ಸಿಕ್ಕರೂ ದಕ್ಕದಂತೆ ಮಾಡುವ ಗರ್ವ
ಒಮ್ಮೆ ಮಂಕಾದ ಸರಳವಾದ
ಉಡುಗೆಯನ್ನುಟ್ಟ ವೃದ್ಧ ದಂಪತಿಯೊಂದು ಯಾವ ಪೂರ್ವ ಅಪಾಂಯಿಂಟ್ಮೆಂಟ್ ಇಲ್ಲದೆ ಹಾರ್ವರ್ಡ್ ವಿಶ್ವವಿದ್ಯಾಲಯದ
ಅಧ್ಯಕ್ಷರ ಸಾರ್ವಜನಿಕ ಕಚೇರಿಗೆ ಭೇಟಿ ಇತ್ತರು. ‘ಇಂತಹ ಪತಿಷ್ಟಿತ ವಿದ್ಯಾಸಂಸ್ಥೆಯಲ್ಲಿ ಈ ಕೆಳಸ್ತರದ
ಜನ ಅನೌಪಚಾರಿಕ ಭೇಟಿ ಕೊಟ್ಟು ಯಾಕಾದರೂ ಟೈಮ್ ವೇಸ್ಟ್ ಮಾಡುತ್ತಾರೋ’ ಎಂದು ಕಾರ್ಯದರ್ಶಿಗೆ ಎನೋ ಕಿರಿಕಿರಿ.
ಆ ವೃದ್ಧ ಡೇಸ್ಕ ಬಳಿ ಸಾರಿ ವಿನೀತನಾಗಿ ಹೇಳಿದರು
“ನಾವು ಅಧ್ಯಕ್ಷರನ್ನು ಭೇಟಿ ಮಾಡಬೇಕು”. ಕಾರ್ಯದರ್ಶಿ ಕಡ್ಡಿಮುರಿದಂತೆ ಹೇಳಿದ “ಅವರು ದಿನವಿಡೀ
ತುಂಬ ಬಿಝಿ ಇರುತ್ತಾರೆ. ಏನಾಗಬೇಕಿತ್ತು ಈಗ?” ವೃದ್ಧೆ ವಿನಯದಿಂದ ನುಡಿದಳು “ಪರವಾಗಿಲ್ಲ, ನಾವು
ಕಾಯುತ್ತೇವೆ”. ಕಾರ್ಯದರ್ಶಿ ಅವರನ್ನು ಹಲವು ಗಂಟೆಗಳ ಕಾಲ ಕಾಯಿಸಿ, ಹೇಗಾದರೂ ಹಿಂದಿರುಗುವಂತೆ ಮಾಡಲು
ನೋಡಿದ. ಆದರೆ ಆ ವೃದ್ಧದಂಪತಿ ತಾಳ್ಮೆಗೆಡದೆ ಕಾದೇ ಇದ್ದರು. ಕೊನೆಗೂ ಬೇರೆ ದಾರಿಕಾಣದೆ ಕಾರ್ಯದರ್ಶಿ
ಅಧ್ಯಕ್ಷರಿಗೆ ಅವರ ಬಗ್ಗೆ ಹೇಳಿದ “ಸರ್! ನೀವು ಕೆಲವು ನಿಮಿಷಗಳ ಕಾಲ ಅವರನ್ನು ಮಾತನಾಡಿಸದಿದ್ದರೆ
ಅವರು ಇಲ್ಲಿಂದ ಹೋಗುವುದಿಲ್ಲ ಅನ್ನಿಸುತ್ತದೆ…“. ಅಧ್ಯಕ್ಷರು ಗಂಟುಮೊರೆ ಹಾಕಿಕೊಂಡೇ ಆ ದಂಪತಿಯ ಬಳಿ
ಸಾರಿ ಏನೆಂದು ವಿಚಾರಿಸಿದರು. ವೃದ್ಧೆ ಹೇಳಿದಳು “ನಮಗೊಬ್ಬ ಮಗ ಇದ್ದ. ಆತ ನಿಮ್ಮ ಹಾರ್ವರ್ಡ್ ವಿಶ್ವವಿದ್ಯಲಯದಲ್ಲಿ
ಒಂದು ವರ್ಷದ ಕಾಲ ವ್ಯಾಸಂಗಮಾಡಿದ್ದ. ಆದರೆ ದುರ್ದೈವದಿಂದ ಆತ ಕಳೆದ ವರ್ಷ ಅಪಘಾತದಲ್ಲಿ ಸತ್ತುಹೋದ.
ನಾವು ನಮ್ಮ ಮಗನ ನೆನಪಿನಲ್ಲಿ ಈ ಕ್ಯಾಂಪಸ್ ನಲ್ಲಿ ಒಂಸು ಸ್ಮಾರಕವನ್ನು ನಿರ್ಮಿಸಲು ಬಯಸುತ್ತೇವೆ”.
ಮನಕರಗದೆಯೇ ಅಧ್ಯಕ್ಷ ಕೊಂಕು ನುಡಿದ “ಮೇಡಂ, ಹಾರ್ವರ್ಡ್ ನಲ್ಲಿ ಓದಿದರು ಎನ್ನುವ ಕಾರಣಕ್ಕೆ ಸತ್ತುಹೋದ
ವಿದ್ಯಾರ್ಥಿಗಳ ಸ್ಮಾರಕಗಳನ್ನೆಲ್ಲ ಇಲ್ಲಿ ನೆಡಲಾಗುವುದಿಲ್ಲ. ಹಾಗೆ ಮಾಡುತ್ತ ಹೋದರೆ, ಇದೊಂದು ಸ್ಮಶಾನವಾದೀತು”.
ವೃದ್ಧೆ ತಕ್ಷಣ ವಿವರಿಸಿದಳು- “ಅಯ್ಯೋ ಹಾಗಲ್ಲ! ನಾವು ಆತನ ಮೂರ್ತಿಯನು ನೆಡಲು ಬಯಸುತ್ತಿಲ್ಲ. ವಿಶ್ವವಿದ್ಯಾಲಯಕ್ಕೆ
ಒಂದು ಭವನವನ್ನು ನಿರ್ಮಿಸಿಕೊಡಲು ಬಯಸುತ್ತೇವೆ”. ವಿಸ್ಮಯದಿಂದ ಉಬ್ಬೇರಿಸುತ್ತ, ಇವರ ಸಾಮಾನ್ಯ ಉಡುಗೆತೊಡುಗೆಯ
ಮೇಲೆ ಕಣ್ಣುಹಾಯಿಸಿ ಅಧ್ಯಕ್ಷ ವ್ಯಂಗ್ಯವಾಗಿ ನುಡಿದ “ಭವನವೆ?! ಇಲ್ಲಿ ಒಂದು ಭವನ ಕಟ್ಟಿಸಲು ಎಷ್ಟು
ವೆಚ್ಚ ಆದೀತು ಅನ್ನುವ ಕಲ್ಪನೆಯಾದರೂ ನಿಮಗಿದೆಯೇನು? ಹಾರ್ವರ್ಡ್ ನಲ್ಲಿ ಇರುವ ಭವನಗಳ ಮೌಲ್ಯ ಏಳೂವರೆ
ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚು!”
ವೃದ್ಧೆ ಕ್ಷಣಕಾಲ
ಸುಮ್ಮನೆ ಕುಳಿತಳು. ಅಧ್ಯಕ್ಷನೂ ‘ಸಧ್ಯ! ಇವರಿಗೆ ಈಗ ಅರ್ಥವಾಗಿರಬೇಕು, ಇನ್ನು ಮತ್ತೆ ನಾಳೆ ಬಂದು
ತೊಂದರೆಕೊಡಲಾರರು” ಎಂದು ಸಮಾಧಾನದ ನಗುವನ್ನು ಬೀರಿದ. ಆ ವೃದ್ಧೆ ತನ್ನ ಪತಿಯತ್ತ ತಿರುಗಿ ಮೆಲುದನಿಯಲ್ಲಿ
ಹೇಳಿದಳು “ಒಂದು ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ಅಷ್ಟೇ ಮೊತ್ತ ಸಾಕೆ ಹಾಗಾದರೆ?! ಹಾಗಾದರೆ
ನಾವು ಸ್ವಂತವಾಗಿ ಒಂದು ವಿಶ್ವವಿದ್ಯಾಲಯವನ್ನೇ ಏಕೆ ಪ್ರಾರಂಭಿಸಬಾರದು?” ವೃದ್ಧ ಆಕೆಯ ಮಾತನ್ನು ಅನುಮೋದಿಸುತ್ತ
ತಲೆಯಾಡಿಸಿದ. ಇವರ ಮಾತುಕತೆಯನ್ನು ಕೇಳಿ ಅಧ್ಯಕ್ಷ ಬೆರಗಾದ! ಆಶ್ಚರ್ಯ, ಗೊಂದಲ ಎಲ್ಲವೂ ಒಟ್ಟೊಟ್ಟಿಗೆ
ಉಂಟಾಯಿತು. ವೃದ್ಧದಂಪತಿಗಳು ಅಲ್ಲಿಂದ ಹೊರಟರು. ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೋ ಎಂಬಲ್ಲಿ ನೂತನ
ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿದರು. ಅದರ ನಾಮಧೇಯ ಸ್ಟ್ಯಾನ್ ಫೊರ್ಡ್ ಯೂನಿವರ್ಸಿಟಿ’. ಆ ವೃದ್ಧದಂಪತಿಗಳು
ಶ್ರೀಮಾನ್ ಹಾಗೂ ಶ್ರೀಮತಿ ಲೇಲಾಂಡ್ ಸ್ಟ್ಯಾನ್ ಫ಼ೋರ್ಡ್. ಹಾರ್ವರ್ಡ್ ಯಾವ ತಮ್ಮ ಮಗನನ್ನು ಮರೆತೇಬಿಟ್ಟಿತ್ತೋ
ಆತನನ್ನು ಅಮರನನ್ನಾಗಿಸಲು ಅವರು ಒಂದು ವಿಶ್ವವಿದ್ಯಾಲಯವನ್ನೇ ನಿರ್ಮಿಸಿದರು! ಆ ವೃದ್ಧ ದಂಪತಿಯನ್ನು
ಹೊರನೋಟಕ್ಕೆ ಅಳಿದು ದುಡುಕಿ ಅಗೌರವಿಸಿದ ಹಾರ್ವರ್ಡ್
ಒಳ್ಳೆ ಸತ್ವಯುತ ದಾನಿಗಳಾಗಬಲ್ಲ, ಆಗರ್ಭ ಶ್ರೀಮಂತರ ವಿಶ್ವಾಸವನ್ನು ಕಳೆದುಕೊಂಡಿತು.
ಜನರನ್ನು ಅವರ ಉಡುಗೆ
ತೊಡುಗೆ ಹೊರನೋಟಗಳಿಂದ ಅಳಿಯುವುದು ಹಲವು ಬಾರಿ ನಮ್ಮನ್ನು ತಪ್ಪುತಿಳೂವಳಿಕೆಗೆ ಗುರಿಯಾಗಿಸುತ್ತದೆ.
ಯಾರ ಸತ್ವಸಾಮರ್ಥ್ಯಗಳು ಏನು? ಯಾರಿಂದ ಯಾವ ಕಾರ್ಯಕ್ಕೆ ಆದೀತು? ಎನ್ನುವುದು ಮೇಲ್ನೋಟಕ್ಕೇ ತಿಳಿಯುವುದಿಲ್ಲ.
ಒಂದಷ್ಟು ಒಡನಾಟ ಮಾಡಿದಾಗ, ಸಹನೆ ಹಾಗೂ ಉದಾರಭಾವಗಳಿಂದ ಗಮನಿಸಿದಾಗ ಕ್ರಮಕ್ರಮವಾಗಿ ತಿಳಿಯುತ್ತದೆ.
ನಾವು ಅಸಹನೆಯಿಂದ, ದೂರದೃಷ್ಟಿ ಇಲ್ಲದೆ ವ್ಯಕ್ತಿಗಳನ್ನು ಮೇಲ್ನೋಟದಿಂದ ಅಳೆದಾಗ ಸ್ನೇಹಿತರನ್ನೋ,
ವ್ಯಾಪಾರಮಿತ್ರರನ್ನೋ, ಉದಾರ ದಾನಿಗಳನ್ನೋ, ಅವಿಚಲ ಸಹಕಾರವೀಯಬಲ್ಲವರನ್ನೋ ಕಳೆದುಕೊಳ್ಳುವುದುಂಟು.
ಅಹಂಕಾರ, ಬಿಂಕಬಿನ್ನಾಣಗಳು, ನಾಗರೀಕತೆಯ ‘ಪ್ರಿಜ್ಯುಡೀಸ್’ ಮುಂತಾದವು ನಮ್ಮನ್ನು ಕುರುಡಾಗಿಸಿ ದೊಡ್ಡ
ನಷ್ಟಕ್ಕೆ ಗುರಿಪಡಿಸುತ್ತವೆ. ಅಪರೂಪಕ್ಕೆ ಅತ್ಯುತ್ತಮ ಪ್ರತಿಭೆ, ಸತ್ವ ಸಾಮರ್ಥ್ಯಗಳುಳ್ಳ ಜನರ ಪರಿಚಯ,
ಒಡನಾಟ ನಮಗೆ ಸಿಕ್ಕೀತು. ಆದರೆ ‘ಅಹಂ’ ‘ಅಸಹನೆ’ ಎನ್ನುವ ದೋಷಗಳು ಅವನ್ನೆಲ್ಲ ಶಾಶ್ವತವಾಗಿ ಕಳೆದುಕೊಳ್ಳುವಂತೆ
ಮಾಡಿಬಿಡುತ್ತವೆ.
ಡಾ ಆರತಿ ವಿ ಬಿ
Published in Vijayavani, 2014
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ