ಶುಕ್ರವಾರ, ಮಾರ್ಚ್ 17, 2017

ಕಮಲ ಮತ್ತು ಕಮಲೆ
ಕಮಲವು ಪುಷ್ಪವಾಗಿಯೂ, ಸಂಕೇತವಾಗಿಯೂ ಭಾರತೀಯ ಸಾಂಸ್ಕೃತಿಕ ಲೋಕದಲ್ಲಿ ಅಪ್ರತಿಮ ಪ್ರೀತಿ, ಗೌರವ ಹಾಗೂ ಆಕರ್ಷಣೆಯನ್ನು ಪಡೆದಿದೆ. ಹಿಂದು-ಬೌದ್ಧ-ಜೈನಧರ್ಮಸಂಸ್ಕೃತಿಗಳಲ್ಲೆಲ್ಲ ಕಮಲವು ಪ್ರಾಶಸ್ತ್ಯವನ್ನು ಪಡೆದಿದೆ. ಜೈನರು ಆರಾಧಿಸುವ ಮಾತೄಶಕ್ತಿದೇವತೆಯ ಹೆಸರೇಪದ್ಮಾವತೀ’. ನಮ್ಮ ನೆಚ್ಚಿನ ತಿರುಪತಿ ತಿಮ್ಮಪ್ಪನ ಮಡದಿಯೂ ಪದ್ಮಾವತೀ!
ಕಮಲವು ನಮ್ಮ ಭಾವದೃಷ್ಟಿಯಲ್ಲಿ ಒಂದು ದಿವ್ಯಮಂಗಳ ಸುಂದರಿ! ಸೂರ್ಯನು ಉದಯಿಸಿದಾಗ ಅರಳುವ ಹಾಗೂ ಅವನು ಅಸ್ತಮಿಸಿದಾಗ ಮುದುಡುವ ಪತಿವ್ರತೆ ಪದ್ಮಿನಿ! ಕಮಲವು ತನ್ನ ಸೌಂದರ್ಯ ಹಾಗೂ ಸೌಕುಮಾರ್ಯ ಎಲ್ಲರ ಹೃದಯವನ್ನು ಅರಳಿಸುವ ಆಕರ್ಷಣೆವುಳ್ಲದ್ದು. ಜೊತೆಗೆ ಕೆಸರಲ್ಲೇ ಹುಟ್ಟಿ ಅಲ್ಲೇ ವಾಸವಿದ್ದರೂ ಕೆಸರನ್ನಾಗಲಿ ನೀರಿನ್ನಾಗಲೀ ಅಂಟಿಸಿಕೊಳ್ಳದೇ ನಿರ್ಲಿಪ್ತ-ಶುದ್ಧವಾಗಿರುವ ತಾಕತ್ತುಳ್ಳದ್ದು! ಬೆಳಗಿಕೆ ತೆರೆದುಕೊಳ್ಳುವ ಇದರ ಸಕಾರಾತ್ಮಕತೆ, ಹೀಗಾಗಿಯೇ ಕಮಲವು ನಮ್ಮ ಪಾಲಿಗೆ ಸುಂದರವೂ ಪ್ರಶಸ್ತವೂ ದೈವೀಕವೂ ಹೌದು. ದೇವತೆಗಳ, ಗುರುಹಿರಿಯರ ಪಾದಗಳು ನಮ್ಮ ಪಾಲಿಗೆ ಪಾದಕಮಲಗಳು! ದಯೆ, ಪ್ರೀತಿ, ಸ್ನೇಹ, ವಾತ್ಸಲ್ಯಾದಿ ಸೌಮ್ಯ ಗುಣವಿಶೇಷಗಳು ಹೊಮ್ಮುವ ಭಾವನೆಗಳ ಪೀಠವಾದ ಮನಸ್ಸು ಹೃದಯ ಕಮಲ! ರಸಿಕ ನೋಟಕ್ಕೆ ಸುಂದರಿಯ ಮುಖ-ಕರ-ಪಾದಗಳೆಲ್ಲ ಕಮಲಗಳೇ! ಅವಳ ಅರಳಿದ ಕಣ್ಣುಗಳು ಕಮಲದಳಗಳೇ! ‘ಕರಾರವಿಂದದಿಂದ ಪದಾರವಿಂದವನ್ನು ಮುಖಾರವಿಂದದೊಳಗೆ ಇಟ್ಟು ಚೀಪುವ ಬಾಲಕೃಷ್ಣನನ್ನು ಧ್ಯಾನಿಸುವ’ ಶ್ಲೋಕವಂತೂ ಬಹಳ ಜನಪ್ರಿಯವಾದದ್ದು, ಎಲ್ಲ ಮುದ್ದುಕಂದಮ್ಮಗಳಿಗೂ ಅನ್ವಯವಾಗುವಂತಹದ್ದು! ನೃತ್ಯದಲ್ಲಿ ಪ್ರೀತಿ ವಾತ್ಸಲ್ಯಗಳನ್ನು ತೋರಿಸುವಾಗ ಎದೆಯ ಮುಂದೆ ಕಮಲವರಳುವಂತೆ ಕರಮುದ್ರೆ ತೋರಿಸಲಾಗುತ್ತದೆ. ಭರತನಾಟ್ಯದಲ್ಲಿ ಬಿಂಬಿಸುವ ಸ್ತ್ರೀಯನ್ನೂಕೈಯಲ್ಲಿ ಕಮಲವನ್ನು ಹಿಡಿದ ಕಪಿತ್ಥಮುದ್ರೆ’ ಸುಪ್ರಸಿದ್ಧ. ಸ್ತ್ರೀಪುರುಷರಸ್ನೇಹಮಿಲನವನ್ನು ತೋರುವಾಗಲೂ ಅರಳಿದ ಕಮಲದ ಮೇಲೆ ಜೃಂಭಿಸುವ ದುಂಬಿಯನ್ನೇ ತೋರಿಸಲಾಗುತ್ತದೆ! ಹಿಮಾಲಯದಲ್ಲಿರುವ ಕೈಲಾಸಪರ್ವತವು ಅಷ್ಟದಳಗಳ ಮೇಲೆ ಇರುವಂತೆಯೇ ವಿನ್ಯಾಸಗೊಂಡಿದೆ! ಹೀಗಾಗಿಯೇ ಬಹುಶಃ "ಅಷ್ಟದಲ-ಕಮಲೋಪರಿ-ವೇಷ್ಟಿತ-ಲಿಂಗ" ಎಂದು ಶಿವನನ್ನು ಸ್ತುತಿಸಲಾಗುತ್ತದೆ! ಭಗವದ್ಗೀತೆಯೂಸಂಸಾರದಲ್ಲಿ ನಿರ್ಲಿಪ್ತವಾಗಿರುವಸಂದೇಶಕ್ಕೆ ಕೊಡುವ ಉದಾಹರಣೆಯು "ಪದ್ಮಪತ್ರಮಿವಾಂಭಸಾ" (ನೀರಿನಲ್ಲಿ ಅಂಟದೆ ಇರುವ ಕಮಲದಂತೆ--)! ಯಾವುದೋ ಕೊಳದಲ್ಲಿ ಕಮಲವೊಂದು ಅರಳಿದರೆ, ಅದೆಲ್ಲೋ ದೂರದಲ್ಲಿನ ದುಂಬಿಗಳು ತಾವಾಗಿ ಅರಸಿ ಬರುತ್ತವೆ!ಪ್ರತಿಭೆ-ಜ್ಞಾನ- ದೈವತ್ವಗಳು ಅರಳಿನಿಂತ ವ್ಯಕ್ತಿಯಲ್ಲಿ ಕೀರ್ತಿ ಮತ್ತು ಅವಕಾಶಗಳು ತಾವಾಗಿ ಹುಡುಕಿ ಬರುತ್ತವೆ’ ಎನ್ನುವುದಕ್ಕೆ ಇದೇ ಪ್ರಸಿದ್ಧ ಉದಾಹರಣೆ! ಕುಂಡಲಿನಿಯ ಆರು ಸ್ಥಾನವಿಶೇಷಗಳಿಗೆ ಚಕ್ರಗಳೆಂದೂ ಪದ್ಮಗಳೆಂದೂ ಕರೆಯಲಾಗುತ್ತದೆ. (ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ, ಅನಾಹತ, ವಿಶುದ್ಧ, ಆಜ್ಞಾ ಹಾಗೂ ಸಹಸ್ರಾರ ಪದ್ಮ) ಅದ್ವಯಾನುಭವದ ಚರಮಸ್ಥಿತಿಯನ್ನು ಪಡೆಯುವ ಜೀವಿಗೆ ಸಹಸ್ರಾರಪದ್ಮದಿಂದ ಸುಧಾಸಾರವೇ ಉಕ್ಕಿ ವ್ಯಕ್ತಿತ್ವವನ್ನು ಅಮೃತಮಯವಾಗಿಸುತ್ತವೆ. ನಮ್ಮ ಧಾರ್ಮಿಕ ಆಚಾರಗಳಲ್ಲೂ ಕಮಲಕ್ಕೆ ಅನನ್ಯ ಸ್ಥಾನ. ನೆಲೆದ ಮೇಲೆ ಅಷ್ಟದಳಪದ್ಮದ ರಂಗವಲ್ಲಿಯನ್ನು ರಚಿಸಿಯೇ ಪೀಠಸ್ಥಾಪನೆ ಮಾಡುವುದು. ಅಕ್ಕಿ ಹರಡಿದ ತಟ್ಟೆಯ ಮೇಲೆ ಬೆರಳಲ್ಲೋ ಅರಸಿನದಿಂದಲೋ ಅಷ್ಟದಲಪದ್ಮವನ್ನು ರಚಿಸಿಯೇ ಕಲಶಸ್ಥಾಪನೆ ಮಾಡುವುದು. ನಮ್ಮ ದೇವಾಲಯಗಳಲ್ಲಿ ಮುಖದ್ವಾರ, ಗರ್ಭಗುಡಿಯ ಬಾಗಿಲು, ಮೂಲವಿಗ್ರಹದ ಪೀಠ, ಪ್ರಭಾವಳಿ, ಭಿತ್ತಿಶಿಲ್ಪಾದಿಗಳಲ್ಲೆಲ್ಲ ಕಮಲವನ್ನು ಕಾಣುತ್ತೇವೆ. ಮದುವೆಮನೆಯಲ್ಲಂತೂ ವಧೂವರರ ಹಸೆಮಣೆಯಡಿಯಲ್ಲಿ, ಮುಂದುಗಡೆ, ಬೀಗರಮನೆಯ ಅಲಂಕಾರದಲ್ಲೂ, ಬಾಗಿಲಿಗೂ, ಅಲಂಕಾರಕ್ಕೂ ನಿಜವಾದ ಕಮಲವನ್ನೋ, ಕೃತಕಕಮಲವನ್ನೋ ಅಥವಾ ಕನಿಷ್ಟಪಕ್ಷ ಕಮಲದ ಚಿತ್ರಗಳನ್ನೋ ಇಡಲಾಗುತ್ತದೆ. ವಧೂವರರ ಮೇಲೆ ಕಮಲದಳಗಳನ್ನು ಎರಚುವುದುಂಟು. ಸಾಮುದ್ರಿಕಾಶಾಸ್ತ್ರದ ಪ್ರಕಾರ ಕರ ಮತ್ತು ಪಾದತಲಗಳಲ್ಲಿ ಪದ್ಮರೇಖೆಗಳು ಇದ್ದಲ್ಲಿ ಲಕ್ಷ್ಮೀಕಟಾಕ್ಷ. ವಿಷ್ಣು ಹಾಗೂ ದೇವತಾಪಾದದ ಚಿತ್ರಗಳಲ್ಲಿ, ಮೂರ್ತಿಗಳಲ್ಲಿ ಪದ್ಮಚಿಹ್ನೆ ಕಾಣಬರುತ್ತದೆ. ಎಲ್ಲ ದೇವದೇವಿಯರ ರೂಪಗಳಲ್ಲಿ ಕಮಲದ ಸಂಕೇತಗಳು ಒಂದಲ್ಲ ಒಂದುರೀತಿಯಲ್ಲಿ ಕಂಡುಬರುತ್ತದೆ. ಸರಸ್ವತಿಯೂ ಶ್ವೇತಕಮಲಾಸೀನಳು. ಗಣಪತಿಯೂ ಮೂಲಾಧಾರ ಪ್ರತೀಕವಾದ ಕೆಂಪುಕಮಲದಲ್ಲಿ ಆಸೀನನು. ವಿಷ್ಣುವು ಪದ್ಮನಾಭ, ಅವನ ನಾಭಿಪದ್ಮದಿಂದಲೇ ಬ್ರಹ್ಮ ಹುಟ್ಟುವುದರಿಂದ ಆತ ಕಮಲಭವ. ಧನ್ವಂತರಿ, ಸೂರ್ಯ, ಅನ್ನಪೂರ್ಣ, ಲಲಿತೆ ಮುಂತಾದ ಅನೇಕಾನೇಕ ದೇವತಾರೂಪಗಳಲ್ಲೂ ಕಮಲವಿರುತ್ತದೆ. ಹೀಗೆ ವೇದಾಂತ, ಕಾವ್ಯ, ಅಲಂಕಾರ, ಸಾಮುದ್ರಿಕಾಶಾಸ್ತ್ರ, ಸರಸವಾದ ಗೀತ-ನೃತ್ಯ-ನಾಟಕವಸ್ತುಗಳಲ್ಲೂ, ಚಿತ್ರ-ಶಿಲ್ಪ-ಕಲಾದಿಪ್ರಕಾರಗಳಲ್ಲೂ, ಧಾರ್ಮಿಕ ಆಚಾರಗಳಲ್ಲೂ, ಕಮಲಕ್ಕೆ ವಿಶೇಷಸ್ಥಾನ ದಕ್ಕಿದೆ. ಸೌಂದರ್ಯ, ಪಾವಿತ್ರ್ಯ, ಶಕ್ತಿ, ನಿರ್ಲಿಪ್ತಿಗಳನ್ನೆಲ್ಲ ಪ್ರತಿನಿಧಿಸುವ ಕಮಲವು ಲಕ್ಷ್ಮೀಸ್ವರೂಪವಾದ ಸಂಪತ್ತು, ಶ್ರೀ, ಸಂತೋಷ, ಶುಭ, ವೃದ್ಧಿ, ಸಮೃಧಿ ಮೊದಲಾದ ಗುಣಗಳಿಗೆ ಸಂಕೇತವಾಗಿದೆ. ಲಕ್ಷ್ಮಿಗೂ ಕಮಲಕ್ಕೂ ಅನನ್ಯಸಾಧಾರಣ ನಂಟು, ಕಮಲವನ್ನೇ ‘ಲಕ್ಷ್ಮಿ’ ಎಂದು ಭಾವಿಸುತ್ತೇವೆ. ಕಮಲಾ, ಪದ್ಮಾ, ಸರೋಜ, ಸರಸಿಜ, ಪಂಕಜಾ, ನೀರಜಾ ಮುಂತಾದ ಕಮಲದ ನಾಮಗಳೇ ಲಕ್ಷ್ಮಿಯ ನಾಮಗಳಾಗಿಬಿಟ್ಟಿವೆ! ಆಕೆ ಕಮಲದ ಕಣ್ಣವಳು, ಕಮಲದ ಮೊಗದವಳು, ಕಮಲವ  ಕೈಯಲ್ಲಿ  ಹಿಡಿದವಳು, ಕಮಲನಾಭನ ಹೃದಯಕಮಲದಲಿ ನಿಂದವಳು, ಕಮಲಿನೀ, ಕಮಲೆ ಎಲ್ಲವೂ ಆಗಿದ್ದಾಳೇ ಎಂದು ಹಾಡಿಭಜಿಸುತ್ತೇವೆ. ಲಕ್ಷ್ಮಿಯನ್ನು ಚಿತ್ರಿಸಬೇಕಾದರೆ ಆಕೆ ಕಮಲದಲ್ಲಿ ನಿಂತೋ ಕುಳಿತೋ ಇರುತ್ತಾಳೆ. ಕೈಯಲ್ಲೂ ಕಮಲವನ್ನು ಹಿಡಿದುರುತ್ತಾಳೆ. ಕಮಲದ ಕೆಂಪೇ ಲಕ್ಷಿಯ ಸೇರಯ ಬಣ್ಣ. ಇಕ್ಕೆಲಗಳಲ್ಲಿ ಶ್ವೇತಗಜಗಳು ಆಕೆಯನ್ನು ಕಮಲಗಳಿಂದ ಅರ್ಚಿಸುತ್ತವೆ. ಹಾಲ್ಗಡಲಲ್ಲಿ ಜನಿಸಿದ ಲಕ್ಷ್ಮಿಯನ್ನು ಪಡೆಯಲು "ನಾ ಮುಂದು ತಾ ಮುಂದು" ಎಂದು ಹಪಹಪಿಸಿದ ದೇವ=ದಾನವ-ಮಾನವ-ಯಕ್ಷ-ಗಂಧರ್ವ-ಕಿನ್ನರ-ಕಿಂಪುರುಷ-ಸಿದ್ಧ-ವಿದ್ಯಾಧರಾದಿಗಳನ್ನು ನಿರ್ಲಕ್ಷಿಸಿ, ನಿರ್ಲಿಪ್ತಭಾವದಿಂದ ಕುಳಿತಿದ್ದ ಶಾಂತಮೂರ್ತಿ ಮಹಾವಿಷ್ಣುವಿನ ಕೊರಳಿಗೆ ವರಮಾಲೆಯನ್ನು ಹಾಕಿದಳಂತೆ! ಕಮಲದಂತೆ ನಿರ್ಲಿಪ್ತಿಯಿದ್ದಲ್ಲಿ ಶ್ರೀಲಕ್ಷ್ಮಿಯು ತಾನಾಗಿ ಒಲಿದುಬರುತಾಳೆ ಎನ್ನುವ ಸುಂದರ ಸಂದೇಶ ಇಲ್ಲಿದೆ!
ಲಕ್ಷ್ಮಿಯ ಪೂಜೆಯಲ್ಲಿ ಕಮಲಗಳ ಅಲಂಕಾರ, ಕಮಲದ ಹೂಗಲಿಂದ ಅರ್ಚನೆ ಮುಖ್ಯವದ ಅಂಗವಾಗುತ್ತದೆ. ಸೌಂದರ್ಯಕ್ಕಾಗಿ ಮಾಡುವಕಾಂತಿವ್ರತ’ದಲ್ಲಿ ಹಾಲುತುಂಬಿದ ಕಲಶದಲ್ಲಿ ಕಮಲದ ದಳಗಳನ್ನು ಹಾಕಿ ವೇದಪಾರಂಗತನಿಗೆ ದಾನಗೈಯುವ ಪದ್ಧತಿಯುಂಟು!
ಲಕ್ಶ್ಮೀಯನ್ನು ಕೇವಲಹಣ ಆಸ್ತಿ’ ಅಷ್ಟೇ ಅಲ್ಲ. ಜೀವನದಲ್ಲಿ ನಮಗೆ ಪೋಷಕವಾದ ಎಲ್ಲ ಶಕ್ತಿಗಳೂ ಲಕ್ಷ್ಮೀ ಸ್ವರೂಪಗಳೇ. ಹಣ ಮಾತ್ರ ಇದ್ದರೇ ಸಾಕೆ? ಅದರೊಂದಿಗೆ ಆಹಾರ, ಆರೋಗ್ಯ, ಬಂಧುಬಳಗ, ವಸತಿ, ಸಂತಾನ, ಸ್ಥಾನಮಾನ, ಮಳೆಬೆಳೆ, ಸಸ್ಯಸಂಪತ್ತು, ಪಶುಸಂಪತ್ತು, ಸುರಕ್ಷೆ, ವಿದ್ಯೆ, ಕೀರ್ತಿ, ಯಶಸ್ಸು, ಧೈರ್ಯ, ಜನಬಲ-ಧನಬಲಗಳು, ನೆಮ್ಮದಿ, ಸಂತೃಪ್ತಿಗಳೂ ಬೇಡವೇ? ಎಲ್ಲವೂ ಶ್ರೀಕ್ಷ್ಮೀಯ ಸ್ವರೂಪಗಳೆ ಎನ್ನುವುದನ್ನು ಆಕೆಯ ಅಷ್ಟಲಕ್ಷ್ಮೀಸ್ವರೂಪವು ಸಾರುತ್ತಿದೆ. ಮೋಸ-ಕಪಟ-ಅನ್ಯಾಯ-ಕುಮಾರ್ಗಳಿಂದ ಪಡೆಯುವ ಹಣವು ಶ್ರೀಲಕ್ಷ್ಮಿಯಲ್ಲ, ಅಲಕ್ಷ್ಮಿ. ವಸ್ತುಸೌಲಭ್ಯಗಳನ್ನಷ್ಟೇ ಒದಗಿಸುವ ಅಂತಹ ಅಲಕ್ಷ್ಮಿಯು ಅಪಕೀರ್ತಿ, ಅತೃಪ್ತಿ, ಭಯ, ರೋಗ, ಪಾಪಭೀತಿ, ಪಾಪಗಳಲ್ಲೇ ಪರ್ಯವಾಸನವಾಗುತ್ತದೆ. ಶ್ರೀಸೂಕ್ತವು ಹೇಳುವಂತೆ ಲಕ್ಷ್ಮಿಯು  ‘ಕರ್ದಮ’ದಲ್ಲಿ (ಕೆಸರಲ್ಲಿ) ದುಡಿಯುವವರಿಗೆ (ಕೃಷಿ ಮಾಡುವ/ ಪರಿಶ್ರಮ ಮಾಡುವವರಿಗೆ) ಒಲಿಯುವವಳು. ಕ್ಷುತ್-ಪಿಪಾಸೆ-ಮಲಗಳ ಅಲಕ್ಷ್ಮಿಯನ್ನು ನಾಶಮಾಡಿ, ಆನಂದ(ಸಂತೋಷ ನೆಮ್ಮದಿ ಇತ್ಯಾದಿ), ಚಿಕ್ಲೀತ (ಬೆಣ್ಣೆ ತುಪ್ಪ ಎಣ್ಣೆ ಮುಂತಾದ ಖಾದ್ಯಗಳ ಸಮೃದ್ಧಿಯನ್ನೂ)ರನ್ನೂ, ಅಶ್ವ-ಗೋ-ಗಜ-ಜನ-ಧನಸಂಪತ್ತನ್ನು ನಮಗೆ ಅನುಗ್ರಹಿಸುವವಳು ಶ್ರೀಲಕ್ಷ್ಮೀ.
ಶ್ರಾವಣದ ಎರಡನೆಯ ಶುಕ್ರವಾರದಂದು ವರಮಹಾಲಕ್ಷ್ಮಿಯಾಗಿ ಬಂದು ನಮ್ಮ ಪೂಜೆಯನ್ನು ಸ್ವೀಕರಿಸಿ, ವರವಿತ್ತು ಹರಸುವ ಲಕ್ಷ್ಮಿಯು ನಮಗೆ ಬಾಹ್ಯದ ಸುಖಭೋಗಗಳೊಂದಿಗೆ ಆಂತರ್ಯದ ನೆಮ್ಮದಿ-ಸಂತೋಷಗಳನ್ನು ಪ್ರಸಾದಿಸಲಿ ಎಂದು ಪ್ರಾರ್ಥಿಸೋಣ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ