ಶುಕ್ರವಾರ, ಮಾರ್ಚ್ 17, 2017

ಆಶ್ಚರ್ಯೋ ವಕ್ತಾ ಕುಶಲೋಸ್ಯ ಲಬ್ಧಾ….
ನರೇಂದ್ರ ಪರಮಹಂಸರನ್ನು ಬಳಿಸಾರಿದ್ದು ’ದೇವರನ್ನು ನಿಜಕ್ಕೂ ನೋಡಿದ ಮನುಷ್ಯನಿದ್ದಾನೆಯೆ?’ ಎಂದು ಅರಸುತ್ತ. ದೇವರ ಬಗ್ಗೆ ಉಪದೇಶ ಮಾಡುವ, ಆದರೆ ಸ್ವಾನುಭವವಿಲ್ಲದ ಸಾಧುಗಳನ್ನು ನೋಡಿ ನೋಡಿ ಅವನಿಗೆ ಸಾಕಾಗಿತ್ತು. ’ಆಗಾಗ ಬಾಹ್ಯಲೋಕದಿಂದ ಕಳಚಿಕೊಂಡು ಭಾವಸಮಾಧಿಯಲ್ಲಿ ಮಗ್ನನಾಗುವ ದಕ್ಷಿಣೇಶ್ವರದ ಸಂತ ರಾಮಕೃಷ್ಣ’ರ ಬಗ್ಗೆ ನರೇಂದ್ರ ಕೇಳಿದ್ದ, ಒಮ್ಮೆ ನೋಡಿಯೂ ಇದ್ದ. ದಕ್ಷಿಣೇಶ್ವರಕ್ಕೆ ಹೋಗಿ ಅವರನ್ನು ಮೊದಲು ಭೇಟಿಯಾದಾಗ ನರೇಂದ್ರನ ಮನಸ್ಸಿನಲ್ಲಿ ನಾನಾ ಪ್ರಶ್ನೆಗಳು- “ಇವರೂ ಸ್ವಾನುಭಾವವಿಲ್ಲದ ಮಾಮೂಲಿ ಬೋಧಕನಿರಬಹುದೆ?”, “ಅಥವಾ, ಭಕ್ತಿ, ವಿರಕ್ತಿ, ಅಂತ ಅತಿಯಾದಾಗ ತಲೆಕೆಡಿಸಿಕೊಂಡು ಅಸಹಜವಾಗಿ ವರ್ತಿಸುವ ದುರ್ಬಲ ಮನದ ಸಾಧಕನಿರಬಹುದೆ?”, ”ಅಥವಾ ಇಂತಹ ’ನಾಟಕ’ದಿಂದ ಶಿಷ್ಯರ ವಿತ್ತವನ್ನು ಅಪಹರಿಸುವ ಮತ್ತೊಬ್ಬ ಢೋಂಗಿ ಬಾಬಾ ಇರಬಹುದೆ?”, “ಅಥವಾ ನಿಜಕ್ಕೂ ದೇವರನ್ನು ನೋಡಿರುವ ಪ್ರಾಮಾಣಿಕನೆ ಆಗಿರಬಹುದೆ?” ಎಂಬಿತ್ಯಾದಿಯಾಗಿ. ಅವರ ಭಾವಸಮಾಧಿ ಸಿದ್ಧಿಗಳ ಬಗ್ಗೆ ಕುತೂಹಲ ಕೆರಳಿತಾದರೂ, ಒಮ್ಮೆಲೆ ಅವರಿಗೆ ಆತ ಮನಸೋಲಲಿಲ್ಲ.
ರಾಮಕೃಷ್ಣರಾದರೊ ’ದೇಹಭಾವವೇ ಇಲ್ಲದ, ತಾತ್ವಿಕ ನೆಲಯಲ್ಲೇ ಚಿಂತಿಸುವ, ಬೆಂಕಿಯಂತಹ ಪರಿಶುದ್ಧಾತ್ಮ ಈ ಹುಡುಗ’ ನೋಟಮಾತ್ರದಿಂದಲ್ಲೇ ನರೇಂದ್ರನ ಅಂತಸ್ಸತ್ವವನ್ನು ಅಳೆದುಬಿಟ್ಟರು. “ಮಹಾಶಯರೇ, ನೀವು ದೇವರನ್ನು ನೋಡಿದ್ದೀರಾ?” ಎನ್ನುವ ನರೇಂದ್ರನ ಪ್ರಶ್ನೆಗೆ “ಹೌದು, ನಾನು ದೇವರನ್ನು ನೋಡಿದ್ದೇನೆ, ಅಷ್ಟೆ ಅಲ್ಲ ನಿನಗೂ ತೋರಿಸಬಲ್ಲೆ” ಎಂಬ ಪರಮಹಂಸರ ನೇರ ನಿಷ್ಕಪಟ ನುಡಿ ಅವನನ್ನು ವಿಸ್ಮಯಗೊಳಿಸಿತು. ಆದರೂ ನರೇಂದ್ರನು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ರಾಮಕೃಷ್ಣರ ನಡೆನುಡಿಗಳನ್ನೂ ಒರೆಹಚ್ಚಿ ನೋಡಿದ. ಅವರ ಸಮಾಧಿ ಸಿದ್ಧಿ ಸಾಧನೆಗಳ ಬಗ್ಗೆ ಒಮ್ಮೆಲೆ ಬೆರಗಾಗದೆ ತೀಕ್ಷ್ಣವಾಗಿ ಪರೀಕ್ಷಿಸಿದ. ನರೇಂದ್ರನ ಬಿರುಸಾದ ಮಾತು, ಮೂದಲಿಕೆ, ಪರೀಕ್ಷೆ ಮುಂತಾದವು ಅಲ್ಲಿನ ಇತರ ಭಕ್ತರಿಗೆ ಕಿರಿಕಿರಿಯುಂಟುಮಾಡುತ್ತಿತ್ತಾದರೂ, ರಾಮಕೃಷ್ಣರಿಗೆ ಸಂತೋಷವನ್ನೇ ತರುತ್ತಿದ್ದವು. ಈ ಪರಮಹಂಸರ ಬಾಯಿಯಲ್ಲಿ ಬರುವ ಮಾತೆಲ್ಲ ಕೇವಲ ’ಭಾಷಣ’ವಾಗಿರದೆ, ಅವರ ಅಂತರಂಗದ ಸಹಜ ಧಾರೆಯಾಗಿತ್ತು ಎನ್ನುವುದನ್ನು ಗಮನಿಸುತ್ತ ಬಂದ. ನಾಲ್ಕಾರು ವರ್ಷಗಳ ಸತತ ಪರೀಕ್ಷೆಯಿಂದ ಅಳೆದು ನೋಡಿ ಕೊನೆಗೂ ಅವರ ಕಪಟವಿಲ್ಲದ, ಪ್ರಮಾಣಿಕ ವ್ಯಕ್ತಿತ್ವವನ್ನು ಮೆಚ್ಚಿ ಒಪ್ಪಿದ. ’ರಾಮಕೃಷ್ಣರು ಯಾವುದೇ ನಾಣ್ಯವನ್ನು ಮುಟ್ಟಿದರೂ ಅವರ ಕೈ ಸೆಟೆದು ಕೊಳ್ಳುತ್ತಿತ್ತಂತೆ, ಆ ಮಟ್ಟದ ತ್ಯಾಗಭಾವ ಅವರದ್ದ” ಎನ್ನುವುದನ್ನು ಕೇಳಿದ ನರೇಂದ್ರ, ಇದನ್ನು ಪರೀಕ್ಷಿಸಿಯೇ ಬಿಡಬೇಕೆಂದು, ಅವರಿಗರಿವಿಲ್ಲದೆ ಅವರ ಹಾಸಿಗೆಯ ಹಾಸಿನಡಿ ನಾಣ್ಯವನ್ನು ಇಟ್ಟ. ಹಾಸಿಗೆಯನ್ನು ಮುಟ್ಟುತ್ತಲೇ ಚೇಳು ಕುಟುಕಿದವರಂತೆ ಹಾರಿ ಚೀರಿದರು ಪರಮಹಂಸರು! ಇನ್ನು ಅವರ ದಿವ್ಯದರ್ಶನಾನುಭವಗಳನ್ನು ’ಅತಿಯಾದ ಸಾಧನೆಗಳ ಪರಿಣಾಮವಾದ Hallucination (ಭ್ರಾಂತಿ) ಇರಬಹುದು’ ಎಂದೆ ಮೊದಮೊದಲು ನರೇಂದ್ರ ವಾದಿಸುತ್ತಿದ್ದ. ರಾಮಕೃಷ್ಣರು ಅದ್ವಯಾನುಭವದ ಪರಿಯನ್ನು ವಿವರಿಸಿದರೆ, ’ಇದೆಂತಹ ತತ್ತ್ವ! ತಟ್ಟೆ ಬ್ರಹ್ಮ, ಲೋಟ ಬ್ರಹ್ಮ, ಎಲ್ಲ ಬ್ರಹ್ಮವಂತೆ--! ಇದು ಹುಚ್ಚುತನ!” ಎಂದು ಮೂದಲಿಸುತ್ತಿದ್ದ.
ಅತ್ತ ರಾಮಕೃಷ್ಣರಿಗಾದರೋ ಯಾರನ್ನೂ ಮೆಚ್ಚಿಸಿ ಒಪ್ಪಿಸಿ ಸೈ ಎನಿಸಿಕೊಳ್ಳುವ ಹಂಬಲವಿರಲಿಲ್ಲ. ನರೇಂದ್ರನೇ ಅವರ ಒದನಾಟದಿಂದ ತನ್ನ ಎಷ್ಟೋ ಪ್ರಶ್ನೆಗಳಿಗೆ, ಗೊಂದಲಗಳಿಗೆ ಕ್ರಮೇಣ ಉತ್ತರಗಳನ್ನು ಕಂಡುಕೊಳ್ಳುತ್ತ ಬಂದ. ಮೇಲ್ನೋಟಕ್ಕೆ ಸರಳರಾದರೂ ಈ ಪರಮಹಂಸರು ಅತ್ಯುನ್ನತ ತತ್ವಸಾಕ್ಷಾತ್ಕಾರಕ್ಕೆ ಸೂಕ್ತ ಮಾರ್ಗದರ್ಶಕರಾಗಬಲ್ಲವರು ಎಂದು ಕಂಡುಕೊಂಡ. ಅವರ ಮಾರ್ಗದರ್ಶನದಲ್ಲಿ ತಪಶ್ಚರ್ಯೆಗಿಳಿದ. ರಾಮಕೃಷ್ಣರ ಬಳಿ ಕುಳಿತು, ಬೆರಗಾಗಿ ನೋಡುತ್ತ ಕಾಲಕಳೆಯುವ ಭಕ್ತರೇ ಹಲವರು. ಇಂತಹವರ ಗುಂಪಿಗೆ ಸೇರದೆ, ಸಾಧನೆಯತ್ತ ಗಮನ ಹರಿಸಿದ. ಇತರ ಪ್ರಾಮಾಣಿಕ ಯುವ ಸಾಧಕರನ್ನು ಸಾಧನೆಯತ್ತ ಪ್ರೇರೇಪಿಸಿದ. ಅಷ್ಟೆಲ್ಲ ವಾದ, ಪರೀಕ್ಷೆಗಳಿಂದ ರಾಮಕೃಷ್ಣರನ್ನು ಒರೆಹಚ್ಚಿ ನೋಡಿದ ಮೇಲೆ, ಅವರನ್ನು ಒಪ್ಪಿಕೊಂಡ ನರೇಂದ್ರ, ತನ್ನ ಹೃದಯಸಿಂಹಾಸನವನ್ನೇ ಅವರಿಗಿತ್ತ. ಗುರು ನಿರ್ದೇಶಿಸಿದ ಕಾರ್ಯಕ್ಕಾಗಿ ಆತ್ಮಸಮರ್ಪಣೆ ಮಾಡಿಕೊಂಡ. ಎಂತೆಂತಹ ವಿರೋಧ-ಅಪಹಾಸ್ಯಗಳನ್ನು, ಅನಿಶ್ಚಿತ ಸ್ಥಿತಿಗತಿಗಳನ್ನೂ ಹಾಗೂ ಕಷ್ಟನಷ್ಟಗಳನ್ನು ಎದುರಿಸಬೇಕಾಗಿ ಬಂದರೂ ಛಲಬಿಡದೆ ಹಿಡಿದ ಕಾರ್ಯವನ್ನು ಸಾಧಿಸಿಯೇ ತೀರಿದವರು ವಿವೇಕಾನಂದರು. ಧರ್ಮಜಾಗೃತಿಯ ಕಾರ್ಯಕ್ಕಾಗಿ ನರೇಂದ್ರನಂತಹ ಕಟುಸತ್ಯವಾದಿ, ಪ್ರಾಮಾಣಿಕ, ಛಲವಂತನನ್ನೇ ಆಯ್ದುಕೊಂಡಿದ್ದು ರಾಮಕೃಷ್ಣರ ದೂರದೃಷ್ಟಿಗೆ ಪ್ರಮಾಣ.
ಈ ಗುರುಶಿಷ್ಯ ಜೋಡಿ ಅಪರೂಪದ ಒಂದು Combination ಎನ್ನಬಹುದು! ಆಂಗ್ಲರ ಶಾಲೆಯಲ್ಲಿ ಆಧುನಿಕ ಪರಿಯ ವಿದ್ಯಾಭ್ಯಾಸವನ್ನು ಪಡೆದ, ವಿಚಾರಶೀಲ ಯುವಕ, ನರೇಂದ್ರ. ಅನಾದಿ ಕಾಲದ ಆರ್ಷಧರ್ಮ-ಸಂಸ್ಕೃತಿಗಳ ಸರ್ವವಿವರಗಳನ್ನೂ ಸಾಕ್ಷಾತ್ಕರಿಕೊಳ್ಳುವ ಅಭೂತಪೂರ್ವ ಶ್ರದ್ಧೆ ಹಾಗೂ ತಪಶ್ಚರ್ಯೆಗೆ ಜೀವನವನ್ನೇ ಮುಡುಪಿಟ್ಟ ವ್ಯಕ್ತಿ ರಾಮಕೃಷ್ಣರು! ಇಂತಹ ಗುರು-ಶಿಷ್ಯ ಜೋಡಿಯಿಂದ ಹೊಮ್ಮಿದ ಮನುಕುಲದ ಉದ್ದಾರದ ಹಿರಿಯ ಕಾರ್ಯವಂತೂ ಮಂಗಳಕರ.

’ಆಶ್ಚರ್ಯೋ ವಕ್ತಾ ಕುಶಲೋಸ್ಯ ಲಬ್ಧಾ….’ ಎನ್ನುವ ಉಪನಿಷದ್ ವಾಣಿ ಗುರು-ಶಿಷ್ಯರು ಹೇಗಿದ್ದರೆ ಸ್ವಾರಸ್ಯ ಎನ್ನುವುದನ್ನು ಸೂಚಿಸುತ್ತದೆ. ರಾಮಕೃಷ್ಣ-ವಿವೇಕಾನಂದರ ಸಂಬಂಧವು ಇದಕ್ಕೆ ಆಧುನಿಕ ನಿದರ್ಶನವೆಂಬಂತಿದೆ.

Publsihed in VijayakRnataka 2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ