ಶುಕ್ರವಾರ, ಮಾರ್ಚ್ 17, 2017

                                                    ಮೈಸೂರು ಸೀಮೆಯ ಧಾರ್ಮಿಕ ಪರಂಪರೆ
ಲೇಖಕರು-  ಡಾ ಆರತೀ ವಿ ಬಿ 
Publsihed for souvenir Karnataka sampradayagaLu
ಉಪೋದ್ಘಾತ
ವೇದ ಸಂಸ್ಕೃತಿಯು ಜಾನಪದದ ಸೊಗಡನ್ನು ಮರೆಮಾಚದೆ ತಾನೂ ಉಳಿದು ಬೇರೆಯದನ್ನೂ ಬೆಳೆಸುತ್ತ ಬಂದಿರುವ ಕಾರಣ, ಸನಾತನ ಧರ್ಮ-ಸಂಸ್ಕೃತಿಗಳಲ್ಲಿ ಮೂಲಭೂತ ತತ್ವ, ಸಿದ್ಧಂತ ಹಾಗೂ ಔಪಾಸನಾತ್ಮಕ ಸ್ಫೂರ್ತಿಗಳು ಒಂದೇ ಆದರೂ ಅದರ ಅಭಿವ್ಯಕ್ತಿಯಲ್ಲಿ ಸ್ವಾರಸ್ಯಕರ ವೈವಿಧ್ಯಗಳನ್ನು ಕಾಣಬಹುದು. ವೈವಿಧ್ಯಗಳ ನಡುವೆ ಒಂದು ಭಾವೈಕ್ಯ ಹಾಗೂ ತತ್ತ್ವಸಾಮ್ಯವನ್ನೂ ಗುರುತಿಸಬಹುದು.  ಕನ್ನಡನಾಡಿನ ಧಾರ್ಮಿಕ ಸಂಸ್ಕೃತಿಯಲ್ಲಿ ವೇದ, ಆಗಮ, ತಂತ್ರ, ಜಾನಪದ ಹಾಗೂ ಕುಲಾಚಾರಗಳ ಸುಂದರ ಮಿಶ್ರಣವನ್ನು ಕಾಣಬಹುದು. ವೇದಕಾಲದಿಂದಲೂ ಪ್ರಚಲಿತವಿರುವ ಕೆಲವು ಆಚಾರ ವಿಚಾರಗಳ ಜೊತೆಗೆ ಪುರಾಣದ ಕಥೆಗಳು, ಜಾನಪದ ಪ್ರತೀತಿಗಳು, ಪ್ರಾಂತಿಯ ನಂಬಿಕೆ ಹಾಗೂ ಆಯಾ ಆಗಮ ಪ್ರಕಾರಗಳ ಮತ್ತು ಕುಲಧರ್ಮಗಳ ಸಂಪ್ರದಾಯಗಳನ್ನು ಒಳಗೊಂಡು ಬೆಳೆದ ಮೈಸೂರು ಸೀಮೆಯ ಧಾರ್ಮಿಕ ಸಂಕೃತಿ ಸುಂದರವೂ ಸ್ವತಂತ್ರವೂ ಬಹುಮುಖವೂ ಆಗಿ ಬೆಳೆದು ಬಂದಿದೆ. ಕನ್ನಡ ನೆಲದ ಸುಮಾರು ಪ್ರತಿ ೩೦-೫೦ ಕಿ ಮಿ ಗಳ ಅಂತರದಲ್ಲಿ ಭಾಷೆಯ ಶೈಲಿ, ಆಹಾರ, ವೇಷ, ಧಾರ್ಮಿಕ ಪದ್ಧತಿಗಳು, ಲಲಿತಕಲೆಗಳ ಶೈಲಿ ಮುಂತಾದವು ಸ್ವಲ್ಪ ಸ್ವಲ್ಪ ಬದಲಾಗುತ್ತ ಹೋಗುತ್ತವೆ. ಇದಲ್ಲದೆ ಆಯಾ ವೃತ್ತಿ, ಕುಲ. ಕಸಬು, ವರ್ಣ, ಆಶ್ರಮಧರ್ಮಗಳನ್ನು ಅನುಸರಿಸಿ ಆಗುವ ವ್ಯತ್ಯಾಸ ವೈವಿಧ್ಯಗಳೂ ಸೇರಿವೆ..
ಬೇರೆ ಬೇರೆ ಕಾಲಗಳಲ್ಲಿ ಆಳಿದ ರಾಜಮನೆತನಗಳ ಕುಲಧರ್ಮ, ಅಭಿರುಚಿಗಳೂ, ಸಂತ-ಪರಂಪರೆಯ ಪ್ರಭಾವವೂ ಮತ್ತು ಪೀಳಿಗೆಯಿಂದ ಪೀಳಿಗೆಗೆ ಆಚಾರಗಳು ಹಸ್ತಾಂತರವಾಗುವಾಗ ಆಗುವ ಸಹಜ ವ್ಯತ್ಯಾಸಗಳೂ ಸೇರಿ ನಮ್ಮ ಧಾರ್ಮಿಕ-ಸಂಸ್ಕೃತಿಯನ್ನು ಕಾಲಕಾಲಕ್ಕೂ ಮೆರುಗುಗೊಟ್ಟು, ಅಷ್ಟಿಷ್ಟು ಬದಲಿಸಿ, ಪರಿಷ್ಕರಿಸಿ, ವಿನ್ಯಾಸಗೊಳಿಸಿ, ಹೊಸ ಹೊಸ ಆಯಾಮಗಳನ್ನು ನೀಡುತ್ತ ಬಂದಿವೆ. ಈ ಪ್ರಕ್ರಿಯೆಯಲ್ಲಿ ಹಲವು ಮೂಲ ಆಚಾರಗಳು, ವಿಚಾರಗಳು ಬದಲಾಗಿ ಆಯಾ ಕಾಲದ ಪ್ರಭಾವೀ ಅಲೆಗಳಿಗೆ ಸಿಕ್ಕಿ ಅಳಿದದ್ದೋ ಪರಿಷ್ಕಾರವಾದದ್ದೋ ಉಂಟು. ಕೆಲವು ಮೂಢನಂಬಿಕೆಗಳು ತೊಳಗಿ ತಿಳಿಯಾದರೆ, ಇನ್ನು ಹಲವು ಕಂದಾಚಾರಗಳು ಸೇರಿಕೊಂಡದ್ದೂ ಉಂಟು. ಕಾಲಗರ್ಭದ ಕತ್ತಲಲ್ಲಿ ಅಡಗಿಹೋದ ಆ ಎಲ್ಲ ಮೂಲ ಮಾಹಿತಿಯನ್ನು ಯಥಾವತ್ತಾಗಿ ಪಡೆದು ವಿಮರ್ಶಿಸಿ ಹೇಳುವುದು ಅಸಾಧ್ಯ. ಆದರೂ ಇಷ್ಟೆಲ್ಲದರ ನಡುವೆಯೂ ತನ್ನತನದ ಅಂಶವನ್ನು ಹೊಂದಿಯೇ ಇದ್ದು ಜನಮಾನಸಕ್ಕೆ ಸಾತ್ವಿಕ ಆನಂದ, ಉತ್ಸಾಹ, ಜ್ಞಾನ, ಕಲಾಸ್ವಾದ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯನ್ನು ಒದಗಿಸುತ್ತ ಬಂದಿರುವ ಈ ಧಾರ್ಮಿಕ ಸಂಸ್ಕೃತಿಯು ನಮ್ಮ ಜನಜೀವನದ ಬೆನ್ನೆಲುಬೆಂದರೆ ಅತಿಶಯವೇನಲ್ಲ. ಕನ್ನಡ ನಾಡನ್ನು ಆಳಿದವರಲ್ಲಿ ಶಾಕ್ತ, ಶೈವ, ಜೈನ, ವೈಷ್ಣವ ರಾಜರುಗಳೂ, ಆಚಾರ್ಯಗಳು ಆಗಿಹೋಗಿದ್ದಾರೆ. ಅವರೆಲ್ಲ ಪ್ರಭಾವಗಳು ಆಯಾ ಕಾಲದ ಸಂಪ್ರದಾಯಗಳನ್ನು ಪೋಷಿಸಿವೆ. ಸ್ಥಳಾವಕಾಶದ ಕೊರತೆಯಿಂದಾಗಿ ಹಿಂದೂ ಮತದ ಕೆಲವು ಮುಖ್ಯವಾದ ಆಚಾರಗಳನ್ನಷ್ಟೇ ಇಲ್ಲಿ ಚರ್ಚಿಸಲಾಗುತ್ತಿದೆ.   
ಕೆಲವು ಪ್ರಸಿದ್ಧ ಹಬ್ಬಗಳು
ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳೆ ಹಬ್ಬಗಳು. ದೈನಂದಿನ ಜೀವನದಲ್ಲೂ ಈ ಸಮ್ಸ್ಕೃತಿ ಹಾಸುಹೊಕ್ಕಾಗಿದೆಯಾದರೂ ಹಬ್ಬಗಳಂದು ಧರ್ಮ-ಸಂಸ್ಕೃತಿಗಳ ಎಲ್ಲ ಸುಂದರಾಂಶಗಳು ಗರಿಗದರಿನಿಂತು ಮುದವೀಯುತ್ತವೆ. ಆಸ್ತಿಕತೆ, ಸಂಪ್ರದಾಯಗಳು, ಕಲಾಭಿಜ್ಞತೆ, ಸಂಬಂಧಗಳನ್ನು ಬೆಸೆಯುವ ಭಾವಬಾಂಧುರ್ಯ, ಸಂತೋಷ, ಪಾಕವಿಶೇಷಗಳು, ಗೀತನೃತ್ಯಕ್ರೀಡಾವಿನೋದಗಳು ಮುಂತಾದವು ಎಲ್ಲೆಲ್ಲೂ ತಾಂಡವವಾಡುತ್ತವೆ. ಹಾಗಾಗಿ ಈ ಹಬ್ಬಹರಿದಿನಗಳನ್ನು ಕಿಂಚಿತ್ ಅವಲೋಕಿಸುವುದು ಇಲ್ಲಿ ಪ್ರಸ್ತುತವೆನಿಸುತ್ತದೆ. ಮೈಸೂರು ಪ್ರಾಂತದಲ್ಲಿ ಜನಪ್ರಯವಾಗಿರುವ ಕೆಲವು ಹಬ್ಬ ಹರಿದಿನಗಳ ಹಾಗೂ ಆಚಾರಗಳ ಕೆಲವಂಶಗಳನ್ನು ಈಗ ನೋಡೋಣ-
ಯುಗಾದಿ- ವೇದಕಾಲದಿಂದ ಹಿಡಿದು ಮಧ್ಯಯುಗದಲ್ಲಿ ಆಕ್ರಮಣಕಾರರ ಕ್ರೂರಶಾಸನಗಳು ಬಂದು ತಡೆ ಹಾಕುವ ತನಕ, ವಸಂತೋತ್ಸವ ಎನ್ನುವುದು ಸಮಗ್ರ ಭಾರತದಲ್ಲಿ ಬಹಳ ವೈಭವದಿಂದ ಜರುಗುತ್ತಿದ್ದ ಉತ್ಸವವಾಗಿತ್ತು. ಹಲವು ಶತಮಾನಗಳವರೆಗೂ ಎರಡು ತಿಂಗಳ ಬೃಹತ್ ಜಾತ್ರೆಯ ಸ್ವರೂಪವನ್ನೇ ಹೊಂದಿದ್ದ ಈ ವಸಂತೋತ್ಸವವು ಇದೀಗ ಚಿತ್ರಾಹುಣ್ಣಿಮೆ, ಹೋಳಿ ಹಬ್ಬ, ಶ್ರೀಪಂಚಮಿ ಮುಂತಾದ ಬಿಡಿ ಬಿಡಿ ಹಬ್ಬಗಳಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇವುಗಳ ಪೈಕೆ ಭಾರತದಲ್ಲೆಲ್ಲ ಮಹತ್ತರ ಪ್ರಾಶಸ್ತ್ಯವನ್ನು ಇಂದಿಗೂ ಹೊಂದಿರುವುದು ಯುಗಾದಿ/ ಉಗಾದಿ ಹಬ್ಬ. ಯುಗಾದಿ ನೂತನ ಸಂವತ್ಸರದ ಮೊದಲ ದಿನ. ಮೈಸೂರು ಪ್ರಾಂತದಲ್ಲಿ ಚಾಂದ್ರಮಾನ ಯುಗಾದಿಯೇ ಹೆಚ್ಚು ಪ್ರಸಿದ್ಧ. ಅಂದು ಬೇವು-ಬೆಲ್ಲವುಂಡು ಸುಖದುಃಖಗಳನ್ನು ಸಮದೃಷ್ಟಿಯಿಂದ ಎದುರಿಸುವ ವ್ರತತೊಡಲಾತ್ತದೆ. ಅಭ್ಯಂಗ ಸ್ನಾನ, ಹೊಸ ಬಟ್ಟೆ, ಮನೆಯಂಗಳವನ್ನು ತಳಿರು ತೋರಣಗಳಿಂದ ಸಿಂಗರಿಸುವುದು, ಸಾಯಂಕಾಲ ಪಂಚಾಂಗ-ಶ್ರವಣ ಮಾಡುವುದು, ಬೇವು-ಬೆಲ್ಲ ಹಂಚಿಕೊಳ್ಳುವುದು, ದಾನ, ಹಾಡು, ಕುಣಿತ, ಓಕಳಿ ಮುಂತಾದ ಹಲವು ಕಲಾಪಗಳು ಉಗಾದಿಗೆ ಸೇರಿವೆ. ಇದು ವಸಂತಕಾಲದ ಮಧ್ಯದಲ್ಲಿ ಬರುವುದರಿಂದ ಆ ಋತುವಿಗೆ ಸಹಜವಾದ ಲಲಿತಕಲೆಗಳ ಮೆರುಗು ಇದಕ್ಕೂ ಅಂಟಿದೆ. ಇಂದಿಗೂ ಯುಗಾದಿಯೊಂದಿಗೆ ಪ್ರಾರಂಭವಾಗುವ ವಸಂತ-ನವರಾತ್ರದ ಆಚರಣೆ ಹಂಪೆಯ ವಿರೂಪಾಕ್ಷ ದೇಗುಲ ಮುಂತಾದ ಕೆಲವು ಕ್ಷೇತ್ರಗಳಲ್ಲಿ ಪ್ರಚಲಿತವಿದೆ. ಹಲವು ಹಳ್ಳಿಗಳಲ್ಲಿ ಸ್ಥಳೀಯ ಶೈಲಿಯಲ್ಲಿ ಉತ್ಸವ, ಜಾತ್ರೆ, ಜಾನಪದ ಗೀತ-ನೃತ್ಯ-ಕ್ರೀಡಾವಿನೋದಗಳ ನಡೆಯುತ್ತವೆ.    
ರಾಮನವಮಿಯೂ ಈ ವಸಂತ ಋತುವಿನಲ್ಲೇ ಬರುವ ಒಂದು ಪ್ರಸಿದ್ಧ ಹಬ್ಬವಾಗಿ ಬೆಳೆದಿದೆ. ಮೈಸೂರು ರಾಜ್ಯದಲ್ಲಿ ಎಲ್ಲೆಲ್ಲೂ ಎದ್ದು ನಿಂತಿರುವ ಕೋದಂಡರಾಮ ದೇಗುಲಗಳೇ ಶ್ರೀರಾಮಚಂದ್ರನು ಜನಪ್ರಿಯ ದೇವತೆ ಎನ್ನುವುದನ್ನು ಸಾರುತ್ತವೆ. ಬಿರುಬೇಸಿಗೆಯಲ್ಲಿ ಬರುವ ರಾಮನವಮಿಯಂದು ಮನೆಮನೆಗಳಲ್ಲೂ, ಬೀದಿಬೀದಿಗಳಲ್ಲೂ, ಸಾರ್ವಜನಿಕ ಸ್ಥಳಗಳಲ್ಲೂ ಪಾನಕ ಕೋಸಂಬರಿ ಹಂಚಿಕೊಂಡು ತಿಂದು ಸಡಗರ ಪಡುವ ಸಂಪ್ರಾದಾಯವಿದೆ. ರಾಮೋತ್ಸವದ ಜೊತೆಜೊತೆಗೆ ಮೈಸೂರು ಸೀಮೆಯಲ್ಲಿ ಬರುವುದೇ ಸಂಗೀತೋತ್ಸವದ ಚೈತ್ರರಥ! ಸಂಗೀತಕ್ಕೂ ರಾಮನಿಗೂ ವಿಶೇಷ ನಂಟ್ಟನ್ನು ಕಟ್ಟಿ ಕರ್ಣಾನಂದಕರ ಸಂಗೀತದೌತಣವನ್ನು ಉಣ್ಣುವುದೂ ಉಣ ಬಡಿಸುವುದು ವಾಡಿಕೆಯಲ್ಲಿ. ಈ ರಾಮನವಮಿಯ ವೇದಿಕೆಗಳಲ್ಲಿ ಕವಿ, ಕಲಾವಿದರೂ, ಗಾಯಕರು, ವಾದ್ಯ-ನಿಪುಣರೂ, ದಾನಿಗಳೂ, ಕಲಾಪ್ರೇಮಿಗಳು ಸೇರಿ ನಾದ ದೇವತೆಯನ್ನು ಆರಾಧಿಸುತ್ತಾರೆ. ಇದಕ್ಕಾಗಿ ವರ್ಷವೆಲ್ಲ ಎಲ್ಲರೂ ತಮ್ಮ ತಮ್ಮ ಸಿದ್ಧತೆ ನಡೆಸುವುದನ್ನು ಈಗಲೂ ಕಾಣಬಹುದು.
ಆಷಾದಮಾಸದಲ್ಲಿ ಮದುವೆ ಮುಂಜಿ ಮುಂತಾದ ವೃದ್ಧಿಕಾರ್ಯಗಳನ್ನು ಮಾಡದೇ ಹೋದರೂ, ಪೂಜೆ, ದಾನ ಧರ್ಮಗಳಿಗೆ ಇದು ಅತ್ಯಂತ ಪ್ರಶಸ್ತವೆಂದೇ ನಂಬಲಾಗಿದೆ. ಮೈಸೂರಿನ ಚಾಮುಂಡೇಶ್ವರಿಗಂತೂ ಆಷಾಡಶುಕ್ರವಾರದ ಪೂಜೆ ಉತ್ಸವಗಳು ತುಂಬ ವಿಶೇಷವೆನಿಸಿವೆ. ಜನಸ್ತೋಮವೇ ನೆರೆದು ಈ ಕಲಾಪಗಲಲ್ಲಿ ಭಾಗವಹಿಸುವುದನ್ನು ನೋಡಬಹುದು. ಅಂತೆಯೇ ಮೈಸೂರು ಸೀಮೆಯ ವಿವಿಧ ಶಕ್ತಿದೇಗುಲಗಳಲ್ಲಿ ನಿಂಬೆಹಣ್ಣು, ತುಪ್ಪಗಳ ದೀಪಗಳನ್ನು ಬೆಳಗುವುದು, ದಾನ, ಜಪ, ಪಾರಾಯಣ, ಪೂಜೆ, ಉಪವಾಸಾದಿ ವ್ರತಗಳನ್ನು ಕೈಗೊಳ್ಳುವ ಶ್ರದ್ಧಾಳುಗಳು ಹೇರಳವಾಗಿದ್ದಾರೆ.  
ಜ್ಯೋತಿರ್ಭೀಮೇಶ್ವರ ವ್ರತ ಆಷಾಡಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ಪ್ರಸಿದ್ಧ ಹಬ್ಬ. ಇದಕ್ಕೆ ಭೀಮನ ಅಮಾವಾಸೆ ಅಥವಾ ಗಂಡನ ಪೂಜೆ ಎಂಬ ಹೆಸರುಗಳೂ ಇವೆ. ಇದು ಹೆಣ್ಣುಮಕ್ಕಳ ಸಂಭ್ರಮದ ಹಬ್ಬ. ಉತ್ತಮ ಪತಿಯ ಪ್ರಾಪ್ತಿಗಾಗಿ ಕನ್ಯೆಯರು ಈ ವ್ರತವನ್ನು ಆಚರಿಸಿದರೆ, ಸುಮಂಗಲಿಯರು ಪತಿಯ ಆಯುರಾರೋಗ್ಯ-ಸೌಖ್ಯ-ಅಭಿವೃದ್ಧಿಗಳನ್ನು ಕೋರಿ ಭೀಮೇಶ್ವರನನ್ನು ಆರಾಧಿಸುತ್ತಾರೆ. ಎರಡು ದೀಪಗಳಿಗೆ ಮಂಗಳ ದ್ರವ್ಯಗಳಿಂದ ಅಲಂಕಾರ ಮಾಡಿ, ಅರಸಿನದ ಕೊಂಬೆಗಳನ್ನು ಕಟ್ಟಿ, ಷೋಡಶೋಪಚಾರಗಳ ವಿಧಿಯುಕ್ತ ಪೂಜೆಯನ್ನು ಮಾಡಲಾಗುತ್ತದೆ. ಇದನ್ನು ಪ್ರದೋಷಕಾಲದಲ್ಲಿ (ಸಂಧ್ಯಾಕಲಾದಲ್ಲಿ) ಕೂಡ ಮಾಡುವ ಪದ್ಧತಿಯುಂಟು. ಸೋದರರ ಶುಭವನ್ನೂ ಸಮೃದ್ಧಿಯನ್ನು ಕೋರಿ ಈ ವ್ರತವನ್ನು ಮಾಡುವ ಸಂಪ್ರದಾಯವೂ ಇದೆ.
ಶ್ರಾವಣಮಾಸದಲ್ಲಿ ಬರುವ ಉಪಾಕರ್ಮ, ಮಂಗಳಗೌರಿ ವ್ರತ, ವರಮಹಾಲಕ್ಷೀ ಹಾಗೂ ಕೃಷ್ಣಾಷ್ಟಮೀ ಹಬ್ಬಗಳು ಮೈಸೂರು ಸೀಮೆಯಲ್ಲಿ ಜನಪ್ರಿಯವಾದವು.
ನಾಗರಪಂಚಮಿ – ವೇದಕಾಲದಿಂದಲೂ ಸರ್ಪಾರಾಧನೆಯ ಪದ್ಧತಿ ಕಂಡು ಬರುತ್ತದೆ. ಅದರ ಅಳಿದುಳಿದ ರೂಪವೇ ನಾಗರಪಂಚಮಿ ಎನ್ನಬಹುದು. ಮುಗ್ಧ ಜನರು ಹಾವನ್ನೇ ನಾಗರಾಜ ಎಂದು ಭಾವಿಸಿ ಹಾಲೆರೆದು ಪೂಜಿಸುತ್ತಾರೆ. ಐದು ತಲೆಗಳ ನಾಗ ಎನ್ನುವುದು ವಸ್ತುತಃ ಪಂಚಪ್ರಾಣಾತ್ಮಕವಾದ ನಮ್ಮ ಕುಂಡಲಿನೀ ಶಕ್ತಿಯ ಸ್ವರೂಪವನ್ನು ಸಂಕೇತಿಸುತ್ತದೆ. ನಮ್ಮ ಆತ್ಮಶಕ್ತಿಯನ್ನು ಪ್ರಚೋದಿಸುವ ಕುಂಡಲಿನಿಯನ್ನು ಸರ್ಪರೂಪದ ಸಂಕೇತದಲ್ಲಿ ಪೂಜಿಸುವ ವಾಡಿಕೆ ವಿಗ್ರಹಾರಾಧನೆಯ ಸಂಪ್ರದಾಯದೊಂದಿಗೆ ಬೆಳೆದು ಬಂತು.
ಮಂಗಳಗೌರೀ-ವ್ರತ-
ಶ್ರಾವಣಮಾಸದ ಮಂಗಳವಾರಗಳಂದು ಈ ವ್ರತವನ್ನು ಸುಮಂಗಲಿಯರು ಆಚರಿಸುತ್ತಾರೆ. ಮದುವೆಯಾದ ಮೊದಲು ಐದು ವರ್ಷಗಳ ಕಾಲ ಇದನ್ನು ಮಾಡುವುದು ಬಹಳ ಮೈಸೂರು-ಕನ್ನಡ ಮನೆತನಗಳಲ್ಲಿ ಕಡ್ಡಾಯವೆನಿಸಿದೆ. ಇದನ್ನು ಜನ್ಮವ್ರತವನ್ನಾಗಿ ಆಚರಿಸುವವರೂ ಇದ್ದಾರೆ. ಪೀಠದ ಮೇಲೆ ರವಿಕೆಬಟ್ಟೆಯನ್ನು ತ್ರಿಕೋಣಾಕಾರದಲ್ಲಿ ಮಡಚಿ ಜೋಡಿಸಿ, ಅದರ ಮೇಲೆ ಕಲಶ ಕನ್ನಡಿಗಳನ್ನಿಟ್ಟು, ವೀಳ್ಯದೆಲೆ, ಅಡಿಕೆ, ಅರಸಿನದ ಕೊಮ್ಮುಗಳು, ಬಳೆ ಇತ್ಯಾದಿ ಎಲ್ಲವನ್ನೂ ಹದಿನಾರು ಸಂಖ್ಯೆಯಲ್ಲಿ ಜೋಡಿಸಿ, ಷೋಡಶೋಪಚಾರ ಪೂಜೆಯನ್ನು ಮಾಡಲಾಗುತ್ತದೆ. ಕೊನೆಯಲ್ಲಿ ಸಂಪ್ರದಾಯದ ಹಾಡುಗಳನ್ನು ಹಾಡುತ್ತ ಹದಿನಾರು ತಂಬಿಟ್ಟು ದೀಪಗಳ ಆರತಿಯನ್ನು ಬೆಳಗಲಾಗುತ್ತದೆ. ಕಬ್ಬಿಣದ ಕತ್ತಿ ಅಥವಾ ಮೊಗಚುಕೈಗೆ ತುಪ್ಪ ಸವರಿ ಅದನ್ನು ಈ ತಂಬಿಟ್ಟು ದೀಪಗಳ ಮೇಲೆ ಹಾಯಿಸಿ ಮಸಿಯನ್ನು ಪಡೆಯಲಾಗುತ್ತದೆ. ಆ ಮಸಿಯೇ ಮಂಗಲಗೌರಿಯ ಕಾಡಿಗೆ. ಈ ಕಾಡಿಗೆಯನ್ನು ಪಡೆಯುವುದು ತಮ್ಮ ಸೌಭಾಗ್ಯವೆನ್ನುವ ಮುಗ್ಧಸುಂದರ ಶ್ರದ್ಧೆ ಹೆಂಗಳೆಯರದು. ಮೊದಲ ವರ್ಷ ಐದು ಬಾಳೆಹಣ್ಣುಗಳ ತಾಂಬೂಲವನ್ನೂ, ಆ ಬಳಿಕ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತ, (ಹತ್ತು, ಹದಿನೈದು, ಇಪ್ಪತ್ತು, ಇಪ್ಪತ್ತೈದು ಬಾಳೆಹಣ್ಣುಗಳನ್ನು) ಕೊಡುತ್ತ ಹೋಗಬೇಕು. ಶಕ್ತ್ಯನುಸಾರ ಭಕ್ತ್ಯನುಸಾರ ವಸ್ತ್ರ, ಭೋಜನ, ಉಪಾಯನ ದಕ್ಷಿಣೆಗಳನ್ನು ಸುಮಂಗಲಿಯರಿಗೂ ದಂಪತಿಗಳಿಗೂ ನೀಡುವುದು ಈ ವ್ರತದ ಮುಖ್ಯಾಂಶ. ಕೆಲವರು ಇದನ್ನು ವೈಯಕ್ತಿಕ ತಪಸ್ಸಿನಂತೆ ಸರಳವಾಗಿ ಮಾಡಿದರೆ, ಇನ್ನು ಕೆಲವರು ಇದನ್ನು ಅದ್ದೂರಿಯ ಹಬ್ಬವನ್ನಾಗಿ ಆಚರಿಸುವುದೂ ಉಂಟು.
ವರಮಹಾಲಕ್ಷ್ಮೀ ಹಬ್ಬ- ಶ್ರಾವಣಮಾಸವು ವಿಷ್ಣುವಿನ ಆರಾಧನೆಗೆ ವಿಶೇಷವೆನಿಸಿದೆ. ವಿಷ್ಣುಶಕ್ತಿಯಾದ ಲಕ್ಷ್ಮಿಯನ್ನು ಬಹುಶಃ ಈ ಕಾರಣಕ್ಕಾಗಿಯೇ ಶ್ರಾವಣದ ಎರಡನೆಯ ಶುಕ್ರವಾರದಂದು ವರಮಹಾಲಕ್ಷ್ಮೀ ಎನ್ನುವ ಹೆಸರಿನಿಂದ ವಿಶೇಷವಾಗಿ ಪೂಜಿಸಲಾಗುತ್ತದೆ. ವರ್ಣ, ಮತ ಭೇದವಿಲ್ಲದೆ ಎಲ್ಲ ಸನಾತನ-ಧರ್ಮಿಗಳೂ ಈ ಹಬ್ಬವನ್ನು ಆಚರಿಸುತ್ತಾರೆ. ಕಲಶದಲ್ಲಿ ಅಕ್ಕಿ ಹಾಗೂ ಮಂಗಳದ್ರವ್ಯಗಳನ್ನು ತುಂಬಿ ಅದರ ಮೇಲೆ ತೆಂಗಿನಲಾಯಿ, ಮಾವಿನ ಎಲೆಗಳನ್ನು ಜೋಡಿಸಿ, ಲಕ್ಷ್ಮಿಯ ಬೆಳ್ಳಿ ಅಥವಾ ಚಿನ್ನದ ಮುಖವಾಡವನ್ನು ಜೋಡಿಸಿ, ಆ ಕಲಶಕ್ಕೆ ರವಿಕೆಯನ್ನೋ ಸೀರೆಯನ್ನೋ ಅಲಂಕಾರವಾಗಿ ಉಡಿಸಿ ಪೂಜಿಸುವುದು ಸಾಮಾನ್ಯವಾದ ಪದ್ಧತಿ. ಮನೆಯ ಗೃಹಿಣಿ ಕಲಶವನ್ನು ಹಿಡಿದು ಮನೆಯ ಬಾಗಿಲಿನಿಂದ ಒಳ ಬರುತಾಳೆ. ಮನೆಮಂದಿಯೆಲ್ಲ ಕಲಶಕ್ಕೆ ಪೂಜೆ, ಆರತಿಗಳನ್ನು ಮಾಡಿ ’ಭಾಗ್ಯದ ಲಕ್ಷ್ಮೀ ಬಾರಮ್ಮಾ’ ಎಂದು ಬರಮಾಡಿಕೊಳ್ಳುತ್ತಾರೆ. ಆ ಬಳಿಕ ಮೊದಲು ಯಮುನಾ ಪೂಜೆಯನ್ನು ಮಾಡಲಾಗುತ್ತದೆ. ಕೃಷ್ಣಪತ್ನಿಯಾದ ಯಮುನೆಯೂ ಲಕ್ಷ್ಮೀ ಸ್ವರೂಪಳೆ. ಅದಾದಮೇಲೆ ಮುಖ್ಯ ಪೀಠದಲ್ಲಿ ಕಲಶವನ್ನು ಸ್ಥಾಪಿಸಿ, ಲಕ್ಷ್ಮಿಯನ್ನು ವಿಧಿಯುಕ್ತವಾಗಿ ಆಹ್ವಾನಿಸಿ ಮಂತ್ರೋಕ್ತವಿಧಾನದಿಂದ ಪೂಜೆಗೈಯಲಾಗುತ್ತದೆ. ವ್ರತಕಲ್ಪಗಳಲ್ಲಿ ಈ ಎಲ್ಲ ವ್ರತಪೂಜೆಗಳ ವಿಧಿವಿಧಾನಗಳನ್ನು ತಿಳಿಸಲಾಗಿದೆ. ಬಗೆಬಗೆಯ ಭಕ್ಷ್ಯಭೋಜ್ಯಗಳ ನೈವೇದ್ಯವನ್ನು ಮಾಡಿ ಮನೆ ಮಂದಿ ಹಾಗೂ ಆಹ್ವಾನಿತ ಸುಮಂಗಲಿಯರೂ, ದಂಪತಿಗಳೂ ಸಂತಸದಿಂದ ಸಹಭೋಜನ ಮಾಡುತ್ತಾರೆ. ಸಂಜೆ ಹೊತ್ತು ಹೆಂಗಳೆಯರು ಮನೆ ಮನೆಗೂ ಹೋಗಿ ಲಕ್ಷ್ಮಿಯನ್ನು ದರ್ಶಿಸಿ, ತಾಂಬೂಲಾದಿಗಳನ್ನು ಸ್ವೀಕರಿಸಿ, ತಮ್ಮ ಮನೆಗೆ ಅವರನ್ನೆಲ್ಲ ಅಹ್ವಾನಿಸುವ ಸಂಭ್ರಮವನ್ನು ಕಾಣಬಹುದು.
ಉಪಾಕರ್ಮ ದ್ವಿಜರಾದ ತ್ರಿವರ್ಣದವರಿಗೂ (ಬ್ರಾಹ್ಮಣ-ಕ್ಷತ್ರಿಯ-ವೈಶ್ಯರಿಗೂ) ಪ್ರಶಸ್ತವಾದ ಹಬ್ಬ. ಇದು ವೇದಕಾಲದಿಂದ ಬಂದ ಹಬ್ಬ ಎಂದು ಊಹಿಸಲು ಅಡ್ಡಿಯಿಲ್ಲ. ಉಪನಯನವಾದ ಮೊದಲ ವರ್ಷದ ಉಪಾಕರ್ಮವಂತೂ ವಟುಗಳಿಗೆ ತುಂಬ ವಿಶೇಷವೆನಿಸುತ್ತದೆ. ಮೂಲತಃ ಸವಿತೃದೇವತೆಯ ಆರಾಧನೆಯ ಹಿನ್ನಲೆಯಲ್ಲಿ ನಡೆಯುತ್ತಿದ್ದ ಈ (ಗಾಯತ್ರೀ ಛಂದಸ್ ಉಳ್ಳಂತಹ) ಸಾವಿತ್ರೀಮಂತ್ರ ಸಂಬಂಧಿತವಾದ ವ್ರತಕಲಾಪವು, ಬರಬರುತ್ತ ಪುರಾಣ-ಆಗಮೋಕ್ತ ಪಂಚಮುಖಿ ಗಾಯತ್ರಿಯನ್ನು ಉಪಾಸಿಸುವ ಭಾವ ತಾಳಿತು. ಗಾಯತ್ರೀ ಹೋಮ, ಗಾಯತ್ರೀ-ಮಂತ್ರ ಪುರಶ್ಚರಣ ಹಾಗೂ ಜಪತಪಗಳನ್ನು ಅವರವರ ಶಕ್ತ್ಯನುಸಾರ, ಪದ್ಧತಿಗಳಿಗನುಸಾರವಾಗಿ ದ್ವಿಜರೆಲ್ಲ ಮಾಡುತ್ತಾರೆ. ಮನೆಗಳಲ್ಲಿ ಪರಿವಾರದ ಮಟ್ಟಿಗೆ ಮಾಡುವುದೂ ಉಂಟು, ಮಠಗಳಲ್ಲೂ, ಗುಡಿಗಳಲ್ಲೂ ಸಾಮೂಹಿಕವಾಗಿ ಆಚರಿಸುವುದೂ ಉಂಟು.
ಕೃಷ್ಣಾಷ್ಟಮೀ
ಲೋಕಪ್ರಿಯನೂ ಲೋಕೇಶ್ವರನೂ ಜಗಸ್ಗುರುವೂ ಆದ ಕೃಷ್ಣನ ಜಯಂತಿ ಯಾರಿಗೆ ಪ್ರಿಯವಲ್ಲ? ಮೈಸೂರು ಸೀಮೆಯಲ್ಲೂ ಇದೂ ಅದ್ದೂರಿಯ ಹಬ್ಬ. ಸೂರ್ಯಾಸ್ತದ ಅಥವಾ ರಾತ್ರಿ ಕಾಲದಲ್ಲಿ ಕೃಷನನ್ನು ಪುಟ್ಟ ಬೆಳ್ಳಿ ಅಥವಾ ಚಿನ್ನದ ತೊಟ್ಟಿಲಲ್ಲಿಟ್ಟು ಪೂಜಿಸಿ ತುಳಸಿಯಿಂದ ಅರ್ಚಿಸಿ, ಬಗೆಬಗೆಯ ಕರೆದ ತಿಂಡಿಗಳನ್ನೂ, ಅವಲಕ್ಕಿಯನ್ನೂ ಹಾಗೂ ಹಾಲು, ಬೆಣ್ಣೆಗಳನ್ನೂ ನೈವೇದ್ಯ ಮಾಡಲಾಗುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಹಾಗೂ ನಾಮಜಪಗಳು ಭರದಿಂದ ನಡೆಯುತ್ತವೆ. ಮನೆಯವರೆಲ್ಲ ಕೂಡಿ ಅದಕ್ಕಾಗಿ ಹಿಂದಿನ ದಿನದಿಂದಲೇ ದೊಡ್ಡ ಪ್ರಮಾಣದಲ್ಲಿ ಬಗೆ ಬಗೆಯ ಭಕ್ಷ್ಯ-ಭರ್ಜ್ಯ-ಭೋಜ್ಯ-ಪೇಯಗಳನ್ನು ಮಾಡಲಾರಂಭಿಸುತ್ತಾರೆ. ಕೃಷ್ಣನನ್ನು ನೋಡಲು ಬರುವ ಎಲ್ಲರಿಗೂ ಭಕ್ಷ್ಯಗಳನ್ನು ಕೈತುಂಬ ಹಂಚಲಾಗುತ್ತದೆ. ವಿಶೇಷವಾಗಿ ಮನೆಯ ಹಾಗೂ ನೆರೆಕೆರೆಯ ಮಕ್ಕಳನ್ನು ಕುಳ್ಳಿರಿಸಿ ತಿಲಕ ಹಚ್ಚಿ, ಆರತಿ ಎತ್ತಿ, ಸಿಹಿತಿನಿಸುಗಳಿಂದ ಉಪಚರಿಸಲಾಗುತ್ತದೆ. ಕೆಲವರು ಸೂರ್ಯಾಸ್ತದ ನಂತರ ಪೂಜೆ ಮಾಡಿ ಮುಗಿಸಿದರೆ, ಇನ್ನು ಕೆಲವರು ಮಧ್ಯರಾತ್ರಿ (ಕೃಷ್ಣ ಹುಟ್ಟಿದ ವೇಳೆಯಲ್ಲಿ ಪೂಜೆ ಮಾಡುತ್ತಾರೆ) ಮತ್ತೂ ಕೆಲವರೂ ರಾತ್ರಿ ನಾಲ್ಕು ಯಾಮಗಳ ಪೂಜೆಯನ್ನೂ ಮಾಡುವವರಿದ್ದಾರೆ. ಶ್ರೀವೈಷ್ಣವರು ರೋಹಿಣೀ ನಕ್ಷತ್ರದ ಯೋಗವಿದ್ದ ದಿನದಮ್ದು ಕೃಷ್ಣಜಯಂತಿಯನ್ನು ಆಚರಿಸುತ್ತಾರೆ. ಅಂತೂ ಎಲ್ಲರನ್ನೂ ಸಂತಸದ ಹೊಳೆಯಲ್ಲೇ ಮೀಯಿಸುವ ವಿಶೇಷ ಪರ್ವ ಇದು.   
ಭಾದ್ರಪದ ಮಾಸದಲ್ಲಿ ಆಚರಿಸಲಾಗುವ ಮೈಸೂರು ಸೀಮೆಯ ಅಚ್ಚುಮೆಚ್ಚಿನ ಹಬ್ಬಗಳು ಗೌರಿ ಗಣಪತಿ ಹಬ್ಬಗಳು
ಗೌರಿ ಹಬ್ಬ- ಚೈತ್ರ-ಗೌರೀ (ಉಯ್ಯಾಲೆ-ಗೌರಿ), ಕೇದಾರ-ಗೌರಿ, ಫಲ-ಗೌರಿ, ಉಯ್ಯಾಲೆ-ಗೌರಿ, ಸೀಗೆ-ಗೌರಿ, ಮಂಗಳ-ಗೌರಿ, ಮೌನ-ಗೌರಿ ಮುಂತಾದ ಹಲವು ಗೌರಿ ಪೂಜೆಗಳು ಬೇರೆ ಬೇರೆ ಕುಲದವರಲ್ಲಿ ಬೇರೆ ಬೇರೆ ಮಾಸಗಲಲ್ಲಿ ಆಚಾರದಲ್ಲಿವೆ. ಇವುಗಳಲ್ಲೆಲ್ಲ ಅತಿ ಪ್ರಸಿದ್ದವಾದದ್ದು ಸ್ವರ್ಣಗೌರಿ ಎನ್ನಬಹುದು.
ಸ್ವರ್ಣಗೌರಿಯ ಹಬ್ಬದಂದು ಮಗಳಾದ ಗೌರಿಯು ತವರಿಗೆ ಬಂದು ಊಟೋಪಚಾರಗಳನ್ನು ಪಡೆದು ಹರಸಿ ಹೋಗುತ್ತಾಳೆಂಬ ಮಾತಿದೆ. ಮಣ್ಣಿನಲ್ಲಿ ಗೌರಿಯನ್ನು ನಿರ್ಮಿಸಿ (ಈ ಕಾಲದಲ್ಲಿ ಕೊಂಡು ತಂದು) ಅಥವಾ ಬೆಳ್ಳಿ ಅಥವಾ ಅಥವಾ ಚಿನ್ನದ ಗೌರಿ ಮುಖವನ್ನು ಕಲಶಕ್ಕೆ ತೊಡಿಸಿ, ಅದನ್ನು ಪೀಠದ ಮೇಲೆ ಇರಿಸಿ, ಷೋಡಶೋಪಚಾರಗಳಿಂದ ಪೂಜಿಸಿ, ಒಬ್ಬಟ್ಟು ಹಾಗೂ ಬಗೆ ಬಗೆಯ ಕಲಸಿದ ಅನ್ನಗಳು, ಭಕ್ಷ್ಯ ಭೋಜ್ಯಗಳನ್ನು ನಿವೇದಿಸಲಾಗುತ್ತದೆ. ಪೂಜೆಯ ಕೊನೆಯಲ್ಲಿ ಸ್ವರ್ಣಗೌರಿಗೆ ಮರದ ಬಾಗಿನ ಕೊಟ್ಟು ಆ ಬಳಿಕ ಸುಮಂಗಲಿಯರು ಪರಸ್ಪರ ಮರದ ಬಾಗಿನವನ್ನು ಕೊಟ್ಟು-ಪಡೆದು ಪರಸ್ಪರರನ್ನು ಹರಸುತ್ತಾರೆ. ಮನೆಯ ಹೆಣ್ಣು ಮಕ್ಕಳನ್ನು ಅಳಿಯನೊಂದಿಗೆ ಆಹ್ವಾನಿಸಿ ಮರದ ಬಾಗಿನ, ತಾಂಬೂಲ, ವಸ್ತ್ರ, ಮೃಷ್ಟಾನ್ನ-ಭೋಜನಗಳ ಉಪಚಾರ ಮಾಡುವುದೂ ವಾಡಿಕೆಯಲ್ಲಿದೆ. ಸಾಯಂಕಾಲ ಬಣ್ಣಬಣ್ಣದ ಜರತಾರಿ ಸೀರೆಗಳನ್ನುಟ್ಟು ಒಡವೆ, ಮಂಗಳದ್ರವ್ಯಗಳಿಂದ ಸಿಂಗರಿಸಿಕೊಂಡ ಹೆಂಗಳೆಯರು ನೆರೆಕೆರೆಯವರ ಮೆನೆಗೆ ಹೋಗಿ ಗೌರಿಯನ್ನು ದರ್ಶಿಸಿ ತಾಂಬೂಲ ಪಡೆದು ತಮ್ಮ ಮನೆಗೆ ಅವರುಗಳನ್ನು ಆಹ್ವಾನಿಸುವ ದೃಶ್ಯ ನಯನ-ಮನೋಹರವಾಗಿರುತ್ತದೆ. ಹಬ್ಬದ ಸಂಭ್ರಮ ಸಡಗರ ಬಣ್ಣ ಎದ್ದು ಕಾಣುವುದೇ ಈ ಸಂದರ್ಭದಲ್ಲಿ. ಹಾಡು ಕೋಲಾಟ ಓಕಳಿಗಳು ಎಲ್ಲ ಹಬ್ಬಗಳಂತೆ ಈ ಹಬ್ಬದ ಭಾಗವಾಗಿವೆ. ಆದರೆ ನಾಗರೀಕತೆಯ ಪ್ರೆಜ್ಯುಡಿಸ್ ಎನ್ನುವುದು ಈ ಮುಗ್ಧ ಸಂಭ್ರಮಗಳನ್ನು ಮೆಲ್ಲನೆ ತೆರೆಮರೆಗೆ ತಳ್ಳಿಹಾಕುತ್ತ ಬಂದಿವೆ. ಆದರೂ ಕೆಲವು ಗ್ರಾಮೀಣ ಪ್ರಾಂತಗಳಲ್ಲಿ ಈ ಗೀತ-ನೃತ್ಯಾದಿ ಕಲಾಪಗಳು ಅಳಿದುಳಿದಿವೆ ಎನ್ನುವುದು ಸಮಾಧಾನದ ಸಂಗತಿ.
ಗಣೇಶ ಹಬ್ಬ- ’ಗಣೇಶ ಬಂದ ಕಾಯಿ ಕಡುಬು ತಿಂದ ಚಿಕ್ಕೆರೇಲಿ ಬಿದ್ದ ದೊಡ್ ಕೆರೇಲಿ ಎದ್ದ’ ಎನ್ನುವ ಸಾಲುಗಳು ಮಕ್ಕಳ ಬಾಯಲ್ಲೂ ನಲಿದಾಡುತ್ತವೆ. ಗಣೇಶಚತುರ್ಥಿ ಅತ್ಯಂತ ಸಡಗರದ ಹಬ್ಬ. ಗಣಪತಿ ವಿಘ್ನರಾಜನೂ, ಬುದ್ಧಿ, ಸಿದ್ಧಿ, ವೃದ್ಧಿಗಳನ್ನೂ ಕೊಡುವವನು ಹಾಗೂ ಮೂಲಾಧಾರದ ತ್ರಿಕೋಣಮಧ್ಯಗತನಾಗಿ ’ಗಜಕುಂಡ’ ರೂಪದಲ್ಲಿ ದರ್ಶನ ಕೊಟ್ಟು, ನಮ್ಮ ಆಧ್ಯಾತ್ಮಿಕ ಗತಿಯನ್ನು ಪ್ರಚೋದಿಸುವವನು ಎಂದು ಭಕ್ತಿಶಾಸ್ತ್ರಗಳು ಸಾರುತ್ತವೆ. ಮಣ್ಣಿನ ಗಣಪತಿಯನ್ನು ನಿರ್ಮಿಸಿ, ಪೂಜಿಸಿ, ಬಳಿಕೆ ನೀರಿನಲ್ಲಿ ವಿಸರ್ಜಿಸುವ ಪ್ರಾಚೀನ ಪದ್ಧತಿ ತುಂಬ ಅರ್ಥಪೂರ್ಣ. ’ಭಕ್ತನ ಔಪಾಸನಾತ್ಮಕ ತೃಪ್ತಿಗಾಗಿ ಪಂಚಭೂತಾತ್ಮಕವಾದ ಭೌತಿಕ ರೂಪವನ್ನು ತಾಳಿದ ಭಗವಂತನು ಮತ್ತೆ ತನ್ನ ನಿರಾಕಾರಸ್ವರೂಪದಲ್ಲಿ ಲಯವಾಗಿಹೋಗುತ್ತಾನೆ’ ಎನ್ನುವ ಪರಮ ಸತ್ಯದ ಸಂಕೇತವೇ ಇದಾಗಿದೆ. ಹಿಂದುಗಳು ಅದೆಷ್ಟೇ ದೇವತಾರೂಪಗಳನ್ನು ಪೂಜಿಸಿದರೂ, ಅವೆಲ್ಲವೂ ಏಕೈಕ ಚಿನ್ಮಾತ್ರ ಬ್ರಹಸ್ವರೂಪದ ಭೌತಿಕ ಸಂಕೇತಗಳೇ ಆಗಿವೆ ಎನ್ನುವ ಅಂಶವು ಇಲ್ಲಿ ಸ್ಪಷ್ಟವಾಗುತ್ತದೆ. ಸ್ವರ್ಣಗೌರಿಯನ್ನು ಹೆಂಗಸರು ಪೂಜಿಸಿದರೆ ಗಣೇಶ ಹಬ್ಬದಲ್ಲಿ ಪೂಜೆಗೆ ಕೂಡುವವರು ಸಾಮಾನ್ಯವಾಗಿ ಮನೆಯ ಪುರುಷರು. ಗಣಪತಿಯನ್ನು ವಿಧಿಯುಕ್ತವಾಗಿ ಪೂಜಿಸಿ ಪಂಚಭಕ್ಷ್ಯ ಪರಮಾನ್ನಗಳನ್ನು ನಿವೇದಿಸುತ್ತಾರೆ. ಕನ್ನಡದ ಗಣಪನಿಗೆ ಕಡ್ಡಾಯವಾಗಿ ಸಲ್ಲುವುದು ’ಕಡುಬು’ ನೈವೇದ್ಯ! ಅದರಲ್ಲಿ ಕರಿಗಡುಬು, ಹಸಿಗಡುಬು, ಕೊಳ್ಕೊಟ್ಟೆ, ಮೋದಕ ಮುಂತಾದ ಬಗೆಗಳಿವೆ. ಅವುಗಳಲ್ಲಿ ಬಳಸುವ ಹೂರಣಗಳಲ್ಲೂ ಬಗೆಬೆಗೆ- ಕಾಯಿಬೆಲ್ಲದ ಹೂರಣ, ಕೊಬ್ಬರಿ ಸಕ್ಕರೆ, ಕಡಳೇಹಿಟ್ಟು-ಸಕ್ಕರೆ ಇತ್ಯಾದಿ. ಈ ಹಬ್ಬದಲ್ಲಿ ಕಡುಬು ತಿನ್ನುವುದು ಬಡಿಸುವುದೇ ಮನೆಮನೆಯ ಸಂಭ್ರಮದ ಅಂಶವಾಗಿದೆ. ನೂರೆಂಟು ಗಣಪರನ್ನು ದರ್ಶಿಸಿ ವಿದ್ಯಾ ಸಿದ್ಧಿಯನ್ನು ಪಡೆಯುವ ಉತ್ಸಾಹದಲ್ಲಿ, ಪುಟ್ಟ ಬಾಲಕ ಬಾಲಕಿಯರು ಕೈಯಲ್ಲಿ ಅಕ್ಷಟೆ ಕಾಳಿನ ಬಟ್ಟಲು ಹಿಡಿದು ಮನೆ ಮನೆಗೂ ಹೋಗುತ್ತ ’ನಿಮ್ಮನೇಲಿ ಗಣೇಶ ಕೂಡಿಸಿದ್ದೀರಾ?” ಎಂದು ಒಳ ಹೊಕ್ಕು ’ವಿದ್ಯಾಗಣಪತಿಗೆ ಜೈ’ ಎಂದು ಘೋಷಿಸಿ ಅಕ್ಷತೆ ಹಾಕಿ ನಮಸ್ಕರಿಸಿ ಮುಂದೆ ಹೋಗುವುದು ಬೀದಿ ಬೀದಿಗಳಲ್ಲೂ ಕಾಣುವ ಮುಗ್ಧಮನೋಹರ ದೃಶ್ಯ. ಆದರೆ ಈ ಮುಗ್ಧ ಸಂಭ್ರಮವೂ ನಗರಗಳಲ್ಲಿ ಕ್ರಮೇಣ ಕ್ಷೀಣಿಸುತ್ತಿರುವುದು ಶೋಚನೀಯ.
ಶರನ್ನವರಾತ್ರ
ಶರನ್ನವರಾತ್ರ ಅಥವಾ ದಸರಾ ಹಬ್ಬ ಮೈಸೂರು ರಾಜ್ಯದ ನಾಡಹಬ್ಬವೇ ಆಗಿದೆ. ವೊಡೆಯರ ರಾಜಪರಂಪರೆಯಂತೂ ಇದನ್ನು ಬಲು ವೈಭವದಿಂದ ನಡೆಸಿಕೊಂದು ಬಂದಿದೆ. ಹಿಂದೆ ವಿಜಯಾಗರದ ಕರ್ನಾಟ ಸಾಮ್ರಾಜ್ಯದ ಕಾಲದಲ್ಲೂ ಇದು ಅತ್ಯಂತ ವೈಭವದ ನಾಡ ಹಬ್ಬವಾಗಿತ್ತೆನ್ನುವುದನ್ನು ಶಾಸನಗಳು ಹಾಗೂ ಹಂಪೆಯಲ್ಲಿನ ಮಹಾನವಮಿ ಡಿಬ್ಬದ ಪಳೆಯುಳಿಕೆಗಳು ಸಾರುತ್ತವೆ. ಸಾಮಂತ ರಾಜರುಗಳು ಹಾಗೂ ತಮ್ಮ ಅಧೀನದಲ್ಲಿನ ನಾಯಕರು, ಧನಿಕರು, ಅಮಾತ್ಯರುಗಳು ಮಹಾರಾಜನಿಗೆ ಗೌರವದ ಕಪ್ಪ ಕಾಣಿಕೆ ಸಲ್ಲಿಸುವುದರ ಮೂಲಕ ಅವರ ಪ್ರಭುತ್ವವನ್ನು ಮನ್ನಿಸುತ್ತಿದ್ದರು. ಅರ್ವಾಚೀನ ವೊಡೆಯರ ರಾಜರುಗಳ ಕಾಲಕ್ಕೆ ಈ ಪದ್ಧತಿ ಕೇವಲ ಸಾಂಕೇತಿಕವಾಗಿ ಉಳಿಯಿತಾದರೂ, ಹಬ್ಬದ ವೈಭವ, ಸಡಗರಗಳಂತೂ ಬಾಡಲಿಲ್ಲ. ಮೈಸೂರಿನ ಈ ಹತ್ತು ದಿನಗಳ ದಸರಾಹಬ್ಬ ಜಗನ್ಮಾನ್ಯವಾದ ಉತ್ಸವ. ಲಕ್ಷೋಪಲಕ್ಷ ಜನರು ಇದನ್ನು ವೀಕ್ಷಿಸಲು ನೆರೆಯುತ್ತಾರೆ. ಈ ಸಂದರ್ಭದಲ್ಲಿ ಮೈಸೂರು ರಾಜ್ಯದ ಗೀತ ನೃತ್ಯ ನಾಟಕಾದಿ ಅನೇಕಾನೇಕ ಲಲಿತಕಲೆಗಳು, ಕವಿ ಹಾಗೂ ಸಾಹಿತಿಗಳ ಗೋಷ್ಟಿಗಳು, ಮಲ್ಲಯುದ್ಧ ಮುಂತಾದ ಹಲವಾರು ವಿನೋದಗಳು, ಬೊಂಬೆ ಪ್ರದರ್ಶನ, ಜಾತ್ರೆಗಳು ನಡೆಯುತ್ತವ್. ಜಂಬೂ ಸವಾರಿ ಹಾಗೂ ಸ್ತಬ್ಧ ಚಿತ್ರಾದಿಗಳನ್ನು ಒಳಗೊಂಡಂತಹ ವೈಭವದ ಮರವಣಿಗೆಯಂತೂ ಕಣ್ಸೆಳೆಸುವಂತಹದ್ದು. ಹಿಂದೆ ಅರಸರೇ ಅತಿಭಾರದ ಚಿನ್ನದ ಅಂಬಾರಿಯನ್ನೇರಿ ಪಟ್ಟದ ಆನೆಯ ಮೇಲೆ ಮೆರವಣಿಗೆ ಬರುತ್ತಿದ್ದರು. ಈಗ ಆ ಸ್ಥಾನದಲ್ಲಿ ದೇವಿ ಚಾಮುಂಡೇಶ್ವರಿಯನ್ನು ಕುಳ್ಳಿರಿಸಿ ಮೆರವಣಿಗೆ ಮಾಡಲಾಗುತ್ತದೆ. ಮೈಸೂರಿನ ನಾಡದೇವಿ ಚಾಮುಂಡೇಶ್ವರಿಯ ಹೆಸರಲ್ಲಿ ಆಷಾಡ ಶುಕ್ರವಾರ, ಚಿತ್ರಾ ಹುಣ್ಣಿಮೆ ಮುಂತಾದ ಪರ್ವಗಳಲ್ಲಿ ಹಲವು ವಿಶೇಷ ಉತ್ಸವಗಳು ಜರುಗುತವೆ. ಆದರೆ ದಸರಾ ಪೂಜೆ ತುಂಬ ಪ್ರಸಿದ್ಧವಾದದ್ದು. ಕನ್ಮನಗಳನ್ನು ತಣಿಸುವ, ಅಪಾರ ಜ್ಞಾನ, ಮಾಹಿತಿ ಹಾಗೂ ಮನೋರಂಜನೆಗಳನ್ನು ಜನರಿಗೆ ಕೊಡುವ ಮೈಸೂರು ದಸರಾ ಅನಿತರಸಾಧಾರಣ-ಸುಂದರವಾದ ಉತ್ಸಸವ.
ದೀಪಾವಳಿಯೂ ಆಶ್ವಿನ-ಕಾರ್ತಿಕ ಮಾಸಗಳ ಸಂಧಿಯಲ್ಲಿ ಬರುವ ಹಬ್ಬ. ಮೈಸೂರು ಸೀಮೆಯವರಿಗೆ ಇದು ಮೂರು ದಿನಗಳ ಸದಗರದ ಹಬ್ಬ. ಒಳಹೊರಗಿನ ಕತ್ತಲನ್ನು ಹೋಗಲಾಡಿಸಿ ಸಂತಸದ ಬೆಳಕನ್ನು ಆಹ್ವಾನಿಸುವುದೇ ದೀಪಾವಳಿ ಹಬ್ಬದಲ್ಲಿನ ಸುಂದರ ಭಾವನೆ. ಮೊದಲ ದಿನ ನರಕ-ಚತುರ್ದಶಿ, ಎರಡನೆಯ ದಿನ ಅಮಾವಾಸ್ಯೆ- ಆ ದಿನ ಹಿಂದುಗಳು ಧನಲಕ್ಷ್ಮಿಯನ್ನೂ ಜೈನರು ಮೋಕ್ಷಲಕ್ಷ್ಮಿಯನ್ನೂ ಪೂಜಿಸುತ್ತಾರೆ. ಮೂರನೆಯ ದಿನ ಬಲಿಪಾಡ್ಯಮಿ- ಅಸುರ ರಾಜನಾದ ಬಲಿಯನ್ನು ಪಾತಾಳಕ್ಕೆ ತಳ್ಳಿ ಮನುಕುಲಕ್ಕೆ ಅಭಯವನ್ನು ಕೊಟ್ಟ ಮಹಾವಿಷ್ಣುವಿನ ವಾಮನ ಅವತಾರವನ್ನು ಪೂಜಿಸುವ ದಿನ ಇದು. ಬಲೀಂದ್ರನು ಅಸುರನಾದರೂ ಭಾಗವತೋತ್ತಮನೆಂಬ ಕಾರಣಕ್ಕೆ ಪೂಜಾರ್ಹನಾಗಿದ್ದಾನೆ. ಲಕ್ಷ್ಮೀ ಪೂಜೆ, ಹೊಸಬಟ್ಟೆ, ಮುಷ್ಟಾನ್ನ ಭೋಜನ, ಸ್ನೇಹಕೂಟ, ದೀಪಗಳ ಸಾಲು ಸಾಲುಗಳನ್ನು ಸೂರ್ಯಾಸ್ತದ ಬಳಿಕ ಮನೆಯಂಗಳದಲ್ಲಿ ಬೆಳಗುವುದು ಹಾಗೂ ಪಟಾಕಿಗಳನ್ನು ಸುಟ್ಟು ನಕ್ಕು ನಲಿದಾಡುವುದು ದೀಪಾವಳಿ ಹಬ್ಬದ ಅಂಶಗಾಳಗಿವೆ. ನರಕಾಸುರನನ್ನು ಕೊಂದು ಅವನ ಕಳೇಬರವನ್ನು ಸುಟ್ಟಾಗ ಬಣ್ಣ ಬಣ್ಣದ ಬೆಂಕಿಯ ಕಿಡಿಗಳು ಚಿಮ್ಮಿದವು ಎಂಬ ಕಥೆ ಪ್ರಚಲಿತವಿದೆ. ಅದರ ಸಂಕೇತವಾಗಿ ಬಣ್ಣ ಬಣ್ಣದ ಪಟಾಕಿಗಳನ್ನು ಸುಡಲಾಗುತ್ತದೆ ಎಂದು ಅಭಿಪ್ರಾಯವಿದೆ. ಅಂತೂ ಅಜ್ಞಾನ, ದುಃಖಗಳ ಪ್ರತೀಕವಾದ ಕತ್ತಲನ್ನು ಹೋಗಲಾಡಿಸಿ ಜ್ಞಾನ ಹಾಗೂ ಸಂತೋಗಳ ಸಂಕೇತವಾದ ಬೆಳಕನ್ನು ತುಂಬುವುದು ದೀಪಾವಳಿಯ ಮುಖ್ಯ ಉದ್ದೇಶವಾಗಿದೆ. ದೀಪಾವಳಿಯಂದು ಆಹ್ಲಾದಕರವಾದ ದೀಪಗಳ ಬೆಳಕಿನ ಲೋಕವೇ ನಾಡಲ್ಲೆಲ್ಲ ಸೃಷ್ಟಿಯಾಗುತ್ತದೆ!
ಉತ್ಥಾನದ್ವಾದಶಿ ಅಥವಾ ತುಲಶೀ ಪೂಜೆ ದೀಪಾವಳಿಯಾದ ಸುಮಾರು ಎರಡು ವಾರಕ್ಕೆ ಬರುತ್ತದೆ. ತುಳಸಿಯ ಬೃಂದಾವನವನ್ನೋ ಕುಂಡವನ್ನೋ ಮಂಗಳದ್ರವ್ಯಗಳಿಂದಲೂ, ದೀಪಗಳಿಂದಲೂ ಅಲಂಕರಿಸಿ, ಹಣ್ಣುಗಳಿರುವ ನೆಲ್ಲಿಯ ಗಿಡದ ಕೊಂಬೆಯನ್ನು ಪಕ್ಕದಲ್ಲಿ ನೆಟ್ಟು, ಅದನ್ನು ಲಕ್ಷ್ಮೀ ಸ್ವರೂಪವೆಂದು ಪೂಜಿಸಲಾಗುತ್ತದೆ. ಸಂಧ್ಯಾಕಾಲದಲ್ಲಿ ಈ ಪೂಜೆಗೆ ವಿಶೇಷ. ತುಳಸಿಯು ನಾರಾಯಣನನ್ನು ಮದುವೆಯಾದದ್ದು ಈ ದಿನ ಎನ್ನುವುದು ಒಂದು ನಂಬಿಕೆ. ಇನ್ನು ದೇವತೆಗಳು ತಮ್ಮ ಆರು ತಿಂಗಳ ಶಯನದಿಂದ ಎಚ್ಚೆತ್ತು ಕ್ರಿಯಾಶೀಲರಾಗುವುದು ಈ ದಿನದಂದು, ಹಾಗಾಗಿ ಇದಕ್ಕೆ ’ಉತ್ಥಾನ ದ್ವಾದಶಿ’ ಎಂದು ಹೆಸರು ಎನ್ನುವ ಅಭಿಮತವೂ ಇದೆ. ಈ ದಿನದಂದೂ ಪಟಾಕಿಗಳನ್ನು ಸುಟ್ಟು ನಲಿದಾಡುವ ಸಂಭ್ರಮವಿರುತ್ತದೆ.  
ಸಂಕ್ರಂತಿ ಹಬ್ಬ ಕನ್ನಡಿಗರ ಪಾಲಿಗೆ ಸುಗ್ಗಿಯ ಹಬ್ಬ. ರೈತರು ಆಗತಾನೆ ಸುಗ್ಗಿಯಾದ ಧಾನ್ಯಗಳನ್ನು ರಾಶಿಯಾಗಿ ಪೇರಿಸಿ ಧಾನ್ಯಲಕ್ಷ್ಮಿ ಎಂದು ಪೂಜಿಸಿ, ಮೊರಗಳಲ್ಲಿ ಎತ್ತೆತ್ತಿ ದಾನ ಮಾಡಿ ಆ ಬಳಿಕವೇ ಅದನ್ನು ಸ್ವಂತ ಉಪಯೋಗಕ್ಕೋ ವ್ಯಾಪಾರಕ್ಕೋ ಬಳಸುತ್ತಾರೆ. ಹಂಚಿಕೊಂದು ಬದುಕುವ ಸುಂದರ ಸಂಸ್ಕೃತಿ ಇಲ್ಲಿ ಎದ್ದು ಕಾಣುತ್ತದೆ. ಇದಲ್ಲದೆ ಕೃಷಿಯಲ್ಲಿ ಸಹಾಯಕವಾಗುವಂತಹ ನೇಗಿಲು, ಗುದ್ದಲಿ ಮುಂತಾದವುಗಳಿಗೆ, ಭೂಮಿಗೆ ಹಾಗೂ ಗೋವು, ಎತ್ತುಗಳಿಗೆ ಪೂಜೆಮಾಡಿ ಆರತಿ ಎತ್ತಲಾಗುತ್ತದೆ. ಗೋವು ಮತ್ತು ಎತ್ತುಗಳ ಹಣೆಗೆ ಅರಸಿನಕುಂಕುಮಗಳನ್ನು ಹಚ್ಚಿ, ಕೊರಳಿಗೆ ಹೂವಿನ ಹಾರಗಳನ್ನು, ಘಂಟೆಗಳನ್ನು ಕಟ್ಟಿ, ಕೊಂಬುಗಳಿಗೆ ಬಣ್ನದ ಬಟ್ಟೆಗಳನ್ನು ಗೆಜ್ಜೆಗಳನ್ನು ಕಟ್ಟಿ ಮುದ್ದಾಗಿ ಅಲಂಕರಿಸಿ ಸಾಯಂಕಾಲದ ಹೊತ್ತು ಬೀದಿಗಳಲ್ಲಿ ಮೆರವಣಿಗೆ ಒಯ್ಯುತ್ತಾರೆ. ಎಲ್ಲರೂ ಆರತಿ ಎತ್ತಿ ಬೆಲ್ಲ ತಿನಿಸಿ ಗೋವು ಮತ್ತು ಎತ್ತ್ತುಗಳನ್ನು ಪೂಜಿಸುತ್ತಾರೆ. ಇದಲ್ಲದೆ ಗೋವುಗಳನ್ನು ಕೆಂಡ ಹಾಯಿಸುವ ಪದ್ಧತಿಯೂ ಇದೆ. ನಗರದ ಜನರಿಗೆ ಇದು ಅನಾಗರೀಕವಾಗಿ ತೋರಬಹುದೇನೊ ಆದರೆ ಹಳ್ಳಿಜನರ ಪಾಲಿಗೆ ಇದೊಂದು ಅನಾದಿಯ ಪದ್ಧತಿಯಾಗಿ ಬೆಳೆದು ಬಂದಿದೆ.
ಸಂಕ್ರಾಂತಿಯಂದು ಅಭ್ಯಂಗ-ಸ್ನಾನ ಮಾಡಿ ಹುಗ್ಗಿಯ ಪಾತ್ರೆಗೆ ಅರಸಿನದ ಗಿಡವನ್ನು ಸುತ್ತಿ ಕಟ್ಟಿ ಧಾನ್ಯಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಅಂತೆಯೇ ಸೂರ್ಯನನ್ನೂ ಹಾಗೂ ಶಿವ, ಕುಲದೇವತೆಗಳನ್ನು ಪೂಜಿಸಲಾಗುತ್ತದೆ. ಸಂಕ್ರಾಂತಿಯ ವಿಶೇಷ ಎಂದರೆ ಎಳ್ಳು ಬೀರುವುದು. ಎಳ್ಳು, ಬೆಲ್ಲ ಕೊಬ್ಬರಿ, ಕಡಲೆಕಾಯಿ, ಮುಂತಾದುವನ್ನು ಉರಿದು ಬೆರೆಸಿ ಅದನ್ನು ಜೀರಿಗೆ ಪಪ್ಪರ್ಮಿಂಟ್, ಕಬ್ಬು, ಹಣ್ಣು ಹಾಗೂ ಸಕ್ಕರೆ ಅಚ್ಚಿನೊ ಜೊತೆಗೆ ತಾಂಬೂಲದಲ್ಲಿಟ್ಟು ನೀಡುವುದು ಮೈಸುಋ ರಾಜ್ಯದಲ್ಲಿ ಕಾಣುವ ಸರ್ವೇಸಾಮಾನ್ಯ ದೃಶ್ಯ. ’ಎಳ್ಳು ಕೊಟ್ಟು ಒಳ್ಳೆ ಮಾತನಾಡು’ ಎನ್ನುವ ಮಾತೇ ಇದೆ. ಮಾಗಿಯ ಚಳಿ ಆಗ ತಾನೆ ಕಳೆಯುತ್ತಿರುವಾಗ ಈ ಎಲ್ಲ ಪದಾರ್ಥಗಳ ಸೇವನೆ ಮೈಯಲ್ಲಿ ತೈಲಾಂಶವನ್ನು ಪಿತ್ತಹರಣವನ್ನೂ ಮಾಡಿ ಆರೋಗ್ಯವನ್ನು ವರ್ಧಿಸುತ್ತವೆ ಎನ್ನುವುದು ತಿಳಿದ ವಿಷಯವೆ.
ರಥಸಪ್ತಮಿಯೂ ಮೈಸೂರುರಾಜ್ಯದ ಹಲವು ಮನೆತನಗಳಲ್ಲಿ ಆಚಾರದಲ್ಲಿರುವ ಹಬ್ಬ. ಮನೆಯಂಗಳದಲ್ಲಿ ಬಾಗಿಲ ಬಳಿ ರಂಗೋಲಿಯಿಂದ ರಥವನ್ನು ರಚಿಸಿ ಅದರ ಪಕ್ಕ ಸೂರ್ಯ ಚಂದ್ರರನ್ನು ರಚಿಸಿ ಪೂಜಿಸಲಾಗುತ್ತದೆ. ಸೂರ್ಯನಮಸ್ಕಾರ, ದಾನ, ಜಪ ಮುಂತಾದ ಕಲಾಪಗಳು ನಡೆಯುತ್ತವೆ. ಕಾರ್ಯಾರಂಭಕ್ಕೆ ಇದು ಶುಭದಿನವೆಂದೂ ಮನ್ನಿಸಲಾಗುತ್ತದೆ.
ಮಹಾಶಿವರಾತ್ರಿ ಮಾಘಮಾಸದ ಅತ್ಯಂತ ಪ್ತ್ರಶಸ್ತ ಹಬ್ಬ. ಇದು ತ್ಯಾಗ, ಸಂಯಮ, ಯೋಗಗಳ ಸಂಕೇತವಾಗಿದ್ದು ಈ ಹಬ್ಬದಲ್ಲಿ ಭೋಜನ, ಸಡಗರವಿರದು. ಬದಲಾಗಿ ಉಪವಾಸ, ಪೂಜೆ, ಜಪ ಹಾಗೂ ಜಾಗರಣೆಗಳು ಜರುಗುತ್ತವೆ. ರಾತ್ರಿಯನ್ನು ನಾಲ್ಕು ಯಾಮಗಳ ಪೂಜೆ, ರುದ್ರಾಭಿಷೇಕಗಳನ್ನು ಮಾಡುತ್ತ ಅಥವಾ ಯಕ್ಷಗಾನವನ್ನು ವೀಕ್ಷಿಸುತ್ತ, ಭಜನೆ, ನಾಟಕ, ದೇಗುಲ ಸಂದರ್ಶನ, ಧ್ಯಾನ ಮುಂತಾದ ಕಲಾಪಗಳಲ್ಲಿ ತೊಡಗುತ್ತ ಜಾಗರಣೆ ಮಾಡಲಾಗುತ್ತದೆ. ಭೋಗಪರತೆ, ವಿಲಾಸ, ಪಾಶ್ಚಾತ್ಯರ ಅನುಕರಣೆ, ನಾಗರೀಕತೆಯ ಒಣಜಂಭಗಳು ಅದೆಷ್ಟೇ ಜನಮಾನಸವನ್ನು ಹೊಕ್ಕಿದ್ದರೂ, ಇಂದಿಗೂ ಶ್ರಾದ್ಧಾಭಕ್ತಿಗಳಿಂದ ಉಪವಾಸ-ಜಾಗರಣೆಗಳನ್ನು ಪಾಲಿಸಿಕೊಂಡು ಬರುತ್ತಿರುವ ಅಸಂಖ್ಯಾತ ಭಕ್ತರಿದ್ದೇ ಇದ್ದಾರೆ ಎನ್ನುವುದು ಸನಾತನ ಸಂಸ್ಕೃತಿಯ ಹಿರಿಯ ಪ್ರಭಾವವನ್ನು ತೋರಿಸುತ್ತದೆ.      
ಬೆಂಗಳೂರಿನ ಕರಗ ಚಿತ್ರಾಪೂರ್ಣಮಿಯಂದು ನಡೇಯುವ ಪ್ರಸಿದ್ಧ ಉತ್ಸವ. ತಿಗಳರ ಜನಾಂಗದ ಪೂಜಾರಿಯು. ೧೦ ದಿವಸಗಲ ಕಾಲ ಕಟ್ಃಈಣ ವ್ರತಧಾರಣೆ ಮಾಡಿದ್ದು, ಆ ಬಳಿಕ ಭಾರದ ಕರಗವನ್ನು, ಕೈ ಅಥವಾ ಬೇರಾವುದೇ ಆಸರೆಯಿಲ್ಲದೆ ತಲೆಯ ಮೇಲೆ ಹೊತ್ತು ಕುಣಿಯುತ್ತ ಊರ ಬೀದಿಗಳಲ್ಲಿ ದೀರ್ಘ ಮೆರವಣಿಗೆ ಹೋಗುತಾನೆ. ಅರ್ಧರಾತ್ರಿ ಪ್ರಾರಂಭವಾಗಿ ಪ್ರಾತಃ ಕಾಲದವರೆಗೂ ಮುಂದುವರೆಯುವ ಬೆರಗುಗೊಳಿಸುವ ಈ ಕರಗವನ್ನು ವೀಕ್ಷಿಸಲು ವರ್ಷವರ್ಷವೂ ಜನಸ್ತೋಮವೇ ಸೇರುತ್ತದೆ. ಬೆಂಗಳೂರಿನ ಗ್ರಾಮಂತರ ಹಾಗೂ ಸುತ್ತ ಮುತ್ತಲ ಊರುಗಳಲ್ಲೂ ಇಂತಹದ್ದೇ ಚಿಕ್ಕ ಕರಗಗಳು ನಡೆಯುತ್ತ ಬಂದಿವೆ.
ಇವುಗಳಲ್ಲದೆ ಹುಣ್ಣಿಮೆಗಳಂದು ಅಥವಾ ಯಾವುದೆ ಅನುಕೂಲದ ದಿನಗಳಂದು ಮಾಡುವ ಸತ್ಯನಾರಾಯಣ ಪೂಜೆ ಬಹಳ ಜನಪ್ರಿಯ, ಮೈಸೂರು ಸೀಮೆಯಲ್ಲಿ ಮದುವೆಯಾದ ಅಥವಾ ಮನೆ ಕಟ್ಟಿದ ತಕ್ಷಣವೇ ಮೊದಲು ಮಾಡುವುದು ಸತ್ಯನಾರಾಯಣ ಪೂಜೆಯನ್ನೇ. ’ಸತ್ಯನಾರಾಯಣನ ಪೂಜೆ ನಡೆಯುತ್ತಿದೆ ಎಂದು ತಿಳಿದಾಗ, ಕರೆದರೂ ಕರೆಯದಿದ್ದರೂ ಹೋಗಬೇಕು’ ಎನ್ನುವ ಮಾತು ಅದರ ಕುರಿತಾದ ಅಮಿತ-ಶ್ರದ್ಧೆಯನ್ನು ಬಿಂಬಿಸುತ್ತದೆ. ಅಲ್ಲಿ ಕಡ್ಡಾಯವಾಗಿ ಮಾಡುವ ಸಜ್ಜಿಗೆ ನೈವೇದ್ಯದ ಪ್ರಸಾದವಂತೂ ತುಂಬ ಜನಪ್ರಿಯ.
ಪ್ರತಿ ತಿಂಗಳ ಕೃಷ್ಣ ಚತುರ್ಥಿಗಳಂದು ದಿನವಿಡೀ ಉಪವಾಸ ಮಾಡಿ ಪ್ರದೋಷಕಾಲದಲ್ಲಿ ಸಂಕಷ್ಟಹರ-ಗಣಪತಿಯ ಪೂಜೆ ಮಾಡಿ, ಚಂದ್ರ್ರ್ರನನ್ನು ನೋಡಿ ಆ ಬಳಿಕವೇ ಆಹಾರವನ್ನು ಸೇವಿಸುವ ಪದ್ಧತಿ ಇಂದಿಗೂ ಬಹಳ ಜನರಲ್ಲಿ ಕಾಣಬರುತ್ತದೆ.
ಇದಲ್ಲದೆ ಮಾಘ ಭಾನುವಾರಗಳಂದು ಸೂರ್ಯಪೂಜೆ ಮಾಡಿಸುವುದು, ಮಾಘಮಾಸದಲ್ಲಿ ತೀರ್ಥಸ್ನಾನಕ್ಕಾಗಿ ಯಾತ್ರೆ ಹೋಗುವುದು, ಹದಿನಾರು-ಸೋಮವಾರಗಳ ವ್ರತವನ್ನು ಕೈಗೊಳ್ಳುವುದು, ಶನಿವಾರ, ಸೋಮವಾರಗಳಂದು ವಿಷ್ಣು ಹಾಗೂ ಶಿವ ದೇವರುಗಳಿಗಾಗಿ ಉಪವಾಸ ಮಾಡುವುದು, ಗುರುವಾರಗಳಂದು ರಾಯರಿಗಾಗಿಯೋ, ತಮ್ಮ ಕುಲದ ಅಥವಾ ದೀಕ್ಷಾ ಗುರುಗಳ ಹೆಸರಲ್ಲಿ ಉಪವಾಸ, ಪಾರಾಯಣ ಅಥವಾ ಭಜನಾದಿಗಳನ್ನು ಮಾಡುವುದೂ ಮೈಸೂರು ಸೀಮೆಯ ಜನತೆಯಲ್ಲಿ ಕಾಣಬರುವ ಸಾಮಾನ್ಯ ಆಚಾರಗಳು. ಶ್ರಾವಣಮಾಸದಲ್ಲಿ ವಿಷ್ಣುಪರ ಪೂಜೆ ಪಾರಾಯಣಗಳನ್ನು ಮಾಡುವುದು, ಗಂಡುಮಕ್ಕಳು ಮೂರುನಾಮಗಳನ್ನು ಧರಿಸಿ ಶ್ರಾವಣಶನಿವಾರಗಳಂದು ಧಾನ್ಯಗಳ ಭಿಕ್ಷೆಯನ್ನು ತರುವ ಪದ್ಧತಿ ಗ್ರಾಮಗಳಲ್ಲಂತೂ ತಕ್ಕ ಮಟ್ಟಿಗೆ ಇಂದಿಗೂ ಉಳಿದುಬಂದಿದೆ. ಶರನ್ನವರಾತ್ರದಲ್ಲಿ ದೇವೀ ಮಾಹಾತ್ಮ್ಯದ ಪಾರಾಯಣ ಮಾಡಿ, ಸುಮಂಗಲಿಯರಿಗೆ ಸೀರೆ, ಕುಪ್ಪಸ, ಭೋಜನಾದಿಗಳನ್ನು ನೀಡುವುದು ಇತ್ಯಾದಿಗಳು ಜನಪ್ರಿಯ ಆಚಾರಗಳು. ಎಷ್ಟೋ ಮನೆತನಗಳಲ್ಲಿ ಮನೆಯ ಹಿರಿಯ ಹೆಂಗಸರು ಸೊಸೆ ಅಥವಾ ನವವಧುಗಳಿಗೆ ಗೌರಿಪಂಚಾಕ್ಷರೀ ಮಂತ್ರವನ್ನು ಉಪದೇಶ ಮಾಡುವ ಪದ್ಧತಿಯನ್ನೂ ಇಟ್ಟುಕೊಂಡಿದ್ದಾರೆ.
ಲಲಿತಕಲೆಗಳು
ಮೈಸೂರು ಸೀಮೆಯಲ್ಲಿ ಅರಳಿದ ಕಲಾಪ್ರಕಾರಗಳು ಅಸಂಖ್ಯಾತ. ಅರಮೆನೆಯ ಪೋಷಣೆಯಲ್ಲಿ ಶಾಸ್ತ್ರೀಯ ಸಂಗೀತ ನೃತ್ಯಗಳು ಒಳ್ಳೆಯ ಪೋಷಣೆಯನ್ನು ಪಡೆದವು. ದಾಕ್ಷಿಣಾತ್ಯ ಸಂಗೀತ ಹಾಗೂ ಭರತನಾಟ್ಯಗಳಲ್ಲಿ ತಂಜಾವೂರು ಶೈಲಿ ಹಾಗೂ ಮೈಸೂಋ ಶೈಲಿ ಎನ್ನುವ ಪ್ರಕಾರಗಳೆ ಹುಟ್ಟಿವೆ ಎಂದ ಮೇಲೆ ಅದೆಷ್ಟು ಮನ್ನಣೆ ಸಂದಿರಬಹುದೆಂದು ಊಹಿಸಬಹುದು. ನಮ್ಮ ಲಲಿತಕಲೆಗಳನ್ನು ಪೋಷಿಸಿ ಬೆಳೆಸಿದವರಲ್ಲಿ ದೇವದಾಸಿ ಜನಾಂಗವು ಪ್ರಮುಖವೆನಿಸುತ್ತದೆ. ಪ್ರಾಚೀನಕಾಲದಿಂದ ಹಿಡಿದು ಮಧ್ಯಕಾಲದವರೆಗೂ ಎಲ್ಲ ವಿಶೇಷ ಉತ್ಸವಗಳಲ್ಲಿ ಗೀತ ನೃತ್ಯಸೇವೆಗಳನ್ನು ಸಲ್ಲಿಸುತ್ತಿದ್ದವರು ಅವರೇ. ಆದರೆ ಭಾರತೀಯ ಸಂಸ್ಕೃತಿವಿರೋಧಿ ಧೋರಣೆಯ ಪರಕೀಯ ಆಡಳಿತಗಾರರ ಕಾಲದಲ್ಲಿ ಈ ದೇವದಾಸಿಯರ ಸ್ಥಾನ ಮಾನಗಳು ಕುಸಿದು, ಅವರ ಕಲೆ ಪೋಷಣೆಯಿಲ್ಲದೆ ಬಡವಾಗುತ್ತ ಬಂದು ಅವರೆಲ್ಲ ಕೇವಲ ಭೋಗದ ಬೊಂಬೆಗಳಾಗಿ ಉಳಿಯುತ್ತ ಬಂದರು ಎನ್ನುವುದು ಶೋಚನೀಯ ಸಂಗತಿ.
ಮೈಸೂರು ಸೀಮೆಯ ಜಾನಪದ ಕಲೆಯಂತೂ ಅತ್ಯಂತ ಸ್ವೋಪಜ್ಞವೂ, ಸರಳ- ಸುಂದರವೂ, ಹೃದಯಸ್ಪರ್ಷಿಯೂ ಆಗಿ ಬೇಳೆದಿದೆ.  
ಜಾನಪದ ಸಂಗೀತಕ್ಕೆ ತನ್ನದೇ ಆದ ಸ್ವಾರಸ್ಯಕರ ರುಚಿ ಹಾಗೂ ಸ್ವರೂಪಗಳಿವೆ. ರಾಗಿ ಬೀಸುವ ಹಾಡುಗಳು, ಸಂಪ್ರದಯದ ಹಾಡುಗಳು, ತವರಿನ ನೆನಪಿನ ಹಾಡುಗಳು, ದೇವರ ಸ್ತುತಿಗಳು, ಆರತಿ ಹಾಡು, ವರ ಬೇಡುವ ಹಾಡು, ನಿಸರ್ಗವನ್ನು ಬಣ್ಣಿಸುವ ಹಾಡುಗಳು, ವಾತ್ಸಲ್ಯ-ಪ್ರೇಮ-ಸ್ನೇಹ-ದುಃಖ ಮೂಂತಾದ ಭಾವಗಳನ್ನು ಬಿಂಬಿಸುವ ಹಾಡುಗಳು, ಜಾತ್ರೆ-ಉತ್ಸವಗಳ ಹಾಡುಗಳು, ಮಗುವಿಗೆ ಉಣಿಸುವ ಹಾಡು, ಮಲಗಿಸುವ ಹಾಡು, ಹಸೆಯೇರಿದ ಮಧುಮಕ್ಕಳನ್ನು ಹರಸುವ ಹಾಡು, ನೀತಿ ಪದಗಳು, ತತ್ವಪದಗಳು, ಹೀಗೆ ಮುಗಿಯದ ಪಟ್ಟಿ---ಯಾವ ಶಾಸ್ತ್ರೀಯ ನಿಯಮಗಳ ಸಂಸ್ಕಾರಗೊಳಗಾಗದಿದ್ದರೂ ತನ್ನದೇ ಆದ ರಸವಿಶೇಷವನ್ನು ತಳೆದು ಬೆಳೆದ ಈ ಹಾಡುಗಳು ಇಂದಿಗೂ ಜನರ ನಾಲಿಗೆಗಳಲ್ಲಿ ನಲಿದುಲಿದು ನರ್ತಿಸುತ್ತವೆ.
ಇನ್ನು ಜಾನಪದ ನೃತ್ಯಗಳ ಪೈಕೆ ಕೋಲಾಟ, ಡೊಳ್ಳುಕುಣಿತ, ಪೂಜಾಕುಣಿತ, ನಂದಿಗೋಲು ಕುಣಿತ, ವೀರಭದ್ರಕುಣಿತ, ಕಂಸಾಲೆ, ಮುಂತಾದ ಹತ್ತು ಹಲವು ಪ್ರಕಾರಗಳು ಇಂದಿಗೂ ಗ್ರಾಮ ಹಾಗೂ ನಗರಗಳ ಪ್ರಸಿದ್ಧ ಜಾತ್ರೆಗಳಲ್ಲಿ ವಿಜೃಂಭಿಸುತ್ತವೆ. ಇದಲ್ಲದೆ ಬಗೆ ಬಗೆಯ ರಂಗೋಲಿಗಳು, ದೀಪ ಜೋಡನೆಯ ಕಲೆ, ಉಯ್ಯಾಲೆಯಾಟ, ಕೆಸರಾಟ, ಕುಸ್ತಿ, ಎತ್ತಿನಗಾಡಿ ಸ್ಪರ್ಧೆ, ಕೆಂಡ ಹಾಯುವ ರೋಮಾಂಚಕ ಆಟ, ಲಾಟಿ ಬೀಸೋ ಆಟ, ಈಜು, ಮೊಸರು-ಮಡಿಕೆ ಒಡೆಯುವ ಆಟ ಮೂಂತಾದ ಅನೇಕಾನೇಕ ಕ್ರೀಡಾವಿನೋದಗಳು ಸ್ಥಳೀಯ ಹಾಗೂ ಋತುಸಂಬಂಧಿ ಉತ್ಸವಗಳೊಡನೆ ಬೆರೆತು ಆನಂದವನ್ನು ಕೊಡುತ್ತವೆ.
ಶಿಲ್ಪಕಲೆಯಲ್ಲೂ ಮೈಸೂರು ಸೀಮೆಯು ಹಿಂದೆ ಬಿದ್ದಿಲ್ಲ. ಇಲ್ಲಿನ ದೇಗುಲ ಮಠ ಮಂಟಪಗಳ ನಿರ್ಮಾಣದ ಶೈಲಿಯಲ್ಲಿ ಸ್ವಂತಿಕೆಯಿದೆ. ಹೆಚ್ಚಾಗಿ ಕೃಷ್ಣ ಸಾಲಿಗ್ರಮಶಿಲೆ ಅಥವಾ ಬಳಪದ ಕಲ್ಲಿನ ಕೆತ್ತನೆಗಳನ್ನು ಒಳಗೊಂಡ ಹಲವು ಪ್ರಾಚೀನ ದೇಗುಲಗಳನ್ನು ನೋಡಬಹುದು. ಬೇಳೂರು ಹಳೇಬೀಡು, ಮೈಸೂರಿನ ಬಳಿಯ ಸೋಮನಾಥಪುರ, ತೆರಿಕೆರೆಯ ಬಳಿಯ ಅರ್ಕೇಶ್ವರ, ಹರಿಹರದ ಹರಿಹರೇಶ್ವರ ಮೂಂತಾದ ಹೊಯ್ಸಳರ ನಿರ್ಮಿತಿಗಳು ಜಗನ್ಮಾನ್ಯವಾದ ಶಿಲ್ಪಕಾಲವಿಶೇಷಗಳೆ ಆಗಿವೆ. ಇನ್ನು ಜೈನರ ಬಸಡಿಗಳು, ಅಲ್ಲಲ್ಲಿ ಕಾಣುವ ಬೌದ್ಧ ವಿಹಾರಗಳು-ಸ್ತೂಪಗಳು ತಮ್ಮದೇ ಆದ ಚಾಪನ್ನು ಮೂಡಿಸಿವೆ. ತಲಕಾಡಿನ ದೇಗುಲಗಳು, ನಂಜನಗೂಡು, ಚಾಮುಂಡೀಬೆಟ್ಟ, ನಂದಿಬೆಟ್ಟದ ತಪ್ಪಲಿನ ಭೋಗನಂದೀಶ್ವರ, ಮೈಸೂರು, ಬೆಂಗಳೂರು, ಕೋಲಾರ ಮುಂತಾದ ಇನ್ನು ಹಲವು ಜಿಲ್ಲಗಳಲ್ಲಿ ಕಾಣುವ ಪ್ರಾಚೀನ ಹಾಗೂ ಮಧ್ಯಕಾಲೀನ ದೇಗುಲಗಳು, ಅವುಗಳ ಶಿಲ್ಪವಿಶೇಷಗಳು ಈ ಪ್ರಾಂತದ ಜನರ ಕಲಾಭಿಜ್ಞತೆಗೆ ಕನ್ನಡಿ ಹಿಡಿದಿವೆ. ಶ್ರಾವಣಬೆಳಗೋಳದ ಗೊಮ್ಮಟದೇವನಂತೂ ತನ್ನ ಎತ್ತರಭಿತ್ತರಗಳಿಂದಲೂ, ಸೌಮ್ಯ ದಿವ್ಯ ಆಕರ್ಷಣೆಯಿಂದಲೂ ವಿಶ್ವಕೀರ್ತಿಶಿಖರಕ್ಕೇರಿದ್ದಾನೆ.
ವರ್ಣಚಿತ್ರಗಳನ್ನು ರಚಿಸಿ ಅದರ ಮೇಲೆ ಆಲಂಕಾರಿಕವಾಗಿ ಚಿನ್ನದ ತೆಳುವಾದ ಪದರಗಳನ್ನು ಅಂತಿಸಿ ಮಾಡುವ ’ಮೈಸೂರು ಅರಮನೆಯ ಚಿತ್ರಕಲೆ’ ಎನ್ನುವ ಹೆಸರಿನೆ ವಿಶೇಷ ಚಿತ್ರಶೈಲಿಯೇ ಬೆಳೆದು ನಿಂತಿದೆ. ಇವುಗಳಲ್ಲಿ ಪ್ರಸಿದ್ಧ ದೇವ ದೇವತೆಗಳ ಹಾಗೂ ಪೌರಾಣಿಕ ಕಥಾಪ್ರಸಂಗಗಳ ಚಿತ್ರಣವೇ ಹೆಚ್ಚು. ಬೆಲೆಬಾಳುವ ಈ ಕಲೆಯನ್ನು ಕಲಿಯುವ ಕಲಿಸುವ ಸಡಗರವು ಕಡಲಾಚೆಯ ಕಲಾರಸಿಕರನ್ನೂ ತಲುಪಿದೆ ಎಂದ ಮೇಲೆ ಇದರ ಕೀರ್ತಿಯ ವ್ಯಾಪಕತೆಯನ್ನು ಊಹಿಸಬಹುದು. ಮೈಸೂರಿನ ಗಂಜೀಫಾ ಕಲೆಯೂ ಸಾಕಷ್ಟು ಪ್ರಸಿದ್ಧವೇ. ಇದಲ್ಲದೆ ಗಂಧ ಹಾಗೂ ದಂತದ ಕೆತ್ತನೆಯ ಕೆಲಸವಂತೂ ವಿಶ್ವಮಟ್ಟದಲ್ಲಿ ಅಪಾರ ಕೀರ್ತಿಯನ್ನು ಪಡೆದಿರುವ ಕಲಾಪ್ರಕಾರ.
ಮೈಸೂರಿನ ವೀಳ್ಯ, ಮಲ್ಲಿಗೆ, ಅಗರಬತ್ತಿ, ಗಂಧದ ಎಣ್ಣೆ, ಸಾಬೂನು ಮುಂತಾದವು. ಮೈಸೂರು ರೇಶ್ಮೆ ಸೀರೆ, ನಂಜನಗೂಡಿನ ರಸಬಾಳೆ, ಕೊಡಗಿನ ಕಿತ್ತಳೆ, ಚನ್ನಪಟ್ಟಣದ ಬೊಂಬೆಗಳು, ಮುಂತಾದ ೨೦ಕ್ಕಿಂತ ಹೆಚ್ಚು ಉತ್ಪನ್ನಗಳು Geographical indication Tags ನ್ನು ಪಡೆದಿದ್ದು, ಭಾರತದಲ್ಲೇ ಅತಿ ಹೆಚ್ಚು (ಸುಮಾರು 28) GI Tagಗಳು ಕರ್ನಾಟಕಕ್ಕೆ, ಅದರಲ್ಲೂ ಮೈಸೂರು ಪ್ರಾಂತದ ಉತ್ಪನ್ನಗಳಿವೆ ಸಂದಿವೆ ಎನ್ನುವುದು ಹೆಮ್ಮೆಯ ವಿಷಯ. ಇದಲ್ಲದೆ ಬಗೆ ಬಗೆಯ ವಿನ್ಯಾಸಗಳಲ್ಲಿ ಬಿದಿರಿನ ಚಪ್ಪರಗಳನ್ನು ಕಟ್ಟುವ, ಬಗೆ ಬಗೆಯಾದ ಹೂವಿನ ಮಾಲೆಗಳನ್ನು ಕಟ್ಟುವ ಕಲಾಪ್ರಕಾರಗಳನ್ನೂ, ಸಾಂಪ್ರದಾಯಿಕ ವಾದ್ಯಗಳನ್ನು, ಪೂಜಾ ಸಾಮಗ್ರಿಯನ್ನೂ, ದೇವತಾ ಮೂರ್ತಿಗಳನ್ನೂ ತಯಾರಿಸುವ ವೃತ್ತಯನ್ನೇ ಜೀವನವನ್ನಾಗಿಸಿಕೊಂಡ ಜನಾಂಗಗಳು ಮನೆತನಗಳು ಶತಮಾನಗಳಿಂದ ಇದ್ದಾರೆ.
ಮೈಸೂರಿನ ಅಷ್ಟೇ ಅಲ್ಲ, ಭಾರತದ ಸಂಸ್ಕೃತಿಯನ್ನೂ, ಕಲೆಯನ್ನೂ ಬಹುಮಟ್ಟಿಗೆ ಪೋಷಿಸಿ ಬೆಳೆಸಿ ಉಳಿಸಿದ್ದು ಧಾರ್ಮಿಕ ಆಚಾರ ವಿಚಾರಗಳೆ ಎನ್ನುವುದು ಸತ್ಯ. ಸನಾತನ ಧರ್ಮ ಕೇವಲ ಒಂದು ಭೀತಿ-ನಂಬಿಕೆಗಳ ಶಾಸನವಾಗಿ ಉಸಿರುಗಟ್ಟಿಸದೆ, ಜಾತಿ-ವರ್ಣ-ಭೇದವೆನ್ನದೇ ಎಲ್ಲರಿಗೂ ತಮ್ಮ ಕಲೆ, ಸಂಸ್ಕೃತಿ ಹಾಗೂ ವೃತ್ತಿಗಳನ್ನು ಧರ್ಮದ ವೇದಿಕೆಯ ಮೇಲೆ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸುತ್ತ ಬಂದಿದೆ. ಹಾಗಾಗಿ ’ನಮ್ಮ ಮನೆತನದ ವಿನಮ್ರ ಸೇವೆ’ ಎಂಬ ಭಾವದಿಂದ ಹೂ-ಕಟ್ಟುವವರು, ಬಡಗಿಯವರು, ಅಕ್ಕಸಾಲಿಗರು, ಬೆರಣಿ, ತಟ್ಟುವವರು, ಮಾಗೆಲಸದವರು, ಕೂಲಿಯವರು, ಒಕ್ಕಲಿಗರು, ಆಳುಗಳು, ಜಮೀಂದಾರರೂ, ದೇವದಾಸಿಯರು, ರಾಜಕುಲದವರೂ, ಪುರೋಹಿತವರ್ಗದವರೂ, ವರ್ತಕರೂ, ಕುಂಭಾರರೂ, ಇತ್ಯಾದಿ ಎಲ್ಲರೂ ಒಂದಲ್ಲ ಒಂದು ರೀತಿ ತಮ್ಮ ತಮ್ಮ ಊರ ಹಾಗೂ ಮನೆತನದ ದೇಗುಲ, ಮಠ ಹಾಗೂ ಜಾತ್ರೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತ ಬಂದಿದ್ದು ಈ ನಾಡಿನ ಧಾರ್ಮಿಕ ಪರಂಪರೆಯನ್ನು ಸುಂದರವೂ ಸಂಮೃದ್ಧವೂ ಆಗಿ ಕಂಗೊಳಿಸುವಂತೆ ಮಾಡಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ