ಶುಕ್ರವಾರ, ಮಾರ್ಚ್ 17, 2017

ಉಪವಾಸ
ಒಪ್ಪತ್ತುಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನ್ ಹೊತ್ಕೊಂಡ್ ಹೋಗಿಎಂಬ ನಾನ್ನುಡಿ ಸುಪ್ರಸಿದ್ಧ. ಮನುಷ್ಯನಿಗೆ ಹೊಟ್ಟೆಯ ರಗಳೆ ಬಹು ದೊಡ್ಡದ್ದು. ತಿನ್ನುವ ಚಾಪಲ್ಯವನ್ನು ಹದ್ದಿಕ್ಕುವುದು ಸುಲಭವಲ್ಲ. ಆದರೆ ನಿಯಮಿತವಾಗಿ ಉಪವಾಸವನ್ನು ಅಭ್ಯಾಸ ಮಾಡುವುದರಿಂದ ಈ ಚಾಪಲ್ಯ ತಗ್ಗುತ್ತದಲ್ಲದೆ, ಹೊಟ್ಟೆಗೆ ವಿಶ್ರಾಂತಿಯೂ, ಆರೋಗ್ಯವರ್ಧನೆಯೂ, ಜೀರ್ಣಪ್ರಕ್ರಿಯೆಯ ಸುಧಾರಣೆಯೂ ಆಗುತ್ತದೆ. ಲಂಘನಂ ಪರಮೌಷಧಂ(ಒಂದು ಹೊತ್ತು ಆಹರವನ್ನು ತ್ಯಜಿಸುವುದು ಪರಮ ಔಷಧ) ಎನ್ನುವುದು ಪ್ರಸಿದ್ಧವಾದ ಪ್ರಾಚೀನೋಕ್ತಿ. ಚಿಕ್ಕವಯಸ್ಸಿನಿಂದಲೇ ಉಪವಾಸವನ್ನು ಸ್ವಲ್ಪಸ್ವಲ್ಪವಾಗಿ ಅಭ್ಯಸಿಸಬೇಕು.
ಉಪವಾಸ ಎನ್ನುವುದು ಶಾರೀರಿಕವ್ರತಗಳಲ್ಲೊಂದು.. ಉಪವಾಸೈಸ್ತಥಾಪುಣ್ಯಂ ತಪಃ ಕರ್ಮ ನ ವಿದ್ಯತೆ. ’ಉಪಎಂದರೆಹತ್ತಿರ’, ’ವಾಸಎಂದರೆಇರುವುದು’. ದೇವರಿಗೆ/ಧ್ಯೇಯಕ್ಕೆ ಹತ್ತಿರ ಇರುವುದು ಉಪ-ವಾಸ’. ಕಣ್ಣು, ಕಿವಿ, ಮೂಗು, ತ್ವಚೆ ಹಾಗೂ ಜಿಹ್ವೆಗಳ ಚಾಪಲ್ಯವನ್ನು ಹದ್ದಿಕ್ಕಿ, ಅಂತರ್ಮುಖಗೊಳಿಸಿ, ಮನಸ್ಸಿನ ಸರ್ವಶಕ್ತಿಯನ್ನೂ ಧ್ಯೇಯದಲ್ಲಿ ಕೇಂದ್ರೀಕರಿಸುವುದು ನಿಜವಾದ ಉಪವಾಸ.
ಉಪವಾಸದಲ್ಲೂ ವಿಧಾನಗಳಿವೆ. ಅವರವರ ಸಾಮರ್ಥ್ಯ, ವಯೋಧರ್ಮ ಹಾಗೂ ಅನುಕೂಲಗಳನ್ನು ಗಣಿಸಿ ಉಪವಾಸದ ಬಗೆಯನ್ನು ಆಯ್ದುಕೊಳ್ಳಬಹುದು.
ಹಗಲೂ ರಾತ್ರಿ ಏನನ್ನೂ ತಿನ್ನದೆ ಕುಡಿಯದೆ ಆಚರಿಸುವ ನಿರ್ಜಲ ಉಪವಾಸ’, ಕೇವಲ ಪ್ರಾಣಾಯಾಮದಿಂದ ಪ್ರಾಣಧಾರಣೆ ಮಾಡುವ ಉಪವಾಸ (ರಾಮಾಯಣದಲ್ಲಿ ಇಂತಹವ್ರತಿಗಳನ್ನು ಸಲಿಲಪಾಃ ಎಂದು ಕರೆಯಲಾಗಿದೆ), ಹಗಲೆಲ್ಲ ಉಪವಾಸವಿದ್ದು ಸೂರ್ಯಾಸ್ತದ ನಂತರ ಆಹಾರ ಸೇವಿಸುವನಕ್ತ’(ಸಂಕಷ್ಟಹರ ಗಣಪತಿವ್ರತ, ಹದಿನಾರು ಸೋಮವಾರಗಳ ವ್ರತಾದಿಗಳಲ್ಲಿ ಕಾಣಬಹುದು), ‘ಕೇವಲ ಹಾಲನ್ನು ಸ್ವೀಕರಿಸುವ ಪಯೋವ್ರತ ಮುಂತಾದ ಉಪವಾಸವ್ರತಗಳಿವೆ. ಇಂತಹ ಬಗೆಬಗೆಯ ಉಪವಾಸವ್ರತಗನ್ನು ಆಚರಿಸಿದ ಸಾತ್ವಿಕ ಸ್ತ್ರೀಪುರುಷರ ಉಲ್ಲೇಖಗಳು ಪುರಾಣ- ಜಾನಪದ ಮೂಲಗಳಲ್ಲಿ ಹೇರಳವಾಗಿ ಸಿಗುತ್ತವೆ. ಇಂದಿಗೂ ಅಂತಹ ಧೀರರು ಇಲ್ಲದಿಲ್ಲ. ಭೋಜನವನ್ನು ತ್ಯಜಿಸಿ ಉಪಾಹಾರ, ಫಲಾಹಾರ(ಹಣ್ಣುಗಳನ್ನು), ಗೆಡ್ಡೆ-ಗೆಣಸು-ಹಸಿತರಕಾರಿಗಳನ್ನು, ಹಣ್ಣಿನ ರಸ, ಎಳನೀರು, ನೀರು ಮುಂತಾದುವನ್ನು ಸೇವಿಸುತ್ತ ಭಾಗಶಃ ಉಪವಾಸ ಮಾಡುವುದು ನಮಗೆಲ್ಲ ಪರಿಚಿತ. ಹುಳಿ ಇರುವ ಯಾವ ಪದಾರ್ಥವನ್ನೂ ಸೇವಿಸದೇ ಇರುವುದು ಸಂತೋಶೀಮಾ-ವ್ರತನಿಯಮಗಳಲ್ಲೊಂದು. ಭಕ್ಷ್ಯಗಳನ್ನೋ, ಉಪ್ಪು-ಖಾರ-ಸಿಹಿಗಳನ್ನೋ, ಆಕ್ಕಿ-ಗೋದಿ ಮುಂತಾದ ಧಾನ್ಯಗಳನ್ನೋ, ಈರುಳ್ಳಿ- ಬೆಳ್ಳುಳ್ಳಿ- ಅಣಬೆ-ಮಾಂಸಾಹಾರ-ಮದ್ಯ ಮುಂತಾದುವನ್ನೋ ಐಚ್ಛಿಕವಾಗಿಯೋ ವ್ರತನಿಯಮಾನುಸಾರವಗಿಯೋ ತ್ಯಾಗ ಮಾಡುವಂತಹ ವ್ರತಗಳಿವೆ. ಕಾಶಿ, ಗಯಾದಿ ಸ್ಥಳಗಳಿಗೆ ಭೇಟಿಯಿತ್ತಾಗ ಪ್ರಿಯವಾದ ತಿಂಡಿ-ಹಣ್ಣು-ತರಕಾರಿಗಳನ್ನು ವರ್ಜಿಸುವ ಪದ್ಧತಿಯೂ ಸುಪ್ರಸಿದ್ಧ. ನವರಾತ್ರ, ಮಹಾಶಿವರಾತ್ರಿ, ಏಕಾದಶೀ, ಶ್ರಾವಣಸೋಮವಾರ, ಶ್ರಾವಣಶನಿವಾರ, ಕುಲದೇವತೆಗಾಗಿ ವಾರದ ಒಂದು ದಿನ ಉಪವಾಸ ಇತ್ಯಾದಿಗಳನ್ನು ಅಸಂಖ್ಯರು ಆಚರಿಸುತ್ತಾರೆ. ಹಬ್ಬಗಳಂದು ದಿನವಿಡೀ ಉಪವಾಸವಿದ್ದು ಸಾಯಂಕಾಲಾನಂತರ ಔತಣವನ್ನು ಆಸ್ವಾದಿಸುವುದು ಉತ್ತರಭಾರತದಲ್ಲಿ ಸರ್ವೇಸಾಮಾನ್ಯ. ಗಂಡನ ಶ್ರೇಯಸ್ಸಿಗಾಗಿಖಡ್ವಾ ಚೌತ್’’ ಉಪವಾಸವನ್ನು ಸ್ತ್ರೀಯರು ಆಚರಿಸುತ್ತಾರೆ. ಇದಲ್ಲದೆ ಯಾವುದೇ ಶುಭಕಾರ್ಯಗಳನ್ನು ಆಚರಿಸುವಾಗ, ಸಂಕಲ್ಪವಾಗುವವರೆಗೂ ಸ್ಥೂಲಾಹಾರವನ್ನು ಸೇವಿಸದಿರುವುದು ನಿಯಮ. ಹಸೆಯೇರುವ ವಧೂವರರೂ ವಿವಾಹದ ಮುಖ್ಯವಿಧಿಗಳು ಮುಗಿಯುವವರೆಗೂ ಭಾಗಶಃ ವಾದರೂ
ಉಪವಾಸವಿರುವುದು ಸಂಪ್ರದಾಯ.
ಷಷ್ಠ್ಯಾಹವ್ರತಎಂಬ ಆರುವಾರಗಳ ವ್ರತದಲ್ಲಿ ಉಪವಾಸವನ್ನು ಕಠಿಣಗೊಳಿಸುತ್ತ ಹೋಗುವುದು ಕ್ರಮ. ಮೊದಮೊದಲು ಹಾಲುಹಣ್ಣುಗಳನ್ನು, ಆ ಬಳಿಕ ಪರ್ಣಗಳನ್ನು, ಬಳಿಕ ಹಣ್ಣಿನ ರಸವನ್ನು, ಬಳಿಕ ನೀರನ್ನು, ಬಳಿಕ ಕೇವಲ ಗಾಳಿಯನ್ನು ಸೇವಿಸುತ್ತ ಬಂದು ಕೊನೆಯಲ್ಲಿ ಕುಂಭಕ ಮಾಡುವುದು ಈ ಅಪೂರ್ವವ್ರತದ ಕ್ರಮ. ವಿಷ್ಣುವನ್ನು ಒಲಿಸಲು ಧ್ರುವನು ಇದನ್ನು ಮಾಡಿದನೆಂದು ವಿಷ್ಣುಪುರಾಣ ಸಾರುತ್ತದೆ. ಇಂತಹದೇ ವ್ರತವನ್ನು ಪಾರ್ವತೀ ಶಿವನೊಲುಮೆಗಾಗಿ ಮಾಡಿದಾಗ ಅವಳಿಗೆ ಅಪರ್ಣಾ’ (ಪರ್ಣಾಹಾರವನ್ನು ತ್ಯಜಿಸಿದವಳು), ‘ಉಮಾ’ (ಇಷ್ಟೊಂದು ಉಪವಾಸ ಮಾಡಬೇಡವಮ್ಮ ಎಂದು ಅವಳ ತಾಯಿ ಹೇಳಿದಳಂತೆ) ಎಂಬ ಹೆಸರುಗಳು ಬಂದವೆಂದು ಕಾಳಿದಾಸನ ಕವಿಹೃದಯ ವ್ಯಾಖ್ಯಾನಿಸುತ್ತದೆ.
ಆಧ್ಯಾತ್ಮಿಕ ಸಾಧಕರು ಇಂದ್ರಿಯನಿಗ್ರಹಕ್ಕಾಗಿ ಬಗೆಬಗೆಯಾಗಿ ಉಪವಾಸವನ್ನು ಆಚರಿಸುತ್ತಾರೆ. ಒಂದು ಕರದಲ್ಲಿ ಹಿಡಿಸುವಷ್ಟು ಮಾತ್ರ ಆಹಾರವನ್ನು ಸ್ವೀಕರಿಸುವುದು, ಆಹಾರವನ್ನು ಮುಷ್ಟಿಯಲ್ಲಿ ಹಿಡಿದು ನೀರಲ್ಲಿ ಮುಳುಗಿಸಿ, ಉಪ್ಪು-ಹುಳಿ-ಖಾರಗಳನ್ನೆಲ್ಲ ಹೋಗಲಾಡಿಸಿ ಸ್ವೀಕರಿಸುವುದು, ದಿನಕ್ಕೆ ಬೇಯಿಸಿದ ಕಡಲೆಕಾಯಿ ಅಥವಾ ಚೆನ್ನಾ ಒಂದು ಮುಷ್ಟಿ ಯಷ್ಟನ್ನು ಮಾತ್ರ ತಿನ್ನುವುದು, ಯಜ್ಞಶೇಷವನ್ನು(ಪ್ರಸಾದ) ಮಾತ್ರ ಉಣ್ಣುವುದು, ಸುಗ್ಗಿಯಾದಾಗ ಉದುರಿದ ಧಾನ್ಯಗಳನ್ನು ಹಕ್ಕಿಗಳೂ ಉಂಡು ಹೋದಮೇಲೆ ಅಳಿದುಳಿದ ಕಾಳುಗಳನ್ನು ಹೆಕ್ಕಿ ತಿನ್ನುವುದು (ಆಯ್ದಕ್ಕಿಮಾರಯ್ಯಎಂಬ ಶಿವಶರಣನು ಇದಕ್ಕೆ ಹೆಸರಾದವನು) ಮುಂತಾದ ಹಲವಾರು ಆಹಾರನಿಯಮಗಳು ಶತಮಾನಗಳಿಂದಲೂ ಆಚರಣೆಯಲ್ಲಿವೆ. ಸಾವಿರ ವರ್ಷಗಳ ಕಠಿಣ ಉಪವಾಸವನ್ನು ಆಚರಿಸಿದ ವಿಶ್ವಾಮಿತ್ರರ ಕಥೆ ರಾಮಾಯಣದಲ್ಲಿ ಬರುತ್ತದೆ. ಬರಪೀಡಿತ ಲೋಕಗಳಿಗೆ ಮಳೆ ಬರೆಸುವುದಕ್ಕಾಗಿ ಅದಿತಿದೇವಿಯು ಹನ್ನೆರಡುವರ್ಷಗಳ ಉಪವಾಸವ್ರತವನ್ನು ಆಚರಿಸಿದಳಂತೆ. ಕೇವಲ ಮಧುಕರೀಭಿಕ್ಷೆಯ ಆಹಾರವನ್ನು ಸೇವಿಸುಊಂಛವೃತ್ತಿ’ ಎಂಬ ವ್ರತಕ್ಕೆ ತ್ಯಾಗರಾಜರು, ಪುರಂದರದಾಸಾದಿ ಹರಿದಾಸರು ಉದಾಹರಣೆಗಳು. ಭಿಕ್ಷೆಯನ್ನೂ ಬೇಡದೆ ತಾನಾಗಿ ಬಂದದ್ದನ್ನು ಮಾತ್ರ ತಿನ್ನುವ ಪ್ರಾಚೀನ ಅಯಾಚಿತವ್ರತ’ವನ್ನು ಸ್ವಾಮಿ ವಿವೇಕಾನಂದರೂ ತಮ್ಮ ಪರಿವ್ರಜನದ ದಿನಗಳಲ್ಲಿ ಆಗಾಗ ಆಚರಿಸುತ್ತಿದ್ದರು. ಚೈತನ್ಯಮಹಾಪ್ರಭುಗಳು ಸಂನ್ಯಾಸ ಸ್ವೀಕರಿಸಿದ ಮೇಲೆ ಅವರ ಧರ್ಮಪತ್ನಿ ವಿಷ್ಣುಪ್ರಿಯೆ ಅಕ್ಕಿಯ ಒಂದೊಂದು ಕಾಳಿಗೂಹರೇ ಕೃಷ್ಣಮಹಾಮಂತ್ರವನ್ನು ಜಪಿಸಿ, ಬೇಯಿಸಿ ತಿನ್ನುತ್ತಿದ್ದಳಂತೆ! ಇತ್ತೀಚಿನ ಇತಿಹಾಸದಲ್ಲಿ ಗಾಂಧೀಜಿ ಮುಂತಾದ ಖ್ಯಾತನಾಮರು ಉಪವಾಸವನ್ನು ಆಚರಿಸಿದ ಉದಾಹರಣೆಗಳು ಕಾಣಬರುತ್ತವೆ. ಮಾಜೀ ಪ್ರಧಾನಮಂತ್ರಿ ಶ್ರೀ ಲಾಲ್ ಬಹದೂರ್ ಶಾಸ್ತ್ರಿರವರು, ದೇಶದ ಆಹಾರಮುಗ್ಗಟ್ಟನ್ನು ನಿಭಾಯಿಸುವ ನಿಟ್ಟಿನಲ್ಲಿ ದೇಶವಾಸಿಗಳಿಗೆಲ್ಲ ಪ್ರತಿ ಸೋಮವಾರ ಒಂದು ಹೊತ್ತು ಉಪವಾಸ ಮಾಡೋಣಎಂದು ಕರೆಯಿತ್ತರು. ಈ ಕರೆಗೆ ಓಗೊಟ್ಟ ಅಸಂಖ್ಯ ಭಾರತೀಯರು ಆಜೀವನವೂ ಈ ವ್ರತವನ್ನು ಪಾಲಿಸಿದ್ದುಂಟು! This happens only in India!
ಇತ್ತೀಚೆಗೆ ನಮ್ಮ ಮಾನ್ಯ ಪ್ರಧಾನಮಂತ್ರಿಗಳು ನವರಾತ್ರದ ಸಂದರ್ಭದಲ್ಲಿ ಮಾಡಿದ ನಿರಂತರ ಉಪವಾಸವನ್ನೂ, ಆ ಕಾಲದಲ್ಲೂ ನಿರ್ವಹಿಸಿದ ನಿರಂತರ ಪ್ರವಾಸ ಹಾಗೂ ಚಟುವಟಿಕೆಗಳನ್ನೂ, ಅವರ ದಣಿಯದ ಉತ್ಸಾಹವನ್ನೂ ಕಂಡು ಬೆರಗಾದ ಜಗತ್ತು, ಭಾರತೀಯರ ಪ್ರಾಚೀನ ಆಹಾರ-ಯೋಗ-ಪ್ರಾಣಾಯಾಮಾದಿ ನಿಯಮಗಳ ಅದ್ಭುತ ಶಕ್ತಿಸಾಮರ್ಥ್ಯಕ್ಕೆ ಮಾರುಹೋಗಿದೆ! ಇದರ ಫಲವಾಗಿ ನೂರಾರು ದೇಶಗಳ ಅನುಮೋದನೆಯೊಂದಿಗೆ ‘ಅಂತರಾಷ್ಟ್ರ‍ಿಯ ಯೋಗದಿವಸ’ದ ಆಚರಣೆಗೂ ನಾಂದಿಯಾಗಿದೆ!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ