ಶುಕ್ರವಾರ, ಮಾರ್ಚ್ 17, 2017

ಶಕ್ತಿಸ್ವರೂಪಿಣಿ
-      Dr Arathi V B, arathi.vbr@gmail.com
ಸನಾತನಧರ್ಮದಲ್ಲಿ ಪುರುಷ-ಪ್ರಕೃತಿಯರು ಪರತತ್ವದ ಎರಡು ಅಭಿವ್ಯಕ್ತಿಗಳು. ರೂಪವಿಭವಗಳಲ್ಲೂ  ಕಾರ್ಯರೂಪದಲ್ಲೂ ವಿಭಿನ್ನವೆನಿಸಿದರೂ, ಎರಡೂ ಪರಸ್ಪರ ಪೂರಕಪ್ರೇರಕವಾದ ಮಹಾಶಕ್ತಿಗಳು. ಇದನ್ನು ಸೂಚಿಸುವುದೇ ಅರ್ಧನಾರೀಶ್ವರ ತತ್ವ. ಪುರುಷತತ್ವವು ನಿಷ್ಕ್ರಿಯ-ಶಕ್ತಿಮೂಲವಾದರೆ, ಪ್ರಕೃತಿಯು ಅದರದೇ ಸಕ್ರಿಯಾಭಿವ್ಯಕ್ತಿ’. ಪರಸ್ಪರ ಪೂರಕ-ಪ್ರೇರಕ! ವಿಜ್ಞಾನದಲ್ಲಿ potential energy-kinetic energyಗಳು ಇದ್ದಂತೆ! ಎರಡೂ ತತ್ವತಃ ಒಂದೇ, ವಿಭಿನ್ನವಾಗಿ ಪ್ರವರ್ತಿಸುತ್ತವೆ ಅಷ್ಟೇ.   ಪರಮ ಪುರುಷತತ್ವ ಹಾಗೂ ಪರಾಪ್ರಕೃತಿಗಳ ಭೌತಿಕ ಪಿಂಡಾಂಡರೂಪಗಳೇ ನರ-ನಾರಿಯರು ಎನ್ನುವ ಸಮಷ್ಟಿದರ್ಶನ ನಮ್ಮದು. ಇಲ್ಲಿ ಯಾವೊಂದನ್ನೂನಿಕೃಷ್ಟಎಂದು ಕಾಣುವುದೇ ಸನಾತನ ಧರ್ಮದ ಮೂಲಭಾವಕ್ಕೆ ಧಕ್ಕೆ ತರುವಂತಹದ್ದು.
ಜೀವನದಲ್ಲಿ ಪ್ರಾಯೋಗಿಕವಾಗಿ ಸ್ತ್ರೀಪುರುಷರ ಜವಾದ್ಬಾರಿಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಅದು ಅವರವರ ಸ್ವಂತಿಕೆಯ ಹೆಗ್ಗಳಿಕೆ ವಿಷಯವೇ ಹೊರತು, ‘ತಾರತಮ್ಯ ವಿಷಯವಲ್ಲ. ಪುರುಷನಿಗೆ ಮೀಸೆ ಚಿಗುರಿತ್ತದೆ. ಹೆಣ್ಣು ತಾಯಿಯಾಗಬಲ್ಲಳು- ಇದರಲ್ಲಿ ನೈಸರ್ಗಿಕ ವೈಶಿಷ್ಟ್ಯವನ್ನು ಗುರುತಿಸಬೇಕೇ ಹೊರತು, ‘ಯಾವುದು ಶ್ರೇಷ್ಠ?’ ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಆದರೆ ಎಲ್ಲದರಲ್ಲೂಮೇಲು-ಕೀಳೆಂಬಲೆಕ್ಕಾಚಾರಕ್ಕೆ ಮೊದಲಾಗುವ ಮಾನವಮತಿಯು ಇಲ್ಲಿಯೂ ಅದನ್ನು ತಂದಿಟ್ಟಿರುವಲ್ಲಿ, ಧರ್ಮದ ತಪ್ಪೇನೂ ಇಲ್ಲ. ಅದು ಮನುಷ್ಯನ ಕಿತಾಪತಿ. ಇರಲಿ.
ಮತ್ತಾವ ಮತದಲ್ಲೂ ಇಲ್ಲದಂತಹ ಭೇದಾತೀತಭಾವ ನಮ್ಮ ಧರ್ಮದಲ್ಲಿದೆ. ಇಲ್ಲಿ, ಪರತತ್ವವನ್ನು ಶಿವ-ವಿಷ್ಣು-ಗಣಪತಿ ಮುಂತಾದ ಗಂಡುರೂಪಗಳಲ್ಲಿ ಆರಾಧಿಸಬಹುದಾದಂತೆಯೇ ದುರ್ಗಾ-ಲಕ್ಷ್ಮೀ-ಸರಸ್ವತೀ ಮುಂತಾದ ಬಗೆಬಗೆಯ ಮಾತೃರೂಪಗಳಲ್ಲೂ ಆರಾಧಿಸಬಹುದಾಗಿದೆ. ಗಂಡುದೇವರಿಗೆ ಸಲ್ಲುವ ಎಲ್ಲ ಮಂತ್ರ-ತಂತ್ರ-ವಿಧಿ-ವಿಧಾನಗಳ ಪೂಜಾ-ಉಪಚಾರಗಳು ದೇವಿಯರಿಗೂ ಸಲ್ಲುತ್ತದೆ! (ಯಜ್ಞೋಪವೀತ ಸಮರ್ಪಣೆಯೂ ಸೇರಿದಂತೆ!) ಎಲ್ಲ ದೇವತೆಗಳಿಗೂ ಇರುವಂತೆಯೇ ದೇವಿಗೂ ವೈದಿಕ, ಆಗಮಿಕ, ತಾಂತ್ರಿಕ ಜಾನಪದಾದಿ ಉಪಾಸನಾಕ್ರಮಗಳಿವೆ. ಅಷ್ಟೇ ಅಲ್ಲ, ದೇವಿಯ ವಿಷಯದಲ್ಲಿ ಉಪಚಾರಗಳೂ ಸ್ವಲ್ಪ ಜಾಸ್ತೆಯೇ! ಸೀರೆ-ರವಿಕೆ-ಬಳೆ-ಬಿಚ್ಚೋಲೆ-ಮಂಗಳದ್ರವ್ಯಗಳು-ಮುತ್ತಿನಾರತಿಗಳು ಇಲ್ಲಿ ಹೆಚ್ಚು ಕಲಾತ್ಮಕತೆಯನ್ನೂ ಹೊಂದಿವೆ. ಶಾಕ್ತಾಗಮ, ಶಾಕ್ತತಂತ್ರ ಮುಂತಾದ ಪ್ರಾಚೀನ ಉಪಾಸನಾ-ಪದ್ಧತಿಗಳೂ ಬಹಳ ಪ್ರಸಿದ್ದವಾಗಿದ್ದು, ಅವುಗಳಿಗೆಲ್ಲ ಪುರಾಣ-ಕಾವ್ಯ-ಶಾಸ್ತ್ರಾದಿಗಳ ಹಿನ್ನಲೇ ಇದೆ. ವಿಷ್ಣು-ಶಿವಾದಿಗಳ ಪಾರಮ್ಯವನ್ನು ವರ್ಣಿಸುವಂತಹ ಲಿಂಗಪುರಾಣ-ಭಾಗವತಪುರಾಣಗಳಿರುವಂತೆ, ದೇವೀಪಾರಮ್ಯವನ್ನು ಮೆರೆಯುವಂತಹ ಕಾಲಿಕಾಪುರಾಣ, ಮಾರ್ಕಂಡೇಯ ಪುರಾಣಗಳು ಇವೆ. ಹೀಗೆ ಯಾವ ವಿಷಯದಲ್ಲೂ ಸ್ತ್ರೀರೂಪಕ್ಕೆ ಆತ್ಯಂತಿಕವಾದ ನೆಲೆಯಲ್ಲಿ ಭೇದವೆಣಿಸಿಲ್ಲ. ಅಷ್ಟೇ ಅಲ್ಲ, ಗಂಡು-ಹೆಣ್ಣು ದೇವತೆಗಳ ವರ್ಣನೆಗಳಲ್ಲಿ, ಉಪಾಸನೆಯಲ್ಲಿ, ಆಯಾ ದೇವತೆಯ ಪತಿ ಅಥವಾ ಪತ್ನಿಯನ್ನೂ ಸೇರಿಸಿಯೇ ಪೂಜಿಸುವ ಪದ್ಧತಿಯಿದೆ. ಶಿವನು ಸಾಂಬನಾಗಿ (ಅಂಬೆಯಿಂದ ಕೂಡಿದವನಾಗಿ), ವಿಷ್ಣುವು ಲಕ್ಷ್ಮೀಸಮೇತನಾಗಿಯೇ ಬರುವಂತಹದ್ದು! ಮಂತ್ರ-ಶ್ಲೋಕಾದಿಗಳಲ್ಲೂ ಆಯಾ ದೇವತೆಯ ವಲ್ಲಭರ ಉಲ್ಲೇಖವಿಲ್ಲದಿರಲು ಸಾಧ್ಯವೇ ಇಲ್ಲ! ಇತರೆಲ್ಲ ದೇವತಾ ರೂಪಗಳಿಗಿರುವಂತೆಯೇ, ಶಕ್ತಿದೇವತೆಗೂ ಬಗೆಬಗೆಯ ನಾಮರೂಪಗಳಿವೆ. ಎಲ್ಲ ನಾಮರೂಪಗಳೂ ತತ್ವತಃ ಒಂದೇ ಎನ್ನುವ ಸಮಷ್ಟಿಭಾವವೂ ಇದೆ.  
ಇನ್ನು ಪುರಾಣಗಳ ಸಂಕೇತಗಳನ್ನು ನೋಡಿದ ಸಮಷ್ಠಿಭಾವ ಎದ್ದುಕಾಣುತ್ತದೆ- ಲಕ್ಷ್ಮಿಯು ವಿಷ್ಣುವಿನ ವಕ್ಷಸ್ಥಳನಿವಾಸಿನಿ. ಸರಸ್ವತಿಯು ಬ್ರಹ್ಮನ ನಾಲಗೆಯಲ್ಲೇ ನೆಲೆಸಿರುತ್ತಾಳೆ. ಪಾರ್ವತಿಯು ಶಿವನ ಅರ್ಧದೇಹವೇ ತಾನಾಗಿರುತ್ತಾಳೆ. ತ್ರಿಮೂರ್ತಿಗಳೂ ಶಕ್ತಿವಿಹೀನರಾಗಿ ಇರಲು ಸಾಧ್ಯವೇ ಇಲ್ಲ! ಒಟ್ಟಿನಲ್ಲಿ ಶಿವಶ್ಶಕ್ತ್ಯಾಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ , ಚೇದೇವಂ ದೇವೋ ಖಲು ಕುಶಲಃ ಸ್ಪಂದಿತುಮಪಿ-----” ಎಂಬ ಸೌಂದರ್ಯಲಹರಿಯ ಶ್ಲೋಕದ ಭಾವಾರ್ಥದಂತೆ- ಶಕ್ತಿಹೀನನಾದಲ್ಲಿ ದೇವನೂ ಏನನ್ನೂ ಮಾಡಲಾರ, ಮಾಡುವುದಿಲ್ಲ. ಇದು ಸ್ತ್ರೀತತ್ವಕ್ಕೆ ನಮ್ಮ ಸಂಸ್ಕೃತಿಯಲ್ಲಿರುವ ಸ್ಥಾನ!
ನಮ್ಮ ಪಾರಿವಾರಿಕ ಲೌಕಿಕ ಜೀವನಗಳನ್ನು ಗಮನಿಸಿದರೂ, ಇದೇ ಮೂಲಭಾವ ಎದ್ದುಕಾಣುತ್ತದೆ. ಮನುಷ್ಯನಿಗೆ ವಿವಾಹ ಮಾಡುವುದನ್ನು ಒಂದು ಪ್ರಮುಖಸಂಸ್ಕಾರಎಂದೇ ಕರೆಯಲಾಗಿದೆ. ಮಡದಿಯೊಂದಿಗೆ ಕೂಡಿಯೇ ಮಾನವನು ಹಲವಾರು ಅನುಭವಗಳನ್ನು ಪಡೆದು, ಪಕ್ವನಾಗಬೇಕಾಗಿದೆ! ಸರಸ-ಸಂತೋಷಗಳನ್ನನುಭವಿಸುವುದು ಒಂದು ವಿಷಯವಾದರೆ, ಹೊಂದಣಿಕೆ, ತ್ಯಾಗ, ತಾಳ್ಮೆಗಳ ದೊಡ್ಡ ಪಾಠವನ್ನೇ ಕಲಿಯುತ್ತಾನೆ. ’ನಾನು ನನ್ನದುಎಂಬ ವೈಯಕ್ತಿಕತೆಯ ಹಠವು ನಾವು ನಮ್ಮೆಲ್ಲರದೂಎಂದು ವಿಸ್ತಾರಭಾವದಲ್ಲಿ ಕರಗಲು ಸಂಸಾರವೊಂದೇ ಸಾಕು! ಅದಕ್ಕೇ ಗೃಹಸ್ಥಾಶ್ರಮವನ್ನುಜ್ಯೇಷ್ಠಾಶ್ರಮಎಂದೇ ಕರೆಯಲಾಗಿದೆ. ಇತರೆಲ್ಲ ಆಶ್ರಮಗಳನ್ನೂ ಭರಿಸುವ ಉಳಿಸುವ ಆಶ್ರಮವಿದು. ವಂಶಾಭಿವೃದ್ಧಿಗೂ. ಮಕ್ಕಳಿಗೂ, ಬ್ರಹ್ಮಚಾರಿಗಳಿಗೂ, ವೃದ್ಧರಿಗೂ, ವಾನಪ್ರಸ್ಥಾಶ್ರಮಿಗಳಿಗೂ, ಅತಿಥಿಗಳಿಗೂ, ಯಾತ್ರಿಕರಿಗೂ, ಎಲ್ಲ ಕಸುಬುಗಳಿಗೂ, ವಾಣಿಜ್ಯವ್ಯಾಪಾರಗಳಿಗೂ, ಸಮಾಜಿಕ ಶಿಷ್ಟಾಚಾರಗಳಿಗೂ ಗೃಹಸ್ಥಾಶ್ರಮವೇ ಆಶ್ರಯ. ಸಂನ್ಯಾಸಿಯೂ ಭಿಕ್ಷೆಗಾಗಿ ಇಲ್ಲಿಗೇ ಬರಬೇಕು! ಆದ್ದರಿಂದಲೇಮದುವೆಯಾಗು, ಪೂರ್ಣನಾಗು!’ ಎಂದೇ ಹೇಳುವ ವಾಡಿಕೆ ಬಂತು. ಗೃಹಸ್ಥಾಶ್ರಮದಲ್ಲಿ ಸ್ತ್ರೀಪುರುಷರಿಬ್ಬರ ಜವಾಬ್ದಾರಿ ಸಮಾನವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಜವಾಬ್ದಾರಿಗಳು ಬೇರೆಬೇರೆಯಾಗಿ ಕಾಣಬಂದರು, ಪೂರಕವಾಗಿವೆ, ಸಮಾನ ಆದರವನ್ನು ಪಡೆದಿವೆ. ಅಷ್ಟೇ ಅಲ್ಲ, ಮಾತೆಗೆ ಒಂದು ಸ್ಥಾನ ಹೆಚ್ಚಾಗಿಯೇ ಇದೆ! ಮಾತೃದೇವೋ ಭವ! ಎಂಬ ಮಾತು ಉಪನಿಷತ್ತಿನದು. ಬಳಿಕವೇ ಪಿತೃದೇವೋ ಭವ--- ಇತ್ಯಾದಿ. ಸಂನ್ಯಾಸಿಯಾದ ಮೇಲೆ ವ್ಯಕ್ತಿಯು ಯಾರಿಗೂ ನಮಸ್ಕರಿಸಬೇಕಿಲ್ಲ, ತಂದೆಗೂ ಕೂಡ! ಆದರೆ ಹೆತ್ತತಾಯಿಗೆ ಮಾತ್ರ ಬದುಕಿರುವವರೆಗೂ ನಮಸ್ಕರಿಸಬೇಕು ಎನ್ನುವುದು ಶಾಸ್ತ್ರವಿಧಿ! ಹೆತ್ತತಾಯಿಯ ಋಣ ತೀರಿಸಲಾಗದು! ಅಂತೆಯೇ ಯಾವುದೇ ದಾನ, ಧರ್ಮ, ಯಾತ್ರೆ, ಪೂಜೆ, ಯೋಗ, ಭೋಗಗಳೇ ಆಗಲಿ, ಎಲ್ಲ ವಿಷಯದಲ್ಲೂ ಹೆಂಡತಿ ಪಕ್ಕದಲ್ಲಿ ನಿಂತು ಕೈಯಲ್ಲಿ ಅರ್ಘ್ಯ ಕೊಟ್ಟುಸಮ್ಮತಿಸಿದರೆಮಾತ್ರ ಅದು ಧರ್ಮಸಮ್ಮತವೆನಿಸುವುದು! ಸಂನ್ಯಾಸವನ್ನೂ ಹೆಂಡತಿಯ ಅನುಮತಿಯಿಂದಲೇ ಪಡೆಯತಕ್ಕದ್ದು ! ಇದು ನಮ್ಮ ಧರ್ಮದಲ್ಲಿ ಸ್ತ್ರೀಗಿರುವ ಹೆಗ್ಗಳಿಕೆಯ ಸ್ಥಾನ!
ವೇದಕಾಲದ ಸಮಾಜದಲ್ಲಿ, ವಿದ್ಯಾಕ್ಷೇತ್ರದಲ್ಲೂ ಸ್ತ್ರೀಯರದು ಸಕ್ರಿಯ ಪಾತ್ರವಿದ್ದದ್ದು ಸ್ಪಷ್ಟ. ‘ಆಚಾರ್ಯಾ ಎಂದರೆ ಗುರುವಾದಂತಹ ಸ್ತ್ರೀ. ‘ಆಚಾರ್ಯಾಣಿ ಎಂದರೆ ಗುರುವಿನ ಪತ್ನೀ. ಶಬ್ದಗಳೇ ಎರಡೂ ಬಗೆಯ ಸ್ತ್ರೀಯರಿದ್ದರು ಎನ್ನುವುದನ್ನು ಸೂಚಿಸುತ್ತದೆ. ’ಪತ್ನೀಎಂಬ ಶಬ್ದವೇ ಯಜ್ಞ ಮಾಡುವವನ ಸಹಾರಿಣೀಎನ್ನುವ ಅರ್ಥವನ್ನು ಹೊಂದಿದೆ. (ಕಾಲಾಂತರದಲ್ಲಿ ಅದು ತಾನು ವಿವಾಹವಾದ ಹೆಣ್ಣುಎನ್ನುವ ಅರ್ಥವನ್ನು ಹೊಂದಿತು) ಸ್ತ್ರೀಯರೇ ನಿರ್ವಹಿಸುತ್ತಿದ್ದ ಸೀತಾಯಜ್ಞಮುಂತಾದ ಕೆಲವು ಯಜ್ಞಗಳ ಉಲ್ಲೇಖಗಳಿವೆ. ಸೀತೆ ಮುಂತಾದ ಪ್ರಾಚೀನ ಸ್ತ್ರೀಯರು ವೇದವಿದ್ಯಾಸಂಪನ್ನೆಯರೆಂಬುದು ಪುರಾಣಕಾವ್ಯಗಳ ಉಲ್ಲೇಖಗಳಲ್ಲೇ ಸ್ಪಷ್ಟವಾಗುತ್ತದೆ. ಹನುಮಂತನು ಸೀತೆಯನ್ನು ಅಶೋಕವನದಲ್ಲಿ ಮೊದಲು ನೋಡುವುದೇ ಆಕೆಯು ಅಲ್ಲಿನ ಸರೋವರದ ದಡಕ್ಕೆ ಸಾಯಂ ಸಂಧ್ಯಾವಂದನೆ ಮಾಡುವುದಕ್ಕಾಗಿ ಬಂದಾಗ! ರಾಮನ ಅನುಪಸ್ಥಿತಿಯಲ್ಲಿ ಸೀತೆಯೇ ಪಿತೃಕಾರ್ಯಗಳನ್ನು ನಿರ್ವಹಿಸಿದಳೆಂಬ ಕಥೆಗಳೂ ಸ್ಥಳಪುರಾಣಗಳಲ್ಲೂ ಪರಂಪರೆಯಲ್ಲೂ ಹರಿದು ಬಂದಿದೆ. ಇನ್ನು ಯಜ್ಞಾದಿಗಳಲ್ಲಿ ಹೆಣ್ಣುಮಕ್ಕಳು ವೀಣಾ-ಝರ್ಝರೀ-ವಾದ್ಯಗಳನ್ನು ನುಡಿಸುತ್ತಿದ್ದರೆಂದೂ, ಗೀತನೃತ್ಯಗಳನ್ನು ಪ್ರದರ್ಶಿಸುತ್ತಿದ್ದರೆಂದೂ ಉಲ್ಲೇಖಗಳಿವೆ. ಓಕಳಿಯಾಡುವುದು, ಹಾಸ್ಯವಿನೋಕೂಟಗಳಲ್ಲಿ ಭಾಗವಹಿಸುವುದು ಇವೆಲ್ಲ ಸ್ತ್ರೀಯರಿಗೆ ಸರ್ವೇಸಮಾನ್ಯವಾಗಿತ್ತು. ಅತ್ಯಂತ ಪ್ರಾಚೀನವಾದ ಮೂಲಗಳಿಂದ ಹಿಡಿದು ಅರ್ವಾಚೀನ ಇತಿಹಾಸದವರೆಗೂ, ಸ್ತ್ರೀಯರು ಹಿಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿದ್ದರೆಂಬುದು ಎದ್ದುಕಾಣುತ್ತದೆ. ಸ್ತ್ರೀಯನ್ನು ಚೆನ್ನಾಗಿ ಅಲಂಕರಿಸಿಟ್ಟು ಭೋಗದ ಬೊಂಬೆಯಂತೆ ಕಾಣುವದನ್ನಷ್ಟೇ ಪ್ರಾಚೀನ/ ಮಧ್ಯಕಾಲೀನ ಪಾಶ್ಚಾತ್ಯಸಮಾಜಗಳಲ್ಲಿ ಕಾಣುತ್ತೇವೆ. ಅಲ್ಲಿನ ನಾರಿಯರು ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಕಾಣಬರುವುದು ಕೇವಲ ಒಂದು ಶತಮಾನದಿಂದೀಚೆಗಷ್ಟೇ ಎನ್ನುವುದನ್ನು ಮರೆಯಬಾರದು! ಆದರೆ ಇತಿಹಾಸದಲ್ಲಿನ ಮೊಟ್ಟಮೊದಲ ರಾಣಿಯರೂ, ಯೋಧೆಯರೂ, ಯೋಗಿನಿಯರೂ, ಗೂಢಚಾರಿಣಿಯರೂ, ವ್ಯಾಪಾರೀ ಮಹಿಳೆಯರೂ, ಗಾಯಕಿಯರೂ, ನರ್ತಕಿಯರೂ, ಪಂಡಿತೆಯರೂ, ಕವಯತ್ರಿಯರೂ--- ಸಿಗುವುದೇ ನಮ್ಮ ಪ್ರಾಚೀನ ಹಿಂದು ಸಮಾಜದಲ್ಲಿ! ಶಸ್ತ್ರಾಗಾರಗಳಲ್ಲಿ ಕೆಲಸ ಮಾಡುತ್ತಿದ್ದ ಇಶುಕರ್ತ್ರಿಯರೂ, ಯಜ್ಞವಿಧಿಗಳಲ್ಲಿ ವೇದಮಂತ್ರವನು ಹಾಡುತ್ತಿದ್ದ ಉದ್ಗತ್ರಿಯರು, ವೇದಾಧ್ಯಯನ ಹಾಗೂ ನೈಷ್ಠಿಕ ಬ್ರಹ್ಮಚರ್ಯಗಳಲ್ಲೇ ಶಾಶ್ವತವಾಗಿ ನೆಲೆನಿಲ್ಲುತ್ತಿದ್ದ ಗಾರ್ಗೀ, ವಾಗಂಭ್ರಿಣೀ, ಶಾಶ್ವತೀ, ಮೈತ್ರೇಯೀ ಮೊದಲಾದ ಅನೇಕ ಬ್ರಹ್ಮವಾದಿನಿಯರ ಮಾದರಿಯ ಸ್ತ್ರೀಯರನ್ನೂ ಕಾಣಬಹುದು. ಗೃಹಸ್ಥಾಶ್ರಮವನ್ನು ಆಯ್ದುಕೊಂಡು ಆಜೀವನವೂ ಪತ್ನಿಯಾಗಿ-ಮಾತೆಯಾಗಿ-ಆತಿಥೇಯಳಾಗಿ-ಕುಲವಧುವಾಗಿ ಪರಂಪರೆ-ಧರ್ಮ-ಆಚಾರ-ಸಂಸ್ಕೃತಿಗಳನ್ನು ಕಾಪಾಡಿ ಮುಂದಿನ ಪೀಳಿಗೆಗೆ ರವಾನಿಸುವ ವ್ರತತೊಟ್ಟ ಕತ್ಯಾಯನೀ, ಅದಿತೀ ಮುಂತಾದ ಅಸಂಖ್ಯಸಧ್ಯೋವಧುಗಳ ಮಾದರಿಯ ಸ್ತ್ರೀಯರನ್ನೂ ಕಾಣಬಹುದು. ಪತಿಯ ಧರ್ಮವನ್ನು ತನ್ನ ತಪೋಬಲದಿಂದ ಪುಷ್ಟೀಕರಿಸಿ ಸಿದ್ಧಿಯುಂಟು ಮಾಡಿಸಿದ ಸೀತಾ-ಅನಸೂಯಾ-ಲೋಪಾಮುದ್ರಾ ಮುಂತಾದ ನಿಸ್ವಾರ್ಥ ಪತಿವ್ರತೆಯರ ಮಾದರಿಯ ಸ್ತ್ರೀಯರನ್ನೂ ಕಾಣಬಹುದು. ಸಂಸಾರದ ಬಂಧನವೇ ಬೇಡವೆಂದು ವಿರಕ್ತಿಯ ಹಾದಿಯನ್ನು ಮೆಟ್ಟಿದ ಸುಲಭಾ, ವೇದವತೀ, ಸ್ವಯಂಪ್ರಭಾ ಮುಂತಾದ ನಾರೀಮಣಿಯರ ಮಾದರಿಯ ಸ್ತ್ರೀಯರನ್ನೂ ಕಾಣಬಹುದು. ಸಂಸಾರದಲ್ಲೇ ಇದ್ದೂ ಬ್ರಹ್ಮಜ್ಞಾನದ ಶಿಖರಕ್ಕೇರಿದ ದೇವಹೂತಿ, ಅದಿತಿ, ಮೊದಲಾದ ಮಾದರಿಯ ಸ್ತ್ರೀರತ್ನಗಳನ್ನೂ ಕಾಣಬಹುದು.
ಇದೆಲ್ಲ ಹಳೆ ಕಥೆಗಳಾದವಪ್ಪ! ಎಂದೆನ್ನುವಿರೋ? ಮಧ್ಯಯುಗದಲ್ಲೇ ನಮ್ಮ ಹಿಂದು ಸಮಾಜದಲ್ಲಿ ಅದೆಷ್ಟು ರಾಣಿಯರೂ, ಯೋಧೆಯರೂ, ಕವಯತ್ರಿಯರೂ, ಯೋಗಿನಿಯರೂ, ಪತಿವ್ರತೆಯರೂ ಆಗಿಹೋಗಿಲ್ಲ! ಕಾಮುಕನೂ ಕುಹಕಿಯೂ ಆದ ಮುಘಲರಾಜಾ ಅಕ್ಬರನನ್ನು ಮೂರು ಬಾರಿ ಹೀನಾಯವಾಗಿ ರಣದಲ್ಲಿ ಸೋಲಿಸಿದ ರಾಣೀ ದುರ್ಗಾವತಿಯನ್ನು ಮರೆಯಲಾದೀತೆ? ಕುದುರೆಯೇರಿ ಖಡ್ಗವನ್ನು ಝಳುಪಿಸಿದ ಝಾಂಸೀರಾಣಿ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮರನ್ನು ಮರೆಯಲಾದೀತೆ? ದಾನ-ಧರ್ಮ-ಶಿಕ್ಷಣಾದಿ ಕ್ಷೇತ್ರಗಳಲ್ಲಿ ಅಭೂತಪೂರ್ವ ಕೊಡುಗೆಯಿತ್ತ ರಾಣಿ ಅಬ್ಬಕ್ಕ, ಅಹಲ್ಯಾಬಾಯಿ ಹೋಳ್ಕರ್ ಮುಂತಾದ ಸಮಾಜಸೇವಾಧರೀನೆಯರನ್ನು ಮರೆಯಲಾದೀತೆ? ಗೀತ-ನೃತ್ಯ-ನಾಟಕ-ಸಾಹಿತ್ಯ-ಕಾವ್ಯ-ಶಾಸ್ತ್ರ-ರಾಜನೀತಿಗಳೆಲ್ಲದರಲ್ಲೂ ಅದ್ವಿತೀಯ ಪಂಡಿತೆಯೆನಿಸಿದ ತಂಜಾವೂರಿನ ರಘುನಾಥನಾಯಕನ ಆಸ್ಥಾನ ವಿದುಷಿ ಶುಕವಾಣಿಯು(ಮಧುರವಾಣಿ ಎಂದು ಬಿರುದು), ನೂರು ವಿದಾಂಸರನ್ನು ಒಮ್ಮೆಲೆ ವಿದ್ವತ್ಸಭೆಯಲ್ಲಿ ಎದುರಿಸುತ್ತಿದ್ದ ಶತಾವಧಾನಿನಿಯಾಗಿದ್ದಳು! ನಮ್ಮದೇ ವಿಜಯನಗರ ಸಾಮ್ರಾಜ್ಯದ ರಾಜವಂಶದ ಗಂಗಾದೇವಿ, ವಿಜ್ಜಿಕೆಯರೂ ಮಹಾಕವಯತ್ರಿಯರು. ಇನ್ನು ಬಗೆಬಗೆಯ ಗೂಢಚಾರಿಣಿಯರ ಪಾತ್ರದ ಬಗ್ಗೆ ಭಗವಾನ್ ಚಾಣಕ್ಯನೇ ತನ್ನ ಅರ್ಥಶಾಸ್ತ್ರದಲ್ಲಿ ಹೇಳಿದ್ದಾನೆ. ಆಂಡಾಳ್, ಅಕ್ಕಮಹಾದೇವೀ, ಲಲ್ಲೇಶ್ವರೀ, ತರಿಗೊಂಡ ವೆಂಕಮಾಂಬಾ, ಮುಂತಾದ ಸಂತಸ್ತ್ರೀಯರು ಜನಮಾನಸದಲ್ಲಿ ಉನ್ನತ ಗೌರವವನ್ನು ಪಡೆದವರು. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿಂದುಸ್ತ್ರೀಯರ ಪಟ್ಟಿ ಮುಗಿಯಲೊಲ್ಲದು!
ಗೀತ-ನೃತ್ಯ-ವಾದ್ಯ-ಸಾಹಿತ್ಯ-ಕಾವ್ಯ-ಶಿಲ್ಪಾದಿಗಳಲ್ಲೂ, ಚತುಷ್ಷಷ್ಠಿ-ವಿದ್ಯಾಪ್ರಕಾರಗಳಲ್ಲೂ, ರಾಜಕೀಯದಲ್ಲೂ, ಯುದ್ಧಶಾಸ್ತ್ರದಲ್ಲೂ, ವ್ಯಾಪಾರ-ವಾಣಿಜ್ಯಗಳಲ್ಲೂ, ದೊಂಬರಾಟ-ಪಶುಪಾಲನ-ಕೃಷಿ-ನೇಯ್ಗೆ-ಕಸೂತಿ---- ಮುಂತಾದ ಅನೇಕಾನೇಕ ಕ್ಷೇತ್ರಗಳಲ್ಲೂ ಸ್ತ್ರೀಯರು ಅನಾದಿಕಾಲದಿಂದಲೂ ಪುರುಷರಿಗೆ ಸಮವಾಗಿ ದುಡಿದಿದ್ದಾರೆ ದುಡಿಯುತ್ತಲೇ ಇದ್ದಾರೆ, ನಮ್ಮ ಸಾಮಾಜಿಕ ಆರ್ಥಿಕ ಬಲಕ್ಕೆ ಪುಷ್ಟಿಯನ್ನಿತ್ತಿದ್ದಾರೆ. ಇಂದಿಗೂ ವಿದ್ಯಾಭ್ಯಾಸ ಉದ್ಯೋಗ ವ್ಯಾಪಾರಗಳಲ್ಲಿ ದಾಪುಗಾಲು ಹಾಕುತ್ತ ಮುನ್ನಡೆದಿದ್ದಾರೆ ನಮ್ಮ ಹಿಂದು ಹೆಣ್ಣುಮಕ್ಕಳು! ಪಾಶ್ಚಾತ್ಯ ಮತಗಳಂತೆ ಹೆಣ್ಣನ್ನು ’ತಲೆಯಿಂದ ಕಾಲಿನವರೆಗೂ ಅಮಾನುಷವಾಗಿ ಬಟ್ಟೆಯಲ್ಲಿ ಮುಚ್ಚಿ’ ಉಸುರುಗಟ್ಟಿಸಿ ಮೂಲೆ ತಳ್ಳುವ ಬುದ್ಧಿಯೂ ಇಲ್ಲಿಲ್ಲ. ಅಥವಾ ಹೆಣ್ಣನ್ನು ಸ್ವೇಚ್ಛಾಚಾರಕ್ಕಿಳಿಸಿ, ವಿವಸ್ತ್ರಗೊಳಿಸಿ ಬಿನ್ನಾಣದ ಬೊಂಬೆಯಂತೆ ಪ್ರದರ್ಶಿಸಿ ದುಡ್ಡುಮಾಡಿಕೊಳ್ಳುತ್ತ, ಅವಳ ನೈಜ ಅಂತಸ್ಸತ್ವಕ್ಕೆ ಅವಮಾನವೆಸಗುವ ಬುದ್ಧಿಯೂ ಇಲ್ಲ- ಎರಡೂ ವಿಪರೀತಗಳೂ ಮೂಲರೂಪದ ವೈದಿಕ ಹಿಂದು ಸಂಸ್ಕೃತಿಯಲ್ಲಿಲ್ಲ. ತದನಂತರದ ಸಾಮಾಜಿಕ ಏರುಪೇರುಗಲಲ್ಲಿ ಇಂತಹ ಕಟ್ಟುಪಾಡುಗಳು ಹುಟ್ಟಿರಬಹುದು. ಹೀಗೆ, ಯೋಗದಲೂ ಭೋಗದಲ್ಲೂ ಘನತೆಯಿಂದ ನಡೆಯುವ ಸ್ವಾತಂತ್ರ್ಯ-ಜವಾಬ್ದಾರಿಗಳನ್ನು ಸ್ತ್ರೀಗೆ ಸಂಸ್ಕಾರರೂಪದಲ್ಲಿ ಕಲಿಸಿದ ಧರ್ಮ ನಮ್ಮದು.   
ಇಂತಹ ನಮ್ಮ ಕುಲನಾರಿಯರಿಗೆ ಕಂಟಕ ಬಂದದ್ದು, ನಿರ್ಬಂಧಗಳು ಬಂದದ್ದು ಮಧ್ಯಯುಗದ ಆಕ್ರಮಣಗಳ ಭಯಂಕರ ಕಾಲದಲ್ಲಿ! ಸ್ವತಂತ್ರವಾಗಿ ಓಡಾಡುತ್ತ ವಿದ್ಯೆ-ವ್ಯಾಪಾರ-ಕಲೆ-ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದ ಸ್ತ್ರೀಯನ್ನು ಎಲ್ಲೆಂದರಲ್ಲಿಂದ ಹೊತ್ತೊಯ್ದು ಅತ್ಯಾಚಾರ ಮಾಡುವ ಕಾಮುಕ ಮುಸಲ್ಮಾನರು ಧಾಳಿಯಿಟ್ಟಾಗ ಹಿಂದುಸ್ತ್ರೀಯ ಸುರಕ್ಷೆಗೆ ಕಂಟಕ ಬಂತು. ಅವಳ ಗುರುಕುಲ-ಗಮನಕ್ಕೂ ಕುತ್ತು ಬಂತು. ಅವಳ ಸಾಮಾಜಿಕ ಚಟುವಟಿಕೆಗಳಿಗೆ ವಿಘ್ನ ಬಂತು. ಅವಳ ಸುರಕ್ಷೆಗಾಗಿ ಹಲವು ನಿರ್ಬಂಧಗಳು ಬರಬೇಕಾಯಿತು. 2000 ವರ್ಷಗಳ ಕಾಲ ಒಂದಲ್ಲ ಒಂದು ಬಗೆಯ ರಾಜಕೀಯದಾಸ್ಯವನ್ನ ನಿರಂತರ ಅನುಭವಿಸಿದ ನಮ್ಮ ಹಿಂದು ಸಮಾಜದಲ್ಲಿ, ಸ್ತ್ರೀಯರ ಸ್ಥಿತಿ ದಾರುಣವಾಗುತ್ತ ಬಂತು. ಮತ್ತೆ ತಲೆಯೆತ್ತುವುದೇ ಕಷ್ಟವಾಯಿತು. ಕಾಲಕ್ರಮದಲ್ಲಿ ಸ್ತ್ರೀಯ Self Image ಬಹಳಷ್ಟು ಹಾಳಾಯಿತು, ಕೀಳರಿಮೆ ಮೊದಲಾಯಿತು. ಸ್ತ್ರೀಯ ಮೂಲ ಸ್ಥಾನ-ಮಾನಗಳೇನೆಂಬುದನ್ನು ನಮ್ಮದೇ ಹಿಂದು ಸಮಾಜದ ಪುರುಷರೂ ಮರೆಯುತ್ತ ಬಂದರು! ಅವಳನ್ನು ಎಲ್ಲರೋತಿಯಲ್ಲಿಯು ಎರಡನೆಯ ದರ್ಜೆಯ ಮನುಷ್ಯಳು ಎಂದು ಭಾವಿಸಲಾರಂಭಿಸಿದರು. ತಮ್ಮ ಭೋಗಕ್ಕೂ ವಂಶಾಭಿವೃದ್ಧಿಗೂ ಮಾತ್ರ ಹೆಣ್ಣುಬೇಕು, ಮಿಕ್ಕ ಎಲ್ಲದರಲ್ಲೂ ಅವಳು ನಿಷ್ಪ್ರಯೋಜಕಳು ಎಂಬ ಸ್ವಾರ್ಥವೂ ಮೊದಲಾಯಿತು. ಆ ಕಾಲದ ಸ್ಮೃತಿಗಳಲ್ಲೂ ಅವನ್ನು ಅನಧಿಕಾರಿಗಳ ಸಾಲಿಗೆ ಸೇರಿಸಿಬಿಟ್ಟರು! ಹೀಗೆ ವಿದ್ಯೆ-ಸ್ವಾತಂತ್ರ್ಯಗಳಿಂದ ವಂಚಿತಳಾದ ಹೆಣ್ಣನ್ನು “ನೀನು ಹೆಣ್ಣು! ನಿನಗೇನು ತಿಳಿಯುತ್ತದೆ?! ಮುಚ್ಚು ಬಾಯಿ!” ಎಂದು ಮೂದಲಿಸುವುದೂ ಸುಲಭವಾಯಿತು! ವಿಪರ್ಯಾಸವೇನೆಂದರೆ, ಅತ್ತ, ಶಕ್ತಿಯ ಉಪಾಸನೆ, ದೇವಿಯ ರುದ್ರಭಯಂಕರ ರಣರೂಪದ ಆರಾಧನೆ-ಅನುಸಂಧಾನ ನಿಲ್ಲದೇ ಮುಂದುವರೆದರೂ, ಮನೆಯಲ್ಲಿನ ಜೀವಂತ ಶಕ್ತಿಗಳನ್ನು ಅವಮಾನಿಸಿ ಮೂಲೆಗುಂಪಾಗಿಸಲಾಯಿತು! ತಮ್ಮ ದಬ್ಬಾಳಿಕೆಗೆ ಇಲ್ಲದ ’ಶಾಸ್ತ್ರ’ದ ಸಮರ್ಥನೆಯನ್ನೂ,  ಕೊಟ್ಟರು! ಅದರ ಸತ್ಯಾಸತ್ಯತೆಗಳನ್ನುವಿಮರ್ಶಿಸದೇ ಹೇರಿಯೇ ಬಿಟ್ಟರು! ಆದರೆ, ತಮಾಷೆಯೇನು ಗೊತ್ತೆ?! ಇಷ್ಟು ನಿರ್ಬಂಧ ಅಸುರಕ್ಷೆ ಹಾಗೂ ಸಾಮಾಜಿಕ ನಿಂದೆಯ ನಡುವೆಯೂ, ಅದೆಷ್ಟೋ ವಿದುಷಿಯರೂ ರಾಣಿಯರೂ ಕವಯತ್ರಿಯರೂ ಗೂಢಚಾರಿಣಿಯರೂ ಕಲಾವಿದೆಯರೂ ಎಲ್ಲ ಕಾಲದಲ್ಲೂ ನಮ್ಮಲ್ಲಿ ಹುಟ್ಟಿಬರುತ್ತಲೇ ಇದ್ದರು! ಇದು ನಮ್ಮ ಹಿಂದುಸ್ತ್ರೀಯ ಕುಂದದ ಅಂತಸ್ಸತ್ವಕ್ಕೆ ಕನ್ನಡಿಯೇ ಸರಿ! ವೈದಿಕ ಪರಂಪರೆಯ ನೆಲೆಯ ಹಿಂದು ಧರ್ಮವನ್ನರಿಯದೇ, ಮಧ್ಯಯುಗದಲ್ಲಿ ಬಂದ ಆಪತ್ಕಾಲದ ಕಟ್ಟುಪಾಡುಗಳನ್ನೇ ’ ಚಿರಕಾಲದ ಸಂಪ್ರದಾಯ’ ಎಂದು ಇಂದಿಗೂ ಹಠ ಹಿಡಿಯುವ ಹಿರಿಯರಿರುವುದು ಶೋಚನೀಯ!
ಆದರೆ ಅಧಃಪತನಕ್ಕೆ ಕಾರಣ- ಧರ್ಮವಲ್ಲ, ಧರ್ಮದ ಹ್ರಾಸ! ನಮ್ಮ ಪರಂಪರೆ-ಸಂಸ್ಕೃತಿಯನ್ನು ನಾವೇ ಆಮೂಲಾಗ್ರವಾಗಿ ತಿಳಿಯದೇ ಹೋದದ್ದೇ ಕಾರಣ! ಅಥವಾ, ನಮ್ಮತನವನ್ನು ಮರೆತು, ಪಾಶ್ಚಾತ್ಯರು ನಮಗೆ ನೀಡುವ ಅಪಕ್ವವಾದ ಮಾದರಿಗಳನ್ನು ಕಣ್ಣುಮುಚ್ಚಿ ಅಂಗೀಕರಿಸುವುದೇ (Blind aping of western feminism models) ಹಿಂದುನಾರಿಗೆ ಮತ್ತಷ್ಟು ಅಪಾಯಗಳನ್ನು ತಂದೊಡ್ಡಿದೆ. ಸಬಲೆಯೂ, ಘನತೆವೆತ್ತವಳೂ ಆದ ನಾರಿಯನ್ನು ಮಧ್ಯಯುಗದಲ್ಲಿ ಆಕ್ರಮಣಗಳು ಅಬಲೆಯಾಗಿಸಿದವು. ಆಧುನಿಕಯುಗದಲ್ಲಿ ಈ ಅಬಲೆಯ ಪಟ್ಟವೇನೋ ಮೆಲ್ಲನೇ ಕಳಚಿಬೀಳುತ್ತಿದೆ ಆದರೆ, ಪಾಶ್ಚಾತ್ಯರು, Feministಗಳು ಹೆಣ್ಣಿಗೆ ಸ್ವೇಚ್ಛಾಚಾರಿಣಿಯಾಗು! ಬಿಚ್ಚಿ ತೋರಿಸುವ ಬೋಗದ ಬೊಂಬೆಯಾಗು!” ಎಂದು ಉಪದೇಶಿಸಲಾರಂಭಿಸಿದ್ದಾರೆ! ಅದನ್ನು ಅಂಧವಾಗಿ ನಂಬಿ, ಮರ್ಯಾದೆಯ ಸೀಮೆಗಳನ್ನುಲ್ಲಂಘಿಸಿ ದಾರಿತಪ್ಪುತ್ತಿರುವ ಹಿಂದುಹೆಣ್ಣುಮಕ್ಕಳೂ ಹೆಚ್ಚುತ್ತಿರುವುದು ವಿಷಾದನೀಯ
ಇದಕ್ಕೆ ಪರಿಹಾರ, ನಮ್ಮದೇ ಮೂಲ ವೈದಿಕ ಸನಾತನಧರ್ಮದಲ್ಲಿ ಇದೆ. ಯಾವ ಸ್ತ್ರೀಪುರುಷರು ವೇದಕಾಲದಿಂದ ಹಿಡಿದು ಇಂದಿನವರೆಗೂ ನಮ್ಮ ಹಿಂದು ಸಮಾಜದ ಸಮಗ್ರದರ್ಶನವನ್ನು ಹೊಂದಬಲ್ಲರೋ, ಅವರು ಎಂದೂ ಸ್ತ್ರೀಯನ್ನು ನಿಕೃಷ್ಟವಾಗಿ , ಅಥವಾ ಪುರುಷಾಧೀನ ಎಂಬಂತೆ ಕಾಣಲಾರರು. ಹಾಗೂ ಕಂಡರು ಎಂದಿಟ್ಟುಕೊಳ್ಳಿ, ಅವರು ಪುರುಷಶ್ರೇಷ್ಠತೆಯ ಹಠದ ಮೂರ್ಖರು ಎಂದಷ್ಟೆ ಅರ್ಥಮಾಡಿಕೊಳ್ಳಬೇಕು. ಆತ್ಮಭಾವದಲ್ಲಿ ಬದುಕುವುದನ್ನು ಕಲಿಸುವ ನಮ್ಮ ವೇದ-ವೇದಂತಗಳಲ್ಲಿ ಸ್ತ್ರೀಗೆ ಅತ್ಯುನ್ನತವಾದ ಸಂಸ್ಕಾರ ಹಾಗೂ ಭಾವನಾಪುಷ್ಟಿ ದೊರಕುತ್ತದೆ. ತನ್ನ ಸ್ವಾತಂತ್ರ್ಯವನ್ನು ಹೇಗೆ ನಿರ್ವಹಿಸಬೇಕು?’ ಎಂಬ ವಿವೇಕವೂ ಜಾಗೃತವಾಗುತ್ತದೆ.  

ಇತರೆಲ್ಲ ಸಮಾಜಗಳಿಗಿಂತಲೂ ಅತ್ಯುನ್ನತ ಸ್ಥಾನಮಾನಗಳನ್ನೂ, ಗೌರವಾದರಗಳನ್ನೂ, ಸ್ವಾತಂತ್ರ್ಯ-ಜವಾಬ್ದಾರಿಳನ್ನು ನಿರ್ವಹಿಸಿದವಳು ಹಿಂದು ನಾರೀ. ಅದರ ಬಗ್ಗೆ ಮೊದಲು ಹೆಮ್ಮೆ ಬೆಳೆಸಿಕೊಳ್ಳೋಣ, ಪರಂಪರೆಯಿಂದ ಮಾಹಿತಿಯನ್ನು ಕಲೆಹಾಕೋಣ, ಘಂಟಾಘೋಷವಾಗಿ ಅದನ್ನೆಲ್ಲ ಸಾರೋಣ, ಅಪಾರ್ಥಗಳನ್ನು ಅಳಿಸೋಣ. ಸಮಷ್ಠಿಭಾವವನ್ನು ಬೆಳೆಸೋಣ.
ಆದರ್ಶಪುರುಷ ಶ್ರೀರಾಮ
ಯೋಗಕ್ಕಾಗಲಿ ಭೋಗಕ್ಕಾಗಲೀ ಧರ್ಮವೇ ಆಧಾರ. ಧರ್ಮವನ್ನು ಅವಿಚ್ಯುತವಾಗಿ ಜೀವನಾದ್ಯಂತ ಎತ್ತಿಹಿಡಿಯುವುದು ಸುಲಭವಲ್ಲ, ಅದು ಅಪಾರ ಕಷ್ಟಸಹಿಷ್ಣುತೆ, ಮಾನಸಿಕ ದೃಢತೆ ಹಾಗೂ ತ್ಯಾಗಗಳನ್ನು ಅಪೇಕ್ಷಿಸುತ್ತದೆ. ಧರ್ಮವನ್ನೇ ಉಸಿರಾಗಿಸಿಕೊಂಡ ಮಹಾತ್ಮನು ರಘುಕುಲದ ದೊರೆ ಶ್ರೀರಾಮಚಂದ್ರನು. "ಆತ ಮಹಾವಿಷ್ಣುವಿನ ಅವತಾರವಪ್ಪ, ಅವನಂತೆ ನಾವು ನಡೆಯಬಲ್ಲೆವೇನು?" ಎಂದು ತಳ್ಳಿ ಹಾಕುತ್ತ ಆತನ ಅವತಾರದ ಸಂದೇಶವನ್ನು ನಾವು ಕೈಬಿಡಬಾರದು. ಧರ್ಮರಕ್ಷಣೆಗಾಗಿ ಸ್ವಸುಖವನ್ನೇ ಬಲಿಗೊಟ್ಟ ಸೀತಾರಾಮರ ಕಥೆ ನಮಗೆ ಮಹದಾದರ್ಶವಾಗಬೇಕು.
ಶ್ರೀರಾಮಚಂದ್ರನ ವ್ಯಕ್ತಿತ್ವ ಅನಾದಿಯಿಂದಲೂ ಭಾರತದ ಚಿಂತನಾಧಾರೆಗೇ ವಿಪುಲ ಸಾಮಗ್ರಿಯನ್ನು ಒದಗಿಸಿದೆ. ರಾಮನು ಮನುಷ್ಯನಾಗಿ, ರಾಜನಾಗಿ, ಮಗನಾಗಿ, ಪತಿಯಾಗಿ, ಅಣ್ಣನಾಗಿ, ಮಿತ್ರನಾಗಿ, ಯೋಧನಾಗಿ ಪಾಲಿಸಿದ ಆದರ್ಶಗಳು ಅನುಕರಿಸಲಸಾಧ್ಯವೆಂಬಷ್ಟು ಎತ್ತರದಲ್ಲಿವೆಯಾದರೂ, ನಿತ್ಯಧ್ಯೇಯವಾಗಿವೆ.
ಕುಲದ ಘನತೆಯನ್ನು ಕಾಪಾಡಲು, ತಂದೆಯ ಸತ್ಯವಚನವನ್ನು ಉಳಿಸಲು, ಪ್ರಜೆಗಳ ಹಿತವನು ಸಾಧಿಸಲು, ಸಜ್ಜನರನ್ನು ರಕ್ಷಿಸಲು, ಸ್ನೇಹಿತರ ವಿಶ್ವಾಸವನ್ನು ಎತ್ತಿ ಹಿಡಿಯಲು ಹಾಗೂ ನ್ಯಾಯನೀತಿಗಳನ್ನು ಕಾಪಾಡಲು ತನ್ನ ಸರ್ವಸ್ವವನ್ನೂ ಬಲಿಗೊಡಲು ರಾಮನು ಸರ್ವಥಾ ಸಿದ್ಧನಾಗಿ ನಿಂತ ಪರಿ, ಈ ಯತ್ನದಲ್ಲಿ ಅಪಾರ ಕಷ್ಟನಷ್ಟಗಳನ್ನು ನುಂಗಿಯ್ಊ ಜೀರ್ಣಿಸಿಕೊಂಡ ಪರಿ ಮಾನವಕುಲಕ್ಕೇ ಮಹೋನ್ನತ ಸಂದೇಶವನ್ನು ಕೊಡುತ್ತದೆ. ರಾಮನ ಘನತೆವೆತ್ತ ನಡೆ-ನುಡಿಗಳಲ್ಲಿ ಕೆಲವು ಇಣುಕುನೋಟಗಳು ಇಲ್ಲಿವೆ-
ಧರ್ಮಸೂಕ್ಷ- ತನಗೆ ಕಷ್ಟವಾದಾಗ, ಅನ್ಯಾಯವಾದಾಗ, ಬಂಧುಮಿತ್ರರ ಬೆಂಬಲವನ್ನು ಮನುಷ್ಯ ಸಹಜವಾಗಿ ಕೋರುತ್ತಾನೆ. ಕೆಲವೊಮ್ಮೆ ಈ ಬೆಂಬಲ-ಸಹಾನುಭೂತಿಗಳಿಗಾಗಿಯೇ ತನ್ನ ಕಷ್ಟಗಳನ್ನು ಅತಿಯಾಗಿ ಬಿಂಬಿಸುತ್ತಾನೆ ಕೂಡ! ಶ್ರೀರಾಮನಿಗೂ ಅನಿರೀಕ್ಷಿತವಾದ ಭಯಂಕರವಾದ ವಿಧಿಯೇಟುಗಳು ಬಿದ್ದಾಗ ಹೇಗೆ ವರ್ತಿಸಿದ ಎನ್ನುವುದನ್ನು ನೋಡೋಣ- ರಾಮನ ಪಟ್ಟಾಭಿಷೇಕವು ನಿಶ್ಚಿತವಾಗಿತ್ತು. ಎಲ್ಲರೂ ಸಂಭ್ರಮದಲ್ಲಿದ್ದರು. ಆದರೆ ಹಿಂದಿನ ರಾತ್ರಿ, ಮಂಥರೆಯ ಕುತಂತ್ರದಿಂದ ಪ್ರೇರಿತಳಾದ ಕೈಕೇಯಿ ವಚನಬದ್ಧನಾದ ದಶರಥನನ್ನು ಅಸಹಾಯಕನನ್ನಾಗಿಸಿ ರಾಮನಿಗೆ ನಿಷ್ಕಾರಣವಾಗಿ ೧೪ ವರ್ಷಗಳ ವನವಾಸವನ್ನು ವಿಧಿಸಿಬಿಟ್ಟದಳು. ಕಂಕಣಕಟ್ಟಿಕೊಂಡು ಪಟ್ಟವೇರುವ ಸಂಭ್ರಮದಲ್ಲಿದ್ದ ರಾಮನಿಗೆ ಇದೊಂದು ಆಘಾತವೇ ಸರಿ. ಈ ಸಂದರ್ಭದಲ್ಲಿ ಬೇರೆ ಯಾರೇ ಆಗಿದ್ದರೂ ತಂದೆಯನ್ನು ನ್ಯಾಯ ಕೇಳುತ್ತಿದ್ದ, ವಾದ ಮಾಡಮಾಡುತ್ತಿದ್ದ, ಅತ್ತು ಗೋಳಾಡಿ ಶಪಿಸುತ್ತಿದ್ದ, ’ಯಾವ ತಪ್ಪೂ ಮಾಡದ ತಾನು ವನವಾಸ ಮಾಡುವುದಿಲ್ಲ ಎಂದು ವಾದ ಮಾಡುತ್ತಿದ್ದನೇನೋ, ಅಥವಾ ಮಂತ್ರಿ-ಅಮಾತ್ಯರು-ಜನನಾಯಕರನ್ನೂ ಜನರನ್ನೂ ಎತ್ತಿ ಕಟ್ಟಿ ಧಂಗೆ ಮಾಡಿಸುತ್ತಿದ್ದನೇನೋ, ಅಥವಾ ಕೈಕೇಯಿಯನ್ನು ಬದಿಗೊತ್ತಿ, ವೃದ್ಧದಶರಥನನ್ನು ಪಟ್ಟದಿಂದ ಇಳಿಸಿ ಪ್ರಜೆಗಳ ಬೆಂಬಲದಿಂದ ತಾನೇ ನಾಯಕನಾಗುತ್ತಿದ್ದನೇನೋ! ಹೀಗೆಲ್ಲ ಆಗಬಹುದಿತ್ತಲ್ಲವೆ? ಆದರೆ ರಾಮನು ಈ ಸಂದರ್ಭದಲ್ಲಿ ವರ್ತಿಸಿದ ಪರಿಯೇ ಭಿನ್ನ.
ರಾಮನು ’ತನಗಾದ ಅನ್ಯಾಯವನ್ನಷ್ಟೇ ಮುಖ್ಯವಾಗ ಪರಿಗಣಿಸಲ್ಲ. ಈ ಸಂದರ್ಭದಲ್ಲಿ ಆತ ಆಲೋಚಿಸಿದ್ದು ’ದೊರೆಯ ವಚನ-ಬದ್ಧತೆಯ ಬಗ್ಗೆ, ’ಕುಲದ ಘನತೆ-ಗೌರವದ ಬಗ್ಗೆ, ’ರಾಜ್ಯದ ಶಾಂತಿ-ಸೌಹಾರ್ದಗಳ ಬಗ್ಗೆ. "ತಾನೇನಾದರೂ ತನ್ನ ದುಃಖ, ರೋಷಗಳನ್ನು ವ್ಯಕ್ತವಾಗಿ ತೋರ್ಪಡಿಸಿದರೆ, ತನಗಾದ ಅನ್ಯಾಯವನ್ನು ಪ್ರಶ್ನಿಸಿದರೆ, ವಾದ ಮಾಡಿದರೆ ಗೆಲ್ಲುವುದೇನೂ ಕಷ್ಟವಿರಲಿಲ್ಲ. ಆದರೆ ತತ್ಪರಿಣಾಮವಾಗಿ ರಾಜವಂಶದ ಗೌರವ ಮಣ್ಣಾದೀತು. ತನಗಾಗಿ ಪ್ರಜೆಗಳು ಪ್ರತಿಭಟನೆ, ಧಂಗೆ ಎದ್ದು, ಪ್ರಾಣಹಾನಿ, ದ್ರವ್ಯಹಾನಿಗಳನ್ನು ಮಾಡಿದರೆ ಸಮಾಜದ ಶಾಂತಿ-ಭದ್ರತಾವ್ಯವಸ್ಥೆಗಳು ಹಾಳಾದಾವು!" ಇದು ರಾಮನ ಆಲೋಚನೆಯ ಧಾಟಿ. ಇದು ಒಬ್ಬ ನೈಜನಾಯಕನು ಆಲೋಚಿಸಬೇಕಾದ ಪರಿ. ಅಂತಹ ಸಂಕಷ್ಟದ ನಿಮಿಷಗಳಲ್ಲೂ, ’ರಾಜ, ರಾಜ್ಯವ್ಯವಸ್ಥೆ, ಪ್ರಜಾಹಿತ -ಇವುಗಳಿಗೆ ಆದ್ಯತೆಯನ್ನು ಕೊಟ್ಟವನು ರಾಮ. ‘ತಾನೊಬ್ಬನ್ನು ಕಷ್ಟವನ್ನು ಅಂಗೀಕರಿಸಿದರೆ, ಕುಲದ ಗೌರವ, ತಂದೆಯ ಸತ್ಯವಚನ ಹಾಗೂ ರಾಜ್ಯದಲ್ಲಿನ ಶಾಂತಿ ಉಳಿಯುತ್ತವೆ ಎನ್ನುವ ಕಹಿಸತ್ಯವನ್ನು ಮನಗಂಡ, ತನ್ನ ಅಭಿಮಾನಕ್ಕಾದ ಏಟನ್ನು ನಿಂಗಿ ಜೀರ್ಣಿಸಿಕೊಂಡ. ಧರ್ಮಾತ್ಮನಾದ ತನ್ನ ಮಗ ರಾಮನಿಗೆ ಆಗುತ್ತಿರುವ ಅನ್ಯಾಯಕ್ಕೆ ಮರುಗಿ ದಶರಥನೇ ಸೂಚಿಸುತ್ತಾನೆ ‘ನೀನು ಈ ಅನ್ಯಾಯಕ್ಕೆ ಪ್ರತಿಭಟಿಸು, ನನ್ನನ್ನೂ ವಿರೋಧಿಸಿ, ಪ್ರಜೆಗಳನ್ನು ಜೊತೆಮಾಡಿಕೊ, ನ್ಯಾಯವನ್ನು ಪಡೆದುಕೋ, ಪಟ್ಟಕ್ಕೆ ನಿನಗಿರುವ ಅಧಿಕಾರವನ್ನು ಸಮರ್ಥಿಸ್ಕೋ" ಎಂದು! ಆದರೂ ಧರ್ಮಸೂಕ್ಷವನ್ನರಿತ ರಾಮನು ಯಾವ ಪ್ರಶ್ನೆ-ವಾದಗಳನ್ನೂ ಮಾಡದೆ, ಮಲತಾಯಿಗೆ ವಿಧೇಯನಾಗಿ, ತಂದೆಗೆ ಸಮಾಧಾನದ ಮಾತುಗಳನ್ನು ಹೇಳಿ, ವನವಾಸಕ್ಕೆ ಒಪ್ಪಿಬಿಟ್ಟ! ಕೈಕೇಯಿಯ ಭವನದಿಂದ ತನ್ನ ಮನೆಗೆ ಹೋಗುವಾಗ, ಇಕ್ಕೆಲಗಳಲ್ಲೂ ತುಂಬಿದ್ದ ಜನರ ಗುಂಪುಗಳು ಪಟ್ಟಾಭಿಷೇಕೋತ್ಸವದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಶ್ರೀರಾಮನು ತನ್ನ ದುಃಖ ದುಗುಡಗಳನ್ನು ಕಿಂಚಿತ್ತೂ ಮುಖದಲ್ಲಿ ತೋರಗೊಡದೆ ಶಾಂತ-ಸ್ಮಿತ-ವದನವನ್ನು ಧರಿಸಿ ನಡೆದ! ತನ್ನ ಅಂತಃಪುರದ ಏಕಾಂತದಲ್ಲಿ ಸೀತೆಯ ಮುಂದೆ ನಿಲ್ಲುವವರೆಗೂ ತನ್ನ ಭಾವೋದ್ವೇಗವನ್ನು ಒತ್ತಿಟ್ಟುಕೊಂಡಿದ್ದ! ಸೀತೆಯ ಎದುರಿನಲ್ಲಿ ಮಾತ್ರ ಆತನ ಮುಖದಲ್ಲಿ ವೈವರ್ಣ್ಯ, ಕಣ್ಣೀರು ದುಃಖಗಳು ಉಮ್ಮಳಿಸುತ್ತವೆ. ಆದರೆ ಕೆಲವೇ ನಿಮಿಷಗಳಲ್ಲಿ ಆ ಭಾವಗಳನ್ನು ಹದ್ದಿಕ್ಕಿ, ಕರ್ತವ್ಯಪ್ರಜ್ಞೆಯನ್ನು ತಾಳಿ, ವನವಾಸಕ್ಕೆ ಸನ್ನದ್ಧನಾಗುತ್ತಾನೆ. ಸೀತೆಗೆ ಧರ್ಮಾಧರ್ಮಗಳನ್ನು ನಿರ್ದೇಶಿಸಿ ಹೊರಡಲನುವಾಗುತ್ತಾನೆ. ಆ ನಡುರಾತ್ರಿಯಲ್ಲೇ ನಾರುಮಡಿಯುಟ್ಟು ವನವಾಸಕ್ಕೆ ಹೊರಟೇಬಿಡುತ್ತಾನೆ!
ಇಲ್ಲಿ ನೋಡಿ- ತಡ ಮಾಡಿದರೆ ಬೆಳಗಾದೀತು, ಜನರಿಗೆಲ್ಲ ವಿಷಯ ತಿಳಿದುಬಿಟ್ಟೀತು, ದೊಡ್ದ ರಾಜಕೀಯ ಕ್ಲೇಷೆಯೇ ಏರ್ಪಟ್ಟೀತು, ಪ್ರಜೆಗಳು ರಾಮನ ಪರವಾಗಿ ಧಂಗೆ ಎದ್ದಾರು. ಅದರಿಂದ ತನಗೆ ಈ ಅನ್ಯಾಯ ತಪ್ಪಬಹುದು, ನಿಜ, ಆದರೆ, ತನ್ನ ವೃದ್ಧತಂದೆಯ ಸತ್ಯವಚನವೇನಾಗಬೇಕು? ರಘುವಂಶದ ಗೌರವವೇನಾಗಬೇಕು? ಸಮಾಜದ ಶಾಂತಿ-ಸೌಹಾರ್ದತೆಗಳು ಕೆಟ್ಟು ಸಾವುನೋವುಗಳಾಗಬೇಕೆ?" ಇದು ರಾಮನ ಕಾಲಜಿ. ಹಾಗಾಗಿ ಪ್ರಜೆಗಳಿಗೆಲ್ಲ ಈ ಹಠಾತ್ ರಾಜಕೀಯಬದಲಾವಣೆಗಳು ತಿಳಿದುಬರುವ ಮುನ್ನ, ಘರ್ಷಣೆ ಏಳುವ ಮುನ್ನ, ಇರುಳು ಕಳೆಯುವ ಮುನ್ನ, ಗಂಗೆಯನ್ನು ದಾಟಿ ವನವನ್ನು ಪ್ರವೇಶಿಸಿಯೇಬಿಟ್ಟ! ಅದಕ್ಕೆ ರಾಮನು ಮರ್ಯಾದಾ ಪುರುಷೋತ್ತಮ ಎನಿಸುತ್ತಾನೆ!
ಮತ್ತೊಂದು ಪ್ರಸಂಗ-  
ರಾಮನು ವನವಾಸಕ್ಕೆ ಹೊರಟು ಚಿತ್ರಕೂಟದಲ್ಲಿ ವಾಸ್ತವ್ಯ ಹೂಡಿದ ಮೇಲೆ, ವಿಷಯ ತಿಳಿದ ಧರ್ಮಾತ್ಮಾ ಭರತನಿಗೆ ಆಘಾತವೇ ಆಯಿತು. ಮಂತ್ರಿಮಂಡಲ, ಸೈನ್ಯ ಹಾಗೂ ಜನಪ್ರತಿನಿಧಿಗಳೊಡನೆ, ಸಕಲ ರಾಜಮರ್ಯಾದೆಗಳೊಂದಿಗೆ ಚಿತ್ರಕೂಟಕ್ಕೇ ಹೋಗಿ ರಾಮನನ್ನು ಹಿಂದಿರುಗುವಂತೆ ಬಗೆಬಗೆಯಾಗಿ ಪ್ರಾರ್ಥಿಸುತ್ತಾನೆ. ಆದರೂ ರಾಮನು, ವನವಸವನ್ನು ಮುಗಿಸಿಯೇ ಬರುವುದಾಗಿ ಅವನನ್ನೇ ಒಪ್ಪಿಸಿ ವಾಪಾಸ್ಸು ಕಳುಹಿಸುತ್ತಾನೆ! ರಾಮ-ಭರತರು ಸೇರುವ ಆ ಸಂದರ್ಭದಲ್ಲಿ, ರಾಮನು ತನಗಾದ ಅನ್ಯಾಯದ ಬಗ್ಗೆ ದುಃಖದುಗುಡಗಳನ್ನು ತೋಡಿಕೊಳ್ಳುತ್ತ ಕೂರುವುದಿಲ್ಲ. ಬದಲಾಗಿ ರಾಜನ ಕರ್ತವ್ಯ, ಆಡಳಿತದ ಸವಾಲುಗಳು, ಧರ್ಮಸೂಕ್ಷಮಗಳು, ಪ್ರಜಾಹಿತ, ನ್ಯಾಯಧರ್ಮಗಳ ರಕ್ಷಣೆ, ವ್ಯವಸ್ಥೆ, ಮುಂತದಾವುಗಳ  ಇತ್ಯಾದಿಗಳ ಬಗ್ಗೆ ತನ್ನ ಪ್ರೌಢ ಅಭಿಪ್ರಾಯಗಳನ್ನು ಸಲಹೆಗಳನ್ನು ಕೊಡುತ್ತಾನೆ! ರಾಮನಾಡುವ ಮಾತುಗಳಲ್ಲಿ ನಿರ್ವಹಣಶಾಸ್ತ್ರದ (Management) ವಿಚಾರಗಳು ವಿಪುಲವಾಗಿವೆ. ಅಷ್ಟೆ ಅಲ್ಲ ’ತಾಯಿ ಕೈಕೇಯಿಯನ್ನು ಅವಮಾನಿಸದಂತೆ ತಮ್ಮನಿಗೆ ಒತ್ತಿ ಹೇಳುತ್ತಾನೆ. ತಾನು ತನ್ನದು ಎನ್ನುವುದಕ್ಕಿಂತ ಪ್ರಜಾಹಿತ ಧರ್ಮಸಂಸ್ಥಿತಿ ಇವುಗಳೆ ಮುಖ್ಯವೆನಿಸಿದ್ದವು ರಾಮನಿಗೆ. ಆದ್ದರಿಂದಲೇ ಆತ ’ಮರ್ಯಾದಾ ಪುರುಷೋತ್ತಮ.
ವನವಾಸದಲ್ಲೂ ಕ್ಷಾತ್ರಧರ್ಮ ಪಾಲನೆ-
ವನವಾಸಕಾಲದಲ್ಲಿ ರಾಮಲಕ್ಷ್ಮಣರು ತಮ್ಮ ಬಿಲ್ಲುಬಾನಕಡ್ಗದಿಗಳನ್ನು ಧರಿಸಿಯೇ ನಡೆದರು. ವನವಾಸೀ ಮುನಿಗಳೂ ಅವರಿಗೆ ಅನೇಕ ಅಮೂಲ್ಯ ಸಸ್ತ್ರಾಸ್ತ್ರಗಳನ್ನು ನೀಡಿದ್ದರು. ಹೀಗೆ ಆಯುಧಗಳ ಹೊರೆಯನ್ನೇ ಹೊತ್ತು ನಡೆದಾಡುತ್ತಿದ್ದಾಗ ’ವನವಾಸದಂತಹ ಸಾತ್ವಿಕ ವ್ರತಕ್ಕೆ ಈ ಆಯುಧಗಳ ಸಹವಾಸ ಏಕೆ ಬೇಕು?" ಎಂದು  ಸೀತೆ ತನ್ನ ಅಸಮಾಧಾನವನ್ನು ತೋಡಿಕೊಂಡಾಗ, ರಾಮ ಹೀಗೆ ಉತ್ತರಿಸುತ್ತಾನೆ- "ನಾವು ಕಾಡಲ್ಲಿರಲಿ ನಾಡಲ್ಲಿರಲಿ, ಕ್ಷತ್ರಿಯರಾಗಿ ನಮ್ಮ ಕರ್ತವ್ಯವನ್ನು ಪಾಲಿಸುತ್ತಲೇ ಇರಬೇಕು. ಎಲ್ಲೇ ಇದ್ದರೂ ಶಿಷ್ಟರ ರಕ್ಷಣೆ ದುಷ್ಟರ ನಿಗ್ರಹ ಮಾಡುತ್ತಲೇ ಇರಬೇಕು. ಹಾಗಾಗಿ ಹಿಂಸಾಚಾರಕ್ಕಾಗಿಯಲ್ಲ, ಹಿಂಸಾಚಾರಿಗಳ ನಿಯಂತ್ರಣಕ್ಕಾಅಗಿ ಈ ಆಯುಧಗಳನ್ನು ಹೊತ್ತುತಿರುಗುವುದು ತಪ್ಪದು" ಎಂದು. ಇಲ್ಲಿ ನೋಡಿ- ತನಗೆ ಅನ್ಯಾಯವಾದಾಗ ಕ್ಷಮಿಸಿ, ಮೌನವಾಗಿ ಸಹಿಸಿದ ರಾಮನು, ಬೇರೊಬ್ಬರಿಗೆ ಅನ್ಯಾಯವಾಗದಂತೆ ಎಚ್ಚರವಾಗಿಯೇ ಇದ್ದದ್ದು ಅವನ ಜಾಗೃತಧರ್ಮ್ನಪ್ರಜ್ಞೆಗೆ ಸಾಕ್ಷಿ. ಪಟ್ಟುಪೀತಾಂಬರಗಳನ್ನು ತ್ಯಜಿಸಿ ನಾರುಮಡಿಯುಟ್ಟರೂ, ಆಯುಧಗಳನ್ನು ಧರಿಸಿಯೇ ನಡ್ದ ರಾಮನು, ಸ್ವಸುಖತ್ಯಾಗಕ್ಕೆ ಸಿದ್ಧನಿದ್ದರೂ, ಪರಹಿತರಕ್ಷಣೆಗೆ ಸದಾ ಬದ್ಧನಾಗಿದ್ದ.
ಮರ್ಯಾದಾ ಪುರುಷೋತ್ತಮ- ವನವಾಸದ ಸಂದರ್ಭದಲ್ಲೂ ಶ್ರೀರಾಮನು ಸಂಧ್ಯಾದಿ ನಿತ್ಯಕರ್ಮಗಳನ್ನು, ತಂದೆಯ ಶ್ರಾದ್ಧವನ್ನೂ, ಕುಟೀರಕಟ್ಟಿದಾಗ ವಾಸ್ತುಶಾಂತಿಯೇ ಮೊದಲಾದ ವಿಹಿತಕರ್ಮಗಳನ್ನೂ ಚಾಚೂ ತಪ್ಪದೆ ಪಾಲಿಸಿದ. ವನವಾಸದ ಕಾಲದಲ್ಲಿ ಯಾವ ಗ್ರಮನಗರವನ್ನೂ ಪ್ರವೇಶಿಸಲಿಲ್ಲ. ಸುಗ್ರೀವ-ವಿಭೀಷಣಾದಿಗಳೊಡನೆ ವ್ಯವಹರಿಸುವಾಗಲೂ ನಗರದ ಸೀಮೆಗಳ ಆಚೆಯೇ ಉಳಿದು ಎಲ್ಲವನ್ನೂ ನಿಭಾಯಿಸಿದ! ವನದಲ್ಲೇ ವಾಸಿಸುತ್ತಲೇ ಸೀತಾನ್ವೇಷಣೆ, ಯುದ್ಧತಂತ್ರ, ಮುಂತಾದ ಘನಗಂಭೀರ ಕಾರ್ಯಗಳನ್ನು ನಿರ್ವಹಿಸಿದ!
ಪ್ರಸನ್ನಚಿತ್ತ- ಜೀವನದಲ್ಲಿ ಸಕಾಅರಾತ್ಮಕವಾಗಿರ ಬೇಕು optimistic ಆಗಿರಬೇಕು ಎನ್ನುವ ಮಾತುಗಳನ್ನು ಕೇಳುತ್ತೇವೆ. ರಾಮನು ಈ optimismನ ಮೂರ್ತರೂಪ. ವನವಾಸಕಾಲದಲ್ಲಿ ತನಗಾದ ಅನ್ಯಾಯವನ್ನೇ ನೆನೆಯುತ್ತ, ಗೋಳಿಡುತ್ತ ಶಪಿಸುತ್ತ ಕೂರಲಿಲ್ಲ. ಸೀತಾರಾಮಲಕ್ಷ್ಮಣರು ಆ ಕಾಲದಲ್ಲಿ ವನವಾಸಿಗಳಾದ ಹಲವಾರು ಋಷಿಮುನಿಗಳನ್ನು ಭೇಟಿಯಿತ್ತು, ಅವರ ಜೊತೆಗೆ ವಾಸಿಸಿ, ಒಡನಾಡುತ್ತ, ಹೊಸಮಿತ್ರರನ್ನು ಸಂಪಾದಿಸುತ್ತಾರೆ. ಹಲವಾರು ಮುನಿಗಳು ಇವರಿಗೆ ಅತ್ಯಮೂಲ್ಯವೂ ಅಪೂರ್ವವೂ ಆದ ಶಸ್ತ್ರಾಸ್ತ್ರಗಳನ್ನೂ, ಮಂತ್ರತಂತ್ರಗಳಲನ್ನೂ, ವಿದ್ಯಾರಹಸ್ಯಗಳನ್ನು ಪ್ರಸಾದಿಸುತ್ತಾರೆ. ಚಿತ್ರಕೂಟ, ಜನಾಸ್ಥಾನ, ದಂಡಕಾರಣ್ಯ, ಪಂಚವಇ ಮುಂತಾದ ರಮ್ಯತಾಣಗಳಲ್ಲಿ ಸಂಚರಿಸುತ್ತ ನಿಸರ್ಗವನ್ನೂ, ಷಡ್ರುತುಗಳನ್ನೂ ಮನದುಂಬಿ ಆಸ್ವಾದಿಸುತ್ತಾರೆ. ಹಲವು ವಿಚಿತ್ರ ವಿಶಿಷ್ಟ ಸಾಧಕರನ್ನು ಕಂದು ವಿಸ್ಮಯಗೊಳ್ಳುತ್ತಾರೆ. ಪಶುಪಕ್ಷಿಪ್ರಾಣಿಗಳ ಮುಗ್ಧಸ್ನೇಹವನ್ನು ಗಳಿಸುತ್ತಾರೆ. ಘೋರ ರಾಕ್ಷಸರನ್ನು ಸಂಹರಿಸಿ, ಸಜ್ಜನರಿಗೆ ಅಭಯವನ್ನು ಕೊಡುತ್ತಾ ಸಾಗುತ್ತಾರೆ. ಏನೇ ಬರಲಿ ನಗುನಗುತ್ತ ಮುನ್ನಡೆಯುವ ಸಕಾರಾತ್ಮಕ ಭಾವನೆಗೆ ಇಂತಹ ರಾಮನಿಗಿಂತ ಉತ್ತಮ ಉದಾಹರಣೆ ಸಿಗುತ್ತದೆಯೆ?!
ಮತ್ತೊಂದು ಧರ್ಮಸೂಕ್ಷಪ್ರಸಂಗ-  
ರಾವಣನನ್ನು ಸಂಹರಿಸಿ, ಸೀತೆಯನ್ನು ಮರಳಿ ಪಡೆದು, ವನವಾಸವನ್ನು ಮುಗಿಸಿ, ಪುಷ್ಪಕವಿಮಾನದಲ್ಲಿ ಹಿಂದಿರುಗುವಾಗ ರಾಮನು ಹನುಮಂತನಿಗೆ ಒಂದು ಮಾತು ಹೇಳುತ್ತಾನೆ- ಮುಂಚಿತವಾಗಿಯೇ ಭರತನಿದ್ದ ನಂದಿಗ್ರಾಮಕ್ಕೆ, ಅಲ್ಲಿ ತನ್ನ ಆಗಮನದ ಸುದ್ದಿಯನ್ನು ಭರತನಿಗೆ ತಿಳಿಸು, ಭರತನ ಮುಖದಲ್ಲಿ ಸಂತೋಷವಿದ್ದರೆ ಸರಿ, ನಾನು ಬರುತ್ತೇನೆ. ಭರತನ ಮುಖದಲ್ಲಿ, ತನ್ನ ಬರುವಿಕೆಯ ಬಗ್ಗೆ ಕಿಂಚಿತ್ತ್ತಾದರೂ ಬೇಸರ ಕಾಣಬಂದಲ್ಲಿ, ತಿಳಿಸು, ನಾನು ಅಲ್ಲಿಗೆ ಬರುವುದೇ ಇಲ್ಲ, ಭರತನೇ ಸಂತೋಷವಾಗಿ ರಾಜ್ಯವನ್ನಾಳಲಿ!" ಎಂದು!
ಇಲ್ಲಿ ನೋಡಿ- ವನವಾಸ ಮುಗಿಸಿದ ಮೇಲೆ ರಾಮನೇ ಪ್ರಶ್ನಾತೀತ ಅಯೋಧ್ಯಾಧಿಪತಿ. ಆದರೂ, ’ಪ್ರಾಣಪ್ರಿಯನಾದ ತಮ್ಮ ಭರತನ ಮನಸ್ಸಿನಲ್ಲಿ ರಾಜ್ಯದ ಆಕಾಂಕ್ಷೆ ಇದ್ದರೆ, ಆತನೇ ಆಲಲಿ, ಎಷ್ಟಾದರೂ ಅವನೂ ಧರ್ಮಾತ್ಮ, ಯೋಗ್ಯ, ಎನ್ನುವುದು ರಾಮನ ಉದಾರ ಭಾವನೆ! ಆದರೆ ಧರ್ಮಾತ್ಮನಾದ ಭರತನು ರಾಮನಿಗಾಗಿ ಪ್ರಾಣವನ್ನೇ ಕೈಲಿಹಿಡಿದು ಕಾಯುತ್ತಿದ್ದಾ, ರಾಮನು ಅಯೋಧ್ಯೆಗೆ ಹಿಂದಿರುಗಿ ರಾಜನಾಗಿ ಪಟ್ಟವೇರುವಂತೆ ಮಾಡಿದ ಎನ್ನುವುದು ನಮಗೆಲ್ಲ ತಿಳಿದಿದೆ.
ಹೀಗೆ ರಾಮನ ಜೀವನದುದ್ದಕ್ಕೂ ಹಲವು ಸಂದರ್ಭಗಳಲ್ಲಿ ಆತ ಸ್ವಸುಖಕ್ಕಿಂತ ಧರ್ಮಕ್ಕೆ ಸಮಷ್ಠಿ ಹಿತಕ್ಕೆ ತೋರಿದ ಆದ್ಯತೆ ಎದ್ದುಕಾಣುತ್ತದೆ 
ರಾಜಾರಾಮ - ರಾಜನಾದ ಮೇಲೆ ಧರ್ಮ-ನ್ಯಾಯ-ನೀತಿ-ಸಮೃದ್ಧಿ-ಸಂಪತ್ತು-ಕ್ಷೇಮ-ಸುರಕ್ಷೆಗಳನ್ನು ರಾಮನು ನಿರ್ವಹಿಸಿದ ಪರಿ ಅತ್ಯದ್ಭುತ! ಎಷ್ಟರ ಮಟ್ಟಿಗೆಂದರೆ, ಯಾರಾದರೂ ಅತ್ಯುತ್ತಮವಾಗಿ ಪಾಲನೆ ಮಾಡಿದರೆ ಅದನ್ನು ’ರಾಮರಾಜ್ಯ’ ಎಂದೇ ಕರೆಯಲಾಗುತ್ತದೆ!
ಹೀಗೆ ರಾಮನ ಜೀವನದುದ್ದಕ್ಕೂ ‘ಸ್ವಹಿತಕ್ಕಿಂತ ಪರಹಿತ’, ‘ಸ್ವಸುಖಕ್ಕಿಂತ ಪ್ರಜಾಹಿತ’, ‘ವೈಯಕ್ತಿಕ ನ್ಯಾಯಕ್ಕಿಂತ ಆತ್ಯಂತಿಕ ಧರ್ಮವೇ’ ಪ್ರಧಾನವಾಗಿ ದ್ದವು. ಅಂತಹ ಅದ್ವಿತೀಯ ಆದರ್ಶಪುರುಷನಾದ ರಾಮನು ಭಾರತೀಯರ ‘ಆರಾಧ್ಯದೇವ’ ನಾಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಡಾ ಆರತೀ ವಿ ಬಿ