ಶುಕ್ರವಾರ, ಮಾರ್ಚ್ 17, 2017

ಗುರು
ಗುಕಾರಸ್ಯಂಧಕಾರಾರ್ಥಃ ರುಕಾರಸ್ತನ್ನಿರೋಧಕಃ  |ಅಂಧಕಾರನಿರೋಧಿತ್ವಾತ್ ಗುರುರಿತ್ಯಭಿಧೀಯತೆ ||
ಗುಎಂದರೆ ಅಂಧಕಾರ (ಅಥವಾ ತಮಸ್ಸು, ಜಾಢ್ಯ, ಅಜ್ಞಾನ ಇತ್ಯಾದಿ), ’ರುಎಂದರೆ ಅದನ್ನು ನಿರೋಧಿಸುವ ಶಕ್ತಿ (ಅಥವಾ ವ್ಯಕ್ತಿ, ಸಂದರ್ಭ, ಅನುಭವ, ಅರಿವು ಇತ್ಯಾದಿ). ಅಂಧಕಾರವನ್ನು ನಿರೋಧಿಸುವ ಶಕ್ತಿಯೇಗುರು’.
ನಮ್ಮ ಜಾಢ್ಯ, ಅಜ್ಞಾನಾದಿ  ನಕಾರಾತ್ಮಕ ಮೋಡಗಳನ್ನು ಚದುರಿಸಿ ನಮ್ಮೊಳಗೆಯೇ ಇರುವ ಜ್ಞಾನದ ಬೆಳಕನ್ನು ನಮಗೇ ತೋರಿಕೊಡುವ ಶಕ್ತಿಯೇಗುರು’.  ಜೀವನದ ಯಾವುದೋ ಅನುಭವವೋ, ಯಾರದೋ ಕಿವಿಮಾತೊ, ಉಪದೇಶವೋ, ಗ್ರಂಥವೋ, ನಮ್ಮ ಪಕ್ವ ಮನಸ್ಸೋ---- ಯಾವುದಾದರೂ ರೂಪದಲ್ಲಾದರೂ ಸರಿ, ಗುರುಶಕ್ತಿಯು ನಮ್ಮನ್ನು ಹರಸಬಹುದು. ಹೊರಗಡೆಯ ಗುರುಗಳು ಬಹಳ ಪೂಜ್ಯರೇ ಸರಿ. ಆದರೆ ನಮ್ಮೊಳಗಡೆಯ ಗುರುಶಕ್ತಿ ಇನ್ನೂ ಮಹತ್ವದ ಪಾತ್ರವನ್ನು ವಹಿಸುವಂತಹದ್ದು.  ನಮ್ಮೊಳಗಿನ ನಿಧಿಯನ್ನು ಮರೆತು, ಅದಿಲ್ಲ ಇದಿಲ್ಲವೆಂದು ನಿರಾಶೆಯಿಂದ ಕೊರಗುತ್ತ ಅಲೆದಾಡುವ ನಮ್ಮ ಗಮನವನ್ನು ನಮ್ಮೊಳಕ್ಕೆ ತಿರುಗಿಸುವಂತೆ ಮಾಡಲು ಹೊರಗಡೆ ಮಹಾತ್ಮರ ಮಾರ್ಗದರ್ಶನ ಬೇಕಾಗುವುದುಂಟು. ಸಾಮಾನ್ಯಗುರುವುಬಾ ನನ್ನನ್ನು ಹಿಂಬಾಲಿಸುಎಂದು ಕರೆದು ಮುನ್ನಡೆಯುತ್ತಿರುತಾನೆ. ಆದರೆ ಯೋಗ್ಯಗುರುನಿನ್ನೊಳಕ್ಕೆ ನೀನು ಮುಳುಗಿ ನಿನ್ನನ್ನು ನೀನೇ ಅರಿತುಕೋ’  ಎಂದು ಪ್ರೇರೇಪಿಸಿ ಅಂತರ್ಮುಖಗೊಳಿಸುತ್ತಾನೆ! ನಮ್ಮ ಅಂತರಂಗದ ಸಾಮ್ರಾಜ್ಯದ ಬಾಗಿಲಿನ ಬೀಗದಕೈಯನ್ನು ನಮಗಿತ್ತು ಹರಸುತ್ತಾನೆ. ಮೀರಾಳಿಗೆ ರಾಯಿದಾಸಸು ಮಾಡಿದ್ದು ಆದನ್ನೇ, ನರೇಂದ್ರನಿಗೆ ರಾಮಕೃಷ್ಣರು ಮಾಡಿದ್ದು ಅದನ್ನೇ, ಅರ್ಜುನನಿಗೆ ಶ್ರೀಕೃಷ್ಣನು ಮಾಡಿದ್ದೂ ಅದನ್ನೇ, ಶಿವಾಜಿಗೆ ಸಮರ್ಥರಾಮದಾಸರು ಮಾಡಿದ್ದೂ ಅದನ್ನೇ- ಅವರವರ ಅಂತರಂಗದ ಬಾಗಿಲತ್ತ ಒಯ್ದು ಬಿಟ್ಟರು. ಬಳಿಕ ಸಾಧಕನು ತಾನೇ ಮುನ್ನಡೆಯಬೇಕು. ಅಲ್ಲಿಂದ ಮುಂದೆ ಅಂತರಂಗದ ಗುರುವೇ ದಾರಿತೋರುವುದು.
ಅಂತರಂಗದ ಗುರುವಿನ ಪಾತ್ರ ಇನ್ನೂ ಮಹತ್ವದ್ದುಕುವೆಂಪುರವರು ಹಾಡುತ್ತಾರೆ- "ಅಂತರತಮ ನೀ ಗುರು ಹೇ ಆತ್ಮತಮೋಹಾರಿ.----" ಎಂದು. ಅಂತರತಮ ಗುರು ಜಾಗೃತವಾಗಲು ಹೊರಗಡೆಯ ಗುರುವರ್ಯರು, ಹಿರಿಯರು, ಉಪದೇಶಗಳು, ಅನುಭವಗಳು ಮುಂತಾದವುಗಳು ಪ್ರಚೋದನೆಗಳಷ್ಟೆ. ಹೊರಗಡೆಯ ಗುರುಗಳು ಅದೆಷ್ಟೇ ಉಪದೇಶಗೈದರೂ, ತಿದ್ದಿತೀಡಿದರೂ, ನಮ್ಮೊಳಗಿನ ಗುರುಶಕ್ತಿ ಎಚ್ಚರಗೊಳ್ಳದಿದ್ದರೆ, ಎಲ್ಲವೂ ವ್ಯರ್ಥವಾಗುತ್ತದೆ. ಸುರಿಯುವ ನಲ್ಲಿಯ ಕೆಳಗೆ ಪಾತ್ರೆಯನ್ನಿಟ್ಟಿದ್ದರೂ, ಅದು ತಲೆಕೆಳಗು ಮಗುಚಿಡಲ್ಪಟ್ಟರೆ ಹೇಗೋ, ಹಾಗೆ! ಹಾಗಾಗಿ ಒಳಗಿನ ಅರಿವೆಂಬ ಗುರುವು ಜಾಗೃತವಾಗಬೇಕು, ಆಗ ಹೊರಗಡೆಯ ಎಲ್ಲ ಗುರುಶಕ್ತಿಗಳ ಕೃಪೆಯೂ ಫಲಿಸುತ್ತದೆ.
"ಅರಿವೆ ಗುರುನುಡಿ ಜ್ಯೋತಿರ್ಲಿಂಗ" ಎಂದು ಶರಣರು ಹೇಳುತ್ತಾರೆ. ಅರಿವೆಂಬ ಗುರುಶಕ್ತಿಯನ್ನು ನಮ್ಮೊಳಗೆ ನಾವು ಪ್ರಚುರಗೊಳಿಸಿಕೊಳ್ಳಬೇಕು. ಅದಕ್ಕಾಗಿ ಚಿತ್ತಶುದ್ಧಿಯಾಗಬೇಕು. ಸಲ್ಲದ ಬೇಡದ ನೆನಪುಗಳು, ಕೊರಗುಗಳು, ಹಗೆ-ದ್ವೇಷಗಳು, ಆಸೆ-ದುರಾಶೆ-ನಿರಾಶೆಗಳು ನಮ್ಮ ಅಂತರಂಗದ ತುಂಬೆಲ್ಲ ಜಿಗಟಾಗಿ ಗಂಟುಗಳಾಗಿ ಬಿಗಿದುಕೊಂಡಿರುತ್ತವೆ. ಭೂತಕಾಲದ ನೋವು-ನಿರಾಶೆಗಳನ್ನು ಮರೆಯಲಾಗದೆ, ಕಾಣದ ಭವಿಷ್ಯದ ಬಗ್ಗೆ ಆತಂಕ, ಹಗಲುಗನಸುಗಳನ್ನು ಹೊತ್ತು, ವರ್ತಮಾನವನ್ನು ಹಾಳುಮಾಡಿಕೊಳ್ಳುತ್ತೇವೆ. ಇಂತಹ ಮನಃಸ್ಥಿತಿಯಲ್ಲಿ ಎಂತಹ ಭಗವದ್ಗೀತೆಯೂ ಅರ್ಥವಾಗದು. ಎಂತಹ ಗುರುನುಡಿಯೂ ಫಲಿಸದು. ಯಾರ ಕಿವಿಮಾತೂ ತಟ್ಟದು. ಏಕೆಂದರೆ ಒಲಗಣ ಗುರುವು ಮಲಗಿದ್ದಾನಲ್ಲ! ಆದರೆ ನಮ್ಮೊಳಗಣ ಅದೇ ಗುರುವು ಎದ್ದು ಅರಿವನ್ನು ಚಿಮ್ಮಿಸಲಾರಂಭಿಸಿದಾಗ, ಮನುಷ್ಯನಿಗೆ ಭಗವದ್ಗೀತೆಯೂ, ಗುರುಗಳ ಮಾತು, ಹಿರಿಯರ ಮಾರ್ಗದರ್ಶನವೂ, ತನ್ನದೇ ಜೀವನದ ಅನುಭವಗಳು ಎಲ್ಲವೂ ಕಲಿಸಬೇಕಾದ ಪಾಠಗಳನ್ನು ಬೇಗನೆ ಕಲಿಸಲಾರಂಭಿಸುತ್ತವೆ! ಜೀವನವನ್ನು ಅರಿವಿನ ಕಣ್ಣಿನಿಂದ ಕಾಣಲಾರಂಭಿಸುತ್ತಾನೆ, ಕಲಿಯುತ್ತಾನೆ, ಕಳಿಯುತ್ತಾನೆ, ಅರಳುತ್ತಾನೆ!
ಅಂತರಂಗದ ಗುರುವು ಎಚ್ಚೆತ್ತಾಗ ರಾಜಕುಮಾರ ಸಿದ್ಧಾರ್ಥನು ತನ್ನ ಸುತ್ತಲ ಜಗತ್ತಿನ ನಶ್ವರತೆಯನ್ನು ಅರಿತ, ಸತ್ಯವನ್ನು ಹುಡುಕಿ ಅಂತರ್ಮುಖಿಯಾಗಿ ಹೊರಟ! ಅಂತರಂಗದ ಗುರುವು ಎಚ್ಚರವಾದಾಗ ಒಂಭತ್ತುವರ್ಷದ ರಾಮಕೃಷ್ಣನು ಜೀವನ್ಮರಣಗಳ ನಿಗೂಢ ಪ್ರಶ್ನೆಗಳಿಗೆ, ದೇವರ ಅಸ್ತಿತ್ವದ ಸಾಕ್ಷಾತ್ಕಾರಕ್ಕೆ ಉಪಾಯವನ್ನು ಹುಡುಕಿಕೊಂಡು ಹೊರಟ, ಪರಮಹಂಸನಾದ ! ಅಂತರಂಗದ ಗುರುವು ಎಚ್ಚೆತ್ತಾಗ ಎಳೆಯ ವಯಸ್ಸಿನ ಬಸವಣ್ಣನವರು ತೀವ್ರ ಜಿಜ್ಞಾಸೆಗೆ ತೊಡಗಿದರು, ಬಾಹ್ಯಾಚಾರಗಳ ಹಿಂದಿರುವ ಜ್ಞಾನವೇನು ಎಂದು ಶೋಧಿಸುತ್ತ ಕಳೆಯನ್ನೊಗೆದು, ಬೆಳೆಯನ್ನುಳಿಸಿಕೊಳ್ಳುವ ದಿಟ್ಟತನದಿಂದ ಸತ್ಕ್ರಾಂತಿಯನ್ನೇ ಎಸಗಿದರು! ಅಧಿಕಾರ, ಐಶ್ವರ್ಯ, ಪದವಿ, ಬೆಂಬಲಗಳಾವುವೂ ಇಲ್ಲದೆ, ಕೇವಲ ತಮ್ಮ ಸಮರ್ಥ ನಾಯಕತ್ವದ ಗುಣದ ಮೂಲಕ ಸಣ್ಣಸಣ ರಾಜರುಗಳನ್ನೂ ಪಾಳೆಗಾರರನ್ನೂ, ಜನಸಮೂಹಗಳನ್ನೂ ಹರಿಹರಬುಕ್ಕರ ಜೊತೆಗೂಡಿಸಿ, ಮಹೋನ್ನತ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿಸಿದ ವಿದ್ಯಾರಣ್ಯ ಸ್ವಾಮಿಗಳಿಗೆ ನಿರಂತರ ಮಾರ್ಗದರ್ಶನ ಗೈದದ್ದು ಅವರ ಅಂತರಂಗದ ಅರಿವೆಂಬ ಗುರುವೆ!
ಬ್ರಿಟಿಷರ ಗುಲಾಮಗಿರಿಯಲ್ಲಿ ನರಳುತ್ತಿದ್ದ ಭಾರತೀಯರಿಗೆ ಕೃಷಿ, ಕೈಗಾರಿಕಾ, ಶಿಕ್ಷಣ, ವ್ಯಾಪಾರ, ಉದ್ಯಮ, ಉದ್ಯೋಗ, ನೀರಾವರಿ, ವಿದ್ಯುಚ್ಛಕ್ತಿ, ಸಾರಿಗೆ ಮುಂತಾದ ಹತ್ತುಹಲವು ಕ್ಷೇತ್ರಗಳಲ್ಲಿ ಮಹೋನ್ನತ ಅವಕಾಶಗಳನ್ನು ಕಲ್ಪಿಸುತ್ತ, ದೇಶದ ಆರ್ಥಕಪ್ರಗತಿಗೇ ಹರಿಕಾರರಾದ Sir M ವಿಶ್ವೇಶ್ವರೈಯ್ಯನವರು, ಅವರ ಬಿಡುವಿಲ್ಲದ ಸಮಾಜಸೇವೆಯ ಜೀವನದಲ್ಲಿ ಅವರನ್ನು ನಿರಂತರ ಶಕ್ತವಾಗಿ, ಶಾಂತವಾಗಿ, ಜಾಗೃತರಾಗಿ, ಉದ್ಯಮಶೀಲರಾಗಿ, ಉಳಿಸಿ ಬೆಳೆಸಿ ಮುನ್ನಡೆಸಿದ್ದು ಅವರ ಅಂತರಂಗದ ಅರಿವೆಂಬ ಗುರುವೆ! ...... ಹೀಗೇ ಹೇಳುತ್ತ ಹೋದರೆ, ಇತಿಹಾಸದ ಪುಟಗಳಿಂದ ಹೇರಳವಾದ ಉದಾಹರಣೆಗಳನ್ನು ನೀಡಬಹುದು! ಒಟ್ಟಿನಲ್ಲಿ ನಮ್ಮೊಳಗಿನ ಅಂತರತಮನಾದ ಗುರುವಿನ ಕೃಪೆ ನಮಗಾಗಬೇಕಾದ್ದು ಎಲ್ಲಕ್ಕಿಂತ ಮುಖ್ಯ!

ನಮಗೆ ವೇದವೇದಾಂತಗಳನ್ನಲ್ಲದೆ, ಜೀವನೋಪಯೋಗಿಯಾದ ವಿದ್ಯೆಗಳನ್ನೂ, ಭಾಷೆಗಳನ್ನೂ, ವಿಜ್ಞಾನ-ಗಣಿತ-ಭಾಷೆ-ಕಲೆ-ಕೌಶಲಗಳನ್ನೂ, ವೃತ್ತಿಪ್ರವೃತ್ತಿಮಾರ್ಗಗಳನ್ನೂ, ಗಾದೆಗಳನ್ನೂ ಸುಭಾಷಿತಗಳನ್ನೂ ---- ಒದಗಿಸಿದ ಋಷಿಗಳು ಅಸಂಖ್ಯರು! ನಮ್ಮ ಪಾಲಿಗೆ ಎಲ್ಲ ಅಸಂಖ್ಯ ಗುರುಗಳ ಪ್ರತಿನಿಧಿ ಗುರುಸಾರ್ವಭೌಮರಾದ ವೇದವ್ಯಾಸರು. ವೇದಗಳನ್ನು ವ್ಯಾಸೀಕರಿಸಿದವರು (ಒಂದೇ ವೇದವನ್ನು ನಾಲ್ಕಾಗಿ ವಿಂಗಡಿಸಿ, ಅಧ್ಯಯನ-ಪ್ರಯೋಗಾನುಕೂಲತೆಗಳನ್ನು ಒದಗಿಸಿದವರು), ಪುರಾಣಗಳನ್ನೂ ಮಹಾಭಾರತಮಹಾಕಾವ್ಯವನ್ನೂ ರಚಿಸಿ, ಪಂಡಿತ-ಪಾಮರರೆಲ್ಲರಿಗೂ ಅತಿಶಯ ಜ್ಞಾನದ  ಯೋಗದಾನವನ್ನು ಇತ್ತವರು ಗುರುವ್ಯಾಸರು. ಹಾಗಾಗಿ ಗುರುಪೂರ್ಣಿಮೆಯಂದು ಸಮಸ್ತ ಗುರುಪರಂಪರೆಗೇ ಗೌರವವನ್ನು ತೋರುವ ಸಲುವಾಗಿಗುರೂಣಾಂ ಗುರುವಾದ ಆದಿಗುರು ವೇದವ್ಯಾಸರನ್ನು ಪೂಜಿಸುತ್ತೇವೆ. ಹಾಗಾಗಿ ವ್ಯಾಸಪೂರ್ಣಿಮೆಯೇ ಗುರುಪೂರ್ಣಿಮೆ ಆಗಿದೆ. ಇಂತಹ ಪ್ರಶಸ್ತ ಆಚರಣೆಯ ಹಿನ್ನಲೆಯಲ್ಲಿ ನಮಗೆಲ್ಲ ನಮ್ಮ ಗುರುಹಿರಿಯರ ಒಲುಮೆ ಆಶೀರ್ವಾದಗಳೂ ಲಭಿಸಲಿ, ನಮ್ಮೊಳಗಿನ ಸುಪ್ತಗುರುಶಕ್ತಿಯೂ ಎಚ್ಚೆತ್ತು ಜನ್ಮಸಾರ್ಥಕ್ಯದ ಹಾದಿಯಲ್ಲಿ ಮುನ್ನಡೆಸಲಿ ಎಂದು ಪ್ರಾರ್ಥಿಸೋಣ. ಪುರಂದರದಾಸರು ದಾಸರು ಹಾಡುವಂತೆ ನಿರುತಸುಜ್ಞಾನವನು ಬೆಳಗಿ ಕೃಪೆಗೈಯ್ಯುವ ಗುರುಗಳಾಶೀರ್ವಾದ ನಮಗಾಗಲಿ”.

Published in Samyukta Karnataka newspaper, 2015 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ