ಶುಕ್ರವಾರ, ಮಾರ್ಚ್ 17, 2017

ಸರಸ್ವತಿ-ಸ್ವರೂಪ-ಸ್ವಾರಸ್ಯ
ಸರಸ್ವತಿಯು ಅತ್ಯಂತ ಪ್ರಸಿದ್ಧ ದೇವತೆ. ವಿದ್ಯಾಧಿದೇವಿ, ಕಲೆಗಳ ಒಡತಿ, ವಾಗ್ದೇವಿ ಹಾಗೂ ಬುದ್ಧಿ-ಪ್ರದಾತೆ ಎಂಬುದಾಗಿ ಪ್ರಖ್ಯಾತಳು. ವಿದ್ಯಾರ್ಥಿಗಳಂತೂ ’ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ | ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ|| ಎಂಬ ಪ್ರಾರ್ಥನೆಯೊಂದಿಗೇ ಅಧ್ಯಯನವನ್ನು ಶುರು ಮಾಡುವುದು ವಾಡಿಕೆ. ವಾಣಿಯು ಪ್ರಾತಃ ಸ್ಮರಣೀಯಳು. ಬೆಳಗಾಗುತ್ತಲೆ ತೆರೆದ ಹಸ್ತ-ಸಂಪುಟವನ್ನು ಮುಖದೆದುರು ಹಿಡಿದು- “ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ | ಕರಮೂಲೇ ಸ್ಥಿಥಾ ಗೌರೀ ಪ್ರಭಾತೇ ಕರ (ಕುರು) ದರ್ಶನಂ ||” ಎಂಬುದಾಗಿ ದೇವೀತ್ರಯವನ್ನು ಸ್ಮರಿಸುತ್ತೇವೆ. ’ಸಿರಿ, ವಿದ್ಯೆ ಹಾಗೂ ಶಕ್ತಿ ದೇವತೆಗಳು ನಮ್ಮ ಕೈಯಲ್ಲೇ ಅಡಗಿದ್ದಾರೆ, ಪರಿಶ್ರಮ ಮಾಡಿದಲ್ಲಿ ಒಲಿಯುತ್ತಾರೆ’ ಎನ್ನುವ ಸಕಾರಾತ್ಮಕ ಭಾವ ಹಾಗೂ ಸ್ಫೂರ್ತಿಯೊಂದಿಗೆ ಹಾಸಿಗೆಯಿಂದೇಳುವ ಸುಂದರ ಸಂಸ್ಕೃತಿ ನಮ್ಮದು. ಸರಸ್ವತಿಯ ಸುಂದರ ಸ್ವರೂಪವನ್ನೀಗ ಅವಲೋಕಿಸೋಣ ಬನ್ನಿ.
ಸರಸ್ವತೀ ಪದಾರ್ಥ
ರಸೋ ವೈ ಸಃ ಎಂಬುದು ವೇದವಾಕ್ಯ. ಇಲ್ಲಿ, ’ರಸ’ ಎಂದರೆ ’ಬ್ರಹ್ಮಾನಂದ’. ’ಸ-ರಸ’ ಎಂದರೆ ’ರಸದಿಂದ ಕೂಡಿದ’ ಎಂದರ್ಥ. ಹಾಗಾಗಿ ’ಸರಸ್ವತೀ’ ಎಂದರೆ ’ಬ್ರಹ್ಮಾನಂದಸ್ವರೂಪಿಣಿ’ ಎಂದರ್ಥ. ಸರಸ್ವತೀ ಸೂಕ್ತ, ಮೇಧಾಸೂಕ್ತ ಮುಂತಾದವು ವೇದದಲ್ಲಿ ಕಾಣುವ ಈಕೆಯ ಸ್ತುತಿಗಳು. ಸರಸ್ವತಿಯೇ ಮೇಧಾದೇವಿಯಾಗಿ ನರನಲ್ಲಿ ಅಪ್ರತಿಮ ಪ್ರಜ್ಞಾನ ಶಕ್ತಿಯಾಗಿ ಅಡಗಿರುತ್ತಾಳೆ. ಈ ಮೇಧಾಶಕ್ತಿಯು ನಮ್ಮ ಕುತ್ತಿಗೆಯ ಹಿನ್ನಲೆಯ ಮೇಧಾನಾಡಿಯಲ್ಲಿ ಸುಪ್ತವಾಗಿದ್ದು, ಈಕೆಯ ಕೃಪೆಯಾದಾಗ ಜಾಗೃತವಾಗುತ್ತದೆ. ಆಗ ಮನುಷ್ಯ ಅಪಾರ ಅಂತರ್ದೃಷ್ಟಿ ಹಾಗೂ ಜ್ಞಾನಗಳನ್ನು ಹೊಂದಿ ’ಮೇಧಾವೀ’ ಎನಿಸುತ್ತಾನೆ ಎಂದು ಪರಂಪರೆಯ ನಂಬಿಕೆ. ಜಾತಕರ್ಮ ಮಾಡುವ ಸಂದರ್ಭದಲ್ಲೇ ನವಜಾತ ಶಿಶುವಿಗೆ, ಮನೋನ್ನತಿ, ವಿದ್ಯಾ-ಉನ್ನತಿಗಳನ್ನು ಕೋರಿ, ’ಮೇಧಾಜನನ’ ಎಂಬ ಸಂಸ್ಕಾರವನ್ನೂ ಮಾಡುವ ವೈದಿಕ ಪದ್ಧತಿಯೇ ಇದೆ. ಮೇಧೆಗೆ ನಮ್ಮ ಸಂಸ್ಕೃತಿಯಲ್ಲಿ ಕೊಟ್ಟ ಮಹತ್ವ ಇದರಿಂದ ಗೊತ್ತಾಗುತ್ತದೆ. ಬುದ್ಧಿ, ಜ್ಞಾನ, ಪ್ರತಿಭೆಗಳಿದ್ದಲ್ಲಿ ಸ್ಥಾನಮಾನ, ಹಣ-ಸಂಪದ-ಅಧಿಕಾರಗಳಿರುವವರೂ ತಲೆ ಬಾಗುತ್ತಾರೆ, ಗೌರವ ಸೂಚಿಸುತ್ತಾರೆ ಎಂದ ಮೇಲೆ ಮನುಷ್ಯ ಅಗ್ರಮಾನ್ಯನಾಗುವುದು ಸರಸ್ವತಿಯ ಅನುಗ್ರಹದಿಂದ ಮಾತ್ರ ಎಂದು ಗೊತ್ತಾಗುತ್ತದೆ.  
ವೇದದಲ್ಲಿ ಉಕ್ತವಾದ ’ವಾಕ್’ ಎಂಬ ದೇವತೆಯೂ ಸರಸ್ವತಿಯ ರೂಪವೆ. ’ವಾಕ್’ ಎಂದರೆ ಪ್ರಣವ, ಓಂಕಾರ. ಮನುಷ್ಯನಿಗೆ ಮಾತ್ರ ನಿಸರ್ಗವು ಪಾಲಿಸಿರುವ ನುಡಿಯುವ ಸಾಮರ್ಥ್ಯವೂ ಈ ವಾಕ್ ಎಂಬ ದೇವತೆಯ ಶಕ್ತಿಯೇ. ವಾಕ್ ಎಂದರೆ ವೇದ, ಮಂತ್ರ, ವಾಕ್ಚಾತುರ್ಯ, ವಿದ್ಯೆ, ಭಾಷೆ ಎಂಬ ಹಲವಾರು ಅರ್ಥಛಾಯೆಗಳಿವೆ. ಈ ಎಲ್ಲವನ್ನು ಒಳಗೊಂಡವಳೇ ಸರಸ್ವತಿ. ಈಕೆಯನ್ನು ಮುಂದೆ ಪುರಾಣಗಳಲ್ಲಿ ಬ್ರಹ್ಮನ ರಾಣಿಯಾದ ವಾಣಿಯಾಗಿ ಗುರುತಿಸಲಾಯಿತು.
ರಸ ಎಂದರೆ ರುಚಿ, ಬಣ್ಣ, ಆಸ್ವಾದ, ಸ್ವಾರಸ್ಯ, ಕಲಾತ್ಮಿಕತೆ ಎಂಬ ಅರ್ಥಛಾಯೆಗಳು ಸ್ಫುರಿಸುತ್ತವೆ. ಆದ್ದರಿಂದ ಸರಸ್ವತೀ ಎಂಬ ಪದವು ಸೌಂದರ್ಯ, ಸ್ವಾರಸ್ಯ, ಕಲಾಭಿಜ್ಞತೆ, ಆರ್ದ್ರವಾದದ್ದು (ನೀರು/ ಜಲಾಶಯಕ್ಕೆ ಸಂಬಂಧಿಸಿದ್ದು), ಆನಂದ ಮುಂತಾದ ಅರ್ಥಗಳನ್ನೂ ಒಳಗೊಳ್ಳುತ್ತದೆ. ಪುರಾಣಪ್ರಸಿದ್ಧ ಬ್ರಹ್ಮನ ರಾಣಿಯಾದ ವಾಣಿಯ ಸ್ವರೂಪ ಈ ಭಾವಾರ್ಥವನ್ನು ಒಳಗೊಂಡಿದೆ.
ಸರಸ್ವತಿಯನ್ನು ಶಾರದೆ ಎಂದೂ ಕರೆಯುವುದುಂಟು. ಶಾರದಾ ಎಂದರೆ ಶರದೃತುವಿನಲ್ಲಿ ಪೂಜಿಸಲಾಗುವವಳು ಎಂದರ್ಥ. ಇದಲ್ಲದೆ ಭಾರತೀ, ವಾಣಿ, ವಾಗ್ದೇವಿ, ವಿದ್ಯಾ, ಮೇಧಾ, ಬ್ರಹ್ಮಾಣೀ, ಬ್ರಾಹ್ಮೀ, ಎಂದೂ ಹಲವಾರು ಹೆಸರುಗಳು ಇವಳಿಗೆ.
ಸರಸ್ವತೀ ಸ್ವರೂಪ
ಕಾಳಿಕಾಪುರಾಣ, ದುರ್ಗಾಸಪ್ತಶತೀ ಮುಂತಾದ ಪುರಾಣಗಳಲ್ಲಿ ಉಲ್ಲೇಖವಾಗಿರುವ ’ಮಹಾಸರಸ್ವತಿ’ಯು ಕೇವಲ ಚತುರ್ಮುಖ ಬ್ರಹ್ಮನ ಮಡದಿಯಲ್ಲ, ಬದಲಾಗಿ ಆದ್ಯಾಶಕ್ತಿಯ ಮೂಲರೂಪತ್ರಯ (ಮಹಾಲಕ್ಷ್ಮೀ-ಮಹಾಕಾಳಿ- ಮಹಾಸರಸ್ವತಿ)ಗಳಲ್ಲೊಂದು. ಇವಳೇ ಕೊಟ್ಯನುಕೋಟಿ ಶಕ್ತಿರೂಪಗಳಲ್ಲಿ ವಿಸ್ತರಿಸಿ ಶುಂಭನಿಶುಂಭಾದಿ ಭಯಂಕರ ಅಸುರರನ್ನು ಸಂಹರಿಸಿ, ಸಕಲ ಲೋಕಗಳಿಗೆ ಅಭಯವಿತ್ತ ಅಪರಾಜಿತಾದೇವಿ.
ಇನ್ನು ನಮಗೆಲ್ಲ ಚಿರಪರಿಚಿತವಾದ ವಿದ್ಯಾಧಿದೇವತೆ ಸರಸ್ವತಿಯು ಚತುರ್ಮುಖ ಬ್ರಹ್ಮನ ರಾಣಿ. ಬ್ರಹ್ಮನು ಈಕೆಯನ್ನು ಸೃಷ್ಟಿಸಿದ. ಇವಳ ಚೆಲುವು, ಪ್ರತಿಭೆಗಳಿಗೆ ತಾನೇ ಮಾರು ಹೋಗಿ ಅವಳನ್ನೇ ತನ್ನ ಒಲವಿನ ಮಡದಿಯನ್ನಾಗಿಸಿಕೊಂಡನು ಎನ್ನುವ ಕಥೆಯೊಂದಿದೆ. ತಾತ್ವಿಕವಾಗಿ ನೋಡುವುದಾದರೆ, ಬಹ್ಮನು ಸೃಷ್ಟಿಕರ್ತ. ಸೃಷ್ಟಿ ಮಾಡಲು ಬೇಕಾಗುವುದು ಸರ್ಜನಶೀಲತೆ, ಜ್ಞಾನ ಮತ್ತು ನವನವೋನ್ಮೇಷಶಾಲಿನೀ ಪ್ರತಿಭೇ. ಇದೆಲ್ಲವೂ ಸರಸ್ವತಿಯ ಸ್ವರೂಪವೆ. ಆದ್ದರಿಂದ ಆಕೆಯೇ ಅವನ ಶಕ್ತಿ. ಆಕೆ ಅವನ ಬುದ್ಧಿಯಲ್ಲಿ, ಜಿಹ್ವೆಯಲ್ಲಿ ನೆಲೆಸಿ ಸರ್ಜನಶೀಲತೆಯನ್ನು ಪ್ರೇರೇಪಿಸಿ ಸೃಷ್ಟಿ ಮಾಡಿಸುತ್ತಾಳೆ. ಸಕಲ ಸೃಷ್ಟಿಗೆ ಮೂಲ ಓಂಕಾರ ಪ್ರಣವವೇ. ಈ ಓಂಕಾರವನ್ನು ಬ್ರಹ್ಮನು ತನ್ನೊಳಗೆ ಅನುಸಂಧಾನ ಮಾಡಿ, ಅದರ ಸತ್ವದಿಂದ ಹೊಮ್ಮಿದ ವೇದವನ್ನು ತನ್ನ ನಾಲ್ಕೂ ಮುಖಗಳ ಮೂಲಕ ನುಡಿಯುತ್ತ ಜಗತ್ತಿಗೆ ಕೊಟ್ಟನು ಎನ್ನಲಾಗುತ್ತದೆ. ಈ ನಾದಮಯ ಪ್ರಣವವನ್ನೇ ’ವಾಕ್’ ಎಂದೂ ಕರೆಯಲಾಗಿದೆ. ಈ ’ವಾಕ್’ ಅಥವಾ ’ಓಂಕಾರ’ವೇ ಸರಸ್ವತೀ ಸ್ವರೂಪ. ಆದ್ದರಿಂದ ಅವಳು ನಾದಬ್ರಹ್ಮಮಯೀ, ಓಂಕಾರರೂಪಿಣಿ. ನಾದವೇ ಸೃಷ್ಟಿಗೂ, ವೇದಕ್ಕೂ, ಸ್ವರಗಳಿಗೂ, ಭಾಷೆಗಳಿಗೂ, ಗಾನ ಹಾಗೂ ವಾದ್ಯಗಳ ಗೀತಸ್ವಾರಸ್ಯಕ್ಕೂ ಮೂಲ. ಹಾಗಾಗಿ ಈ ಎಲ್ಲ ಪ್ರಕಲ್ಪಗಳಿಗೂ ಸರಸ್ವತಿಯೇ ಅಧಿಷ್ಠಾತೃದೇವತೆ.
ನಾವು ಪೂಜಿಸುವ ಸರಸ್ವತಿಯ ಪ್ರಸಿದ್ಧ ರೂಪದಲ್ಲಿ ಈ ಎಲ್ಲ ಅಂಶಗಳು ಬಿಂಬಿತವಾಗಿವೆ. ಆಕೆಗೆ ಚತುರ್ಭುಜಗಳು. ಒಂದರಲ್ಲಿ ವೇದಗ್ರಂಥವನ್ನು ಹಿಡಿದಿರುತ್ತಾಳೆ. ಪರಾಪರಾವಿದ್ಯೆಗಳೆಲ್ಲ ಅವಳ ಸ್ವರೂಪವೇ ಆಗಿದ್ದು, ಅವಳ ಅನುಗ್ರಹದಿಂದ ಮಾತ್ರ ಅವುಗಳು ಲಭ್ಯ ಎನ್ನುವುದನ್ನು ಇದು ಸೂಚಿಸುತ್ತದೆ. ಇನ್ನೊಂದು ಕೈಯ್ಯಲ್ಲಿ ಅಕ್ಷಮಾಲೆಯನ್ನು ಹಿಡಿದಿದ್ದಾಳೆ. ಪರಬ್ರಹ್ಮದ ಅನುಸಂಧಾನ ಮಾಡುವ ಸಂಸ್ಕಾರವನ್ನು, ಸಿದ್ಧಿಯನ್ನೂ ಈಯುವವಳೂ ಅವಳೇ ಎನ್ನುವುದು ಇಲ್ಲಿ ಸೂಚ್ಯ. ಸರಸ್ವತಿಯು ಒಯ್ಯಾರದ ಭಂಗಿಯಲ್ಲಿ ಕುಳಿತು ಕರದಲ್ಲಿ ಸುಂದರವಾದ ವೀಣೆಯನ್ನು ನುಡಿಸುತ್ತಾಳೆ. ವೀಣೆಯು ಸಕಲ ಲಲಿತ ಕಲೆಗಳ ಪ್ರತಿನಿಧಿಯೂ ಹೌದು, ಮಾನವ ಕುಂಡಲಿನೀ ದಂಡದ ಪ್ರತೀಕವೂ ಹೌದು. ಆದ್ದರಿಂದ ಆಕೆ ಸಕಲ ಲಲಿತ ಕಲೆಗಳಲ್ಲಿ ರುಚಿಯನ್ನೂ, ನೈಪುಣ್ಯವನ್ನೂ ಸಿದ್ಧಿಯನ್ನೂ ಪ್ರಸಾದಿಸುವವಳು, ನಮ್ಮ ಕುಂಡಲಿನಿಯ ಊರ್ಧ್ವಗತಿಗೂ ಅವಳೇ ಪ್ರೇರಕಳು. ಭಾರತೀಯ ಹೃದಯದ ಪಾಲಿಗೆ ಕಲೆಯು ಕೇವಲ ಮನೋರಂಜಕ ವಿಷಯವಲ್ಲ. ಬದಲಾಗಿ ಅನನ್ಯ ಪ್ರೀತಿ ಹಾಗೂ ಶ್ರದ್ಧೆಗಳಿಂದ ಸಾಧನೆ ಗೈಯುವವರಿಗೆ ಅಧ್ಯಾತ್ಮದ ಆನಂದದಲ್ಲೇ ಪರ್ಯವಸಾನ ಮಾಡಿಸುವ ಉಪಾಸನಾ ಸ್ವರೂಪ. ಅವಳ ಕೈಯಲ್ಲಿನ ಶುಕವು ಜ್ಞಾನ ಮತ್ತು ಅಂತರ್ದೃಷ್ಟಿಗಳನ್ನು ಸೂಚಿಸುತ್ತದೆ. ಅಂತೆಯೇ ಮಧುರ ವಾಕ್ಚಾತುರ್ಯಕ್ಕೂ ಅದು ಸಂಕೇತವಾಗಿದೆ. ಅವಳ ರೂಪದ ಕುರಿತಾದ ಪ್ರಸಿದ್ಧ ಸ್ತುತಿ ಇಂತಿದೆ-
ಶ್ವೇತಪದ್ಮಾಸನಾ ದೇವಿ ಶ್ವೇತಪುಷ್ಪೋಪಶೋಭಿತಾ | ಶ್ವೇತಾಂಬರಧರಾ ಶುಭ್ರಾ ಶ್ವೇತಗಂಧಾನುಲೇಪನಾ |
ಶ್ವೇತಾಕ್ಷಸೂತ್ರಹಸ್ತಾ ಚ ಶ್ವೇತಚಂದನಚರ್ಚಿತಾ | ಶ್ವೇತವೀಣಾಧರಾ ಶುಭ್ರಾ ಶ್ವೇತಾಲಂಕಾರಭೂಷಿತಾ ||

ಅವಳೂ ಶುಭ್ರ, ಅವಳು ಕುಳಿತ ಪದ್ಮವು, ಮುಡಿದ ಪುಷ್ಪಗಳು, ಧರಿಸಿದ ವಸ್ತ್ರವು, ಪೂಸಿಕೊಂಡ ಗಂಧ-ಚಂದನಗಳು, ಹಿಡಿದ ಅಕ್ಷಮಾಲೆಯು, ನುಡಿಸುವ ವೀಣಾದಂಡವೂ, ಮತ್ತು ಅವಳು ಧರಿಸಿದ ಎಲ್ಲ ಭೂಷಣಾಲಂಕಾರಗಳು ಶುಭ್ರಶ್ವೇತವರ್ಣದವು. ಮುತ್ತು, ಬೆಳ್ಳಿ, ವಜ್ರಗಳ ಶುಭ್ರಕಾಂತಿಯಿಂದ ಶೋಭಿಸುವವಳು ಅವಳು.  ಒಟ್ಟಿನಲ್ಲಿ ಅವಳು ’ಸರ್ವಶುಕ್ಲಾ ಸರಸ್ವತಿ’, ಎಂದರೆ ಶುದ್ಧಸತ್ವಮಯೀ.
ಅವಳ ಪಾದಪದ್ಮಗಳನ್ನು ಸಿದ್ಧಗಂಧರ್ವರು ವಂದಿಸುತ್ತಾರೆ, ಸುರ-ನರ-ದಾನವರು, ಋಷಿಮುನಿಗಳು ಸ್ತುತಿಸಿ ಪೂಜಿಸುತ್ತಾರೆ. ಅವಳೆ ನಮ್ಮ ಜಾಢ್ಯವನ್ನು ನಿಃಶೇಷವಾಗಿ ಪರಿಹರಿಸಬಲ್ಲಳು, ಬುದ್ಧಿಯಲ್ಲಿ ಮಾತಿನಲ್ಲಿ ಚಾತುರ್ಯವನ್ನು ಲಾಲಿತ್ಯವನ್ನೂ ತುಂಬುವವಳು. ಅವಳ ಅನುಗ್ರಹವಿಲ್ಲದಿದ್ದಲ್ಲಿ ನಮಗೆ ಸಿಗುವ ಸಿರಿ ಸಂಪದ ಸ್ಥಾನಮಾನಗಳು ಅಪವ್ಯಯವೂ ವ್ಯರ್ಥವೂ ಆಗುತ್ತವೆ. 
ಇವಳು ವಾಗ್ದೇವತೆ
ಸರಸ್ವತಿಯು ವಾಗ್ದೇವತೆ. ನಮ್ಮಿಂದ ಹೊಮ್ಮುವ ನಾದವು ಅವಳ ಸ್ವರೂಪವೇ. ಅಕ್ಷರಗಳನ್ನೂ, ನಾದವನ್ನೂ ಅರ್ಥವರಿತು, ಕ್ರಮದಲ್ಲಿ ಶ್ರದ್ಧೆಯಿಂದ ಉಚ್ಚರಿಸಿದರೆ ಅದು ಮಂತ್ರತ್ವವನ್ನು ಪಡೆದು, ದೇವತೆಗಳ ಅನುಗ್ರಹವನ್ನು ನಮಗೆ ದೊರಕಿಸಿಕೊಡುತ್ತದೆ. ಆದ್ದರಿಂದಲೇ ’ಮಾತೇ ಸರಸ್ವತೀ-ಮಾತೆ’ ಎಂಬ ಭಾವದಿಂದ ಮಾತನ್ನು ಸತ್ಯ, ಸಂಸ್ಕೃತಿ ಹಾಗೂ ಪ್ರಾಮಾಣಿಕತೆಗಳಿಂದ ಕಾಪಾಡಿಕೊಂಡು ಬಂದಿದೆ ನಮ್ಮ ಋಷಿಪರಂಪರೆ. ಸತ್ಯವೂ, ಪ್ರಿಯವೂ ಆದದ್ದನ್ನು ಶುದ್ಧ ಸುಸಂಕೃತರೂಪದಲ್ಲಿ ನುಡಿಯುವುದೇ ಒಂದು ತಪಸ್ಸು. ಅದೇ ಸರಸ್ವತಿಯ ಆರಾಧನೆ ಎಂಬ ಸಾತ್ವಿಕ ನಂಬಿಕೆ ಇಂದಿಗೂ ಸುಜನರಲ್ಲಿದೆ. ಸರಸ್ವತಿಯು ನಮ್ಮ ಬುದ್ಧಿಯಲ್ಲಿ ವಿಚಾರವಾಗಿ ನಿಂತು, ನಾಲಿಗೆಯಲ್ಲಿ ಮಾತಾಗಿ ನಿಂತು ನಮ್ಮ ಜೀವನ, ಭಾವನೆ ಸಂಬಂಧಗಳನ್ನು ಪ್ರಭಾವಗೊಳಿಸುತ್ತಾಳೆ. ಹಾಗಾಗಿ ’ಮಾತನ್ನು’ ಸರಸ್ವತೀ ಎಂಬ ಪೂಜ್ಯ ಭಾವದಿಂದ ಕ್ರಮವರಿತು, ಸತ್ಯವನ್ನು ಬಿಡದೆ, ಹದದಿಂದ ಶ್ರದ್ಧೆಯಿಂದ ಬಳಸಬೇಕು.
ನಾದೋಪಾಸನ ಎಂದರೆ ಶಬ್ದ ಬ್ರಹ್ಮವಾದನ್ನು ಓಂಕಾರಾನುಸಂಧಾನ ಎಂದರ್ಥ. ಅಂತೆಯೇ ಅದರ ಅಂತರ್ಬಹಿರಂಗದ ಸ್ವರೂಪಗಳಾದ ಮಾತುಗಾರಿಕೆ, ಕಾವ್ಯ, ಸಂಗೀತ, ವಾಕ್-ಕೌಶಲ, ಮುಂತಾದ ಪ್ರತಿಭಾಶಕ್ತಿವಿಶೇಷಗಳ ಸಾಧನೆಯೂ ಹೌದು. ಹಾಗಾಗಿಯೇ ವೇದ ಹಾಗೂ ಓಂಕಾರೋಪಾಸಕರನ್ನಲ್ಲದೆ, ಸಂಗೀತಸಾಧಕರನ್ನೂ ’ನಾದತಪಸ್ವಿ’ಗಳು ಎಂದು ಗುರುತಿಸಲಾಗುತ್ತದೆ. ಬಹುಶಃ ಕಲೆಗೆ ಕೇವಲ ಮನೋರಂಜನೆಯ ಪಟ್ತ ಕಟ್ಟದೆ, ದೈವೀ ಸ್ವರೂಪದ ಎತ್ತರಕ್ಕೆ ಭಾವಿಸಿ ಅನುಭವಿಸಿದ ಹೆಗ್ಗಳಿಕೆ ಕೇವಲ ನಮ್ಮ ಸನಾತನ ಧರ್ಮದ್ದು.
ವಾಗ್ಭೂಷಣಂ ಭೂಷಣಂ
ರಾಜಾ ಭರ್ತೃಹರಿಯು ಎಲ್ಲ ಒಡವೆಗಳಿಗಿಂತ ಅತ್ಯುತ್ಕೃಷ್ಟವಾದದ್ದು ಮಾತು ಎಂಬ ಒಡವೆ ಎನ್ನುತ್ತಾನೆ- ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾಧಾರ್ಯತೆ---- ವಾಗ್ಭೂಷಣಂ ಭೂಷಣಂ ಎಂದಿದ್ದಾನೆ.. ಸುಸಂಸ್ಕೃತವಾದ ಮಾತಿನ ಕೌಶಲವು ಮನುಷ್ಯನಿಗೆ ತರುವ ವರ್ಚಸ್ಸನ್ನು ಬೇರಾವ ಲೇಪನ, ಒಡವೆಗಳು ಕೊಡಲಾರವು. ಸರಸ್ವತಿಯ ಅನುಗ್ರಹವಾದರೆ ಮನುಷ್ಯನಿಗೆ ವಿದ್ಯಾಸಂಪತ್ತು ದಕ್ಕುತ್ತದೆ. ’ಕಳ್ಳರು ಕದಿಯಲಾಗದ, ತೆರಿಗೆ ಪಾವತಿಯ ಭಯವಿಲ್ಲದ, ಎಷ್ಟು ಬಳಸಿದರೂ ಕಡಿಮೆಯಾಗದ, ಹಂಚಿಕೊಂಡಷ್ಟೂ ವೃದ್ದಿಯಾಗುತ್ತ ಹೋಗುವ, ಮಾನ ಸಮ್ಮಾನಗಳನ್ನು, ಐಶ್ವರ್ಯವನ್ನೂ, ಧನ್ಯತೆಗಳನ್ನು ಹೆಚ್ಚಿಸುವ ’ವಿದ್ಯೆ’ ಎನ್ನುವ ಧನವು ಬೇರೆಲ್ಲ ಧನಗಳಿಗಿಂತ ಉತ್ತಮವಾದ್ದದ್ದು’ ಎನ್ನುತ್ತಾನೆ.
ವಿದ್ಯಾ ಪ್ರತಿಭೆಗಳು ಸೀಮಾತೀತ ಖ್ಯಾತಿ ಹಾಗೂ ಘನತೆ-ಗೌರವಗಳನ್ನು ದೊರಕಿಸಿಕೊಡುದುವಂತಹವು. ವಿದ್ವಾಂಸನಿಗೆ, ಕಲಾವುದನಿಗೆ ಜಗತ್ತಿನ ಎಲ್ಲೆಡೆಗಲಲ್ಲೂ ಬೇಡಿಕೆ, ಗೌರವ ಇದ್ದೇ ಇರುತ್ತದೆ. ---ಸ್ವದೇಶೇ ಪೂಜ್ಯತೆ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೆ || (ರಾಜನಿಗೆ ತನ್ನ ದೇಶದಲ್ಲಿ ಮಾತ್ರ ಮಾನ್ಯತೆ, ಆದರೆ ವಿದ್ವಾಂಸನಿಗೆ ಸರ್ವತ್ರ ಮಾನ್ಯತೆ ಇರುತ್ತದೆ) ಎನ್ನುವ ಮಾತನ್ನು ಸ್ವಾನುಭವದಿಂದ ಮೈಸೂರಿನ ಮಹಾರಾಜರಾಗಿದ್ದ ಚಾಮರಾಜೇಂದ್ರ ಒಡೆಯುರು ಹೇಳಿದ್ದರು.
ಮನುಷ್ಯ ತನ್ನ ಸ್ಥಾನ ಮಾನ ಸಿರಿ ಅಧಿಕಾರ ವೈಭವಗಳನ್ನು ಬದುಕಿರುವವರೆಗೂ ಮಾತ್ರ ಅನುಭವಿಸುತ್ತಾನೆ, ಆದರೆ ಅವನ ನಂತರ ಅದೆಲ್ಲ ಅವನ ಪಾಲಿಗೆ ಇಲ್ಲವಾಗುತ್ತವೆ., ಆದರೆ ಆತ ಬದುಕಿದ್ದಾಗ ವಿದ್ಯೆ, ಕಲೆ, ಬುದ್ಧಿ ಚಾತುರ್ಯಗಳನ್ನು ಮೆರೆದು ಬಿಟ್ಟು ಹೋಗುವ ಕಾವ್ಯ, ಸಾಹಿತ್ಯ, ಶಾಸನ, ಕಲಾಕೃತಿಗಳ ಪರಂಪರೆಗಳು ಅಥವಾ ಯಾವುದೇ ವಿದ್ಯಾಕ್ಷೇತ್ರದ ಸಾಧನೆಯಾಗಲಿ ಜ್ಞಾನನಿಧಿಯಾಗಲಿ ಆಚಂದ್ರಾರ್ಕವಾಗಿ ಅಮರವಾಗಿ ಉಳಿಯುತ್ತವೆ.
ಸರ್ವಭಾಷಾಮಯೀ ಸರಸ್ವತೀ
ಸಂವಹನ ಎನ್ನುವುದು ಮನುಷ್ಯ ಜೀವನದಲ್ಲಿ ಅತ್ಯುನ್ನತ ಮಹತ್ವವನ್ನು ಪಡೆದಿರುವಂತಹದ್ದು. ಆಡುಭಾಷೆಯಾಗಿ, ಸಾಹಿತ್ಯಾದಿ ಪ್ರಕಾರಗಳಾಗಿ ಅದು ಮಾನವಕೋಟಿಯ ಜೀವನಕ್ಕೆ ಆಧಾರವಾಗಿದೆ. ಭಾಷೆ ಎನ್ನುವುದೆ ಮನುಷ್ಯ ಜೀವನಕ್ಕೆ ಒಂದು ಒದಗಿರುವ ಅದ್ಭುತ ಕೃಪೆ. ಮನುಷ್ಯನನಿಗೆ ಉಪಕರಿಸಲು ಇಂದು ಕೋಟಿಗಟ್ಟಲೆ ಭಾಷೆಗಳು ನಿರ್ಮಾಣವಾಗಿವೆ, ಸದಾ ವಿಕಾಸವೂ ಆಗುತ್ತಿವೆ. ಸರ್ವಭಾಷೆಗಳು ಸರಸ್ವತೀ ಸ್ವರೂಪಗಳೇ ಆದ್ದರಿಂದ ಎಲ್ಲವೂ ಪೂಜ್ಯ, ಅಲ್ಲಿ ತಾರತಮ್ಯ ಸಲ್ಲ. ಏಕೆಂದರೆ ನಾದಮಯವಾಗಿ ಹೊಮ್ಮುವ ವಾಗ್ಧಾರೆಯೆಲ್ಲವೂ ವಾಣಿಯೇ, ಪೂಜ್ಯವೇ.
ನುಡಿಯನ್ನು ಸರಸ್ವತೀ ಎಂದು ಗೌರವಿಸುವ ಭಾವ ಭಾರತೀಯರಲ್ಲಿ ಅನಾದಿ ಕಾಲದಿಂದ ಬೆಳೆದು ಬಂದಿದೆ. ಹಾಗಾಗಿಯೇ ಭಾರತದ ಎಲ್ಲೆಡೆಗಳಲ್ಲೂ ಬಹುಭಾಷಾ ಸಂಸ್ಕೃತಿಯೇ ಕಾಣಬರುತ್ತದೆ. ಕೆಲವೇ ದಶಕಗಳ ಹಿಂದೆಯಷ್ಟೇ ಈ ಭಾಷಾಧಾರಿತ ರಾಜಕೀಯ ಸೀಮೆಗಳು ಬಂದಿರುವಂತಹವು. ಆದರೆ ಹಿಂದೆಯೂ ಇಂದೂ ಎಂದೆಂದೂ ನೆರೆಹೊರೆಯ ರಾಜ್ಯಗಳ ಭಾಷೆಗಳನ್ನು ಪ್ರೀತಿಸುವ, ಕಲಿತು ಸಿದ್ಧಿಸಿಕೊಳ್ಳುವ ಔದಾರ್ಯವು, ಹವ್ಯಾಸವು ಭಾರತದಾದ್ಯಂತ ಭರದಿಂದ ಮುಂದುವರೆದಿದೆ. ಕನಿಷ್ಟ ಎರಡು ಮೂರು ಭಾಷೆಗಲನ್ನು ಬಲ್ಲದ ಭಾರತೀಯರ ಸಂಖ್ಯೆ ಕಡಿಮೆಯೇ. ವ್ಯಕ್ತಿಯು ಎಷ್ಟು ಭಾಷೆಗಳನ್ನು ಬಲ್ಲನೋ ಆತನ ವಿದ್ಯಾವ್ಯಾಪ್ತಿ, ಘನತೆ, ಹಾಗೂ ಜನಪ್ರಿಯತೆಗಳು ಅಷ್ಟು ಹೆಚ್ಚುತ್ತವೆ.
ಐರೋಪ್ಯ ದೇಶಗಳಲ್ಲಿ ಅನಾದಿಯಿಂದಲೂ ಭಾಷಾಧಾರಿತ ದ್ವೇಷವು ಜನಾಂಗದ್ವೇಷವಾಗಿ ತಿರುಗಿ ಅಪಾರ ಅಸಹಿಷ್ಣುತೆ ಹಾಗೂ ರಣಪಾತಕಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ಸ್ವಾತಂತ್ರ್ಯಾನಂತರದ ಭಾರತಕ್ಕೂ ಈ ರೋಗ ಸಂಕ್ರಮಿಸಿ, ಭಾಷಾಧಾರಿತ ಜನಾಂಗ ದ್ವೇಷ ತಲೆಯೆತ್ತಿ ವಿದ್ಯಾವಂತ ವರ್ಗಗಳೂ ಸೇರಿದಂತೆ ಹಲವರ ಹೃನ್ಮನಗಳನ್ನು ಹಾಳುಗೆಡವುತ್ತಿರುವುದು ದುಃಖದ ವಿಷಯ. ಮನುಷ್ಯ ಮಾಡುವ ಪಾಪದ ಹೊಣೆಯನ್ನು ಸರಸ್ವತೀ ಸ್ವರೂಪವಾದ ಭಾಷೆಗೆ ಕಟ್ಟಿ ಅದನ್ನು ನಿಷ್ಕಾರಣವಾಗಿ ದ್ವೇಷಿಸುವುದು ಒಂದು ಪಾತಕ, ಸರಸ್ವತಿಗೆ ಮಾಡುವ ಅಪಚಾರ. ಇದರಿಂದ ನಮ್ಮ ಭಾವನೆಯೂ ಸಂಕುಚಿತವೂ ಅಸ್ವಸ್ಥವೂ ಆಗುವುದಲ್ಲದೆ ದೇಶವೂ ದುರ್ಬಲವಾಗುತ್ತದೆ. ನುಡಿಯನ್ನೇ ದೇವಿ ಎಂದು ಆರಾಧಿಸುವ ನಾವೂ ಸರ್ವಥಾ ಈ ಅಸಹಿಷ್ಣುತೆ ಭೇದಬುದ್ಧಿಗಳ ಪಾಪಬುದ್ಧಿಯನ್ನು  ತ್ಯಜಿಸಬೇಕು. ಜೊತೆಗೆ ಕ್ರೌರ್ಯ, ಸ್ವಾರ್ಥ, ಚಾಡಿ, ಅಶ್ಲೀಲತೆ, ಅಸಡ್ಡೆ ಮುಂತಾದ ಕೊಳೆಯನ್ನು ಆಗಾಗ ತೊಳೆದು ನಮ್ಮ ಮಾತನ್ನು ಶುದ್ಧವಾಗಿ ಸುಸಂಸ್ಕೃತವಾಗಿರಿಸಿಕೊಳ್ಳಬೇಕು. ಏಕೆಂದರೆ ಮಾತೆಂಬ ಮಹಾಶಕ್ತಿಯ ಅಪಬಳಕೆಯಿಂದ ಅಶಾಂತಿ, ಕಲಹ, ಭೇದಭಾವಗಳು ಹೆಚ್ಚುತ್ತವೆ. ಆದರೆ ಅದೇ ಮಾತೆಂಬ ದಿವ್ಯಶಕ್ತಿಯನ್ನು ಅರಿತು ಗೌರವದಿಂದ ಬಳಸಿದಾಗ ಜೀವನ, ಭಾವನೆ, ಸಂಬಂಧಗಳು, ಸುಂದರವಾಗುತ್ತವೆ. ಗಂಭೀರವಾದ ಮನನ ಮಾಡಿದಾಗ ಮಾತಿನಲ್ಲಿನ ಅಂತರ್ಗತ ಮಂತ್ರತ್ವ ಶಕ್ತಿಯು ಸಾಕ್ಷಾತ್ಕೃತವಾಗಿ ಆಧ್ಯಾತ್ಮಿಕ ಸಿದ್ಧಿಯನ್ನು ತರುತ್ತದೆ.  
ಸರಸ್ವತಿಯ ಹಬ್ಬಗಳು
ಶರದೃತುವಿನ ನವರಾತ್ರದಲ್ಲಿ ಶುಂಭಾದಿ ಅಸುರಮರ್ದಿನಿಯಾದ ಮಹಾಸರಸ್ವತಿಯು ’ಅಪರಾಜಿತಾ’ ಎನ್ನುವ ನಾಮದಿಂದ ಪೂಜಿಸಲ್ಪಡುತ್ತಾಳೆ. ಶರನ್ನವರಾತ್ರದ ಷಷ್ಟೀ ತಿಥಿಯಂದು ಅಥವಾ ಮೂಲಾನಕ್ಷತ್ರದ ಯೋಗದಲ್ಲಿ ವಿದ್ಯಾಧಿದೇವಿಯಾದ ಸರಸ್ವತಿಯು ಪುಸ್ತಕ ಮತ್ತು ವಾದ್ಯ ಸಮೂಹದಲ್ಲಿ ಕುಳಿತು ನಮ್ಮ ಪೂಜೆಯನ್ನು ಸ್ವೀಕರಿಸುತ್ತಾಳೆ. ವಸಂತ-ಋತುವಿನ ನವರಾತ್ರದಲ್ಲಿ ಕಲಾಧಿದೇವಿ ಸರಸ್ವತಿಯನ್ನು ಆರಾಧಿಸುವ ಪದ್ಧತಿ ಪೂರ್ವೋತ್ತರ ಭಾರತದಲ್ಲಿ ಹೆಚ್ಚು. ವಸಂತ ಮಾಸವೆಲ್ಲ ಸರಸ್ವತಿಯ ವಿಲಾಸದ ಕಾಲ ಎನ್ನಬಹುದು. ವೇದಕಾಲದಿಂದಲೂ ವಸಂತವು ಉತ್ಸವದ ಕಾಲವಾಗಿ ಆಚರಿಸಲಾಗಿದೆ. ಎಲ್ಲೆಲ್ಲೂ ಸಾಹಿತ್ಯ, ಕಾವ್ಯ, ಸಂಗೀತ, ನೃತ್ಯ, ನಾಟಕ ಮುಂತಾದ ಬಣ್ಣಬಣ್ಣದ ಕಲಾಪಗಳು ನಡೆದಿದ್ದು ಎಲ್ಲ ಬಗೆಯ ಕುಶಲ ಹಾಗೂ ಲಲಿತ ಕಲೆಗಳು, ಪ್ರತಿಭೆ, ವಿದ್ಯೆ, ಸಾಹಸಗಳೂ, ಕ್ರೀಡೆಗಳೂ ನಡೆದು ಅಮಿತ ಸಂಭ್ರಮ ಸಡಗರಗಳ ಭಾವದಲ್ಲಿ ಜನತೆಯನ್ನು ಮುಳುಗೇಳಿಸುವ ಸಂತಸದ ಕಾಲ. ಈ ಸಂದರ್ಭದಲ್ಲೇ ಸರಸ್ವತೀ ಸಂತಾನವಾದ ಕಲಾವಿದರಿಗೆ, ಕವಿಗಳಿಗೆ, ಸಾಹಿತಿಗಳಿಗೆ ಹಾಗೂ ಯಾವುದೆ ವಿದ್ಯೆ ಸಾಹಸ ಪ್ರತಿಭೆಗಳನ್ನು ಮೆರೆಯುವ ಕುಶಲರಿಗೆ ವಿಶೀಷ ಸಮ್ಮಾನ, ಸಂಭಾವನೆ ಪ್ರಶಸ್ತಿಗಳನ್ನಿತ್ತು ಗೌರವಿಸಿ ತನ್ಮೂಲಕ ಸರಸ್ವತಿಗೆ ಗೌರವವನ್ನು ಸಲ್ಲಿಸಲಾಗುತ್ತದೆ. ಯಾವುದೇ ವಿದ್ಯೇ ಅಥವಾ ಕಲೆಗಳಲ್ಲಿ ಅಪ್ರತಿಮ ನೈಪುಣ್ಯವನ್ನು ಮೆರೆದವರನ್ನು ಆಯಾ ಕ್ಷೇತ್ರದ ’ಸರಸ್ವತೀ’ ಎನ್ನುವ ಬಿರುದಿನಿಂದ ಗೌರವಿಸುವುದೂ ಉಂಟು. ಉದಾಹರಣೆಗೆ- ’ಗಾನ ಸರಸ್ವತೀ’,’ ಕಾವ್ಯಸರಸ್ವತೀ’, ’ನೃತ್ಯಸರಸ್ವತೀ’, ಇತ್ಯಾದಿ.
ಹಾಗೆ ನೋಡಿದರೆ ಎಲ್ಲ ಹಬ್ಬ ಹರಿದಿನಗಳಲ್ಲೂ ಸರಸ್ವತೀ ಸ್ವರೂಪಗಳಾದ ಕಾವ್ಯ, ಗೀತ ನೃತ್ಯಗಳದ್ದೇ ಸಂಭ್ರಮ! ದೇವರ ಷೋಡಷೋಪಚಾರ ಪೂಜೆಯ ವೇಳೆಯಲ್ಲೂ ಸಂಗೀತ ಸೇವೆ, ನೃತ್ಯಸೇವೆ, ವಾದ್ಯ ಸೇವೆ, ವೇದಪಠಣ ಮುಂತಾದವುಗಳನ್ನು  ನಾವು ಕಲಿತ ವಿದ್ಯೆಗಳನ್ನು ದೇವರ ಮುಂದೆ ನಿದರ್ಶಿಸುತ್ತೇವೆ. ಹೀಗೆ ನಮ್ಮ ಜೀವನದಲ್ಲಿ ಆರಾಧನೆಯಲ್ಲಿ ಕಲಾಪಗಳಲ್ಲೆಲ್ಲ ಸರಸ್ವತಿಯ ಸೌರಭ ತುಂಬಿ ತುಳುಕುತ್ತಲೆ ಇರುತ್ತದೆ. ಅವಳು ಸರ್ವಸ್ವರೂಪಳು, ಸರ್ವತ್ರ ವಿಲಾಸಿಸುವವಳು. ಸದಾ ಪೂಜ್ಯಳು, ಧ್ಯೇಯಳು, ಸಾಧ್ಯಳು. 
ಸರಸ್ವತೀ ನದಿ
ಇನ್ನು, ರಸ ಎಂದರೆ ’ನೀರು’ ಎಂದೂ ಅರ್ಥವಿದೆ. ಹಾಗಾಗಿ ’ಸರಸ್’ ಎಂದರೆ ಸರೋವರ, ಸಾಗರ ಮುಂತಾದ ನೀರಿನ ಜಲಾಶಯಗಳು ಎಂದೂ ಅರ್ಥವುಂಟು. ಹಾಗಾಗಿ ಸರಸ್ವತೀ ಎಂದರೆ ನದೀ ಅಥವಾ ಸರೋವರಕ್ಕೆ ಸಂಬಂಧಿಸಿದವಳು. ಈ ಅರ್ಥದಲ್ಲಿ ಈಕೆ ಹಿಮಾಲಯದ ಸರೋವರಗಳಲ್ಲಿ ಉಗಮಿಸಿ ಉತ್ತರ-ಪಶ್ಚಿಮ ಭಾರತದ ಹೃದಯಭಾಗದಲ್ಲಿ ಧುಮ್ಮಿಕ್ಕಿ ಹರಿದು ಸಿಂಧುಸಾಗರವನ್ನು ಸೇರುತ್ತಿದ್ದ ಪ್ರಾಚೀನ ಮಹಾನದಿ ಸರಸ್ವತಿ. ಈ ನದಿಯ ಕುರಿತಾಗಿ ವೇದಗಳಲ್ಲಿ ’ಅಂಬಿತಮೇ ದೇವಿತಮೇ ನದೀತಮೇ ಸರಸ್ವತಿ” (ತಾಯಿಯರಲ್ಲಿ, ದೇವಿಯರಲ್ಲಿ, ನದಿಗಳಲ್ಲಿ ಸರ್ವೋತ್ತಮಳಾದವಳು ಸರಸ್ವತೀ) ಎನ್ನುವ ಉಕ್ತಿಯುಂಟು. ಅನೇಕ ಪುರಾಣಗಳಲ್ಲಿ ಹಾಗೂ ಮಹಾಭಾರತದಲ್ಲೂ ಸರಸ್ವತೀ ನದಿಯ ಹಲವಾರು ಉಲ್ಲೇಖಗಳಿವೆ.
ಇಂದು ಗಂಗಾನದಿಗೆ ಇರುವ ಅಗ್ರಸ್ಥಾನ ಅತಿಪ್ರಾಚೀನ ಯುಗದಲ್ಲಿ ಸರಸ್ವತೀ ನದಿಗಿತ್ತು. ಆ ಕಾಲದಲ್ಲಿ ಗಂಗೆಯು ಚಿಕ್ಕದಾಗಿದ್ದು, ಸರಸ್ವತಿಯೇ ಗಾತ್ರದಲ್ಲೂ ಖ್ಯಾತಿಯಲ್ಲೂ ದೊಡ್ಡದಾದ ನದಿ. ಆದರೆ ಕಾಲಾಂತರದಲ್ಲಿ ಉಂಟಾದ ಪ್ರಚಂಡ ನೈಸರ್ಗಿಕ ಬದಲಾವಣೆಗಳಿಗೆ ತುತ್ತಾಗಿ ಸರಸ್ವತಿಯ ಮಹಾಸ್ರೋತ ತುಂಡು ತುಂಡಾಗಿ ಉಪನದಿಗಳಲ್ಲಿ ಹರಿದು ಗಂಗೆ ಯಮುನಾ ಹಾಗೂ ಇತರ ನದಿಗಳಲ್ಲಿ ಬೆರೆತು ಹೋಯಿತು, ಹಾಗಾಗಿ ಅದು ಏಕಮೇವ ಮಹಾನದಿಯಾಗಿ ಸಿಂಧುಸಾಗರದವರೆಗೂ ಹರಿಯಲಾಗದೆ ಅಲ್ಲಲ್ಲೇ ಕವಲೊಡೆದು, ಅಥವಾ ಬತ್ತಿ ಅಥವಾ ಹಿಂಗಿ ತನ್ನ ಉಪನದಿಗಳ ರೂಪದಲ್ಲಿ ಮಾತ್ರವೆ ಉಳಿದುಕೊಂಡಿದೆ ಎಂದು ವೈಜ್ಞಾನಿಕ ಸಂಶೋಧನೆಗಳು ಸ್ಪಷ್ಟ ಪಡಿಸಿವೆ. ಸರಸ್ವತೀ ನದಿಯು ಹಾದು ಹೋಗುತ್ತಿದ್ದ ಪಥದ ಅಧಿಕೃತ ಚಿತ್ರ ಸ್ಯಾಟಿಲೈಟ್ ಮೂಲಕ ತೆಗೆಯಲಾಗಿದ್ದು ಇಂದು ಅಂತರ್ಜಾಲದಲ್ಲೂ ಲಭ್ಯವಿದೆ.  
ಇಂದಿಗೂ ಸರಸ್ವತೀ ನದಿಯ ಮಾರ್ಗದ ಇಕ್ಕೆಲಗಳಲ್ಲಿ ಸೋಂಪಾಗಿ ಬೆಳೆದ ವನ್ಯ ಸಂಪತ್ತನ್ನೂ, ಸ್ವಲ್ಪ ಅಗೆದರೂ ವಿಪುಲವಾಗಿ ಸೂಸುವ ಭೂಗತ ನದೀ ನೀರನ್ನೂ ಕಂಡರೆ ಈ ಸತ್ಯಕ್ಕೆ ಇನ್ನಷ್ಟು ಪುಷ್ಟಿ ಸಿಗುತ್ತದೆ. ಸರಸ್ವತೀ ತೀರದಲ್ಲಿ ಅನ್ವೇಷಣೆಯಾಗಿರುವ ಸುಮಾರು ೨೦೦೦ ರಕ್ಕೂ ಹೆಚ್ಚು ಪ್ರಾಚೀನ ಗ್ರಾಮ ನಗರಗಳ ಅವಶೇಷಗಳೂ ಈಗಾಗಲೇ ದಾಖಲಾಗಿವೆ. ಇದೆಲ್ಲ ವ್ಯಾಪಕವಾಗಿ ಸಾರ್ವಜನಿಕ ಗಮನಕ್ಕೆ ಇನ್ನಷ್ಟು ಬರುವಂತೆ ಮಾಡುವ ಹೊಣೆಗಾರಿಕೆಯನ್ನು ಮಾತ್ರ ಸರ್ಕಾರ ಮರೆತಿದೆ. ಗಂಗಾ ಯಮುನಾ ಸಂಗಮದಲ್ಲಿ ಸರಸ್ವತಿಯೂ ಅಂತರ್ವಾಹಿನಿಯಾಗಿದ್ದಾಳೆ ಎಂದು ನಂಬಿ ಅದನ್ನು ’ತ್ರಿವೇಣೀ ಸಂಗಮ’ ಎಂದೇ ಇಂದಿಗೂ ಹೆಸರಿಸುವ ರೂಢಿಗೆ ಇದೇ ಕಾರಣ ಎಂದು ಊಹಿಸಬಹುದು. ಗುಜರಾತಿನಲ್ಲಿ ಇಂದಿಗೂ ಅಲ್ಲಿನ ಶತದ್ರೂ, ಗಾಗ್ಗರ್ ಮುಂತಾದ ಸರಸ್ವತಿಯ ಉಪನದಿಗಳನ್ನು ಸರಸ್ವತೀಯೆಂದೇ ಕರೆದು ಪೂಜಿಸುವ ಪದ್ಧತಿಯುಂಟು.
ಸಿಂಧು-ಸರಸ್ವತೀ ನಾಗರೀಕತೆಯ ಬಗ್ಗೆ ಈಗಾಗಾಲೇ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಅಪಾರ ಮಾಹಿತಿ ಸಂಗ್ರಹವಾಗಿದೆ. ವೇದಸಂಸ್ಕೃತಿಯು ಅರಳಿದ್ದು ಬೆಳೆದಿದ್ದು ಸರಸ್ವತೀ ನದಿಯ ತೀರದಲ್ಲೇ. ಸರಸ್ವತೀ ನದಿಯು ಬತ್ತಲಾರಂಭಿಸಿದಾಗ ಜನರು ವಿವಿಧ ದಿಕ್ಕುಗಳಿಗೆ ವಲಸೆ ಹೋದರು. ಅಂತಹ ಬಹಳ ಮಂದಿ ’ಸಾರಸ್ವತರು’ ಎಂದು ಗುರುತಿಸಿಕೊಳ್ಳುವ ಪದ್ಧತಿ ಹಿಂದೆಯೂ ಇದೆ, ಈಗಲೂ ಸ್ವಲ್ಪಮಟ್ಟಿಗೆ ಉಂಟು. ಅಗಸ್ತ್ಯರು, ಗೌಡಸಾರಸ್ವತರು ಮುಂತಾದ ಋಷಿಗಳು ದಕ್ಷಿಣಭಾರತಕ್ಕೆ ವಲಸೆ ಬಂದ ಪೌರಾಣಿಕ ಕಥೆಗಳೂ ಇದಕ್ಕೆ ಪೂರಕವಾಗಿವೆ. 
ಇದಲ್ಲದೆ ನಾವು ಇಂದು ಪೂಜಿಸುವ ಪ್ರಸಿದ್ಧ ಸರಸ್ವತೀ ದೇವಿಯ ರೂಪದಲ್ಲಿನ ಸ್ವಾರಸ್ಯಗಳಲ್ಲೂ ಸರಸ್ವತೀ ನದಿಯ ಸಂಕೇತಗಳನ್ನೂ ಹೊಂದಿವೆ ಎನ್ನುತ್ತಾರೆ ಪ್ರೊಫೆಸರ್ ಕಲ್ಯಾಣರಾಮನ್ ಮುಂತಾದ ಕೆಲವು ಸಂಶೋಧಕರು- ಸರಸ್ವತಿಯು ಹಿಮಾಲಯದ ಸರೋವರದಲ್ಲಿ ಉಗಮಿಸಿ, ಪಶ್ಚಿಮೋತ್ತರ ಭಾರತದ ಮೂಲಕ ಹಾದು ಸಿಂಧುಸಾಗರವನ್ನು ಸೇರುತ್ತಿದ್ದ ನದಿ ಎನ್ನುವುದನ್ನು ಈಗಾಗಲೇ ನೋಡಿದ್ದೇವೆ. ಹಿಮಾಲಯದ ಎತ್ತರದ ಸರೋವರಗಳಲ್ಲಿ ಮಾತ್ರವೇ ಕಾಣಬರುವ ಹಂಸಪಕ್ಷಿಯು ಸರಸ್ವತೀ ಚಿತ್ರದಲ್ಲಿ ತಪ್ಪದೆ ಕಾಣುವುದನ್ನು ನೋಡಿದರೆ, ’ಹಂಸವೂ ಹಿಮಾವೃತ ಸರಸ್ಸಿನ ಸಂಕೇತವೆಂದೆನಿಸದಿರದು. ಅವಳಿಗೆ ’ಹಂಸವಾಹಿನಿ’ ಎಂದೇ ಬಿರುದು ಕೂಡ. ಹಂಸವು ಶುದ್ಧ ಜೀವಾತ್ಮದ ಸಂಕೇತವೂ ಹೌದು, ಅಂತೆಯೇ ಹಿಮಾಲಯದ ಸರೋವರಗಳನ್ನು ನೆನಪಿಸುವಂತಹದ್ದೂ ಹೌದು. ಅಂತೆಯೇ ಸರಸ್ವತೀ ನದಿಯ ಪಥದಲ್ಲಿನ ಪಶ್ಚಿಮೋತ್ತರ ಭಾರತದ ಭಾಗಗಳಲ್ಲಿ ನವಿಲುಗಳು ಹೇರಳವಾಗಿ ಕಾಣಬರುತ್ತವೆ. ಸರಸ್ವತೀ ಚಿತ್ರದಲ್ಲಿ ಕಾಣಬರುವ ನವಿಲು ಇದರ ಸಂಕೇತವಿರಬಹುದು ಎನ್ನುತ್ತಾರೆ ವಿದ್ವಾಂಸರು. ಅದಲ್ಲದೆ ದೇವೀ ಸರಸ್ವತಿಯ ಶ್ವೇತಮಯ ವಸನ, ಆಭೂಷಣಗಳೂ ಅವಳು ಧವಳ ಹಿಮಾಲಯದ ಹಿಮವು ಕರಗಿ ಹರಿದು ಬಂದ ನದೀಧಾರೆ ಎನ್ನುವುದರ ಸಂಕೇತದಂತೆ ಕಾಣುತ್ತದೆ.
ಒಟ್ಟಿನಲ್ಲಿ ಪ್ರಾಚೀನ ಭಾರತೀಯರ ಪರಮ ಪೂಜೆಗೆ ಪಾತ್ರಳಾಗಿದ್ದ ಸರಸ್ವತಿಯು ಕೇವಲ ಒಂದು ನದಿ ಮಾತ್ರವೇ ಆಗಿರದೆ, ಆರ್ಷ ಸಂಸ್ಕೃತಿಯನ್ನು ತನ್ನ ಮಡಿಲಲ್ಲಿಟ್ಟು ಪೋಷಿಸಿದ ಅಮೃತಮಯವಾದ ಜೀವನದಿ. ಹಾಗಾಗಿಯೇ ಪುರಾಣೋಕ್ತ ಸರಸ್ವತೀ ದೇವಿಯನ್ನು, ಸರಸ್ವತೀ ನದಿಯನ್ನೂ ಒಂದೇ ಎಂದು ಭಾವಿಸಿ ಪೂಜಿಸಲಾಗುತ್ತದೆ.
ಸರಸ್ವತೀ ಶಾಶ್ವತವಾದ ನಿಧಿ
ಸರಸ್ವತಿ ಒಲಿದರೆ, ಶಾಶ್ವತವಾಗಿ ನಮ್ಮಲ್ಲಿ ಉಳಿಯುತಾಳೆ. ನಾನು ಬಾಲಕಿಯಾಗಿದ್ದಾಗ ಹಿರಿಯರೊಬ್ಬರು ನನಗೆ ಹೇಳಿದ್ದು ನೆನಪಾಗುತ್ತದೆ. ಅವರು ಹೇಳಿದರು- “ಏನಮ್ಮ, ರವಿವರ್ಮನ ಚಿತ್ರಗಳನ್ನು ನೋಡಿದ್ದೀಯಾ? ಆ ಚಿತ್ರದಲ್ಲಿ ಲಕ್ಷ್ಮಿಯು ನದಿಯ ಮಧ್ಯದಲ್ಲಿ ಕಮಲದ ಮೇಲೆ ನಿಂತಿದ್ದಾಳೆ. ಆದರೆ ಸರಸ್ವತೀ ಚಿತ್ರದಲ್ಲಿ ಅವಳು ಗಟ್ಟಿ ಬಂಡೆಯ ಮೇಲೆ ಕುಳಿತಿದ್ದಾಳೆ. ಇದರ ಅರ್ಥ ಏನು ಗೊತ್ತ? ಲಕ್ಷ್ಮೀ ಚಂಚಲೆ, ಆ ಕಡೆ ದಡಕ್ಕಾದರು ಹೋದಾಳು, ಈ ಕಡೇ ದಡಕ್ಕಾದರೂ ಬಂದಾಳು, ಅಥವಾ ಯಾರಿಗೂ ಸಿಗದೆ ಮುಳುಗಿಯೂ ಹೋದಾಳು! ಏನೂ ಹೇಳಲಾಗದು. ಆದ್ದರಿಂದಲೇ ಅವಳನ್ನು ನದಿಯ ನೀರಿನ ಮಧ್ಯದಲ್ಲಿ, ಮುಟ್ಟಿದರೆ ಕುಸಿಯುವಂತಹ ಕಮಲದ ಮೇಲೆ ನಿಲ್ಲಿಸಿರುವುದು! ಆದರೆ ಸರಸ್ವತಿಯು ಗಟ್ಟಿ ಬಂಡೆ ಮೇಲೆ ಕುಳಿತಿದ್ದಾಳೆ. ಏಕೆಂದರೆ ಆಕೆ ಶಾಶ್ವತ, ಒಮ್ಮೆ ಒಲಿದರೆ ಸಾಕು ನಮ್ಮ ವ್ಯಕ್ತಿತ್ವದಲ್ಲಿ ಆಕೆಯ ವರ್ಚಸ್ಸು ಕಲ್ಲಿನಂತೆ ಶಾಶ್ವತವಾಗಿ ನೆಟ್ಟುಕೊಳ್ಳುತ್ತದೆ. ಆದ್ದರಿಂದ ವಿದ್ಯೆಯನ್ನು ಪಡೆಯುವತ್ತ ಹೆಚ್ಚು ಗಮನ ಹರಿಸಬೇಕೇ ಹೊರತು ಚಂಚಲವಾದ ಹಣವನ್ನಲ್ಲ”. ಈ ಕಲ್ಪನೆ ಸೊಗಸಾಗಿದೆ, ಇಲ್ಲಿನ ಸಂದೇಶವಂತೂ ಬಹಳ ಮನೋಜ್ಞವಾಗಿದೆ.
ಕನ್ನಡ ನಾಡಿನ ಪ್ರಸಿದ್ಧ ಸರಸ್ವತೀ ದೇಗುಲಗಳು
ನಮ್ಮ ಕನ್ನಡನಾಡಿನ ಹೆಮ್ಮೆ ಎನಿಸಿರುವ ಸಹ್ಯಾದ್ರಿಯ ಮಡಿಲಲ್ಲಿನ ಶೃಂಗೇರಿಯಲ್ಲಿ ಜಗತ್ಪ್ರಸಿದ್ಧ ಶಾರದಾಲಯವಿದೆ. ಇಲ್ಲಿ ಸರಸ್ವತಿಯು ಶಾರದಾ, ಭಾರತೀ ಎಂಬ ನಾಮಧೇಯಗಳಿಂದ ಆರಾಧಿಸಲ್ಪಡುತ್ತಾಳೆ. ಇದೊಂದು ಜ್ಞಾನಪೀಠವೂ ಹೌದು. ಇಲ್ಲಿನ ಅಪೂರ್ವ ಗ್ರಂಥ ಭಂಡಾರ, ವಿದ್ವತ್ ಪರಂಪರೆ, ದಿವ್ಯಮಂಗಲ ಪರಿಸರ ಇಂದಿಗೂ ಸರ್ವರ ಭಕ್ತ್ಯಭಿಮಾನಗಳಿಗೆ ಪಾತ್ರವಾಗಿವೆ. ವಿದ್ಯಾರಣ್ಯರಂತಹ ವಿಭೂತಿಪುರುಷರನ್ನು ಜಗತ್ತಿಗೆ ಪ್ರಸಾದಿಸಿದ ಭವ್ಯ ಕೀರ್ತಿ ಈ ದೇಗುಲಕ್ಕಿದೆ.  ಅಂತೆಯೇ ಶೃಂಗೇರಿಯ ಬಳಿಯ ಹರಿಹರಪುರದಲ್ಲಿ ತುಂಗಾತೀರದಲ್ಲಿ ಶಾರದೆಯ ಸುಂದರ ದೇಗುಲವಿದೆ. ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನಿ--- ಎಂಬ ಸ್ತುತಿಗೆ ಪಾತ್ರಳಾದ ಶಾರದೆಯ ಅತಿ ಪ್ರಾಚೀನ ಭವ್ಯ ದೇಗುಲ ಕಾಶ್ಮೀರದಲ್ಲಿತ್ತು. ಇದು ವಿಶ್ವಮಾನ್ಯ ಶಾರದಾಪೀಠವಾಗಿದ್ದು, ಉದ್ಧಾಮ ಪಂಡಿತರ ವೇದಿಕೆಯಾಗಿತ್ತು. ಅಲ್ಲಿ ಭೇಶ್ ಎನ್ನಿಸಿಕೊಂಡ ಪಂಡಿತನು ಜಗ್ನ್ಮಾನ್ಯನಾಗುತ್ತಿದ್ದ. ಆದರೆ ದೌರ್ಭಾಗ್ಯದ ವಿಷಯವೆಂದರೆ ಆಕ್ರಮಣಕಾರರ ಕ್ರೌರ್ಯಕ್ಕೆ ಸಿಲುಕಿ ಈ ಭವ್ಯ ದೇಗುಲ ಇಂದು ಪಾಕಿಸ್ಥಾನದಲ್ಲಿ ಅವಶೇಷಮಾತ್ರವಾಗಿ ಉಳಿದಿದೆ. ಇಲ್ಲಿ ದೇವಿಗೆ ಜಲಮುಖದಲ್ಲೇ ಆಹುತಿ ನೀಡಲಾಗುತ್ತಿತ್ತು ಎನ್ನುವುದು ಅಲ್ಲಿನ ಜಲಕುಂಡದಿಂದ ತಿಳಿಯುತ್ತದೆ. ಇದು ಅತಿ ಭವ್ಯವೂ ಶ್ರೀಮಂತವೂ ಪ್ರಖ್ಯಾತವೂ ಆದ ದೇಘುಲ ಎನ್ನುವುದನ್ನು ಆ ಅವಶೇಷಗಳ ಭವ್ಯ ಕಂಬಗಳು, ಸಾಲು ಸಾಲು ಮೆಟ್ಟಿಲುಗಳು, ಕೆತ್ತನೆಯ ಚೂರುಗಳು ಸಾರುತ್ತವೆ. ತುರುವೇಕೆರೆಯ ಬಳಿಯ ಅಮೃತೇಶ್ವರ ದೇಗುಲದಲ್ಲಿ ಭವ್ಯ ಸುಂದರ ಶಾರದಾ ಸನ್ನಿಧಿ ಇದೆ. ಇದನ್ನೂ ಆಕ್ರಮಣಕಾರರು ಒಂದಷ್ಟು ಹಾಳುಗೆಡವದೇ ಬಿಟ್ಟಿಲ್ಲ. ಶಿವಮೊಗ್ಗೆಯ ಬಳಿಯ ತುಂಗಾ ಭದ್ರಾ ಸಂಗಮವಾದ ಕೂಡಲಿಯಲ್ಲಿ ನಿಂತಿರುವ ಶಾರದೆಯ ಸುಂದರ ಪ್ರಶಾಂತ ದೇಗುಲವಿದೆ.
 ಶಾರದೆ ಸರಸ್ವತಿಯ ದೇಗುಲಗಳು ಭಾರತದಾದ್ಯಂತ ಹೇರಳವಾಗಿವೆ. ಅವುಗಳಲ್ಲಿ ಕರ್ನಾಟಕದಲ್ಲೂ ಹಲವು ಇವೆ. ಇಲ್ಲಿ ಲೆಲವನ್ನು ಮಾತ್ರ ಹೆಸರಿಸಲಾಗಿದೆ.
ಇದೀಗ ನವರಾತ್ರದ ಸುಸಂದರ್ಭ ಜಗನ್ಮಾತೆಯ ವೈವಿಧ್ಯಮಯ ರೂಪಗಳಲ್ಲಿ ಸುಂದರವೂ ಮನೋಜ್ಞವೂ ಆದದ್ದು ಅವಳ ಸರಸ್ವತೀ ಸ್ವರೂಪ. ಆ ಮಹಾಸರಸ್ವತಿಯು ನಮ್ಮ ಬುದ್ಧಿಯನ್ನು ಬೆಳಗಲಿ, ಮನಸ್ಸನು ಅರಳಿಸಲಿ, ಮಾತನ್ನು ಸಂಸ್ಕರಿಸಲಿ, ನಡೆನುಡಿಯಲ್ಲಿ ಘನತೆ ಗಾಂಭೀರ್ಯ ಸೌಂದರ್ಯಗಳನ್ನು ತುಂಬಿ ನಮ್ಮ ಬದುಕನ್ನು ಹಸನುಗೊಳಿಸಲಿ. ದುರ್ಜನರಿಗೆ ಸನ್ಮತಿಯನ್ನು ಪಾಲಿಸಲಿ, ಸುಜನರಿಗೆ ಚಾತುರ್ಯವನ್ನು ಕರುಣಿಸಿ ಸಮಾಜವನ್ನೂ, ದೇಶವನ್ನೂ, ಸಂಸ್ಕೃತಿಯನ್ನೂ ಸುಭದ್ರಗೊಳಿಸಲಿ ಎಂದು ಪ್ರಾರ್ಥಿಸೋಣ.

ಡಾ ಆರತೀ ವಿ ಬಿ
Publsihed in Mallara Magazine 2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ