ಶುಕ್ರವಾರ, ಮಾರ್ಚ್ 17, 2017

ಬೆಳದಿಂಗಳ ಬಾಳು
(ಸ್ವಾಮಿ ರಾಮಕೃಷ್ಣಾನಂದರ ಜೀವನದ ಮೇಲೊಂದು ನೋಟ)
ಶಾಸ್ತ್ರ, ಸಂಪ್ರದಾಯ, ವೈದುಷ್ಯಗಳೊಂದಿಗೆ ಸಾತ್ವಿಕತೆ, ತಪಸ್ಸು ಹಾಗೂ ಕರ್ಮಯೋಗಗಳು ಸೇರಿದಾಗ ಮಹೋನ್ನತ ವ್ಯಕಿತ್ವವೊಂದು ಅರಳಿ ನಿಲ್ಲುತ್ತದೆ. ಇದಕ್ಕೆ ಭವ್ಯ ನಿದರ್ಶನ ಸ್ವಾಮಿ ರಾಮಕೃಷ್ಣಾನಂದರ ವ್ಯಕ್ತಿತ್ವ. ಶಶಿ ಎಂಬ ಅವರ ಪೂರ್ವಾಶ್ರಮದ ಹೆಸರಿಗೆ ಅನುರೂಪವಾಗಿ ಶಶಿಯ ತಂಪನ್ನು ಚೆಲ್ಲುತ್ತ, ದಿವ್ಯಜ್ಞಾನದ ಬೆಳದಿಂಗಳನ್ನೂ ಪಸರಿಸುತ್ತ ಧನ್ಯತೆಯನ್ನು ಪಡೇದ ಅವರ ಬಾಳು ಮನೋಜ್ಞವಾದದ್ದು. 
ಪಶ್ಚಿಮ ಬಂಗಾಳದ ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಶಶಿಭೂಷಣ ಚಕ್ರವರ್ತಿ ಗುರುಭಕ್ತಿ, ಕರ್ಮಯೋಗ, ತಪಸ್ಸು ಹಾಗೂ ವೈದುಷ್ಯಗಳೊಂದಿಗೆ ಸರ್ವಾಂಗಸುಂದರವಾಗಿ ವಿಕಸಿಸಿ ಸ್ವಾಮಿ ರಾಮಕೃಷ್ಣಾನಂದರೆಂಬ ಮಹಿನ್ಮಾನ್ವಿನಾದನು. ಯಜ್ಞಾದಿ ಪ್ರಯೋಗಪ್ರವೀಣನೂ ಶಾಸ್ತ್ರವೇತ್ತನೂ ಆದ ತನ್ನ ತಂದೆ ಈಶ್ವರಚಂದ್ರ ಚಕ್ರವರ್ತಿಯಿಂದ ಶಶಿಭೂಷಣನು ಸಂಸ್ಕೃತ, ಶಾಸ್ತ್ರ ಹಾಗೂ ಪೂಜಾಹೋಮಾದಿ ಧಾರ್ಮಿಕ ಪ್ರಯೋಗಗಳನ್ನು ಬಾಲ್ಯದಲ್ಲೇ ಚೆನ್ನಾಗಿ ಕಲಿತನು. ಗಂಟೆಗಟ್ಟಲೆ ಒಂದೆಡೆ ನಿಶ್ಚಲವಾಗಿ ಕುಳಿತು, ಪೂಜಾದಿ ಕರ್ಮಗಳನ್ನು ನಿರ್ದುಷ್ಟವಾಗಿಯೂ ಶ್ರದ್ಧೆಯಿಂದಲೂ ನಿರ್ವಹಿಸುವ ಅಭ್ಯಾಸ ಅವನಿಗೆ ಬಾಲ್ಯದಿಂದಲೇ ರೂಢಿಯಾಯಿತು. ಅತ್ಯುತ್ತಮ ಮೇಧಾವಿಯಾಗಿದ್ದ ಶಶಿಭೂಷಣನು ಕೋಲಕತ್ತೆಯ ಕಾಲೇಜಿನಲ್ಲಿ ಸಂಸ್ಕೃತ, ಗಣಿತ, ತತ್ವಶಾಸ್ತ್ರಗಳನ್ನು ಅಧ್ಯಯನ ಮಾಡುತ್ತಿದ್ದ. ಅಧ್ಯಯನಶೀಲನಾದ ಶಶಿಭೂಷಣನು ಸಂಸ್ಕೃತಸಾಹಿತ್ಯ ಶಾಸ್ತ್ರಗಳನ್ನಲ್ಲದೆ ಚೈತನ್ಯಚರಿತಾಮೃತ, ಪಾರಸೀ ಕಾವ್ಯ ಹಾಗೂ ಆಂಗ್ಲತತ್ವಶಾಸ್ತ್ರಗಳನ್ನೂ ಹಾಗೂ ವಿಶೇಷವಾಗಿ ಬೈಬಲ್ಲನ್ನೂ ಆಮೂಲಾಗ್ರವಾಗಿ ಓಡಿಕೊಂಡಿದ್ದ. ಬ್ರಾಹ್ಮೋಸ್ಮಾಜದ ಸಂಪರ್ಕದಿಂದ ಸ್ವತಂತ್ರ ಜಿಜ್ಞಾಸೆ-ಚಿಂತನೆಗಳಲ್ಲಿ ತೊಡಗಿದ್ದ ಈತನಿಗೆ ಶ್ರೀರಾಮಕೃಷ್ಣರ ಬಗ್ಗೆ ತಿಳಿಯಿತು. ತನ್ನ ನೆಂಟನಾದ ಶರಚ್ಚಂದ್ರನೊಂದಿಗೆ (ಮುಂದೆ ಸ್ವಾಮಿ ಶಾರದಾನಂದರು) ದಕ್ಷಿಣೇಶ್ವರಕ್ಕೆ ಹೋದ ಶಶಿಭೂಷಣನು ರಾಮಕೃಷ್ಣರ ಅಭೂತಪೂರ್ವ ತ್ಯಾಗ ಯೋಗಸಿದ್ಧಿಗಳ ಎತ್ತರವನ್ನು ಥಟ್ಟನೆ ಗುರುತಿಸಿ ಮನಸಾ ಅವರ ಶಿಷ್ಯನಾದ. ಜ್ಞಾನ, ಚಾರಿತ್ರ್ಯ ಹಾಗೂ ತತ್ವಶೊಧನೆಯ ವರ್ಚಸ್ಸಿನಿಂದ ಶೋಭಿಸುತ್ತಿದ್ದ ಶಶಿಯನ್ನು ಕಂಡು ಮೆಚ್ಚಿ ಒಡನೆಯೇ ತನ್ನ ಅಂತರಂಗದ ಶಿಷ್ಯನನ್ನಾಗಿಸಿ ಕೊಂಡುಬಿಟ್ಟರು ರಾಮಕೃಷ್ಣರು.
     ಮೊದಲ ಭೇಟಿಯಲ್ಲಿ ರಾಮಕೃಷ್ಣರು ಶಶಿಯನ್ನು ಕೇಳಿದರು "ನಿನಗೆ ಭಗವಂತನ ಸಾಕಾರತ್ವದಲ್ಲಿ ವಿಶ್ವಾಸವೋ ನಿರಾಕಾರತ್ವದಲ್ಲಿ ವಿಶ್ವಾಸವೋ?" ಎಂದು. ಶಶಿ ನುಡಿದ - "ನನಗೆ ಇನ್ನೂ ದೇವರ ಅಸ್ತಿತ್ವದಲ್ಲೇ ಪೂರ್ಣ ವಿಶ್ವಾಸವಿಲ್ಲ! ಹಾಗಿರುವಾಗ ಏನೆಂದು  ಹೇಳಲಿ?" ಶಶಿಯ ಈ ನೇರ ಉತ್ತರ ರಾಮಕೃಷ್ಣರಿಗೆ ಇಷ್ಟವಾಯಿತು. ಅಪಾರ ವಿದ್ಯಾಪ್ರೀತಿಯಿದ್ದ ಶಶಿಯ ಮನಸ್ಸನ್ನು ಕೇವಲ ಪುಸ್ತಕ ಜ್ಞಾನದಲ್ಲಿ ನಿಲ್ಲದೆ ತತ್ವಾನುಸಂಧಾನದಲ್ಲಿ ತೊಡಗುವಂತೆ ಮಾಡಿದರು ರಾಮಕೃಷ್ಣರು. ಒಮ್ಮೆ ಶಶಿ ಪಾರಸೀ ಕಾವ್ಯವೊಂದರ ಅಧ್ಯಯನದಲ್ಲಿ ಎಷ್ಟು ತಲ್ಲೀನನಾಗಿದ್ದನೆಂದರೆ ರಾಮಕೃಷ್ಣರು ಹಲವು ಬಾರಿ ಕೂಗಿ ಕರೆದರೂ ಆತನ ಗಮನಕ್ಕೇ ಬರಲಿಲ್ಲ. ಆಗ ರಾಮಕೃಷ್ಣರು ಬುದ್ಧಿ ಹೇಳುತ್ತಾರೆ "ನೋಡು ನೀನು ಹೀಗೆ ಓದಿನಲ್ಲೇ ಮುಳುಗಿ ಮಾಡಬೇಕಾದ ಕರ್ತವ್ಯವನ್ನು ಮರೆತರೆ, ಭಕ್ತಿಯನ್ನೆಲ್ಲ ಕಳೆದುಕೊಂಡುಬಿಡುತ್ತೀಯೆ" ಗುರುವಿನ ಮಾತಿನ ಇಂಗಿತವನ್ನು ಗ್ರಹಿಸಿದ ಶಶಿ ಒಡನೆಯೇ ಕೈಲಿದ್ದ ಪುಸ್ತಕಗಳನ್ನೆಲ್ಲ ಗಂಗೆಗೆ ಎಸೆದುಬಿಟ್ಟ! ಪುಸ್ತಕಗಳಿಗಿಂತ ಗುರುಸೇವೆ ಹಾಗೂ ಸಾಧನಾನುನುಷ್ಠಾನಗಳಿಗೆ ಹೆಚ್ಚಾಗಿ ಗಮನ ಹರಿಸತೊಡಗಿದ. ಶಶಿಭೂಷಣನು ತನ್ನ ಕುಲಾಚಾರ, ಆಹಾರ ನಿಯಮ ಹಾಗೂ ಧಾರ್ಮಿಕ ಕಟ್ಟುಪಾಡುಗಳನ್ನು ನಿಷ್ಟೆಯಿಂದ ಪಾಲಿಸುತ್ತಿದ್ದ. ಹಾಗೆಯೇ ಇರುವಂತೆ ರಾಮಕೃಷ್ಣರೂ ಅವನಿಗೆ ಸಲಹೆ ಇತ್ತರು. ಮುಂದೆ ಆತ ದಕ್ಷಿಣಭಾರತದ ಸಂಪ್ರದಾಯಸ್ಥರ ನಡುವೆ ಕಾರ್ಯವೆಸಗುವಾಗ ಆ ಜೀವನಶೈಲಿ ಅವರಿಗೆ ತುಂಬ ಸಹಕಾರಿಯಾಯಿತು. 
     ಸೂಕ್ಷ್ಮತತ್ವಗಳನ್ನು ಗ್ರಹಿಸಬೇಕಾದರೆ ಮನಸ್ಸು-ಮಾತು-ಕೃತಿಗಳು ಅತ್ಯಂತ ನವಿರಾಗಿರಬೇಕು ಎನ್ನುವ  ಪಾಠವನ್ನು ರಾಮಕೃಷ್ಣರು ಶಶಿಗೆ ಹೇಳಿಕೊಟ್ಟ ಪ್ರಸಂಗವೊಂದು ಹೀಗಿದೆ- ಒಮ್ಮೆ ಶಶಿಭೂಷಣನು ಬಟ್ಟೆಯನ್ನು ಪರ್ ರ್ ರ್... ಎಂದು ಶಬ್ದಮಾಡುತ್ತ ಒರಟಾಗಿ ಹರಿಯುತ್ತಿದ್ದುದನ್ನು ನೋಡಿ ಕಿರಿಕಿರಿಗೊಂಡ ರಾಮಕೃಷ್ಣರು ಹೇಳುತ್ತಾರೆ "ಏನು ಮಾಡುತ್ತಿದ್ದೇಯೆ? ಹಾಗೆ (ಆಷ್ಟು ಒರಟಾಗಿ) ಬಟ್ಟೆ ಹರಿಯಬೇಡ, ನನ್ನಲ್ಲಿನ ಕುಂಡಲಿನಿ ನಿನ್ನ ಮೇಲೆ ಎರಗಿಬಿದ್ದೀತು, ಜೋಕೆ!" ಶಿಷ್ಯನನ್ನು ಕಾಯಾ, ವಾಚಾ, ಮನಸಾ ಸೂಕ್ಷ್ಮಸಂವೇದನಶೀಲನನ್ನಾಗಿಸುವಲ್ಲಿ ರಾಮಕೃಷ್ಣರು ಸಣ್ಣಪುಟ್ಟ ವಿಷಯಗಳಿಗೂ ಅದೆಷ್ಟು ಗಮನಹರಿಸುತ್ತಿದ್ದರು ಎನ್ನುವುದು ಇಲ್ಲಿ ಗಮನೀಯ.
ರಾಮೃಷ್ಣರ ವಾತ್ಸಲ್ಯಮಯ ಮಾರ್ಗದರ್ಶನದಿಂದಲೂ, ನರೇಂದ್ರ, ಕಾಳಿ, ಶರತ್ ಮುಂತಾದ ತಪಸ್ವೀ ತರುಣರ ಸಹವಾಸದೀಮ್ದಲೂ ಹಾಗೂ ತನ್ನ ಅಂತರಂಗದ ಸಹಜ ತಪೋನಿಷ್ಟೆಯಿಂದಲೂ ಶಶಿಭೂಷಣ ಉನ್ನತೋನ್ನತ ಆಧ್ಯಾತ್ಮಿಕ ಸ್ತರಗಳನ್ನೇರಿದ. ಆದರೆ ಆತನದು ಭಾವಪ್ರದರ್ಶನವಿಲ್ಲದ ಶಾಂತ ಅಂತರ್ಮುಖ ಶೈಲಿ. ಈ ಮಧ್ಯೆ ಹಲವು ಆಧ್ಯಾತ್ಮಿಕ ಭಾವೋನ್ಮಾದಗಳನ್ನು ಪಡೆಯುತ್ತಿದ್ದ ಇತರ ಭಕ್ತರನ್ನು ಕಂಡು ಶಶಿಭೂಷಣನು ರಾಮಕೃಷ್ಣರನ್ನು ಅಂತಹ ಅನುಭೂತಿಗಳಿಗಾಗಿ ಪ್ರಾರ್ಥಿಸಿದಾಗ ಅವರೆನ್ನುತ್ತಾರೆ "ಆ ಅನುಭವಗಳು ನಿನಗೆ ಆಗತೊಡಗಿದರೆ ನಿನಗೆ ನನ್ನ ಸೇವೆ ಮಾಡಲು ಸಾಧ್ಯವಾಗುವುದೇ ಇಲ್ಲ". "ನಿಮ್ಮ ಸೇವೆಯಿಂದ ನಾನು ವಂಚಿತನಾಗುವುದಾದರೆ ನನಗೆ ಆ ಭಗವದುನ್ಮಾದಗಳಾವುವೂ ಬೇಡ!" ಎಂದುಬಿಟ್ಟ ಶಶಿ! ಗುರುವಿನ ಪಾದಸೇವೆಯ ಮುಂದೆ ಬೇರೆಲ್ಲವೂ ಆತನಿಗೆ ಅಮುಖ್ಯವಾಗಿತ್ತು!
     ರಾಮಕೃಷ್ಣರ ಸೇವೆ ಹಾಗೂ ತಪಶ್ಚರ್ಯೆಗಳಲ್ಲೇ ಸಂಪೂರ್ಣ ಮುಳುಗಿದ ಶಶಿಭೂಷಣನು ಬರಬರುತ್ತ ಪಾಠ-ಪರೀಕ್ಷೆಗಳನ್ನೂ ಮನೆಯನ್ನೂ ಮರೆತೇ ಬಿಟ್ಟ. ರಾಮಕೃಷ್ಣರ ಅಂತ್ಯಕಾಲದಲ್ಲಿ ಅವರಿಗೆ ಉಣಬಡಿಸುವುದು, ಮಲಗಿಸುವುದು, ಗಾಳಿ ಹಾಕುವುದು, ಉಪಚರಿಸುವುದು, ಕಾಲಕಾಲಕ್ಕೂ ಔಷಧಿ ಕುಡಿಸುವುದು ಇತ್ಯಾದಿಗಳೇ ಅವನ ತಪಸ್ಸಾಯಿತು. ಊಟ-ವಿಶ್ರಾಂತಿಗಳನ್ನೂ ಮರೆತು ಗಂಟೆಗಟ್ಟಲೆ ಗುರುಸೇವೆಯಲ್ಲಿ ತನ್ಮಯವಾದ.
ರಾಮಕೃಷ್ಣರ ಮಹಾಸಮಾಧಿಯಾದ ಬಳಿಕ ಅತೀವ ಸಂಕಟದಲ್ಲಿ ಸಿಲುಕಿದ ಯುವಸಾಧಕರೆಲ್ಲ ಸೇರಿ ರಾಮಕೃಷ್ಣರ ಅಸ್ತಿಪಾತ್ರೆಯನ್ನು ಪ್ರತಿಷ್ಠಾಪಿಸಿ ನರೇಂದ್ರನ ನೇತೃತ್ವದಲ್ಲಿ ಮಠವೊಂದನ್ನು ಕಟ್ಟಲು ಹವಣಿಸಿದರು. ಆದರೆ ತೀವ್ರ ಆರ್ಥಿಕ ಮುಗ್ಗಟ್ಟು, ಮನೆಮಂದಿಯ ವಿರೋಧ ಹಾಗೂ ಅನಿಶ್ಚಿತತೆಗಳು ಕಾಡುತ್ತಿದ್ದವು. ಅದರ ಮಧ್ಯೆಯೂ ಇವರೆಲ್ಲ ಸಂನ್ಯಾಸವನ್ನು ಸ್ವೀಕರಿಸಿ ಬಾರಾಹನಾಗೋರ್ ಎಂಬಲ್ಲಿನ ಒಂದು ಪಾಳುಬಿದ್ದ, ಸೂರು ಸೋರುವ ಕಟ್ಟಡವನ್ನು ಬಾಡಿಗೆ ಪಡೇದು ’ಮಠ’ವನ್ನು ಪ್ರಾರಂಭಿಸಿದರು. ೧೧-೧೨ ಮಂದಿಗೆ ಒಂದೇ ಜೊತೆ ಜುಬ್ಬ ಪೈಜಾಮ, ಊಟಕ್ಕೆ ಭಿಕ್ಷಾಟನೆ, ಮರುದಿನದ ಅನ್ನವಸತಿಗಳ ಬಗ್ಗೆ ತೀವ್ರ ಅನಿಶ್ಚಿತತೆ- ಇದು ಆ ಮಠದ ಅಂದಿನ ಸ್ಥಿತಿಗತಿ. ಆದರೆ ಆ ತೇಜಸ್ವಿ ತರುಣಸಂನ್ಯಾಸಿಗಳೆಲ್ಲ ಅದಾವುದನ್ನೂ ಲೆಕ್ಕಿಸದೆ ಹಗಲೂ ಇರುಳೂ ಗಾಡ ಜಪಧ್ಯಾನಗಳಲ್ಲಿ ಮಗ್ನವಾದರು. ರಾಮಕೃಷ್ಣರ ಅಸ್ತಿಯನ್ನು ಸಂರಕ್ಷಿಸಿಡಲಾದ ’ಆತ್ಮಾರಾಮೇರ್ ಕೌಟ’ ಎಂಬ ಕಲಶ ಹಾಗೂ ಒಂದು ಭಾವಚಿತ್ರವೇ ’ಗರ್ಭಗುಡಿ’ಯ ಆಸ್ತಿ. ಅದರ ಕೈಂಕರ್ಯವನ್ನು ಶಶಿಯೇ ವಹಿಸಿಕೊಂಡ. ಕಾಲಕಾಲಕ್ಕೆ ಪೂಜೆ, ಆತಿಥ್ಯಗಳನ್ನೂ ತನ್ನ ಗುರುಭಾಯಿಗಳ ಊಟ, ನಿದ್ರೆ, ಶುಶ್ರೂಷೆಗಳನ್ನು ತಾನೇ ವಹಿಸಿಕೊಂಡ ಶಶಿ. ಗಂಗೆಯಿಂದ ಬಿಂದಿಗೆಯಲ್ಲಿ ನೀರು ಒಯ್ಯುವಾಗ ಸುತ್ತಮುತ್ತಲಿನ ಕೆಲಸದವರು ಶಶಿಯನ್ನು ತಮ್ಮಂತೆಯೇ ಎಂದು ಗಣಿಸಿ ಸಲುಗೆಯಿಂದಲೂ ಅಸಡ್ಡೆಯಿಂದಲೂ ಕಾಣುತ್ತಿದ್ದರು. ಆದರೆ ’ತಾನು ಬ್ರಾಹ್ಮಣ’ ಎಂದಾಗಲಿ, ’ಸಾಮಾನ್ಯ ಆಳು ಅಲ್ಲ’ ಎಂದಾಗಲಿ ಸಮರ್ಥಿಸಿಕೊಳ್ಳದೆ ನಿರ್ವಿಕಾರವಾಗಿ ಇರುತ್ತಿದ್ದ! ’ತುಲ್ಯಮಾನಾಪಮಾನಯೋಃ’ ಎನ್ನುವ ಗೀತೋಕ್ತ ’ಜ್ಞಾನಿಯ ಲಕ್ಷಣವು’ ಅವನಲ್ಲಿ ಜನ್ಮಜಾತವಾಗಿತ್ತು.
ತೀವ್ರ ಆರ್ಥಿಕ ಮುಗ್ಗಟ್ಟು ಹಾಗೂ ಅನನುಕೂಲತೆಗಳನ್ನು ನಿಭಾಯಿಸಲಾಗದೆ ಯುವ ಸಾಧುಗಳೆಲ್ಲರೂ ಪರಿವ್ರಜನಕ್ಕೆ ಹೊರಟು ನಿಂತರು. ಆದರೆ ಶಶಿಭೂಷಣನು ಮಾತ್ರ ’ನನಗೆ ಗುರುಮಹಾರಾಜರ ಸನ್ನಿಧಿಯೇ ಸಕಲ ತೀರ್ಥಗಳು’ ಎಂದು ಅಲ್ಲಿಯೇ ಸ್ಥಿರವಾಗಿ ನಿಂತುಬಿಟ್ಟ. ಅಧ್ಯಯನ, ಪೂಜೆ, ಅಡುಗೆ ಆತಿಥ್ಯಗಳ ಜೊತೆಗೆ ಮಠದ ಪ್ರತಿಯೊಂದು ಕೆಲಸಕಾರ್ಯವನ್ನೂ ತಾವೊಬ್ಬರೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಅವರಿಗೆ ಎಂದೂ ಹೊರೆ ಎನಿಸಲೇ ಇಲ್ಲ.
ಸತತ ೧೧ ವರ್ಷಗಳ ಕಾಲ ಅಲ್ಲೇ ನಿಂತ! ಶಾಸ್ತ್ರಾಧ್ಯಯನ, ಸಾಂಪ್ರದಾಯಿಕ ಪೂಜಾಪದ್ಧತಿಯನ್ನು ಕೈಬಿಡದೆ, ಜಪತಪಗಳನ್ನು ಮಾಡುತ್ತ, ಎಲ್ಲ ಕಷ್ಟಗಳನ್ನೂ ಹಲ್ಲುಕಚ್ಚಿ ಸಹಿಸುತ್ತ, ಯಾರಲ್ಲೂ ಏನನ್ನೂ ಹೇಳಿಕೊಳ್ಳದ, ಬೇಡದೆ, ನಿರ್ಲಿಪ್ತ ಶಾಂತ ಭಾವದಿಂದ ಇರುತ್ತಿದ್ದ. ಶಶಿಯ ಈ ಸ್ಥಿತಪ್ರಜ್ಞೆಯೇ ಭಾವೀ ರಾಮಕೃಷ್ಣ ಮಠಕ್ಕೆ ಭದ್ರ ನಾಂದಿಯಾಯಿತು. ಶಶಿಯ ಏಕನಿಷ್ಟೆಯನ್ನು ಗುರುಭಕ್ತಿಯನ್ನೂ ಗಮನಿಸಿಯೇ ಸ್ವಾಮಿ ವಿವೇಕಾನಂದರು ಆತನಿಗೆ ’ಸ್ವಾಮಿ ರಾಮಕೃಷ್ಣಾನಂದ’ ಎನ್ನುವ ನಾಮಧೇಯವನ್ನು ಬಿಟ್ಟುಕೊಟ್ಟರು. ರಾಮಕೃಷ್ಣಾನಂದರು ಹಾಗೆ ಒಂದೆಡೆ ನಿಲ್ಲದೇ ಹೋಗಿದ್ದರೆ ರಾಮಕೃಷ್ಣ ಮಠ ನಿಜಕ್ಕೂ ಪ್ರಾರಂಭವೇ ಅಗುತ್ತಿತ್ತೋ ಇಲ್ಲವೋ ಹೇಳುವುದು ಕಷ್ಟ. ಏಕೆಂದರೆ ಎಲ್ಲರೂ ಪರಿವ್ರಜನದಲ್ಲಿ ಚದುರಿ ಹೋಗುವ ಸಂಭವವೇ ಹೆಚ್ಚಾಗಿತ್ತು. ಗಂಭೀರ ತಪಸ್ವಿಯಾದ ರಾಮಕೃಷ್ಣಾನಂದರಿಗೆ ವಿನೋದಶೀಲತೆಯೂ ಇತ್ತು. ರಾತ್ರಿ ಭೋಜನಾನಂತರ ಕೆಲವೊಮ್ಮೆ ಮಾರ್ಕ್ ತ್ವೈನ್ ನ "The innocents at home and the innocents abroad" ಪುಸ್ತಕವನ್ನು ನಾಟಕೀಯ ಧ್ವನಿಯಲ್ಲಿ ಜೋರಾಗಿ ಓದಿ ಗಹಗಹಿಸಿ ನಗುತ್ತ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದರು. ಬಂಗಾಳಿ ಭಾಷೆಯಲ್ಲಿದ್ದ ಶ್ರೀರಾಮಕೃಷ್ಣರ ಬೋಧನೆಗಳನ್ನು ಸಂಸ್ಕೃತ ಶ್ಲೋಕರೂಪದಲ್ಲಿ ಅನುವಾದಿಸಿ ’ವಿದ್ಯೋದಯ’ ಎಂಬ ಸಂಸ್ಕೃತ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಮಧ್ಯಾಹ್ನ ಬಿಡುವಿನ ಸಮಯ ಸಿಕ್ಕಲ್ಲಿ ತಮಗೆ ಅತ್ಯಂತ ಪ್ರಿಯವಾದ ಗಣಿತಶಾಸ್ತ್ರದ ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರವನ್ನು ಸಂಶೋಧಿಸುವುದರಲ್ಲಿ ಮಗ್ನವಾಗುತ್ತಿದ್ದರು. Trignometry, logarithmsನ ಕಷ್ಟಕರ ಸಮಸ್ಯೆಗಳನ್ನು ಲೀಲಾಜಾಲವಾಗಿ ಬಗೆಹರಿಸುವ ಅವರ ಹವ್ಯಾಸ ಅವರ ಕೊನೆಯ ದಿನಗಳವರೆಗೂ ಮುಂದುವರೆಯಿತು ಎನ್ನುವುದನ್ನು ಸೋದರೀ ದೇವಮಾತಾ ನೆನೆಸಿಕೊಳ್ಳುತ್ತಾಳೆ. ಕ್ಷಣಕಾಲವಾದರೂ ಸುಮ್ಮನೆ ಕೂಡದೆ ನಿರಂತರ ರಚನಾತ್ಮಕ ಕಾರ್ಯದಲ್ಲಿ ತೊಡಗಿರುತ್ತಿದ್ದರು.
ಸುಮಾರು ಒಂದು ದಶಕ್ಜಕ್ಕಿಂತ ಹೆಚ್ಚುಕಾಲ ಹೀಗೆ ಒಂದೆಡೆಯಿದ್ದು ಮಠವನ್ನು ನಡೆಸಿದ ರಾಮಕೃಷ್ಣಾನಂದರ ತಪಸ್ಸು ಫಲಿಸಿತು. ವಿಶ್ವವೇದಿಕೆಯಲ್ಲೇ ಮಿಂಚಿ ಸನಾತನ ಮೌಲ್ಯಗಳನ್ನು ಮೆರೆಸಿ ಅನನ್ಯಸಾಧಾರಣ ಕಾರ್ಯಗಳನ್ನು ಎಸಗಿದ ಸ್ವಾಮಿ ವಿವೇಕಾನಂದರು ಮಠಕ್ಕೆ ಆರ್ಥಿಕ ನೆರವನ್ನು ಸಂಪಾದಿಸುವಲ್ಲಿ ಸಮರ್ಥರಾದರಲ್ಲದೆ, ಮಠವು ಉತ್ತಮತರ ಕಟ್ಟಡಗಳಿಗೆ ಸ್ಥಳಾಂತರವಾಗಿ ಕೊನೆಗೆ ಬೇಲೂರಿನ ನಿವೇಶನದಲ್ಲಿ ಸ್ಥಿರಗೊಂಡಿತು. ರಾಮಕೃಷ್ಣಾನಂದರು ಮಠದ ಪೂಜೆ, ಧಾರ್ಮಿಕ ನೀತಿಸಂಹಿತೆ ಹಾಗೂ ವಿಧಿವಿಧಾನಗಳನ್ನೂ ರೂಪುರೇಷೆಗಳನ್ನು ಮೂಡಿಸುವಲ್ಲಿ ಕಾರಣೀಭೂತರಾದರು. ಅವರು ಅಂದು ಪ್ರಾರಂಭಿಸಿದ ಪೂಜಾವಿಧಿವಿಧಾನಗಳು ಇಂದಿಗೂ ರಾಮಕೃಷ್ಣ ಮಠದ ಗರ್ಭಗುಡಿಗಳಲ್ಲಿ ಜಾರಿಯಲ್ಲಿವೆ.
ಒಮ್ಮೆ ಸ್ವಾಮಿ ವಿವೇಕಾನಂದರು ಲೋಕಾಭಿರಾಮವಾಗಿ ರಾಮಕೃಷ್ಣಾನಂದರಿಗೆ ಹೇಳುತ್ತಾರೆ "ಶಶಿ ನಿನಗೆ ನನ್ನ ಮೇಲೆ ಎಷ್ಟು ಪ್ರೀತಿ ಎನ್ನುವುದನ್ನು ಪರೀಕ್ಷಿಸಬೇಕಿದೆ. ಚಿತ್ತಪುರ ರಸ್ತೆಯ ಬದಿಯಲ್ಲಿರುವ ಮುಸಲ್ಮಾನನ ಅಂಗಡಿಯಿಂದ ಬ್ರಿಟಿಷ್ ಬ್ರೆಡ್ ಕೊಂಡುತರುವೆಯಾ?" ತನ್ನ ಮಡಿವಂತಿಕೆಗೆ ಸುತರಾಂ ಒಗ್ಗದ ಕೆಲಸವಾದರೂ ರಾಮಕೃಷ್ಣಾನಂದರು ಮರುಮಾತಿಲ್ಲದೆ ಬ್ರೆಡ್ ತಂದುಕೊಟ್ಟೇ ಬಿಟ್ಟರು! ಮಠವನ್ನು ಬಿಟ್ಟು ಸಣ್ಣ ತೀರ್ಥಯಾತ್ರೆಗೂ ಹೋಗದ, ಎಲ್ಲೂ ಅಲುಗದ ರಾಮಕೃಷ್ಣಾನಂದರಿಗೆ ಮಠದ ಬಗ್ಗೆ ತುಂಬ ಮಮಕಾರ ಎಂದು ಭಾವಿಸಿದ ಎಲ್ಲರಿಗೂ ಮತ್ತೊಂದು ಆಶ್ಚರ್ಯ ಕಾದಿತ್ತು. "ದಕ್ಷಿಣಭಾರತಕ್ಕೆ ನಿನ್ನನ್ನು ಕಳುಹಿಸುವುದಾಗಿ ಅಲ್ಲಿನ ಜನರಿಗೆ ಮಾತುಕೊಟ್ಟಿದ್ದೇನೆ. ಅಲ್ಲಿ ನೀನು ಮಠಸ್ಥಾಪನೆ ಪ್ರಚಾರ ಕಾರ್ಯಗಳನ್ನು ನಿರ್ವಹಿಸಬೇಕು" ಎಂದು ಸ್ವಾಮಿ ವಿವೇಕಾನಂದರು ವಿನಂತಿಸಿಕೊಂಡಾಗ ರಾಮಕೃಷ್ಣಾನಂದರು ಮರುಮಾತಿಲ್ಲದೆ ಒಪ್ಪಿಯೇ ಬಿಟ್ಟರು!
ಕಿಂಚಿತ್ತೂ ಆತಂಕ, ವಿರೋಧ, ಅಸಮಾಧಾನಗಳಿಗೆ ಆಸ್ಪದವನ್ನೇ ಕೊಡದೆ, ತಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಪೂಜಿಸುತ್ತಿದ್ದ ಗುರುದೇವ ಸನ್ನಿಧಿಯನ್ನೂ ತೊರೆದು, ನಗುಮೊಗದಿಂದ ಅಪರಿಚಿತ ಸ್ಥಳಕ್ಕೆ ಹೊರಡುವುದು ಅವರಿಗೆ ಅದೆಷ್ಟು ಸುಲಭಸಾಧ್ಯವಾಗಿತ್ತು! ಅವರ ಅಂತರಂಗದ ನಿಜವಾದ ’ಸಮ್ಯಕ್ ನ್ಯಾಸ’ ಇದರಿಂದ ಸ್ಪಷ್ಟವಾಗುತ್ತದೆ.
ಚೆನ್ನೈನ ಸಂಪ್ರದಾಯ-ಜಡ ಮನೋಭಾವದ ಜನರನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ವಾಮಿ ವಿವೇಕಾನಂದರು ಹೇಳುತ್ತಾರೆ -"ನಿಮ್ಮ ಅತ್ಯಂತ ಮಡಿವಂತರಿಗಿಂತಲೂ ಹೆಚ್ಚು ಮಡಿವಂತರಾದ ಹಾಗೂ ಸಾಟಿಯಿಲ್ಲದಂತಹ ಪೂಜೆಹೋಮಾದಗಳ ಪ್ರಯೋಗಜ್ಞಾನ, ಶಾಸ್ತ್ರಜ್ಞಾನ ಹಾಗೂ ಧ್ಯಾನಪರತೆಯ ಸಿದ್ಧಿಯುಳ್ಳಂತಹ ಒಬ್ಬ ಸ್ವಾಮಿಯನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ".
೧೯೮೭ರಲ್ಲಿ ರಾಮಕೃಷ್ಣಾನಂದರು ದಕ್ಷಿಣಕ್ಕೆ ಬಂದಿಳಿದರು. ಊರಿನಿಂದ ಊರಿಗೆ ತಿರುಗುತ್ತ ಅನಿಶ್ಚಿತವಾದ ಅನನುಕೂಲಕರವಾದ ಪರಿಸ್ಥಿತಿಗಳಲ್ಲಿ ಅಪರಿಚಿತ ಜನರೊಡನೆ ಒಡನಾಡುತ್ತ ಅವರು ಪಟ್ಟ ಕಷ್ಟಗಳು ಅಪಾರ. ಚೈನ್ನೈನಲ್ಲಿ ರಾಮಕೃಷ್ಣ ಮಠಸ್ಥಾಪನೆ ಮಾಡಿದ ದಿನಗಳಲ್ಲಿ ಆವರಣದ ಸ್ವಚ್ಛತೆ, ಅಡುಗೆ, ಪೂಜೆ, ಪ್ರವಚನ ಹಾಗೂ ಆಡಳಿತದ ಎಲ್ಲ ವಿವರಗಳನ್ನೂ ರಾಮಕೃಷ್ಣಾನಂದರು ಏಕಾಕಿಯಾಗಿ ನಿರ್ವಹಿಸಬೇಕಿತ್ತು. ಒಂದು ರಾತ್ರಿಯಂತೂ ವಿಪರೀತ ಮಳೆಯುಂಟಾಗಿ ಮಾಡು ಎಲ್ಲೆಡೆಯೂ ಸೋರ ತೊಡಗಿದಾಗ ರಾತ್ರಿಯಿಡೀ ರಾಮಕೃಷ್ಣರ ಭಾವಚಿತ್ರದ ಮೇಲೆ ಛತ್ರಿಯನ್ನು ಹಿಡಿದುಕೊಂಡು ನಿಂತೇ ಇದ್ದರು ರಾಮಕೃಷ್ಣಾನಂದರು! 
ತೀವ್ರ ಆರ್ಥಿಕ ಅನನುಕೂಲತೆಗಳ ನಡುವೆಯೂ ಶಾಂತ-ಸ್ಥಿರ ಮನಸ್ಸಿನಿಂದ ಅಪಾರ ಪರಿಶ್ರಮ ಮಾಡುತ್ತಿದ್ದರು. ಚಿಕ್ಕಪುಟ್ಟ ಕೆಲಸಗಳಿಗೂ ಬಹಳ ದೂರ ನಡೆಯಬೇಕಾಗುತ್ತಿತ್ತು. ಜಟಕಾಬಂದಿ ಹಿಡಿಯಲು ಒಂದೂವರೆ ಮೈಲಿ ದೂರ ನಡೆಯಬೇಕಿತ್ತು, ಒರಟು ರಸ್ತೆಗಳ ಮೇಲೆ ಜಟಕಾಗಾಡಿಯಲ್ಲಿ ನಿರಂತರ ಸಂಚಾರ, ಜನಸಂಪರ್ಕ, ಪ್ರಚಾರಕಾರ್ಯಗಳ ನಡುವೆ  ಅದೆಷ್ಟೋ ನಿರಾಶೆ, ವೈಫಲ್ಯಗಳು ಅವರ ದಿನನಿತ್ಯದ ಸವಾಲುಗಳಾಗಿದ್ದವು. ಆದರೆ ಅವರು ಎಂದೂ ತಮ್ಮ ಕಷ್ಟವನ್ನು ಜನರ ಮುಂದೆ ಹೇಳಿಕೊಳ್ಳುತ್ತಿರಲಿಲ್ಲ. ತಮ್ಮ ತೊಂದರೆ, ನಿರಾಶೆ, ಪ್ರಶ್ನೆ, ಹಾಗೂ ಮುಖ್ಯ ನಿರ್ಣಯಗಳನ್ನು ಅವರು ’consult’ ಮಾಡುತ್ತಿದ್ದದ್ದು ತನ್ನ ಪ್ರಿಯ ಗುರುದೇವನನ್ನು ಮಾತ್ರವೆ. ’ನಾನು ಮಾಡುತ್ತೇನೆ’ ಎನ್ನುವ ಕರ್ತೃತ್ವ ಭಾವವನ್ನೂ ’ನಾನು ಫಲಾನುಭವಿ’ ಎನ್ನುವ ಭೋಕ್ತೃತ್ವ ಭಾವವನ್ನೂ ಕಿಂತಿತ್ತೂ ತಾಳದೆ ಗುರುವಿನ ಪಾದಕ್ಕೆ ಸರ್ವಸಮರ್ಪಣೆ ಮಾಡಿಕೊಂಡ ಧನ್ಯಜೀವಿ ಅವರು.
ತೀವ್ರ ಸಂಕಷ್ಟಗಳೊದಗಿದಾಗ ಕೆಲವೊಮ್ಮೆ ಮುನಿಸಿನಿಂದ ರಾಮಕೃಷ್ಣರಿಗೆ ಬೈಯುತ್ತಿದ್ದರು "ಏಯ್ ಮುದುಕ, ನನ್ನನ್ನಿಲ್ಲ ಕರೆತಂದು ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿರುವೆಯಾ? ನಾನಿನ್ನು ಅಲ್ಲಿ ಇಲ್ಲಿ ಹೋಗಿ ಭಿಕ್ಷೆ ಬೇಡಲಾರೆ. ಏನೂ ಬರದಿದ್ದರೇ ಸಮುದ್ರದ ಮರಳನ್ನೇ ತಂದು ನೈವೇದ್ಯ ಮಾಡುತ್ತೇನೆ ಅಷ್ಟೇ!". ಹಾಗೇ ಕೆಲವೊಮ್ಮೆ ನೊಂದು ನುಡಿದಾಗ ಅನಿರೀಕ್ಷಿತವಾಗಿ ಯಾರೋ ಭಕ್ತರು ಕೈತುಂಬ ಸಾಮಾನು ತರಕಾರಿ ಹಣು ಮುಂತಾದುವನ್ನು ತಂದುಕೊಡುತ್ತಿದ್ದರು!
ಈ ಕಾಲದಲ್ಲೇ ರಾಮಾನುಜಾಚಾರ್ಯರ ಜೀವನ ಸಂದೇಶಗಳ ಅಧ್ಯಯನ ಮಾಡಿ ಅಧಿಕೃತ ಮಾಹಿತಿಗಾಗಿ ಶ್ರೀಪೆರಂಬದೂರ್ ಹಾಗೂ ಕಾಂಚೀಪುರಗಳಿಗೆ ಭೇಟಿ ಕೊಟ್ಟರು. ಆಂಗ್ಲ, ಹಿಂದಿ ಅಥವಾ ಬಂಗಾಳಿ ಅನುವಾದಗಳೇ ಇಲ್ಲದ ಆ ಕಾಲದಲ್ಲಿ, ತಮಿಳುಭಾಷೆಯೂ ಗೊತ್ತಿಲ್ಲದ ರಾಮಕೃಷ್ಣಾನಂದರು ಅಧಿಕೃತವಾದ ಅಪಾರವಾದ ಮಾಹಿತಿಯನ್ನು ಹೇಗೆ ಸಂಗ್ರಹಿಸಿದರು ಎನ್ನುವುದೇ ಆಶ್ಚರ್ಯದ ವಿಷಯ. ಅವರ ವೈದುಷ್ಯ, ಪರಿಶ್ರಮ ಹಾಗೂ ಕೌಶಲಗಳು ಇಲ್ಲಿ ಎದ್ದುಕಾಣುತ್ತವೆ. ಬಂಗಾಳಿ ಮಾಸಪತ್ರಿಕೆ ಉದ್ಬೋಧನಕ್ಕೆ ರಾಮಾನುಜಾಚಾರ್ಯರ ಕುರಿತಾದ ಲೇಖನ ಸರಣಿಯನ್ನು ಬರೆದುಕೊಡುತ್ತಿದ್ದರು. ಮುಂದೆ ಈ ಲೇಖನಮಾಲೆಯೇ ಪುಸ್ತಕವಾಗಿ ಪ್ರಕಟವಾಗಿ ಬಂಗಾಳಿ ಭಾಷೆಯಲ್ಲಿ ರಾಮಾನುಜಾಚಾರ್ಯರ ಪ್ರಪ್ರಥಮ ಅಧಿಕೃತ ಸಾಹಿತ್ಯದ ಆಕಾರ ಗ್ರಂಥವಾಯಿತು. ಅದಲ್ಲದೆ ಮಠದಲ್ಲಿ ನಿಯಮಿತವಾಗಿ ಸಾಪ್ತಾಹಿಕ ಪ್ರವಚನ ಹಾಗೂ ಶಾಸ್ತ್ರಚರ್ಚೆಗಳನ್ನು ನಡೆಸುತ್ತಿದ್ದರು. ರಾಮಕೃಷ್ಣಾನಂದರ ಪಾಂಡಿತ್ಯದ ಬಗ್ಗೆ ತಿಳಿದ ಹಲವು ಸಂಸ್ಕೃತ ವಿದ್ವಾಂಸರು ಅವರನ್ನು ಭೇಟಿಯಾಗಿ ಶಾಸ್ತ್ರಚರ್ಚೆ ಮಾಡುತ್ತಿದ್ದರು. ಆದರೆ ಅವರು ಬೆರಗುಗೊಳಿಸುವ ವಾಗ್ಮಿಯೇನೂ ಆಗಿರಲಿಲ್ಲ. ಕೆಲವೊಮ್ಮೆ ಅವರ ಪ್ರವಚನಕ್ಕೆ ಒಬ್ಬ ಶ್ರೋತೃವೂ ಇರುತ್ತಿರಲಿಲ್ಲ. ಆದರೂ ವೇಳೆಗೆ ಸರಿಯಾಗಿ ಹೋಗಿ ವೇದಿಕೆಯ ಮೇಲೆ ಕುಳಿತು ಧ್ಯಾನ ಮಾಡಿ ಎದ್ದು ಬರುತ್ತಿದ್ದರಂತೆ! ಅವರ ನಿರಂತರ ಪರಿಶ್ರಮ ಹಾಗೂ ಕಾರ್ಯಕೌಶಲಗಳ ಪರಿಣಾಮವಾಗಿ ಮಠವು ಒಂದು ಸ್ಥಿರವೂ ನಿರ್ದಿಷ್ಟವೂ ಆದ ರೂಪವನ್ನು ತಾಳುತ್ತ ಬಂದಿತು. ಶಿಷ್ಯರು, ಭಕ್ತರು, ಗಣ್ಯರೂ ಅವರಿಂದ ಆಕರ್ಷಿತರಾಗತೊಡಗಿದರು.
ಬಡಬಗ್ಗರಿಗಾಗಿ ಸ್ವಾಮಿಗಳ ಹೃದಯ ಅಪಾರವಾಗಿ ಮರುಗುತ್ತಿತ್ತು. ಒಮ್ಮೆ ಪ್ಲೇಗಿನಲ್ಲಿ ಸಾವನ್ನಪ್ಪಿದ ದಂಪತಿಗಳ ಅನಾಥ ಮಗನನ್ನು ಕರೆತಂದು ಮಠದಲ್ಲಿ ಆಶ್ರಯ ಕಲ್ಪಿಸಿ ಕಾಲಾಂತರದಲ್ಲಿ ಅನಾಥಮಕ್ಕಳಿಗಾಗಿ ’ರಾಮಕೃಷ್ಣ ಸ್ತ್ಯೂಡೇಂಟ್ಸ್ ಹೋಂ’ ಎಂಬ ಸಂಸ್ಥೆಯನ್ನೇ ಹುಟ್ಟುಹಾಕಿದರು. ತೀವ್ರ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಮೂರು ಹೆಣ್ಣುಮಕ್ಕಳೊಂದಿಗೆ ’ನ್ಯಾಶನಲ್ ಗರ್ಲ್ಸ್ ಸ್ಕೂಲ್’ ಎಂಬ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು. ನಿರಭಿಮಾನಿಯಾದ ಅವರು ಕೈಯಲ್ಲಿ ಒಂದು ದೊಡ್ಡ ಮರದ ಪೆಟ್ಟಿಗೆಯನ್ನು ಹಿಡಿದು ದೂರದೂರದವರೆಗೂ ಬೀದಿಗಳಲ್ಲಿ ಸಂಚರಿಸುತ್ತ ಹಣ ಸಂಗ್ರಹ ಮಾಡಿ ಶಾಲೆಗಾಗಿ ವಿನಿಯೋಗಿಸುತ್ತಿದ್ದರು. ಆ ಶಾಲೆಯು ಇಂದಿಗೂ ನಡೆಯುತ್ತಿದ್ದು ಅಲ್ಲಿ ಆ ಮರದ ಪೆಟ್ಟಿಗೆಯನ್ನು ನೋಡಬಹುದು!
ರಾಮಕೃಷ್ಣಾನಂದರು ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರಗಳ ಮೂಮ್ತಾದ ರಾಜ್ಯಗಳ ವಿವಿಧಭಾಗಗಳಲ್ಲಿ ಸಂಚರಿಸಿ, ಜನರನ್ನು ಸಂಘಟಿಸಿ ವೇದಾಂತ ಹಾಗೂ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರವನ್ನು ಸಮರ್ಥವಾಗಿ ಮಾಡಿದರು. ಹೋದಲ್ಲೆಲ್ಲ ಸಂಸ್ಥೆಗಳನ್ನೂ ಮಠನಿರ್ಮಾಣಕ್ಕೆ ಬೀಜವನ್ನೂ ಬಿತ್ತುತ್ತ ಹೋದರು. ಬೆಂಗಳೂರಿನ ಮಠಸ್ಥಾಪನೆಯ ಸಂದರ್ಭದಲ್ಲಂತೂ ಮನೆಯಿಂದ ಮನೆಗೆ ತಾವೇ ಹೋಗಿ ವಂತಿಗೆ ಎತ್ತುತ್ತ ಅವಿರತ ಪರಿಶ್ರಮವನ್ನು ಪಟ್ಟರು. ಪಂಡಿತರಿಂದ ಪಾಮರರವರೆಗೂ, ಮಹಾರಾಜರಿಂದ ಹಿಡಿದು ಜನಸಾಮಾನ್ಯರವರೆಗೂ ಸರ್ವಜನರ ಪ್ರೀತಿಗೌರವಗಳನ್ನೂ ಅಭಿಮಾನವನ್ನು ಗೆದ್ದುಕೊಳ್ಳುತ್ತ ಹೋದರು. ಬೆಂಗಳೂರಿನಲ್ಲಿ ಅವರು ಅದೆಷ್ಟು ಜನಪ್ರಿಯರಾದರೆಂದರೆ ಹಲಸೂರಿನಲ್ಲಿನ ವೇದಾಂತಾ ಸೊಸೈಟಿಯ ಆಹ್ವಾನವನ್ನು ಮನ್ನಿಸಿ ಬೆಂಗಳೂರಿಗೆ ಬಂದಾಗ ಅವರನ್ನು ಕಂಟೋನ್ಮೆಂಟ್ ಪ್ರದೇಶದಲ್ಲಿ ೫೩ ಭಜನ ತಂಡಗಳ ೪೦೦೦ ಜನರು ಮೂರು ಮೈಲಿ ದೂರ ಮೆರವಣಿಗೆಯಲ್ಲಿ ಕೊಂಡೊಯ್ದರಂತೆ.
ಶಾರದಾದೇವಿಯವರು ಬೆಂಗಳೂರಿನ ಮಠಕ್ಕೂ ದಕ್ಷಿಣ ಭಾರತದ ರಾಮೇಶ್ವರ ಮುಂತಾದ ವಿವಿಧ ತೀರ್ಥಕ್ಷೇತ್ರಗಳಿಗೆ ಕರೆತಂದವರೂ ರಾಮಕೃಷ್ಣಾನಂದರೆ. ಬೆಂಗಳೂರಿನ ಮಠದಲ್ಲಿ ಶ್ರೀಮಾತೆಯವರು ತಂಗಿದ್ದಾಗ ಒಮ್ಮೆ ಅಲ್ಲಿನ ಬೆಟ್ಟದ ಮೇಲೆ ಕುಳಿತು ಸೂರ್ಯಾಸ್ತವನ್ನು ವೀಕ್ಷಿತ್ತ ಭಾವಸ್ಥರಾದರು. ಅದನ್ನು ಗಮನಿಸಿದ ರಾಮಕೃಷ್ಣಾನಂದರು "ಅಮ್ಮ ಇಂದು ಪರ್ವತವಾಸಿನಿಯಾಗಿಬ್ಬಿಟ್ಟಿದ್ದಾರೆ!" ಎಂದು ಉದ್ಗರಿಸುತ್ತ, ಪ್ರಯಾಸದಿಂದ (ಸ್ಥೋಲಕಾಯದವರಾಗಿದ್ದರಿಂದ) ಬೆಟ್ಟವನ್ನೇರಿ ಶ್ರೀಮಾತೆಗೆ ನಮಿಸಿ "ಸರ್ವ ಮಂಗಲಮಾಂಗಲ್ಯೇ---" ಶ್ಲೋಕವನ್ನು ಭಾವಪೂರ್ಣವಾಗಿ ಪಠಿಸಿ ಅವರ ಕೈಗಳನ್ನು ತಲೆಯ ಮೇಲೆ ಇರಿಸಿಕೊಂಡರು. ಶ್ರೀಮಾತೆಯವರು ಆ ಸ್ಥಳದಲ್ಲಿ ಕುಳಿತು ಜಪನಿರತರಾದರು. ಆ ಸ್ಥಳ ಈಗ ಒಂದು ದಿವ್ಯ ತೀರ್ಥವೇ ಆಗಿದ್ದು ಭಕ್ತರ ಹೃನ್ಮನಗಳನ್ನು ಮಿಡಿಸುವ ದಿವ್ಯಸ್ಪಂದನಗಳಿಂದ ಕೂಡಿದೆ.
ಮಠವು ಬೆಳೆದಂತೆ ಸಾಧು-ಬ್ರಹ್ಮಚಾರಿ-ಭಕ್ತರ ಸಂಖ್ಯೆ ಹಾಗೂ ತತ್ಸಂಬಂಧಿತವಾದ ಕೆಲಸಕಾರ್ಯಗಳೂ ಹೆಚ್ಚಿದವು. ರಾಮಕೃಷ್ಣಾನಂದರು ದಕ್ಷ ನಾಯಕರಾಗಿ ಎಲ್ಲರನ್ನೂ ಮುನ್ನಡೆಸಿದರು. ಹೆಚ್ಚಿನ ಕೆಲಸವನ್ನು ಕಡಿಮೆ ಸಮಯದಲ್ಲಿ ಮಾಡಿ ಮುಗಿಸುವಲ್ಲಿ ನಿಷ್ಣಾತರಾದ ರಾಮಕೃಷ್ಣಾನಂದರು ತಮ್ಮ ಶಿಷ್ಯರಲ್ಲೂ ಆ ಬಗೆಯ ಕಾರ್ಯಕೌಶಲವನ್ನು ಪ್ರಚೋದಿಸುವ ಸಲುವಾಗಿ ಸಾಕಷ್ಟು ಬಯುತ್ತಿದ್ದರು. ಆದರೆ ಆ ಬಳಿಕ ಬಾಯಲ್ಲಿ ಸಿಹಿ ಇಟ್ಟು ಸಮಾಧಾನವನ್ನೂ ಮಾಡುತ್ತಿದ್ದರು ಎಂದು ಸ್ವಾಮಿ ವಿರಜಾನಂದರು ಸ್ಮರಿಸುತ್ತಾರೆ. ’ಪ್ರಬುದ್ಧ ಭಾರತ’, ’ವೇದಾಂತ ಕೇಸರಿ’, ’ಉದ್ಬೋಧನ’ ಮುಂತಾದ ಪತ್ರಿಕೆಗಳನ್ನು ನಡೆಸುವ ಯುವ ಸಾಧುಗಳಿಗೆ ತಾವೇ ಅನೇಕ ಲೇಖನಗಳನ್ನೂ, ಸಾಹಿತ್ಯ ಮೂಲಗಳನ್ನೂ, ತಮ್ಮದೇ ಪ್ರಶ್ನೋತ್ತರ ದಾಖಲೆಗಳನ್ನೂ ಕೊಟ್ಟು ಅದರ ಸಂಕಲನ ಮಾಡುವುದಕ್ಕೂ ಪೂರ್ಣಸ್ವಾತಂತ್ರ್ಯವನ್ನೂ ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ತಮ್ಮ ಸ್ನೇಹಿತರಾದ ಸ್ವಾಮಿ ನಿರ್ಮಲಾನಂದರು ದಕ್ಷಿಣಭಾರತದಲ್ಲೆಲ್ಲ ಮಾಡುತ್ತಿದ್ದ ಬಿರುಸಿನ ಪ್ರಚಾರಕಾರ್ಯಕ್ಕೆ ಪೂರ್ಣ ಸಹಯೋಗ ಕೊಟ್ಟವರು ರಾಮಕೃಷ್ನಾನಂದರೆ. ಮುಂದೆ ಮಠದ ಕಾರ್ಯವಿಸ್ತಾರದ ಹೊಣೆ ಹೊತ್ತು ಅಮೇರಿಕಕ್ಕೂ ಭೇಟಿಯಿತ್ತರು. A truly busy man has time for everything ಎನ್ನುವಂತೆ ಇಷ್ಟೆಲ್ಲದರ ನಡುವೆ ಹಲವು ಪುಸ್ತಕಗಳನ್ನೂ ರಚಿಸಿದರು. Life of Sri Ramanuja, God and Divine Incarnation, The Message of Eternal Wisdom, Sri Krishna: Pastoral and the King Maker, For Thinkers on Education, The Ancient Quest, Consolations, The Soul of Man, The Universe and Man, Path to Perfection, Sri Ramkakrishna and His Mission ಇತ್ಯಾದಿಗಳು ಅವರ ರಚನೆಗಳು. ೧೮೯೭ರಲಿ ಬಂಗಾಳದಲ್ಲಿ ಬಡಿದ ಭೀಕರ ಕ್ಷಾಮದ ಪರಿಹಾರ ಕಾರ್ಯದಲ್ಲಿ ಅಪಾರವಾಗಿ ಶ್ರಮಿಸುತ್ತಿದ್ದ ಸ್ವಾಮಿ ಅಖಂಡಾನಂದರಿಗೆ ಸಹಾಯವಾಗುವಂತೆ ಸಾಕಷ್ಟು ವಂತಿಗೆ ಎತ್ತಿ ಕಳುಹಿಸಿಕೊಟ್ಟರು. ಅವರ ಬೈಬಲ್ ಜ್ಞಾನದ ಬಗ್ಗೆ ಲಾರಾ ಗ್ಲೆನ್ (ಮುಂದೆ ಸೋದರಿ ದೇವಮಾತಾ) ಹೇಳುತಾಳೆ- "He knew the Bible from cover to cover and expounded it in a spirit and with an understanding which are rare even in Christian countries…."
ರಾಮಕೃಷ್ಣಾನಂದರ ಆತ್ಮವಿಶ್ವಾಸ, ಔದಾರ್ಯ ಹಾಗೂ ದಿಟ್ಟತನಗಳಿಗೆ ನಿದರ್ಶನವೊಂದನ್ನು ನೋಡಬಹುದು- ತಿರುವನಂತಪುರದ ಅನಂತಪದ್ಮನಾಭ ದೇಗುಲಕ್ಕೆ ಭೇಟಿಯಿತ್ತಾಗ ರಾಮಕೃಷ್ಣಾನಂದರು ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಲು ಇಚ್ಛಿಸಿದಾಗ, ಪುರೋಹಿತರು ತಡೆದು ಕೇಳಿದರಂತೆ- "ನೀವು ಬ್ರಾಹ್ಮಣರೇ?" ಎಂದು. ಆಗ ರಾಮಕೃಷ್ಣಾನಂದರು ಉಚ್ಛಸ್ವರದಲ್ಲಿ "ನಾಹಂ ಮನುಷ್ಯೋ ನ ಚ ದೇವ ಯಕ್ಷೋ ನ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರಃ ನ ಬ್ರಹ್ಮಚಾರೀ ನ ಗೃಹೀ ವನಸ್ಥಃ ಭಿಕ್ಷುರ್ನ ಚಾಹಂ ನಿಜಬೋಧ ರೂಪಃ" ಎಂಬ ಶ್ಲೋಕವನ್ನು ಉಚ್ಚರಿಸಿದರಂತೆ. ರಾಮಕೃಷ್ಣಾನಂದರ ಗಂಭೀರ ಭಾವವನ್ನು ಕಂಡೂ ಬೆರಗಾದ ಪುರೋಹಿತ ಮರುಮಾತನಾಡದೆ ಪಕ್ಕಕ್ಕೆ ಸರಿದು ಗರ್ಭಗುಡಿಯೊಳಗೆ ಬಿಟ್ಟುಕೊಟ್ಟನಂತೆ! ಸರಳ ಹೃದಯದ ರಾಮಕೃಷ್ಣಾನಂದರು ಭಕ್ತಾದಿಗಳೊಂದಿಗೆ ವಿನೋದಶೀಲವಾಗಿ ಮಾತನಾಡುತ್ತಿದ್ದರು. ಒಮ್ಮೆ ದೇವಮಾತೆ ’ನನಗೆ ಮಹಾಧ್ಯಕ್ಷರಾದ ಬ್ರಹ್ಮಾನಂದರನ್ನು ಕಂಡರೆ ಸ್ವಲ್ಪ ಭಯ" ಎಂದು ಹೇಳಿಕೊಂಡಾಗ ತೂಗು ಕುರ್ಚಿಯಲ್ಲಿ ಕುಳಿತಿದ್ದ ರಾಮಕೃಷ್ಣಾನಂದರು ಮುಂದೆ ಬಾಗಿ ಪಿಸುದನಿಯಲ್ಲಿ "ನನಗೂ ಅಷ್ಟೆ" ಎನ್ನುತ್ತಾರೆ!
ಸ್ವಾಮಿ ವಿವೇಕಾನಂದರನ್ನು ರಾಮಕೃಷ್ಣರ ಪ್ರತಿರೂಪವೆಂದೇ ಭಾವಿಸಿ ಬಹಳವಾಗಿ ಆದರಿಸುತ್ತಿದ್ದರು ರಾಮಕೃಷ್ಣಾನಂದರು. ಒಮ್ಮೆ ದೊರೆಸ್ವಾಮಿ ಎನ್ನುವವರ ಮನೆಯಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ಮನೆಯ ನೆಲವನ್ನು ನಮಿಸಿ ಮುತ್ತಿಟ್ಟು ’ಇದು ತೀರ್ಥಸ್ಥಾನ’ ಎಂದರಂತೆ! ೧೯೧೧ ರಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ದಿನದಂದು ಅವರ ಕುರಿತಾಗಿ ರಚಿಸಿದ ಶ್ಲೋಕವು ಸಾವಿರಾರು ಭಕ್ತರ ನಾಲಿಗೆಗಳಲ್ಲಿ ಇಂದಿಗೂ ನರ್ತಿಸುತ್ತದೆ- "ನಮಃ ಶ್ರೀ ಯತಿರಾಜಾಯ ವಿವೇಕಾನಂದಸೂರಯೆ ಸಚ್ಚಿತ್ಸುಖಸ್ವರೂಪಾಯ ಸ್ವಾಮಿನೇ ತಾಪಹಾರಿಣೇ". ಸ್ವಾಮಿ ವಿವೇಕಾನಂದರು ಕೊಲಕತ್ತೆಯಲ್ಲಿ ದೇಹತ್ಯಾಗ ಮಾಡಿದಾಗ ದೂರದ ಚೆನ್ನೈನಲ್ಲಿ ರಾಮಕೃಷ್ಣಾನಂದರಿಗೆ ಸ್ವಾಮಿಜಿ ದರ್ಶನವಿತ್ತು "ನೋಡು ಶಶಿ! ನಾನು ನನ್ನ ದೇಹವನ್ನು ಎಂಜಲಂತೆ ಉಗಿದು ಬಿಟ್ಟೆ!’ ಎಂದು ಹೇಳಿದರಂತೆ! ಸ್ವಾಮಿ ವಿವೇಕಾನಂದರ ಸ್ಮರಣಾರ್ಥವಾಗಿ ರಾಮಕೃಷ್ಣಾನಂದರು ’ಸ್ವಾಮಿ ವಿವೇಕಾನಂದ ಮೆಮೋರಿಯಲ್ ಫಂಡ್’ನ್ನು ಸ್ಥಾಪಿಸಿದರು.
ಸುಮಾರು ಹದಿನಾರು ವರ್ಷಗಳ ಕಾಲ ನಿರಂತರವಾದ ಕರ್ಮಯೋಗದಲ್ಲಿ ತಮ್ಮನ್ನು ತಾವು ಸವೆಸಿಕೊಂಡರು ರಾಮಕೃಷ್ಣಾನಂದರು. ದಕ್ಷಿಣಭಾರತದ ಹವೆ ಹಾಗೂ ನಿರಂತರ ಪರಿಶ್ರಮ ಅವರ ಅರೋಗ್ಯವನ್ನು ಬೇಗನೆ ಹದಗೆಡಿಸಿತು. ಸಕ್ಕರೆ ಕಾಯಿಲೆ ಹಾಗೂ ಕ್ಷಯರೋಗಗಳಿಗೆ ತುತ್ತಾಗಿ ತೀವ್ರ ಯಾತನೆಪಟ್ಟರು. ಕೋಲಕತ್ತೆಗೆ ಹಿಂದಿರುಗಿ ಚಿಕಿತ್ಸೆ ಪಡೆದರೂ ಫಲಿಸದೇ ಹೋಯಿತು. ಆ ಕೊನೆಯ ದಿನಗಳಲ್ಲೂ ನಿರಂತರವೂ ಭಗವದ್ವಿಚಾರವನ್ನೂ ತಮ್ಮ ಗುರುದೇವರ ವಿಚಾರವನ್ನೂ ಮಾತನಾಡುವುದನ್ನು ನಿಲ್ಲಿಸಲಿಲ್ಲ. ಮಾತನಾಡಿ ಆಯಾಸ ಮಾಡಿಕೊಳ್ಳದಂತೆ ಶಿಷ್ಯರು ತಡೆದರೂ "ನನ್ನ ಗುರುದೇವನ ಬಗ್ಗೆ ಮಾತನಾಡುವಾಗ ಮರಣವೂ ನನಗೆ ಯಾವ ಯಾತನೆ ಎನಿಸದು" ಎನ್ನುತ್ತಿದ್ದರು.
ರಾಮಕೃಷ್ಣಾನಂದರು ತಮ್ಮ ಅಂತ್ಯಕಾಲದಲ್ಲಿ ಶ್ರೀಮಾತೆ ಶಾರದಾದೇವಿಯವರ ಸಾನ್ನಿಧ್ಯವನ್ನು ಬಯಸಿದರು. ಆದರೆ ಆಗ ಶ್ರೀಮಾತೆ ದೂರದ ಜಯರಾಮವಟಿಯಲ್ಲಿದ್ದರು.  ದೇಹತ್ಯಾಗ ಮಾಡುವ ಹಿಂದಿನ ರಾತ್ರಿ ರಾಮಕೃಷ್ಣಾನಂದರಿಗೆ ಶ್ರೀಮಾತೆಯವರು ದಿವ್ಯದರ್ಶನವನ್ನಿತ್ತರು. "ಅಮ್ಮ ಬಂದೇ ಬಿಟ್ಟರು!" ಎಂದು ಉದ್ಗರಿಸುತ್ತ ಭಾವಸ್ಥರಾದರು ಸ್ವಾಮಿಗಳು. ಸಾಯುವ ದಿನವೂ ’ಪೋಹಾಲಾ ದುಖ ರಜನಿ--" ಎಂಬ ಸಾಲನ್ನು ಹೇಳಿ ತಮ್ಮ ಆ ದಿವ್ಯದರ್ಶನವನ್ನೂ ಜೀವನಯಾತ್ರೆಯ ಧನ್ಯತಾಭಾವವನ್ನು ಪುಲಿನ ಮಿತ್ರ ಎಂಬುವವನಿಗೆ ವಿವರಿಸಿ ಗಿರೀಶಚಂದ್ರಘೋಷನಿಗೆ ಕೊಟ್ಟು ಅದನ್ನು ಹಾಡಾಗಿ ರಚಿಸುವಂತೆ ಸೂಚಿಸಿದರು. ಅವತ್ತೇ ಹಾಡು ಸಿದ್ಧವೂ ಆಯಿತು, ಪುಲಿನನು ಅದನ್ನು ಅವರ ಮುಂದೆ ಹಾಡುತ್ತ ಕುಳಿತ. ಆ ಹಾಡನ್ನೂ ಸ್ವಾಮಿ ವಿವೇಕಾನಂದರ ಸಂನ್ಯಾಸೀ ಗೀತೆಯನ್ನು ಆಲಿಸುತ್ತ ಮಧ್ಯಾಹ್ನದವರೆಗೂ ಸುಖಿಸಿದರು. ಪ್ರಸನ್ನಭಾವದದ್ದು, ದಿವ್ಯ ರೋಮಾಂಚನವನ್ನನುಭವಿಸುತ್ತ, ಪೂರ್ಣಪ್ರಜ್ಞಾವಸ್ಥೆಯಲ್ಲೇ ಮಹಾಸಮಾಧಿಯನ್ನು ಹೊಂದಿದರು ರಾಮಕೃಷ್ನಾನಂದರು.
ಕ್ರಮಾಗತವಾದ ನಿರಂತರ ಯತ್ನದಿಂದ ಎಲ್ಲ ದೌರ್ಬಲ್ಯಗಲನ್ನೂ ಮೋರಿ ಬೆಳೆಯಬಹುದು ಎನ್ನುವ ಭರವಸೆಯ ಮಾತುಗಳನ್ನು ರಾಮಕೃಷ್ಣಾನಂದರು ಈ ನಿದರ್ಶನದ ಮೂಲಕ ನಮಗೆಲ್ಲ ಕೊಡುತ್ತಾರೆ "ದೀರ್ಘಕಾಲದಿಂದ ಅಪೀಮು ಚಟಕ್ಕೆ ಬಲಿಯಾಗಿದ್ದ ಒಬ್ಬ ರೋಗಿ ವೈದ್ಯನಲ್ಲಿ ಹೇಳಿಕೊಂಡ- "ವೈದ್ಯರೆ! ಅಪೀಮು ಕೆಟ್ಟದು, ನನ್ನ ಜೀವಕ್ಕೆ ಅಪಾಯಕಾರಿ ಎಂದು ಗೊತ್ತಿದ್ದೂ ಅದನ್ನು ಬಿಡಲಾಗುತ್ತಿಲ್ಲ. ಏನು ಮಾಡಲಿ?" ವೈದ್ಯ ಹೇಳಿದ "ಒಮ್ಮೆಲೆ ಅಪೀಮು ಸೇವನೆ ಬಿಡಬೇಡ. ಆದರೆ ಅಪೀಮನ್ನು ತಕ್ಕಡಿಯಲ್ಲಿ ಒಂದು ಕಡೇ ಇಟ್ಟು, ಒಂದು ಬಳಪವನ್ನು ಮತ್ತೊಂದರಲ್ಲಿಡು. ಆ ಬಳಪದ ತೂಕದಷ್ಟೇ ಅಪೀಮನ್ನು ಪ್ರತಿದಿನ ಸೇವಿಸು. ತೂಗಿದ ಬಳಿಕ ಬಳಪದಿಂದ ನೆಲದ ಮೇಲೆ ಒಂದು ಗೆರೆಯನ್ನು ಎಳೆಯಬೇಕು. ರೋಗಿಯು ಹಾಗೇ ಮಾಡಿದ. ಒಂದೇ ತಿಂಗಳಲ್ಲಿ ಬಳಪ ಅರ್ಧದಷ್ಟಾಯಿತು. ಅದರೊಂದಿಗೆ ಅಪೀಮಿನ ಪ್ರಮಾಣವೂ ತಾನೇತಾನಾಗಿ ಕಡಿಮೆಯಾಗುತ್ತ ಹೋಯಿತು!" ತ್ಯಾಗ ಸಹಜವಾಗಿ ಕ್ರಮವಾಗಿ ಆಗಬೇಕಾದ ಪ್ರಕ್ರಿಯೆ".
ರಾಮಕೃಷ್ಣಾನಂದರ ಮತ್ತೊಂದು ನುಡಿಮುತ್ತು- "ನಮ್ಮಲ್ಲಿ ದೇವರನ್ನು ನಂಬುವವರು ನಿಜಕ್ಕೂ ಬಹಳ ಕಡಿಮೆ ಜನ. ಹೇಗೆ ಹೇಳಬಹುದೆಂದರೆ ನಮ್ಮ ಮನಸ್ಸಿನಲ್ಲಿ ಭಯ ಆತಂಕಗಳಿಗೆ ಆಸ್ಪದಕೊಡುತ್ತಲೇ ಇರುತ್ತೇವಲ್ಲ!"
ಭಗವಂತನಿದ್ದಲ್ಲಿ ನಿರ್ಭೀತಿ, ಆತ್ಮವಿಶ್ವಾಸ ಹಾಗೂ ಪ್ರಸನ್ನತೆಗಳೆಂಬ ದಿವ್ಯಗುಣಗಳಿರಲೇ ಬೇಕು ಎನ್ನುವುದನ್ನು ಈ ಮಾತುಗಳ ಮೂಲಕವೂ ಹಾಗೂ ಸ್ವಯಂ ತಮ್ಮ ಜೀವನದ ಮೂಲಕವೂ ಎಷ್ಟು ಚೆನ್ನಾಗಿ ಧ್ವನಿಸಿದ್ದಾರೆ ಸ್ವಾಮಿ ರಾಮಕೃಷ್ಣಾನಂದರು!

ಡಾ ಆರತೀ ವಿ ಬಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ