‘ನಮಸ್ಕಾರ’!
ಇದು ಭಾರತೀಯರ ಜೀವನದ ದಿನನಿತ್ಯದ ವ್ಯವಹಾರದಲ್ಲಿನ ಸೌಜನ್ಯ-ಸಂಸ್ಕೃತಿಗಳ ಸಂಕೇತವಾಗಿದೆ. ಸನಾತನ ಸಂಸ್ಕೃತಿಯು ಭಾರತದ ಹೆಗ್ಗುರುತಾಗಿ ಬೆಳೆಸಿಕೊಂಡುಬಂದ ಈ ನಮಸ್ಕಾರ
ಮುದ್ರೆ ಈ ವಿಶ್ವಾದ್ಯಂತ ಪ್ರಸಿದ್ಧ, ಅನುಕರಣೀಯವೂ ಆಗಿಬಿಟ್ಟಿದೆ! ನಮಃ ಎಂದರೆ ‘ನಾನಲ್ಲ’ ಎಂದರ್ಥ. ನಾನಲ್ಲ ನಾವು ಎನುವುದು ಭಾವಾರ್ಥ. ನಾನು
ಎನ್ನುವ ಗರ್ವ ಹಾಗೂ ಪ್ರತ್ಯೇಕತೆಗಳು ಕರಗಿ ‘ನಾವು’ ಎನ್ನುವ
ಸ್ನೇಹ-ಸೌಹಾರ್ದತೆಗಳ ಭಾವೈಕ್ಯವನ್ನು ಮೂಡಿಸುವಂತಹದ್ದು ಈ ನಮಸ್ಕಾರ ಮುದ್ರೆ!
ನಮಸ್ಕಾರದಲ್ಲಿ
ಬಗೆಬಗೆ. ‘ನಮಸ್ಕಾರ’ ಎಂದು ಮಾತಿನಲ್ಲಿ ಮಾತ್ರ ಹೇಳುವುದು ಒಂದು ವಿಧಾನ. ದೂರವಾಣಿಯಲ್ಲಿ ಮಾತನಾಡುವಾಗ
ಇಷ್ಟೇ ಸಾಧ್ಯ ಎನ್ನಿ. ಕರಗಳನ್ನು ಜೋಡಿಸಿ ನಗುಮೊಗದಿಂದ ನಮಸ್ಕಾರ ಎನ್ನುವ ಅಥವಾ ಎದೆಯನ್ನು ಕೈಯಿಂದ
ಸ್ಪರ್ಶಿಸಿ ತಲೆಯನ್ನು ಸ್ವಲ್ಪ ಬಗ್ಗಿಸಿ ಮಾಡುವ ನಮಸ್ಕಾರ ನಾಗರೀಕ ಸಮಾಜದಲ್ಲಿ ಸರ್ವೇಸಾಮಾನ್ಯ. ಕರಗಳನ್ನು
ಜೋಡಿಸಿ ತಲೆ ಬಾಗಿಸುವ ನಮಸ್ಕಾರ ನಮ್ಮ ಸಂಸ್ಕೃತಿಯ ಹೆಗ್ಗುರುತು. ಗುರುಹಿರಿಯರಿಗೆ ನಮಸ್ಕರಿಸುವಾಗ
ಕೈಯಲ್ಲಿರುವ ವಸ್ತುಗಳನ್ನು ಪಕ್ಕಕ್ಕಿಟ್ಟು, ಶಿರಬಾಗಿ,
ಕಣ್ಮುಚ್ಚಿ, ಮಂಡಿಯೂರಿ ಮಾಡುವುದು ಸಂಪ್ರದಾಯ. ಪಾದ
ಮುಟ್ಟಿಯೋ, ಪಾದದವರೆಗೂ ಬಗ್ಗಿಯೋ ಮಾಡುವ ವಿನಮ್ರ ಪ್ರಣಾಮವೂ ಉಂಟು. ಉತ್ತರಭಾರತದಲ್ಲಿ ಸ್ತ್ರೀಯರು
ತಲೆಯ ಮೇಲೆ ಸೆರಗನ್ನು ಎಳೆದುಕೊಂಡು ನಮಸ್ಕಾರ ಮಾಡುತ್ತಾರೆ. ಸಿಖ್ಹರ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ತ್ರೀಪುರುಷರೆಲ್ಲರೂ
ತಲೆಯ ಮೇಲೆ ಬಟ್ಟೆಯ ತುಂಡನ್ನಾದರೂ ಧರಿಸಿಯೇ ನಮಸ್ಕರಿಸುವುದು ಕಡ್ಡಾಯ. ದೇವರ ಮುಂದೆ ಸಾಷ್ಟಾಂಗ ನಮಸ್ಕಾರ
ಗೈಯುವುದುಂಟು. ಹೀಗೆ ಎಂಟು ಅಂಗಗಳು ನೆಲಕ್ಕೆ ತಾಗುವಂತೆ ಕೆಳಮುಖವಾಗಿ ನೆಲೆದ ಮೇಲೆ ಮೈಯನ್ನು ಹರಡಿ
ಮಾಡುವ ನಮಸ್ಕಾರವನ್ನು ‘ಸಾಷ್ಟಾಂಗನಮಸ್ಕಾರ’ ಎನ್ನುತ್ತಾರೆ. ಇನ್ನು ಭಗವಂತನಿಗೆ ಶರಣಾಗುವ ಭಾವದಲ್ಲಿ ಎರಡು ಕೈಗಳನ್ನು
ತಲೆಯ ಮೇಲೆ ನಮಸ್ಕಾರ ಮುದ್ರೆಯಲ್ಲಿ ಹಿಡಿಯುವ ಭಂಗಿಯುಂಟು. ಸಂಕೀರ್ತನೆ, ರಥೋತ್ಸವ ಅಥವಾ ಕ್ಷೇತ್ರದರ್ಶನದ
ಸಂದರ್ಭಗಳಲ್ಲಿ ಆಸ್ತಿಕರಿಗೆ ಸಹಜವಾಗಿ ಬರುವ ಭಾವಪೂರ್ಣ ನಮಸ್ಕಾರ ಭಂಗಿ ಇದು. ಇನ್ನು ಎರಡು ಭುಜಗಳನ್ನು
ಮೇಲಕ್ಕೆ ಚೆಲ್ಲಿ ಶರಣಾಗತಿಯನ್ನು ಸೂಚಿಸುವ ನಮಸ್ಕಾರ ಕಾಣಬರುತ್ತದೆ. ಚೈತನ್ಯಮಹಾಪ್ರಭುಗಳ ಸಂಕೀರ್ತನ
ಭಂಗಿ ಇಲ್ಲಿ ಸ್ಮರಣೀಯ. ದೇವರ ಮುಂದೆ ಯಾಚಿಸುವ ಭಂಗಿಯಲ್ಲಿ ಅಂಗೈಗಳನ್ನು ಮೇಲ್ಮುಖವಾಗಿ ಎತ್ತಿ ಹಿಡಿಯುವ
ನಮಸ್ಕಾರವೂ ಇದೆ. ಜಪಾನೀ ದೇಶದಲ್ಲಿ ಬೆನ್ನು ಬಾಗಿಸಿ ಮಾಡುವ ನಮಸ್ಕಾರವಿದೆ. ಮುಸಲ್ಮಾನರ ‘ಸಲಾಂ’
ಒಂದು ಶೈಲಿಯ ನಮನ. ರಾಷ್ಟ್ರಧ್ವಜಕ್ಕೆ, ದೇಶಕ್ಕೆ ಹುತಾತ್ಮರಿಗೆ, ನಾಯಕರಿಗೆ ಕೈಯನ್ನು ನೆತ್ತಿಗೆ
ಹಿಡಿದು ಅಥವಾ ಎದೆಯ ಮುಂದೆ ಹಿಡಿದು ಸೆಲ್ಯೂಟ್ ಮಾಡುವ ನಮನವೂ ಇದೆ.
ಕರಗಳನ್ನು
ನಮಸ್ಕಾರಭಂಗಿಯಲ್ಲಿ ಜೋಡಿಸುವುದು ಭಾರತೀಯ ಸಂಸ್ಕೃತಿಯ ಹೆಗ್ಗುರುತೇ ಆಗಿದೆ. ನಮಸ್ಕಾರದಲ್ಲಿ ಕ್ರಮ
ಇದೆ. ಎರಡು ಕೈಗಳನ್ನು ಜೋಡಿಸಿಟ್ಟಾಗ, ಪಕ್ಕಪಕ್ಕದ ಬೆರಳುಗಳು ಸ್ವಲ್ಪ ದೂರದೂರವಿರಬೇಕು. ಹೆಬ್ಬೆಟ್ಟುಗಳು
ಎದೆಯನ್ನು ಮುಟ್ಟಿರಬೇಕು, ಮಧ್ಯದ ಮೂರು ಬೆರಳುಗಳು ಮೇಲ್ಮುಖವಾಗಿರಬೇಕು.
ಪಾದಾಭಿವಂದನೆ
ಅರ್ಥಪೂರ್ಣವಾದ ಪದ್ಧತಿ. ‘ಪಾದ ಮುಟ್ಟುವುದು ದಾಸ್ಯದ ಸಂಕೇತ’ವಲ್ಲ. ಗುರುಹಿರಿಯರ ಪಾದಗಳಿಗೆ ನಮಿಸುವುದೆಂದರೆ
ಅವರ ವಯಸ್ಸು ಹಾಗೂ ಅನುಭವಜ್ಞಾನವನ್ನೂ ಹಾಗೂ ಅವರಿಂದ ನಾವು ವಾರಸುದಾರರಾಗಿ ಪಡೆಯುವ ವ್ಯಕ್ತಿತ್ವ,
ನಾಮಧೇಯ, ಭಾಷೆ, ಭಾವನೆ, ವಿಚಾರಧಾರೆ, ಆಸ್ತಿ, ಸಂಪ್ರದಾಯ, ಸಂಸ್ಕೃತಿ ಹಾಗೂ ವಾತ್ಸಲ್ಯ, ಪ್ರೀತಿ,
ಸೇವೆಗಳಿಗೂ ಹಾಗೂ ಇನ್ನೆಲ್ಲ ಬಗೆಯ ಜೀವನೋಪಯೋಗಿ ಸಂಸ್ಕಾರಗಳ ಬಗ್ಗೆಯೂ ಗೌರವಾಭಿಮಾನವನ್ನು ವ್ಯಕ್ತಪಡಿಸುವುದು’
ಎಂದರ್ಥ. ಪಾದಾಭಿವಂದನೆಯ ಮೂಲಕ ನಾವು ನೈಜದಲ್ಲಿ ಇಡಿಯ ಪರಂಪರೆಗೇ ಗೌರವ ಸಲ್ಲಿಸುತ್ತೇವೆ. ತಂದೆತಾಯಿಯರಿಗೆ,
ಅಥವಾ ಅವರ ಪೀಳಿಗೆ ಅಥವಾ ವಯಸ್ಸಿನವರಾದ ಅಥವಾ ಅವರಿಗಿಂತ ಹಿರ್ಯರಾದವರಿಗೆ, ಸಾಕಿದವರಿಗೆ, ರಕ್ಷಕರಿಗೆ,
ಶಿಕ್ಷಕರಿಗೆ, ಪ್ರಾಜ್ಞರಿಗೆ, ಸಂನ್ಯಾಸಿಗಳಿಗೆ, ಯೋಗಿಗಳಿಗೆ ಪಾದಾಭಿವಂದನೆ ಸಲ್ಲುತ್ತದೆ. ನಮಗಿಂತ
ಜ್ಞಾನಾನುಭವ-ವಯಸ್ಸುಗಳಲ್ಲಿ ಹಿರಿಯರಾದವರ ಮುಂದೆ ವಿನಮ್ರವಾಗಿರುವುದೇ ಇಲ್ಲಿನ ಸಂಕೇತ. ‘ನಾನು ನಿಮ್ಮಿಂದ
ತಿಳಿಯುವುದು ಇನ್ನೂ ಇದೆ’ ಎನ್ನುವ ವಿನಮ್ರತೆ ಹಾಗೂ ಜಿಜ್ಞಾಸೆಗಳನ್ನು ಇದು ಸೂಚಿಸುತ್ತದೆ. ನಮಸ್ಕಾರದಿಂದ
ಆಗುವ ಭಾವನಾತ್ಮಕ ಸಂಸ್ಕಾರವನ್ನು ಗಮನಿಸಿ. ಹಿರಿಯರಿಗೆ ಸಹಜವಾಗಿ ನಮ್ಮ ಮೇಲೆ ವಾತ್ಸಲ್ಯ ಮೂಡುತ್ತದೆ,
ನಮ್ಮ ತಪ್ಪುಗಳನ್ನು ಕ್ಷಮಿಸಿ ಹರಸುತ್ತಾರೆ. ನಾವು ನಮ್ಮ ವಿದ್ಯೆ, ಸ್ಥಾನ ಮಾನಗಳೆಲ್ಲವನ್ನು ಮರೆತು
ಕ್ಷಣಕಾಲ ‘ಮಕ್ಕಳಾ’ಗುತ್ತೇವೆ, ವಿನಮ್ರರಾಗುತ್ತೇವೆ.
ಪಾದಾಭಿವಂದನೆ
ಎಂದರೆ ವಸ್ತುತಃ ಪದಗಳನ್ನು ಮುಟ್ಟಲೇಬೇಕೆಂದೇನಿಲ್ಲ. ಪಾದಗಳ ಮುಂದೆ ನಮಸ್ಕರಿಸಿದರಾಯಿತು. ಹೆತ್ತ
ತಾಯ್ತಂದೆ, ಪತಿ, ಅಣ್ಣ, ಅಕ್ಕ, ಅತ್ತೆ, ಮಾವ ಮುಂತಾದ ಹತ್ತಿರದ ಸಂಬಂಧಿಗಳ ಹೊರತು ಬೇರಾರ ಪಾದಗಳನ್ನೂ
ಮುಟ್ಟುವ ಅಗತ್ಯವಿಲ್ಲ. ಗುರುಗಳಿಗೆ, ಸಂನ್ಯಾಸಿಗಳಿಗೆ ಹಿರಿಯರಿಗೆ ಮುಟ್ಟದೆ ದೂರದಿಂದ ನಮಸ್ಕರಿಸುವುದೇ
ಸಭ್ಯ ಸುಂದರ. ಪಾದ ಮುಟ್ಟುವುದಿರಲಿ, ಕೈಗಳಿಂದ ಆವರಿಸಿ, ಮಂಡಿಯವರೆಗೂ ನೇವರಿಸಿ, ಮತ್ತೆ ಮತ್ತೆ ನಮಸ್ಕರಿಸುವ
ಚಾಳಿಯಿರುವ ‘ಭಕ್ತ’ರಿಂದ ಸದಾ ತನುಮನಗಳ ಶುದ್ಧಿಯನ್ನು ಪಾಲಿಸಬೇಕಾದ ವ್ರತಧಾರಿಗಳಾದ ಯತಿಗಳಿಗೆ ಮುಜುಗರವೇ
ಸರಿ. ಹಿರಿಯರ ಆಶೀರ್ವಾದ ಭಾವನಾತ್ಮಕವಾಗಿ ಹರಿದು ಬರುವಂತಹದ್ದಾದ್ದರಿಂದ ಬಾಹ್ಯದಲ್ಲಿ ನಮಸ್ಕಾರದ
ಹೆಸರಲ್ಲಿ ಅತಿಯಾದ ಆಚರಣೆಯ ಅಗತ್ಯವಿಲ್ಲ.
ಇಂದ್ರಜಿತನು
ಬಿಟ್ಟ ಬ್ರಹ್ಮಾಸ್ತ್ರವನ್ನು ತನ್ನ ವಿನಮ್ರ ನಮಸ್ಕಾರದಿಂದಲೇ ಹನುಮಂತ ಒಲಿಸಿಕೊಂಡುಬಿಟ್ಟನಂತೆ! ಕರ್ಣನ
ನಾರಾಯಣಾಸ್ತ್ರವನ್ನೂ ಅರ್ಜುನ ಹೀಗೆ ನಮಸ್ಕಾರದಿಂದ ಒಲಿಸಿಕೊಂಡನಂತೆ! ಅಂಗಸ್ಪರ್ಶವಿಲ್ಲದೆ ಸಭ್ಯವೂ
ಭಾವಬಂಧುರವೂ ಸರಳವೂ ಅರ್ಥಪೂರ್ಣವೂ ಆದ ಈ ನಮಸ್ಕಾರಮುದ್ರೆ ಬೇರೆಲ್ಲ ಮುದ್ರೆಗಳಿಗಿಂತ ಶ್ರೇಷ್ಟವಾದದ್ದು,
ಪ್ರಭಾವಶಾಲಿಯದದ್ದು. ಏನೆನ್ನುತ್ತೀರಿ? ನಮಸ್ಕಾರ!
ಡಾ ಆರತೀ ವಿ ಬಿ
Published in Samyukta Karnataka, 2014
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ