ಶುಕ್ರವಾರ, ಮಾರ್ಚ್ 17, 2017

ರಂಗವಲ್ಲಿ
ರಂಗವಲ್ಲಿ / ರಂಗೋಲಿ ರಂಗುಗಳು ಅನಾದಿಯಿಂದಲೂ ಭಾರತೀಯರ ಬದುಕನ್ನು ಮೆರುಗುಗೊಳಿಸುತ್ತ ಬಂದಿದೆ. ರಂಗವಲ್ಲಿಗೆ ಧಾರ್ಮಿಕ, ಸಾಂಪ್ರದಾಯಿಕ ಹಾಗೂ ಕಲಾತ್ಮಕ ಆಯಾಮಗಳಿವೆ. ’ಮನೆಯ ಮುಂದೆ ರಂಗವಲ್ಲಿ ಇದ್ದರೇನೆ ’ಲಕ್ಷ್ಮೀಕಳೆ’ ಎನ್ನುವ ಭಾವ ನಮ್ಮಲ್ಲಿದೆ. ಹೊಸಿಲ ಬದಿಗೆ, ಬಾಗಿಲ ಮುಂದೆ ರಂಗವಲ್ಲಿ ಇಲ್ಲದಿದ್ದಲ್ಲಿ ‘ಮನೆ ಮಂದಿ ಊರಲ್ಲಿಲ್ಲ’ ಎಂದು ಊಹಿಸುವಷ್ಜರ ಮಟ್ಟಿಗೆ ಅದು ಹಿಂದು ಮನೆಯ ಮುಖ್ಯ ಲಕ್ಷಣವಾಗಿದೆ ಎನ್ನಬಹುದು. ರಂಗವಲ್ಲಿಯು ಲಕ್ಷ್ಮೀಸ್ವರೂಪ. ’ಲಕ್ಷ್ಮಿ’ ಎಂದರೆ ನಮ್ಮ ಜೀವನಕ್ಕೆ ಪೋಷಕವಾದ ಸಮೃದ್ಧಿ, ಸಂತೃಪ್ತಿ, ಜೀವಂತಿಕೆ ಹಾಗೂ ಬಾಹ್ಯಾಂತರ ಸೌಂದರ್ಯಗಳ ಸಾರ.
          ನಾಮರೂಪಾತೀತನಾದ ಪರಮಾತ್ಮನನ್ನು ನಾಮರೂಪಗಳಲ್ಲಿ ಸಂಕೇತಿಸಿ ಆರಾಧಿಸುವಾಗ ಬಳಸಬಹುದಾದ ಹಲವು ಸಾಧನಗಳಲ್ಲಿ ರಂಗವಲ್ಲಿಯೂ ಒಂದು. ಆಯಾ ಉಪಾಸ್ಯ-ದೇವತೆಯ ಸ್ವರೂಪ ಹಾಗೂ ವಿಭೂತಿಗಳನ್ನು ಸಂಕೇತಿಸುವ ವರ್ಣ, ವಿನ್ಯಾಸ, ಅಳತೆ ಹಾಗೂ ದಿಕ್ಕುಗಳಲ್ಲಿ ನಿರ್ದಿಷ್ಟ ಆಕಾರದ ರಂಗವಲ್ಲಿಯನ್ನು ರಚಿಸಿ, ಅದರಲ್ಲಿ ದೇವರನ್ನು ಆವಾಹಿಸಿ ಪೂಜಿಸುವ ಪದ್ಧತಿ ಬಹಳ ಪುರಾತನವಾದದ್ದು. ಅಂತಹ ದೇವತಾತ್ಮಕ ಸಂಕೇತವಾದ ರಂಗವಲ್ಲಿಯನ್ನು ’ಯಂತ್ರ’ ಎಂದು ಕರೆಯಲಾಗುತ್ತದೆ. ಪಂಚಭೂತಗಳನ್ನೂ, ಇತರ ಶಕ್ತಿವಿಶೇಷಗಳನ್ನು, ಫಲೋದ್ದೇಶಗಳನ್ನೂ ಸಂಕೇತಿಸುವ ಬಣ್ಣದ ರಂಗವಲ್ಲಿ ಚೂರ್ಣಗಳನ್ನು, ರೇಖೆಗಳನ್ನು ಸಂದರ್ಭೋಚಿತವಾಗಿ ರಚಿಸುವ ಶಾಸ್ತ್ರವಿಧಾನವೇ ಇದೆ. ಊರಲ್ಲಿ ಜಾತ್ರೆ ಅಥವಾ ರಥೋತ್ಸವ ನಡೆದರೆ, ಆ ಬೀದಿಗಳ ಎಲ್ಲ ಮನೆಗಳ ಮುಂದೆ ಬಾಗಿಲು ಸರಿಸಿ ರಂಗವಲ್ಲಿಯನ್ನು ಹಾಕಲಾಗುತ್ತದೆ. ಊರ ದೇವರಿಗೆ ಎಲ್ಲರೂ ತೋರುವ ಪ್ರೀತ್ಯಾದರಭಾವವಷ್ಟೇ ಅಲ್ಲದೆ ಇದು ಊರ ಕಲಾಪಗಳಲ್ಲಿ ಎಲ್ಲ ಮನೆತನಗಳೂ ತುಂಬು ಮನದಿಂದ ಭಾಗವಹಿಸುವ ಭಾವದ ಸಂಕೇತವೂ ಹೌದು. ಕೇರಳೀಯರ ’ಓಣಂ’ ಹಬ್ಬದ ರಂಗೋಲಿಯು ಜಗತ್ಪ್ರಸಿದ್ಧ. ಪೂರ್ವಭಾರತದಲ್ಲಿ ಮದುವೆಯ ಸಂದರ್ಭದಲ್ಲಿ ಹದಿನಾರು ದೀಪಗಳ ತಟ್ಟೆಯನ್ನು ಹಿಡಿದು ಮಂಗಳಸೂಚಕವಾದ ದೊಡ್ಡ ರಂಗವಲ್ಲಿಯ ಸುತ್ತ ಸುಮಂಗಲಿಯರು ಸುತ್ತಿ ಬರುತ್ತ ಶುಭಹಾರೈಕೆಯ ಸಾಂಪ್ರದಾಯಿಕ ಗೀತೆಗಳನ್ನು ಹಾಡುತ್ತಾರೆ.
ಇನ್ನು ಪ್ರತಿನಿತ್ಯವೂ ಮನೆಯ ಬಾಗಿಲು ಅಂಗಳಗಳನ್ನೂ, ತುಳಸೀಕಟ್ಟೆಯನ್ನು ಶುಚಿಗೊಳಿಸಿ ರಂಗವಲ್ಲಿಯಿಂದ ಸಿಂಗರಿಸಿ ಪೂಜಿಸುವುದು ನಮ್ಮ ಹೆಣ್ಣುಮಕ್ಕಳ ಪಾಲಿಗೆ ದೈನಂದಿನ ಕರ್ತವ್ಯವೂ ನಿತ್ಯೋತ್ಸವೂ ಆಗಿದೆ. ಬೆಳ್ಳಂಬೆಳಿಗ್ಗೆ ಓರೆಕೆರೆಯ ಹೆಂಗಳೆಯರನ್ನು ನಕ್ಕು ಮಾತನಾಡಿಸುತ್ತ, ರಂಗವಲ್ಲೀ ರಚನೆಗಳ ’ಐಡಿಯಾ’ಗಳನ್ನೂ, ಊರ-ಕೇರಿಯ ’ವಾರ್ತೆ’ಗಳನ್ನೂ ವಿನಿಮಯ ಮಾಡಿಕೊಳ್ಳುವುದಕ್ಕೆ ಹೆಂಗಳೆಯರಿಗೆ ರಂಗೋಲಿ ಹಾಕುವ ಸಮಯವೇ ತುಂಬ ಅನುಕೂಲಕರ ಎನ್ನಿ! ರಂಗವಲ್ಲಿಯು ಪ್ರತಿದಿನವೂ ‘ಹೊಸದಾಗಿ ಸೃಷ್ಟಿಯಾಗುವ’ ಕಲೆ. ಈ ಕಾಲದಲ್ಲಿ ನಾವೂ paint ರಂಗೋಲಿಯನ್ನು ರಚಿಸುತ್ತೇವಾದರೂ ಪ್ರತಿದಿನವೂ ಬಾಗಿಲು ಸಾರಿಸಿ ಹಾಕುವ ರಂಗವಲ್ಲಿಯಂತೂ ತನ್ನ ಪ್ರಾಶಸ್ತ್ಯವನ್ನು ಕಳೆದುಕೊಂಡಿಲ್ಲ, ಕಳೆದುಕೊಳ್ಳಲಾರದು. ಹಾಗಾಗಿ ಅದು ’ನಿತ್ಯನೂತನ’. ಆಧುನೀಕರಣದೊಂದಿಗೆ ಬಂದಿರುವ paintನ್ನು ಬಿಟ್ಟರೆ, ರಂಗವಲ್ಲಿ ರಚಿಸುವಾಗ ಬಳಸುವ ವಸ್ತುಗಳೆಲ್ಲ ಪರಿಸರಸ್ನೇಹಿಯಾದಂತಹವುಗಳೆ- ಕಲ್ಲುಚೂರ್ಣ, ಅಕ್ಕಿ ಹಿಟ್ಟು, ಕೆಮ್ಮಣ್ಣು ಇತ್ಯಾದಿ. ಇವಲ್ಲದೆ ಅರಸಿನ, ಕುಂಕುಮ, ಹೂವು-ಎಲೆ-ತರಕಾರಿಗಳ ರಸವನ್ನು ಒಣಗಿಸಿ ಮಾಡುವ ಬಣ್ಣದ ಚೂರ್ಣಗಳ ವಾಡಿಕೆ ಅನಾದಿಕಾಲದ್ದು. ಜೊತೆಗೆ ಅಕ್ಕಿ, ಬೇಳೆ, ರಾಗಿ, ಗೋದಿ, ಕಾಳು, ಕಲ್ಲುಪ್ಪು, ಬೀಜಗಳು ಮುಂತಾದ ಧಾನ್ಯಗಳಿಂದಲೂ ರಂಗವಲ್ಲಿಯನ್ನು ಅಲಂಕರಿಸುವುದು ಇದೆ.
          ಶಾಸ್ತ್ರೀಯ ನಿರ್ದೇಶದ ಯಂತ್ರರಂಗೋಲಿಗಳು, (ವಾರ್ಲೀ ಮುಂತಾದ) ಜಾನಪದೀಯ ಶೈಲಿಯ ರಂಗವಲ್ಲಿ ವಿನ್ಯಾಸಗಳು, ಗೋಪದ್ಮವ್ರತದ ರಂಗವಲ್ಲಿ, ನವಗ್ರಹ ರಂಗೋಲಿ, ಲಕ್ಷ್ಮೀ ರಂಗೋಲಿ, ಸಂಕ್ರಾಂತಿ ರಂಗೋಲಿ, ರಥಸಪ್ತಮೀ ರಂಗೋಲಿ, ಶ್ರೀಚಕ್ರ ರಂಗೋಲಿ, ಅದೃಷ್ಟ ಪದ್ಮ, ಮಧುಮಕ್ಕಳಿಗಾಗಿ ರಚಿಸುವ ’ಭೂಮದೂಟ’ದ ರಂಗವಲ್ಲಿ ಮುಂತಾದವು ಆಯಾ ಶುಭಸಮಾರಂಭ ಅಥವಾ ಹಬ್ಬಹರಿದಿನಗಳಲ್ಲಿ ಎದ್ದು ಕಾಣುವ ವಿಶೇಷಗಳು. ದೈನಂದಿನ ಉಪಯೋಗಕ್ಕಾಗಿಯೇ ಅದೆಷ್ಟೋ ಆಯ್ಕೆಯ ರಂಗವಲ್ಲೀ ಪ್ರಕಾರಗಳಿವೆ- ತುಂಬ ಮಾಮೂಲಿಯಾದ ನಕ್ಷತ್ರ ರಂಗೋಲಿ(ಅದರಲ್ಲೂ ಬಗೆಗಳು), ಎಳೆಯ ರಂಗೋಲಿಗಳು (ಅದರಲ್ಲಿ ಒಂದೆಳೆ, ಎರಡೆಳೆ, ಮೂರೆಳೆ, ನಾಲ್ಕು ಎಳೆಗಳ ರಂಗೋಲಿಗಳು), ಅಂಚಿನ ರಂಗೋಲಿಗಳು, ಬಾಗಿಲ ಮುಂದೆ ಹಾಕುವ ಮುಖ್ಯರಂಗೋಲಿಗಳು, ಮೂಲೆಗಳಲ್ಲಿ ರಚಿಸಲ್ಪಡುವ ಪುಟ್ಟ ರಂಗೋಲಿಗಳು, ಹೊಸಿಲ ಬದಿಯ ರಂಗೋಲಿಗಳು, ತುಳಸಿ ಕಟ್ಟೆಯ ಹಸೆ, ದೇವರ ಪೀಠದ ಕೆಳಗಿನ ಅಷ್ಟದಳಪದ್ಮ, ಗೋಡೆಯ ಕರಣೆಗಳು ಇತ್ಯಾದಿ. ಇನ್ನು ರಚನಾತ್ಮಕ ಕೌಶಲದಿಂದ, ಬಹಳ ಲೆಕ್ಕಾಚರದಿಂದ ಹೆಣೆಯುವ ’ಚುಕ್ಕಿ ರಂಗೋಲಿ’ಗಳಂತೂ ನಮ್ಮ ಹೆಣ್ಣುಮಕ್ಕಳ ಚಾಕಚಕ್ಯತೆಗೆ ಸುಂದರ ನಿದರ್ಶನಗಳು. ಮೇಲ್ನೋಟಕ್ಕೆ ಸುಲಭದಂತೆ ಕಂಡರೂ, ಈ ಚುಕ್ಕಿರಂಗೋಲಿಗಳನ್ನು ಹೆಣೆಯುವುದು ಸುಲಭದ ಮಾತಲ್ಲ. ಅಳತೆ, ಲೆಕ್ಕಾಚಾರ, ಅಭ್ಯಾಸ ಹಾಗೂ ಕೈಚಳಕಗಳನ್ನು ಇದು ಅಪೇಕ್ಷಿಸುತ್ತದೆ. ಈ ವಿಷಯದಲ್ಲಿ ನಮ್ಮ ಹೆಣ್ಣುಮಕ್ಕಳ ಪ್ರತಿಭಾವಿಶೇಷವನ್ನು ಮೆಚ್ಚಿ, ಕೊಡಬೇಕಾದಷ್ಟು creditನ್ನು ನಾವು ಕೊಟ್ಟಿಲ್ಲ ಎಂದೇ ಹೇಳಬಹುದು.
          ಇನ್ನು, ಹೂವು, ಎಲೆ, ಕಡ್ಡಿ, ಪರಾಗ, ಸಗಣಿ ಮುದ್ದೆ, ಮಣ್ಣಿನ ದೀಪ, ಹೂಗುಚ್ಛಗಳನ್ನೂ, ಬಳೆ, ಗಾಜಿನ ಚೂರು, ಸರ, ಮುತ್ತು, ಮಣಿಗಳನ್ನೂ ಬಳಸಿ ರಚಿಸಲ್ಪಡುವ ರಂಗವಲ್ಲಿಗಳು ಹೇರಳವಾಗಿವೆ. Carpetರಂಗೋಲಿ (ಅಸಲಿನಲ್ಲಿ, ಬಣ್ಣವಿನ್ಯಾಸಗಳ carpetನ್ನೇ ಹಾಸಿರುವಂತೆ ಕಾಣಬರುವ ರಂಗವಲ್ಲಿ), 3 D ರಂಗವಲ್ಲಿ, portrait ರಂಗವಲ್ಲಿ, Thematic ರಂಗೋಲಿ ಇತ್ಯಾದಿ ಅನೇಕಾನೇಕ ವಿಧಗಳು ಬೆಳೆದಿವೆ, ಬೆಳೆಯುತ್ತಲೇ ಇವೆ. ನಮ್ಮ ಧಾರ್ಮಿಕ ಸ್ವಾತಂತ್ರ್ಯವು ಸರ್ಜನಶೀಲ ಪ್ರಯೋಗಗಳಿಗೆ ಹೇರಳವಾಗಿ ಆಸ್ಪದವೀಯುವುದರಿಂದ, ಸಾಂಸ್ಕೃತಿಕ ಸಂದರ್ಭಗಳು ಹೇರಳವಾಗಿರುವುದರಿಂದ ರಂಗವಲ್ಲಿ ಕಲಾಪ್ರಕಾರವು ತನ್ನ ಅನಂತ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತಲೇ ಬಂದಿದೆ. 
ಅಪಾರ ಸ್ವೋಪಜ್ಞತೆ ಹಾಗೂ ಪ್ರತಿಭೆಗಳೊಂದಿಗೆ ಅರಳಿ ಬಂದಿರುವ ಈ ಪ್ರಾಚೀನ ಕಲಾಪ್ರಕಾರವು ಒಂದು ಉದ್ಯಮವೇ ಆಗಿ ಬೆಳೆಯುತ್ತಿರುವುದು ಅದರ ಸತ್ವಸಂಪನ್ನತೆಗೆ ಸಾಕ್ಷಿಯಾಗಿದೆ. ತಾವು ರಂಗವಲ್ಲಿಯನ್ನು ರಚಿಸಲಾರರಾದರೂ , ರಂಗವಲ್ಲೀ ಕಲಾಕಾರರನ್ನು ಅಹ್ವಾನಿಸಿ, ದುಡ್ಡು ಕೊಟ್ಟು, ಮನೆಯ ಗೋಡೆ-ಅಂಗಳದಲ್ಲಿ ರಂಗವಲ್ಲಿ ವಿನ್ಯಾಸಗಳನ್ನು ಶುಭಸಮಾರಂಭಗಳಲ್ಲಿ ಬರೆಸುವ ಕಾಲವೂ ಬಂದುಬಿಟ್ಟಿದೆ!
ಹೀಗೆ ಕಲೆ, ಸಂಸ್ಕೃತಿ, ಧಾರ್ಮಿಕತೆ, ಸ್ವೋಪಜ್ಞತೆ, ಸರ್ಜನಶೀಲತೆ ಹಾಗೂ ಮುಗ್ಧ ಸಂತೋಷಗಳ ಪುರಾತನವೂ ನಿತ್ಯನೂತನವೂ ಆದ ಮಾಧ್ಯಮ ರಂಗವಲ್ಲಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ