ಶುಕ್ರವಾರ, ಮಾರ್ಚ್ 17, 2017

ಗೌರೀ ಧ್ಯಾನ
ಗೌರ ಎಂದರೆ ಬಿಳುಪು. ಗೌರಿ ಎಂದರೆ ಬೆಳ್ಳಗಿರುವವಳು ಅರ್ಥಾತ್ ‘ತೇಜಸ್ವಿನೀ’ ಎಂದರ್ಥ. ಇಲ್ಲಿ ಗೌರ ಶಬ್ದ ಕೇವಲ ಮೈಬಣ್ಣವನ್ನಷ್ಟೇ ಸೂಚಿಸುವ ಹೆಸರಂತೆ ಕಾಣಬಹುದು. ಆದರೆ ಬಿಳುಪನ್ನು ಜ್ಞಾನ ಹಾಗೂ ಪಾವಿತ್ರ್ಯಗಳ ಸಂಕೇತವಾಗಿ ಕಾಣುವ ಸನಾತನ ಸಂಸ್ಕೃತಿಯ ದೃಷ್ಟಿಕೋನದಲ್ಲಿ ಗೌರಿಯು ‘ಜ್ಞಾನಸ್ವರೂಪಿಣಿ’.
ಗೌರಿಯು ಪ್ರಕೃತಿತತ್ವದ ಪ್ರತಿನಿಧಿ. ಪಂಚಭೂತಾತ್ಮಕ ಮೂರ್ತ ಪ್ರಪಂಚವೆಲ್ಲ ಅವಳ ಅಭಿವ್ಯಕ್ತಿಯೆಂದು ಸಂಕೇತಿಸುವುದೇ ಅವಳ ಮಣ್ಣಿನ ಮೂರ್ತಿ. ಅರಸಿನದ ಗೌರಿ ಮೂರ್ತಿಯೂ ಕೂಡ ತ್ಟೇಜಸ್ಸು, ಜ್ಞಾನ ಹಾಗೂ ಪಾವಿತ್ರ್ಯಗಳ ಸಂಕೇತವಾಗಿದೆ. ಗೌರಿಪೂಜೆ ಎನ್ನುವುದು ಹಿಂದು ಹೆಣ್ಣುಮಕ್ಕಳ ಜೀವನದಲ್ಲಿ ಬಹಳ ಮುಖ್ಯವಾದ ಅಂಗ. ಮದುವೆ ಸಮಯದಲ್ಲಿ ಹಸೆಮಣೆಯನ್ನು ಏರುವ ಮುನ್ನ ಉಪವಾಸ ಮೌನಗಳಲ್ಲಿದ್ದು ಗೌರಿಯನ್ನು ಪೂಜಿಸುವ ಸಂಪ್ರದಾಯ ದೇಶದ ಎಲ್ಲ ಪ್ರಾಂತಗಳಲ್ಲೂ ಇದೆ. ಗೌರಿಪೂಜೆ ಮಾಡಿದ ಬಳಿಕ ತಾಯಿ ಕಟ್ಟುವ ಗೌರಿತಾಳಿಯನ್ನು ಧರಿಸಿ ಹಸೆಯೇರಿ ವಿವಾಹವಾಗುವ ಸಂಪ್ರದಾಯ ದಕ್ಷಿಣ ಭಾರತದಲ್ಲಿದೆ. ತಾಯಿ, ಅತ್ತೆ, ಮನೆಯ ಹಿರಿಯ ಸ್ತ್ರೀಯರು ಅಥವಾ ಗುರುಗಳಿಂದ ಗೌರೀಪಂಚಾಕ್ಷರೀ ಮಂತ್ರವನ್ನು ದೀಕ್ಷೆ ಪಡೆದು ಆಜನ್ಮ ಜಪವ್ರತವನ್ನು ಹಿಡಿಯುವ ಸಂಪ್ರದಾಯ ಇದೆ. ನಿತ್ಯಗೌರೀಪೂಜೆಯ ಜನ್ಮವ್ರತವಿರುವ ಸುಮಂಗಲಿಯರೂ ಹಲವರಿದ್ದಾರೆ. ಇದಲ್ಲದೆ ವರ್ಷದ ಎಲ್ಲ ಮಾಸಗಳ ತದಿಗೆಯಂದೂ ಆಚರಿಸಲಾಗುವ ಗೌರೀವ್ರತಗಳಿವೆ- ಚೈತ್ರದಂದು ಚೈತ್ರಗೌರೀ, ವೈಶಾಖದಲ್ಲಿ ಅಕ್ಷಯಗೌರಿ, ಜ್ಯೇಷ್ಠಮಾಸದಲ್ಲಿ ಜ್ಯೇಷ್ಟಾಗೌರೀ ಹಾಗೂ ದಿವಸಿಗೌರೀ, ಆಷಾಢದಲ್ಲಿ ಆಷಾಡಗೌರೀ (ಗುಜರಾತಿನಲ್ಲಿ ಮೊಲ್ಕಾವ್ರತ್),  ಶ್ರಾವಣದಲ್ಲಿ ಮಂಗಳಗೌರೀ,  ಭಾದ್ರಪದಶುಕ್ಲ ತದಿಗೆಯಂದು ಸ್ವರ್ಣಗೌರೀ, ಭಾದ್ರಪದಕೃಷ್ಣತದಿಗೆಯಂದು ಗಜಗೌರೀ (ರಾಜ್ಯಪ್ರಾಪ್ತಿ ಐಶ್ವರ್ಯಮೃದ್ಧಿಪ್ರಾಪ್ತಿಗಾಗಿ), ಭಾದ್ರಪದ-ಅಮಾವಾಸ್ಯೆಯಂದು ಫಲ-ಗೌರೀ / ಉತ್ತರಭಾರತದಲ್ಲಿ ಪಿಠೋರೀ ಅಮಾವಾಸ್, ಆಶ್ವಿನತದಿಗೆಯಂದು ಬೃಹದ್ಗೌರಿ, ಕಾರ್ತಿಕಮಾಸದಲ್ಲಿ ಫಣಿಗೌರೀ, ವಿಷ್ಣುಗೌರಿ ಹಾಗೂ ಕೇದಾರೇಶ್ವರಗೌರಿ, ಮಾರ್ಗಶಿರದಲ್ಲಿ ಹಾಗೂ  ಧನುರ್ಮಾಸಾವಧಿಯಲ್ಲಿ ಕಾತ್ಯಾಯನೀಗೌರೀ, ಪುಷ್ಯದಲ್ಲಿ ನಿತ್ಯಗೌರೀ, ಮಾಘದಲ್ಲಿ ಮೌನಗೌರಿ, ಫಾಲ್ಗುಣದಲ್ಲಿ ಸೌಭಾಗ್ಯಗೌರೀ ಹಾಗೂ ಫಾಲ್ಗುಣದ ಶ್ರೀಪಂಚಮಿಯಂದು ಉಯ್ಯಾಲೆಗೌರಿವ್ರತಗಳು ಬಹುಪ್ರಸಿದ್ಧ. ಇವುಗಳಲ್ಲದೆ ಕುಲಾಚಾರ, ಉದ್ದೇಶಸಿದ್ಧಿ ಹಾಗೂ ಸ್ವಯಂಪ್ರೀತಿಯಿಂದ ಮಾಡಲಾಗುವ  ಲಾವಣ್ಯಗೌರೀ, ಸಂಪದ್ಗೌರೀ, ತ್ರಿಲೋಚನಗೌರೀ, ಮಹಾಗೌರೀ, ಮುಂತಾದ ಇನ್ನೂ ಹಲವು ಗೌರೀವ್ರತಗಳು ಇವೆ. ಸೌಮಂಗಲ್ಯ, ಸೌಂದರ್ಯ, ಮಕ್ಕಳ ಯೋಗಕ್ಷೇಮ, ಉತ್ತಮ-ಪತಿ-ಪ್ರಾಪ್ತಿ, ಸಂಸಾರ-ಸುಖ, ಸಂತಾನಲಾಭ, ಸಂಕಷ್ಟನಾಶ, ಜ್ಞಾನಪ್ರಾಪ್ತಿ, ರಾಜ್ಯಪ್ರಾಪ್ತಿ, ವಿಜಯ, ಕಾರ್ಯಸಿದ್ಧಿ, ಋಣವಿಮೋಚನ, ಮೋಕ್ಷ, ಮುಂತಾದ ಹಲವು ಉದ್ದೇಶಗಳಿಂದ ಈ ಗೌರೀವತಗಳನ್ನು ಆಚರಿಸಲಾಗುತ್ತದೆ. ವಸಂತ ಹಾಗೂ ಶರದೃತುಗಳ ಗೌರೀವ್ರತಗಳಲ್ಲಿ ಉಯ್ಯಾಲೆಯಾಟ, ಉಪವನ-ಗಮನಾದಿ ಕಲಾಪಗಳು ಪ್ರಾಚೀನಕಾಲದಿಂದಲೂ ಬಂದಿರುವ ಪದ್ಧತಿಗಳು. ಎಲ್ಲ ಗೌರೀವ್ರತಗಳಲ್ಲೂ ಸಾಮಾನ್ಯವಾದ ಅಂಶಗಳು- ಆಹಾರ ಉಪವಾಸ, ಮಾಂಸ-ಮದ್ಯಾದಿಗಲ ತ್ಯಾಗ, ಬ್ರಹ್ಮಚರ್ಯ, ಮೌನ, ದಾನ, ಪ್ರಸನ್ನತೆ, ಷೋಡಶೊಪಚಾರ ಪೂಜೆ, ಸುಮಂಗಲೀ ತಂಬೂಲ, ಅನ್ನದಾನ, ವಸ್ತ್ರದಾನ, ಗೀತನೃತ್ಯಾದಿಗಳು ಇತ್ಯಾದಿ. ಇವಲ್ಲದೆ ಆಯಾ ಗೌರೀವ್ರತದ ನಿಯಮದಂತೆ ಮೊರದ ಬಾಗಿನ, ಕುಮಾರೀ ಪೂಜೆ, ದಂಪತೀ ಪೂಜೆ, ನೈವೇದ್ಯ ವಿಶೇಷಗಳು ಇದ್ದೇ ಇರುತ್ತವೆ. ಸ್ವರ್ಣಗೌರಿವ್ರತದಲ್ಲಿ ಹದಿನಾರು ಸಂಖ್ಯೆಗೆ ಪ್ರಾಶಸ್ತ್ಯ. ಹದಿನಾರು ಸಂಖ್ಯೆಯ ಪುಷ್ಪಪತ್ರಾದಿಗಳ ಪೂಜೆಯೂ, ನೈವೇದ್ಯಗಳೂ ಹಾಗೂ ಮೊರದಬಾಗಿನಗಳೂ ಸ್ವರ್ಣಗೌರೀಹಬ್ಬದ ವೈಶಿಷ್ಟ್ಯಗಳು.    
ಗೌರೀ ಸ್ವರೂಪ ತುಂಬ ಅರ್ಥಪೂರ್ನವೂ ಧ್ಯಾನಯೋಗ್ಯವೂ ಆದದ್ದು. ಭಾರತೀಯ ಹೆಣ್ಣುಮಕ್ಕಳಿಗಂತೂ ಆಕೆ ಆದರ್ಶಪ್ರಾಯಳು. ಅವಳ ಸತೀತ್ವ, ಮಾತೃತ್ವ, ನೇತೃತ್ವ, ದೈವತ್ವ, ತಪಸ್ಸು, ಹಾಗೂ ಗುರುಶಕ್ತಿಗಳು ಸ್ತ್ರೀಯರಿಗೆ ಧ್ಯೇಯ, ಅನುಸರಣೀಯ. 
ರಾಜಕುವರಿಯಾಗಿ ಹುಟ್ಟಿದರೂ ಸಕಲ ಸುಖಭೋಗಗಳನ್ನು ತ್ಯಜಿಸಿ, ತಪಸ್ಸನ್ನಾಚರಿಸಿ, ಯೋಗೀಶ್ವರನಾದ ಶಿವನನ್ನು ಮೆಚ್ಚಿಸಿ ಆತನ ಮಡದಿಯಾದವಳು ಗೌರಿ. ತ್ಯಾಗಿಯಾದ ಪತಿಗೆ ಬೇಡದ ವೇಷಭೂಷಣಗಳು ತನಗೂ ಬೇಡವೆಂದು ನಾರುಮಡಿ, ಬಿಚ್ಚೋಲೆ ರುದ್ರಾಕ್ಷಗಳನ್ನು ಧರಿಸಿ ಯೋಗದಲ್ಲಿ ನೆಲೆನಿಂತವಳು ಗೌರಿ! ಸತೀತ್ವಕ್ಕೆ ಇವಳೇ ಮಾದರಿ, ಆದರ್ಶ್!
ಇನ್ನು ತನ್ನ ಮಕ್ಕಳ ಯೋಗಕ್ಷೇಮಕ್ಕಾಗಿ ಸದಾ ಪ್ರವೃತ್ತಳು ಅವಳು. ‘ಮಣ್ಣಿ’ನಲ್ಲಾಡುವ ನಮ್ಮೆಲ್ಲರ ಕೊಳೆಯನ್ನು ತೊಳೆದು ಮಡಿಲಿಗೇರಿಸಿಕೊಂಡು ವಾತ್ಸಲ್ಯವನ್ನೂಡುವ ಮಹಾತಾಯಿ ಅವಳೊಬ್ಬಳೇ. ಮಕ್ಕಳಾದ ನಮ್ಮತ್ತೆ ಪರಮೇಶ್ವರನ ಅನುಗ್ರಹ ಹರಿಯುವಂತೆ ಮಾಡುವವಳು ಅವಳು ಎನ್ನುತ್ತವೆ ಪುರಾಣಗಳು. ಅಸಾಧಾರಣ ಮಾತೃಭಕ್ತಿಯನ್ನು ಮೆರೆದ ಗಣಪತಿಯನ್ನು ತನ್ನ ಪತಿಯೂ ದೇವತೆಗಳು ಸದೆಬಡಿದಾಗ, ಗೌರಿಯು ಮುನಿದು ನಿಂತಳು. ಗಣಪನಿಗೆ ಜೀವದಾನವೂ, ನ್ಯಾಯವೂ ದಕ್ಕುವವರೆಗೂ, ವಿಶೇಷ ವರಗಳು ಸಂದು ಆತ ಆದಿಪೂಜಿತನಾಗುವವರೆಗೂ ಆಕೆ ಸುಮ್ಮನಿರಲಿಲ್ಲ!
ಇನ್ನು ಸದಾ ತನ್ನ ಆತ್ಮಧ್ಯಾನದಲ್ಲಿ ನಿರತಳಾಗಿ ತಪೋಮಗ್ನಳಾಗಿರುತ್ತಾಳೆ ಗೌರಿ. ತನ್ಮೂಲಕ ತನ್ನೊಳಗಿನ ದೈವತ್ವದ ಅನುಸಂಧಾನದಲ್ಲಿ ಎಲ್ಲರೂ ಸದಾ ತೊಡಗಬೇಕೆನ್ನುವ ಸಂದೇಶವನ್ನು ಸಾರುತ್ತಾಳೆ.
ಆಕೆ ಆಕೆಯ ಗುರುಶಕ್ತಿಯನ್ನು ಗಮನಿಸಿ- ಜೀವಿಗಳಾದ ನಮ್ಮನ್ನು ಈ ವಿಶ್ವವೆಂಬ ವಿಶ್ವವಿದ್ಯಾಲಯದಲ್ಲಿರಿಸಿ, ಸುಖದುಃಖಗಳ ಪಾಠಗಳಿಂದ ಪಳಗಿಸಿ, ಇಹಪರಗಳ ಜ್ಞಾನವನ್ನು ಮೂಡಿಸಿ, ಶ್ರೇಯೋಮಾರ್ಗದಲ್ಲಿ ಮುನ್ನಡೆಸುವ ಮಹಾಗುರುವೂ ಅವಳೆ. ಮಕ್ಕಳಾದ ನಮ್ಮ ಮೇಲಿನ ಅವಳ ವಾತ್ಸಲ್ಯ ಅವಳ ಈ ‘ಗುರು’ ಪ್ರಜ್ಞೆಯನ್ನೆಂದೂ ಕುರುಡಾಗಿಸಲಾರದು. ಭಕ್ತರಾಗಲಿ ನಾಸ್ತಿಕರಾಗಲಿ, ಪ್ರಾಜ್ಞರಾಗಲಿ ಮುಗ್ಧರಾಗಲಿ, ಬಡವರಾಗಲಿ ಬಲ್ಲಿದರಾಗಲಿ, ಜೀವನ ಪಾಠದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಸ್ಟ್ರಿಕ್ಟ್ ಮಾಸ್ಟರ್ ಉತ್ತಮ ಶಿಕ್ಷಕಿ ಅವಳು! ತಾಯ್ತನದ ಕುರುಡು ವಾತ್ಸಲ್ಯದಲ್ಲಿ ಮಕ್ಕಳಿಗೆ ಸಂಸ್ಕಾರದ ಕಹಿ ಮದ್ದನ್ನು ಕೊಡಲು ಹಿಂಜರಿಯಬಾರದೆಂಬ ಸಂದೇಶವನ್ನು ಗೌರೀಯು ಎಲ್ಲ ಮಾತಾಪಿತೃಗಳಿಗೂ ಕೊಡುತ್ತಿದ್ದಳೆ ಎನ್ನಬಹುದು! 
           ಇನ್ನು ಗೌರಿಯು ಸಾಮಾನ್ಯವಾಗಿ ಸರಳ ಶಾಂತ ಸ್ನೇಹಮಯ ರೂಪದಲ್ಲಿ ಇರುತ್ತಾಳೆ ನಿಜ. ಆದರೆ ಮಹಿಷಾಸುರ- ಶುಂಭ-ನಿಶುಂಭ-ರಕ್ತಬೀಜಾದಿ ದೈತ್ಯರು ಲೋಕಗಳನ್ನು ಪೀಡಿಸಿದಾಗ ಆಕೆ ಸುಮ್ಮನೆ ಕೂರುವುದಿಲ್ಲ. ದೇವತಾಗಣದ ನಾಯಕತ್ವವನ್ನು ವಹಿಸುತ್ತಳೆ, ಯುದ್ಧವನ್ನು ಘೋಷಿಸುತ್ತಾಳೆ! ತನ್ನೊಳಗಿನಿಂದ ಅನಂತ ಮಾತೃಕಾ ಗಣದ ಸೈನ್ಯವನ್ನೇ ಹೊಮ್ಮಿಸುತ್ತಾಳೆ, ದಶಭುಜಗಳಲ್ಲಿ ಭೀಕರ ಆಯುಧಗಳನ್ನು ಝಳುಪಿಸುತ್ತ, ಸಿಂಹವನ್ನೇರಿ ಯುದ್ಧಕ್ಕೆ ನಿಲ್ಲುತ್ತಾಳೆ, ಆವೇಶದಿಂದ ಕಾದಾಡುತ್ತ, ತನ್ನ ಮುಷ್ಟಿಪ್ರಹಾರದಿಂದಲು, ಭಯಂಕರ ಆಯುಧಗಳ ಏಟಿನಿಂದಲೂ, ಕಾಲ್ತುಳಿತದಿಂದಲೂ, ಹಲ್ಲುಗಳ ಕಡಿತದಿಂದಲೂ ಲಕ್ಷೋಪಲಕ್ಷ ರಕ್ಕಸರನ್ನು ನುಚ್ಚುನೂರು ಮಾಡಿಬಿಡುತ್ತಾಳೆ! ಸೌಮ್ಯಗೌರಿಯು ಹೀಗೆ ದುರ್ಗೆ-ಕಾಳಿ-ಚಂಡಿ-ಬಗಲೆಯಾಗುವ ಕಥೆ ರೋಮಾಂಚಕವಾದದ್ದು, ಅರ್ಥಪೂರ್‍ನವಾದದ್ದು! ಸ್ವಭಾವತಃ ಸ್ನೇಹಮಯಿಯೂ ಸೌಮ್ಯಳೂ ಆದ ಹೆಣ್ಣು, ಸಮಯ ಸಂದರ್ಭ ಬಂದಾಗ ತನ್ನ ಅಂತಸ್ಸತ್ವವನ್ನೂ ಶಕ್ತಿಯನ್ನೂ ಯುಕ್ತಿಯನ್ನೂ ಅಭಿವ್ಯಂಜಿಸಿ ತನ್ನ ಆತ್ಮರಕ್ಷಣೆಯನ್ನಷ್ಟೇ ಅಲ್ಲ, ಪರಿವಾರ ಹಾಗೂ ಸಮಾಜಗಳ ಹಿತಸಾಧನೆಯನ್ನೂ ಮಾಡುವ ಧೀರನಾಯಿಕೆಯಾಗಬೇಕು ಎನ್ನುವ ಸಂದೇಶ ಇಲ್ಲಿ ಸಿಗುತ್ತದಲ್ಲವೆ?!
ಒಟ್ಟಿನಲ್ಲಿ ಗೌರಿಯ ಚರಿತೆ, ಸ್ವರೂಪಗಳಲ್ಲಿ ಹಲವು ಸ್ವಾರಸ್ಯಕರ ಸಂದೇಶಗಳು ತುಂಬಿವೆ. ಹಾಗಾಗಿಯೇ ಗೌರಿಯು ಹೆಣ್ಣುಮಕ್ಕಳಿಗೆಲ್ಲ ದೇವಿಯಷ್ಟೇ ಅಲ್ಲ, ಗುರುವೂ, ತಮ್ಮ ಸುಖದುಃಖಗಳನ್ನು ತೋಡಿಕೊಳ್ಳಲು ಆತ್ಮೀಯ ಗೆಳತಿಯೂ, ಜೀವನದ ಉನ್ನತಿಗೆ ಆದರ್ಶಪ್ರಾಯಳೂ ಆಗಿದ್ದಾಳೆ.

ಈಗ ಸ್ವರ್ಣಗೌರೀ ಬಂದಿದ್ದಾಳೆ. ಷೋಡಶಕಲಾಪೂರ್ಣಳಾದ ಅವಳನ್ನು ಹದಿನಾರು ಸಂಖ್ಯೆಯ ನಮ್ಮ ಚೈತನ್ಯಕುಸುಮಗಳಿಂದ ಆರಾಧಿಸಿ ಒಲಿಸಿಕೊಳ್ಳೋಣ. ಅವಳ ಅನುಗ್ರಹದಿಂದ ನಮ್ಮ ಮಹಿಳಾಮಣಿಯರಲ್ಲಿ ಅವಳ ಅದಮ್ಯಶಕ್ತಿಯು ಜಾಗೃತವಾಗಲಿ ಎಂದು ಹಾರೈಸೋಣ. ದೇಶದಲ್ಲಿ ಸುಭಿಕ್ಷೆ, ಸುಖ ಸೌಹಾರ್ದತೆ ಶತ್ರುನಾಶಗಳು ಉಂಟಾಗಲಿ ಎಂದು ಪ್ರಾರ್ಥಿಸೋಣ.

Publsihed in Samyukta Karnataka 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ