪಾಯಕಾರಿ. ಜೊತೆಗೆ ಮಠ, ಶಿಷ್ಯರು, ಧನ, ಮನ್ನಣೆಗಳ ಕುರಿತಾದ ಮಮಕಾರ ಸಂನ್ಯಾಸಿಯ ಪಾಲಿಗೆ ತ್ಯಾಗದ ಆದರ್ಶಕ್ಕಿಂತ ಮುಖ್ಯವಾದಾಗ ಆತನ ’ಗುರು’ತನವು ’ಲಘು’ವಾಗುತ್ತ ಹೋಗುತ್ತದೆ. ಅಂತಹವರಿಗೆ ಮಠವೇ ಸಂಸಾರವಾಗಿ, ಧಾರ್ಮಿಕಕಲಾಪಗಳೇ ವ್ಯಾಪಾರವಾಗಿ, ಭಕ್ತಸಂಚಯವೇ ಗುರಿಯಾಗಿ, ಜನಮನ್ನಣೆಯೇ ಸಾಫಲ್ಯವೆನಿಸತೊಡಗುತ್ತವೆ. ಆಸ್ತಿಗಾಗಿ, ಶಿಷ್ಯರಿಗಾಗಿ, ಪಟ್ಟಕ್ಕಾಗಿ, ಭಕ್ತರನ್ನು ಒಲಿಸುವುದಕ್ಕಾಗಿ ಪೈಪೋಟಿಗಿಳಿಯುವ, ಒಬ್ಬರನ್ನು ಕಂಡರೊಬ್ಬರಿಗೆ ಆಗದ ಸಂನ್ಯಾಸಿಗಳ ಗೌರವ ಮಣ್ಣುಪಾಲಾಗದಿರದೆ? ತಮ್ಮನ್ನು ನೂರಕ್ಕೆ ನೂರುಪಾಲು ನಂಬಿಬರುವ ಭಕ್ತರನ್ನು ಆರ್ಥಿಕವಾಗಿ, ಭಾವನಾತ್ಮಕವಾಗಿ ಹಾಗೂ ಬೌದ್ಧಿಕವಾಗಿ ದಾಸರನ್ನಾಗಿಸಿಕೊಳ್ಳುವ ಚಾಲಾಕಿತನ, ಅಥವಾ ಲೈಂಗಿಕ ಕಿರುಕುಳದ ಮಟ್ಟಕ್ಕೂ ಕ್ರೌರ್ಯ ತೋರುವ ಪಾಪಬುದ್ಧಿಯು ಗುರುಸ್ಥಾನದಲ್ಲಿರುವ ಸಂನ್ಯಾಸಿಗಳಲ್ಲೇ ಬೆಳೆದರೆ ಅದಕ್ಕಿಂತ ದುಃಖತರವಾದದು ಇನ್ನೇನಿರಲು ಸಾಧ್ಯ?
ಸಂನ್ಯಾಸಿಗಳನ್ನೇ ಸಂಪೂರ್ಣ ದೂಷಿಸುವ ಮುನ್ನ ನಾವು ಅವರ ಬಳಿಗೆ ಸಾಗುವ ಭಕ್ತರನ್ನೂ ಪರಾಂಬರಿಸಬೇಕು. ತನ್ನ ದುಃಖ, ದುಗುಡಗಳನ್ನು ತೋಡಿಕೊಂಡು ಮನಸ್ಸನ್ನು ಹಗುರ ಗೊಳಿಸಿಕೊಳ್ಳುವ ಭರದಲ್ಲಿ, ಇನ್ನೊಬ್ಬರನ್ನೂ ಸಂಪೂರ್ಣ ಅವಲಂಬಿಸಿ, ತಮ್ಮತನವನ್ನೇ ಮರೆಯುವ ಮೂರ್ಖಭಕ್ತರಿರುತ್ತಾರೆ. ತಮಗೆ ಸಿಕ್ಕ ತಾತ್ಕಾಲಿಕ ನೆಮ್ಮದಿಯನ್ನೇ ’ಆಧ್ಯಾತ್ಮಿಕ ಲಾಭ’ ಎಂದು ಭ್ರಮಿಸಿ, ಗುರುಭಕ್ತಿಯ ನೆಪದಲ್ಲಿ ವ್ಯಕ್ತಿಪೂಜೆಗೆ ತೊಡಗುತ್ತಾರೆ. ಸುಲಭದಲ್ಲಿ ಸಿಕ್ಕ ಮನ್ನಣೆಗೆ ಮಾರುಹೋಗಿ ಭಕ್ತರ ಮುಗ್ಧಭಾವವನ್ನು ಅಪಬಳಕೆ ಮಾಡಿಕೊಳ್ಳುವ ಟೆಂಪ್ಟೇಶನ್ ಈ ಅಪಕ್ವ ಗುರುಗಳಿಗೆ ಉಂಟಾಗದಿರದೇ? ಭಾವುಕತೆಯ ಭರದಲ್ಲಿ, ಮುಂದಾಲೋಚನೆಯಿಲ್ಲದೆ, ಪ್ರಶ್ನಿಸದೆ ಪರೀಕ್ಷಿಸದೆ ಬಣ್ಣದ ಮಾತುಗಳ ’ಗುರು’ಗಳಿಗೆ ಮನಸೋತು ಶರಣಾಗುವವರೆ, ಎಚ್ಚರ! “ಗುರುವನ್ನು ಸ್ವೀಕರಿಸುವ ಮುನ್ನ ತ್ರಿಕಾಲಗಳಲ್ಲೂ ಪರೀಕ್ಷಿಸಬೇಕು” ಎನ್ನುತ್ತಾರೆ ಶ್ರೀರಾಮಕೃಷ್ಣರು. ವಿವೇಕವಿಲ್ಲದ ಮುಗ್ಧನಂಬಿಕೆಯಿಂದ ಯಾರನ್ನೋ ’ದೇವರೆಂ’ದು ನಂಬುವ, ಆತ ಕಣ್ಮುಂದೆಯೇ ಆಚರಿಸುವ ಮೋಸ, ಕಪಟ, ಸುಳ್ಳುಗಳನ್ನೂ ಧಾರ್ಮಿಕನೆಲೆಯಲ್ಲಿ ಅರ್ಥೈಸಿ ಸುಮ್ಮನಾಗುವ ಮನೋದಾಸ್ಯಕ್ಕೆ ಬಲಿಯಾಗಿಬಿಟ್ಟೀರಿ! ಇಂತಹ ದುರ್ಬಲರನ್ನು ಯಾವ ದೇವರೂ, ಸಲಹೆಯೂ, ಚಿಕಿತ್ಸೆಯೂ ಸರಿಪಡಿಸಲಾಗದು. ಏಕೆಂದರೆ ಇಂತಹವರಿಗೆ ತಾವಿರುವ ಸ್ಥಿತಿಯು ’ಅಸಹಾಯಕ ಮನೋದಾಸ್ಯ’ ಎನಿಸುವುದಿಲ್ಲ, ಬದಲಾಗಿ ’ಶ್ರೀಗುರುವಿನ ಕೃಪಾವಲಂಬನೆ’ ಎಂಬ ಬ್ರಮೆಯೇ ಇರುತ್ತದೆ. ಭಾವನಾತ್ಮಕ-ದಾಸ್ಯದ ಪರಾಕಾಷ್ಟೆಗೇರಿರುವ ಭಕ್ತರನ್ನು ಅಲ್ಲಿಂದ ವಾಪಾಸು ಕರೆತರುವುದು ತುಂಬ ಕಷ್ಟ. ಹಾಗೆ ಒಂದು ವೇಳೆ ಅವರು ತಾವಾಗಿಯೇ ವಾಪಾಸು ಬರಲು ಯತ್ನಿಸಿದರೂ ಅದು ತುಂಬ ಯಾತನಾಮಯ. ಒಮ್ಮೆ ಮನಸೋತು ಗುರುವಿನಲ್ಲಿ ಸಂಪೂರ್ಣ ಶರಣಾದಮೇಲೆ ಆತನಲ್ಲಿ ಸತ್ಯ, ಧರ್ಮಗಳಿಲ್ಲದಿರುವುದನ್ನು ಗುರುತಿಸಿ, ನಿರಾಕರಿಸಿ ಹೊರಬರಲು ಅಪಾರವಾದ ಧೈರ್ಯ, ಸಹನೆ, ಮುಂದಾಲೋಚನೆ ಬೇಕಾಗುತ್ತದೆ. ನಿಜವನ್ನು ತಿಳಿಯದೆ ’ಗುರುದ್ರೋಹಿ’ ಎಂದು ದೂಷಿಸುವ ಸಮಾಜವನ್ನೂ ಎದುರಿಸುವ ಕೆಚ್ಚೆದೆ ಬೇಕಾಗುತ್ತದೆ. ತನ್ನ ಸಮಯ, ಭಾವ, ತನುಮನಗಳನ್ನು ಮನಃಪೂರ್ವಕವಾಗಿ ಒಪ್ಪಿಸಿದ ಮೇಲೆಯೂ ತನಗಾದದ್ದು ಬರೀ ದ್ರೋಹ ಎಂದು ತಿಳಿದಾಗ ಉಂಟಾಗುವ ದುಃಖ, ಜುಗುಪ್ಸೆ, ವೇದನೆ ಅನುಭವೈಕವೇದ್ಯ.
ಸಂನ್ಯಾಸಿಗಳ ಪ್ರಮಾಣ ಅಗತ್ಯಕ್ಕಿಂತ ಅತಿ ಹೆಚ್ಚಾದರೆ, ಅದು ಸಮಾಜದ ಸಮತೋಲನದ ಮೇಲೆ ಘೋರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸುತ್ತಾರೆ ಸ್ವಾಮಿ ವಿವೇಕಾನಂದರದು- “ಸಂನ್ಯಾಸ ಕಲವರಿಗೇ ಒಪ್ಪುತ್ತದೆ. ಆದರೆ ಎಲ್ಲ ಬಗೆಯ ಸ್ತ್ರೀಪುರುಷರಿಗೂ ಒಮ್ಮೆಲೆ ಸಂನ್ಯಾಸದ ಒಲವು ಮೂಡುವಂತೆ ಬೋಧಿಸಿ, ಶಕ್ತ ಹಾಗೂ ಯೋಗ್ಯ ಮನಸ್ಸಿನ ಸಜ್ಜನರೆಲ್ಲರನ್ನೂ ಸಂನ್ಯಾಸಿಗಳನ್ನಾಗಿಸಿಬಿಟ್ಟಲ್ಲಿ, ಮಿಕ್ಕುಳಿದ ಖಲಜನರೇ ಗೃಹಸ್ಥರಾಗಿ ಸಮಾಜವನ್ನು ಕಟ್ಟಬೇಕಾಗುತ್ತದೆ. ಇದರಿಂದಾಗಿ ರಾಷ್ಟ್ರವು ಸತ್ವಹೀನವಾಗುತ್ತ ನಾಶಗೊಳ್ಳುತ್ತದೆ”. ಹಿಂದೆ ಬೌದ್ಧಧರ್ಮದ ಭರದ ಪ್ರಚಾರದ ಸಂದರ್ಭದಲ್ಲೂ ಇದೇ ಅತಿರೇಕವಾಯಿತು ಎನ್ನಲಾಗುತ್ತದೆ.
ಒಟ್ಟಿನಲ್ಲಿ ಸಂನ್ಯಾಸ ಎನ್ನುವುದು ಕತ್ತಿಯ ಅಲುಗಿನ ದಾರಿ. ಸಂನ್ಯಾಸಿಯು ಸದಾ ಎಚ್ಚರವಾಗಿರಬೇಕು. ಜನರ ನಡುವೆ ಚಟುವಟಿಕೆಯಿಂದ ಕೂಡಿರುವವರಂತೂ ಇನ್ನೂ ಎಚ್ಚರವಾಗಿದ್ದು ಆತ್ಮನಿರೀಕ್ಷಣೆ, ಧ್ಯಾನ, ಧ್ಯೇಯಚಿಂತನೆಗಳನ್ನು ಮಾಡುತ್ತಲೇ ಇರಬೇಕು. ಇಲ್ಲದಿದ್ದಲ್ಲಿ ಆತ್ಮವಂಚನೆ ಮತ್ತು ಸಮಾಜದ್ರೋಹದ ಪಾಪ ಅವರಿಂದಾಗುತ್ತದೆ. ಆದರೆ ಸಂನ್ಯಾಸದ ಪರಮೋಚ್ಛ ಆದರ್ಶವನ್ನು ಪರಿಪೂರ್ಣವಾಗಿ ಪಾಲಿಸಿ ಜನ್ಮಸಾರ್ಥಕ ಮಾಡಿಕೊಳ್ಳುವ ಮಹನೀಯರೂ ಅಲ್ಲಲ್ಲಿ ಇರುತ್ತಾರೆ. ಕಪಟಿಗಳನ್ನು ದೂಷಿಸುವ ಭರದಲ್ಲಿ ಇಂತಹ ಪೂಜ್ಯರನ್ನೂ, ಘನತೆವೆತ್ತ ಸಂನ್ಯಾಸಧರ್ಮವನ್ನೂ ಸೇರಿಸಿ ಒಟ್ಟಾರೆ ತಿರಸ್ಕರಿಸುವ ಪಾಪ ಮಾತ್ರ ಯಾರಿಂದಲೂ ಆಗಬಾರದು. 
ಡಾ ಆರತಿ ವಿ ಬಿ

Publsihed in Kannada Prabha 2013
ವಿವೇಕಾನಂದರು ಭಾರತೀಯ ಮಹಿಳೆಯ ಕುರಿತಾಗಿ---

ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ದೇಶಗಳಿಗೆ ಹೋದಾಗ ಅವರನ್ನು ಜನ ಬಹಳಷ್ಟು ಕೇಳುತ್ತಿದ್ದ ಪ್ರಶ್ನೆಗಳು- “ನಿಮ್ಮ ದೇಶದಲ್ಲಿ ಮಹಿಳೆಯನ್ನು ಕೀಳಾಗಿ ಕಾಣುವರಂತೆ?”, “ನಿಮ್ಮ ದೇಶದಲ್ಲಿ ಹೆಣ್ಣುಶಿಶುಗಳನ್ನು ಕೊಲ್ಲುತ್ತಾರಂತೆ?” ಮುಂತಾದವು. ಪರಕೀಯರ ಕ್ರೌರ್ಯಪೂರ್ಣ ಆಡಳಿತಕ್ಕೆ ಸಿಲುಕಿದ್ದ ಅಂದಿನ ಭಾರತದಲ್ಲಿದ್ದ ಹಲವಾರು ಸಮಸ್ಯೆಗಳೊಂದಿಗೆ ಮಹಿಳೆಯರ ಸಮಸ್ಯೆಗಳು ಸಾಕಷ್ಟು ಇದ್ದವೆನ್ನುವುದೇನೋ ನಿಜವೇ. ಆದರೆ ವಾಸ್ತವದ ಸ್ಥಿತಿಗತಿಗಳನ್ನು ಇರುವುದಕ್ಕಿಂತ ಹೆಚ್ಚಾಗಿ ಉತ್ಪ್ರೇಕ್ಷಿಸಿ ಹೇಳುವುದು ಅಂದಿನ ಮತಾಂತರಿಗಳ ಹಾಗೂ ಇತರ ಡೋಂಗಿ ಸಮಾಜಸೇವಕರ ಹುನ್ನಾರವಾಗಿತ್ತು. ಇದರಿಂದಾಗಿ ಅವರ ಸ್ವಕಾರ್ಯಕ್ಕೆ ಸಾಕಷ್ಟು ಹಣವೂ ದಾನವಾಗಿ ದೊರಕುತ್ತಿತ್ತೆನ್ನಿ. ಭಾರತ ಎಂದರೆ ’ಹಾವಾಡಿಗರ, ಅಜ್ಞಾನಿಗಳ, ಅನಾಗರಿಕರ, ಆಚಾರ ವಿಚಾರಗಳಿಲ್ಲದವರ ಕೊಳಚೆ ಕೇರಿ’ ಎಂಬಂತೆ ವಿಪರೀತ ಚಿತ್ರಣಗಳನ್ನು ಹೆಣೆಯುತ್ತಿದ್ದರು. ಹೀಗಾಗಿ ಭಾರತದ ಗೌರವಕ್ಕೆ ಹಾಗೂ ಸನಾತನ ಸಂಸ್ಕೃತಿಗೆ ಧಕ್ಕೆ ಬರುವಂತಹ ಅಭಿಪ್ರಾಯಗಳು ಬಹಳಷ್ಟು ಹರಡಿದ್ದವು. ಇಂತಹ ಅಭಿಪ್ರಾಯಗಳನ್ನು ಎದುರಿಸುವಾಗ ವಿವೇಕಾನಂದರು ’ಇವು ಭಾರತದ ಕೆಲವು ಪ್ರದೇಶಗಳಲ್ಲಿ ಹಾಗೂ ಜನಾಂಗಗಳಲ್ಲಿ ಮಾತ್ರ ಅಳಿದುಳಿದಿರುವ ಪದ್ಧತಿಗಳೆ ಹೊರತು ಸಮಗ್ರ ಭಾರತದ ಕಥೆಯಲ್ಲ, ವಾಸ್ತವದಲ್ಲಿ ಭಾರತವು ಅಷ್ಟು ವಿಕೃತವಾಗಿಲ್ಲ’ ಎನ್ನುವುದನ್ನು ವಿಧವಿಧವಾಗಿ ಸ್ಪಷ್ಟಪಡಿಸಲೆತ್ನಿಸುತ್ತಿದ್ದರು. ಆದರೆ ಪದೇ ಪದೇ ಇದೇ ಪ್ರಶ್ನೆಗಳನ್ನು ಕೇಳಿ ಬೇಸರವಾಗಿ ಕೆಲವೊಮ್ಮೆ ತಮಾಷೆಯ ಉತ್ತರಗಳನ್ನು ಕೊಟ್ಟಿದ್ದುಂಟು. ಒಮ್ಮೆ ಒಬ್ಬಳು ಮಹಿಳೆ ಕೇಳಿದಳು- “ನಿಮ್ಮ ದೇಶದಲ್ಲಿ ಹುಟ್ಟಿದ ಶಿಶುಗಳನ್ನು ಮೊಸಳೆ ಬಾಯಿಗೆ ಹಾಕುತ್ತಾರಂತೆ?” ವಿವೇಕಾನಂದರು ತಮಾಷೆಯಾಗಿ ಹೇಳಿದರು “ಹೌದಮ್ಮ, ನನ್ನನ್ನೂ ನನ್ನ ಅಮ್ಮ ಮೊಸಳೆಬಾಯಿಗೆ ಹಾಕಿಬಿಟ್ಟಿದ್ದಳು. ನಾನು ಹೇಗೋ ಈಜಿ ತಪ್ಪಿಸಿಕೊಡು ಬಂದುಬಿಟ್ಟೆ!” ಮಹಿಳೆ ಬಿಡದೆ ಕೇಳಿದಳು- “ಅಲ್ಲ ಸ್ವಾಮಿ, ಕೇವಲ ಹೆಣ್ಣು ಮಕ್ಕಳನ್ನೇ ಹಾಕುತ್ತಾರಂತೆ?” ಸ್ವಾಮಿಜಿ ತಮಾಷೆ ಮುಂದುವರೆಸಿ ಹೇಳಿದರು “ಹೆಣ್ಣು ಮಕ್ಕಳ ಚರ್ಮ ಮೃದುವಾಗಿದೆ, ಮೊಸಳೆಗೆ ತಿನ್ನಲು ಸುಲಭಾವಾಗಲಿ ಅಂತ!”
ಆದರೆ ನಮ್ಮ ಸಮಾಜದ ಬಗ್ಗೆ ಜಗದಲ್ಲೆಲ್ಲ ಹರಡಿದ್ದ ಈ ವಿಕೃತ ಕಥೆಗಳನ್ನು ಕಂಡು ದುಃಖಿತರಾದದ ಸ್ವಾಮಿಜಿ ಆ ಅಭಿಪ್ರಾಯಗಳಿಗೆ ಪ್ರತ್ಯುತ್ತರವಾಗಿ ’ಭಾರತದ ಮಹಿಳೆ” (ವುಮೆನ್ ಒಫ಼್ ಇಂಡಿಯಾ”) ಎನ್ನುವ ವಿಶೇಷ ಪ್ರವಚನವನ್ನೇ ಮಾಡಿದರು. ಅದರಲ್ಲಿ ಭಾರತೀಯ ಸಮಾಜದಲ್ಲಿ ಮಹಿಳೆಯ ನೈಜ ಸ್ಥಾನವೇನು, ಅವಳ ಆದರ್ಶಗಳೇನು, ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವಲ್ಲಿ ಅವಳ ಯೋಗದಾನವೇನು ಎನ್ನುವುದನ್ನು ವಿವರಿಸಿದರು. ಇದಲ್ಲದೆ ಇನ್ನೂ ತಮ್ಮ ಹಲವು ಸಂಭಾಷಣೆಗಳಲ್ಲಿ, ಪತ್ರಗಳಲ್ಲಿ, ಪ್ರವಚನಗಳಲ್ಲಿ ಸ್ವಾಮಿಜಿ ಭಾರತೀಯ ನಾರಿಯ ಸ್ವರೂಪದ ಬಗ್ಗೆ ಬೆಳಕು ಚೆಲ್ಲಿದ್ದಾರೆ, ಅಂತೆಯೇ ಆಕೆಗೆ ಪುನರುತ್ಥಾನಕ್ಕೆ ಸಂಬಂಧಿಸಿದಂತೆ ತಮ್ಮ ಸಲಹೆಗಳನ್ನು ಮುಂದಿಡುತ್ತಾರೆ. ಕೆಲವಂಶಗಳನ್ನು ಇಲ್ಲಿ ನೋಡೋಣ-
ಸ್ವಾಮಿಜಿ ಹೇಳುತ್ತಾರೆ- The central idea of a hindu lady is her chastity”. ಪ್ರತಿಯೊಂದು ಜನಾಂಗಕ್ಕೂ ಒಂದು ಆದರ್ಶವಿರುತ್ತದೆ. ಅದು ಆ ಜನಾಂಗದ ಭಾವ, ವಿಚಾರ, ಜೀವನಶೈಲಿಗಳನ್ನು ಪ್ರಭಾವಗೊಳಿಸುತ್ತಲೇ ಇರುತ್ತದೆ. ಭಾರತದ ಆದರ್ಶ ’ಧರ್ಮ’ (ಇಲ್ಲಿ ಧರ್ಮ ಎಂದರೆ ಕೇವಲ ಜಾತಿ, ಮತ/ ರಿಲಿಜನ್ ಎಂದರ್ಥವಲ್ಲ. ಜಗತ್ತಿನ ಹಾಗೂ ವೈಯಕ್ತಿಕ ಹಿತಸಾಧನೆಯ ಮಹತ್ ಸಾಧನವೇ ಧರ್ಮ). ಭಾರತದಲ್ಲಿ ಪುರುಷನಂತೆ ನಾರಿಯೂ ಕೂಡ ಧರ್ಮವನ್ನೇ ತನ್ನ ಆಧಾರವಾಗಿಟ್ಟುಕೊಂಡು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಬೇರೆಲ್ಲ ನೆಲೆಗಳಲ್ಲಿ ತನ್ನನ್ನು ತಾನು ಗುರುತಿಸಿ ಕೊಂಡಿದ್ದಾಳೆ. ಈ ಹಿನ್ನಲೆಯಲ್ಲಿ ನಾರಿ ಕಂಡುಕೊಂಡ ಆದರ್ಶ- ’ಮಾತೃತ್ವ’ ಎಂದು ಸೂಚಿಸುತ್ತಾರೆ ಸ್ವಾಮಿಜಿ -The ideal of womenhood in India is motherhood- that marvelous, unselfish, all suffering, ever forgiving mother.
ನಾರಿ ತನ್ನ ಚಾಪಲ್ಯ, ಸ್ವಾರ್ಥಗಳನ್ನು ಮೆಟ್ಟಿ, ತನ್ನೊಳಗಿನ ಮಾತೃತ್ವ, ಧೈರ್ಯ, ಕ್ರಿಯಾಶೀಲತೆ, ಕಲಾಭಿಜ್ಞತೆ, ಸಂಯಮ, ಸೇವಾಭಾವ ಮುಂತಾದುವನ್ನು ಗುರುತಿಸಿಕೊಂಡು ಅದನ್ನು ತನ್ನ ಆತ್ಮೋದ್ಧಾರಕ್ಕೂ, ಪರಿವಾರದ ಹಾಗೂ ಸಮಾಜದ ಹಿತಕ್ಕೂ ಬಳಸುವುದೆ ಅವಳ ಆದರ್ಶ ಸಾಧನೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ನಾರಿಯಲ್ಲಿನ ಈ ಅದ್ಭುತ ಮಾತೃತ್ವದ ಜಗದುದ್ಧಾರಕ ಶಕ್ತಿಯ ಬಗ್ಗೆ ಹೇಳುತ್ತಾರೆ - Mother is pre eminent. Mother is the impartial energy of the universe, because of the colourless love that asks not, desires not, cares not for the evil in her child, but loves him the more.
ಉತ್ತಮ ನಾರಿಯರಿಂದಲೇ ಉತ್ತಮ ಪೀಳಿಗೆಗಳು ಹುಟ್ಟಿಬರಲು ಸಾಧ್ಯ ಎನ್ನುವುದು ಸ್ವಾಮಿಜಿರವರ ಮಾತಿನಲ್ಲಿ ಧ್ವನಿಸುತ್ತದೆ. Shall we bring to the need of India great women fit to be mothers of heroes, because they are pure and selfless, strong with the strength that comes of touching the feet of God. ಭಾರತೀಯ ನಾರಿಯು ಹೇಗೆ ವ್ರತ-ಪೂಜೆ-ಸಂಯಮಗಳ ಮೂಲಕ ತನ್ನ ದೇಹ-ಮನಸ್ಸು-ಭಾವ-ವಿಚಾರಗಳನ್ನು ಪವಿತ್ರವಾಗಿರಿಸಿಕೊಂಡು ಉತ್ತಮ ಸಂಸ್ಕಾರ-ಸಂಪನ್ನ ಮಕ್ಕಳನ್ನು ಹುಟ್ಟಿಸುತಾಳೆ ಎನ್ನುವುದನ್ನು ವಿವರಿಸುತ್ತಾರೆ- Mother is worshipped why? Because she made herself pue. She underwent harsh penances sometimes to keep herself as pure as purity can be”. “Women pray and worship to have sat santaana--- so did my mother have me too-----”.
ಪಾಶ್ಚಾತ್ಯ ಸಮಾಜದಲ್ಲಿ ಮನೆಯನ್ನು ಆಳುವವಳು ಹೆಂಡತಿಯಾದರೆ, ಭಾರತದಲ್ಲಿ ಆ ಹಕ್ಕು ತಾಯಿಯದು. In the west woman is the wife. In the western home wife rules, in the Indian home the mother rules.  ತಾಯಿಯೇ ಒಂದು ಮನೆತನದ ಅನಭಿಷಿಕ್ತ ಅಚಕ್ರವರ್ತಿನಿ, ಅವಳ ಸ್ಥಾನ ನಿರ್ವಿವಾದ, ಅವಳಿಗೆ ಸಲ್ಲುವ ಗೌರವ ಸರ್ವೋಚ್ಛವಾದದ್ದು ಎನ್ನುವುದನ್ನು ಸ್ವಾಮಿಜಿ ಸೂಚಿಸುತ್ತಾರೆ- The ideal of woman in India is mother, the mother first, the mother last.
ಭಾರತದ ಅವನತಿಗೆ ಮುಖ್ಯ ಕಾರಣಗಳಲ್ಲಿ ಒಂದು ಮಹಿಳೆಯ ಸ್ಥಾನದ ಅವನತಿ ಎನ್ನುವುದನ್ನು ಘೋಷಿಸುತ್ತಾರೆ ಸ್ವಾಮಿಜಿ- India saw degeneration because shakti was insulted- our women were looked down upon…. ನಾರಿಯ ಪುನರುತ್ಥಾನವಿಲ್ಲದೆ ಜಗತ್ತಿಗೂ ಒಳಿತಾಗದು ಎನ್ನುತ್ತಾರೆ- There is no chance of the welfare of the world unless the condition of women is improved. It is not possible for a bird to fly on one wing.
ವೇದಕಾಲದ ಗಾರ್ಗಿ ಮೈತ್ರೇಯಿಯರ, ಬೌದ್ಧಯುಗದ  ಸಂಘಮಿತ್ರಾ ಮುಂತಾದ ಸ್ವತ್ದದ ನಾರಿಯರ ಸಂಖ್ಯೆ ಪರಕೀಯ ಆಕ್ರಮಣ ಆಡಳಿತಗಳ ಯುಗಗಳಲ್ಲಿ ಕ್ಷೀಣಿಸಿ ಭಾರತದ ನಾರೀ ಕುಲವೇ ದುರ್ಬಲವೂ ಅಸಹಾಕಯವೂ ಆಗುತ್ತ ಬಂದದ್ದನ್ನು ಕಂಡು ಸ್ವಾಮಿಜಿರವರ ಹೃದಯ ಮರುಗಿತು. ಒಂದೆಡೆ ನಾರಿಯನ್ನು ಆದ್ಯಾಶಕ್ತಿ ಸ್ವರೂಪಿಣೀ ಎಂದು ಆದರಿಸಿ ವರ್ಣಿಸಿದರೂ ಮತ್ತೊಂದೆಡೆ ಸ್ತ್ರೀಯನ್ನು ಶೋಷಿಸುವ, ಕೀಳೆಂದು ಹೀಗಳೆಯುವ, ಎರಡನೆಯ ದರ್ಜೆಯ ಪ್ರಜೆಗಳಂತೆ ಕಾಣುವ ಕುಬುದ್ಧಿಯೂ ಬೆಳೆದದ್ದೇ ನಮ್ಮ ದೇಶದ ಇಂತಹ ಘೋರ ಅವನತಿಗೆ ಕಾರಣ ಎನ್ನುವ ಅಭಿಪ್ರಾಯವನ್ನು ಮುಂದಿಡುತ್ತಾರೆ. ನಿಜ, ಸ್ತ್ರೀಯನ್ನು ವಿದ್ಯಾಧಿಕಾರದಿಂದ ವಂಚಿತವಾಗಿಸುತ್ತ ಬಂದ ಈ ಸಮಾಜದಲ್ಲಿ ಅವಳು ದುರ್ಬಲಳೂ ಸಂಸ್ಕಾರಹೀನಳೂ ಆಗುತ್ತ ಬಂದಳು. ಇಂತಹ ಸ್ತ್ರೀಯಿಂದ ಹುಟ್ಟುವ ಪೀಳಿಗೆಗಳು ದುರ್ಬಲವೂ ನಿರ್ವೀರ್ಯವೂ ಆಗುತ್ತ ಬಂದವು. ಜನಾಂಗಗಳು ದುರ್ಬಲವಾದಂತೆ, ಪರಕೀಯ ಆಕ್ರಮಣಗಳಿಗೆ ದೇಶವು ಸುಲಭದಲ್ಲಿ ತುತ್ತಾಗುತ್ತ ಬಂತು. ಅಷ್ಟೇ ಅಲ್ಲ, ಸ್ತ್ರೀಯನ್ನು ಭೋಗ ಸಾಧನವೆಂಷ್ಟೇ ಕಾಣುವ ದುಷ್ಟಸಂಸ್ಕೃತಿಗಳು ನಮ್ಮನ್ನು ಆಳತೊಡಗಿದಾಗ, ಸ್ತ್ರೀಯ ಸ್ಥಾನ, ವಿದ್ಯೆ, ಸಾಮಾಜಿಕ ಹಕ್ಕುಗಳು, ಇನ್ನಷ್ಟು ಕುಗ್ಗುತ್ತ ಬಂದವು. ಆದರೆ ಅದನ್ನೆಲ್ಲ ಆಗಿಂದಾಗ್ಗೆ ಸರಿ ಪಡಿಸದೇ ಇದ್ದು, ಸ್ತ್ರೀಯನ್ನು ಮತ್ತೆ ತನ್ನ ಹಿಂದಿನ ವಿಭವಕ್ಕೆ ಏರಿಸದೆ ಅವಳನ್ನು ಶಾಶ್ವತವಾದ ಪರಾಧೀನತೆಗೆ, ದಾಸ್ಯದ ಕೂಪಕ್ಕೆ ಇಳಿಸಿದ ಸಮಾಜದ ಬಗ್ಗೆ ಕಿಡಿಕಾರುತ್ತಾರೆ ಸ್ವಾಮಿಜಿ- Circumstances have forced upon us, for centuries, the woman’s need of protection. This and not her inferiority, is the true reading of our customs.
ಮಹಿಳೆಯ ಪುನರುತ್ಥಾನಕ್ಕಾಗಿ ಏನು ಮಾಡಬೇಕು ಎನ್ನುವುದನ್ನೂ ಸ್ವಾಮಿಜಿ ಸ್ಪಷ್ಟಪಡಿಸುತ್ತಾರೆ- Educate you women and leave them. They will take care of themselves”. ಸ್ತ್ರೀಯರಿಗೆ ತಾವೇ ಉದ್ಧಾರವಾಗಲು ಸ್ವಸಾಮರ್ಥ್ಯವಿಲ್ಲ ಎಂಬ ಅಧಿಕಪ್ರಸಂಗದಿಂದಲೋ ಮಿತಿಮೀರಿದ ಸಹಾನುಭೂತಿಯಿಂದಲೋ ಅವರ ಯೋಗಕ್ಷೇಮವನ್ನು ತಾವೇ ವಹಿಸುವುದಾಗಿ, ಅವರ ಪರವಾಗಿ ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳುವುದಾಗಿ ಹಸ್ತಕ್ಷೇಪ ಮಾಡುವ ದುರುತ್ಸಾಹಿ ಪುರುಷರನ್ನು ಸ್ವಾಮಿಜಿ ಎಚ್ಚರಿಸುತ್ತಾರೆ- Hands off----!” ಎಂದು! ಮತ್ತೆ ಗುಡುಗುತ್ತಾರೆ- “Women must be put in a position to solve their own problems their own way. No one can or ought to do this for them. And Indian women are capable of doing it as any in the world”.
ಭಾರತದ ಮಹಿಳೆಗೆ ಸ್ವಾಮಿಜಿರವರ ಸಂದೇಶ- I would say exactly what I say to men, Believe in India and in our Indian faith. Be strong and hopeful and remember that with something to take, Hindus have immeasurably more to give than any other people in the world”.
ಸನಾತನ ಮೌಲ್ಯಗಳು ಹಾಗೂ ಆಧುನಿಕ ಪ್ರಗತಿಪರ ಮನೋಭಾವಗಳ ಸುಂದರ ಸಂಗಮದಿಂದ ನವಯುಗದ ನಾರಿ ಮೂಡಿ ಬರಲಿ ಎಂಬುದು ಸ್ವಾಮಿಜಿರವರ ಹಂಬಲ. ಅವರ ಕಾಲದಲ್ಲಿ ಶಿಕ್ಷಣದ ಅಭಾವ ಹಾಗೂ ಸಮಾಜಿಕ ಕಟ್ಟಲೆಗಳಿಂದಾಗಿ ಹೆಣ್ಣುಮಕ್ಕಳು ತಮ್ಮ ಅಂತಸ್ಸತ್ವವನ್ನು ಮರೆತು ಮರೆಯಲ್ಲಿದ್ದದ್ದನ್ನು ಕಂಡು ಮರುಗಿ, ನಾರಿಯು ತನ್ನ ಗತವೈಭವದ ಸ್ಥಾನವನ್ನು ಪಡೆಯಬೇಕು ಎಂದು ಹಂಬಲಿಸಿದರು ಸ್ವಾಮಿಜಿ. ಕಲ್ಕತ್ತೆಯಲ್ಲಿನ ದುರ್ಗಾಮಾಳ ಪಾಠಶಾಲೆಯಲ್ಲಿ ಹೆಣ್ಣುಮಕ್ಕಳು ಒಳ್ಳೆಯ ವಿದ್ಯಾವತಿಯರಾಗುತ್ತಿರುವುದನ್ನು ಕಂಡು ತುಂಬ ಮೆಚ್ಚಿದರು ಸ್ವಾಮಿಜಿ. ಸೋದರಿ ನಿವೇದಿತಾಳು ತೆರೆದ ಹೆಣ್ಣು ಮಕ್ಕಳ ಶಾಲೆಗೆ ಮೂಲ ಪ್ರೇರಣೆ, ಸಹಕಾರ ಹಾಗೂ ಮಾರ್ಗದರ್ಶನ ಸ್ವಾಮಿ ವಿವೇಕಾನಂದರದೇ ಆಗಿತ್ತು. ಕೇರಳದ ರಾಜಮನೆತನದ ಹೆಂಗಳೆಯರು ತಮ್ಮೊಂದಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಶಾಸ್ತ್ರಚರ್ಚೆ ಮಾಡಿದಾಗ ಸ್ವಾಮಿಜಿಗಾದ ಆನಂದ ಅಷ್ಟಿಷ್ಟಲ್ಲ!
ಹೆಣ್ಣುಮಕ್ಕಳಿಗೆ ಶಾಲೆಗಳನ್ನು ತೆರೆಯುವುದಲ್ಲದೆ, ಎಲ್ಲ ಕ್ಷೇತ್ರಗಳಲ್ಲೂ ಕ್ರಿಯಾಶೀಲವಾಗುವ ಪರಿಸರ ದೇಶದಲ್ಲಿ ನಿರ್ಮಾಣವಾಗಲಿ ಎಂದು ಬಹಳ ಬಯಸಿದ್ದರು. ಅಧ್ಯಾತ್ಮದಲ್ಲೂ ಶಾಸ್ತ್ರಪ್ರಾವೀಣ್ಯದಲ್ಲೂ ಅವರಿಗೆ ಅನುಕೂಲವಾಗುವಂತೆ ಶಾರದಾ ಮಠದ ನಿರ್ಮಾಣಕ್ಕೆ ನಾಂದಿ ಹಾಕಿದ್ದರು. ಹೇಳುತ್ತಾರೆ- “ಶಾರದಾದೇವಿಯವರನ್ನು ಕೇಂದ್ರವಾಗಿರಿಸಿಕೊಂಡು ಮತ್ತೊಮ್ಮೆ ಗಾರ್ಗಿ ಮೈತ್ರೇಯಿಯರು ಜನಿಸಿ  ಬರಲಿದ್ದಾರೆ” ರಾಮಕೃಷ್ಣ ಮಠ ಮಿಶನ್ ಗಿಂತೆ ಹೆಚ್ಚಿನ ಆದ್ಯತೆಯನ್ನೇ ಇದಕ್ಕೆ ನೀಡಿದರು ಎನ್ನುವುದು ಈ ಮಾತಿನ ಮೂಲಕ ಸ್ಪಷ್ಟವಾಗುತ್ತದೆ- “ಮೊದಲು ಶಾರದಾದೇವಿಯವರು ಹಾಗೂ ಅವರ ಸ್ತ್ರೀ ಸಂತಾನ ಆಮೇಲೆ ರಾಮಕೃಷ್ಣರು ಹಾಗೂ ಅವರ ಪುರುಷಸಂತಾನ”. ವೈದಿಕ ಪರಂಪರೆಯ ಸಾತ್ವಿಕ ತೇಜಸ್ಸಿನೊಂದಿಗೆ ಆಧುನಿಕ ಯುಗದ ಪ್ರಗತಿಪರತೆಯೂ ಸಂಗಮಿಸಿ ನವಯುಗದ ಧೀರ ಸತ್ವಸಂಪನ್ನ ನಾರಿ ಅರಳಿ ಬರಲಿ ಎಂಬ ಕನಸನ್ನು ಮುಂಡಿಡುತ್ತಾರೆ ಸ್ವಾಮಿಜಿ. Shall we bring to the need of India great fearless women- women worthy to continues the traditions of sanghamitta, Lila, Ahalya Bai, meerabai, - women fit to be mothers of heroes, because they are pure and selfless, strong with the strength that comes of touching the feet of God.
ನಾರಿಯ ಮನಸ್ಸನ್ನು ಸಂಸ್ಕರಿಸುವ ವಿಷಯದಲ್ಲಿ ಹೆಚ್ಚಿನ ಆಸ್ಥೆ ವಹಿಸುವಂತೆ ಸೂಚಿಸುತ್ತಾರ್ರೆ ಸ್ವಾಮಿಜಿ- Never allow you women to read filthy and impure stuff---- train them in religion, culture house work and enlightening aspects of our tradition. Mould them in Sita’s ideal.
ಸನಾತನ ಸಂಸ್ಕೃತಿಯ ಸರ್ವಾಂಶಗಳನ್ನು ಉಳಿಸಿ ಬೆಳೆಸಿ ತಂದವರು ಬಹುಮಟ್ಟಿಗೆ ಮಹಿಳೆಯರೆ. ತಮ್ಮ ಚಾರಿತ್ರ್ಯ, ಧೈರ್ಯ, ಹಾಗೂ ತ್ಯಾಗಪೂರ್ಣ ಜೀವನದಿಂದ ಪರಿವಾರವನ್ನಷ್ಟೇ ಅಲ್ಲ, ಸಮಾಜವನ್ನು, ದೇಶವನ್ನು ಕಟ್ಟಿದ ನಾರಿಯ ಕುರಿತಾಗಿ ಸ್ವಾಮಿಜೆಗೆ ಅಪಾರ ಗೌರವ. ಭಾರತದ ನಾರಿ ಆಧ್ಯಾತ್ಮಿಕ ಹಾಗೂ ಪ್ರಾಪಂಚಿಕ ರಂಗಗಳಲ್ಲಿ ತನ್ನ ನಿರ್ವಿವಾದಿತ ಸ್ಥಾನವನ್ನು ಗುರುತಿಸಿಕೊಂಡು ಅರಳಿ ನಿಲ್ಲಬೇಕು, ತನ್ಮೂಲಕ ವಿಶ್ವಕ್ಕೇ ಆದರ್ಶಪ್ರಾಯಳಾಗಬೇಕು ಎಂದು ಸೂಚಿಸುತ್ತಾರೆ ಸ್ವಾಮಿಜಿ- The hindu women are very spiritual and religious, perhaps more so than any other women in the world. If we can preserve these beautiful characteristics and at the same time develop the intellects of our women, the hindu woman of the future will be the ideal woman of the world.
ವಿವೇಕಾನಂದರ ಸ್ಫೂರ್ತಿ ಭಾರತೀಯರಿಗೆ, ಅದರಲ್ಲೂ ನಾರಿಯರಿಗೆ ಎಲ್ಲ ಕಾಲಕ್ಕೂ ಪ್ರೇರಕವಾದದ್ದು, 
ಸರಸ್ವತಿ-ಸ್ವರೂಪ-ಸ್ವಾರಸ್ಯ
ಸರಸ್ವತಿಯು ಅತ್ಯಂತ ಪ್ರಸಿದ್ಧ ದೇವತೆ. ವಿದ್ಯಾಧಿದೇವಿ, ಕಲೆಗಳ ಒಡತಿ, ವಾಗ್ದೇವಿ ಹಾಗೂ ಬುದ್ಧಿ-ಪ್ರದಾತೆ ಎಂಬುದಾಗಿ ಪ್ರಖ್ಯಾತಳು. ವಿದ್ಯಾರ್ಥಿಗಳಂತೂ ’ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ | ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ|| ಎಂಬ ಪ್ರಾರ್ಥನೆಯೊಂದಿಗೇ ಅಧ್ಯಯನವನ್ನು ಶುರು ಮಾಡುವುದು ವಾಡಿಕೆ. ವಾಣಿಯು ಪ್ರಾತಃ ಸ್ಮರಣೀಯಳು. ಬೆಳಗಾಗುತ್ತಲೆ ತೆರೆದ ಹಸ್ತ-ಸಂಪುಟವನ್ನು ಮುಖದೆದುರು ಹಿಡಿದು- “ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ | ಕರಮೂಲೇ ಸ್ಥಿಥಾ ಗೌರೀ ಪ್ರಭಾತೇ ಕರ (ಕುರು) ದರ್ಶನಂ ||” ಎಂಬುದಾಗಿ ದೇವೀತ್ರಯವನ್ನು ಸ್ಮರಿಸುತ್ತೇವೆ. ’ಸಿರಿ, ವಿದ್ಯೆ ಹಾಗೂ ಶಕ್ತಿ ದೇವತೆಗಳು ನಮ್ಮ ಕೈಯಲ್ಲೇ ಅಡಗಿದ್ದಾರೆ, ಪರಿಶ್ರಮ ಮಾಡಿದಲ್ಲಿ ಒಲಿಯುತ್ತಾರೆ’ ಎನ್ನುವ ಸಕಾರಾತ್ಮಕ ಭಾವ ಹಾಗೂ ಸ್ಫೂರ್ತಿಯೊಂದಿಗೆ ಹಾಸಿಗೆಯಿಂದೇಳುವ ಸುಂದರ ಸಂಸ್ಕೃತಿ ನಮ್ಮದು. ಸರಸ್ವತಿಯ ಸುಂದರ ಸ್ವರೂಪವನ್ನೀಗ ಅವಲೋಕಿಸೋಣ ಬನ್ನಿ.
ಸರಸ್ವತೀ ಪದಾರ್ಥ
ರಸೋ ವೈ ಸಃ ಎಂಬುದು ವೇದವಾಕ್ಯ. ಇಲ್ಲಿ, ’ರಸ’ ಎಂದರೆ ’ಬ್ರಹ್ಮಾನಂದ’. ’ಸ-ರಸ’ ಎಂದರೆ ’ರಸದಿಂದ ಕೂಡಿದ’ ಎಂದರ್ಥ. ಹಾಗಾಗಿ ’ಸರಸ್ವತೀ’ ಎಂದರೆ ’ಬ್ರಹ್ಮಾನಂದಸ್ವರೂಪಿಣಿ’ ಎಂದರ್ಥ. ಸರಸ್ವತೀ ಸೂಕ್ತ, ಮೇಧಾಸೂಕ್ತ ಮುಂತಾದವು ವೇದದಲ್ಲಿ ಕಾಣುವ ಈಕೆಯ ಸ್ತುತಿಗಳು. ಸರಸ್ವತಿಯೇ ಮೇಧಾದೇವಿಯಾಗಿ ನರನಲ್ಲಿ ಅಪ್ರತಿಮ ಪ್ರಜ್ಞಾನ ಶಕ್ತಿಯಾಗಿ ಅಡಗಿರುತ್ತಾಳೆ. ಈ ಮೇಧಾಶಕ್ತಿಯು ನಮ್ಮ ಕುತ್ತಿಗೆಯ ಹಿನ್ನಲೆಯ ಮೇಧಾನಾಡಿಯಲ್ಲಿ ಸುಪ್ತವಾಗಿದ್ದು, ಈಕೆಯ ಕೃಪೆಯಾದಾಗ ಜಾಗೃತವಾಗುತ್ತದೆ. ಆಗ ಮನುಷ್ಯ ಅಪಾರ ಅಂತರ್ದೃಷ್ಟಿ ಹಾಗೂ ಜ್ಞಾನಗಳನ್ನು ಹೊಂದಿ ’ಮೇಧಾವೀ’ ಎನಿಸುತ್ತಾನೆ ಎಂದು ಪರಂಪರೆಯ ನಂಬಿಕೆ. ಜಾತಕರ್ಮ ಮಾಡುವ ಸಂದರ್ಭದಲ್ಲೇ ನವಜಾತ ಶಿಶುವಿಗೆ, ಮನೋನ್ನತಿ, ವಿದ್ಯಾ-ಉನ್ನತಿಗಳನ್ನು ಕೋರಿ, ’ಮೇಧಾಜನನ’ ಎಂಬ ಸಂಸ್ಕಾರವನ್ನೂ ಮಾಡುವ ವೈದಿಕ ಪದ್ಧತಿಯೇ ಇದೆ. ಮೇಧೆಗೆ ನಮ್ಮ ಸಂಸ್ಕೃತಿಯಲ್ಲಿ ಕೊಟ್ಟ ಮಹತ್ವ ಇದರಿಂದ ಗೊತ್ತಾಗುತ್ತದೆ. ಬುದ್ಧಿ, ಜ್ಞಾನ, ಪ್ರತಿಭೆಗಳಿದ್ದಲ್ಲಿ ಸ್ಥಾನಮಾನ, ಹಣ-ಸಂಪದ-ಅಧಿಕಾರಗಳಿರುವವರೂ ತಲೆ ಬಾಗುತ್ತಾರೆ, ಗೌರವ ಸೂಚಿಸುತ್ತಾರೆ ಎಂದ ಮೇಲೆ ಮನುಷ್ಯ ಅಗ್ರಮಾನ್ಯನಾಗುವುದು ಸರಸ್ವತಿಯ ಅನುಗ್ರಹದಿಂದ ಮಾತ್ರ ಎಂದು ಗೊತ್ತಾಗುತ್ತದೆ.  
ವೇದದಲ್ಲಿ ಉಕ್ತವಾದ ’ವಾಕ್’ ಎಂಬ ದೇವತೆಯೂ ಸರಸ್ವತಿಯ ರೂಪವೆ. ’ವಾಕ್’ ಎಂದರೆ ಪ್ರಣವ, ಓಂಕಾರ. ಮನುಷ್ಯನಿಗೆ ಮಾತ್ರ ನಿಸರ್ಗವು ಪಾಲಿಸಿರುವ ನುಡಿಯುವ ಸಾಮರ್ಥ್ಯವೂ ಈ ವಾಕ್ ಎಂಬ ದೇವತೆಯ ಶಕ್ತಿಯೇ. ವಾಕ್ ಎಂದರೆ ವೇದ, ಮಂತ್ರ, ವಾಕ್ಚಾತುರ್ಯ, ವಿದ್ಯೆ, ಭಾಷೆ ಎಂಬ ಹಲವಾರು ಅರ್ಥಛಾಯೆಗಳಿವೆ. ಈ ಎಲ್ಲವನ್ನು ಒಳಗೊಂಡವಳೇ ಸರಸ್ವತಿ. ಈಕೆಯನ್ನು ಮುಂದೆ ಪುರಾಣಗಳಲ್ಲಿ ಬ್ರಹ್ಮನ ರಾಣಿಯಾದ ವಾಣಿಯಾಗಿ ಗುರುತಿಸಲಾಯಿತು.
ರಸ ಎಂದರೆ ರುಚಿ, ಬಣ್ಣ, ಆಸ್ವಾದ, ಸ್ವಾರಸ್ಯ, ಕಲಾತ್ಮಿಕತೆ ಎಂಬ ಅರ್ಥಛಾಯೆಗಳು ಸ್ಫುರಿಸುತ್ತವೆ. ಆದ್ದರಿಂದ ಸರಸ್ವತೀ ಎಂಬ ಪದವು ಸೌಂದರ್ಯ, ಸ್ವಾರಸ್ಯ, ಕಲಾಭಿಜ್ಞತೆ, ಆರ್ದ್ರವಾದದ್ದು (ನೀರು/ ಜಲಾಶಯಕ್ಕೆ ಸಂಬಂಧಿಸಿದ್ದು), ಆನಂದ ಮುಂತಾದ ಅರ್ಥಗಳನ್ನೂ ಒಳಗೊಳ್ಳುತ್ತದೆ. ಪುರಾಣಪ್ರಸಿದ್ಧ ಬ್ರಹ್ಮನ ರಾಣಿಯಾದ ವಾಣಿಯ ಸ್ವರೂಪ ಈ ಭಾವಾರ್ಥವನ್ನು ಒಳಗೊಂಡಿದೆ.
ಸರಸ್ವತಿಯನ್ನು ಶಾರದೆ ಎಂದೂ ಕರೆಯುವುದುಂಟು. ಶಾರದಾ ಎಂದರೆ ಶರದೃತುವಿನಲ್ಲಿ ಪೂಜಿಸಲಾಗುವವಳು ಎಂದರ್ಥ. ಇದಲ್ಲದೆ ಭಾರತೀ, ವಾಣಿ, ವಾಗ್ದೇವಿ, ವಿದ್ಯಾ, ಮೇಧಾ, ಬ್ರಹ್ಮಾಣೀ, ಬ್ರಾಹ್ಮೀ, ಎಂದೂ ಹಲವಾರು ಹೆಸರುಗಳು ಇವಳಿಗೆ.
ಸರಸ್ವತೀ ಸ್ವರೂಪ
ಕಾಳಿಕಾಪುರಾಣ, ದುರ್ಗಾಸಪ್ತಶತೀ ಮುಂತಾದ ಪುರಾಣಗಳಲ್ಲಿ ಉಲ್ಲೇಖವಾಗಿರುವ ’ಮಹಾಸರಸ್ವತಿ’ಯು ಕೇವಲ ಚತುರ್ಮುಖ ಬ್ರಹ್ಮನ ಮಡದಿಯಲ್ಲ, ಬದಲಾಗಿ ಆದ್ಯಾಶಕ್ತಿಯ ಮೂಲರೂಪತ್ರಯ (ಮಹಾಲಕ್ಷ್ಮೀ-ಮಹಾಕಾಳಿ- ಮಹಾಸರಸ್ವತಿ)ಗಳಲ್ಲೊಂದು. ಇವಳೇ ಕೊಟ್ಯನುಕೋಟಿ ಶಕ್ತಿರೂಪಗಳಲ್ಲಿ ವಿಸ್ತರಿಸಿ ಶುಂಭನಿಶುಂಭಾದಿ ಭಯಂಕರ ಅಸುರರನ್ನು ಸಂಹರಿಸಿ, ಸಕಲ ಲೋಕಗಳಿಗೆ ಅಭಯವಿತ್ತ ಅಪರಾಜಿತಾದೇವಿ.
ಇನ್ನು ನಮಗೆಲ್ಲ ಚಿರಪರಿಚಿತವಾದ ವಿದ್ಯಾಧಿದೇವತೆ ಸರಸ್ವತಿಯು ಚತುರ್ಮುಖ ಬ್ರಹ್ಮನ ರಾಣಿ. ಬ್ರಹ್ಮನು ಈಕೆಯನ್ನು ಸೃಷ್ಟಿಸಿದ. ಇವಳ ಚೆಲುವು, ಪ್ರತಿಭೆಗಳಿಗೆ ತಾನೇ ಮಾರು ಹೋಗಿ ಅವಳನ್ನೇ ತನ್ನ ಒಲವಿನ ಮಡದಿಯನ್ನಾಗಿಸಿಕೊಂಡನು ಎನ್ನುವ ಕಥೆಯೊಂದಿದೆ. ತಾತ್ವಿಕವಾಗಿ ನೋಡುವುದಾದರೆ, ಬಹ್ಮನು ಸೃಷ್ಟಿಕರ್ತ. ಸೃಷ್ಟಿ ಮಾಡಲು ಬೇಕಾಗುವುದು ಸರ್ಜನಶೀಲತೆ, ಜ್ಞಾನ ಮತ್ತು ನವನವೋನ್ಮೇಷಶಾಲಿನೀ ಪ್ರತಿಭೇ. ಇದೆಲ್ಲವೂ ಸರಸ್ವತಿಯ ಸ್ವರೂಪವೆ. ಆದ್ದರಿಂದ ಆಕೆಯೇ ಅವನ ಶಕ್ತಿ. ಆಕೆ ಅವನ ಬುದ್ಧಿಯಲ್ಲಿ, ಜಿಹ್ವೆಯಲ್ಲಿ ನೆಲೆಸಿ ಸರ್ಜನಶೀಲತೆಯನ್ನು ಪ್ರೇರೇಪಿಸಿ ಸೃಷ್ಟಿ ಮಾಡಿಸುತ್ತಾಳೆ. ಸಕಲ ಸೃಷ್ಟಿಗೆ ಮೂಲ ಓಂಕಾರ ಪ್ರಣವವೇ. ಈ ಓಂಕಾರವನ್ನು ಬ್ರಹ್ಮನು ತನ್ನೊಳಗೆ ಅನುಸಂಧಾನ ಮಾಡಿ, ಅದರ ಸತ್ವದಿಂದ ಹೊಮ್ಮಿದ ವೇದವನ್ನು ತನ್ನ ನಾಲ್ಕೂ ಮುಖಗಳ ಮೂಲಕ ನುಡಿಯುತ್ತ ಜಗತ್ತಿಗೆ ಕೊಟ್ಟನು ಎನ್ನಲಾಗುತ್ತದೆ. ಈ ನಾದಮಯ ಪ್ರಣವವನ್ನೇ ’ವಾಕ್’ ಎಂದೂ ಕರೆಯಲಾಗಿದೆ. ಈ ’ವಾಕ್’ ಅಥವಾ ’ಓಂಕಾರ’ವೇ ಸರಸ್ವತೀ ಸ್ವರೂಪ. ಆದ್ದರಿಂದ ಅವಳು ನಾದಬ್ರಹ್ಮಮಯೀ, ಓಂಕಾರರೂಪಿಣಿ. ನಾದವೇ ಸೃಷ್ಟಿಗೂ, ವೇದಕ್ಕೂ, ಸ್ವರಗಳಿಗೂ, ಭಾಷೆಗಳಿಗೂ, ಗಾನ ಹಾಗೂ ವಾದ್ಯಗಳ ಗೀತಸ್ವಾರಸ್ಯಕ್ಕೂ ಮೂಲ. ಹಾಗಾಗಿ ಈ ಎಲ್ಲ ಪ್ರಕಲ್ಪಗಳಿಗೂ ಸರಸ್ವತಿಯೇ ಅಧಿಷ್ಠಾತೃದೇವತೆ.
ನಾವು ಪೂಜಿಸುವ ಸರಸ್ವತಿಯ ಪ್ರಸಿದ್ಧ ರೂಪದಲ್ಲಿ ಈ ಎಲ್ಲ ಅಂಶಗಳು ಬಿಂಬಿತವಾಗಿವೆ. ಆಕೆಗೆ ಚತುರ್ಭುಜಗಳು. ಒಂದರಲ್ಲಿ ವೇದಗ್ರಂಥವನ್ನು ಹಿಡಿದಿರುತ್ತಾಳೆ. ಪರಾಪರಾವಿದ್ಯೆಗಳೆಲ್ಲ ಅವಳ ಸ್ವರೂಪವೇ ಆಗಿದ್ದು, ಅವಳ ಅನುಗ್ರಹದಿಂದ ಮಾತ್ರ ಅವುಗಳು ಲಭ್ಯ ಎನ್ನುವುದನ್ನು ಇದು ಸೂಚಿಸುತ್ತದೆ. ಇನ್ನೊಂದು ಕೈಯ್ಯಲ್ಲಿ ಅಕ್ಷಮಾಲೆಯನ್ನು ಹಿಡಿದಿದ್ದಾಳೆ. ಪರಬ್ರಹ್ಮದ ಅನುಸಂಧಾನ ಮಾಡುವ ಸಂಸ್ಕಾರವನ್ನು, ಸಿದ್ಧಿಯನ್ನೂ ಈಯುವವಳೂ ಅವಳೇ ಎನ್ನುವುದು ಇಲ್ಲಿ ಸೂಚ್ಯ. ಸರಸ್ವತಿಯು ಒಯ್ಯಾರದ ಭಂಗಿಯಲ್ಲಿ ಕುಳಿತು ಕರದಲ್ಲಿ ಸುಂದರವಾದ ವೀಣೆಯನ್ನು ನುಡಿಸುತ್ತಾಳೆ. ವೀಣೆಯು ಸಕಲ ಲಲಿತ ಕಲೆಗಳ ಪ್ರತಿನಿಧಿಯೂ ಹೌದು, ಮಾನವ ಕುಂಡಲಿನೀ ದಂಡದ ಪ್ರತೀಕವೂ ಹೌದು. ಆದ್ದರಿಂದ ಆಕೆ ಸಕಲ ಲಲಿತ ಕಲೆಗಳಲ್ಲಿ ರುಚಿಯನ್ನೂ, ನೈಪುಣ್ಯವನ್ನೂ ಸಿದ್ಧಿಯನ್ನೂ ಪ್ರಸಾದಿಸುವವಳು, ನಮ್ಮ ಕುಂಡಲಿನಿಯ ಊರ್ಧ್ವಗತಿಗೂ ಅವಳೇ ಪ್ರೇರಕಳು. ಭಾರತೀಯ ಹೃದಯದ ಪಾಲಿಗೆ ಕಲೆಯು ಕೇವಲ ಮನೋರಂಜಕ ವಿಷಯವಲ್ಲ. ಬದಲಾಗಿ ಅನನ್ಯ ಪ್ರೀತಿ ಹಾಗೂ ಶ್ರದ್ಧೆಗಳಿಂದ ಸಾಧನೆ ಗೈಯುವವರಿಗೆ ಅಧ್ಯಾತ್ಮದ ಆನಂದದಲ್ಲೇ ಪರ್ಯವಸಾನ ಮಾಡಿಸುವ ಉಪಾಸನಾ ಸ್ವರೂಪ. ಅವಳ ಕೈಯಲ್ಲಿನ ಶುಕವು ಜ್ಞಾನ ಮತ್ತು ಅಂತರ್ದೃಷ್ಟಿಗಳನ್ನು ಸೂಚಿಸುತ್ತದೆ. ಅಂತೆಯೇ ಮಧುರ ವಾಕ್ಚಾತುರ್ಯಕ್ಕೂ ಅದು ಸಂಕೇತವಾಗಿದೆ. ಅವಳ ರೂಪದ ಕುರಿತಾದ ಪ್ರಸಿದ್ಧ ಸ್ತುತಿ ಇಂತಿದೆ-
ಶ್ವೇತಪದ್ಮಾಸನಾ ದೇವಿ ಶ್ವೇತಪುಷ್ಪೋಪಶೋಭಿತಾ | ಶ್ವೇತಾಂಬರಧರಾ ಶುಭ್ರಾ ಶ್ವೇತಗಂಧಾನುಲೇಪನಾ |
ಶ್ವೇತಾಕ್ಷಸೂತ್ರಹಸ್ತಾ ಚ ಶ್ವೇತಚಂದನಚರ್ಚಿತಾ | ಶ್ವೇತವೀಣಾಧರಾ ಶುಭ್ರಾ ಶ್ವೇತಾಲಂಕಾರಭೂಷಿತಾ ||

ಅವಳೂ ಶುಭ್ರ, ಅವಳು ಕುಳಿತ ಪದ್ಮವು, ಮುಡಿದ ಪುಷ್ಪಗಳು, ಧರಿಸಿದ ವಸ್ತ್ರವು, ಪೂಸಿಕೊಂಡ ಗಂಧ-ಚಂದನಗಳು, ಹಿಡಿದ ಅಕ್ಷಮಾಲೆಯು, ನುಡಿಸುವ ವೀಣಾದಂಡವೂ, ಮತ್ತು ಅವಳು ಧರಿಸಿದ ಎಲ್ಲ ಭೂಷಣಾಲಂಕಾರಗಳು ಶುಭ್ರಶ್ವೇತವರ್ಣದವು. ಮುತ್ತು, ಬೆಳ್ಳಿ, ವಜ್ರಗಳ ಶುಭ್ರಕಾಂತಿಯಿಂದ ಶೋಭಿಸುವವಳು ಅವಳು.  ಒಟ್ಟಿನಲ್ಲಿ ಅವಳು ’ಸರ್ವಶುಕ್ಲಾ ಸರಸ್ವತಿ’, ಎಂದರೆ ಶುದ್ಧಸತ್ವಮಯೀ.
ಅವಳ ಪಾದಪದ್ಮಗಳನ್ನು ಸಿದ್ಧಗಂಧರ್ವರು ವಂದಿಸುತ್ತಾರೆ, ಸುರ-ನರ-ದಾನವರು, ಋಷಿಮುನಿಗಳು ಸ್ತುತಿಸಿ ಪೂಜಿಸುತ್ತಾರೆ. ಅವಳೆ ನಮ್ಮ ಜಾಢ್ಯವನ್ನು ನಿಃಶೇಷವಾಗಿ ಪರಿಹರಿಸಬಲ್ಲಳು, ಬುದ್ಧಿಯಲ್ಲಿ ಮಾತಿನಲ್ಲಿ ಚಾತುರ್ಯವನ್ನು ಲಾಲಿತ್ಯವನ್ನೂ ತುಂಬುವವಳು. ಅವಳ ಅನುಗ್ರಹವಿಲ್ಲದಿದ್ದಲ್ಲಿ ನಮಗೆ ಸಿಗುವ ಸಿರಿ ಸಂಪದ ಸ್ಥಾನಮಾನಗಳು ಅಪವ್ಯಯವೂ ವ್ಯರ್ಥವೂ ಆಗುತ್ತವೆ. 
ಇವಳು ವಾಗ್ದೇವತೆ
ಸರಸ್ವತಿಯು ವಾಗ್ದೇವತೆ. ನಮ್ಮಿಂದ ಹೊಮ್ಮುವ ನಾದವು ಅವಳ ಸ್ವರೂಪವೇ. ಅಕ್ಷರಗಳನ್ನೂ, ನಾದವನ್ನೂ ಅರ್ಥವರಿತು, ಕ್ರಮದಲ್ಲಿ ಶ್ರದ್ಧೆಯಿಂದ ಉಚ್ಚರಿಸಿದರೆ ಅದು ಮಂತ್ರತ್ವವನ್ನು ಪಡೆದು, ದೇವತೆಗಳ ಅನುಗ್ರಹವನ್ನು ನಮಗೆ ದೊರಕಿಸಿಕೊಡುತ್ತದೆ. ಆದ್ದರಿಂದಲೇ ’ಮಾತೇ ಸರಸ್ವತೀ-ಮಾತೆ’ ಎಂಬ ಭಾವದಿಂದ ಮಾತನ್ನು ಸತ್ಯ, ಸಂಸ್ಕೃತಿ ಹಾಗೂ ಪ್ರಾಮಾಣಿಕತೆಗಳಿಂದ ಕಾಪಾಡಿಕೊಂಡು ಬಂದಿದೆ ನಮ್ಮ ಋಷಿಪರಂಪರೆ. ಸತ್ಯವೂ, ಪ್ರಿಯವೂ ಆದದ್ದನ್ನು ಶುದ್ಧ ಸುಸಂಕೃತರೂಪದಲ್ಲಿ ನುಡಿಯುವುದೇ ಒಂದು ತಪಸ್ಸು. ಅದೇ ಸರಸ್ವತಿಯ ಆರಾಧನೆ ಎಂಬ ಸಾತ್ವಿಕ ನಂಬಿಕೆ ಇಂದಿಗೂ ಸುಜನರಲ್ಲಿದೆ. ಸರಸ್ವತಿಯು ನಮ್ಮ ಬುದ್ಧಿಯಲ್ಲಿ ವಿಚಾರವಾಗಿ ನಿಂತು, ನಾಲಿಗೆಯಲ್ಲಿ ಮಾತಾಗಿ ನಿಂತು ನಮ್ಮ ಜೀವನ, ಭಾವನೆ ಸಂಬಂಧಗಳನ್ನು ಪ್ರಭಾವಗೊಳಿಸುತ್ತಾಳೆ. ಹಾಗಾಗಿ ’ಮಾತನ್ನು’ ಸರಸ್ವತೀ ಎಂಬ ಪೂಜ್ಯ ಭಾವದಿಂದ ಕ್ರಮವರಿತು, ಸತ್ಯವನ್ನು ಬಿಡದೆ, ಹದದಿಂದ ಶ್ರದ್ಧೆಯಿಂದ ಬಳಸಬೇಕು.
ನಾದೋಪಾಸನ ಎಂದರೆ ಶಬ್ದ ಬ್ರಹ್ಮವಾದನ್ನು ಓಂಕಾರಾನುಸಂಧಾನ ಎಂದರ್ಥ. ಅಂತೆಯೇ ಅದರ ಅಂತರ್ಬಹಿರಂಗದ ಸ್ವರೂಪಗಳಾದ ಮಾತುಗಾರಿಕೆ, ಕಾವ್ಯ, ಸಂಗೀತ, ವಾಕ್-ಕೌಶಲ, ಮುಂತಾದ ಪ್ರತಿಭಾಶಕ್ತಿವಿಶೇಷಗಳ ಸಾಧನೆಯೂ ಹೌದು. ಹಾಗಾಗಿಯೇ ವೇದ ಹಾಗೂ ಓಂಕಾರೋಪಾಸಕರನ್ನಲ್ಲದೆ, ಸಂಗೀತಸಾಧಕರನ್ನೂ ’ನಾದತಪಸ್ವಿ’ಗಳು ಎಂದು ಗುರುತಿಸಲಾಗುತ್ತದೆ. ಬಹುಶಃ ಕಲೆಗೆ ಕೇವಲ ಮನೋರಂಜನೆಯ ಪಟ್ತ ಕಟ್ಟದೆ, ದೈವೀ ಸ್ವರೂಪದ ಎತ್ತರಕ್ಕೆ ಭಾವಿಸಿ ಅನುಭವಿಸಿದ ಹೆಗ್ಗಳಿಕೆ ಕೇವಲ ನಮ್ಮ ಸನಾತನ ಧರ್ಮದ್ದು.
ವಾಗ್ಭೂಷಣಂ ಭೂಷಣಂ
ರಾಜಾ ಭರ್ತೃಹರಿಯು ಎಲ್ಲ ಒಡವೆಗಳಿಗಿಂತ ಅತ್ಯುತ್ಕೃಷ್ಟವಾದದ್ದು ಮಾತು ಎಂಬ ಒಡವೆ ಎನ್ನುತ್ತಾನೆ- ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾಧಾರ್ಯತೆ---- ವಾಗ್ಭೂಷಣಂ ಭೂಷಣಂ ಎಂದಿದ್ದಾನೆ.. ಸುಸಂಸ್ಕೃತವಾದ ಮಾತಿನ ಕೌಶಲವು ಮನುಷ್ಯನಿಗೆ ತರುವ ವರ್ಚಸ್ಸನ್ನು ಬೇರಾವ ಲೇಪನ, ಒಡವೆಗಳು ಕೊಡಲಾರವು. ಸರಸ್ವತಿಯ ಅನುಗ್ರಹವಾದರೆ ಮನುಷ್ಯನಿಗೆ ವಿದ್ಯಾಸಂಪತ್ತು ದಕ್ಕುತ್ತದೆ. ’ಕಳ್ಳರು ಕದಿಯಲಾಗದ, ತೆರಿಗೆ ಪಾವತಿಯ ಭಯವಿಲ್ಲದ, ಎಷ್ಟು ಬಳಸಿದರೂ ಕಡಿಮೆಯಾಗದ, ಹಂಚಿಕೊಂಡಷ್ಟೂ ವೃದ್ದಿಯಾಗುತ್ತ ಹೋಗುವ, ಮಾನ ಸಮ್ಮಾನಗಳನ್ನು, ಐಶ್ವರ್ಯವನ್ನೂ, ಧನ್ಯತೆಗಳನ್ನು ಹೆಚ್ಚಿಸುವ ’ವಿದ್ಯೆ’ ಎನ್ನುವ ಧನವು ಬೇರೆಲ್ಲ ಧನಗಳಿಗಿಂತ ಉತ್ತಮವಾದ್ದದ್ದು’ ಎನ್ನುತ್ತಾನೆ.
ವಿದ್ಯಾ ಪ್ರತಿಭೆಗಳು ಸೀಮಾತೀತ ಖ್ಯಾತಿ ಹಾಗೂ ಘನತೆ-ಗೌರವಗಳನ್ನು ದೊರಕಿಸಿಕೊಡುದುವಂತಹವು. ವಿದ್ವಾಂಸನಿಗೆ, ಕಲಾವುದನಿಗೆ ಜಗತ್ತಿನ ಎಲ್ಲೆಡೆಗಲಲ್ಲೂ ಬೇಡಿಕೆ, ಗೌರವ ಇದ್ದೇ ಇರುತ್ತದೆ. ---ಸ್ವದೇಶೇ ಪೂಜ್ಯತೆ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೆ || (ರಾಜನಿಗೆ ತನ್ನ ದೇಶದಲ್ಲಿ ಮಾತ್ರ ಮಾನ್ಯತೆ, ಆದರೆ ವಿದ್ವಾಂಸನಿಗೆ ಸರ್ವತ್ರ ಮಾನ್ಯತೆ ಇರುತ್ತದೆ) ಎನ್ನುವ ಮಾತನ್ನು ಸ್ವಾನುಭವದಿಂದ ಮೈಸೂರಿನ ಮಹಾರಾಜರಾಗಿದ್ದ ಚಾಮರಾಜೇಂದ್ರ ಒಡೆಯುರು ಹೇಳಿದ್ದರು.
ಮನುಷ್ಯ ತನ್ನ ಸ್ಥಾನ ಮಾನ ಸಿರಿ ಅಧಿಕಾರ ವೈಭವಗಳನ್ನು ಬದುಕಿರುವವರೆಗೂ ಮಾತ್ರ ಅನುಭವಿಸುತ್ತಾನೆ, ಆದರೆ ಅವನ ನಂತರ ಅದೆಲ್ಲ ಅವನ ಪಾಲಿಗೆ ಇಲ್ಲವಾಗುತ್ತವೆ., ಆದರೆ ಆತ ಬದುಕಿದ್ದಾಗ ವಿದ್ಯೆ, ಕಲೆ, ಬುದ್ಧಿ ಚಾತುರ್ಯಗಳನ್ನು ಮೆರೆದು ಬಿಟ್ಟು ಹೋಗುವ ಕಾವ್ಯ, ಸಾಹಿತ್ಯ, ಶಾಸನ, ಕಲಾಕೃತಿಗಳ ಪರಂಪರೆಗಳು ಅಥವಾ ಯಾವುದೇ ವಿದ್ಯಾಕ್ಷೇತ್ರದ ಸಾಧನೆಯಾಗಲಿ ಜ್ಞಾನನಿಧಿಯಾಗಲಿ ಆಚಂದ್ರಾರ್ಕವಾಗಿ ಅಮರವಾಗಿ ಉಳಿಯುತ್ತವೆ.
ಸರ್ವಭಾಷಾಮಯೀ ಸರಸ್ವತೀ
ಸಂವಹನ ಎನ್ನುವುದು ಮನುಷ್ಯ ಜೀವನದಲ್ಲಿ ಅತ್ಯುನ್ನತ ಮಹತ್ವವನ್ನು ಪಡೆದಿರುವಂತಹದ್ದು. ಆಡುಭಾಷೆಯಾಗಿ, ಸಾಹಿತ್ಯಾದಿ ಪ್ರಕಾರಗಳಾಗಿ ಅದು ಮಾನವಕೋಟಿಯ ಜೀವನಕ್ಕೆ ಆಧಾರವಾಗಿದೆ. ಭಾಷೆ ಎನ್ನುವುದೆ ಮನುಷ್ಯ ಜೀವನಕ್ಕೆ ಒಂದು ಒದಗಿರುವ ಅದ್ಭುತ ಕೃಪೆ. ಮನುಷ್ಯನನಿಗೆ ಉಪಕರಿಸಲು ಇಂದು ಕೋಟಿಗಟ್ಟಲೆ ಭಾಷೆಗಳು ನಿರ್ಮಾಣವಾಗಿವೆ, ಸದಾ ವಿಕಾಸವೂ ಆಗುತ್ತಿವೆ. ಸರ್ವಭಾಷೆಗಳು ಸರಸ್ವತೀ ಸ್ವರೂಪಗಳೇ ಆದ್ದರಿಂದ ಎಲ್ಲವೂ ಪೂಜ್ಯ, ಅಲ್ಲಿ ತಾರತಮ್ಯ ಸಲ್ಲ. ಏಕೆಂದರೆ ನಾದಮಯವಾಗಿ ಹೊಮ್ಮುವ ವಾಗ್ಧಾರೆಯೆಲ್ಲವೂ ವಾಣಿಯೇ, ಪೂಜ್ಯವೇ.
ನುಡಿಯನ್ನು ಸರಸ್ವತೀ ಎಂದು ಗೌರವಿಸುವ ಭಾವ ಭಾರತೀಯರಲ್ಲಿ ಅನಾದಿ ಕಾಲದಿಂದ ಬೆಳೆದು ಬಂದಿದೆ. ಹಾಗಾಗಿಯೇ ಭಾರತದ ಎಲ್ಲೆಡೆಗಳಲ್ಲೂ ಬಹುಭಾಷಾ ಸಂಸ್ಕೃತಿಯೇ ಕಾಣಬರುತ್ತದೆ. ಕೆಲವೇ ದಶಕಗಳ ಹಿಂದೆಯಷ್ಟೇ ಈ ಭಾಷಾಧಾರಿತ ರಾಜಕೀಯ ಸೀಮೆಗಳು ಬಂದಿರುವಂತಹವು. ಆದರೆ ಹಿಂದೆಯೂ ಇಂದೂ ಎಂದೆಂದೂ ನೆರೆಹೊರೆಯ ರಾಜ್ಯಗಳ ಭಾಷೆಗಳನ್ನು ಪ್ರೀತಿಸುವ, ಕಲಿತು ಸಿದ್ಧಿಸಿಕೊಳ್ಳುವ ಔದಾರ್ಯವು, ಹವ್ಯಾಸವು ಭಾರತದಾದ್ಯಂತ ಭರದಿಂದ ಮುಂದುವರೆದಿದೆ. ಕನಿಷ್ಟ ಎರಡು ಮೂರು ಭಾಷೆಗಲನ್ನು ಬಲ್ಲದ ಭಾರತೀಯರ ಸಂಖ್ಯೆ ಕಡಿಮೆಯೇ. ವ್ಯಕ್ತಿಯು ಎಷ್ಟು ಭಾಷೆಗಳನ್ನು ಬಲ್ಲನೋ ಆತನ ವಿದ್ಯಾವ್ಯಾಪ್ತಿ, ಘನತೆ, ಹಾಗೂ ಜನಪ್ರಿಯತೆಗಳು ಅಷ್ಟು ಹೆಚ್ಚುತ್ತವೆ.
ಐರೋಪ್ಯ ದೇಶಗಳಲ್ಲಿ ಅನಾದಿಯಿಂದಲೂ ಭಾಷಾಧಾರಿತ ದ್ವೇಷವು ಜನಾಂಗದ್ವೇಷವಾಗಿ ತಿರುಗಿ ಅಪಾರ ಅಸಹಿಷ್ಣುತೆ ಹಾಗೂ ರಣಪಾತಕಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ಸ್ವಾತಂತ್ರ್ಯಾನಂತರದ ಭಾರತಕ್ಕೂ ಈ ರೋಗ ಸಂಕ್ರಮಿಸಿ, ಭಾಷಾಧಾರಿತ ಜನಾಂಗ ದ್ವೇಷ ತಲೆಯೆತ್ತಿ ವಿದ್ಯಾವಂತ ವರ್ಗಗಳೂ ಸೇರಿದಂತೆ ಹಲವರ ಹೃನ್ಮನಗಳನ್ನು ಹಾಳುಗೆಡವುತ್ತಿರುವುದು ದುಃಖದ ವಿಷಯ. ಮನುಷ್ಯ ಮಾಡುವ ಪಾಪದ ಹೊಣೆಯನ್ನು ಸರಸ್ವತೀ ಸ್ವರೂಪವಾದ ಭಾಷೆಗೆ ಕಟ್ಟಿ ಅದನ್ನು ನಿಷ್ಕಾರಣವಾಗಿ ದ್ವೇಷಿಸುವುದು ಒಂದು ಪಾತಕ, ಸರಸ್ವತಿಗೆ ಮಾಡುವ ಅಪಚಾರ. ಇದರಿಂದ ನಮ್ಮ ಭಾವನೆಯೂ ಸಂಕುಚಿತವೂ ಅಸ್ವಸ್ಥವೂ ಆಗುವುದಲ್ಲದೆ ದೇಶವೂ ದುರ್ಬಲವಾಗುತ್ತದೆ. ನುಡಿಯನ್ನೇ ದೇವಿ ಎಂದು ಆರಾಧಿಸುವ ನಾವೂ ಸರ್ವಥಾ ಈ ಅಸಹಿಷ್ಣುತೆ ಭೇದಬುದ್ಧಿಗಳ ಪಾಪಬುದ್ಧಿಯನ್ನು  ತ್ಯಜಿಸಬೇಕು. ಜೊತೆಗೆ ಕ್ರೌರ್ಯ, ಸ್ವಾರ್ಥ, ಚಾಡಿ, ಅಶ್ಲೀಲತೆ, ಅಸಡ್ಡೆ ಮುಂತಾದ ಕೊಳೆಯನ್ನು ಆಗಾಗ ತೊಳೆದು ನಮ್ಮ ಮಾತನ್ನು ಶುದ್ಧವಾಗಿ ಸುಸಂಸ್ಕೃತವಾಗಿರಿಸಿಕೊಳ್ಳಬೇಕು. ಏಕೆಂದರೆ ಮಾತೆಂಬ ಮಹಾಶಕ್ತಿಯ ಅಪಬಳಕೆಯಿಂದ ಅಶಾಂತಿ, ಕಲಹ, ಭೇದಭಾವಗಳು ಹೆಚ್ಚುತ್ತವೆ. ಆದರೆ ಅದೇ ಮಾತೆಂಬ ದಿವ್ಯಶಕ್ತಿಯನ್ನು ಅರಿತು ಗೌರವದಿಂದ ಬಳಸಿದಾಗ ಜೀವನ, ಭಾವನೆ, ಸಂಬಂಧಗಳು, ಸುಂದರವಾಗುತ್ತವೆ. ಗಂಭೀರವಾದ ಮನನ ಮಾಡಿದಾಗ ಮಾತಿನಲ್ಲಿನ ಅಂತರ್ಗತ ಮಂತ್ರತ್ವ ಶಕ್ತಿಯು ಸಾಕ್ಷಾತ್ಕೃತವಾಗಿ ಆಧ್ಯಾತ್ಮಿಕ ಸಿದ್ಧಿಯನ್ನು ತರುತ್ತದೆ.  
ಸರಸ್ವತಿಯ ಹಬ್ಬಗಳು
ಶರದೃತುವಿನ ನವರಾತ್ರದಲ್ಲಿ ಶುಂಭಾದಿ ಅಸುರಮರ್ದಿನಿಯಾದ ಮಹಾಸರಸ್ವತಿಯು ’ಅಪರಾಜಿತಾ’ ಎನ್ನುವ ನಾಮದಿಂದ ಪೂಜಿಸಲ್ಪಡುತ್ತಾಳೆ. ಶರನ್ನವರಾತ್ರದ ಷಷ್ಟೀ ತಿಥಿಯಂದು ಅಥವಾ ಮೂಲಾನಕ್ಷತ್ರದ ಯೋಗದಲ್ಲಿ ವಿದ್ಯಾಧಿದೇವಿಯಾದ ಸರಸ್ವತಿಯು ಪುಸ್ತಕ ಮತ್ತು ವಾದ್ಯ ಸಮೂಹದಲ್ಲಿ ಕುಳಿತು ನಮ್ಮ ಪೂಜೆಯನ್ನು ಸ್ವೀಕರಿಸುತ್ತಾಳೆ. ವಸಂತ-ಋತುವಿನ ನವರಾತ್ರದಲ್ಲಿ ಕಲಾಧಿದೇವಿ ಸರಸ್ವತಿಯನ್ನು ಆರಾಧಿಸುವ ಪದ್ಧತಿ ಪೂರ್ವೋತ್ತರ ಭಾರತದಲ್ಲಿ ಹೆಚ್ಚು. ವಸಂತ ಮಾಸವೆಲ್ಲ ಸರಸ್ವತಿಯ ವಿಲಾಸದ ಕಾಲ ಎನ್ನಬಹುದು. ವೇದಕಾಲದಿಂದಲೂ ವಸಂತವು ಉತ್ಸವದ ಕಾಲವಾಗಿ ಆಚರಿಸಲಾಗಿದೆ. ಎಲ್ಲೆಲ್ಲೂ ಸಾಹಿತ್ಯ, ಕಾವ್ಯ, ಸಂಗೀತ, ನೃತ್ಯ, ನಾಟಕ ಮುಂತಾದ ಬಣ್ಣಬಣ್ಣದ ಕಲಾಪಗಳು ನಡೆದಿದ್ದು ಎಲ್ಲ ಬಗೆಯ ಕುಶಲ ಹಾಗೂ ಲಲಿತ ಕಲೆಗಳು, ಪ್ರತಿಭೆ, ವಿದ್ಯೆ, ಸಾಹಸಗಳೂ, ಕ್ರೀಡೆಗಳೂ ನಡೆದು ಅಮಿತ ಸಂಭ್ರಮ ಸಡಗರಗಳ ಭಾವದಲ್ಲಿ ಜನತೆಯನ್ನು ಮುಳುಗೇಳಿಸುವ ಸಂತಸದ ಕಾಲ. ಈ ಸಂದರ್ಭದಲ್ಲೇ ಸರಸ್ವತೀ ಸಂತಾನವಾದ ಕಲಾವಿದರಿಗೆ, ಕವಿಗಳಿಗೆ, ಸಾಹಿತಿಗಳಿಗೆ ಹಾಗೂ ಯಾವುದೆ ವಿದ್ಯೆ ಸಾಹಸ ಪ್ರತಿಭೆಗಳನ್ನು ಮೆರೆಯುವ ಕುಶಲರಿಗೆ ವಿಶೀಷ ಸಮ್ಮಾನ, ಸಂಭಾವನೆ ಪ್ರಶಸ್ತಿಗಳನ್ನಿತ್ತು ಗೌರವಿಸಿ ತನ್ಮೂಲಕ ಸರಸ್ವತಿಗೆ ಗೌರವವನ್ನು ಸಲ್ಲಿಸಲಾಗುತ್ತದೆ. ಯಾವುದೇ ವಿದ್ಯೇ ಅಥವಾ ಕಲೆಗಳಲ್ಲಿ ಅಪ್ರತಿಮ ನೈಪುಣ್ಯವನ್ನು ಮೆರೆದವರನ್ನು ಆಯಾ ಕ್ಷೇತ್ರದ ’ಸರಸ್ವತೀ’ ಎನ್ನುವ ಬಿರುದಿನಿಂದ ಗೌರವಿಸುವುದೂ ಉಂಟು. ಉದಾಹರಣೆಗೆ- ’ಗಾನ ಸರಸ್ವತೀ’,’ ಕಾವ್ಯಸರಸ್ವತೀ’, ’ನೃತ್ಯಸರಸ್ವತೀ’, ಇತ್ಯಾದಿ.
ಹಾಗೆ ನೋಡಿದರೆ ಎಲ್ಲ ಹಬ್ಬ ಹರಿದಿನಗಳಲ್ಲೂ ಸರಸ್ವತೀ ಸ್ವರೂಪಗಳಾದ ಕಾವ್ಯ, ಗೀತ ನೃತ್ಯಗಳದ್ದೇ ಸಂಭ್ರಮ! ದೇವರ ಷೋಡಷೋಪಚಾರ ಪೂಜೆಯ ವೇಳೆಯಲ್ಲೂ ಸಂಗೀತ ಸೇವೆ, ನೃತ್ಯಸೇವೆ, ವಾದ್ಯ ಸೇವೆ, ವೇದಪಠಣ ಮುಂತಾದವುಗಳನ್ನು  ನಾವು ಕಲಿತ ವಿದ್ಯೆಗಳನ್ನು ದೇವರ ಮುಂದೆ ನಿದರ್ಶಿಸುತ್ತೇವೆ. ಹೀಗೆ ನಮ್ಮ ಜೀವನದಲ್ಲಿ ಆರಾಧನೆಯಲ್ಲಿ ಕಲಾಪಗಳಲ್ಲೆಲ್ಲ ಸರಸ್ವತಿಯ ಸೌರಭ ತುಂಬಿ ತುಳುಕುತ್ತಲೆ ಇರುತ್ತದೆ. ಅವಳು ಸರ್ವಸ್ವರೂಪಳು, ಸರ್ವತ್ರ ವಿಲಾಸಿಸುವವಳು. ಸದಾ ಪೂಜ್ಯಳು, ಧ್ಯೇಯಳು, ಸಾಧ್ಯಳು. 
ಸರಸ್ವತೀ ನದಿ
ಇನ್ನು, ರಸ ಎಂದರೆ ’ನೀರು’ ಎಂದೂ ಅರ್ಥವಿದೆ. ಹಾಗಾಗಿ ’ಸರಸ್’ ಎಂದರೆ ಸರೋವರ, ಸಾಗರ ಮುಂತಾದ ನೀರಿನ ಜಲಾಶಯಗಳು ಎಂದೂ ಅರ್ಥವುಂಟು. ಹಾಗಾಗಿ ಸರಸ್ವತೀ ಎಂದರೆ ನದೀ ಅಥವಾ ಸರೋವರಕ್ಕೆ ಸಂಬಂಧಿಸಿದವಳು. ಈ ಅರ್ಥದಲ್ಲಿ ಈಕೆ ಹಿಮಾಲಯದ ಸರೋವರಗಳಲ್ಲಿ ಉಗಮಿಸಿ ಉತ್ತರ-ಪಶ್ಚಿಮ ಭಾರತದ ಹೃದಯಭಾಗದಲ್ಲಿ ಧುಮ್ಮಿಕ್ಕಿ ಹರಿದು ಸಿಂಧುಸಾಗರವನ್ನು ಸೇರುತ್ತಿದ್ದ ಪ್ರಾಚೀನ ಮಹಾನದಿ ಸರಸ್ವತಿ. ಈ ನದಿಯ ಕುರಿತಾಗಿ ವೇದಗಳಲ್ಲಿ ’ಅಂಬಿತಮೇ ದೇವಿತಮೇ ನದೀತಮೇ ಸರಸ್ವತಿ” (ತಾಯಿಯರಲ್ಲಿ, ದೇವಿಯರಲ್ಲಿ, ನದಿಗಳಲ್ಲಿ ಸರ್ವೋತ್ತಮಳಾದವಳು ಸರಸ್ವತೀ) ಎನ್ನುವ ಉಕ್ತಿಯುಂಟು. ಅನೇಕ ಪುರಾಣಗಳಲ್ಲಿ ಹಾಗೂ ಮಹಾಭಾರತದಲ್ಲೂ ಸರಸ್ವತೀ ನದಿಯ ಹಲವಾರು ಉಲ್ಲೇಖಗಳಿವೆ.
ಇಂದು ಗಂಗಾನದಿಗೆ ಇರುವ ಅಗ್ರಸ್ಥಾನ ಅತಿಪ್ರಾಚೀನ ಯುಗದಲ್ಲಿ ಸರಸ್ವತೀ ನದಿಗಿತ್ತು. ಆ ಕಾಲದಲ್ಲಿ ಗಂಗೆಯು ಚಿಕ್ಕದಾಗಿದ್ದು, ಸರಸ್ವತಿಯೇ ಗಾತ್ರದಲ್ಲೂ ಖ್ಯಾತಿಯಲ್ಲೂ ದೊಡ್ಡದಾದ ನದಿ. ಆದರೆ ಕಾಲಾಂತರದಲ್ಲಿ ಉಂಟಾದ ಪ್ರಚಂಡ ನೈಸರ್ಗಿಕ ಬದಲಾವಣೆಗಳಿಗೆ ತುತ್ತಾಗಿ ಸರಸ್ವತಿಯ ಮಹಾಸ್ರೋತ ತುಂಡು ತುಂಡಾಗಿ ಉಪನದಿಗಳಲ್ಲಿ ಹರಿದು ಗಂಗೆ ಯಮುನಾ ಹಾಗೂ ಇತರ ನದಿಗಳಲ್ಲಿ ಬೆರೆತು ಹೋಯಿತು, ಹಾಗಾಗಿ ಅದು ಏಕಮೇವ ಮಹಾನದಿಯಾಗಿ ಸಿಂಧುಸಾಗರದವರೆಗೂ ಹರಿಯಲಾಗದೆ ಅಲ್ಲಲ್ಲೇ ಕವಲೊಡೆದು, ಅಥವಾ ಬತ್ತಿ ಅಥವಾ ಹಿಂಗಿ ತನ್ನ ಉಪನದಿಗಳ ರೂಪದಲ್ಲಿ ಮಾತ್ರವೆ ಉಳಿದುಕೊಂಡಿದೆ ಎಂದು ವೈಜ್ಞಾನಿಕ ಸಂಶೋಧನೆಗಳು ಸ್ಪಷ್ಟ ಪಡಿಸಿವೆ. ಸರಸ್ವತೀ ನದಿಯು ಹಾದು ಹೋಗುತ್ತಿದ್ದ ಪಥದ ಅಧಿಕೃತ ಚಿತ್ರ ಸ್ಯಾಟಿಲೈಟ್ ಮೂಲಕ ತೆಗೆಯಲಾಗಿದ್ದು ಇಂದು ಅಂತರ್ಜಾಲದಲ್ಲೂ ಲಭ್ಯವಿದೆ.  
ಇಂದಿಗೂ ಸರಸ್ವತೀ ನದಿಯ ಮಾರ್ಗದ ಇಕ್ಕೆಲಗಳಲ್ಲಿ ಸೋಂಪಾಗಿ ಬೆಳೆದ ವನ್ಯ ಸಂಪತ್ತನ್ನೂ, ಸ್ವಲ್ಪ ಅಗೆದರೂ ವಿಪುಲವಾಗಿ ಸೂಸುವ ಭೂಗತ ನದೀ ನೀರನ್ನೂ ಕಂಡರೆ ಈ ಸತ್ಯಕ್ಕೆ ಇನ್ನಷ್ಟು ಪುಷ್ಟಿ ಸಿಗುತ್ತದೆ. ಸರಸ್ವತೀ ತೀರದಲ್ಲಿ ಅನ್ವೇಷಣೆಯಾಗಿರುವ ಸುಮಾರು ೨೦೦೦ ರಕ್ಕೂ ಹೆಚ್ಚು ಪ್ರಾಚೀನ ಗ್ರಾಮ ನಗರಗಳ ಅವಶೇಷಗಳೂ ಈಗಾಗಲೇ ದಾಖಲಾಗಿವೆ. ಇದೆಲ್ಲ ವ್ಯಾಪಕವಾಗಿ ಸಾರ್ವಜನಿಕ ಗಮನಕ್ಕೆ ಇನ್ನಷ್ಟು ಬರುವಂತೆ ಮಾಡುವ ಹೊಣೆಗಾರಿಕೆಯನ್ನು ಮಾತ್ರ ಸರ್ಕಾರ ಮರೆತಿದೆ. ಗಂಗಾ ಯಮುನಾ ಸಂಗಮದಲ್ಲಿ ಸರಸ್ವತಿಯೂ ಅಂತರ್ವಾಹಿನಿಯಾಗಿದ್ದಾಳೆ ಎಂದು ನಂಬಿ ಅದನ್ನು ’ತ್ರಿವೇಣೀ ಸಂಗಮ’ ಎಂದೇ ಇಂದಿಗೂ ಹೆಸರಿಸುವ ರೂಢಿಗೆ ಇದೇ ಕಾರಣ ಎಂದು ಊಹಿಸಬಹುದು. ಗುಜರಾತಿನಲ್ಲಿ ಇಂದಿಗೂ ಅಲ್ಲಿನ ಶತದ್ರೂ, ಗಾಗ್ಗರ್ ಮುಂತಾದ ಸರಸ್ವತಿಯ ಉಪನದಿಗಳನ್ನು ಸರಸ್ವತೀಯೆಂದೇ ಕರೆದು ಪೂಜಿಸುವ ಪದ್ಧತಿಯುಂಟು.
ಸಿಂಧು-ಸರಸ್ವತೀ ನಾಗರೀಕತೆಯ ಬಗ್ಗೆ ಈಗಾಗಾಲೇ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಅಪಾರ ಮಾಹಿತಿ ಸಂಗ್ರಹವಾಗಿದೆ. ವೇದಸಂಸ್ಕೃತಿಯು ಅರಳಿದ್ದು ಬೆಳೆದಿದ್ದು ಸರಸ್ವತೀ ನದಿಯ ತೀರದಲ್ಲೇ. ಸರಸ್ವತೀ ನದಿಯು ಬತ್ತಲಾರಂಭಿಸಿದಾಗ ಜನರು ವಿವಿಧ ದಿಕ್ಕುಗಳಿಗೆ ವಲಸೆ ಹೋದರು. ಅಂತಹ ಬಹಳ ಮಂದಿ ’ಸಾರಸ್ವತರು’ ಎಂದು ಗುರುತಿಸಿಕೊಳ್ಳುವ ಪದ್ಧತಿ ಹಿಂದೆಯೂ ಇದೆ, ಈಗಲೂ ಸ್ವಲ್ಪಮಟ್ಟಿಗೆ ಉಂಟು. ಅಗಸ್ತ್ಯರು, ಗೌಡಸಾರಸ್ವತರು ಮುಂತಾದ ಋಷಿಗಳು ದಕ್ಷಿಣಭಾರತಕ್ಕೆ ವಲಸೆ ಬಂದ ಪೌರಾಣಿಕ ಕಥೆಗಳೂ ಇದಕ್ಕೆ ಪೂರಕವಾಗಿವೆ. 
ಇದಲ್ಲದೆ ನಾವು ಇಂದು ಪೂಜಿಸುವ ಪ್ರಸಿದ್ಧ ಸರಸ್ವತೀ ದೇವಿಯ ರೂಪದಲ್ಲಿನ ಸ್ವಾರಸ್ಯಗಳಲ್ಲೂ ಸರಸ್ವತೀ ನದಿಯ ಸಂಕೇತಗಳನ್ನೂ ಹೊಂದಿವೆ ಎನ್ನುತ್ತಾರೆ ಪ್ರೊಫೆಸರ್ ಕಲ್ಯಾಣರಾಮನ್ ಮುಂತಾದ ಕೆಲವು ಸಂಶೋಧಕರು- ಸರಸ್ವತಿಯು ಹಿಮಾಲಯದ ಸರೋವರದಲ್ಲಿ ಉಗಮಿಸಿ, ಪಶ್ಚಿಮೋತ್ತರ ಭಾರತದ ಮೂಲಕ ಹಾದು ಸಿಂಧುಸಾಗರವನ್ನು ಸೇರುತ್ತಿದ್ದ ನದಿ ಎನ್ನುವುದನ್ನು ಈಗಾಗಲೇ ನೋಡಿದ್ದೇವೆ. ಹಿಮಾಲಯದ ಎತ್ತರದ ಸರೋವರಗಳಲ್ಲಿ ಮಾತ್ರವೇ ಕಾಣಬರುವ ಹಂಸಪಕ್ಷಿಯು ಸರಸ್ವತೀ ಚಿತ್ರದಲ್ಲಿ ತಪ್ಪದೆ ಕಾಣುವುದನ್ನು ನೋಡಿದರೆ, ’ಹಂಸವೂ ಹಿಮಾವೃತ ಸರಸ್ಸಿನ ಸಂಕೇತವೆಂದೆನಿಸದಿರದು. ಅವಳಿಗೆ ’ಹಂಸವಾಹಿನಿ’ ಎಂದೇ ಬಿರುದು ಕೂಡ. ಹಂಸವು ಶುದ್ಧ ಜೀವಾತ್ಮದ ಸಂಕೇತವೂ ಹೌದು, ಅಂತೆಯೇ ಹಿಮಾಲಯದ ಸರೋವರಗಳನ್ನು ನೆನಪಿಸುವಂತಹದ್ದೂ ಹೌದು. ಅಂತೆಯೇ ಸರಸ್ವತೀ ನದಿಯ ಪಥದಲ್ಲಿನ ಪಶ್ಚಿಮೋತ್ತರ ಭಾರತದ ಭಾಗಗಳಲ್ಲಿ ನವಿಲುಗಳು ಹೇರಳವಾಗಿ ಕಾಣಬರುತ್ತವೆ. ಸರಸ್ವತೀ ಚಿತ್ರದಲ್ಲಿ ಕಾಣಬರುವ ನವಿಲು ಇದರ ಸಂಕೇತವಿರಬಹುದು ಎನ್ನುತ್ತಾರೆ ವಿದ್ವಾಂಸರು. ಅದಲ್ಲದೆ ದೇವೀ ಸರಸ್ವತಿಯ ಶ್ವೇತಮಯ ವಸನ, ಆಭೂಷಣಗಳೂ ಅವಳು ಧವಳ ಹಿಮಾಲಯದ ಹಿಮವು ಕರಗಿ ಹರಿದು ಬಂದ ನದೀಧಾರೆ ಎನ್ನುವುದರ ಸಂಕೇತದಂತೆ ಕಾಣುತ್ತದೆ.
ಒಟ್ಟಿನಲ್ಲಿ ಪ್ರಾಚೀನ ಭಾರತೀಯರ ಪರಮ ಪೂಜೆಗೆ ಪಾತ್ರಳಾಗಿದ್ದ ಸರಸ್ವತಿಯು ಕೇವಲ ಒಂದು ನದಿ ಮಾತ್ರವೇ ಆಗಿರದೆ, ಆರ್ಷ ಸಂಸ್ಕೃತಿಯನ್ನು ತನ್ನ ಮಡಿಲಲ್ಲಿಟ್ಟು ಪೋಷಿಸಿದ ಅಮೃತಮಯವಾದ ಜೀವನದಿ. ಹಾಗಾಗಿಯೇ ಪುರಾಣೋಕ್ತ ಸರಸ್ವತೀ ದೇವಿಯನ್ನು, ಸರಸ್ವತೀ ನದಿಯನ್ನೂ ಒಂದೇ ಎಂದು ಭಾವಿಸಿ ಪೂಜಿಸಲಾಗುತ್ತದೆ.
ಸರಸ್ವತೀ ಶಾಶ್ವತವಾದ ನಿಧಿ
ಸರಸ್ವತಿ ಒಲಿದರೆ, ಶಾಶ್ವತವಾಗಿ ನಮ್ಮಲ್ಲಿ ಉಳಿಯುತಾಳೆ. ನಾನು ಬಾಲಕಿಯಾಗಿದ್ದಾಗ ಹಿರಿಯರೊಬ್ಬರು ನನಗೆ ಹೇಳಿದ್ದು ನೆನಪಾಗುತ್ತದೆ. ಅವರು ಹೇಳಿದರು- “ಏನಮ್ಮ, ರವಿವರ್ಮನ ಚಿತ್ರಗಳನ್ನು ನೋಡಿದ್ದೀಯಾ? ಆ ಚಿತ್ರದಲ್ಲಿ ಲಕ್ಷ್ಮಿಯು ನದಿಯ ಮಧ್ಯದಲ್ಲಿ ಕಮಲದ ಮೇಲೆ ನಿಂತಿದ್ದಾಳೆ. ಆದರೆ ಸರಸ್ವತೀ ಚಿತ್ರದಲ್ಲಿ ಅವಳು ಗಟ್ಟಿ ಬಂಡೆಯ ಮೇಲೆ ಕುಳಿತಿದ್ದಾಳೆ. ಇದರ ಅರ್ಥ ಏನು ಗೊತ್ತ? ಲಕ್ಷ್ಮೀ ಚಂಚಲೆ, ಆ ಕಡೆ ದಡಕ್ಕಾದರು ಹೋದಾಳು, ಈ ಕಡೇ ದಡಕ್ಕಾದರೂ ಬಂದಾಳು, ಅಥವಾ ಯಾರಿಗೂ ಸಿಗದೆ ಮುಳುಗಿಯೂ ಹೋದಾಳು! ಏನೂ ಹೇಳಲಾಗದು. ಆದ್ದರಿಂದಲೇ ಅವಳನ್ನು ನದಿಯ ನೀರಿನ ಮಧ್ಯದಲ್ಲಿ, ಮುಟ್ಟಿದರೆ ಕುಸಿಯುವಂತಹ ಕಮಲದ ಮೇಲೆ ನಿಲ್ಲಿಸಿರುವುದು! ಆದರೆ ಸರಸ್ವತಿಯು ಗಟ್ಟಿ ಬಂಡೆ ಮೇಲೆ ಕುಳಿತಿದ್ದಾಳೆ. ಏಕೆಂದರೆ ಆಕೆ ಶಾಶ್ವತ, ಒಮ್ಮೆ ಒಲಿದರೆ ಸಾಕು ನಮ್ಮ ವ್ಯಕ್ತಿತ್ವದಲ್ಲಿ ಆಕೆಯ ವರ್ಚಸ್ಸು ಕಲ್ಲಿನಂತೆ ಶಾಶ್ವತವಾಗಿ ನೆಟ್ಟುಕೊಳ್ಳುತ್ತದೆ. ಆದ್ದರಿಂದ ವಿದ್ಯೆಯನ್ನು ಪಡೆಯುವತ್ತ ಹೆಚ್ಚು ಗಮನ ಹರಿಸಬೇಕೇ ಹೊರತು ಚಂಚಲವಾದ ಹಣವನ್ನಲ್ಲ”. ಈ ಕಲ್ಪನೆ ಸೊಗಸಾಗಿದೆ, ಇಲ್ಲಿನ ಸಂದೇಶವಂತೂ ಬಹಳ ಮನೋಜ್ಞವಾಗಿದೆ.
ಕನ್ನಡ ನಾಡಿನ ಪ್ರಸಿದ್ಧ ಸರಸ್ವತೀ ದೇಗುಲಗಳು
ನಮ್ಮ ಕನ್ನಡನಾಡಿನ ಹೆಮ್ಮೆ ಎನಿಸಿರುವ ಸಹ್ಯಾದ್ರಿಯ ಮಡಿಲಲ್ಲಿನ ಶೃಂಗೇರಿಯಲ್ಲಿ ಜಗತ್ಪ್ರಸಿದ್ಧ ಶಾರದಾಲಯವಿದೆ. ಇಲ್ಲಿ ಸರಸ್ವತಿಯು ಶಾರದಾ, ಭಾರತೀ ಎಂಬ ನಾಮಧೇಯಗಳಿಂದ ಆರಾಧಿಸಲ್ಪಡುತ್ತಾಳೆ. ಇದೊಂದು ಜ್ಞಾನಪೀಠವೂ ಹೌದು. ಇಲ್ಲಿನ ಅಪೂರ್ವ ಗ್ರಂಥ ಭಂಡಾರ, ವಿದ್ವತ್ ಪರಂಪರೆ, ದಿವ್ಯಮಂಗಲ ಪರಿಸರ ಇಂದಿಗೂ ಸರ್ವರ ಭಕ್ತ್ಯಭಿಮಾನಗಳಿಗೆ ಪಾತ್ರವಾಗಿವೆ. ವಿದ್ಯಾರಣ್ಯರಂತಹ ವಿಭೂತಿಪುರುಷರನ್ನು ಜಗತ್ತಿಗೆ ಪ್ರಸಾದಿಸಿದ ಭವ್ಯ ಕೀರ್ತಿ ಈ ದೇಗುಲಕ್ಕಿದೆ.  ಅಂತೆಯೇ ಶೃಂಗೇರಿಯ ಬಳಿಯ ಹರಿಹರಪುರದಲ್ಲಿ ತುಂಗಾತೀರದಲ್ಲಿ ಶಾರದೆಯ ಸುಂದರ ದೇಗುಲವಿದೆ. ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನಿ--- ಎಂಬ ಸ್ತುತಿಗೆ ಪಾತ್ರಳಾದ ಶಾರದೆಯ ಅತಿ ಪ್ರಾಚೀನ ಭವ್ಯ ದೇಗುಲ ಕಾಶ್ಮೀರದಲ್ಲಿತ್ತು. ಇದು ವಿಶ್ವಮಾನ್ಯ ಶಾರದಾಪೀಠವಾಗಿದ್ದು, ಉದ್ಧಾಮ ಪಂಡಿತರ ವೇದಿಕೆಯಾಗಿತ್ತು. ಅಲ್ಲಿ ಭೇಶ್ ಎನ್ನಿಸಿಕೊಂಡ ಪಂಡಿತನು ಜಗ್ನ್ಮಾನ್ಯನಾಗುತ್ತಿದ್ದ. ಆದರೆ ದೌರ್ಭಾಗ್ಯದ ವಿಷಯವೆಂದರೆ ಆಕ್ರಮಣಕಾರರ ಕ್ರೌರ್ಯಕ್ಕೆ ಸಿಲುಕಿ ಈ ಭವ್ಯ ದೇಗುಲ ಇಂದು ಪಾಕಿಸ್ಥಾನದಲ್ಲಿ ಅವಶೇಷಮಾತ್ರವಾಗಿ ಉಳಿದಿದೆ. ಇಲ್ಲಿ ದೇವಿಗೆ ಜಲಮುಖದಲ್ಲೇ ಆಹುತಿ ನೀಡಲಾಗುತ್ತಿತ್ತು ಎನ್ನುವುದು ಅಲ್ಲಿನ ಜಲಕುಂಡದಿಂದ ತಿಳಿಯುತ್ತದೆ. ಇದು ಅತಿ ಭವ್ಯವೂ ಶ್ರೀಮಂತವೂ ಪ್ರಖ್ಯಾತವೂ ಆದ ದೇಘುಲ ಎನ್ನುವುದನ್ನು ಆ ಅವಶೇಷಗಳ ಭವ್ಯ ಕಂಬಗಳು, ಸಾಲು ಸಾಲು ಮೆಟ್ಟಿಲುಗಳು, ಕೆತ್ತನೆಯ ಚೂರುಗಳು ಸಾರುತ್ತವೆ. ತುರುವೇಕೆರೆಯ ಬಳಿಯ ಅಮೃತೇಶ್ವರ ದೇಗುಲದಲ್ಲಿ ಭವ್ಯ ಸುಂದರ ಶಾರದಾ ಸನ್ನಿಧಿ ಇದೆ. ಇದನ್ನೂ ಆಕ್ರಮಣಕಾರರು ಒಂದಷ್ಟು ಹಾಳುಗೆಡವದೇ ಬಿಟ್ಟಿಲ್ಲ. ಶಿವಮೊಗ್ಗೆಯ ಬಳಿಯ ತುಂಗಾ ಭದ್ರಾ ಸಂಗಮವಾದ ಕೂಡಲಿಯಲ್ಲಿ ನಿಂತಿರುವ ಶಾರದೆಯ ಸುಂದರ ಪ್ರಶಾಂತ ದೇಗುಲವಿದೆ.
 ಶಾರದೆ ಸರಸ್ವತಿಯ ದೇಗುಲಗಳು ಭಾರತದಾದ್ಯಂತ ಹೇರಳವಾಗಿವೆ. ಅವುಗಳಲ್ಲಿ ಕರ್ನಾಟಕದಲ್ಲೂ ಹಲವು ಇವೆ. ಇಲ್ಲಿ ಲೆಲವನ್ನು ಮಾತ್ರ ಹೆಸರಿಸಲಾಗಿದೆ.
ಇದೀಗ ನವರಾತ್ರದ ಸುಸಂದರ್ಭ ಜಗನ್ಮಾತೆಯ ವೈವಿಧ್ಯಮಯ ರೂಪಗಳಲ್ಲಿ ಸುಂದರವೂ ಮನೋಜ್ಞವೂ ಆದದ್ದು ಅವಳ ಸರಸ್ವತೀ ಸ್ವರೂಪ. ಆ ಮಹಾಸರಸ್ವತಿಯು ನಮ್ಮ ಬುದ್ಧಿಯನ್ನು ಬೆಳಗಲಿ, ಮನಸ್ಸನು ಅರಳಿಸಲಿ, ಮಾತನ್ನು ಸಂಸ್ಕರಿಸಲಿ, ನಡೆನುಡಿಯಲ್ಲಿ ಘನತೆ ಗಾಂಭೀರ್ಯ ಸೌಂದರ್ಯಗಳನ್ನು ತುಂಬಿ ನಮ್ಮ ಬದುಕನ್ನು ಹಸನುಗೊಳಿಸಲಿ. ದುರ್ಜನರಿಗೆ ಸನ್ಮತಿಯನ್ನು ಪಾಲಿಸಲಿ, ಸುಜನರಿಗೆ ಚಾತುರ್ಯವನ್ನು ಕರುಣಿಸಿ ಸಮಾಜವನ್ನೂ, ದೇಶವನ್ನೂ, ಸಂಸ್ಕೃತಿಯನ್ನೂ ಸುಭದ್ರಗೊಳಿಸಲಿ ಎಂದು ಪ್ರಾರ್ಥಿಸೋಣ.

ಡಾ ಆರತೀ ವಿ ಬಿ
Publsihed in Mallara Magazine 2013
On the occasion of Hanuma Jayanti

A verse in praise of Hanuman says-
Buddhir balam yasho dhairyam nirbhayatvam arogataa |
ajaadyam vaakpatutvam ca hanumadsmaranaadbhavet  ||
By meditating on Hanuman one gains intelligence, strength, success, courage, fearlessness, good health, smartness and oratory skills.
This verse implies that Hanuman is a treasure of all these virtues. Apart form being a beloved god head of Hindus, Hanuman is an ideal for all the best virtues too. He is indeed a role model for the ‘Complete man’. The personality of Hanuman in Valmiki’s Ramayanam is dignified and indeed as grand as that of Sri Rama! He is a born prince who sacrificed his throne to serve the noble Sugreeva.
Valmiki Ramayanam’s Kishkindha-kanda gives a beautiful introduction to Hanuman’s glorious personality. When Rama and Lakshmana see him for the first time and hears his words, they are wonderstruck by his poise and oratory skills. Rama utters words of appreciation in recognition of Hanuman’s worth. In Rama’s own words we infer that Hanuman was a great scholar of the Vedas, grammar, prosody, poetics, statesmanship, fine arts and many other arts and sciences. He was the best political ambassador and diplomat ever. His oratory skills were cultured by truth, diligence, natural talent, repeated study of scriptures and experience such that even an enemy would stand impressed when he spoke!
There are many fascinating noble aspects in Hanuman’s personality. His humility, devotion to Rama, purity, generosity and benevolent nature won hearts all the way. He was ever ready to help anyone in crisis even if it meant the deadliest of risks for him. He dared to venture out to search for Seeta in the dangerous Ravana’s kingdom for the sake of Rama. He also brought the great Sanjeevani hill from Himalayas to Lanka to revive the dying Lakshmana. It was he who saved Sugreeva from the wrath of the terrible Vali till the end for whoich he even renounced his royal powers.
Hanuman was an achiever through out and yet humble and unassuming. His extraordinary cleverness, diligence, foresightedness and tact in all actions ensured him success all the way. The style in which he fulfilled his mission in searching Seeta explains it all. In a stranger’s land, amongst enemies, he scanned for Seeta unnoticed by anyone, won the confidence of Seeta who had never seen him before and consoled and assured her of safe release. The manner in which he fetched justice to his beloved friend Sugreeva through Rama, the strategy through which he materialized the reunion of Seeta and Rama and the might with which he vanquished a great part of Ravana’s army and many more instances speak loads about the great achievements of Hanuman.
Here is a small example for his cleverness as seen in the Sundarakandam. The gods and sages wanted to see how Hanuman would manage a sudden crisis in his path while he leapt across the ocean to Lanka. They ordered Surasa, the mother of Gods to assume the form of a demoness and test his strength and manliness. They wanted to see whether he would escape strategically or accept defeat and grieve. Surasa assumed the form of a deadly monster and obstructed the path of Hanuman and told him- “You have been sent as my food by the Gods. So enter my mouth so that I can eat you”. But although surprised, Hanuman was least perturbed by this sudden attack of the giant. With a pleasant face he answered- “Ravana of lanka, by crooked means abducted Seeta, the wife of Rama, while they were camping in the forest of Dandakaranya. As an emissary of Rama I am going there to search for her. I request you to help me in finding her as you are familiar with this land. If you so insist, I shall ofcourse enter your mouth, but only after finding Seeta and reporting the same to Rama. I promise I shall not go back on my words” But Surasa refused saying he could not escape entering her mouth whatever be the case. Hanuman faced her challenge and said- “Ok then, open your mouth big enough to gobble me, if you can”. So saying he grew as big as Surasa herself. Surasa accepted the challenge and opened her mouth double the size of Hanuman. But the clever Hanuman grew still bigger. Surasa in turn widened her mouth to a size bigger than the gigantic Hanuman. Hanuman grew bigger than that and again challenged her. This went on and on till Surasa’s monstrous mouth with a long tongue, was wide open as of it were the entrance to hell. Now the witty Hanuman suddenly shrunk himself to the size of a thumb and swiftly charged into her mouth and flew out as quickly. Before Surasa could realize what happened Hanuman had fulfilled his promise of ‘entering her mouth’ and escaped unharmed! The amused Surasa revealed her true form and blessed him. The celestials and sages who witnessed all this were wonderstruck by his courage, wit and determination and showered praises on him.
Lanka was one of the finest cities in all the worlds and Ravana rejoiced in all glory there. Ravana was proud of his riches, power and kingdom. Hanuman, as a true diplomat studied the enemies power and weaknesses. After finding Seeta and assuring her of freedom soon, he did not simply return to Rama. He rather wanted to teach a lesson to Ravana. He created havoc all over the city by uprooting the beautiful gardens and monuments. With ease, he vanquished all the demon warriors who tried to capture him. Intending to damage the pride of Ravana and also show him a taste of the strength of Rama’s battalion, he burnt half the city of Lanka. Ravana was indeed shocked that all his mighty forces could not control a mere monkey. His pride and confidence was badly damaged by Hanuman who thus had already won half the battle!
This is just a glimpse into the great achievements of the Heroic Hanuman. In every sense he is verily the Ramayana-maha-mala-ratnam (precious gem in the garland of Ramayanam). It is physical, mental and spiritual strength that is very necessary for human beings. So let us contemplate on this aspect of Hanuman and acquire the same by his grace.
The very contemplation of the divine Hanuman inspires strength, courage purity and a sense of fulfillment in us. Let us salute the great Hanuman again and again.


|| Om Ham Hanumate namah  ||
                                                    ಮೈಸೂರು ಸೀಮೆಯ ಧಾರ್ಮಿಕ ಪರಂಪರೆ
ಲೇಖಕರು-  ಡಾ ಆರತೀ ವಿ ಬಿ 
Publsihed for souvenir Karnataka sampradayagaLu
ಉಪೋದ್ಘಾತ
ವೇದ ಸಂಸ್ಕೃತಿಯು ಜಾನಪದದ ಸೊಗಡನ್ನು ಮರೆಮಾಚದೆ ತಾನೂ ಉಳಿದು ಬೇರೆಯದನ್ನೂ ಬೆಳೆಸುತ್ತ ಬಂದಿರುವ ಕಾರಣ, ಸನಾತನ ಧರ್ಮ-ಸಂಸ್ಕೃತಿಗಳಲ್ಲಿ ಮೂಲಭೂತ ತತ್ವ, ಸಿದ್ಧಂತ ಹಾಗೂ ಔಪಾಸನಾತ್ಮಕ ಸ್ಫೂರ್ತಿಗಳು ಒಂದೇ ಆದರೂ ಅದರ ಅಭಿವ್ಯಕ್ತಿಯಲ್ಲಿ ಸ್ವಾರಸ್ಯಕರ ವೈವಿಧ್ಯಗಳನ್ನು ಕಾಣಬಹುದು. ವೈವಿಧ್ಯಗಳ ನಡುವೆ ಒಂದು ಭಾವೈಕ್ಯ ಹಾಗೂ ತತ್ತ್ವಸಾಮ್ಯವನ್ನೂ ಗುರುತಿಸಬಹುದು.  ಕನ್ನಡನಾಡಿನ ಧಾರ್ಮಿಕ ಸಂಸ್ಕೃತಿಯಲ್ಲಿ ವೇದ, ಆಗಮ, ತಂತ್ರ, ಜಾನಪದ ಹಾಗೂ ಕುಲಾಚಾರಗಳ ಸುಂದರ ಮಿಶ್ರಣವನ್ನು ಕಾಣಬಹುದು. ವೇದಕಾಲದಿಂದಲೂ ಪ್ರಚಲಿತವಿರುವ ಕೆಲವು ಆಚಾರ ವಿಚಾರಗಳ ಜೊತೆಗೆ ಪುರಾಣದ ಕಥೆಗಳು, ಜಾನಪದ ಪ್ರತೀತಿಗಳು, ಪ್ರಾಂತಿಯ ನಂಬಿಕೆ ಹಾಗೂ ಆಯಾ ಆಗಮ ಪ್ರಕಾರಗಳ ಮತ್ತು ಕುಲಧರ್ಮಗಳ ಸಂಪ್ರದಾಯಗಳನ್ನು ಒಳಗೊಂಡು ಬೆಳೆದ ಮೈಸೂರು ಸೀಮೆಯ ಧಾರ್ಮಿಕ ಸಂಕೃತಿ ಸುಂದರವೂ ಸ್ವತಂತ್ರವೂ ಬಹುಮುಖವೂ ಆಗಿ ಬೆಳೆದು ಬಂದಿದೆ. ಕನ್ನಡ ನೆಲದ ಸುಮಾರು ಪ್ರತಿ ೩೦-೫೦ ಕಿ ಮಿ ಗಳ ಅಂತರದಲ್ಲಿ ಭಾಷೆಯ ಶೈಲಿ, ಆಹಾರ, ವೇಷ, ಧಾರ್ಮಿಕ ಪದ್ಧತಿಗಳು, ಲಲಿತಕಲೆಗಳ ಶೈಲಿ ಮುಂತಾದವು ಸ್ವಲ್ಪ ಸ್ವಲ್ಪ ಬದಲಾಗುತ್ತ ಹೋಗುತ್ತವೆ. ಇದಲ್ಲದೆ ಆಯಾ ವೃತ್ತಿ, ಕುಲ. ಕಸಬು, ವರ್ಣ, ಆಶ್ರಮಧರ್ಮಗಳನ್ನು ಅನುಸರಿಸಿ ಆಗುವ ವ್ಯತ್ಯಾಸ ವೈವಿಧ್ಯಗಳೂ ಸೇರಿವೆ..
ಬೇರೆ ಬೇರೆ ಕಾಲಗಳಲ್ಲಿ ಆಳಿದ ರಾಜಮನೆತನಗಳ ಕುಲಧರ್ಮ, ಅಭಿರುಚಿಗಳೂ, ಸಂತ-ಪರಂಪರೆಯ ಪ್ರಭಾವವೂ ಮತ್ತು ಪೀಳಿಗೆಯಿಂದ ಪೀಳಿಗೆಗೆ ಆಚಾರಗಳು ಹಸ್ತಾಂತರವಾಗುವಾಗ ಆಗುವ ಸಹಜ ವ್ಯತ್ಯಾಸಗಳೂ ಸೇರಿ ನಮ್ಮ ಧಾರ್ಮಿಕ-ಸಂಸ್ಕೃತಿಯನ್ನು ಕಾಲಕಾಲಕ್ಕೂ ಮೆರುಗುಗೊಟ್ಟು, ಅಷ್ಟಿಷ್ಟು ಬದಲಿಸಿ, ಪರಿಷ್ಕರಿಸಿ, ವಿನ್ಯಾಸಗೊಳಿಸಿ, ಹೊಸ ಹೊಸ ಆಯಾಮಗಳನ್ನು ನೀಡುತ್ತ ಬಂದಿವೆ. ಈ ಪ್ರಕ್ರಿಯೆಯಲ್ಲಿ ಹಲವು ಮೂಲ ಆಚಾರಗಳು, ವಿಚಾರಗಳು ಬದಲಾಗಿ ಆಯಾ ಕಾಲದ ಪ್ರಭಾವೀ ಅಲೆಗಳಿಗೆ ಸಿಕ್ಕಿ ಅಳಿದದ್ದೋ ಪರಿಷ್ಕಾರವಾದದ್ದೋ ಉಂಟು. ಕೆಲವು ಮೂಢನಂಬಿಕೆಗಳು ತೊಳಗಿ ತಿಳಿಯಾದರೆ, ಇನ್ನು ಹಲವು ಕಂದಾಚಾರಗಳು ಸೇರಿಕೊಂಡದ್ದೂ ಉಂಟು. ಕಾಲಗರ್ಭದ ಕತ್ತಲಲ್ಲಿ ಅಡಗಿಹೋದ ಆ ಎಲ್ಲ ಮೂಲ ಮಾಹಿತಿಯನ್ನು ಯಥಾವತ್ತಾಗಿ ಪಡೆದು ವಿಮರ್ಶಿಸಿ ಹೇಳುವುದು ಅಸಾಧ್ಯ. ಆದರೂ ಇಷ್ಟೆಲ್ಲದರ ನಡುವೆಯೂ ತನ್ನತನದ ಅಂಶವನ್ನು ಹೊಂದಿಯೇ ಇದ್ದು ಜನಮಾನಸಕ್ಕೆ ಸಾತ್ವಿಕ ಆನಂದ, ಉತ್ಸಾಹ, ಜ್ಞಾನ, ಕಲಾಸ್ವಾದ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯನ್ನು ಒದಗಿಸುತ್ತ ಬಂದಿರುವ ಈ ಧಾರ್ಮಿಕ ಸಂಸ್ಕೃತಿಯು ನಮ್ಮ ಜನಜೀವನದ ಬೆನ್ನೆಲುಬೆಂದರೆ ಅತಿಶಯವೇನಲ್ಲ. ಕನ್ನಡ ನಾಡನ್ನು ಆಳಿದವರಲ್ಲಿ ಶಾಕ್ತ, ಶೈವ, ಜೈನ, ವೈಷ್ಣವ ರಾಜರುಗಳೂ, ಆಚಾರ್ಯಗಳು ಆಗಿಹೋಗಿದ್ದಾರೆ. ಅವರೆಲ್ಲ ಪ್ರಭಾವಗಳು ಆಯಾ ಕಾಲದ ಸಂಪ್ರದಾಯಗಳನ್ನು ಪೋಷಿಸಿವೆ. ಸ್ಥಳಾವಕಾಶದ ಕೊರತೆಯಿಂದಾಗಿ ಹಿಂದೂ ಮತದ ಕೆಲವು ಮುಖ್ಯವಾದ ಆಚಾರಗಳನ್ನಷ್ಟೇ ಇಲ್ಲಿ ಚರ್ಚಿಸಲಾಗುತ್ತಿದೆ.   
ಕೆಲವು ಪ್ರಸಿದ್ಧ ಹಬ್ಬಗಳು
ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳೆ ಹಬ್ಬಗಳು. ದೈನಂದಿನ ಜೀವನದಲ್ಲೂ ಈ ಸಮ್ಸ್ಕೃತಿ ಹಾಸುಹೊಕ್ಕಾಗಿದೆಯಾದರೂ ಹಬ್ಬಗಳಂದು ಧರ್ಮ-ಸಂಸ್ಕೃತಿಗಳ ಎಲ್ಲ ಸುಂದರಾಂಶಗಳು ಗರಿಗದರಿನಿಂತು ಮುದವೀಯುತ್ತವೆ. ಆಸ್ತಿಕತೆ, ಸಂಪ್ರದಾಯಗಳು, ಕಲಾಭಿಜ್ಞತೆ, ಸಂಬಂಧಗಳನ್ನು ಬೆಸೆಯುವ ಭಾವಬಾಂಧುರ್ಯ, ಸಂತೋಷ, ಪಾಕವಿಶೇಷಗಳು, ಗೀತನೃತ್ಯಕ್ರೀಡಾವಿನೋದಗಳು ಮುಂತಾದವು ಎಲ್ಲೆಲ್ಲೂ ತಾಂಡವವಾಡುತ್ತವೆ. ಹಾಗಾಗಿ ಈ ಹಬ್ಬಹರಿದಿನಗಳನ್ನು ಕಿಂಚಿತ್ ಅವಲೋಕಿಸುವುದು ಇಲ್ಲಿ ಪ್ರಸ್ತುತವೆನಿಸುತ್ತದೆ. ಮೈಸೂರು ಪ್ರಾಂತದಲ್ಲಿ ಜನಪ್ರಯವಾಗಿರುವ ಕೆಲವು ಹಬ್ಬ ಹರಿದಿನಗಳ ಹಾಗೂ ಆಚಾರಗಳ ಕೆಲವಂಶಗಳನ್ನು ಈಗ ನೋಡೋಣ-
ಯುಗಾದಿ- ವೇದಕಾಲದಿಂದ ಹಿಡಿದು ಮಧ್ಯಯುಗದಲ್ಲಿ ಆಕ್ರಮಣಕಾರರ ಕ್ರೂರಶಾಸನಗಳು ಬಂದು ತಡೆ ಹಾಕುವ ತನಕ, ವಸಂತೋತ್ಸವ ಎನ್ನುವುದು ಸಮಗ್ರ ಭಾರತದಲ್ಲಿ ಬಹಳ ವೈಭವದಿಂದ ಜರುಗುತ್ತಿದ್ದ ಉತ್ಸವವಾಗಿತ್ತು. ಹಲವು ಶತಮಾನಗಳವರೆಗೂ ಎರಡು ತಿಂಗಳ ಬೃಹತ್ ಜಾತ್ರೆಯ ಸ್ವರೂಪವನ್ನೇ ಹೊಂದಿದ್ದ ಈ ವಸಂತೋತ್ಸವವು ಇದೀಗ ಚಿತ್ರಾಹುಣ್ಣಿಮೆ, ಹೋಳಿ ಹಬ್ಬ, ಶ್ರೀಪಂಚಮಿ ಮುಂತಾದ ಬಿಡಿ ಬಿಡಿ ಹಬ್ಬಗಳಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇವುಗಳ ಪೈಕೆ ಭಾರತದಲ್ಲೆಲ್ಲ ಮಹತ್ತರ ಪ್ರಾಶಸ್ತ್ಯವನ್ನು ಇಂದಿಗೂ ಹೊಂದಿರುವುದು ಯುಗಾದಿ/ ಉಗಾದಿ ಹಬ್ಬ. ಯುಗಾದಿ ನೂತನ ಸಂವತ್ಸರದ ಮೊದಲ ದಿನ. ಮೈಸೂರು ಪ್ರಾಂತದಲ್ಲಿ ಚಾಂದ್ರಮಾನ ಯುಗಾದಿಯೇ ಹೆಚ್ಚು ಪ್ರಸಿದ್ಧ. ಅಂದು ಬೇವು-ಬೆಲ್ಲವುಂಡು ಸುಖದುಃಖಗಳನ್ನು ಸಮದೃಷ್ಟಿಯಿಂದ ಎದುರಿಸುವ ವ್ರತತೊಡಲಾತ್ತದೆ. ಅಭ್ಯಂಗ ಸ್ನಾನ, ಹೊಸ ಬಟ್ಟೆ, ಮನೆಯಂಗಳವನ್ನು ತಳಿರು ತೋರಣಗಳಿಂದ ಸಿಂಗರಿಸುವುದು, ಸಾಯಂಕಾಲ ಪಂಚಾಂಗ-ಶ್ರವಣ ಮಾಡುವುದು, ಬೇವು-ಬೆಲ್ಲ ಹಂಚಿಕೊಳ್ಳುವುದು, ದಾನ, ಹಾಡು, ಕುಣಿತ, ಓಕಳಿ ಮುಂತಾದ ಹಲವು ಕಲಾಪಗಳು ಉಗಾದಿಗೆ ಸೇರಿವೆ. ಇದು ವಸಂತಕಾಲದ ಮಧ್ಯದಲ್ಲಿ ಬರುವುದರಿಂದ ಆ ಋತುವಿಗೆ ಸಹಜವಾದ ಲಲಿತಕಲೆಗಳ ಮೆರುಗು ಇದಕ್ಕೂ ಅಂಟಿದೆ. ಇಂದಿಗೂ ಯುಗಾದಿಯೊಂದಿಗೆ ಪ್ರಾರಂಭವಾಗುವ ವಸಂತ-ನವರಾತ್ರದ ಆಚರಣೆ ಹಂಪೆಯ ವಿರೂಪಾಕ್ಷ ದೇಗುಲ ಮುಂತಾದ ಕೆಲವು ಕ್ಷೇತ್ರಗಳಲ್ಲಿ ಪ್ರಚಲಿತವಿದೆ. ಹಲವು ಹಳ್ಳಿಗಳಲ್ಲಿ ಸ್ಥಳೀಯ ಶೈಲಿಯಲ್ಲಿ ಉತ್ಸವ, ಜಾತ್ರೆ, ಜಾನಪದ ಗೀತ-ನೃತ್ಯ-ಕ್ರೀಡಾವಿನೋದಗಳ ನಡೆಯುತ್ತವೆ.    
ರಾಮನವಮಿಯೂ ಈ ವಸಂತ ಋತುವಿನಲ್ಲೇ ಬರುವ ಒಂದು ಪ್ರಸಿದ್ಧ ಹಬ್ಬವಾಗಿ ಬೆಳೆದಿದೆ. ಮೈಸೂರು ರಾಜ್ಯದಲ್ಲಿ ಎಲ್ಲೆಲ್ಲೂ ಎದ್ದು ನಿಂತಿರುವ ಕೋದಂಡರಾಮ ದೇಗುಲಗಳೇ ಶ್ರೀರಾಮಚಂದ್ರನು ಜನಪ್ರಿಯ ದೇವತೆ ಎನ್ನುವುದನ್ನು ಸಾರುತ್ತವೆ. ಬಿರುಬೇಸಿಗೆಯಲ್ಲಿ ಬರುವ ರಾಮನವಮಿಯಂದು ಮನೆಮನೆಗಳಲ್ಲೂ, ಬೀದಿಬೀದಿಗಳಲ್ಲೂ, ಸಾರ್ವಜನಿಕ ಸ್ಥಳಗಳಲ್ಲೂ ಪಾನಕ ಕೋಸಂಬರಿ ಹಂಚಿಕೊಂಡು ತಿಂದು ಸಡಗರ ಪಡುವ ಸಂಪ್ರಾದಾಯವಿದೆ. ರಾಮೋತ್ಸವದ ಜೊತೆಜೊತೆಗೆ ಮೈಸೂರು ಸೀಮೆಯಲ್ಲಿ ಬರುವುದೇ ಸಂಗೀತೋತ್ಸವದ ಚೈತ್ರರಥ! ಸಂಗೀತಕ್ಕೂ ರಾಮನಿಗೂ ವಿಶೇಷ ನಂಟ್ಟನ್ನು ಕಟ್ಟಿ ಕರ್ಣಾನಂದಕರ ಸಂಗೀತದೌತಣವನ್ನು ಉಣ್ಣುವುದೂ ಉಣ ಬಡಿಸುವುದು ವಾಡಿಕೆಯಲ್ಲಿ. ಈ ರಾಮನವಮಿಯ ವೇದಿಕೆಗಳಲ್ಲಿ ಕವಿ, ಕಲಾವಿದರೂ, ಗಾಯಕರು, ವಾದ್ಯ-ನಿಪುಣರೂ, ದಾನಿಗಳೂ, ಕಲಾಪ್ರೇಮಿಗಳು ಸೇರಿ ನಾದ ದೇವತೆಯನ್ನು ಆರಾಧಿಸುತ್ತಾರೆ. ಇದಕ್ಕಾಗಿ ವರ್ಷವೆಲ್ಲ ಎಲ್ಲರೂ ತಮ್ಮ ತಮ್ಮ ಸಿದ್ಧತೆ ನಡೆಸುವುದನ್ನು ಈಗಲೂ ಕಾಣಬಹುದು.
ಆಷಾದಮಾಸದಲ್ಲಿ ಮದುವೆ ಮುಂಜಿ ಮುಂತಾದ ವೃದ್ಧಿಕಾರ್ಯಗಳನ್ನು ಮಾಡದೇ ಹೋದರೂ, ಪೂಜೆ, ದಾನ ಧರ್ಮಗಳಿಗೆ ಇದು ಅತ್ಯಂತ ಪ್ರಶಸ್ತವೆಂದೇ ನಂಬಲಾಗಿದೆ. ಮೈಸೂರಿನ ಚಾಮುಂಡೇಶ್ವರಿಗಂತೂ ಆಷಾಡಶುಕ್ರವಾರದ ಪೂಜೆ ಉತ್ಸವಗಳು ತುಂಬ ವಿಶೇಷವೆನಿಸಿವೆ. ಜನಸ್ತೋಮವೇ ನೆರೆದು ಈ ಕಲಾಪಗಲಲ್ಲಿ ಭಾಗವಹಿಸುವುದನ್ನು ನೋಡಬಹುದು. ಅಂತೆಯೇ ಮೈಸೂರು ಸೀಮೆಯ ವಿವಿಧ ಶಕ್ತಿದೇಗುಲಗಳಲ್ಲಿ ನಿಂಬೆಹಣ್ಣು, ತುಪ್ಪಗಳ ದೀಪಗಳನ್ನು ಬೆಳಗುವುದು, ದಾನ, ಜಪ, ಪಾರಾಯಣ, ಪೂಜೆ, ಉಪವಾಸಾದಿ ವ್ರತಗಳನ್ನು ಕೈಗೊಳ್ಳುವ ಶ್ರದ್ಧಾಳುಗಳು ಹೇರಳವಾಗಿದ್ದಾರೆ.  
ಜ್ಯೋತಿರ್ಭೀಮೇಶ್ವರ ವ್ರತ ಆಷಾಡಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ಪ್ರಸಿದ್ಧ ಹಬ್ಬ. ಇದಕ್ಕೆ ಭೀಮನ ಅಮಾವಾಸೆ ಅಥವಾ ಗಂಡನ ಪೂಜೆ ಎಂಬ ಹೆಸರುಗಳೂ ಇವೆ. ಇದು ಹೆಣ್ಣುಮಕ್ಕಳ ಸಂಭ್ರಮದ ಹಬ್ಬ. ಉತ್ತಮ ಪತಿಯ ಪ್ರಾಪ್ತಿಗಾಗಿ ಕನ್ಯೆಯರು ಈ ವ್ರತವನ್ನು ಆಚರಿಸಿದರೆ, ಸುಮಂಗಲಿಯರು ಪತಿಯ ಆಯುರಾರೋಗ್ಯ-ಸೌಖ್ಯ-ಅಭಿವೃದ್ಧಿಗಳನ್ನು ಕೋರಿ ಭೀಮೇಶ್ವರನನ್ನು ಆರಾಧಿಸುತ್ತಾರೆ. ಎರಡು ದೀಪಗಳಿಗೆ ಮಂಗಳ ದ್ರವ್ಯಗಳಿಂದ ಅಲಂಕಾರ ಮಾಡಿ, ಅರಸಿನದ ಕೊಂಬೆಗಳನ್ನು ಕಟ್ಟಿ, ಷೋಡಶೋಪಚಾರಗಳ ವಿಧಿಯುಕ್ತ ಪೂಜೆಯನ್ನು ಮಾಡಲಾಗುತ್ತದೆ. ಇದನ್ನು ಪ್ರದೋಷಕಾಲದಲ್ಲಿ (ಸಂಧ್ಯಾಕಲಾದಲ್ಲಿ) ಕೂಡ ಮಾಡುವ ಪದ್ಧತಿಯುಂಟು. ಸೋದರರ ಶುಭವನ್ನೂ ಸಮೃದ್ಧಿಯನ್ನು ಕೋರಿ ಈ ವ್ರತವನ್ನು ಮಾಡುವ ಸಂಪ್ರದಾಯವೂ ಇದೆ.
ಶ್ರಾವಣಮಾಸದಲ್ಲಿ ಬರುವ ಉಪಾಕರ್ಮ, ಮಂಗಳಗೌರಿ ವ್ರತ, ವರಮಹಾಲಕ್ಷೀ ಹಾಗೂ ಕೃಷ್ಣಾಷ್ಟಮೀ ಹಬ್ಬಗಳು ಮೈಸೂರು ಸೀಮೆಯಲ್ಲಿ ಜನಪ್ರಿಯವಾದವು.
ನಾಗರಪಂಚಮಿ – ವೇದಕಾಲದಿಂದಲೂ ಸರ್ಪಾರಾಧನೆಯ ಪದ್ಧತಿ ಕಂಡು ಬರುತ್ತದೆ. ಅದರ ಅಳಿದುಳಿದ ರೂಪವೇ ನಾಗರಪಂಚಮಿ ಎನ್ನಬಹುದು. ಮುಗ್ಧ ಜನರು ಹಾವನ್ನೇ ನಾಗರಾಜ ಎಂದು ಭಾವಿಸಿ ಹಾಲೆರೆದು ಪೂಜಿಸುತ್ತಾರೆ. ಐದು ತಲೆಗಳ ನಾಗ ಎನ್ನುವುದು ವಸ್ತುತಃ ಪಂಚಪ್ರಾಣಾತ್ಮಕವಾದ ನಮ್ಮ ಕುಂಡಲಿನೀ ಶಕ್ತಿಯ ಸ್ವರೂಪವನ್ನು ಸಂಕೇತಿಸುತ್ತದೆ. ನಮ್ಮ ಆತ್ಮಶಕ್ತಿಯನ್ನು ಪ್ರಚೋದಿಸುವ ಕುಂಡಲಿನಿಯನ್ನು ಸರ್ಪರೂಪದ ಸಂಕೇತದಲ್ಲಿ ಪೂಜಿಸುವ ವಾಡಿಕೆ ವಿಗ್ರಹಾರಾಧನೆಯ ಸಂಪ್ರದಾಯದೊಂದಿಗೆ ಬೆಳೆದು ಬಂತು.
ಮಂಗಳಗೌರೀ-ವ್ರತ-
ಶ್ರಾವಣಮಾಸದ ಮಂಗಳವಾರಗಳಂದು ಈ ವ್ರತವನ್ನು ಸುಮಂಗಲಿಯರು ಆಚರಿಸುತ್ತಾರೆ. ಮದುವೆಯಾದ ಮೊದಲು ಐದು ವರ್ಷಗಳ ಕಾಲ ಇದನ್ನು ಮಾಡುವುದು ಬಹಳ ಮೈಸೂರು-ಕನ್ನಡ ಮನೆತನಗಳಲ್ಲಿ ಕಡ್ಡಾಯವೆನಿಸಿದೆ. ಇದನ್ನು ಜನ್ಮವ್ರತವನ್ನಾಗಿ ಆಚರಿಸುವವರೂ ಇದ್ದಾರೆ. ಪೀಠದ ಮೇಲೆ ರವಿಕೆಬಟ್ಟೆಯನ್ನು ತ್ರಿಕೋಣಾಕಾರದಲ್ಲಿ ಮಡಚಿ ಜೋಡಿಸಿ, ಅದರ ಮೇಲೆ ಕಲಶ ಕನ್ನಡಿಗಳನ್ನಿಟ್ಟು, ವೀಳ್ಯದೆಲೆ, ಅಡಿಕೆ, ಅರಸಿನದ ಕೊಮ್ಮುಗಳು, ಬಳೆ ಇತ್ಯಾದಿ ಎಲ್ಲವನ್ನೂ ಹದಿನಾರು ಸಂಖ್ಯೆಯಲ್ಲಿ ಜೋಡಿಸಿ, ಷೋಡಶೋಪಚಾರ ಪೂಜೆಯನ್ನು ಮಾಡಲಾಗುತ್ತದೆ. ಕೊನೆಯಲ್ಲಿ ಸಂಪ್ರದಾಯದ ಹಾಡುಗಳನ್ನು ಹಾಡುತ್ತ ಹದಿನಾರು ತಂಬಿಟ್ಟು ದೀಪಗಳ ಆರತಿಯನ್ನು ಬೆಳಗಲಾಗುತ್ತದೆ. ಕಬ್ಬಿಣದ ಕತ್ತಿ ಅಥವಾ ಮೊಗಚುಕೈಗೆ ತುಪ್ಪ ಸವರಿ ಅದನ್ನು ಈ ತಂಬಿಟ್ಟು ದೀಪಗಳ ಮೇಲೆ ಹಾಯಿಸಿ ಮಸಿಯನ್ನು ಪಡೆಯಲಾಗುತ್ತದೆ. ಆ ಮಸಿಯೇ ಮಂಗಲಗೌರಿಯ ಕಾಡಿಗೆ. ಈ ಕಾಡಿಗೆಯನ್ನು ಪಡೆಯುವುದು ತಮ್ಮ ಸೌಭಾಗ್ಯವೆನ್ನುವ ಮುಗ್ಧಸುಂದರ ಶ್ರದ್ಧೆ ಹೆಂಗಳೆಯರದು. ಮೊದಲ ವರ್ಷ ಐದು ಬಾಳೆಹಣ್ಣುಗಳ ತಾಂಬೂಲವನ್ನೂ, ಆ ಬಳಿಕ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತ, (ಹತ್ತು, ಹದಿನೈದು, ಇಪ್ಪತ್ತು, ಇಪ್ಪತ್ತೈದು ಬಾಳೆಹಣ್ಣುಗಳನ್ನು) ಕೊಡುತ್ತ ಹೋಗಬೇಕು. ಶಕ್ತ್ಯನುಸಾರ ಭಕ್ತ್ಯನುಸಾರ ವಸ್ತ್ರ, ಭೋಜನ, ಉಪಾಯನ ದಕ್ಷಿಣೆಗಳನ್ನು ಸುಮಂಗಲಿಯರಿಗೂ ದಂಪತಿಗಳಿಗೂ ನೀಡುವುದು ಈ ವ್ರತದ ಮುಖ್ಯಾಂಶ. ಕೆಲವರು ಇದನ್ನು ವೈಯಕ್ತಿಕ ತಪಸ್ಸಿನಂತೆ ಸರಳವಾಗಿ ಮಾಡಿದರೆ, ಇನ್ನು ಕೆಲವರು ಇದನ್ನು ಅದ್ದೂರಿಯ ಹಬ್ಬವನ್ನಾಗಿ ಆಚರಿಸುವುದೂ ಉಂಟು.
ವರಮಹಾಲಕ್ಷ್ಮೀ ಹಬ್ಬ- ಶ್ರಾವಣಮಾಸವು ವಿಷ್ಣುವಿನ ಆರಾಧನೆಗೆ ವಿಶೇಷವೆನಿಸಿದೆ. ವಿಷ್ಣುಶಕ್ತಿಯಾದ ಲಕ್ಷ್ಮಿಯನ್ನು ಬಹುಶಃ ಈ ಕಾರಣಕ್ಕಾಗಿಯೇ ಶ್ರಾವಣದ ಎರಡನೆಯ ಶುಕ್ರವಾರದಂದು ವರಮಹಾಲಕ್ಷ್ಮೀ ಎನ್ನುವ ಹೆಸರಿನಿಂದ ವಿಶೇಷವಾಗಿ ಪೂಜಿಸಲಾಗುತ್ತದೆ. ವರ್ಣ, ಮತ ಭೇದವಿಲ್ಲದೆ ಎಲ್ಲ ಸನಾತನ-ಧರ್ಮಿಗಳೂ ಈ ಹಬ್ಬವನ್ನು ಆಚರಿಸುತ್ತಾರೆ. ಕಲಶದಲ್ಲಿ ಅಕ್ಕಿ ಹಾಗೂ ಮಂಗಳದ್ರವ್ಯಗಳನ್ನು ತುಂಬಿ ಅದರ ಮೇಲೆ ತೆಂಗಿನಲಾಯಿ, ಮಾವಿನ ಎಲೆಗಳನ್ನು ಜೋಡಿಸಿ, ಲಕ್ಷ್ಮಿಯ ಬೆಳ್ಳಿ ಅಥವಾ ಚಿನ್ನದ ಮುಖವಾಡವನ್ನು ಜೋಡಿಸಿ, ಆ ಕಲಶಕ್ಕೆ ರವಿಕೆಯನ್ನೋ ಸೀರೆಯನ್ನೋ ಅಲಂಕಾರವಾಗಿ ಉಡಿಸಿ ಪೂಜಿಸುವುದು ಸಾಮಾನ್ಯವಾದ ಪದ್ಧತಿ. ಮನೆಯ ಗೃಹಿಣಿ ಕಲಶವನ್ನು ಹಿಡಿದು ಮನೆಯ ಬಾಗಿಲಿನಿಂದ ಒಳ ಬರುತಾಳೆ. ಮನೆಮಂದಿಯೆಲ್ಲ ಕಲಶಕ್ಕೆ ಪೂಜೆ, ಆರತಿಗಳನ್ನು ಮಾಡಿ ’ಭಾಗ್ಯದ ಲಕ್ಷ್ಮೀ ಬಾರಮ್ಮಾ’ ಎಂದು ಬರಮಾಡಿಕೊಳ್ಳುತ್ತಾರೆ. ಆ ಬಳಿಕ ಮೊದಲು ಯಮುನಾ ಪೂಜೆಯನ್ನು ಮಾಡಲಾಗುತ್ತದೆ. ಕೃಷ್ಣಪತ್ನಿಯಾದ ಯಮುನೆಯೂ ಲಕ್ಷ್ಮೀ ಸ್ವರೂಪಳೆ. ಅದಾದಮೇಲೆ ಮುಖ್ಯ ಪೀಠದಲ್ಲಿ ಕಲಶವನ್ನು ಸ್ಥಾಪಿಸಿ, ಲಕ್ಷ್ಮಿಯನ್ನು ವಿಧಿಯುಕ್ತವಾಗಿ ಆಹ್ವಾನಿಸಿ ಮಂತ್ರೋಕ್ತವಿಧಾನದಿಂದ ಪೂಜೆಗೈಯಲಾಗುತ್ತದೆ. ವ್ರತಕಲ್ಪಗಳಲ್ಲಿ ಈ ಎಲ್ಲ ವ್ರತಪೂಜೆಗಳ ವಿಧಿವಿಧಾನಗಳನ್ನು ತಿಳಿಸಲಾಗಿದೆ. ಬಗೆಬಗೆಯ ಭಕ್ಷ್ಯಭೋಜ್ಯಗಳ ನೈವೇದ್ಯವನ್ನು ಮಾಡಿ ಮನೆ ಮಂದಿ ಹಾಗೂ ಆಹ್ವಾನಿತ ಸುಮಂಗಲಿಯರೂ, ದಂಪತಿಗಳೂ ಸಂತಸದಿಂದ ಸಹಭೋಜನ ಮಾಡುತ್ತಾರೆ. ಸಂಜೆ ಹೊತ್ತು ಹೆಂಗಳೆಯರು ಮನೆ ಮನೆಗೂ ಹೋಗಿ ಲಕ್ಷ್ಮಿಯನ್ನು ದರ್ಶಿಸಿ, ತಾಂಬೂಲಾದಿಗಳನ್ನು ಸ್ವೀಕರಿಸಿ, ತಮ್ಮ ಮನೆಗೆ ಅವರನ್ನೆಲ್ಲ ಅಹ್ವಾನಿಸುವ ಸಂಭ್ರಮವನ್ನು ಕಾಣಬಹುದು.
ಉಪಾಕರ್ಮ ದ್ವಿಜರಾದ ತ್ರಿವರ್ಣದವರಿಗೂ (ಬ್ರಾಹ್ಮಣ-ಕ್ಷತ್ರಿಯ-ವೈಶ್ಯರಿಗೂ) ಪ್ರಶಸ್ತವಾದ ಹಬ್ಬ. ಇದು ವೇದಕಾಲದಿಂದ ಬಂದ ಹಬ್ಬ ಎಂದು ಊಹಿಸಲು ಅಡ್ಡಿಯಿಲ್ಲ. ಉಪನಯನವಾದ ಮೊದಲ ವರ್ಷದ ಉಪಾಕರ್ಮವಂತೂ ವಟುಗಳಿಗೆ ತುಂಬ ವಿಶೇಷವೆನಿಸುತ್ತದೆ. ಮೂಲತಃ ಸವಿತೃದೇವತೆಯ ಆರಾಧನೆಯ ಹಿನ್ನಲೆಯಲ್ಲಿ ನಡೆಯುತ್ತಿದ್ದ ಈ (ಗಾಯತ್ರೀ ಛಂದಸ್ ಉಳ್ಳಂತಹ) ಸಾವಿತ್ರೀಮಂತ್ರ ಸಂಬಂಧಿತವಾದ ವ್ರತಕಲಾಪವು, ಬರಬರುತ್ತ ಪುರಾಣ-ಆಗಮೋಕ್ತ ಪಂಚಮುಖಿ ಗಾಯತ್ರಿಯನ್ನು ಉಪಾಸಿಸುವ ಭಾವ ತಾಳಿತು. ಗಾಯತ್ರೀ ಹೋಮ, ಗಾಯತ್ರೀ-ಮಂತ್ರ ಪುರಶ್ಚರಣ ಹಾಗೂ ಜಪತಪಗಳನ್ನು ಅವರವರ ಶಕ್ತ್ಯನುಸಾರ, ಪದ್ಧತಿಗಳಿಗನುಸಾರವಾಗಿ ದ್ವಿಜರೆಲ್ಲ ಮಾಡುತ್ತಾರೆ. ಮನೆಗಳಲ್ಲಿ ಪರಿವಾರದ ಮಟ್ಟಿಗೆ ಮಾಡುವುದೂ ಉಂಟು, ಮಠಗಳಲ್ಲೂ, ಗುಡಿಗಳಲ್ಲೂ ಸಾಮೂಹಿಕವಾಗಿ ಆಚರಿಸುವುದೂ ಉಂಟು.
ಕೃಷ್ಣಾಷ್ಟಮೀ
ಲೋಕಪ್ರಿಯನೂ ಲೋಕೇಶ್ವರನೂ ಜಗಸ್ಗುರುವೂ ಆದ ಕೃಷ್ಣನ ಜಯಂತಿ ಯಾರಿಗೆ ಪ್ರಿಯವಲ್ಲ? ಮೈಸೂರು ಸೀಮೆಯಲ್ಲೂ ಇದೂ ಅದ್ದೂರಿಯ ಹಬ್ಬ. ಸೂರ್ಯಾಸ್ತದ ಅಥವಾ ರಾತ್ರಿ ಕಾಲದಲ್ಲಿ ಕೃಷನನ್ನು ಪುಟ್ಟ ಬೆಳ್ಳಿ ಅಥವಾ ಚಿನ್ನದ ತೊಟ್ಟಿಲಲ್ಲಿಟ್ಟು ಪೂಜಿಸಿ ತುಳಸಿಯಿಂದ ಅರ್ಚಿಸಿ, ಬಗೆಬಗೆಯ ಕರೆದ ತಿಂಡಿಗಳನ್ನೂ, ಅವಲಕ್ಕಿಯನ್ನೂ ಹಾಗೂ ಹಾಲು, ಬೆಣ್ಣೆಗಳನ್ನೂ ನೈವೇದ್ಯ ಮಾಡಲಾಗುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಹಾಗೂ ನಾಮಜಪಗಳು ಭರದಿಂದ ನಡೆಯುತ್ತವೆ. ಮನೆಯವರೆಲ್ಲ ಕೂಡಿ ಅದಕ್ಕಾಗಿ ಹಿಂದಿನ ದಿನದಿಂದಲೇ ದೊಡ್ಡ ಪ್ರಮಾಣದಲ್ಲಿ ಬಗೆ ಬಗೆಯ ಭಕ್ಷ್ಯ-ಭರ್ಜ್ಯ-ಭೋಜ್ಯ-ಪೇಯಗಳನ್ನು ಮಾಡಲಾರಂಭಿಸುತ್ತಾರೆ. ಕೃಷ್ಣನನ್ನು ನೋಡಲು ಬರುವ ಎಲ್ಲರಿಗೂ ಭಕ್ಷ್ಯಗಳನ್ನು ಕೈತುಂಬ ಹಂಚಲಾಗುತ್ತದೆ. ವಿಶೇಷವಾಗಿ ಮನೆಯ ಹಾಗೂ ನೆರೆಕೆರೆಯ ಮಕ್ಕಳನ್ನು ಕುಳ್ಳಿರಿಸಿ ತಿಲಕ ಹಚ್ಚಿ, ಆರತಿ ಎತ್ತಿ, ಸಿಹಿತಿನಿಸುಗಳಿಂದ ಉಪಚರಿಸಲಾಗುತ್ತದೆ. ಕೆಲವರು ಸೂರ್ಯಾಸ್ತದ ನಂತರ ಪೂಜೆ ಮಾಡಿ ಮುಗಿಸಿದರೆ, ಇನ್ನು ಕೆಲವರು ಮಧ್ಯರಾತ್ರಿ (ಕೃಷ್ಣ ಹುಟ್ಟಿದ ವೇಳೆಯಲ್ಲಿ ಪೂಜೆ ಮಾಡುತ್ತಾರೆ) ಮತ್ತೂ ಕೆಲವರೂ ರಾತ್ರಿ ನಾಲ್ಕು ಯಾಮಗಳ ಪೂಜೆಯನ್ನೂ ಮಾಡುವವರಿದ್ದಾರೆ. ಶ್ರೀವೈಷ್ಣವರು ರೋಹಿಣೀ ನಕ್ಷತ್ರದ ಯೋಗವಿದ್ದ ದಿನದಮ್ದು ಕೃಷ್ಣಜಯಂತಿಯನ್ನು ಆಚರಿಸುತ್ತಾರೆ. ಅಂತೂ ಎಲ್ಲರನ್ನೂ ಸಂತಸದ ಹೊಳೆಯಲ್ಲೇ ಮೀಯಿಸುವ ವಿಶೇಷ ಪರ್ವ ಇದು.   
ಭಾದ್ರಪದ ಮಾಸದಲ್ಲಿ ಆಚರಿಸಲಾಗುವ ಮೈಸೂರು ಸೀಮೆಯ ಅಚ್ಚುಮೆಚ್ಚಿನ ಹಬ್ಬಗಳು ಗೌರಿ ಗಣಪತಿ ಹಬ್ಬಗಳು
ಗೌರಿ ಹಬ್ಬ- ಚೈತ್ರ-ಗೌರೀ (ಉಯ್ಯಾಲೆ-ಗೌರಿ), ಕೇದಾರ-ಗೌರಿ, ಫಲ-ಗೌರಿ, ಉಯ್ಯಾಲೆ-ಗೌರಿ, ಸೀಗೆ-ಗೌರಿ, ಮಂಗಳ-ಗೌರಿ, ಮೌನ-ಗೌರಿ ಮುಂತಾದ ಹಲವು ಗೌರಿ ಪೂಜೆಗಳು ಬೇರೆ ಬೇರೆ ಕುಲದವರಲ್ಲಿ ಬೇರೆ ಬೇರೆ ಮಾಸಗಲಲ್ಲಿ ಆಚಾರದಲ್ಲಿವೆ. ಇವುಗಳಲ್ಲೆಲ್ಲ ಅತಿ ಪ್ರಸಿದ್ದವಾದದ್ದು ಸ್ವರ್ಣಗೌರಿ ಎನ್ನಬಹುದು.
ಸ್ವರ್ಣಗೌರಿಯ ಹಬ್ಬದಂದು ಮಗಳಾದ ಗೌರಿಯು ತವರಿಗೆ ಬಂದು ಊಟೋಪಚಾರಗಳನ್ನು ಪಡೆದು ಹರಸಿ ಹೋಗುತ್ತಾಳೆಂಬ ಮಾತಿದೆ. ಮಣ್ಣಿನಲ್ಲಿ ಗೌರಿಯನ್ನು ನಿರ್ಮಿಸಿ (ಈ ಕಾಲದಲ್ಲಿ ಕೊಂಡು ತಂದು) ಅಥವಾ ಬೆಳ್ಳಿ ಅಥವಾ ಅಥವಾ ಚಿನ್ನದ ಗೌರಿ ಮುಖವನ್ನು ಕಲಶಕ್ಕೆ ತೊಡಿಸಿ, ಅದನ್ನು ಪೀಠದ ಮೇಲೆ ಇರಿಸಿ, ಷೋಡಶೋಪಚಾರಗಳಿಂದ ಪೂಜಿಸಿ, ಒಬ್ಬಟ್ಟು ಹಾಗೂ ಬಗೆ ಬಗೆಯ ಕಲಸಿದ ಅನ್ನಗಳು, ಭಕ್ಷ್ಯ ಭೋಜ್ಯಗಳನ್ನು ನಿವೇದಿಸಲಾಗುತ್ತದೆ. ಪೂಜೆಯ ಕೊನೆಯಲ್ಲಿ ಸ್ವರ್ಣಗೌರಿಗೆ ಮರದ ಬಾಗಿನ ಕೊಟ್ಟು ಆ ಬಳಿಕ ಸುಮಂಗಲಿಯರು ಪರಸ್ಪರ ಮರದ ಬಾಗಿನವನ್ನು ಕೊಟ್ಟು-ಪಡೆದು ಪರಸ್ಪರರನ್ನು ಹರಸುತ್ತಾರೆ. ಮನೆಯ ಹೆಣ್ಣು ಮಕ್ಕಳನ್ನು ಅಳಿಯನೊಂದಿಗೆ ಆಹ್ವಾನಿಸಿ ಮರದ ಬಾಗಿನ, ತಾಂಬೂಲ, ವಸ್ತ್ರ, ಮೃಷ್ಟಾನ್ನ-ಭೋಜನಗಳ ಉಪಚಾರ ಮಾಡುವುದೂ ವಾಡಿಕೆಯಲ್ಲಿದೆ. ಸಾಯಂಕಾಲ ಬಣ್ಣಬಣ್ಣದ ಜರತಾರಿ ಸೀರೆಗಳನ್ನುಟ್ಟು ಒಡವೆ, ಮಂಗಳದ್ರವ್ಯಗಳಿಂದ ಸಿಂಗರಿಸಿಕೊಂಡ ಹೆಂಗಳೆಯರು ನೆರೆಕೆರೆಯವರ ಮೆನೆಗೆ ಹೋಗಿ ಗೌರಿಯನ್ನು ದರ್ಶಿಸಿ ತಾಂಬೂಲ ಪಡೆದು ತಮ್ಮ ಮನೆಗೆ ಅವರುಗಳನ್ನು ಆಹ್ವಾನಿಸುವ ದೃಶ್ಯ ನಯನ-ಮನೋಹರವಾಗಿರುತ್ತದೆ. ಹಬ್ಬದ ಸಂಭ್ರಮ ಸಡಗರ ಬಣ್ಣ ಎದ್ದು ಕಾಣುವುದೇ ಈ ಸಂದರ್ಭದಲ್ಲಿ. ಹಾಡು ಕೋಲಾಟ ಓಕಳಿಗಳು ಎಲ್ಲ ಹಬ್ಬಗಳಂತೆ ಈ ಹಬ್ಬದ ಭಾಗವಾಗಿವೆ. ಆದರೆ ನಾಗರೀಕತೆಯ ಪ್ರೆಜ್ಯುಡಿಸ್ ಎನ್ನುವುದು ಈ ಮುಗ್ಧ ಸಂಭ್ರಮಗಳನ್ನು ಮೆಲ್ಲನೆ ತೆರೆಮರೆಗೆ ತಳ್ಳಿಹಾಕುತ್ತ ಬಂದಿವೆ. ಆದರೂ ಕೆಲವು ಗ್ರಾಮೀಣ ಪ್ರಾಂತಗಳಲ್ಲಿ ಈ ಗೀತ-ನೃತ್ಯಾದಿ ಕಲಾಪಗಳು ಅಳಿದುಳಿದಿವೆ ಎನ್ನುವುದು ಸಮಾಧಾನದ ಸಂಗತಿ.
ಗಣೇಶ ಹಬ್ಬ- ’ಗಣೇಶ ಬಂದ ಕಾಯಿ ಕಡುಬು ತಿಂದ ಚಿಕ್ಕೆರೇಲಿ ಬಿದ್ದ ದೊಡ್ ಕೆರೇಲಿ ಎದ್ದ’ ಎನ್ನುವ ಸಾಲುಗಳು ಮಕ್ಕಳ ಬಾಯಲ್ಲೂ ನಲಿದಾಡುತ್ತವೆ. ಗಣೇಶಚತುರ್ಥಿ ಅತ್ಯಂತ ಸಡಗರದ ಹಬ್ಬ. ಗಣಪತಿ ವಿಘ್ನರಾಜನೂ, ಬುದ್ಧಿ, ಸಿದ್ಧಿ, ವೃದ್ಧಿಗಳನ್ನೂ ಕೊಡುವವನು ಹಾಗೂ ಮೂಲಾಧಾರದ ತ್ರಿಕೋಣಮಧ್ಯಗತನಾಗಿ ’ಗಜಕುಂಡ’ ರೂಪದಲ್ಲಿ ದರ್ಶನ ಕೊಟ್ಟು, ನಮ್ಮ ಆಧ್ಯಾತ್ಮಿಕ ಗತಿಯನ್ನು ಪ್ರಚೋದಿಸುವವನು ಎಂದು ಭಕ್ತಿಶಾಸ್ತ್ರಗಳು ಸಾರುತ್ತವೆ. ಮಣ್ಣಿನ ಗಣಪತಿಯನ್ನು ನಿರ್ಮಿಸಿ, ಪೂಜಿಸಿ, ಬಳಿಕೆ ನೀರಿನಲ್ಲಿ ವಿಸರ್ಜಿಸುವ ಪ್ರಾಚೀನ ಪದ್ಧತಿ ತುಂಬ ಅರ್ಥಪೂರ್ಣ. ’ಭಕ್ತನ ಔಪಾಸನಾತ್ಮಕ ತೃಪ್ತಿಗಾಗಿ ಪಂಚಭೂತಾತ್ಮಕವಾದ ಭೌತಿಕ ರೂಪವನ್ನು ತಾಳಿದ ಭಗವಂತನು ಮತ್ತೆ ತನ್ನ ನಿರಾಕಾರಸ್ವರೂಪದಲ್ಲಿ ಲಯವಾಗಿಹೋಗುತ್ತಾನೆ’ ಎನ್ನುವ ಪರಮ ಸತ್ಯದ ಸಂಕೇತವೇ ಇದಾಗಿದೆ. ಹಿಂದುಗಳು ಅದೆಷ್ಟೇ ದೇವತಾರೂಪಗಳನ್ನು ಪೂಜಿಸಿದರೂ, ಅವೆಲ್ಲವೂ ಏಕೈಕ ಚಿನ್ಮಾತ್ರ ಬ್ರಹಸ್ವರೂಪದ ಭೌತಿಕ ಸಂಕೇತಗಳೇ ಆಗಿವೆ ಎನ್ನುವ ಅಂಶವು ಇಲ್ಲಿ ಸ್ಪಷ್ಟವಾಗುತ್ತದೆ. ಸ್ವರ್ಣಗೌರಿಯನ್ನು ಹೆಂಗಸರು ಪೂಜಿಸಿದರೆ ಗಣೇಶ ಹಬ್ಬದಲ್ಲಿ ಪೂಜೆಗೆ ಕೂಡುವವರು ಸಾಮಾನ್ಯವಾಗಿ ಮನೆಯ ಪುರುಷರು. ಗಣಪತಿಯನ್ನು ವಿಧಿಯುಕ್ತವಾಗಿ ಪೂಜಿಸಿ ಪಂಚಭಕ್ಷ್ಯ ಪರಮಾನ್ನಗಳನ್ನು ನಿವೇದಿಸುತ್ತಾರೆ. ಕನ್ನಡದ ಗಣಪನಿಗೆ ಕಡ್ಡಾಯವಾಗಿ ಸಲ್ಲುವುದು ’ಕಡುಬು’ ನೈವೇದ್ಯ! ಅದರಲ್ಲಿ ಕರಿಗಡುಬು, ಹಸಿಗಡುಬು, ಕೊಳ್ಕೊಟ್ಟೆ, ಮೋದಕ ಮುಂತಾದ ಬಗೆಗಳಿವೆ. ಅವುಗಳಲ್ಲಿ ಬಳಸುವ ಹೂರಣಗಳಲ್ಲೂ ಬಗೆಬೆಗೆ- ಕಾಯಿಬೆಲ್ಲದ ಹೂರಣ, ಕೊಬ್ಬರಿ ಸಕ್ಕರೆ, ಕಡಳೇಹಿಟ್ಟು-ಸಕ್ಕರೆ ಇತ್ಯಾದಿ. ಈ ಹಬ್ಬದಲ್ಲಿ ಕಡುಬು ತಿನ್ನುವುದು ಬಡಿಸುವುದೇ ಮನೆಮನೆಯ ಸಂಭ್ರಮದ ಅಂಶವಾಗಿದೆ. ನೂರೆಂಟು ಗಣಪರನ್ನು ದರ್ಶಿಸಿ ವಿದ್ಯಾ ಸಿದ್ಧಿಯನ್ನು ಪಡೆಯುವ ಉತ್ಸಾಹದಲ್ಲಿ, ಪುಟ್ಟ ಬಾಲಕ ಬಾಲಕಿಯರು ಕೈಯಲ್ಲಿ ಅಕ್ಷಟೆ ಕಾಳಿನ ಬಟ್ಟಲು ಹಿಡಿದು ಮನೆ ಮನೆಗೂ ಹೋಗುತ್ತ ’ನಿಮ್ಮನೇಲಿ ಗಣೇಶ ಕೂಡಿಸಿದ್ದೀರಾ?” ಎಂದು ಒಳ ಹೊಕ್ಕು ’ವಿದ್ಯಾಗಣಪತಿಗೆ ಜೈ’ ಎಂದು ಘೋಷಿಸಿ ಅಕ್ಷತೆ ಹಾಕಿ ನಮಸ್ಕರಿಸಿ ಮುಂದೆ ಹೋಗುವುದು ಬೀದಿ ಬೀದಿಗಳಲ್ಲೂ ಕಾಣುವ ಮುಗ್ಧಮನೋಹರ ದೃಶ್ಯ. ಆದರೆ ಈ ಮುಗ್ಧ ಸಂಭ್ರಮವೂ ನಗರಗಳಲ್ಲಿ ಕ್ರಮೇಣ ಕ್ಷೀಣಿಸುತ್ತಿರುವುದು ಶೋಚನೀಯ.
ಶರನ್ನವರಾತ್ರ
ಶರನ್ನವರಾತ್ರ ಅಥವಾ ದಸರಾ ಹಬ್ಬ ಮೈಸೂರು ರಾಜ್ಯದ ನಾಡಹಬ್ಬವೇ ಆಗಿದೆ. ವೊಡೆಯರ ರಾಜಪರಂಪರೆಯಂತೂ ಇದನ್ನು ಬಲು ವೈಭವದಿಂದ ನಡೆಸಿಕೊಂದು ಬಂದಿದೆ. ಹಿಂದೆ ವಿಜಯಾಗರದ ಕರ್ನಾಟ ಸಾಮ್ರಾಜ್ಯದ ಕಾಲದಲ್ಲೂ ಇದು ಅತ್ಯಂತ ವೈಭವದ ನಾಡ ಹಬ್ಬವಾಗಿತ್ತೆನ್ನುವುದನ್ನು ಶಾಸನಗಳು ಹಾಗೂ ಹಂಪೆಯಲ್ಲಿನ ಮಹಾನವಮಿ ಡಿಬ್ಬದ ಪಳೆಯುಳಿಕೆಗಳು ಸಾರುತ್ತವೆ. ಸಾಮಂತ ರಾಜರುಗಳು ಹಾಗೂ ತಮ್ಮ ಅಧೀನದಲ್ಲಿನ ನಾಯಕರು, ಧನಿಕರು, ಅಮಾತ್ಯರುಗಳು ಮಹಾರಾಜನಿಗೆ ಗೌರವದ ಕಪ್ಪ ಕಾಣಿಕೆ ಸಲ್ಲಿಸುವುದರ ಮೂಲಕ ಅವರ ಪ್ರಭುತ್ವವನ್ನು ಮನ್ನಿಸುತ್ತಿದ್ದರು. ಅರ್ವಾಚೀನ ವೊಡೆಯರ ರಾಜರುಗಳ ಕಾಲಕ್ಕೆ ಈ ಪದ್ಧತಿ ಕೇವಲ ಸಾಂಕೇತಿಕವಾಗಿ ಉಳಿಯಿತಾದರೂ, ಹಬ್ಬದ ವೈಭವ, ಸಡಗರಗಳಂತೂ ಬಾಡಲಿಲ್ಲ. ಮೈಸೂರಿನ ಈ ಹತ್ತು ದಿನಗಳ ದಸರಾಹಬ್ಬ ಜಗನ್ಮಾನ್ಯವಾದ ಉತ್ಸವ. ಲಕ್ಷೋಪಲಕ್ಷ ಜನರು ಇದನ್ನು ವೀಕ್ಷಿಸಲು ನೆರೆಯುತ್ತಾರೆ. ಈ ಸಂದರ್ಭದಲ್ಲಿ ಮೈಸೂರು ರಾಜ್ಯದ ಗೀತ ನೃತ್ಯ ನಾಟಕಾದಿ ಅನೇಕಾನೇಕ ಲಲಿತಕಲೆಗಳು, ಕವಿ ಹಾಗೂ ಸಾಹಿತಿಗಳ ಗೋಷ್ಟಿಗಳು, ಮಲ್ಲಯುದ್ಧ ಮುಂತಾದ ಹಲವಾರು ವಿನೋದಗಳು, ಬೊಂಬೆ ಪ್ರದರ್ಶನ, ಜಾತ್ರೆಗಳು ನಡೆಯುತ್ತವ್. ಜಂಬೂ ಸವಾರಿ ಹಾಗೂ ಸ್ತಬ್ಧ ಚಿತ್ರಾದಿಗಳನ್ನು ಒಳಗೊಂಡಂತಹ ವೈಭವದ ಮರವಣಿಗೆಯಂತೂ ಕಣ್ಸೆಳೆಸುವಂತಹದ್ದು. ಹಿಂದೆ ಅರಸರೇ ಅತಿಭಾರದ ಚಿನ್ನದ ಅಂಬಾರಿಯನ್ನೇರಿ ಪಟ್ಟದ ಆನೆಯ ಮೇಲೆ ಮೆರವಣಿಗೆ ಬರುತ್ತಿದ್ದರು. ಈಗ ಆ ಸ್ಥಾನದಲ್ಲಿ ದೇವಿ ಚಾಮುಂಡೇಶ್ವರಿಯನ್ನು ಕುಳ್ಳಿರಿಸಿ ಮೆರವಣಿಗೆ ಮಾಡಲಾಗುತ್ತದೆ. ಮೈಸೂರಿನ ನಾಡದೇವಿ ಚಾಮುಂಡೇಶ್ವರಿಯ ಹೆಸರಲ್ಲಿ ಆಷಾಡ ಶುಕ್ರವಾರ, ಚಿತ್ರಾ ಹುಣ್ಣಿಮೆ ಮುಂತಾದ ಪರ್ವಗಳಲ್ಲಿ ಹಲವು ವಿಶೇಷ ಉತ್ಸವಗಳು ಜರುಗುತವೆ. ಆದರೆ ದಸರಾ ಪೂಜೆ ತುಂಬ ಪ್ರಸಿದ್ಧವಾದದ್ದು. ಕನ್ಮನಗಳನ್ನು ತಣಿಸುವ, ಅಪಾರ ಜ್ಞಾನ, ಮಾಹಿತಿ ಹಾಗೂ ಮನೋರಂಜನೆಗಳನ್ನು ಜನರಿಗೆ ಕೊಡುವ ಮೈಸೂರು ದಸರಾ ಅನಿತರಸಾಧಾರಣ-ಸುಂದರವಾದ ಉತ್ಸಸವ.
ದೀಪಾವಳಿಯೂ ಆಶ್ವಿನ-ಕಾರ್ತಿಕ ಮಾಸಗಳ ಸಂಧಿಯಲ್ಲಿ ಬರುವ ಹಬ್ಬ. ಮೈಸೂರು ಸೀಮೆಯವರಿಗೆ ಇದು ಮೂರು ದಿನಗಳ ಸದಗರದ ಹಬ್ಬ. ಒಳಹೊರಗಿನ ಕತ್ತಲನ್ನು ಹೋಗಲಾಡಿಸಿ ಸಂತಸದ ಬೆಳಕನ್ನು ಆಹ್ವಾನಿಸುವುದೇ ದೀಪಾವಳಿ ಹಬ್ಬದಲ್ಲಿನ ಸುಂದರ ಭಾವನೆ. ಮೊದಲ ದಿನ ನರಕ-ಚತುರ್ದಶಿ, ಎರಡನೆಯ ದಿನ ಅಮಾವಾಸ್ಯೆ- ಆ ದಿನ ಹಿಂದುಗಳು ಧನಲಕ್ಷ್ಮಿಯನ್ನೂ ಜೈನರು ಮೋಕ್ಷಲಕ್ಷ್ಮಿಯನ್ನೂ ಪೂಜಿಸುತ್ತಾರೆ. ಮೂರನೆಯ ದಿನ ಬಲಿಪಾಡ್ಯಮಿ- ಅಸುರ ರಾಜನಾದ ಬಲಿಯನ್ನು ಪಾತಾಳಕ್ಕೆ ತಳ್ಳಿ ಮನುಕುಲಕ್ಕೆ ಅಭಯವನ್ನು ಕೊಟ್ಟ ಮಹಾವಿಷ್ಣುವಿನ ವಾಮನ ಅವತಾರವನ್ನು ಪೂಜಿಸುವ ದಿನ ಇದು. ಬಲೀಂದ್ರನು ಅಸುರನಾದರೂ ಭಾಗವತೋತ್ತಮನೆಂಬ ಕಾರಣಕ್ಕೆ ಪೂಜಾರ್ಹನಾಗಿದ್ದಾನೆ. ಲಕ್ಷ್ಮೀ ಪೂಜೆ, ಹೊಸಬಟ್ಟೆ, ಮುಷ್ಟಾನ್ನ ಭೋಜನ, ಸ್ನೇಹಕೂಟ, ದೀಪಗಳ ಸಾಲು ಸಾಲುಗಳನ್ನು ಸೂರ್ಯಾಸ್ತದ ಬಳಿಕ ಮನೆಯಂಗಳದಲ್ಲಿ ಬೆಳಗುವುದು ಹಾಗೂ ಪಟಾಕಿಗಳನ್ನು ಸುಟ್ಟು ನಕ್ಕು ನಲಿದಾಡುವುದು ದೀಪಾವಳಿ ಹಬ್ಬದ ಅಂಶಗಾಳಗಿವೆ. ನರಕಾಸುರನನ್ನು ಕೊಂದು ಅವನ ಕಳೇಬರವನ್ನು ಸುಟ್ಟಾಗ ಬಣ್ಣ ಬಣ್ಣದ ಬೆಂಕಿಯ ಕಿಡಿಗಳು ಚಿಮ್ಮಿದವು ಎಂಬ ಕಥೆ ಪ್ರಚಲಿತವಿದೆ. ಅದರ ಸಂಕೇತವಾಗಿ ಬಣ್ಣ ಬಣ್ಣದ ಪಟಾಕಿಗಳನ್ನು ಸುಡಲಾಗುತ್ತದೆ ಎಂದು ಅಭಿಪ್ರಾಯವಿದೆ. ಅಂತೂ ಅಜ್ಞಾನ, ದುಃಖಗಳ ಪ್ರತೀಕವಾದ ಕತ್ತಲನ್ನು ಹೋಗಲಾಡಿಸಿ ಜ್ಞಾನ ಹಾಗೂ ಸಂತೋಗಳ ಸಂಕೇತವಾದ ಬೆಳಕನ್ನು ತುಂಬುವುದು ದೀಪಾವಳಿಯ ಮುಖ್ಯ ಉದ್ದೇಶವಾಗಿದೆ. ದೀಪಾವಳಿಯಂದು ಆಹ್ಲಾದಕರವಾದ ದೀಪಗಳ ಬೆಳಕಿನ ಲೋಕವೇ ನಾಡಲ್ಲೆಲ್ಲ ಸೃಷ್ಟಿಯಾಗುತ್ತದೆ!
ಉತ್ಥಾನದ್ವಾದಶಿ ಅಥವಾ ತುಲಶೀ ಪೂಜೆ ದೀಪಾವಳಿಯಾದ ಸುಮಾರು ಎರಡು ವಾರಕ್ಕೆ ಬರುತ್ತದೆ. ತುಳಸಿಯ ಬೃಂದಾವನವನ್ನೋ ಕುಂಡವನ್ನೋ ಮಂಗಳದ್ರವ್ಯಗಳಿಂದಲೂ, ದೀಪಗಳಿಂದಲೂ ಅಲಂಕರಿಸಿ, ಹಣ್ಣುಗಳಿರುವ ನೆಲ್ಲಿಯ ಗಿಡದ ಕೊಂಬೆಯನ್ನು ಪಕ್ಕದಲ್ಲಿ ನೆಟ್ಟು, ಅದನ್ನು ಲಕ್ಷ್ಮೀ ಸ್ವರೂಪವೆಂದು ಪೂಜಿಸಲಾಗುತ್ತದೆ. ಸಂಧ್ಯಾಕಾಲದಲ್ಲಿ ಈ ಪೂಜೆಗೆ ವಿಶೇಷ. ತುಳಸಿಯು ನಾರಾಯಣನನ್ನು ಮದುವೆಯಾದದ್ದು ಈ ದಿನ ಎನ್ನುವುದು ಒಂದು ನಂಬಿಕೆ. ಇನ್ನು ದೇವತೆಗಳು ತಮ್ಮ ಆರು ತಿಂಗಳ ಶಯನದಿಂದ ಎಚ್ಚೆತ್ತು ಕ್ರಿಯಾಶೀಲರಾಗುವುದು ಈ ದಿನದಂದು, ಹಾಗಾಗಿ ಇದಕ್ಕೆ ’ಉತ್ಥಾನ ದ್ವಾದಶಿ’ ಎಂದು ಹೆಸರು ಎನ್ನುವ ಅಭಿಮತವೂ ಇದೆ. ಈ ದಿನದಂದೂ ಪಟಾಕಿಗಳನ್ನು ಸುಟ್ಟು ನಲಿದಾಡುವ ಸಂಭ್ರಮವಿರುತ್ತದೆ.  
ಸಂಕ್ರಂತಿ ಹಬ್ಬ ಕನ್ನಡಿಗರ ಪಾಲಿಗೆ ಸುಗ್ಗಿಯ ಹಬ್ಬ. ರೈತರು ಆಗತಾನೆ ಸುಗ್ಗಿಯಾದ ಧಾನ್ಯಗಳನ್ನು ರಾಶಿಯಾಗಿ ಪೇರಿಸಿ ಧಾನ್ಯಲಕ್ಷ್ಮಿ ಎಂದು ಪೂಜಿಸಿ, ಮೊರಗಳಲ್ಲಿ ಎತ್ತೆತ್ತಿ ದಾನ ಮಾಡಿ ಆ ಬಳಿಕವೇ ಅದನ್ನು ಸ್ವಂತ ಉಪಯೋಗಕ್ಕೋ ವ್ಯಾಪಾರಕ್ಕೋ ಬಳಸುತ್ತಾರೆ. ಹಂಚಿಕೊಂದು ಬದುಕುವ ಸುಂದರ ಸಂಸ್ಕೃತಿ ಇಲ್ಲಿ ಎದ್ದು ಕಾಣುತ್ತದೆ. ಇದಲ್ಲದೆ ಕೃಷಿಯಲ್ಲಿ ಸಹಾಯಕವಾಗುವಂತಹ ನೇಗಿಲು, ಗುದ್ದಲಿ ಮುಂತಾದವುಗಳಿಗೆ, ಭೂಮಿಗೆ ಹಾಗೂ ಗೋವು, ಎತ್ತುಗಳಿಗೆ ಪೂಜೆಮಾಡಿ ಆರತಿ ಎತ್ತಲಾಗುತ್ತದೆ. ಗೋವು ಮತ್ತು ಎತ್ತುಗಳ ಹಣೆಗೆ ಅರಸಿನಕುಂಕುಮಗಳನ್ನು ಹಚ್ಚಿ, ಕೊರಳಿಗೆ ಹೂವಿನ ಹಾರಗಳನ್ನು, ಘಂಟೆಗಳನ್ನು ಕಟ್ಟಿ, ಕೊಂಬುಗಳಿಗೆ ಬಣ್ನದ ಬಟ್ಟೆಗಳನ್ನು ಗೆಜ್ಜೆಗಳನ್ನು ಕಟ್ಟಿ ಮುದ್ದಾಗಿ ಅಲಂಕರಿಸಿ ಸಾಯಂಕಾಲದ ಹೊತ್ತು ಬೀದಿಗಳಲ್ಲಿ ಮೆರವಣಿಗೆ ಒಯ್ಯುತ್ತಾರೆ. ಎಲ್ಲರೂ ಆರತಿ ಎತ್ತಿ ಬೆಲ್ಲ ತಿನಿಸಿ ಗೋವು ಮತ್ತು ಎತ್ತ್ತುಗಳನ್ನು ಪೂಜಿಸುತ್ತಾರೆ. ಇದಲ್ಲದೆ ಗೋವುಗಳನ್ನು ಕೆಂಡ ಹಾಯಿಸುವ ಪದ್ಧತಿಯೂ ಇದೆ. ನಗರದ ಜನರಿಗೆ ಇದು ಅನಾಗರೀಕವಾಗಿ ತೋರಬಹುದೇನೊ ಆದರೆ ಹಳ್ಳಿಜನರ ಪಾಲಿಗೆ ಇದೊಂದು ಅನಾದಿಯ ಪದ್ಧತಿಯಾಗಿ ಬೆಳೆದು ಬಂದಿದೆ.
ಸಂಕ್ರಾಂತಿಯಂದು ಅಭ್ಯಂಗ-ಸ್ನಾನ ಮಾಡಿ ಹುಗ್ಗಿಯ ಪಾತ್ರೆಗೆ ಅರಸಿನದ ಗಿಡವನ್ನು ಸುತ್ತಿ ಕಟ್ಟಿ ಧಾನ್ಯಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಅಂತೆಯೇ ಸೂರ್ಯನನ್ನೂ ಹಾಗೂ ಶಿವ, ಕುಲದೇವತೆಗಳನ್ನು ಪೂಜಿಸಲಾಗುತ್ತದೆ. ಸಂಕ್ರಾಂತಿಯ ವಿಶೇಷ ಎಂದರೆ ಎಳ್ಳು ಬೀರುವುದು. ಎಳ್ಳು, ಬೆಲ್ಲ ಕೊಬ್ಬರಿ, ಕಡಲೆಕಾಯಿ, ಮುಂತಾದುವನ್ನು ಉರಿದು ಬೆರೆಸಿ ಅದನ್ನು ಜೀರಿಗೆ ಪಪ್ಪರ್ಮಿಂಟ್, ಕಬ್ಬು, ಹಣ್ಣು ಹಾಗೂ ಸಕ್ಕರೆ ಅಚ್ಚಿನೊ ಜೊತೆಗೆ ತಾಂಬೂಲದಲ್ಲಿಟ್ಟು ನೀಡುವುದು ಮೈಸುಋ ರಾಜ್ಯದಲ್ಲಿ ಕಾಣುವ ಸರ್ವೇಸಾಮಾನ್ಯ ದೃಶ್ಯ. ’ಎಳ್ಳು ಕೊಟ್ಟು ಒಳ್ಳೆ ಮಾತನಾಡು’ ಎನ್ನುವ ಮಾತೇ ಇದೆ. ಮಾಗಿಯ ಚಳಿ ಆಗ ತಾನೆ ಕಳೆಯುತ್ತಿರುವಾಗ ಈ ಎಲ್ಲ ಪದಾರ್ಥಗಳ ಸೇವನೆ ಮೈಯಲ್ಲಿ ತೈಲಾಂಶವನ್ನು ಪಿತ್ತಹರಣವನ್ನೂ ಮಾಡಿ ಆರೋಗ್ಯವನ್ನು ವರ್ಧಿಸುತ್ತವೆ ಎನ್ನುವುದು ತಿಳಿದ ವಿಷಯವೆ.
ರಥಸಪ್ತಮಿಯೂ ಮೈಸೂರುರಾಜ್ಯದ ಹಲವು ಮನೆತನಗಳಲ್ಲಿ ಆಚಾರದಲ್ಲಿರುವ ಹಬ್ಬ. ಮನೆಯಂಗಳದಲ್ಲಿ ಬಾಗಿಲ ಬಳಿ ರಂಗೋಲಿಯಿಂದ ರಥವನ್ನು ರಚಿಸಿ ಅದರ ಪಕ್ಕ ಸೂರ್ಯ ಚಂದ್ರರನ್ನು ರಚಿಸಿ ಪೂಜಿಸಲಾಗುತ್ತದೆ. ಸೂರ್ಯನಮಸ್ಕಾರ, ದಾನ, ಜಪ ಮುಂತಾದ ಕಲಾಪಗಳು ನಡೆಯುತ್ತವೆ. ಕಾರ್ಯಾರಂಭಕ್ಕೆ ಇದು ಶುಭದಿನವೆಂದೂ ಮನ್ನಿಸಲಾಗುತ್ತದೆ.
ಮಹಾಶಿವರಾತ್ರಿ ಮಾಘಮಾಸದ ಅತ್ಯಂತ ಪ್ತ್ರಶಸ್ತ ಹಬ್ಬ. ಇದು ತ್ಯಾಗ, ಸಂಯಮ, ಯೋಗಗಳ ಸಂಕೇತವಾಗಿದ್ದು ಈ ಹಬ್ಬದಲ್ಲಿ ಭೋಜನ, ಸಡಗರವಿರದು. ಬದಲಾಗಿ ಉಪವಾಸ, ಪೂಜೆ, ಜಪ ಹಾಗೂ ಜಾಗರಣೆಗಳು ಜರುಗುತ್ತವೆ. ರಾತ್ರಿಯನ್ನು ನಾಲ್ಕು ಯಾಮಗಳ ಪೂಜೆ, ರುದ್ರಾಭಿಷೇಕಗಳನ್ನು ಮಾಡುತ್ತ ಅಥವಾ ಯಕ್ಷಗಾನವನ್ನು ವೀಕ್ಷಿಸುತ್ತ, ಭಜನೆ, ನಾಟಕ, ದೇಗುಲ ಸಂದರ್ಶನ, ಧ್ಯಾನ ಮುಂತಾದ ಕಲಾಪಗಳಲ್ಲಿ ತೊಡಗುತ್ತ ಜಾಗರಣೆ ಮಾಡಲಾಗುತ್ತದೆ. ಭೋಗಪರತೆ, ವಿಲಾಸ, ಪಾಶ್ಚಾತ್ಯರ ಅನುಕರಣೆ, ನಾಗರೀಕತೆಯ ಒಣಜಂಭಗಳು ಅದೆಷ್ಟೇ ಜನಮಾನಸವನ್ನು ಹೊಕ್ಕಿದ್ದರೂ, ಇಂದಿಗೂ ಶ್ರಾದ್ಧಾಭಕ್ತಿಗಳಿಂದ ಉಪವಾಸ-ಜಾಗರಣೆಗಳನ್ನು ಪಾಲಿಸಿಕೊಂಡು ಬರುತ್ತಿರುವ ಅಸಂಖ್ಯಾತ ಭಕ್ತರಿದ್ದೇ ಇದ್ದಾರೆ ಎನ್ನುವುದು ಸನಾತನ ಸಂಸ್ಕೃತಿಯ ಹಿರಿಯ ಪ್ರಭಾವವನ್ನು ತೋರಿಸುತ್ತದೆ.      
ಬೆಂಗಳೂರಿನ ಕರಗ ಚಿತ್ರಾಪೂರ್ಣಮಿಯಂದು ನಡೇಯುವ ಪ್ರಸಿದ್ಧ ಉತ್ಸವ. ತಿಗಳರ ಜನಾಂಗದ ಪೂಜಾರಿಯು. ೧೦ ದಿವಸಗಲ ಕಾಲ ಕಟ್ಃಈಣ ವ್ರತಧಾರಣೆ ಮಾಡಿದ್ದು, ಆ ಬಳಿಕ ಭಾರದ ಕರಗವನ್ನು, ಕೈ ಅಥವಾ ಬೇರಾವುದೇ ಆಸರೆಯಿಲ್ಲದೆ ತಲೆಯ ಮೇಲೆ ಹೊತ್ತು ಕುಣಿಯುತ್ತ ಊರ ಬೀದಿಗಳಲ್ಲಿ ದೀರ್ಘ ಮೆರವಣಿಗೆ ಹೋಗುತಾನೆ. ಅರ್ಧರಾತ್ರಿ ಪ್ರಾರಂಭವಾಗಿ ಪ್ರಾತಃ ಕಾಲದವರೆಗೂ ಮುಂದುವರೆಯುವ ಬೆರಗುಗೊಳಿಸುವ ಈ ಕರಗವನ್ನು ವೀಕ್ಷಿಸಲು ವರ್ಷವರ್ಷವೂ ಜನಸ್ತೋಮವೇ ಸೇರುತ್ತದೆ. ಬೆಂಗಳೂರಿನ ಗ್ರಾಮಂತರ ಹಾಗೂ ಸುತ್ತ ಮುತ್ತಲ ಊರುಗಳಲ್ಲೂ ಇಂತಹದ್ದೇ ಚಿಕ್ಕ ಕರಗಗಳು ನಡೆಯುತ್ತ ಬಂದಿವೆ.
ಇವುಗಳಲ್ಲದೆ ಹುಣ್ಣಿಮೆಗಳಂದು ಅಥವಾ ಯಾವುದೆ ಅನುಕೂಲದ ದಿನಗಳಂದು ಮಾಡುವ ಸತ್ಯನಾರಾಯಣ ಪೂಜೆ ಬಹಳ ಜನಪ್ರಿಯ, ಮೈಸೂರು ಸೀಮೆಯಲ್ಲಿ ಮದುವೆಯಾದ ಅಥವಾ ಮನೆ ಕಟ್ಟಿದ ತಕ್ಷಣವೇ ಮೊದಲು ಮಾಡುವುದು ಸತ್ಯನಾರಾಯಣ ಪೂಜೆಯನ್ನೇ. ’ಸತ್ಯನಾರಾಯಣನ ಪೂಜೆ ನಡೆಯುತ್ತಿದೆ ಎಂದು ತಿಳಿದಾಗ, ಕರೆದರೂ ಕರೆಯದಿದ್ದರೂ ಹೋಗಬೇಕು’ ಎನ್ನುವ ಮಾತು ಅದರ ಕುರಿತಾದ ಅಮಿತ-ಶ್ರದ್ಧೆಯನ್ನು ಬಿಂಬಿಸುತ್ತದೆ. ಅಲ್ಲಿ ಕಡ್ಡಾಯವಾಗಿ ಮಾಡುವ ಸಜ್ಜಿಗೆ ನೈವೇದ್ಯದ ಪ್ರಸಾದವಂತೂ ತುಂಬ ಜನಪ್ರಿಯ.
ಪ್ರತಿ ತಿಂಗಳ ಕೃಷ್ಣ ಚತುರ್ಥಿಗಳಂದು ದಿನವಿಡೀ ಉಪವಾಸ ಮಾಡಿ ಪ್ರದೋಷಕಾಲದಲ್ಲಿ ಸಂಕಷ್ಟಹರ-ಗಣಪತಿಯ ಪೂಜೆ ಮಾಡಿ, ಚಂದ್ರ್ರ್ರನನ್ನು ನೋಡಿ ಆ ಬಳಿಕವೇ ಆಹಾರವನ್ನು ಸೇವಿಸುವ ಪದ್ಧತಿ ಇಂದಿಗೂ ಬಹಳ ಜನರಲ್ಲಿ ಕಾಣಬರುತ್ತದೆ.
ಇದಲ್ಲದೆ ಮಾಘ ಭಾನುವಾರಗಳಂದು ಸೂರ್ಯಪೂಜೆ ಮಾಡಿಸುವುದು, ಮಾಘಮಾಸದಲ್ಲಿ ತೀರ್ಥಸ್ನಾನಕ್ಕಾಗಿ ಯಾತ್ರೆ ಹೋಗುವುದು, ಹದಿನಾರು-ಸೋಮವಾರಗಳ ವ್ರತವನ್ನು ಕೈಗೊಳ್ಳುವುದು, ಶನಿವಾರ, ಸೋಮವಾರಗಳಂದು ವಿಷ್ಣು ಹಾಗೂ ಶಿವ ದೇವರುಗಳಿಗಾಗಿ ಉಪವಾಸ ಮಾಡುವುದು, ಗುರುವಾರಗಳಂದು ರಾಯರಿಗಾಗಿಯೋ, ತಮ್ಮ ಕುಲದ ಅಥವಾ ದೀಕ್ಷಾ ಗುರುಗಳ ಹೆಸರಲ್ಲಿ ಉಪವಾಸ, ಪಾರಾಯಣ ಅಥವಾ ಭಜನಾದಿಗಳನ್ನು ಮಾಡುವುದೂ ಮೈಸೂರು ಸೀಮೆಯ ಜನತೆಯಲ್ಲಿ ಕಾಣಬರುವ ಸಾಮಾನ್ಯ ಆಚಾರಗಳು. ಶ್ರಾವಣಮಾಸದಲ್ಲಿ ವಿಷ್ಣುಪರ ಪೂಜೆ ಪಾರಾಯಣಗಳನ್ನು ಮಾಡುವುದು, ಗಂಡುಮಕ್ಕಳು ಮೂರುನಾಮಗಳನ್ನು ಧರಿಸಿ ಶ್ರಾವಣಶನಿವಾರಗಳಂದು ಧಾನ್ಯಗಳ ಭಿಕ್ಷೆಯನ್ನು ತರುವ ಪದ್ಧತಿ ಗ್ರಾಮಗಳಲ್ಲಂತೂ ತಕ್ಕ ಮಟ್ಟಿಗೆ ಇಂದಿಗೂ ಉಳಿದುಬಂದಿದೆ. ಶರನ್ನವರಾತ್ರದಲ್ಲಿ ದೇವೀ ಮಾಹಾತ್ಮ್ಯದ ಪಾರಾಯಣ ಮಾಡಿ, ಸುಮಂಗಲಿಯರಿಗೆ ಸೀರೆ, ಕುಪ್ಪಸ, ಭೋಜನಾದಿಗಳನ್ನು ನೀಡುವುದು ಇತ್ಯಾದಿಗಳು ಜನಪ್ರಿಯ ಆಚಾರಗಳು. ಎಷ್ಟೋ ಮನೆತನಗಳಲ್ಲಿ ಮನೆಯ ಹಿರಿಯ ಹೆಂಗಸರು ಸೊಸೆ ಅಥವಾ ನವವಧುಗಳಿಗೆ ಗೌರಿಪಂಚಾಕ್ಷರೀ ಮಂತ್ರವನ್ನು ಉಪದೇಶ ಮಾಡುವ ಪದ್ಧತಿಯನ್ನೂ ಇಟ್ಟುಕೊಂಡಿದ್ದಾರೆ.
ಲಲಿತಕಲೆಗಳು
ಮೈಸೂರು ಸೀಮೆಯಲ್ಲಿ ಅರಳಿದ ಕಲಾಪ್ರಕಾರಗಳು ಅಸಂಖ್ಯಾತ. ಅರಮೆನೆಯ ಪೋಷಣೆಯಲ್ಲಿ ಶಾಸ್ತ್ರೀಯ ಸಂಗೀತ ನೃತ್ಯಗಳು ಒಳ್ಳೆಯ ಪೋಷಣೆಯನ್ನು ಪಡೆದವು. ದಾಕ್ಷಿಣಾತ್ಯ ಸಂಗೀತ ಹಾಗೂ ಭರತನಾಟ್ಯಗಳಲ್ಲಿ ತಂಜಾವೂರು ಶೈಲಿ ಹಾಗೂ ಮೈಸೂಋ ಶೈಲಿ ಎನ್ನುವ ಪ್ರಕಾರಗಳೆ ಹುಟ್ಟಿವೆ ಎಂದ ಮೇಲೆ ಅದೆಷ್ಟು ಮನ್ನಣೆ ಸಂದಿರಬಹುದೆಂದು ಊಹಿಸಬಹುದು. ನಮ್ಮ ಲಲಿತಕಲೆಗಳನ್ನು ಪೋಷಿಸಿ ಬೆಳೆಸಿದವರಲ್ಲಿ ದೇವದಾಸಿ ಜನಾಂಗವು ಪ್ರಮುಖವೆನಿಸುತ್ತದೆ. ಪ್ರಾಚೀನಕಾಲದಿಂದ ಹಿಡಿದು ಮಧ್ಯಕಾಲದವರೆಗೂ ಎಲ್ಲ ವಿಶೇಷ ಉತ್ಸವಗಳಲ್ಲಿ ಗೀತ ನೃತ್ಯಸೇವೆಗಳನ್ನು ಸಲ್ಲಿಸುತ್ತಿದ್ದವರು ಅವರೇ. ಆದರೆ ಭಾರತೀಯ ಸಂಸ್ಕೃತಿವಿರೋಧಿ ಧೋರಣೆಯ ಪರಕೀಯ ಆಡಳಿತಗಾರರ ಕಾಲದಲ್ಲಿ ಈ ದೇವದಾಸಿಯರ ಸ್ಥಾನ ಮಾನಗಳು ಕುಸಿದು, ಅವರ ಕಲೆ ಪೋಷಣೆಯಿಲ್ಲದೆ ಬಡವಾಗುತ್ತ ಬಂದು ಅವರೆಲ್ಲ ಕೇವಲ ಭೋಗದ ಬೊಂಬೆಗಳಾಗಿ ಉಳಿಯುತ್ತ ಬಂದರು ಎನ್ನುವುದು ಶೋಚನೀಯ ಸಂಗತಿ.
ಮೈಸೂರು ಸೀಮೆಯ ಜಾನಪದ ಕಲೆಯಂತೂ ಅತ್ಯಂತ ಸ್ವೋಪಜ್ಞವೂ, ಸರಳ- ಸುಂದರವೂ, ಹೃದಯಸ್ಪರ್ಷಿಯೂ ಆಗಿ ಬೇಳೆದಿದೆ.  
ಜಾನಪದ ಸಂಗೀತಕ್ಕೆ ತನ್ನದೇ ಆದ ಸ್ವಾರಸ್ಯಕರ ರುಚಿ ಹಾಗೂ ಸ್ವರೂಪಗಳಿವೆ. ರಾಗಿ ಬೀಸುವ ಹಾಡುಗಳು, ಸಂಪ್ರದಯದ ಹಾಡುಗಳು, ತವರಿನ ನೆನಪಿನ ಹಾಡುಗಳು, ದೇವರ ಸ್ತುತಿಗಳು, ಆರತಿ ಹಾಡು, ವರ ಬೇಡುವ ಹಾಡು, ನಿಸರ್ಗವನ್ನು ಬಣ್ಣಿಸುವ ಹಾಡುಗಳು, ವಾತ್ಸಲ್ಯ-ಪ್ರೇಮ-ಸ್ನೇಹ-ದುಃಖ ಮೂಂತಾದ ಭಾವಗಳನ್ನು ಬಿಂಬಿಸುವ ಹಾಡುಗಳು, ಜಾತ್ರೆ-ಉತ್ಸವಗಳ ಹಾಡುಗಳು, ಮಗುವಿಗೆ ಉಣಿಸುವ ಹಾಡು, ಮಲಗಿಸುವ ಹಾಡು, ಹಸೆಯೇರಿದ ಮಧುಮಕ್ಕಳನ್ನು ಹರಸುವ ಹಾಡು, ನೀತಿ ಪದಗಳು, ತತ್ವಪದಗಳು, ಹೀಗೆ ಮುಗಿಯದ ಪಟ್ಟಿ---ಯಾವ ಶಾಸ್ತ್ರೀಯ ನಿಯಮಗಳ ಸಂಸ್ಕಾರಗೊಳಗಾಗದಿದ್ದರೂ ತನ್ನದೇ ಆದ ರಸವಿಶೇಷವನ್ನು ತಳೆದು ಬೆಳೆದ ಈ ಹಾಡುಗಳು ಇಂದಿಗೂ ಜನರ ನಾಲಿಗೆಗಳಲ್ಲಿ ನಲಿದುಲಿದು ನರ್ತಿಸುತ್ತವೆ.
ಇನ್ನು ಜಾನಪದ ನೃತ್ಯಗಳ ಪೈಕೆ ಕೋಲಾಟ, ಡೊಳ್ಳುಕುಣಿತ, ಪೂಜಾಕುಣಿತ, ನಂದಿಗೋಲು ಕುಣಿತ, ವೀರಭದ್ರಕುಣಿತ, ಕಂಸಾಲೆ, ಮುಂತಾದ ಹತ್ತು ಹಲವು ಪ್ರಕಾರಗಳು ಇಂದಿಗೂ ಗ್ರಾಮ ಹಾಗೂ ನಗರಗಳ ಪ್ರಸಿದ್ಧ ಜಾತ್ರೆಗಳಲ್ಲಿ ವಿಜೃಂಭಿಸುತ್ತವೆ. ಇದಲ್ಲದೆ ಬಗೆ ಬಗೆಯ ರಂಗೋಲಿಗಳು, ದೀಪ ಜೋಡನೆಯ ಕಲೆ, ಉಯ್ಯಾಲೆಯಾಟ, ಕೆಸರಾಟ, ಕುಸ್ತಿ, ಎತ್ತಿನಗಾಡಿ ಸ್ಪರ್ಧೆ, ಕೆಂಡ ಹಾಯುವ ರೋಮಾಂಚಕ ಆಟ, ಲಾಟಿ ಬೀಸೋ ಆಟ, ಈಜು, ಮೊಸರು-ಮಡಿಕೆ ಒಡೆಯುವ ಆಟ ಮೂಂತಾದ ಅನೇಕಾನೇಕ ಕ್ರೀಡಾವಿನೋದಗಳು ಸ್ಥಳೀಯ ಹಾಗೂ ಋತುಸಂಬಂಧಿ ಉತ್ಸವಗಳೊಡನೆ ಬೆರೆತು ಆನಂದವನ್ನು ಕೊಡುತ್ತವೆ.
ಶಿಲ್ಪಕಲೆಯಲ್ಲೂ ಮೈಸೂರು ಸೀಮೆಯು ಹಿಂದೆ ಬಿದ್ದಿಲ್ಲ. ಇಲ್ಲಿನ ದೇಗುಲ ಮಠ ಮಂಟಪಗಳ ನಿರ್ಮಾಣದ ಶೈಲಿಯಲ್ಲಿ ಸ್ವಂತಿಕೆಯಿದೆ. ಹೆಚ್ಚಾಗಿ ಕೃಷ್ಣ ಸಾಲಿಗ್ರಮಶಿಲೆ ಅಥವಾ ಬಳಪದ ಕಲ್ಲಿನ ಕೆತ್ತನೆಗಳನ್ನು ಒಳಗೊಂಡ ಹಲವು ಪ್ರಾಚೀನ ದೇಗುಲಗಳನ್ನು ನೋಡಬಹುದು. ಬೇಳೂರು ಹಳೇಬೀಡು, ಮೈಸೂರಿನ ಬಳಿಯ ಸೋಮನಾಥಪುರ, ತೆರಿಕೆರೆಯ ಬಳಿಯ ಅರ್ಕೇಶ್ವರ, ಹರಿಹರದ ಹರಿಹರೇಶ್ವರ ಮೂಂತಾದ ಹೊಯ್ಸಳರ ನಿರ್ಮಿತಿಗಳು ಜಗನ್ಮಾನ್ಯವಾದ ಶಿಲ್ಪಕಾಲವಿಶೇಷಗಳೆ ಆಗಿವೆ. ಇನ್ನು ಜೈನರ ಬಸಡಿಗಳು, ಅಲ್ಲಲ್ಲಿ ಕಾಣುವ ಬೌದ್ಧ ವಿಹಾರಗಳು-ಸ್ತೂಪಗಳು ತಮ್ಮದೇ ಆದ ಚಾಪನ್ನು ಮೂಡಿಸಿವೆ. ತಲಕಾಡಿನ ದೇಗುಲಗಳು, ನಂಜನಗೂಡು, ಚಾಮುಂಡೀಬೆಟ್ಟ, ನಂದಿಬೆಟ್ಟದ ತಪ್ಪಲಿನ ಭೋಗನಂದೀಶ್ವರ, ಮೈಸೂರು, ಬೆಂಗಳೂರು, ಕೋಲಾರ ಮುಂತಾದ ಇನ್ನು ಹಲವು ಜಿಲ್ಲಗಳಲ್ಲಿ ಕಾಣುವ ಪ್ರಾಚೀನ ಹಾಗೂ ಮಧ್ಯಕಾಲೀನ ದೇಗುಲಗಳು, ಅವುಗಳ ಶಿಲ್ಪವಿಶೇಷಗಳು ಈ ಪ್ರಾಂತದ ಜನರ ಕಲಾಭಿಜ್ಞತೆಗೆ ಕನ್ನಡಿ ಹಿಡಿದಿವೆ. ಶ್ರಾವಣಬೆಳಗೋಳದ ಗೊಮ್ಮಟದೇವನಂತೂ ತನ್ನ ಎತ್ತರಭಿತ್ತರಗಳಿಂದಲೂ, ಸೌಮ್ಯ ದಿವ್ಯ ಆಕರ್ಷಣೆಯಿಂದಲೂ ವಿಶ್ವಕೀರ್ತಿಶಿಖರಕ್ಕೇರಿದ್ದಾನೆ.
ವರ್ಣಚಿತ್ರಗಳನ್ನು ರಚಿಸಿ ಅದರ ಮೇಲೆ ಆಲಂಕಾರಿಕವಾಗಿ ಚಿನ್ನದ ತೆಳುವಾದ ಪದರಗಳನ್ನು ಅಂತಿಸಿ ಮಾಡುವ ’ಮೈಸೂರು ಅರಮನೆಯ ಚಿತ್ರಕಲೆ’ ಎನ್ನುವ ಹೆಸರಿನೆ ವಿಶೇಷ ಚಿತ್ರಶೈಲಿಯೇ ಬೆಳೆದು ನಿಂತಿದೆ. ಇವುಗಳಲ್ಲಿ ಪ್ರಸಿದ್ಧ ದೇವ ದೇವತೆಗಳ ಹಾಗೂ ಪೌರಾಣಿಕ ಕಥಾಪ್ರಸಂಗಗಳ ಚಿತ್ರಣವೇ ಹೆಚ್ಚು. ಬೆಲೆಬಾಳುವ ಈ ಕಲೆಯನ್ನು ಕಲಿಯುವ ಕಲಿಸುವ ಸಡಗರವು ಕಡಲಾಚೆಯ ಕಲಾರಸಿಕರನ್ನೂ ತಲುಪಿದೆ ಎಂದ ಮೇಲೆ ಇದರ ಕೀರ್ತಿಯ ವ್ಯಾಪಕತೆಯನ್ನು ಊಹಿಸಬಹುದು. ಮೈಸೂರಿನ ಗಂಜೀಫಾ ಕಲೆಯೂ ಸಾಕಷ್ಟು ಪ್ರಸಿದ್ಧವೇ. ಇದಲ್ಲದೆ ಗಂಧ ಹಾಗೂ ದಂತದ ಕೆತ್ತನೆಯ ಕೆಲಸವಂತೂ ವಿಶ್ವಮಟ್ಟದಲ್ಲಿ ಅಪಾರ ಕೀರ್ತಿಯನ್ನು ಪಡೆದಿರುವ ಕಲಾಪ್ರಕಾರ.
ಮೈಸೂರಿನ ವೀಳ್ಯ, ಮಲ್ಲಿಗೆ, ಅಗರಬತ್ತಿ, ಗಂಧದ ಎಣ್ಣೆ, ಸಾಬೂನು ಮುಂತಾದವು. ಮೈಸೂರು ರೇಶ್ಮೆ ಸೀರೆ, ನಂಜನಗೂಡಿನ ರಸಬಾಳೆ, ಕೊಡಗಿನ ಕಿತ್ತಳೆ, ಚನ್ನಪಟ್ಟಣದ ಬೊಂಬೆಗಳು, ಮುಂತಾದ ೨೦ಕ್ಕಿಂತ ಹೆಚ್ಚು ಉತ್ಪನ್ನಗಳು Geographical indication Tags ನ್ನು ಪಡೆದಿದ್ದು, ಭಾರತದಲ್ಲೇ ಅತಿ ಹೆಚ್ಚು (ಸುಮಾರು 28) GI Tagಗಳು ಕರ್ನಾಟಕಕ್ಕೆ, ಅದರಲ್ಲೂ ಮೈಸೂರು ಪ್ರಾಂತದ ಉತ್ಪನ್ನಗಳಿವೆ ಸಂದಿವೆ ಎನ್ನುವುದು ಹೆಮ್ಮೆಯ ವಿಷಯ. ಇದಲ್ಲದೆ ಬಗೆ ಬಗೆಯ ವಿನ್ಯಾಸಗಳಲ್ಲಿ ಬಿದಿರಿನ ಚಪ್ಪರಗಳನ್ನು ಕಟ್ಟುವ, ಬಗೆ ಬಗೆಯಾದ ಹೂವಿನ ಮಾಲೆಗಳನ್ನು ಕಟ್ಟುವ ಕಲಾಪ್ರಕಾರಗಳನ್ನೂ, ಸಾಂಪ್ರದಾಯಿಕ ವಾದ್ಯಗಳನ್ನು, ಪೂಜಾ ಸಾಮಗ್ರಿಯನ್ನೂ, ದೇವತಾ ಮೂರ್ತಿಗಳನ್ನೂ ತಯಾರಿಸುವ ವೃತ್ತಯನ್ನೇ ಜೀವನವನ್ನಾಗಿಸಿಕೊಂಡ ಜನಾಂಗಗಳು ಮನೆತನಗಳು ಶತಮಾನಗಳಿಂದ ಇದ್ದಾರೆ.
ಮೈಸೂರಿನ ಅಷ್ಟೇ ಅಲ್ಲ, ಭಾರತದ ಸಂಸ್ಕೃತಿಯನ್ನೂ, ಕಲೆಯನ್ನೂ ಬಹುಮಟ್ಟಿಗೆ ಪೋಷಿಸಿ ಬೆಳೆಸಿ ಉಳಿಸಿದ್ದು ಧಾರ್ಮಿಕ ಆಚಾರ ವಿಚಾರಗಳೆ ಎನ್ನುವುದು ಸತ್ಯ. ಸನಾತನ ಧರ್ಮ ಕೇವಲ ಒಂದು ಭೀತಿ-ನಂಬಿಕೆಗಳ ಶಾಸನವಾಗಿ ಉಸಿರುಗಟ್ಟಿಸದೆ, ಜಾತಿ-ವರ್ಣ-ಭೇದವೆನ್ನದೇ ಎಲ್ಲರಿಗೂ ತಮ್ಮ ಕಲೆ, ಸಂಸ್ಕೃತಿ ಹಾಗೂ ವೃತ್ತಿಗಳನ್ನು ಧರ್ಮದ ವೇದಿಕೆಯ ಮೇಲೆ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸುತ್ತ ಬಂದಿದೆ. ಹಾಗಾಗಿ ’ನಮ್ಮ ಮನೆತನದ ವಿನಮ್ರ ಸೇವೆ’ ಎಂಬ ಭಾವದಿಂದ ಹೂ-ಕಟ್ಟುವವರು, ಬಡಗಿಯವರು, ಅಕ್ಕಸಾಲಿಗರು, ಬೆರಣಿ, ತಟ್ಟುವವರು, ಮಾಗೆಲಸದವರು, ಕೂಲಿಯವರು, ಒಕ್ಕಲಿಗರು, ಆಳುಗಳು, ಜಮೀಂದಾರರೂ, ದೇವದಾಸಿಯರು, ರಾಜಕುಲದವರೂ, ಪುರೋಹಿತವರ್ಗದವರೂ, ವರ್ತಕರೂ, ಕುಂಭಾರರೂ, ಇತ್ಯಾದಿ ಎಲ್ಲರೂ ಒಂದಲ್ಲ ಒಂದು ರೀತಿ ತಮ್ಮ ತಮ್ಮ ಊರ ಹಾಗೂ ಮನೆತನದ ದೇಗುಲ, ಮಠ ಹಾಗೂ ಜಾತ್ರೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತ ಬಂದಿದ್ದು ಈ ನಾಡಿನ ಧಾರ್ಮಿಕ ಪರಂಪರೆಯನ್ನು ಸುಂದರವೂ ಸಂಮೃದ್ಧವೂ ಆಗಿ ಕಂಗೊಳಿಸುವಂತೆ ಮಾಡಿದ್ದಾರೆ.