ಬುಧವಾರ, ಡಿಸೆಂಬರ್ 7, 2011

ಗೌರೀ ಗಣೇಶ ಸ್ವಾರಸ್ಯ

ಗೌರೀ ಗಣೇಶ ಸ್ವಾರಸ್ಯ
ಗೌರಿಯನ್ನು ಮನೆಮಗಳು ಎಂದು ಭಾವಿಸಿ ಪ್ರತಿವರ್ಷವೂ ಆಹ್ವಾನಿಸಿ ಉಡಿತುಂಬಿಸುವುದು ಈ ಹಬ್ಬದ ವಿಶೇಷ. ಗೌರೀ ಎಂದರೆ ’ಬೆಳ್ಳಗಿರುವವಳು’ ಅಥವಾ ’ತೇಜಸ್ವಿನಿ’ ಎಂದರ್ಥ. ಜ್ಞಾನ, ಪರಾಕ್ರಮ, ಐಶ್ವರ್ಯಾದಿ ವೈಭವಗಳನ್ನು ತನ್ನೊಳಗೆ ಅಡಗಿಸಿಕೊಂಡು ಸೌಮ್ಯ ರೂಪದಿಂದ ನಿಲ್ಲುವಳು ಗೌರೀ. ಆದರೆ ದುಷ್ಟರ ದಮನ ಹಾಗೂ ಶಿಷ್ಟರ ರಕ್ಷಣೆ ಮಾಡಬೇಕಾದಾಗ, ಆಕೆಯೇ ದುರ್ಗೆ-ಕಾಳಿ ರೂಪಗಳನ್ನು ತಾಳಿ ತನ್ನ ಶಕ್ತಿಯನ್ನು ವ್ಯಕ್ತವಾಗಿ ಮೆರೆಸುತ್ತಾಳೆ. ಅನಂತ ಶಕ್ತಿಯು ಶಾಂತಿಯ ಸೀಮೆಯೊಳಗಿದ್ದು ಕಾಲೋಚಿತವಾಗಿ ಪ್ರಕಟವಾಗಬೇಕೆನ್ನುವುದನ್ನು ಗೌರಿಯು ಈ ಮೂಲಕ ಕೊಡುತ್ತಿರುವ ಸಂದೇಶವೆನ್ನಬಹುದು. ನಿಸರ್ಗ ಸಹಜವಾಗಿ ಹೆಣ್ಣು ನಾಚಿಕೆ ಹಾಗೂ ನಾಜೂಕಿನವಳಾದರೂ, ಕಷ್ಟಕಾಲದಲ್ಲಿ, ಶೀಲರಕ್ಷಣೆ, ಪರಿವಾರ ಪಾಲನೆ ಪೋಷಣೆಗಳನ್ನು ಮಾಡುವಾಗ ಅತಹ್ವಾ ನ್ಯಾಯಕ್ಕಾಗಿ ಹೋರಾಡುವಾಗ ಶಕ್ತಿ-ಯುಕ್ತಿಗಳನ್ನು ಮೆರೆಯಬಲ್ಲಳು ಎನ್ನುವುದು ಇಲ್ಲಿನ ಧ್ವನಿ.
ಗೌರಿಯು ವಿರಾಗಿಯಾದ ತನ್ನ ಪತಿಯಲ್ಲಿನ ಅತಿಶಯ ಪ್ರೇಮದಿಂದ ಸಕಲ ವೈಭವಗಳನ್ನು ತೊರೆದು ’ಬಿಚ್ಚೋಲೆ ಗೌರಮ್ಮ’ ಎನಿಸಿದಳು. ಆದರೆ ತನ್ನ ಮಗನಾದ ಗಣಪನಿಗೆ ಅನ್ಯಾಯವಾಗಿ ಶಿರಚ್ಛೇದನವಾದಾಗ ಮಾತ್ರ ಮುನಿದು ನಿಂತಳು. ಶಿವನ ಜೊತೆಗೆ ಸಮಸ್ತ ದೇವತಾಗಣವು ಗಣಪನಲ್ಲಿ ತಪ್ಪೊಪ್ಪಿಗೆ ಮಾಡಿಕೊಂಡು, ಅವನಿಗೆ ಬೇರೊಂದು ಶಿರವನ್ನೂ, ಅಸಾಧಾರಣ ವರಗಳನ್ನೂ ಕೊಡುವ ತನಕ ಸುಮ್ಮನಾಗಲಿಲ್ಲ. ಹೀಗೆ ಗೌರಿಯು ಶಾಂತಿ ಹಾಗೂ ಶಕ್ತಿಗಳ ಸುಂದರ ಸಮರಸ-ಮೂರ್ತಿಯಾಗಿ ನಿಲ್ಲುತ್ತಾಳೆ.
ಗೌರಿಯು ಸೌಮಂಗಲ್ಯವನ್ನು, ದಾಂಪತ್ಯ ಸುಖವನ್ನೂ, ಪ್ರಸಾದಿಸುವಳೆಂದು ನಂಬಿಕೆ. ಸೌಭಾಗ್ಯಗೌರೀ, ಸಂಪದಗೌರೀ, ಮಂಗಳಗೌರೀ, ಲಾವಣ್ಯಗೌರೀ, ತ್ರಿಲೋಚನಗೌರೀ, ಕೇದಾರಗೌರೀ ಮೌನಗೌರೀ, ಸೀಗೆಗೌರೀ, ಚೈತ್ರಗೌರೀ. ಗಜಗೌರೀ, ಕಾತ್ಯಾಯನೀ ವ್ರತ ಮುಂತಾದ ಹಲವು ಗೌರ್ರೀ ವ್ರತಗಳಿವೆ. ಆಯಾ ಪ್ರಾತಗಳಲ್ಲಿ, ಕುಲಗಳಲ್ಲಿ, ಆಯಾ ಗೌರೀ ವ್ರತ ಪ್ರಚಲಿತವಿದೆ. ಆದರೆ ನಮ್ಮ ಕರ್ನಾಟಕದಲ್ಲಿ, ಅದರಲ್ಲೂ ಮಧ್ಯ ಹಾಗೂ ದಕ್ಷಿಣ ಕರ್ಣಾಟಕದ ಜಿಲ್ಲೆಗಳಲ್ಲಿ ಸ್ವರ್ಣಗೌರಿಯೇ ವ್ಯಾಪಕವಾಗಿ ಪ್ರಚಲಿತವಾಗಿದೆ.
ಗೌರಿಯನ್ನು ವಿಧಿಯುಕ್ತವಾಗಿ ಕೆರೆಯೆ ಮಣ್ಣಿನ, ಅರಶಿನ ಅಥವಾ ಬಂಗಾರದ ವಿಗ್ರಹದಲ್ಲೋ ಆವಾಹಿಸಿ ಷೋಡಶೋಪಚಾರಗಳ ಮೂಲಕ ಪೂಜಿಸಲಾಗುತ್ತದೆ. ಮರದ ಬಾಗಿನ, ದೋರಬಂಧನ ತಾಂಬೂಲ ವಿನಿಮಯಾದಿಗಳು ಈ ಹಬ್ಬದ ವೈಶಿಷ್ಟ್ಯಗಳು. ಮನೆಮಗಳು ಅಳಿಯಂದಿರನ್ನು ಹರ-ಗೌರಿಯ ಪ್ರತಿನಿಧಿಗಳೆಂದು ಭಾವಿಸಿ ಆದರಾತಿಥ್ಯಗಳನ್ನು ನೀಡುವುದು ವಾಡಿಕೆಯಲ್ಲಿದೆ. ಈ ಪ್ರಾಂತದಲ್ಲಿ ನೈವೇದ್ಯದಲ್ಲಿ ಸಾಮಾನ್ಯವಾಗಿ ಹರಿದ್ರಾನ್ನ(ಅರಿಶಿನ ಹಾಕಿದ ಅನ್ನ/ ಚಿತ್ರಾನ್ನ), ಮುದ್ಗಾನ್ನ (ಹೆಸರುಬೇಳೆ ತುಪ್ಪಗಳೊಂದಿಗೆ ಪಾಕವಾದ ಅನ್ನ/ ಖಿಚಡಿ)ಗಳು ಇದ್ದೇ ಇರುತ್ತವೆ. ಮನೆಯ ಹೆಣ್ಣುಮಕ್ಕಳನ್ನು, ಬಂಧುಬಳಗದ ಅಥವಾ ನೆರೆಕೆರೆಯ ಸುಮಂಗಲಿಯರನ್ನು ಆಹ್ವಾನಿಸಿ ಮರದ ಬಾಗಿನ, ಮಂಗಳದ್ರವ್ಯಗಳು, ತಾಂಬೂಲ, ಭೋಜನ, ದಕ್ಷಿಣೆ, ಕಾಣಿಕೆಗಳಿಂದ ಸತ್ಕರಿಸಲಾಗುತ್ತದೆ. ಸಾಯಂಕಾಲ ಪರಸ್ಪರರ ಮನೆಗೆ ಹೋಗಿ ಅಲಂಕರಿಸಿದ ಗೌರಿಯನ್ನು ನೋಡಿ, ನಮಿಸಿ, ಹಾಡು-ಕೋಲಾಟಗಳ ಸೇವೆಯನ್ನು ಒಪ್ಪಿಸುವುದುಂಟೂ. ಆದರೆ ನಾಗರೀಕತೆಯ ಬಿಂಕವು ಈ ಹಾಡು-ಕುಣಿತಗಳ ಸಂಪ್ರದಾಯವನ್ನು ಈಚಿನ ದಿನಗಳಲ್ಲಿ ಮರೆಸುತ್ತಿದೆ ಎನ್ನಿ. ಆದರೂ ಇದು ಹೆಂಗಸರ ಹಬ್ಬವಾದ್ದರಿಂದ ಹೆಚ್ಚು ವರ್ಣರಂಜಿತ! ಜರತಾರಿ ಸೀರೆ, ಒಡವೆ, ಮಂಗಳದ್ರವ್ಯಗಳು, ಅಲಂಕಾರ, ರಂಗೋಲಿ, ಸಡಗರ, ಸಂಭ್ರಮಗಳಲ್ಲೆಲ್ಲ ನಾರೀ ಮಣಿಯರ ಕಲಾಭಿಜ್ಞತೆ ಎದ್ದು ಕಾಣುತ್ತದೆ.
ಇನ್ನು ಗಣಪತಿ ಎಂದರೆ ’ಗಣ’ಕ್ಕೆ (ದೇವತಾ ಸಮೂಹಕ್ಕೆ) ಒಡೆಯ ಎಂದರ್ಥ. ಅವನು ಒಲಿದರೆ ಎಲ್ಲ ದೇವತೆಗಳು ಒಲಿಯುತ್ತಾರೆ. ಗಣಪತಿಯ ಮುಗ್ಧ-ವಿಲಕ್ಷಣ ರೂಪ ಮಕ್ಕಳಿಗಂತೂ ಬಲು ಇಷ್ಟ. ಆ ರೂಪದಲ್ಲಿ ಅಡಗಿರುವ ಸಂಕೇತಗಳು ಅನೇಕ. ಗಣಪನ ದೊಡ್ಡ ಕಿವಿಗಳು ಅವನು ಬಹುಶ್ರುತ ವಿದ್ವಾಂಸ ಎನ್ನುವುದನ್ನು ಸೂಚಿಸಿದರೆ, ಆತನ ಉದ್ದನೆಯ ಸೊಂಡಿಲು ಸತ್ಯವನ್ನು ಒಳಹೊಕ್ಕು ನೋಡುವ ಜಿಜ್ಞಾಸೆಯ ಸ್ವಭಾವವನ್ನು ತೋರುತ್ತದೆ. ಬ್ರಹ್ಮಾಂಡವನ್ನೇ ಉದರದಲ್ಲಿ ಧರಿಸಿರುವನೆಂಬುದನ್ನು ಆತನ ದೊಡ್ಡ ಹೊಟ್ಟೆ ಸಾರಿದರೆ, ಆ ಸಣ್ಣ ಕಣ್ಣುಗಳು ಪರತತ್ವದ ಅನುಸಂಧಾನದಲ್ಲಿನ ಆತನ ಏಕಾಗ್ರತೆ/focusನ್ನು, ಬಿಂಬಿಸುತ್ತವೆ. ಉಬ್ಬಿದ ಗಂಡಸ್ಥಳಗಳು ಆತನ ವೈಚಾರಿಕ ಹಾಗೂ ಭಾವನಾತ್ಮಕ ಶಕ್ತಿಗಳ (IQ ಹಾಗೂ EQ) ಪೂರ್ಣ ಹಾಗೂ ಸಮಪ್ರಮಾಣದ ವಿಕಾಸವನ್ನು ಸೂಚಿಸಿದರೆ, ಗಣಪನ ಬೃಹದಾಕಾರವು ಅವನ ಸೀಮೆಯರಿಯದ ಬ್ರಹ್ಮಸ್ವರೂಪವನ್ನು ಸೂಚಿಸುತ್ತದೆ. ಗಣಪನು ಇಲಿಯು ನಮ್ಮ ಚಂಚಲ ಹಾಗೂ ಚಪಲ ಸ್ವಭಾವದ ಮನಸ್ಸಿನ ಪ್ರತಿನಿಧಿ. ಅದರ ಮೇಲೆ ಆತನಿಗೆ ಪೂರ್ಣ ಒಡೆತನ. ನರಚೈತನ್ಯದ ಗತಿಯ ಪ್ರತೀಕವಾದ ಕುಂಡಲಿನೀ ಸರ್ಪವನ್ನು ತನ್ನ ಹೊಟ್ಟೆಗೆ ಸುತ್ತಿದ್ದಾನೆ. ಕೈಗಳಲ್ಲಿನ ಪಾಶದಿಂದ ಸಮಸ್ತ ಸೃಷ್ಟಿಯನ್ನು ಮಾಯೆಯಿಂದ ಬಂಧಿಸಿದ್ದು, ತನ್ನ ಅಂಕುಶದಿಂದ ಸದಾ ನಿಯಂತ್ರಿಸುತ್ತಾನೆ. ಅವಿಚಲ ಮಾತೃಭಕ್ತಿಯೇ ಗಣಪನ ತಪಸ್ಸು. ಅದರಿಂದಲೇ ಆತ ಅಮಿತ ಶಕ್ತಿವಿಭೂತಿಗಳನ್ನೆಲ್ಲ ಪಡೆದು ’ಆದಿಪೂಜಿತ’ನಾದ, ’ಗಣಪತಿ’ಯಾದ. ಮಾತೃಭಕ್ತಿಯ ಮಹಿಮೆಯನ್ನೂ ಸಾರುತಿದೆ ಗಣಪನ ದಿವ್ಯ ಚರಿತ್ರೆ. ಇನ್ನು ತಮ್ಮ ಕಾರ್ತಿಕೇಯನೊಂದಿಗೆ ಬ್ರಹ್ಮಾಂಡವನ್ನೇ ಸುತ್ತಿಬರಲು ಸ್ಪರ್ಢಿಸಿದಾಗ, ಜಾಣ ಗಣಪನು ತಾಯಿಯನ್ನೇ ಸುತ್ತಿಬಂದ. ಈ ಮೂಲಕ ’ಬ್ರಹ್ಮಾಂಡವೆಲ್ಲ ಪಿಂಡಾಂಡದಲ್ಲಿದೆ’ ಎಂಬ ತತ್ವವನ್ನು, ’ತ್ಯಾಯಿಯು ವಿಶ್ವದ ಬೇರೆಲ್ಲಕ್ಕಿಂತ ಮಿಗಿಲು’ ಎಂಬ ತಥ್ಯವನ್ನೂ, ’ಇದ್ದಲ್ಲಿಯೇ ಎಲ್ಲವನ್ನೂ ಸಾಧಿಸಬಹುದು’ ಎಂಬ ಯುಕ್ತಿಯನ್ನೂ ಸಾರಿದನು.
ಗಣಪತಿಯು ಹಾಸ್ಯರಸಕ್ಕೂ, ಗಣಿತವಿದ್ಯೆಗೂ, ಅಧ್ಯಾತ್ಮವಿದ್ಯೆಗೂ ಅಧಿಪತಿ. ಚಾತುರ್ಯ, ಕಾರ್ಯಕೌಶಲ, ವಿಘ್ನನಾಶ, ಶತ್ರುನಾಶ ಹಾಗೂ ಸಾಫಲ್ಯ-ಸಿದ್ಧಿಗಳನ್ನು ಪ್ರತಿಪಾದಿಸುವವನು ಅವನು. ಆದ್ದರಿಂದಲೇ ಎಲ್ಲ ಶುಭಕಾರ್ಯಗಳನ್ನೂ ಗಣಪನ ಪ್ರಾರ್ಥನೆಯೊಂದಿಗೆ ಪ್ರಾರಂಭಿಸುವುದು ಪದ್ಧತಿ.
’ತಾಯಿಯ ಮಾತಿಗೆ ಬದ್ದನಾಗಿ, ಶಿವನ ಕೋಪಕ್ಕೆ ಬಲಿಯಾಗಿ ತಲೆಯನ್ನು ಕಳೆದುಕೊಂಡಾಗ ಗಣಪನಿಗೆ ದೇವತೆಗಳು ಆನೆಯ ಮುಖವನ್ನು ತಂದಿಟ್ಟರು’ ಎನ್ನುವ ಪುರಾಣದ ಕಥೆಯೂ ನಮಗೆಲ್ಲ ಗೊತ್ತೇ ಇದೆ.
ಗಣಪತಿಯ ಈ ’ಗಜಮುಖ’ಕ್ಕೆ ತಾತ್ವಿಕ ವೈಶಿಷ್ಟ್ಯವೂ ಇದೆ. ನಮ್ಮೆಲ್ಲರಲ್ಲಿ ರಹಸ್ಯ ಚೈತನ್ಯವಾಗಿ ಅಡಗಿರುವ ಕುಂಡಲಿನನೀ ಶಕ್ತಿಯು ಜಾಗೃತವಾಗದಾಗ, ಗಜಕುಂಡಪ್ರದೇಶ ಎನಿಸಿಕೊಳ್ಳೂವ ಮೂಲಾಧಾರ-ಪದ್ಮದಲ್ಲಿ (ಬೆನ್ನೆಲುಬಿನ ಕೆಳಗಿನ ತುತ್ತತುದಿಯಲ್ಲಿ) ಮನೋಲಯವಾದಾಗ ಯೋಗಿಗಳಿಗೆ ಅಲ್ಲಿನ ದಿವ್ಯ ತ್ರಿಕೋನದ ಮಧ್ಯದಲ್ಲಿ ಗಜಮುಖದ ದರ್ಶನವಾಗುತ್ತದೆ. ಹೀಗೆ ಗಣಪತಿಯು ’ತ್ರಿಕೋನ-ಮಧ್ಯಗತ, ಗಜಮುಖ ಎಂದು ಪ್ರಸಿದ್ಧ.
ಲೌಕಿಕವಾಗಿ ಕಾಣುವ ಆನೆಯ ಆಕಾರವನ್ನು ಇದಕ್ಕೆ ಸಾಂಕೇತಿಕವಾಗಿ ಹೇಳಿದೆಯೇ ಹೊರತು, ಅಂತರಂಗದ ಗಜದ ಆಕಾರವು ವಸ್ತುತಃ ಪ್ರಣವದ ಒಂದು ಭಂಗಿ. ಆ ತಿರುವು ಬಲಕ್ಕೆ ಇದ್ದರೆ, ಆ ಶಕ್ತಿಯನ್ನು ’ಬಲಮುರಿಗಣಪತಿ’ ಎಂದು ಮೋಕ್ಷಸಿದ್ಧಿಗಾಗಿ ಆರಾಧಿಸಲಾಗುತ್ತದೆ. ಆ ತಿರುವು ಎಡಕ್ಕೆ ಇದ್ದರೆ ಐಹಿಕ ಭೋಗ, ವಿದ್ಯಾ, ಸಿದ್ಧಿ, ವೃದ್ಧಿ, ಬುದ್ಧಿ, ಹಾಗೂ ವಿಘ್ನನಿವಾರಣೆಗಾಗಿ ಆರಾಧಿಸಲಾಗುತ್ತದೆ.
ಅಧ್ಯಾತ್ಮ ಎನ್ನುವುದು ಅತ್ಯಂತ ವೈಯಕ್ತಿಕವಾದ ಅನುಭವವೇ ಹೊರತು, ಕೇವಲ ಚರ್ಚೆ ಉಪದೇಶಗಳಿಂದ ಸಿದ್ದಿಸದು. ಹಾಗಾಗಿ ತತ್ವ, ಪುರಾಣ, ಯೋಗಶಾಸ್ತ್ರಗಳು ಅಥವಾ ಅನುಭಾವಿಗಳ ಮಾತುಗಳು ಹಲವಾರು ವಿಚಾರಗಳನ್ನು ತಿಳಿಸಿದರೂ, ಅಲ್ಪಸ್ವಲ್ಪ ಅರ್ಥವಾದರೂ ಸಾಮಾನ್ಯರಾದ ನಮಗೆ ಎಲ್ಲವೂ ನಿಲುಕದೆ ಹೋಗಬಹುದು, ಸಂಶಯ, ಅರ್ಧಂಬರ್ಧ ತಿಳುವಳಿಕೆ ಅಥವಾ ಭಯಮಿಶ್ರಿತ ನಂಬಿಕೆಗಳೇ ಉಳಿದಾವು. ಏನೇ ಆಗಲಿ ಮುಗ್ಧವಾದರೂ ನಿರ್ಮಲ ಮನಸ್ಸಿನಿಂದ ಮಾಡಿದ ಯಾವುದೇ ಪುಣ್ಯಕಾರ್ಯವು ಮನಸ್ಸನ್ನು ಹಗುರಗೊಳಿಸಿ ಆನಂದವನ್ನಂತೂ ಕೊಡುತ್ತದೆ, ಬಂಧು ಬಳಗದೊಂದಿಗಿನ ಸಂಬಂಧಗಳು ಬಲಿಯುತ್ತವೆ, ಕಲೆ-ಸಂಸ್ಕೃತಿ-ದೇಶ-ಧರ್ಮಗಳು ಗಟ್ಟಿಯಾಗುತ್ತವೆ. ಹೀಗಾಗಿ ಅರಿತೋ ಅರಿಯದೆಯೋ ಮಾಡುವ ಇಂತಹ ಎಲ್ಲ ಹಬ್ಬ-ಹರಿದಿನಗಳೂ ಮನೋನ್ನತಿಯನ್ನೂ ಜೀವನದಲ್ಲಿ ಸೌಹಾರ್ದವನ್ನೂ, ಸಂತಸವನ್ನೂ ಉಂಟುಮಾಡುವುದರಲ್ಲಿ ಸಂಶಯವಿಲ್ಲ.
ಹಬ್ಬದ ಈ ಶುಭ ಸಂದರ್ಭದಲ್ಲಿ ಗೌರೀ-ಗಣಪತಿಯರು ನಮ್ಮ ವೈಯಕ್ತಿಕ, ಸಾಮಾಜಿಕ, ರಾಷ್ಟ್ರೀಯ ಹಾಗೂ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಿ ಸುಖ-ಸಮೃದ್ಧಿಗಳನ್ನು ಕರುಣಿಸಲಿ.

೨೦೧೦ ವಷದ ಗೌಈ ಗಣೇಶ ಹಬ್ಬದ ಪ್ರಯುಕ್ತ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನದ ಕಿಂಚಿತ್ ಪರಿಷ್ಕೃತ ರೂಪ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ