ಶುಕ್ರವಾರ, ಮಾರ್ಚ್ 17, 2017

ಬ್ರಾಹ್ಮೀಮುಹೂರ್ತ
ರ್ಸೂರ್ಯೋದಯಕ್ಕೆ ಪೂರ್ವದ ಅರುಣೋದಯಕಾಲಕ್ಕಿಂತ ಹಿಂದಿನ ೧ ಗಂಟೇ ೩೬ ನಿಮಿಷಗಳ ಕಾಲವನ್ನು ಬ್ರಾಹ್ಮೀಮುಹೂರ್ತ ಎಂದು ಗುಣಿಸಲಾಗುತ್ತದೆ. ಬೆಳಿಗ್ಗೆ ೩ ಗಂಟೆಯಿಂದ ೬ ಗಂಟೆ ಮಧ್ಯದ ಕಾಲ ಎಂದೂ ಅಂದಾಜು ಮಾಡಲಾಗುತ್ತದೆ. ಬ್ರಾಹ್ಮೀಮುಹೂರ್ತದ ಪ್ರಾಶಸ್ತ್ಯವನ್ನು ಪರಂಪರೆ ಬಗೆಬಗೆಯಾಗಿ ಕೊಂಡಾಡುತ್ತದೆ. ಈ ಪ್ರಶಸ್ತಕಾಲದಲ್ಲಿ ನಿದ್ರೆಯನ್ನು ತೊರೆದು, ಶುಚಿರ್ಭೂತರಾಗಿ, ಪ್ರಾರ್ಥನೆ, ಧ್ಯಾನ, ಜಪ, ಯೋಗ, ಪೂಜೆ, ಸಂಕಲ್ಪ, ಅಧ್ಯಯನ, ಚಿಂತನ-ಮಂಥನ, ಪ್ರಾಣಾಯಾಮ, ವ್ಯಾಯಾಮ, ಹೊಸ ಕೆಲಸವನ್ನೋ ಯೋಜನೆಯನ್ನೋ ಹೂಡುವುದು ಮುಂತಾದವನ್ನು ಮಾಡುವುದು ಫಲಕಾರಿ. ಹಾಗಾಗಿ ಇದನ್ನು ‘ಸ್ವಾರಸ್ಯಮುಹೂರ್ತ’ ಎಂದೂ ಕರೆಯಲಾಗುತ್ತದೆ.
ಧಾರ್ಮಿಕ ವೈಶಿಷ್ಟ್ಯ-  ‘ಬ್ರಾಹ್ಮೀ’ ಶಬ್ದಕ್ಕೆ ‘ಬ್ರಹ್ಮ-ಸಂಬಂಧಿತ’, ‘ಸರಸ್ವತಿ’, ‘ಯಜ್ಞಸಂಬಂಧಿತ’, ‘ಗುರುಸಂಬಂಧಿತ’, ‘ವೇದ-ಸಂಬಂಧಿತ’ ಮುಂತಾದ ಹಲವು ಅರ್ಥಗಳಿವೆ. ಬ್ರಾಹ್ಮೀಮುಹೂರ್ತವನ್ನು ಸಾತ್ವಿಕಕಾಲ ಎಂದು ಪರಿಗಣಿಸಲಾಗುತ್ತದೆ. ಬ್ರಾಹ್ಮೀಮುಹೂರ್ತದಲ್ಲಿ ಸಪ್ತರ್ಷಿಗಳು, ಸಿದ್ಧರು ಹಾಗೂ ದೇವತೆಗಳು ಭೂಮಂಡಲದಲ್ಲಿ ಸಂಚರಿಸುತ್ತಾರಂತೆ. ಈ ಕಾಲದಲ್ಲಿ ‘ಸಪ್ತರ್ಷಿಗಳು’ ಎಂದು ನಂಬಲಾದ ಜ್ಯೋತಿಯ ತುಣುಕುಗಳು ಪ್ರತಿದಿನವೂ ಅಂತರೀಕ್ಷದಿಂದ ಚಿಮ್ಮಿ ಮಾನಸ ಸರೋವರದೊಳಗೆ ಬಂದು ಬೀಳುವಂತೆ ಭಾಸವಾಗುವ ಸೋಜಿಗದ ದೃಶ್ಯವನ್ನು ಇಂದಿಗೂ ಯಾತ್ರಿಕರು ಕಣ್ಣಾರೆ ಕಾಣುತ್ತಾರೆ. ಈ ಸಮಯದಲ್ಲಿ ಎದ್ದೇಳುವುದರಿಂದ ನಿಸರ್ಗವು ನಮ್ಮಲ್ಲಿ ಸಕಾರಾತ್ಮಕತೆಯನ್ನೂ ಆತ್ಮಶಕ್ತಿಯನ್ನೂ ಅಂತರ್ಮುಖತೆಯನ್ನು ವರ್ಧಿಸುತ್ತದೆ. ಜೊತೆಗೆ ‘ಗರ್ಭಾದಾನ-ಸಂಸ್ಕಾರ’ವನ್ನು ಪ್ರಶಸ್ತವಾದ ಬ್ರಾಹ್ಮೀಮುಹೂರ್ತದಲ್ಲಿ ಮಾಡುವುದರಿಂದ ಸಾತ್ವಿಕ, ದೃಢ, ಚತುರ ಹಾಗೂ ಯೋಗ್ಯವಾದ ಸಂತಾನವನ್ನು ಪಡೆಯಬಹುದು ಎಂದು ಶಾಸ್ತ್ರಗಳು ನಿರ್ದೇಶಿಸುತ್ತವೆ.
ಏಕವಾರಂ ಜಲಪೀತ್ವಾ ಧೌತವಸ್ತ್ರೋತಿನಿರ್ಮಲಃ ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಚೈಕದಾಸ್ಯಂ ಹರಿಂ ನತಃ (ಬ್ರಾಹ್ಮೀ ಮುಹೂರ್ತದಲ್ಲೆದ್ದು ಒಂದು ಗುಟುಕು ನೀರು ಕುಡಿದು, ಶುಭ್ರವಸ್ತ್ರಗಳನ್ನು ಧರಿಸಿ, ಹರಿಯನ್ನು ನಮಿಸಬೇಕು). ಕನಿಷ್ಟಪಕ್ಷ ಏಕಾದಶೀ, ಮಾಸಶಿವರಾತ್ರಿ ಹಾಗೂ ಹಬ್ಬ ಹಾಗೂ ಪ್ರಶಸ್ತದಿನಗಳಲ್ಲಾದರೂ ಈ ಅಭ್ಯಾಸವನು ಇಟ್ಟುಕೊಳ್ಳುವುದು ಒಳ್ಳೆಯದು. ಬ್ರಾಹ್ಮೀಮುಹೂರ್ತದಲ್ಲಿ ಎದ್ದು ‘ಗಂಗಾಸ್ಪರ್ಶ’ ಮಾಡಿ, ಧ್ಯಾನ ಯೋಗಾಭ್ಯಾಸಗಳನ್ನು ಮಾಡಿ, ಅರುಣೋದಯ ಕಾಲದಲ್ಲಿ ಸ್ನಾನವನ್ನು ಆಚರಿಸುವುದು ಗಂಗಾತೀರವಾಸಿಗಳ ಸನಾತನ ಪದ್ಧತಿಯಾಗಿದೆ. ಈ ಕಾಲದಲ್ಲೆದ್ದು ‘ರಾಮ’ ‘ಕೃಷ್ಣ’ ಎಂದು ನಾಮೋಚ್ಚಾರಣೆ ಮಾಡುತ್ತ ಭೂಮಿಗೂ, ಗುರುವಿಗೂ, ಇಷ್ಟದೇವತೆಗೂ ಮನಸಾ ನಮಿಸಿ ಆ ಬಳಿಕ ಪಾದವನ್ನು ಭೂಮಿಯ ಮೇಲಿಡಬೇಕು. ಶ್ರೀಕೃಷ್ಣಪರಮಾತ್ಮನು ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಆತ್ಮಧ್ಯಾನ ನಿರತನಾಗುತ್ತಿದ್ದನೆಂದು ಪುರಾಣಗಳು ಸಾರುತ್ತವೆ.

ಆರೋಗ್ಯವರ್ಧನೆ- ಈ ಪ್ರಶಸ್ತಕಾಲದಲ್ಲಿ ನಮ್ಮ ದೇಹದಲ್ಲಿ ‘ಕಾರ್ಟಿಸೋಲ್’ ಎನ್ನುವ ಹಾರ್ಮೋನ್ ಉತ್ಪತ್ತಿಯಾಗಿ ಅಂಗಾಂಗಗಳಿಗೆ ಒಳ್ಳೆಯ ಪ್ರಚೋದನೆ ನೀಡುತ್ತದೆ. ರಾತ್ರಿಕಾಲ ಚಂದ್ರನ ಕಿರಣಗಳು ಸೂಸುವ ‘ಅಮೃತ’ವನ್ನು ಬ್ರಾಹ್ಮಕಾಲದಲ್ಲಿ ಸುಳಿದಾಡುವ ‘ವೀರವಾಯು’ ಎನ್ನುವ ವಾಯುವು ಎಲ್ಲೆಲ್ಲೂ ಪಸರಿಸುತ್ತದಂತೆ. ಅದನ್ನು ನಾವು ಉಚ್ಛ್ವಾಸ ಮಾಡಿದಾಗ ಆರೋಗ್ಯವರ್ಧನೆಯಾಗುತ್ತದಂತೆ. ತನ್ಮೂಲಕ ರಕ್ತಸಂಚಾರ, ಉಸಿರಾಟ ಉತ್ಸಾಹಗಳು ಉತ್ತಮಗೊಳ್ಳುತ್ತವೆ ಎನ್ನುವುದು ಸಾಂಪ್ರದಾಯಿಕ ನಂಬಿಕೆ. ಜ್ಞಾನೇಂದ್ರಿಯಗಳ ಕಲಾಪ, ಉತ್ಸಾಹ, ಬುದ್ಧಿಯ ಚುರುಕುತನ ಮುಂತಾದವುಗಳಿಗೆ ಮುಖ್ಯಸಾಧನ ದೇಹದಲ್ಲಿನ ವಾತ. ರಾತ್ರಿಯ ಕೊನೆಯ ಭಾಗದಲ್ಲೇ ಈ ವಾತವು ಕೆರಳುವುದು. ಹಾಗಾಗಿ ಈ ಕಾಲದಲ್ಲಿ ಎದ್ದು ಚಟುವಟಿಕೆಯಿಂದಿದ್ದಲ್ಲಿ ವಾತವು ನಿಯಂತ್ರಿತವಾಗುತ್ತದಂತೆ. ಒಟ್ಟಿನಲ್ಲಿ ಬ್ರಾಹ್ಮೀಮುಹೂರ್ತದಲ್ಲಿ ಎದ್ದೇಳುವುದರಿಂದ ಬುದ್ಧಿಪ್ರಚೋದನೆ, ಉತ್ಸಾಹ ಹಾಗೂ ಲವಲವಿಕೆಗಳು ಉಂಟಾಗುತ್ತವೆ.  
ಈ ಕಾಲದಲ್ಲಿ ಮೂಗಿನ ಎರಡು ಹೊಳ್ಳೆಗಳಲ್ಲೂ ಒಮ್ಮೆಲೆ ಉಸಿರಾಡುತ್ತ, ಶ್ವಾಸಕೋಶಕ್ಕೆ ಹೆಚ್ಚಿನ ಆಮ್ಲಜನಕವನ್ನು ಹೀರಿಕೊಳ್ಳುತ್ತೇವಾದ್ದರಿಂದ ದೇಹ, ಬುದ್ಧಿ ಹಾಗೂ ನರಮಂಡಲಗಳು ಹೆಚ್ಚಿನ ಚೈತನ್ಯವನ್ನು ಪಡೆಯುತ್ತವೆ. ‘ಇಡ’ ಮತ್ತು ‘ಪಿಂಗಳ’ ಎನ್ನುವ ನಮ್ಮ ಎರಡು ನಾಡಿಗಳೂ(ಸುಷುಮ್ನೆಯ ಎಡಬಲಗಳಲ್ಲಿರುತ್ತವೆ) ಜಾಗೃತವಾಗಿದ್ದು ಸುಷುಮ್ನೆಯನ್ನು ಪ್ರಚೋದಿಸಲು ಸಹಾಯಕವಾಗುತ್ತವೆ. (ಸುಷುಮ್ನೆಯ ಪ್ರಚೋದನೆಯಿಂದಲೇ ಕುಂಡಲಿನಿಶಕ್ತಿಯ ಜಾಗೃತಿ ಸಾಧ್ಯ)
ನಮ್ಮ ದೇಹದಲ್ಲೇ ಒಂದು ನೈಸರ್ಗಿಕ ಗಡಿಯಾರ ಇರುತ್ತದೆ. ಅದು ಎಲ್ಲ ಬಗೆಯ ಹಾರ್ಮೋನ್ ಗಳ ಉತ್ಪತ್ತಿಗೂ ಕಾಲನಿಯಂತ್ರಣ ಮಾಡುತ್ತದೆ. ಬೆಳಿಗ್ಗೆ ಬೇಗನೇ ಏಳುವುದನ್ನು ಅಭ್ಯಾಸಮಾಡಿಕೊಂಡಾಗ ನಮ್ಮ ಹಸಿವು, ನಿದ್ರೆ, ಜೀರ್ಣಕ್ರಿಯೆ ಮುಂತಾದ ಎಲ್ಲ ಪ್ರಕ್ರಿಯೆಗಳು ಶಿಸ್ತಿಗೆ ಒಳಪಟ್ಟು, ನಮ್ಮಲ್ಲಿನ ರೋಗತಡೆಗಟ್ಟುವ ಶಕ್ತಿಯು ಹೆಚ್ಚಿ, ಆರೋಗ್ಯವರ್ಧನೆಯಾಗುತ್ತದೆ,
ಸಮಯನಿರ್ವಹಣೆಗೆ ಅನುಕೂಲಕರ- ಬೇಗನೆ ಏಳುವುದರಿಂದ ಇಡೀ ದಿನದ ಕಾರ್ಯಯೋಜನೆಯನ್ನು ಈ ಕಾಲದಲ್ಲಿ ಮಾಡಬಹುದು. ಬೆಳಗಿನ ಕೆಲಸಕಾರ್ಯಗಳನ್ನು ಗಡಿಬಿಡಿ, ಅವರಸಗಳಿಲ್ಲದೆ ಮಾಡಿ ಮುಗಿಸಿ, ವಿರಮಿಸಿ, ಶಾಂತವಾಗಿ ಮುಂದುವರೆಯಬಹುದು. ಬೆಳಿಗ್ಗೆ ತಡವಾಯಿತೆಂದು ಅವಸರದ ಒತ್ತಡಕ್ಕೆ ಒಳಪಟ್ಟರೆ, ಅಂದಿನ ದಿನವೆಲ್ಲ ಚದಪಡಿಕೆ ಹಾಗೂ ಅಸಂತೋಷಗಳು ಉಂಟಾದಾವು.
ಬ್ರಾಹ್ಮೀಮುಹೂರ್ತದಲ್ಲೆದ್ದು ಅಧ್ಯಯನ ಮಾಡುವುದು ವಿದ್ಯಾರ್ಥಿಗಳಿಗಂತೂ ತುಂಬ ಉಪಯುಕ್ತ. ತಡರಾತ್ರಿಯವರೆಗೂ ಎಚ್ಚರವಾಗಿದ್ದು ಓದುವುದು ಕಾಲಾಂತರದಲ್ಲಿ ಆರೋಗ್ಯ ಹಾಗೂ ಉತ್ಸಾಹಕ್ಕೆ ಮಾರಕ. ಆದರೆ ಬ್ರಾಹ್ಮೀಮುಹೂರ್ತದಲ್ಲಿ ಎದ್ದೇಳುವುದು ಆರೋಗ್ಯಕ್ಕೂ ಸಮಯನಿರ್ವಹಣೆಗೂ ಅತ್ಯುತ್ತಮ ಪರಿಹಾರ. ಸೂರ್ಯೋದಯವಾದ ಅದೆಷ್ಟೋ ಹೊತ್ತಾದ ಮೇಲೆ ಎದ್ದು, ಜಾಡ್ಯದ ಮೊಗವನ್ನು ಹೊತ್ತು ತಿರುಗುವುದು ಚೆನ್ನಾಗಿಯೂ ಕಾಣುವುದಿಲ್ಲ. ಬೇಗನೆ ಏಳುವ ಅಭ್ಯಾಸವು ಆರೋಗ್ಯ ಹಾಗೂ ಸೌಂದರ್ಯಗಳ ಕಾಂತಿಯನ್ನು ವರ್ಧಿಸುತ್ತದೆ.

ಈ ಸ್ವಾರಸ್ಯಮುಹೂರ್ತದ ಮಾಹಾತ್ಮ್ಯವನ್ನು ಅರಿತು ತಾವೂ ಲಾಭ ಪಡೆದು, ಮನುಕುಲಕ್ಕೂ ಅದರ ಬಗ್ಗೆ ತಿಳಿಸಿಕೊಟ್ಟ ಅಸಂಖ್ಯ ಪ್ರಾಜ್ಞರು ನಮ್ಮ ಸನಾತನಧರ್ಮದಲ್ಲಿ ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ನಾವು ನಿಸರ್ಗದ ಈ ವಿಶಿಷ್ಟ ಕಾಣಿಕೆಯಾದ ಬ್ರಾಹ್ಮೀಮುಹೂರ್ತವನ್ನು ಯೋಗ್ಯವಾಗಿ ಬಳಸಿಕೊಂಡು ಬಾಳನ್ನು ಬಂಗಾರವಾಗಿಸಿಕೊಳ್ಳೋಣ.

Publsihed in Samyukta karanataka 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ