ಶುಕ್ರವಾರ, ಮಾರ್ಚ್ 17, 2017

ದೃಷ್ಟಾಂತ ಚಕ್ರವರ್ತಿ ರಾಮಕೃಷ್ಣ
ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಮಹಾತ್ಮರ ಮಾತು ಸದಾ ಸರಳವೂ ನೇರವೂ ಆಗಿರುತ್ತದೆ. ಅವರ ಮಾತಿನಲ್ಲಿ ಪಾಂಡಿತ್ಯ ಪ್ರದರ್ಶನವಾಗಲಿ, ಒಗಟಾದ ಶೈಲಿಯಾಗಲಿ ಇರದೆ, ವಿಷಯವನ್ನು ಮನಮುಟ್ಟಿಸುವ ಮಹದಿಚ್ಛೆ ಮಾತ್ರವೇ ಇರುತ್ತದೆ.
ವ್ಯಾಸ-ವಾಲ್ಮೀಕಿಯರ, ಶಂಕರಾದಿ ಆಚಾರ್ಯರ, ಬಸವೇಶ್ವರಾದಿ ಶರಣರ ಹಾಗೂ ಪುರಂದರಾದಿ ಹರಿದಾಸರ ಅಭಿವ್ಯಕ್ತಿಯಲ್ಲಿ ನಾವು ಶಬ್ದಗಳ ಪ್ರಸನ್ನತೆ ಹಾಗೂ ಸರಳ ನೇರ ಆಕರ್ಷಕಶೈಲಿಯನ್ನು ಕಾಣುತ್ತೇವೆ.
ಭಾರತದ ಅರ್ವಾಚೀನ ಇತಿಹಾಸದ ನಭದಲ್ಲಿ ಜ್ವಲಿಸಿ ಹೋದ ಅದ್ವಿತೀಯ ಯೋಗಿಶ್ರೇಷ್ಟರಾದ ಶ್ರೀರಾಮಕೃಷ್ಣ ಪರಮಹಂಸರ ಬೋಧನಶೈಲಿಯಲ್ಲೂ ಇದೇ ಸರಳತೆ ಸ್ವಾರಸ್ಯಗಳನ್ನು ಕಾಣುತ್ತೇವೆ. ರಾಮಕೃಷ್ಣರನ್ನು ದೃಷ್ಟಾಂತ ಚಕ್ರವ್ತರ್ತಿ ಎಂದೇ ಕರೆಯಬಹುದು. ಅತಿಸಾಮಾನ್ಯ ಅಕ್ಷರಜ್ಞಾನದ ಹೊರತು ಬೇರಾವ ಶಿಕ್ಷಣವನ್ನು ಪಡೆಯದ ಅವರು, ಹಳ್ಳಿಯ ಮುಕ್ತ ಪರಿಸರದಲ್ಲಿ ಸ್ವಚ್ಛಂದವಾಗಿ ಓಡಾಡುತ್ತ ತಮಗೆ ಬೇಕಾದ್ದನ್ನು ತಾವಾಗಿಯೇ ಕಲಿತದ್ದೇ ಹೆಚ್ಚು. ಯಾವ ’ಪಠ್ಯ’(ಸಿಲಬಸ್)ದ ಹಂಗಿಲ್ಲದೆ, ಪರೀಕ್ಷೆಯ ನಿಮಿತ್ತವಿಲ್ಲದೆ, ಯಾರ ಒತ್ತಾಯ ಭಯಗಳಿಲ್ಲದೆ, ಉದ್ಯೋಗದ ’ಅಜೆಂಡಾ’ ಇಲ್ಲದೆ ಅವರು ಜೀವನದ ಸಣ್ಣ ಪುಟ್ಟ ವಿವರಗಳಿಂದಲೂ ಮನುಷ್ಯಜೀವನದ ವಿವಿಧಮುಖಗಳ ಸೂಕ್ಷ್ಮಅಧ್ಯಯನ ಮಾಡುತ್ತ ಕಲಿತ ವಿದ್ಯೆ ಅವರನ್ನು ಪರಮಹಂಸಾವಸ್ಥೆಗೇ ಏರಿಸಲು ಅನುವಾಯಿತು! ಹಾಗಾಗಿ ಅವರು ಭಕ್ತಿ-ಕರ್ಮ-ರಾಜ-ಜ್ಞಾನಯೋಗ, ತಂತ್ರ-ಮಂತ್ರ, ಸಾಧನ-ಸಿದ್ಧಿಗಳ ಎಂತಹ ಘನವಾದ ಸೂಕ್ಷ್ಮವಾದ ತತ್ವಗಳನ್ನು ವಿವರಿಸುವಾಗಲು ಅವರ ಶೈಲಿ ಸರಳಾತಿಸರಳ. ಕಣ್ಣ ಮುಂದೆ ಕಾಣುವ ನೆಲ, ಜಲ, ಪ್ರಾಣಿ, ಪಕ್ಷಿ, ನರ, ನಾರಿ, ಧನ, ಧಾನ್ಯಾದಿಗಳನ್ನೇ ಉಪಮಾನಗಳನ್ನಾಗಿ ಬಳಸುವ ಅವರ ಚಾತುರ್ಯ ಮನೋಜ್ಞವಾದದ್ದು.
ಅವರ ಕೆಲವು ಮುಗ್ಧಸುಂದರ ದೃಷ್ಟಾಂತಗಳ ಮೇಲೆ ಒಂದು ಕಿರುನೋಟ ಇಲ್ಲಿದೆ-
೧) ಜಗತ್ತಿನ ಮಧ್ಯೆ ಬದುಕುವಾಗ ಅಲ್ಲಿನ ತಂಟೆತಕರಾರುಗಳಿಂದ ಕಿರಿಕಿರಿಗೊಳ್ಳದೆ, ಗಮ್ಯವನ್ನು ಸಾಧಿಸಲು ಬೇಕಾದ ಕೌಶಲದ ಬಗ್ಗೆ ವಿವರಿಸುವಾಗ ರಾಮಕೃಷ್ಣರು ಕೊಡುವ ದೃಷ್ಟಾಂತವನ್ನು ನೋಡಿ-
"ಜಗತ್ತು ಅರಣ್ಯವಿದ್ದಂತೆ. ಅರಣ್ಯದಲ್ಲಿ ಕಲ್ಲು, ಮುಳ್ಳು, ಪೊದೆಗಳು ಹೇರಳವಾಗಿ ಬೆಳೆದಿರುತ್ತವೆ. ಆ ಕಾಡಲ್ಲಿ ನಡೆದು ಹೋಗಬೇಕಾದರೆ, ನಾವೊಬ್ಬರೇ ಒಂದು ಕಡೆಯಿಂದ ಕಲ್ಲುಮುಳ್ಳುಪೊದೆಗಳನ್ನು ಕತ್ತರಿಸುತ್ತ ರಸ್ತೆ ನಿರ್ಮಿಸುತ್ತ ಸಾಗಲು ಸಾಧ್ಯವೆ? ಹಾಗೆಂದು ಗೊಣಗಾಡಲೂ ಬೇಕಿಲ್ಲ. ಸುಮ್ಮನೆ ಚಪ್ಪಲಿ ಧರಿಸಿ ನಡೆದರಾಯಿತಪ್ಪ! ಅಂತೆಯೇ ನಿಃಸ್ಪೃಹತೆ ಎಂಬ ಚಪ್ಪಲಿಯನ್ನು ಧರಿಸಿ ಈ ಸಂಸಾರವೆಂಬ ಕಾಡಿನಲ್ಲಿ ನಡೆದರೆ ಅಲ್ಲಿ ಕಲ್ಲುಮುಳ್ಳುಗಳು ಹೇರಳವಾಗಿದ್ದರೂ ನಮಗೆ ಅದರಿಂದ ಹೆಚ್ಚು ಬಾಧೆಯಾಗದು".
ನಮ್ಮ ನಿತ್ಯನೈಮಿತ್ತಿಕ ಕರ್ತವ್ಯಕರ್ಮಗಳ ಮಧ್ಯದಲ್ಲಿದ್ದೂ ಪರತತ್ವವನ್ನು ಮರೆಯದೇ ಹೇಗೆ ಧ್ಯಾನಿಸಬೇಕು ಎನ್ನುವುದಕ್ಕೆ ಅವರು ಕೊಡುವ ಕೆಲವು ದೃಷ್ಟಾಂತಗಳು ಇಲ್ಲಿವೆ-
"ಶ್ರೀಮಂತರ ಮನೆಯ ದಾಸಿಯು ಆ ಮನೆಯ ಎಲ್ಲ ಕೆಲಸಗಳನ್ನೂ ಮಾಡುತಾಳೆ. ಯಜಮಾನರ ಮಗುವನ್ನು ’ನನ್ನ ಪುಟ್ಟ, ನನ್ನ ರನ್ನ’ ಎಂದು ಲಾಲಿಸುತ್ತಾಳೆ. ಆದರೆ ಅವಳಿಗೆ ಗೊತ್ತು ಅದಾವುದೂ ತನ್ನವಲ್ಲ ಎಂದು. ತನ್ನ ಕಂದ ತನ್ನ ದೂರದ ಗುಡಿಸಿಲಲ್ಲಿ ತನಗಾಗಿ ಕಾದಿದೆ ಎಂದು ಅವಳಿಗೆ ಚೆನ್ನಾಗಿ ಗೊತ್ತು. ಹಾಗೆಯೇ ಈ ಸಂಸಾರವೆಂಬ ’ಭಗವಂತನ ಮನೆಯಲ್ಲಿ’ ನಾವು ಕರ್ತವ್ಯಬದ್ಧರಾಗಿ ಎಲ್ಲವನ್ನೂ ಮಾಡಬೇಕು. ಆದರೆ ಇದಾವುದೂ ನಮ್ಮದಲ್ಲ, ಎನ್ನುವುದನ್ನು ಚೆನಾಗಿ ತಿಳಿದಿರಬೇಕು. ಮೋಕ್ಷ ಎನ್ನುವ ನಮ್ಮ ನಿಜವಾದ ಮನೆಯನ್ನು ಸೇರಲು ಸದಾ ತವಕಿಸುತ್ತಿರಬೇಕು" "ನೀವು ಆಮೆಯನ್ನು ನೋಡಿದ್ದೀರಾ? ಮೇಲ್ನೋಟಕ್ಕೆ ಅದು ಸರೋವರದಲ್ಲಿ ಈಜುತ್ತಿರುವಂತೆ ಕಂಡರೂ ನಿಜಕ್ಕೂ ಅದರ ಗಮನವೆಲ್ಲ ದಡದಲ್ಲಿ ಹೂತಿಟ್ಟ ತನ್ನ ಮೊಟ್ಟೆಗಳ ಮೇಲೆಯೇ ಇರುತ್ತದೆ. ಮನುಷ್ಯನೂ ಹಾಗೆ ಜಗತ್ತಿನಲ್ಲಿದ್ದರೂ ಮನಸ್ಸನ್ನು ಭಗವಂತನಲ್ಲಿ ಕೀಲಿಸಿರಬೇಕು!"
ನಾಗರಿಕರಿಗೆ ಈ ಸಂದೇಶವನ್ನು ಇನ್ನೂ ಚೆನ್ನಾಗಿ ಅರ್ಥಪಡಿಸಬಲ್ಲ ರಾಮಕೃಷ್ಣರ ಮತ್ತೊಂದು ದೃಷ್ಟಾಂತ ಹೀಗಿದೆ- "ಹಲ್ಲು ನೋವಾದಾಗ, ನಾವು ಯಾವ ಕೆಲಸವನ್ನೇ ಮಾಡುತ್ತಿರಲಿ, ನಿದ್ರೆಯನ್ನೇ ಮಾಡುತ್ತಿರಲಿ, ಮನಸ್ಸಿನ ಒಂದಂಶ ಆ ಹಲ್ಲು ನೋವನ್ನೇ ನೆನೆಯುತ್ತಿರುತ್ತದೆ. ಎಲ್ಲೇ ಇರಲಿ ಏನೇ ಮಾಡುತ್ತಿರಲಿ ನಮ್ಮ ಮನಸ್ಸಿನ ಮೂಲೆಯಲ್ಲಿ ಸದಾ ದೇವರ ಧ್ಯಾನ ನಡೆಯುತ್ತಲೇ ಇರಬೇಕು".
೨) ಯೋಗಸಾಧನೆಗೆ ತೊಡಗುವವನು ಸತ್ವಹೀನನೂ ಸಪ್ಪೆ ವ್ಯಕ್ತಿಯಾಗಿದ್ದರೆ ಪ್ರಯೋಜನವಿಲ್ಲ. ಆತನಲ್ಲಿ ಚುರುಕುತನ, ಸ್ವಾಭಿಮಾನ ಹಾಗೂ ಕ್ರಿಯಾಶೀಲತೆ ಇದ್ದರೇನೆ ಆತ ಸಾಧನೆಗೆ ಅರ್ಹ ಎನ್ನುವ ನೀತಿಯನ್ನು ವಿವರಿಸಲು ರಾಮಕೃಷ್ಣರು ಕೊಡುವ ಉಪಮೆಯನ್ನು ನೋಡಿ- "ಹಳ್ಳಿಗಳಲ್ಲಿ ಎತ್ತು, ಹೋರಿಗಳನ್ನು ಕೊಂಡುಕೊಳ್ಳುವಾಗ ಹೇಗೆ ಆಯ್ಕೆ ಮಾಡುತ್ತಾರೆ ಗೊತ್ತೆ? ಬಾಲವನ್ನು ಹಿಡಿದರೆ ಸಾಕು ಜಾಡಿಸಿ ಒದೆಯುವ ಹೋರಿಯನ್ನು ಆಯ್ದುಕೊಳ್ಳುತ್ತಾರೆ. ಏನು ಮಾಡಿದರೂ ಪ್ರತಿಕ್ರಿಯಿಸದ ಹೋರಿಯನ್ನು ಕೆಲಸಕ್ಕೆ ಬಾರದು ಎಂದು ಬಿಟ್ಟುಬಿಡುತ್ತಾರೆ" ಆತಮಜಾಗೃತಿಯಿಲ್ಲದ ತಮೋಗುಣದವನು ಯೋಗಸಾಧನೆಗೆ ಅರ್ಹನಲ್ಲ".
೩) ಬಾಲ್ಯದಲ್ಲೇ ಆಧ್ಯಾತ್ಮಿಕ ಸಂಸ್ಕಾರವನ್ನು ಬೆಳೆಸಿಕೊಂಡು ಧನ್ಯತೆಯ ಹಾದಿಯನ್ನು ಆಯ್ದುಕೊಂಡ ನರೇಂದ್ರಾದಿ (ವಿವೇಕಾನಂದರೇ ಮೊದಲಾದ) ಪ್ರಥಮಾಧಿಕಾರಿಗಳ ಬಗ್ಗೆ ರಾಮಕೃಷ್ಣರು ಕೊಡುವ ಉಪಮೆ ಸುಂದರವಾಗಿದೆ- ವೇದದಲ್ಲಿ ಹೋಮಾಪಕ್ಷಿಯ ವರ್ಣನೆ ಇದೆಯಂತೆ. ಹೋಮಾಪಕ್ಷಿಯು ಆಕಾಶದಲ್ಲಿ ಅತ್ಯಂತ ಎತ್ತರದಲ್ಲಿ ಹಾರುತ್ತಿರುತ್ತದಂತೆ. ಎಂದೂ ಭೂಮಿಯ ಕಡೆಗೆ ಇಳಿಯುವುದೇ ಇಲ್ಲವಂತೆ. ಅಲ್ಲೇ ಹಾರಾಡುತ್ತ ಮೊಟ್ಟೆ ಇಡುತ್ತದಂತೆ. ಆ ಎತ್ತರದಿಂದ ಬೀಳುತ್ತಿರುವಾಗಲೇ ಆ ಮೊಟ್ಟೆಯೊಡೆದು ಮರಿಯೂ ಆಚೆ ಬರುತ್ತದೆ. ಆ ಮರಿಯು ಬೀಳುತ್ತ ಬೀಳುತ್ತ ಕಣ್ತೆರೆದು ರೆಕ್ಕೆಯರಳಿಸುತ್ತ ಸುತ್ತಲೂ ನೋಡುತ್ತದೆ. ತಾನು ಇನ್ನೇನು ಭೂಮಿಯ ಮೇಲೆ ಬಿದ್ದು ಸತ್ತೇ ಬಿಡುತ್ತೇನೆ ಎಂದು ತಿಳಿದು ತಕ್ಷಣ ತನ್ನ ಶಕ್ತಿಯನ್ನೆಲ್ಲ ಪ್ರಯೋಗಿಸಿ ಅತಿ ಎತ್ತರದಲ್ಲಿ ಹಾರುತ್ತಿರುವ ಅಮ್ಮನ ಕಡೆಗೆ ಹಾರಿಹೋಗಿಬಿಡುತ್ತದಂತೆ! ಈ ಎಳೆಯ ತರುಣರೂ ಹಾಗೆ. ಎಲ್ಲರಂತೆ ಸಂಸಾರಕ್ಕೆ ಇನ್ನೇನು ಬೀಳುತ್ತಾರೆನ್ನುವಷ್ಟರಲ್ಲಿ, ಮಾಯೆಯಿಂದ ಎಚ್ಚೆತ್ತು ಹೇಗೋ ಪರಾರಿಯಾಗಿಬಿಡುತ್ತಾರೆ, ಯೋಗಸಾಧನೆಯಿಂದ ಮೋಕ್ಷದ ಕಡೆಗೆ ಏರಿಏರಿ ಹೋಗುತ್ತಾರೆ!"
೪) ಎಲ್ಲೆಲ್ಲೂ ದೇವರನ್ನು ಕಾಣಬೇಕು ಎನ್ನುವುದು ನಿಜವಾದರೂ ಅದು ನಮ್ಮ ವ್ಯವಹಾರಜ್ಞಾನವನ್ನೂ , ಕಾಮನ್ ಸೆನ್ಸ್ ನ್ನು ಮರೆಸುವಂತಾಗಬಾರದು ಎನ್ನುವ ಎಚ್ಚರಿಕೆಯನ್ನು ಕೊಡುತ್ತ ರಾಮಕೃಷ್ನರು ಉಪಮಿಸುತ್ತಾರೆ "ಒಮ್ಮೆ ಗುರುಗಳು ಉಪದೇಶವಿತ್ತರು- ’ಎಲ್ಲ ಜೀವಿಗಳಲ್ಲೂ ನಾರಾಯಣ ಇದ್ದಾನೆ. ಅವನಿಲ್ಲದ ಜಾಗವೇ ಇಲ್ಲ. ಎಲ್ಲರಲ್ಲೂ ನಾರಾಯಣನನ್ನೇ ಕಂಡು ಆದರತೋರಬೇಕು’ ಎಂದು. ಒಬ್ಬ ಶಿಷ್ಯ ಅದನ್ನು ಮನಸಾ ವಹಿಸಿಕೊಂಡ. ಒಮ್ಮೆ ದಾರಿಯಲ್ಲಿ ನಡೆದುಹೋಗುತ್ತಿರುವಾಗ ಒಂದು ಮದಿಸಿದ ಆನೆ ನುಗ್ಗಿಬರತೊಡಗಿತು. ಅದರ ಮೇಲೆ ಕುಳಿತಿದ್ದ ಮಾವುತ ಕೂಗಿ ಹೇಳಿದ ’ಎಲ್ಲರೂ ದೂರ ಸರಿಯಿರಿ ದೂರ ಸರಿಯಿರಿ! ಆನೆಗೆ ಮದವೇರಿದೆ" ಎಮ್ದು ಶಿಷ್ಯ ಗುರುಗಳ ಮಾತನ್ನು ನೆನೆಸಿಕೊಂಡ ’ಎಲ್ಲರಲ್ಲೂ ನಾರಾಯಣ ಇದ್ದಾನೆ ಎಂದ ಮೇಲೆ ಆನೆಯಲ್ಲೂ ಇದ್ದಾನಲ್ಲವೆ?’ ಹೀಗೆ ಭಾವಿಸುತ್ತ ಆನೆಯ ಮುಂದೆ ಮಂಡಿಯೂರಿ ನಮಸ್ಕಾರ ಮಾಡತೊಡಗಿದ. ಮದವೇರಿದ ಆನೆ ಅವನನ್ನು ಸೊಂಡಿಲಿಂದ ಮೇಲಕ್ಕೆತ್ತಿ ಅಪ್ಪಳಿಸಿಬಿಟ್ಟಿತು. ಮೈಯೆಲ್ಲ ಗಾಯವಾಗಿ ಜ್ಞಾನತಪ್ಪಿ ಬಿದ್ದಿದ್ದ ಶಿಷ್ಯನನ್ನು ಗುರುವಿನಬಳಿಗೆ ಕರೆತರಲಾಯಿತು. ತುಂಬ ಶುಶ್ರೂಷೆ ಮಾಡಿದ ಮೇಲೆ ಶಿಷ್ಯನ ಪ್ರಜ್ಞೆ ಮರಳಿತು. ಗುರುಗಳು ಕೇಳಿದರು ’ಯಾಕಪ್ಪ ಹೀಗೆ ಮಾಡಿಕೊಂಡೆ?’ ಶಿಷ್ಯ ಹೇಳಿದ ’ನೀವೆ ಹೇಳಿದ್ದಿರಲ್ಲ ಗುರುಗಳೆ, ಎಲ್ಲರಲ್ಲೂ ನಾರಾಯಣ ಇದ್ದಾನೆ ಎಂದು. ಅದಕ್ಕೆ ನಾನು ಆನೆ ನಾರಾಯಣನಿಗೆ ನಮಸ್ಕಾರ ಮಾಡಿದೆ’ ಗುರುಗಳು ಹೇಳಿದರು ’ ಅದು ಸರಿ. ಆದರೆ ಮಾವುತನಲ್ಲೂ ನಾರಾಯಣ ಇದ್ದಾನಲ್ಲವೆ? ಆತ ಎಲ್ಲರೂ ದೂರಸರಿಯಿರಿ ಎಂದು ಎಚ್ಚರಿಕೆ ಕ್ಜೊಟ್ಟನಲ್ಲ. ಆ ’ಮಾವುತ ನಾರಾಯಣನ ಮಾತನ್ನು ಯಾಕೆ ಕೇಳಲಿಲ್ಲ?’ ದೇವರು ಎಲ್ಲೆಲ್ಲೂ ಇದ್ದಾನೆ ನಿಜ. ಆದರೆ ಅದು ಅಂತರಂಗದ ಧ್ಯಾನಕ್ಕಾಗಿ ಇರುವ ವಿಷಯ. ವ್ಯಾವಹಾರಿಕ ಜಗತ್ತಿನಲ್ಲಿ ಅದನ್ನು ಕುರುಡಾಗಿ ಅಳವಡಿಸಿ ಪೆದ್ದರಂತೆ ವರ್ತಿಸಬಾರದು.
ಉತ್ತಮ ಸಾಧಕನು ಗಮ್ಯವನ್ನು ತಲುಪುವ ತನಕ ವಿಶ್ರಮಿಸುವುದಿಲ್ಲ ಎನ್ನುವುದನ್ನು ವಿವರಿಸಲು ರಾಮಕೃಷ್ನರು ಕೊಡುವ ಉದಾಹರಣೆಯನ್ನು ನೋಡಿ-
೫) ಇಬ್ಬರು ರೈತರಿದ್ದರು. ಅವರಿಬ್ಬರ ಹೊಲಕ್ಕೆ ನೀರು ಇಲ್ಲದಂತೆ ಆಯಿತು. ದೂರದ ತೊರೆಯಿಂದ ಕಾಲುವೆ ತೋಡಬೇಕಾಗಿ ಬಂತು. ಸರಿ ಇಬ್ಬರು ಒಂದು ದಿನ ಪ್ರಾತಃಕಾಲದಲ್ಲೇ ಕಾಲುವೆ ತೋಡಲು ಶುರು ಹಚ್ಚಿಕೊಂಡರು. ಬೆಳಿಗ್ಗೆ ಸೂರ್ಯೋದಯದಲ್ಲೇ ಪ್ರಾರಂಭ ಮಾಡಿದರು. ಬಿಸಿಲೇರುತ್ತಲೇ ಒಬ್ಬ ರೈತನ ಪುಟ್ಟ ಮಗಳು ಬಂದು ಹೇಳಿದಳು- ’ಅಮ್ಮ ಕರೆಯುತ್ತಿದ್ದಾಳೆ. ಮನೆಗೆ ಬಂದು ಊಟ ಮಾಡಿ, ಸ್ವಲ್ಪ ಹೊತ್ತು ವಿಶ್ರಮಿಸಬೇಕಂತೆ" ರೈತನಿಗೂ ಹೌದೆನಿಸಿತು. ಸರಿ, ಅಲ್ಲೆ ಹಾರೆ ಗುದ್ದಲಿಗಳನ್ನು ಬಿಸುಟು ಮನೆಗೆ ಹೊರಟೇ ಬಿಟ್ಟ! ಆತನ ಕಾಲುವೆ ಕೊನೆಗೂ ತಯಾರಾಗಲೇ ಇಲ್ಲ! ಮತ್ತೊಬ್ಬ ರೈತನ ಮಗಳೂ ಬಂದು ಕರೆದಳು. ಆದರೆ ಆತ ಕಿರಿಕಿರಿಗೊಂಡು ಹೇಳಿದ "ಹೋಗು. ಈಗ ಬರಲಾಗದು ಅಂತ ನಿನ್ನ ಅಮ್ಮನಿಗೆ ಹೇಳು. ನಾನು ಇವತ್ತೇ ಕಾಲುವೆ ತೋಡಬೇಕಿದೆ". ಮಧ್ಯಾಹ್ನವಾಗುತ್ತಲೇ ಅವನ ಹೆಂಡತಿಯೇ ಬಂದು ಕರೆದಳು ’ಅಯ್ಯೋ ನಾಳೆ ಮಾಡಿದರಾಯಿತು, ಮನೆಗೆ ಬನ್ನಿ" ಎಂದಳು. ರೈತನು ರೇಗಿ ಹೇಳಿದ "ಕಾಣುತ್ತಿಲ್ಲವೆ ನಿನಗೆ? ಇವತ್ತು ಕೆಲಸ ಮುಗಿಸಲೇ ಬೇಕು. ಇಲ್ಲದಿದ್ದರೆ ತಿಂಗಳ ಕೊನೆಗೆ ನಾವೆಲ್ಲರೂ ಉಪವಾಸ ಸಾಯಬೇಕಾಗುತ್ತದೆ. ಹೋಗು, ನನಗೆ ಊಟ ವಿಶ್ರಾಂತಿ ಯಾವುದೂ ಬೇಕಿಲ್ಲ" ಹೆಂದತಿ ಹೆದರಿ ಓಡಿಬಿಟ್ಟಳು. ರೈತ ಸಾಯಂಕಾಲದ ವರೆಗೂ ಎಡಬಿಡದೆ ಅಗೆದು ಅಗೆದು ಕೊನೆಗೂ ಕಾಲುವೆ ತೋಡಿಯೇ ಬಿಟ್ಟ. ತನ್ನ ಕಾಲುವೆಯೊಳಗೆ ನದಿಯ ನೀರು ಜುಳುಜುಳು ಎಂದು ಹರಿದು ಬರುವುದನ್ನು ನೋಡಿ ಅವನಿಗೆ ಹಿಗ್ಗೋ ಹಿಗ್ಗು! ಸಂತೃಪ್ತಿಯಿಂದ ಮನೆಗೆ ನಡೆದ. ಮೈಗೆ ಚೆನ್ನಾಗಿ ಎಣ್ಣೆ ತಿಕ್ಕಿಕೊಂಡು, ಬಿಸಿಬಿಸಿ ನೀರಿನಿಂದ ಸ್ನಾನ ಮಾಡಿ, ಹೊಟ್ಟೆತುಂಬ ಉಂಡು ಸೂರು ಸೀಳುವಷ್ಟು ಜೋರಾಗಿ ಗೊರಕೆ ಹೊಡೆಯುತ್ತ ನಿದ್ರೆ ಮಾಡಿದ". ಮೊದಲನೆಯ ರೈತ ಸಾಮಾನ್ಯ ಸಾಧಕ. ಅವನು ಗುರಿ ಮುಟ್ಟುವುದು ಕಷ್ಟವೇ ಏಕೆಂದರೆ ಬೇಗ ವಿಚಲಿತನಾಗುತ್ತಾನೆ. ಆದರೆ ಎರಡನೆಯ ರೈತನ ಛಲ ನೋಡಿ. ಹಿಡಿದ ಕೆಲಸವನ್ನು ಮುಗಿಸುವ ತನಕ ವಿಶ್ರಮಿಸುವುದಿಲ್ಲ. ಅಂತಹವನು ಮಾತ್ರವೇ ಸಾಧನೆ ಮಾಡಲು ಸಾಧ್ಯ"
೬) ಬ್ರಹ್ಮವಿದ್ ಬ್ರಹ್ಮೈವ ಭವತಿ (ಬ್ರಹ್ಮವನ್ನು ತಿಳಿದವನು ಬ್ರಹಮವೇ ಆಗಿಬಿಡುತ್ತಾನೆ) ಎಂಬ ಸತ್ಯವನ್ನು ರಾಮಕೃಷ್ಣರು ಅದೆಷ್ಟು ಮುಗ್ಧಸುಂದರವಾದ ಉಪಮೆಯ ಮೂಲಕ ತಿಳಿಸುತ್ತಾರೆ ನೋಡಿ-
"ಒಮ್ಮೆ ಉಪ್ಪಿನ ಬೊಂಬೆಯೊಂದು ಸಮುದ್ರದ ಆಳವನ್ನು ಕಂದುಹಿಡಿಯಲು ಹೋಯಿತಂತೆ! ಅದು ಆಳವನ್ನು ತಿಳಿದು ಬರಲೇ ಇಲ್ಲ! ಏಕೆಂದರೆ ಅದು ಸಮುದ್ರದಲ್ಲಿ ಕರಗಿಯೇ ಹೋಯಿತು! ಬ್ರಹ್ಮವನ್ನು ತಿಳಿದವನು ಅದರ ಆನಂದ ದಲ್ಲೇ ಲೀನವಾಗಿಬಿಡುತ್ತಾನೆ. ಅವನು ಮರಳಿ ಬಂದು ಮತ್ತಾವ ಲೌಕಿಕ ಕೆಲಸಗಳನ್ನೂ ಮಾಡಲು ಸಾಧ್ಯವಾಗುವುದಿಲ್ಲ".

ಇಂತಹ ಇನ್ನೂ ಅದೆಷ್ಟೋ ವಿನೋದ ಶೀಲ ನೀತಿಯುತ ದೃಷ್ಟಾಂತಗಳ ಮೂಲಕ ರಾಮಕೃಷ್ಣರು ಅನೇಕಾನೇಕ ಉಪದೇಶಗಳನ್ನು ಕೊಟ್ಟಿದ್ದಾರೆ. ಮಕ್ಕಳಿಗೂ ಅರ್ಥವಾಗಬಲ್ಲ ಆ ಸರಳ ಸುಂದರ ಔಚಿತ್ಯಪೂರ್ಣ ದೃಷ್ಟಾಂತೋಪದೇಶಗಳನ್ನು ನಾವು ಓದಿಯೇ ಆಸ್ವಾದಿಸಬೇಕು!

Published in Vikrama 2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ