ಸೋಮವಾರ, ಡಿಸೆಂಬರ್ 19, 2011

ಧ್ಯಾನದೆತ್ತರಕ್ಕೆ ಏರುವ ಮುನ್ನ ತಯ್ಯಾರಿ ಬೇಕಲ್ಲವೆ?

ಧ್ಯಾನದೆತ್ತರಕ್ಕೆ ಏರುವ ಮುನ್ನ ತಯ್ಯಾರಿ ಬೇಕಲ್ಲವೆ?

“ಧ್ಯಾನ ಮಾಡುವ” “ಮೆಡಿತೇಶನ್ ಕ್ಲಾಸ್ ಗೆ ಹೋಗುತ್ತೇವೆ” ಎನ್ನುವ ಟ್ರೆಂಡ್ ಎಲ್ಲೆಲ್ಲೂ ಕಾಣಬರುತ್ತಿದೆ. ನಿಜ, ನಾಗರೀಕತೆಯ ಯಾಂತ್ರಿಕತೆಯಿಂದ ಉಸುರುಗಟ್ಟಿ, ಹಣ, ವಸ್ತು, ದ್ರವ್ಯಗಳ ಜಡಜಗತ್ತಿನಲ್ಲಿ ನೀರಸತೆಯನ್ನು ಕಂಡವರಿಗೆ, ಧ್ಯಾನದ ಶಾಂತಿ ಆನಂದಗಳು ಬೇಕೆನಿಸುವುದು ಸಹಜವೆ. ಆದರೆ ಧ್ಯಾನ ಎಂದರೇನು? ಅದಕ್ಕೆ ಬೇಕಾದ ಮನೋಭೂಮಿಕೆ ಯಾವುದು? ಧ್ಯಾನದೆತ್ತರಕ್ಕೆ ಏರುವ ಮುನ್ನ ತಯ್ಯಾರಿ ಬೇಕಲ್ಲವೆ?
ಮನಸ್ಸು ’ಗಾಳಿಯಂತೆ ಹಿಡಿಯಲಾಗದಂತಹದ್ದು’ (ವಾಯೋರಿವ ಸುದುಷ್ಕರಂ) ಎನ್ನುತ್ತದೆ ಗೀತೆ. ಸುಮ್ಮನಿರುವುದು, ಅಥವಾ ಒಂದೇ ವಿಷಯದಲ್ಲಿ ತದೇಕವಾಗಿ ನಿಲ್ಲುವುದು ಇದಕ್ಕೆ ಕಷ್ಟಸಾಧ್ಯ. ಕಳೆದು ಹೋದ ಸುಖದುಃಖಗಳನ್ನೋ, ಅಥವಾ ಮುಂದೆ ಏನಾದೀತೆಂಬ ಆತಂಕವನ್ನೋ ಕಟ್ಟಿಕೊಂಡು ತೊಳಲಾಡುತ್ತದೆ. ಇಂತಹ ಮನಸ್ಸನ್ನು ಪಳಗಿಸಿ ಧ್ಯಾನದಲ್ಲಿ ತೊಡಗಿಸುವುದು ಒಂದು ಸಾಹಸವೇ ಸರಿ. ಧ್ಯಾನ ಸಾಧ್ಯವಾಗಬೇಕಾದರೆ, ಮನಸ್ಸು ತನ್ನ ಜಾಢ್ಯ, ಒರಟುತನ, ಬಹುಮುಖಗಮನಗಳನ್ನು ಬಿಟ್ಟು ಬಹಳ ಸೂಕ್ಷ್ಮವೂ ಸ್ಥಿರವೂ ಆಗಬೇಕು. ಆಗ ಮಾತ್ರ ಅಂತರ್ದೃಷ್ಟಿ ಬೆಳೆದು ಒಂದು ವಿಷಯದ ಆಳಕ್ಕಿಳಿದು ಧ್ಯಾನತಲ್ಲೀನವಾಗಲು ಸಾಧ್ಯ. ಆದರೆ ಈ ಚಂಚಲ ಮನಸ್ಸನ್ನು ಪಳಗಿಸಲು ಏನು ಮಾಡಬೇಕು, ಎಲ್ಲಿಂದ ಪ್ರಾರಂಭಿಸಬೇಕು? ಎನ್ನುವುದೇ ಪ್ರಶ್ನೆ.
ನಮ್ಮ ಪ್ರಾಜ್ಞರು ಮನಸ್ಸನ್ನೇ ವಿಶೇಷವಾಗಿ ಅಧ್ಯಯನ ಗೈದರು, ಅದರ ವಿವಿಧ ಭಾವ ವೈಕಾರ್ಯಗಳ ಹಿನ್ನಲೆ, ಅನಿವಾರ್ಯತೆ, ಪ್ರಚೋದನೆಗಳನ್ನು ಸಂಶೋಧಿಸಿದರು. ಒಟ್ಟಾರೆ ಅವರು ಕಂಡು ಕೊಂಡ ಸತ್ಯವೆಂದರೆ ಮನಸ್ಸನ್ನು ಏಕಾಏಕಿ ಮೇಲೇರಿಸಲಾಗದು, ಆದರೆ ಹಂತಹಂತವಾಗಿ ಸೂಕ್ಷ್ಮತ್ವದ ಎತ್ತರಕ್ಕೆ ಏರಿಸಬೇಕು. ಮನಸ್ಸನ್ನು ಮೊದಲು ಸ್ಥೂಲವಾದರೂ ಸುಂದರವೂ ಸುಸಂಸ್ಕೃತವೂ ಆದ ಸಾಹಿತ್ಯ, ಕಲೆ, ಸೇವೆ, ಲೋಕಸಂಗ್ರಹ ಮುಂತಾದ ರಚನಾತ್ಮಕ ಕಲಾಪಗಳಲ್ಲಿ ಹಾಗೂ ಉದಾತ್ತ ಚಿಂತನೆಗಳಲ್ಲಿ ತೊಡಗಿಸಬೇಕು. ತನ್ಮೂಲಕ ಅದು ಪಳಗಿ, ಸಂಸ್ಕೃತವಾಗಿ, ಉದಾತ್ತೀಕೃತವಾದಾಗ ಧ್ಯಾನ ಸುಲಭವಾಗುತ್ತ ಬರುತ್ತದೆ.
ಮನಸ್ಸಿನ ಸಂಸ್ಕಾರಕ್ಕಾಗಿಯೇ ನಮ್ಮ ಈ ಸನಾತನ ಸಂಸ್ಕೃತಿಯು ಹುಟ್ಟಿದ್ದು, ಬೆಳೆದದ್ದು, ಅರಳಿದ್ದು ಎನ್ನುವುದು ನಿಶ್ಚಯ. ಧರ್ಮ, ಸಂಗೀತ, ಕಲೆ, ಸೇವೆ, ಆತಿಥ್ಯ, ದೇಗುಲ ಪರಂಪರೆ, ಇತ್ಯಾದಿ ಎಲ್ಲ ಅಂಶಗಳು ಮನಸ್ಸಿನ ಪಾಕಕ್ಕೆ ಸುಂದರ ಹೇತುಗಳೆ ಸರಿ. ಡಿ ವಿ ಜಿ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ಹೇಳುತ್ತಾರೆ-
ದೇವಮಂದಿರ ಭಜನೆ ಪೂಜೆ ಪ್ರಸಾದಗಳು ಜೀವನದಲಂಕಾರ ಮನಸಿನುದ್ಧಾರ
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವುದಾವುದಾದೊಡಮೊಳಿತು ಮಂಕುತಿಮ್ಮ
ಒಂದಷ್ಟು ವ್ಯಕ್ತಿಗಳೊ, ವಸ್ತುಗಳೊ, ಘಟನೆಗಳೊ, ನೆನಪುಗಳೊ ನಮ್ಮ ಮನಸ್ಸಿನ ಎಲ್ಲ ಸಮಯ ಹಾಗೂ ಶಕ್ತಿಗಳನ್ನು ಅಪಹರಿಸಿಬಿಟ್ಟಿರುತ್ತವೆ ಎನ್ನುವುದು ಸ್ವಲ್ಪ ಗಮನಿಸಿ ನೋಡಿದರೆ ನಮಗೇ ತಿಳಿಯುತ್ತದೆ. ಜೊತೆಗೆ ತತ್ಸಂಬಂಧಿತ ರಾಗದ್ವೇಷಗಳೂ ಮನಸ್ಸಿನಲ್ಲಿ ಯಾವಾಗಲೂ ಕುದಿಯುತ್ತಿರುತ್ತವೆ. ಹೀಗಾಗಿ ಮನಸ್ಸಿಗೆ ವಿಶ್ರಾಂತಿಯೇ ಇಲ್ಲ, ಸದಾ ಭಾವಕಲ್ಲೋಲ! ಮನಸ್ಸನ್ನು ಈ ಕ್ಷುಲ್ಲಕ ಗಂಟುಗಳಿಂದ ಬಿಡಿಸಿ ರಾಗದ್ವೇಷರಾಹಿತ್ಯದ ಸ್ವಾತಂತ್ರ್ಯದ ಎತ್ತರಕ್ಕೆ ಎತ್ತುವುದಕ್ಕೆ ಯಾವುದಾದರೂ ಮಾಧ್ಯಮ ಬೇಕು. ಭಜನೆ, ಸತ್ಸಂಗ, ಜಪ, ವ್ರತ, ಪೂಜೆ, ಅಲಂಕಾರ, ಉತ್ಸವ, ಸಂಭ್ರಮ, ತೀರ್ಥಾಟನೆ, ದಾನ, ಧರ್ಮ, ಅಥವಾ ಕಲೆ, ಸಾಹಿತ್ಯ, ಕೃಷಿ, ಸಮಾಜ ಸೇವೆ, ಜಿಜ್ಞಾಸೆ ಮುಂತಾದವು ಅನಾದಿಯಿಂದ ಸಮರ್ಥ ಮಾಧ್ಯಮಗಳಾಗಿ ಮನುಕುಲವನ್ನು ಉನ್ನತಿಗೇರಿಸುತ್ತ ಬಂದಿವೆ. ಇದನ್ನು ಕಂಡು ಕೊಂಡ ನಮ್ಮ ಋಷಿಗಳು ಧರ್ಮ ಸಂಸ್ಕೃತಿಗಳ ಚೌಕಟ್ಟಿನಲ್ಲಿ ಇವುಗಳನ್ನು ಹೆಣೆದು ಮನುಕುಲಕ್ಕೆ ವಿಧಿಸಿದರು. ಈ ಮೂಲೋದ್ದೇಶವನ್ನು ಅವಗಣಿಸಿ, ಕೇವಲ ಮತೀಯ ದೃಷ್ಟಿಯಿಂದಲೋ, ದೂಷಣೆಯ ದೃಷ್ಟಿಯಿಂದಲೋ ನೋಡಿದಾಗ ಈ ಎಲ್ಲವುಗಳಲ್ಲಿ ಕೇವಲ ’ನಂಬಿಕೆ’ಯೊಂದೇ ಪ್ರಧಾನವಾಗಿ ಕಾಣಬರಬಹುದು. ಆದರೆ ನೈಜದಲ್ಲಿ ಮಾನವನ ಮನಸ್ಸು ಈ ಎಲ್ಲವುಗಳ ಮೂಲಕ ಭಾವೋನ್ನತಿಯನ್ನು ಅರಸುತ್ತಿದೆ ಎನ್ನುವುದೇ ಸತ್ಯ. ಹಾಗಿಲ್ಲದಿದ್ದಲ್ಲಿ ಕಾಲಗರ್ಭದಲ್ಲಿ ಇವೆಲ್ಲ ಎಂದೋ ಅಳಿದು ಮರೆತು ಹೋಗಿಬಿಡುತ್ತಿದ್ದವು. ಆದರೆ ಕಾಲಕಾಲಕ್ಕೂ ಇದೇ ಅಂಶಗಳು ನವನವೀನ ಊಪಗಳಲ್ಲಿ ಮರುಕಳಿಸುವುದನ್ನು ನೋಡಿದಾಗ ಮನುಷ್ಯಹೃದಯದ ಭಾವಾಭಿವ್ಯಕ್ತಿಯ, ಭಾವೋನ್ನತಿಯ ಹಂಬಲ ಸ್ಪಷ್ಟವಾಗುತ್ತದೆ.
ನೀಚ ವಾಸನೆಗಳು ನೀಗಿ ಜೀವನಕ್ಕೆ ಅರ್ಥವನ್ನೂ ಬಣ್ಣವನ್ನೂ ತುಂಬುವಂತಹ ಉದಾತ್ತ ಅಭಿರುಚಿಯ ವಿಷಯಗಳು ಬೇಕು. ದೇಗುಲದ ಶಾಂತ ಪರಿಸರ, ಅಲ್ಲಿನ ಆ ಶಿಲ್ಪಸೌಂದರ್ಯ, ಭವ್ಯ ಆದರ್ಶಗಳನ್ನೂ, ತಾತ್ವಿಕ ಸತ್ಯಗಳನ್ನೂ ಸಾರುವ ದೇವತಾ ಮೂರ್ತಿಗಳ ದರ್ಶನ, ಪ್ರಾರ್ಥನೆ ಭಜನೆಗಳ ಮೂಲಕ ಹರಿಯುವ ಮುಗ್ಧಭಾವ ಭಕ್ತಿಗಳ ಅಮೃತಾಸ್ವಾದ, ಸಂಗೀತ-ನೃತ್ಯ-ನಾಟಕಾದಿಗಳ ವಿಲಾಸ, ಪೂಜೆ-ಸಮರ್ಪಣೆಗಳಲ್ಲಿನ ತನ್ಮಯಭಾವ, ಜಾತ್ರೆ ಉತ್ಸವಗಳಲ್ಲಿನ ಸಾತ್ವಿಕ ಸಡಗರ ಸಂಭ್ರಮ, ಕಲಾಭಿಜ್ಞತೆ, ದಾನಾದಿ ಕಾರ್ಯಗಳಲ್ಲಿನ ಕೃತಾರ್ಥ ಭಾವ, ಸಜ್ಜನರೊಂದಿಗಿನ ಸಂಗದ ಹೆಜ್ಜೇನಸವಿ, ಬಂಧುಮಿತ್ರರೊಂದಿಗಿನ ಸರಸ ಸಲ್ಲಾಪಗಳು--- ಹೀಗೆ ಇದೆಲ್ಲವೂ ನಮ್ಮ ಮನಸ್ಸಿಗೆ ಪ್ರಿಯಕರ, ಹಿತಕರ ಹಾಗೂ ಉಲ್ಲಾಸಕರ. ವ್ರತಗಳ ಮೂಲಕ ಮನಸ್ಸಿನ ಚಾಂಚಲ್ಯ ಚಾಪಲ್ಯಗಳು ನೀಗಿದರೆ, ಜಪದ ಮೂಲಕ ಶಕ್ತಿ ಏಕಾಗ್ರತೆಗಳು ಬಲಿಯುತ್ತವೆ. ಇವೆಲ್ಲ ನಮ್ಮಲ್ಲಿ ಒಂದು ಸಾತ್ವಿಕತೆಯ ನೆಲೆಯನ್ನು ತೆರೆದಿಡುವುದು ನಿಸ್ಸಂಶಯ. ತತ್ಕಾಲಕ್ಕಾದರೂ ಮನಸ್ಸು ತನ್ನ ಜಡಗಟ್ಟಿದ ದುಃಖದುಮ್ಮಾನಗಳ ನೆನಪಿನಿಂದ ಹಾಗೂ ಭೂತ-ಭವಿಷ್ಯಗಳ ಜಾಲದಿಂದ ಮುಕ್ತವಾಗಿ ವರ್ತಮಾನದಲ್ಲಿ ಸುಖಿಸಿ ನಲಿಯುತ್ತದೆ, ತಣಿಯುತ್ತದೆ. ಹೀಗೆ ಅನಿಮಿತ್ತ ಸುಖವನ್ನು, ಕೆಲಸಗಳ ಯಾಂತ್ರಿಕತೆಯನ್ನು ಕೆಲಕಾಲವಾದರು ಬದಿಗಿಟ್ಟು ನಿರ್ಮಲ ಆನಂದವನ್ನು, ಅನುಭವಿಸಿದಾಗ ಮನಸ್ಸು ತಿಳಿಯಾಗುತ್ತದೆ, ಹಗುರವಾಗುತ್ತದೆ.
ಆಗ ಅಂತರಂಗದಲ್ಲಿ ಸದಾ ನಡೆಯುತ್ತಲೇ ಇರುವ ಸುಪ್ತವೋ ಅಸ್ಪಷ್ಟವೋ ಆದ ಯಾವುದೋ ಜಿಜ್ಞಾಸೆ ವ್ಯಕ್ತವಾಗುತ್ತ ಬರುತ್ತದೆ, ’ಚಿಂತೆ’ ನಿಂತು ’ಚಿಂತನೆ’ ಉಕ್ಕುತ್ತದೆ, ಚಿಂತನೆಯು ಸತ್ಯ ಸೌಂದರ್ಯಗಳ ಅನ್ವೇಷಣೆಯಲ್ಲಿ ತೊಡಗಲು ಬೇಕಾದ ಸೂಕ್ತ ಶಾಂತ ಮನೋಭೂಮಿಕೆ ಒದಗುತ್ತದೆ. ಚಿಂತನೆ ಬಲಿತಂತೆ, ಸತ್ಯ, ಶಿವ ಸೌಂದರ್ಯಗಳ ಅನುಭವ ತೀವ್ರವಾಗುತ್ತ ಹೋಗುತ್ತದೆ. ಜೀವನದ ಗುರಿ, ಅರ್ಥ, ಧ್ಯೇಯ, ಆದರ್ಶಗಳನ್ನರಸಿ ನಮ್ಮ ಅಂತರಂಗ ವಿಕಾಸದ ಹಾದಿ ಹಿಡಿಯುತ್ತ ಹೋದಂತೆ, ಮನಸ್ಸಿಗೆ ಗ್ರಹಣದಂತೆ ಹಿಡಿದ ರಾಗ ದ್ವೇಷಗಳು ಬಲಗುಂದಿ ಕಲಚಿ ಬೀಳತೊಡಗುತ್ತವೆ. ಮನುಷ್ಯ ತನ್ನೊಳಗೆ ಶಾಂತಿ ಶಮೆ ಕ್ಷಮೆ ಸೌಹಾರ್ದ ಸ್ನೇಹಗಳ ಊಟೆಯನ್ನು ಕಂಡುಕೊಂಡು ಸುಖಿಸಲಾರಂಭಿಸುತ್ತಾನೆ. ಇದ್ದಲ್ಲಿಯೇ ಸ್ವರ್ಗವನ್ನು ಕಾಣತೊಡಗುತ್ತಾನೆ. ಕಡಪೇ ಕೈಲಾಸಂ ವಾಕಿಲೇ ವೈಕುಂಠಂ (ಮನೆಯ ಹೊಸಿಲೆ ಕೈಲಾಸ, ಬಾಗಿಲೇ ವೈಕುಂಠ) ಎನ್ನುವ ಮಾತನ್ನು ನಮ್ಮ ಅಜ್ಜಿ ಹೇಳುತ್ತಿದ್ದರು! ಈ ಸ್ಥಿತಿ ಒದಗಿದಾಗ ಶಾಂತಿಗಾಗಿ ಮುಕ್ತಿಗಾಗಿ ಮನುಷ್ಯ ಯಾವ ಮಠ ಮಂದಿರ ಯಾತ್ರೆಗಳನ್ನೋ ಆಧರಿಸಬೇಕಿಲ್ಲ. ಮನಸ್ಸೇ ಆತನ ಎಲ್ಲ ಭಾವ ವಿಚಾರ ಅನುಭವಗಳನ್ನು ಪಾಕಗೊಳಿಸುವ ಯೋಗ್ಯ ವಿದ್ಯಾಲಯವಾಗುತ್ತದೆ. ’ಅಂತರತಮ ನೀ ಗುರು ಹೇ ಆತ್ಮತಮೋಹಾರಿ’ ಎಂಬ ಕವಿನುಡಿಯಂತೆ ಅಂತರಂಗದ ಬೆಳಕೇ ಒಳಹೊರಗಿನ ಜೀವನವನ್ನು ಬೆಳಗಿ ಮಾರ್ಗದರ್ಶಕವಾಗುತ್ತದೆ. ಶ್ರೀ ರಾಮಕೃಷ್ಣರು ಹೇಳುತ್ತಾರೆ ’ಸಾಧಕ ಮೊದಮೊದಲು ಬಹೂದಕನಾಗುತ್ತಾನೆ, ಜ್ಞಾನವು ಬಲಿತಂತೆಲ್ಲ ಕುಟೀಚಕನಾಗುತ್ತ ಬರುತ್ತಾನೆ’ ಎಂದು. ಈ ಮಾತಿನ ಅರ್ಥ ಮೊದಮೊದಲು ಸಾಧಕ ಬಹೂದಕ (ಬಹಳ ಕಡೆ ನೀರು ಕುಡಿಯುವವನು) ಅರ್ಥಾತ್ ತುಂಬ ಅಲೆದಾಡಿ, ಅವರಿವರನ್ನು ಬಳಿಸಾರಿ, ಮಾತನಾಡಿಸಿ, ಬಹಿರ್ಮುಖವಾಗಿ ಜ್ಞಾನವನ್ನು ಅರಸುತ್ತಾನೆ. ಆದರೆ ತನ್ಮೂಲಕ ಲೋಕಾನುಭವ ಹಾಗೂ ಅಂತರ್ದೃಷ್ಟಿಗಳು ಬಲಿಯುತ್ತ ಹೋದಂತೆ ಆತ ಕೊನೆಕೊನೆಗೆ ಕುಟೀಚಕನಾಗುತ್ತಾನೆ (ಕುಟೀರವಾಸಿಯಾಗುತ್ತಾನೆ) ಅರ್ಥಾತ್ ಒಂದೆಡೆ ನೆಲೆ ನಿಲ್ಲುತ್ತಾನೆ, ತನ್ನೊಳಗೆ ತಾನು ತಾತ್ವಿಕ ನೆಲೆಯನ್ನು ಕಂಡುಕೊಳ್ಳುತ್ತಾನೆ. ಪ್ರಾರಂಭವು ಬಹಿರಂಗದಲ್ಲಾದರೂ ನಿಶ್ಚ್ವಯವು ಅಂತರಂಗದಲ್ಲಿ ಧ್ಯಾನದಲ್ಲೇ ಸಿದ್ಧಿಸಬೇಕು.
ಮನಸ್ಸನ್ನು ದುಃಖದುಮ್ಮಾನಗಳ ಪಾಶದಿಂದ ಬಿಡಿಸಿ ನಿರ್ಮಲ ತಾತ್ವಿಕ ಅನುಭವಾನಂದದ ಎತ್ತರಕ್ಕೆ ಏರಿಸುವ ಸನಾತನ ಆರ್ಷ ಸಂಸ್ಕೃತಿಯ ನೈಜ ಉದ್ದೇಶವನ್ನು ಅರಿತುಕೊಂಡಾಗಲೇ ಅದರ ಸ್ವಾರಸ್ಯ ನಮಗೆ ವೇದ್ಯವಾದೀತು, ಅದರಲ್ಲಿನ ಹೃದ್ಯ ಸ್ವೀಕಾರ್ಯಾಂಶಗಳು ಸ್ಪಷ್ಟವಾದಾವು. ಕಾಲೋಚಿತವಾಗಿ ಅನ್ವಯಮಾಡಿಕೊಳ್ಳುವ ವಿವೇಕವೂ ಉದಿಸೀತು. ಇಲ್ಲದಿದ್ದಲ್ಲಿ ಮುಗ್ಧ ಭಯ ಮಿಶ್ರಿತ ನಂಬಿಕೆಯಷ್ಟೆ ಉಳಿದೀತು ಅಥವಾ ಎಲ್ಲವನ್ನೂ ದೋಷದೃಷ್ಟಿಯಿಂದಲೇ ಕಾಣುವ ಪರಕೀಯರು ಕೊಟ್ಟ ಕಾಮಾಲೆಯ ಕಣ್ಣು ಮಾತ್ರ ಉಳಿದೀತು, ನಮ್ಮ ಸಂಸ್ಕೃತಿಯ ನೈಜಸ್ವಾರಸ್ಯ ಹಾಗೂ ಸತ್ವಗಳು ನಮ್ಮಿಂದ ಮರೆಯಾಗಿಯೇ ಉಳಿದಾವು.

6 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. poorva tyyari illadiddare dhyana madalu sadyavilla, nimma baraha thumba arthg needuttade. dhanyavadagalu.

    ಪ್ರತ್ಯುತ್ತರಅಳಿಸಿ