ಮಂಗಳವಾರ, ಜನವರಿ 3, 2012

ನುಡಿದಂತೆ ನಡೆದವರು

ನುಡಿದಂತೆ ನಡೆದವರು

ಪ್ರಾಮಾಣಿಕತೆಯೇ ಮೂರ್ತಿವೆತ್ತಂತಿದ್ದ ಶ್ರೀರಾಮಕೃಷ್ಣ ಪರಮಹಂಸರ ಜೀವನದ ಒಂದು ಪ್ರಸಂಗ ಇದು. ರಾಮಕೃಷ್ಣರ ಬಳಿಗೆ ಓರ್ವ ತಾಯಿ ಬಂದು ತನ್ನ ೪-೫ ವರ್ಷದ ಮಗುವನ್ನು ತೋರಿಸಿ ಹೇಳುತ್ತಾಳೆ- “ಮಹಾಶಯರೆ, ನನ್ನ ಮಗುವಿಗೆ ಆಯುರ್ವೇದ ಚಿಕಿತ್ಸೆಯನ್ನು ಮಾಡಿಸುತ್ತಿದ್ದೇವೆ. ವೈದ್ಯರು ಮಗುವಿಗೆ ಯಾವುದೇ ಸಿಹಿ ಪದಾರ್ಥವನ್ನು ಕೊಡುವಂತಿಲ್ಲ ಎಂದು ಪಥ್ಯ ವಿಧಿಸಿದ್ದಾರೆ. ಆದರೆ ಮಗು ಸಿಹಿ ಬೇಕೆಂದು ಹಟ ಮಾಡುತ್ತದೆ. ನೀವು ಸಾಧುಗಳು. ಉಪಾಯದಿಂದ ಬುದ್ಧಿಹೇಳಿ ದಯವಿಟ್ಟು ಮಗುವನ್ನು ಒಪ್ಪಿಸಬೇಕು”. ರಾಮಕೃಷ್ಣರು ಉತ್ತರಿಸಿದರು- “ಮೂರು ದಿನದ ಬಳಿಕ ಬಾರಮ್ಮ, ಆಗ ನೋಡೋಣ”. ಆ ಮಹಿಳೆ ಹಿಂದಿರುಗಿ ಮೂರು ದಿನಗಳ ಬಳಿಕ ಮಗುವನ್ನು ಕರೆ ತಂದಳು. ರಾಮಕೃಷ್ಣರು ಮಗುವನ್ನು ಆತ್ಮೀಯವಾಗಿ ಮಾತನಾಡಿಸಿ ಸಿಹಿ ತಿನ್ನದಿರುವಂತೆ ಮನವೊಲಿಸಿದರು. ಆಕೆ ಕೇಳಿದಳು- “ಈ ಮಾತುಗಳನ್ನು ಅಂದೇ ಹೇಳಬಹುದಿತ್ತಲ್ಲ! ಮೂರು ದಿನಗಳ ಬಳಿಕ ಬರುವಂತೆ ಹೇಳಿದ್ದೇಕೆ? ಎಂದು. ರಾಮಕೃಷ್ಣರು ಉತ್ತರಿಸಿದರು- “ಅಮ್ಮ, ನನಗೇ ಸ್ವತಃ ಸಿಹಿತಿನಿಸು ಎಂದರೆ ಪಂಚಪ್ರಾಣ. ದಿನಾಲು ಕಾಳಿಮಂದಿರದ ಪ್ರಸಾದರೂಪದ ಸಿಹಿಯನ್ನು ಸವಿಯುತ್ತಲೇ ಇರುತ್ತೇನೆ. ಹೀಗಿರುವಾಗ, ’ಸಿಹಿ ತಿನ್ನಬಾರದು” ಎಂದು ಬೇರೆಯವರಿಗೆ ಬುದ್ಧಿ ಹೇಳುವ ಅಧಿಕಾರ ನನಗಿಲ್ಲ. ಆದ್ದರಿಂದಲೇ ಮೂರು ದಿವಸ ನಾನು ಸ್ವತಃ ಸಿಹಿಯನ್ನು ಸಂಪೂರ್ಣ ವರ್ಜಿಸಿ ನೋಡಿದೆ. ನನ್ನಿಂದ ಸಾಧ್ಯವಾಯಿತು. ಆಮೇಲೆಯೇ ನಿನ್ನ ಮಗುವಿಗೂ ಬುದ್ಧಿ ಹೇಳಲು ಮುಂದಾದೆ, ಅಷ್ಟೆ!” ಎಂತಹ ಪ್ರಾಮಾಣಿಕತೆ! “ಎಲ್ಲರುಂ ಸಾಧುಗಳೆ ಎಲ್ಲರುಂ ಬೋಧಕರೆ ಜೀವನ ಪರೀಕ್ಷೆಬಂದಿದಿರು ನಿಲುವನಕ---“ ಎಂಬ ಕಗ್ಗದ ಮಾತಂತೆ ನಮ್ಮಲ್ಲಿ ಪರೋಪದೇಶ ಪಾಂದಿತ್ಯಕ್ಕೇನೂ ಕೊರತೆ ಇಲ್ಲ. ಆದರೆ ಹೇಳುವ ವಿಚಾರವನ್ನು ನಾವು ಸ್ವತಃ ಎಷ್ಟರ ಮಟ್ಟಿಗೆ ಪಾಲಿಸುತ್ತೇವೆ ಎನ್ನುವ ಕಡೆಗೆ ನಮ್ಮ ಗಮನವೇ ಇರುವುದಿಲ್ಲ!

1 ಕಾಮೆಂಟ್‌: