ಶುಕ್ರವಾರ, ನವೆಂಬರ್ 25, 2011

ಕೃಷ್ಣಕರ್ಣಾಮೃತದ ಒಂದು ಶ್ಲೋಕದ ಭಾವಾನುವಾದ

ಕೃಷ್ಣಕರ್ಣಾಮೃತದ ಒಂದು ಶ್ಲೋಕದ ಭಾವಾನುವಾದ (ಕೃಷ್ಣಾಷ್ಟಮಿ ೨೦೦೬)
Theme- Mother Yashodha persuading little Krishna to drink milk,
explaining that only then his hair can grow longer than Balarama's hair !
Innocent Krishna believes it and drinks milk and instantly begins to measure his hair!

ಮುದ್ದು ಸುರಿಪ ಚೆನ್ನುಡಿಯ ಕೃಷ್ಣನಾ ಲೀಲೆ ನೋಡ ಬನ್ನಿ |
ಕೃಷ್ಣ ಕೃಷ್ಣ ಶ್ರೀ ಕೃಷ್ಣ ಎನ್ನುತಲಿ ಹರಿಯ ಪಾಡ ಬನ್ನಿ || ಪ ||
ಹಾಲು ಕುಡಿಯೆ ಹಟ ಮಾಡುತಿದ್ದನೈ ನಂದಗೋಪ ಕಂದ |
ಮಾತೆ ಸುತನ ಮನವೊಲಿಸಲೆತ್ನಿಸೆ ಪ್ರೇಮ ನುಡಿಗಳಿಂದ || ೧ ||
“ನೋಡು ಬಲರಾಮ ಹಾಲನುಂಡು ಮೈದುಂಬಿ ಹಿಗ್ಗಿ ನಿಂದ |
ಅವನ ಕೂದಲುದ್ದುದ್ದವಾಗುತಲಿ ಬೆಳೆದವೆಂಥ ಚಂದ ! || ೨ ||
ಹಾಲು ಕುಡಿಯದೆಲೆ ಮಮ್ಮು ತಿನ್ನದೆಲೆ ತೆಳ್ಲಗಾದೆ ಕಂದ |
ನಿನ್ನ ಕೂದಲಂಗುಷ್ಟ ಮಾತ್ರ ಬೆಳೆದಿಲ್ಲವೆಂದಿನಿಂದ || ೩ ||
ಅಣ್ಣ ಬಲನು ಕಾಲಿಂದಿ ತೀರದಲಿ ಆಡುತಿಹನು ಭರದಿ |
ಹಾಲು ಕುಡಿದು ಬಿಡು ಅಷ್ಟರಲ್ಲಿ ಬೆಳೆದಾವು ಕುರುಳು ದಿಟದಿ” || ೪ ||
ಅರಳು ಕಂಗಳಿಂ ತಾಯ ಮಾತುಗಳನಾಲಿಸಿದ ಮುಕುಂದ |
ಮಾತೆಯಿತ್ತ ಹಾಲ್ ಬಟ್ಟಲನು ಕರದಲ್ಲಿ ಧರಿಸಿ ನಿಂದ || ೫ ||
“ಹಾಲು ಕುಡಿಯಲೆನ ಕೇಶ ಬೆಳೆವುದೇಂ ಅಮ್ಮ ಪೇಳು ನಿಜವೆ? |
ಅಣ್ಣ ಬಲನ ಮುಂಗುರುಳ ನಾಚಿಸುವ ಚೆಲುವು ನನಗೆ ದಿಟವೆ?” || ೬ ||
“ರಂಗ ಮುದ್ದು ಗೋವಿಂದ ನಂದನಾನಂದ ಹೇ ಮುಕುಂದ |
ಕುಡಿದು ನೋಡು ಕೆನೆ ಹಾಲ ಮಹಿಮೆಯನು ತಿಳಿವೆ ನೀನೆ ಕಂದ” || ೭ ||
ತಾಯ ನುಡಿಗಳನು ನೆಮ್ಮಿ ಕೃಷ್ಣ ಬಲು ಬಾಲ ತವಕದಿಂದ |
ತುಟಿಯನೊತ್ತಿ ಬಿಗಿದುಸಿರುಗಟ್ಟಿ ಹಾಲ್ಗುಡಿದ ವೇಗದಿಂದ || ೮ ||
ಎರಡು ಗುಟುಕು ಹಾಲ್ಗುಡಿದು ಚೆಂದದಿಂ ತಡೆದು ಧ್ಯಾನದಿಂದ |
ಕೃಷ್ಣನಲ್ಲೆ ತಾಯ್ಮಾತುಗಳನೀಗ ಪರಿಕಿಸೋಣವೆಂದ || ೯ ||
ಕುರುಳನೆಳೆದು ತಾನಳೆದನಲ್ಲೆ ಚೆಂಗೈಯ ಬೆರಳಿನಿಂದ |
ಉದ್ದವನ್ನು ಪರಿಶೀಲಿಸಿದನು ತನ್ನೋರೆ ನೋಟದಿಂದ || ೧೦ ||
“ಅಹಹ ಎನ್ನ ಕುರುಳುದ್ದವಾಯಿತೈ ಬಲನ ಕೇಶಕಿಂತ” ! |
ಎನುತ ಕುಣಿಯಲಾ ಮುದ್ದು ಕೃಷ್ಣ ವ್ರಜದಲ್ಲದೋ ವಸಂತ || ೧೧ ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ