ಶುಕ್ರವಾರ, ಮಾರ್ಚ್ 17, 2017

ಶಕ್ತಿಸ್ವರೂಪಿಣಿ
-      Dr Arathi V B, arathi.vbr@gmail.com
ಸನಾತನಧರ್ಮದಲ್ಲಿ ಪುರುಷ-ಪ್ರಕೃತಿಯರು ಪರತತ್ವದ ಎರಡು ಅಭಿವ್ಯಕ್ತಿಗಳು. ರೂಪವಿಭವಗಳಲ್ಲೂ  ಕಾರ್ಯರೂಪದಲ್ಲೂ ವಿಭಿನ್ನವೆನಿಸಿದರೂ, ಎರಡೂ ಪರಸ್ಪರ ಪೂರಕಪ್ರೇರಕವಾದ ಮಹಾಶಕ್ತಿಗಳು. ಇದನ್ನು ಸೂಚಿಸುವುದೇ ಅರ್ಧನಾರೀಶ್ವರ ತತ್ವ. ಪುರುಷತತ್ವವು ನಿಷ್ಕ್ರಿಯ-ಶಕ್ತಿಮೂಲವಾದರೆ, ಪ್ರಕೃತಿಯು ಅದರದೇ ಸಕ್ರಿಯಾಭಿವ್ಯಕ್ತಿ’. ಪರಸ್ಪರ ಪೂರಕ-ಪ್ರೇರಕ! ವಿಜ್ಞಾನದಲ್ಲಿ potential energy-kinetic energyಗಳು ಇದ್ದಂತೆ! ಎರಡೂ ತತ್ವತಃ ಒಂದೇ, ವಿಭಿನ್ನವಾಗಿ ಪ್ರವರ್ತಿಸುತ್ತವೆ ಅಷ್ಟೇ.   ಪರಮ ಪುರುಷತತ್ವ ಹಾಗೂ ಪರಾಪ್ರಕೃತಿಗಳ ಭೌತಿಕ ಪಿಂಡಾಂಡರೂಪಗಳೇ ನರ-ನಾರಿಯರು ಎನ್ನುವ ಸಮಷ್ಟಿದರ್ಶನ ನಮ್ಮದು. ಇಲ್ಲಿ ಯಾವೊಂದನ್ನೂನಿಕೃಷ್ಟಎಂದು ಕಾಣುವುದೇ ಸನಾತನ ಧರ್ಮದ ಮೂಲಭಾವಕ್ಕೆ ಧಕ್ಕೆ ತರುವಂತಹದ್ದು.
ಜೀವನದಲ್ಲಿ ಪ್ರಾಯೋಗಿಕವಾಗಿ ಸ್ತ್ರೀಪುರುಷರ ಜವಾದ್ಬಾರಿಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಅದು ಅವರವರ ಸ್ವಂತಿಕೆಯ ಹೆಗ್ಗಳಿಕೆ ವಿಷಯವೇ ಹೊರತು, ‘ತಾರತಮ್ಯ ವಿಷಯವಲ್ಲ. ಪುರುಷನಿಗೆ ಮೀಸೆ ಚಿಗುರಿತ್ತದೆ. ಹೆಣ್ಣು ತಾಯಿಯಾಗಬಲ್ಲಳು- ಇದರಲ್ಲಿ ನೈಸರ್ಗಿಕ ವೈಶಿಷ್ಟ್ಯವನ್ನು ಗುರುತಿಸಬೇಕೇ ಹೊರತು, ‘ಯಾವುದು ಶ್ರೇಷ್ಠ?’ ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಆದರೆ ಎಲ್ಲದರಲ್ಲೂಮೇಲು-ಕೀಳೆಂಬಲೆಕ್ಕಾಚಾರಕ್ಕೆ ಮೊದಲಾಗುವ ಮಾನವಮತಿಯು ಇಲ್ಲಿಯೂ ಅದನ್ನು ತಂದಿಟ್ಟಿರುವಲ್ಲಿ, ಧರ್ಮದ ತಪ್ಪೇನೂ ಇಲ್ಲ. ಅದು ಮನುಷ್ಯನ ಕಿತಾಪತಿ. ಇರಲಿ.
ಮತ್ತಾವ ಮತದಲ್ಲೂ ಇಲ್ಲದಂತಹ ಭೇದಾತೀತಭಾವ ನಮ್ಮ ಧರ್ಮದಲ್ಲಿದೆ. ಇಲ್ಲಿ, ಪರತತ್ವವನ್ನು ಶಿವ-ವಿಷ್ಣು-ಗಣಪತಿ ಮುಂತಾದ ಗಂಡುರೂಪಗಳಲ್ಲಿ ಆರಾಧಿಸಬಹುದಾದಂತೆಯೇ ದುರ್ಗಾ-ಲಕ್ಷ್ಮೀ-ಸರಸ್ವತೀ ಮುಂತಾದ ಬಗೆಬಗೆಯ ಮಾತೃರೂಪಗಳಲ್ಲೂ ಆರಾಧಿಸಬಹುದಾಗಿದೆ. ಗಂಡುದೇವರಿಗೆ ಸಲ್ಲುವ ಎಲ್ಲ ಮಂತ್ರ-ತಂತ್ರ-ವಿಧಿ-ವಿಧಾನಗಳ ಪೂಜಾ-ಉಪಚಾರಗಳು ದೇವಿಯರಿಗೂ ಸಲ್ಲುತ್ತದೆ! (ಯಜ್ಞೋಪವೀತ ಸಮರ್ಪಣೆಯೂ ಸೇರಿದಂತೆ!) ಎಲ್ಲ ದೇವತೆಗಳಿಗೂ ಇರುವಂತೆಯೇ ದೇವಿಗೂ ವೈದಿಕ, ಆಗಮಿಕ, ತಾಂತ್ರಿಕ ಜಾನಪದಾದಿ ಉಪಾಸನಾಕ್ರಮಗಳಿವೆ. ಅಷ್ಟೇ ಅಲ್ಲ, ದೇವಿಯ ವಿಷಯದಲ್ಲಿ ಉಪಚಾರಗಳೂ ಸ್ವಲ್ಪ ಜಾಸ್ತೆಯೇ! ಸೀರೆ-ರವಿಕೆ-ಬಳೆ-ಬಿಚ್ಚೋಲೆ-ಮಂಗಳದ್ರವ್ಯಗಳು-ಮುತ್ತಿನಾರತಿಗಳು ಇಲ್ಲಿ ಹೆಚ್ಚು ಕಲಾತ್ಮಕತೆಯನ್ನೂ ಹೊಂದಿವೆ. ಶಾಕ್ತಾಗಮ, ಶಾಕ್ತತಂತ್ರ ಮುಂತಾದ ಪ್ರಾಚೀನ ಉಪಾಸನಾ-ಪದ್ಧತಿಗಳೂ ಬಹಳ ಪ್ರಸಿದ್ದವಾಗಿದ್ದು, ಅವುಗಳಿಗೆಲ್ಲ ಪುರಾಣ-ಕಾವ್ಯ-ಶಾಸ್ತ್ರಾದಿಗಳ ಹಿನ್ನಲೇ ಇದೆ. ವಿಷ್ಣು-ಶಿವಾದಿಗಳ ಪಾರಮ್ಯವನ್ನು ವರ್ಣಿಸುವಂತಹ ಲಿಂಗಪುರಾಣ-ಭಾಗವತಪುರಾಣಗಳಿರುವಂತೆ, ದೇವೀಪಾರಮ್ಯವನ್ನು ಮೆರೆಯುವಂತಹ ಕಾಲಿಕಾಪುರಾಣ, ಮಾರ್ಕಂಡೇಯ ಪುರಾಣಗಳು ಇವೆ. ಹೀಗೆ ಯಾವ ವಿಷಯದಲ್ಲೂ ಸ್ತ್ರೀರೂಪಕ್ಕೆ ಆತ್ಯಂತಿಕವಾದ ನೆಲೆಯಲ್ಲಿ ಭೇದವೆಣಿಸಿಲ್ಲ. ಅಷ್ಟೇ ಅಲ್ಲ, ಗಂಡು-ಹೆಣ್ಣು ದೇವತೆಗಳ ವರ್ಣನೆಗಳಲ್ಲಿ, ಉಪಾಸನೆಯಲ್ಲಿ, ಆಯಾ ದೇವತೆಯ ಪತಿ ಅಥವಾ ಪತ್ನಿಯನ್ನೂ ಸೇರಿಸಿಯೇ ಪೂಜಿಸುವ ಪದ್ಧತಿಯಿದೆ. ಶಿವನು ಸಾಂಬನಾಗಿ (ಅಂಬೆಯಿಂದ ಕೂಡಿದವನಾಗಿ), ವಿಷ್ಣುವು ಲಕ್ಷ್ಮೀಸಮೇತನಾಗಿಯೇ ಬರುವಂತಹದ್ದು! ಮಂತ್ರ-ಶ್ಲೋಕಾದಿಗಳಲ್ಲೂ ಆಯಾ ದೇವತೆಯ ವಲ್ಲಭರ ಉಲ್ಲೇಖವಿಲ್ಲದಿರಲು ಸಾಧ್ಯವೇ ಇಲ್ಲ! ಇತರೆಲ್ಲ ದೇವತಾ ರೂಪಗಳಿಗಿರುವಂತೆಯೇ, ಶಕ್ತಿದೇವತೆಗೂ ಬಗೆಬಗೆಯ ನಾಮರೂಪಗಳಿವೆ. ಎಲ್ಲ ನಾಮರೂಪಗಳೂ ತತ್ವತಃ ಒಂದೇ ಎನ್ನುವ ಸಮಷ್ಟಿಭಾವವೂ ಇದೆ.  
ಇನ್ನು ಪುರಾಣಗಳ ಸಂಕೇತಗಳನ್ನು ನೋಡಿದ ಸಮಷ್ಠಿಭಾವ ಎದ್ದುಕಾಣುತ್ತದೆ- ಲಕ್ಷ್ಮಿಯು ವಿಷ್ಣುವಿನ ವಕ್ಷಸ್ಥಳನಿವಾಸಿನಿ. ಸರಸ್ವತಿಯು ಬ್ರಹ್ಮನ ನಾಲಗೆಯಲ್ಲೇ ನೆಲೆಸಿರುತ್ತಾಳೆ. ಪಾರ್ವತಿಯು ಶಿವನ ಅರ್ಧದೇಹವೇ ತಾನಾಗಿರುತ್ತಾಳೆ. ತ್ರಿಮೂರ್ತಿಗಳೂ ಶಕ್ತಿವಿಹೀನರಾಗಿ ಇರಲು ಸಾಧ್ಯವೇ ಇಲ್ಲ! ಒಟ್ಟಿನಲ್ಲಿ ಶಿವಶ್ಶಕ್ತ್ಯಾಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ , ಚೇದೇವಂ ದೇವೋ ಖಲು ಕುಶಲಃ ಸ್ಪಂದಿತುಮಪಿ-----” ಎಂಬ ಸೌಂದರ್ಯಲಹರಿಯ ಶ್ಲೋಕದ ಭಾವಾರ್ಥದಂತೆ- ಶಕ್ತಿಹೀನನಾದಲ್ಲಿ ದೇವನೂ ಏನನ್ನೂ ಮಾಡಲಾರ, ಮಾಡುವುದಿಲ್ಲ. ಇದು ಸ್ತ್ರೀತತ್ವಕ್ಕೆ ನಮ್ಮ ಸಂಸ್ಕೃತಿಯಲ್ಲಿರುವ ಸ್ಥಾನ!
ನಮ್ಮ ಪಾರಿವಾರಿಕ ಲೌಕಿಕ ಜೀವನಗಳನ್ನು ಗಮನಿಸಿದರೂ, ಇದೇ ಮೂಲಭಾವ ಎದ್ದುಕಾಣುತ್ತದೆ. ಮನುಷ್ಯನಿಗೆ ವಿವಾಹ ಮಾಡುವುದನ್ನು ಒಂದು ಪ್ರಮುಖಸಂಸ್ಕಾರಎಂದೇ ಕರೆಯಲಾಗಿದೆ. ಮಡದಿಯೊಂದಿಗೆ ಕೂಡಿಯೇ ಮಾನವನು ಹಲವಾರು ಅನುಭವಗಳನ್ನು ಪಡೆದು, ಪಕ್ವನಾಗಬೇಕಾಗಿದೆ! ಸರಸ-ಸಂತೋಷಗಳನ್ನನುಭವಿಸುವುದು ಒಂದು ವಿಷಯವಾದರೆ, ಹೊಂದಣಿಕೆ, ತ್ಯಾಗ, ತಾಳ್ಮೆಗಳ ದೊಡ್ಡ ಪಾಠವನ್ನೇ ಕಲಿಯುತ್ತಾನೆ. ’ನಾನು ನನ್ನದುಎಂಬ ವೈಯಕ್ತಿಕತೆಯ ಹಠವು ನಾವು ನಮ್ಮೆಲ್ಲರದೂಎಂದು ವಿಸ್ತಾರಭಾವದಲ್ಲಿ ಕರಗಲು ಸಂಸಾರವೊಂದೇ ಸಾಕು! ಅದಕ್ಕೇ ಗೃಹಸ್ಥಾಶ್ರಮವನ್ನುಜ್ಯೇಷ್ಠಾಶ್ರಮಎಂದೇ ಕರೆಯಲಾಗಿದೆ. ಇತರೆಲ್ಲ ಆಶ್ರಮಗಳನ್ನೂ ಭರಿಸುವ ಉಳಿಸುವ ಆಶ್ರಮವಿದು. ವಂಶಾಭಿವೃದ್ಧಿಗೂ. ಮಕ್ಕಳಿಗೂ, ಬ್ರಹ್ಮಚಾರಿಗಳಿಗೂ, ವೃದ್ಧರಿಗೂ, ವಾನಪ್ರಸ್ಥಾಶ್ರಮಿಗಳಿಗೂ, ಅತಿಥಿಗಳಿಗೂ, ಯಾತ್ರಿಕರಿಗೂ, ಎಲ್ಲ ಕಸುಬುಗಳಿಗೂ, ವಾಣಿಜ್ಯವ್ಯಾಪಾರಗಳಿಗೂ, ಸಮಾಜಿಕ ಶಿಷ್ಟಾಚಾರಗಳಿಗೂ ಗೃಹಸ್ಥಾಶ್ರಮವೇ ಆಶ್ರಯ. ಸಂನ್ಯಾಸಿಯೂ ಭಿಕ್ಷೆಗಾಗಿ ಇಲ್ಲಿಗೇ ಬರಬೇಕು! ಆದ್ದರಿಂದಲೇಮದುವೆಯಾಗು, ಪೂರ್ಣನಾಗು!’ ಎಂದೇ ಹೇಳುವ ವಾಡಿಕೆ ಬಂತು. ಗೃಹಸ್ಥಾಶ್ರಮದಲ್ಲಿ ಸ್ತ್ರೀಪುರುಷರಿಬ್ಬರ ಜವಾಬ್ದಾರಿ ಸಮಾನವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಜವಾಬ್ದಾರಿಗಳು ಬೇರೆಬೇರೆಯಾಗಿ ಕಾಣಬಂದರು, ಪೂರಕವಾಗಿವೆ, ಸಮಾನ ಆದರವನ್ನು ಪಡೆದಿವೆ. ಅಷ್ಟೇ ಅಲ್ಲ, ಮಾತೆಗೆ ಒಂದು ಸ್ಥಾನ ಹೆಚ್ಚಾಗಿಯೇ ಇದೆ! ಮಾತೃದೇವೋ ಭವ! ಎಂಬ ಮಾತು ಉಪನಿಷತ್ತಿನದು. ಬಳಿಕವೇ ಪಿತೃದೇವೋ ಭವ--- ಇತ್ಯಾದಿ. ಸಂನ್ಯಾಸಿಯಾದ ಮೇಲೆ ವ್ಯಕ್ತಿಯು ಯಾರಿಗೂ ನಮಸ್ಕರಿಸಬೇಕಿಲ್ಲ, ತಂದೆಗೂ ಕೂಡ! ಆದರೆ ಹೆತ್ತತಾಯಿಗೆ ಮಾತ್ರ ಬದುಕಿರುವವರೆಗೂ ನಮಸ್ಕರಿಸಬೇಕು ಎನ್ನುವುದು ಶಾಸ್ತ್ರವಿಧಿ! ಹೆತ್ತತಾಯಿಯ ಋಣ ತೀರಿಸಲಾಗದು! ಅಂತೆಯೇ ಯಾವುದೇ ದಾನ, ಧರ್ಮ, ಯಾತ್ರೆ, ಪೂಜೆ, ಯೋಗ, ಭೋಗಗಳೇ ಆಗಲಿ, ಎಲ್ಲ ವಿಷಯದಲ್ಲೂ ಹೆಂಡತಿ ಪಕ್ಕದಲ್ಲಿ ನಿಂತು ಕೈಯಲ್ಲಿ ಅರ್ಘ್ಯ ಕೊಟ್ಟುಸಮ್ಮತಿಸಿದರೆಮಾತ್ರ ಅದು ಧರ್ಮಸಮ್ಮತವೆನಿಸುವುದು! ಸಂನ್ಯಾಸವನ್ನೂ ಹೆಂಡತಿಯ ಅನುಮತಿಯಿಂದಲೇ ಪಡೆಯತಕ್ಕದ್ದು ! ಇದು ನಮ್ಮ ಧರ್ಮದಲ್ಲಿ ಸ್ತ್ರೀಗಿರುವ ಹೆಗ್ಗಳಿಕೆಯ ಸ್ಥಾನ!
ವೇದಕಾಲದ ಸಮಾಜದಲ್ಲಿ, ವಿದ್ಯಾಕ್ಷೇತ್ರದಲ್ಲೂ ಸ್ತ್ರೀಯರದು ಸಕ್ರಿಯ ಪಾತ್ರವಿದ್ದದ್ದು ಸ್ಪಷ್ಟ. ‘ಆಚಾರ್ಯಾ ಎಂದರೆ ಗುರುವಾದಂತಹ ಸ್ತ್ರೀ. ‘ಆಚಾರ್ಯಾಣಿ ಎಂದರೆ ಗುರುವಿನ ಪತ್ನೀ. ಶಬ್ದಗಳೇ ಎರಡೂ ಬಗೆಯ ಸ್ತ್ರೀಯರಿದ್ದರು ಎನ್ನುವುದನ್ನು ಸೂಚಿಸುತ್ತದೆ. ’ಪತ್ನೀಎಂಬ ಶಬ್ದವೇ ಯಜ್ಞ ಮಾಡುವವನ ಸಹಾರಿಣೀಎನ್ನುವ ಅರ್ಥವನ್ನು ಹೊಂದಿದೆ. (ಕಾಲಾಂತರದಲ್ಲಿ ಅದು ತಾನು ವಿವಾಹವಾದ ಹೆಣ್ಣುಎನ್ನುವ ಅರ್ಥವನ್ನು ಹೊಂದಿತು) ಸ್ತ್ರೀಯರೇ ನಿರ್ವಹಿಸುತ್ತಿದ್ದ ಸೀತಾಯಜ್ಞಮುಂತಾದ ಕೆಲವು ಯಜ್ಞಗಳ ಉಲ್ಲೇಖಗಳಿವೆ. ಸೀತೆ ಮುಂತಾದ ಪ್ರಾಚೀನ ಸ್ತ್ರೀಯರು ವೇದವಿದ್ಯಾಸಂಪನ್ನೆಯರೆಂಬುದು ಪುರಾಣಕಾವ್ಯಗಳ ಉಲ್ಲೇಖಗಳಲ್ಲೇ ಸ್ಪಷ್ಟವಾಗುತ್ತದೆ. ಹನುಮಂತನು ಸೀತೆಯನ್ನು ಅಶೋಕವನದಲ್ಲಿ ಮೊದಲು ನೋಡುವುದೇ ಆಕೆಯು ಅಲ್ಲಿನ ಸರೋವರದ ದಡಕ್ಕೆ ಸಾಯಂ ಸಂಧ್ಯಾವಂದನೆ ಮಾಡುವುದಕ್ಕಾಗಿ ಬಂದಾಗ! ರಾಮನ ಅನುಪಸ್ಥಿತಿಯಲ್ಲಿ ಸೀತೆಯೇ ಪಿತೃಕಾರ್ಯಗಳನ್ನು ನಿರ್ವಹಿಸಿದಳೆಂಬ ಕಥೆಗಳೂ ಸ್ಥಳಪುರಾಣಗಳಲ್ಲೂ ಪರಂಪರೆಯಲ್ಲೂ ಹರಿದು ಬಂದಿದೆ. ಇನ್ನು ಯಜ್ಞಾದಿಗಳಲ್ಲಿ ಹೆಣ್ಣುಮಕ್ಕಳು ವೀಣಾ-ಝರ್ಝರೀ-ವಾದ್ಯಗಳನ್ನು ನುಡಿಸುತ್ತಿದ್ದರೆಂದೂ, ಗೀತನೃತ್ಯಗಳನ್ನು ಪ್ರದರ್ಶಿಸುತ್ತಿದ್ದರೆಂದೂ ಉಲ್ಲೇಖಗಳಿವೆ. ಓಕಳಿಯಾಡುವುದು, ಹಾಸ್ಯವಿನೋಕೂಟಗಳಲ್ಲಿ ಭಾಗವಹಿಸುವುದು ಇವೆಲ್ಲ ಸ್ತ್ರೀಯರಿಗೆ ಸರ್ವೇಸಮಾನ್ಯವಾಗಿತ್ತು. ಅತ್ಯಂತ ಪ್ರಾಚೀನವಾದ ಮೂಲಗಳಿಂದ ಹಿಡಿದು ಅರ್ವಾಚೀನ ಇತಿಹಾಸದವರೆಗೂ, ಸ್ತ್ರೀಯರು ಹಿಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿದ್ದರೆಂಬುದು ಎದ್ದುಕಾಣುತ್ತದೆ. ಸ್ತ್ರೀಯನ್ನು ಚೆನ್ನಾಗಿ ಅಲಂಕರಿಸಿಟ್ಟು ಭೋಗದ ಬೊಂಬೆಯಂತೆ ಕಾಣುವದನ್ನಷ್ಟೇ ಪ್ರಾಚೀನ/ ಮಧ್ಯಕಾಲೀನ ಪಾಶ್ಚಾತ್ಯಸಮಾಜಗಳಲ್ಲಿ ಕಾಣುತ್ತೇವೆ. ಅಲ್ಲಿನ ನಾರಿಯರು ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಕಾಣಬರುವುದು ಕೇವಲ ಒಂದು ಶತಮಾನದಿಂದೀಚೆಗಷ್ಟೇ ಎನ್ನುವುದನ್ನು ಮರೆಯಬಾರದು! ಆದರೆ ಇತಿಹಾಸದಲ್ಲಿನ ಮೊಟ್ಟಮೊದಲ ರಾಣಿಯರೂ, ಯೋಧೆಯರೂ, ಯೋಗಿನಿಯರೂ, ಗೂಢಚಾರಿಣಿಯರೂ, ವ್ಯಾಪಾರೀ ಮಹಿಳೆಯರೂ, ಗಾಯಕಿಯರೂ, ನರ್ತಕಿಯರೂ, ಪಂಡಿತೆಯರೂ, ಕವಯತ್ರಿಯರೂ--- ಸಿಗುವುದೇ ನಮ್ಮ ಪ್ರಾಚೀನ ಹಿಂದು ಸಮಾಜದಲ್ಲಿ! ಶಸ್ತ್ರಾಗಾರಗಳಲ್ಲಿ ಕೆಲಸ ಮಾಡುತ್ತಿದ್ದ ಇಶುಕರ್ತ್ರಿಯರೂ, ಯಜ್ಞವಿಧಿಗಳಲ್ಲಿ ವೇದಮಂತ್ರವನು ಹಾಡುತ್ತಿದ್ದ ಉದ್ಗತ್ರಿಯರು, ವೇದಾಧ್ಯಯನ ಹಾಗೂ ನೈಷ್ಠಿಕ ಬ್ರಹ್ಮಚರ್ಯಗಳಲ್ಲೇ ಶಾಶ್ವತವಾಗಿ ನೆಲೆನಿಲ್ಲುತ್ತಿದ್ದ ಗಾರ್ಗೀ, ವಾಗಂಭ್ರಿಣೀ, ಶಾಶ್ವತೀ, ಮೈತ್ರೇಯೀ ಮೊದಲಾದ ಅನೇಕ ಬ್ರಹ್ಮವಾದಿನಿಯರ ಮಾದರಿಯ ಸ್ತ್ರೀಯರನ್ನೂ ಕಾಣಬಹುದು. ಗೃಹಸ್ಥಾಶ್ರಮವನ್ನು ಆಯ್ದುಕೊಂಡು ಆಜೀವನವೂ ಪತ್ನಿಯಾಗಿ-ಮಾತೆಯಾಗಿ-ಆತಿಥೇಯಳಾಗಿ-ಕುಲವಧುವಾಗಿ ಪರಂಪರೆ-ಧರ್ಮ-ಆಚಾರ-ಸಂಸ್ಕೃತಿಗಳನ್ನು ಕಾಪಾಡಿ ಮುಂದಿನ ಪೀಳಿಗೆಗೆ ರವಾನಿಸುವ ವ್ರತತೊಟ್ಟ ಕತ್ಯಾಯನೀ, ಅದಿತೀ ಮುಂತಾದ ಅಸಂಖ್ಯಸಧ್ಯೋವಧುಗಳ ಮಾದರಿಯ ಸ್ತ್ರೀಯರನ್ನೂ ಕಾಣಬಹುದು. ಪತಿಯ ಧರ್ಮವನ್ನು ತನ್ನ ತಪೋಬಲದಿಂದ ಪುಷ್ಟೀಕರಿಸಿ ಸಿದ್ಧಿಯುಂಟು ಮಾಡಿಸಿದ ಸೀತಾ-ಅನಸೂಯಾ-ಲೋಪಾಮುದ್ರಾ ಮುಂತಾದ ನಿಸ್ವಾರ್ಥ ಪತಿವ್ರತೆಯರ ಮಾದರಿಯ ಸ್ತ್ರೀಯರನ್ನೂ ಕಾಣಬಹುದು. ಸಂಸಾರದ ಬಂಧನವೇ ಬೇಡವೆಂದು ವಿರಕ್ತಿಯ ಹಾದಿಯನ್ನು ಮೆಟ್ಟಿದ ಸುಲಭಾ, ವೇದವತೀ, ಸ್ವಯಂಪ್ರಭಾ ಮುಂತಾದ ನಾರೀಮಣಿಯರ ಮಾದರಿಯ ಸ್ತ್ರೀಯರನ್ನೂ ಕಾಣಬಹುದು. ಸಂಸಾರದಲ್ಲೇ ಇದ್ದೂ ಬ್ರಹ್ಮಜ್ಞಾನದ ಶಿಖರಕ್ಕೇರಿದ ದೇವಹೂತಿ, ಅದಿತಿ, ಮೊದಲಾದ ಮಾದರಿಯ ಸ್ತ್ರೀರತ್ನಗಳನ್ನೂ ಕಾಣಬಹುದು.
ಇದೆಲ್ಲ ಹಳೆ ಕಥೆಗಳಾದವಪ್ಪ! ಎಂದೆನ್ನುವಿರೋ? ಮಧ್ಯಯುಗದಲ್ಲೇ ನಮ್ಮ ಹಿಂದು ಸಮಾಜದಲ್ಲಿ ಅದೆಷ್ಟು ರಾಣಿಯರೂ, ಯೋಧೆಯರೂ, ಕವಯತ್ರಿಯರೂ, ಯೋಗಿನಿಯರೂ, ಪತಿವ್ರತೆಯರೂ ಆಗಿಹೋಗಿಲ್ಲ! ಕಾಮುಕನೂ ಕುಹಕಿಯೂ ಆದ ಮುಘಲರಾಜಾ ಅಕ್ಬರನನ್ನು ಮೂರು ಬಾರಿ ಹೀನಾಯವಾಗಿ ರಣದಲ್ಲಿ ಸೋಲಿಸಿದ ರಾಣೀ ದುರ್ಗಾವತಿಯನ್ನು ಮರೆಯಲಾದೀತೆ? ಕುದುರೆಯೇರಿ ಖಡ್ಗವನ್ನು ಝಳುಪಿಸಿದ ಝಾಂಸೀರಾಣಿ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮರನ್ನು ಮರೆಯಲಾದೀತೆ? ದಾನ-ಧರ್ಮ-ಶಿಕ್ಷಣಾದಿ ಕ್ಷೇತ್ರಗಳಲ್ಲಿ ಅಭೂತಪೂರ್ವ ಕೊಡುಗೆಯಿತ್ತ ರಾಣಿ ಅಬ್ಬಕ್ಕ, ಅಹಲ್ಯಾಬಾಯಿ ಹೋಳ್ಕರ್ ಮುಂತಾದ ಸಮಾಜಸೇವಾಧರೀನೆಯರನ್ನು ಮರೆಯಲಾದೀತೆ? ಗೀತ-ನೃತ್ಯ-ನಾಟಕ-ಸಾಹಿತ್ಯ-ಕಾವ್ಯ-ಶಾಸ್ತ್ರ-ರಾಜನೀತಿಗಳೆಲ್ಲದರಲ್ಲೂ ಅದ್ವಿತೀಯ ಪಂಡಿತೆಯೆನಿಸಿದ ತಂಜಾವೂರಿನ ರಘುನಾಥನಾಯಕನ ಆಸ್ಥಾನ ವಿದುಷಿ ಶುಕವಾಣಿಯು(ಮಧುರವಾಣಿ ಎಂದು ಬಿರುದು), ನೂರು ವಿದಾಂಸರನ್ನು ಒಮ್ಮೆಲೆ ವಿದ್ವತ್ಸಭೆಯಲ್ಲಿ ಎದುರಿಸುತ್ತಿದ್ದ ಶತಾವಧಾನಿನಿಯಾಗಿದ್ದಳು! ನಮ್ಮದೇ ವಿಜಯನಗರ ಸಾಮ್ರಾಜ್ಯದ ರಾಜವಂಶದ ಗಂಗಾದೇವಿ, ವಿಜ್ಜಿಕೆಯರೂ ಮಹಾಕವಯತ್ರಿಯರು. ಇನ್ನು ಬಗೆಬಗೆಯ ಗೂಢಚಾರಿಣಿಯರ ಪಾತ್ರದ ಬಗ್ಗೆ ಭಗವಾನ್ ಚಾಣಕ್ಯನೇ ತನ್ನ ಅರ್ಥಶಾಸ್ತ್ರದಲ್ಲಿ ಹೇಳಿದ್ದಾನೆ. ಆಂಡಾಳ್, ಅಕ್ಕಮಹಾದೇವೀ, ಲಲ್ಲೇಶ್ವರೀ, ತರಿಗೊಂಡ ವೆಂಕಮಾಂಬಾ, ಮುಂತಾದ ಸಂತಸ್ತ್ರೀಯರು ಜನಮಾನಸದಲ್ಲಿ ಉನ್ನತ ಗೌರವವನ್ನು ಪಡೆದವರು. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿಂದುಸ್ತ್ರೀಯರ ಪಟ್ಟಿ ಮುಗಿಯಲೊಲ್ಲದು!
ಗೀತ-ನೃತ್ಯ-ವಾದ್ಯ-ಸಾಹಿತ್ಯ-ಕಾವ್ಯ-ಶಿಲ್ಪಾದಿಗಳಲ್ಲೂ, ಚತುಷ್ಷಷ್ಠಿ-ವಿದ್ಯಾಪ್ರಕಾರಗಳಲ್ಲೂ, ರಾಜಕೀಯದಲ್ಲೂ, ಯುದ್ಧಶಾಸ್ತ್ರದಲ್ಲೂ, ವ್ಯಾಪಾರ-ವಾಣಿಜ್ಯಗಳಲ್ಲೂ, ದೊಂಬರಾಟ-ಪಶುಪಾಲನ-ಕೃಷಿ-ನೇಯ್ಗೆ-ಕಸೂತಿ---- ಮುಂತಾದ ಅನೇಕಾನೇಕ ಕ್ಷೇತ್ರಗಳಲ್ಲೂ ಸ್ತ್ರೀಯರು ಅನಾದಿಕಾಲದಿಂದಲೂ ಪುರುಷರಿಗೆ ಸಮವಾಗಿ ದುಡಿದಿದ್ದಾರೆ ದುಡಿಯುತ್ತಲೇ ಇದ್ದಾರೆ, ನಮ್ಮ ಸಾಮಾಜಿಕ ಆರ್ಥಿಕ ಬಲಕ್ಕೆ ಪುಷ್ಟಿಯನ್ನಿತ್ತಿದ್ದಾರೆ. ಇಂದಿಗೂ ವಿದ್ಯಾಭ್ಯಾಸ ಉದ್ಯೋಗ ವ್ಯಾಪಾರಗಳಲ್ಲಿ ದಾಪುಗಾಲು ಹಾಕುತ್ತ ಮುನ್ನಡೆದಿದ್ದಾರೆ ನಮ್ಮ ಹಿಂದು ಹೆಣ್ಣುಮಕ್ಕಳು! ಪಾಶ್ಚಾತ್ಯ ಮತಗಳಂತೆ ಹೆಣ್ಣನ್ನು ’ತಲೆಯಿಂದ ಕಾಲಿನವರೆಗೂ ಅಮಾನುಷವಾಗಿ ಬಟ್ಟೆಯಲ್ಲಿ ಮುಚ್ಚಿ’ ಉಸುರುಗಟ್ಟಿಸಿ ಮೂಲೆ ತಳ್ಳುವ ಬುದ್ಧಿಯೂ ಇಲ್ಲಿಲ್ಲ. ಅಥವಾ ಹೆಣ್ಣನ್ನು ಸ್ವೇಚ್ಛಾಚಾರಕ್ಕಿಳಿಸಿ, ವಿವಸ್ತ್ರಗೊಳಿಸಿ ಬಿನ್ನಾಣದ ಬೊಂಬೆಯಂತೆ ಪ್ರದರ್ಶಿಸಿ ದುಡ್ಡುಮಾಡಿಕೊಳ್ಳುತ್ತ, ಅವಳ ನೈಜ ಅಂತಸ್ಸತ್ವಕ್ಕೆ ಅವಮಾನವೆಸಗುವ ಬುದ್ಧಿಯೂ ಇಲ್ಲ- ಎರಡೂ ವಿಪರೀತಗಳೂ ಮೂಲರೂಪದ ವೈದಿಕ ಹಿಂದು ಸಂಸ್ಕೃತಿಯಲ್ಲಿಲ್ಲ. ತದನಂತರದ ಸಾಮಾಜಿಕ ಏರುಪೇರುಗಲಲ್ಲಿ ಇಂತಹ ಕಟ್ಟುಪಾಡುಗಳು ಹುಟ್ಟಿರಬಹುದು. ಹೀಗೆ, ಯೋಗದಲೂ ಭೋಗದಲ್ಲೂ ಘನತೆಯಿಂದ ನಡೆಯುವ ಸ್ವಾತಂತ್ರ್ಯ-ಜವಾಬ್ದಾರಿಗಳನ್ನು ಸ್ತ್ರೀಗೆ ಸಂಸ್ಕಾರರೂಪದಲ್ಲಿ ಕಲಿಸಿದ ಧರ್ಮ ನಮ್ಮದು.   
ಇಂತಹ ನಮ್ಮ ಕುಲನಾರಿಯರಿಗೆ ಕಂಟಕ ಬಂದದ್ದು, ನಿರ್ಬಂಧಗಳು ಬಂದದ್ದು ಮಧ್ಯಯುಗದ ಆಕ್ರಮಣಗಳ ಭಯಂಕರ ಕಾಲದಲ್ಲಿ! ಸ್ವತಂತ್ರವಾಗಿ ಓಡಾಡುತ್ತ ವಿದ್ಯೆ-ವ್ಯಾಪಾರ-ಕಲೆ-ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದ ಸ್ತ್ರೀಯನ್ನು ಎಲ್ಲೆಂದರಲ್ಲಿಂದ ಹೊತ್ತೊಯ್ದು ಅತ್ಯಾಚಾರ ಮಾಡುವ ಕಾಮುಕ ಮುಸಲ್ಮಾನರು ಧಾಳಿಯಿಟ್ಟಾಗ ಹಿಂದುಸ್ತ್ರೀಯ ಸುರಕ್ಷೆಗೆ ಕಂಟಕ ಬಂತು. ಅವಳ ಗುರುಕುಲ-ಗಮನಕ್ಕೂ ಕುತ್ತು ಬಂತು. ಅವಳ ಸಾಮಾಜಿಕ ಚಟುವಟಿಕೆಗಳಿಗೆ ವಿಘ್ನ ಬಂತು. ಅವಳ ಸುರಕ್ಷೆಗಾಗಿ ಹಲವು ನಿರ್ಬಂಧಗಳು ಬರಬೇಕಾಯಿತು. 2000 ವರ್ಷಗಳ ಕಾಲ ಒಂದಲ್ಲ ಒಂದು ಬಗೆಯ ರಾಜಕೀಯದಾಸ್ಯವನ್ನ ನಿರಂತರ ಅನುಭವಿಸಿದ ನಮ್ಮ ಹಿಂದು ಸಮಾಜದಲ್ಲಿ, ಸ್ತ್ರೀಯರ ಸ್ಥಿತಿ ದಾರುಣವಾಗುತ್ತ ಬಂತು. ಮತ್ತೆ ತಲೆಯೆತ್ತುವುದೇ ಕಷ್ಟವಾಯಿತು. ಕಾಲಕ್ರಮದಲ್ಲಿ ಸ್ತ್ರೀಯ Self Image ಬಹಳಷ್ಟು ಹಾಳಾಯಿತು, ಕೀಳರಿಮೆ ಮೊದಲಾಯಿತು. ಸ್ತ್ರೀಯ ಮೂಲ ಸ್ಥಾನ-ಮಾನಗಳೇನೆಂಬುದನ್ನು ನಮ್ಮದೇ ಹಿಂದು ಸಮಾಜದ ಪುರುಷರೂ ಮರೆಯುತ್ತ ಬಂದರು! ಅವಳನ್ನು ಎಲ್ಲರೋತಿಯಲ್ಲಿಯು ಎರಡನೆಯ ದರ್ಜೆಯ ಮನುಷ್ಯಳು ಎಂದು ಭಾವಿಸಲಾರಂಭಿಸಿದರು. ತಮ್ಮ ಭೋಗಕ್ಕೂ ವಂಶಾಭಿವೃದ್ಧಿಗೂ ಮಾತ್ರ ಹೆಣ್ಣುಬೇಕು, ಮಿಕ್ಕ ಎಲ್ಲದರಲ್ಲೂ ಅವಳು ನಿಷ್ಪ್ರಯೋಜಕಳು ಎಂಬ ಸ್ವಾರ್ಥವೂ ಮೊದಲಾಯಿತು. ಆ ಕಾಲದ ಸ್ಮೃತಿಗಳಲ್ಲೂ ಅವನ್ನು ಅನಧಿಕಾರಿಗಳ ಸಾಲಿಗೆ ಸೇರಿಸಿಬಿಟ್ಟರು! ಹೀಗೆ ವಿದ್ಯೆ-ಸ್ವಾತಂತ್ರ್ಯಗಳಿಂದ ವಂಚಿತಳಾದ ಹೆಣ್ಣನ್ನು “ನೀನು ಹೆಣ್ಣು! ನಿನಗೇನು ತಿಳಿಯುತ್ತದೆ?! ಮುಚ್ಚು ಬಾಯಿ!” ಎಂದು ಮೂದಲಿಸುವುದೂ ಸುಲಭವಾಯಿತು! ವಿಪರ್ಯಾಸವೇನೆಂದರೆ, ಅತ್ತ, ಶಕ್ತಿಯ ಉಪಾಸನೆ, ದೇವಿಯ ರುದ್ರಭಯಂಕರ ರಣರೂಪದ ಆರಾಧನೆ-ಅನುಸಂಧಾನ ನಿಲ್ಲದೇ ಮುಂದುವರೆದರೂ, ಮನೆಯಲ್ಲಿನ ಜೀವಂತ ಶಕ್ತಿಗಳನ್ನು ಅವಮಾನಿಸಿ ಮೂಲೆಗುಂಪಾಗಿಸಲಾಯಿತು! ತಮ್ಮ ದಬ್ಬಾಳಿಕೆಗೆ ಇಲ್ಲದ ’ಶಾಸ್ತ್ರ’ದ ಸಮರ್ಥನೆಯನ್ನೂ,  ಕೊಟ್ಟರು! ಅದರ ಸತ್ಯಾಸತ್ಯತೆಗಳನ್ನುವಿಮರ್ಶಿಸದೇ ಹೇರಿಯೇ ಬಿಟ್ಟರು! ಆದರೆ, ತಮಾಷೆಯೇನು ಗೊತ್ತೆ?! ಇಷ್ಟು ನಿರ್ಬಂಧ ಅಸುರಕ್ಷೆ ಹಾಗೂ ಸಾಮಾಜಿಕ ನಿಂದೆಯ ನಡುವೆಯೂ, ಅದೆಷ್ಟೋ ವಿದುಷಿಯರೂ ರಾಣಿಯರೂ ಕವಯತ್ರಿಯರೂ ಗೂಢಚಾರಿಣಿಯರೂ ಕಲಾವಿದೆಯರೂ ಎಲ್ಲ ಕಾಲದಲ್ಲೂ ನಮ್ಮಲ್ಲಿ ಹುಟ್ಟಿಬರುತ್ತಲೇ ಇದ್ದರು! ಇದು ನಮ್ಮ ಹಿಂದುಸ್ತ್ರೀಯ ಕುಂದದ ಅಂತಸ್ಸತ್ವಕ್ಕೆ ಕನ್ನಡಿಯೇ ಸರಿ! ವೈದಿಕ ಪರಂಪರೆಯ ನೆಲೆಯ ಹಿಂದು ಧರ್ಮವನ್ನರಿಯದೇ, ಮಧ್ಯಯುಗದಲ್ಲಿ ಬಂದ ಆಪತ್ಕಾಲದ ಕಟ್ಟುಪಾಡುಗಳನ್ನೇ ’ ಚಿರಕಾಲದ ಸಂಪ್ರದಾಯ’ ಎಂದು ಇಂದಿಗೂ ಹಠ ಹಿಡಿಯುವ ಹಿರಿಯರಿರುವುದು ಶೋಚನೀಯ!
ಆದರೆ ಅಧಃಪತನಕ್ಕೆ ಕಾರಣ- ಧರ್ಮವಲ್ಲ, ಧರ್ಮದ ಹ್ರಾಸ! ನಮ್ಮ ಪರಂಪರೆ-ಸಂಸ್ಕೃತಿಯನ್ನು ನಾವೇ ಆಮೂಲಾಗ್ರವಾಗಿ ತಿಳಿಯದೇ ಹೋದದ್ದೇ ಕಾರಣ! ಅಥವಾ, ನಮ್ಮತನವನ್ನು ಮರೆತು, ಪಾಶ್ಚಾತ್ಯರು ನಮಗೆ ನೀಡುವ ಅಪಕ್ವವಾದ ಮಾದರಿಗಳನ್ನು ಕಣ್ಣುಮುಚ್ಚಿ ಅಂಗೀಕರಿಸುವುದೇ (Blind aping of western feminism models) ಹಿಂದುನಾರಿಗೆ ಮತ್ತಷ್ಟು ಅಪಾಯಗಳನ್ನು ತಂದೊಡ್ಡಿದೆ. ಸಬಲೆಯೂ, ಘನತೆವೆತ್ತವಳೂ ಆದ ನಾರಿಯನ್ನು ಮಧ್ಯಯುಗದಲ್ಲಿ ಆಕ್ರಮಣಗಳು ಅಬಲೆಯಾಗಿಸಿದವು. ಆಧುನಿಕಯುಗದಲ್ಲಿ ಈ ಅಬಲೆಯ ಪಟ್ಟವೇನೋ ಮೆಲ್ಲನೇ ಕಳಚಿಬೀಳುತ್ತಿದೆ ಆದರೆ, ಪಾಶ್ಚಾತ್ಯರು, Feministಗಳು ಹೆಣ್ಣಿಗೆ ಸ್ವೇಚ್ಛಾಚಾರಿಣಿಯಾಗು! ಬಿಚ್ಚಿ ತೋರಿಸುವ ಬೋಗದ ಬೊಂಬೆಯಾಗು!” ಎಂದು ಉಪದೇಶಿಸಲಾರಂಭಿಸಿದ್ದಾರೆ! ಅದನ್ನು ಅಂಧವಾಗಿ ನಂಬಿ, ಮರ್ಯಾದೆಯ ಸೀಮೆಗಳನ್ನುಲ್ಲಂಘಿಸಿ ದಾರಿತಪ್ಪುತ್ತಿರುವ ಹಿಂದುಹೆಣ್ಣುಮಕ್ಕಳೂ ಹೆಚ್ಚುತ್ತಿರುವುದು ವಿಷಾದನೀಯ
ಇದಕ್ಕೆ ಪರಿಹಾರ, ನಮ್ಮದೇ ಮೂಲ ವೈದಿಕ ಸನಾತನಧರ್ಮದಲ್ಲಿ ಇದೆ. ಯಾವ ಸ್ತ್ರೀಪುರುಷರು ವೇದಕಾಲದಿಂದ ಹಿಡಿದು ಇಂದಿನವರೆಗೂ ನಮ್ಮ ಹಿಂದು ಸಮಾಜದ ಸಮಗ್ರದರ್ಶನವನ್ನು ಹೊಂದಬಲ್ಲರೋ, ಅವರು ಎಂದೂ ಸ್ತ್ರೀಯನ್ನು ನಿಕೃಷ್ಟವಾಗಿ , ಅಥವಾ ಪುರುಷಾಧೀನ ಎಂಬಂತೆ ಕಾಣಲಾರರು. ಹಾಗೂ ಕಂಡರು ಎಂದಿಟ್ಟುಕೊಳ್ಳಿ, ಅವರು ಪುರುಷಶ್ರೇಷ್ಠತೆಯ ಹಠದ ಮೂರ್ಖರು ಎಂದಷ್ಟೆ ಅರ್ಥಮಾಡಿಕೊಳ್ಳಬೇಕು. ಆತ್ಮಭಾವದಲ್ಲಿ ಬದುಕುವುದನ್ನು ಕಲಿಸುವ ನಮ್ಮ ವೇದ-ವೇದಂತಗಳಲ್ಲಿ ಸ್ತ್ರೀಗೆ ಅತ್ಯುನ್ನತವಾದ ಸಂಸ್ಕಾರ ಹಾಗೂ ಭಾವನಾಪುಷ್ಟಿ ದೊರಕುತ್ತದೆ. ತನ್ನ ಸ್ವಾತಂತ್ರ್ಯವನ್ನು ಹೇಗೆ ನಿರ್ವಹಿಸಬೇಕು?’ ಎಂಬ ವಿವೇಕವೂ ಜಾಗೃತವಾಗುತ್ತದೆ.  

ಇತರೆಲ್ಲ ಸಮಾಜಗಳಿಗಿಂತಲೂ ಅತ್ಯುನ್ನತ ಸ್ಥಾನಮಾನಗಳನ್ನೂ, ಗೌರವಾದರಗಳನ್ನೂ, ಸ್ವಾತಂತ್ರ್ಯ-ಜವಾಬ್ದಾರಿಳನ್ನು ನಿರ್ವಹಿಸಿದವಳು ಹಿಂದು ನಾರೀ. ಅದರ ಬಗ್ಗೆ ಮೊದಲು ಹೆಮ್ಮೆ ಬೆಳೆಸಿಕೊಳ್ಳೋಣ, ಪರಂಪರೆಯಿಂದ ಮಾಹಿತಿಯನ್ನು ಕಲೆಹಾಕೋಣ, ಘಂಟಾಘೋಷವಾಗಿ ಅದನ್ನೆಲ್ಲ ಸಾರೋಣ, ಅಪಾರ್ಥಗಳನ್ನು ಅಳಿಸೋಣ. ಸಮಷ್ಠಿಭಾವವನ್ನು ಬೆಳೆಸೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ