ಶುಕ್ರವಾರ, ಮಾರ್ಚ್ 17, 2017

ಮರ್ಯಾದಾ ಪುರುಷೋತ್ತಮ
ಶ್ರ‍ೀರಾಮಚಂದ್ರನ ಜೀವನ ವ್ಯಕ್ತಿತ್ವ ತ್ಯಾಗಗಳು ಭಾರತದ ಧರ್ಮ-ಸಂಸ್ಕೃತಿ-ಸಾಹಿತ್ಯ-ಕಲೆಗಳಿಗೆ ಸಮೃದ್ಧವಾಗಿ ಒದಗಿರುವ ವಸ್ತುವಿಶೇಷವೂ ಹೌದು. ರಾಮಚಂದ್ರನು ಕುಲಧರ್ಮವನ್ನು, ಪ್ರಜಾಹಿತವನ್ನು ಕಾಪಾಡುವುದಕ್ಕಾಗಿ, ರಾಜಸಂವಿಧಾನಕ್ಕೆ ವಿಧೇಯತೆಯನ್ನು ಸಲ್ಲಿಸುವುದಕ್ಕಾಗಿ ಗೈದ ತ್ಯಾಗ ಹಾಗೂ ನುಂಗಿ ಜೀರ್ಣಿಸಿಕೊಂಡ ಕಷ್ಟನಷ್ಟದುಃಖಗಳು ಮನುಕುಲಕ್ಕೆ ಸಾರ್ವಕಾಲಿಕ ಸಂದೇಶಗಳಾಗಿವೆ. ರಾಮನ ಸೂಕ್ಷ್ಮವಾದ ಧರ್ಮಪ್ರಜ್ಞೆಯನ್ನು ಎತ್ತಿ ತೋರುವ ಕೆಲವು ಸಂದರ್ಭಗಳನ್ನು ನೋಡೋಣ-
ಔದಾರ್ಯ ಹಾಗೂ ಜವಾಬ್ದಾರಿಯ ನಡೆ- ಸಾಮಾನ್ಯವಾಗಿ ಮನುಷ್ಯನಿಗೆ ಏನಾದರೂ ಅನ್ಯಾಯವಾದಾಗ, ತನ್ನ ಬೆಂಬಲಕ್ಕೆ ಬಂಧುಮಿತ್ರರ ಬೆಂಬಲವನ್ನು ಪಡೆಯತೊಡಗುವುದು ಲೋಕರೀತಿ. ಆದರೆ ರಾಮನು ತನಗೆ ಒದಗಿದ ವಿಷಮ ಪರಿಸ್ಥಿತಿಯಲ್ಲಿ ತನ್ನ ದುಃಖದುಮ್ಮಾನಗಳಿಗಿಂತಲೂ ತಂದೆ ಹಾಗೂ ಕುಲದ ಗೌರವವನ್ನೂ ಸಮಾಜದ ಶಾಂತಿಯನ್ನೂ ಕಾಪಾಡುವತ್ತ ಗಮನವಹಿಸಿದ. ಇನ್ನೇನು ಬೆಳಿಗ್ಗೆ ಪಟ್ಟಾಭಿಷೇಕವಾಗಬೇಕು ಎನ್ನುವಾಗ, ರಾತ್ರೋರಾತ್ರಿ ಕೈಕೇಯಿಯು ಅದನ್ನು ತಪ್ಪಿಸಿ ೧೪ ವರ್ಷಗಳ ವನವಾಸವನ್ನೂ ವಿಧಿಸಿದಳು. ಕೊಟ್ಟಮಾತಿಗೆ ಕಟ್ಟುಬಿದ್ದ ತಂದೆಯ ದಶರಥನ ಅಸಹಾಯಕತೆಯನ್ನರಿತ ರಾಮನು, ಉನ್ನತಮಟ್ಟದ ಸೈರಣೆಯನ್ನು ತೋರಿ, ಮರುಮಾತಿಲ್ಲದೆ ಮಹಾತ್ಯಾಗ ಗೈದು ತಂದೆಯ ಧರ್ಮಕ್ಕೆ ಸಹಕಾರವೀಯುತ್ತಾನೆ. ಕೈಕೇಯಿಯ ಭವನದಿಂದ ತನ್ನ ಭವನದೆಡೆಗೆ ನಡೆಯುವಾಗ, ಇಕ್ಕೆಲಗಳಲ್ಲೂ ಗೀತಿನೃತ್ಯಸಂಭ್ರಮದಲ್ಲಿ ತೊಡಗಿದ ಬಂಧುಮಿತ್ರರಿಗೆ, ತನಗಾದ ಮಹದನ್ಯಾಯವನ್ನೂ ಕಿಂಚಿತ್ತೂ ಕಾಣಗೊಡದಂತೆ ತನ್ನ ಶಾಂತಸ್ಮಿತವದನದ ಹಿಂದೆ ನೋವನ್ನು ಅವಿತಿಟ್ಟುಕೊಳ್ಳುತ್ತ ನಡೆಯುತ್ತಾನೆ. ಅಂತಃಪುರದ ಏಕಾಂತದಲ್ಲೇ ಆತನ ಮುಖದಲ್ಲಿ ದುಃಖ, ಕಣ್ಣೀರು, ವೈವರ್ಣ್ಯಗಳು ಕಾಣಿಸಿಕೊಳ್ಳುವುದು. ತಾನು ನೋವನ್ನು ತೋರಗೊಟ್ಟರೆ ಪರಿಸ್ಥಿತಿ ಏನಾಗಬಹುದು ಎನ್ನುವ ಪೂರ್ಣ ಎಚ್ಚರ ಅವನಿಗಿತ್ತು, ಅದನ್ನು ನಿಯಂತ್ರಿಸುವ ಮನಶ್ಶಕ್ತಿಯೂ ಅವನಲ್ಲಿತ್ತು. ಕ್ಷಣಕಾಲವೂ ತಡೆಯದೆ, ವನವಾಸಕ್ಕೆ ಸಜ್ಜಾಗುತ್ತಾನೆ. ಅಂತಹ ಮಾನಸಿಕ ಖೇದದ ಅವಸ್ಥೆಯಲ್ಲೂ ಸೀತೆಗೆ ಕರ್ತವ್ಯಾಕರ್ತವ್ಯಗಳನ್ನು ಉಪದೇಶಿಸುತ್ತಾನೆ. ಸೀತಾಲಕ್ಷ್ಮಣರು ಆಗ್ರಹದಿಂದ ಅವನೊಡನೆ ವನವಾಸಕ್ಕೆ ಹೊರಡುತ್ತಾರೆ.
ರಾತ್ರಿ ನಡೆದ ಅನಿರೀಕ್ಷಿತ ಬದಲಾವಣೆಗಳ ವಿಷಯ ಪ್ರಜೆಗಳಿಗೆಲ್ಲ ತಿಳಿದು, ಅವರೆಲ್ಲ ಪ್ರತಿಭಟನೆ, ಹಿಂಸಾಚಾರಗಳ ಮೂಲಕ ರಾಜಶಾಸನದ ವಿರುದ್ಧ ದಂಗೇಳುವುದು ಖಂಡಿತ. ಅಂತಹ ಪರಿಸ್ಥಿತಿಯು ಅಸಹಾಯಕನಾದ ತನ್ನ ವೃದ್ಧ ತಂದೆಗೆ ಬಾರದಿರಲಿ, ಜೊತೆಗೆ ಆ ನಿಮಿತ್ತವಾಗಿ ರಾಜ್ಯದಲ್ಲಿ ಕ್ಷೋಬೆ ಗಲಬೆಗಳಾಗುವುದು ಬೇಡ ಎನ್ನುವ ಜವಾಬ್ದಾರಿಯ ಧೋರಣೆ ರಾಮನದು. ಇನ್ನೂ ವಾರ್ತೆ ಸ್ಪಷ್ಟವಾಗಿ ಊರಲ್ಲಿ ಹರಡುವ ಮುನ್ನವೇ ಇರುಳಿನಲ್ಲೇ ಹೊರಟುಬಿಡುತ್ತಾನೆ. ಹಾಗೂ ವಿಷಯ ತಿಳಿದು ಅವನ ಹಿಂದೆ ಬಿದ್ದ ನೂರಾರು ಪ್ರಜೆಗಳನ್ನು ಯಾಮಾರಿಸಿ ಗಂಗೆಯನ್ನು ದಾಟಿ ಕಾಡಿಗೆ ಹೊರಟೇ ಬಿಡುತ್ತಾನೆ! ಮನಸ್ಸು ಮಾಡಿದ್ದರೆ ರಾಮನು ಪ್ರಜೆಗಳ ಅಭಿಪ್ರಾಯವನ್ನು ಸಂಗ್ರಹಿಸುತ್ತ, ನ್ಯಾಯಾನ್ಯಾಯಗಳನ್ನು ಚರ್ಚಿಸಿ, ಪಂಚಾಯತಿ ಮಾಡಿಸಿ, ಕೈಕೇಯಿಯನ್ನು ದೋಷಿಯಾಗಿಸಿ, ದಶರಥನನ್ನು ಮೂಲೆಗೆ ತಳ್ಳಿ, ಪ್ರಜೆಗಳ ನಾಯಕನಾಗಬಹುದಿತ್ತು. ದಶರಥನೇ ಹಾಗೆ ಮಾಡುವಂತೆ ರಾಮನಿಗೆ ಸೂಚಿಸುತ್ತಾನೆ ಕೂಡ! ಆದರೆ ತನ್ನೊಬ್ಬನು ಪದವಿ ತ್ಯಾಗಗೈಯ್ಯುವುದರ ಮೂಲಕ ರಘುಕುಲದ ಸತ್ಯವಾಕ್ಕಿನ ಪರಂಪರೆ, ತಂದೆಯ ಧರ್ಮಸಂಕಟ, ಕೈಕೇಯಿ ಅವಮಾನಗಳು ಹಾಗೂ ರಾಜ್ಯದಲ್ಲಿ ದಂಗೆವಿರೋಧಗಳು ತಪ್ಪುತ್ತವೆ ಎಂಬುದಾಗಿ ಆಲೋಚಿಸಿದ ಉದಾರ ಹೃದಯ ಶ್ರೀರಾಮಚಂದ್ರನದ್ದು!
ತ್ಯಾಗ ಹಾಗೂ ವಚನಪಾಲನೆ- ವನವಾಸದಲ್ಲಿದ್ದ ರಾಮನ ಮನವೊಲಿಸಿ ಹಿಂದಿರುಗಿಸುವ ಉದ್ದೇಶದಿಂದ ಸ್ವತಃ ಭರತನು ತಾಯಂದಿರು-ಮಂತ್ರಿ-ಅಮಾತ್ಯರುಗಳು-ಜನಪ್ರಮುಖರು ಹಾಗೂ ಸಕಲ ರಾಜಮರ್ಯಾದೆಗಳ ಸಮೇತವಾಗಿ ಬಂದು ಗೋಗರೆದರೂ ರಾಮನು ರಾಜ್ಯಕ್ಕೆ ಹಿಂದಿರುಗಲಿಲ್ಲ. ಕೊಟ್ಟ ಮಾತನ್ನು ಪಾಲಿಸುವುದಕ್ಕಿಂತ ಬೇರಾವುದೂ ದೊಡ್ಡದಲ್ಲ ಎನ್ನುವುದು ಅವನ ದೃಢ ನಿಲುವಾಗಿತ್ತು. ಆ ಸಂದರ್ಭದಲ್ಲಿ ಭರತನೊಂದಿಗೆ ರಾಮನು ಗೈಯುವ ಸಂಭಾಷಣೆಯಲ್ಲಿ ತನಗಾದ ಅನ್ಯಾಯದ ಬಗ್ಗೆ ಗೋಳು, ಬೇಸರಗಳು ಕಾಣುವುದಿಲ್ಲ, ರಾಮನ ಜನಪರ ಕಾಳಜಿ ಕಾಣಬರುತ್ತದೆ ! ಪ್ರಜೆಗಳು, ನ್ಯಾಯ-ವಾಣಿಜ್ಯ-ವ್ಯಾಪಾರ, ಆಡಳಿತ, ನಾಯಕತ್ವದ ಗುಣಗಳು, ಆರ್ಥಿಕ-ಸಾಮಾಜಿಕ-ಧಾರ್ಮಿಕ ವ್ಯವಸ್ಥೆ ಮುಂತಾದುವನ್ನೇ ಸುದೀರ್ಘವಾಗಿ ವಿಚಾರಿಸುತ್ತಾನೆ ರಾಮ! ರಾಮನ ಮಾತಿನಲ್ಲಿ ನಿರ್ವಹಣಶಾಸ್ತ್ರದ (Management) ಶಿಕ್ಷಣವನ್ನೇ ಪಡೆಯಬಹುದಾಗಿದೆ. ಯಾವ ಕಾರಣಕ್ಕೂ ಕೈಕೇಯಿಯನ್ನು ಅವಮಾನಿಸದಂತೆ ತಮ್ಮನಿಗೆ ಒತ್ತಿ ಹೇಳುತ್ತಾನೆ. ತನಗೆ ಘೋರ ಅನ್ಯಾಯ ಗೈದ ಕೈಕೇಯಿಯ ವಿಷಯದಲ್ಲಿನ ಆತನ ಕ್ಷಮಾಭಾವಕ್ಕೆ ಅದೆಷ್ಟು ದೊಡ್ಡದು! ಅಂತೂ ಭರತನನ್ನೇ ಮನವೊಲಿಸಿ ರಾಜ್ಯಾಡಳಿತದ ಭಾರವನ್ನು ವಹಿಸುವಂತೆ ಸೂಚಿಸಿ ಕಳುಹಿಸುತ್ತಾನೆ. ತಾನಾಗಿ ಒದಗಿ ಬಂದ ಪಟ್ಟವನ್ನೂ, ಆರ್ಷಮರ್ಯಾದೆಗಾಗಿ ಕೈಬಿಟ್ಟ ನಿಃಸ್ಪೃಹ ಹೃದಯವಿಲ್ಲಿ ಎದ್ದು ಕಾಣುತ್ತದೆ.
ಸದಾ ಜಾಗೃತಧರ್ಮಪ್ರಜ್ಞೆ- ವನವಾಸಕಾಲದಲ್ಲಿ ರಾಮಲಕ್ಷ್ಮಣರಿಗೆ ದಿವ್ಯಶಸ್ತ್ರಾಸ್ತ್ರಗಳನ್ನು ಕೊಡುಗೆಯಾಗಿ ಇತ್ತ ಋಷಿಮುನಿಗಳು ಹಲವರು. ಆಯುಧಗಳ ದೊಡ್ಡ ಹೊರೆಯನ್ನೇ ರಾಮಲಕ್ಷ್ಮಣರು ಹೊತ್ತು ನಡೆಯುವುದನ್ನು ಕಂಡು ಸೀತೆ ಒಮ್ಮೆ ರಾಮನಿಗೆ ಹೇಳುತ್ತಾಳೆ- ’ಸದಾ ಆಯುಧಗಳನ್ನು ಹೊಂದಿರುವುದರಿಂದ ಕ್ರೌರ್ಯಕ್ಕೆ ಪ್ರೇರಣೆ ಸಿಕ್ಕೀತು. ಇಂದ್ರನು ಒಂದು ಆಶ್ರಮದಲ್ಲಿದ್ದ ತಪಸ್ವಿಗಳ ತಪಸ್ಸನ್ನು ಕೆಡಿಸಲು ಅವರಿಗೆ ಒಂದು ಖಡ್ಗ ಕೊಟ್ಟು ಬಂದನಂತೆ. ಮೊದಮೊದಲು ಕ್ರೂರಪ್ರಾಣಿಗಳಿಂದ ಆತ್ಮರಕ್ಷಣೆಗಾಗಿ ಅದನ್ನು ಬಳಸುತ್ತಿದ್ದ ತಪಸ್ವಿಗಳು ಬರಬರುತ್ತ ಮುಗ್ಧಪ್ರಾಣಿಗಳನ್ನು ಹಿಂಸಿಸುತ್ತ ತಪೋಭಾವದಿಂದ ಜಾರಿದರಂತೆ. ನಾವು ಈ ಆಯುಧಗಳನ್ನು ಬಿಟ್ಟು ನಡೆಯಬಾರದೇಕೆ?" ರಾಮ ಕೊಡುವ ಉತ್ತರ ಬಹಳ ಅರ್ಥಪೂರ್ಣ- ‘ಕಾಡಲ್ಲಿರಲಿ ನಾಡಲ್ಲಿರಲಿ, ಸದಾ ಶಿಷ್ಟರಕ್ಷಣೆ ದುಷ್ಟನಿಗ್ರಹಕ್ಕಾಗಿ ಸನ್ನದ್ಧಾರಾಗಿರುವುದು ಕ್ಷತ್ರಿಯರ ಕರ್ತವ್ಯ, ಹಾಗಾಗಿ ಆಯುಧಗಳನ್ನು ಹೊತ್ತಿರುವುದಂತೂ ಅನಿವಾರ್ಯ, ಅದರ ದುರ್ವಿನಿಯೋಗವಾಗದಂತೆ ಆತಮ್ಸಂಯಮವಹಿಸುವುದೂ ನಮ್ಮ ಕರ್ತವ್ಯ”. ಇಲ್ಲಿ ನೋಡಿ- ‘ತನಗೇ ಅನ್ಯಾಯವಾಗಿರುವಾಗ ಮತ್ತಾರಿಗೇನಾದರೇನು?’ ಎಂಬ ಧೋರಣೆ ತೋರದೆ ಮತ್ತೊಬ್ಬರ ರಕ್ಷಣೆಗಾಗಿ ಸದಾ ಸನ್ನದ್ಧನಾಗಿರುವ ಜಾಗೃತಧರ್ಮಪ್ರಜ್ಞೆ ರಾಮನದು.
ಮರ್ಯಾದಾ ಪುರುಷೋತ್ತಮ- ವನವಾಸಕಾಲದಲ್ಲೂ ಅಕ್ಷರಶಃ ಎಲ್ಲ ವಿಹಿತಕರ್ಮಗಳನ್ನು ನೆರವೇರಿಸ್ದವನು ರಾಮ. ಶಾಂತಿಕರ್ಮಗಳನ್ನೂ, ಸಂಧ್ಯಾದಿಕ್ರಿಯೆಗಳನ್ನೂ, ತಂದೆಯ ಅಪರಕರ್ಮಗಳನ್ನೂ ವನವಾಸಕಾಲದಲ್ಲೂ ತಪ್ಪಿಸಲಿಲ್ಲ! ತನ್ನ ವನವಾಸವ್ರತವನ್ನೂ ಎಷ್ಟು ಅಚ್ಚುಕಟ್ಟಾಗಿ ಪಾಲಿಸಿದ ಎಂದರೆ, ಆ ೧೪ ವರ್ಷಗಳ ಕಾಲದಲ್ಲಿ ಯಾವ ನಗರವನ್ನೂ ಪ್ರವೇಶಿಸಲಿಲ್ಲ. ಕಿಷ್ಕಿಂಧಾ ಹಾಗೂ ಲಂಕಾನಗರಗಳ ಗಡಿಯಲ್ಲೀ ನಿಂತು, ಅಲ್ಲಿಂದಲೇ ಸುಗ್ರೀವ ಮೈತ್ರಿಯನ್ನೂ, ಸೀತಾನ್ವೇಷಣದ ತಂತ್ರಗಾರಿಕೆಯನ್ನೂ, ರಾವಣನೊಂದಿಗಿನ ಯುದ್ಧವನ್ನೂ ನಿರ್ವಹಿಸಿದ.
ಸಕಾರಾತ್ಮಕ ಭಾವ- ವನವಾಸಕಾಲದಲ್ಲಿ ಕಣ್ಣೀರು ನಿರಾಶೆಗಳಲ್ಲಿ ಕಾಲ ವ್ಯರ್ಥ ಮಾಡದೆ, ಹಲವು ಆಶ್ರಮಗಳಿಗೆ ಭೇಟಿ ಕೊಡುತ್ತ, ಋಷಿಮುನಿಗಳೊಂದಿಗೆ ಶಾಸ್ತ್ರಚರ್ಚೆಗೈಯುತ್ತ, ಪ್ರಕೃತಿಯ ಬೆಡಗನ್ನು ಆಸ್ವಾದಿಸುತ್ತ ಕಾಲ ಕಳೆದುದು ರಾಮನ Optimism (ಸಕಾರಾತ್ಮಕತೆ)ಗೆ ಕನ್ನಡಿ ಹಿಡಿಯುತ್ತದೆ. ಇರುವ, ಇಲ್ಲದಿರುವ ಸಂಕಷ್ಟಗಳಿಗಾಗಿ ಗೋಗರೆಯುವ ಹಾಗೂ ಎಲ್ಲರ ಸಹಾನುಭೂತಿಯನ್ನು ಗೆಲ್ಲುವುದರಲ್ಲೇ ‘ಸುರಕ್ಷೆ’ಯನ್ನು ಹುಡುಕಲೆಣೆಸುವ ಸಣ್ಣ ಮನಸ್ಸಿನ ಮನುಷ್ಯನಿಗೆ ರಾಮನ ಕಷ್ಟಸಹಿಷ್ಣುತೆಯ ಶೈಲಿ ಒಂದು ದೊಡ್ಡ ಸಂದೇಶ.
ಸೂಕ್ಷ್ಮಸಂವೇದನಶೀಲತೆ- ರಾಮನ ಸೂಕ್ಷ್ಮಮನಸ್ಸು ಪರರ ಭಾವನೆಗಳಿಗೆ ಅದೆಷ್ಟು ಮಿಡಿಯುತ್ತಿತ್ತು ಎನ್ನುವುದಕ್ಕೆ ಮತ್ತೊಂದು ಉದಾಹಾರಣೆ- ರಾವಣನನ್ನು ಸಂಹರಿಸಿ, ಸೀತೆಯನ್ನು ಮರಳಿ ಪಡೆದು, ಅಯೋಧ್ಯೆಯತ್ತ ಹೊರಟುನಿಂತ ರಾಮ. ಅತ್ತ ೧೪ ವರ್ಷಗಳು ಮುಗಿಯುತ್ತಲೇ ರಾಮನ ಆಗಮನದಲ್ಲಿ ತಡವಾದರೆ ತಾನು ಅಗ್ನಿಪ್ರವೇಶ ಮಾಡುವುದಾಗಿ ಭರತ ಹೇಳಿದ್ದ. ರಾಮನು ಸೀತಾ-ಲಕ್ಷ್ಮಣ-ಹನುಮದಾದಿಗಳೊಂದಿಗೆ ಪುಷ್ಪಕವಿಮಾನದಲ್ಲಿ ದೂರದ ಅಯೋಧ್ಯೆಯತ್ತ ಆಕಾಶಗಮನ ಮಾಡುತ್ತಿದ್ದಾಗ, ಹನುಮಂತನನ್ನು ಕರೆದು ಹೇಳುತ್ತಾನೆ- "ನೋಡು, ನಮ್ಮ ವಿಮಾನ ತಲುಪುವ ಮುನ್ನವೇ ನೀನು ವಾಯುವೇಗದಲ್ಲಿ ಚಲಿಸಿ ಅಯೋಧ್ಯೆಯ ಗಡಿಯಲ್ಲಿನ ನಂದಿಗ್ರಾಮವನ್ನು ತಲುಪಿ ಭರತನನ್ನು ಭೇಟಿಯಾಗಿ, ನಾನು ಬರುತ್ತಿರುವ ವಿಷಯವನ್ನು ತಿಳಿಸು. ಅವನ ಮುಖಭಾವವನ್ನು ಗಮನಿಸು. ಆತನಿಗೆ ನನ್ನ ಆಗಮನ ಸಂತಸ ತಂದಿದ್ದರೆ ಹೇಳು, ಅಲ್ಲಿಗೆ ಬರುತ್ತೇನೆ. ಅವನಲ್ಲಿ ಕಿಂಚಿತ್ತಾದರೂ ಅಸಮಾದಾನವು ಗಮನಕ್ಕೆ ಬಂದರೆ ತಿಳಿಸು, ನಾನು ಮತ್ತೆ ವನವಾಸಕ್ಕೆ ಹಿಂದಿರುಗುತ್ತೇನೆ. ಭರತನು ನಿರುದ್ವಿಗ್ನನಾಗಿ ರಾಜ್ಯಾಧಿಕಾರವನ್ನು ಅನುಭವಿಸಲಿ". ಭರತನಿಗೆ ಇಷ್ಟು ವರ್ಷ ರಾಜ್ಯಾಡಳಿತವನ್ನು ಮಾಡಿ ಅದರ ಮೇಲೆ ಮಮಕಾರ ಹುಟ್ಟಿದ್ದಲ್ಲಿ, ಆತನೇ ರಾಜನಾಗಿ ಮುಂದುವರೆಯಲಿ ಎನ್ನುವ ಉದಾರಭಾವ ರಾಮನದು! ತನಗೆ ಅದರಿಂದ ಆಗುವ ನಷ್ಟ ಅನ್ಯಾಯಗಳ ಬಗ್ಗೆ ಖೇದವಿಲ್ಲ, ಪ್ರಾಣಪ್ರಿಯನಾದ ಭರತನ ಮನಸ್ಸು ನಿರುದ್ವಿಗ್ನವಾಗಿರುವುದೇ ಆತನಿಗೆ ಮುಖ್ಯ. ಆದರೆ ಧರ್ಮಾತ್ಮನಾದ ಭರತನು ತಾನು ಅಯೋಧ್ಯೆಯನ್ನು ಭಕ್ತಿಗೌರವಗಳಿಂದ ರಾಮನಿದೆ ಪ್ರತ್ಯರ್ಪಿಸುತ್ತಾನೆ ಎನ್ನಿ.
ಉತ್ತಮ ಆಡಳಿತಗಾರ- ರಾಜನಾಗಿ ರಾಮನು ರಾಜ್ಯದ ಧಾರ್ಮಿಕ-ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕರಂಗಗಳಲ್ಲಿ ಸರ್ವತೋಮುಖ ಪ್ರಗತಿ ಎಂತಹದ್ದೆಂದರೆ, ಆದರ್ಶ ರಾಜ್ಯದ ಕಲ್ಪನೆಗೆ ‘ರಾಮರಾಜ್ಯ’ ಎನ್ನುವುದೇ ಪರ್ಯಾಯ ನಾಮವಾಗಿ ನಿಂತಿದೆ. ಅಂತಹ ಆದರ್ಶವನ್ನು ಸಾಧಿಸಬೇಕಾದರೆ ರಾಮನ ಕಾರ್ಯನಿಷ್ಟೆ, ಕಾರ್ಯಕೌಶಲ ಹಾಗೂ ಪ್ರಾಮಾಣಿಕ ಶ್ರಮವೆಷ್ಟಿದ್ದಿರಬಹುದು ಎನ್ನುವುದನ್ನೂ ಊಹಿಸಬೇಕು.
‘ರಾಮನು ದೇವರಪ್ಪ, ಏನು ಬೇಕಾದರೂ ಎನ್ನಿ’ ಎನ್ನುತ್ತ, ಆತನ ಮಾನುಷಾವತಾರದ ಸಾರವನ್ನು ಕಳೆದುಕೊಳ್ಳುವ ಮೂರ್ಖರು ನಾವಾಗಬಾರದು. ರಾಮ ಉದಾರ ನಿಷ್ಕಳಂಕ ನಿಷ್ಠಾಯುತ ಜೀವನ, ನಮ್ಮೆಲ್ಲರಿಗೂ ದಾರಿದೀಪವಾಗಲಿ.


ಡಾ ಆರತೀ ವಿ ಬಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ