ಶುಕ್ರವಾರ, ಮಾರ್ಚ್ 17, 2017

ಜಪ
ಜಪ ಎನ್ನುವುದು ಮನೋನಿಯಂತ್ರಣಕ್ಕೆ ಒಮ್ದು ಅದ್ಭುತ ಸಾಧನೆ ಎನ್ನುವುದನ್ನು ತಮ್ಮ ಧ್ಯಾನ-ಸಂಶೋಧನೆಗಳ ಮೂಳಕ ಆರ್ಷಋಷಿಗಳು ಶತಮಾನಗಳ ಹಿಂದೆಯೇ ಕಂಡುಕೊಂಡರು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ ‘ಯಜ್ಞಾನಾಂ ಜಪ ಯಜ್ಞೋಸ್ಮಿ’ ಅಂದರೆ- ‘ಯಜ್ಞಗಳ ಪೈಕಿ ನಾನು (ಶ್ರೇಷ್ಟವಾದ) ಜಪಯಜ್ಞ’. ಜಪ ಎನ್ನುವುದು ಕೇವಲ ನಂಬುಗೆಯ ವಿಷಯವಲ್ಲ. ಅದು ಮನಸ್ಸಿನ ಏಕಾಗ್ರತೆ, ಇಚ್ಛಾ ಶಕ್ತಿ ಹಾಗೂ ಸಂಕಲ್ಪಶಕ್ತಿಗಳನ್ನು ವರ್ಧಿಸುವ ಸಾಧನವಾಗಿದೆ. ಜಪದಿಂದ ನಮ್ಮ ಅಂತರಂಗದಲ್ಲಿ ಹಲವು ಸುಪ್ತಶಕ್ತಿಗಳು ಅಭಿವ್ಯಕ್ತವಾಗುತ್ತವೆ, ಸಿದ್ಧಿಯನ್ನು ತರುತ್ತವೆ.
ದುಃಖ, ನಿರಾಶೆ, ಬೇಸರ, ಕೋಪ ಮುಂತಾದ ನಕಾರತ್ಮಕ ಭಾವಗಳು ಭುಗಿಲೆದ್ದು ಮನಸ್ಸನ್ನು  ಕಲಕಿದಾಗ ಜಪಕ್ಕೆ ಶರಣಾಗುವುದು ಉತ್ತಮ ಪರಿಹಾರ. ಜಪವು ನೆಮ್ಮದಿಯನ್ನು ವರ್ಧಿಸಬಲ್ಲ ತಂತ್ರವಾಗಿದೆ. ದ್ಯಾನಾಭ್ಯಾಸಕ್ಕೂ ಇದು ತುಂಬ ಸಹಕಾರಿ. ಜಪಧ್ಯಾನಗಳನ್ನು ಒಟ್ಟೊಟ್ಟಿಗೇ ಮಾಡುವುದೇ ಭಕ್ತಿಯೋಗದಲ್ಲಿ ಬಹಳ ಪ್ರಚಲಿತ ಪದ್ಧತಿ. ಧ್ಯಾನದಲ್ಲಿ ಮನಸ್ಸು ತಲ್ಲೀನವಾಗಲು ಬೇಕಾಗುವ ಏಕಾಗ್ರತೆಯನ್ನು ತನ್ಮಯತೆಯನ್ನು ಜಪವು ತಂದುಕೊಡಬಲ್ಲುದು. ಸಂಕಲ್ಪಪೂರ್ವಕವಾಗಿ ಮಾಡುವ ಜಪಯೋಗದಿಂದ ಕಾರ್ಯಸಿದ್ಧಿಯಾಗುತ್ತದೆ. ದೇವರ ದರ್ಶನಕ್ಕಾಗಿ, ನೆಮ್ಮದಿಗಾಗಿ, ಮನೋನ್ನತಿಗಾಗಿ, ಪ್ರಾಯಶ್ಚಿತ್ತಕ್ಕಾಗಿ, ಸಂತಾನಭಾಗ್ಯ, ಐಶ್ವರ್ಯಪ್ರಾಪ್ತಿ ಮುಂತಾದ ಹಲವು ಯೋಗ-ಭೋಗಗಳನ್ನು ಬಯಸಿ ಸಂಕಲ್ಪಪೂರ್ವಕ ಜಪಯೋಗವನ್ನು ಮಾಡಲಾಗುತ್ತದೆ. ಎಲ್ಲ ಶಬ್ದಗಳು ದೇವಶಕ್ತಿಗಳು ಓಂಕಾರದಿಂದ ಉತ್ಪತ್ತಿಯಾಗಿ ಅಲ್ಲೇ ಲಯವಾಗುವುದರಿಂದ ಪ್ರತಿಯೊಂದು ನಾಮವನ್ನೂ ಮಂತ್ರವನ್ನು ಓಂಕಾರದೊಂದಿಗೆಯೇ ಹೇಳುವುದು ಪದ್ಧತಿ.
ಒಂದೆಡೆ ಕುಳಿತು ತನ್ಮಯವಾಗಿ ಸಾವಿರಗಟ್ಟಲೆ ಜಪಮಾಡುವುದು ಸುಲಭಸಾಧ್ಯವಲ್ಲ. ನಮ್ಮೊಳಗಿನ ಆಲಸ್ಯ, ಅಸಹನೆ ಹಾಗೂ ದುರ್ಬಲ ಇಚ್ಛಾಶಕ್ತಿಯು ನಮ್ಮನ್ನು ಜಪದಲ್ಲಿ ತೊಡಗಲು ಬಿಡುವುದೇ ಇಲ್ಲ! ಬಿಟ್ಟರೂ ವಿಚಲಿತಗೊಳಿಸುತ್ತಲೇ ಇರುತ್ತವೆ. ಅಥವಾ ಕಾಟಾಚಾರಕ್ಕಾಗಿ ಮಾಡಿಮುಗಿಸಿ ಏಳೂವಂತೆ ಮಾಡುತ್ತವೆ. ಲೆಕ್ಕಕ್ಕಾಗಿ ಒಂದೆರಡು ನಿಮಿಷ ಜಪದ ಶಾಸ್ತ್ರ ಮಾಡಿಮುಗಿಸಿ ‘ಇದರಿಂದ ನನಗೇನು ಆಗಿಲ್ಲವಲ್ಲ?!” ಎಂದು ಉಡಾಫೆ ಮಾತನಾಡಬಾರದು. ಒಂದೆರಡು ತುತ್ತು ಅನ್ನದಿಂದ ಹೊಟ್ಟೆ ತುಂಬೀತೆ? ಅಂತೆಯೇ ಮನಸ್ಸು ಹದಕ್ಕೆ ಬರುವ ತನಕ ಜಪವನ್ನು ಎಡಬಿಡದೆ ದೀರ್ಘಕಾಲ ಮಾಡಬೇಕು, ಆಗಲೆ ಅದರ ಪ್ರಭಾವ ಅನುಭವವೇದ್ಯವಾದೀತು. ಈ ಕಾರಣದಿಂದಲೇ ಕನಿಷ್ಟ ೧೦೮ ಸಲವಾದರೂ ಜಪ ಮಾಡಬೇಕು ಎನ್ನಲಾಗುತ್ತದೆ. ಸಾವಿರಾರು, ಲಕ್ಷೋಪಲಕ್ಷ ಸಂಖ್ಯೆಯಲ್ಲೂ ಮಾಡಿ ಸಿದ್ಧಿಯನ್ನು ಪಡೆದವರುಂಟು. 
ಇಷ್ಟದೇವತೆಯ ಮಂತ್ರವನ್ನಾಗಲಿ ನಾಮವನ್ನಾಗಲಿ ಅಥವಾ ಓಂಕಾರವನ್ನಾಗಲಿ ಒಮ್ಮನದಿಂದ ನೂರಾರು ಸಂಖ್ಯೆಯಲ್ಲಿ ದೀರ್ಘಕಾಲ ಜಪ ಮಾಡಬೇಕು. ಜಪಾನುಷ್ಠಾನದ ಕಾಲದಲ್ಲಿ ಸತ್ಯ, ಧರ್ಮ, ಕ್ಷಮೆ, ಶಾಂತಿ ಮುಂತಾದವುಗಳನ್ನು ಅಭ್ಯಾಸ ಮಾಡಬೇಕು. ಆಗ ಜಪದ ಮಹಿಮೆ ಸಾಧಕನಲ್ಲಿ ಪರಿಣಾಮವನ್ನು ಬೀರಲಾರಂಭಿಸುತ್ತದೆ. ನಿರಂತರ ಜಪದಿಂದ ‘ಅಜಪ-ಜಪ’ ಎನ್ನುವ ಸಿದ್ಧಿಯುಂಟಾಗುತ್ತದೆ ಎನ್ನಲಾಗುತ್ತದೆ. (ಅಜಪ-ಜಪ ಎಂದರೆ ನಾವು ಪ್ರಯತ್ನಪೂರ್ವಕವಾಗಿ ಮಾಡದಿದ್ದರೂ ತಾನೇ ತಾನಾಗಿ ನಮ್ಮ ಸುಪ್ತಮನಸ್ಸಿನಿಂದ ಮೂಡಿಬರುವ ನಾಮಜಪ). ಇದರಿಂದ ಚಿತ್ತಶುದ್ಧಿ ಹಾಗೂ ಸ್ಥೈರ್ಯಗಳು ತಾವಾಗಿಯೇ ಆಗುತ್ತವೆ.  
ಹಲವು ಜಪಯೋಗಸಿದ್ಧರ ಕಥೆಗಳನ್ನು ನಾವು ಪುರಾಣೇತಿಹಾಸ-ಕಾವ್ಯ-ಜಾನಪದ ಸಾಹಿತ್ಯದಲ್ಲಿ ಹಾಗೂ ಅರ್ವಾಚೀನ ಇಲಿಹಾಸದಲ್ಲೂ ಕಾಣುತ್ತೇವೆ. ಚಿತ್ರಕೇತು ಎನ್ನುವ ಮಹಾರಾಜನು ಉತ್ತಮ ಪುತ್ರಪ್ರಾಪ್ತಿಗಾಗಿ ಮಾಡಿದ ಜಪಯಜ್ಞದ ಕಥೆ ಭಾಗವತಪುರಾಣದಲ್ಲಿದೆ. ಅಂತೆಯೇ ವಿಶ್ವಾಮಿತ್ರಾದಿ ಮಹಾತ್ಮರಿಗೆ ‘ಜಪತಾಂ ಶ್ರೇಷ್ಟಃ’ ಎನ್ನುವ ವಿಶೇಷಣಗಳನ್ನು ಕೂಡಿಸುವುದು ಕಾಣಬರುತ್ತದೆ. ರಾಮಕೃಷ್ಣ ಪರಮಹಂಸರ ಧರ್ಮಪತ್ನಿಯಾದ ಶ್ರೀ ಶಾರದಾದೇವಿಯವರು  ಬ್ರಾಹ್ಮೀಮುಹೂರ್ತದಲ್ಲೆದ್ದು ಲಕ್ಷಗಟ್ಟಲೆ ಜಪವನ್ನು ಮಾಡುತ್ತಿದ್ದರಂತೆ. ಅಂತೆಯೇ ಅಘೋರಮಣಿದೇವಿ ಎನ್ನುವ ಬಂಗಾಳದ ಸಂತಮಹಿಳೆ ೪೦ ವರ್ಷಗಳ ಕಾಲ ಅವಿರತವಾಗಿ ಲಕ್ಷಗಟ್ಟಲೆ ಜಪವನ್ನು ಮಾಡಿ ಬಾಲಗೋಪಾಲನ ಸಾಕ್ಷಾತ್ಕಾರವನ್ನು ಪಡೆದಳಂತೆ. ಚೈತನ್ಯಮಹಾಪ್ರಭುಗಳ ಪತ್ನಿ ವಿಷ್ಣುಪ್ರಿಯಾ ಒಂದೊಂದು ಅಕ್ಕಿಕಾಳಿಗೂ ಒಂದೊಂದು ನಾಮಜಪವನ್ನು ಮಾಡಿ ಆ ಅಕ್ಕಿರಾಶಿಯನ್ನು ಬೇಯಿಸಿ ಅನ್ನನೈವೇದ್ಯಮಾಡಿ ಸೇವಿಸುತ್ತಿದ್ದಳಂತೆ! ಇನ್ನು ವಿದ್ಯಾರಣ್ಯ ಮಹರ್ಷಿಗಳು ೨೪ ಲಕ್ಷ ಗಾಯತ್ರೀ ಪುರಶ್ಚರಣವನ್ನು ಮಾಡಿದಾಗ ಸುವರ್ಣವೃಷ್ಟಿ(ಅಪಾರ ಧನಪ್ರಾಪ್ತಿ ಎಂದು ಅರ್ಥೈಸಬಹುದು) ಉಂಟಾಗಿ ಕರ್ನಾಟಸಾಮ್ರಾಜ್ಯದ ಸ್ಥಾಪನೆಗೆ ಒದಗಿತ್ತು ಎನ್ನುವುದು ಇತಿಹಾಸದಲ್ಲಿ ದಾಖಲಾದ ವಿಷಯ. 
ನಿರಂತರವೂ ಜಪದಲ್ಲಿ ತೊಡಗಲು ಸಹಾಯಕವಾಗುವಂತೆ ಜಪಮಣಿಯನ್ನು ಹೊತ್ತ ಪುಟ್ಟ ಚೀಲಗಳನ್ನು ತಮ್ಮ ಕೈಗಳಿಗೆ ಕಟ್ಟಿಕೊಂಡು ಓಡಾಡುವವರನ್ನು ನಾವು ಹಿಮಾಲಯದ ತೀರ್ಥಕ್ಷೇತ್ರಗಳಲ್ಲಿ ಹೇರಳವಾಗಿ ನೋಡಬಹುದು. ಜಪವನ್ನು ಕೈಯಲ್ಲಿ ಎಣಿಸಿ ಮಾಡುವ ಕ್ರಮವೂ ಇದೆ, ಜಪಮಣಿಯಿಂದ ಮಾಡುವ ಕ್ರಮವೂ ಇದೆ. ಎಣಿಕೆಯ ಆಧುನಿಕ ಕರಯಂತ್ರಗಳು ಇದೀಗ ಸಿಗುತ್ತವೆ ಎನ್ನಿ! ಹಿಂದುಗಳಲ್ಲದೆ ಬೌದ್ಧರು, ಜೈನರು, ಸಿಕ್ಖರೂ ಕೂಡ ಜಪಾನುಷ್ಠಾನ ಮಾಡುತ್ತಾರೆ.  
ಉಪಾಕರ್ಮದ ಉತ್ತರದಲ್ಲಿ ಮಾಡುವ ಗಾಯತ್ರಿ ಪುರಶ್ಚರಣ ಅತ್ಯಂತ ಪುರಾತನ ಪದ್ಧತಿ. ದೇವತಾಕಾರ್ಯಾಂತ್ಯದಲ್ಲಿ ಮಂತ್ರಲೋಪ- ಕ್ರಿಯಾಲೋಪ- ಭಕ್ತಿಲೋಪಗಳಿಗಾಗಿ ‘ಅಚ್ಯುತ ಅನಂತ ಗೋವಿಂದ’ ನಾಮತ್ರಯವನ್ನು ಜಪಿಸುವುದುಂಟು. ಬೇರೆಯವರು ಕುಳಿತೆದ್ದ ಸ್ಥಳದಲ್ಲಿ ನಾವು ಕೂರಬೇಕಾದಾಗ ‘ಹರಿಃ ಓಂ’ ಎಂದು ಉಚ್ಚರಿಸುತ್ತ ಕೂರುವುಸು ಸಂಪ್ರದಾಯ. ಇದೆಲ್ಲ ಮಂತ್ರಶುದ್ಧೀಕರಣದ ಒಂದು ಕ್ರಮ. ‘ಶ್ರೀ ರಾಮ ರಾಮ ರಾಮ’ ಎಂದು ಜಪಿಸಿಸುವುದು ಸಹಸ್ರನಾಮಕ್ಕೆ ತುಲ್ಯ ಎಂದು ವಿಷ್ಣು ಸಹಸ್ರನಾಮಸ್ತೋತ್ರದ ಪಶ್ಚಾತ್ ಭಾಗ ಸಾರುತ್ತದೆ.

ಹೀಗೆ ನಮ್ಮ ಅಂತರಂಗದ ನೆಮ್ಮದಿ ಶಾಂತಿ ಪ್ರಸನ್ನತೆಗಳನ್ನು ಉಳಿಸಿ ಬೆಳೆಸಿಕೊಳ್ಳಲು ಹಾಗೂ ಮನಶ್ಶಕ್ತಿ ಸಂಕಲ್ಪ ಯೋಗಸಾಧನೆಗಳಲ್ಲಿ ಜಯಿಸಲು ಪ್ರಾಯಶ್ಚಿತ್ತಕ್ಕಾಗಿಯೂ ಜಪಯೋಗ ತುಂಬ ಸಹಾಯಕ.

Publsihed in Samyukta Karnataka 2015 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ