ಶುಕ್ರವಾರ, ಮಾರ್ಚ್ 17, 2017

ದಾನ
ದಾನ ಎನ್ನುವುದು ಸನಾತನಧರ್ಮದ ಆಚರಣೆಗಲಲ್ಲಿನ ಅವಿಭಾಜ್ಯ ಅಂಗ. ದಾನವಿಲ್ಲದೇ ಯಾವ ಪೂಜೆ, ಶುಭಕಾರ್ಯ, ಹಬ್ಬ ಅಥವಾ ಧಾರ್ಮಿಕ ಆಚರಣೆಗಳೂ ಪೂರ್ಣವೆನಿಸುವುದಿಲ್ಲ. ಭೂ, ಕನಕ, ಗೋ, ವಸ್ತ್ರ, ಅನ್ನ, ತೈಲ, ತುಪ್ಪ, ಎಳ್ಳು, ಬೆಳ್ಳೀ ಹಾಗೂ ದಾನ್ಯ ವೆಂಬ ಹತ್ತು ಮುಖ್ಯ ದ್ರವ್ಯಗಳ ದಾನಗಳಲ್ಲದೆ ಔಷಧ, ವಿದ್ಯೆ, ಉದ್ಯೋಗ, ಅಭಯ, ಆಶ್ರಯಗಳ ದಾನಗಳೂ, ಕನ್ಯಾದಾನವೂ ಹಾಗೂ ಸಾಂತ್ವನ, ಆಪ್ತಸಲಹೆ, ನೈತಿಕ ಬೆಂಬಲ ಹಾಗೂ ಉದಾರಭಾವದ ಸೇವೆ-ಸಹಾಯಗಳೂ ದಾನಗಳೆಂದೇ ಮಾನ್ಯ.   
ಒಟ್ಟಿನಲ್ಲಿ ನಮ್ಮ ತನು-ಮನ-ದನಗಳನ್ನು ಪರಹಿತಕ್ಕಾಗಿ ಬಳಸುವ ಎಲ್ಲ ಕಲಾಪಗಳೂ ದಾನದ ರೂಪಗಳೇ. ದಾನದಲ್ಲಿ ಪ್ರತಿಫಲಾಪೇಕ್ಷೆ ಇರಕೂಡದು. ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಹಣ, ಕೀರ್ತಿ, ಬಿರುದು, ಪ್ರತ್ಯುಪಕಾರಗಳ ಲೆಕ್ಕಾಚಾರವಿದ್ದಲ್ಲಿ ಅದು ದಾನವೆನಿಸುವುದಿಲ್ಲ, ವ್ಯವಹಾರವೆನಿಸುತ್ತದೆ.
ಪಟ್ಟಾಭಿಷೇಕ, ಪುತ್ರೋತ್ಸವ, ವಿಜಯೋತ್ಸವ, ವಿವಾಹೋತ್ಸವ ಮುಂತಾದ ಎಲ್ಲ ಉತ್ಸವಗಳಲ್ಲೂ ಅಪಾರ ಪ್ರಮಾನದಲ್ಲಿ ಅನ್ನ, ವಸ್ತ್ರ, ಗೋ, ಭೂ ದಾನಗಳನ್ನು ನೀಡುವುದು ವೇದಕಾಲದಿಂದ ಇಂದಿನವರೆಗೂ ಸಂಪ್ರದಾಯವೇ ಆಗಿ ಬೆಳೆದುಬಂದಿದೆ. ಅಸಂಖ್ಯ ದಾನದ ಶಾಸನಗಳು ಇಂದಿಗೂ ಕಾಣಸಿಗುತ್ತವೆ. ಜನಸಾಮಾನ್ಯರೂ ಕೂಡ ತಮ್ಮತಮ್ಮ ಶಕ್ತ್ಯನುಸಾರ ದಾನವನ್ನು ಮಾಡುತ್ತಾರೆ. ಇಂದಿಗೂ ದೇಗುಲ, ಅನ್ನಸಂತರ್ಪಣೆ, ಪ್ರಸಾದ ವಿನಿಮಯ, ಸೇವಾಕಾರ್ಯಗಳಲ್ಲೂ ಹುಂಡಿಗಳಲ್ಲೂ ದಾರಾಳವಾಗಿ ದಾನನೀಡುವ ಉದಾರಿಗಳು ಅಸಂಖ್ಯ. ಹಳ್ಳಿಗಳಲ್ಲಿನ ತಮ್ಮ ನೆಂಟರ, ಪರಿಚಿತರ ಮಕ್ಕಳನ್ನು ಕರೆತಂದು ನಗರಗಳಲ್ಲಿ ಆಶ್ರಯವಿತ್ತು, ಓದಿಸಿ, ಕೆಲಸ ಕೊಡಿಸಿ, ಮದುವೆ ಮಾಡಿಸಿ  ಹರಸುವ ಉದಾರಭಾವ ನಮ್ಮ ಹಿಂದಿನ ಪೀಳಿಗೆಯವರಲ್ಲಿ ಹೇರಳವಾಗಿತ್ತು, ಈಗಲೂ ಸ್ವಲ್ಪಮಟ್ಟಿಗೆ ಇಲ್ಲದಿಲ್ಲ. ದಾನವೇ ಪ್ರಧಾನವಾದ ಅನ್ನಕೂಟ, ಕಟದಾನೋತ್ಸವ, ಗೋಪದ್ಮವ್ರತ, ಕಾರ್ತೀಕದಲ್ಲಿ ದೀಪದಾನ ಮೊದಲಾದ ಆಚರಣೆಗಳೂ ಇವೆ. ಹಿಮಾಲಯದ ತೀರ್ಥಕ್ಷೇತ್ರಗಳಲ್ಲಿ ಯಾತ್ರಾರ್ಥಿಗಳಿಗೂ ಸಾಧುಗಳಿಗೂ ಅನ್ನ, ವಸ್ತ್ರ, ದಕ್ಷಿಣೆ, ಆಶ್ರಯಗಳ ಜೊತೆಗೆ ಕಂಬಳಿ, ಜಪಮಾಲೆ, ಆಸನ, ಧರ್ಮಗ್ರಂಥಗಳು, ವೈದ್ಯಕೀಯ ಚಿಕಿತ್ಸೆ ಮುಂತಾದ ಹತ್ತು ಹಲವು ಬಗೆಯ ದಾನಗಳನ್ನು ಉದಾರವಾಗಿ ಮಾಡುವ ಸಾವಿರಾರು ಸೇವಾವ್ರತಿಗಳಿದ್ದಾರೆ.
ದಾನದಿಂದ ದಾನಿಯ ಆತ್ಮಸಂಸ್ಕರಣ ಹಾಗೂ ಸಮಾಜದ ದೀನರ ರಕ್ಷಣೆ- ಈ ಎರಡೂ ಸಾಧ್ಯವಾಗುತ್ತವೆ. ಸ್ವಸ್ವತ್ವನಿವೃತ್ತಿಪೂರ್‍ವಕಂ ಪರಸ್ವತ್ವಾಪಾದದಂ ದಾನಂ (‘ತನ್ನ ವಸ್ತುವ್ಯಾಮೋಹವನ್ನು ಗೆಲ್ಲಲು ಹಾಗೂ ಪರರಿಗೆ ಅನುಕೂಲವುಂಟುಮಾಡುವ ಕ್ರಿಯೆ ದಾನ) ಎನ್ನುವುದು ದಾನದ ನಿರ್ವಚನ (ಗ್ರಂಥ- ಧರ್ಮಸಿಂಧು). ಸದಾ ಇನ್ನಶ್ಟು ಮತ್ತಷ್ಟನ್ನು ಬಯಸುವ ಹುಚ್ಚು ಲೋಭವನ್ನು ಹದ್ದಿಕ್ಕಲು ದಾನವೇ ಸೂಕ್ತ ಸಾಧನ. ಸಂತೃಪ್ತಿ, ಸಾಮಾಜಿಕ ಕಾಳಜಿ, ಸ್ನೇಹಭಾವ ಹಾಗೂ ಸರ್ವರನ್ನೂ ಪೋಷಿಸುವ ಶಕ್ತಿಗಳನ್ನು ದಾನ ವರ್ಧಿಸುತ್ತದೆ. ನಾವು ತಾಯ್ತಂದೆ ಬಂಧುಬಳಗ ಗುರುಹಿರಿಯರಿಂದಲ್ಲದೆ ನೆರೆಕೆರೆಯವರಿಂದಲೂ ಮಿತ್ರರಿಂದಲೂ ಹಾಗೂ ಅಪರಿಚಿತರಿಂದಲೂ ಹಲವು ಬಗೆಯ ಸಹಾಯಗಳನ್ನು ಪಡೆದೇ ಇರತ್ತೇವೆ. ಇದಲ್ಲದೆ ನಮಗೆ ಆಹಾರ, ನೀರು ಹಾಗೂ ಜೀವನೋಪಯೋಗಿಯಾದ ಎಲ್ಲ ದ್ರವ್ಯಗಳನ್ನೂ ನೀಡುವ ನಿಸರ್ಗ ಹಾಗೂ ಪಶುಪಕ್ಷಿಪ್ರಾಣಿಗಳಿಂದಲೂ ಉಪಕೃತರಾಗಿರುತ್ತೇವೆ. ಹಾಗಾಗಿ ನಾವು ಸದಾ ಕೃತಜ್ಞತಾಭಾವವನ್ನು ತಾಳಬೇಕು. ಎಲ್ಲರಿಗೂ ಅಂದಂದೆ ಅಲ್ಲಲ್ಲೇ ಪ್ರತ್ಯುಪಕಾರ ಸಲ್ಲಿಸಲು ಯತ್ನಿಸಬೇಕು ನಿಜ. ಆದರೆ ಅದು ಸಂಪೂರ್ಣವಾಗಿ ಸಾಧ್ಯವಾಗದೇ ಹೋಗಬಹುದು. ಆದ್ದರಿಂದ ನಮ್ಮ ಋಣದ ಭಾವವನ್ನು ಹಗುರಗೊಳಿಸಿಕೊಳ್ಳಲು ಹಾಗೂ ಪಡೆದ ಉಪಕಾರಸ್ಮರಣೆಗಾಗಿಯೂ, ಅದೇ ಉಪಕಾರವನ್ನು ‘ಪೇ ಇಟ್ ಫಾರ್ವರ್ಡ್’ ಮಾಡುವ ಸಾತ್ವಿಕ ಮಾರ್ಗ ದಾನ. ಮಾಡಿದ ಪಾಪಗಳಿಗೆ ಅತ್ಯುತ್ತಮ ಪ್ರಾಯಶ್ಚಿತ್ತವಾಗಿ ಬಗೆಬಗೆಯ ದಾನವನ್ನು ಶಾಸ್ತ್ರಗಳು ಸೂಚಿಸುತ್ತವೆ.
ದಾನ ಮಾಡುವುದನ್ನು ಬಹುವಾಗಿ ಶ್ಲಾಘಿಸುವ ಪರಂಪರೆ ನಮ್ಮದು. ರಘುವಂಶದ ರಾಜರುಗಳು ದಾನಕ್ಕಾಗಿಯೇ ವಿತ್ತಸಂಚಯ ಮಾಡುತ್ತಿದ್ದರೆಂದು ಕಾಳಿದಾಸ ಹೊಗಳುತ್ತಾನೆ… ತ್ಯಾಗಾಯ ಸಂಭೃತಾರ್ಥಾಃ (ರಘುವಂಶಕಾವ್ಯಂ, 1. 7). ’ಕ್ಷಣದಾನಪ್ರಿಯ’, ‘ದಾನಚಿಂತಾಮಣಿ’, ‘ದಾನಶೂರ’ ಮುಂತಾದ ಬಿರುದುಗಳನ್ನು ಹೇರಳವಾಗಿ ಕಾಣುತ್ತೇವೆ. ಯಾವುದೇ ದಾನವನ್ನು ಸುತರಾಂ ಕೊಡದ ಜಿಪುಣ ಬುದ್ಧಿಯವರ ವ್ಯಕ್ತಿತ್ವ ನಿಂತನೀರಿನಂತೆ ಕೊಳೆಯುತ್ತದೆ, ಸತ್ವಹೀನವಾಗುತ್ತದೆ. ಮನಸ್ಸಂಕೋಚದಿಂದ ಕುಗ್ಗುತ್ತದೆ. ಇಂತಹವರು ಬಂಧುಮಿತ್ರರ ಸ್ನೇಹ, ಗೌರವಗಳನ್ನೂ ಕಳೆದುಕೊಳ್ಳುತ್ತಾರೆ. ಹಾಗಾಗಿ ಸಮಾಜದಲ್ಲಿ ಸಮೃದ್ಧಿ, ಘನತೆ, ಸ್ನೇಹಗಳನ್ನು ಸಂಪಾದಿಸಲು ದಾನವು ವೇದಿಕೆಯನ್ನೊದಗಿಸುತ್ತದೆ.
ಗೃಹಸ್ಥರೆಲ್ಲರಿಗೂ ದಾನವೆನ್ನುವುದು ಒಂದು ಕಡ್ಡಾಯ ವ್ರತವೆನ್ನುತ್ತದೆ ಸಂಪ್ರದಾಯ. ಅದರಲ್ಲೂ ಯಜ್ಞ, ವ್ರತ ಉತ್ಸವಾದಿಗಳ ಸಂದರ್ಭದಲ್ಲಂತೂ ಬೇಡಿ ಬಂದ ಯಾರನ್ನೂ ಹಿಂದಿರುಗಿಸುವಂತಿಲ್ಲ, ಯಾರೂ ಬೇಡಿ ಬರದಿದ್ದರೂ, ನಾವಾಗಿ ಹುಡುಕಿಕೊಂಡು ಹೋಗಿ ದ್ರವ್ಯ, ವಸ್ತು, ದಕ್ಷಿಣಾದಿಗಳ ದಾನವನ್ನು ಸತ್ಪಾತ್ರರಿಗೆ ಮಾಡುವುದು ಪದ್ಧತಿ.
ಆದರೆ ‘ನೀಡಿದೆನೆನ್ನದಿರಾ ಜಂಗಮಕೆ’ ಎನ್ನುವ ಶರಣೋಕ್ತಿಯಂತೆ ‘ಕೊಟ್ಟೆ’ ಎನ್ನುವ ಗರ್ವ ಇರಬಾರದು. ತೈತ್ತಿರೀಯೋಪನಿಷತ್ತು ನಿರ್ದೇಶಿಸುತ್ತದೆ ‘ಶ್ರದ್ಧಯಾ ದೇಯಂ, ಅಶ್ರದ್ಧಯಾ ಅದೇಯಂ, ಶ್ರಿಯಾ ದೇಯಂ, ಭಿಯಾ ದೇಯಂ, ಸಂವಿದಾ ದೇಯಂ…..’ ಎಂದರೆ- ದಾನವನ್ನು ಶ್ರದ್ಧೆಯಿಂದ ಕೊಡಬೇಕು ಅಶ್ರದ್ಧೆಯಿಂದಲ್ಲ, ಸಮೃದ್ಧವಾಗಿಕೊಡಬೇಕು, ವಿನಯದಿಂದ ಕೊಡಬೇಕು, ಸುಸಂಕೃತ ರೀತಿಯಲ್ಲಿ ಕೊಡಬೇಕು. ತೋರಾಣಿಕೆಗಾಗಿ, ಪೈಪೋಟಿಗಾಗಿ ಅಥವಾ ಅಸಡ್ಡೆ ಅಹಂಕಾರಗಳಿಂದ ಅಥವಾ ಡಾಂಬಿಕತೆಯಿಂದ ಕೊಟ್ಟ ದಾನ ನಿಷ್ಪ್ರಯೋಜಕವೆನಿಸುತ್ತದೆ. ಏಕೆಂದರೆ ಇಲ್ಲಿ ಮನಸ್ಸಿನ ಸ್ವಾರ್ಥಲೋಭ ನಾಶಗಳಾಗುವ ಬದಲು ದರ್ಪವೇ ಹೆಚ್ಚುತ್ತದೆ.
‘ಓಂ’ ಎಂದು ಉಚ್ಚರಿಸುತ್ತ ದಾನವನ್ನು ಮಾಡಬೇಕು ಎನ್ನುತ್ತದೆ ಭಗವದ್ಗೀತೆ- ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃಕ್ರಿಯಾ (೧೭.೨೪). ಭಗವದ್ಗೀತೆಯು ಮೂರು ಬಗೆಯ ದಾನಗಳ ಕುರಿತಾಗಿ ಹೇಳುತ್ತದೆ- ಸಾತ್ವಿಕ (ಉದಾರ ಮನಸ್ಸಿನಿಂದ ಸರಳವಾಗಿ ಮಾಡುವ ದಾನ), ರಾಜಸಿಕ (ವೈಭವ ತೋರಾಣಿಕೆಗಳ ದಾನ) ಹಾಗೂ ತಾಮಸಿಕ (ದುರುದ್ದೇಶ ಮತ್ತು ದರ್ಪಗಳಿಂದ ಮಾಡುವ ದಾನ). (೧೭.೨೧-೨೨).
ನಮಗೆ ಬೇಡದ ಅಥವಾ ಹಾಳಾದ ನಿಷ್ಪ್ರಯೋಜಕ ವಸ್ತುಗಳನ್ನು ಬೇರೆಯವರಿಗೆ ‘ದಾನ’ ಮಾಡಿ ಪುಣ್ಯ ಗಿಟ್ಟಿಸುವ ‘ಜಾಣ್ಮೆ’ ಆತ್ಮವಂಚನೆ ಎನಿಸುತ್ತದೆ ಅಂತೆಯೇ ಅದು ದಾನಕರ್ಮಕ್ಕೇ ಅಪಮಾನ ಎನ್ನಬಹುದು. ಕಠೋಪನಿಷತ್ತಿನಲ್ಲಿ ಒಂದು ಪ್ರಸಂಗ ಬರುತ್ತದೆ- ವಾಜಶ್ರವಸ್ ಎನ್ನುವವನು ವಯಸ್ಸಾದ ಬಡಕಲಾದ ಹಲ್ಲುಬಿದ್ದು ಕೆಚ್ಚಲು ಕ್ಷೀಣಿಸಿದ ನಿಷ್ಫ್ರಯೋಜಕ ಹಸುಗಳನ್ನು ‘ದಾನ’ಕೊಡುವುಇದನ್ನು ಕಂಡು ಅವನ ಮಗ ನಚಿಕೇತ ದುಃಖಪಡುತ್ತಾನೆ. ತನ್ನ ತಂದೆ ‘ಅನಂದ’ ಎನ್ನುವ ನರಕಕ್ಕೆ ಬಿದ್ದಾನೆಂದು ಚಿಂತಿಸುತ್ತಾನೆ- ಪೀತೋದಕಾ ಜಗ್ಧತೃಣಾ ದುಗ್ಧದೋಹಾ ನಿರಿಂದ್ರಿಯಾಃ | ಅನಂದಾನಾಮ ತೇ ಲೋಕಾ ತಾನ್ ಸ ಗಚ್ಛತಿ ತಾ ದದತ್ ||
ದಾನವನ್ನು ಪಡೆಯುವವರೂ ಸತ್ಪಾತ್ರರೂ ಯೋಗ್ಯರೂ ಆಗಿರಬೇಕು. ತಾನು ‘ಬ್ರಾಹ್ಮಣ’ ಎಂದೋ ‘ಬಡವ’ ಎಂದೋ ಅಗತ್ಯಕ್ಕಿಂತ ಹೆಚ್ಚಾಗಿ ದಾನ ಪಡೆಯುವ ಅಥವಾ ಪಡೆಯುವುದನ್ನೇ ಅಭ್ಯಾಸ ಮಾಡಿಕೊಳ್ಳುವಂತಹವರನ್ನು ಅಧಮರೆಂದು ಶಾಸ್ತ್ರಗಳು ಪರಿಗಣಿಸುತ್ತವೆ. ಸಾಧ್ಯವಾದಷ್ಟು ಅಪರಿಗ್ರಹವ್ರತವನ್ನು ಸ್ವಾವಲಂಭಿತ್ವವನ್ನೂ ಆಚರಿಸುವ ವೃತ್ತಿಯನ್ನೇ ಸರ್ವಥಾ ಉತ್ತಮವೆಂದು ಪರಿಗಣಿಸಲಾಗುತ್ತದೆ.   
ಕೇವಲ ಭೋಗಲೋಲುಪತೆಯಲ್ಲೀ ನಮ್ಮ ಹಣವನ್ನು ವ್ಯಯಿಸುವುದಕ್ಕಿಂತ ನಾವು ಆಗಾಗಲಾದರೂ ಅಗತ್ಯವಿರುವಂತಹ ಬಡವರಿಗೆ, ವಿದ್ಯಾರ್ಥಿಗಳಿಗೆ, ಸತ್ಪಾತ್ರರಿಗೆ, ಸನಾತನಧರ್ಮವನ್ನು ದೇಶಬಕ್ತಿಯನ್ನೂ ಉಳಿಸುವ ಬೆಳೆಸುವ ಮಠ ಮಂದಿರಗಳಿಗೆ, ಯೋಜನೆಗಳಿಗೆ, ಕಲಾಪಗಳಿಗೆ ದಾನವನ್ನು ಮಾಡುವ ಸಾತ್ವಿಕ ಅಭ್ಯಾಸವನ್ನು ಇಟ್ಟುಕೊಳ್ಳೋಣ. ನಮ್ಮ ಮನಸ್ಸನ್ನು ಸುಸಂಸ್ಕೃತವಾಗಿಸುವ ಹಾಗೂ ನಮ್ಮ ಸುತ್ತಲ ಸಮಾಜವನ್ನೂ ಪೋಷಿಸುವ ದಾನವೆಂಬ ಸಾತ್ವಿಕ ಕ್ರಿಯೆ ಹೆಚ್ಚಲಿ, ಹೆಚ್ಚುತ್ತಿರಲಿ.

ಡಾ ಆರತೀ ವಿ ಬಿ


 Published in Samyukta Karnataka, 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ