ಶುಕ್ರವಾರ, ಮಾರ್ಚ್ 17, 2017

ಶಕ್ತಿಪೂಜೆ- ಒಂದು ಕಿರುನೋಟ
ಲೇಖಕರು –
ಡಾ ಆರತಿ ವಿ ಬಿ
 Publsihed in Mallara Magazine 2013
ಸನಾತನಧರ್ಮವು ಒಂದೇ ಪರತತ್ತ್ವವನ್ನು ಸಾರಿದರೂ ಔಪಸನಾತ್ಮಕ ಪ್ರೀತಿಗಾಗಿ ಹಲವು ಭಗವನ್ನಾಮರೂಪಗಳನ್ನು, ನಾನಾ ಸಾಧನಾಪಥಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಕೊಡುತ್ತದೆ. ಶತಮಾನಗಳಿಂದಲೂ ಶಾಕ್ತ, ವೈಷ್ಣವ, ಶೈವ, ಸೌರ ಹಾಗೂ ಗಾಣಪತ್ಯಾಗಮಗಳು ಪ್ರಧಾನ ಸಾಧನಾಮಾರ್ಗಗಳನ್ನು ಪರಂಪರಾಗತವಾಗಿ ಒದಗಿಸಿವೆ. ಈ ಎಲ್ಲ ಸಾಧನಾಮಾರ್ಗಗಳು ವಿವಿಧ ಪ್ರಾಂತಗಳಲ್ಲಿ, ಕುಲ-ಪರಂಪರೆಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಇವುಗಳ ವಿಸ್ತೃತ ರೂಪ ಪಡೆದ ಹಲವಾರು ಪ್ರಾಂತೀಯ ಹಾಗೂ ಜಾನಪದ ಪದ್ಧತಿಗಳೂ ಜೊತೆಜೊತೆಗೆ ಅನಾದಿಯಿಂದ ಬೆಳೆದು ಬಂದಿವೆ. ಇವುಗಳ ಪೈಕಿ ಶಕ್ತ್ಯುಪಾಸನೆ ಅಥವಾ ದೇವೀ ಆರಾಧನೆ ದೇಶಾದ್ಯಂತವಷ್ಟೇ ಅಲ್ಲ ಸನಾತನಸಂಸ್ಕೃತಿಯ ಸೌರಭ ಪಸರಿಸಿರುವ ನೆರೆ ಹೊರೆಯ ದೇಶಗಳಲ್ಲೂ ಕಾಣಬರುತ್ತದೆ. ಶಕ್ತ್ಯುಪಾಸನೆಗೆ ಮುಖ್ಯ ಆಧಾರ ದೇವೀಪರ ಸಾಹಿತ್ಯವುಳ್ಳ ಪುರಾಣಗಳು, ಆಗಮಗಳು, ತಂತ್ರಗಳು ಮತ್ತು ಸ್ಥಳೀಯ ಜಾನಪದ ಪದ್ಧತಿಗಳು.
ಪರತತ್ವವು ಮೊಟ್ಟಮೊದಲು ಮಾತೃರೂಪದಲ್ಲಿ ಮೂರ್ತೀಭವಿಸಿ ತನ್ನ ಜಗಲ್ಲೀಲೆಯನ್ನು ನಿರ್ವಹಿಸಲು ಬಹ್ಮ-ವಿಷ್ಣು-ಮಹೇಶ್ವರರನ್ನು ಸೃಷ್ಟಿಸಿ ನೇಮಿಸಿತೆಂದು ಕಾಲಿಕಾಪುರಾಣ ಸಾರುತ್ತದೆ. ತಾನೇ ಪುನಃ ಸರಸ್ವತಿ, ಲಕ್ಷ್ಮೀ, ಪಾರ್ವತಿಯರಾಗಿ ಆ ತ್ರಿಮೂರ್ತಿಗಳಲ್ಲೂ ಅಂತರ್ಭೂತ ಶಕ್ತಿಯಾಗಿ ನೆಲೆಸಿ ಸೃಷ್ಟಿ-ಸ್ಥಿತಿ-ಲಯಾದಿ ಕಾರ್ಯಗಳನ್ನು ನಿರ್ವಹಿಸುತ್ತಾಳೆ. ಮಾಯೆಯ ಭವಸಾಗರವನ್ನು ದಾಟಿಸುವವಳು ಅವಳೆ. ಸೃಷ್ಟಿ-ಸ್ಥಿತಿ-ಲಯ-ಅನುಗ್ರಹ ಹಾಗೂ ತಿರೋಧಾನಗಳನ್ನು ನಿರ್ವಹಿಸುತ್ತಾಳೆಂದೇ ಅವಳನ್ನು ಲಲಿತಾಸಹಸ್ರನಾಮದಲ್ಲಿ ಪಂಚಕೃತ್ಯಪರಾಯಣಾ ಎಂದು ಸ್ತುತಿಸಲಾಗಿದೆ. 
ಆದ್ಯಾಶಕ್ತಿಯು ಎಲ್ಲ ಲೋಕಗಳನ್ನು ಮೀರಿ ಬೆಲಗುವವಳು ಹಾಗಾಗಿ ಆಕೆಗೆ ’ಲಲಿತೇ’ ಎಂದು ಹೆಸರು- ಲೋಕಾನ್ಯತೀತ್ಯ ಲಲಿತೇ ಲಲಿತಾ ತೇನ ಕಥ್ಯತೇ. ಆಕೆ ಜಗತ್ತೆಲ್ಲವನ್ನೂ ತನ್ನ ಅಲೌಕಿಕ ಸತ್ವದಿಂದ ವ್ಯಾಪಿಸಿನಿಂತಿದ್ದಾಳೆ. ಲಕ್ಷ್ಮಿಯಾಗಿ ಜಗತ್ತಿನ ಸಮಸ್ತ ಸಂಪತ್ತು, ಸಂಪನ್ಮೂಲ, ಭೋಗ, ಭಾಗ್ಯ, ಬಂಧು, ಪರಿವಾರ, ಸ್ಥಾನ, ಮಾನ, ಕೀರ್ತಿ ಮುಂತಾದ ಜೀವನ ಪೋಷಕ ಅಂಶಗಳೆಲ್ಲ ತಾನೇ ಆಗಿ ಒದಗುತಾಳೆ. ಬುದ್ಧಿ, ವಾಕ್, ಪ್ರತಿಭೆ, ಕಲೆ, ಸೌಂದರ್ಯ, ಸರ್ಜನಶೀಲತೆ, ವಿದ್ಯೆ, ಜ್ಞಾನಾದಿಗಳ ರೂಪದಲ್ಲಿ ಜೀವಿಯ ಮನೋನ್ನತಿಯನ್ನು ಸಾಧಿಸುವ ಶಾರದೆಯೂ ಆಕೆಯೇ. ಕರ್ತೃತ್ವ, ನೇತೃತ್ವ, ಶ್ರದ್ಧೆ, ಪ್ರೇಮ, ಧೈರ್ಯ, ಶೌರ್ಯ, ಪರಾಕ್ರಮಾದಿ ಸತ್ವಗಳಾಗಿ ಮನುಷ್ಯನ ಜೀವನವನ್ನು ನಿಯಂತ್ರಿಸುವ ಸರ್ವಶಕ್ತಿಯಾದ ಗೌರಿಯೂ ಆಕೆಯೆ.
ಮೂಲತಃ ಅವಳು ಚಿತ್ ಸ್ವರೂಪಿಣಿಯಾದರೂ ಧರ್ಮಸ್ಥಾಪನೆಗಾಗಿ ಆಗಾಗ ಮೈದಾಳಿ ಬರುತಾಳೆ. ಆಯಾ ಕಾಲ-ಸಂದರ್ಭಗಳ ಲೀಲೆಗಳಿಗನುಗುಣವಾದ ರೂಪವನ್ನು ಧರಿಸಿ ಬರುತ್ತಾಳೆ. ಅವಳ ’ದುಷ್ಟದಮನ ಶಿಷ್ಟರಕ್ಷಣ’ದ ಬದ್ಧತೆಯನ್ನು ಸೂಚಿಸುವುದೇ ಹಲವು ಆಯುಧಗಳನ್ನು ಧರಿಸಿದ ಆಕೆಯ ದಶಭುಜಗಳು. ದೌಷ್ಟ್ಯವನ್ನು ಹದ್ದಿಕ್ಕಲು ಆಕೆ ಎಂತಹ ಛಲ-ಪರಾಕ್ರಮಗಳನ್ನು ಮೆರೆಯುತ್ತಾಳೆ ಎನ್ನುವುದನ್ನು ದೇವೀ ಮಾಹಾತ್ಮ್ಯ ಸಾರುತ್ತದೆ. ಆಕೆಯ ಆ ಲೀಲೆಯನ್ನೇ ನಾವು ಶರದೃತುವಿನಲ್ಲಿ ನವರಾತ್ರ ಹಬ್ಬದ ರೂಪದಲ್ಲಿ ಸ್ಮರಿಸುತ್ತೇವೆ.
ಜಗನ್ಮಾತೆಯನ್ನು ಸಾತ್ವಿಕಭಾವದಿಂದ ಹೂವುಹಣ್ಣುಮುಂತಾದ ದ್ರವ್ಯಗಳಿಂದ ಆಗಮೋಕ್ತ, ವೇದೋಕ್ತ ವಿಧಾನಗಳಾದ ಹೋಮ, ಪೂಜೆ, ಜಪ, ಧ್ಯಾನ, ಪಾರಾಯಣ, ವ್ರತಾಚರಣೆಗಳ ಮೂಲಕವೂ ಆರಾಧಿಸಲಾಗುತ್ತದೆ. ಇದನ್ನು ಸಮಯಾಚಾರ ಎನ್ನುತ್ತಾರೆ. ಇನ್ನು ಅಷ್ಟಸಿದ್ಧಿಗಳಿಗಾಗಿ, ತಂತ್ರೋಕ್ತ ವಿಧಾನಗಳಾದ ವಾಮಾಚಾರ ಮುಂತಾದ ಕಠಿಣ ಹಾಗೂ ಅಪಾಯಕಾರೀ ವೀರಸಾಧನೆಗಳ ಮೂಲಕವೂ ಆಚರಿಸುವ ಪದ್ಧತಿಗಳೂ ಇವೆ. ಯೋ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ (ಯಾರು ನನ್ನನ್ನು ಯಾವ ಬಗೆಯಲ್ಲಿ ಆರಾಧಿಸುತ್ತಾರೆ, ಅವರವರಿಗೆ ಅದದೇ ಬಗೆಯಲ್ಲಿ ನಾನು ಒಲಿಯುತ್ತೇನೆ) ಎಂಬ ಗೀತೆಯಲ್ಲಿನ ಭಗದ್ವುಕ್ತಿಯಂತೆ ಸಾಧಕರ ಭಾವ, ಉದ್ದೇಶ, ಅರ್ಹತೆ, ಅಭಿರುಚಿಗಳಿಗನುಗುಣವಾಗಿ ಒಲಿಯುವವಳೇ ಜಗನ್ಮಾತೆ.
ಆದರೆ ಅವಳ ಇಚ್ಛೆಗೆ ಬಾಗಿ ಅವಳನ್ನು ’ಅಮ್ಮ’ ಎಂದು ಕರೆಯುವ ಸರಳ ಭಕ್ತಿ ಎಲ್ಲಕ್ಕಿಂತ ಮಿಗಿಲು. ಲಲಿತಾ ಸಹಸ್ರನಾಮದಲ್ಲಿ ಜಗನ್ಮಾತೆಯ ಮೊದಲ ಹೆಸರೇ ’ಶ್ರೀಮಾತಾ’ ಎಂದು! ಪರತತ್ತ್ವವನ್ನು ’ತಾಯಿ’ ಎಂದು ಭಾವಿಸಿ ಆರಾಧಿಸುವುದರಲ್ಲಿ ಒಂದು ಸ್ವಾರಸ್ಯವಿದೆ. ಅನಂತ ದೋಷಗಳನ್ನು ಗಣಿಸದೆ ಎಂದಿನ ಸ್ನೇಹದಿಂದ ನಮ್ಮನ್ನು ಆದರಿಸುವ ಔದಾರ್ಯವಿರುವುದು ತಾಯಿಯಲ್ಲಿ ಮಾತ್ರವೇ. ’ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’ ಎಂಬ ಆದಿಶಂಕರರ ನುಡಿ ಇಲ್ಲಿ ಸ್ಮರಣೀಯ. ಭಗವಂತನನ್ನು ’ತಾಯಿ’ ಎಂದು ಕರೆದು ಆರಾಧಿಸುವಲ್ಲಿ ಸಾಧಕನಿಗೆ ವಿಶೇಷ ಭರವಸೆ ಮತ್ತು ಆತ್ಮೀಯತೆ ಉಂಟು. ಅವಳು ತಾಯಿಯಾಗಿ ನಮ್ಮ ಅನಂತ ದೋಷಗಳನ್ನು ಸಹಿಸಿ, ತಿದ್ದಿ, ಕೈಬಿಡದೆ ಮುನ್ನಡೆಸುತ್ತಾಳೆ. ’ಅಮ್ಮ’ ಎಂಬ ಕೂಗಿಗೆ ಕರಗಿ ತನ್ನ ಮಕ್ಕಳ ವಿಷಯದಲ್ಲಿ ಸದಾ ಸೌಮ್ಯಳಾಗಿರುತ್ತಾಳೆ! ಕವಿಯೊಬ್ಬ ಹಾಡುತ್ತಾನೆ- ದೇವಿಯ ಕರುಣೆ ಎಂತಹದ್ದು ಎಂದರೆ ದುಡುಕುತನದ ಮನುಷ್ಯ ತಪ್ಪು ಮಾಡಿದಾಗ ಅವನ ಬಗ್ಗೆ ಕೋಪಗೊಂಡ ಶಿವನು ಬಲಗೈಯಿಂದ ಶೂಲವನ್ನೆತ್ತಿ ಶಿಕ್ಷಿಸಲು ಹೊರಟರೆ, ದೇಹದ ಎಡಭಾಗದಲ್ಲೇ ಗೌರಿಯಾಗಿ ನೆಲೆಸಿರುವ ಮಾತೆ ತಕ್ಷಣ ಆ ಬಲಗೈಯನ್ನು ತಡೆದು ತನ್ನ ಕಂದನಿಗೆ ಅಭಯವನ್ನೀಯುತ್ತಾಳಂತೆ! ಮಾಡಬಾರದ್ದನ್ನು ಮಾಡಿ ಮನುಷ್ಯ ಬ್ರಹ್ಮನ ಕೋಪಕ್ಕೆ ಗುರಿಯಾದರೆ, ಆತ ಎಲ್ಲಿ ಶಾಪ ನುಡಿದು ಶಿಕ್ಷಿಸಿಯಾನೋ ಎಂಬ ಕಾಲಜಿಯಿಂದ ಮಾತೆಯು ಬ್ರಹ್ಮನ ನಾಲಿಗೆಯಲ್ಲಿ ಸರಸ್ವತಿಯಾಗಿ ನೆಲೆಸಿ, ಆ ಶಾಪವನ್ನು ವರವಾಗಿ ಪರಿಣಮಿಸುವಂತೆ ಮಾಡುತ್ತಾಳಂತೆ! ಇನ್ನು, ತನ್ನ ದುಷ್ಕೃತ್ಯಗಳಿಂದ ಮನುಷ್ಯನು ಶಾಂತಮೂರ್ತಿಯಾದ ವಿಷ್ಣುವಿಗೆ ಕೋಪಬರಿಸಿದರೆ, ಅವನ ವಕ್ಷಸ್ಥಳದಲ್ಲೇ ಲಕ್ಷ್ಮಿಯಾಗಿ ನೆಲೆಸಿರುವ ತಾಯಿ ತಕ್ಷಣ ಅವನ ಎದೆಯನ್ನು ನೀವಿ ಶಾಂತಗೊಳಿಸುತ್ತಾಳಂತೆ! ದೇವಿಯಲ್ಲಿ ಶರಣಾದವರಿಗೆ ಮೋಕ್ಷದೊಂದಿಗೆ ಭೋಗವೂ ಸ್ವತಃ ಸಿದ್ದ - ಯತ್ರಾಸ್ತಿ ಮೋಕ್ಷೋ ನ ಚ ತತ್ರ ಭೋಗಃ ಯತ್ರಾಸ್ತಿ ಭೋಗೋ ನ ಚ ತತ್ರ ಮೋಕ್ಷಃ | ಶ್ರೀ ಸುಂದರೀಸೇವನತತ್ಪರಾಣಾಂ ಭೋಗಶ್ಚ ಮೋಕ್ಷಶ್ಚ ಕರಸ್ಥಯೋಃ  || (ಭೋಗವಿದ್ದಲ್ಲಿ ಮೋಕ್ಷವಿಲ್ಲ, ಮೋಕ್ಷವ್ಚಿದ್ದಲ್ಲಿ ಭೋಗವಿಲ್ಲ, ಆದರೆ ದೇವಿಯ ಉಪಾಸಕರಿಗೆ ಮಾತ್ರ ಭೋಗಮೋಕ್ಷಗಳೆರಡೂ ಕೈಗೆ ಬಂದು ಒದಗುತ್ತವೆ). ಮೋಕ್ಷಾಪೇಕ್ಷೆಯಿಂದ ಕಠಿಣ ಸಾಧನೆಗಳಲ್ಲಿ ತೊಡಗುವ ತನ್ನ ಮಕ್ಕಳ ವಿಷಯದಲ್ಲಿ ವಾತ್ಸಲ್ಯಮಯಿಯಾದ ಜಗನ್ಮಾತೆ ಮನ ಕರಗಿ ಅವರು ಕೇಳದಿದ್ದರೂ ತಾನಾಗಿಯೇ ಭೋಗ ಸಂಪದಗಳನ್ನೂ ಪ್ರಸಾದಿಸುತ್ತಾಳೆ. ಕಷ್ಟಗಳನ್ನು ಹರಿಸುವವಳು ಎಂದೇ ಆಕೆಗೆ (ದುರ್ಗ+ಹಾ)  ದುರ್ಗಾ ಎಂದೇ ಹೆಸರು.
ದೇವಿಯನ್ನು ಸಾಧಕರು ತಮ್ಮತಮ್ಮ ಭಾವ, ಅನುಕೂಲ, ಪದ್ಧತಿ, ಉದ್ದೇಶ, ಅಭಿರುಚಿಗಳಿಗೆ ಅನುಗುಣವಾಗಿ ಆರಾಧಿಸುತ್ತಾರೆ. ಹೀಗೆ ಪುರಾಣ ಕಾಲದಿಂದಲೂ ಜಗನ್ಮತೆ ನವದುರ್ಗೆಯರಾಗಿ, ದಶಮಹಾವಿದ್ಯೆಯರಾಗಿ, ತ್ರಿಮೂರ್ತಿಶಕ್ತಿಗಳಾಗಿ, ಅಷ್ಟಲಕ್ಷ್ಮಿಯರಾಗಿ, ಸಪ್ತಮಾತೃಕೆಯರಾಗಿ, ಹಾಗೂ ಇನ್ನು ಹತ್ತು ಹಲವು ಸುಂದರ ಸಾಂಕೇತಿಕ ರೂಪಗಳಲ್ಲಿ ಉಪಾಸನೆಗೊಳ್ಳುತ್ತಾಳೆ. ದೇವಿಯ ರೂಪಗಳೂ ಅನಂತ, ಅವಳನ್ನು ಆರಾಧಿಸುವ ಪರಿಯೂ ವೈವಿಧ್ಯಪೂರ್ಣ! ಕರ್ನಾಟಕದಲ್ಲಂತೂ ಶರದೃತುವಿನ ನವರಾತ್ರವನ್ನು ನಾಡಹಬ್ಬ ದಸರಾ ಎಂದೇ ಪ್ರಸಿದ್ಧ. ಈ ಸಂದರ್ಭದಲ್ಲಿ ಆದಿಶಕ್ತಿಯ ಸಕಲ ರೂಪಗಳನ್ನು ವೈಭವದಿಂದ ಆರಾಧಿಸಲಾಗುತ್ತದೆ. ಜಗತ್ಸ್ವರೂಪವೆಲ್ಲವೂ, ಜಗದ್ವ್ಯಾಪಾರವೆಲ್ಲವೂ ತಾನೇ ಆಗಿದ್ದಾಳೆ ಎನ್ನುವುದರ ಸಂಕೇತವಾಗಿ ದೇವ, ಮನುಷ್ಯ, ಗಂಧರ್ವ, ಅವತಾರಪುರುಷರು, ಮನುಷ್ಯರು, ವಿವಿಧ ಕುಲವೃತ್ತಿಗಳೂ, ಕೃಷಿ, ಕ್ರೀಡೆ, ಪ್ರಾಣಿ, ಪಕ್ಷಿ, ವನ, ಹೊಲ, ಆಯುಧಗಳು, ವಾದ್ಯಗಳು, ಪುಸ್ತಕಗಳು, ಹಾಗೂ ಎಲ್ಲ ಬಗೆಯ ದಿನೋಪಯೋಗಿ ಸರ್ವವಸ್ತುಗಳ ರೂಪಗಳಲ್ಲಿ ಬೊಂಬೆಗಳನ್ನು ಜೋಡಿಸಿ, ಅದನ್ನು ದೇವಿಯ ವಿಶ್ವರೂಪವಾಗಿ ಭಾವಿಸಿ ಆರಾಧಿಸುವ ಅರ್ಥಪೂರ್ಣ ಪದ್ಧತಿ ದಕ್ಷಿಣಭಾರತದಲ್ಲಿ ಇದೆ. ಜಗನ್ಮಾತೆಯ ವೀರರಸಭರಿತ ಚರಿತೆಯನ್ನು ನವರಾತ್ರದಲ್ಲಿ ಪಠಿಸುವವರಿಗೆ ಧೈರ್ಯ ಹಾಗೂ ರಕ್ಷೆ ಸಿದ್ಧಿಸುತ್ತವೆ ಎಂದು ದುರ್ಗಸಪ್ತಶತಿಯಲ್ಲಿ ಸ್ವತಃ ದೇವಿಯೇ ಭರವಸೆಯನ್ನು ನುಡಿದಿದ್ದಾಳೆ.
ವಸಂತಋತುವಿನಲ್ಲಿ ವಸಂತನವರಾತ್ರದ ಆಚರಣೆಯೂ ಪ್ರಸಿದ್ಧವಾಗಿದೆ. ಪ್ರಾಚೀನಕಾಲದಲ್ಲಂತೂ ರಾಜಪೋಷಣೆ ಒದಗುತ್ತಿದ್ದರಿಂದ ಈ ವಸಂತನವರಾತ್ರದ ವೈಭವ ಮುಗಿಲು ಮುಟ್ಟುತ್ತಿತ್ತು. ಈ ಸಂದರ್ಭದಲ್ಲಿ ಲಲಿತ ಕಲೆಗಳು, ಕಾವ್ಯ, ವಿನೋದ, ಕ್ರೀಡೆ ಮುಂತಾದ ಹಲವಾರು ಉತ್ಸವಾಂಶಗಳು ತುಂಬಿರುತ್ತದೆ. ಹೋಲಿ, ಶ್ರೀಪಂಚಮಿ, ಚಿತ್ರಾಹುಣ್ಣಿಮೆ, ಯುಗಾದಿ ಹಬ್ಬ ಮುಂತಾದ ವಸಂತನವರಾತ್ರ ಸಂಬಂಧಿ ಪರ್ವಗಳು ಇನ್ನೂ ಸಾಕಷ್ಟು ಜನಪಿಯವಾಗಿವೆ. ಇದಲ್ಲದೆ ಶ್ರಾವಣ ಮಾಸದಲ್ಲಿ ವಿಷ್ಣುಶಕ್ತಿಯಾದ ಲಕ್ಷ್ಮಿಯನ್ನು ವರಮಹಾಲಕ್ಷ್ಮಿ ಎಂದು ದಕ್ಷಿಣಭಾರತದಲ್ಲಿ ವಿಶೇಷವಾಗಿ ಆರಾಧಿಸುವುದುಂಟು. ಅಂತೆಯೇ ಮಂಗಳ ಗೌರಿಯನ್ನು ನವವಧುಗಳು ಪೂಜಿಸುವುದುಂಟು. ಭಾದ್ರಪದದಲ್ಲಿ ಮನೆಮನೆಗೆ ಬಂದು ಬಾಗಿನ ಸ್ವೀಕರಿಸಿ ವರವೀಯುವವಳೇ ಸ್ವರ್ಣಗೌರಿ. ಅಂತೆಯೇ ಕೇದಾರಗೌರಿ, ಸೀಗೆಗೌರಿ, ಚೈತ್ರಗೌರಿ, ಫಲಗೌರಿ, ಮೌನಗೌರಿ, ಉಯ್ಯಾಲೆಗೌರಿ ಮುಂತಾದ ಹಲವಾರು ಪ್ರಾಂತೀಯ ಗೌರಿವ್ರತಗಳು ಪ್ರಚಲಿತವಿವೆ. ಬಂಗಾಳದಲ್ಲಿ ವೈಶಾಖ, ಪುಷ್ಯ, ಕಾರ್ತೀಕಾದಿ ೫ ಮಾಸಗಳ ಅಮಾವಾಸ್ಯೆಗಳಂದು ವಿಶೇಷ ಕಾಳಿಪೂಜೆಯನ್ನು ಮಾಡುವುದುಂಟು. ಆಷಾಡ ಮಾಸದ ಶುಕ್ರವಾರಗಳಂದು ದೇವೀಪರವಾದ ವ್ರತಗಳನ್ನು ಮಾಡುವುದು, ಪುಣ್ಯ ದರ್ಶನಮಾಡುವುದು, ನಿಂಬೆಹಣ್ಣಿನಲ್ಲಿ ತುಪ್ಪದ ದೀಪ ಬೆಳಗುವುದು ಮುಂತಾದ ವ್ರತಾಚಾರಗಳನ್ನು ಹೆಂಗಳೆಯರು ಸಂಭ್ರಮದಿಂದ ಆಚರಿಸುತ್ತಾರೆ. ಮೈಸೂರಿನ ಚಾಮುಂಡೇಶ್ವರೀ ದೇಗುಲದಲ್ಲೂ ಆಷಾಡಶುಕ್ರವಾರದ ಪುಣ್ಯದರ್ಶನವೆನ್ನುವುದು ತುಂಬ ವಿಶೇಷ. ತಮಿಳುನಾಡಿನಲ್ಲಿ ’ಆಡಿಮಾಸಂ’ ಎಂಬುದಾಗಿ ಆಷಾಡಮಾಸವನ್ನು ತಿಂಗಳಪೂರ್ತಿ ದೇವಿಪೂಜಾದಿಗಳಲ್ಲಿ ಕಳೆಯುವ ಪದ್ಧತಿಯುಂಟು, ಧನುರ್ಮಾಸದಲ್ಲಿ ಬ್ರಾಹ್ಮೀಮುಹೂರ್ತದಲ್ಲಿ ಕಾತ್ಯಾಯನೀವ್ರತವನ್ನು ಗೋಪಿಯರು ಆಚರಿಸಿ ಕೃಷ್ಣನನ್ನು ಒಲಿಸಿಕೊಂಡರೆಂದು ಭಾಗವತದಲ್ಲಿ ವರ್ಣಿಸಲಾಗಿದೆ. ಉತ್ತಮ ಪತಿಪ್ರಾಪ್ತಿಗಾಗಿ ಇಂದಿಗೂ ಈ ವ್ರತವನ್ನು ಭಾರತದ ಎಲ್ಲೆಡೆಗಳಲ್ಲಿ ಕನ್ಯೆಯರು ಆಚರಿಸಲಾಗುತ್ತದೆ. ಚಿತ್ರಾಪೂರ್ಣಿಮಾ ಹಾಗೂ ಇನ್ನಿತರ ಹುಣ್ಣಿಮೆಗಳಂದು ದೇವಿಯ ಯಂತ್ರ, ತಂತ್ರ, ಮಂತ್ರವಿಧಾನದ ವಿವಿಧ ಆರಾಧನೆಯನ್ನು ಸಾಧಕರು ಆಸ್ಥೆಯಿಂದ ಮಾಡುತ್ತಾರೆ. ಅಮಾವಾಸ್ಯೆಗಳಂದು ದೇವಿಯ ಗ್ರಾಮದೇವತಾರೂಪಗಳನ್ನು ಬಲಿ ಮುಂತಾದ ತಾಮಸೀ ಕ್ರಮಗಳಲ್ಲಿ ಇಂದಿಗೂ ಎಲ್ಲೆಡೆ ಆರಾಧಿಸಲಾಗುತ್ತದೆ.
ದೇವಿಯನ್ನು ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ---- ಎಂದೇ ಕೊಂಡಾಡಲಾಗಿದೆ. ನಮ್ಮ ಸನಾತನ ಸಂಸ್ಕೃತಿಯಲ್ಲಿ ’ದೈವಂ ಮಾನುಷರೂಪೇಣ’ ಎಂಬ ನಂಬಿಕೆ ಇದೆ. ನಾಮ ರೂಪಾತೀತಳಾದ ಜಗನ್ಮಾತೆಯ ತತ್ವ ಸ್ವರೂಪ ನಮ್ಮ ಮಾತು-ಮನಂಗಳಿಗೆ ನಿಲುಕದು. ಸೃಷ್ಟಿಯ ಒಳ ಹೊರಗೂ ಆಕೆಯೇ ಚೇತನವಾಗಿ ವ್ಯಾಪಿಸಿದ್ದಾಳೆ- ಯಾ ದೇವೀ ಸರ್ವ ಭೂತೇಷು ಚೇತನೇತ್ಯಭಿಧೀಯತೆ ನಮಸ್ತಸ್ಯೈ--. ಆದ್ದರಿಂದ ಆ ವಿಶ್ವಚೈತನ್ಯವನ್ನೇ ಆರಾಧಿಸುವ ಮೂಲಕ ಅವಳನ್ನೇ ತಲುಪುವ ಸುಂದರ ಭಾವ ನಮ್ಮಲ್ಲಿದೆ. ಹೀಗಾಗಿ ಜಗನ್ಮಾತೆಯನ್ನು ಆರಾಧಿಸಲು ದೇಗುಲ, ವಿಗ್ರಹ, ಹೋಮಾಗ್ನಿ, ಯಂತ್ರಾದಿಗಳಷ್ಟೇ ಅಲ್ಲ, ಭೂಮಿ. ಪಂಚಭೂತಗಳು, ಪ್ರಕೃತಿ, ಪರ್ವತ, ನದಿ, ಗೋವು, ಸುಮಂಗಲಿಯರು. ಕುಮಾರಿಯರು,  ವೃಕ್ಷ-ಬಳ್ಳಿ, ಚಿನ್ನ ಮುಂತಾದ ದ್ರವ್ಯಗಳಲ್ಲಿ----- ಹೀಗೆ ಎಲ್ಲೆಲ್ಲೂ ಅಹ್ವಾನಿಸಿ ಪೂಜಿಸುವ ಭಾವ ಅರ್ಥಪೂರ್ಣ. ಅಷ್ಟೆ ಅಲ್ಲ ಎಲ್ಲೆಲ್ಲಿ ವಿಶೇಷ ಶಕ್ತಿ, ಯುಕ್ತಿ, ಪ್ರತಿಭೆ, ಸತ್ವಾದಿಗಳು ಕಾಣುತವೋ ಅಲ್ಲೆಲ್ಲ ಜಗನ್ಮಾತೆಯ ವಿಭೂತಿಯನ್ನೇ ಗುರುತಿಸಿ ಆದರಿಸುವ ಭಾವವುಂಟು. ಗೀತೆಯಲ್ಲಿ ಭಗವಂತನೂ ಇದನ್ನೇ ಹೇಳುತ್ತಾನೆ- ಯದ್ಯದ್ ವಿಭೂತಿ ಮತ್ ಸತ್ವಂ ಶ್ತ್ರೀಮದೂರ್ಜಿತಮೇವ ವಾ ತತ್ತದೇವಾವಗಚ್ಛತ್ವಂ ಮಮ ತೇಜೋಂಶಸಂಭವಃ. (ಎಲ್ಲೆಲ್ಲಿ ಊರ್ಜಿತವಾಗಿ ಯಾವುದೇ ಶಕ್ತಿವಿಶೇಷ ಕಾಣಬರುತ್ತದೋ, ಅಲ್ಲೆಲ್ಲ ನನ್ನದೇ ತೇಂಜೋಶವಿದೆಯೆಂದು ತಿಳಿ).
ದೇವಿಯ ಮಾತೃತ್ವ ಹಾಗೂ ಕರುಣಾಭಾವಗಳು ಶೌರ್ಯ, ಪರಾಕ್ರಮಗಳೊಂದಿಗೆ ಮಿಳಿತವಾಗಿವೆ. ’ಸಾತ್ವಿಕವಾಗಿರಬೇಕು. ಆದರೆ ದುರ್ಬಲರಾಗಿ ಅಲ್ಲ’ ಎನ್ನುವುದನ್ನು ಈ ರೂಪ ಸಾರುತ್ತದೆ. ಸಕಲ ಮಾನವರಿಗೆ ಇದು ಆದರ್ಶಪ್ರಾಯ, ಸ್ತ್ರೀಯರಿಗಂತೂ ಈ ಮಾತೃತ್ವ ಹಾಗೂ ಶೌರ್ಯಗಳ ಮಿಳಿತ ರೂಪ ತುಂಬ ಅನುಸರಣೀಯ. ದೇವಿಯ ಶಕ್ತಿಸ್ವರೂಪದ ವೈಭವವು ಸ್ತ್ರೀಯನ್ನು ಅಬಲೆ ಎಂದು ಕರೆವ ಬಾಯಿಗಳನ್ನು ಮುಚ್ಚಿಸುತ್ತದೆ. ಭಾರತೀಯ ನಾರಿಯರು ಗೌರಿಯನ್ನು ಅನಾದಿಯಿಂದ ಆರಾಧಿಸುವುದರ ಹಿನ್ನಲೆಯ ಭಾವ ಅವಳಂತೆ ಸಾತ್ವಿಕತೆ, ಶೌರ್ಯ, ನೇತೃತ್ವ, ಕರ್ತೃತ್ವಶಕ್ತಿಗಳನ್ನು ಮೈಗೂಡಿಸಿಕೊಳ್ಳುವುದೇ ಆಗಿದೆ. ಯದ್ಭಾವಂ ತದ್ಭವತಿ ಎಂಬಂತೆ ದೇವಿಯ ಅಸ್ವರೂಪದ ನಿತ್ಯಧ್ಯಾನದಿಂದ ನಾವೂ ಅವಳಂತೆಯೇ ಆಗುತ್ತ ಪೂರತ್ವವನ್ನು ಪಡೆದುಕೊಳ್ಳುತ್ತೇವೆ. ಆದ್ದರಿಂದಲೇ ನಮ್ಮ ಹೆಣ್ಣು ಮಕ್ಕಳಿಗೆ ದೇವಿಯ ಹೆಸರನ್ನಿಟ್ಟು ಕರೆಯುವ ವಾಡಿಕೆಯೂ ಬಂದಿದೆ.   
ಶಕ್ತಿಪೂಜೆ ಕೇವಲ ಭಕ್ತಿಸಾಧನೆಗಾಗಿ ಮಾತ್ರ ಅಲ್ಲ, ದೇಶದ ಉದ್ಧಾರಕ್ಕಾಗಿಯೂ ಬಲಕೆ ಆಗಬೇಕು ಎಂದವರು ಸ್ವಾಮಿ ವಿವೇಕಾನಂದರು. ಶಕ್ತಿಸ್ವರೂಪಿಣಿಯರಾದ ನಾರಿಯರನ್ನು ಅವಮಾನಿಸದೆ, ಗುರುತಿಸಿ ಗೌರವಿಸಿದಾಗಲೆ ಭಾರತದ ನೈಜ ಪುನರುತ್ಥಾನ ಸಾಧ್ಯ ಎಂದು ಗುಡುಗುತ್ತಾರೆ.
ನಾವು ನಮ್ಮ ಮಾನುಷ ಮಿತಿಗಳನ್ನು ಮೀರಿ, ನಮ್ಮೊಳಗೆ ಸುಪ್ತವಾಗಿರುವ ಆದಿಶಕ್ತಿಯ ವೈಭವವನ್ನು ಗುರುತಿಸಿಕೊಂಡು ವಿಕಾಸಗೊಳ್ಳುತ್ತ ಹೋಗಬೇಕು. ಅಂತೆಯೇ ಅವಳಂತೆ ಅನಂತ ವಾತ್ಸಲ್ಯ ಔದಾರ್ಯಗಳಿಂದ ಸರ್ವಜನಹಿತಸಾಧಕರಾಗಬೇಕು. ದೈನ್ಯದ ಆವರಣದಿಂದ ನಾವೂ ಹೊರಬಂದು, ದೇಶವನ್ನು ಸಮಾಜವನ್ನೂ ಕಲ್ಯಾಣದ ಹಾದಿಯಲ್ಲಿ ನಡೆಸುವ ಧೀರ ಜನಾಂಗವಾಗುವಂತೆ ಜಗನ್ಮಾತೆಯ ಭವ್ಯಮಂಗಳ ಮೂರ್ತಿ ನಮಗೆ ಸ್ಫೂರ್ತಿಯೀಯಲಿ.

*****

1 ಕಾಮೆಂಟ್‌:

  1. Subh sanje sahodariyavare.Nimmannu sumaru sala tv alli adyatma vishleshakaragi bandag nodidini. VIJAYA VANI alli baruv nim lekhanagalannu oduttene. Nim agadha jnana kandu tumba santosh pattidini. nivu maduv vishleshane vaijnanikavagi kuda irutte, Nangu kuda adyatma bagge tilidukollu kutuhal ide. nan 3 jana hennu makkaligu adyatma jnana kodisoke prayatna padta idini. sumaru 22 varushagalinda Shri Siddeshwar swamigalinda pravachana kelta idini. avar prabhav nan tumba agide.ega nanage 45 varsh vaiyassu. bank nalli kelsa ide. ondu korate nannalli yavaglu kadutte egalu nanyake kramabaddavagi adyatma kalibahuda anta. adakke nimminda enu salahe kodtira?
    Namaskaragalondige
    Ninganna deginal

    ಪ್ರತ್ಯುತ್ತರಅಳಿಸಿ