ಗೌರೀವ್ರತಗಳು
ಗೌರಿ
ಎಂದರೆ ’ತೇಜಸ್ವಿನಿ’ ಎಂದರ್ಥ. ಗೌರಿ ತನ್ನ ಪತಿ ಶಿವನಂತೆ ಸಕಲಭೋಗೈಶ್ವರ್ಯಗಳನ್ನೂ ತ್ಯಜಿಸಿ ಬಿಚ್ಚೋಲೆ-ರುದ್ರಾಕ್ಷ-ನಾರುಮಡಿಗಳನ್ನು
ಧರಿಸಿ ಜಪತಪಗಳಲ್ಲಿ ನಿರತಳಾದ ಪತಿವ್ರತೆ. ವಾತ್ಸಲ್ಯ, ಸರಳತೆಗಳ ಮೂರ್ತಿಯಾದ ಗೌರಿಯ ಸರಳ-ಸೌಮ್ಯ ರೂಪ
ಸ್ತ್ರೀಹೃದಯಕ್ಕೆ ಆತ್ಮೀಯವಾದದ್ದು. ಹೆಂಗಸರು ಗೌರೀ-ಪಂಚಾಕ್ಷರಿ ಮಂತ್ರದ ಉಪಾಸನೆಯಲ್ಲಿ ತೊಡಗುವ ಸಂಪ್ರದಾಯ
ಭಾರತದಾದ್ಯಂತವಿದೆ.
ಗೌರಿಯು
ಸರಳೆಯಾದರೂ ಸಕಲಲೋಕಾಧೀಶರ ಸಭೆಯನ್ನು ನಡೆಸುವ ರಾಜರಾಜೇಶ್ವರಿ! ಸಕಲ ವೇದಾಗಮ-ಜಾನಪದ-ತಂತ್ರ-ಮಂತ್ರ
ಪದ್ಧತಿಗಳ ಮೂಲಶಕ್ತಿ! ಸಾಧಕರ ಹೃನ್ಮಂದಿರದಲ್ಲಿ ಪ್ರತಿಫಲಿಸುವ ಪರತತ್ವ! ಮಹಿಷಾಸುರಾದಿ ಲೋಕಪೀಡಕರಾದ
ದೈತ್ಯರು ಉದಿಸಿದಾಗ ಸೌಮ್ಯವಾಗಿ ಉಳಿಯದೆ ಭೀಕರಕಾಳಿಯಾಗುತ್ತಾಳೆ! ವಿಸ್ಮಯಕಾರೀ ರೂಪಗಳನ್ನೂ ಸರ್ವಶಕ್ತಿ-ವಿಭೂತಿಗಳನ್ನೂ
ಅಭಿವ್ಯಂಜಿಸುತ್ತ ದುಷ್ಟಸಂಹಾರ ಗೈಯುತ್ತಾಳೆ. ದೇವೀ ಮಾಹಾತ್ಮ್ಯದ ಒಂದು ಪ್ರಸಂಗ- ‘ಶುಂಭನಿಶುಂಭರ
ಕ್ರೌರ್ಯಕ್ಕೆ ತತ್ತರಿಸಿದ ದೇವತಾ-ಋಷಿಗಣಗಳು ಗಂಗಾತೀರದಲ್ಲಿ ಸೇರಿ ಜಗನ್ಮಾತೆಯಲ್ಲಿ ರಕ್ಷಣೆಗಾಗಿ
ಪ್ರಾರ್ಥನೆ ಸಲ್ಲಿಸುತ್ತಾರೆ. ಆಗ ಅಲ್ಲಿಗೆ ಸ್ನಾನಕ್ಕೆಂದು ಬಂದ ಸೌಮ್ಯ ಗೌರಿಯು ಮುಗ್ಧಳಂತೆ ಕೇಳುತ್ತಾಳೆ-
“ಯಾರನ್ನು ಸ್ತುತಿಸುತ್ತಿದ್ದೀರಿ?” ಎಂದು. ಆಗ ಆಕೆಯ ದೇಹದಿಂದ ಸರ್ವಾಯುಧಧಾರಿಣಿಯಾದ ಅಪರಾಜಿತಾದೇವಿಯು
ಚಿಮ್ಮಿ “ಇವರು ನನ್ನನ್ನೇ ಸ್ತುತಿಸುತ್ತಿರುವುದು” ಎನ್ನುತ್ತಾಳೆ. ಮುಂದೆ ಈ ರೂಪದಿಂದ ಸಾವಿರಾರು
ಮಾತೃಕಾಗಣಗಳು ಹೊಮ್ಮಿ ಲಕ್ಷೋಪಲಕ್ಷ ರಾಕ್ಷಸರನ್ನು ಸಂಹಾರಗೈದು ಲೋಕಗಳನ್ನು ರಕ್ಷಿಸುತ್ತಾರೆ-----’.
ಒಟ್ಟಿನಲ್ಲಿ ಸಕಲ ಶಕ್ತಿವೈಭವಗಳನ್ನೂ ತನ್ನೊಳಗೆ ಅಡಗಿಸಿಕೊಂಡು ಶಾಂತರೂಪದಲ್ಲೇ ಇರುವ ಗೌರಿಯು ಕಾಲ
ಒದಗಿದಾಗ ಸರ್ವಶಕ್ತ್ಯಾತ್ಮಿಕೆಯಾಗಿ ಎದ್ದು ನಿಲ್ಲುತ್ತಾಳೆ! ಪ್ರಕೃತಿಸಿದ್ಧವಾಗಿ ಸ್ತ್ರೀಯಲ್ಲಿರುವ
ಲಜ್ಜೆ, ನಯ, ಶಾಂತಿ, ಕ್ಷಮಾಗುಣಗಳು ಆತ್ಮರಕ್ಷಣೆ ಅಥವಾ ಸಾಮಾಜಿಕ ನ್ಯಾಯರಕ್ಷಣೆಯ ಸಂದರ್ಭ ಬಂದಾಗ
ಪ್ರಚಂಡ ಶಕ್ತಿ-ಯುಕ್ತಿಗಳಾಗಿ ಪುಟಿದೇಳಬೇಕು ಎನ್ನುವ ನೀತಿ ಇಲ್ಲಿದೆ. ಸತೀತ್ವ, ಮಾತೃತ್ವ, ದೈವತ್ವ,
ಗುರುತ್ವ ಹಾಗೂ ತಪಸ್ಸುಗಳು ಎಂಬ ಗೌರಿಸ್ವರೂಪದ ಪಂಚಮುಖಗಳು ಸ್ತ್ರೀಕುಲಕ್ಕೆ ಧ್ಯೇಯಾದರ್ಶಗಳು.
ಸೌಮಾಂಗಲ್ಯ,
ಸಂಸಾರಸುಖ, ಸಂತಾನಪ್ರಾಪ್ತಿ, ಸಂಕಷ್ಟನಿವಾರಣೆ, ಜಯ, ಲಾಭ, ಐಶ್ವರ್ಯ, ಪದವಿ ಮುಂತಾದವುಗಳ ಪ್ರಾಪ್ತಿಗಲನ್ನು
ಕೋರಿ ಗೌರಿಯನ್ನು ಪೂಜಿಸಲಾಗುತ್ತದೆ. ಆಯಾ ಮನೋರಥಗಳನ್ನು ಪೂರೈಸಿಕೊಳ್ಳಲು ಆಯಾ ಕ್ಲಾಲದಲ್ಲಿ ತತ್ಸಂಬಂದಿತ
ಗೌರೀ ರೂಪಗಳನ್ನು ಸೂಕ್ತ ವಿಧಿವಿಧಾನಗಳಿಂದ ಪೂಜಿಸುವ ಪದ್ಧತಿ ಬೆಳೆದುಬಂದಿದೆ.
ಪ್ರತಿಮಾಸದ
ತದಿಗೆಯೂ ಗೌರೀಪೂಜೆಗೆ ಪ್ರಶಸ್ತ. ಇದಲ್ಲದೆ ಪ್ರತಿದಿನವೂ ಗೌರೀಪೂಜೆಯನ್ನು ಮಾಡುವವರೂ ಇಲ್ಲದಿಲ್ಲ.
ಮಂಗಳಗೌರೀ, ಸ್ವರ್ಣಗೌರಿ, ಬೃಹದ್ಗೌರಿ, ಫಣಿಗೌರಿ, ಕೇದರಗೌರಿ, ಕಾತ್ಯಾಯನೀಗೌರಿ, ನಿತ್ಯಗೌರಿ, ಮೌನಗೌರಿ,
ಸೌಭಾಗ್ಯಗೌರಿ, ಚೈತ್ರಗೌರೀ, ಅಕ್ಷಯತದಿಗೆಗೌರಿ, ಫಲಗೌರಿ, ದಿವಸಿಗೌರಿ, ಆಷಾಡಗೌರಿ(ಮೊಲಕಾತ್)ಗಳೆಂಬ
ಮಾಸಿಕ ಗೌರೀವ್ರತಗಳಲ್ಲದೆ, ಸೀಗೆಗೌರಿ, ಲಾವಣ್ಯಗೌರಿ, ಸಂಪದ್ಗೌರೀ, ತ್ರಿಲೋಚನಗೌರಿ, ಉಯ್ಯಾಲೆಗೌರಿ
ಮುಂತಾದ ಹಲವಾರು ಗೌರೀವ್ರತಗಳು ಆಚರಣೆಯಲ್ಲಿವೆ.
ಗೌರೀವ್ರತವನ್ನು
ಮಾಡುವವರು ಹೆಚ್ಚಾಗಿ ಹೆಂಗಳೆಯರೇ ಆದರೂ, ಪುರುಷರಿಗೂ ಇದು ವಿಹಿತವೇ. ಎಲ್ಲ ಗೌರೀವ್ರತಗಳಲ್ಲಿನ ಕೆಲವು
ಸಾಮಾನ್ಯ ನಿಯಮಗಳು- ಬ್ರಾಹ್ಮೀಮುಹೂರ್ತದಲ್ಲೇಳುವುದು, ಅಭ್ಯಂಗಸ್ನಾನ, ಸಾಂಪ್ರದಾಯಿಕ ಸೀರೆ, ಒಡವೆ
ಹಾಗೂ ಮಂಗಳದ್ರವ್ಯಗಳನ್ನು ಲೇಪಿಸಿಕೊಂಡು ಮಡಿಯಲ್ಲಿ ಪೂಜೆಗೆ ಕೂರುವುದು, ಪೂಜೆ ಮುಗಿಯುವ ತನಕವಾದರೂ
ಮೌನಾಚರಣೆ ಹಾಗೂ ಉಪವಾಸ ಮಾಡುವುದು, ಮಾಂಸಾಹಾರ ಮದ್ಯಪಾನಾದಿಗಳ ತ್ಯಾಗ, ಸುಮಂಗಲಿಯರಿಗೆ ತಾಂಬೂಲ,
ಸದಾಚಾರಸಂಪನ್ನ ಕುಲೀನರಿಗೆ ಅನ್ನ-ವಸ್ತ್ರ-ದಕ್ಷಿಣೆಗಳ ದಾನ, ಷೋಡಶೋಪಚಾರ ಪೂಜೆ, ಜಪ, ಸ್ತೋತ್ರ-ಭಜನೆ
ಮುಂತಾದವು. ಹರಿದ್ರಾನ್ನ (ಅರಿಶಿನ ಹಾಕಿದ ಅನ್ನ), ಮುದ್ಗಾನ್ನ (ಹೆಸರುಬೇಳೆ ತುಪ್ಪಗಳ ಖಿಚಡಿ), ಗುಡಾನ್ನ(ಬೆಲ್ಲದನ್ನ/
ಸಕ್ಕರೆ ಪೊಂಗಲ್), ಪಾಯಸಾನ್ನ(ಅನ್ನದ ಪಾಯಸ), ದಧ್ಯನ್ನ (ಮೊಸರನ್ನ) ಮುಂತಾದ ಬಗೆಬಗೆಯ ಕಲಸಿದನ್ನಗಳನ್ನೂ ಪ್ರಾಂತ ಹಾಗೂ ಕುಲಾಚಾರಕ್ಕೆ ಅನುಗುಣವಾದ ಭಕ್ಷ್ಯಗಳನ್ನೂ
ನಿವೇದಿಸಲಾಗುತ್ತದೆ. ಕನ್ನಡಿಗರ ಗೌರೀವ್ರತಗಳಲ್ಲಿ ಒಬ್ಬಟ್ಟು-ಹಪ್ಪಳ-ಆಂಬೋಡೆಳಂತೂ ಇರಲೇಬೇಕು! ರಾತ್ರಿಜಾಗರಣೆಯ ನಿಯಮವಿದ್ದಾರೂ ಅದನ್ನು ಪಾಲಿಸುವ ಸಾಮರ್ಥ್ಯ ಹೆಚ್ಚೆನಿವರಿಗಿಲ್ಲ.
ವ್ರತದ ಹಿಂದಿನ ಮುಂದಿನ ದಿನವೂ ಸೇರಿದಂತೆ ಮೂರುದಿವಸ ಬ್ರಹ್ಮಚರ್ಯಪಾಲನೆ ಕಡ್ಡಾಯ. ಇವಲ್ಲದೆ
ವ್ರತಕಾಲದಲ್ಲಿ ಕೋಪ, ಸುಳ್ಳು, ಕಪಟ, ಚಾಡಿ, ಪರಹಿಂಸೆ ಮುಂತಾದವನ್ನು ಸಂಪೂರ್ಣವಾಗಿ ವರ್ಜಿಸಬೇಕು.
ಸಾಯಂಕಾಲ ತಾಂಬೂಲ ವಿನಿಮಯ, ಕಥಾಶ್ರವಣ, ಗೀತನೃತ್ಯಾದಿ ವಿನೋದಗಳಲ್ಲಿ ತೊಡಗುವುದು ಪ್ರಾಚೀನಕಾಲದಿಂದಲೂ
ನಡೆದುಬಂದ ಪದ್ಧತಿ. ಹಳ್ಳಿಗಳಲ್ಲಿ ಈ ಬಣ್ಣದ ದೃಶ್ಯಗಳು ಈಗಲೂ ಕಾಣಸಿಗುತ್ತವೆಯಾದರೂ ನಾಗರಗಳಲ್ಲಿ
ನಾಗರೀಕತೆಯ Prejudice ಎನ್ನುವುದು
ಈ ಸುಂದರಾಂಶಗಳನ್ನು ಕಡೆಗಣಿಸುತ್ತ ಬಂದಿರುವುದು ಶೋಚನೀಯ. ಹೆಂಗಸರೇ ಹೆಚ್ಚಾಗಿ ಮಾಡುವುದರಿಂದ ಗೌರೀವ್ರತಗಳೆಲ್ಲ
ವರ್ಣರಂಜಿತವಾದ ಹಬ್ಬಗಳೇ ಸರಿ! ಜರತಾರಿಸೀರೆ ಹಾಗೂ ಒಡವೆಗಳಿಂದೊಪ್ಪುತ್ತ ಸಡಗರದಿಂದ ಅತ್ತಿಂದಿತ್ತ
ಓಡಾಡುವ ನಾರೀಮಣಿಯರು ಅಪರ-ಗೌರಿಯರಂತೆ ಶೋಭಿಸುತ್ತಾರೆ!
ಕುಲ,
ಪ್ರಾಂತ, ಋತು, ಮಾಸ ಮನೋರಥಗಳಿಗನುಗುಣವಾಗಿ ಗೌರೀವ್ರತಗಳ ಸ್ವರೂಪ ಸ್ವಲ್ಪ ಸ್ವಲ್ಪ ಬದಲಾಗುತ್ತ ಹೋಗುತ್ತದೆ.
ಆದರೆ ಪೂಜಾಭಾವ ಹಾಗೂ ತತ್ತ್ವಚಿಂತನೆ ಒಂದೆ ಆಗಿದೆ. ಕೆಲವು ಗೌರೀವ್ರತಗಳ ಮೇಲೊಂದು ಪಕ್ಷಿನೋಟ-
ಶ್ರಾವಣಮಾಸದ
ಮಂಗಳಗೌರೀವ್ರತ ಉತ್ತರಭಾರತದಲ್ಲಿ
ಶ್ರಾವಣ ಗೌರೀ / ಸಾವನ್ ಗೌರಿ ಎಂದೂ ಪ್ರಸಿದ್ಧ. ಮದುವೆಯಾದ ಮೊದಲು ಐದುವರ್ಷಗಳ ಶ್ರಾವಣಮಂಗಳವಾರಗಳಂದು
ಹೆಂಗಳೆಯರು ಈ ವ್ರತವನ್ನು ಆಚರಿಸುತ್ತಾರೆ. ಇದನ್ನು ಜನ್ಮವ್ರತವನ್ನಾಗಿ ಜೀವನವಿಡೀ
ಮಾಡುವವರೂ ಇದ್ದಾರೆ. ಹದಿನಾರು ಸಂಖ್ಯೆಯಲ್ಲಿ ವೀಳ್ಯದೆಲೆ, ಅಡಿಕೆ, ಬಳೆ ಹಾಗೂ ಅರಸಿನದ ಕೊಮ್ಮುಗಳನ್ನು
ಪೂಜಾಮಂಟಪದಲ್ಲಿ ಎರಡು ಬದಿಯಲ್ಲೂ ಜೋಡಿಸಿಟ್ಟು, ಮಧ್ಯೆ ಕಲಶ-ಕನ್ನಡಿ-ರವಿಕೆಕಣಗಳನ್ನಿಟ್ಟು, ಅದರ
ಮಧ್ಯದಲ್ಲಿ ಅರಸಿನದ ಗೌರಿಯನ್ನು ಸ್ಥಾಪಿಸಿ, ಪೂಜಿಸಲಾಗುತ್ತದೆ. ಹದಿನಾರು ಸಂಖ್ಯೆಯಲ್ಲಿ ನಾಮಜಪ
ಮಾಡಿ ಹದಿನಾರು ತಂಬಿಟ್ಟು ದೀಪಗಳ ಆರತಿಯನ್ನು ಬೆಳಗಿ ಅದರಿಂದ ಕಾಡಿಗೆಯನ್ನು ತೆಗೆದು, ಆ
ಕಾಡಿಗೆಯನ್ನೂ, ತಂಬಿಟ್ಟು ಪ್ರಸಾದವನ್ನೂ ಸುಮಂಗಲಿಯರಿಗೆ ಹಂಚಲಾಗುತ್ತದೆ. ಮಂಗಳಗೌರಿಯ
ಕಾಡಿಗೆಯನ್ನು ಪಡೆಯುವುದೇ ಒಂದು ಸೌಭಾಗ್ಯವೆಂದು ಭಾವಿಸಿ ಹೆಂಗಳೆಯರು ಅದಕ್ಕಾಗಿ ಉತ್ಸಾಹದಿಂದ ‘ಎಲ್ಲಿ
ಸಿಕ್ಕೀತು’ ಎಂದು ಇದಿರು ನೋಡುತ್ತಿರುತ್ತಾರೆ! ಪೂಜಾಂತ್ಯದಲ್ಲಿ ಹೆತ್ತತಾಯಿಗೆ ವಸ್ತ್ರ, ಧಾನ್ಯ,
ದಕ್ಷಿಣೆಗಳನ್ನಿತ್ತು ನಮಸ್ಕರಿಸಬೇಕು. ‘ಅಲ್ಪಾಯುವಾದರೂ ಹೆಂಡತಿಯು ಮಾಡಿದ ಮಂಗಳಗೌರಿಯವ್ರತದ
ಫಲದಿಂದಾಗಿ ಮೃತ್ಯುಗಂಡವನ್ನು ಗೆದ್ದ ಯುವಕ’ನ ವ್ರತಕಥಾಶ್ರವಣ ಮಾಡಲಾಗುತ್ತದೆ. ದ್ರೌಪದಿಗೆ ಈ ವ್ರತವನ್ನು
ಕೃಷ್ಣನೇ ಉಪದೇಶಿಸಿದನೆಂದು ವ್ರತಕಲ್ಪದಲ್ಲಿ ಹೇಳಲಾಗುತ್ತದೆ. ಮೊದಲ ವರ್ಷದ ವ್ರತವನ್ನು ತವರಿನಲ್ಲೂ,
ಮುಂದಿನ ನಾಲ್ಕುವರ್ಷಗಳ ವ್ರತವನ್ನು ತವರಲ್ಲೋ ಗಂಡನ ಮನೆಯಲ್ಲೋ ನೆಂಟರ ಮನೆಯಲ್ಲೋ ಮಾಡಬಹುದು. ಕರ್ನಾಟಕ,
ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಹಾಗೂ ಉತ್ತರಭಾರತದ ಹಲವು ಪ್ರಾಂತಗಳಲ್ಲಿ ಈ ವ್ರತವು
ತುಂಬ ಪ್ರಸಿದ್ಧ.
ಭಾದ್ರಪದಮಾಸದಲ್ಲಿ ಶುಕ್ಲತೃತೀಯದ ಸ್ವರ್ಣಗೌರಿವ್ರತ ‘ಗೌರೀಹಬ್ಬ’ ಎಂದೇ
ಪ್ರಸಿದ್ಧ. ಚಿನ್ನ, ಬೆಳ್ಳಿ ಅಥವಾ ಮಣ್ಣಿನ ಗೌರಿಯ ಮೂರ್ತಿಯನ್ನೋ ಕಲಶವನ್ನೋ ಪೂಜಿಸಲಾಗುತ್ತದೆ.
ಪೂಜೆಯ ಬಳಿಕ ಹದಿನಾರು ಗ್ರಂಥಿಗಳ ಅರಸಿನ ‘ದೋರ’ವನ್ನು ಕೈಗೆ ಕಟ್ಟಿಕೊಂಡು ಸುಮಂಗಲಿಯರಿಗೆ ಧನ-ಧಾನ್ಯ-ಫಲ-ಪುಷ್ಪ-ದಕ್ಷಿಣೆಗಳ ಮೊರದ ಬಾಗೀನವನ್ನು ಕೊಡಲಾಗುತ್ತದೆ. ಗೌರಿಯನ್ನು
’ಮನೆಯ ಮಗಳಂತೆ’ ವರ್ಷವರ್ಷವೂ ಬರಮಾಡಿಕೊಂಡು ಉಡಿತುಂಬಿಸಿ ಕಳಿಸುವ ಭಾವ ಇಲ್ಲಿದೆ. ಇದರ ಪ್ರತೀಕವಾಗಿ
ಮನೆಯ ಹೆಣ್ಣುಮಕ್ಕಳಿಗೆ ಉಡಿತುಂಬಿ ಉಣಬಡಿಸಿ ‘ಗೌರೀ-ದಕ್ಷಿಣೆ’ ಸಲ್ಲಿಸಲಾಗುತ್ತದೆ. ಭಾದ್ರಪದ-ಕೃಷ್ಣ-ತದಿಗೆಯಂದು
ಗಜಗೌರೀವ್ರತವನ್ನು ಆಚರಿಸುವ ಪದ್ಧತಿಯೂ ಇದೆ.
ಇದು ರಾಜ್ಯಪ್ರಾಪ್ತಿ ಅಥವಾ ಐಶ್ವರ್ಯಪ್ರಾಪ್ತಿಗಾಗಿ ಆಚರಿಸಲಾಗುವ ವ್ರತ. ಕುಂತಿ ಈ ವ್ರತವನ್ನಾಚರಿಸಿದ
ಮೇಲೆ ಪಾಂಡವರಿಗೆ ರಾಜ್ಯದ ಪುನಃ ಪ್ರಪ್ತಿಯಾಯಿತೆಂದು ವ್ರತಕಥೆ ಸಾರುತ್ತದೆ. ಭಾದ್ರಪದಮಾಸದ ಅಮಾವಾಸ್ಯೆಯಂದು
ಫಲ-ಗೌರೀವ್ರತವನ್ನು (ಉತ್ತರಭಾರತದಲ್ಲಿ ಪಿಠೋರೀ
ಅಮಾವಾಸ್) ಆಚರಿಸುವ ಪದ್ಧತಿ ಇದೆ. ಅರಸಿನದಲ್ಲಿ ಗೌರಿಯನ್ನು ಮಾಡಿ ಕಲಶದ ಪಕ್ಕದಲ್ಲಿಟ್ಟು, ಮೊಳಕೆ
ಬರೆಸಿದ ಹೆಸರುಕಾಳನ್ನು ನೈವೇದ್ಯ ಮಾಡಲಾಗುತ್ತದೆ.
ಅಕ್ಕಿ-ಬೆಲ್ಲಗಳ ತಂಬಿಟ್ಟು ನಿವೇದಿಸುವುದಲ್ಲದೆ, ಅದೇ ಹಿಟ್ಟಿನಲ್ಲಿ ತೊಟ್ಟಿಲನ್ನೂ, ಅದರೊಳಗೆ
ಒಂದು ಗುಂಡನ್ನು ಮಾಡಿಟ್ಟು, ಮಕ್ಕಳ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಲಾಗುತ್ತದೆ.
ಆಶ್ವಿನಮಾಸದ
ನವರಾತ್ರಿಯ ತದಿಗೆಯಂದು ಬೃಹದ್ಗೌರಿವ್ರತವನ್ನಾಚರಿಸಲಾಗುತ್ತದೆ.
೨೦ ಸಂಖ್ಯೆಯಲ್ಲಿ ಪತ್ರಪುಷ್ಪಗಳನ್ನೂ, ನೈವೇದ್ಯಪ್ದಾರ್ಥಗಳನ್ನೂ, ದೀಪಗಳನ್ನೂ ದೇವಿಗೆ ನಿವೇದಿಸಲಾಗುತ್ತದೆ.
ಆಶ್ವಿನಮಾಸದ ಸೀಗೆಹುಣ್ಣಿಮೆ ಹಾಗೂ ಗುರುವಾರಗಳಂದು ಸೀಗೆಗೌರಿವ್ರತವನ್ನು ಮಾಡಲಾಗುತ್ತದೆ. ಇದೇ ಆಶ್ವಿನದಲ್ಲಿ ಎಂಟು ವರ್ಷದ
ಬಾಲೆಯ ರೂಪದ ದೇವಿಗೆ ಮಹಾಗೌರಿಪೂಜೆಯನ್ನು ಮಾಡುವ ಪದ್ಧತಿಯೂ ಉಂಟು. ಕಾರ್ತಿಕಮಾಸದಲ್ಲಿ
ಫಣಿಗೌರೀ, ವಿಷ್ಣುಗೌರಿ ಹಾಗೂ ಕೇದಾರೇಶ್ವರಗೌರಿ ಎಂಬ ವ್ರತಗಳು ನಡೆಯುತ್ತವೆ. ರೈತಾಪಿ
ಕುಟುಂಬಗಳ ಮಹಿಳೆಯರು ಈ ಕೇದಾರಗೌರಿವ್ರತವನ್ನು
ವಿಶೇಷವಾಗಿ ಆಚರಿಸುತ್ತಾರೆ.
ಮಾರ್ಗಶಿರಮಾಸದ
ತದಿಗೆ ಹಾಗೂ ಧನುರ್ಮಾಸಾವಧಿಯು ಕಾತ್ಯಾಯನೀ ಗೌರೀವ್ರತಕ್ಕೆ
ತುಂಬ ಪ್ರಶಸ್ತ. ಉತ್ತಮಪತ್ರಿಪ್ರಾಪ್ತಿಗಾಗಿ ಕನ್ಯೆಯರ ಕೈಯಲ್ಲಿ ಈ ವ್ರತವನ್ನು ಮಾಡಿಸುವುದುಂಟು.
ಕೃಷ್ಣನನ್ನು ತಮ್ಮ ಆಧ್ಯಾತ್ಮಿಕ ಪತಿಯನ್ನಾಗಿ ಪಡೆಯಲು ವ್ರಜಗೋಪಿಯರು ಈ ವ್ರತವನ್ನಾಚರಿಸಿದ ಪ್ರಸ್ತಾವ
ಭಾಗವತದಪುರಾಣದಲ್ಲಿದೆ.
ಪುಷ್ಯಮಾಸದ
ತದಿಗೆಯಂದು ನಿತ್ಯಗೌರೀವ್ರತವನ್ನಾಚರಿಸಲಾಗುತ್ತದೆ.
ಮಾಘಮಾಸದ ತದಿಗೆಯಂದು ಮೌನಗೌರಿವ್ರತವನ್ನು ಆಚರಿಸಲಾಗುತ್ತದೆ.
ದಿನವಿಡೀ ಅಥವಾ ಪೂಜೆಯಾಗುವವರೆಗೂ ದೃಢಮೌನವ್ರತವನ್ನು ಪಾಲಿಸಬೇಕು. ಫಾಲ್ಗುಣಮಾಸದ ತದಿಗೆಯಂದು ಸೌಭಾಗ್ಯಗೌರೀವ್ರತವನ್ನು ಆಚರಿಸಲಾಗುತ್ತದೆ. ಇದೇ
ಫಾಲ್ಗುಣದ ಶ್ರೀಪಂಚಮಿಯಂದು ಉಯ್ಯಾಲೆಗೌರಿವ್ರತ
ಆಚರಿಸಲ್ಪಡುತ್ತದೆ. ಗೌರಿಯನ್ನು ಉಯ್ಯಾಲೆಯಲ್ಲಿಟ್ಟು ಪೂಜಿಸಿ ಆ ಬಳಿಕ ಹೆಂಗಳೆಯರೆಲ್ಲ ಉಯ್ಯಾಲೆಯಾಟದಲ್ಲಿ
ಸಂಭ್ರಮಿಸುತ್ತಾರೆ. ಉತ್ತಾರಭಾರತದಲ್ಲಂತೂ ಈ ಸಂದರ್ಭದಲ್ಲಿ ಸ್ತ್ರೀಯರಿಗೆ ಉಯ್ಯಾಲೆಯಾಟದ ಸ್ಪರ್ಧೆಗಳೇ
ನಡೆಯುತ್ತವೆ. ಚೈತ್ರತದಿಗೆಯ ಚೈತ್ರಗೌರೀವ್ರತದಲ್ಲೂ
ಉಯ್ಯಾಲೆಯಾಟ ಮುಂದುವರೆಯುತ್ತದೆ. ಮಾವಿನ ನೈವೇದ್ಯ ಹಾಗೂ ಮಾವಿನ ಹಣ್ಣನ್ನೂ ಮಾವಿನ ತಿನಿಸುಗಳನ್ನು
ವಿತರಿಸುವ ಪದ್ಧತಿಯಿದೆ. ಕುಲದ ಉನ್ನತಿಗಾಗಿ ವೈಶಾಖಮಾಸದಲ್ಲಿ ಅಕ್ಷಯತದಿಗೆ-ಗೌರಿವ್ರತವನ್ನು ಮಾಡಲಾಗುತ್ತದೆ.
ಜ್ಯೇಷ್ಠಮಾಸದಲ್ಲಿ
ದಿವಸಿಗೌರಿವ್ರತದ ಆಚರಣೆಯುಂಟು. ಆಷಾಢದಲ್ಲಿ ಆಷಾಡಗೌರೀವ್ರತದ ಆಚರಣೆ ಇದೆ. ಮೊಲಕಾವ್ರತ್ ಎಂಬ
ಹೆಸರಿನಿಂದ ಇದು ಗುಜಾರಾತಿನಲ್ಲಿ ಪ್ರಸಿದ್ಧ. ಈ ವ್ರತಗಳಲ್ಲದೆ, ಸೌಂದರ್ಯ ಹಾಗೂ ಕೀರ್ತಿಗಾಗಿ ಲಾವಣ್ಯಗೌರಿವ್ರತವನ್ನೂ, ಐಶ್ವರ್ಯಕ್ಕಾಗಿ ಸಂಪದ್ಗೌರಿವ್ರತವನ್ನೂ, ಜ್ಞಾನಪ್ರಾಪ್ತಿಗಾಗಿ ತ್ರಿಲೋಚನಗೌರಿವ್ರತವನ್ನೂ ಆಚರಿಸಲಾಗುತ್ತದೆ. ಭಾರತದ
ಮೂಲೆ ಮೂಲೆಗಳನ್ನು ಶೊಧಿಸಿ ನೋಡಿದಾಗ ಇನ್ನೂ ಹಲವು ಬಗೆಯ ಗೌರೀವ್ರತಗಳು ಬೆಳಕಿಗೆ ಬರುವುದು ಖಂಡಿತ.
ಎಲ್ಲ ವ್ರತಗಳನ್ನೂ ಎಲ್ಲರೂ ಮಾಡಬೇಕೆಂದು ಕಡ್ಡಾಯವಿಲ್ಲ. ಆದರೆ ಕುಲಾಚಾರ, ದೇಶಾಚಾರ, ಆಸಕ್ತಿ, ಶಕ್ತಿ,
ಸಾಧ್ಯಾಸಾಧ್ಯತೆಗಳನ್ನು ಗಣಿಸಿ ತಮಗೆ ಹೊಂದುವ ವ್ರತಕಲ್ಪವನ್ನು ಆಯ್ದುಕೊಳ್ಳುವುದು ಸನಾತನಧರ್ಮದಲ್ಲಿ
ಕಾಣಬರುವ ಸ್ವಾತಂತ್ರ್ಯ, ಔದಾರ್ಯ, ಸ್ವಾರಸ್ಯ.
ಒಟ್ಟಿನಲ್ಲಿ
ಗೌರಿಯು ಭಾರತೀಯಸ್ತ್ರೀಯರ ಭಾವಜಗತ್ತಿನಲ್ಲಿ ದೇವಿಯಷ್ಟೇ ಆಗಿರದೆ ಗುರುವೂ, ಆತ್ಮೀಯ ಮಾತೆಯೂ, ಅಂತರಂಗದ
ಪ್ರಿಯಸಖಿಯೂ, ಜೀವನಾದರ್ಶವೂ, ಸುಖದುಃಖಗಳಲ್ಲಿ ಸಂಗಾತಿಯೂ ಆಗಿದ್ದಾಳೆ. ಭಗವತಿ ಗೌರಿಯ ಅನುಗ್ರಹ ನಮ್ಮ
ಬಾಳಿನಲ್ಲೂ ದೇಶದಲ್ಲೂ ಶಾಂತಿ-ಶಕ್ತಿ-ಸಾಫಲ್ಯಗಳನ್ನು ತುಂಬಲಿ.
ಡಾ
ಆರತಿ ವಿ ಬಿ
Published in Samyukta Karnataka , 2014
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ