ಶುಕ್ರವಾರ, ಮಾರ್ಚ್ 17, 2017

ದೀಪ
ಜಗದೀಶ್ವರನ ಗೃಹಿಣಿಯಾದ ಪ್ರಕೃತಿಯು ಪ್ರತಿದಿನವೂ ಪ್ರಾತಃಕಾಲದಲ್ಲಿ ಸೂರ್ಯನೆಂಬ ’ನಂದಾದೀಪ’ವನ್ನು ಹಚ್ಚಿ ಜಗತ್ತನ್ನು ಬೆಳಗುತ್ತಾಳೆ, ನಿಶೆಯಲ್ಲಿ ಸೌಮ್ಯ ಬೆಳಕಿನ ಚಂದ್ರನನ್ನು ಬೆಳಗುತ್ತಾಳೆ. ಇನ್ನು ಮನೆಮನೆಯ ಕತ್ತಲನ್ನು ನೀಗಿಸಲು ಗೃಹಲಕ್ಷ್ಮಿಯರು ದೀಪವನ್ನು ಬೆಳಗುತ್ತಾರೆ. ಬೆಳಕನ್ನೂ ದೀಪವನ್ನೂ ಪ್ರೀತಿಸುವ ಪೂಜಿಸುವ ಸುಂದರ ಸಂಸ್ಕೃತಿ ನಮ್ಮದು. ಜ್ಯೋತಿಯನ್ನು ಲಕ್ಷ್ಮಿಯೆಂದು ಭಾವಿಸುತ್ತೇವೆ. ಲಕ್ಷ್ಮಿಯಾದರೋ ಸಂಪತ್ತು, ಸಮೃದ್ಧಿ ಸಂತೋಷ ಸೌಂದರ್ಯ ಹಾಗೂ ಸೌಮಂಗಲ್ಯದ ಪ್ರತೀಕ.
ಸನಾತನಧರ್ಮದಲ್ಲಿ ಅಗ್ನಿತತ್ವಕ್ಕೆ ಬಹುಮಾನ್ಯತೆ. ಅದು ಭಗವತ್ತತ್ವದ ಪ್ರತ್ಯಕ್ಷರೂಪ, ದೇವರಿಗೆ ನಮ್ಮ ನಿವೇದನೆಯನ್ನು ತಲುಪಿಸುವ ಹವ್ಯವಾಹನ, ಭೂಮಿಯ ಮೇಲಿನ ಜೀವಾಧಾರ ಹಾಗೂ ಸರ್ವಧರ್ಮಕರ್ಮಗಳಿಗೂ ಸಾಕ್ಷಿ. ಮನೆಯ ಯಜ್ಞಶಾಲೆಯಲ್ಲಿ ಅಗ್ನಿಯನ್ನು ಸದಾ ಪಾಲಿಸಬೇಕಾದ ವ್ರತ ಗೃಹಸ್ಥರದು. ಇದೀಗ ಅಗ್ನಿಹೋತ್ರ ಅಗ್ನಿಕಾರ್ಯಗಳ ವೈದಿಕ ಪದ್ಧತಿಯು ಸರಳೀಕೃತವಾಗುತ್ತ ಬಂದು ದೇವರ ಕೋಣೆಯಲ್ಲಿ ನಂದಾದೀಪ ಹಚ್ಚುವ ಪ್ರಕ್ರಿಯೆಯಾಗಿ ಉಳಿದುಕೊಂಡಿದೆ ಎನ್ನಿ. ಮನುಷ್ಯಜೀವನದಲ್ಲಿನ ಷೋಡಷಸಂಸ್ಕಾರಗಳಿಗೂ (ಉಪನಯನ, ವಿವಾಹ ಇತ್ಯಾದಿ) ಅಗ್ನಿಯ ಸಾನ್ನಿಧ್ಯ ಅತ್ಯಗತ್ಯ. ಪ್ರಾಚೀನ ಸಾಹಿತ್ಯದಲ್ಲಿ ಕಾಣಬರುವಂತೆ ಅಗ್ನಿಸ್ವರೂಪಿಗಳೆಂದು ಭಾವಿಸಲ್ಪಡುವ ಅತಿಥಿಗಳನ್ನು ಅಗ್ನಿಶಾಲೆಯಲ್ಲೇ ಬರಮಾಡಿಕೊಳ್ಳಾಲಾಗುತ್ತಿತ್ತು. ಇನ್ನು ದಾನ, ವಾಗ್ದಾನ, ಮಾತುಕತೆ, ಸಾಕ್ಷಿ ಮುಂತಾದ ಮುಖ್ಯ ಕಲಾಪಗಳು ಅಗ್ನಿಸಾಕ್ಷಿಯಾಗಿಯೇ ನಡೆಯುತ್ತಿದ್ದವು. ಒಲೆಯನ್ನು ಬಳಸುವ ಮುನ್ನ  ಅದನ್ನು ರಂಗವಲ್ಲಿ ಹೂವು ಅಕ್ಷತೆಗಳಿಂದ ಪೂಜಿಸುವ ಸನಾತನ ಪದ್ಧತಿ ಇಂದಿಗೂ ಇದೆ. ದೀಪವನ್ನು ಬೆಳಗಿ ಅರಸಿನ-ಕುಂಕುಮಾದಿಗಳಿಂದ ಪೂಜಿಸಿ ಆ ಬಳಿಕವೇ ಪೂಜೆ ಹವನ ಮುಂತಾದವನ್ನು ಪ್ರಾರಂಭಿಸಲಾಗುತ್ತದೆ. ಪೂಜೆ ಅದೆಷ್ಟೇ ಸರಳವಾಗಿದ್ದರೂ ಅದರಲ್ಲಿ ದೀಪವಂತೂ ಇರಲೇಬೇಕು, ಇಲ್ಲದಿದಲ್ಲಿ ಅದು ಪೂಜೆ ಎನಿಸುವುದೇ ಇಲ್ಲ! ದೀಪವನ್ನೇ ದೇವತಾ ಸಂಕೇತವಾಗಿ ಇಟ್ಟು ಆವಾಹನಾದಿ ವಿಧಿಗಳ ಮೂಲಕ ವಿಧಿಯುಕ್ತವಾಗಿ ಪೂಜಿಸುವ ದುರ್ಗಾದೀಪಪೂಜಾ ಮುಂತಾದ ಪೂಜಾಪದ್ಧತಿಗಳು ಪ್ರಸಿದ್ಧವಾಗಿವೆ.
ಅಗ್ನಿಯು ಭಾರತೀಯರ ಪಾಲಿಗೆ ಕೇವಲ ಒಂದು ನೈಸರ್ಗಿಕ ಶಕ್ತಿಯಲ್ಲ, ಅದು ಜೀವನದ ಸಾರವೇ ಆಗಿದೆ. ಪ್ರತ್ಯಕ್ಷ ಬ್ರಹ್ಮವೇ ಆಗಿದೆ. ದೇವರಿಗೆ ನಮ್ಮ ಭಾವಭಕ್ತಿನಿವೇದನೆಗಳನ್ನು ತಲುಪಿಸುವ ವಾಹನವಾಗಿದೆ. ’ಅಹ್ನಿ ಮೀಳೆ ಪುರೋಹಿತಂ ...’ ಎಂದೇ ಋಗ್ವೇದದ ಪ್ರಾರಂಭ. ಸೃಷ್ಟಿಯ ಮೂಲಭೂತ ಸಂಪನ್ಮೂಲಗಳಾದ ಪಂಚಮಹಾಭೂತಗಳಲ್ಲಿ ಅಗ್ನಿತತ್ವವು ಒಂದು. ಸಮುದ್ರಗರ್ಭದಲ್ಲಿ ಬಡಬಾಗ್ನಿಯಾಗಿ ಅಗ್ನಿಯು ಸುಪ್ತವಾಗಿದ್ದು ಪ್ರಲಯಕಾಲದಲ್ಲಿ ಬಹಿರಂಗದಲ್ಲಿ ಸಂಭವಿಸುತ್ತಾನೆ ಎನ್ನಲಾಗುತ್ತದೆ.
ಅಗ್ನಿದೇವನಿಗೆ ಎರಡು ಶಿರಸ್ಸುಗಳು- ಒಂದು ಶಿರವು ಅಮೃತತ್ವವನ್ನೂ ಮತ್ತೊಂದು ಶಿರವು ಐಹಿಕ ಬದುಕಿನ ಸತ್ವವನ್ನೂ ಪ್ರತಿನಿಧಿಸುತ್ತದೆ. ಅವನಿಗೆ ಏಳು ಭಯಂಕರ ನಾಲಿಗೆಗಳು, ಮೂರು ಪಾದಗಳು ಮತ್ತು ದ್ವಿಭುಜಗಳು. ಆತನ ವಾಹನ ಮೇಷ. ಆತನ ಕೆಂಪುಬಣ್ಣವು ಅವನು ಉಪಯುಕ್ತನೂ ಹೌದು ಲಯಕಾರನೂ ಹೌದು ಎನ್ನುವುದನ್ನು ಸೂಚಿಸುತ್ತದೆ. ಉತ್ಪತ್ತಿ ಮಾಡಲು ಬಳಸಲಾಗುವ ಸಲಕರಣೆಗಳನ್ನು ಅಗ್ನಿಯ ’ಇಬ್ಬರು ಮಾತೆಯರೂ’ ಎಂದೂ ಅಗ್ನಿಯೊಂದಿಗೆ ಪ್ರವರ್ತಿಸುವ ಮನುಷ್ಯನ ಹತ್ತು ಬೆರಳುಗಳನ್ನು ಅಗ್ನಿಯ ’ಹತ್ತು ಸೇವಕಿಯರು’ ಎಂದೂ ಉಪಮಾನಿಸಲಾಗುತ್ತದೆ. ಆಗ್ನೇಯ ದಿಕ್ಕಿನ ಅಧಿಪತಿಯಾದ  ಅಗ್ನಿಯು ಅಷ್ಟದಿಕ್ಪಾಲಕರಲ್ಲಿ ಒಬ್ಬ. ಅಗ್ನಿಗೆ ’ಸ್ವಾಹ’ ಹಾಗೂ ’ಸ್ವಧಾ’ ಎನ್ನುವ ಇಬ್ಬರು ಪತ್ನಿಯರು. ಅಗ್ನಿಗರ್ಭಕ್ಕೆ ಸೇರುವ ಹವಿಸ್ಸನ್ನು ಸ್ವಾಹಾಳು ದೇವತೆಗಳಿಗೆ ಅವರ ಭಾಗವನ್ನು ತಲುಪಿಸಿದರೆ ಸ್ವಧಾಳು ಪಿತೃಗಳಿಗೆ ಅವರ ಭಾಗವನ್ನು ತಲುಪಿಸುತ್ತಾಳೆ. 
 ಅಗ್ನಿಯು ಜ್ಞಾನ ಹಾಗೂ ಜೀವಂತಿಕೆಗಳ ಪ್ರತೀಕ. ದೀಪವು ಶುಭಕರ ಪರಿಸರವನ್ನೂ ಮನೋಭೂಮಿಕೆಯನ್ನೂ ನಿರ್ಮಿ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ಹೋಮಾದಿಗಳಲ್ಲಿ ಪರಿಸರಸ್ನೇಹಿ ಪದಾರ್ಥಗಳು ಹವಿಸ್ಸಿನೊಂದಿಗೆ ಬೆರೆತು ಅಗ್ನಿಗಾಹುತಿಯಾಗಿ ಧೂಮಾಗ್ನಿಯಲ್ಲಿ ಬೆರೆತಾಗ ಹಿತಕರವೂ, ಆರೋಗ್ಯಕರವೂ ಆದ ಸೌರಭವನ್ನು ಪಸರಿಸುತ್ತವೆ. ತನ್ನಲ್ಲಿ ಏನನ್ನು ಸುಟ್ಟುರೂ ಜೀರ್ಣಿಸಿಕೊಂಡು ಎಂದಿನಂತೆ ಪವಿತ್ರವಾಗಿ ಉಳಿಯುತ್ತಾನೆ ಹಾಗೂ ತನ್ನ ಸಂಪರ್ಕಕ್ಕೆ ಬಂದ ಎಲ್ಲವನ್ನೂ ಪವಿತ್ರಗೊಳಿಸುತ್ತಾನೆ ಎಂದೇ ಅಗ್ನಿಗೆ ’ಪಾವಕ’ ಎಂದು ಹೆಸರು.
"ತಮಸೋ ಮಾ ಜ್ಯೋತಿರ್ಗಮಯ" (ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ) ಎನ್ನುವುದು ಭಾರತೀಯರೆಲ್ಲರ ಸನಾತನ ಪ್ರಾರ್ಥನೆ. ಸದಾ ಜ್ಞಾನ ಹಾಗೂ ಸಂತೋಷಗಳತ್ತ ನಮ್ಮ ಗತಿ ಇರಲಿ ಎನ್ನುವ ಸಕಾರಾತ್ಮಕ ಹಾರೈಕೆ ಎದ್ದು ಕಾಣುತ್ತದೆ.
ಅಗ್ನಿಯ ಸಂದೇಶ - ದೀಪವನ್ನು ಹಿಡಿದು ಹೇಗೆ ಬೇಕಾದರು ತಿರುಗಿಸಿ, ಬಗ್ಗಿಸಿ, ಆದರೆ ಅದರ ಜ್ವಾಲೆಯು ಮಾತ್ರ ಸದಾ ಊರ್ಧ್ವಮುಖವಾಗಿಯೇ ನಿಲ್ಲುತ್ತದೆ! ಜೀವನವು ನಮ್ಮನ್ನು ಅದೆಷ್ಟೇ ಬಗ್ಗಿಸಿದರೂ ಉತ್ಸಾಹ ಹಾಗೂ ಊರ್ಧ್ವಪ್ರವೃತ್ತಿ ಕುಗ್ಗಬಾರದೆನ್ನುವ ಸಂದೇಶವನ್ನಿಲ್ಲಿ ಕಾಣಬಹುದು. ದೀಪದ ಬತ್ತಿ ಹಾಗೂ ಎಣ್ಣೆಗಳು ತಮ್ಮನ್ನು ತಾವೇ ಸಮರ್ಪಿಸಿಕೊಂಡು ಬೆಳಕನ್ನು ಕೊಡುತ್ತವೆ. ಸರ್ವಜನಹಿತಕ್ಕಾಗಿ ಮಹತ್ತ್ಯಾಗವನ್ನು ಮಾಡಿರಿ ಎನ್ನುವ ಸಂದೇಶವನ್ನೂ ಇಲ್ಲಿ ಕಾಣಬಹುದು. ಇನ್ನು ಜ್ಯೋತಿಯು ಎಂದೂ ಏಕಮುಖವಲ್ಲ, ಸರ್ವತೋಮುಖ. ಸಂಕುಚಿತವಾಗಿ ಬದುಕದೆ ತೆರೆದ ಮನಸ್ಸಿನಿಂದ ಸರ್ವರನ್ನೂ ಆದರಿಸುವ ಬದುಕನ್ನು ನಡೆಸಿರೆಂಬ ಸಂದೇಶವನ್ನಿಲ್ಲಿ ಕಾಣಬಹುದು.
ಹೀಗೆ ದಿನನಿತ್ಯವೂ ದೀಪವನ್ನು ಪೂಜಿಸುವ ನಾವು ದೀಪಾವಲೀ ಹಬ್ಬವನ್ನೇ ವಿಶೇಷವಾಗಿ ಆಚರಿಸುತ್ತೇವೆ. ಇಡಿಯ ಕಾರ್ತೀಕಮಾಸ ಮನೆಯಂಗಳದಲ್ಲಿ ದೀಪಗಳ ಸಾಲನ್ನು ಬೆಳಗುತ್ತೇವೆ. ಮಣ್ಣಿನ ಹಣತೆಗಳನ್ನೂ, ಕಾಗದದ ಹಾಗೂ ಬಟ್ಟೆಯ ತೂಗುದೀಪಗಳನ್ನೂ ಕಟ್ಟುತ್ತೇವೆ, ಸಿಹಿ ಹಂಚಿಕೊಂಡು ನಕ್ಕು ನಲಿಯುತ್ತೇವೆ, ಶುಭಕಾರ್ಯಗಳನ್ನು ಪ್ರಾರಂಭಿಸುತ್ತೇವೆ. ಊರು ಗ್ರಾಮ ಕೇರಿಗಳಲ್ಲಿ ಎಲ್ಲೆಲ್ಲೂ ಲಕ್ಷದೀಪೋತ್ಸವ, ದೀಪಾರತಿ, ದೀಪಪೂಜೆಗಳ ಸಂಭ್ರಮವೋ ಸಂಭ್ರಮ. ಇನ್ನು ದೀಪಾವಳೀ ಹಬ್ಬದ ಮೂರು ದಿನಗಳಲ್ಲಂತೂ ಬೆಳಕಿನ ಸಡಗರಕ್ಕೆ ಕೊನೆಮೊದಲೇ ಇಲ್ಲ! ಶ್ರೀಕೃಷ್ಣನು ನರಕಾಸುರನನ್ನು ಕೊಂದು ಸಂಕೇತವಾಗಿ ಬಣ್ಣಬಣ್ಣದ ಪಟಾಕಿಗಳನ್ನು ಸುಡುತ್ತೇವೆ, ವಾಮನಮೂರ್ತಿಯು ಬಲೀಂದ್ರನ ಮೂಲಕ ರಾಕ್ಷಸಶಕ್ತಿಯನ್ನು ದಮನ ಮಾಡಿದ ಸಂಕೇತವಾಗಿ ದೀಪಾಲಂಕಾರವನ್ನು ಮಾಡುತ್ತೇವೆ, ಧನಲಕ್ಷ್ಮಿ ಮೋಕ್ಷಲಕ್ಷ್ಮೀಪೂಜೆಗಳಲ್ಲಿ ಅಮಾವಾಸ್ಯೆಯನ್ನು ಬೆಳಕಿನಲ್ಲಿ ಮಿಂದೇಳುವಂತೆ ಮಾಡಿಬಿಡುತ್ತೇವೆ! ಪೈಶಾಚಿಕತೆಯ ನಾಶ ಹಾಗೂ ಅಜ್ಞಾನದ ನಿವಾರಣೆಗಳನ್ನು ಕೋರಿ ನಾವು ಆಚರಿಸುವ ಈ ಸುಂದರ ದೀಪಾವಳಿಪರ್ವ ಹಬ್ಬಗಳಲ್ಲೇ ಅತ್ಯಂತ ಜನಪ್ರಿಯವಾದದ್ದು. ಇಡಿ ಜಗತ್ತೇ ನಮ್ಮ ಭಾರತದ ದೀಪಾವಳಿ ಹಬ್ಬವನ್ನು ಮೆಚ್ಚುಗೆ ಕುತೂಹಲಗಳಿಂದ ಕಾಣುತ್ತದೆ! ಈಗೀಗಲಂತೂ ನಮ್ಮ ಹೋಳೀ, ದೀಪಾವಳಿ, ಬೊಂಬೆಹಬ್ಬ ಮುಂತಾದ ಹಬ್ಬಗಳ ಸಂಭ್ರಮ ಕಲಾತ್ಮಿಕತೆಗಳನ್ನೂ, ಯೋಗ, ಪ್ರಾಣಾಯಾಮ, ಧ್ಯಾನ ತೇರು ಮುಂತಾದ ಜನಪ್ರಿಯ ಅಂಶಗಳನ್ನು ಪರಮತಗಳೂ ತಮ್ಮೊಳಗೆ ’ಡೈಜೆಸ್ಟ್’ ಮಾಡಿಕೊಂಡು ಯುವಜನರನ್ನು ಆಕರ್ಷಿಸುವ ಉತ್ಸಾಹವನ್ನು ತೋರುತ್ತಿವೆ! ಅಂತೂ ಸಾತ್ವಿಕವಾದ ಸಂತೋಷ ಸಂಭ್ರಮಗಳ ಪರಿಯನ್ನು ಜಗತ್ತಿಗೆ ಕಲಿಸುವ ’ಗುರು’ತನದಲ್ಲಿ ಸನಾತನ ಸಂಸ್ಕೃತಿ ಹಿಂದೆಯೂ ಇಂದೂ ಎಂದೆಂದೂ ಮುಂದೇ!

ದೀಪಾವಳಿಯ ಮುದ್ದು ಹಣತೆಗಳ ಪ್ರಕಾಶವು ನಮ್ಮ ಮನೆಮನಗಳಲ್ಲಿನ ತಮಸ್ಸನ್ನು ನಾಶಗೈದು ಮುದವನ್ನೀಯಲಿ ಎಂದು ಹಾರೈಸೋಣ.

Published in Samyukta Karnataka 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ