ಶ್ರೀತ್ಯಾಗರಾಜ ಸ್ವಾಮಿ
ಉಪೋದ್ಘಾತ
ಪ್ರಾಮಾಣಿಕ
ಸಾಧಕನ ಪಾಲಿಗೆ ಸಕಲ ವಿದ್ಯಾಪ್ರಕಾರಗಳೂ,
ಕಾರ್ಯಕ್ಷೇತ್ರಗಳೂ ಮೋಕ್ಷಸಾಧಕಗಳೇ ಎನ್ನುವುದು ಸನಾತನ ಸಂಸ್ಕೃತಿಯ ನಂಬುಗೆ.
ಯಾವ ಪ್ರಾಪಂಚಿಕ ಲಾಭಗಳನ್ನರಸದೆ ಜ್ಞಾನೈಕಪ್ರೀತಿಗಾಗಿ ಶ್ರಮಿಸುವ ವಿದ್ಯಾರ್ಥಿಗೆ ಚಿತ್ತಶುದ್ಧಿ ಸ್ವತಃಸಿದ್ಧ. ಹೀಗಾಗಿ ಆತ ಯಾವ
ಮಾರ್ಗದಲ್ಲಿ ಪ್ರವರ್ತಿಸಿದರೂ ಮನೋನ್ನತಿ ಹಾಗೂ ನಿರ್ಲಿಪ್ತಿಗಳು ಉಂಟಾಗಿ
ಮೋಕ್ಷದೆತ್ತರಕ್ಕೆ ಏರುತ್ತ ಹೋಗುತ್ತಾನೆ. ಈ
ಸತ್ಯವನ್ನು ತಮ್ಮ ಜೀವನದಲ್ಲಿ ಕಂಡುಕೊಡವರು
ಸಂಗೀತಸಾರ್ವಭೌಮ ಸಂತ ತ್ಯಾಗರಾಜಸ್ವಾಮಿರವರು. ಅವರು
ಸಂಗೀತ ಕ್ಷೇತ್ರದ ದಿಗ್ಗಜರು, ಅಪ್ರತಿಮ ವಾಗ್ಗೇಯಕಾರೂ, ಸಂತರೂ
ಆಗಿ ಜನ್ಮಸಾರ್ಥಕ್ಯವನ್ನು ಪಡೆದವರು.
‘ವಿಜಯನಗರ
ಸಾಮ್ರಾಜ್ಯ’ವೆಂದೇ ಹೆಚ್ಚು ಪ್ರಸಿದ್ಧವಾದ ಕರ್ನಾಟ
ಸಾಮ್ರಾಜ್ಯದಲ್ಲಿ ತನ್ನ ಹೆಗ್ಗುರುತನ್ನು ಕಂಡುಕೊಂಡ
ದಾಕ್ಷಿಣಾತ್ಯ ಸಂಗೀತವು ಮುಂದೆ 'ಕರ್ನಾಟ
ಸಂಗೀತ' ಎಂದೇ ಹೆಸರಾಯಿತು. ಈ
ಪದ್ಧತಿಯ ಈಗಿನ ಸ್ವರೂಪದ ಮೂಲಪುರುಷರು
ಪ್ರಾತಃಸ್ಮರಣೀಯರಾದ
ಶ್ರೀವಿದ್ಯಾರಣ್ಯ
ಸ್ವಾಮಿಗಳು.
ಕರ್ನಾಟ
ಸಂಗೀತದ
ಪಿತಾಮಹರಾದ ಇವರು ತಮ್ಮ ಸಮಕಾಲೀನ
ಹಾಗೂ
ಪ್ರಾಚೀನ
ಸಂಗೀತ
ಪದ್ಧತಿಗಳ
ಸಂಶೋಧನೆ,
ಪುನರುಜ್ಜೀವನಗಳನ್ನು
ಭಾರೀ
ಪ್ರಮಾಣದಲ್ಲಿ
ಮಾಡಿಸಿದರು. ಅದರ ಸಲುವಾಗಿಯೇ ನೂರಾರು
ಸಂಗೀತ ಮತ್ತು ನೃತ್ಯ ಕಲಾವಿದರಿಗೂ,
ವಿದ್ವಾಂಸರಿಗೂ ಆಶ್ರಯವಿತ್ತರು. ತಮ್ಮ ಅಪ್ರತಿಮ ವೈದುಷ್ಯ,
ಪ್ರತಿಭೆ, ಕಾರ್ಯದಕ್ಷತೆ ಹಾಗೂ ನಾಯಕತ್ವದ ಅಡಿಯಲ್ಲಿ
ಭಾರತೀಯ ಧರ್ಮ, ಸಾಹಿತ್ಯ, ಕಲೆಗಳ
ಪುನರುಜ್ಜೀವನ ಹಾಗೂ ಸರ್ವತೋಮುಖ ಬೆಳವಣಿಗೆ
ತೀವ್ರಗತಿಯಲ್ಲಿ ಆಯಿತು. ಇದರಿಂದಾಗಿ ಕರ್ನಾಟಸಾಮ್ರಾಜ್ಯವೇ
ವಿದ್ಯೆ, ಕಲೆ, ಸಂಪತ್ತು, ಶಕ್ತಿ
ಹಾಗೂ ಸೌಹಾರ್ದತೆಗಳ ಬೀಡಾಯಿತು. ಈ ಕಾಲದಲ್ಲೇ ಕರ್ನಾಟ
ಶಾಸ್ತ್ರೀಯ ಸಂಗೀತದ ರೂಪ, ಸ್ವರೂಪ,
ವಿನ್ಯಾಸಗಳು, ಶೈಲಿ, ರಾಗ, ತಾಳ,
ವಾದ್ಯ, ಕಚೇರಿಧರ್ಮ ಮುಂತಾದ ಎಲ್ಲ ಅಂಶಗಳು
ವ್ಯವಸ್ಥಿತವಾಗಿ ರೂಪಗೊಂಡವು. ಇಂದಿಗೂ ನಾವು ಕಾಣುವ
ಕರ್ಣಾಟಸಂಗೀತದ ಪದ್ಧತಿ ಪರಂಪರೆಯ ಮೂಲಕ್ಕೆ
ಇದೇ ನಾಂದಿಯಾಯಿತು. ಪುರಂದರದಾಸಾದಿ
ವಾಗ್ಗೇಯಕಾರರೂ
ಈ ಭವ್ಯ ಕಲಾಪರಂಪರೆಯ ಫಲವಾಗಿ
ಮೈದಾಳಿದ
ಪ್ರತಿಭೆಗಳೆ.
ಆದರೆ ದೌರ್ಭಾಗ್ಯವಶಾತ್, ಕ್ರೂರ ಮುಸಲ್ಮಾನರ ಅಸಹಿಷ್ಣುತೆ,
ಮೋಸ, ವಂಚನೆಗಳ ಹೊಡೆತಕ್ಕೆ ಸಿಕ್ಕಿ,
ವಿದ್ಯಾನಗರ ಸಾಮ್ರಾಜ್ಯವು ತಾಳಿಕೋಟೆ ಯುದ್ಧದಲ್ಲಿ ಛಿನ್ನಗೊಂಡು ಅಳಿದುಹೋಯಿತು. ಆ ಬಳಿಕ ಅಲ್ಲಿನ
ಜನಜೀವನ, ಆರ್ಥಿಕ, ಸಾಮಾಜಿ, ರಾಜಕೀಯ
ವ್ಯವಸ್ಥೆಗಳಷ್ಟೇ ಅಲ್ಲದೆ, ಗುರುಕುಲಗಳು, ಶಿಕ್ಷಣ
ಪದ್ದತಿ, ಕಲೆ-ಕಾವ್ಯ ಪರಂಪರೆಗಳು,
ಕಲಾವಿದರ ಜೀವನ, ವೃತ್ತಿ, ಬದುಕು
ಎಲ್ಲವೂ ಅತಂತ್ರವಾಗಿ ಅವನತಿಯಪಡೇಯಿತು. ತಮ್ಮ ಶೀಲ, ಪ್ರಾಣ,
ವೃತ್ತಿ, ಮತ, ಧರ್ಮಗಳನ್ನು ಉಳಿಸಿಕೊಳ್ಳುವ
ಸಲುವಾಗಿ ಹಿಂಡು ಹಿಂಡಾಗಿ ಜನರು
ವಲಸೆ ಹೋದರು. ಆ ಸಂದರ್ಭದಲ್ಲಿ
ರಾಜಮನೆತನದವರಿಗಷ್ಟೇ ಅಲ್ಲದೆ, ಜನಸಾಮಾನ್ಯರಿಗೂ, ಕಲಾವಿದರಿಗೂ,
ವಿದ್ವಾಂಸರಿಗೂ ಆಶ್ರಯವಿತ್ತ ಔದಾರ್ಯ ತಂಜಾವೂರಿನ ಸಂಸ್ಥಾನಕ್ಕೆ
ಸಲ್ಲುತ್ತದೆ. ಹೀಗೆ ಕರ್ನಾಟ ಸಂಗೀತವು
ತನ್ನ ಹೊಸ ತವರನ್ನು ತಂಜಾವೂರಿನಲ್ಲಿ ಕಂಡುಕೊಂಡು. ಅಲ್ಲಿ ರಾಜಪೋಷಣೆಯಲ್ಲಿ ಸಾಕಷ್ಟು
ವೃದ್ಧಿ-ಅಭಿವೃದ್ಧಿಗಳನ್ನು
ಕಂಡಿತು.
ಅಲ್ಲಿ
ಹಲವು
ಪ್ರತಿಭೆಗಳನ್ನು
ಪೋಷಿಸಿ
ಬೆಳೆಸಿತು.
ಅಂತಹ
ಪ್ರಮುಖ
ಪ್ರತಿಭೆಗಳಲ್ಲಿ
ಒಬ್ಬರು
ತ್ಯಾಗರಾಜ
ಸ್ವಾಮಿಗಳು
ಎನ್ನಬಹುದು.
ಜೀವನ
ಶ್ರೀ ತ್ಯಾಗರಾಜರ ವೈಯಕ್ತಿಕ ಜೀವನದ ಬಗ್ಗೆ ಒಂದಿಷ್ಟು
ಮಾಹಿತಿ ಅವರ ಮಾತುಗಳಲ್ಲೂ ಹಾಗೂ
ಅವರ ಶಿಷ್ಯಪರಂಪರೆಯ ಮೂಲಕ ನಮಗೆ ಒದಗಿಬಂದಿದೆ.
ಇವರದು ಭಾರದ್ವಾಜಸ
ಗೋತ್ರ,
ತೆಲುಗು
ಸ್ಮಾರ್ತ
ಬ್ರಾಹ್ಮಣ
ಕುಟುಂಬ,
ಇವರು
ಹುಟ್ಟಿದ್ದು
ಸರ್ವಜಿತ
ನಾಮ
ಸಂವತ್ಸರದಲ್ಲಿ,
ಚೈತ್ರಶುಕ್ಲಸಪ್ತಮಿ,
ಸೋಮವಾರದಂದು.
ಆಂಗ್ಲ ಲೆಕ್ಕಾಚಾರದ ಪ್ರಕಾರ ೪ನೆ ಮೇ
೧೭೬೭ರಲ್ಲಿ, (ಕೆಲವರು ೧೭೬೯ ಎಂದೂ
ಅಭಿಪ್ರಾಯ ಪಡುತ್ತಾರೆ) ಇವರ ಹುಟ್ಟೂರು ಚೋಳಸೀಮೆಯಾಗಿದ್ದ
ತಮಿಳುನಾಡಿನ
ತಿರುವಾರೂರು
ಜಿಲ್ಲೆಯಲ್ಲಿರುವ
'ಪಂಚನದ-ಕ್ಷೇತ್ರ'ವೆನಿಸಿದ
ತಿರುವಯ್ಯಾರು.
ಕ್ಷೇತ್ರ ದೇವತೆಯಾದ ತ್ಯಾಗರಾಜಸ್ವಾಮಿಯ ಹೆಸರನ್ನೇ ಇವರಿಗೂ ಇಡಲಾಯಿತು. ತಂದೆ ಕಾಕರ್ಲ ರಾಮಬ್ರಹ್ಮ,
ತಾಯಿ
ಸೀತಮ್ಮ.
(ಒಂದು ಅಭಿಮತದ ಪ್ರಕಾರ ಅವರು
ವೀಣಾ ಕಾಲಹಸ್ತಯ್ಯನವರ ಮೊಮ್ಮಗ).
ಬಾಲ್ಯದಿಂದಲೇ
ಉತ್ತಮ ವಿದ್ಯಾಭಾಸದ ಪ್ರಾಪ್ತಿ ಇವರಿಗಾಯಿತು. ವೇದಾಧ್ಯಯನ,
ವೇದಾಂತ
ಹಾಗೂ
ಹಲವು
ಶಾಸ್ತ್ರಗಳ
ಅಧ್ಯಯನ ಮಾಡಿದರು. ಕಾವ್ಯಶಾಸ್ತ್ರ, ಅಲಂಕಾರಶಾಸ್ತ್ರ
ಹಾಗೂ
ಛಂದಸ್ಸುಗಳು
ಇವರಿಗೆ ಕರಗತವಾಗಿರುವುದು ಇವರ ಕೃತಿಗಳಿಂದಲೇ ಸ್ಪಷ್ಟವಾಗುತ್ತದೆ.
ಸಂಸ್ಕೃತ,
ತೆಲುಗು
ಹಾಗೂ
ತಮಿಳು
ಭಾಷೆಗಳಲ್ಲಿ
ಪರಿಣತಿ
ಪಡೆದರು. 'ಅತುಕಾರಾದನಿ-----' ಎಂಬ ಕೃತಿಯಲ್ಲಿ ತಮ್ಮನ್ನು
ತಾವೇ 'ವೇದಶಾಸ್ತ್ರೋಪನಿಷದ್ ವಿದುಡೈನ---' ಎಂದು ಹೇಳಿಕೊಳ್ಳುತ್ತಾರೆ. ಜೊತೆಗೆ
ಚಿಕ್ಕ ವಯಸ್ಸಿನಲ್ಲೇ ಸೊಂಟಿ
ಸುಬ್ಬಣ್ಣರ
ಮಗನಾದ
ಸೊಂಟಿ
ವೇಂಕಟರಾಮಯ್ಯನವರಿಂದ
ಸಂಗೀತ
ಶಿಕ್ಷಣವಾಯಿತು. ಸೊಂಟಿ ಸುಬ್ಬಣರ
ಸಂಗೀತವು 'ಒಣಗಿದ ಮರವನ್ನೂ ಚಿಗುರಿಸಬಲ್ಲುದಾಗಿತ್ತೆಂದು'
ಸಮಕಾಳೀನ ಸಂಸ್ಕೃತ ಗ್ರಂಥ 'ಸರ್ವದೇವವಿಲಾಸ'
ಉಲ್ಲೇಖಿಸುತ್ತದೆ. ಅಂತಹವರ ಸಂಗೀತಪರಂಪರೆಯಲ್ಲಿ ಪಳಗಿದ
ಹೆಗ್ಗಳಿಕೆ ಇವರದು. ಜೊತೆಗೆ ಆಗಾಗಲೇ
ಪ್ರಖ್ಯಾತವಾಗಿದ್ದ ಕ್ಷೇತ್ರಜ್ಞ, ನಾರಾಯಣತೀರ್ಥ ಹಾಗೂ ವೀರಭದ್ರಯ್ಯಾದಿ ದಿಗ್ಗಜರ
ಕೃತಿಗಳ ಪರಿಚಯ ಆಸ್ವಾದ ಅವರಿಗಾಯಿತು.
ತಂಜಾವೂರಿನ ಶ್ರೀಮಂತ ಸಂಗೀತ ಪರಿಸರ
ಅವರ ಕಲಾಭಿಜ್ಞತೆಯನ್ನೂ ಆ ನಿಟ್ಟಿನಲ್ಲಿ ಅವರ
ಸಾಧನೆಯನ್ನು ಪೋಷಿಸಿತೆನ್ನಬಹುದು.
ತ್ಯಾಗರಾಜರ
ಇಷ್ಟದೈವ
ಶ್ರೀರಾಮಚಂದ್ರ.
ಅವರ ಧ್ಯಾನ, ಭಕ್ತಿ, ಸರಸತೆ,
ಸಮರ್ಪಣೆ ಎಲ್ಲವೂ ಶ್ರೀರಾಮನಲ್ಲೇ. ರಾಮನೊಂದಿಗೆ
ಅವರು ಎಂತಹ ಭಾವೈಕ್ಯವನ್ನು, ಆತ್ಮೀಯ
ಭಕ್ತಿಭಾವವನ್ನು ಹೊಂದಿದ್ದರು ಎನ್ನುವುದು ಅವರ ಕೃತಿಗಳಲ್ಲಿ ಪ್ರತಿಬಿಂಬಿತವಾಗುತ್ತದೆ.
ರಾಮನೊಂದಿಗೆ ಸರಸವಾಡುವುದೇನು, ಸ್ನೇಹ-ಕಲಹಕ್ಕೆ ಇಳಿಯುವುದೇನು,
ಕಾಡಿ-ಬೇಡುವುದೇನು, ಪ್ರಶ್ನಿಸುವುದೇನು, ಮುದ್ದುಮಾಡುವುದೇನು, ಉಪಚರಿಸುವುದೇನು, ಹೊಗಳುವುದೇನು, ಮೂದಲಿಸುವುದೇನು! ಅಂತೂ ಇವರ ಕೃತಿಗಳಲ್ಲಿ
ರಾಮಪ್ರೇಮವು ನವರಸಗಳಲ್ಲಿ ಮುಳುಗೆದ್ದು ನಲಿದಾಡುತ್ತ ಧಾರೆಯಾಗಿ ಸಾಗುತ್ತದೆ.
ತ್ಯಾಗರಾಜರು
ಪಾರ್ವತೀ ಎಂಬಾಕೆಯನ್ನು ಮದುವೆಯಾದರಂತೆ. ಆದರೆ ಆಕೆ ಚಿಕ್ಕ
ವಯಸ್ಸಿನಲ್ಲೇ ತೀರಿಕೊಂಡಾಗ ಆಕೆಯ ತಂಗಿ ಕನಕಾಂಬಾಳ್ ಎಂಬಾಕೆಯನ್ನು
ವರಿಸಿ
ಸೀತಾಲಕ್ಷ್ಮೀ
ಎನ್ನುವ
ಮಗಳನ್ನೂ
ಪಡೆದರು.
(ಮುಂದೆ ಈ ಸೀತಾಲಕ್ಷ್ಮಿಯು ಅಮ್ಮಾಳ್
ಅಗ್ರಹಾರಂ ಎಂಬ ಊರಿನ ಕುಪ್ಪುಸ್ವಾಮಿ
ಎನ್ನುವವನ ಮಡದಿಯಾಗಿ ತ್ಯಾಗರಾಜ ಎನ್ನುವ ಮಗನಿಗೆ ಜನ್ಮವಿತ್ತಳಂತೆ.
ಈ ತ್ಯಾಗರಾಜನು ಗುರುವಮ್ಮಾಳ್
ಎಂಬಾಕೆಯನ್ನು ವರಿಸಿದರೂ ಸಂತಾನಹೀನನಾಗಿ ಅಳಿದದ್ದರಿಂದ ಶ್ರೀತ್ಯಾಗರಾಜರ ವಂಶ ಅಲ್ಲಿಗೆ ಮುಗಿಯಿತು).
ಶ್ರೀ ತ್ಯಾಗರಾಜರ ಪತ್ನಿ ಸಾಧ್ವಿಯಾಗಿದ್ದು, ಗಂಡನ
ಆಧ್ಯಾತ್ಮಿಕ ಪ್ರವೃತ್ತಿಗೆ ಒಗ್ಗಿ ಕೊಂಡಾಕೆ. ತ್ಯಾಗರಾಜರು
ಗೃಹಸ್ಥರಾದರೂ ಸರಳ ಸಾತ್ವಿಕ ಜೀವನ
ನಡೆಸಿದರು. ಅವರದು ಊಂಚವೃತ್ತಿಯ ಬದುಕು.
'ಊಂಚವೃತ್ತಿ' ಎಂದರೆ 'ಯಾವ ಉದ್ಯೋಗದಲ್ಲೂ
ತೊಡಗದೆ, ಹಣ ಸಂಪಾದಿಸದೆ, ಮಧುಕರಿ
ಭಿಕ್ಷೆಯಿಂದ ಜೀವಿಸುವ ಜನ್ಮವ್ರತ. ಈ
ವ್ರತವನ್ನು ಪಾಲಿಸುವ ಗೃಹಸ್ಥರು 'ಯಾಯಾವಾರ'ರೆನಿಸುತ್ತಾರೆ. ವೇದ, ಪುರಾಣಕಾಲದಿಂದ ಹಿಡಿದು
ಇತ್ತೀಚಿನ ಇತಿಹಾಸದವರೆಗೂ ಹಲವು ಸಾಧಕ ಮನೋಭಾವದ
ಗೃಹಸ್ಥರು ಈ ವ್ರತವನ್ನು ಕೈಗೊಂಡ
ಉದಾಹರಣೆಗಳುಂಟು. ಇಂದಿಗೂ ಅಂತಹವರು ವಿರಳರಾದರೂ
ಇಲ್ಲದಿಲ್ಲ. ಪುರಂದರದಾಸಾದಿಗಳು 'ದಾಸತ್ವ' ಎಂಬ ಹೆಸರಿನಲ್ಲಿ
ಪಾಲಿಸಿದ್ದೂ ಈ ಊಂಚವೃತ್ತಿಯನ್ನೇ. ಅಂದಂದಿನ
ಆಹಾರವನ್ನು ಅಂದಂದೆ ಮಿತವಾಗಿ ಮಡೆದು,
ಮರು ದಿನಕ್ಕಾಗಿ ಒಂದಿಷ್ಟನ್ನೂ ಸಂಚಯ ಮಾಡದೆ, ಪಡೆದ
ಧಾನ್ಯವನ್ನೇ ಅಡುಗೆ ಮಾಡಿ, ಭಾಗಶಃ
ಅತಿಥಿ-ಸತ್ಕಾರಕ್ಕೆ ವಿನಿಯೋಗಿಸಿ ಆ ಬಳಿಕ ತಾವು
ಸೇವಿಸುವುದು ಊಂಛವೃತ್ತಿಯ ರೀತಿ. ಇದನ್ನು ಕೈಗೊಳ್ಳಲು
ಅಪಾರವಾದ ಮನಃಶಕ್ತಿ, ವಿರಕ್ತಿ ಹಾಗೂ ನಿಃಸ್ಪೃಹತೆಗಳು
ಅಗತ್ಯ. ಸದಾ ವಸ್ತುಸಂಗ್ರಹ, ಧನಸಂಚಯ,
ವಿಲಾಸ ಚಪಲಗಳಲ್ಲೆ ಮೈಮರೆಯುವ ಸಾಮಾನ್ಯರು ಊಹಿಸಲೂ ಆಗದಷ್ಟು ಕಷ್ಟಕರ
ಈ ವ್ರತ! ತ್ಯಾಗರಾಜರು
ಪ್ರತಿದಿನ ರಾಮನಾಮವನ್ನು ಮಧುರವಾಗಿ ಹಾಡುತ್ತ ಮಧುಕರಿ ಭಿಕ್ಷೆಗೆ
ಹೋಗುತ್ತಿದ್ದರು. ಏನು ಸಿಕ್ಕರೆ, ಎಷ್ಟು
ಸಿಕ್ಕರೆ ಅಷ್ಟರಿಂದಲೇ ತೃಪ್ತರಾಗಿ ಹಿಂದಿರುಗುತ್ತಿದ್ದರು.
ತ್ಯಾಗರಜರು
ಮನೆಯಲ್ಲಿ
ರಾಮಚಂದ್ರ
ಮೂರ್ತಿಯನ್ನು
ಪ್ರತಿಷ್ಠಾಪಿಸಿ
ಪೂಜೆಗೈಯುತ್ತಿದ್ದರು.
ಅವರ ಪಾಲಿಗೆ ಅದು ಕೇವಲ
ಲೋಹಾ ಮೂರ್ತಿಯಾಗಿರದೆ, ಸಾಕ್ಷಾತ್ ರಾಮನ ದಿವ್ಯಸನ್ನಿಧಿಯಾಗಿತ್ತು. ರಾಮನೆದುರು ಕುಳಿತು
ಹಗಲು ರಾತ್ರಿ ಉಪಚಾರ ವುದೇನು! ತಿನ್ನುಸುವುದೇನು, ಹಾಡುವುದೇನು,
ಮಲಗಿಸುವುದೇನು, ತಾಂಬೂಲ ಕೊಡುವುದೇನು, ಸುಖ-ದುಃಖ ವಿಚಾರಿಸುವುದೇನು, ಸ್ತುತಿಸುವುದೇನು!
ತಮ್ಮದೇ ಭಾವಭಕ್ತಿಗಳ ಲೋಕದಲ್ಲಿ ಮೈಮರೆತರು ತ್ಯಾಗರಾಜರು. ತಮ್ಮ ವೈದುಷ್ಯ, ಪ್ರತಿಭೆಗಳನ್ನು,
ಆಯಸ್ಸು, ಶಕ್ಕ್ತಿ ಸಮಯ, ಭಾವಗಳನ್ನೆಲ್ಲ
ಶ್ರೀರಾಮನಲ್ಲೇ ಅರ್ಪಿಸಿಕೊಂಡರು. ಐಹಿಕ ಭೋಗ, ಭಾಗ್ಯ,
ಸಾಂಸಾರಿಕ ವಾಸನೆಗಳೆಲ್ಲ ಅವರಿಂದ ಕಲಚಿ ಹೋದವು. ರಾಮದರ್ಶನದ ಹಂಬಲ,
ಯೋಗ
ಸಾಧನೆ
ಹಾಗೂ
ಸಂಗೀತ
ಸೇವೆಗಳೆ
ಅವರ
ಉಸಿರಾದವು.
ಜೀವನದುದ್ದಕ್ಕೂ
ಸರಳತೆ,
ನಿಃಸ್ಪೃಹತೆಗಳನ್ನೇ
ಮೆರೆದ ತ್ಯಾಗರಾಜರು "ಕಟ್ಟುಜೇಸಿನಾವು---" ಎಂಬ ಕೃತಿಯಲ್ಲಿ ತಮ್ಮನ್ನು
ತಾವೇ 'ನಿಷ್ಕಾಮ ತ್ಯಾಗರಾಜ' ಎಂದು
ಕರೆದುಕೊಳ್ಳುತ್ತಾರೆ. ಪರಮ ಸಾತ್ವಿಕ ಸ್ವಭಾವದ
ಅವರು ಕೋಪ, ನಿಂದೆ, ಉದ್ವಿಗ್ನತೆ,
ಆಸೆ. ಪೈಪೋಟಿ, ದರ್ಪಗಳಿಗೆ ಎಂದು
ಬಲಿಯಾಗಲಿಲ್ಲ. ಆದರೆ ಯಾವ ಪ್ರಯತ್ನವಿಲ್ಲದೆ,
ಪ್ರಚಾರವಿಲ್ಲದೆ ಅವರ ಸಂಗೀತ ವೈದುಷ್ಯ
ನಾಡಿನಲ್ಲೆಲ್ಲ ವಿಖ್ಯಾತವಾಗುತ್ತ ಬಂದಿತು. ಅವರನ್ನು ತಾವಾಗಿ
ಅರಸಿ ಬಂದ ಮನ್ನಣೆ, ಧನಕನಕಗಳೆಷ್ಟೊ!
ತಂಜಾವೂರಿನ ರಾಜಸಂಸ್ಥಾನದಿಂದಲೇ ಆಹ್ವಾನವೂ ತಾನಾಗಿ ಅರಸಿ ಬಂದಿತು.
ಆದರೂ ತ್ಯಾಗರಾಜರು ಅದನ್ನೂ ಮರುಯೋಚನೆಯಿಲ್ಲದೆ ನಿರಾಕರಿಸಿದರು.
'ನಿಧಿ ಕಾಲ ಸುಖಮಾ ರಾಮುನಿ
ಸನ್ನಿಧಿ ಸೇವ ಸುಖ ಮಾ
ನಿಜಮುಗ ಪಲುಕವೇ ಓ ಮನಸಾ'
ಎಂದು ಆತ್ಮನಿರೀಕ್ಷಣೆ ಮಾಡಿಕೊಂಡರು! ಶುದ್ಧ ಕಲಾಪ್ರೀತಿಗಾಗಿ ಹಾಗೂ
ರಾಮಭಕ್ತಿಗಾಗಿ ಮಾತ್ರ ತನ್ನ ಸಂಗೀತವನ್ನು
ಮೀಸಲಿಟ್ಟರು.
ಆದರೆ ತಾನಾಗಿ ಅರಸಿ ಬಂದ
ಭಾಗ್ಯಗಳನ್ನು ಹೀಗೆ ನಿರಾಕರಿಸುವುದು ತ್ಯಾಗರಾಜರ
ಅಣ್ಣನಾದ ಜಪ್ಯೇಸನಿಗೆ ಇಷ್ಟವಾಗಲಿಲ್ಲ. ತಮ್ಮನಿಗೆ ಬಗೆ ಬಗೆಯಾಗಿ ತಿಳಿಹೇಳಿ,
ಬಲವಂತ ಮಾಡಿ, ಬೈದು ಹಿಂಸೆಗೈದನಂತೆ.
ಆದರೆ ತ್ಯಾಗರಾಜರು ಮಾತ್ರ ಜಗ್ಗಲಿಲ್ಲ. ವಿರಕ್ತಿಗೆ
ಒಲಿದ ತ್ಯಾಗಯ್ಯರ ಮನಸ್ಸಿಗೆ
ಬಡತನವೇ ಆನಂದ, ಹಾಯಿಯೆನಿಸಿತು. ರಾಜಾಹ್ವಾನವನ್ನು
ಮನ್ನಿಸಿದ ಮೇಲೆ ಧನ-ಕನಕ,
ಸ್ಥಾನ-ಮಾನಗಳು ಬರುವುದರ ಜೊತೆಗೆ
ರಾಜಮರ್ಯಾದೆಯ ಕಟ್ಟಲೆಗಳು, ಆಸ್ಥಾನ ವಿದ್ವಾಂಸರ ಪೈಪೋಟಿ,
ಉಸಿರು ಗಟ್ಟಿಸುವ ರಾಜಕೀಯ ನಿರ್ಬಂಧಗಳು ಹಾಗೂ
ಸರಳತೆ ತಪೋನಿಷ್ಟೆಗಳಿಗೆ ಆಗಬಹುದಾದ ಧಕ್ಕೆಗಳನ್ನು ತ್ಯಾಗರಾಜರು ಚೆನ್ನಾಗಿ ಅರಿತಿದ್ದರು. ಹಾಗಾಗಿ ಮಹಾ ಕಲಾಪೋಷಕರು
ಆಗಿದ್ದ, ತಮಗೆ ತುಂಬ ಪರಿಚಿತರೂ
ಆಗಿದ್ದ ತಂಜಾವೂರಿನ ರಾಜಮನೆತನದವರೇ ಆಹ್ವಾನಿಸಿದರೂ ತ್ಯಾಗರಾಜರು ಅದಕ್ಕೆ ಒಪ್ಪಲಿಲ್ಲ, ಸರ್ವತಂತ್ರ ಸ್ವತಂತ್ರರಾಗಿ
ಉಳಿಯ
ಬಯಸಿದರು.
ಆದರೆ ತ್ಯಾಗರಾಜರು ಊರ ಉತ್ಸವಗಳಲ್ಲಿ, ಹಬ್ಬಗಳಲ್ಲಿ,
ಪೂಜೆ
ಕೈಂಕರ್ಯಗಳಲ್ಲಿ
ಉತ್ಸಾಹದಿಂದ
ತಮ್ಮ
ಸಂಗೀತ
ಸೇವೆಯನ್ನು
ಸಲ್ಲಿಸುವುದನ್ನಂತೂ ಬಿಡಲಿಲ್ಲ.
ಅಣ್ಣ ಜಪ್ಯೇಸನು ಪ್ರಾಪಂಚಿಕ ಸ್ವಭಾವದವನು, ತ್ಯಾಗರಾಜರಾದರೋ ವೈರಾಗ್ಯ ಭಾವದವರು. ಸಹಜವಾಗಿ
ಇಬ್ಬರಿಗೂ ಹೊಂದಿಕೆಯಾಗುತ್ತಿರಲಿಲ್ಲ. ಅಣ್ಣನ ಉದ್ಧಟತನ, ಆಗ್ರಹಗಳಿಂದಾಗಿ
ತ್ಯಾಗರಾಜರಿಗೆ ಹಿಂಸೆಯಾಗುತ್ತಿತ್ತು ಎನ್ನುವುದು ಅವರ ಕೆಲವು ಮಾತುಗಳಲ್ಲೇ
ಸೂಚಿತವಾಗಿವೆ- (ನಾ ಪೂರ್ವಜ ಬಾಧ
ದೀರ್ಪಲೇದಾ----) ವಾಲಿಯಿಂದ ಸುಗ್ರೀವನಿಗೆ ಬಾಧೆಯಾದಾಗ ರಾಮನು ಅವನಿಗೆ ಸಹಾಯವನ್ನಿತ್ತ
ವಿಷಯವನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ
(ಮುನ್ನ ರಾವಣ---). "ಪಲುಕವೇಮಿ-----" ಕೃತಿಯಲ್ಲಿ ತಾಯ್ತಂದೆಯರ ಹೊರತು ಎಲ್ಲರು ತಮಗೆ
ಬಾಧೆಯಿತ್ತರು ಎಂದು ಹೇಳಿಕೊಳ್ಳುತ್ತಾರೆ ('ತಕ್ಕಿನವಾರಲೆಂತೋ
ಹಿಂಸಿಂಚಿರಿ--). "ಎಟುಲ
ಗಾಪಾಡುದುವೋ--",
"ತೊಲಿಜೇಸಿನ---"
"ನಾಯೆದ ವಂಚನ" ಮುಂತಾದ ಕೃತಿಗಳಲ್ಲಿ ಇತರ
ದಾಯಾದಿಗಳ ಕಾಟವನ್ನು ಪ್ರಸ್ತಾಪಿಸುತ್ತಾರೆ (ದಾಯಾದುಲ ಪೊರೈನಗಾನಿ ದಾಸುಡನೈ
ವೇಡುಕೊನ್ನ---)
ಒಲಿದು ಬಂದ ರಾಜಮನ್ನಣೆ, ಐಶ್ವರ್ಯಗಳನ್ನು
ಧಿಕ್ಕರಿಸಿದ ತ್ಯಾಗರಾಜರ ರಾಮಭಕ್ತಿ ಸ್ವಲ್ಪ 'ಅತಿ' ಆಯಿತು
ಎನಿಸಿತು ಜಪ್ಯೇಸನಿಗೆ. ಆ 'ಹುಚ್ಚ;ನ್ನು
ಬಿಡಿಸಲೋಸುಗ ಆತ ತ್ಯಾಗರಾಜರ ಉಪಾಸನೆಯ
ರಾಮಚಂದ್ರನ ವಿಗ್ರಹವನ್ನು ಕಾವೇರಿನದಿಯೊಳಗೆ ಎಸೆದುಬಿಟ್ಟನಂತೆ. ತನ್ನ ಪ್ರಾಣಪ್ರಿಯ ಮೂರ್ತಿ
ಕಾಣೆಯಾದಾಗ ಹಂಬಲಿಸಿ ಅತ್ತು ಹೊರಳಾಡಿದರಂತೆ
ತ್ಯಾಗರಾಜರು. ಈ ಕಾಲದಲ್ಲಿ ಅವರಿಂದ
ಹೊಮ್ಮಿದ ಕೃತಿಗಳಲ್ಲಿ ಕರುಣಾಭಾವ, ಆರ್ದ್ರತೆಗಳು ಎದ್ದುಕಾಣುತ್ತವೆ (ನೇನೆಂದು ವೆದಕುತುರಾ---, ಮರುಗೇಲರಾ
ಓ ರಾಘವಾ----, ಇತ್ಯಾದಿ
ಕೃತಿಗಳು). ದೀರ್ಘಕಾಲ ರಾಮ ವಿರಹದಲ್ಲಿ ಬಳಲಿದರು.
ಬೇಸಿಗೆ ಬಂದು ಕಾವೇರಿ ನೀರು
ಬತ್ತಿದಾಗ, ನದಿಯ ತಳದಲ್ಲೆಲ್ಲ ಹಗಲೂ
ರಾತ್ರಿ ಹುಡುಕಾಡಿ ಕೊನೆಗೂ ರಾಮನ ಮೂರ್ತಿಯನ್ನು
ಕಂಡುಕೊಂಡರಂತೆ. ಅಣ್ಣನ ಕಾಟ ತಾಳಲಾಗದೆ
ಮನೆಯನ್ನೇ ಇಬ್ಭಾಗ ಮಾಡಬೇಕಾಯಿತಂತೆ. "ನಾದುಪೈ----" ಎಂಬ
ಕೃತಿಯಲ್ಲಿ ಮನೆಯನ್ನು ಇಬ್ಭಾಗ ಮಾಡಲಾದ ವಿಷಯವನ್ನು
ನೋವಿನಿಂದ ಹೇಳಿಕೊಳ್ಳುತ್ತಾರೆ. ಆದರೆ ಕೊನೆಗೂ ರಾಮನ
ನಿತ್ಯೋತ್ಸವವನ್ನು ಆಚರಿಸಲು ಅದು ಅನುವಾಯಿತು
ಎಂದೂ ಹೇಳಿಕೊಳ್ಳುತ್ತಾರೆ. ಸಂಸಾರದ ಕಹಿ ಕಲಹಗಳು
ತ್ಯಾಗರಾಜರನ್ನು ಮತ್ತಷ್ಟು ಅಂತರ್ಮುಖಗೊಳಿಸ್ದವು. ತಮ್ಮ ನೋವನ್ನು, ಜುಗುಪ್ಸೆಯನ್ನು
ಅಲ್ಲಿಲ್ಲಿ ತಮ್ಮ ಕೃತಿಗಳಲ್ಲಿ ಹೇಳಿಕೊಂಡರೂ,
ಅದನ್ನೆಲ್ಲ ಪ್ರಾರಬ್ಧ, ಅದೆಲ್ಲ ತಾತ್ಕಾಲಿಕ, ರಾಮಭಕ್ತಿಯೊಂದೆ
ನಿತ್ಯ, ಸತ್ಯ, ಎಂದು ತಮಗೆ
ತಾವೆ ಬೋಧಿಸಿಕೊಳ್ಳುವುದು ಕಾಣುತ್ತದೆ.
ತ್ಯಾಗರಾಜರ
ಕೃತಿಗಳಲ್ಲಿ ಭಾವ, ರಾಗ. ರಸ
ಹಾಗೂ ವಸ್ತುಗಳಲ್ಲಿ ವೈವಿಧ್ಯಗಳು ಕಾಣಬರುತ್ತವೆ. ಅವರು
ಯಾವ ಕ್ಷೇತ್ರಕ್ಕೆ ಹೋದರೂ ಅಲ್ಲಿನ
ಆರಾಧ್ಯ ದೇವತೆಯ ವಿಶಿಷ್ಟ
ರೂಪ,
ವಿಭವಗಳನ್ನು
ಗುರುತಿಸಿ
ಎದೆತುಂಬಿ
ಹಾಡುತ್ತಿದ್ದರು,
ಅಲ್ಲೇ
ಕೃತಿರಚನೆ
ಮಾಡುತ್ತಿದ್ದರು.
ಹಲವರು ಊರುಗಳಿಂದ ತ್ಯಾಗರಾಜರಿಗೆ ಆಹ್ವಾನಗಳು ಬಂದವು. ತಮ್ಮ ಜೀವನದ
ನಂತರದ ಕಾಲದಲ್ಲಿ ಅವರು ತಿರುವಯ್ಯಾರುವಿನಿಂದ ಉತ್ತರದ
ತಿರುಪತಿಯವರೆಗೂ ದಕ್ಷಿಣದ ಲಾಲಗುಡಿಯವರೆಗೂ ದೀರ್ಘಕಾಲದ
ತೀರ್ಥಯಾತ್ರೆ ಕೈಗೊಂಡರು. ಅವರು ಹೋದಲ್ಲೆಲ್ಲ ಆಯಾ
ಕ್ಷೇತ್ರದೇವತೆಗೆ ಒಂದು ಹೊಸಕೃತಿಯನ್ನು ರಚಿಸಿ
ಸಮರ್ಪಿಸುತ್ತಿದ್ದರು.
ತಿರುಪತಿಯಲ್ಲಿ
ಇನ್ನೇನು ದೇವರ ದರ್ಶನ ಮಾಡಬೇಕು
ಎನ್ನುವಾಗ ಪರದೆ ಹಾಕಿ ಬಿಟ್ಟರಂತೆ.
ಆಗ ಅಲ್ಲೇ ಆಶುವಾಗಿ "ತೆರತೀಯಗರಾದ-----"
ಎಂಬ ಕೃತಿಯನು ರಚಿಸಿದರಂತೆ. ಇಲ್ಲಿ
'ತೆರ' ಎನ್ನುವಾಗ ಕೇವಲ ಬಟ್ಟೆಯ ಪರದೆಯಲ್ಲ,
ಬದಲಾಗಿ 'ತಮ್ಮ ಮನಸ್ಸಿನ ಕಾಮ,
ದರ್ಪ, ಮಾತ್ಸರ್ಯಾದಿಗಳ ಪರದೆಯನ್ನು ಸರಿಸಿ ದರ್ಶನವೀಯಬಾರದೆ ವೇಂಕಟೇಶ್ವರ?'
ಎಂದು ಶ್ಲೇಷಾರ್ಥವನ್ನು ಬಳಸಿ ಹಾಡುತ್ತಾರೆ. ಮದ್ರಾಸು
ಹಾಗೂ ಸುತ್ತಲ ಪ್ರದೇಶಗಳಲ್ಲಿ ಸಂಚರಿಸುತ್ತ
ಅಲ್ಲಿದ್ದ ತಮ್ಮ ಗುರು ಸೊಂಟಿ
ವೇಂಕಟರಾಮಯ್ಯ, ದೊರೆಸ್ವಾಮಿ ಹಾಗೂ ರಾಮಸ್ವಾಮಿ ದೀಕ್ಷಿತರ್
ಮುಂತಾದ ಹಲವು ಘನವಿದ್ವಾಂಸರನ್ನು ಭೇಟಿಯಿತ್ತರು.
ಕೊವ್ವೂರಿಗೆ ಭೇಟಿಯಿತ್ತು ಅಲ್ಲಿನ ಕ್ಷೇತ್ರದೇವತೆ ಸುಂದರೇಶ್ವರನ
ಕುರಿತಾಗಿ ಪಂಚರತ್ನಗಳನ್ನು ರಚಿಸಿದರು. (ಶಂಭೋ ಮಹಾದೇವ---, ವಸುಧಾ
ನೀವಂಟಿ--- ಇತ್ಯಾದಿ) ತಿರುವೊಟ್ಟಿಯೂರಿನ ತ್ರಿಪುರಸುಂದರಿಯನು ಕುರಿತು "ಸುಂದರಿ ನೀ ದಿವ್ಯ
ರೂಪಮುನು--- ಎಂಬ ಕೃತಿಯನ್ನು ರಚಿಸಿದರು.
ಕಂಚೀ ಕ್ಷೇತ್ರದಲ್ಲಿದ್ದ ಸಂನ್ಯಾಸಿ ರಾಮಭಕ್ತರಾದ ಶ್ರೀ ಉಪನಿಷದ್ ಬ್ರಹಂ
ಎನ್ನುವವರು ತ್ಯಾಗರಾಜರಿಗೆ 'ಶ್ರೀಮುಖ ಆಹ್ವಾನ ಪತ್ರಿಕೆ'ಯನ್ನು ಕಳುಹಿದ್ದರು (ಅದು
ಇಂದಿಗೂ ಸಂರಕ್ಷಿಸಲ್ಪಟ್ಟಿದೆ). ಕಂಚಿಯಲ್ಲಿದ್ದಾಗ "ವರದರಾಜ ನಿನ್ನು ಕೋರಿ---"
ವಿನಾಯಕುನಿ---" ಹಾಗೂ ಕಾಮಾಕ್ಷೀ--- ಮುಂತಾದ
ಕೃತಿಗಳನ್ನು ರಚಿಸಿದರು.
ಬ್ರಹ್ಮಪುರಿಯ
ಸುಬ್ರಹ್ಮಣ್ಯನ ಕುರಿತಾಗಿ "ನೀವಂಟಿ ದೈವಮು---"., ನೇಗಪಟಂನಲ್ಲಿನ
ದೇವಿಯ ಕುರಿತಾಗಿ "ನೀಲಾಯತಾಕ್ಷಿ---" ಹಾಗೂ ಚೂತಾಮು ರಾವೇ---"
, ಶ್ರೀರಂಗಂನ ರಂಗನಾಥನ ಕುರಿತಾಗಿ "ಓ
ರಂಗಶಾಯಿ---" ಹಾಗೂ "ರಾಜುವೆಡಲ---", ತಪಸ್ತೀರ್ಥಪುರಿ ಎಂದೆ ಕರೆಯಲಾಗುವ ಲಾಲಗುಡಿಯಲ್ಲಿನ
ಮಹಿತಪ್ರವೃದ್ಧಾ ದೇವಿಯ ಕುರಿತು "ಲಲಿತೇ
ಶ್ರೀಪ್ರವೃದ್ದೇ----", ಮಹಿತ ಪ್ರವೃದ್ಧಾ---", "ಗತಿನೀವನಿ---" ಕೃತಿಗಳನ್ನು
ರಚಿಸಿದರು. ಹೀಗೆ ದೇಶಸಂಚಾರ ಮಾಡುವಾಗ
ತಮ್ಮ
ಅನುಪಮ
ಸಂಗೀತದ
ಶಕ್ತಿಯಿಂದ
ಸತ್ತವರನ್ನು
ಬದುಕಿಸಿದರೆಂದು
ಜನಕಥನೆಯುಂಟೂ. ಕಳ್ಳರಿಂದ
ತೊಂದರೆಯದಾಗ
ಶ್ರೀರಾಮನೆ
ಮೈದಾಳಿ
ಪಕ್ಕದಲ್ಲಿ
ಅಂಗರಕ್ಷಕನಾಗಿ
ನಡೆದನೆಂದೂ
ಹೇಳುತ್ತಾರೆ!
ತಮಗೆ ಅರಿವಿಲ್ಲದೆ ತಮ್ಮ ಕೀರ್ತಿಯೂ ದೇಶಾದ್ಯಂತ
ಹರಡಿರುವುದು ತ್ಯಾಗರಾಜರಿಗೆ ವಿಸ್ಮಯತಂದಿತಂತೆ. ಅದನ್ನು ಕುರಿತಾಗಿ ರಾಮನಲ್ಲಿ
ಕೃತಜ್ಞತೆಯಿಂದ ಹಾಡುತ್ತಾರೆ- "ದಾಶರಥೇ, ನೀ ಋಣಮು
ತೀರ್ಪ ನಾ ತರಮಾ---". ತಮ್ಮ
ಸಂಗೀತದ ಅತ್ಯುತ್ತಮ ರಸಿಕನೂ, ಪೋಷಕನೂ ರಾಮನೇ
ಎನ್ನುವುದನ್ನೂ ಹೇಳುತ್ತಾರೆ. ವಾಲ್ಮಿಕಿ ಹಾಗೂ ಪೂರ್ವ ಕವಿಗಳಂತೆ
ತಮ್ಮ ಬಾಳಿಗೂ ನಿರ್ದಿಷ್ಟ ಉದ್ದೇಶವಿತ್ತು
ಎನ್ನುವ ನಂಬುಗೆ ತ್ಯಾಗರಾಜರಲ್ಲಿ ವ್ಯಕ್ತವಾಗುತ್ತದೆ-
"ಏ ಪನಿಕೋ ಜನ್ಮಿಂಚಿತಿ---".
"ಧಯಚೂಚುಟಕು---"
ಎಂಬ ಕೃತಿಯಲ್ಲಿ ತಾವು ಪೂರ್ಣ
ಆತ್ಮಜಾಗೃತಿಯುಳ್ಳ
ಕಲಾವಿದನಾಗಿದ್ದು
ತಮ್ಮನ್ನು
ಭಗವಂತನೇ
ದಿವ್ಯ
ಉದ್ದೇಶಕ್ಕಾಗಿ
ಹುಟ್ಟಿಸಿದನೆಂದು
ಹೇಳಿಕೊಳ್ಳುತ್ತಾರೆ.
"ಏಲಾವತಾರಮೆತ್ತುಕೊಂಟಿವಿ---"
ಎನ್ನುವ ತಮ್ಮ ಕೃತಿಯಲ್ಲಿ ತ್ಯಾಗರಾಜರು
ರಾಮನು ತ್ಯಾಗರಾಜರ ನೂರಾರು ರಾಗರಂಜಿತ ಕೃತಿಗಳನ್ನು
ಆಸ್ವಾದಿಸಲೋಸುಗವೇ ಮೈದಾಳಿ ಬಂದ ಎಂದು
ಸಾತ್ವಿಕ ಗರ್ವದಿಂದ ಹೇಳಿಕೊಳ್ಳುತ್ತಾರೆ.
ಒಂದು ಜನಜನಿತ ಕಥೆಯ ಪ್ರಕಾರ
ತ್ಯಾಗರಾಜರು ಹೀಗೆ ದೇಶಸಂಚಾರ ಮಾಡುವಾಗ,
ಒಂದು ಊರಿನ ಸ್ಥಳೀಯ ಕಲಾವಿದನೊಬ್ಬ
ಅವರಲ್ಲಿಗೆ ಬಂದು 'ಆನಂದ ಭೈರವಿ'
ರಾಗವನ್ನು ಕೈಬಿಡುವಂತೆ ಕೋರಿದನಂತೆ. ಏಕೆಂದರೆ ತ್ಯಾಗರಾಜರು ಎಲ್ಲ
ರಾಗಗಳಲ್ಲೂ ಕೃತಿಗಳನ್ನು ರಚಿಸಿದ್ದು ಆ ಎಲ್ಲ ರಾಗಗಳಲ್ಲಿ
ಅವರ ಕೃತಿಗಳೆ ಅತೀವ ಮನ್ನಣೆ
ಪಡೆದಿದ್ದವಂತೆ. ಆನಂದಭೈರವಿ ರಾಗವೊಂದನ್ನಾದರೂ ತನ್ನ ಹೆಸರಲ್ಲಿ ಉಳಿಸಿಕೊಳ್ಳುವ
ಪಾಮರ ಬಯಕೆ ಆ ಸ್ಥಳೀಯ
ಕಲಾವಿದನದ್ದು! ತ್ಯಾಗರಾಜರು
ಅದಕ್ಕೆ
ಒಪ್ಪಿ
ಆನಂದಭೈರವಿ
ರಾಗದಲ್ಲಿ
ಎಂದು
ಕೃತಿರಚನೆ
ಮಾಡಲಿಲ್ಲವಂತೆ!
ಇದು ಇತಿಹಸಸಿದ್ಧ ಪ್ರಸಂಗವೋ ಅಲ್ಲವೋ ತಿಳಿಯದಾದರೂ, ಇದು
ತ್ಯಾಗರಾಜರ ಔದಾರ್ಯಕ್ಕೆ ಉದಾಹರಣೆ ಎನ್ನಬಹುದು. ಅವರು
ಆನಂದಭೈರವಿ ರಾಗದಲ್ಲಿ ಕೃತಿರಚನೆ ಮಾಡದಿರುವುದೂ ಈ ಪ್ರಸಂಗವನ್ನು ನಂಬಲು
ಪುಷ್ಟಿ ಕೊಡುತ್ತದೆ. ಒಮ್ಮೆ ಕೀಳು ಜಾತಿಯಲ್ಲಿ
ಹುಟ್ಟಿದ್ದು, ಅತಿಶಯ ಪ್ರತಿಭಾಶಾಲಿಯಾಗಿದ್ದ 'ಮಾರನ್'
ಎನ್ನುವವನು, ಸ್ವಂತ ಪ್ರಯತ್ನದಿಂದ ಸಿದ್ದಿಸಿಕೊಂಡ
ಗಾನಪ್ರತಿಭೆಯನ್ನು ಇವರ ಮುಂದೆ ಮೆರೆದಾಗ,
ತ್ಯಾಗರಾಜರು ಅದನ್ನು ಕಂಡು ಬೆರಗಾಗಿ
ಮೆಚ್ಚಿ ಅಲ್ಲೇ "ಎಂದರೋ ಮಹಾನುಭಾವುಲು ಅಂದರಿಕಿ
ವಂದನಮುಲು----" ಎಂದು ಕೃತಿರಚಿಸಿ ಅವನನ್ನು
ಅಭಿನಂದಿಸಿದರಂತೆ. ಈ ಕೃತಿಯು ತ್ಯಾಗರಾಜರ ಮೇರುಕೃತಿಯಾಗಿದೆ.
ಅಷ್ಟೆ ಅಲ್ಲ, 'ಎಂದರೋ ಮಹಾನುಭಾವುಲು,
ಅಂದರಿಕೀ ವಂದನಮುಲು' ಎನ್ನುವ ಸಾಲು ಸಭ್ಯ
ಸಜ್ಜನ ಲೋಕದ ದಿನನಿತ್ಯದ ವ್ಯವಹಾರದಲ್ಲೂ
ಧ್ವನಿಸುವ ಸುಂದರ ಸೂಕ್ತಿಯೇ ಆಗಿಬಿಟಿದೆ!
ಯೋಗ್ಯ ಶಿಷ್ಯರನ್ನು ಆಯ್ದು
ಅವರಿಗೆ
ಅವರವರ
ಕಂಠದ
ಗುಣಮಟ್ಟ,
ಹಾಗೂ
ಪ್ರತಿಭಾನುಸಾರ
ಸಂಗೀತಕಲೆಯನ್ನು
ಬೋಧಿಸಿದರು,
ತಮ್ಮ ಅನುಪಮ ಕೃತಿಗಳನ್ನು ಕಲಿಸಿದರು.
ಇವರ ಶಿಷ್ಯ ಪರಂಪರೆ ಉಮಯಾಳಪುರಂ,
ತಿಲ್ಲೈಸ್ಥಾನಂ ಹಾಗೂ ವಾಲಾಜಪೇಟ್ ಎಂದು
ಮೂರು ವಿಭಾಗದ್ದಾಗಿದೆ. ಇವರ ಶಿಷ್ಯರಲ್ಲಿ ಪ್ರಸಿದ್ಧರು
ಸುಂದರ ಭಾಗವತರ್, ಕೃಷ್ಣ ಭಾಗವತರ್, ರಾಮ
ಐಯ್ಯಂಗಾರ್, ವೇಂಕಟರಮಣ ಭಾಗವತರ್ ಮುಂತಾದವರು. ಈ
ಮಹಾನುಭಾವರು ಶ್ರದ್ಧಾಪೂರ್ವಕವಾಗಿ ತ್ಯಾಗರಾಜರ ಕೃತಿಗಳನ್ನು ಯಥಾವತ್ತಾಗಿ ಉಳಿಸಿ ಕಾಪಾಡಿಕೊಂಡು ಬಂದದ್ದರಿಂದ
ಇವು ಶಾಶ್ವತವಾಗಿ ಲಭ್ಯವಾಗಿವೆ.
ಪತ್ನಿ ಮರಣಿಸಿದ ಕೂಡಲೇ ತ್ಯಾಗರಾಜರು ಸಂನ್ಯಾಸವನ್ನು
ಸ್ವೀಕರಿಸಿ,
ಕಾವೇರಿ ತೀರದ ಏಕಾಂತದಲ್ಲಿ ತಪೋನಿರತರಾದರು.
ರಾಮಧ್ಯಾನದಲ್ಲೇ ಇರುತ್ತ ದೇಹತ್ಯಾಗ ಮಾಡಿದರು.
ಸಂಗೀತಕ್ಷೇತ್ರದ ಸಾಧನೆ
ಸಂಗೀತ ತ್ರಿಮೂರ್ತಿಗಳಲ್ಲಿ
ತ್ಯಾಗರಾಜರು
ಪ್ರಮುಖರು.
(ಸಂಗೀತ ತ್ರಿಮೂರ್ತಿಗಳೆಂದರೆ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್ ಹಾಗೂ ಶ್ಯಾಮಾಶಾಸ್ತ್ರಿಗಳು). ಸಂಗೀತವನ್ನು
ಕೇವಲ ಮನೋರಂಜನೆಯ ಸಾಧನವಾಗಿ ಕಾಣದೆ ಅದರ ಘನ
ಸಾಧ್ಯಾಸಾಧ್ಯತೆಗಳನ್ನು ಆವಿಷ್ಕರಿಸಿದ ನಾದಯೋಗಿ ತ್ಯಾಗರಾಜರು. ಅವರ
ಪಾಲಿಗೆ ಸಂಗೀತವು ಒಂದು ನಾದೋಪಾಸನೆಯೇ
ಸರಿ, ಇವರ ಸಂಗೀತ ಕೃತಿಗಳು
ಐತಿಹಾಸಿಕ ಮೈಲಿಗಲ್ಲುಗಳಾಗಿ ಕರ್ನಾಟಸಂಗೀತ
ಪ್ರಕಾರಕ್ಕೇ
ಹೊಸ
ದಿಕ್ಕನ್ನು
ಕಾಣಿಸಿದವು.
ತ್ಯಾಗರಾಜರ
ಕೃತಿಗಳಲ್ಲಿ ಒಂದೆಡೆ
ಭಕ್ತಿರಸ,
ಮತ್ತೊಂದೆಡೇ
ಗಾನರಸ ಪ್ರವಹಿಸುತ್ತದೆ. ಈ ಎರಡೂ ರಸಗಳೂ
ಅವರಿಗೆ ಸಿದ್ಧಿಸಿದ್ದವು. ಹೀಗಾಗಿ ಇವರ ಕೃತಿಗಳು
ಭಕ್ತಿ ಸಾಹಿತ್ಯಕ್ಕೂ ಕೊಡುಗೆಗಳು, ಸಂಗೀತಲೋಕದ ಸಾಹಿತ್ಯಕ್ಕೂ ಕೊಡುಗೆಗಳು. ಹೀಗಾಗಿ ಇವರ ಕೃತಿಗಳು ವಿದ್ವಾಂಸರಿಗೂ,
ಭಕ್ತರಿಗೂ
ಜನಸಾಮಾನ್ಯರಿಗೂ
ಏಕಪ್ರಕಾರವಾಗಿ
ರುಚಿಸುತ್ತವೆ.
ಹಲವು ರಾಗಗಳಲ್ಲಿ, ಹಲವು
ತಾಲಗಳಲ್ಲಿ,
ಹಲವು
ರಸ,
ಭಾವ,
ವಸ್ತುಗಳನ್ನು,
ಶೈಲಿಗಳನ್ನೂ,
ಪ್ರಯೋಗಗಳನ್ನೂ
ಅಲವಡಿಸಿ
ಕೃತಿಗಳನ್ನು
ರಚಿಸಿದ
ಹೆಗ್ಗಳಿಕೆ
ತ್ಯಾಗರಾಜರದು. ತಮ್ಮ ಇಷ್ಟದೈವ ರಾಮನ
ಕುರಿತಾದ ಕೃತಿಗಳೆ ಹೆಚ್ಚಾದರೂ ಎಲ್ಲ ದೇವ, ದೇವಿಯರ
ಕುರಿತಾಗಿಯೂ
ಅವರು
ಕೃತಿರಚನೆ
ಮಾಡಿದ್ದಾರೆ. ಅವರು ಸಂಸ್ಕೃತವನ್ನೂ ತೆಲುಗು
ಭಾಷೆಯನ್ನು ಬಳಸಿದ್ದಾರೆ. ತೆಲುಗು ಭಾಷೆಯು ಅಂದಿನ
ತಮಿಳುನಾಡುನಿವಾಸಿ ತೆಲುಗುಜನಾಂಗದ ಆಡುಭಾಷೆಯ ಮಾದರಿಯಲ್ಲಿದೆ. ಅವರ ಕೃತಿಗಳು ಸಂಸ್ಕೃತಭೂಯಿಷ್ಟವಾಗಿದ್ದು,
ಛಂದಸ್, ಕಾವ್ಯ, ಅಲಂಕಾರಾದಿ ಲಕ್ಷಣಗಳಿಂದ
ಸಂಪನ್ನವಾಗಿವೆ. ಅತಿಯಾದ ವೈದುಷ್ಯವನ್ನು ಭಾಷೆಯಲ್ಲಿ
ಮೆರೆಯದೆ ಸರಲ-ಸಹಜ-ಲಲಿತ
ಪದಗಳಲ್ಲಿ
ತಮ್ಮ
ಹೃದಯಾಂತರಾಳದ
ಭಾವವನ್ನು
ಸೂಸುವುದೇ
ತ್ಯಾಗರಾಜರ
ರೀತಿಯಾಗಿದೆ.
ಕೆಲವು ಕೃತಿಗಳಲ್ಲಿ ಭಾವವಿಶೇಷವೇ ಎದ್ದುಕಾಣುತ್ತದೆ. ಕೆಲವೆಡೆ ಸಂಗೀತದ ಮೆರುಗೆ
ಪ್ರಧಾನವಾಗಿದೆ. ಶಬ್ದಚ್ಛಲ, ಅರ್ಥಚ್ಛಲ, ಶ್ಲೇಷ, ಉಪಮೆ, ರೂಪಕ,
ದೃಷ್ಟಾಂತಾದಿ ಅಲಂಕಾರ ಪ್ರಯೋಗಗಳು ಅಲಲ್ಲಿ
ಮಿನುಗುತ್ತವೆ. ಇವರ ಕೃತಿಗಳಲ್ಲಿ ಮಧ್ಯಮ
ಸಂಚಾರಗಳೂ, ಸ್ವರವಿನ್ಯಾಸಗಳೂ, ಸ್ವರಸಾಹಿತ್ಯವೂ ವಿಲಸಿಸುತ್ತವೆ.
ಇವರ ರಚನೆಗಳಲ್ಲಿ ಗದ್ಯ ಸಾಹಿತ್ಯವೂ
ಇದೆ,
ಪದ್ಯ
ಸಾಹಿತ್ಯವೂ
ಇದೆ,
ಅದಲ್ಲದೆ
ಗದ್ಯ
ಪದ್ಯಗಳ
ಮಿಶ್ರಣಗಳೂ
ಇವೆ.
ಇವರ ಕೃತಿಗಳಲ್ಲೂ ವೈವಿಧ್ಯ - ವಿಳಂಬಕಾಲ ಕೃತಿಗಳು, ಮಧ್ಯಮಕಾಲ ಕೃತಿಗಳು, ಉತ್ಸವ ಸಂಪ್ರದಾಯಗಳೂ, ದಿವ್ಯನಾಮ
ಕೃತಿಗಳು,
ತ್ಯಾಗರಾಜರು
ಕೃತಿರಚನೆಯ ಕ್ಷೇತ್ರಕ್ಕೆ ಕೊಟ್ಟ ಅನನ್ಯ ಕೊಡುಗೆ
'ಸಂಗತಿ
ಪದ್ಧತಿ'. ಸಾಮಾನ್ಯವಾಗಿ ಇವರ
ಎಲ್ಲ ಕೃತಿಗಳಲ್ಲೂ ಪಲ್ಲವಿ, ಅನುಪಲ್ಲವಿ ಚರಣಗಳ
ಪ್ರಾರಂಭದ ಸಾಲುಗಳ ಪದ ಹಾಗೂ
ಅರ್ಥವಿನ್ಯಾಸಗಳು, ಸ್ವರವಿನ್ಯಾಸಗಳು ಸಂಗತಿ ಪ್ರಯೋಗಕ್ಕೆ ಅನುಕೂಲಿಸುವಂತಿರುತ್ತವೆ.
ಈ ಸೌಲಭ್ಯವು ಇತರ
ಪೂರ್ವವಾಗ್ಗೇಯಕಾರರಲ್ಲಿ ಅಥವಾ ಮುತ್ತುಸ್ವಾಮಿ ದೀಕ್ಷಿತರೇ
ಮೊದಲಾದವರ ಕೃತಿಗಳಲ್ಲಿ ಆ ಪ್ರಮಾಣದಲ್ಲಿ ಕಾಣಬರದು.
ಕಲಾಭಿಜ್ಞತೆ,
ನವನವೀನ
ಕಲ್ಪನೆಗಳು,
ಪ್ರಯೋಗಗಳು
ತ್ಯಾಗರಾಜರ
ಕೃತಿಗಳನ್ನು
ಆಸಕ್ತಿದಾಯಕವಾಗಿಸುತ್ತವೆ.
ಇದರಿಂದಾಗಿ ಇವರು ಮುಂದಿನ ವಾಗ್ಗೇಯಕಾರರಿಗೆಲ್ಲ ಒಂದು
ಆದರ್ಶವೇ
ಆಗಿದ್ದಾರೆ.
ಎಷ್ಟೋ ಪ್ರಾಚೀನ
ಹಾಗೂ
ಅಪ್ರಚಲಿತ
ರಾಗಗಳನ್ನು
ಸಂಶೋಧಿಸಿ
ಅವುಗಳಲ್ಲಿ
ಕೃತಿರಚನೆ
ಮಾಡಿ ಅವನ್ನು ಉಳಿಸಿ ಬೆಳೆಸಿ
ಪ್ರಸಿದ್ಧಗೊಳಿಸಿದ ಹೆಗ್ಗಳಿಕೆ ಇವರದು. ತ್ಯಾಗರಾಜರು ದಾಸವರೇಣ್ಯರಾದ
ಪುರಂದರದಾಸರನ್ನು
ಮನಸಾ
ಮೆಚ್ಚುತ್ತಾರೆ.
ತಮ್ಮ ಕೃತಿಗಳಲ್ಲೂ ಅವರನ್ನು ಹೆಸರಿಸಿದ್ದಾರೆ.
ಇವರ ವಿಳಂಬಕಾಲಕೃತಿಗಳು
ವಿಶೇಷ
ರಾಜ
ಸ್ವರೂಪ
ವಿನ್ಯಾಸಗಳನ್ನೂ,
ಸ್ವರ
ವಿಭವಗಳನ್ನು,
ತಾಳ,
ಲಯಗಳ
ಗತಿಯನ್ನೂ,
ಕಲ್ಪನಾಸಂಗೀತಕ್ಕೆ
(ರಾಗ,
ನೆರವಲ್
ಮತ್ತು
ಸ್ವರಪ್ರಸ್ತಾರ)
ಆಸ್ಪದವನ್ನು
ತೆರೆದಿಡುತ್ತ
ಹೋಗುತ್ತವೆ.
"ಚಕ್ಕನಿ ರಾಜಮಾರ್ಗಮುಂಡಗ----"(ಖರಹರಪ್ರಿಯ ರಾಗ), "ನಿಧಿ ಚಾಲ ಸುಖಮಾ----"(ಕಲ್ಯಾಣಿರಾಗ), ಘನರಾಗ ಪಂಚರತ್ನಗಳು(ನಾಟಮ್,
ಗೌಳ, ಆರಭಿ, ವರಾಳಿ ಮತ್ತು
ಶ್ರೀರಾಗಗಳಲ್ಲಿ), "ನಗುಮೋಮು ಗನ------"(ಅಭೇರಿರಾಗ)
ಇತ್ಯಾದಿಗಳು ತುಂಬ ಪ್ರಸಿದ್ಧ ವಿಳಂಬಕಾಲ
ಕೃತಿಗಳು.
ಮಧ್ಯಮಕಾಲಕೃತಿಗಳಲ್ಲೂ ಇವೆಲ್ಲ ಕಾಣಬರುವುದರ ಜೊತೆಗೆ,
ಚಿಕ್ಕದಾಗಿ
ಚೊಕ್ಕವಾಗಿ
ಲವಲವಿಕೆಯಿಂದ
ಹಾಡಿ
ಮುಗಿಸುವ
ಸವಲತ್ತು
ಇದೆ.
"ಸೀತಮ್ಮ ಮಾಯಮ್ಮ----"(ವಸಂತರಾಗ), "ತುಳಸೀದಳಮುಲ ಚೇ-----"(ಮಾಯಮಾಳವಗೌಳರಾಗ), "ಮರುಗೇಲರಾ ಓ ರಾಘವಾ----"(ಮಾರ್ಗಹಿಂದೋಳರಾಗ),
ಸಾಮಜವರಗಮನ-----"(ಹಿಂದೋಳರಾಗ), "ಲಲಿತೇ ಶ್ರೀಪ್ರವೃದ್ಧೇ---"(ಭೈರವಿ ರಾಗ)
ಮುಂತಾದವು ಪ್ರಸಿದ್ಧ ಮಧ್ಯಮಕಾಲ ಕೃತಿಗಳು.
ಇನ್ನು ದೇವರನ್ನು ಉಪಚರಿಸುವ ಉತ್ಸವಸಂಪ್ರದಾಯಗಳ ಸೊಬಗಂತೂ
ಸರಳ
ಸುಂದರ.
ದೇವರನ್ನು ಎಬ್ಬಿಸುವ, ಮಲಗಿಸುವ, ಉಣಿಸುವ, ಉಯ್ಯಾಲೆಯಲ್ಲಿ ತೂಗುವ,
ಅಲಂಕರಿಸುವ, ಗಂಧ ಹಚ್ಚುವ, ಲಾಲಿ
ಹಾಡುವ, ಮುದ್ದು ಮಾಡುವ, ತಾಂಬೂಲ
ತಿನ್ನಿಸುವ ಬಗೆ ಬಗೆ ಭಾವಗಳು
ಇಲ್ಲಿ ವಿಲಸಿಸುತ್ತವೆ. ದೇವರೊಂದಿಗಿನ ಆತ್ಮೀಯ ಭಕ್ತಿಯು ತನ್ನ
ಸರ್ವಸ್ವಾರಸ್ಯಗಳನ್ನು ಇಲ್ಲಿ ಮೈದಾಳುತ್ತದೆ. ತೇರು,
ಉತ್ಸವ, ಪೂಜೆ, ಕೈಂಕೈರ್ಯಗಳ ಸಂದರ್ಭಗಳಲ್ಲಿ
ಹಾಡಲು ಅತ್ಯಂತ ಯೋಗ್ಯವಾದ ಸಾಹಿತ್ಯ
ಹಾಗೂ ಸಂಗೀತ ಈ ಉತ್ಸವಸಂಪ್ರದಾಯಗಳಲ್ಲುಂಟು.
ಸರಳ ರಾಗ ವಿನ್ಯಾಸ ಹಾಗೂ
ಭಾವಶ್ರೀಮಂತಿಕೆ ಈ ಉತ್ಸವಸಂಪ್ರದಾಯಗಳ ಹೆಗ್ಗುರುತು.
ಹೆಚ್ಚಿನ ಸಂಗೀತ ಜ್ಞಾನವನ್ನಪೇಕ್ಷಿಸದ ಈ
ಉತ್ಸವಸಂಪ್ರದಾಯಗಳು ಮನೆ ಮನೆಯಲ್ಲೂ ಹೆಂಗಳೆಯರು
ಕೂಡಿ ಹಾಡಬಹುದಾದ ರಚನೆಗಳು. "ಗಂಧಮು ಪುಯ್ಯರುಗಾ----"(ವರಾಳಿರಾಗ),
"ಪೂಲಪಾನ್ಪು ಮೀದ ಬಾಗ ಪೂರ್‍ನ ಪವ್ವಳಿಂಚು---"(ಆಹಿರಿ),
"ಪವನಜ ಸ್ತುತಿಪಾತ್ರ-----" ಮುಂತಾದವು ಪ್ರಸಿದ್ಧ ಉತ್ಸವ ಸಂಪ್ರದಾಯಗಳು.
ಇನ್ನು ದೇವರ
ನಾಮವನ್ನು
ರಾಗವಾಗಿ
ಲಯಬದ್ಧವಾಗಿ
ಕೈಚಪ್ಪಾಳೆ
ತಟ್ಟುತ್ತ
ಹಾಡಲು
ತ್ಯಾಗರಾಜರು
'ದಿವ್ಯನಾಮಕೃತಿ'ಗಳನ್ನು
ರಚಿಸಿದ್ದಾರೆ.
"ಕ್ಷೀರಸಾಗರವಿಹಾರ----"(ಆನಂದಭೈರವಿರಾಗ), "ಪರಿಪಾಲಯ ಪರಿಪಾಲಯ-----"(ರೀತಿಗೌಳರಾಗ)
ಮೂಂತಾದವು ಇವರ ಪ್ರಸಿದ್ಧ ದಿವ್ಯನಾಮಕೃತಿಗಳು.
ಈ ವೈವಿಧ್ಯವನ್ನು ಕಂಡಾಗ
ಪಂಡಿತಪಾಮರರೆಲ್ಲರಿಗೂ ರಂಜನೀಯವಾದ ಅಂಶಗಳು ತ್ಯಾಗರಾಜರ ಕೃತಿಗಳಲ್ಲಿದ್ದವು
ಎನ್ನುವುದು ಸ್ಪಷ್ಟವಾಗುತ್ತದೆ.
ಇನ್ನು ಪಂಚರತ್ನಗಳೆಂಬ
ಕೃತಿಗೊಂಚಲುಗಳು
ಮತ್ತೊಂದು
ವಿಶೇಷ,
(ಘನರಾಗ ಪಂಚರತ್ನ, ಕೊವ್ವೂರು ಪಂಚರತ್ನ ಇತ್ಯಾದಿ).
ತ್ಯಾಗರಾಜರ
ಕೃತಿಗಳಲ್ಲಿ ಹೆಚ್ಚಾಗಿ ಭಕ್ತಿ, ವೀರ,
ಕರುಣಾ,
ಅದ್ಭುತ,
ಶಾಂತ
ರಸಗಳೇ ಎದ್ದು ಕಾಣುತ್ತವೆಯಾದರೂ, ಒಟ್ಟಾರೆ
ನವರಸಗಳೂ
ಅಭಿವ್ಯಕ್ತವಾಗಿವೆ.
ಇದಲ್ಲದೆ ಇತರ ಭಾವಗಳೂ ಉಂಟೂ-
ವಿನಮ್ರತೆ(ಎಂದರೋ ಮಹಾನುಭಾವುಲು---, ಆತ್ಮಶಿಕ್ಷಣ(ನಿಧಿಚಾಲ ಸುಖಮಾ---), ಪಶ್ಚಾತ್ತಾಪ
(ದುಡುಕುಗಲ ನನ್ನೇ---), ರೂಪಾಸ್ವಾದ ಮತ್ತು ಸ್ತುತಿ (ಕನ
ಕನ ರುಚಿರಾ----), ವೀರ (ಜಗದಾನಂದಕಾರಕ----), ಭಕ್ತಿ
(ವಂದನಮು ರಘುನಂದನ---), ಕಾಳಜಿ (ಹೆಚ್ಚರಿಕಗಾ ರಾರ----),
ತತ್ವ- ಭಕ್ತಿಗಳ ಸಮೀಕ್ಷೆ (ದ್ವೈತಮು
ಸುಖಮಾ ಅದ್ವೈತಮು ಸುಖಮಾ----), ದೇವರೆ ನನ್ನ ಸರ್ವಸ್ವ,
ನನ್ನ ಕುಟುಂಬ ಎಂಬ ಭಾವ
(ಸೀತಮ್ಮ ಮಾಯಮ್ಮ----), ಚಪಲ ಮನಸ್ಸಿಗೆ ಮೂದಲಿಕೆ(ಸಾಧಿಂಚೆನೆ ಓ ಮನಸಾ----) ಇತ್ಯಾದಿ.
ಒಟ್ಟಿನಲ್ಲಿ
ತ್ಯಾಗರಾಜರು ಸಂತರೂ
ಹೌದು,
ಸಂಗೀತಕಲಾವಿದರೂ
ಹೌದು,
ಉತ್ತಮ
ವಾಗ್ಗೇಯಕಾರರೂ,
ವಿದ್ವಾಂಸರೂ
ಹೌದು,
ಸರ್ಜನಶಿಲತೆ,
ಕಲಾಭಿಜ್ಞತೆಯ
ಮೇರುಶಿಖರವೇ
ಆಗಿದ್ದು
ಸಂಗೀತ
ಇತಿಹಾಸದಲ್ಲೇ
ಮೈಲಿಗಲ್ಲಾಗಿ
ನಿಂತ
ಅನುಪಮ
ವ್ಯಕ್ತಿತ್ವ
ಇವರದು. ಅವರಿಂದ ಆದ ಸಂಗೀತ
ಕ್ಷೇತ್ರದ ಸತ್ಕ್ರಾಂತಿ ಮುಂದಿನ ಸಂಗೀತ ಪರಂಪರೆಗೇ
ಹೊಸ ದಿಕ್ಕನ್ನು, ಭಕ್ತಿಯ ಸ್ಪರ್ಶವನ್ನೂ ಕೃತಿಬಾಹುಳ್ಯವನ್ನು
ಒದಗಿಸಿದೆ.
ತ್ಯಾಗರಾಜರು
ಸಂನ್ಯಾಸ ಸ್ವೀಕರಿಸಿದ ನಂತರ ತಮ್ಮ ಅಂತ್ಯಕಾಲವನ್ನು
ಕಳೆದ ತಿರುವಯ್ಯಾರುವಿನ ಕಾವೇರಿತೀರದಲ್ಲಿ ಇಂದು ಅವರ ನೆನಪಿನ
ಸ್ಮಾರಕವೂ, ದೇಗುಲವೂ ತಲೆಯೆತ್ತಿನಿಂತಿದೆ. ತ್ಯಾಗರಾಜರ
ಆರಾಧನೆಯಂದು ವಿದ್ವಾಂಸರುಗಳು ದೇಶದ ವಿವಿಧ ಮೂಲೆಗಳಿಂದ
ಬಂದು ಅವರ ಘನರಾಗಪಂಚರತ್ನಗಲನ್ನೂ, ಹಾಗೂ
ಇತರ ಕೃತಿಗಳನ್ನು ಹಾಡಿ ಗೌರವ ಸಲ್ಲಿಸುತ್ತಾರೆ.
ಅಂತೂ ಸಂಗೀತವೇದಿಕೆಯು ತ್ಯಾಗರಾಜರ ಕೃತಿಗಳಿಲ್ಲದಿದ್ದರೇ ಕಳೆಯೇ ಕಟ್ಟದು ಎಂಬಷ್ಟರ
ಮಟ್ಟಿಗೆ ಅವರು ಈ ಕ್ಷೇತ್ರಕ್ಕೆ
ಅನಿವಾರ್ಯವಾಗಿದ್ದಾರೆ.
ಉಪಸಂಹಾರ
ಒಂದಿಷ್ಟು
ವೈದುಷ್ಯ, ಪ್ರತಿಭೆ, ಮನ್ನಣೆ ಬಂದಾಕ್ಷಣ ಬೀಗಿ
ಗರ್ವ ತೋರುವ ಕಲಾವಿದರೆಲ್ಲ, ತ್ಯಾಗರಾಜರ
ಗಾನಸಂಪತ್ತನ್ನಷ್ಟೇ
ಮೈಗೂಡಿಸಿಕೊಂಡರೆ
ಸಾಲದು,
ಅವರ
ವಿನಮ್ರತೆ
ಹಾಗೂ
ಆತ್ಮಸಂಸ್ಥಿತಿಯನ್ನೂ
ಮೈಗೂಡಿಸಿಕೊಂಡಾಗ
ಕಲಾಪ್ರಪಂಚ
ಮತ್ತಷ್ಟು
ಶ್ರೀಮಂತವೂ
ಶುದ್ಧವೂ
ಆಗುತ್ತದೆ.
ಅಂತೂ ಧನ್ಯಸಾರ್ಥಕ ಜೀವನ ಸಾಧನೆಗಳ ತ್ಯಾಗರಾಜಸ್ವಾಮಿಯು
ನಮ್ಮ ದೇಶದ, ಕಲಾಪ್ರಪಂಚದ ಆಸ್ತಿ,
ಹೆಮ್ಮೆ. ಅವರಿಗೆ ನಮ್ಮೆಲ್ಲರ ಹೃದಯಪೂರ್ವಕ ನಮನಾಂಜಲಿಗಳು ಸಲ್ಲುತ್ತಿರಲಿ.
***************
ಲೇಖಕರು
ಡಾ ಆರತಿ ವಿ
ಬಿ
Publsihed in Mallara Magazine, 2014
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ