ಶನಿವಾರ, ಡಿಸೆಂಬರ್ 26, 2020

 

ಕರ್ನಾಟಕದ ಧಾರ್ಮಿಕ ಸಂಪ್ರದಾಯಗಳು

ಧರ್ಮ ಎನ್ನುವುದು ಭಾರತದಲ್ಲಿ ಕೇವಲ ಒಂದುದೇವರ ಆರಾಧನೆಯ ಪದ್ಧತಿಯಾಗಿರದೆ, ಅದೊಂದು ಜೀವನ-‘ಪ್ರಜ್ಞೆಆಗಿ ಬೆಳೆದು ಬಂದಿದೆ. ಹಾಗಾಗಿ ಧರ್ಮ ಎನ್ನುವುದು ಭಾರತದ ಹಿನ್ನಲೆಯಲ್ಲಿ ದೈವಧ್ಯಾನದ ಜೊತೆಗೆಜೊತೆಗೆ ಮಾನವೀಯತೆ, ನೀತಿ, ಸಾಮಾಜಿಕ ನ್ಯಾಯ, ಸತ್ಯಾನ್ವೇಷಣೆ, ತತ್ವಮೀಮಾಂಸೆ, ಅಂತರೀಕ್ಷಣೆ, ಆತ್ಮಸ್ಕರಣ, ಕರ್ತವ್ಯಪ್ರಜ್ಞೆ, ಉತ್ಸವಪ್ರೀತಿ, ಸಂಬಂಧ-ಬಾಂಧವ್ಯಗಳ ಬೆಸೆಯುವ ನಂಟು ----ರೂಪಗಳಲ್ಲಿ ಅನಾವರಣಗೊಳ್ಳುತ್ತ ಸಾಗಿದೆ.

ಕರ್ನಾಟಕದ ಧಾರ್ಮಿಕ ಸಂಪ್ರದಾಯಗಳೂ ಹೀಗೆ ಸ್ವೋಪಜ್ಞವಾಗಿ, ತನ್ನ ಇಕ್ಕೆಲಗಳಲ್ಲಿನ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಕಲಾತ್ಮಿಕ ಹಾಗೂ ಆರ್ಥಿಕ ಪ್ರಭಾವಗಳನ್ನೂ ಒಳಗೊಳ್ಳುತ್ತಲೇ ಬೆಳೆದಿವೆ. ವಿದೇಶೀ-ಆಕ್ರಮಣ-ಪೂರ್ವದ ಸುಭದ್ರ ಸ್ವತಂತ್ರ ಭಾರತದಲ್ಲಿದ್ದ ಸ್ವತಂತ್ರ  ಚಿಂತನಾಧಾರೆಯಲ್ಲಿ ಹುಟ್ಟಿಬೆಳೆದ ವೈದಿಕ-ಜೈನ-ಬೌದ್ಧ-ಸಿಕ್ಖ ಮುಂತಾದ ಮತಗಳ ಹಾಗೂ ಅವುಗಳ ಉಪಪಂಗಡಗಳ ಕೆಲವು ಮತಗಳ ವಿವರಗಳನ್ನು ಲೇಖನದ ಮಿತಿಯೊಳಗೆ ನೋಡೋಣ-

ಪ್ರಾಚೀನತಮವು ವೈದಿಕಧರ್ಮವೇ ಎನ್ನುವುದು ನಿರ್ವಿವಾದ. ನಿಸರ್ಗಪ್ರೀತಿ, ಸತ್ಯಾನ್ವೇಷಣೆ, ಅಂತರ್ಮುಖತೆ, ಜನ್ಮಮರಣಗಳ ಜಿಜ್ಞಾಸೆ, ಇಹಪರಗಳ ಸ್ವರೂಪ-ನಿತ್ಯಾನಿತ್ಯತೆಗಳ ಮೀಮಾಂಸೆಯೇ ವೈದಿಕ ಧರ್ಮಕ್ಕೆ ಸ್ಫೂರ್ತಿ ಎನ್ನಬಹುದು. ವೇದಯುಗದಲ್ಲೇ ಪ್ರಾರಂಭವಾದ ಸೇಶ್ವರ ನಿರೀಶ್ವರವಾದಗಳ ಅನುಯಾಯಿಗಳು ಕನ್ನಡದ ನೆಲದಲ್ಲೂ ಅನಾದಿಯಿಂದಲೂ ಇದ್ದೇ ಇದ್ದಾರೆ. ವೈದಿಕ ಕರ್ಮಗಳಾದ ಸಂಧ್ಯಾವಂದನ, ಷೋಡಶಸಂಸ್ಕಾರಾದಿಗಳು, ವ್ರತ-ಉತ್ಸವಾದಿಗಳು, ಪ್ರಾಯಶ್ಚಿತ್ತ, >ಜ್ಞದಾನತಪಸ್ಸುಗಳ ಕಲ್ಪನೆ ಕರ್ನಾಟಕದಲ್ಲೂ ಸುಭದ್ರವಾಗಿ ಬೆಳೆದ ಧಾರ್ಮಿಕ ವ್ಯವಸ್ಥೆಯಾಗಿದೆ. ಪುರಾಣಯುಗದಲ್ಲಿ ದೇವತಾ ಉಪಾಸನೆಗಳೇ ಮತ್ತಷ್ಟು ಬಣ್ಣ ತಾಳಿ, ಆಗಮ-ತಂತ್ರಾದಿ ಪದ್ಧತಿಗಳಿಗೆ ದಾರಿ ಮಾಡಿಕೊಟ್ಟಿತು ಎನ್ನಬಹುದು. ವೇದದಲ್ಲಿ ಕಾಣಬರುವ ರುದ್ರ, ವಿಷ್ಣು, ಸೂರ್ಯ, ದುರ್ಗಾ, ಗಣಪತಿ ಮುಂತಾದ ದೇವತೆಗಳೇ ಮುಂದೆ (ಕುಮಾರ ಕಾರ್ತಿಕೇಯನನ್ನೂ ಒಳಗೊಂಡು) ಷಡಾಗಮ-ತಂತ್ರಗಳ ಪದ್ಧತಿಗಳಾಗಿ ಬೆಳೆದವು. ಕರ್ನಾಟಕದಲ್ಲಿನ ಐದು ಪ್ರಮುಖವೇದ-ಪುರಾಣಪ್ರಸಿದ್ಧ ದೇವತೆಗಳ ವೈದಿಕ-ಆಗಮೋಕ್ತ ಆರಾಧನೆಗಳು ಪಂಚಾಯತನಪೂಜಾಪದ್ಧತಿಯಲ್ಲಿ ಇಂದಿಗೂ ಚಿರಸ್ಥಾಯಿಯಾಗಿವೆ.

ವೇದ-ವೇದಾಂತದರ್ಶನಗಳು

ಅವಿಚ್ಛಿನಪರಂಪರೆಯಲ್ಲಿ ಕರ್ನಾಟಕದಲ್ಲಿ ವೇದವೇದಾಂಗಗಳನ್ನೂ ವೇದಾಂತ ಹಾಗೂ ಪ್ರಾಚೀನ ದರ್ಶನಗಳನ್ನು ಅಧ್ಯಯನ ಮಾಡುತ್ತ ಬರಲಾಗಿದೆ. ತ್ರಿಮತಾಚಾರ್ಯರ ಆಗಮನ-ಪೂರ್ವದಲ್ಲಿದ್ದ ವೈದಿಕದರ್ಶನಗಳ ತತ್ವಸಿದ್ಧಾಂತಗಳ ಅಧ್ಯಯನವಂತೂ ಸಾಂಪ್ರದಾಯಿಕ ಗುರುಕುಲಗಳ ಪಠ್ಯದಲ್ಲಿ ಚಿರಸ್ಥಾಯಿಯಾಗಿವೆ. ತರ್ಕದರ್ಶನವಂತೂ ಶಾಸ್ತ್ರಚರ್ಚೆಯ ಪ್ರಕ್ರಿಯೆಗೇ ಆಧಾರಭೂತವಾಗಿದೆ. ಆದಿಶಂಕರಾಚಾರ್ಯರು ಮಂಡಿಸಿದ ವೇದಾಂತದ ಅದ್ವಯತತ್ವವು ಅವರಕಾಲದಿಂದಲೂ ಕರ್ನಾಟಕದ ವಿದ್ವಲ್ಲೋಕವನ್ನು ಬಹುವಾಗಿ ಪ್ರಭಾವಗೊಳಿಸಿದೆ. ಅದ್ವೈತವನ್ನೇ ವೇದಾಂತದ ಪರಮಾರ್ಥವೆಂದು ಸ್ವೀಕರಿಸಿ, ಅದನ್ನು ಕುಲಪದ್ಧತಿಯಲ್ಲಿ ಉಳಿಸಿ ಬೆಳೆಸಿದ ತ್ರಿವರ್ಣೀಯರು ಅಸಂಖ್ಯರು. ಆದಿಶಂಕರರು ಸ್ಥಾಪಿಸಿದರೆನ್ನಲಾಗುವ ಭಾರತದ ಚತುರಾಮ್ನಾಯಮಠಗಳಲ್ಲಿ ವಿದ್ಯೆ-ಪರಂಪರೆ-ರಾಜಪೋಷಣೆ ಹಾಗೂ ಜನಪ್ರಿಯತೆಯಲ್ಲಿ ಶೃಂಗೇರಿಯ ಶಾರದಾಪೀಠ ಅಗ್ರಮಾನ್ಯವಾದದ್ದು. ಕರ್ನಾಟಕದಾದ್ಯಂತ ಅದ್ವೈತಮತದ ಮಠಗಳು, ಪಾಠಶಾಲೆಗಳು, ಗುರುಪರಂಪರೆಗಳು, ಮನೆತನಗಳೂ ಇಂದಿಗೂ ಗಣನೀಯ ಸಂಖ್ಯೆಯಲ್ಲಿವೆ.

ತಮಿಳುನಾಡಿನ ಶೈವರಾಜರುಗಳ ಆಗ್ರಹಕ್ಕೆ ಒಳಗಾದ ರಾಮಾನುಜಾಚಾರ್ಯರಿಗೆ ಆಶ್ರಯ ಕೊಟ್ಟಿದ್ದಲ್ಲದೆ ಅವರ ವಿಶಿಷ್ಠಾದ್ವೈತಕ್ಕೂ ವೇದಿಕೆಯನ್ನು ಒದಗಿಸಿದ ಹೆಗ್ಗಳಿಕೆ ಕನ್ನಡನಾಡಿನದು. ಹೊಯ್ಸಳರಾಜರುಗಳಿಂದಾಗಿ ರಾಜಪೋಷಣೆಯನ್ನೂ ಪಡೆದು ಬೆಳೆದ ಮತಕ್ಕೆ ಕರ್ನಾಟಕದ ಮೇಲುಕೋಟೆಯೇ ಪ್ರಮುಖ ಕರ್ಯಭೂಮಿಯೂ, ಧಾರ್ಮಿಕಕೇಂದ್ರವೂ ಆಗಿತ್ತು. ಸರಳಭಕ್ತಿ-ಪ್ರಪತ್ತಿ, ವೈಖಾನಸಪದ್ಧತಿಯ ಪೂಜಾಪದ್ಧತಿ, ಸಾತ್ವಿಕ ಜೀವನಶೈಲಿ ಹಾಗೂ ನಾಮಸಂಕೀರ್ತನೆಗಳಿಗೇ ಒತ್ತು ಕೊಡುವುದರ ಮೂಲಕ, ಶ್ರೀವೈಷ್ಣವ ಮತವು ಜನಸಾಮಾನ್ಯರಿಗೆ ಹೆಚ್ಚು ಹತ್ತಿರವೂ ಆಯಿತು. ವ್ಯಾಪಕವಾಗಿ ಹರಡಿದ ಮತದ ಅನುಯಾಯಿಗಳು, ಮತದ ಐತಿಹಾಸಿಕ ಧಾರ್ಮಿಕಕೇಂದ್ರಗಳೂ, ಸಂಪ್ರದಾಯಗಳು ಕರ್ನಾಟಕದಲ್ಲಿ (ಹೆಚ್ಚಾಗಿ ಕರ್ನಾಟಕದ ದಕ್ಷಿಣಜಿಲ್ಲೆಗಳಲ್ಲಿ) ಇಂದಿಗೂ ಹೇರಳವಾಗಿ ಕಾಣಬರುತ್ತವೆ.

ಕರ್ನಾಟಕದಲ್ಲೇ ಹುಟ್ಟಿಬೆಳೆದ ಹೆಗ್ಗಳಿಕೆ ಇರುವ ಮತ ದ್ವೈತಮತ. ಶ್ರೀಮಧ್ವಾಚಾರ್ಯರು ಅದ್ವೈತಸಿದ್ಧಾಂತವನ್ನೊಪ್ಪದೇ ತಮ್ಮದೇ ಸ್ವತಂತ್ರ ವಿಚಾರಧಾರೆಯನ್ನು ಮಂಡಿಸಿ, ಹರಿಭಕ್ತಿಗೆ ಒತ್ತುಕೊಟ್ಟ ಪ್ರತಿಪಾದಿಸಿದ ಮತವು ಕರ್ನಾಟಕದ ಪ್ರಮುಖ ಧಾರ್ಮಿಕಸಂಪ್ರದಾಯಗಳಲ್ಲೊಂದಾಗಿದೆ. ಮುಂದೆ ಹರಿದಾಸರ ಮೂಲಕವೂ, ಅವರು ಹರಿಯಿಸಿದ ಕೀರ್ತನಾಮೃತದ ಕಾವ್ಯ-ಗೀತ-ನೀತಿ-ತತ್ವಜಿಜ್ಞಾಸೆಗಳ ಆಕರ್ಷಣೆಯಿಂದಲೂ ಮತವು ಜನಸಾಮಾನ್ಯರಿಗೆ ಹೆಚ್ಚು ಹತ್ತಿರವಾಗುತ್ತ ಬಂತು. ಇಂದಿಗೂ ಹರಿದಾಸರ ದೇವರನಾಮಗಳು ಕನ್ನಡದ ಮನೆಮನೆಗಳಲ್ಲಿ ಮನಮನಗಳಲ್ಲಿ ನಲಿದುನರ್ತಿಸುತ್ತಿವೆ.

ಕರ್ನಾಟಕದಲೂ ಕುಲಗಳು ಪರಂಪರಾಗತವಾಗಿ ಒಂದು ‘ಕುಲದೈವದ ಆರಾಧನೆ’ಗೆ ನಿಷ್ಠವಾಗಿರುವುದು ಕಾಣಬರುತ್ತದೆ. ವೇದ-ಆಗಮ-ವೇದಾಗಮ, ತಂತ್ರ-ತಂತ್ರಾಗಮ ಹಾಗೂ ಜಾನಪದೀಯ ಪದ್ಧತಿಗಳು ಹೆಚ್ಚಾಗಿ ಉಳಿದಿರುವುದು ಈ ಕೌಲಮಾರ್ಗಗಳಲ್ಲೇ. ಹೀಗೆ ಕೌಲಮುಖವಾಗಿಯೋ, ಗುರುಪ್ರಂಪರೆಯಲ್ಲೋ ಅರಳಿದ ಶೈವಾಗಮ-ವೈಷ್ಣವಾಗಮ-ಶಕ್ತ್ಯಾಗಮ-ಸೌರಾಗಮ-ಗಾಣಪತ್ಯಾಗಮ (ಹಾಗೂ ಕೌಮಾರಾಗಮ) ಮತ್ತು ತಂತ್ರಸಂಪ್ರದಾಯಗಳು ಭಾರತಾದ್ಯಂತ ಬೆಳೆದಂತೆ ಕರ್ನಾಟಕ್ಲದಲ್ಲೂ ಬೆಳೆದಿವೆ. ಕರ್ನಾಟಕದಲ್ಲಿ ಈ ಐದು ಆಗಮಗಳೂ ಪ್ರಸಿದ್ಧವಾಗಿವೆ.

ವೈದಿಕ ಹಾಗೂ ಆವಾಗಮಗಳೊಂದಿಗೆ ಈ ದೇವತಾ ಉಪಾಸನೆಗಳಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳು, ಭೊಗೋಲಿಕ ನೈಸರ್ಗಿಕ ಪ್ರಭಾವಗಳು, ಕಾಲಕಾಲದ ಸಂತ-ಯೋಗಿಗಳ ಮಾರ್ಗದರ್ಶನಗಳು, ಸಾಮಾಜಿಕ ಬದಲಾವಣೆಗಳೂ, ಜಾನಪದೀಯ ಸ್ವಾರಸ್ಯಗಳು, ಕಲಾಭಿಜ್ಞತೆ, ಸರ್ಜನಶೀಲತೆಗಳೂ ಸೇರುತ್ತ ನಾನಾ ಉಪಮತಗಳು ಪಂಗಡಗಳು, ಪದ್ಧತಿಗಳು ಹುಟ್ಟಿಕೊಂಡಿವೆ. ಹೀಗೆ ಅನೇಕಾನೇಕ ದೇವತಾರೂಪಗಳು ಹುಟ್ಟಿಕೊಂಡಿರುವಂತೆ ಕಂಡರೂ, ನಿಜಕ್ಕೂ ಈ ಎಲ್ಲವೂ ಈ ಪ್ರಮುಖ ಐದು ದೇವತಾ ರೂಪಗಳಲ್ಲಿಯೂ. ಆ ಐದು ಏಕಮೇವಾದ್ವಿತೀಯವಾದ ಪರಬ್ರಹ್ಮವನ್ನೇ ಪ್ರತೀಕಿಸುವಂತಹವೂ ಆಗಿದೆ. ಇದೇ ಹಿಂದೂಧರ್ಮದ ಸಂಕೀರ್ಣತೆಯಲ್ಲೂ ಭಾಸವಾಗುವ ಸರಳ ಸುಂದರ ಸತ್ಯ.

ಆಗಮಪಂಥಗಳು-

ಪಂಚಾಯತನ- ಶಿವ, ವಿಷ್ಣು, ಶಕ್ತಿ, ಸೂರ್ಯ ಹಾಗೂ ಗಣಪತಿಯರ ಪ್ರತೀಕ/ ಮೂರ್ತಿಗಳನ್ನು ಪಂಚಾಯತನದ ವಿನ್ಯಾಸದಲ್ಲಿ ಜೋಡಿಸಿ ಆರಾಧಿಸುವ ಪಂಚಾಯತನ ಸಂಪ್ರದಾಯ ಕರ್ನಾಟಕದಲ್ಲಿ ಬಹಳ ಹಳೆಯದು. ಆಗಮೋಕ್ತವಾದ ದೇಗುಲಗಳಲ್ಲಿ ಮುಖ್ಯದೇವತೆಯ ಜೊತೆಗೆ, ಪ್ರಾಕಾರದಲ್ಲಿ ಎಲ್ಲ ದೇವತೆಗಳು ಇರುವುದು ಸರ್ವೇಸಾಮಾನ್ಯ. ಶಿವನಿಗೆ ಬಾಣಲಿಂಗನ್ನು, ವಿಷ್ಣುವಿಗೆ ಶಾಲಗ್ರಾಮವನ್ನು, ಗಣಪತಿಗೆ ಶೋಣಾಶ್ಮ ವನ್ನು(ಕೆಂಪ್ಪು ಬಣ್ಣದ ಒಂದು ಜಾತಿಯ ಕಲ್ಲು), ಸೂರ್ಯನಿಗೆ ಸೂರ್ಯಕಾಂತಶಿಲೆಯನ್ನು ಹಾಗೂ ದೇವಿಗೆ ತಾಮ್ರದ ಶ್ರೀಯಂತ್ರವನ್ನು ಇಟ್ಟು ಅಥವಾ ಎಲ್ಲ ದೇವತೆಗಳಿಗೂ ಶಿಲ್ಪಶಾಸ್ತ್ರಾನುಸಾರವಾದ ಪ್ರಶಸ್ತ-ಕಲ್ಲಿನ ಮೂರ್ತಿಯನ್ನೇ ಇಟ್ಟು ಪೂಜಿಸಲಾಗುತ್ತದೆ.

ಸೂರ್ಯೋಪಾಸನೆಯನ್ನು ಹೆಚ್ಚಾಗಿ ಕರವಳಿಯಲ್ಲಿ ಮಾಡುತ್ತಿದ್ದರು. ಇಂದಿಗೂ ಅಲ್ಲಿ ಸೌರಮಾನಪಂಚಾಂಗವನ್ನು ಬಳಸಲಾಗುತ್ತದೆ. ತಲಕಾಡು ಮೂಂತಾದ ಕೆಲವು ಪ್ರದೇಶಗಳಲ್ಲೂ ಅಪರಿಗ್ರಹಾದಿ ಕಠಿನ-ವ್ರತಧಾರಿಗಲಾಗಿದ್ದ ನಿಷ್ಠಾವಂತ ಸೂರ್ಯೋಪಾಸಕರ ವಂಶಗಳು ಮೈಸೂರಿನ ಒಡೆಯರ ಕಾಲದಲ್ಲೂ ಪ್ರಸಿದ್ಧವಾಗಿದ್ದವು. ಆದರೆ ಶೈವ,ವೈಷ್ಣವ ಹಾಗೂ ಶಾಕ್ತಮತಗಳು ಹೆಚ್ಚು ಪ್ರಚಾರಕ್ಕೆ ಬಂದು, ಸೂರ್ಯೋಪಾಸಕರ ಸಂಖ್ಯೆ ಕಾಲಾಂತರದಲ್ಲಿ ಕುಗ್ಗಿದ್ದೂ ನಿಜವೇ. ಆದರೆ ಸಂಧ್ಯಾವಂದನಾದಿ ವೈದಿಕಕರ್ಮಗಳು, ಸಂಕ್ರಾಂತಿ, ರಥಸಪ್ತಮೀ, ಸೌರಮಾನಯುಗಾದಿ, ಮಾಘಮಾಸದ ವ್ರತೋಪಾಸಾನೆಗಳು ಮುಂತಾದವೂ ಸೌರೋಪಾಸನೆಯ ಸ್ವರೂಪಗಳನ್ನೂ ಎಲ್ಲ ದೇವತಾ ಉಪಾಸಕರೂ ಮಾಡುತ್ತ ಬಂದಿದ್ದಾರೆ. ಎಲ್ಲ ದೇಗುಲಗಲಲ್ಲೂ ನವಗ್ರಹಗಳೊಡನೆ ಅವರ ಅಧಿಪತಿಯಾದ ಸೂರ್ಯನ ಸನ್ನಿಧಿ ಇದ್ದೇ ಇರುತ್ತದೆ. ಸೂರ್ಯನ ಚಲವನ್ನೇ ಅನುಸರಿಸಿರುವ ವಿಶಿಷ್ಟವಾಸ್ತು ವಿನ್ಯಾಸವಿರುವ ಶೃಂಗೇರಿಯ ವಿದ್ಯಾಶಂಕರ ದೇಗುಲ, ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲಗಳಂತಹ ಉದಾಹರಣೆಗಳು ಇಲ್ಲದಿಲ್ಲ.

ಕರ್ನಾಟಕದಲ್ಲಿ ವ್ಯಾಪಕವಾದದ್ದು ಶೈವಧರ್ಮ. ವೈದಿಕ, ಆಗಮ, ವೇದಾಗಮ, ತಂತ್ರ, ತಂತ್ರಾಗಮ ಪದ್ಧತಿಗಳಲ್ಲದೇ, ಪ್ರಾದೇಶಿಕ ಪದ್ಧತಿಗಳೂ, ಕುಲಪದ್ಧತಿಗಳೂ ಜಾನಪದಾಂಶಗಳೂ ಸೇರಿರುವ ಶಿವೋಪಾಸನೆಯು ಹಲವಾರು ಶಾಖೆಗಳಲ್ಲಿ ಬೆಳೆದು ಹೆಮ್ಮರವಾಗಿ ನಿಂತಿದೆ. ದಕ್ಷಿಣಭಾರತಕ್ಕೆ ಬಂದ ಅಗಸ್ತ್ಯರು ಶೈವಭಕ್ತಿಯನ್ನು ಪ್ರಚಾರ ಮಾಡಿದರೆಂದೂ, ಅವರ ಪತ್ನಿಯಾದ ಲೋಪಾಮುದ್ರೆಯು (ಕಾವೇರಿ) ಶಕ್ತಿ ಉಪಾಸನೆಯ ಪ್ರತೀಕಳೆಂದು ಪರಂಪರಾಗತ ನಂಬಿಕೆ. ವೇದದ ರುದ್ರನ ನಾಮರೂಪಗಳೇ ಶೈವೋಪಾಸನೆಗೆ ಮೂಲ. ಅದಲ್ಲದೆ ಪುರಾಣದ ಕಥೆಗಳಲ್ಲಿ ಪರಿವಾರಗಣವನ್ನು ಹೊಂದಿ ವರ್ಣರಂಜಿತನಾದ ರುದ್ರನ ಉಪಾಸನೆಗೆ ಕಾಲಾಂತರದಲ್ಲಿ ಆಯಾಮಗಳೂ ಬೆಳೆದವು, ಕರ್ನಾಟಕದಲ್ಲಿ ಶೈವೋಪಾಸನೆಯ ’ಅತಿಮಾರ್ಗ’ ಶಾಖೆಯ ಪಾಶುಪತ, ನಕುಲ, ಕಾಲಮುಖ, ಲಿಂಗಾಯತ ಪಥಗಳು, ’ಮಂತ್ರಮಾರ್ಗ’ದ ಕಾಪಾಲಿಕರು (ಅವುಗಳೊಳಗೆ- ಕೌಲ ಮತ್ತು ತ್ರಿಕ ಎಂಬ ಭೇದಗಳು), ಅಘೋರಿಗಳು ಹಾಗೂ ತಮಿಳುನಾಡಿನ ಪ್ರಭಾವಕ್ಕೆ ಒಳಪಟ್ಟ ಶೈವಪದ್ಧತಿಗಳೂ ಸೇರಿವೆ. ಇದಲ್ಲದೆ ಗ್ರಾಮಗಳಲ್ಲಿ ಪೂಜಿಸಲಾಗುವ ಕ್ಷೇತ್ರಪಾಲಕನಾದ ಮುನೇಶ್ವರನಾಗಿಯೂ ಶಿವನುಪಾಸ್ಯನಾಗಿದ್ದಾನೆ. ಇದಲ್ಲದೆ ಕಾಶ್ಮೀರದ ಪ್ರತ್ಯಭಿಜ್ಞಾದರ್ಶನ, ನಾಥಸಂಪ್ರದಾಯಗಳೂ ಕರ್ನಾಟಕದ ಸಾಧಕರನ್ನು ಆಕರ್ಷಿಸಿವೆ. ಹಿಮಾಲಯಾದಿ ತಪಃಕ್ಷೇತ್ರಗಳಿಗೆ ಸಂಚರಿಸುವ ಕನ್ನಡದ ಸಾಧಕರಿಂದಲೂ, ಕರ್ನಾಟಕದ ಕಾಡುಮೇಡುಬೆಟ್ಟಗಳಲ್ಲಿ ಸಂಚರಿಸುವ ಪರರಾಜ್ಯದ ಸಾಧಕರಿಂದಲೂಇಂತಹ ಹಲವಾರು ಸಾಧನಾಂಶಗಳು ವಿನಿಮಯವಾಗುತ್ತಲೇ ಬಂದಿವೆ. 

ಇದಲ್ಲದೆ ನದಿಗಳ ಉಗಮಸ್ಥಾನ, ನದೀಸಂಗಮ, ಗುಹೆ, ಬೆಟ್ಟ ಮುಂತಾದ ಕಡೆಗಳಲ್ಲಿ ಶಿವನ ಆವಾಸವಿರುವುದು ಸರ್ವೇಸಾಮಾನ್ಯ, ಪುರಾಣಪ್ರಸಿದ್ಧವಾದ ಕಥೆಗಳಿಗೆ ನಂಟಿರುವ ಹಲವಾರು ಶಿವಕ್ಷೇತ್ರಗಳು ಕರ್ನಾಟಕದಲ್ಲಿವೆ.

ಇವಲ್ಲದೆ ಮಲೈಮಹದೇಶ್ವರರಿಂದ ಅನುಗ್ರಹೀತರಾದ ಪ್ರಾಂತಗಳ ಜನರು ತತ್ಸಂಬಂಧಿಯಾದ ಜಾತ್ರೆ ಪೂಜೆ ಉತ್ಸವಗಳನ್ನು ಆಚರಿಸುತ್ತಾರೆ. ಶೈವೋಪಾಸನೆಯ ಹಿನ್ನಲೆಯಲ್ಲೇ ಅರಳಿದ ಡೊಳ್ಳುಕುಣಿತ, ವೀರಗಾಸೆ, ನಂದಿಕೋಳುಕುಣಿತ, ಕಂಸಾಲೆ ಮುಂತಾದ ಕಲಾಪ್ರಕಾರಗಳೂ ಕರ್ನಾಟಕದ ಧಾರ್ಮಿಕಸಾಂಸ್ಕೃತಿಕ ಹೆಗ್ಗುರುತುಗಳೇ ಆಗಿವೆ.

ಕದಂಬರ ಮಧುಕೇಶ್ವರ, ಚಾಳುಕ್ಯರ ಬದಾಮಿಯಲ್ಲಿನ ಶಿವದೇಗುಲಗಳು, ಮೈಸೂರಿನ ಒಡೆಯರು ಪೂಜಿಸುತ್ತಿದ್ದ ನಂಜನಗೂಡಿನ ನಂಜುಂಡೇಶ್ವರ, ಬೆಂಗಳೂರಿನ ನಾಡಪ್ರಭುವಾಗಿದ್ದ ಕೆಂಪೇಗೌಡರ ಪೂಜ್ಯವಾದ ನಂದೀಬೆಟ್ಟದ ಯೋಗ ಮತ್ತು ಭೋಗನಂದೀಶ್ವರರು, ಶಿವಗಂಗೆಯ ಹಾಗೂ ಬೆಂಗಳೂರಿನ ಗಂಗಾಧರೇಶ್ವರರಲ್ಲದೇ, ಚೋಳರೂ ಗಾಂಗರೂ ರಾಷ್ಟ್ರಕೂಟರೂ ಹಾಗೂ ಇತರ ಚಿಕ್ಕ ಪುಟ್ಟ ಪಾಳೇಗಾರರು ಆರಾಧಿಸಿದ ಶೈವದೇಗುಲಗಳ ಪಟ್ಟಿಯನ್ನೇ ಮಾಡುತ್ತ ಸಾಗಬಹುದು.

ವೀರಶೈವಮತ-

ಶೈವಾಗಮದಿಂದಲೇ ಉದ್ಭವಿಸಿಯೂ ಸ್ವತಂತ್ರಶೈಲಿಯಲ್ಲಿ ಬೆಳೆದ ವೀರಶೈವಮತಕ್ಕೂ ಕರ್ನಾಟಕವೇ ತವರೂರು. ಮೂಲತಃ ಅಗಸ್ತ್ಯಪ್ರಣೀತವಾಗಿದ್ದು ರೇಣುಕಾಚಾರ್ಯರಿಗೆ ಉಪದೇಶಿಸಲಾದ ವೀರಶೈವಪದ್ಧತಿಯೂ ಮುಂದೆ ಬಸವೇಶ್ವರರ ಕಾಲದಲ್ಲಿ ಧಾರ್ಮಿಕ-ಸಾಮಾಜಿಕ ಆಂದೋಲನಕ್ಕೇ ಆಧಾರವಾಯಿತು. ಕೆಲವಾರು ವೈದಿಕ ಪದ್ಧತಿಗಳನ್ನು ಪ್ರಶ್ನಿಸಿದ ಬಸವೇಶ್ವರರು, ಸರ್ವಜನ-ಸಾಧಾರಣವಾಗಬಹುದಾದ ಸರಳ ಭಕ್ತಿ-ಧ್ಯಾನ-ಕಾಯಕವನ್ನು ಎತ್ತಿ ಹಿಡಿದು, ವರ್ಣ-ಕುಲ-ಲಿಂಗ-ಭೇದಗಳನ್ನಳಿಸಿ, ಶಿವಭಕ್ತಿಯು ವ್ಯಾಪಿಸುವಂತೆ ಮಾಡಿದರು. ಬಸವೇಶ್ವರರು ವೇದಾಗಮಗಳಲ್ಲಿ ಹರಿದು ಬಂದ ಭಕ್ತಿ- ಜಿಜ್ಞಾಸೆ-ಆರಾಧನೆ-ಧ್ಯಾನ-ವೈರಾಗ್ಯ-ನಿಷ್ಕಾಮಕರ್ಮ-ಮುಮುಕ್ಷುತ್ವಾದಿಗಳನ್ನು ತಾವು ಮನಸಾ ಅನುಸರಿಸಿ ತಮ್ಮ ಅನುಯಾಯಿಗಳಿಗೂ ಆದರ್ಶವಾದರು.

ಮತದ ಪಂಚಾಚಾರ್ಯರ ಉಪಾಸನಾಪದ್ಧತಿಗಳಲ್ಲಿ ಅಲ್ಪಸ್ವಲ್ಪ ಪ್ರಾದೇಶಿಕ ಭೇದಗಳ ಹೊರತು, ಇಷ್ಟಲಿಂಗ ಧ್ಯಾನ, ಕಾಯಕ, ಜಂಗಮಸೇವೆಗಳು ಎಲ್ಲ ವೀರಶೈವೀಯಪಠಗಳ ಸಮಾನ ಆಚಾರಗಳು. ವೀರಶೈವಪಂಥದ ಅಲ್ಲಮರೇ ಮೊದಲಾದ ದಾರ್ಶನಿಕ ಶರಣರ ವಚನಗಳ ಔನ್ನತ್ಯ ವೇದಂತ ತತ್ವವನ್ನೇ ಧ್ವನಿಸಿದರೆ, ಬಸವಣ್ಣನಂತಹವ ವಚನಗಳಲ್ಲಿ ಲೋಕನೀತಿ, ಸಾಮಜಿಕ ನ್ಯಾಯ ಹಾಗೂ ಭಕ್ತಿ-ಶರಣಾಗತಿ-ಮನಸ್ಸಂಯಮಾದಿಗಳ ಬೋಧೆ ಕಾಣುತ್ತದೆ. ಐಹಿಕ ಕಟ್ಟಲೆಗಳಿಂದ ಸಿಡಿದೆದ್ದ ಅಕ್ಕಮಹಾದೇವಿಯಂತಹ ಮಹಿಳಾಮಣಿಯರ ವಚನಗಳಲ್ಲಿ ಅಂತರಂಗದ ನಿರಂತರ ವಿಮರ್ಶೆ, ಲೋಕವನ್ನು ಎದುರಿಸುವ ಕೆಚ್ಚು ಎದ್ದು ಕಾಣುತ್ತದೆ. ಒಟ್ಟಿನಲ್ಲಿ ವೀರಶೈವಪಂಥವು ತನ್ನ ಶರಣಪರಂಪರೆಯ ಸಾತ್ವಿಕಚರಿತೆಗಳಿಂದಲೂ, ವಚನಸಾಹಿತ್ಯದ ಹೊಳಹುಗಳಿಂದಲೂ, ವರ್ಣಭೇದರಾಹಿತ್ಯ, ಭಕ್ತಿ ಹಾಗೂ ಕಾಯಕ್ಕೇ ಕೊಟ್ಟ ಪ್ರಾಮುಖ್ಯತೆಯಿಂದಲೂ ಕರ್ನಾಟದ ತುಂಬೆಲ್ಲ ವ್ಯಾಪಿಸಿರುವ ಜನಪ್ರಿಯ ಧಾರ್ಮಿಕಸಂಪ್ರದಾಯವಾಗಿದೆ. ವೀರಶೈವಪಥದ ಹಲವು ಮಠ ಮಂದಿರ ಹಾಗೂ ಪುಣ್ಯಕ್ಷೇಟ್ರಗಳು ಕರ್ನಾಟಕದಲ್ಲಿ ಅಲ್ಲಲ್ಲಿ ಕಂಗೊಳಿಸುತ್ತವೆ.

ಶಿವಾವತಾರವೆನಿಸುವ ಮಲೈಮಹದೇಶ್ವರರು ಓಡಾಡಿದ ಪ್ರಾಂತಗಳಲ್ಲಿ ಅವರ ಹೆಸರಿನ ಪಂಥಗಳು, ದೇಗುಲಗಳು, ಪೂಜಪಾಧತಿ, ಜಾತ್ರೆ ಉತ್ಸವಾದಿಗಳು ಹುಟ್ಟಿಬೆಳೆದಿವೆ. ಇಂದಿಗೂ ಮಾದೇಶ್ವರ ಬೆಟ್ಟ, ಅಲ್ಲಿನ ಜಾತ್ರೆಗಳು, ಅಲ್ಲಿನ ಯತಿಗಳು, ಅದಕ್ಕೆ ನಡೆದುಕೊಳ್ಳುವ ಕುಲಕುಟುಂಬಗಳು ಅಸಂಖ್ಯ. 

ಮಧ್ಯ-ಉತ್ತರಭಾರತಗಳಲ್ಲಿ ಹುಟ್ಟಿ ಬೆಳೆದ ನಾಥಪಂಥವೂ ಕರ್ನಾಟಕದಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿದೆ. ಅಘೋರಿಗಳಲ್ಲದೆ ಗೃಹಸ್ಥರಾಗಿದ್ದೂ ನಾಥಪಂಥದ ಸಿದ್ಧಾಂತಗಳನ್ನು ಅನುಸರಿಸುವ ಕುಲಗಳು ಇವೆ. ಆದಿಚುಂಚುನಗಿರಿ ಮಠಸಂಸ್ಥಾನದ ಯತಿಗಳೂ ನಾಥಪಂಥದ ಮೂಲದಿಂದ ದೀಕ್ಷಿತರಾದವರೆ.

ಶಕ್ತಿದೇವತೆ-

ಶಕ್ತಿಯ ಉಪಾಸನೆಯ ಮೂಲವೂ ವೇದಗಳಲ್ಲೇ ಸಿಗುತ್ತದೆ. ದೇವರನ್ನು ಮಾತೃರೂಪದಲ್ಲಿ ಆರಾಧಿಸುವ ಶರಣುಹೊಗುವ ಕ್ರಮ ಭಕ್ತಿಯಲ್ಲಿ ಅನುಪಮ ಸ್ವಾರಸ್ಯವನ್ನು ಪಡೆದಿರುವ ಮಾರ್ಗ. ಪುರಾಣಗಳ ಪ್ರಭಾವದಿಂದ ಶಕ್ತಿದೇವತೆಯು ತ್ರಿಮೂರ್ತಿಗಳ ಶಕ್ತಿ(ಪತ್ನಿ)ರೂಪವಾಗಿ ಲಕ್ಶ್ಮೀ ಸರಸ್ವತೀ ಹಾಗೂ ಪಾರ್ವತಿಯಾಗಿ ಕಾಣಬರುತ್ತಾಳೆ. ಇನ್ನು ಶಚೀ, ದ್ವಯಾನಿ, ಸಿದ್ಧಿಬುದ್ಧಿ ಮುಂತಾದ ಇತರ ಶಕ್ತಿವಿಶೇಷಗಳೂ ಅವಳ ರೂಪಗಳೆ. ಕೇನೋಪನಿಷ್ಟ್ತಿನ ಉಮಾಹೈಮವತಿಯ ಕಲ್ಪನೆಯು, ಕಾಳಿಕಾದಿಪುರಾಣಗಳ ರಾಕ್ಷಸಸಂಹಾರಕಿ, ಸಜ್ಜನರಕ್ಷಕಿ ದೇವಿಯು, ಸೇರಿದಂತೆ ಅನೇಕ ಸ್ಥಳಪುರಾಣಗಳು, ಸಾಧಕರ ಅಭಿಮತಗಳು ಹಾಗೂ ಸಿಧಿಮಾರ್ಗದ ಹೆದ್ದಾರಿಗಳಾದ ಸಾಧನಾಪಥಗಳು ಈ ಶಕ್ತ್ಯಾಗಮದಲ್ಲಿವೆ. ಹಂಸಾಚಾರ, ಸಮಯಾಚಾರ, ವಾಮಾಚಾರ, ರಹೋಯೋಗ, ಶ್ರೀಚಕ್ರೋಪಾಸನೆ, ಕುಂಡಲಿನೀಧ್ಯಾನ, ಮುಂತಾದ ಹತ್ತು ಹಲವು ಆಗಮ, ತಂತ್ರ ಹಾಗೂ ಜಾನಾದೀಯ ಶಕ್ತಿ ಉಪಾಸನೆಗಳು ಅನಾದಿಯಿಂದಲೂ ಆಚರಣೆಯಲ್ಲಿವೆ.

ದೇವಿಯ ಸೌಮ್ಯರೂಪಗಳಾದ ಲಕ್ಷ್ಮೀ ಸರಸ್ವತೀ ಗೌರಿಯರ ಆರಾಧನೆ, ವ್ರತಗಳೊಂದೆಡೇಯಾದರೆ, ದೇವಿಯ ಯುದ್ಧಭಯಂಕರ ಸ್ವರೂಪವಾದ ಕಾಳಿ, ದುರ್ಗಾ ರೂಪಗಳು ಮತ್ತೊಂಡೇ ಜನಪ್ರಿಯವಾಗಿವೆ. ಬಗೆಬಗೆಯ ಗೌರೀವ್ರತಗಳಂತೂ ಕರ್ನಾಟಕದ ಅಂಗನೆಯರಲ್ಲಿ ಬಹಳ ಜನಪ್ರಿಯ. ಭಾದ್ರಪದದ ಸ್ವರ್ಣಗೌರಿ, ಜ್ಯೇಷ್ಠಾಗೌರೀ, ಮಂಗಲಗೌರಿ, ಕೇದಾರಗಔರಿ, ಫಲಗೌರಿ, ಸೀಗೆಗೌರೀ, ಉಯ್ಯಾಲೆಗೌರಿ, ಗಾಗೌರಿ ಮುಂತಾದ ೨೦ಕ್ಕೂ ಹೆಚ್ಚು ಗೌರೀವ್ರತಗಳು ಆಚರಣೆಯಲ್ಲಿವೆ.

ಯೆಲ್ಲಮ್ಮನ ಪಂಗಡವೇ ಇದೆ. ಯೆಲ್ಲಮ್ಮ ದೇವಿಯ ಅನುಸಾರಿಣಿಯರು ತಾವು ಎನ್ನುವ ಸ್ತ್ರೀಕುಲಗಳು ತಮ್ಮದೇ ನಿರ್ದಿಷ್ಟ ಆರಾಧನಾಪದ್ಧತಿಗಳನ್ನೂ, ಸಾಮಾಜಿಕ ಕಟ್ಟುಪಾಡುಗಳನ್ನೂ, ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹೊಂದಿವೆ.

ವಿಷ್ಣು-

ವಿಷ್ಣು ಕನ್ನಡನಾಡಿನ ಜನಪ್ರಿಯ ದೇವತೆ. ಕರ್ನಾಟಕದ ತುಂಬ  ನಾರಾಯಣ, ರಂಗನಾಥ, ನರಸಿಂಹ, ರಾಮ, ಕೃಷ್ಣ ಮುಂತಾದ ಹತು ಹಲವು ವಿಷ್ಣುರೂಪಗಳ ಉಪಾಸನೆಗಳು ನಡೆಯುತ್ತವೆ.  ವಿಷ್ಣುವನ್ನೇ ಅರದೈವದ ಆತ್ಯಂತಿಕ ಸ್ವರೂಪ ಎಂದು ನಂಬುವ ವೈಷ್ಣವ ಮತಗಳೂ ಕರ್ನಾಟಕದಲ್ಲಿವೆ. ವಿಷ್ಣುವನ್ನು ಶಾಲಗ್ರಾಮಶಿಲೆಯಲ್ಲಿ ಪೂಝಿಸುವ ಕುಲಪರಂಪರೆಗಳು ಅಸಂಖ್ಯ. ವೈಷ್ಣವ ಆಗಮವಲ್ಲದೆ ತಂತ್ರವೂ ಹಲವೆಡೇಗಳಲ್ಲಿ ಕಾಣಬರುತ್ತದೆ. ರಾಮೋತ್ಸವ, ಕೃಹ್ಣೋತ್ಸವಗಳು ಹಾಗೂ ರಾಮಾಯಣ ಮಹಾಭಾರತ ಅಭಾಗವತಾದಿಗಳ ಪಠನ, ಶ್ರವಣ ವ್ಯಾಖ್ಯಾನಗಳೇ ಒಂದು ಪುಣ್ಯಕರ್ಮವಾಗಿ ಕರ್ನಾಟಕದಾದ್ಯಂತ ಜನಪ್ರಿಯ ಧಾರ್ಮಿಕಸಂಸ್ಕೃತಿಯಾಗಿದೆ. ಹರಿನಾಮಸಂಕೀರ್ತನೆಗಂತೂ ಬಹಳ ಒತ್ತುಕೊಡ್ಡುತ್ತ ಬರಲಾಗಿದೆ. ಗ್ರಾಮನಗರಗಳಲ್ಲಿ ಸಾರ್ವಜನಿಕವಾದ ಭಜನಕೂಟಗಳು, ನಾಮಜಪಯಜ್ಞ ಮುಂತಾದವುಗಳು ಹೆಚ್ಚಾಗಿ ನಡೆಯುವುದು ವಿಷ್ಣುವಿನ ಹೆಸರಲ್ಲೇ. ವೈದಿಕ, ಆಗಮ, ವಖಾನಸ ಜಾನಪದಗಳಲ್ಲದೇ. ಪ್ರಾದೇಶಿಕ ಅಥವಾ ಕುಲಪದ್ಧತಿಗಳ ಮೂಲಕವೂ ವಿಷ್ಣೂವನ್ನು ಆರಾಧಿಸುವ ವಿಧಾನಗಳಿವೆ. 

ಗಣಪತಿ-

ಪಂಚಾಯತನದಲ್ಲಿ ಆರಾಧಿಸುವ ಜೊತೆಗೇ, ಯಾವುದೇ ದೇವತಾಪೂಜೆಯ ಆದಿಯಲ್ಲೂ, ಶುಭಕಾರ್ಯಾರಂಭದಲ್ಲೂ ವಿಘನೇಶ್ವ್ರನಾದ ಗಣೇಶನ ಸ್ಮರಣೆ ಪೂಜನ ಖಡ್ಡಾಯವಾಗಿದೆ. ಗಾಣಪತ್ಯಾಗಮ ಹಾಗೂ ಗಣಪತಿತಂತ್ರಗಳನ್ನು ಅನುಸರಿಸುವ ಸಾಹಕಪರಂಪರೆಗಳು ಕರ್ನಾಟಕದಲ್ಲಿವೆ. ಪ್ರತಿನಿತ್ಯವೂ ಗಣಹೋಮವನ್ನು ಮಾಡುವ ಕುಲಗಳೂ ಇವೆ. ಸತ್ಯಗಣಪತಿ, ವರಸಿದ್ಧಿಗಣ್ಪತಿ ಮುಂತಾದರೂಪಗಳಲ್ಲದೆ, ಉಚ್ಛಿಷ್ಠಗಣಪತಿ ಮುಂತಾದ ತಾಂತ್ರಿಕರೂಪಗಳ ಆರಾಧಾನೆಯೂ ಕಾಣಬರುತ್ತದೆ. ಅರ್ವಾಚೀನಕಾಲದಲ್ಲಿ ಸಂಕಷ್ಟಹರಗಣತಿಯ ಮಾಸಿಕ ವ್ರತವೂ ಸುಪ್ರಸಿದ್ಧವಾಗುತ್ತ ಬಂದಿದೆ. ಪುರಾಣಪ್ರಸಿದ್ಧವಾದ ಕಥೆಗಳ ಹಿನ್ನಲೆಯುಳ್ಳ ಗೋಕರ್ಣಾದಿಕ್ಷೇತ್ರಗಳೂ, ಪ್ರಾಚೀನ ಗಣಪತ್ಯುಪಾಸನಾಕೇಂದ್ರಗಳಾಗಿವೆ.

ದರ್ಭೆ, ಮೋದಕ, ೨೧ ಸಂಖ್ಯೆಯ ಬಸ್ಕಿ, ಮಂತ್ರೋಕ್ತ ಹೋಮ, ಪೂಜೆಗಳು ಕರ್ನಾಟಕದಾದ್ಯಂತ ಸಮಾನವಾಗಿ ಕಾಣಬರುವ ಗಣಪತಿಯ ಉಪಾಸನಾಂಶಗಳು. ಆದರೆ ತಂತ್ರ ಹಾಗೂ ಪ್ರಾದೇಶಿಕ ಅಂಸಗಳನ್ನು ಹೊಂದಿ ಇದರೊಂದಿಗೆ ನಿವೇದಿಸಲಾಗುವ ದ್ರವ್ಯಗಳು ಬದಲಾಗುತ್ತವೆ.

ಗ್ರಾಮದೇವತೆಗಳು

ಮುನೇಶ್ವರ, ಸಪ್ತಮಾತೃಕೆಯರು, ಎಲ್ಲೆಯಮ್ಮಗಳು ಸೇರಿದಂತೆ ಹಲವು ಗ್ರಾಮದೇವತೆಗಳಿದ್ದಾರೆ. ಗ್ರಾಮನಗರಗಳ ಎಲ್ಲೆಗಳಲ್ಲಿ ಎಲ್ಲೆಯಮ್ಮ (ಯೆಲ್ಲಮ್ಮ), ಮಾರಮ್ಮ, ಪಟ್ಲದಮ್ಮ ಮುಂತಾದ ಊರಿಗೊಂದುಅಮ್ಮ’ ಇದ್ದೇ ಇರುತ್ತಾಳೆ. ಇದು ನಮ್ಮ ದೇಶಾದ್ಯಂತ ಶಕ್ತಿದೇವತೆಗಿರುವ ಮಾನ್ಯತೆ. ಕಾಡು, ಬೆಟ್ಟಗಳಲ್ಲೂ ಸಪ್ತಮಾತೃಕೆ, ಗಂಗಮ್ಮ ಮುಂತಾದ ದೇವಿಯರ ಆವಾಸ ಕಾಣಬರುತ್ತದೆ. ದೇವಿಯನ್ನು ವೈದಿಕ, ಆಗಮೋಕ್ತ, ವೇದಾಗಮಮಿಶ್ರ, ತಂತ್ರ, ತಂತ್ರಾಗಮ ಮಿಶ್ರ ಹಾಗೂ ಮುಗ್ಧ ಜಾನ್ಪದೀಯ, ಕೌಲ, ಹಾಗೂ ಪ್ರಾದೇಶಿಕ ಪದ್ಧತಿಗಳಲ್ಲಿ ಪೂಜಿಸಲಾಗುತ್ತದೆ. ದೇವಿಗೆ ಹವಿಷ್ಯನ್ನವನ್ನು ನಿವೇದಿಸುವ ಪದ್ಧತಿಗಳೂ, ಪ್ರಾಣಿಬಲಿಕೊಡುವ ಸಂಪ್ರ ಸಾಂಕ್ರಾಮಿಕ ರೋಗಗಳ ಹರಡಿದ ಕಾಲದಲ್ಲೂ ಮಾರಕಶಕ್ತಿಯು ತಾರಕಶಕ್ತಿಯಾಗಲಿ ಎಂಬ ಹಾರಿಕೆಯೊಂದಿಗೆ ’ಅಮ್ಮನನ್ನು ಪೂಜಿಸುವ ಪದ್ಧತಿ ಇದೆ.  ದಾಯಗಳೂ ಒಟ್ಟೊಟ್ಟಿಗೇ ಬೆಳೆದಿವೆ. ಇವೆಲ್ಲ ಆಯಾ ಜನರ ಆಹಾರ ಹಾಗೂ ವೃತ್ತಿಗೆ ಸಂಬಂಧಿಸಿದ ಸ್ವತಂತ್ರ ಶೈಲಿಗಳು.

ಕುಲದೇವತಾಪದ್ಧತಿ

ಕುಲದೇವರು ಮನೆದೇವರು, ಒಲಿದದೇವರು ಎಂಬ ಕಲ್ಪನೆಗಳೇ ಉಪಾಸನಾಪರಂಪರೆಗಳಿಗೆ ಚಿರಾಯುವನ್ನು ನೀಡಿದೆ. ವರ್ಷಕ್ಕೊಮ್ಮೆಯಾದರೂ ಮನೆದೇವರ ಪೂಜೆ, ಮನೆದೇವರ ಜಾತ್ರೆ, ಮನೆದೇವರಿಗೆ ಕಾಣಿಕೆ, ಮುಂತಾದವುಗಳನ್ನು ಆಸ್ಥೆಯಿಂದ ಉಳಿಸಿಕೊಂದಿರುವವರು ಅಸಂಖ್ಯರು.

ಶಿವ-ವಿಷ್ಣು-ಸುಬ್ರಹ್ಮಣ್ಯ-ದೇವಿಯರನ್ನು ತಮ್ಮ ಕುಲದೈವ, ಮನೆದೇವರು, ಇಷ್ಟದೈವ ಎಂದು ಆರಾದಿಸುವ ಕನ್ನಡಕುಲಗಳ ಸಂಖ್ಯೆ ಗಣಿಸಲಾಗದಷ್ಟು ಅಗಾಧವಾಗಿದೆ. ಹಾಗಾಗಿ ಗ್ರಾಮಗ್ರಾಮದಲ್ಲೂ, ನಗರನಗರದಲ್ಲೂ, ಬೆಟ್ಟ, ಕಾಡು, ನದೀತೀರ, ಸಂಗಮ, ಎಲ್ಲೆಲ್ಲೂ ದೇವತೆಗಳ ಚಿಕ್ಕ-ದೊಡ್ಡ ದೇವಸ್ಥಾನಗಳು, ಅದಕ್ಕೆ ಸಂಬಮ್ಧಿಸಿದ ಪೂಜೆ, ಉತ್ಸವ, ಜಾತ್ರೆ, ಕಲೆಗಳು, ಕಸುಬುಗಳು ಅನಾದಿಯಿಂದಲೂ ನಡೆದಿವೆ.

ಸುಬ್ರಹಮಣ್ಯ ಹಾಗೂ ನಾಗರ ಆರಾಧನೆಯೂ ಕರ್ನಾಟಕದಲ್ಲಿ ಸಾಕಷ್ಟು ಜನಪ್ರಿಯ. ತಮಿಳುನಾಡಿನ ಪ್ರಾಭಾವವಿರುವದಲ್ಲ್ದೆ, ಕರವಳಿಯಲ್ಲಿ ಸುಬ್ರಹ್ಮಣ್ಯನನ್ನು ನಾಗದೇವತೆಯಲ್ಲಿ ಅಭೇದವಾಗಿ ಭಾವಿಸಿ ಪೂಜಿಸುವ ಪದ್ಧತಿಯಿದೆ. ಅತ್ಯಂತ ಕಟ್ಟುನಿಟ್ಟಾದ ಮಡಿವಂತಿಕೆ, ಬ್ರಹ್ಮಚರ್ಯಾದಿಗಳನ್ನು ಅಪೇಕ್ಷಿಸುವ ಸುಬ್ರಹ್ಮಣ್ಯ ಹಾಗೂ ನಾಗಾರಾಧನೆಗಳೂ ಇವೆ. ಕರ್ನಾಟಕಾದ್ಯಂತ ಹಲವು ಪುಣ್ಯಕ್ಷ್ಜೇತ್ರಗಳಲ್ಲಿ ಪ್ರಶಸ್ತವಾದ ಷಷ್ಟೀತಿಥಿಗಳಲ್ಲಿ ಭಾರೀ ಜನಸ್ತೋಮವನ್ನು ಆಕರ್ಷ್ಹಿಸುವ ಜಾತ್ರೆಗಳೇ ಜರುಗುತ್ತವೆ. ಧಾರ್ಮಿಕ ಹಿನ್ನಲೆಯ ಕರ್ನಾಟಕದ ಕಲೆ-ವೃತ್ತಿ-ಹಾಗೂ ಜೀವನಪದ್ಧತಿಗಳು

ಭೂತಾರಾದನೆ- ದೈವಾರಾಧನೆಗಳು ಕರಾವಳಿಯ ವನ್ಯಪ್ರದೇಶಗಲಲ್ಲಿ ಜನಿಸಿದ ಅಲ್ಲಿನ ಜನಪ್ರಿಯ ಉಪಾಸನೆಗಳು, ಇವುಗಳನ್ನು ಭೀತಿಶ್ರದ್ಧೆಗಳಿಂದ ಆಚರಿಸುತ್ತ ಬಂದಿರುವ ಕುಲಗಳು ಸಮೂಹಗಳು ಹಲವು.

ಉತ್ತರಕರ್ನಾಟಕದಲ್ಲಿ ಗೊಂದಲ್ ಹಾಕಿಸುವ ಮಹರಾಷ್ಟ್ರದ ಮೂಲದ ಒಂದು ಧಾರ್ಮಿಕ ಸಂಪ್ರದಾಯವಿದೆ. ಇದಲ್ಲದೆ, ದೇವತೆಯನ್ನೋ, ಗತಿಸಿರುವ ಯಾರಾದರೂ ಯೋಗಿಗಳನ್ನೋ, ಮನುಷ್ಯರನ್ನೋ ಯಂತ್ರದಲ್ಲಿ ಆವಾಹಿಒಸಿ (ಪ್ಲ್ಯಾನ್ ಚೆಟ್) ಪ್ರಶ್ನೆಕೇಳುವ ಧಾರ್ಮಿಕಸಂಪ್ರದಾಯವೂ ಕರ್ನಾಟಕದ ಹಲವು ಪ್ರದೇಶಗಳಲ್ಲಿವೆ. 

ದೇವದಾಸೀಪದ್ಧತಿ-

ದೇವರಿಗಾಗಿ, ದೇವಸ್ಥಾನದ ಕಲಾಪರ್ಂಪರೆಯ ಸಂರಕ್ಷಣೆಗಾಗಿ ಮುಡಿಪಾದ ದೇವದಾಸಿಯರು, ಮಧ್ಯಯುಗದವರೆಗೂ ಅತ್ಯಂತ ವಿದ್ಯಾವತಿಯರೂ, ರಾಜ್ಯಾಡಳೀತದ ಹಲವು ರಂಗಗಳಲ್ಲಿ ಪ್ರಭಾವಶಾಲಿನಿಯರೂ ಆಗಿದ್ದರೆಂಬುದು ಅಂದಿನ ಸಾಹಿತ್ಯದಿಂದ ಕಂದುಬರುತ್ತದೆ. ಆದರೆ ವಿವಾಹಬಧವಿಲ್ಲದಿದ್ದ ಇವರನ್ನು ವೇಶ್ಯಾವಾಟಿಕೆಗೆ ತಳ್ಳುವ ಚಒಪಲ ಸಮಾಜಕ್ಕೂ ಇಲ್ಲದ್ರಲಿಲ್ಲ. ಆದರೆ, ಆಕ್ರಮಣಗಳ ಯುಗದಲ್ಲಿ ಹಿಂದುರಾಜರುಗಳ ಪೋಷಣೆಣೆ ಕುಗ್ಗುತ್ತ ಬಂದಂತೆ, ಇವರ ಕಲೆ-ಪ್ರತಿಭೆಗಳು ಅನಾಥವಾದವು. ಇವರುಗಳು ಹೆಚ್ಚು ಕಡಿಮೆ ಸಂಪೂರ್ಣಾ ವೇಶ್ಯೆಯರೇ ಆಗುತ್ತಬಂದರು. ನಾವು ನಡಿನಾದ್ಯಂತ ಕಾನೂವ್ಚ ಶಿಲ್ಪಕಲೆ, ಗೀತ, ನೃತ್ಯ, ಶಿಲ್ಪಚಿತ್ರಕಲಾಪದ್ಧತಿಗಳು, ಬೌದ್ಧಿಕ ವೈನೋದಿಕಕಲಾ-ಕ್ರೀಡಾವಿಶೇಷಗಳು ಎಲ್ಲವೂ ಹೆಚ್ಚಾಗಿ ಈ ದೇವದಾಸಿಯರ ಪರಂಪರೆಯಲ್ಲಿ ಉಳಿದು ಬಂದ ಕಲಾಪಗಳು.

ಬೌದ್ಧಧರ್ಮ-

ಬೌದ್ಧಧರ್ಮವು ಭಿಕ್ಷುಭಿಕ್ಷುಣಿಯರ ವ್ಯಾಪಕ ಪ್ರಸಾರದಿಂದಾಗಿ ಬುದ್ಧನ ಕಾಲದಲ್ಲೇ ಹರಡಲಾರಂಭಿಸಿತ್ತು. ಕರ್ನಾಟಕದಲ್ಲಿ ಬೌದ್ಧಧರ್ಮವು ಇತರಮತಗಳಷ್ಟು ವ್ಯಾಪಕವಾಗಿ ಯಾವ ಕಾಲದಲ್ಲೂ ಹರಡಲಿಲ್ಲ. ಆದರೂ ಸಣ್ಣಪ್ರಮಾಣದಲ್ಲಿ ಬೌದ್ಧಕೇಂದ್ರಗಳು ಉಪಾಸನಾಪಂಥಗಳು ಇದ್ದೇ ಇವೆ. ಅರ್ವಾಚೀನಕಾಲದಲ್ಲಿ ಕೊಡಗಿನ ಕುಶಾಲನಗರದಲ್ಲಿ ನೆಲೆಗೊಂಡ ತಿಬತ್ತಿನ ನಿರಾಶ್ರಿತರ ಬೌದ್ಧವಿಹಾರಗಳು ಗಮನೀಯವಾದ ಬೌದ್ಧಕೇಂದ್ರಗಳಾಗಿವೆ. ವಿದ್ವದ್ವಲಯಗಳಲ್ಲಿ ಬುದ್ಧನ ಚಿಂತನೆ, ಜನಸಾಮಾನ್ಯರ ನಡುವೆ ಬುದ್ಧನ ಕಥೆ, ಮಾಹಾತ್ಮ್ಯ, ಹಾಗೂ ಸಾಮಜಿಕಕಲಕಳಿಯ ವಿಷಯ ಚೆನ್ನಾಗಿ ತಿಳಿದೇ ಇದೆ. ಆದರೂ ಇತರ ಮತಗಳಿಗೆ ಹೋಲಿಸ್ದಾಗ ಬೌದ್ಧಮತದ ಅನುಯಾಯಿಗಳ ಸಂಖ್ಯೆ ಬಹಳ ಕಡಿಮೆ ಎನ್ನಬಹುದು.

ಜೈನಧರ್ಮ- ಕರ್ನಾಟಕವು ಬಹಳ ಪ್ರಾಚೀನಕಾಲದಿಂದಲೂ ಜೈನಧರ್ಮಕ್ಕೆ ವಿಪುಲಾಶ್ರಯವನ್ನಿತ್ತಿದೆ. ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯ ರಾಜವಂಶಗಳು, ಯೋಗಿಗಳು ಕವಿಗಳು ಜೈನರೇ ಆಗಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಜೈನಮತದ ಹಲವಾರು ತೀರ್ಥಂಕರರ ಬಸಡಿಗಳು ಹರಡಿಕೊಂಡಿವೆ. ಶ್ವೇತಾಂಬ್ರ ಅಹಾಗೂ ದಿಗಂಬರ ಎಂಬ ಎರಡೂ ಶಾಖೆಯ ಜೈನಮತಗಳಿಗೆ ಇಲ್ಲಿ ಬಹಳ ಅನುಯಾಯಿಗಳಿದ್ದಾರೆ. ಜೈನಧರ್ಮವು ಹಿಂದೂ ಧರ್ಮದೊಂದಿಗೆ ಸಾಧಿಸಿರುವ ಸಾಮರಸ್ಯಕ್ಕೆ ಮೇರುಗನ್ನಡಿ ಧರ್ಮಸ್ಥಳಪುಣ್ಯಕ್ಷೇತ್ರವಾಗಿದೆ.  ವೀರನೂ ವಿರಕ್ತನೂ ಆದ ಬಾಹುಬಲಿಯಂತಹ ಮಹಾಜಿನನಿಗೆ ಕರ್ನಾಟಕವೇ ತವರೂರಾಗಿದೆ. ಶ್ರಾವ್ಣಬೆಳಗೋಳದ ಗೊಮ್ಮಟನಾಥನ  ಪೂಜೆ, ಉತ್ಸವ ಜಾತ್ರೆಗಳು ಜಗದ್ವಿಖ್ಯಾತವೇ ಆಗಿವೆ. ಜೈನರ ಧಾರ್ಮಿಕ ಸಾಹಿತ್ಯವೂ ಕನ್ನಡನಾಡಿನಲ್ಲಿ ಅಮೃದ್ಧವಾಗಿ ಬೆಳೆಯಿತು. ಇಂದಿಗೂ ಜೈನವರ್ಗದ ಕುಲಗಳ ಸಂಖ್ಯೆ ಕರ್ನಾಟಕದಲ್ಲಿ ಗಮನೀಯಸಂಖ್ಯೆಗಳಲ್ಲಿವೆ. 

ಕಠಿನ ಉಪವಾಸ, ಜಾಗರಣೆ, ಮೌನ, ಬ್ರಹ್ಮಚರ್ಯ, ಬಾಯಿ-ಮೂಗುಗಳಿಗೆ ಬಟ್ಟೆ ಮುಚ್ಚಿ ಉಸಿರಾಡುವುದು, ಉದಾರ ದಾನ ಮುಂತಾದ ಜೈನವ್ರತಕಲಾಪಗಳು ಇಂದಿಗೂ ಜೈನಕುಲಗಳಲ್ಲಿ ಭರದಿಂದ ಜರುಗುತ್ತವೆ. 

ಸಿಕ್ಖರ ಜೊತೆಗೆ ಸಿಕ್ಖಮತವೂ ಅರ್ವಾಚೀನ ಕಾಲದಲ್ಲಿ ನಾಗರೀಕರಣದ ಜೊತೆಗೆ ಕರ್ನಾಟಕಕ್ಕೆ ಬಂದು ನೆಲೆಸಿದ. ಅಲ್ಲಲ್ಲಿ ಸುಂದರ ಗುರುದ್ವಾರಾಗಳು ಕಾಣಬರುತ್ತವೆ. ಬೆಂಗಳೂರಿನ ಹಲಸೂರಿನ ಗುರುದ್ವಾರ ಬಹಳ ಪ್ರಸಿದ್ಧವಾದದು.

ಕರ್ನಾಟಕದ ಧಾರ್ಮಿಕ ಸಂಪ್ರದಾಯಗಳಾದ ಹಬ್ಬ, ಉತ್ಸವ, ಜಾತ್ರೆ  ಪೂಜಾಪದ್ಧೈ ಮೊದಲಾದುವನ್ನೇ ಆಧರಿಸಿ ಹುಟ್ಟಿದ ಹಲವಾರು ಕಲೆಗಳು, ವೃತ್ತಿಗಳೂ ವ್ಯಾಪಾರವೇದಿಕೆಗಳು ಇವೆ. ದೇಗುಲಗಳ ಹಾಗೂ ಪೂಜಾಪದ್ಧತಿಗಳ ನಿಮಿತ್ತವಾಗಿ ಅನೇಕಬಗೆಯ ಹೂಮಾಲೆ ಕಟ್ಟುವ ಕಲೆಗಳು, ವೃತ್ತಿಗಳು ಬೆಳೆದಿವೆ. ಇದಕೆ ಪೂರಕವಾಗಿ ಹೂವುಗಳನ್ನು ಬೆಳೆಸಿ ಮಾರುವ ವ್ಯಾಪಾರ, ಹಾಗೂ ಅದರಲ್ಲೂ ಸರ್ಜನಶೀಲಶೈಲಿಗಳು ಬೆಳೆಯುತ್ತ ಬಂದಿವೆ. ಅಂತೆಯೇ ಗೌರೀಗಣಪತಿಯ ಹಬ್ಬದ ನಿಮಿತ್ತ ತಯಾರಾಗುವ ಮಣ್ಣೀನ ಬೊಂಬೆಗಳು, ಶರನ್ನವರಾತ್ರದ ನಿಮಿತ್ತ ತಯಾರಾಗುವ ವಿವಿಧ ವಿನ್ಯಾಸಗಳ ಮಣ್ಣಿನ ಬೊಂಬೆಗಳು, ಹಬ್ಬಹರಿದಿನಗಳ ನಿಮಿತ್ತ ವ್ಯಾಪಾರವಾಗುವ ಹಣ್ಣುಗಳು, ಗ್ರಂದಿಗೆಸಾಮನು, ಮಂಗಳದ್ರ್ವಯಗಳು, ಬಾಳೆಎಲೆ, ಲೋಹದ ಪೂಜಾಪಾತ್ರೆಗಳು, ಮಡಕೆಗಳು, ದೀಪಮುಂತಾದ ಸಲಕರಣೆಗಳು, ಮಾವಿನೆಲೆ, ಬಾಳೆ ಎಲೆ ಮುಂತಾದ ಹತ್ತುಹಲವು ಬಗೆಯ ಪದಾರ್ಥಗಳ ವ್ಯಾಪಾರವು ಈ ಧಾರ್ಮಿಕಾಅಚಾರಗಲನ್ನೇ ಬಹುಮಟ್ಟಿಗೆ ಆಶ್ರಯಿಸಿವೆ. ಇಂದಿಗೂ ಜಾತ್ರೆ-ಉತ್ಸವಗಳಲ್ಲಿ ನೆರೆಯುವ ಸಾವಿರಾರು ಜನರಿಂದ ನೂರಾರು ವ್ಯಾಪಾರಿಗಳಿಗಾಗುವ ಲಾಭ ಗಮನೀಯವಾದದ್ದು.  

ಈ ಪ್ರಖ್ಯಾತ ಪದ್ಧತಿಗಳಲ್ಲದೆ ಕಾಡುಜನಾಂಗ-ಗಿರಿಜನಾಂಗಳಲ್ಲಿ ಹಾಗೂ ರಹಸ್ಯ ಗುರುಪರಂಪರೆಗಳಲ್ಲಿ ಅದೆಷ್ಟೋ ಇಂತಹ ಧಾರ್ಮಿಕ ಆಚ್ರಾವಿಚಾರಗಳು ಕಾಣಬರುತ್ತವೆ.

***

ಆಕ್ರಮಣಕಾರರು ತಂದ ಅವರ ಇಸ್ಲಾಂ ಹಾಗೂ ಕ್ರಿಸ್ತಮತಗಳು ಭಾರತದ ಮಣ್ಣಿನಲ್ಲಿ ನಾಟಿಕೊಂಡು ಶತಮಾನಗಳೇ ಆದವು. ದೇಶೀ ಧರ್ಮ, ಸಂಸ್ಕತಿ ಭಾಷೆ ಹಾಗೂ ಜೀವನಶೈಲಿಗೆ ವ್ಯತಿರಿಕ್ತವಾದ ಈ ಮತಗಳು ಮೊದಲಿಂದಲೂ ಸ್ಥಳೀಯರೊಂದಿಗೆ ಘರ್ಷಣೆಗೆ ಇಳಿದಿವೆ. ಆದರೆ ಕಾಲಾಂತರದಲ್ಲಿ ಭಾರತೀಯರ ಜನಜೀವನದಲ್ಲಿ ಅಂಗೀಕಾರ್ಯವೂ ಆಗಿಬಿಟ್ಟಿವೆ. ಮುಸಲ್ಮಾನ ರಾಜರುಗಳ ಪೋಷಣೆಯ ಬಲದಿಂದ ಸುನ್ನಿ, ಶಿಯಾ, ಸೂಫಿ, ಅರಬ್ಬಿಯಾ ಮುಂತಾದ ಹಲವು ಮುಸಲ್ಮಾನ ಪಂಗಡಗಳು ಕರ್ನಾಟಕದಲ್ಲಿ ಮಧ್ಯಯುಗದಲ್ಲೇ ಬೀಡುಬಿಟ್ಟಿವೆ. ಹಲವಾರು ದೊಡ್ಡ ಮಸೀದಿಗಳು, ದರ್ಗಾಗಳು ನಾಡಿನಾದ್ಯಂತ ತಲೆಯೆತ್ತಿವೆ. ಹಲವಾರು ದರ್ಗಾಗಳಲ್ಲಿ ಹಿಂದುಮುಸಲ್ಮಾನರೀರ್ವರೂ ಆರಾಧಿಸುವ ಸೌಹಾರ್ದತೆಯ ದೃಶ್ಯಗಳೂ ಕಾಣಬರುತ್ತವೆ. ಉರ್ದೂ, ಅರೇಬಿಯಾಗಳನ್ನೇ ಹೆಚ್ಚಾಗಿ ಪ್ರೋತ್ಸಾಹಿಸುವ ಇಸ್ಲಾಂ, ಕನ್ನಡವನ್ನೂ ಮೆಲ್ಲನೇ ಮೈಗೂಡಿಸಿಕೊಳ್ಳುತ್ತ ನಾಡಜನರಿಗೆ ಹತ್ತಿರವಾಗುತ್ತ ಬಂದಿರುವುದೂ ನಿಜವೇ.

ಕರ್ನಾಟಕದಲ್ಲಿ ಕ್ರೈಸ್ತಮತವೂ ಬಹಳ ಇತ್ತೀಚಿನದ್ದೆನ್ನಬಹುದು. ಬ್ರಿಟೀಷರ ಶಿಕ್ಷಣಪದ್ಧತಿ ಹಾಗೂ ಆಧುನೀಕರಣದ ಗಾಳಿಯೊಂದಿಗೆ ಇಲ್ಲಿ ವ್ಯಾಪಿಸಲು ಸಾಧ್ಯವಾಗುತ್ತ ಬಂತು. ಕೇರಳ-ಕರವಳಿಯಲ್ಲಿ ಭರದಿಂದ ಪ್ರಚಾರವಾಗಿ, ಜನರನ್ನು ಸೆಲೆದುಕೊಳ್ಳುತ್ತ ಬಂದ ಕ್ರಿಸ್ತಮತವು ಆಚಾರವಿಚಾರಗಳಲ್ಲಿ ಅಪ್ಪಟ ಐರೋಪ್ಯಶೈಲಿಯದೇ ಆದರೂ, ಕನ್ನಡ ಭಾಷೆ ಹಾಗೂ ಸ್ಥಳೀಯ ಜೀವನಶೈಲಿಯ ವಿವರಗಳನ್ನು ರೂಢಿಸಿಕೊಳ್ಳುತ್ತ ’ಕರ್ನಾಟಕದ ಕ್ರಿಸ್ತಮತ’ವಾಗುವತ್ತ ಸಾಗಿದೆ. ಮತಾಂತರಗಳ ನಿಮಿತ್ತ ಸ್ಥಳೀಯ ಮತಧರ್ಮೀಯರೊಂದಿಗೆ ಅಲ್ಲಲ್ಲಿ ಆಗುವ ಘರ್ಷಣೆಗಳ ಹೊರತಾಗಿ, ಶಾಂತಿಯುತ ಸಹಜೀವನಕ್ಕೆ ಒಗ್ಗಿಕೊಂಡಿರುವ ಮತವಿದು. 

ಧರ್ಮವು ಭಾರತೀಯ ಪ್ರಜ್ಞೆಯ ಬಹಳ ಮುಖ್ಯಬೋಧೆಯಾದ್ದರಿಂದ ಅದು ಎಲ್ಲ ರಂಗಗಳಲ್ಲೂ ಒಂದಲ್ಲ ಒಂದು ಬಗೆಯಲ್ಲಿ  ಸೂಸುತ್ತಲೇ ಇರುವುದನ್ನು ಕಾಣಬಹುದು.

ಡಾ ಆರತೀ ವಿ ಬಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ