ಶುಕ್ರವಾರ, ಮಾರ್ಚ್ 17, 2017

ಅಮಾವಾಸ್ಯೆ- ಕಾಳಕತ್ತಲಲ್ಲೂ ಅರಿವಿನ ಬೆಳಕು!
ಅಮಾತಿಥಿಯು ನಮ್ಮ ಸಂಸ್ಕೃತಿಯಲ್ಲಿ ಬಹಳ ಪ್ರಾಶಸ್ತ್ಯವನ್ನು ಪಡೆದಿದೆ. ವೇದಕಾಲದಲ್ಲಿ ವಿಹಿತಕರ್ಮಗಳಲ್ಲಿ ದರ್ಶಪೂರ್ಣಮಾಸಗಳು ಮುಖ್ಯ. (ಅಮಾ ಹಾಗೂ ಹುಣ್ಣಿಮೆಗಳಂದು ಮಾಡುವ ವೈದಿಕಕರ್ಮ). ಅಮಾತಿಥಿಯ ಕತ್ತಲೆಯನ್ನು ಶಕ್ತಿದೇವತೆಯಾದ ಕಾಳರಾತ್ರಿಸ್ವರೂಪಿಣಿಯಾದ ಕಾಳಿಯ ಉಪಾಸನೆಗೆ ಬಳಸುವುದು ಶಾಕ್ತತಂತ್ರದ ಪದ್ಧತಿಯೇ ಆಗಿದೆ. ವಿಷ್ಣು, ಶಿವ, ಸೌರ, ಗಾಣಪತ್ಯ, ಕೌಮಾರತಂತ್ರವಿಧಾನಗಳಲ್ಲೂ ಅಮಾವಾಸ್ಯೆಯಲ್ಲಿ ಮಾಡುವ ಉಪಾಸನೆ ಪ್ರಶಸ್ತವೇ. ಒಟ್ಟಿನಲ್ಲಿ ಚಂದ್ರನ ಕಾಂತಿ ಮರೆಯಾದಾಗ ಆಗುವ ನೈಸರ್ಗಿಕ ಪ್ರಭಾವಗಳಲ್ಲೂ ದೈವೀಶಕ್ತಿಯನ್ನು ಗುರುತಿಸಿ ವಿಶೇಷಪೂಜೆಯನ್ನು ಮಾಡಲಾಗುತ್ತ ಬಂದಿದೆ. ನಮ್ಮ ಶೃಂಗಾರಕವಿಗಳು ಹುಣ್ಣಿಮೆಯಂತೆಯೇ ಅಮಾವಾಸ್ಯೆಯನ್ನೂ ತಮ್ಮ ಪ್ರಣಯಪ್ರಸಂಗಗಳಿಗೇ ಹೇರಳವಾಗಿ ಬಳಸಿದ್ದಾರೆ! ಅಮಾವಾಸ್ಯೆ ಎಂದರೆ ಅದೇಕೋ ಭಯ, ಅಪಶಕುನಗಳನ್ನು ಭಾವಿಸಿ ಹೆದರುವವರಿದ್ದಾರೆ! ಅಮಾತಿಥಿಯ ಕತ್ತಲೆಯು ಮೃತ್ಯು, ಅಪಘಾತ, ಭಯ, ಅಪಶಕುನಗಳಿಗೆ ನೇರ ಕಾರಣ ಎಂಬ ಭಾವನೆ ಹರಡಿನಿಂತಿದೆ. ಸುಖದುಃಖಗಳನ್ನು ಗೆದ್ದುನಿಲ್ಲುವ ಯತ್ನದಲ್ಲಿ ತೊಡಗುವ ವೇದಾಂತಿಗಳ ಪಾಲಿಗೆ ಮಾತ್ರ ಅಮಾವಾಸೆಯು ಭಗವಂತನ ಗೂಢ ಸ್ವರೂಪದ ಧ್ಯಾನಕ್ಕೆ, ಪಾಪಶಮನಕ್ಕೆ, ಅಂತರಂಗದ ಚಿದಾಕಾಶದಲ್ಲಿ ಮುಳುಗುವುದಕ್ಕೆ ಸಹಾಯಕವೆನಿಸಿದೆ. ಮದುವೆ, ಮುಂಜಿ, ನಾಮಕರಣ, ಮೊದಲಾದ ಲೌಕಿಕ ವೃದ್ಧಿಕರ್ಮಗಳಲ್ಲಿ ಮಾತ್ರ ಅಮಾವಾಸ್ಯೆಯನ್ನು ಆಯ್ದುಕೊಳ್ಳಲು ಹಿಂಜರಿಕೆ ಎಲ್ಲರಲ್ಲಿದೆ. ಆದರೆ, ಪೂಜೆ, ಜಪ, ತಪ, ದಾನ, ಧರ್ಮ, ತೀರ್ಥಸ್ನಾನ, ತೀರ್ಥಾಟನೆ ಮುಂತಾದ ಹಲವಾರು ಕಲಾಪಗಳಿಗೆ ಅಮಾತಿಥಿಯು ಪ್ರಶಸ್ತವೆನಿಸಿದೆ. ಹಲವಾರು ಅಮಾವಾಸ್ಯೆಗಳು ಹಬ್ಬಗಳೇ ಆಗಿವೆ- ಭೀಮನ ಅಮಾವಸ್ಯೆ, ಯೋಗಿನೀ ಅಮಾವಾಸ್ಯೆ, ಆಶ್ವಿನ ಅಮಾವಾಸ್ಯೆ (ದೀಪಾವಳಿಯ ಮಧ್ಯದ ದಿನ), ಮಹಾಲಯ ಅಮಾವಾಸ್ಯೆ ಇತ್ಯಾದಿ. ಈ ಅಮಾವಾಸ್ಯೆಹಬ್ಬಗಳಲ್ಲಿ ವಿವಿಧ ಪುರಾಣ, ಜಾನಪದ, ಪ್ರಾದೇಶಿಕ ಮೂಲದ ಕಥಾಸ್ವಾರಸ್ಯಗಳು ತುಂಬಿವೆ. ಶಕ್ತ್ಯುಪಾಸನಾಪ್ರಧಾನವಾದ ಬಂಗಾಳ, ಈಶಾನ್ಯ, ನೇಪಾಳ ಹಾಗೂ ಕೇರಳ, ಕರಾವಳಿಗಳಲ್ಲಿ ಎಲ್ಲ ಅಮಾವಾಸ್ಯೆಗಳೂ ಪ್ರಶಸ್ತವೇ!
ಭೀಮೇಶ್ವರ ಶಿವನು ಸಂಸಾರ ಹಾಗೂ ಸಂತಾನಗಳ ಸೌಖ್ಯವನ್ನು ಪ್ರಸಾದಿಸಲೆಂದು ಕೋರಿ ದಕ್ಷಿಣಭಾರತದ ಸ್ತ್ರೀಯರು ಆಷಾಢ ಅಮಾವಾಸ್ಯೆಯಂದು (ಗಂಡನ ಪೂಜೆ ಎಂದೇ ಹೆಚ್ಚು ಪ್ರಸಿದ್ಧವಾದ) ಜ್ಯೋತಿರ್ಭೀಮೇಶ್ವರವ್ರತವನ್ನಾಚರಿಸುತ್ತಾರೆ. ಮಕ್ಕಳ ಆರೋಗ್ಯ ಆಯುಷ್ಯಗಳನ್ನು ಕೋರಿ ಮಾಡುವ ಯೋಗಿನೀ ಅಮಾವಾಸ್ಯೆ (ಕರ್ನಾಟಕದಲ್ಲಿ ಫಲಗೌರೀವ್ರತ ಎಂದು ಹೆಸರು) ಭಾರತದಾದ್ಯಂತ ಪ್ರಚಲಿತವಿರುವ ಆಚರಣೆ. ಇನ್ನು ದೀಪಾವಳಿಯ ಅಮಾವಾಸ್ಯೆಯಂತೂ ಅತಿಮಾನ್ಯವಾದದ್ದು. ಇದು ಜೈನರಿಗೆ ಮೋಕ್ಷಲಕ್ಷ್ಮೀ ಪೂಜೆಯ ಹಬ್ಬವೂ ಆಗಿದೆ. ದೀಪಾವಳಿಯ ಸಂದರ್ಭದಲ್ಲಿ ಕತ್ತಲೆಯನ್ನೇ ಮರೆಸುವಷ್ಟು ದೀಪಗಳು, ಪಟಾಕಿಗಳು ಝಳಝಳಿಸುವುದರಿಂದ ಇದೊಂದು ಅಮಾವಾಸ್ಯೆ ಎಂದೇ ಅನಿಸುವುದಿಲ್ಲ! ಭಾದ್ರಪದದ ಕೃಷ್ಣಪಕ್ಷದ ಕೊನೆಯ ದಿವಸವಾದ ಮಹಾಲಯ ಅಮಾವಾಸ್ಯೆಯಂತೂ ಅತಿಪ್ರಸಿದ್ಧ. ದಿವಂಗತರಾದ ಪಿತೃಗಳನ್ನು ಸ್ಮರಿಸಿ, ಗೌರವಸೂಚಿಸುವ ಸಲುವಾಗಿ ಅರ್ಘ್ಯಪ್ರದಾನ-ದಾನ-ಧರ್ಮಗಳನ್ನೂ ಆಚರಿಸುತ್ತೇವೆ. ಅವರಿತ್ತ ದೇಹ-ಸಂಸ್ಕಾರ-ಸಂಪತ್ತು-ವಿದ್ಯೆ-ವ್ಯಕ್ತಿತ್ವ ಮುಂತಾದವುಗಳನ್ನು ಬಳಸಿ ಬಾಳುವ ನಾವು ಅವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸುವ ಭಾವ ತುಂಬ ಅರ್ಥಪೂರ್ಣ. ಇಡೀ ವರ್ಷದಲ್ಲಿ ಮಾಡಿದ ಪಾಪ, ತಪ್ಪುಗಳಿಗಾಗಿ ಪ್ರಾಯಶ್ಚಿತ್ತರೂಪದಲ್ಲಿ ದಾನಜಪಾದಿಗಳನ್ನೂ ಈ ದಿನದಂದು ಮಾಡುತ್ತೇವೆ. ಜೀವಿಗಳಿಗೆ ಅವರವರ ಪಾಪಗಳ ಫಲವನ್ನೀಯುವ ಕಾಳಿಮಾತೆ, ಸತ್ಯ-ಧರ್ಮನಿಷ್ಠುರಳು! ಅವಳನ್ನು ಶರಣುಹೊಕ್ಕು, ಮಾಡಿದ ಪಾಪಗಳಿಗಾಗಿ ಪ್ರಾಯಶ್ಚಿತ್ತಗೈದು ಶುದ್ಧರಾಗುವುದೇ ಮಹಾಲಯ ಕಾಳೀಪೂಜೆಯ ಹಿಂದಿನ ಭಾವ. ಅಮಾವಾಸ್ಯೆಯಂದು ಗಂಗಾದಿ ಪುಣ್ಯನದಿಗಳಲ್ಲಿ ಲಕ್ಷೋಪಲಕ್ಷಜನರು ತೀರ್ಥಸ್ನಾನ ಗೈಯುವ ಪದ್ಧತಿಯಿದೆ. ಮಾಡಿದ ಪಾಪವನ್ನು ಒಪ್ಪಿ, ಮನಃಪೂರ್ವಕವಾಗಿ ಪ್ರಾಯಶ್ಚಿತ್ತ ಮಾಡಿಕೊಂಡಾಗ, ನಮ್ಮಿಂದ ನೊಂದವರಿಗೂ ಸಾಂತ್ವನ ಸಿಕ್ಕೀತು, ನಮ್ಮ ಪಾಪಭೀತಿಯೂ ಸ್ವಲ್ಪಮಟ್ಟಿಗೆ ಕುಗ್ಗಿ, ಚಿತ್ತಮನಗಳು ಶುದ್ಧವಾದಾವು ಎನ್ನುವುದು ಇಲ್ಲಿನ ಭರವಸೆ. ಮನಸ್ಸು ಶುದ್ಧವೂ ಶಕ್ತವೂ ಆಗುವುದೇ ಎಲ್ಲ ಧರ್ಮಕರ್ಮಗಳ ಮೂಲೋದ್ದೇಶ. ಹಾಗಾಗಿ ಅಮಾವಾಸ್ಯೆಯ ಕತ್ತಲನ್ನೂ, ಇಂತಹ ತೀವ್ರ ಪ್ರಾಯಶ್ಚಿತ್ತಕ್ಕೂ, ಉಪಾಸನೆಗೂ, ಧ್ಯಾನಕ್ಕೂ, ಅಂತರ್ಮುಖತೆಗೂ ಬಳಸುವ ನಮ್ಮ ಸನಾತನ ಸಂಸ್ಕೃತಿ ಎದೆಷ್ಟು Practical ಆಗಿದೆ!
ಆದರೆ ಇದೇ ಅಮಾವಾಸ್ಯೆಯ ಕತ್ತಲನ್ನು ’ದುಷ್ಟಶಕ್ತಿಗೆ ಸಹಾಯಕ’ ಎಂದು ಭಾವಿಸಿ ಅದನ್ನು ಪರಹಿಂಸೆಗೆ ಬಳಸುವ ನೀಚವೃತ್ತಿಗಳೂ ಬೆಳೆದಿವೆ. ತಮ್ಮ ಕಷ್ಟದುಃಖಗಳೆಲ್ಲ ಮತ್ತೊಬ್ಬರಿಗೆ ’ರವಾನೆಮಾಡುವ ಭ್ರಾಂತಿಯಲ್ಲಿ ಅಥವಾ ಪರರ ಪ್ರಗತಿ, ಶಾಂತಿ ಸಾಮರಸ್ಯಗಳು ಹಾಳಾಗಲಿ ಎಂಬ ಮಾತ್ಸರ್ಯದಲ್ಲಿ ವಿಶೇಷ ತಂತ್ರಮಂತ್ರಪ್ರಯೋಗಗಳನ್ನು ಮಾಡುವ ನೀಚಪದ್ಧತಿಗಳೂ ಹೇರಳವಾಗಿ ಬೆಳೆದಿವೆ. ’ಯಾರೂ ತಮ್ಮ ಪುಣ್ಯಪಾಪಗಳಿಂದ ಎಂದೂ ತಪ್ಪಿಸಿಕೊಳ್ಳಲಾರರುಎಂಬ ಸಾಮಾನ್ಯನೀತಿಯನ್ನೂ ಮರೆತು ಹೀಗೆ ಪರಹಿಂಸೆಗೆ ತೊಡಗುವವರು ಮತ್ತಷ್ಟು ಪಾಪವನ್ನಷ್ಟೇ ಮೈಮೇಲೆ ಎಳೆದುಕೊಳ್ಳುತ್ತಾರೆ ಎನ್ನಿ! ಇಂತಹವರಿಂದಲೇ ಅಮಾವಾಸ್ಯೆಯಂತಹ ಪುಣ್ಯಕರತಿಥಿಗೂ ಕೆಟ್ಟ Image ಬಂದುಬಿಟ್ಟಿದೆ. ಇದೇ ತಂತ್ರಮಂತ್ರಗಳನ್ನೂ ಅಮಾವಾಸ್ಯೆಯ ಪ್ರಾಶಸ್ತ್ಯವನ್ನೂ ಬಳಸಿ ಲೋಕಹಿತಕ್ಕಾಗಿ ಎಲ್ಲೆಲ್ಲೂ ಧ್ಯಾನ ಜಪ ಪೂಜೆಹೋಮಹವನಾದಿಗಳನ್ನು ಮಾಡುವ ಮಠಮಂದಿರಗಳೂ ಸಜ್ಜನರೂ ಸಾಧಕರೂ ಅಸಂಖ್ಯರಿದ್ದಾರೆ.
ಆಷಾಢ ಅಮಾವಾಸ್ಯೆಯ ಭೀಮೇಶ್ವರವ್ರತ ಸಮೀಪಿಸುತ್ತಿದೆ. ಜ್ಯೋತಿರ್ಭೀಮೇಶ್ವರನು ಸರ್ವರಿಗೂ ಆಯುರಾರೋಗ್ಯ-ಸದ್ಗುಣ-ಸಂತೋಷ-ನೆಮ್ಮದಿಗಳನ್ನಿತ್ತು ಹರಸಲಿ, ಮನೆಮನೆಗಳ ಮನಮನಗಳ ಕತ್ತಲೆಯನ್ನು ತೊಡೆದು ಜ್ಞಾನದ ಬೆಳಕನ್ನು ತುಂಬಲಿ ಎಂದು ಪ್ರಾರ್ಥಿಸೋಣ.
ಡಾ ಆರತಿ ವಿ ಬಿ

Published in Samyukta Karnataka newspaper 2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ