ಶುಕ್ರವಾರ, ಮಾರ್ಚ್ 17, 2017

ಪ್ರಾರ್ಥನೆಯ ಮಹಿಮೆ
“ಪ್ರಾರ್ಥನೆ ಮಾಡು ಎಲ್ಲ ಒಳ್ಳೆಯದಾಗುತ್ತದೆ!” ಎಂಬ ಭರವಸೆಯ ಮಾತುಗಳು ಹಿರಿಯರಿಂದ ಕೇಳಿಬರುತ್ತದೆ. “ಹೇ ಭಗವನ್! ನನಗೂ ನನ್ನ ಪರಿವಾರದವರಿಗೂ ಒಳ್ಳೆಯದನ್ನು ಮಾಡು” ಎಂದು ಹೃದಯದುಂಬಿ ಕೇಳಿಕೊಳ್ಳುವ ಪ್ರಾರ್ಥನೆ ಸರ್ವೇಸಾಮನ್ಯ. ಇದಲ್ಲದೆ ಶುಭಕಾರ್ಯಗಳಿಗೆ ಮುಂದಾದಾಗ ಕುಲದೇವರಿಗೆ ಇಷ್ಟದೇವರಿಗೆ ಪೂಜೆ, ಪ್ರಾರ್ಥನೆ, ಹರಕೆ ಮುಂತಾದವನ್ನು ಸಲ್ಲಿಸುವುದೂ ವಾಡಿಕೆ. ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆಯಾದರೂ ಮನೆದೇವರಿಗಾಗಿ ಉಪವಾಸ, ಪೂಜೆ, ಹೋಮ, ತೀರ್ಥದರ್ಶನ ಮುಂತಾದವನ್ನು ಕೈಗೊಳ್ಳುವ ಪ್ರಾರ್ಥನಾವಿಧಾನಗಳು ಇವೆ. ನೋವು, ಅವಮಾನ, ಅನಿರೀಕ್ಷಿತ ಕಷ್ಟಕಾರ್ಪಣ್ಯಗಳು ಬಂದೊದಗಿದಾಗಲೂ ಥಟ್ಟನೆ ಕಣ್ಮುಗಿದು ದೇವರನ್ನು ಅದರನಿವಾರಣೆಗಾಗಿ ಪ್ರಾರ್ಥಿಸುತ್ತೇವೆ. ಕಷ್ಟವು ಅನಿವಾರ್ಯವೆನಿಸಿದಾಗ ಪ್ರಾರ್ಥನೆ ಜಪತಪಗಳ ಮೂಲಕ ಮನಸ್ಸನ್ನು ಹಗುರಗೊಳಿಸಿಕೊಳ್ಳುತ್ತೇವೆ. ನಿರ್ಣಯವನ್ನು ಮಾಡಲಾಗದೆ ಗೊಂದಲಕ್ಕೆ ಒಳಪಟ್ಟಾಗಲೂ ಮೌನ-ಪ್ರಾರ್ಥನೆ-ಹರಕೆ ಅಥವಾ ಪ್ರಶ್ನೆ ಹಾಕಿಸುವುದು, ಅಥವಾ ದೇವರ ಮುಂದೆ ಚೀಟಿ ಎತ್ತುವುದು ಮುಂತಾದುವನ್ನು ಮಾಡುತ್ತೇವೆ. ಇವುಗಳೂ ಪ್ರಾರ್ಥನೆಯ ವಿಧಾನಗಳೆ. ಶುಭವಾರ್ತೆ ಬಂದಾಗಲೂದೇವರ ಕೃಪೆ’ ಎಂದು ಕಣ್ಮುಚ್ಚಿ ಶರಣಾಗುವುದು, ಸಂತೋಷದಲ್ಲಿ ಒಂದು ಪೂಜೆ ಮಾಡಿಸಿ ಬಂಧುಮಿತ್ರರಿಗೆ ಸಿಹಿಹಂಚುವುದೂ ಉಂಟು. ಅಂತೆಯೇ ಕಾರ್ಯಸಿದ್ಧಿಗಾಗಿಯೂ ಪೂಜೆ, ಪ್ರಾರ್ಥನೆಗಳು ಸಲ್ಲುತ್ತವೆ. ಇದಲ್ಲದೆ, ಮನಃ ಪ್ರಸನ್ನತೆಯನ್ನಷ್ಟೇ ಕೋರಿ ದಿನನಿತ್ಯವೂ ದೇವರನ್ನು ಧ್ಯಾನಿಸುವ ಸದಾಚಾರವನ್ನೂ ಹಲವರು ಮಾಡುತ್ತಾರೆ. ಬೆಳಿಗ್ಗೆ ಸಂಜೆ ಕ್ಷಣಕಾಲ ಹಾಗೆ ಮೌನವಾಗಿ ಅಂತರ್ಮುಖವಾಗಿ ದೇವರನ್ನು ಪ್ರಾರ್ಥಿಸುವಲ್ಲಿ ಸಿಗುವ ಮನಶ್ಶಾಂತಿ ಅನಿರ್ವಚನೀಯವಾದದ್ದು. ಅದಕ್ಕಾಗಿ ಕೆಲವರು ಹಿಮಾಲಯಾದಿ ನಿರ್ಜನ ಸ್ಥಾನಗಳಿಗೆ ತೆರಳಿ ಕೆಲದಿನಗಳು ಅಲ್ಲಿ ಮೌನ- ಜಪ-ಧ್ಯಾನ-ಸೇವಾಚಟುವಟಿಕೆಗಳಲ್ಲಿ ತೊಡಗಿ ಬರುವುದೂ ಉಂಟು. ಹೀಗೆ ಪ್ರಾರ್ಥನೆಯನ್ನು ಹಲವು ಹಿನ್ನಲೆಗಳಲ್ಲಿ, ಹಲವು ಉದ್ದೇಶಗಳಿಂದ, ಹಲವು ರೀತಿಗಳಲ್ಲಿ ಮಾಡುವುದನ್ನು ಕಾಣುತ್ತೇವೆ. ಪ್ರಾರ್ಥನೆಯನ್ನುಹೀಗೇ ಮಾಡಬೇಕು’ ಎನ್ನುವಕಡ್ಡಾಯ ನಿಯಮಇಲ್ಲ. ಆಯಾ ಕುಲ, ಪ್ರದೇಶ, ಆಯ್ಕೆ, ಪರಂಪರೆಗಳನ್ನು ಅನುಸರಿಸಿ ಆಯಾ ಮಂತ್ರ-ತಂತ್ರ-ವಿಧಿ-ವಿಧಾನಗಳನ್ನು ಅಳವಡಿಸಿಕೊಂಡು ಮಾಡುವ ಎಲ್ಲ ವಿಧಾನಗಳೂ ಸರಿಯೇ. ಶ್ರದ್ಧೆ ಪ್ರಾಮಾಣಿಕತೆಗಳಿದ್ದರೇ ಸಾಕು. "ಅವರವರ ಭಾವಕ್ಕೆ ಅವರವರ ದರುಶನಕೆ ಅವರವರಿಗೆಲ್ಲ ಗುರು ನೀನೋಬ್ಬನೆ---" ಎಂಬ ಶರಣರ ವಚನ ಇದನ್ನೆ ಪ್ರತಿಫಲಿಸುತ್ತದೆ. ‘ನಮ್ಮ ವಿಧಾನವೇ ಶ್ರೇಷ್ಟ’ ಎಂದು ಜಂಭಕೊಚ್ಚಿಕೊಳ್ಳುವವರು ಮೂರ್ಖರೇ ಸರಿ. ‘ನಮ್ಮದೇ ಸರಿ, ನೀವು ನಿಮ್ಮದನ್ನು ಬಿಟ್ಟು ನಮ್ಮ ದಾರಿಗೇ ಬರಬೇಕು’ ಎಂದು ಆಗ್ರಹಿಸುವ, ಅದಕ್ಕಾಗಿ ತನುಮನಧನಗಳನ್ನು ವ್ಯಯಿಸುತ್ತ, ಇತರ ಜನರ ಪ್ರಾಣಮಾನಗಳನ್ನು ಬಲಿತೆಗೆದುಕೊಳ್ಳುವ ಉಗ್ರಭಾವದವರಂತೂ ಶತಮೂರ್ಖರು, ರಾಕ್ಷಸರೂ ಹೌದು!
ಪ್ರಾರ್ಥನೆ ಯೆಂದರೆ ನಿಜಕ್ಕೂ ಏನು? ರಮಣ ಮಹರ್ಷಿಗಳು ಹೇಳುತ್ತಾರೆನಾವು ಯಾವ ಮೂಲದಿಂದ ಬಂದಿದ್ದೇವೆಯೋ ಅದೇ ಮೂಲವನ್ನು ನಮ್ಮೊಳಗೆ ಮೌನದಲ್ಲಿ ಹುಡುಕುವ ಪ್ರಕ್ರಿಯೆಯೇ ಪ್ರಾರ್ಥನೆ” ಎಂದು. ಸ್ವಾಮಿ ಶಿವಾನಂದರು ಹೇಳುತ್ತಾರೆ- "ಅತ್ಯುತ್ತಮ ಪ್ರಾರ್ಥನೆ ಎಂದರೆ ದೇವರ ಚ್ಛೆಗೆ ಸಂಪೂರ್ಣ ಶರಣಾಗುವುದೇ" ಎಂದು. ಕಲೀಲ್ ಗಿಬ್ರಾನ್ ಹೇಳುತ್ತಾನೆ-  “ಪ್ರಾರ್ಥನೆಯ ಸಾಲುಗಳಲ್ಲಿ ಪದಗಳ ನಡುವಿನ ಮೌನದ ಅಂತರಗಳಲ್ಲೇ ನಿಜವಾದ ಪ್ರಾರ್ಥನೆ ಇರುತ್ತದೆ”! ಸ್ವಾಮಿ ವಿವೇಕಾನಂದರು ಹೇಳುತ್ತಾರೆ – “ಮನುಷ್ಯನು ತನ್ನ ಸಣ್ಣ will (ಇಚ್ಛೆ)ನ್ನು ಪರಮಾತ್ಮನ ಅನಂತ willಲ್ಲಿ ಐಕ್ಯವಾಗಿಸುವ ಪ್ರಕ್ರಿಯೆಯೇ ಪ್ರಾರ್ಥನೆ”! ಹೀಗೆ ಪ್ರಾಜ್ಞರು ಪ್ರಾರ್ಥನೆಯನ್ನು ವಿಶ್ಲೇಶಿಸಿದ್ದಾರೆ.
ಒಟ್ಟಿನಲ್ಲಿ ನಮ್ಮನ್ನು ಹೊರಗಡೆಯ ಜಡಜೀವನದ ವಿವರಗಳಿಂದ ಕಳಚಿಕೊಂಡು ಕ್ಷಣಕಾಲವಾದರೂ ನಮ್ಮೊಳಗೆ ನಾವು ನೆಲೆನಿಲ್ಲಲು ಅವಕಾಶವನ್ನು ಕಲ್ಪಿಸುವ ಮನೋವೇದಿಕೇ ಪ್ರಾರ್ಥನೆ. ಪ್ರಾರ್ಥನೆಯು ಮನುಷ್ಯನಲ್ಲಿ  ಅಪಾರವಾದ ಶಕ್ತಿಯನ್ನು ಉಜ್ಜೀವನಗೊಳಿಸುತ್ತದೆ- Battery Recharge ಮಾಡಿದಂತೆ ! ಅಂತರ್ಮುಖತೆಯ ಕ್ಷಣಗಳಲ್ಲಿ ನಮ್ಮೊಳಗಿನ ಶಾಂತಿ-ಶಕ್ತಿಗಳನ್ನು ನಾವು ಮರಳಿ ಪಡೆದು ಪುನಶ್ಚೇತನಗೊಳ್ಳುತ್ತೇವೆ. ಪ್ರಾರ್ಥನೆಯು ಅತ್ಯಂತ ವೈಯಕ್ತಿಕ. ಅದು ನಮ್ಮೊಳಗಿನ ಶ್ರದ್ಧಾ ಗುಣವನ್ನು ಜಾಗೃತಗೊಳಿಸುತ್ತದೆ. ಶ್ರದ್ಧೆ ಎಂದರೆ ಕೇವಲ ಅಂಧವಾದ ನಂಬಿಕೆ ಅಲ್ಲ. ಶಕ್ತಿ-ವಿಶ್ವಾಸ-ಉತ್ಸಾಹ-ಉಲ್ಲಾಸ-ದೃಢತೆ-ಧೃತಿ-ಸ್ಮೃತಿ ಹಾಗೂ ಜ್ಞಾನಗಳ ಊಟೆಗಳನ್ನು ನಮ್ಮಂತರಂಗದಿಂದ ಚಿಮ್ಮಿಸುವ ಮೂಲಗುಣ ಈ ಶ್ರದ್ಧೆ. ‘ಶ್ರದ್ಧಾವಾನ್ ಲಭತೇ ಜ್ಞಾನಂಎಂದೇ ಗೀತೋಕ್ತಿ. ಶ್ರದ್ಧೆಯ ಮನೋಭಾವ ಹೇಗಿರುತ್ತದೆ ಎನ್ನುವುದಕ್ಕೆ ಈ ಮುದ್ದಾದ ಪ್ರ ಸಂಗವನ್ನು ನೋಡಿ- ದೀರ್ಘಕಾಲ ಮಳೆಯಿಲ್ಲದೆ ತತ್ತರಿಸಿದ ಹಳ್ಳಿಯ ಜನರೆಲ್ಲ ಒಂದೆಡೇ ಸೇರಿ, ಸಾಧುಗಳೊಬ್ಬರ ನಿರ್ದೇಶನದಂತೆ ಭಾರೀ ಹೋಮ ಒಊಜೆಗಳನ್ನು ಮಾಡಿಸಿದರಂತೆ. ಅಲ್ಲಿ ನೆರೆದ ನೂರಾರು ಜನರ ಪೈಕಿ ಒಬ್ಬ ಪುಟ್ಟಬಾಲಕ ಮಾತ್ರ ಕೊಡೇ ಹಿಡಿದುಕೊಂಉ ಬಂದಿದ್ದನಂತೆ! ಅವನ ಶ್ರದ್ಧೆ ಎಂತಹದ್ದು!
ರಾಗುನಕ ಎಂಬ ಜಪಾನೀ ಸೈನ್ಯಾಧಿಪತಿ ಯುದ್ಧವೊಂದರಲ್ಲಿ ಸೋತು ಅಪಾರ ಸೈನಿಕರನ್ನೂ, ಶಸ್ತ್ರಾಸ್ತ್ರಗಳನ್ನೂ ಕಳೆದುಕೊಂಡು ಕಾಡಿನ ಬುದ್ಧನ ದೇಗುಲವೊಂದರಲ್ಲಿ ವಿಶ್ರಮಿಸಬೇಕಾಯಿತಂತೆ. ಉತ್ಸಾಹಗೆಟ್ಟ ಸೈನಿಕರಿಗೆ ಮತ್ತೆ ಹೊರಾಡುವ ಮನಸ್ಸಿರಲಿಲ್ಲ, ಓಡಿ ಹೋಗಿ ಜೀವ ಉಳಿಸಿಕೊಳ್ಳುವ ಯೋಚನೆ ಮಾಡುತ್ತಿದ್ದರು. ಆಗ ಸ್ವಾಭಿಮಾನಿಯಾದ ರಾಗುನಕ ಹೇಳಿದನಂತೆ "ಒಂದೇ ಒಂದು ಸಲ ಬುದ್ಧನ ವಿಗ್ರಹದ ಮುಂದೆ ನಾಣ್ಯವನ್ನು TOSS  ಮಾಡಿನೋಡೋಣ. Heads ಬಂದರೆ ನಾವು ಗೆಲ್ಲುತ್ತೇವೆ ಎಂದರ್ಥ, ಹೋರಾಡೋಣ, Tails ಬಂದರೆ ಸೋಲುತ್ತೇವೆ ಎಂದರ್ಥ, ಶರಣಾಗೋಣ”. ಎಲ್ಲರೂ ಒಪ್ಪಿದರುToss ಹಾಕಿದಾಗ Heads ಬಂತು! ಬುದ್ಧನ ಅನುಗ್ರಹ ತಮಗಿದೆ ಎಂದು ಉತ್ಸಾಹಗೊಂಡರು . ಸಂಖ್ಯೆಕಡಿಮೆ ಇದ್ದರೂ ಪರಾಕ್ರಮದಿಂದ ಹೋರಾಡಿ ಯುದ್ಧವನ್ನು ಗೆದ್ದೇಬಿಟ್ಟರು! ಅಸಾಧ್ಯವನ್ನು ಸುಸಾಧ್ಯವಾಗಿಸಿದ ರಾಗುನಕನನ್ನು ರಾಜ ಕೇಳಿದನಂತೆಇದೆಲ್ಲ ಹೇಗೆ ಸಾಧ್ಯವಾಯಿತು?’ ಎಂದು. ರಾಗುನಕ ಆಗ ತನ್ನ ಬಳಿಯಿದ್ದ ನಾಣ್ಯವನ್ನು ತೋರಿಸಿದನಂತೆ ಅದರಲ್ಲಿ ಎರಡು ಬದಿಯಲ್ಲೂ ತಲೆಯೇ ಇತ್ತು! ಬುದ್ಧನ ಅನುಗ್ರಹ ತಮಗಿದೆ ಎಂಬ ಭರವಸೆಯು ಸೈನಿಕರಲ್ಲಿ ಪವಾಡದಂತಹ ಬದಲಾವಣೆಯನ್ನು ತಂದಿತ್ತು! ಅವರ ಬತ್ತಿಹೋದ ಉತ್ಸಾಹ ಪರಾಕ್ರಮಗಳನ್ನು ಬಡಿದೆಬ್ಬಿಸಿತ್ತು! ದೇವತಾಶಕ್ತಿಯ ಭರವಸೆಯು ನಮ್ಮ ಮನದಲ್ಲಿ ಉಂಟುಮಾಡುವ ಪವಾಡ ಅನಿರ್ವಚನೀಯವಾದದ್ದು!
ರಾವಣ-ಕಂಸ-ತ್ರಿಪುರಾಸುರ ಮುಂತಾದ ಅಸುರರ ಲೋಕಕಂಟಕವೃತ್ತಿ ಅತಿಯಾದಾಗ ಋಷಿಗಳು ಸಜ್ಜನರರೂ ಎದೆದುಂಬಿ ಪ್ರಾರ್ಥಿಸಿದರಂತೆ. ಆಗ ರಾಮ-ಕೃಷ್ಣ-ಸುಬ್ರಹ್ಮಣ್ಯಾದಿಗಳು ಆವಿರ್ಭವಿಸಿದ್ದು. ಬ್ರಿಟಿಷರ ದರ್ಪ-ದೌರ್ಜನ್ಯಗಳು ಮುಗಿಲುಮುಟ್ಟುತ್ತಲೇ ಭಾರತೀಯರ ಆಕ್ರಂದನ ಪ್ರಾರ್ಥನೆಗಳು ದೇವರಿಗೆ ಮುಟ್ಟಿರಬೇಕು. ಅದಕ್ಕೇ ಹತ್ತೊOಭತ್ತನೆಯ ಶತಮಾನದಿಂದ ಸ್ವಾಮಿ ವಿವೇಕಾನಂದರು, ಅರೊಬಿಂದೋ, ಸರ್ದಾರ್ ಪಟೇಲ್, ಸುಭಾಷಬೋಸ್, ತಿಲಕ್, ಸಾವರ್ಕರ್, ಗಾಂಧಿ, ಭಗತ್ ಸಿಂಗ ----- ಹೀಗೆ ಸಾಲು ಸಾಲಾಗಿ ಸಾವಿರಾರು ದೇಶಭಕ್ತರ ಪಡೆಯೇ ಉಗಮಿಸಿ ಬರಲಾರಂಭಿಸಿ, ಜನರಲ್ಲಿ ನಿಸ್ತೇಜಗೊಂಡಿದ್ದ ಸ್ವಾಭಿಮಾನ, ಧೈರ್ಯ, ತ್ಯಾಗ ಹಾಗೂ ಹೋರಾಟದ ಕಿಚ್ಚು ಭುಗಿಲೆದ್ದು ದೇಶವನ್ನೆಲ್ಲ ವ್ಯಾಪಿಸಿತು. ಬಿಸಿಗೆ ಆಂಗ್ಲರು ಕಾಲುಕಿತ್ತಬೇಕಾಯಿತು! ಮಹತ್ಕಾರ್ಯಗಳೆಲ್ಲ  ಸಾಧ್ಯವಾಗುವುದು ಹೀಗೆಯೆ!
ಪ್ರಾರ್ಥನೆಯಿಂದ ಸಾಧ್ಯವಾಗದೇ ಇರುವ ಕೆಲಸವೇ ಇಲ್ಲ. ನಾವು ಬಯಸಿದ್ದನ್ನೆಲ್ಲ ದೇವರು ಅನುಗ್ರಹಿಸಿ ಬಿಡುತ್ತಾನೆಂದೇನಲ್ಲ. ಕೆಲವು ತಕ್ಷಣ ಈಡೇರಬಹುದು, ಕೆಲವು ಆಗದೆಯೂ ಹೋಗಬಹುದು. ಆದರೆ ಪ್ರಾರ್ಥಿಸುವ ಮನಸ್ಥಿತಿ ಮುಖ್ಯ, ವಿವೇಕವಿಲ್ಲದೆ ಭಾವುಕತೆಯ ಭರದಲ್ಲಿ ನಾವು ಕೇಳಿಕೊಳ್ಳುವುದೆಲ್ಲ ನಡೆಯಲೇ ಬೇಕೆ? ಕೆಲವೊಮ್ಮೆ ನಾವು ಪ್ರಾರ್ಥಿಸಿದ್ದು ನಮಗೆ ಸಿಗದಿದ್ದುದು ಒಳ್ಳೆಯದೇ ಆಯಿತು ಎಂದು ಬಹಳ ಕಾಲದ ನಂತರ ನಮಗೇ ಅನಿಸುವುದುಂಟು! ಹೀಗೆ ವಸ್ತುಲಾಭವನ್ನಷ್ಟೇ ಪ್ರಾರ್ಥನೆಯ ಗುರಿಯನ್ನಾಗಿಸಿಕೊಂಡರೆ ಶಾಂತಿ ಸಿಗದು. ಆದರೆ ಪ್ರಾರ್ಥನೆಯನ್ನು ರೂಢಿಸಿಕೊಂಡು ತನ್ನೊಳಗೆ ತಾನು ಶಾಂತಿಯನ್ನು ಅನುಭವಿಸುವ ಅಭ್ಯಾಸವನ್ನು ಯಾರು ಮಾಡಿಕೊಳ್ಳುತ್ತಾರೆ ಅವರಿಗೆ ಸಿದ್ಧಿಸುವ ಲಾಭ ಅಪಾರ. ಅಂತಹವರ ಅಂತರಂಗ ಪ್ರಸನ್ನವಾಗಿದ್ದು, ಅವರು ತೆಗೆದುಕೊಳ್ಳುವ ನಿರ್ಣಯಗಳು ವಿವೇಕಪೂರ್ಣವಾಗಿರುತ್ತವೆ. ದುಡುಕುತನ, ಭಾವುಕತೆ, ಅವಿವೇಕ, ರಾಗದ್ವೇಷಗಳು, ಹಠ ಇವುಗಳಿಂದ ಬಗ್ಗಡವಾದ ಮನಸ್ಸು ತೆಗೆದುಕೊಳ್ಳುವ ನಿರ್ಣಯಗಳಲ್ಲಿ ದೂರದೃಷ್ಟಿ ಇರುವುದಿಲ್ಲ.
ನಮ್ಮಲ್ಲಿ ಮನೋಬಲವನ್ನು ವರ್ಧಿಸುತ್ತ ಆತ್ಮನಿರೀಕ್ಷಣೆ ಹಾಗೂ ವಿವೇಕಗಳ ಬೆಳಕಲ್ಲಿ ನಡೆಯುವಂತೆ ಮಾಡುವಲ್ಲಿ ಪ್ರಾರ್ಥನೆಯ ಪಾತ್ರ ಮಹತ್ವದ್ದು.  ಜಗತ್ತನ್ನು ಮುನ್ನಡೇಸುವ ಕಾಣದ ಕೈಗೆ ತಲೆಬಾಗಿಯೂ, ನಮ್ಮ ವ್ಯಕ್ತಿತ್ವದ ನಾನ ಶಕ್ತಿಗಳನ್ನು ನಾವೇ ಸಾಕ್ಷಾತ್ಕರಿಸಿಕೊಳ್ಳುತ್ತ್ತ ಯಶಸ್ಸು-ಧನ್ಯತೆಯ ಗಮ್ಯವನ್ನು ಮುಟ್ಟುವಲ್ಲಿ ಪ್ರಾರ್ಥನೆ ಬಹಳ ಸಹಾಯಕವಾದ ಪ್ರೇರಕಶಕ್ತಿಯಾಗಿದೆ.
ಡಾ ಆರತೀ ವಿ ಬಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ