ಮಂಗಳವಾರ, ಜನವರಿ 3, 2012

ಕ್ಷೇತ್ರೇ ಕ್ಷೇತ್ರೇ ಧರ್ಮಂ ಕುರು---

ಕ್ಷೇತ್ರೇ ಕ್ಷೇತ್ರೇ ಧರ್ಮಂ ಕುರು---

ಇಂದೋರಿನ ಮಹಾರಣಿ ಅಹಲ್ಯಾಬಾಯಿ ಹೋಳ್ಕರ್ ಸದಾ ಜೀವರೂಪಿ ದೇವರ ಸೇವೆಯಲ್ಲಿ ತೊಡಗಿರುತ್ತಿದ್ದ ಮಹಾ ಸಾಧ್ವಿ. ಭಾರತದ ಹಲವಾರು ಪ್ರದೇಶಗಳಲ್ಲಿ, ವಿಶೇಷವಾಗಿ ತೀರ್ಥಕ್ಷೇತ್ರಗಳಲ್ಲಿ, ಯಾತ್ರಿಕರಿಗಾಗಿ, ನಿರಾಶ್ರಿತರಿಗಾಗಿ ಸಾರ್ವಜನಿಕರಿಗಾಗಿ ಅನೇಕಾನೇಕ ಧರ್ಮಛತ್ರಗಳನ್ನೂ, ನದೀಘಟ್ಟಗಳನ್ನೂ, ಹಾಗೂ ಸಕಲ ವಿಧದ ವಸ್ತು-ವಸತಿ-ಆಹರಗಳ ಅನುಕೂಲಗಳನ್ನು ಒದಗಿಸುವುದೇ ಅವಳ ಪಾಲಿಗೆ ಒಂದು ಜೀವನ ವ್ರತವಾಗಿತ್ತು. ಇಂದಿಗೂ ಅವಳ ಅಸಾಧಾರಣ ಧರ್ಮಕಾರ್ಯಗಳ ಪುರಾವೆಗಳು ಉತ್ತರ ಹಾಗೂ ಮಧ್ಯ ಭಾರತದ ಎಲ್ಲೆಡೆ ಕಾಣಬರುತ್ತವೆ.
ರಾಣಿಯ ಅರಮನೆಯಲ್ಲಿ ಪ್ರತಿದಿನವೂ ಭಗವದ್ಗೀತೆಯ ವಾಚನ ವ್ಯಾಖ್ಯಾನಗಳು ನಡೆಯುತ್ತಿದ್ದವು. ರಾಜಮನೆತನದವರೂ, ಸಭಾಸದರೂ ಸೇರೆ ಆಲಿಸುತ್ತಿದ್ದರು. ರಾಣಿ ಅಹಲ್ಯಾಬಾಯಿಯೂ ತಪ್ಪದೆ ಪ್ರತಿನಿತ್ಯವೂ ಉಪಸ್ಥಿತಳಿರುತ್ತಿದ್ದಳು. ಆದರೆ ಮೊದಲ ಶ್ಲೋಕದ ಮೊದಲ ಪಾದ- ಧರ್ಮ ಕ್ಷೇತ್ರೇ ಕುರುಕ್ಷೇತ್ರೇ— ಎಂಬ ಭಾಗವನ್ನು ಕೇಳಿ ಎದ್ದು ಹೊರಡುತ್ತಿದ್ದಳು. ಪ್ರತಿದಿನವೂ ಹೀಗೆಯೇ ಆಗುತ್ತಿತ್ತು. ರಾಣಿಯು ಎಂದೂ ಪೂರ್ಣವಾಗಿ ಗೀತಾಪ್ರವಚನವನ್ನು ಆಲಿಸಿಯೇ ಇಲ್ಲವಲ್ಲ ಎಂದು ಅಸಮಾಧಾನ ವಾಚಕರಿಗೆ.
ಕೊನೆಗೊಂದು ದಿನ ವಾಚಕರು ರಾಣಿಯಲ್ಲಿ ವಿನಂತಿಸಿದರು- “ಮಹಾರಾಣಿ, ದಿನಾಲು ನೀವು ಗೀತೆಯ ಮೊದಲ ಶ್ಲೋಕದ ಒಂದು ಪಾದವನ್ನಷ್ಟೇ ಕೇಳಿ ಹೊರಟುಬಿಡುತ್ತೀರಿ, ನಮಗಾಗಿ ಒಮ್ಮೆಯಾದರೂ ಸಂಪೂಣ ಪ್ರವಚನವನ್ನು ಆಲಿಸಬೇಕಾಗಿ ಕೋರಿಕೆ. ರಾಂಇ ಉತ್ತರಿಸಿದಳು- “ಪಂಡಿತರೆ, ನನಗೂ ಪೂರ್ಣವಾಗಿ ಆಲಿಸಬೇಕೆಂಬ ಆಸೆಯಿದೆ. ಆದರೆ ಏನು ಮಾಡಲಿ? ನೀವು ಧರ್ಮಕ್ಷೇತ್ರೇ ಕುರುಕ್ಷೇತ್ರೆ --- ಎಂದಾಗ ಕ್ಷೇತ್ರೇ ಕ್ಷೇತ್ರೇ ಧರ್ಮಂ ಕುರು--- (ಪ್ರತಿಕ್ಷೇತ್ರದಲ್ಲೂ ಧರ್ಮವನ್ನು ಮಾಡು) ಎಂಬ ಸಂದೇಶ ಸಿಗುತ್ತದೆ. ತಕ್ಷಣ ಧರ್ಮಕಾರ್ಯವನ್ನು ಮಾಡುವ ಸ್ಫೂರ್ತಿಯುಂಟಾಗುತ್ತದೆ. ನನ್ನ ಕರ್ತವ್ಯದ ಜೊತೆಗೇ ಸಾಧ್ಯವಾದಷ್ಟು ದಾನ-ಧರ್ಮಗಳನ್ನು ಮಾಡುವ ಸಲುವಾಗಿ ಎದ್ದು ಹೊರಡುತ್ತೇನೆ. ಅನ್ಯಥಾ ಭಾವಿಸಬೇಡಿ”.
ಅಹಲ್ಯಾಬಾಯಿಯ ಈ ಮಾತು ಎಷ್ಟು ಅರ್ಥಪೂರ್ಣ! ನಿಜಕ್ಕೂ ಭಗವದ್ಗೀತೆಯ ಸಂದೇಶಗಳಲ್ಲಿ ಇದೂ ಒಂದಲ್ಲವೆ? “ಸ್ವಧರ್ಮಪಾಲನೆ’ ಹಾಗೂ ’ಸರ್ವ-ಭೂತ-ಹಿತೇ ರತವಾಗಿರುವುದು, ಜಪ-ಧ್ಯಾನಾದಿ-ಪುರ್ಣ್ಯಶ್ರವಣಾದಿ ಕಲಾಪಗಳಷ್ಟೇ ಉನ್ನತಿಕಾರಕಗಳು ಎಂಬ ಕೃಷ್ಣಸಂದೇಶವನ್ನು ಮೊದಲ ಶ್ಲೋಕದಲ್ಲೇ ಅಹಲ್ಯಾಬಾಯಿ ಹೀಗೆ ಗುರುತಿಸಿಕೊಂಡಿದ್ದು ನಿಜಕ್ಕೂ ಸ್ವಾರಸ್ಯಕರ ಅಲ್ಲವೆ?!

ನುಡಿದಂತೆ ನಡೆದವರು

ನುಡಿದಂತೆ ನಡೆದವರು

ಪ್ರಾಮಾಣಿಕತೆಯೇ ಮೂರ್ತಿವೆತ್ತಂತಿದ್ದ ಶ್ರೀರಾಮಕೃಷ್ಣ ಪರಮಹಂಸರ ಜೀವನದ ಒಂದು ಪ್ರಸಂಗ ಇದು. ರಾಮಕೃಷ್ಣರ ಬಳಿಗೆ ಓರ್ವ ತಾಯಿ ಬಂದು ತನ್ನ ೪-೫ ವರ್ಷದ ಮಗುವನ್ನು ತೋರಿಸಿ ಹೇಳುತ್ತಾಳೆ- “ಮಹಾಶಯರೆ, ನನ್ನ ಮಗುವಿಗೆ ಆಯುರ್ವೇದ ಚಿಕಿತ್ಸೆಯನ್ನು ಮಾಡಿಸುತ್ತಿದ್ದೇವೆ. ವೈದ್ಯರು ಮಗುವಿಗೆ ಯಾವುದೇ ಸಿಹಿ ಪದಾರ್ಥವನ್ನು ಕೊಡುವಂತಿಲ್ಲ ಎಂದು ಪಥ್ಯ ವಿಧಿಸಿದ್ದಾರೆ. ಆದರೆ ಮಗು ಸಿಹಿ ಬೇಕೆಂದು ಹಟ ಮಾಡುತ್ತದೆ. ನೀವು ಸಾಧುಗಳು. ಉಪಾಯದಿಂದ ಬುದ್ಧಿಹೇಳಿ ದಯವಿಟ್ಟು ಮಗುವನ್ನು ಒಪ್ಪಿಸಬೇಕು”. ರಾಮಕೃಷ್ಣರು ಉತ್ತರಿಸಿದರು- “ಮೂರು ದಿನದ ಬಳಿಕ ಬಾರಮ್ಮ, ಆಗ ನೋಡೋಣ”. ಆ ಮಹಿಳೆ ಹಿಂದಿರುಗಿ ಮೂರು ದಿನಗಳ ಬಳಿಕ ಮಗುವನ್ನು ಕರೆ ತಂದಳು. ರಾಮಕೃಷ್ಣರು ಮಗುವನ್ನು ಆತ್ಮೀಯವಾಗಿ ಮಾತನಾಡಿಸಿ ಸಿಹಿ ತಿನ್ನದಿರುವಂತೆ ಮನವೊಲಿಸಿದರು. ಆಕೆ ಕೇಳಿದಳು- “ಈ ಮಾತುಗಳನ್ನು ಅಂದೇ ಹೇಳಬಹುದಿತ್ತಲ್ಲ! ಮೂರು ದಿನಗಳ ಬಳಿಕ ಬರುವಂತೆ ಹೇಳಿದ್ದೇಕೆ? ಎಂದು. ರಾಮಕೃಷ್ಣರು ಉತ್ತರಿಸಿದರು- “ಅಮ್ಮ, ನನಗೇ ಸ್ವತಃ ಸಿಹಿತಿನಿಸು ಎಂದರೆ ಪಂಚಪ್ರಾಣ. ದಿನಾಲು ಕಾಳಿಮಂದಿರದ ಪ್ರಸಾದರೂಪದ ಸಿಹಿಯನ್ನು ಸವಿಯುತ್ತಲೇ ಇರುತ್ತೇನೆ. ಹೀಗಿರುವಾಗ, ’ಸಿಹಿ ತಿನ್ನಬಾರದು” ಎಂದು ಬೇರೆಯವರಿಗೆ ಬುದ್ಧಿ ಹೇಳುವ ಅಧಿಕಾರ ನನಗಿಲ್ಲ. ಆದ್ದರಿಂದಲೇ ಮೂರು ದಿವಸ ನಾನು ಸ್ವತಃ ಸಿಹಿಯನ್ನು ಸಂಪೂರ್ಣ ವರ್ಜಿಸಿ ನೋಡಿದೆ. ನನ್ನಿಂದ ಸಾಧ್ಯವಾಯಿತು. ಆಮೇಲೆಯೇ ನಿನ್ನ ಮಗುವಿಗೂ ಬುದ್ಧಿ ಹೇಳಲು ಮುಂದಾದೆ, ಅಷ್ಟೆ!” ಎಂತಹ ಪ್ರಾಮಾಣಿಕತೆ! “ಎಲ್ಲರುಂ ಸಾಧುಗಳೆ ಎಲ್ಲರುಂ ಬೋಧಕರೆ ಜೀವನ ಪರೀಕ್ಷೆಬಂದಿದಿರು ನಿಲುವನಕ---“ ಎಂಬ ಕಗ್ಗದ ಮಾತಂತೆ ನಮ್ಮಲ್ಲಿ ಪರೋಪದೇಶ ಪಾಂದಿತ್ಯಕ್ಕೇನೂ ಕೊರತೆ ಇಲ್ಲ. ಆದರೆ ಹೇಳುವ ವಿಚಾರವನ್ನು ನಾವು ಸ್ವತಃ ಎಷ್ಟರ ಮಟ್ಟಿಗೆ ಪಾಲಿಸುತ್ತೇವೆ ಎನ್ನುವ ಕಡೆಗೆ ನಮ್ಮ ಗಮನವೇ ಇರುವುದಿಲ್ಲ!