ನಾನಾಜೀವನಧರ್ಮರಂಗಗಳೊಳ್
ಆದರ್ಶಂ ಯಶೋಧಾಸುತಂ
ವರಕವಿ ಡಿ ವಿ ಜಿ ರವರ ಶ್ರೀಕೃಷ್ಣಪರೀಕ್ಷಣಂ ಕಾವ್ಯದ
ಒಂದು ಪದ್ಯ-
ವೇಣುಸ್ವಾನಮೋ ಪಾಂಚಜನ್ಯರವಮೋ ಗೀತೋಕ್ತಗಾಂಭೀರ್ಯಮೋ
ಮೌನಿಸ್ನೇಹಮೋ ಗೋಪಿಕಾಪ್ರಣಯಮೋ ಕೌಂತೇಯವಾತ್ಸಲ್ಯಮೋ
ಸೇನಾನಿತ್ವಮೋ ರಾಜತಂತ್ರನಯಮೋ ಚಕ್ರಾಸ್ತ್ರಸಂಧಾನಮೋ
ನಾನಾಜೀವನಧರ್ಮರಂಗಗಳೊಳ್ ಆದರ್ಶಂ ಯಶೋಧಾಸುತಂ
ವೇಣುಸ್ವಾನಂ-
ಶ್ರೀಕೃಷ್ಣನು ಹುಟ್ಟಿದ್ದು ರಾಜಮನೆತನದಲ್ಲಾದರೂ ಗೊಲ್ಲರಕೇರಿಯಲ್ಲಿ ಗೊಲ್ಲನಂತೆ ಬದುಕಬೇಕಾಯಿತು.
ತಾನು ರಾಜಕುವರ ಎಂದು ಅರಿತಿದ್ದರೂ ಕೃಷ್ಣನಿಗೆ ಗೊಲ್ಲರ ಕೇರಿಯಲ್ಲೇ ಇರುವುದು ಏನೂ ಕಷ್ಟ ಎನಿಸಲಿಲ್ಲ.
ಗೊಲ್ಲಗೊಲ್ಲತಿಯರ ನಿರ್ಮಲ ಮುಗ್ಧ ಸ್ನೇಹಾಶ್ರಯದಲ್ಲಿ ಆನಂದವನ್ನು ಕಂಡುಕೊಂಡ. ಅವರಿಗೆ ಕಷ್ಟಕಾಲದ
ಆಪದ್ಬಾಂಧವನಾದ, ಸುಖದಲ್ಲಿ ಸರಸ ಗೆಳೆಯನಾದ, ಗಂಭೀರನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಮಂತ್ರಿಯಾದ.
‘ವೇಣುಗೋಪಾಲ’ನಾಗಿ ಸರಸಸಂಗೀತದ ಹೊಳೆಯನೇ ಹರಿಯಿಸಿದ, ಗೋಪಗೋಪಿಯರ ಹೃದಯಗಳನ್ನು ಗೆದ್ದ, ಹಸು-ಕರು-ನವಿಲು-ಚರಾಚರಗಳನ್ನೆಲ್ಲ
ಮಟ್ರಮುಗ್ಧಗೊಳಿಸಿದ, ರಾಸನೃತ್ಯದ ಲೋಕೋತ್ತರ ಆನಂದವನ್ನು ಸೃಜಿಸಿದ.
ಪಾಂಚಜನ್ಯರವಂ-
ಆದರೆ ವಿಶೇಷವೇನೆಂದರೆ, ಮಧುರ ಮುರಳೀನಾದವನ್ನು ನುಡಿಸುತ್ತಿದ್ದ ಗೊಲ್ಲಕೃಷ್ಣನ
ಅದೇ ಕೈ-ತುಟಿಗಳು ಯುದ್ಧಘೋಷವನ್ನು ಮೊಳಗುವ ಪಾಂಚಜನ್ಯ ಶಂಖವನ್ನೂ ಭಾಜಿಸಿದವು! ಸೇನಾನಿ ಕೃಷ್ಣನ ಪಾಂಚಜನ್ಯಶಂಖದ
ಗಂಭೀರ-ಭಯಂಕರನಾದಕ್ಕೆ ಶತ್ರುಸೈನ್ಯದವರು ಎದೆ ಒಡೆದು ಸತ್ತಬೀಳುತ್ತಿದ್ದರಂತೆ! ಹೀಗೆ ಪಾಂಚಜನ್ಯರವದಿಂದ
ಅಧರ್ಮಿಗಳ ನಿದ್ರೆಗೆಡಿಸಿದವನು ಶ್ರೀಕೃಷ್ಣ!
ಗೀತೋಕ್ತಗಾಂಭೀರ್ಯಂ-
ಶೃಂಗಾರ-ವೀರರಸಗಳಲ್ಲಿ ಪರಿಣತನಾದ ಅದೇ ಕೃಷ್ಣನು ವೀರ-ರೌದ್ರ ಭಯಾನಕ-ಭೀಭತ್ಸರಸಗಳ ಮೇಳವಾದ ರಣರಂಗದಲ್ಲಿ
ತತ್ತ್ವಗಂಭೀರ-ಭಗವದ್ಗೀತೋಕ್ತಿಗಳ ಶಾಂತರಸಧಾರೆಯನ್ನೂ ಹರಿಯಿಸಿದ! ತತ್ವಚಿಂತನೆಯು ಶಾಂತ ಏಕಾಂತಪ್ರದೇಶದಲ್ಲೂ
ಎಷ್ಟು ಕಷ್ಟ ಎನ್ನುವುದು ಸಾಧಕರಿಗೆ ಗೊತ್ತು. ಹಾಗಿರುವಾಗ ಕೃಷ್ಣನು ರಣರಂಗದಂತಹ ರೋಷಾವೇಶಗಳ ಅಸ್ತ್ರಶಸ್ತ್ರಗಳ
ಕಾದಾಟದ ಪರಿಸರದಲ್ಲಿ ಶಾಂತ-ನಿರ್ವಿಕಾರಚಿತ್ತದಿಂದ ಪರಮಸತ್ಯಗಳನ್ನು ಎಳೆಎಳೆಯಾಗಿ ಬಿಡಿಸಿ ವಿವರಿಸಿದನೆಂದರೆ!
ಅವನ ಅಂತರಂಗವು ನಿತ್ಯಜಾಗೃತ, ಸದಾ ಆತ್ಮಾನುಸಂಧಾನದಲ್ಲಿ ತಲ್ಲೀನ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ.
ರಾಜನೀತಿ, ಸಂಸಾರ, ಶತ್ರುಗಳ ಕಾಟ ಹಾಗೂ ಪ್ರಾಣಾಪಾಯಗಳ ಚಕ್ರವ್ಯೂಹದಲ್ಲೇ ಜೀವನವನ್ನು ಸಾಗಿಸಿದನಾದರೂ
ಕೃಷ್ಣನ ಮುಖದ ಸುಂದರ ಮಂದಹಾಸವು ಮಾತ್ರ ಎಂದೂ ಮಾಸಲೇ ಇಲ್ಲ, ಸ್ವರೂಪಜ್ಞಾನದ ನೆನಪು ಮಾಸಲಿಲ್ಲ, ತತ್ತ್ವಾನುಸಂಧಾನವು
ಚಣಕಾಲವೂ ಹಿಂಗಲಿಲ್ಲ!
ಮೌನಿಸ್ನೇಹಂ-
ಪ್ರಜ್ಞಾವಂತ ಋಷಿಮುನಿಗಳಿಗೆ ಕೃಷ್ಣನು ವಿದ್ವನ್ಮಿತ್ರನೂ ಆಧ್ಯಾತ್ಮಿಕ
ಆದರ್ಶವೂ ಆಗಿದ್ದ. ಮಹಿಮೆಯು ಮಹಿಮೆಯನ್ನರಿವುದು ಎಂಬಂತೆ ಕೃಷ್ಣನ ಎತ್ತರವನ್ನು ಅರ್ಥಮಾಡಿಕೊಂಡ ಹಲವು
ಮಹಿಮಾನ್ವಿತರು ಅವನಿಂದ ತತ್ಚಚಿಂತನೆಗಳ ಬೆಳಕನ್ನು ಮಾರ್ಗದರ್ಶನವನ್ನೂ ಪಡೆದು ಧನ್ಯರಾಗುತ್ತಿದ್ದರು.
ಗೋಪಿಕಾಪ್ರಣಯಂ-
ಆದರೆ ಹೀಗೆ ಉತ್ತಮೋತ್ತಮ ಪ್ರಾಜ್ಞರ ಸಹವಾಸದಲ್ಲಿರುತ್ತಿದ್ದ ಕೃಷ್ಣನಿಗೆ
ಮುಗ್ಧಗೋಪಿಕಾಜನರ ಪ್ರೇಮಕ್ಕೆ ಸ್ಪಂದಿಸುವುದೂ ಏನೂ ಕಷ್ಟವೆನಿಸಲಿಲ್ಲ. ತತ್ವದೆತ್ತರದಲ್ಲಿ ನಿಂತಿದ್ದರೂ
‘ಸಾಮಾನ್ಯರೊಂದಿಗೆ ಬೆರೆಯಲಾಗದ ಬಿಂಕ’ ಅವನಲ್ಲಿರಲೇ ಇಲ್ಲ. ಮುಗ್ಧ ಗೊಲ್ಲಜನರ ಸರಸಸಲ್ಲಾಪಗಳನ್ನು
ಆಲಿಸುತ್ತ, ಅವರ ಸುಖದುಃಖಗಳಿಗೆ ಸ್ಪಂಸಿದಿಸುತ್ತಿದ್ದ ಆತ್ಮೀಯ ಸಖನಾಗಿದ್ದ. ಅಂತೆಯೇ ಅವನನ್ನು ಬಯಸಿ
ಒಲಿದು ಬಂದ ಅನೇಕ ಪತ್ನಿಯರಿಗೂ ಪ್ರಿಯಪತಿಯಾಗಿ ಆತ ನಿರ್ವಂಚನೆಯಿಂದ ಸಕಲ ಸುಖಸಂತೋಷಗಳನ್ನು ಒದಗಿಸಿದ.
ಕೌಂತೇಯವಾತ್ಸಲ್ಯಂ-
ಕೌರವಪಾಂಡವರೀರ್ವರೂ ಕೃಷ್ಣನಿಗೆ ಅತ್ತೆಯ ಮಕ್ಕಳು, ನೆಂಟರು ಹಾಗೂ ಬೀಗರು.
ಇಬ್ಬರೊಂದಿಗೂ ಆತನ ಸಂಬಂಧ ಆತ್ಮೀಯವಾಗಿತ್ತು. ಆದರೆ ಕೌರವರ ಅನ್ಯಾಯಕ್ಕೆ ಬಲಿಯಾಗಿ ರಾಜ್ಯಭ್ರಷ್ಟರಾಗಿ
ಅವಮಾನಿತರಾಗಿ ಬಳಲುತ್ತಿದ್ದ ಕುಂತೀಸುತರಿಗೆ ಈತ ಕೊಟ್ಟ ಬೆಂಬಲ ಮಹತ್ತಮವಾದದ್ದು. ಧರ್ಮೈಕಪಕ್ಷಪಾತಿಗಳಾದ
ಪಾಂಡವರನ್ನು ಕೌರವರು ನಾನಾ ಪರಿಯಲ್ಲಿ ಪೀಡಿಸಿದಾಗ ಧೈರ್ಯತುಂಬಿ, ಸಾಂತ್ವನಗೈದು, ಮುಂದಿನ ಹಾದಿಯನ್ನು
ತೋರುತ್ತ ಕೊನೆಗೂ ನ್ಯಾಯವನ್ನು ದಕ್ಕಿಸಿಕೊಟ್ಟ ಜೀವಸಖ ಶ್ರೀಕೃಷ್ಣ.
ಸೇನಾನಿತ್ವಂ-
ಹಸುಳೆಯಾಗಿ ಪೂತನಾ-ಶಕಟ-ತೃಣಾವರ್ತಾದಿ ರಕ್ಕಸರನ್ನೂ, ಬಾಲ್ಯದಲ್ಲೇ ಅಘ,
ಬಕ, ವತ್ಸ, ಖರ, ಕಾಳಿಂಗಾದ ಭೀಕರ ಅಸುರರನ್ನು ಲೀಲಾಜಾಲವಾಗಿ ಸದೆಬಡಿದವನು ಶ್ರೀಕೃಷ್ಣ. ತಾನು ಸರ್ವಹಿತಸಾಧಕನಾದರೂ
ಅಸೂಯೆ ದ್ವೇಷಗಳಿಂದ ತನ್ನ ಮೇಲೆ ನಿಷ್ಕಾರಣವಾಗಿ ಆಕ್ರಮಣ ಮಾಡಿದಂತಹ ಹಲವು ದುರುಳರನ್ನು ಪರಾಕ್ರಮದಿಂದ
ಗೆದ್ದ. ಗರ್ವಿಷ್ಟರಾದ ಕಂಸ, ರುಕ್ಮಿ, ಶಿಶುಪಾಲ, ದಂತವಕ್ತ್ರ, ಕಾಲನೇಮಿ, ಕಾಲಯವನ, ಪೌಂಡ್ರಕ ಮುಂತಾದವರನ್ನು
ಪರಾಕ್ರಮದಿಂದ ಭಂಜಿಸಿದ ಅಜೇಯಸೇನಾನಿ ಎನಿಸಿದ.
ರಾಜತಂತ್ರನಯಂ
/ ಚಕ್ರಾಸ್ತ್ರಸಂಧಾನಂ- ಛಲಕಪಟಗಳ ಕೌರವರನ್ನು ಹದ್ದಿಕ್ಕಲು ಪಾಂಡವರಿಗೆ
ಕೃಷ್ಣನೀತಿಯೇ ಮುಖ್ಯತಂತ್ರವಾಯಿತು. ಯುದ್ಧಪೂರ್ವದಲ್ಲಿ ಸಂಧಾನದ ಯತ್ನವನ್ನೂ ಕೃಷ್ಣ ಮಾಡಿಸಿದ. ಆದರೆ
ದುರ್ಯೋಧನನ ಆಗ್ರಹದಿಂದಾಗಿ ಯುದ್ಧನಿಶ್ಚಯವಾದಾಗ ಯುದ್ಧವಿಜಯದ ಹಾದಿಯಲ್ಲಿ ಪಾಂಡವರಿಗೆ ದಾರಿದೀಪವಾದ.
ಯತ್ರ ಯೋಗೇಶ್ವರೋ ಕೃಷ್ಣ---ತತ್ರ ಶ್ರೀಃ ವಿಜಯಃ---
ಎನ್ನುವ ವಿವೇಕವನ್ನು ಕಳೆದುಕೊಂಡಿದ್ದ ದುರ್ಯೋಧನನು ಕೃಷ್ಣನ ಸೇನಾಬಲವನ್ನಷ್ಟೇ ಕೋರಿಕೊಂಡಾಗ ಅದನ್ನು
ಅವನಿಗೆ ಕೊಟ್ಟ. ಆದರೆ ಕೇವಲ ಕೃಷ್ಣನ ಸಾಂಗತ್ಯವನ್ನಷ್ಟೇ ಬಯಸಿದ ಪಾಂಡವರಿಗೆ ಜೊತೆಗಾರನಾಗಿ, ಅರ್ಜುನನ
ಸಾರಥಿಯಾಗಿ, ಯುದ್ಧದಲ್ಲಿ ಶಸ್ತ್ರವನ್ನೇ ಧರಿಸದೆಯೇ ಅದ್ವಿತೀಯ ಯಶಸ್ಸೂತ್ರವಾಗಿ ಪಾಂಡವರಿಗೆ ಜಯವನ್ನು
ದಕ್ಕಿಸಿಕೊಟ್ಟ! ಪಾಂಡವಸೈನ್ಯವು ಸಂಖ್ಯೆಯಲ್ಲಿ ದುರ್ಬಲವಾಗಿದ್ದರೂ ಬಲವತ್ತರವಾದ ಕೌರವಸೇನೆಯನ್ನು
ನಾಶಮಾಡಲು ಕೃಷ್ಣನ ಸಮಯೋಚಿತ ಸಲಹೆ, ಮಾರ್ಗದರ್ಶನ ಹಾಗೂ ನಿರ್ಣಯಗಳೇ ಕಾರಣ. ‘ಸಂಪನ್ಮೂಲಗಳಿಗಿಂತಲೂ
ಕೌಶಲ-ಪರಿಶ್ರಮಗಳೇ ಹೆಚ್ಚು ಪರಿಣಾಮಕಾರಿ’ ಎನ್ನುವ management lessonನ್ನು
ಕೃಷ್ಣನ ದಕ್ಷ ನಾಯಕತ್ವ ಸಾರುತ್ತದೆ. ಹೀಗೆ ಯುದ್ಧವಾಗಲಿ ಸಂಧಾನವಾಗಲಿ ರಾಜತಂತ್ರನಯವನ್ನರಿತು ಅಸಾಧಾರಣ
ಜಾಣ್ಮೆಯನ್ನು ಮೆರೆದ ಅಪ್ರತಿಮ ರಾಜನೀತಿಜ್ಞ ಶ್ರೀಕೃಷ್ಣ!
ಕರ್ತವ್ಯ, ಮಾನವೀಯತೆ, ಧರ್ಮಸ್ಥಾಪನಾದೀಕ್ಷೆ, ದುಷ್ಟನಿಗ್ರಹ,
ವಿದ್ವತ್ಪ್ರೀತಿ, ಸರ್ವಜನಾನುರಾಗ, ಸರಸಸಂತೋಷಭಾವ, ಗೀತನೃತ್ಯವಿನೋದ, ಮುನಿಜನಸ್ನೇಹ, ಉನ್ನತ ತತ್ವಚಿಂತನೆ---
ಹೀಗೆ ನಾನಾಜೀವನಧರ್ಮರಂಗಗಳನ್ನು ಸಾರ್ಥಕವಾಗಿ ನಿರ್ವಹಿಸಿ ಆದರ್ಶಪ್ರಾಯ ಈ ಯಶೋಧಾಸುತ, ಶ್ರೀಕೃಷ್ಣ.
ಡಾ
ಆರತಿ ವಿ ಬಿ
Published in Samyukta Karnataka 2014, Krshnashtami special
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ