ಶುಕ್ರವಾರ, ಮಾರ್ಚ್ 17, 2017

ಮೂರ್ತಿಪೂಜೆ
ಸನಾತನಧರ್ಮದಲ್ಲಿ ಮೂರ್ತಿಪೂಜೆ ಭಗವದುಪಾಸನೆಯ ಒಂದು ಜನಪ್ರಿಯ ಪದ್ಧತಿ. ಪಾಶ್ಚಾತ್ಯ ಮೂಲದವರು ಹಾಗೂ ಅವರ ವಿಚಾರದ ಪ್ರಭಾವಕ್ಕೆ ಒಳಪಟ್ಟ ನಮ್ಮವರೂ ಇದನ್ನು ಪಾಪವೆಂದು ಬಗೆದು ಈ ಪದ್ಧತಿಯನು ಸರ್ವನಾಶಗೈಯಲು ಶತಮಾನಗಳಿಂದ ಕಾಯಾ-ವಾಚಾ ಪಟ್ಟಿರುವ ಹಾಗೂ ಪಡುತ್ತಿರುವ ಪ್ರಯತ್ನಗಳು ಅಷ್ಟಿಷ್ಟಲ್ಲ. ಆದರೂ ಇಂದಿಗೂ ಮನೆಮನಗಳಲ್ಲಿ ಮೂರ್ತಿಪೂಜೆಯು ಅಷ್ಟೇ ಜನಪ್ರಿಯವಾಗಿದ್ದು ಅವಿಚ್ಛಿನ್ನವಾಗಿ ನಡೆಯುತ್ತಲೇ ಬಂದಿದೆ!
ಹಿಂದುಧರ್ಮದಲ್ಲಿ ಮೂರ್ತಿಪೂಜೆ ಕಡ್ಡಾಯವೆಂದೇನಲ್ಲ. ಜ್ಞಾನ, ಕರ್ಮ ಹಾಗೂ ರಾಜಯೋಗವನ್ನನುಸರಿಸುವವರು ಮೂರ್ತಿಪೂಜೆ ಮಾಡಲೇಬೇಕೆಂದೇನಿಲ್ಲ. ಭಕ್ತಿಯೋಗದಲ್ಲೂ ಕೀರ್ತನ, ಸೇವೆ, ಸ್ಮರಣ ಮುಂತಾದ ನವವಿಧಭಕ್ತಿಗಳಲ್ಲಿ ಅರ್ಚನೆಯೂ (ಮೂರ್ತಿಪೂಜೆ) ಒಂದು ಪ್ರಕಾರ ಅಷ್ಟೆ. ನಾಮರೂಪಾತ್ಮಕವಾದ (imagery) ಚೌಕಟ್ಟಲ್ಲೇ ಚಿಂತಿಸುವ ಮಿತಿಯುಳ್ಳ ಮನಸ್ಸಿಗೆ ಅಮೂರ್ತಸ್ವರೂಪದ ಪರತತ್ವವನ್ನು ಅನುಸಂಧಾನ ಮಾಡುವುದು ಕಷ್ಟಸಾಧ್ಯ. ಹಾಗಾಗಿ ಆ ತತ್ವದ ದಿವ್ಯ ಶಕ್ತಿವಿಭೂತಿಗಳನ್ನೂ, ಲೀಲೆಗಳನ್ನೂ ಸಾಕಾರರೂಪಗಳಲ್ಲಿ ಸಂಕೇತಗೊಳಿಸಿ ಬಳಸಲಾಗುತ್ತದೆ. ಭಗವಂತನ ದಿವ್ಯ ಸ್ವರೂಪ, ವಿಭೂತಿ, ಶಕ್ತಿ ಹಾಗೂ ಲೀಲೆಗಳನ್ನು ಸಂಕೇತಿಸುವ ವೇಷಭೂಷಗಳು, ಬಣ್ಣ, ವಾಹನ, ಆಯುಧಗಳು, ವಸ್ತುಗಳು, ಆಸನ ಮೂಂತಾದವು ಪ್ರತಿಯೊಂಡು ದೇವತಾರೂಪದಲ್ಲೂ ಕಾಣುತ್ತದೆ. ಇವೆಲ್ಲ ರಹಸ್ಯದ code ಇದ್ದಂತೆ. ಕ್ರಮಯುತ ಧ್ಯಾನೋಪಾಸನೆಗಳ ಮೂಲಕ ದೈವೀ ರಹಸ್ಯವನ್ನು ಗ್ರಹಿಸಲು ಮನಸ್ಸಿಗೆ ಕ್ರಮೇಣ ಯೋಗ್ಯತೆಯುಂಟಾಗುತ್ತದೆ. ಇದು ಅತ್ಯಂತ ಸಹಜ, ಸರಳ ಹಾಗೂ ಸುಲಭವಾದ ಏಕಾಗ್ರತೆಯ ಸಾಧನೆ. ಮನಸ್ಸನ್ನು ಅಮೂರ್ತವಾದ ಪರತತ್ವದತ್ತ ಹಂತ ಹಂತವಾಗಿ ಏರಿಸಲು ಸರಳ ಮನೋವೈಜ್ಞಾನಿಕ ಉಪಾಯವೇ ಇದಾಗಿದೆ.
ಯಾರೂ ’ಕಲ್ಲು, ಮಣ್ಣು ಅಥವಾ ಲೋಹಗಳ ತುಂಡನ್ನು’ ಪೂಜಿಸುವುದಿಲ್ಲ. ಸರ್ವತ್ರ ವ್ಯಾಪಿಸಿರುವ ಪರಮಾತ್ಮನನ್ನು ಆ ರೂಪಗಳಲ್ಲಿ ವಿಶೇಷವಾಗಿ ಆವಾಹಿಸಿ, ಧ್ಯಾನಿಸುತ್ತಾರೆ ಅಷ್ಟೆ. ಭಗವಂತನ ಸಂಕೇತದ ಮುಂದೆ ಮಗುವಿನಂತೆ ವಿನಮ್ರನಾಗಿ ನಮಿಸಿ, ಅಂತರಂಗದ ಭಾವಗಳನ್ನು ತೋಡಿಕೊಂಡು, ಆನಂದಿಸುತ್ತಾನೆ ಭಕ್ತ. ಸರ್ವತ್ರ ಗಾಳಿಯಿದ್ದರೂ fan ಹಾಕಿದಾಗ ನಮ್ಮ ಅನುಭವಕ್ಕೆ ವಿಶೇಷವಾಗಿ ಬರುವಂತೆ, ನಾಮರೂಪಾತೀತ ತತ್ವಸ್ವರೂಪಿಯನ್ನು ಔಪಾಸನಾತ್ಮಕಪ್ರೀತಿಗಾಗಿ ನಾಮರೂಪಗಳಲ್ಲಿ ಆವಾಹಿಸಿ, ಪೂಜಿಸಿದಾಗ ಭಾವೋನ್ನತಿಯುಂಟಾಗುತ್ತದೆ.
ಮೂರ್ತಿಪೂಜೆಯ ವಿಶೇಷವೇನೆಂದರೆ ಭಕ್ತರು ತಮ್ಮ ಮನೆಯಲ್ಲಿನ ಪೂಜಾಮಂದಿರದಲ್ಲಿ ತಮ್ಮ ಅಭಿರುಚಿ ಹಾಗೂ ಕುಲಧರ್ಮಕ್ಕನುಗುಣವಾದ ವಿಗ್ರಹ ಹಾಗೂ ಪೂಜಾಪದ್ಧತಿಗಳನ್ನು ಅನುಸರಿಸಬಹುದು. ಇಲ್ಲಿ ಪ್ರತಿದಿನವೂ ’ಪೂಜಾರಿ’ ಎಂಬ ಮಧ್ಯವರ್ತಿ ಬೇಕಿಲ್ಲ. ಇನ್ನು ಹಬ್ಬ ಹರಿದಿನಗಳಂದು  ಭಗವತ್ತತ್ವವನ್ನು  ತನ್ನ ಅಂತರಂಗದಿಂದ ವಿಧಿಯುಕ್ತವಾಗಿ ಮೂರ್ತಿಯಲ್ಲೋ ಕಲಶದಲ್ಲೋ ಪ್ರಾಣ ಪ್ರತಿಷ್ಠಾಪನೆ ಮಾಡಿ ಪೂಜಾಂತ್ಯದಲ್ಲಿ ಯಥಾ ಸ್ಥಾನಂ ಪುನರಾವಾಹನೆಮಾಡಿಕೊಳ್ಳಲಾಗುತ್ತದೆ. ಇದು ತುಂಬ ಅರ್ಥಪೂರ್ಣ.
ವಿಗ್ರಹ ಎಂದರೆ ಸ್ಪಷ್ಟ ಆಕಾರದ ದೇಹೇಂದ್ರಿಯಾವಯವಗಳುಳ್ಳ ದೇವತಾಶಿಲ್ಪವೇ ಆಗಬೇಕೆಂದೇನಿಲ್ಲ. ಅಗ್ನಿಕುಂಡ, ದೀಪ, ಕಲಶ, ಸಾಲಿಗ್ರಾಮ, ಲಿಂಗ, ಶ್ರೀಯಂತ್ರ, ಶೋಣಾಶ್ಮ, ಸ್ಫಟಿಕ, ಶಂಖ, ತೆಂಗಿನಕಾಯಿ, ಸಗಣಿ ಮುದ್ದೆ ಅಥವಾ ಮಣ್ಣಿನ ಮುದ್ದೆ, ಅಡಕೆ ಚೂರು ಮುಂತಾದ ಚಿಹ್ನೆಗಳನ್ನೂ ಪೂಜೆಗೆ ಬಳಸಬಹುದು. ನೆಲದ ಮೇಲೆ ಅರ್ಥಪೂರ್ಣ ಬಣ್ಣ ಹಾಗೂ ವಿನ್ಯಾಸಗಳಲ್ಲಿ ಯಂತ್ರವನ್ನು ರಚಿಸಿ ಅದರಲ್ಲಿ ದೇವರನ್ನು ಆವಾಹಿಸಿ ಪೂಜಿಸುವುದೂ ಉಂಟು. ಇವಲ್ಲದೆ ದೈವಂ ಮಾನುಷರೂಪೇಣ…’ ಎಂಬ ಭಾವದಲ್ಲಿ ಸುಮಂಗಲೀ, ಕುಮಾರಿ, ಬ್ರಹ್ಮಚಾರಿ, ದಂಪತೀಪೂಜೆಗಳನ್ನೂ ಮಾಡುವುದುಂಟು. ಇದಲ್ಲದೆ ಅಶ್ವತ್ಥ, ಬೇವು, ಔದುಂಬರ, ಹುತ್ತ, ಗೋವು, ಭೂಮಿ ಮುಂತಾದುವನ್ನೂ ಪೂಜಿಸುತ್ತೇವೆ. ಸಂಕ್ರಾಂತಿಯಲ್ಲಿ ರೈತರು ಭೂಮಿಯನ್ನೂ, ಧಾನ್ಯರಾಶಿಯನ್ನೂ, ಗೋವು-ಎತ್ತುಗಳನ್ನೂ ಲಕ್ಷ್ಮಿಯೆಂದು ಪೂಜಿಸುತ್ತಾರೆ. ಆಯುಧ ಪೂಜೆಯ ಸಂದರ್ಭದಲ್ಲಂತೂ ನಮ್ಮ ವೃತ್ತಿಗೆ ಹಾಗೂ ಜೀವನಕ್ಕೆ ಅನುಕೂಲಿಸುವಂತಹ ವಾಹನಗಳನ್ನೂ, ಕಾರ್ಯಾಗಾರಗಳಲ್ಲಿನ ಮಶೀನ್ ಗಳನ್ನೂ, ಮನೆಯಲ್ಲಿನ ಯಂತ್ರಗಳನ್ನೂ ಎಲೆಕ್ಟ್ರಾನಿಕ್ ವಸ್ತುಗಳನ್ನು, ಸಲಕರಣೆಗಳನ್ನು ಪೂಜಿಸುತ್ತೇವೆ. ಸರಸ್ವತೀಪೂಜೆಯಂದು ವಾದ್ಯಗಳನ್ನೂ, ಪುಸ್ತಕಗಳನ್ನೂ, ಜಪಮಾಲೆ ಮುಂತಾದುವನ್ನೂ ಪೂಜಿಸುತ್ತೇವೆ. ಪ್ರತಿದಿನವೂ ನಮ್ಮ ಗೃಹಿಣೀಯರು ಹೊಸಿಲನ್ನೂ ತುಳಸಿಯನ್ನೂ ಒಲೆಯನ್ನೂ ಪೂಜಿಸಿಯೇ ದಿನವನ್ನು ಪ್ರಾರಂಭಿಸುತ್ತಾರೆ. ಅಮೂರ್ತನಾದ ಭಗವಂತನನ್ನು ಮೂರ್ತವಾದ ಅವನ ಸೃಷ್ಟಿಯ ಮೂಲಕ ಧ್ಯಾನಿಸುವುದೇ ಇಲ್ಲಿನ ಇಂಗಿತ. ಮೂರ್ತಿಪೂಜೆಯಲ್ಲಿ ಸರಳತೆ, ಮುಗ್ಧತೆ, ಪ್ರೇಮ, ಭಕ್ತಿ ಹಾಗೂ ಏಕಾಗ್ರತೆಗಳು ಸೇರಿವೆ. ಉಪಾಸನೆಗೆ ಕುಲ, ಪ್ರಾಂತ, ಸಂಪ್ರದಾಯ, ಅಭಿರುಚಿ, ಋತು, ಮಾಸ, ಸಮಯ-ಸಂದರ್ಭ, ಅನುಕೂಲಗಳು, ಸಾಮರ್ಥ್ಯ ಮುಂತಾದವುಗಳಿಗನುಗುಣವಾಗಿ ಹಲವು ಆಯ್ಕೆಗಳಿವೆ. ಹಾಗಾಗಿ ಭಕ್ತನಿಗೆ ಅಪಾರವಾದ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇರುತ್ತದೆ. ಈ ಭಾವವಿಶೇಷವನ್ನು ಅರಿಯುವ ತಾಳ್ಮೆಯನ್ನೂ ತೋರದೆ ದ್ವೇಷಾಸಹನೆಗಳಿಂದಲೇ ಜರಿಯುವುದು ಪಾಪ. ಏಕೆಂದರೆ ಇದು ಅಜ್ಞಾನವಲ್ಲ, ಸರಳ ಮನೋವಿಜ್ಞಾನ’.
ಮೂರ್ತಿಪೂಜೆಯ ಸಂಸ್ಕೃತಿಯಿಂದಾಗಿಯೇ ನಮ್ಮ ದೇಶದಲ್ಲಿ ಚಿತ್ರಕಲೆ, ಶಿಲ್ಪಕಲೆ, ರಂಗೋಲಿ, ದೇವಾಲಯ ಸಂಪ್ರದಾಯಗಳು ಇಷ್ಟು ವರ್ಣರಂಜಿತವಾಗಿಯೂ ಸರ್ಜನಶೀಲವಾಗಿಯೂ ವೈವಿಧ್ಯಪೂರ್ಣವಾಗಿಯೂ ಅರಳಿ ನಿಂತಿದೆ. ಮೂರ್ತಿಪೂಜೆಯ ಸಂಸ್ಕೃತಿಯ ಉಪಜೀವಿಗಳಾದ ಕೋಟಿಗಟ್ಟಲೆ ಶಿಲ್ಪಿಗಳು, ಮಾಲಾಕಾರರೂ, ಅಕ್ಕಸಾಲಿಗರೂ, ಬಡಗಿಗಳು, ಚಿತ್ರಕಾರರು, ಮರಗೆಲಸದವರು, ಗೀತ-ನೃತ್ಯ-ನಾಟಕಪಟುಗಳು, ಕೃಷಿಕರು, ಪುರೋಹಿತರೂ, ವರ್ತಕರೂ ಮುಂತಾದವರು ಶತಮಾನಗಳಿಂದ ಸಮೃದ್ಧವಾಗಿ ಬದುಕಿ, ತಮ್ಮ ವೃತ್ತಿ ಹಾಗೂ ಪ್ರತಿಭೆಗಳನ್ನು ಅರಳಿಸಿಕೊಳ್ಳುತ್ತ ತಾವೂ ಬೆಳೆದು ಸಮಾಜವನ್ನೂ ಧಾರ್ಮಿಕ ಸಂಸ್ಕೃತಿಯನ್ನೂ ಕಲೆಗಳನ್ನೂ ಪೋಷಿಸುತ್ತ ಬಂದಿದ್ದಾರೆ. ಕಾಲಾತ್ಮಿಕತೆಗೆ ಹೇರಳವಾದ ಅವಕಾಶವೂ ಇಲ್ಲಿದೆ. ಅಪಾರ ಸ್ವಾತಂತ್ರ್ಯವಿರುವುದರಿಂದಲೇ ಆಗಮ ತತ್ವಸಂಕೇತಗಳನ್ನು ಮೈಗೂಡಿಸಿಕೊಂಡು ಅರಳಿರುವ ನಮ್ಮ ಶಿಲ್ಪಶಾಸ್ತ್ರವು ತನ್ನ ಅನೇಕ ಕವಲುಗಳಲ್ಲಿ ಅಸಂಖ ರೂಪವಿನ್ಯಾಸಗಳನ್ನೂ, ಸ್ವಾರಸ್ಯಗಳನ್ನೂ ದೇವತಾಮೂರ್ತಿಗಳಿಗೆ ಕಾಲಕಾಲಕ್ಕೂ ಸೇರಿಸುತ್ತ ಹೋಗಿದೆ! ಮೂರ್ತಿಗಳ ಕಲ್ಪನೆ ಇಲ್ಲದಿದ್ದಲ್ಲಿ ಇಷ್ಟೊಂಡು ಸರ್ಜನಶೀಲ ಕಲಾತ್ಮಿಕ ಕಲ್ಪನೆಗಳಿಗೆ ಅವಕಾಶವಾದರೂ ಇರುತ್ತಿತ್ತೆ? ತೀವ್ರ ಮತಾಂತರದಿಂದ ಗ್ರೀಕರ ದೇವತಾ ಉಪಾಸನಾ ಪದ್ಧತಿ ನಾಶವಾದ ಮೇಲೆ ಆ ದೇಶದಲ್ಲಿ ದೇಶೀಶಿಲ್ಪಕಲೆಯು ಸಂಪೂರ್ಣ ಸ್ಥಗಿತವೇ ಆದದ್ದು ಇತಿಹಾಸದಲ್ಲಿ ಕಾಣುವ ದುರಂತ ಸತ್ಯ.
ಆಕ್ರಮಣಕಾರರು ನಮ್ಮ ಮೂರ್ತಿಗಳನ್ನೂ ದೇವಾಲಯಗಳನ್ನೂ ಭಂಜಿಸಿ ನಮ್ಮ ದೇವರನ್ನೇ ನಾಶಗೈದೆವೆಂದುಭ್ರಮಿಸಿದರು, ಮತಾಂಧ ಶಾಸಕರು ದಶಕಗಳ ಕಾಲ ದೇವಸ್ಥಾನಗಳಲ್ಲಿ ಪೂಜೆಗೇ ಅವಕಾಶವೀಯುತ್ತಿರಲಿಲ್ಲ. ಇಷ್ಟಾದರೂ ಜನರು ನದಿ ಸಮುದ್ರ ಗಿಡ ಮರ ಗೋವುಗಳನ್ನು ಪೂಜೆಗೈಯುತ್ತ ಭಗವಂತನಿಗೆ ತಮ್ಮ ಭಕ್ತಿಯನ್ನು ತಲುಪಿಸುವುದನ್ನು ಬಿಡಲಿಲ್ಲ! ಕಾಶಿವಿಶ್ವನಾಥನ ಮೂಲಲಿಂಗವನ್ನು ಭಂಜಿಸಿ ಭಾವಿಗೆಸೆದಾಗ, ಆ ಭಾವಿಗೇ ಪೂಜೆಗೈದು ಅದರ ನೀರನ್ನು ಪವಿತ್ರತೀರ್ಥವೆಂದು ಸ್ವೀಕರಿಸುವ ಪದ್ಧತಿ ಮೊದಲಾಯಿತು! ಸೋಮನಾಥದಲ್ಲಿ ದೇವಾಲಯವನ್ನು ಕೆಡವಿ, ಲಿಂಗವನ್ನು ಸಮುದ್ರಕ್ಕೆಸೆದು, ದಶಕಗಳ ಕಾಲ ಪೂಜೆಗೇ ತಡೆಯಾಜ್ಞೆಯಿತ್ತಾಗ ಜನರು ಶತದ್ರು-ಗೋಮತೀ ನದಿಗಳನ್ನೂ ಸಮುದ್ರವನ್ನೂ ಪೂಜಿಸಿ ಸೋಮನಾಥನಿಗೆ ಪೂಜೆ ತಲುಪಿಸುತ್ತ ಸಾಗಿದರು!
ಭಗವಂತನು ಸೃಷ್ಟಿಯನ್ನೂ ಚರಾಚರವನ್ನೂ ತುಂಬಿ ಸಾಕಾರ-ನಿರಾಕಾರಗಳ ಲೀಲೆಯಾಡುತ್ತಾನೆಂದು ನಂಬುವ ಹಿಂದುಗಳಿಗೆ ಮೂರ್ತಿಪೂಜೆ ಎಷ್ಟು ಇಷ್ಟವೋ, ಪೂಜಾಂತ್ಯದಲ್ಲಿ ಮೂರ್ತಿಯನ್ನು ವಿಸರ್ಜಿಸುವುದೂ ಅಷ್ಟೇ ಸಹಜ ಸುಲಭ. ಗೌರಿ, ಗಣಪತಿ, ದುರ್ಗಾಪೂಜೆ ಮುಂತಾದವುಗಳಲ್ಲಿ ಮೂರ್ತಿವಿಸರ್ಜನೆಯನ್ನು ಭಕ್ತರು ಸಹಜವಾಗಿ ಮಾಡುವುದನ್ನು ಕಂಡಾಗ ಈ ವಿಚಾರ ಸ್ಪಷ್ಟವಾಗುತ್ತದೆ. ಅದ್ವಯಾನುಭವದ ಚರಮಸ್ಥಿತಿಯಾದ ನಿರ್ವಿಕಲ್ಪಸಮಾಧಿಗೇರಿದ ರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಸಾಧನೆಯನ್ನು ಪ್ರಾರಂಭಿಸಿದ್ದು ಕಾಳಿಮಾತೆಯ ಮೂರ್ತಿಯ ಉಪಾಸನೆಯೊಂದಿಗೆ. ಯೋಗಸಿದ್ಧಿಯಾದ ಬಳಿಕ ಅವರಿಗೆ ನಿತ್ಯವೂ ದೇಗುಲದ ಕಾಳಿಯ ದರ್ಶನ ಪೂಜನಗಳ ಅಗತ್ಯವೇ ಇರಲಿಲ್ಲ, ಏಕೆಂದರೆ ಎಲ್ಲೆಲ್ಲೂ ಅದೇ ಚಿನ್ಮಯೀ ಭಗವತಿಯನ್ನೇ ಕಾಣುತ್ತಿದ್ದರು!
ಹೀಗೆ ಮೂರ್ತದ ಆರಾಧನೆಯ ಮೂಲಕ ಅಮೂರ್ತದ ಸತಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗದಲ್ಲಿ ಮೂರ್ತಿಪೂಜೆ ತುಂಬ ಸಾಯಯಕ ಎಂಬ ತತ್ವವನ್ನು ನಮ್ಮ ಪ್ರಾಜ್ಞರು ಬಹಳ ಹಿಂದೆಯೇ ಮನಗಂಡಿದ್ದರು. ಸಾಯಣಾಚಾರ್ಯರು ಅರ್ಥಪೂರ್ಣವಾಗಿ  ಉಪಾಸನಾವಿಧಾನದಲ್ಲಿ ಸ್ತರಗಳನ್ನು ಹೀಗೆ ಸೂಚಿಸುತ್ತಾರೆ- "ಪ್ರಥಮಾ ಪ್ರತಿಮಾ ಪೂಜಾ ಜಪಸ್ತೋತ್ರಾಣಿ ಮಧ್ಯಮಾ , ಉತ್ತಮಾ ಮಾನಸೀಪೂಜಾ ಸೋಹಂ ಭಾವೋತ್ತಮೋತ್ತಮಾ!" (ಮೊದಲು ಪ್ರತಿಮಾ ಪೂಜೆ, ಮಧ್ಯಮ ಸ್ತರದ್ದು ಜಪಸ್ತೋತ್ರಗಳು, ಅದಕ್ಕಿಂತ ಉತ್ತಮ ಮಾನಸಪೂಜೆಯಾದ ಧ್ಯಾನ, ಆದರೆ ಉತ್ತಮೋತ್ತಮವಾದದ್ದು ಸೋಹಂ ಭಾವ, ಎಂದರೆ ತನ್ನ ಅಸ್ತಿತ್ವವನ್ನೇ ಪರತತ್ವದಲ್ಲಿ ಐಕ್ಯಗೊಳಿಸಿಕೊಂಡು ಚರಮಾನುಭವದಲ್ಲಿ ನೆಲೆಗೊಳ್ಳುವುದು).

ಈ ಮರ್ಮವನ್ನು ಅರಿತು ಆಚರಿಸುವ ವಿವೇಕವನ್ನು ನಾವು ತಳೆದಲ್ಲಿ ನಮ್ಮ ಕಣ್ಮುಂದಿನ ಮುದ್ದು ಮೂರ್ತಿ ನಮ್ಮನ್ನು ಯೋಗದೆತ್ತರಕ್ಕೇ ಒಯ್ಯಬಲ್ಲ ಮಹತ್ತಮ ಸಾಧನವಾದೀತು!
Publsihed in Samyukta Karnataka, 2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ