ದೇವಸ್ಥಾನ ಸಂಸ್ಕೃತಿ
ಮನುಷ್ಯ ಸದಾ ನೆಮ್ಮದಿ ಹಾಗೂ ಸಂತೋಷಗಳನ್ನು ಅರಸುತ್ತಾನೆ. ಅದನ್ನು ತನ್ನೊಳಗೇ ಕಂಡುಕೊಂಡು ಇತರರಿಗೂ
ಹಂಚಬಲ್ಲವನು ಯೋಗಿಯೇ ಸರಿ. ಆದರೆ ಹೊರಗಡೆಯ ಪರಿಸರ ಹಾಗೂ ಪ್ರಭಾವಗಳಿಗೆ ವಶವಾಗುವಂತಹ ಸಾಮಾನ್ಯರು
ನೆಮ್ಮದಿ ಹಾಗು ಸಂತೋಷವನ್ನು ಹೊರಗಡೆಯೇ ಒಂದಲ್ಲ ಒಂದು ರೀತಿಯಲ್ಲಿ ಕಲ್ಪಿಸಿಕೊಳ್ಳುವುದು ಅನಿವಾರ್ಯ.
ಇಂದ್ರಿಯ ಜಗತ್ತಿನಲ್ಲೇ ವ್ಯವಹರಿಸುವ ಸಾಮಾನ್ಯರು ನೆಮ್ಮದಿ ಸಂತೋಷ,
ಸಂಸ್ಕೃತಿಯ ಪ್ರೀತಿ, ಧಾರ್ಮಿಕ ಪ್ರಜ್ಞೆ ಮುಂತಾದವನ್ನು ಉಳಿಸಿ-ಬೆಳೆಸಿಕೊಳ್ಳಲು ಉತ್ತಮ ವೇದಿಕೆ ದೇವಸ್ಥಾನ.
ಸಾಂಸಾರಿಕ ಸುಖದುಃಖಗಳನ್ನೂ, ರೋಗರುಜಿನಗಳನ್ನು, ಅತ್ಯಾಸೆ-ನಿರಾಶೆಗಳನ್ನು, ಭೋಗಚಾಪಲ್ಯವನ್ನು ತಾತ್ಕಾಲಿಕವಾಗಿಯಾದರೂ
ಮರೆತು, ವ್ಯಾವಹಾರಿಕ ‘ಮುಖವಾಡ’ಗಳನ್ನು ಕಳಚಿಟ್ಟು, ಮನಸ್ಸನ್ನು ಹಗುರಗೊಳಿಸಿಕೊಳ್ಳಲು ದೇವಸ್ಥಾನಗಳು
ಬಹು ಸಹಾಯಕ. ಕೊನೆ ಮೊದಲಿಲ್ಲದ ಕರ್ಮಜಾಲದಲ್ಲಿ ಸಿಲುಕಿ ಪರದಾಡುವ ಮನುಷ್ಯನಿಗೆ ಆಗಾಗ ಅಂತರಂಗವನ್ನು
ವಿರಮಿಸಿಕೊಳ್ಳಲು ದೇಗುಲವೇ ಸರಿಯಾದ ತಾಣ. ದುರ್ಬುದ್ಧಿಯನ್ನು ತಿದ್ದಿಕೊಳ್ಳಲು, ಪಾಪಕ್ಕಾಗಿ ಪ್ರಾಯಶ್ಚಿತ್ತ
ಮಾಡಿಕೊಳ್ಳಲು, ಭಾವವನ್ನು ಶುದ್ಧೀಕರಿಸಲು, ವ್ಯಕ್ತಿತ್ವವನ್ನು ಪುನರುಜ್ಜೀವನ ಮಾಡಿಕೊಳ್ಳಲು ದೇಗುಲವೇ
ತಕ್ಕ ಪರಿಸರ. ‘ಗೃಹಸ್ಥರು ಆಗಾಗ ನಿರ್ಜನ ಪ್ರದೇಶಕ್ಕೆ ತೆರಳಿ ಅಂತರ್ಮುಖವಾಗಬೇಕು ಧ್ಯಾನಿಸಬೇಕು’
ಎನ್ನುತ್ತಾರೆ ರಾಮಕೃಷ್ಣ-ಪರಮಹಂಸರು. ಆದರೆ ಅತಿಯಾದ ನಾಗರೀಕತೆಯ ಜನಜಂಗುಳ-ವಾಹನಸಮೂಹ-ಹೊಗೆ-ಗಲಾಟೆ-ವ್ಯಾಪಾರ
ಹಾಗೂ ತಾನೇ ಹೇರಿಕೊಳ್ಳುವ ಒತ್ತಡಗಳ ಮಧ್ಯದಲ್ಲಿ ನರನಿಗೆ ಒಳಗೂ ಹೊರಗೂ ಶಾಂತಿಯ ಅಭಾವ!
ಮನೆಯಲ್ಲೇ ಪೂಜಾಗೃಹವನ್ನು (ಆ ಪದ್ಧತಿಯೂ ಕ್ಷೀಣಿಸುತ್ತಿದೆ!)
ನಿರ್ಮಿಸಿ ದಿನವೂ ಸ್ವಲ್ಪಕಾಲ ಅಂತರ್ಮುಖವಾಗಿ ನೆಮ್ಮದಿ ಕಾಣಬಹುದು. ಅಂತೆಯೇ ಆಗಮೋಕ್ತವಾದ ವೈಶಿಷ್ಟ್ಯಗಳಿಂದ
ಕೂಡಿದ್ದು ಶಿಲ್ಪಶಾಸ್ತ್ರಾನುಸಾರವಾದ ನಿರ್ಮಿತವಾದ ದೇಗುಲಗಳಲ್ಲಿ ಶಾಂತಿ, ಸೌಂದರ್ಯ, ಕಲಾತ್ಮಿಕತೆ,
ಧರ್ಮ, ಸರ್ಜನಶೀಲತೆ, ಸಂಸ್ಕೃತಿ ಎಲ್ಲವೂ ಮೇಳೈಸಿರುತ್ತವೆ. ದೇವಾಲಯಗಳು ಬಹುಮುಖ ಉಪಯೋಗೀ ಸ್ಥಾನಗಳು.
ಧ್ಯಾನ-ಜಪ-ಪಾರಾಯಣ ಮುಂತಾದ ಅನುಷ್ಠಾನಗಳಿಗೆ ದೇವಾಲಯಗಳು ಪ್ರಶಸ್ತ. ಅನಾದಿ ಕಾಲದಿಂದಲೂ ದೇಗುಲಗಳು
ಗೀತ-ನೃತ್ಯ-ನಾಟಕ-ರಂಗೋಲಿ-ದೇವತಾಲಂಕಾರಾದಿ ಕಲಾಪಗಳಿಗೆ ವೇದಿಕೆಯಾಗಿವೆ. ಸಜ್ಜನರು ತನು-ಮನ-ಧನಗಳಿಂದ
ಮಾಡುವ ಸೇವೆ-ಕೈಂಕರ್ಯಗಳಿಗೂ ಇದು ಯೋಗ್ಯ ಮಾಧ್ಯಮ. ಏನಿಲ್ಲವೆಂದರೂ ಸುಮ್ಮನೆ ಒಂದೆಡೆ ಕುಳಿತು ಶಾಂತಿ-ನೆಮ್ಮದಿ-ವಿಶ್ರಾಂತಿಗಳನ್ನು
ಪಡೆದುಕೊಳ್ಳಲು ಸರ್ವರಿಗೂ ದೇಗುಲಗಳು ಅತ್ಯುತ್ತಮ ಆಶ್ರಯಗಳು. ಇನ್ನು, ಊರ ಜನರೆಲ್ಲ ಒಂದೆಡೆ ಕೂಡಿ
ಜಾತ್ರೆ, ತೇರು, ಉತ್ಸವ, ಹಬ್ಬ, ಅನ್ನಸಂತರ್ಪಣೆ ಮುಂತಾದ ಸಾರ್ವಜನಿಕ ಸಮಾರಂಭಗಳನ್ನು ನಡೆಸಲು ದೇಗುಲಗಳೇ
ಸೂಕ್ತ ಕೇಂದ್ರಗಳು. ಭಿಕ್ಷುಕರಿಗೆ, ಆಶ್ರಯಹೀನರಿಗೆ, ಅಲೆಮಾರಿಗಳಿಗೆ, ಅನಾಥರಿಗೆ ಹಾಗೂ ಅಸಹಾಯಕರಿಗೆ
ಅನ್ನ-ವಸತಿಗಳನ್ನು ಕಲ್ಪಿಸುತ್ತಿದ್ದ ಧರ್ಮಕೇಂದ್ರಗಳು ದೇವಾಲಯಗಳು. ಹೋಟೆಲ್-ಲಾಡ್ಜ್ ಗಳ ವ್ಯವಸ್ಥೆಗಳು
ಬರುವ ಮುನ್ನ ಶತಮಾನಗಳ ಕಾಲ ಯಾತ್ರಾರ್ಥಿಗಳಿಗೆ ದೇಗುಲಗಳೇ ಅನ್ನ-ವಸತಿಗಳನ್ನು ನೀಡುತ್ತಿದ್ದವು.
ಮದುವೆ ಮುಂತಾದ ಶುಭಕಾರ್ಯಗಳ ನಿಶ್ಚಯ ಹಾಗೂ ಸಮಾರಂಭಗಳು ಮುಂತಾದ
ಬಗೆಬಗೆಯ ಕಾರ್ಯಗಳಿಗೆ ದೇವಾಲಯಗಳೇ ಕೇಂದ್ರವಾಗಿದ್ದವು, ಈಗಲೂ ಆಗಿವೆ ಕೂಡ. ಹಿಂದಿನ ಕಾಲದಿಂದಲೂ
(ಈಗಲೂ ಬಹುಮಟ್ಟಿಗೆ) ಪಂಚಾಯತಿ ಕಟ್ಟೆ, ವಿಚಾರಣೆ, ಒಪ್ಪಂದ, ವಾಗ್ದಾನ ಮುಂತಾದುವನ್ನು ನಡೆಸುವ ಸಂಪ್ರದಾಯ
ಗ್ರಾಮಗಳಲ್ಲಿ ಕಾಣಬರುತ್ತದೆ. ದೈವಸನ್ನಿಧಿಯ್ಲಲ್ಲಿ ಸುಳ್ಳು, ಕಪಟ, ಮೋಸಗಳನ್ನು ಮಾಡಲು ಮಾನವನ ಮನಸ್ಸು
ಅಂಜುತ್ತದೆ ಎನ್ನುವ ಭಾವ ಈ ಪದ್ಧತಿಯನ್ನು ಪೋಷಿಸಿರಬೇಕು. ಜೊತೆಗೆ ಪುರಾಣ, ಇತಿಹಾಸ, ವೇದಾಗಮ, ಜಾನಪದಾದಿ
ಎಲ್ಲ ಮೂಲಗಳ ಕಥೆಗಳು, ಸಿದ್ಧಾಂತಗಳು, ಸಂದೇಶಗಳೂ ದೇವಸ್ಥಾನಗಳ ಶಿಲ್ಪಕಲೆ ಹಾಗೂ ಸಾಂಪ್ರದಾಯಿಕ ಆಚರಣೆಗಳ
ಮೂಲಕ ತಲತಲಾಂತರಗಳಿಂದ ದಾಖಲೆಯಾಗಿ ನಿಂತಿವೆ. ಹರಿಕಥೆ, ಭಾಗವತಿಕೆ, ಅದೆಷ್ಟೋ ಸಂಪ್ರದಾಯ ಗೀತಪ್ರಕಾರಗಳು,
ನೃತ್ಯಪ್ರಕಾರಗಳು, ಕಲಾಪ್ರಕಾರಗಳು, ರಂಗೋಲಿ ವಿನ್ಯಾಸಗಳು, ಸಾಂಪ್ರದಾಯಿಕ ಉಡುಗೆಗಳು, ಅಮೂಲ್ಯ ಸಲಕರಣೆಗಳು,
ಚಿನ್ನ-ಬೆಳ್ಳಿ-ವಜ್ರ-ವೈಡೂರ್ಯ-ಮಾಣಿಕ್ಯಾದಿ ಅಪರೂಪದ ನಿಧಿಗಳು, ಒಡವೆಗಳು, ಧ್ವಜ-ಪತಾಕ-ಲಾಂಛನಗಳು
ಉಳಿದಿರುವುದು ದೇಗುಲಗಳ ಆಶ್ರಯದಿಂದಲೇ. ಇತ್ತೀಚಿನ ವರ್ಷಗಳಲ್ಲಿ ತಿರುವನಂತಪುರದ ಅನಂತಪದ್ಮನಾಭನ ಸನ್ನಿಧಿಯಲ್ಲಿ
ಬೆಳಕಿಗೆ ಬಂದ ಅಮೂಲ್ಯ ಭಂಡಾರವೇ ಸಾಕ್ಷಿ! ಇನ್ನು ಪುರೋಹಿತ, ಮಾಲಾಕಾರರು, ಶಿಲ್ಪಿಗಳು, ಗಾಯಕ-ನಟ-ನರ್ತಕರೂ,
ಅಡುಗೆಯವರು, ಬಡಗಿಗಳು, ಅಕ್ಕಸಾಲಿಗರು, ಪಲ್ಲಕ್ಕಿ-ರಥ-ಪ್ರಾಂಗಣಗಳನ್ನು ಅಲಂಕರಿಸುವವರೂ, ವಿದ್ವಾಂಸರು,
ಧರ್ಮದರ್ಶಿಗಳು, ಸೇವಕರು, ಸಾಧು-ಸಂನ್ಯಾಸಿ-ದಾಸಯ್ಯರುಗಳು ಹಾಗೂ ಇತರ ಅನೇಕ ಬಗೆಯ ಉಪಜೀವಿಗಳು ತಮ್ಮ
ಬದುಕು, ವೃತ್ತಿ ಹಾಗೂ ಕೌಶಲಗಳನ್ನು ವರ್ಧಿಸಿಕೊಳ್ಳಲು ಅಥವಾ ಜೀವಿಸಲು ದೇವಸ್ಥಾನಗಳೇ ಶತಮಾನಗಳಿಂದ
ಆಧಾರವನ್ನೊದಗಿಸಿವೆ. ರಾಮಕೃಷ್ಣಪರಮಹಂಸ, ಆಂಡಾಳ್, ಕನಕದಾಸ, ಮೀರಾ ಮುಂತಾದ ನೂರಾರು ಸಂತ ನರನಾರಿಯರು
ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ದೇವಾಲಯಗಳು ಪರಿಸರವನ್ನೊದಗಿಸಿದವು. ಬೃಹದ್ದೇಗುಲಗಳಲ್ಲಿ ಅಮೂಲ್ಯವಾದ
ಚಿನ್ನ, ಮುತ್ತು, ರತ್ನ, ಮಾಣಿಕ್ಯಾದಿಗಳನ್ನು ಹೂತಿಟ್ಟು ವಿಪತ್ತಿನ ಸಮಯದಲ್ಲಿ ಅದನ್ನು ಸಾರ್ವಜನಿಕ
ಉಪಯೋಗಕ್ಕಾಗಿ ವಿನಿಯೋಗಿಸುವ ಪದ್ಧತಿಯಿತ್ತು. ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರೂ ಅಮೂಲ್ಯವಾದ
ಸಾರ್ವಜನಿಕ ಸಂಪತ್ತನ್ನು ಕಾಪಿಡುತ್ತಿದ್ದ ಕೋಣೆಯನ್ನು ಇಂದಿಗೂ ಶಿವಗಂಗೆಯ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ
ಕಾಣಬಹುದಾಗಿದೆ.
ಆದರೆ ದೇವಸ್ಥಾನದಲ್ಲಿ ಸುಳ್ಳು ಮೋಸ, ತಿರಸ್ಕಾರ, ಹರಟೆ, ಕಿರುಚಾಟ,
ಕಸ ಎಸೆಯುವಿಕೆ, ಎಂಜಲು ಮಾಡುವುದು, ನೂಕಾಟ, ಕಳ್ಳತನ, ಜಗಳ ಮೂಂತಾದವುಗಳಲ್ಲಿ ತೊಡಗುವ ನಾಚಿಕೆ ಗೇಡಿತನವೂ
ಕಳೆಯಂತೆ ಬೆಳೆದುಬಂದಿರುವುದು ದುಃಖಕರ. ದೇವಸ್ಥಾನಕ್ಕೆ ಕಾಲಿಟ್ಟ ತಕ್ಷಣವೇ ಮೌನ, ಶಾಂತಿಗಳನ್ನು ಪಾಲಿಸುವುದು
ಅಥವಾ ಕೇವಲ ದೇವರ ಮಂತ್ರ ಶ್ಲೋಕ ಹಾಡುಗಳನ್ನಷ್ಟೇ ನುಡಿಯುವ ಅಥವಾ ಮೆಲುದನಿಯ ಮಿತಭಾಷಣವನ್ನು ಪಾಲಿಸುವುದನ್ನು
ನಾವು ಮತ್ತೆ ಕಲಿಯಬೇಕಾಗಿದೆ.
ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ದೇವಾಲಯ ಸಂಸ್ಕೃತಿಯನ್ನು ನಾವು
ಉಳಿಸಿಬೆಳೆಸಿದಲ್ಲಿ ಅದು ನಮ್ಮ ಜೀವನವನ್ನು ಬೆಳಗುತ್ತದೆ, ಬೆಳೆಸುತ್ತದೆ. ಶತಮಾನಗಳ ಧರ್ಮ-ಸಂಸ್ಕೃತಿ-ಕಲೆಗಳ
ಆಧಾರಸ್ಥಂಬಗಳಾದ ದೇವಸ್ಥಾನಗಳನ್ನು ಸುಂದರವೂ ಶಾಂತವೂ ಶುದ್ಧವೂ ಸಾತ್ವಿಕವೂ ಆಗಿ ಉಳಿಸಿಕೊಳ್ಳುವುದೂ
ನಮ್ಮೆಲ್ಲರ ಆದ್ಯ ಕರ್ತವ್ಯ ಎನ್ನುವುದನ್ನು ಮರೆಯಬಾರದು.
Published in Samyukta Karnataka 2014
Published in Samyukta Karnataka 2014
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ