ಯೋಗ ಮತ್ತು ಸಂಗೀತ
ಯೋಗ ಎನ್ನುವುದು ಆತ್ಮದೊಂದಿಗೆ ನಮ್ಮನ್ನು ಬೆಸೆಯುವ ಪ್ರಕ್ರಿಯೆ. ’ಯುಜ್ಯತೆ ಇತಿ ಯೋಗಃ’ ಎಂದೇ ನಿರ್ವಚನ. ನಮ್ಮ ಆತ್ಮಶಕ್ತಿಯು ಅಮಿತವಾಗಿದ್ದು, ಅದು ವ್ಯಕ್ತಿತ್ವದಲ್ಲಿ ಹುದುಗಿರುವ ಅನಂತ ಸತ್ವಸಾಮರ್ಥ್ಯಗಳನ್ನು ಅಭಿವ್ಯಂಜಿಸಲು ನೆರವಾಗಿ ಅದ್ಭುತ ಸಾದನೆಗಳನ್ನು ನಮ್ಮಿಂದ ಮಾಡಿಸಬಲ್ಲುದು. ಆಧ್ಯಾತ್ಮಿಕ, ವೈಜ್ಞಾನಿಕ, ಕಲಾತ್ಮಕ, ಮೂಮ್ತಾದ ಯಾವುದೇ ಸಾಧನೆ ಇರಲಿ, ಅವು ಮೇಲ್ನೋಟಕ್ಕೆ ಬೇರೆ ಬೇರೆಯಾಗಿ ಕಂಡುಬಂದರೂ ಅವುಗಳೆಲ್ಲ ಅದೇ ಆತ್ಮಶಕ್ತಿಯ ಅಭಿವ್ಯಕ್ತಿಳೇ ಎನ್ನುವುದನ್ನು ಮರೆಯಬಾರದು.
ಮನುಷ್ಯನಲ್ಲಿನ ಈ ಆತ್ಮಶಕ್ತಿಯ ಅಭಿವ್ಯಕ್ತಿಯಲ್ಲಿ ಸಾಧಕಗಳಾವುವು? ಬಾಧಕಳಾವುವು? ಎನ್ನುವುದನ್ನು ಚಿಂತಿಸಿದವರು ನಮ್ಮ ಆರ್ಷಋಷಿಗಳು. ಬಾಧಕಗಳನ್ನು ನಿವಾರಿಸಿ ಸಾಧಕಗಳನ್ನು ಗುರುತಿಸಿ, ಅದರ ಮೂಲಕ ಮುನ್ನಡೆವ ಅನೇಕ ಪಥಗಳನ್ನು ಆವಿಷ್ಕರಿಸಿದರು. ಆತ್ಮಶಕ್ತಿಯ ಸಂಚಯ ಹಾಗೂ ಉದಾತ್ತೀಕರಣಕ್ಕೆ ನಮ್ಮ ಋಷಿಗಳು ಕಂಡುಕೊಂಡ ಮಾರ್ಗಗಳಲ್ಲಿ ಪ್ರಮುಖವಾದದ್ದು ’ಯೋಗಶಾಸ್ತ್ರ’. ’ಯೋಗಶ್ಚಿತ್ತವೃತ್ತಿನಿರೋಧಕಃ’ ಎನ್ನುವ ಸೂತ್ರದ ಅರ್ಥವನ್ನು ಧ್ಯಾನಿಸಿದಾಗ ಯೋಗವು ನಮ್ಮ ಅಂತರ್ಬಹಿರಂಗಗಳ ಮೇಲೆ ನಮಗೆ ಹತೋಟಿಯನ್ನು ಸಾಧಿಸಿಕೊಡುವ ಸಾಧನವಾಗಿದೆ ಎನ್ನುವ ಅರ್ಥಸ್ಪಷ್ಟವಾಗುತ್ತದೆ. ದೇಹದಾರ್ಢ್ಯಕ್ಕೆ ಬೇಕಾದ ಆರೋಗ್ಯವನ್ನೂ, ಬುದ್ಧಿಯ ಪಾಕಕ್ಕೆ ಬೇಕಾದ ಜಾಢ್ಯನಿವಾರಣೆಯನ್ನು, ಮನಸ್ಸಿನ ಹಿಡಿತಕ್ಕೆ ಬೇಕಾದ ಚಿತ್ತಶುದ್ಧಿಯನ್ನೂ ಹಾಗೂ ನಮ್ಮ ಅನಂತ ಪ್ರತಿಭೆ, ಅಭಿರುಚಿ, ಜ್ಞಾನ ಅಂತರ್ದೃಷ್ಟಿಗಳನ್ನು ಅಭಿವ್ಯಂಜಿಸಲು ಬೇಕಾದ ಲವಲವಿಕೆ, ತಾಳ್ಮೆ, ಪರಿಶ್ರಮಶೀಲತೆ ಹಾಗೂ ಚಿತ್ತೈಕಾಗ್ರತೆಗಳನ್ನು ಸಾಧಿಸುವಲ್ಲಿ ಯೋಗಕ್ಕಿಂತ ಉತ್ತಮ ಸಾಧನೆ ಮತ್ತೊಂದಿಲ್ಲ ಎನ್ನುವುದು ಜಗನ್ಮಾನ್ಯವಾದ ಸತ್ಯ. ಯೋಗದ ಮಾನವ ಸಶಕ್ತೀಕರಣದ ಅದ್ಭುತ ಸಾಮರ್ಥ್ಯವನ್ನು ಮನಗಂಡ ಜಗತ್ತು ಇಂದು ಯೋಗವನ್ನು ಹೆಚ್ಚು ಹೆಚ್ಚು ಅಳವಡಿಸಿಕೊಳ್ಳುತ್ತಿದೆ. ಆ ವಿಷಯದಲ್ಲಿ ಸನಾತನಧರ್ಮವು ವಿಶ್ವಕ್ಕೇ ಗುರುವಾಗಿದೆ.
ಯೋಗಶಾಸ್ತ್ರದಲ್ಲಿ ಯಮನಿಯಮಗಳನ್ನು ಸಾಧಿಸಿದ ಮೇಲೆ ಬರುವ ಅಂಗಗಳು ಆಸನ, ಪ್ರಾಣಾಯಾಮ, ಪ್ರತ್ಯಾಹಾರ ಹಾಗೂ ಧ್ಯಾನಗಳು. ಇಂದ್ರಿಯನಿಗ್ರಹ, ಚಿತ್ತಶುದ್ಧಿ ಹಾಗೂ ಆತ್ಮ ಸಂಯಮ ಆತ್ಮ ಸಂಸ್ಕರಣಗಳನ್ನು ಯಮನಿಯಮಗಳ ಮೂಲಕ ಸಾಧಿಸಬೇಕು. ಆ ಬಳಿಕ ’ಆಸನ’ ದ ಮೂಲಕ ದೇಹದ ಸರ್ವ ಅವಯವಗಳನ್ನು, ಮುಖ್ಯವಾಗಿ ಬೆನ್ನೆಲುಬು ಹಾಗೂ ಕರ್ಮೇಂದ್ರಿಯಗಳನ್ನೂ ಪುಷ್ಟವಾಗಿಸಬೇಕು, ಶಕ್ತವಾಗಿಸಬೇಕು ಎನ್ನುತ್ತದೆ ಯೋಗಶಾಸ್ತ್ರ. ಸಿದ್ಧಿಯನ್ನು ಪಡೆಯುವ ಸಲುವಾಗಿ ದೇಹ, ಶ್ವಾಸ ಹಾಗೂ ಮನಸ್ಸನ್ನು ನಿಯಂತ್ರಿಸುವ ಅದ್ಭುತ ಸಾಧನಾಯಾನ ಅಲ್ಲಿಂದ ಪ್ರಾರಂಭವಾಗುತ್ತದೆ.
ಈಗ ನೇರವಾಗಿ ಸಂಗೀತದ ವಿಚಾರಕ್ಕೆ ಬರೋಣ- ಸಂಗೀತ, ಅದರಲ್ಲೂ ಹಾಡುಗಾರಿಕೆಯಲ್ಲಿ ಬಹಳ ಮುಖ್ಯ ಪಾತ್ರವಹಿಸುವುದು ಶ್ವಾಸದ ಹಿಡಿತ. ಧ್ವನಿಯ ಪುಷ್ಟಿಗೂ ಶುದ್ಧಿಗೂ ಹಾಗೂ ಉಚ್ಚಾರಣಸೌಷ್ಟವಕ್ಕೂ ಬಹಳ ಮುಖ್ಯವಾಗಿ ಬೇಕಾಗಿರುವುದು ಶ್ವಾಸದ ನಿಯಂತ್ರಣ. ಹಾಡುವಾಗ ಧ್ವನಿಯು ನಾಭಿ, ಹೃತ್. ಕಂಠ ರಸನ, ನಾಸ ಹಾಗೂ ಮೂರ್ಧ್ನಿಗಳಲ್ಲಿ ಹಾದು ವಾಕ್ಕಿನ ಮೂಲಕ ವ್ಯಕ್ತವಾಗಬೇಕು ಎನ್ನುವುದು ಶಾಸ್ತ್ರಗಳ ನಿರ್ದೇಶನ. ಕೇವಲ ಕಂಠದಿಂದಷ್ಟೇ ಹೊಮ್ಮಿಸುವ ನಾದವು ಅಪಕ್ವವೂ ಅಶಕ್ತವೂ ಆಗಿರುತ್ತದೆ. ಅಂತಹ ಹಾಡುಗಾರಿಕೆ ಟೊಳ್ಳಾಗಿದ್ದು ಪ್ರಭಾವಶಾಲಿಯಾಗಲಾರದು. ಹಾಗಾಗಿ ಹಾಡುಗಾರನು ನಾಭಿಹೃತ್ಕಂಟರಸನನಾಸಾದಿಗಳ ಮೂಲಕ ನಾದವನ್ನು ಸೂಕ್ತವಾಗಿ ಹೊಮ್ಮಿಸುವ ನಿಯಮಿತ ಅಭ್ಯಾಸ ಮಾಡಬೇಕೆನ್ನುತ್ತವೆ ಶಾಸ್ತ್ರಗಳು. ಜೊತೆಗೆ ದೀರ್ಘವಾದ ಅಕಾರಾದಿ ಆಲಾಪನೆ, ತಾರಸ್ಥಾಯಿಯಲ್ಲಿ ನಿಲುಗಡೆ ಮಾಡಿ ಹಾಡುವ ಸ್ವರಪುಂಜಗಳು ಇತ್ಯಾದಿಗಳು ಶ್ವಾಸಶಕ್ತಿಯನ್ನೇ ಅವಲಂಬಿಸಿರುತ್ತವೆ. ಯೋಗದಲ್ಲಿ ಮಾಡಲಾಗುವ ಪ್ರಾಣಾಯಾಮವು ಈ ಉದ್ದೇಶಕ್ಕೆ ಪೂರಕವಾಗಿದೆ. ಸುದೀರ್ಘವಾದ ಅಕಾರ ಉಕಾರ ಮಕಾರಗಳನ್ನೂ, ಶಾಸವನ್ನೂ ಸೆಳೆಯುವ ಉಚ್ಛ್ವಾಸ, ಬಿಡುವ ನಿಶ್ವಾಸ ಹಾಗೂ ಹಿಡಿದಿಟ್ಟುಕೊಳ್ಳುವ ಕುಂಭಕಗಳು ಕಂಠಕ್ಕೂ, ಶ್ವಾಸಕೋಶಕ್ಕೂ ಧ್ವನಿಪೆಟ್ಟಿಗೆಗೂ ಉತ್ತಮ ವ್ಯಾಯಾಮಗಳು. ಯೋಗತರಬೇತಿಗಾರರು ವಾಯ್ಸ್ ಕಲ್ಚರ್ ವಿಧಾನಗಳಲ್ಲಿ ಪ್ರಾಣಾಯಾಮದ ಹಲವು ಪ್ರಕ್ರಿಯೆಗಳಿಗೇ ಒತ್ತುಕೊಡುತ್ತಾರೆ.
ಇನ್ನು ಕೊಳಲು, ನಾದಸ್ವರ, ಸ್ಯಾಕ್ಸೋಫೋನ್, ಬಾಂಸುರಿ, ಮೋರ್ಸಿಂಗ್ ಮುಂತಾದ ವಾದ್ಯಗಳನ್ನು ನುಡಿಸುವವರೂ ತಮ್ಮ ಶ್ವಾಸವನ್ನು ಶಕ್ತಗೊಳಿಸಿಕೊಳ್ಳುವುದು ಅತ್ಯಗತ್ಯ. ಅಲ್ಲೂ ಈ ಪ್ರಾಣಾಯಾಮ ಹಾಗೂ ದೀರ್ಘಶ್ವಾಸೋಚ್ಛ್ವಾಸಗಳ ಅಭ್ಯಾಸ ಬಹಳ ಮುಖ್ಯ.
ಇನ್ನು ’ವೀಣೆ, ಪಿಟೀಲು, ಮೃದಂಗಾದಿಗಳನ್ನು ನುಡಿಸುವವರಿಗೆ ಯೋಗ ಬೇಡವೆ?’ ಎಂದರೆ, ಅವರಿಗೂ ಬೇಕು. ಮೂರ್ನಾಲ್ಕು ಘಂಟೆಗಳ ಕಾಲ ಒಂದೇ ಆಸನದಲ್ಲೂ ಭಂಗಿಯಲ್ಲೂ ಕುಳಿತು ವಾದ್ಯವನ್ನು ನುಡಿಸುವುದು ದೇಹಕ್ಕೆ, ಅದರಲ್ಲೂ ಬೆನ್ನು ಕಾಲು ಹಾಗೂ ಕುತ್ತಿಗೆಗೆ ಸಾಕಷ್ಟು ಶ್ರಮದಾಯಕವೇ ಸರಿ. ಯಾವುದೇ ಕೆಲಸವನ್ನು ಘಂಟೆಗಟ್ಟಲೇ ಒಂದೇ ಭಂಗಿಯಲ್ಲಿ ಮಾಡುವವರು ದೇಹದ ಅವಯವಗಳನ್ನು ವಿಶ್ರಮಿಸುವ ಅಗತ್ಯ ಇದ್ದೇ ಇದೆ. ಇಲ್ಲದಿದ್ದಲ್ಲಿ ಎರ್ಗಾನೋಮಿಕ್ (ಆಸನ ಸಂಬಂಧಿತ ಕಾಯಿಲೆಗಳು) ಸಂಭವಿಸುತ್ತವೆ. (ಕಂಪ್ಯೂಟರ್, ಮೊಬೈಲ್, ಟೀವಿ, ಮುಂತಾದವುಗಳನ್ನು ಚಟದಷ್ಟು ಬಳಸುವವರು ಈ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಾಣಬರುತ್ತಿದೆ) ಸೂರ್ಯನಮಸ್ಕಾರವಲ್ಲದೆ ಕೈ, ಭುಜ, ಬೆನ್ನು, ಕುತ್ತಿಗೆ ಹಾಗೂ ಬೆರಳುಗಳಲ್ಲಿ ಚೆನ್ನಾಗಿ ರಕ್ತಸಂಚಾರವಾಗುವಂತೆ ಮಾಡಬೇಕಾದ ಯೋಗಾಸನಗಳು ವ್ಯಾಯಮಗಳು ಹಲವು ಇವೆ. ಇವನ್ನೆಲ್ಲ ಈ ಕಲಾವಿದರು ಮೊದಲಿಂದಲೂ ಮಾಡುತ್ತಬಂದಲ್ಲಿ ದೇಹವು ಹೆಚ್ಚು ಲವಲವಿಕೆಯಿಂದ ಕೂಡಿದ್ದು ಅವರ ಕಲಾತಪಸ್ಸೂ ನಿರ್ವಿಘ್ನವಾಗಿ ನಡೆಯುತ್ತದೆ.
ಯೋಗಸಾಧನೆಯಲ್ಲಿನ ’ಪ್ರತ್ಯಾಹಾರ’ವೆಂಬ ಅಂಗವನ್ನು ನಾವೆಲ್ಲರೂ ಮರೆತೇ ಬಿಟ್ಟಿದ್ದೇವೆ ಎನ್ನಬಹುದು! ಆದರೆ ಅದರ ಪ್ರಾಶಸ್ತ್ಯವನ್ನು ಮರೆತರೆ ನಮಗಾಗುವ ನಷ್ಟ ಬಹಳ ದೊಡ್ಡದು. ಅಲ್ಲಿಲ್ಲಿ ಹರಿಹಂಚಿಹೋದ ಮನಸ್ಸನ್ನು ಸಂಗ್ರಹಿಸಿ ಶಕ್ತಿಸಂಚಯ ಮಾಡಿ ಮತ್ತೆ ಮತ್ತೆ ವಸ್ತುನಿಷ್ಟವಾಗಿಸಿ ಧಾರಣದಲ್ಲೂ ಧ್ಯಾನದಲ್ಲೂ ತೊಡಗಿಸಿದಾಗಲೇ ಸಿದ್ಧಿ, ಅದನ್ನೇ ಪ್ರತ್ಯಾಹಾರ ಎನ್ನುವುದು. ಕಲಾವಿದರು ತಮ್ಮ ಕಲಾಧ್ಯಾನದಲ್ಲಿ ತಲ್ಲೀನವಾಗಲು ಅತ್ಯಗತ್ಯವಾಗಿ ಬೇಕಾದ ಅಂಶವೇ ಪ್ರತ್ಯಾಹಾರ. ಮೆಚ್ಚುಗೆ, ಕೀರ್ತಿ, ಅಪಕೀರ್ತಿ, ಸ್ಪರ್ಧಾತ್ಮಕ ಜಗತ್ತಿನಲ್ಲಿನ ಏಳುಬೀಳುಗಳು, ಸುಳ್ಳು ಭರವಸೆ, ನಿರಾಶೆ ಇತ್ಯಾದಿ ಅನುಭವಗಳ ಉಯ್ಯಾಲೆಯಲ್ಲಿ ತೂರಾಡುವುದು ಈ ಜಗಜನರಿಗೆ ಅನಿವಾರ್ಯ, ಅದರಲ್ಲೂ ಸಾರ್ವಜನಿಕ ವಲಯಗಳಲ್ಲಿ ಒಡನಾಡುವ ಕಲಾವಿದರಿಗಂತೂ ಅತ್ಯಂತ ಅನಿವಾರ್ಯ. ಇವನ್ನೆಲ್ಲ ನಿರ್ವಿಕಾರಚಿತ್ತದಿಂದ ಸಹಿಸಿ ಜೀರ್ಣಿಸಿಕೊಂದು ಧ್ಯೇಯವನ್ನು ಹಿಡಿದು ಮುಂದುವರೆಯಲು ಬೇಕಾದ ಮನಶ್ಶಕ್ತಿ ಒದಗುವುದು ’ಪ್ರತ್ಯಾಹಾರ’ವನ್ನು ಅಭ್ಯಾಸ ಮಾಡಿದಾಗಲೆ. ಜನಧನದ ಸಂಗದಲ್ಲಿ ಅತಿಯಾಗಿ ತೊಡಗಿ ಧ್ಯೇಯವನ್ನೂ, ಕಲಾಭಿಜ್ಞ ಮನೋವೇದಿಕೆಯನ್ನೂ ಬಿಟ್ಟು ದೂರ ಗಮಿಸುವ ಬಹಿರ್ಮುಖತೆಯಲ್ಲಿ ಕಳೆದುಹೋಗುವ ಕಲಾವಿದರು ತಮ್ಮ ಗುಣಮಟ್ಟವನ್ನೂ ಕಳೆದುಕೊಳ್ಳುವುದಲ್ಲದೆ ಅಪಕೀರ್ತಿಗೆ ತುತ್ತಾಗುವ ಅಪಾಯವಿರುತ್ತದೆ!
ಇನ್ನು ಮುಮ್ದಿನ ಹಂತ - ಧಾರಣ. ಧಾರಣದ ಮೂಲಕ ಮನಸ್ಸನ್ನು ಒಂದೇ ಧ್ಯೇಯದಲ್ಲಿ ಸಾಧನಾಪಥದಲ್ಲಿ ಹಿಡಿದಿಡುವುದು, ಆ ಬಳಿಕ ಗಮ್ಯದ ಧ್ಯಾನದಲ್ಲಿ ತಲ್ಲೀನವಾಗುವುದು ಕಲಾವಿದನಿಗೆ ಉತ್ಕೃಷ್ಟತೆಯನ್ನು ತರುತ್ತದೆ. ಆಗಲೆ ಆತನು ನಿಜವಾದ ಅರ್ಥದಲ್ಲಿ ’ಕಲಾತಪಸ್ವಿ’/ ’ನಾದಯೋಗಿ’ ಎನಿಸುತ್ತಾನೆ. ನೈಜ ಕಲಾವಿದನು ತನ್ನ ಸಂಗೀತದಲ್ಲಿ ತಾನು ಅದೆಷ್ಟು ಮುಳುಗಬಲ್ಲ ಎಂದರೆ ಶ್ರೋತೃಗಳು, ಸಭಿಕರು, ಮೆಚ್ಚುಗೆ, ಸಮಯ, ಹಣ ಇತ್ಯಾದಿಗಳೆಲ್ಲದರ ಪರಿವೆಯನ್ನೂ ಕಳಚಿಕೊಂಡು, ’ತನ್ನ’ನೂ ತಾನು ಮರೆತು ನಾದಲೋಕದಲ್ಲಿ ಕರಗಿಹೋಗಬಲ್ಲ! ಬ್ರಹ್ಮಾನಂದಕ್ಕೆ ಸಮನದ ರಸಾನಂದದಲ್ಲಿ ಲೀನನಾಗಬಲ್ಲ! ಅಂತಹವನ ಕಲೆಯು ಅವನ ಶ್ರೂತೃಗಳನ್ನೂ ಅಂತಹದ್ದೇ ಎತ್ತರದ ಆನಂದಕ್ಕೇ ಒಯ್ಯಬಲ್ಲುದು! ಚರಾಚರವನ್ನೇ ಕರಗಿಸುವ ಸಂಗೀತೆ ಎಂದೆಲ್ಲ ಹೊಗಳುವುದು ಅಂತಹ ದಿವ್ಯ ಸಂಗೀತವನ್ನೇ. ಇಂತಹ ರಸೋತ್ಕರ್ಷವೇ ಸಂಗೀತ ಮುಂತಾದ ಎಲ್ಲ ಕಲೆಗಳ ಚರಮೋದ್ದೇಶವಾಗಿದೆ. ಮುಗ್ಧಸಂತೋಷಕ್ಕಾಗಿ ಮನೋರಂಜನೆಗಾಗಿ ಶುರುವಾಗುವ ಸಂಗೀತವು ಒಂದು ಕೌಶಲವಾಗಿ, ಮುಂದೆ ಜಗನ್ಮಾನ್ಯ ಪ್ರತಿಭೆಯಾಗಿ ಸಾಗುತ್ತ ಕೊನೆಗೆ ನಾದೋಪಾಸನೆಯಾಗಿ ಮೋಕ್ಷಕ್ಕೆ ಕರೆದೊಯ್ಯುವುದು ಹೀಗೆಯೇ. ಈ ತಥ್ಯವನ್ನು ತಿಳಿಯದ ಕಲಾವಿದನು, ಅತಿಯಾದ ಬಹಿರ್ಮುಖತೆಯ ಪರಿಣಾಮವಾಗಿ ಹೆಸರು, ಹಣ, ಅವಕಾಶಾದಿಗಳ ತಡಕಾಟದಲ್ಲೂ, ಅದರಿಂದ ಸಿಗುವ ತಾತ್ಕಾಲಿಕವಾದ ತೃಪ್ತಿಯಲ್ಲೂ ತನ್ನ ಕಲೆಯನ್ನು ವ್ಯಾಪಾರೀಕರಣ ಮಾಡುತ್ತ ಪ್ರತಿಭಾವ್ಯಯವನ್ನು ಮಾಡಿಕೊಳ್ಳುತ್ತಾನೆ. ಆದರೆ ಕಲೆಯ ವ್ಯಾಪ್ತಿವೈಶಾಲ್ಯಗಳನ್ನೂ ಯೋಗಸಾಧಕಶಕ್ತಿಯನ್ನು ಅರಿತ ಕಲಾವಿದನು ಕಲಾಸಾಧನೆಯ ಮುಖಾಂತರವೇ ಯೋಗಿಯಾಗಬಲ್ಲ, ತ್ಯಾಗರಾಜ, ಹರಿದಾಸ, ಪುರಂದರಾದಿಗಳು ಇದಕ್ಕೆ ಜ್ವಲಂತ ಉದಾಹರಣೆಗಳು. ಯಾವುದೇ ಕ್ಷೇತ್ರವಾಗಲಿ, ಮನುಷ್ಯನಿಗೆ ಅದರಲ್ಲಿ ಮುಂದುವರೆಯಲು ಆತ್ಮಶಕ್ತಿಯ ಅರಿವನ್ನೂ, ಉತ್ಕೃಷ್ಟತೆಯನ್ನೂ ಒದಗಿಸುವುದೇ ’ಯೋಗ’ದ ಲಕ್ಷ್ಯ. ಆದ್ದರಿಂದ, ಸಂಗೀತಗಾರನನ್ನು ನಾದೋಯೋಗಿಯನ್ನಾಗಿಸುತ್ತದೆ ಯೋಗ!
ಈ ಎಲ್ಲ ಅರ್ಥಗಳನ್ನು ಅಭಿವ್ಯಂಜಿಸುವಂತಹದ್ದೇ ಶ್ರೀಕೃಷ್ಣಪರಮಾತ್ಮನ ಪ್ರಸಿದ್ಧ ಗೀತೋಕ್ತಿ ’ಯೋಗಃ ಕರ್ಮಸು ಕೌಶಲಂ’ಎನ್ನುವುದು.
ಡಾ ಆರತಿ ವಿ ಬಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ