ಶುಭಹಾರೈಕೆಯ ಯುಗಾದಿ
’ಯುಗದ (ಸಂವತ್ಸರದ) ಆದಿ’ಯೇ ’ಯುಗಾದಿ’. ಚಾಂದ್ರಮಾನ ಹಿಂದು-ಪಂಚಾಂಗದ
ಪ್ರಕಾರ ಚೈತ್ರ ಮಾಸದ ಮೊದಲನೆಯ ದಿನವೇ ಯುಗಾದಿ. ಸೌರಮಾನ ಪಂಚಾಂಗದ ಪ್ರಕಾರ ಅಶ್ವಿನೀ ನಕ್ಷತ್ರ ಬಿದ್ದಾಗ
ಯುಗಾದಿ ಪ್ರಾರಂಭವಾಗುತ್ತದೆ. ಪಾಲ್ಗುಣ, ಚೈತ್ರ (ವೈಶಾಖದ ವರೆಗೂ) ಹರಡಿರುವ ವಸಂತೋತ್ಸವದ ಪರ್ವದಿನ
ಯುಗಾದ್ ಎನ್ನಬಹುದೇನೊ. ಹಳೆಯ ಎಲೆಗಳೆಲ್ಲ ಉದುರಿ, ಹೊಸಚಿಗುರುಗಳನ್ನು ಮೈದುಂಬಿಕೊಳ್ಳುವ ಗಿಡಮರಬಳ್ಳಿಗಳ
ನಡುವೆ ನವೋತ್ಸಾಹದಿಂದ ಇಂಚರಿಸುವ ಶುಕಪಿಕಗಳ ಉಲಿಯನ್ನು ಆಲಿಸುತ್ತ ನವಸಂವತ್ಸರಕ್ಕೆ ಕಾಲಿಡುತ್ತೇವೆ.
ಹಳೆಯ ಪ್ರಕೃತಿಯೇ ನವಚೈತನ್ಯವನ್ನು ಪಡೆವಂತೆ, ಯುಗಾದಿಯಂದು ನಾವೂ ನಮ್ಮ ಯಾಂತ್ರಿಕ ಬದುಕಿನಲ್ಲಿ ಉತ್ಸಾಹ-ಸಂತಸಗಳನ್ನು
ಪುನಶ್ಚೇತನಗೊಳಿಸಿಕೊಳ್ಳುತ್ತೇವೆ. ಯುಗಾದಿಯು ಒಂದು ಋತೂತ್ಸವವೇ ಆಗಿದೆ. ಇಲ್ಲಿ ನಾವು ಆರಾಧಿಸುವುದು
ಪ್ರಕೃತಿಯನ್ನು, ನೈಸರ್ಗಿಕ ಪ್ರಕ್ರಿಯೆಯಾದ ಸಂವತ್ಸರಚಕ್ರದ ಉರುಳುವಿಕೆಯನ್ನು, ಇಂತಹ ಸುಂದರ ಸೃಷ್ಟಿಯನ್ನು
ನಿರ್ಮಿಸಿ, ಜಗಲ್ಲೀಲೆಯನ್ನಾಡಿಸುತ್ತಿರುವ ದಿವ್ಯರಸಿಕನಾದ ಭಗವಂತನ ಮಾಹಾತ್ಮ್ಯವನ್ನು. ಚತುರ್ಮುಖಬ್ರಹ್ಮನು
ಸೃಷ್ಟಿಯನ್ನು ಪ್ರಾರಂಭಿಸಿದ ದಿನವಿದು ಎನ್ನುತ್ತವೆ ಪುರಾಣಗಳು. ಸೂರ‍್ಯನು ತನ್ನ ಚೊಚ್ಚಲಕಿರಣವನ್ನು
ಬೀರಿದ ದಿನವಿದಂತೆ. ಮಾಹವಿಷ್ಣುವಿನ ಆದಿಮಾವತಾರವಾದ ಮಸ್ತ್ಯಾವತಾರವು ಉದ್ಭವಿಸಿದ ಪ್ರಶಸ್ತದಿನವೂ
ಇದೇ ಅಂತೆ. ಚರಿತ್ರೆಯ ಪ್ರಕಾರ ಶಾಲಿವಾಹನನು ತನ್ನ ಯುದ್ಧವಿಜಯದ ಸಂಕೇತವಾಗಿ ’ಶಾಲಿವಾಹನಶಕೆ’ಯನ್ನು
ಪ್ರಾರಂಭಿಸಿದ್ದು ಈ ದಿನದಂದು.
ಕನ್ನಡ ನಾಡಿನಲ್ಲಿ ಸೌರಮಾನ
ಚಾಂದ್ರಮಾನಗಳೆರಡೂ ಪದ್ಧತಿಗಳನ್ನೂ ಅನುಸರಿಸುವವರಿದ್ದಾರೆ. ಪ್ರಕೃತಿಯ ಗತಿಯನ್ನು ಅಕ್ಷರಶಃ ಅನುಸರಿಸುತ್ತ
ಖಚಿತವಾಗಿ ರಚಿಸಲಾಗುವ ಈ ಎರಡೂ ಪಂಚಾಗಗಳು ನಮ್ಮ ಋಷಿಗಳ ಮೇಧಾಶಕ್ತಿಯ ತೀಕ್ಷ್ಣತೆಯ ಹೆಗ್ಗುರುತುಗಳಾಗಿವೆ.
ಐರೋಪ್ಯ ಆಕ್ರಮಣಕಾರರು ತಾವು ಆಕ್ರಮಿಸಿದ ದೇಶಗಳ ಮೇಲೆ ತಮ್ಮ ಅಪಕ್ವವಾದ Gregorian Calenderನ್ನು ದರ್ಪದಿಂದ ಹೇರಿಟ್ಟಿದ್ದಾರೆ. ಕ್ರಿಸ್ತನ ಜನ್ಮವನ್ನು ಸ್ತಾಣ್ದರ್ಡೈಸ್ ಮಾಡುವ
ಉದ್ದೇಶದಿಂದ ನವವರ್ಷದ ಪ್ರಾರಂಭವನ್ನು ಜನವರಿಗೆ (ಹತ್ತುತಿಂಗಳು ಮುಂದೆ!) ತಳ್ಳಲಾಗಿದೆ. ಜುಲಿಯಸ್
ಸೀಜ಼ರ್ ನ ಹೆಸರನ್ನು ಜುಲೈಮಾಸಕ್ಕೂ ಸೈಂಟ್ಟ್ ಆಗಸ್ಟಸ್ ನ ಹೆಸರನ್ನೂ ಆಗಸ್ಟ್ ಮಾಸಕ್ಕೂ ಇಟ್ಟು ಬದಲಾವಣೆ
ತಂದರಾದರೂ, ಸೆಪ್ಟೆಂಬರ್ (septa= ಏಳೂ), ಆಕ್ಟೋಬರ್(Octa=ಎಂಟು), ನವೆಂಬರ್(Nova=ಒಂಭತ್ತು) ಡಿಸೆಂಬರ್ (Deca=ಹತ್ತು) ಎಂಬ ಹೆಸರುಗಳನ್ನು ಬದಲಾಯಿಸಲು ಮರೆತುಬಿಟ್ಟರೇನೋ!
ಆ ಲೆಕ್ಕವನ್ನು ಹಿಡಿದು ಸಾಗಿದರೆ, ಪ್ರಾಚೀನಕಾಲದಲ್ಲಿ ಯುಗಾದಿ ಬರುವ ಮಾರ್ಚ್ ಮಾಸವೇ ಇಡಿ ಜಗತ್ತಿಗೆ
ನವಸಂವತ್ಸರದ ಪ್ರಾರಂಭವಾಗಿತ್ತು ಎನ್ನುವ ಸತ್ಯ ಸುಲಭವಾಗಿ ಬಯಲಾಗುತ್ತದೆ. ದುಖದ ವಿಷಯವೇನೆಂದರೆ ಅತ್ಯಂತ
ವೈಜ್ಞಾನಿಕವಾದ ಆದ ನಮ್ಮ ಪಂಚಾಂಗಗಳ ಬಗ್ಗೆ ನಮ್ಮ ಹೊಸಪೀಳಿಗೆಗಳಿಗೆ ಸರಿಯಾದ ಮಾಹಿತಿಯೇ ಇಲ್ಲ. ತಮ್ಮದೇ
ಜನ್ಮತಿಥಿ, ನಕ್ಷತ್ರ ಅಥವಾ ತಮ್ಮದೇ ಮದುವೆ-ಮುಂಜಿ ಮುಂತಾದ ಶುಭಕಾರ್ಯಗಳ ಪಂಚಾಂಗದಿನಾಂಕವನ್ನು ತಿಳಿದವರ
ಸಂಖ್ಯಯೂ ಅತ್ಯಂತ ಕಡಿಮೆಯಾಗಿಬಿಟ್ಟಿರುವುದು ದುಖತರ!
ಭಾರತದಾದ್ಯಂತವಷ್ಟೇ ಅಲ್ಲದೆ ವೈದಿಕ ಸಂಸ್ಕೃತಿಯ ಸೌರಭವು
ಹರಡಿರುವ ನೇಪಾಲ, ಕಂಬೋಡಿಯಾ, ಶ್ರೀಲಂಕಾ, ಇಂಡೊನೇಸಿಯಾ, ಬರ್ಮಾಗಳಲ್ಲೂ ಯುಗಾದಿಯನ್ನು ಆಚರಿಸಲಾಗುತ್ತದೆ.
ಉತ್ತರ-ಭಾರತದ ಪುಣ್ಯಕ್ಷ್ಜೇತ್ರಗಳಲ್ಲಿ ಗಂಗಾಸ್ನಾನ ಅಥವಾ ತೀರ್ಥಸ್ನಾನವು ಮುಖ್ಯ ಕಲಾಪ. ಸಿಕ್ಖರಿಗೆ
ಇದು ನೆಚ್ಚಿನ ’ಬೈಸಾಕಿ’ ಹಬ್ಬ. ಹಿಮಾಚಲಪ್ರದೇಶದ ಜ್ವಾಲಾಮುಖೀ ಶಕ್ತಿಪೀಠದಲ್ಲಿ ಈ ದಿನ ವಿಶೇಷ ಪೂಜೆ-ತ್ಸವಗಳು
ನಡೆಯುತ್ತವೆ. ಅಸ್ಸಾಂನಲ್ಲಿ ಯುಗಾದಿಗೆ ’ರಂಗೋಲಿ ಬಿಹು’ ಎಂದೂ, ಬಂಗಾಳದಲ್ಲಿ ’ನಬೊ ಬೊರ್ಷ್’ ಎಂದೂ,
ತಮಿಳುನಾಡಿನಲ್ಲಿ ’ಪುತ್ತಾಂಡ್’ ಎಂದೂ, ಕೇರಳದಲ್ಲಿ ’ವಿಷು’ ಎಂದೂ ನಾಮಾಂತರಗಳು ಕಾಣಬರುತ್ತವೆ.
ಸೂರ್ಯೋದಯಕ್ಕೆ ಮೊದಲೇ ಎದ್ದು ಮನೆಯಂಗಳವನ್ನು ತೊಳೆದು,
ಮಾವಿನೆಲೆಯ ತೋರಣಗಳನ್ನು ಕಟ್ಟಿ, ಅದಕ್ಕೆ ಬೇವಿನ ಕಡ್ಡಿಗಳ ಗೊಂಚಲುಗಳನ್ನು ಸಿಕ್ಕಿಸಿ, ದ್ವಾರಪುರತಃ
ರಂಗವಲ್ಲಿಯನ್ನು ರಚಿಸಿ ಅಂದಗೊಳಿಸಲಾಗುತ್ತದೆ. ದೇವತಾಲಾಂಚನಗಳಾದ ಧ್ವಜಪತಾಕೆಗಳನ್ನು ಮನೆಮನೆಯ ತಾರಸಿಯಲ್ಲೂ
ಮಠಮಂಡಿರಗಳ ಗೋಪುರಗಳಲ್ಲೂ ಹಾಯಿಸುವ ಪ್ರಾಚೀನಪದ್ಧತಿಯನ್ನು ಭಾರತದ ಹಲವು ಪ್ರಾಂತಗಲಲ್ಲಿ ಇನ್ನೂ ಉಳಿಸಿಕೊಂಡಿದ್ದಾರೆ-
ಪ್ರಾಪ್ತೇ ನೂತನವತ್ಸರೇ ಪ್ರತಿಗೃಹಂ ಕುರ್ಯಾದ್ಧ್ವಜಾರೋಹಣಂ --- ಯುಗಾದಿಯಂದು ಅಭ್ಯಂಗ (ಎಣ್ಣೆನೀರು)
ಸ್ನಾನ ಬಹಳ ಮುಖ್ಯ. ಅದನ್ನು ಮಾಡದಿದ್ದಲ್ಲಿ ನರಕಪ್ರಾಪ್ತಿಯಂತೆ !- ವತ್ಸರಾದೌ ವಸಂತಾದೌ ಬಲಿರಾಜ್ಯೇ
ತಥೈವ ಚ ತೈಲಾಭ್ಯಂಗಮಕುರ್ವಾಣಃ ನರಕಂ ಪ್ರತಿಪದ್ಯತೆ - ನಿರ್ಣಯಸಿಂಧು) ಹೊಸ ಬಟ್ಟೆಗಳನ್ನು ಧರಿಸಿ ಮನೆಯ ಹಿರಿಯರಿಗೆ
ನಮಸ್ಕರಿಸಿ ಮನೆ ಮಂದಿಯೆಲ್ಲ ಕೂಡಿ ಪೂಜೆ ಮಾಡಬೇಕು. ಯುಗಾದಿಯ ಆರಾಧ್ಯದೈವ ಸೃಷ್ಟಿಕರ್ತನಾದ ಬ್ರಹ್ಮ-
ತಸ್ಯಾಮಾದೌ ಚ ಸಂಪೂಜಃ ಬ್ರಹ್ಮಕಮಲಸಂಭವಃ | ಪಾದ್ಯಾರ್ಘ್ಯಪುಷ್ಪಧೂಪೈಶ್ಚ ವಸ್ತ್ರಾಲಂಕಾರಭೂಷಣೈಃ
|| ಆ ಬಳಿಕ ಇಂದ್ರ, ಕುಲದೇವತೆ, ಇಷ್ಟದೇವತೆಗಳನ್ನು ‘ಯವಿಷ್ಟಿ’ ಎಂಬ ಅಗ್ನಿಯಲ್ಲಿ ಆವಾಹನೆ ಮಾಡಿ
ಪೂಜಿಸಲಾಗುತ್ತದೆ. ಮಧುಮಾಸದ ಅಧಿದೇವತೆಯಾದ ಲಕ್ಷ್ಮಿಯನ್ನೂ, ಉದಯೋನ್ಮುಖನಾದ ಸೂರ್ಯನನ್ನು ವಂದಿಸಿ
ಆಯುರಾರೋಗ್ಯತೇಜಸ್ಸುಗಳಿಗಾಗಿ ಪ್ರಾರ್ಥಿಸಲಾಗುತ್ತದೆ.
ಮಂತ್ರಶುದ್ಧಜಲವನ್ನು ಮನೆಯಲ್ಲಿ ಸಿಂಪಡಿಸಿ ಪುಣ್ಯಾಹ ಕರ್ಮ ಮಾಡುವ ಪದ್ಧತಿಯೂ ಇದೆ. ಯುಗಾದಿಯ
ನೈವೇದ್ಯದಲ್ಲಿ ಬಹಳ ಮುಖ್ಯವಾದದ್ದು ಬೇವುಬೆಲ್ಲಗಳ ಮಿಶ್ರಣ. ಕನ್ನಡಿಗರ ಮನೆಗಳಲ್ಲಿ ಯುಗಾದಿಯ ದಿನ
ಘಮ್ಮನೆ ಹೊಮ್ಮುವುದು ತುಪ್ಪ-ಬೇಳೆ-ಕಾಯಿಹೋಳಿಗೆಗಳ ಪರಿಮಳ! ಅದಿದ್ದರೇನೆ ಕನ್ನಡದ ನಾಲಿಗೆಗೆ ಹಬ್ಬ
ಮಾಡಿದ ಸಂತೃಪ್ತಿ! ಹುಗ್ಗಿ ಹಾಗೂ ಬಗೆಬಗೆಯ ಭಕ್ಷ್ಯಭೋಜ್ಯಗಳನ್ನು ತಯಾರಿಸಿ ಮನೆಮಂದಿಯೆಲ್ಲ ಸೇರಿ
ಬಂಧಿಮಿತ್ರರನ್ನೂ ಆಹ್ವಾನಿಸಿ ಮೆಲ್ಲುತ್ತೇವೆ. ಯುಗಾದಿಯ ಹೆಗ್ಗುರುತು- ಬೇವುಬೆಲ್ಲ ಸ್ವೀಕರಿಸುವುದು.
’ಜೀವನದಲ್ಲಿ ಬರುವ ಸುಖದುಃಖಗಳನ್ನು ಸಮಭಾವದಿಂದ ಜೀರ್ಣಿಸಿಕೊಳ್ಳೋಣ’ ಎನ್ನುವ ಆಶಯದೊಂದಿಗೆ ಬೇವುಬೆಲ್ಲಗಳನ್ನು
ಸೇವಿಸುತ್ತ ಈ ಮಂತ್ರವನ್ನು ಪಠಿಸಲಾಗುತ್ತದೆ- ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯ ಚ । ಸರ್ವಾರಿಷ್ಟ ವಿನಾಶಾಯ ನಿಂಬಕಂ ದಲಭಕ್ಷಣಂ
।। (ನೂರು ವರುಷಗಳ ಆಯುಷ್ಯ, ವಜ್ರಕಾಯ/ಉತ್ತಮ ಆರೋಗ್ಯ, ಸರ್ವಸಂಪತ್ತುಗಳ ಪ್ರಾಪ್ತಿ ಹಾಗೂ
ಎಲ್ಲ ಅನಿಷ್ಟಗಳ ನಿವಾರಣೆಗಾಗಿಯೂ ಬೇವಿನೆಲೆಯನ್ನು ತಿನ್ನುತ್ತೇನೆ) ಯುಗಾದಿಯ ಸಾಯಂಕಾಲ ಪಂಚಾಂಗಶ್ರವಣವನ್ನು
ಮಾಡಲಾಗುತ್ತದೆ. ಪಂಚಾಂಗವು ಸೂಚಿಸುವ ಮಳೆ-ಬೆಳೆ-ಋತುವಿಕಾರಗಳ ಸಂಭಾವನೆಯನ್ನೂ, ನಮ್ಮ ನಮ್ಮ ರಾಶಿಫಲ,
ಶುಭ ಮುಹೂರ್ತಗಳ ಮಾಹಿತಿಯನ್ನೂ ತಿಳಿದು ನಮ್ಮ ಭಾವೀ ಸುಖದುಃಖಗಳನ್ನು ಎದುರಿಸುವ ’ಮಾನಸಿಕ ಸಿದ್ಧತೆ’
ಮಾಡಿಕೊಳ್ಳುತ್ತೇವೆ. ಫಲಗಳ ರಾಜ ಮಾವು ಆಗಮಿಸುವ ಈ ಕಾಲದಲ್ಲಿ ಮನೆಯ ಮಾನಿನಿಯರಿಗೆಲ್ಲ ಮಾವಿನಕಾಯಿಯ
ಅಪ್ಪೆ-ಉಳಿರಸ, ಉಪ್ಪಿನಕಾಯಿ, ಗೊಜ್ಜು, ತೊಕ್ಕು, ಚಿತ್ರಾನ್ನ ಮೊದಲಾದುವನ್ನು ತಯಾರಿಸುವ ಸಂಭ್ರಮ!
ಯುಗಾದಿಯು ವಸಂತೋತ್ಸವದ ಅಂಗವಾದ್ದರಿಂದ ಪ್ರಾಚೀನಕಾಲದಿಂದಲೂ ಉಯ್ಯಾಲೆಯಾಟ, ಕ್ರೀಡೆಗಳು, ಗೀತ-ನೃತ್ಯ-ನಾಟಕ-ಕವಿಗೋಷ್ಟಿಗಳು,
ರಥೋತ್ಸವಾದಿಗಳು ಜರುಗುವುದನ್ನು ಕಾಣುತ್ತೇವೆ.
ಕರಾವಳಿ ಪ್ರದೇಶದಲ್ಲಿ ’ಖಣಿ ಇಡು’ತ್ತಾರೆ. ಬಾಳೆ ಎಲೆಯ ಮೇಲೆ ತಟ್ಟೆಯಿಟ್ಟು, ಅದರ
ಮೇಲೆ ಅಕ್ಕಿ ಹರಡಿ, ಅದರ ಮೇಲೆ , ವಸ್ತ್ರ, ಒಡವೆ, ಬತ್ತದ ತೆನೆ, ಹಣ್ಣು, ದೇವತಾ ಮೂರ್ತಿ, ಕನ್ನಡಿಯ,
ತೆಂಗಿನಕಾಯಿ ಹಾಗೂ ಸೌತೇಕಾಯಿಗಳನ್ನು (ಕನ್ನಡಿಯಲಿ ದೇವತಾ ಮೂರ್ತಿ ಮತ್ತು ಆ ಎಲ್ಲ ವಸ್ತುಗಳೂ ಪ್ರತಿಫಲಿಸುವಂತೆ)
ಹಿಂದಿನ ರಾತ್ರಿಯೇ ಜೋಡಿಸಿಡಲಾಗುತ್ತದೆ. ಯುಗಾದಿಯಂದು ಬೆಳ್ಳಂಬೆಳಿಗ್ಗೆ ಎದ್ದು ದೇವರಿಗೆ ದೀಪ ಹಚ್ಚಿ,
ಆ ಖಣಿಯಲ್ಲಿ ಜೋಡಿಸಿಟ್ಟ ಕನ್ನಡಿಯಲ್ಲಿ ದೇವತಾ ಮೂರ್ತಿಯನ್ನು ನೋಡುವುದು ಸಂಪ್ರದಾಯ. ಈ ಖಣಿ ಇಡುವ
ಪದ್ದತಿ ಕೇರಳದಲ್ಲೂ ಇದೆ. ಮನೆಯ ಹಿರಿಯ ಹೆಂಗಸು ಹಿಂದಿನ ರಾತ್ರಿ ಅಡಕೆ ಹೂವು, ಅರಿಸಿನದ ಕೊಂಬು,
ಮಾವು, ಹಲಸು, ಕೊಬ್ಬರಿಗಳನ್ನು ಪಂಚಲೋಹದ ಪಾತ್ರೆಯಲ್ಲಿ ತುಂಬಿ ದೇವರ ಮುಂದೆ ಇಟ್ಟು, ’ನೀಲ-ವಿಳಕ್ಕು’
ಎನ್ನುವ ದೀಪವನ್ನು ಹಚ್ಚಿಡುತ್ತಾಳೆ. ಮುಂಜಾನೆ ಮಕ್ಕಳನ್ನೂ ಮನೆಮಂದಿಯನ್ನೂ ಎಬ್ಬಿಸಿ, ಅವರ ಕಣ್ಣುಗಳನ್ನು
ಮುಚ್ಚಿ ಮೊದಲು ಆ ವಿಷು-ಖಣಿ(ಮೊದಲ ಖನಿ) ಯನ್ನು ತೋರಿಸುತ್ತಾಳೆ. ಆ ಬಳಿಕ ಸೂರ್ಯನ ದರ್ಶನ ಮಾಡಿಸುತ್ತಾಳೆ.
ಖಣಿಯಲ್ಲಿನ ದೇವತಾ ಮೂರ್ತಿ, ಧನ, ಧಾನ್ಯ, ವಸ್ತ್ರ, ಭೂಷಣಗಳನ್ನು ಯುಗಾದಿಯಂದು ಮೊದಲು ನೋಡಿ, ವರ್ಷವಿಡೀ
ಅವೆಲ್ಲವೂ ಸಮೃದ್ಧವಾಗಿ ದೊರಕಲಿ ಎಂದು ಹಾರೈಸಲಾಗುತ್ತದೆ. ಯುಗಾದಿಯಂದು ಮನೆಯ ಹಿರಿಯರಿಗೆ ಕಿರಿಯರು
ನಮ್ಸ್ಕಾರ ಮಾಡಿದಾಗ, ಅವರು ’ಕೈ-ವಿಷೇಶಮ್’ ಎಂಬ ಯುಗಾದಿ ಕಾಣಿಕೆಯನ್ನು ಕೊಡಬೇಕು.
ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ’ಗುಡಿಪಡ್ವ’ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.
ಕೋಲಿಗೆ ಬಟ್ಟೆ ಕಟ್ಟಿ, ಹೂಮಾಲೆಯನ್ನು ಹಾಕಿ ಅದನ್ನು ನವಸಂವತ್ಸರವನ್ನು ಸ್ವಾಗತಿಸುವ 'ಗುಡಿ' (ಬಾವುಟ)ವನ್ನಾಗಿಸಿ
ಎಲ್ಲರಿಗೂ ಕಾಣಬರುವಂತೆ ಒಂದು ಮೂಲೆಯಲ್ಲಿ ಒರಗಿಸಿಡಲಾಗುತ್ತದೆ. ಈ ಧ್ವಜವು ದೇವತೆಗಳ ಲಾಂಚನವಾಗಿದ್ದು
ಅವರ ಶುಭಾಶಿರ್ವಾದವು ಮನೆಗೆ ಬರಲಿ ಎಂದು ಹಾರೈಸಲಾಗುತ್ತದೆ. ತೆಲುಗರು ವಿಶೇಷವಾಗಿ ಆಂಧ್ರಪ್ರದೇಶದಲ್ಲಿ
ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವುಗಳನ್ನು ಬೆರೆಸಿ, ಬೇಯಿಸಿ ’ಯುಗಾದಿ ಪಚ್ಚಡಿ’ಯನ್ನು
ತಯಾರಿಸಿ ದೇವರಿಗೆ ನಿವೇದಿಸಿ ಸಂಭ್ರಮದಿಂದ ಸ್ವೀಕರಿಸುತ್ತಾರೆ.
ಚಿಕ್ಕ ವಿಶ್ವವಿದ್ದಂತಿರುವ ಭಾರತದಲ್ಲಿ ವಿವಿಧ ಭಾಷೆ, ಜನಾಂಗ, ಸಂಪ್ರದಾಯ, ಆಹಾರ-ವೇಷ-ಭೂಷ-ಪದ್ಧತಿಗಳ
ನಡುವೆ ಯುಗಾದಿಯ ಆಚರಣೆಯ ಪರಿಯೂ ಸ್ವಲ್ಪ ಸ್ವಲ್ಪ ಬದಲಾಗುತ್ತ ಇರುತ್ತದೆ. ಆದರೆ ಇಷ್ಟೆಲ್ಲ ವೈವಿಧ್ಯಗಳ
ನಡುವೆಯೂ ನವಸಂವತ್ಸರವನ್ನು ದೈವೀಕಭಾವದಿಂದ ಸ್ವೀಕರಿಸುವ ಭಾವಬಾಂಧುರ್ಯ ಮಾತ್ರ ಒಮ್ದೇ ಬಗೆಯದ್ದು!
ತನುಮನಗಳನ್ನು ಶುದ್ಧಗೊಳಿಸಿಕೊಂಡು, ದೇವರ ಧ್ಯಾನ, ಪ್ರಕೃತಿಗೆ ಕೃತಜ್ಞತಾಸಮರ್ಪಣೆ,
ಸ್ವಜನರೊಂದಿಗೆ ಮಿಲನ, ಔತಣ ಹಾಗೂ ಗೀತನೃತ್ಯವಿನೋದಗಳಿಂದ ಯುಗಾದಿಯನ್ನು ಆಚರಿಸುವ ಈ ಪದ್ಧತಿ ಮನೋಜ್ಞ.
ಬೇವುಬೆಲ್ಲಗಳನ್ನು ಸೇವಿಸುವಾಗ ಜೀವನದಲ್ಲಿನ ಸುಖದುಃಖಗಳೆರಡೂ ಪಥ್ಯವೇ, ಎರಡನ್ನೂ ಸಮಭಾವದಿಂದ ಸ್ವಾಗತಿಸೋಣ
ಎಂದ ಅರ್ಥಪೂರ್ಣವಾದ Positive
autosuggestions ಇಲ್ಲಿ ಕಾಣಬರುತ್ತದೆ. ಹೊಸವರ್ಷದ ನೆಪದಲ್ಲಿ
ಮತಿಗೆಡುವಷ್ಟು ಕುಡಿದು, ಗತ್ತಿತಪ್ಪುವಷ್ಟು ಕುಣಿದು, ಅಶ್ಲೀಲತೆ-ಪಾಶವೀಯಭೋಗಗಳಲ್ಲಿ ತೊಡಗುವ ಜನವರಿ
೧ನೆ ತಾರೀಖಿನ ಕುವರ್ಚಸ್ಸಿನ ಮುಂದೆ ಯುಗಾದಿಯ ಸಾತ್ವಿಕ ಸೌಂದರ್ಯವೂ ಇನ್ನಷ್ಟು ಆಪ್ಯಾಯಮಾನವೆನಿಸುತ್ತದೆ.
ಪ್ರೇಮ-ಬಾಂಧವ್ಯಗಳನ್ನು ಬೆಸೆಯುವ ದೇವತೆಯಾದ ಮನ್ಮಥನ ನಾಮಾಂಕಿತವಾದ ಈ ’ಮನ್ಮಥನಾಮಸಂವತ್ಸರ’ವು
ನಮಗೆ ಸ್ನೇಹ-ಸೌಹಾರ್ದತೆ-ಸಂತೋಷ-ಸಮೃದ್ಧಿ-ಸಂತೃಪ್ತಿಗಳನ್ನು ಪ್ರಸಾದಿಸಲಿ ಎಮ್ದು ಪ್ರಾರ್ಥಿಸೋಣ.
ಶುಭಮಸ್ತು
ಡಾ ಆರತೀ ವಿ ಬಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ