ಶುಕ್ರವಾರ, ಮಾರ್ಚ್ 17, 2017

ಸಂಸ್ಕೃತ-ಜ್ಯೋತ್ಸ್ನಾ
ಶ್ರಾವಣ ಹುಣ್ಣಿಮೆಗೆ ಹಲವು ವೈಶಿಷ್ಟ್ಯಗಳು. ವೇದಾಧ್ಯಯನದ  ಹಬ್ಬ ಉಪಾಕರ್ಮ’ ಹಾಗೂ ಸೋದರ-ಸೋದರಿಯರ ರಾಖೀ ಹಬ್ಬವೂ ಆಗಿ ಇದು ಜಗತ್ಪ್ರಸಿದ್ಧ. ಶ್ರಾವಣಹುಣ್ಣಿಮೆ ವಿಶ್ವ ಸಂಸ್ಕೃತ ದಿವಸಎಂದೂ ಮಾನ್ಯವಾಗಿದೆ. ‘ಅಷ್ಟಾಧ್ಯಾಯಿ’ಯಂತಹ ಅಭೂತಪೂರ್ವ ವ್ಯಾಕರಣ ಸಂಹಿತೆಯನ್ನು ಜಗತ್ತಿಗೆ ಕೊಟ್ಟ ಪಾಣಿನೀ ಮಹರ್ಷಿಗಳ ಪುಣ್ಯದಿನ ಇದು.
ಜಗತ್ತಿನಲ್ಲಿ ಅದೆಷ್ಟೋ ಭಾಷೆಗಳು ಹುಟ್ಟುತ್ತವೆ, ದೇಶಕಾಲಸಂದರ್ಭಗಳ ಪ್ರಭಾವದಿಂದಾಗಿ ಬದಲಾಗುತ್ತವೆ, ಅಳಿದೂಹೋಗುತ್ತವೆ! ಆದರೆ ಸಂಸ್ಕೃತಭಾಷೆಯ ಕಥೆಯೇ ಬೇರೆ. ಜಗತ್ತಿನ ಅತಿಪ್ರಾಚೀನ ಭಾಷೆ ಇದಾದರೂ ಇಂದಿಗೂ ಯಥಾವತ್ತಾಗಿ ಉಳಿದಿದೆ!  ಸಂಸ್ಕೃತವು ತನ್ನ ಮೂಲಸ್ವರೂಪವನ್ನು ಕಿಂಚಿತ್ತೂ ವಿಕಾರಗೊಳಿಸಿಕೊಳ್ಳದೆ ನವನವೀನ ಬೆಳವಣಿಗೆಗೆ ತೆರೆದುಕೊಂಡಿರುವ ಅನನ್ಯಭಾಷೆ.
ಲೌಕಿಕ ವ್ಯಾಕರಣಕ್ಕೆ ಸಿಗದೇ ಮಂತ್ರತ್ವವನ್ನು ಪಡೆದಿರುವ ವೇದ ಸಂಸ್ಕೃತವಾದಛಂದಸ್’ ಅಂತೂ ಒಂದಕ್ಷದಷ್ಟೂ ಬದಲಾಗದು. ಲೌಕಿಕ ಸಂಸ್ಕೃತವೂ ತನ್ನ ಮೂಲರೂಪವನ್ನು ಕಾಪಾಡಿಕೊಂಡಿದೆ ಎನ್ನುವುದೆ ಸೋಜಿಗದ ವಿಷಯ. ರಾಮಾಯಣ-ಮಹಾಭಾರತ- ಪುರಾಣ-ಇತಿಹಾಸ-ಕಾವ್ಯಶಾಸ್ತ್ರಾದಿಗಳ ಮೂಲಕವೂ, ಜನಪ್ರಿಯ ಆಡುಭಾಷೆಯಾಗಿಯೂ, ರಾಜಶಾಸನದ ಭಾಷೆಯಾಗಿಯೂ, ಸಹಸ್ರಮಾನಗಳಿಂದ ಭಾರತದಲ್ಲಿ ವಿಜೃಂಭಿಸಿದೆ ಸಂಸ್ಕೃತ.  
ಭೂತೋ ಭವಿಷ್ಯತಿಎಂಬಂತಹ ಹೆಗ್ಗಳಿಕೆಯ ಅಷ್ಟಾಧ್ಯಾಯಿ ಉದ್ರಂಥವನ್ನು ರಚಿಸಿದ ಪಾಣಿನಿ ಮಹರ್ಷಿಗಳು ಅತ್ಯದ್ಭುತ ವ್ಯಾಕರಣ ಸಂಹಿತೆಯನ್ನು ಸಂಸ್ಕೃತದ ಮೂಲಕ ಜಗತ್ತಿಗೇ ಒದಗಿಸಿಕೊಟ್ಟರು. ವ್ಯಾಕರಣ ಸಂಹಿತೆಯು ಭಾಷೆಯ ಶಬ್ದ-ಅರ್ಥಗಳ ಸೌಷ್ಟವವನ್ನು ಎಷ್ಟರ ಮಟ್ಟಿಗೆ ಕಾಪಾಡುತ್ತ ಬಂದಿದೆ ಎಂದರೆ, ಬಾಹ್ಯದ ಯಾವ ಪ್ರಭಾವವೂ ದೇಶಕಾಲಸಂದರ್ಭಗಳೂ ಇದನ್ನು ಸಡಿಲಗೊಳಿಸಲಾರದು! ವಿಭಕ್ತಿ-ಲಿಂಗ-ವಚನ, ಭೂತ-ವರ್ತಮಾನ-ಭವಿಷ್ಯತ್ ಕಾಲ, ಧಾತು-ಪ್ರತ್ಯಯ-ಉಪಸರ್ಗ, ಸಂಧಿಸಮಾಸಾದಿ ಅನೇಕ ವ್ಯಾಕರಣಪ್ರಕ್ರಿಯೆಗಳು ಸಂಸ್ಕೃತಭಾಷೆಯ ಚೌಕಟ್ಟನ್ನು ಭದ್ರವೂ ಶಕ್ತಿಯುತವೂ ಆಗಿಸಿವೆ. ಜೊತೆಜೊತೆಗೆ ನೂತನ ಶಬ್ದಗಳ ಆವಿಷ್ಕಾರಕ್ಕೂ, ವಿಕಾಸಕ್ಕೂ ಭಾಷೆ ಸದಾ ಸನ್ನದ್ಧವೇ ಆಗಿದೆ ಎನ್ನುವುದು ಗಮನೀಯ! ಯಾವುದೇ ದೇಶ-ಕಾಲದ ಯಾವುದೇ ಸಿದ್ಧಾಂತವನ್ನೂ, ಹೆಸರನ್ನೂ, ಪರಿಭಾಷೆಯನ್ನೂ ಸೂಚಿಸಲು ಹೊಸಶಬ್ದವನ್ನು ಸಂಸ್ಕೃತವು ಥಟ್ಟನೇ ಸೃಷ್ಟಿಸಬಲ್ಲುದು! ಹಾಗಾಗಿಯೇ ಸಮಗ್ರ ಭಾರತದಲ್ಲೂ ಸ್ವೀಕಾರ್ಯವಾದ ರಾಜಕೀಯ, ಶಾಸ್ತ್ರೀಯ, ಪ್ರಾಯೋಗಿಕ ಪರಿಭಾಷೆಗಳು ಸಂಸ್ಕೃತದಿಂದಲೇ ಹುಟ್ಟಿವೆ! ದೂರವಣಿ, ಆಕಾಶವಾಣೀ, ನೀತಿ, ಸಂವಿಧಾನ, ನಿಯಮ, ನಿಗಮ, ಮಂತ್ರಿಮಂಡಲಿ, ಶಾಸನ, ಪ್ರಭುತ್ವ, ಅಧಿಕಾರ ಇತ್ಯಾದಿ  ಪರಿಭಾಷೆಯೆಲ್ಲವೂ ಸಂಸ್ಕೃತದಿಂದಲೇ ಹಸಿಹಸಿಯಾಗಿ ತೆಗೆದುಕೊಳ್ಳಲ್ಪಟ್ಟಿವೆ! ಶಾಲೆ, ವಿದ್ಯಾಲಯ, ಶಿಕ್ಷಕ, ವಿದ್ಯಾರ್ಥಿ, ಶಿಕ್ಷಣ, ಲೇಖನ, ಅಧ್ಯಾಪನ, ಪುಸ್ತಕ, ಯೋಜನೆ, ಪರೀಕ್ಷೆ, ವಿಜ್ಞಾನ, ಗಣಿತ, ಕಲೆ, ಇತಿಹಾಸ, ರಸಾಯನಶಾಸ್ತ್ರ ಮುಂತಾದ ಲೆಕ್ಕವಿಲ್ಲದಷ್ಟು ಶಬ್ದಗಳೂ, ಕೃಷ್ಣ, ರಾಮ, ಪುಷ್ಪ, ರವಿ, ಶಶಿ, ಗಂಗಾ, ಪ್ರಕಾಶ, ಪ್ರಸಾದ ಮುಂತಾದ ಬಹುತೇಕ ಹೆಸರುಗಳೂ ಸಂಸ್ಕೃತಮೂಲದವುಗಳೆ! ನಮ್ಮ ದೇಶಭಾಷೆಗಳಲ್ಲೂ ಸಂಸ್ಕೃತದ ಅಸಂಖ್ಯ ತತ್ಸಮ-ತದ್ಭವರೂಪಗಳು ಬಳಕೆಯಲ್ಲಿವೆ- ಅಮ್ಮ, ಅಪ್ಪ, ಅಕ್ಕ, ಬೊಮ್ಮ, ಚಕ್ಕುಲೀ, ಥಾಲೀ, ಹಿಟ್ಟು, ಇತ್ಯಾದಿ. ಹೀಗೆ ಹಿಂಬಾಲಿಸುತ್ತ ಹೋದರೆ ಶಬ್ದಕೋಶವೇ ನಿರ್ಮಾಣವಾದೀತು!
ಸಂಸ್ಕೃತವು ತಾನೇ ಹುಟ್ಟಿಸಿದ ಹಲವಾರು ಭಾಷೆಗಳಿಗೂ, ದ್ರಾವಿಡಮೂಲಗಳ ಭಾಷೆಗಳಿಗೂ ಅಪಾರವಾದ ಶಬ್ದಸಂಪತ್ತನ್ನೂ, ವ್ಯಾಕರಣದ ಸಿದ್ಧಾಂತಗಳನ್ನೂ, ರಸಾದಿ ಕಾವ್ಯವಸ್ತು-ಕಥಾಸಾಮಗ್ರಿಯನ್ನೂ, ಶಾಸ್ತ್ರದ ಚೌಕಟ್ಟನ್ನೂ ಧಾರಳವಾಗಿ ನೀಡಿದೆ. ರುಚಿಕರ ಅಡುಗೆಯಲ್ಲಿ ಉಪ್ಪು ಬೆರೆತಂತೆ, ಸಂಸ್ಕೃತವು ಭಾರತೀಯ ಭಾಷೆಗಳಲ್ಲೂ ಜೀವನದಲ್ಲೂ ಸೌಹಾರ್ದವಾಗಿ ಬೆರೆತುಹೋಗಿದೆ. ತಾನೂ ಬೆಳೆಯುತ್ತ, ಅಕ್ಕಪಕ್ಕದ ಭಾಷೆಗಳನ್ನೂ ಬೆಳೆಸಿದ ಔದಾರ್ಯ ಸಂಸ್ಕೃತದ್ದು. ಆಂಗ್ಲಭಾಷೆಯಂತೆ, ತಾನು ಪ್ರಭಾವ ಬೀರಿದೆಡೆಗಳಲ್ಲಿ ಆಯಾ ಭಾಷೆಗಳನ್ನು ಅದು ಹೊಸಕಿಹಾಕಿಲ್ಲ, ತುಳಿದುನಿಂತಿಲ್ಲ. ಸಂಸ್ಕೃತದ ವ್ಯಾಕರಣದ ನಿಯಮವನ್ನು ಅಳವಡಿಸಿಕೊಂಡ ಭಾರತೀಯ ಭಾಷೆಗಳಿಗೆ, ತಮ್ಮ ತಮ್ಮ ಪ್ರಾದೇಶಿಕ ಭಾಷಾಪ್ರಯೋಗದ ಸ್ವಾತಂತ್ರ್ಯವನ್ನೂ ವೈಶಿಷ್ಟ್ಯಗಳನ್ನೂ ಉಳಿಸಿಕೊಳ್ಳಲು ಸಂಸ್ಕೃತವು ಎಂದೂ ತಡೆಯೊಡ್ಡಿಲ್ಲ. 
ಭಾರತದ ಜೀವಾಳವೂ, ಶಾಸ್ತ್ರಮರ್ಯಾದೆಯ ಆಧಾರವೂ, ಸಹಸ್ರಮಾನಗಳ ಅನಂತಜ್ಞಾನ ಭಂಡಾರಕ್ಕೆ ಕೀಲಿಕೈಯೂ, ಭವ್ಯ ಪರಂಪರೆಗೆ ಸೇತುವೂ ಆದ ಸಂಸ್ಕೃತವನ್ನೂ ಹಾಳುಗೆಡವಿ, ಭಾರತೀಯ ಮಾನಸಗಳನ್ನು ತನ್ನ ಮೂಲದಿಂದ ಬೇರ್ಪಡಿಸಿ ದುರ್ಬಲಗೊಳಿಸಲು, ಸ್ವಾಭಿಮಾನಶೂನ್ಯವಾಗಿಸಲು ಬ್ರಿಟೀಷರು ಏನೆಲ್ಲ ತಂತ್ರಗಳನ್ನು ಹೂಡಿದರು! ಸಂಸ್ಕೃತಕ್ಕೆ ರಾಜಕೀಯಪೋಷಣೆ ಸಿಗದಂತೆ ಮಾಡಿದರು, ಉದ್ಯೋಗಾವಕಾಶಗಳನ್ನು ಅಳಿಸಿದರು, ಸ್ಥಾನಮಾನಪದವಿ promotions ಗಳಿಗೆ ಅವಕಾಶವಾಗದಂತೆ ಕುನೀತಿಗಳನ್ನು ಜಾರಿಗೆ ತಂದರು. ಸಂಸ್ಕೃತಕ್ಕೆಒಂದು ಜಾತಿಯ ಭಾಷೆ’, ‘ಹಿಂದಿನ ಯುಗದ ಭಾಷೆ,’ ‘ಪ್ರಯೋಗಕ್ಕೆ ತುಂಬ ಕಷ್ಟವಾದ ಭಾಷೆ’, ‘ಮೃತಭಾಷೆ’, ‘ಶೋಷಿಸುವವರ ಭಾಷೆ’ ಎಂದೆಲ್ಲ ಹಣೆಪಟ್ಟಿ ಕಟ್ಟಿ ಸಾರ್ವಜನಿಕರ ಮನದಲ್ಲಿ ಪೂರ್ವಾಗ್ರಹಗಳನ್ನು ಹುಟ್ಟಿಹಾಕಿದರು! ಸಂಸ್ಕೃತವು ಅನಾಥವಾಯಿತು. ಸ್ವಾತಂತ್ರ್ಯಾನಂತರದ ಬೇಜಾವಬ್ದಾರಿಯ ಸರ್ಕಾರದಿಂದಾಗಿ ಸಂಸ್ಕೃತದ ಸ್ಥಿತಿ ಬಹುಮಟ್ಟಿಗೆ ಮುಂದುವರೆಯಿತು ಕೂಡ.
ಇಷ್ಟೆಲ್ಲ ಕಷ್ಟನಷ್ಟಗಳಲ್ಲಿ ಹಾದ ಸಂಸ್ಕೃತಕ್ಕೆ ಬೇಡಿಕೆ, ಗೌರವ ಆಕರ್ಷಣೆಗಳು ಮಾತ್ರ ಎಂದೂ ಕುಂದಿಲ್ಲ! ಬ್ರಿಟಿಷ್ ಸರ್ಕಾರದ ಬಿಡಿಗಸಿನ ಪದವಿ-ಸಂಬಳಗಳಿಗಾಗಿ ತಮ್ಮ ಪರಂಪರೆಯ ವಿದ್ಯೆಯನ್ನು ಕೈಬಿಡದೆ, ಸ್ವತಂತ್ರಭಾರತದಲ್ಲೂ ಯಾವ ಸಹಕಾರ ಸವಲತ್ತುಗಳು ಸಿಗದೇ ಹೋದರೂ, ಬಡತನ-ಅಸುರಕ್ಷೆ-ಅನಿಶ್ಚಿತತೆಗಳು ಕಾಡಿದರೂ, ಸಂಸ್ಕೃತವಿದ್ಯಾಪ್ರಕಾರಗಳನ್ನು ಕೈಬಿಡದೇ ಅಧ್ಯಯನ ಅಧ್ಯಾಪನ ಮಾಡುತ್ತ ಯಥಾಶಕ್ತಿ ಅನುಕೂಲಗಳನ್ನು ಯೋಜಿಸಿಕೊಂಡು ನಿಸ್ವಾರ್ಥವಾಗಿ ಕೆಲಸಮಾಡುತ್ತ ಸಾಗಿದವರು ಅಸಂಖ್ಯರು! ಇವರೆಲ್ಲರ ತ್ಯಾಗ-ಪರಿಶ್ರಮಗಳ ಫಲವಾಗಿ ಇಂದಿಗೂ ಸಂಸ್ಕೃತಭಾಷೆ ಜೀವಂತವಾಗಿ ನಳನಳಿಸುತ್ತಿದೆ, ಪ್ರಾಮಾಣಿಕ ಜಿಜ್ಞಾಸುಗಳನ್ನು ಕೈಬೀಸಿಕರೆಯುತ್ತಲೇ ಇದೆ! ದೇಶವಿದೇಶಗಳ ವಿದ್ಯಾರ್ಥಿಗಳು ಸಂಸ್ಕೃತವನ್ನು ಕಲಿಯಲು ಹವಣಿಸಿ ಬರುತ್ತಿದ್ದಾರೆ. ಇದೇ ಈ ಭಾಷೆಯ ತಾಕತ್ತು! ಇದು ಇಂದು ನೆನ್ನೆಯ ಕಥೆಯಲ್ಲ! ಇದೇ ಸಾವಿರಾರು ವರ್ಷಗಳ ತಪಸ್ಸಿನ ಇತಿಹಾಸ! ಪಾಣಿನೀ ಮಹರ್ಷಿಗಳ ಪುನ್ಯದಿನವನ್ನು ಸಂಸ್ಕೃತದಿವಸ ಎಂದು ಆಚರಿಸುವುದಕ್ಕೂ ಇಂತಹದ್ದೇ ವಿದ್ಯಾತಪಸ್ಸನ್ನು ಸಾರುವ ಕಥೆಯ ಹಿನ್ನಲೆಯಿದೆ-
ಹುಣ್ಣಿಮೆಯ ಸಾಯಂಕಾಲದ ಹೊತ್ತಿನಲ್ಲಿ, ಪಾಣಿನೀ ಮಹರ್ಷಿಗಳು ತಮ್ಮ ಶಿಷ್ಯರೊಂದಿಗೆ ವನ್ಯಪರಿಸರದಲ್ಲಿ ಕುಳಿತು, ಲೋಕಾಭಿರಾಮವಾಗಿ ಮಾತನಾಡುತ್ತಿದ್ದರಂತೆ! ಇದ್ದಕ್ಕಿದ್ದ ಹಾಗೇ ಹುಲಿಯೊಂದು ಬಂದೆರಗಿತಂತೆ. ಎಲ್ಲರೂವ್ಯಾಘ್ರಃ !! ವ್ಯಾಘ್ರಃ!!” ಎಂದು ಚೀರುತ್ತ ಓಡಿ ಮರಗಳನ್ನು ಹತ್ತಿದರಂತೆ. ಆದರೆವ್ಯಾಘ್ರ’ ಶಬ್ದವನ್ನು ಕೇಳಿದಾಕ್ಷಣ ಪಾಣಿನೀ ಮಹರ್ಷಿಗಳು ಅದರ ವ್ಯುತ್ಪತ್ತಿ- ಧಾತುಮೂಲಗಳನ್ನು ಧ್ಯಾನಿಸುತ್ತ ಅಲ್ಲೇ ಕುಳಿತರಂತೆ! ಹುಲಿಯು ಬಂದು ಮೇಲೆರಗಿ ಅವರನ್ನು ವ್ಯಾಪಕವಾಗಿ ಮೂಸಲಾರಂಭಿಸಿತಂತೆ. ಅದನ್ನೇ ಗಮನಿಸುತ್ತಿದ್ದ ಪಾಣಿನಿಮಹರ್ಷಿಗಳಿಗೆ ವ್ಯಾಘ್ರಶಬ್ದದ ನಿರ್ವಚನ ಹೊಳೆಯಿತು- "ವ್ಯಾಪ್ತೇನ ಜಿಘ್ರಾತೀತಿ ವ್ಯಾಘ್ರಃ" ಎಂದು ಕೂಗಿಹೇಳಿದರು. (ಹುಲಿಯು ಕೊಲ್ಲುವ ಮುನ್ನ ವ್ಯಾಪಕವಾಗಿ ಮೂಸುತ್ತದಂತೆ. ಕಾರಣಕ್ಕಾಗಿಯೇ ಅದಕ್ಕೆ ವ್ಯಾಘ್ರ ಎಂದು ಹೆಸರು) ಮರುಕ್ಷಣಕ್ಕೆ ಹುಲಿಯು ಅವರನ್ನು ಬಲಿತೆಗೆದುಕೊಂಡೇ ಬಿಟ್ಟಿತಂತೆ! ಈ ಕಥೆಯು ಎಷ್ಟು ಇತಿಹಾಸ-ಸಿದ್ಧವೋ ಗೊತ್ತಿಲ್ಲವಾದರೂ, ತಾನು ಹಿಡಿದ ಅಧ್ಯಯನದಲ್ಲಿ ಅದೆಷ್ಟರ ಮಟ್ಟಿಗೆ ಪಾಣಿನಿಮಹರ್ಷೀಗಳು ನಿಷ್ಟೆಯಿಂದ ತೊಡಗಿದ್ದರು, ಸಾವಿನಲ್ಲೂ ಹೇಗೆ ವಿದ್ಯಾತಪಸ್ಸನ್ನು ಸಾಧಿಸಿದರು ಎನ್ನುವುದನ್ನಂತೂ ಕಥೆಯು ಧ್ವನಿಸುತ್ತದೆ! ಬಗೆಯ ನಿಸ್ವಾರ್ಥವಿದ್ಯಾಪ್ರೇಮವುಳ್ಳ ವಿದ್ಯಾತಪಸ್ವಿಗಳಿಂದಾಗಿ ವಿದ್ಯೆಯು ಅಮರತ್ವವನ್ನು ಪಡೆಯುತ್ತದೆ. ಸಂಸ್ಕೃತವು ಬೆಳೆದದ್ದು, ಉಳಿದದ್ದು ಪದವಿಗಾಗಿ, PhDಗಾಗಿ,Promotionಗಾಗಿ, Fashionಗಾಗಿ “some-ಶೋಧನ” ಮಾಡುವ ಟೊಳ್ಳು Degreeವಂತರಿಂದಾಗಿಯಲ್ಲ, ಬದಲಾಗಿ ಜೀವವನ್ನೇ ವಿದ್ಯೆಗಾಗಿ ತೇಯ್ದ ಮಹಾನುಭಾವರಿಂದಾಗಿ!

ಬನ್ನಿ, ಸಂಸ್ಕೃತದಿನದಂದು, ಇಂತಹ ಮಹೋನ್ನತ ಭಾಷೆಗೂ, ಅದನ್ನು ಪರಂಪರಾಗತವಾಗಿ ಉಳಿಸಿ ತಂದ ಎಲ್ಲ ಮಹಾತ್ಮರಿಗೂ ನಾವೆಲ್ಲರೂ ನುಡಿನಮನಗಳನ್ನು ಸಲ್ಲಿಸೋಣ. ವಿಶ್ವಾದ್ಯಂತ ದಿನ ನಡೆಯುವ ಸಂಸ್ಕೃತಭಾಷಾ ವಿಚಾರಗೋಷ್ಟಿ, ಸಾಹಿತ್ಯ-ಕಾವ್ಯಗೋಷ್ಟಿ, ಗೀತ-ನೃತ್ಯ-ನಾಟಕಗಳಲ್ಲಿ ನಾವೂ ಭಾಗವಹಿಸಿ ಸಂಸ್ಕೃತಮಾತೆಯನ್ನು ಪೂಜಿಸೋಣ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ