ಶುಕ್ರವಾರ, ನವೆಂಬರ್ 25, 2011

ಕೃಷ್ಣ ಕಾಮಿನಿ ಮೀರಾ

ಕೃಷ್ಣ ಕಾಮಿನಿ ಮೀರಾ (೨೦೦೮) (ಭಾಮಿನಿ ಷಟ್ಪದಿ)

ರಾಜಪುತ್ರರ ಕುಲದ ನೀರೆಯು
ಕೃಷ್ಣಕಾಮಿನಿ ರಾಣಿ ಮೀರೆಯು
ಅನ್ನ ನಿದ್ರೆಯ ತೊರೆದದೇಕೋ ಬನ್ನವಡುತಿಹಳು |
ಅರಸುತನ ಸುಖ ಭೋಗ ಭಾಗ್ಯಗ-
ಳನ್ನು ಲೆಕ್ಕಿಸದವಳು ತವಕದಿ
ತನ್ನ ಗಿರಿಧರನನ್ನೆ ಕರೆಯುತ ದಿನವ ನೂಕುವಳು || ೧ ||

ರನ್ನದರಮನೆಯಂಗಳದಿ ಬೆಳ-
ದಿಂಗಳಂದದಿ ಸುಳಿಯುವಳು ಶರ-
ದಿಂದುಮುಖಿಯುನ್ಮತ್ತಳಂದದಿ ಮೈಯ ಮರೆಯುವಳು |
ಉಚ್ಚ ಯೌವನದಲ್ಲಿ ಏಕೀ
ಹುಚ್ಚು ಹಿಡಿಯಿತು ಚೆಂದದರಸಿಗೆ
ಹಚ್ಚಿ ಮನವನು ಕಾಣದಿನಿಯಗೆ ಬರಿದೆ ಶೋಕಿಪಳು || ೨ ||

ವಿಷವು ಸುಧೆಯೀ ಶಾಂತಚಿತ್ತೆಗೆ
ಮುಳ್ಳು ಮೃದುತರ ಸುಮದ ಹಾಸಿಗೆ
ಲೋಕನಿಂದೆಯು ಮೋಜನೀಯುವ ಹಾಸ್ಯರಸಕಾವ್ಯ |
ಕೋಟಿ ಕೋಟಲೆ ಸಹಿಸಿ ನಿಂದು
ಸತತ ಕೃಷ್ಣಾ ಕೃಷ್ಣ ಎಂದು
ಕೂಗಿಯಾಚರಿಸುವಳು ಭರದಲಿ ಪ್ರೇಮವನು ದಿವ್ಯ || ೩ ||

ಸುಗ್ಗಿಯಂದದಿ ಒಲವು ಮೂಡಲು
ಹಿಗ್ಗಿದೆದೆಯಿಂದುಕ್ಕಿ ಹರಿಯಲು
ಕುಗ್ಗಿ ಲಜ್ಜೆಯ ಸೆರಗು ಜಾರಲು ಪಾದಕುರುಳುತಲಿ |
ಹೃದಯ ಮೇಳದ ರಾಗತಾಳಕೆ
ಸರಸೆ ಕುಣಿವಳು ಸ್ವಾನುಭಾವಕೆ
ರಸಿಕ ಕೃಷ್ಣನ ರಾಸನಾಟ್ಯಕೆ ಮೀಸಲಾಗುತಲಿ || ೪ ||

1 ಕಾಮೆಂಟ್‌: