ಜ್ವಲಂತ ನಾರೀ ಪರಂಪರೆ
‘ಜಗತ್ತಿನ ಪ್ರಪ್ರಥಮ ರಾಣಿಯ ಉಲ್ಲೇಖ ಎಲ್ಲಿ ಸಿಕ್ಕೀತು ? ಜಗತ್ತಿನ ಪ್ರಪ್ರಥಮ ಋಷಿಕೆ-ಯೋಗಿನಿ-ವಿದುಷಿ-ಕವಯತ್ರಿ-ಗೂಢಚಾರಿಣೀ-ಯೋಧೆ-ನಟಿ-ನರ್ತಕಿಯರ ಉಲ್ಲೇಖಗಳು ಎಲ್ಲಿ ಸಿಕ್ಕಿಯಾವು?’ ಎಂದು ಹುಡುಕಿಕೊಂಡು ಹೊರಟರೆ, ನಾವು ತಲುಪುವುದು ಯೂರೋಪ್-ಅಮೇರಿಕಾಗಳನ್ನಲ್ಲ. ನಮ್ಮದೇ ಭಾರತದ ವೇದಕಾಲೀನ ಪ್ರಾಚೀನತಮ ಇತಿಹಾಸವನ್ನು! ಗಾರ್ಗೀ-ಮೈತ್ರೇಯಿ-ಸುಲಭಾ-ವಾಗಂಭ್ರಿಣೀ-ಶಾಶ್ವತೀ-ರೋಮಶಾ ಮುಂತಾದ ಮೂವತ್ತಕ್ಕಿಂತ ಹೆಚ್ಚು ಋಷಿಕೆಯರು, ಸೀತಾ-ಅನಸೂಯಾ-ಅದಿತೀ-ದ್ರೌಪದೀಯಂತಹ ನೂರಾರು ಮಹಾಸಾಧ್ವಿಯರು, ಸಂಗೀತ-ನೃತ್ಯ-ನಾಟಕ-ಕಾವ್ಯ-ಶಿಲ್ಪಗಳ ಕಲಾಲೋಕವನ್ನು ಶ್ರೀಮಂತಗೊಳಿಸಿದ ಅಸಂಖ್ಯ ಕಲಾಸರಸ್ವತಿಯರು, ರಾಣಿ-ಋಷಿಕೆ-ಯೋಗಿನಿ-ವಿದುಷಿ-ಕವಯತ್ರಿ-ಗೂಢಚಾರಿಣೀ-ಯೋಧೆ-ನಟಿ-ನರ್ತಕಿ-ಮಂತ್ರಿ-ಉದ್ಯಮಶಾಲಿನಿಯರ, ದೊಡ್ದ ಪಟ್ಟಿಯನ್ನೇ ಬಿಚ್ಚಿಡುತ್ತ
ಹೋಗುತ್ತದೆ ನಮ್ಮ ಇತಿಹಾಸ. ಇದರ ಬಗ್ಗೆ ನಮ್ಮ ಇಂದಿನ ಪಠ್ಯಗಳಲ್ಲಿ ಉಲ್ಲೇಖವೇ ಕಾಣಬರದಿರುವುದು ದುರಂತ.
ಆದರೇನು? ಇವರುಗಳು ನಮ್ಮ ಹೆಣ್ಣುಮಕ್ಕಳ ಹೆಸರುಗಳಲ್ಲಿ ‘ಅಮರ’ರಾಗಿ ಉಳಿದುಬಿಟ್ಟಿದ್ದಾರೆ! ಆ ಹೆಸರುಗಳ
ಜಾಡನ್ನು ಹಿಡಿದು ಸಾಗಿದರೆ ಸಾಕು, ಅವರುಗಳ ಜ್ವಲಂತ ಜೀವನಸಾಧನೆಗಳ ವೃತ್ತಾಂತಗಳೂ ನಮ್ಮ ಮುಂದೆ ತೆರೆದುಕೊಳ್ಳುತ್ತವೆ!
‘ಅವರೆಲ್ಲ ಕೇವಲ ಗತಕಾಲದ ನೆನಪುಗಳು’ ಎಂದು ಸುಮ್ಮನಾಗುವಿರೋ? ಸಾಧ್ಯವೇ ಇಲ್ಲ! ವೇದಕಾಲದ ಋಷಿಕೆಯಾದ ವಾಗಂಭ್ರಿಣಿಯ
ದೇವೀಸೂಕ್ತವು ಇಂದಿಗೂ ಎಲ್ಲೆಲ್ಲೂ ಕೇಳಿಬರುತ್ತದೆ! ಸೀತಾ-ಸಾವಿತ್ರೀ-ದ್ರೌಪದಿಯರ ಛಲ-ಬಲ-ಸತ್ವಾದಿಗಳು
ಇಂದಿಗೂ ನಮ್ಮ ಭವನಾಪ್ರಪಂಚವನ್ನು ಪ್ರಭಾವಶಾಲಿಯಾಗಿ ಆಳುತ್ತವೆ. ‘ಯಜ್ಞದಲ್ಲಿ ಸಹಚಾರಿಣೀ’ ಎಂಬ ಅರ್ಥದ
‘ಪತ್ನೀ’ ಶಬ್ದವೇ ಇವತ್ತಿಗೂ ಬಳಕೆಯಲ್ಲಿದ್ದು, ಕುಟುಂಬದಲ್ಲಿನ ನಾರಿಯ ಸ್ಥಾನವನ್ನು ಸುದೃಢಪಡಿಸುತ್ತದೆ.
ಇಂದಿಗೂ ಯಾವುದೇ ಧಾರ್ಮಿಕ ಕರ್ಮಗಳಲ್ಲಿ, ಹೆಂಡತಿಯು ಪಕ್ಕದಲ್ಲಿ ನಿಂತು ಅಂಗೀಕಾರ-ಸೂಚಕವಾಗಿ ಕೈಗೆ
ನೀರು ಹಾಕಬೇಕು. ಆಗ ಮಾತ್ರ ಆ ಕರ್ಮವು ‘ಧರ್ಮ’ವೆನಿಸುತ್ತದೆ! ಹೋಮ-ಹವನಗಳನ್ನು ಮಾಡುವಾಗ, ಹೋಮಕುಂಡಕ್ಕೆ
ಮೊದಲು ಅಗ್ನಿಸ್ಪರ್ಶವನ್ನು ಮಾಡಿಸುವವರು ಸುಮಂಗಲಿಯರು, ಆ ಬಳಿಕವೆ ವಿಧಿಗಳು ಮುಂದುವರೆಯುವುದು. ಧಾರ್ಮಿಕ
ಕ್ರಿಯೆಗಳಲ್ಲಿ ‘ಸಂಕಲ್ಪ’ ಮತ್ತು ‘ಮಂಗಳ’ ಮಾಡುವಾಗಲೂ ಪಕ್ಕದಲ್ಲಿ ಪತ್ನಿಯಿರುವುದು ಕಡ್ಡಾಯ. ಮದುವೆ,
ಮುಂಜಿ, ಹಬ್ಬಹರಿದಿನಗಳ ಆಚಾರಗಳಲ್ಲಂತೂ ಅಂದಿಗೂ ಇಂದಿಗೂ ಮನೆಯ ಮಾನಿನಿಯರದೇ ಕಾರುಬಾರು! ಮಡದಿಯು
ಕೈಹಿಡಿದು ಬರುವ ತನಕವೂ ಮನುಷ್ಯನು ಅಪೂರ್ಣನೇ ಎನಿಸುತ್ತಾನೆ. ಬ್ರಹ್ಮಚಾರಿಗೆ “ನೀನು ಪೂರ್ಣವಾಗುವುದು
ಯಾವಾಗ?(ಮದುವೆಯಾಗುವುದು ಯಾವಾಗ?)” ಎಂದೇ ಕೇಳುವ ಪರಿಪಾಟೇ ಇದೆ! ಗೃಹಪ್ರವೇಶವಿಧಿಯು ಸಂಪನ್ನವಾಗುವುದು
ಮನೆಯೊಡತಿಯು ಧಾನ್ಯ ತುಂಬಿದ ಸೇರನ್ನು ಮನೆಯೊಳಗೆ ಉರುಳಿಸಿ ಪದಾರ್ಪಣೆ ಮಾಡಿದಾಗಲೆ! ಹೀಗೆ ಸಹಸ್ರಮಾನಗಳಿಂದಲೂ
ಹಲವಾರು ಧಾರ್ಮಿಕ ಸಾಮಾಜಿಕ ಹಕ್ಕುಗಳನ್ನು ಹಿಂದು ನಾರೀಮಣಿಯರು ಅವಿಚ್ಛಿನ್ನವಾಗಿ ತಳೆದುಬಂದಿದ್ದಾರೆ.
ಒಟ್ಟಿನಲ್ಲಿ ಮನೆಯ ಮಹಾಲಕ್ಷ್ಮಿಯನ್ನು ನಿರ್ಲಕ್ಷಿಸಿ ಯಾವುದೇ ಧರ್ಮಕರ್ಮಗಳನ್ನು ನಿರ್ವಹಿಸುವುದು
ಹಿಂದುಧರ್ಮದ ಪರಿಯೇ ಅಲ್ಲ.
ಪುರೋಹಿತರು, ಸಂಗೀತಗಾರರು, ಗೋವಳರು,
ನಟರು, ವರ್ತಕರು, ವ್ಯಾಪಾರಿಗಳು, ಶಿಲ್ಪಿಗಳು, ಕೃಷಿಕರು, ದೊಂಬರಾಟದವರು--- ಹೀಗೆ ಎಲ್ಲ ಜನಾಂಗದವರೂ
ತಮ್ಮ ವೃತ್ತಿಗಳಲ್ಲಿ ತಮ್ಮ ಸ್ತ್ರೀಯರನ್ನು ವಿಪುಲವಾಗಿ ತೊಡಗಿಸಿಕೊಂಡಿರುವುದು ಅತಿಪ್ರಾಚೀನಕಾಲದಿಂದಲೂ
ಕಾಣಬಂದಿದೆ. ಹೀಗಿರುವಾಗ ಹಿಂದು ಸ್ತ್ರೀಯು ಸಮಾಜದಲ್ಲಿನ ಎಲ್ಲ ವ್ಯವಹಾರಗಳಲ್ಲಿ ಸಕ್ರಿಯಳಾಗಿ ಕುಶಲಳಾಗಿ
ತೊಡಗಿಕೊಂದಿದ್ದಳೆಂಬುದರಲ್ಲಿ ಸಂದೇಹವೇ ಇಲ್ಲ.
ರಾಣಿಯರೂ, ರಾಜಮನೆತನದ ಮಹಿಳೆಯರೂ ದಾನಧರ್ಮಾದಿ
ಕರ್ಮಗಳಲ್ಲೂ, ಕವಿ-ಕಲಾವಿದರ ಪೋಷಣೆಯಲ್ಲೂ, ದೇವಾಲಯ-ಭವನಾದಿಗಳ ನಿರ್ಮಾಣಕಾರ್ಯಗಳಲ್ಲೂ ರಾಜನೈತಿಕ
ಮಂತ್ರಾಲೋಚನೆಗಳಲ್ಲೂ, ಗೂಢಚರ್ಯೆಯಲ್ಲೂ, ಪುರುಷರೊಂದಿಗೆ ಹೆಗಲಿಗೆ ಹೆಗಲುಗೊಟ್ಟು ಕೆಲಸ ಮಾಡಿದರೆನ್ನುವುದೂ
ಇತಿಹಾಸವಿದಿತ. ಯುದ್ಧಾದಿಗಳ ನಿಮಿತ್ತ ರಾಜನು ಅನುಪಸ್ಥಿತನಾಗಿದ್ದಲ್ಲಿ, ಸರ್ವಾಧಿಕಾರವನ್ನೂ ನಿರ್ವಹಿಸುವಷ್ಟು
ಪರಿಣತಿ, ಅನುಭವ, ತರಬೇತಿ ಹಾಗೂ ಮಾನ್ಯತೆಯನ್ನು ಪಟ್ಟದರಸಿಯರು ಪಡೆದಿರುತ್ತಿದ್ದರು, ಎಂದ ಮೇಲೆ,
ಮಹಿಳೆಯ ಸ್ಥಾನಕ್ಕೆ ಇದ್ದ ಮಾನ್ಯತೆ ಸ್ವಯಂಸ್ಪಷ್ಟವಾಗುತ್ತದೆ. ದಾಮೋದರನೆಂಬ ರಾಜನು ಯುದ್ಧದಲ್ಲಿ
ತನ್ನಿಂದ ಪರಾಜಿತನಾಗಿ ಸತ್ತಾಗ, ಶ್ರೀಕೃಷ್ಣನು ಅವನ ಪತ್ನಿಯನ್ನೇ ಪಟ್ಟದಲ್ಲಿ ಕೂರಿಸಿ ಅಭಿಷೇಕಗೈದನೆಂಬ
ವೃತ್ತಾಂತ ಕಲ್ಹಣನ ರಾಜತರಂಗಿಣಿಯಲ್ಲಿ ಉಲ್ಲೇಖಗೊಂಡಿದೆ. ಇದು ನಮ್ಮ ಪರಂಪರೆಯಲ್ಲಿ ಹೆಣ್ಣಿಗಿತ್ತಿರುವ
ಮಾನ್ಯತೆ. ಇನ್ನು ಅರಮನೆಯ ರಾಣೀಯರಿಂದ ಹಿಡಿದು ದಾಸಿಯರ ವರೆಗೆ ಎಲ್ಲ ಸ್ತ್ರೀಯರೂ ರಾಜನೀತಿ, ಗೂಢಚರ್ಯೆ,
ಗೀತ-ನೃತ್ಯ-ಕಾವ್ಯಗಳೂ ಹಾಗೂ ಆಡಳಿತಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಪರಿಣತರಾಗಿರುತ್ತಿದ್ದುದು
ಇತ್ತೀಚಿನ ಇತಿಹಾಸದವರೆಗೂ ಕಾಣಬರುತ್ತದೆ. ಕುದುರೆಯೇರಿ ಕತ್ತಿಹಿಡಿದು ಘೋರಯುದ್ಧದಲ್ಲಿ ಸೆಣೆಸಾಡಿದ,
ಸೋಲನ್ನೊಪ್ಪದ ಚೆನ್ನಮ್ಮ ಮಲ್ಲಮ್ಮ ಲಕ್ಷ್ಮೀಬಾಯಿ ದುರ್ಗಾವತಿಯರೇ ಮುಂತಾದ ಧೀರಯೋಧೆಯರ ರೋಮಾಂಚಕಕಥೆಗಳು
ಮತ್ತಾವ ಸಮಾಜದಲ್ಲೂ ಈ ಪರಿ ಕಾಣಸಿಗದು
ಮನೆತನದ ಅಂತಸ್ತು ಶ್ರೀಮಂತಿಕೆ ಹಾಗೂ
ಘನತೆಗಳಿಗೆ ಅಳತೆಗೋಲು ಆ ಮನೆತನದ ಸ್ತ್ರೀಯರ ಜೀವನಶೈಲಿ, ವಸ್ತ್ರಾಭರಣಗಳು ವಾಹನೋಪಭೋಗಗಳು ! ಇಂದಿಗೂ
ಇದೇ ಸತ್ಯ ಎನ್ನಿ! ಇನ್ನು ವ್ಯಾಪಾರ-ವಾಣಿಜ್ಯ ನಿಮಿತ್ತವಾಗಿ ದೀರ್ಘಯಾತ್ರೆಗಳನ್ನೂ ವಿದೇಶೀ ಪ್ರವಾಸವನ್ನು
ಕೈಗೊಳ್ಳುವ ವರ್ತಕರು ತಮ್ಮ ಪರಿವಾರಗಳನ್ನೂ ಕೊಂಡೊಯ್ಯುತ್ತಿದ್ದು, ವ್ಯವಹಾರಗಳಲ್ಲು ಸಂವಹನಗಳಲ್ಲು
ಅವರ ಸ್ತ್ರೀಯರು ಸಕ್ರಿಯವಾಗಿ ಸಹಕರಿಸುತ್ತಿದ್ದರು.
ಭೋಗದಲ್ಲಷ್ಟೇ ಅಲ್ಲ, ತ್ಯಾಗಯೋಗಗಳಲ್ಲೂ
ಸ್ತ್ರೀಗೆ ಮುನ್ನಡೆಯ ಮಾರ್ಗವು ಮುಕ್ತವೇ ಆಗಿತ್ತು. ‘ಸಂಸಾರವನ್ನೊಲ್ಲೆ’ ಎಂದು ಮೋಕ್ಷಮಾರ್ಗವನ್ನು
ಹಿಡಿದ ಸಾಧ್ವಿಯರ ಉಲ್ಲೇಖಗಳು ಭಾರತದಾದ್ಯಂತ ಸಿಗುತ್ತವೆ. ಒಂದಷ್ಟು ಸಾಮಾಜಿಕರಿಂದ ಇವರುಗಳಿಗೆ ವಿಘ್ನಗಳಾಗಲಿಲ್ಲವೆಂದಲ್ಲ,
ಆದರೆ ಅಂತಸ್ಸತ್ವವನ್ನು ಮೆರೆದ ಮಾನಿನಿಯರನ್ನು ಅದೇ ಸಮಾಜವೇ ಕಾಲಾಂತರದಲ್ಲಿ ಒಪ್ಪಿ ಮೆಚ್ಚು ಪೂಜಿಸಿದ
ಹೆಗ್ಗಳಿಕೆ ಹಿಂದೂಧರ್ಮದ್ದು.
ಕಾವ್ಯವಾಙ್ಮಯದಲ್ಲಂತೂ ಸ್ತ್ರೀಸೌಂದರ್ಯವನ್ನಷ್ಟೇ ಅಲ್ಲ, ಅವಳ ಚಾರಿತ್ರ್ಯ, ತ್ಯಾಗ,
ಚಾತುರ್ಯ, ಪ್ರತಿಭೆ, ಧೈರ್ಯ, ಪ್ರತ್ಯುತ್ಪನ್ನಮತಿ ಮುಂತಾದ ಹಲವು ಗುಣವಿಶೇಷಗಳನ್ನು ಎತ್ತಿ ತೋರಿಸಲಾಗಿದೆ.
ನಮ್ಮ ನಾರೀಮಣಿಯರನ್ನು ಹೊಗಳುವ ಸಂದರ್ಭಗಳಲ್ಲಿ ನಮ್ಮ ಕವಿಗಳಿಗೆ ಉತ್ಸಾಹ ಸಂಭ್ರಮಗಳಷ್ಟೇ ಅಲ್ಲ, ಸಂಸ್ಕೃತಿಯ
ಸಂವೇದನೆಯೂ ಸಂಬಂಧಗಳ ಸ್ವಾರಸ್ಯಗಳ ಪೂರ್ಣಪ್ರಜ್ಞೆಯೂ ವಿಶೇಷವಾಗಿ ಜಾಗೃತವಾಗುತ್ತದೆ! ಗೀತ-ನೃತ್ಯ-ನಾಟ್ಯಗಳಲ್ಲಂತೂ
ಸ್ತ್ರೀಪಾತ್ರಕ್ಕಿರುವ ಸ್ಥಾನ, ಜನಪ್ರಿಯತೆ, ಆಕರ್ಷಣೆಳು ಅನುಪಮವಾದವು. ಪೂರ್ವರಂಗದ ವಿಧಿಗಳಲ್ಲಿ
ನಾರೀಮಣಿಯರು ದೇವತಾಹ್ವಾನಸೂಚಕವಾದ ಧ್ವಜಲಾಂಛನಗಳನ್ನು ಹೊತ್ತು ವೇದಿಕೆಯ ತುಂಬೆಲ್ಲ ನರ್ತಿಸಿ ಶುಭಾರಂಭಗೈಯುವ
ಪದ್ಧತಿಯೂ ಅತಿಪ್ರಾಚೀನವಾದುದು. ಸೂತ್ರಧಾರನೂ ತನ್ನ ಸ್ತ್ರೀಯೊಂ0ದಿಗೇ ರಂಗವನ್ನು ಪ್ರವೇಶಿಸುವುದು
ಪದ್ಧತಿ. ಒಟ್ಟಿನಲ್ಲಿ ಸ್ತ್ರೀಪಾತ್ರದ ವರ್ಣಮಯ ಅಸಿತ್ವವಿರದ ಸಾಂಪ್ರದಾಯಿಕ ರಂಗಭೂಮಿಯನ್ನು ಊಹಿಸಲೂ
ಸಾಧ್ಯವಿಲ್ಲ !
ಅರುಂಧತಿಯನ್ನು ಮದುವೆಯಾಗುವಾಗ, ವರ್ಣ
ವಿಷಯದಲ್ಲಿ ಸಮಾಜಿಕರು ಕಲಹವೆಬ್ಬಿಸಿದಾಗ ಮಹರ್ಷಿ ವಸಿಷ್ಟರು ಅವಳಂತಹ ಸಾಧ್ವಿಯ ಸಮರ್ಥನೆಗಾಗಿ ಸ್ವಜನರನ್ನೂ
ಸಮಾಜವನ್ನೂ ಎದುರಿಸಲು ನಿಂತರೆಂಬ ಕಥೆಯೂ ಇದೆ. ಆ ಅರುಂಧತಿದೇವಿಯು ‘ಆಚಾರ್ಯಾ’ ಆಗಿದ್ದಳೆನ್ನುವ ಮಾತೂ
ಇದೆ. ಸ್ವತಂತ್ರವಾಗಿ ಗುರುಕುಲವನ್ನು ನಡೆಸುವ ವಿದ್ಯಾವತಿಯನ್ನು ‘ಆಚಾರ್ಯಾ’ ಎನ್ನಲಾಗುತ್ತಿತ್ತು.
ಗುರುಕುಲಗಳಲ್ಲಿನ ಆಚಾರ್ಯರ ಜೊತೆಯಲ್ಲೇ ಅವರ ಪತ್ನಿಯರು ‘ಆಚಾರ್ಯಾಣಿಯರಾಗಿದ್ದುಕೊಂಡು ಅಂತೇವಾಸಿಗಳ
ಪಾಲಿನ ಮಾತೃಮೂರ್ತಿಯರ ಉದಾಹರಣೆಗಳು ಅಸಂಖ್ಯ. ವಿದ್ಯಾರ್ಥಿಗಳ ಯೋಗಕ್ಷೇಮ, ಅತಿಥಿಗಳ ಮೇಲ್ವಿಚಾರಣೆ,
ಗುರುಕುಲದ ಆಯವ್ಯಯ, ಆಡಳಿತ ಮುಂತಾದುವನ್ನು ನಿರ್ವಹಿಸುವಲ್ಲಿ ಸಕ್ರಿಯರಾಗಿದ್ದರು. ಅಷ್ಟಾವಕ್ರಮುನಿಗಳು
ದೇಶಾದ್ಯಂತ ಸಂಚರಿಸಿ ತಮಗನುಗುಣವಾದ ವಿದ್ಯಾವತಿಯೂ ಪ್ರಜ್ಞಾಸಂಪನ್ನಳೂ ಆದ ಸುಜಾತೆ ಎಂಬ ವೇದವಾದಿನಿಯನ್ನು
ಮದುವೆಯಾದರೆಂಬ ಕತೆಯೂ ಪ್ರಚಲಿತವಿದೆ.
ದೇವತಾಸ್ತುತಿಗಳಲ್ಲಿ, ಅವರ ಶಕ್ತಿಯರನ್ನೂ
ಉಲ್ಲೇಖಿಸದಿರುವುದು ಅಪರೂಪವೇ. ಋತುವರ್ಣನೆಗಳಲ್ಲಂತೂ ಸ್ತ್ರೀಯು, ಸ್ತ್ರೀತ್ವವು, ಅವರ ವಿಲಾಸಗಳೂ
ಸಂವೇದನೆಗಳು ಕಲ್ಪನಾಲೋಕದ ಶಿಖರಗಳನ್ನೇ ಮುಟ್ಟುತ್ತವೆ. ಭೋಗಕ್ಕೂ ಯೋಗಕ್ಕೂ ನಾರಿಯೇ ಸಾಧಕಳು’ ಎನ್ನುವ
ವಿಶ್ವಾಸವೂ ಎಂದಿನಂತೆ ಇಂದಿಗೂ ಜನಜನಿತ. ‘ಮಾನಿನಿಯ ಮೋಹವನ್ನು ಗೆಲ್ಲುವುದು ಎಷ್ಟು ಕಷ್ಟ’ ಎಂದು
ವೇದಾಂತಿಗಳು ಚಿಂತಕರೂ ಹಾಸ್ಯಗಾರರೂ ವಿವರಿಸುವಾಗಲೂ, ವ್ಯಕ್ತಿಯ ಜೀವನ-ಭಾವನೆಗಳಲ್ಲಿ ಸ್ತ್ರೀಯು ಅದೆಷ್ಟು
ಪ್ರಭಾವಶಾಳಿನೀ ಎನ್ನುವುದನ್ನಂತೂ ಅಂಗೀಕರಿಸಿಯೇ ಇರುತ್ತಾರಲ್ಲವೆ?! ‘
ಹೀಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ
ಮುಕ್ತವಾಗಿ ತೊಡಗಿದಂತಹ ಹಿಂದು ನಾರಿಯ ವ್ಯಕ್ತಿತ್ವವು ಸರ್ವತೋಮುಖವಾಗಿ ಅರಳಿಬಂದಿರುವ ಶಕ್ತಿ. ಇದಕ್ಕೆಲ್ಲ
ಮೂಲ ಬೀಜವು ವೇದಕಾಲೀನ ತತ್ವ-ಸಿದ್ಧಾಂತಗಳಲ್ಲಿ ಕಾಣಬರುತ್ತದೆ. ಸ್ವತಂತ್ರವೂ ಸ್ವೋಪಜ್ಞವೂ ಪ್ರಗತಿಶೀಳವೂ
ಆಗಿದ್ದ ಪ್ರಾಚೀನ ಹಿಂದು ಸಮಾಜದಲ್ಲಿ ಹೆಣ್ಣನ್ನು ‘ಮನಸ್ವಿನಿ-ಮಾನವತೀ’ ಎಂದು ಗೌರವಿಸುವ ಭಾವ ಸಹಜವಾಗಿತ್ತು.
ಅವಳು ವಂಶದ ಗೌರವ, ಸಮಾಜದ ಶೋಭೆ, ಜೀವನಕ್ಕೆ ಅರ್ಥತುಂಬುವ ಶಕ್ತಿ, ಗೃಹಕ್ಕೆ ಭಾಗ್ಯತರುವ ಲಕ್ಷ್ಮೀ,
ವಂಶೋದ್ಧಾರಕ್ಕೆ ಮಡಿಲಾಗುವ ಮಮತಾಮಯಿ- ಎನ್ನುವ ಭಾವನೆಗಳು ಇಂದು ನೆನ್ನೆಯವಲ್ಲ, ಸಹಸ್ರಮಾನಗಳ ಪರಂಪರೆಯ
ಫಲಗಳು. ಈ ಭಾವವನ್ನೇ ಸೆರೆಹಿಡಿಯುವ ಪ್ರಸ್ದಿದ್ಧಶ್ಲೋಕವಿದು-
ಕಾರ್ಯೇಷು ದಾಸೀ ಕರಣೇಷು ಮಂತ್ರೀ I ಭೋಜ್ಯೇಷು ಮಾತಾ ಅಶಯನೇ ತು ರಂಭಾ
II
ರೂಪೇ ಚ ಲಕ್ಷ್ಮೀ ಕ್ಷಮಯಾ ಧರಿತ್ರೀ I ಷಾಡ್ಗುಣ್ಯ ಭಾರ್ಯಾ ಕುಲಮುದ್ಧರೋತಿ
II
‘ನಾವು ಆತ್ಮಸ್ವರೂಪಿಗಳು’ ಎಂದು ಸಾರುವ ವೇದವೇದಾಂತಗಳಲ್ಲಿ
ಸ್ತ್ರೀ-ಪುರುಷ-ಭೇದವೆಂಬುದು ಪರಮಾರ್ಥದಲ್ಲಿ ಇಲ್ಲವೇ ಇಲ್ಲ. ವ್ಯವಹಾರಾನುಕೂಲಕ್ಕಾಗಿ ಮಾತ್ರವೇ ಶಿಷ್ಟಾಚಾರಗಳ
ಭೇದ. ಅರ್ಧನಾರೀಶ್ವ ತತ್ವ, ಲಕ್ಷ್ಮೀಯನ್ನು ಎದೆಯಲ್ಲಿ ಹೊಂದಿರುವ ನಾರಾಯಣ, ನಾಲಿಗೆಯಲ್ಲೇ ಸರಸ್ವತಿಯನ್ನು
ಹೊಂದಿರುವ ಬ್ರಹ್ಮ- ಶಕ್ತಿಸಮೇತವಾದ ದೇವತಾರೂಪಗಳೆಲ್ಲ ಈ ಸಿದ್ಧಾಂತವನ್ನೇ ವಾಚ್ಯವಾಗಿ ಸಾರುತ್ತಿವೆ.
ಸ್ತ್ರೀಯು ಪರಿವಾರದ ಸಮಾಜದ ಸೌಷ್ಟವಕ್ಕಾಗಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕೆಂದು ನಮ್ಮ ಧರ್ಮಸಂಹಿತೆಗಳು
ಹೇಳುತ್ತವೆ ನಿಜ. ಈ ನಿಟ್ಟಿನಲ್ಲಿ ಅವಳಿಗೆ ಎಚ್ಚರಿಕೆಗಳನ್ನು ಶಿಷ್ಟಾಚಾರಗಳನ್ನೂ ಪುರುಷರಿಗಿಂತ ಹೆಚ್ಚಾಗಿ
ವಿಧಿಸಲಾಗಿವೆ ನಿಜ. ಆದರೆ ’ಯೋಗ್ಯತೆ’ಯ ವಿಷಯಕ್ಕೆ ಬಂದಾಗ, ಅದು ಲಿಂಗ-ವಯಸ್ಸುಗಳಿಗತೀತವಾದ ಅಂತಸ್ಸತ್ವ
ಎನ್ನುವುದನ್ನು ವಿದ್ಯಾಬುದ್ಧಿಚಾರಿತ್ರ್ಯ-ಯಶಸ್ಸುಗಳ ವಿಷಯದಲ್ಲಿ ತಮ್ಮ ಪತಿ-ಪಿತರನ್ನು ಮೀರಿ ಬೆಳೆದ
ಮಹಾಸ್ತ್ರೀಯರ ಉಲ್ಲೇಖಗಳು ಸಾಕಷ್ಟಿವೆ. ಅದ್ವಿತೀಯ ಪಾಂಡಿತ್ಯದ ವಿಕಟನಿತಂಬಾ ಎಂಬ ವಿದುಷಿಯು ಅತಿಸಾಮಾನ್ಯ
ಯೋಗ್ಯತೆಯ ತನ್ನ ಗಂಡನಿಗಿಂತ ಸರ್ವಾರ್ಥಗಳಲ್ಲೂ ಮೀರಿನಿಂತವಳು ಎನ್ನುವುದು ಅರ್ವಾಚೀನ ಇತಿಹಾಸದ ಒಂದು
ಉದಾಹರಣೆ.
ಶ್ರೀ ಲಲಿತಾತ್ರಿಶತಿಯ ಪೀಠಿಕಾಭಾಗದಲ್ಲಿನ
ಒಂದು ಸಣ್ಣ ಪ್ರಸಂಗ ಹೀಗಿದೆ- ಅಗಸ್ತ್ಯರಿಗೆ ಹಯಗ್ರೀವಸ್ವಾಮಿಯು ಲಲಿತಾಸಹಸ್ರನಾಮವನ್ನು ಉಪದೇಶಗೈಯುತ್ತಾರೆ.
‘ಇನ್ನೇನೋ ರಹಸ್ಯವೊಂದು ನಿಮ್ಮಲ್ಲೇ ಉಳಿದಿದೆ. ಅದನ್ನೂ ಉಪದೇಶಿಸಿ’ ಅಂದು ಅಗಸ್ತ್ಯರು ಒತ್ತಾಯಿಸುತ್ತಾರೆ.
ಹಯಗ್ರೀವರು ದೇವಿಯನ್ನು ಅಂತರಂಗದಲ್ಲಿ ಧ್ಯಾನಿಸಿ ಪ್ರಶ್ನಿಸುತ್ತಾರೆ "ಅಮ್ಮ! ಈತನಿಗೆ ಆ ರಹಸ್ಯವನ್ನು
ಗ್ರಹಿಸುವ ಯೋಗ್ಯತೆ ಇನ್ನೂ ಬಂದಿಲ್ಲವಲ್ಲ? ಹೇಗೆ ಉಪದೇಶಿಸಲಿ?" ಎಂದು. ಆಗ ದೇವಿಯು ಹೇಳುತ್ತಾಳೆ-
"ಅಗಸ್ತ್ಯನಿಗೆ ಆ ಯೋಗ್ಯತೆ ಇಲದಿದ್ದರೂ, ಆತನ ಪತ್ನೀ ಲೋಪಾಮುದ್ರೆಗೆ ಇದೆ. ಅವಳ ಪುಣ್ಯದಿಂದ
ಈತನಿಗೂ ಅರ್ಹತೆಯುಂಟಾಗಿದೆ. ಹಾಗಾಗಿ ಉಪದೇಶಿಸು, ಪರವಾಗಿಲ್ಲ” ಎಂದು! ಲೋಕೋತ್ತರ-ಚರಿತರಾದ ಅಗಸ್ತ್ಯರ
ಹೆಸರು ಹೇಳಿದರೆ ಸಾಕು, ಎಲ್ಲರೂ ಕೈಮುಗಿಯುತ್ತಾರೆ! ಅಂತಹ ಅಗಸ್ತ್ಯರ ಪತ್ನೀ ಲೋಪಾಮುದ್ರೆ ’ಅವರಿಗಿಂತ
ಮಿಗಿಲಾದವಳು’ ಎಂದು ಯಾವ ಮುಜುಗುರವಿಲ್ಲದೆ ಸಾರುವ ನಮ್ಮ ಶಾಸ್ತ್ರಗಳು ಲಿಂಗ-ವಯಸ್ಸುಗಳ ಭೇದವನ್ನು
ಮೀರಿನಿಂತಿರುವುದು ಗಮನೀಯ. ಈ ಔನ್ನತ್ಯ ಔದಾರ್ಯಗಳು ಮೂಲಭೂತ ದೃಷ್ಟಿಕೋನದಲ್ಲಿರುವುದರಿಂದಲೇ ಹಿಂದುಧರ್ಮದಲ್ಲಿ
ಮಹೋನ್ನತ ಚರಿತೆಯ ಸ್ತ್ರೀಪುರುಷರೆಲ್ಲ ಮೂಡಿಬರಲು ಸಾಧ್ಯವಾಗಿದೆ. ಜಿತೇಂದ್ರಿಯನೂ ಸರ್ವಜ್ಞನೂ ಆದ
ಜನಕ-ಮಹಾರಾಜನನ್ನೇ ಪರೀಕ್ಷಿಸಲು, ಅವನ ಒಳಗೆ ಸೂಕ್ಷ್ಮರೂಪದಿಂದ ಪ್ರವೇಶಿಸಿ ಸಂವಾದಕ್ಕೆ ತೊಡಗಿಸಿದ
ಸುಲಭಾ-ಮೈತ್ರೇಯಿಯ ಕಥೆಯು ಮಹಾಭಾರತದಲ್ಲಿ ಬರುತ್ತದೆ. ಸೀತಾ ದ್ರೌಪದಿಯರಂತಹ ಕುಲನಾರಿಯರಿಗಾದ ಅವಮಾನ
ಅನ್ಯಾಯಗಳನ್ನು ಸರ್ವಥಾ ಖಂಡಿಸಲೆಂದೇ ಲಂಕೆಯಲ್ಲೂ ಕುರುಕ್ಷೇತ್ರದಲ್ಲೂ ಘೋರಯುದ್ಧಗಳೇ ನಡೆದು, ಅಪರಾಧಿಗಳು
ಸರ್ವನಾಶವಾದರು ಎನ್ನುವುದು ಗೊತ್ತಿರುವ ವಿಷಯವೇ. ‘ಯತ್ರ ನಾರ್ಯಸ್ತು ಪೂಜ್ಯಂತೇ ರಂಅಂತೇ ತತ್ರ ದೇವತಾಃ’
ಎನ್ನುವ ಮನುವಾಕ್ಯವಂತೂ ಪ್ರಸಿದ್ಧ ಲೋಕೋಕ್ತಿಯೇ ಆಗಿಬಿಟ್ಟಿದೆ.
ದಿನನಿತ್ಯವೂ ಅನ್ನ-ಪಾನಗಳನ್ನೀಯುವ
ಭೂಮಿಯನ್ನೂ, ಹಾಲು-ಮೊಸರು- ಬೆಣ್ಣೆ-ತುಪ್ಪ ಹಾಗೂ ತತ್ಸಂಬಂಧಿತ ಖಾದ್ಯಪೇಯಗಳನ್ನು ಒದಗಿಸುವ ಗೋವನ್ನೂ,
ಜೀವನಕ್ಕೆ ಪುಷ್ಟಿ ನೀಡುವ ಮತಿ-ಗತಿಗಳನ್ನೂ ‘ಲಕ್ಷ್ಮೀಸ್ವರೂಪ’ವೆಂದು ಆರಾಧಿಸುವ ಭಾವ-ಶ್ರೀಮಂತಿಕೆ
ನಮ್ಮದು. ಈ ಭಾವಪುಷ್ಟಿಯೇ ನಾರಿಗೆ ಇರುವ ಗಜಬಲ. ಕಷ್ಟ-ನಷ್ಟ-ದೈನ್ಯಾದಿ ಹಲವು ಸಮಾಜಿಕ ಜಿಗುಟೂಗಳ
ನಡುವೆಯೂ ಹಲವು ಪಾತ್ರಗಳಲ್ಲಿ ನಾರಿಯು ತನ್ನ ವಿಶೇಷ ಸತ್ವವನ್ನು ಮೆರೆಯಲು ಸಾಧ್ಯವಾಗಿದೆ.
ಇಂತಹ ನಮ್ಮ ಹಿಂದು ಸಮಾಜಕ್ಕೆ ಅದಾವ
ಕೆಟ್ಟದೃಷ್ಟಿ ತಾಕಿತೋ! ಮತಾಂಧ ಕಾಮಾಂಧ ಇಸ್ಲಾಮಿ ಆಕ್ರಮಣಕಾರರು ಧಾಳಿಯಿಟ್ಟರು. ಅಲ್ಲಿಂದೀಚೆಗೆ ಭಾರತೀಯ
ನಾರಿಯ ಸ್ಥಿತಿಗತಿಗಳಲ್ಲೂ ಪಾತ್ರದಲ್ಲೂ ಆದ ಘೋರ ಬದಲಾವಣೆಗಳು ಅಷ್ಟಿಷ್ಟಲ್ಲ! ವನ್ಯಪ್ರದೇಶಗಳ ಗುರುಕುಲಗಳಲ್ಲಿ
ನಮ್ಮ ಕನ್ಯೆಯರು ವಾಸಿಸುತ್ತ ಅಧ್ಯಯನ ಮಾಡುವ ಮಾತಂತಿರಲಿ, ಸುಮ್ಮನೆ ಬೀದಿಗಳಲ್ಲಿ ನಡೆದು ಹೋಗುವ ಸಾಮಾನ್ಯ
ಸ್ವಾತಂತ್ರ್ಯವನ್ನೂ ಕಳೆದುಕೊಳ್ಳುತ್ತ ಬಂದರು. ಹೀಗೆ ೨೦೦೦ ವರ್ಷಗಳ ಕಪ್ಪುಕಾಲದಲ್ಲಿ (Dark Ages) ಅತ್ಯಂತ
ಘೋರವಾದ ಅನ್ಯಾಯ-ದಬ್ಬಾಳಿಕೆ-ಪಾರತಂತ್ರ್ಯಗಳಿಗೇ ದೇಶವೇ ತುತ್ತಾದಾಗ, ಅತ್ಯಂತ ಭೀಕರ ದೈನ್ಯಕ್ಕಿಳಿದದ್ದು
ಹಿಂದು ನಾರಿಯ ಸ್ಥಾನಮಾನಗಳು. ಇಂತಹ ಪರಿಸರದಲ್ಲೂ ಅಲ್ಲಿಲ್ಲಿ, ಸ್ವಲ್ಪ ಸ್ವಲ್ಪ ಅವಕಾಶ ಸಿಕ್ಕಲ್ಲೂ
ಒಂದಷ್ಟು ರಾಣಿಯರು, ಯೋಧೆಯರು, ಕವಯತ್ರಿಯರೂ, ಯೋಗಿನಿಯರು ಸಮಾಜ-ಸೇವಾಪರಾಯಣೆಯರು ಹುಟ್ಟಿಬರುತ್ತಲೇ
ಇದ್ದರೆನ್ನಿ! ಇದು ನಮ್ಮ ಹಿಂದು ನಾರಿಯರ ಅಂತಸ್ಸತ್ವದ ಅವಿನಾಶಿಸ್ವಭಾವವನ್ನು ಪ್ರದರ್ಶಿಸುತ್ತದೆ. ಬ್ರಿಟಿಷರ ಕಾಲದಲ್ಲಿ ಅವರುಗಳು ನಮ್ಮ ನಾರಿಯರ ‘ಉದ್ಧಾರ’
ಮಾಡುತ್ತೇವೆಂದು ಒಂದಷ್ಟು ಆಂಗ್ಲಶಾಲೆಗಳನ್ನು ತೆರೆದು ಅವರನ್ನು ‘ಆಂಗ್ಲ-ಅಕ್ಷರಸಂಪನ್ನೆ’ಯರನ್ನಾಗಿ
ಮಾಡಿದರು ನಿಜ. ಆದರೆ ಹಿಂದು ಸಮಾಜದ ಸುದೀರ್ಘ ಪರಂಪರೆಯಲ್ಲಿ ಅವಳು ತಳೆದು ಬರಬೇಕಾದ ಧಾರ್ಮಿಕ-ಸಾಂಸ್ಕೃತಿಕ
ಶ್ರೀಮಂತಿಕೆಯಿಂದ ಅವಳನ್ನು ಪರಾಙ್ಮುಖವಾಗಿಸಿ ಮೋಸಗೈದದ್ದು ನಮಗಾರಿಗೂ ಅರ್ಥವೇ ಆಗುತ್ತಿಲ್ಲ. ಹೀಗಿದ್ದರೂ,
ಶತಮಾನಗಳ ಸಮಾಜಿಕ ಕ್ಷೋಭೆಗಳಿಂದ ಮೇಲೇಳುತ್ತಿರುವ ಭಾರತದಲ್ಲಿ, ಹಿಂದು ನಾರಿಯರು ಎಲ್ಲರಿಗಿಂತ ಮಿಗಿಲಾಗಿ
ಪ್ರತಿಯಪಥದಲ್ಲಿ ಸಾಗುತ್ತಿರುವುದು ದೃಗ್ಗೋಚರವಾಗುತ್ತಿದೆ. ಶಿಕ್ಷಣ, ಉದ್ಯಮ, ಕ್ರೀಡೆ, ವಿಜ್ಞಾನ
, ಕಲೆ, ಸಾಹಿತ್ಯ, ಉದ್ಯೋಗವಲಯ, ಪತ್ರಿಕೋದ್ಯಮ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಭಾರತೀಯ ಮನಸ್ವಿನಿಯರು
ತಮ್ಮ ವರ್ಚಸ್ಸನ್ನು ಬೀರುತ್ತು ಯಶವಿನಿಯರಾಗುತ್ತಿದ್ದಾರೆ. ಮುಗಿಲಾಚೆಗೂ ಹಾರಿಹೋದ ಕಲ್ಪನಾ-ಸುನಿತಾರನ್ನು
ಪಡೆದ ಹೆಮ್ಮೆ ನಮ್ಮದು!
ಕೀಳರಿಮೆ, ಅಳು, ಗೋಳು, ಭಾವನಾತ್ಮಕ
ಅವಲಂಬನೆ, ವಿಲಾಸದ ಹುಚ್ಚು, ದೇಹಬುದ್ಧಿ- ಇವುಗಳನ್ನು ತೊರೆಯ ಬೇಕಾದ್ದದು ನಾರಿಯ ಆದ್ಯ. ಅರ್ಥಹೀನ
ಕಥೆ-ಕಾದಂಬರಿ-ಧಾರವಾಹಿಗಳ ಮುಂದೆ ಕಾಲಹರಣಮಾಡುವ ಚಟದಿಂದ ಬಿಡಿಸಿ ನಮ್ಮ ಹೆಣ್ಣುಳನ್ನು ಎಚ್ಚರಗೊಳಿಸಬೇಕಿದೆ.
ಸಹಸ್ರಮಾನಗಳ ಹಿಂದು ಸಮಾಜದ ಭವ್ಯ ಇತಿಹಾಸದಲ್ಲಿ ಮಿನುಗಿ ಹೋದ ಮಹಾಮಹಿಳೆಯರ ಜ್ವಲಂತ ಜೀವನ-ಸಂದೇಶಗಳನ್ನು
ನಮ್ಮ ಎಳೆಯ ಮನಸ್ಸುಗಳ ಮುಂದೆ ತೆರೆದಿಟ್ಟು ಸ್ಫೂರ್ತಿಗೊಳಿಸಬೇಕಿದೆ. ಇಂದಿನ ಸಾಮಾಜಿಕ ಸ್ಥಿತಿಗತಿಗಳನ್ನೂ
ಅವುಗಳಲ್ಲಿನ ಆಕೆಯ ಮುಂದಿರುವ ಸವಾಲುಗಳನ್ನೂ ವಿಶ್ಲೇಷಿಸುವ ವಿಚಾರಪರತೆಯನ್ನೂ ಅವಳಲ್ಲಿ ಮೂಡಿಸಬೇಕಿದೆ.
‘ತನ್ನತನ’ವನ್ನೂ ಅರಳಿಸಿಕೊಳ್ಳುತ್ತ ಸಮಾಜಕ್ಕೆ ತಾನು ಕೊಡಬಹುದಾದ ಸೇವೆಯ ಕುರಿತಾಗಿಯೂ ಉತ್ಸಾಹ-ಪ್ರೇರಣೆಗಳನ್ನು
ಅವಳಲ್ಲಿ ತುಂಬಬೇಕಾಗಿದೆ.
ಉದಾರವಾಗಿ ಜೀವನವನ್ನು ಕಾಣಬಲ್ಲ, ದಿಟ್ಟವಾಗಿ
ಬದುಕಬಲ್ಲ, ಪರಿಶ್ರಮದಿಂದ ಜಯಿಸಬಲ್ಲ ನಾರಿಯರು ಎಂತಹ ಘೋರ ಪರಿಸ್ಥಿತಿಗಳನ್ನೂ ಕೆಚ್ಚೆದೆಯಿಂದ ಎದುರಿಸಬಲ್ಲ
ದುರ್ಗೆಯರಾಗಿ ನಿಲ್ಲಬಲ್ಲರು! ತನ್ನನ್ನು ತಾನು ಎಲ್ಲರನ್ನು ಕಂಗೆಡಿಸುವ ‘ಭೋಗದ ಬೊಂಬೆ’ಯೆಂದೋ ಅಥವಾ
ಗೃಹಕಾರ್ಯಕ್ಕಷ್ಟೇ ಮೀಸಲಾದ ‘ದಾಸಿ’ಯೆಂದೋ ಭಾವಿಸಿದರೇ, ಅವಳ ಅಂತಸ್ಸತ್ವ ಆತ್ಮವಿಶ್ವಾಸಗಳು ಕುಂದುತ್ತ
ಹೋಗುತ್ತವೆ. ಅವಳು ಉದಾತ್ತವಾದ (Self Image) ಅಸ್ಮಿತಭಾವವನ್ನು ಬೆಳೆಸಿಕೊಳ್ಳಬೇಕು. ಅವಳು ತನ್ನ
ಸ್ತ್ರೀತ್ವದ ಬಗ್ಗೆ, ಕುಲ-ದೇಶಗಳ ಬಗ್ಗೆ, ತನ್ನ ಕರ್ತವ್ಯದ ಬಗ್ಗೆ ಹೆಮ್ಮೆ ಹಾಗೂ ಸಮರ್ಪಣ-ಭಾವವನ್ನು ತಾಳಬೇಕು. ಆಗ ಮಾತ್ರ
ನಾರಿಯಲ್ಲಿ ಸತ್ವೋತ್ಕರ್ಷವುಂಟಾಗುತ್ತದೆ. ಧರ್ಮಾರ್ಥಕಾಮಗಳ ಸೌಷ್ಟವದ ವಿಷಯದಲ್ಲಿ, ದೇಶ-ಧರ್ಮಗಳ ಸಂರಕ್ಷಣೆಯ
ವಿಷಯದಲ್ಲಿ ತನ್ನ ಜವಾಬ್ದಾರಿಯನ್ನರಿತ ನಾರಿಯು ಶಕ್ತಿಯ ಆಗರವಾಗಿ ಅರಳುತ್ತಾಳೆ.
ಮತ್ತೊಮ್ಮೆ ಗಾರ್ಗಿ-ಮೈತ್ರೇಯಿಯರು
ಉದಿಸಲಿದ್ದಾರೆ ಎಂಬ ಸ್ವಾಮಿ ವಿವೇಕಾನಂದರ ದರ್ಶನವನ್ನು ಶೀಘ್ರವೇ ನೆನಸಾಗಿಸುವತ್ತ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ.
ಡಾ ಆರತೀ ವಿ ಬಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ