ಆದರ್ಶಪುರುಷ ಶ್ರೀರಾಮ
ಯೋಗಕ್ಕಾಗಲಿ ಭೋಗಕ್ಕಾಗಲೀ ಧರ್ಮವೇ ಆಧಾರ.
ಧರ್ಮವನ್ನು ಅವಿಚ್ಯುತವಾಗಿ ಜೀವನಾದ್ಯಂತ ಎತ್ತಿಹಿಡಿಯುವುದು ಸುಲಭವಲ್ಲ, ಅದು ಅಪಾರ ಕಷ್ಟಸಹಿಷ್ಣುತೆ,
ಮಾನಸಿಕ ದೃಢತೆ ಹಾಗೂ ತ್ಯಾಗಗಳನ್ನು ಅಪೇಕ್ಷಿಸುತ್ತದೆ. ಧರ್ಮವನ್ನೇ ಉಸಿರಾಗಿಸಿಕೊಂಡ ಮಹಾತ್ಮನು ರಘುಕುಲದ
ದೊರೆ ಶ್ರೀರಾಮಚಂದ್ರನು. "ಆತ ಮಹಾವಿಷ್ಣುವಿನ ಅವತಾರವಪ್ಪ, ಅವನಂತೆ ನಾವು ನಡೆಯಬಲ್ಲೆವೇನು?"
ಎಂದು ತಳ್ಳಿ ಹಾಕುತ್ತ ಆತನ ಅವತಾರದ ಸಂದೇಶವನ್ನು ನಾವು ಕೈಬಿಡಬಾರದು. ಧರ್ಮರಕ್ಷಣೆಗಾಗಿ ಸ್ವಸುಖವನ್ನೇ
ಬಲಿಗೊಟ್ಟ ಸೀತಾರಾಮರ ಕಥೆ ನಮಗೆ ಮಹದಾದರ್ಶವಾಗಬೇಕು.
ಶ್ರೀರಾಮಚಂದ್ರನ ವ್ಯಕ್ತಿತ್ವ ಅನಾದಿಯಿಂದಲೂ
ಭಾರತದ ಚಿಂತನಾಧಾರೆಗೇ ವಿಪುಲ ಸಾಮಗ್ರಿಯನ್ನು ಒದಗಿಸಿದೆ. ರಾಮನು ಮನುಷ್ಯನಾಗಿ, ರಾಜನಾಗಿ, ಮಗನಾಗಿ,
ಪತಿಯಾಗಿ, ಅಣ್ಣನಾಗಿ, ಮಿತ್ರನಾಗಿ, ಯೋಧನಾಗಿ ಪಾಲಿಸಿದ ಆದರ್ಶಗಳು ಅನುಕರಿಸಲಸಾಧ್ಯವೆಂಬಷ್ಟು ಎತ್ತರದಲ್ಲಿವೆಯಾದರೂ,
ನಿತ್ಯಧ್ಯೇಯವಾಗಿವೆ.
ಕುಲದ ಘನತೆಯನ್ನು ಕಾಪಾಡಲು, ತಂದೆಯ ಸತ್ಯವಚನವನ್ನು
ಉಳಿಸಲು, ಪ್ರಜೆಗಳ ಹಿತವನು ಸಾಧಿಸಲು, ಸಜ್ಜನರನ್ನು ರಕ್ಷಿಸಲು, ಸ್ನೇಹಿತರ ವಿಶ್ವಾಸವನ್ನು ಎತ್ತಿ
ಹಿಡಿಯಲು ಹಾಗೂ ನ್ಯಾಯನೀತಿಗಳನ್ನು ಕಾಪಾಡಲು ತನ್ನ ಸರ್ವಸ್ವವನ್ನೂ ಬಲಿಗೊಡಲು ರಾಮನು ಸರ್ವಥಾ ಸಿದ್ಧನಾಗಿ
ನಿಂತ ಪರಿ, ಈ ಯತ್ನದಲ್ಲಿ ಅಪಾರ ಕಷ್ಟನಷ್ಟಗಳನ್ನು ನುಂಗಿಯ್ಊ ಜೀರ್ಣಿಸಿಕೊಂಡ ಪರಿ ಮಾನವಕುಲಕ್ಕೇ
ಮಹೋನ್ನತ ಸಂದೇಶವನ್ನು ಕೊಡುತ್ತದೆ. ರಾಮನ ಘನತೆವೆತ್ತ ನಡೆ-ನುಡಿಗಳಲ್ಲಿ ಕೆಲವು ಇಣುಕುನೋಟಗಳು ಇಲ್ಲಿವೆ-
ಧರ್ಮಸೂಕ್ಷ- ತನಗೆ ಕಷ್ಟವಾದಾಗ,
ಅನ್ಯಾಯವಾದಾಗ, ಬಂಧುಮಿತ್ರರ ಬೆಂಬಲವನ್ನು ಮನುಷ್ಯ ಸಹಜವಾಗಿ ಕೋರುತ್ತಾನೆ. ಕೆಲವೊಮ್ಮೆ ಈ ಬೆಂಬಲ-ಸಹಾನುಭೂತಿಗಳಿಗಾಗಿಯೇ
ತನ್ನ ಕಷ್ಟಗಳನ್ನು ಅತಿಯಾಗಿ ಬಿಂಬಿಸುತ್ತಾನೆ ಕೂಡ! ಶ್ರೀರಾಮನಿಗೂ ಅನಿರೀಕ್ಷಿತವಾದ ಭಯಂಕರವಾದ ವಿಧಿಯೇಟುಗಳು
ಬಿದ್ದಾಗ ಹೇಗೆ ವರ್ತಿಸಿದ ಎನ್ನುವುದನ್ನು ನೋಡೋಣ- ರಾಮನ ಪಟ್ಟಾಭಿಷೇಕವು ನಿಶ್ಚಿತವಾಗಿತ್ತು. ಎಲ್ಲರೂ
ಸಂಭ್ರಮದಲ್ಲಿದ್ದರು. ಆದರೆ ಹಿಂದಿನ ರಾತ್ರಿ, ಮಂಥರೆಯ ಕುತಂತ್ರದಿಂದ ಪ್ರೇರಿತಳಾದ ಕೈಕೇಯಿ ವಚನಬದ್ಧನಾದ
ದಶರಥನನ್ನು ಅಸಹಾಯಕನನ್ನಾಗಿಸಿ ರಾಮನಿಗೆ ನಿಷ್ಕಾರಣವಾಗಿ ೧೪ ವರ್ಷಗಳ ವನವಾಸವನ್ನು ವಿಧಿಸಿಬಿಟ್ಟದಳು.
ಕಂಕಣಕಟ್ಟಿಕೊಂಡು ಪಟ್ಟವೇರುವ ಸಂಭ್ರಮದಲ್ಲಿದ್ದ ರಾಮನಿಗೆ ಇದೊಂದು ಆಘಾತವೇ ಸರಿ. ಈ ಸಂದರ್ಭದಲ್ಲಿ
ಬೇರೆ ಯಾರೇ ಆಗಿದ್ದರೂ ತಂದೆಯನ್ನು ನ್ಯಾಯ ಕೇಳುತ್ತಿದ್ದ, ವಾದ ಮಾಡಮಾಡುತ್ತಿದ್ದ, ಅತ್ತು ಗೋಳಾಡಿ
ಶಪಿಸುತ್ತಿದ್ದ, ’ಯಾವ ತಪ್ಪೂ ಮಾಡದ ತಾನು ವನವಾಸ ಮಾಡುವುದಿಲ್ಲ’ ಎಂದು ವಾದ ಮಾಡುತ್ತಿದ್ದನೇನೋ, ಅಥವಾ ಮಂತ್ರಿ-ಅಮಾತ್ಯರು-ಜನನಾಯಕರನ್ನೂ ಜನರನ್ನೂ
ಎತ್ತಿ ಕಟ್ಟಿ ಧಂಗೆ ಮಾಡಿಸುತ್ತಿದ್ದನೇನೋ, ಅಥವಾ ಕೈಕೇಯಿಯನ್ನು ಬದಿಗೊತ್ತಿ, ವೃದ್ಧದಶರಥನನ್ನು ಪಟ್ಟದಿಂದ
ಇಳಿಸಿ ಪ್ರಜೆಗಳ ಬೆಂಬಲದಿಂದ ತಾನೇ ನಾಯಕನಾಗುತ್ತಿದ್ದನೇನೋ! ಹೀಗೆಲ್ಲ ಆಗಬಹುದಿತ್ತಲ್ಲವೆ? ಆದರೆ
ರಾಮನು ಈ ಸಂದರ್ಭದಲ್ಲಿ ವರ್ತಿಸಿದ ಪರಿಯೇ ಭಿನ್ನ.
ರಾಮನು ’ತನಗಾದ ಅನ್ಯಾಯ’ವನ್ನಷ್ಟೇ ಮುಖ್ಯವಾಗ ಪರಿಗಣಿಸಲ್ಲ. ಈ ಸಂದರ್ಭದಲ್ಲಿ ಆತ ಆಲೋಚಿಸಿದ್ದು ’ದೊರೆಯ ವಚನ-ಬದ್ಧತೆ’ಯ ಬಗ್ಗೆ, ’ಕುಲದ ಘನತೆ-ಗೌರವ’ದ ಬಗ್ಗೆ,
’ರಾಜ್ಯದ ಶಾಂತಿ-ಸೌಹಾರ್ದ’ಗಳ ಬಗ್ಗೆ. "ತಾನೇನಾದರೂ ತನ್ನ
ದುಃಖ, ರೋಷಗಳನ್ನು ವ್ಯಕ್ತವಾಗಿ ತೋರ್ಪಡಿಸಿದರೆ, ತನಗಾದ ಅನ್ಯಾಯವನ್ನು ಪ್ರಶ್ನಿಸಿದರೆ, ವಾದ ಮಾಡಿದರೆ
ಗೆಲ್ಲುವುದೇನೂ ಕಷ್ಟವಿರಲಿಲ್ಲ. ಆದರೆ ತತ್ಪರಿಣಾಮವಾಗಿ ರಾಜವಂಶದ ಗೌರವ ಮಣ್ಣಾದೀತು. ತನಗಾಗಿ ಪ್ರಜೆಗಳು
ಪ್ರತಿಭಟನೆ, ಧಂಗೆ ಎದ್ದು, ಪ್ರಾಣಹಾನಿ, ದ್ರವ್ಯಹಾನಿಗಳನ್ನು ಮಾಡಿದರೆ ಸಮಾಜದ ಶಾಂತಿ-ಭದ್ರತಾವ್ಯವಸ್ಥೆಗಳು
ಹಾಳಾದಾವು!" ಇದು ರಾಮನ ಆಲೋಚನೆಯ ಧಾಟಿ. ಇದು ಒಬ್ಬ ನೈಜನಾಯಕನು ಆಲೋಚಿಸಬೇಕಾದ ಪರಿ. ಅಂತಹ
ಸಂಕಷ್ಟದ ನಿಮಿಷಗಳಲ್ಲೂ, ’ರಾಜ, ರಾಜ್ಯವ್ಯವಸ್ಥೆ, ಪ್ರಜಾಹಿತ’ -ಇವುಗಳಿಗೆ ಆದ್ಯತೆಯನ್ನು ಕೊಟ್ಟವನು ರಾಮ. ‘ತಾನೊಬ್ಬನ್ನು ಕಷ್ಟವನ್ನು ಅಂಗೀಕರಿಸಿದರೆ,
ಕುಲದ ಗೌರವ, ತಂದೆಯ ಸತ್ಯವಚನ ಹಾಗೂ ರಾಜ್ಯದಲ್ಲಿನ ಶಾಂತಿ ಉಳಿಯುತ್ತವೆ’ ಎನ್ನುವ ಕಹಿಸತ್ಯವನ್ನು ಮನಗಂಡ, ತನ್ನ ಅಭಿಮಾನಕ್ಕಾದ ಏಟನ್ನು ನಿಂಗಿ ಜೀರ್ಣಿಸಿಕೊಂಡ.
ಧರ್ಮಾತ್ಮನಾದ ತನ್ನ ಮಗ ರಾಮನಿಗೆ ಆಗುತ್ತಿರುವ ಅನ್ಯಾಯಕ್ಕೆ ಮರುಗಿ ದಶರಥನೇ ಸೂಚಿಸುತ್ತಾನೆ ‘ನೀನು
ಈ ಅನ್ಯಾಯಕ್ಕೆ ಪ್ರತಿಭಟಿಸು, ನನ್ನನ್ನೂ ವಿರೋಧಿಸಿ, ಪ್ರಜೆಗಳನ್ನು ಜೊತೆಮಾಡಿಕೊ, ನ್ಯಾಯವನ್ನು ಪಡೆದುಕೋ,
ಪಟ್ಟಕ್ಕೆ ನಿನಗಿರುವ ಅಧಿಕಾರವನ್ನು ಸಮರ್ಥಿಸ್ಕೋ" ಎಂದು! ಆದರೂ ಧರ್ಮಸೂಕ್ಷವನ್ನರಿತ ರಾಮನು
ಯಾವ ಪ್ರಶ್ನೆ-ವಾದಗಳನ್ನೂ ಮಾಡದೆ, ಮಲತಾಯಿಗೆ ವಿಧೇಯನಾಗಿ, ತಂದೆಗೆ ಸಮಾಧಾನದ ಮಾತುಗಳನ್ನು ಹೇಳಿ,
ವನವಾಸಕ್ಕೆ ಒಪ್ಪಿಬಿಟ್ಟ! ಕೈಕೇಯಿಯ ಭವನದಿಂದ ತನ್ನ ಮನೆಗೆ ಹೋಗುವಾಗ, ಇಕ್ಕೆಲಗಳಲ್ಲೂ ತುಂಬಿದ್ದ
ಜನರ ಗುಂಪುಗಳು ಪಟ್ಟಾಭಿಷೇಕೋತ್ಸವದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಶ್ರೀರಾಮನು ತನ್ನ ದುಃಖ ದುಗುಡಗಳನ್ನು
ಕಿಂಚಿತ್ತೂ ಮುಖದಲ್ಲಿ ತೋರಗೊಡದೆ ಶಾಂತ-ಸ್ಮಿತ-ವದನವನ್ನು ಧರಿಸಿ ನಡೆದ! ತನ್ನ ಅಂತಃಪುರದ ಏಕಾಂತದಲ್ಲಿ
ಸೀತೆಯ ಮುಂದೆ ನಿಲ್ಲುವವರೆಗೂ ತನ್ನ ಭಾವೋದ್ವೇಗವನ್ನು ಒತ್ತಿಟ್ಟುಕೊಂಡಿದ್ದ! ಸೀತೆಯ ಎದುರಿನಲ್ಲಿ
ಮಾತ್ರ ಆತನ ಮುಖದಲ್ಲಿ ವೈವರ್ಣ್ಯ, ಕಣ್ಣೀರು ದುಃಖಗಳು ಉಮ್ಮಳಿಸುತ್ತವೆ. ಆದರೆ ಕೆಲವೇ ನಿಮಿಷಗಳಲ್ಲಿ
ಆ ಭಾವಗಳನ್ನು ಹದ್ದಿಕ್ಕಿ, ಕರ್ತವ್ಯಪ್ರಜ್ಞೆಯನ್ನು ತಾಳಿ, ವನವಾಸಕ್ಕೆ ಸನ್ನದ್ಧನಾಗುತ್ತಾನೆ. ಸೀತೆಗೆ
ಧರ್ಮಾಧರ್ಮಗಳನ್ನು ನಿರ್ದೇಶಿಸಿ ಹೊರಡಲನುವಾಗುತ್ತಾನೆ. ಆ ನಡುರಾತ್ರಿಯಲ್ಲೇ ನಾರುಮಡಿಯುಟ್ಟು ವನವಾಸಕ್ಕೆ
ಹೊರಟೇಬಿಡುತ್ತಾನೆ!
ಇಲ್ಲಿ ನೋಡಿ- ತಡ ಮಾಡಿದರೆ ಬೆಳಗಾದೀತು,
ಜನರಿಗೆಲ್ಲ ವಿಷಯ ತಿಳಿದುಬಿಟ್ಟೀತು, ದೊಡ್ದ ರಾಜಕೀಯ ಕ್ಲೇಷೆಯೇ ಏರ್ಪಟ್ಟೀತು, ಪ್ರಜೆಗಳು ರಾಮನ ಪರವಾಗಿ
ಧಂಗೆ ಎದ್ದಾರು. ಅದರಿಂದ ತನಗೆ ಈ ಅನ್ಯಾಯ ತಪ್ಪಬಹುದು, ನಿಜ, ಆದರೆ, ತನ್ನ ವೃದ್ಧತಂದೆಯ ಸತ್ಯವಚನವೇನಾಗಬೇಕು?
ರಘುವಂಶದ ಗೌರವವೇನಾಗಬೇಕು? ಸಮಾಜದ ಶಾಂತಿ-ಸೌಹಾರ್ದತೆಗಳು ಕೆಟ್ಟು ಸಾವುನೋವುಗಳಾಗಬೇಕೆ?" ಇದು
ರಾಮನ ಕಾಲಜಿ. ಹಾಗಾಗಿ ಪ್ರಜೆಗಳಿಗೆಲ್ಲ ಈ ಹಠಾತ್ ರಾಜಕೀಯಬದಲಾವಣೆಗಳು ತಿಳಿದುಬರುವ ಮುನ್ನ, ಘರ್ಷಣೆ
ಏಳುವ ಮುನ್ನ, ಇರುಳು ಕಳೆಯುವ ಮುನ್ನ, ಗಂಗೆಯನ್ನು ದಾಟಿ ವನವನ್ನು ಪ್ರವೇಶಿಸಿಯೇಬಿಟ್ಟ! ಅದಕ್ಕೆ
ರಾಮನು ಮರ್ಯಾದಾ ಪುರುಷೋತ್ತಮ ಎನಿಸುತ್ತಾನೆ!
ಮತ್ತೊಂದು ಪ್ರಸಂಗ-
ರಾಮನು ವನವಾಸಕ್ಕೆ ಹೊರಟು ಚಿತ್ರಕೂಟದಲ್ಲಿ
ವಾಸ್ತವ್ಯ ಹೂಡಿದ ಮೇಲೆ, ವಿಷಯ ತಿಳಿದ ಧರ್ಮಾತ್ಮಾ ಭರತನಿಗೆ ಆಘಾತವೇ ಆಯಿತು. ಮಂತ್ರಿಮಂಡಲ, ಸೈನ್ಯ
ಹಾಗೂ ಜನಪ್ರತಿನಿಧಿಗಳೊಡನೆ, ಸಕಲ ರಾಜಮರ್ಯಾದೆಗಳೊಂದಿಗೆ ಚಿತ್ರಕೂಟಕ್ಕೇ ಹೋಗಿ ರಾಮನನ್ನು ಹಿಂದಿರುಗುವಂತೆ
ಬಗೆಬಗೆಯಾಗಿ ಪ್ರಾರ್ಥಿಸುತ್ತಾನೆ. ಆದರೂ ರಾಮನು, ವನವಸವನ್ನು ಮುಗಿಸಿಯೇ ಬರುವುದಾಗಿ ಅವನನ್ನೇ ಒಪ್ಪಿಸಿ
ವಾಪಾಸ್ಸು ಕಳುಹಿಸುತ್ತಾನೆ! ರಾಮ-ಭರತರು ಸೇರುವ ಆ ಸಂದರ್ಭದಲ್ಲಿ, ರಾಮನು ತನಗಾದ ಅನ್ಯಾಯದ ಬಗ್ಗೆ
ದುಃಖದುಗುಡಗಳನ್ನು ತೋಡಿಕೊಳ್ಳುತ್ತ ಕೂರುವುದಿಲ್ಲ. ಬದಲಾಗಿ ರಾಜನ ಕರ್ತವ್ಯ, ಆಡಳಿತದ ಸವಾಲುಗಳು,
ಧರ್ಮಸೂಕ್ಷಮಗಳು, ಪ್ರಜಾಹಿತ, ನ್ಯಾಯಧರ್ಮಗಳ ರಕ್ಷಣೆ, ವ್ಯವಸ್ಥೆ, ಮುಂತದಾವುಗಳ ಇತ್ಯಾದಿಗಳ ಬಗ್ಗೆ ತನ್ನ ಪ್ರೌಢ ಅಭಿಪ್ರಾಯಗಳನ್ನು ಸಲಹೆಗಳನ್ನು
ಕೊಡುತ್ತಾನೆ! ರಾಮನಾಡುವ ಮಾತುಗಳಲ್ಲಿ ನಿರ್ವಹಣಶಾಸ್ತ್ರದ (Management) ವಿಚಾರಗಳು ವಿಪುಲವಾಗಿವೆ.
ಅಷ್ಟೆ ಅಲ್ಲ ’ತಾಯಿ ಕೈಕೇಯಿಯನ್ನು ಅವಮಾನಿಸದಂತೆ’ ತಮ್ಮನಿಗೆ
ಒತ್ತಿ ಹೇಳುತ್ತಾನೆ. ತಾನು ತನ್ನದು ಎನ್ನುವುದಕ್ಕಿಂತ ಪ್ರಜಾಹಿತ ಧರ್ಮಸಂಸ್ಥಿತಿ ಇವುಗಳೆ ಮುಖ್ಯವೆನಿಸಿದ್ದವು
ರಾಮನಿಗೆ. ಆದ್ದರಿಂದಲೇ ಆತ ’ಮರ್ಯಾದಾ ಪುರುಷೋತ್ತಮ’.
ವನವಾಸದಲ್ಲೂ ಕ್ಷಾತ್ರಧರ್ಮ ಪಾಲನೆ-
ವನವಾಸಕಾಲದಲ್ಲಿ ರಾಮಲಕ್ಷ್ಮಣರು ತಮ್ಮ ಬಿಲ್ಲುಬಾನಕಡ್ಗದಿಗಳನ್ನು
ಧರಿಸಿಯೇ ನಡೆದರು. ವನವಾಸೀ ಮುನಿಗಳೂ ಅವರಿಗೆ ಅನೇಕ ಅಮೂಲ್ಯ ಸಸ್ತ್ರಾಸ್ತ್ರಗಳನ್ನು ನೀಡಿದ್ದರು.
ಹೀಗೆ ಆಯುಧಗಳ ಹೊರೆಯನ್ನೇ ಹೊತ್ತು ನಡೆದಾಡುತ್ತಿದ್ದಾಗ ’ವನವಾಸದಂತಹ ಸಾತ್ವಿಕ ವ್ರತಕ್ಕೆ ಈ ಆಯುಧಗಳ
ಸಹವಾಸ ಏಕೆ ಬೇಕು?" ಎಂದು ಸೀತೆ ತನ್ನ ಅಸಮಾಧಾನವನ್ನು
ತೋಡಿಕೊಂಡಾಗ, ರಾಮ ಹೀಗೆ ಉತ್ತರಿಸುತ್ತಾನೆ- "ನಾವು ಕಾಡಲ್ಲಿರಲಿ ನಾಡಲ್ಲಿರಲಿ, ಕ್ಷತ್ರಿಯರಾಗಿ
ನಮ್ಮ ಕರ್ತವ್ಯವನ್ನು ಪಾಲಿಸುತ್ತಲೇ ಇರಬೇಕು. ಎಲ್ಲೇ ಇದ್ದರೂ ಶಿಷ್ಟರ ರಕ್ಷಣೆ ದುಷ್ಟರ ನಿಗ್ರಹ ಮಾಡುತ್ತಲೇ
ಇರಬೇಕು. ಹಾಗಾಗಿ ಹಿಂಸಾಚಾರಕ್ಕಾಗಿಯಲ್ಲ, ಹಿಂಸಾಚಾರಿಗಳ ನಿಯಂತ್ರಣಕ್ಕಾಅಗಿ ಈ ಆಯುಧಗಳನ್ನು ಹೊತ್ತುತಿರುಗುವುದು
ತಪ್ಪದು" ಎಂದು. ಇಲ್ಲಿ ನೋಡಿ- ತನಗೆ ಅನ್ಯಾಯವಾದಾಗ ಕ್ಷಮಿಸಿ, ಮೌನವಾಗಿ ಸಹಿಸಿದ ರಾಮನು, ಬೇರೊಬ್ಬರಿಗೆ
ಅನ್ಯಾಯವಾಗದಂತೆ ಎಚ್ಚರವಾಗಿಯೇ ಇದ್ದದ್ದು ಅವನ ಜಾಗೃತಧರ್ಮ್ನಪ್ರಜ್ಞೆಗೆ ಸಾಕ್ಷಿ. ಪಟ್ಟುಪೀತಾಂಬರಗಳನ್ನು
ತ್ಯಜಿಸಿ ನಾರುಮಡಿಯುಟ್ಟರೂ, ಆಯುಧಗಳನ್ನು ಧರಿಸಿಯೇ ನಡ್ದ ರಾಮನು, ಸ್ವಸುಖತ್ಯಾಗಕ್ಕೆ ಸಿದ್ಧನಿದ್ದರೂ,
ಪರಹಿತರಕ್ಷಣೆಗೆ ಸದಾ ಬದ್ಧನಾಗಿದ್ದ.
ಮರ್ಯಾದಾ ಪುರುಷೋತ್ತಮ- ವನವಾಸದ ಸಂದರ್ಭದಲ್ಲೂ
ಶ್ರೀರಾಮನು ಸಂಧ್ಯಾದಿ ನಿತ್ಯಕರ್ಮಗಳನ್ನು, ತಂದೆಯ ಶ್ರಾದ್ಧವನ್ನೂ, ಕುಟೀರಕಟ್ಟಿದಾಗ ವಾಸ್ತುಶಾಂತಿಯೇ
ಮೊದಲಾದ ವಿಹಿತಕರ್ಮಗಳನ್ನೂ ಚಾಚೂ ತಪ್ಪದೆ ಪಾಲಿಸಿದ. ವನವಾಸದ ಕಾಲದಲ್ಲಿ ಯಾವ ಗ್ರಮನಗರವನ್ನೂ ಪ್ರವೇಶಿಸಲಿಲ್ಲ.
ಸುಗ್ರೀವ-ವಿಭೀಷಣಾದಿಗಳೊಡನೆ ವ್ಯವಹರಿಸುವಾಗಲೂ ನಗರದ ಸೀಮೆಗಳ ಆಚೆಯೇ ಉಳಿದು ಎಲ್ಲವನ್ನೂ ನಿಭಾಯಿಸಿದ!
ವನದಲ್ಲೇ ವಾಸಿಸುತ್ತಲೇ ಸೀತಾನ್ವೇಷಣೆ, ಯುದ್ಧತಂತ್ರ, ಮುಂತಾದ ಘನಗಂಭೀರ ಕಾರ್ಯಗಳನ್ನು ನಿರ್ವಹಿಸಿದ!
ಪ್ರಸನ್ನಚಿತ್ತ- ಜೀವನದಲ್ಲಿ ಸಕಾಅರಾತ್ಮಕವಾಗಿರ
ಬೇಕು optimistic ಆಗಿರಬೇಕು ಎನ್ನುವ ಮಾತುಗಳನ್ನು ಕೇಳುತ್ತೇವೆ. ರಾಮನು ಈ optimismನ ಮೂರ್ತರೂಪ.
ವನವಾಸಕಾಲದಲ್ಲಿ ತನಗಾದ ಅನ್ಯಾಯವನ್ನೇ ನೆನೆಯುತ್ತ, ಗೋಳಿಡುತ್ತ ಶಪಿಸುತ್ತ ಕೂರಲಿಲ್ಲ. ಸೀತಾರಾಮಲಕ್ಷ್ಮಣರು
ಆ ಕಾಲದಲ್ಲಿ ವನವಾಸಿಗಳಾದ ಹಲವಾರು ಋಷಿಮುನಿಗಳನ್ನು ಭೇಟಿಯಿತ್ತು, ಅವರ ಜೊತೆಗೆ ವಾಸಿಸಿ, ಒಡನಾಡುತ್ತ,
ಹೊಸಮಿತ್ರರನ್ನು ಸಂಪಾದಿಸುತ್ತಾರೆ. ಹಲವಾರು ಮುನಿಗಳು ಇವರಿಗೆ ಅತ್ಯಮೂಲ್ಯವೂ ಅಪೂರ್ವವೂ ಆದ ಶಸ್ತ್ರಾಸ್ತ್ರಗಳನ್ನೂ,
ಮಂತ್ರತಂತ್ರಗಳಲನ್ನೂ, ವಿದ್ಯಾರಹಸ್ಯಗಳನ್ನು ಪ್ರಸಾದಿಸುತ್ತಾರೆ. ಚಿತ್ರಕೂಟ, ಜನಾಸ್ಥಾನ, ದಂಡಕಾರಣ್ಯ,
ಪಂಚವಇ ಮುಂತಾದ ರಮ್ಯತಾಣಗಳಲ್ಲಿ ಸಂಚರಿಸುತ್ತ ನಿಸರ್ಗವನ್ನೂ, ಷಡ್ರುತುಗಳನ್ನೂ ಮನದುಂಬಿ ಆಸ್ವಾದಿಸುತ್ತಾರೆ.
ಹಲವು ವಿಚಿತ್ರ ವಿಶಿಷ್ಟ ಸಾಧಕರನ್ನು ಕಂದು ವಿಸ್ಮಯಗೊಳ್ಳುತ್ತಾರೆ. ಪಶುಪಕ್ಷಿಪ್ರಾಣಿಗಳ ಮುಗ್ಧಸ್ನೇಹವನ್ನು
ಗಳಿಸುತ್ತಾರೆ. ಘೋರ ರಾಕ್ಷಸರನ್ನು ಸಂಹರಿಸಿ, ಸಜ್ಜನರಿಗೆ ಅಭಯವನ್ನು ಕೊಡುತ್ತಾ ಸಾಗುತ್ತಾರೆ. ಏನೇ
ಬರಲಿ ನಗುನಗುತ್ತ ಮುನ್ನಡೆಯುವ ಸಕಾರಾತ್ಮಕ ಭಾವನೆಗೆ ಇಂತಹ ರಾಮನಿಗಿಂತ ಉತ್ತಮ ಉದಾಹರಣೆ ಸಿಗುತ್ತದೆಯೆ?!
ಮತ್ತೊಂದು ಧರ್ಮಸೂಕ್ಷದ ಪ್ರಸಂಗ-
ರಾವಣನನ್ನು ಸಂಹರಿಸಿ, ಸೀತೆಯನ್ನು ಮರಳಿ
ಪಡೆದು, ವನವಾಸವನ್ನು ಮುಗಿಸಿ, ಪುಷ್ಪಕವಿಮಾನದಲ್ಲಿ ಹಿಂದಿರುಗುವಾಗ ರಾಮನು ಹನುಮಂತನಿಗೆ ಒಂದು ಮಾತು
ಹೇಳುತ್ತಾನೆ- ಮುಂಚಿತವಾಗಿಯೇ ಭರತನಿದ್ದ ನಂದಿಗ್ರಾಮಕ್ಕೆ, ಅಲ್ಲಿ ತನ್ನ ಆಗಮನದ ಸುದ್ದಿಯನ್ನು ಭರತನಿಗೆ
ತಿಳಿಸು, ಭರತನ ಮುಖದಲ್ಲಿ ಸಂತೋಷವಿದ್ದರೆ ಸರಿ, ನಾನು ಬರುತ್ತೇನೆ. ಭರತನ ಮುಖದಲ್ಲಿ, ತನ್ನ ಬರುವಿಕೆಯ
ಬಗ್ಗೆ ಕಿಂಚಿತ್ತ್ತಾದರೂ ಬೇಸರ ಕಾಣಬಂದಲ್ಲಿ, ತಿಳಿಸು, ನಾನು ಅಲ್ಲಿಗೆ ಬರುವುದೇ ಇಲ್ಲ, ಭರತನೇ ಸಂತೋಷವಾಗಿ
ರಾಜ್ಯವನ್ನಾಳಲಿ!" ಎಂದು!
ಇಲ್ಲಿ ನೋಡಿ- ವನವಾಸ ಮುಗಿಸಿದ ಮೇಲೆ ರಾಮನೇ
ಪ್ರಶ್ನಾತೀತ ಅಯೋಧ್ಯಾಧಿಪತಿ. ಆದರೂ, ’ಪ್ರಾಣಪ್ರಿಯನಾದ ತಮ್ಮ ಭರತನ ಮನಸ್ಸಿನಲ್ಲಿ ರಾಜ್ಯದ ಆಕಾಂಕ್ಷೆ
ಇದ್ದರೆ, ಆತನೇ ಆಲಲಿ, ಎಷ್ಟಾದರೂ ಅವನೂ ಧರ್ಮಾತ್ಮ, ಯೋಗ್ಯ’, ಎನ್ನುವುದು
ರಾಮನ ಉದಾರ ಭಾವನೆ! ಆದರೆ ಧರ್ಮಾತ್ಮನಾದ ಭರತನು ರಾಮನಿಗಾಗಿ ಪ್ರಾಣವನ್ನೇ ಕೈಲಿಹಿಡಿದು ಕಾಯುತ್ತಿದ್ದಾ,
ರಾಮನು ಅಯೋಧ್ಯೆಗೆ ಹಿಂದಿರುಗಿ ರಾಜನಾಗಿ ಪಟ್ಟವೇರುವಂತೆ ಮಾಡಿದ ಎನ್ನುವುದು ನಮಗೆಲ್ಲ ತಿಳಿದಿದೆ.
ಹೀಗೆ ರಾಮನ ಜೀವನದುದ್ದಕ್ಕೂ ಹಲವು ಸಂದರ್ಭಗಳಲ್ಲಿ
ಆತ ಸ್ವಸುಖಕ್ಕಿಂತ ಧರ್ಮಕ್ಕೆ ಸಮಷ್ಠಿ ಹಿತಕ್ಕೆ ತೋರಿದ ಆದ್ಯತೆ ಎದ್ದುಕಾಣುತ್ತದೆ
ರಾಜಾರಾಮ - ರಾಜನಾದ ಮೇಲೆ ಧರ್ಮ-ನ್ಯಾಯ-ನೀತಿ-ಸಮೃದ್ಧಿ-ಸಂಪತ್ತು-ಕ್ಷೇಮ-ಸುರಕ್ಷೆಗಳನ್ನು
ರಾಮನು ನಿರ್ವಹಿಸಿದ ಪರಿ ಅತ್ಯದ್ಭುತ! ಎಷ್ಟರ ಮಟ್ಟಿಗೆಂದರೆ, ಯಾರಾದರೂ ಅತ್ಯುತ್ತಮವಾಗಿ ಪಾಲನೆ ಮಾಡಿದರೆ
ಅದನ್ನು ’ರಾಮರಾಜ್ಯ’ ಎಂದೇ ಕರೆಯಲಾಗುತ್ತದೆ!
ಹೀಗೆ ರಾಮನ ಜೀವನದುದ್ದಕ್ಕೂ ‘ಸ್ವಹಿತಕ್ಕಿಂತ
ಪರಹಿತ’, ‘ಸ್ವಸುಖಕ್ಕಿಂತ ಪ್ರಜಾಹಿತ’, ‘ವೈಯಕ್ತಿಕ ನ್ಯಾಯಕ್ಕಿಂತ ಆತ್ಯಂತಿಕ ಧರ್ಮವೇ’ ಪ್ರಧಾನವಾಗಿ
ದ್ದವು. ಅಂತಹ ಅದ್ವಿತೀಯ ಆದರ್ಶಪುರುಷನಾದ ರಾಮನು ಭಾರತೀಯರ ‘ಆರಾಧ್ಯದೇವ’ ನಾಗಿರುವುದರಲ್ಲಿ
ಯಾವ ಆಶ್ಚರ್ಯವೂ ಇಲ್ಲ.
ಡಾ ಆರತೀ ವಿ ಬಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ