ಶುಕ್ರವಾರ, ಮಾರ್ಚ್ 17, 2017


ಗುಣಗ್ರಾಹಿ ಶ್ರೀರಾಮ

ಒಂದು ಸಂಸ್ಕೃತ ಸುಭಾಷಿತವೆನ್ನುತ್ತದೆ- ಗುಣೀ ಚ ಗುಣರಾಗೀ ಚ ವಿರಲಃ ಸರಲೋ ಜನಃ (ತಾನೂ ಗುಣಶಾಲಿಯಾಗಿದ್ದು ಮತ್ತೊಬ್ಬರ ಗುಣವಿಶೇಷಗಳನ್ನು ಗುರುತಿಸುವ ಔದಾರ್ಯ ಇರುವ ಸರಳರು ಲೋಕದಲ್ಲಿ ತುಂಬ ವಿರಳರು) ಆದರೆ ಶ್ರೀರಾಮನ ವ್ಯಕ್ತಿತ್ವ ಈ ವಿರಳರಾದ ಸರಳ, ಉದಾರ ಗುಣಿಗಳಿಗೆ ಸುಂದರ ನಿದರ್ಶನವಾಗಿದೆ. ಆತ ಗುಣಗ್ರಾಹಿಯಾಗಿದ್ದ ಕಾರಣದಿಂದಲೇ ಅತ್ಯುತ್ತಮ ಮನುಜರು, ಋಷಿಗಳು ಮಿತ್ರರೂ ಅವನನ್ನು ಸೇರಿ ಧನ್ಯರಾದರೂ, ಅವನಿಗೂ ಸುಖಸಂತೋಷಗಳನ್ನೂ ವರ್ಧಿಸಿದರು, ಕಷ್ಟಕಾಲದಲ್ಲಿ ಆತನಿಗೆ ಸಹಾಯ ಮಾಡಿದರು. 
ಶ್ರೀರಾಮಚಂದ್ರನು ಮರ್ಯಾದಪುರುಷೋತ್ತಮ, ಶಾಂತಮೂರ್ತಿ, ಸ್ಥಿತಪ್ರಜ್ಞ. ತನ್ನ ಭಾವನೆ, ಅನಿಸಿಕೆಗಳನ್ನೆಲ್ಲ ಸಂದರ್ಭೋಚಿತವಾಗಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ವ್ಯಕ್ತಪಡಿಸುವ ನಯ, ವಿನಯ ಹದ ಅವನದು. ಆತ ತುಂಬ ಹರ್ಷವನ್ನಾಗಲಿ ಅಥವಾ ದುಃಖವನ್ನಾಗಲಿ ಒಮ್ಮೆಲೆ ಮನದುಂಬಿ ಅಭಿವ್ಯಂಜಿಸಿದ ಸಂದರ್ಭಗಳು ಬಹಳ ವಿರಳ.  
ರಾಮಾಯಣದಲ್ಲಿ ವಾಲ್ಮೀಕಿಮುನಿಗಳು ಒಂದೊಂದೇ ಪಾತ್ರವನ್ನು ಪರಿಚಯಿಸುತ್ತ ಬರುತ್ತಾರೆ. ಆದರೆ ಹನುಮಂತನ ವ್ಯಕ್ತಿತ್ವದ ಘನತೆಯನ್ನು ಮಾತ್ರ ರಾಮನ ಮಾತುಗಳಿಂದ ಒಮ್ಮೆಲೆ ವೈಭವದಿಂದ ನಮಗಾಗುತ್ತದೆ! ಯಾರಬಗ್ಗೆಯೂ ತುಂಬ ಬೆರಗಾಗಿ ಉದ್ಗಾರವೆತ್ತಿದವನಲ್ಲದ ರಾಮನು ಹನುಮಂತನ ಬಗ್ಗೆ ಮಾತ್ರ ಹೃದಯ ತುಂಬಿ ಮೆಚ್ಚಿ ನುಡಿಯುವುದು ರಾಮಾಯನದಲ್ಲಿ ಕಾನಬರುತ್ತದೆ. ಅಂದರೆ ಹನುಮಂತನ ವ್ಯಕ್ತಿತ್ವ ಅದೆಷ್ಟು ಮಹೋನ್ನತವಾಗಿರಬೇಕು!
ಅಡವಿಯಲ್ಲಿ ಅಲೆದಾಡುತ್ತಿದ್ದ, ಶಸ್ತ್ರಧಾರಿಗಳಾದ ಅಪರಿಚಿತರಾದ ರಾಮಲಕ್ಷ್ಮಣರ ಪರಿಚಯ ಪಡೆಯಲು ಹನುಮಂತ ಮಾರುವೇಷದಲ್ಲಿ ಅವರ ಮುಂದೆ ಬಂದು ನಿಲ್ಲುತ್ತಾನೆ.  ಹನುಮಂತನ ಪೂರ್ವಪರಗಳ ಮಾಹಿತಿಯೂ ರಾಮನಿಗೂ ಇನ್ನೂ ಆಗಿರಲಿಲ್ಲ. ಹನುಮಂತನ ಮಾತಿನ ಸುಸಂಬದ್ಧತೆ, ಲಾಲಿತ್ಯ, ಚಾಕಚಕ್ಯತೆ ಹಾಗೂ ಶೋಭಾಯಮಾನವಾದ ಶೈಲಿಯನ್ನು ಕಂಡು ಬೆರಗಾಗಿ ಮೆಚ್ಚಿ ಮನದುಂಬಿ ಹಲವು ಮಾತುಗಳನ್ನು ಲಕ್ಷ್ಮಣನಿಗೆ ಹೇಳುತ್ತಾನೆ. ಕಿಷ್ಕಿಂಧಾಕಾಂಡದ ಹಲವು ಶ್ಲೋಕಗಳ ಸರಣಿಯಲ್ಲಿ ಪುಂಖಾನುಪುಂಖವಾಗಿ ಈ ಮಾತುಗಳು ಸುಂದರವಾಗಿ ಮೂಡಿಬಂದಿವೆ. ರಾಮ ಅದೆಂತಹ ಗುಣಗ್ರಾಹಿ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಜೊತೆಗೆ ಮಾತು ಹೇಗಿರಬೇಕು, ಮಾತನಾಡುವವನ ನಿಲುವು ವರ್ತನೆ ಹೇಗಿರಬೇಕು ಮುಂತಾದ ಮಾತುಗಾರಿಕೆಯ ಸೂಕ್ಷ್ಮಗಳ ಬಗ್ಗೆಯೂ ರಾಮನು ನಮಗೊಂದಿಷ್ಟು ಶಿಕ್ಷಣವನ್ನು ಅಪರೋಕ್ಷವಾಗಿ ಕೊಡುತ್ತಾನೆ ಎನ್ನಬಹುದು.
ರಾಮ ಹೇಳುತ್ತಾನೆ- “ಲಕ್ಷ್ಮಣ! ಋಗ್ಯಜುಸ್ಸಾಮವೇದಗಳಲ್ಲಿ ಚೆನ್ನಾಗಿ ಪಳಗಿದವನಲ್ಲದಿದ್ದಲ್ಲಿ ಈ ರೀತಿ ಮಾತನಾಡಲು ಸಾಧ್ತ್ಯವಿಲ್ಲ! ಇಷ್ಟು ದೀರ್ಘವಾದ ಮಾತುಗಳನ್ನು ಆಡಿದರೂ ಒಂದೇ ಒಂದು ಅಪಶಬ್ದವನ್ನೂ ನುಡಿದಿಲ್ಲ! ಮಾತನಾಡುವಾಗ ಇವನ ಅಂಗೋಪಾಂಗಗಳ ಚಾಲನೆ ಹಾಗೂ ಹಾವ ಭಾವಗಳ ಯಾವ ದೋಷಗಳೂ ಇಲ್ಲ. ಇವನ ಮಾತುಗಳೂ ತೀರ ಕಡಿಮೆ ಎನಿಸಲೂ ಇಲ್ಲ, ತುಂಬ ಬಳಸು ಮಾತು, ವಿಸ್ತಾರ ಅಂತಲೂ ಅನಿಸಲಿಲ್ಲ, ತುಂಬ ಹಿತಮಿತವಾಗಿದೆ. ಯಾವ ಗೊಂದಲಗಳೂ, ಇಲ್ಲದೆ ತಡೆಗಳಿಲ್ಲದೆ ಅದೆಷ್ಟು ಸೊಗಸಾಗಿ ಮೂಡಿಬಂದಿವೆ!
ಇವನ ಧ್ವನಿಯ ಮಟ್ಟವು ತುಂಬ ಜೋರೂ ಅಲ್ಲ, ಕೀಳು ಅಲ್ಲ, ಬದಲಾಗಿ ಮಧ್ಯಮಸ್ತರದಲ್ಲಿದ್ದು ಕಿವಿಗಳಿದೆ ಆಪ್ಯಾಯಮಾನವಾಗಿದೆ.
“ಇವನದು ‘ಸಂಸ್ಕಾರ-ಕ್ರಮಸಂಪನವಾದ ವಾಣಿ’”. ಸಂಸ್ಕಾರ ಎಂದರೆ ವ್ಯಾಕರಣದ ಪಾಕ, ಕ್ರಮ ಎಂದರೆ ಶಬ್ದೋಚ್ಚಾರಗಳ ಅರಿವು.
ರಾಮ ಮುಂದುವರೆಸುತ್ತಾನೆ- “ಹೃದಯ, ಕಂಠ ಹಾಗೂ ನೆತ್ತಿಗಳ ಪ್ರದೇಶಗಳಿಂದ ಯೋಗ್ಯವಾದ ರೀತಿಯಲ್ಲಿ ಹೊಮ್ಮುವ ಇವನ ಅಪೂರ್ವ ವಾಣಿ ಯಾರ ಮನಸ್ಸನ್ನು ತಾನೇ ಸೂರೆಗೊಳ್ಳುವುದಿಲ್ಲ.
ಸುಂದರ ಶೈಲಿ, ಜ್ಞಾನದ ಪಾಕ ಹಾಗೂ ಅಚ್ಚುಕಟ್ಟುತನ, ಸೊಗಸಾದ ಹಾವಭಾವಗಳೆಲ್ಲ ಸೇರಿ ತಡೆಯಿಲ್ಲದೆ ಧಾರೆಯಾಗಿ ಹರಿಯುವ ಇವನ ಮಾತು ಹೃದಯವನ್ನೇ ಸೆಳೆಯುವ ‘ಕಲ್ಯಾಣಕಾರೀ ವಾಕ್’ ಆಗಿದೆ”.  
ಹನುಮಂತನ ವಾಕ್ಕೌಶಲದ ಪ್ರಶಂಸೆಯಷ್ಟೇ ಅಲ್ಲ, ಅವನ ವ್ಯಕ್ತಿತ್ವ ಜ್ಞಾನಗಳನ್ನು ಮನಗೊಂಡ ರಾಮನು ಓರ್ವ ರಾಜನೀತಿಜ್ಞನಾಗಿಯೂ ಆಲೋಚಿಸುತ್ತ ಹೇಳುತ್ತಾನೆ- “ಖಡ್ಗವನ್ನು ಎತ್ತಿಹಿಡಿದ ಶತ್ರುವಿನ ಕೈಯ್ಯೂ ಕೂಡ ಇಂತಹ ಮಾತುಗಳನ್ನು ಕೇಳಿದಲ್ಲಿ ಕೆಳಗಿಳಿದುಬಿಡುತ್ತದೆ! ಇಂತಹ ದೂತನು ಯಾವ ರಾಜನಿಗಿರುತ್ತಾನೋ ಆತನು ಏನನ್ನು ತಾನೇ ಸಾಧಿಸಲಾರ?!” ಬಹುಶಃ ಮುಂದೆ ಈತನ ಮೈತ್ರಿ ತನಗೆ ತುಂಬ ಸಹಾಯಕವಾಗಬಹುದೆಂದು ರಾಮನು ತತ್ಕ್ಷಣದಲ್ಲೇ ಗುರುತಿಸಿಬಿಟ್ಟ ಎನ್ನಬಹುದು.
ರಾವಣನನ್ನು ಕೊಂದ ಬಳಿಕ ಹನುಮಂತ ಆ ವಾರ್ತೆಯನ್ನು ಅಶೋಕವನದಲ್ಲಿದ್ದ ಸೀತೆಗೆ  ತಲುಪಿಸಿದಾಗ ಆಕೆಯೂ ಇದೇ ಧಾಟಿಯಲ್ಲಿ ಪ್ರಶಂಸಿಸುತ್ತಾಳೆ- “ಅತ್ಯಂತ ಲಕ್ಷಣಸಂಪನ್ನವಾದ, ಮಾಧುರ್ಯಾದಿ ಗುಣಗಳಿಂದ ಕೂಡಿರುವ, ಬುದ್ಧಿ ಮತ್ತು ಅಷ್ಟಾಂಗಗಳಿಂದ ಸಾಲಂಕೃತವಾದ ಅದ್ಭುತಮಾತುಗಳನ್ನು ನಿನ್ನಂತಹವನು ಮಾತ್ರವೇ ಹೇಳಬಲ್ಲ!” ಅಷ್ಟಾಂಗಗಳು ಎಂದರೆ- ಶುಶ್ರೂಷಾ (ಕೇಳುವ ಆಸಕ್ತಿ), ಶ್ರವಣ, ಗ್ರಹಣ, ಧಾರಣ, ಊಹಾ(ತರ್ಕ-ವಿತರ್ಕ), ಅಪೋಹಾ(ಸಿದ್ಧಾಂತನಿಶ್ಚಯ) ಅರ್ಥವಿಜ್ಞಾನ ಮತ್ತು ತತ್ತ್ವಜ್ಞಾನ.
ರಾಮ ಸೀತೆಯರು ತಮ್ಮ ದುಃಖದುಮ್ಮಾನಗಳ ನಡುವೆಯೂ ಪರರ ಗುಣಗ್ರಹಣವನ್ನು ಮರೆಯಲಿಲ್ಲ, ಔದಾರ್ಯವನ್ನು ಕೈಬಿಡಲಿಲ್ಲ. ಅವರು ಎಲ್ಲಿದ್ದರೂ ಹೇಗಿದ್ದರೂ ಕ್ಷತ್ರಿಯೋಚಿತವಾಗಿ, ಆರ್ಯೋಚಿತವಾಗಿ ಆಲೋಚಿಸಿ ನಡೆದು ಕೊಳ್ಳುತ್ತಿದ್ದವರು. ನಿಜವಾದ ಅರಸರಲ್ಲಿರಬೇಕಾದ ಗುಣಗ್ರಹಣ, ಔದಾರ್ಯಗಳು ರಾಮನಲ್ಲಿ ಎದ್ದು ಕಾಣುವುದನ್ನು ನಾವು ಗಮನಿಸದಿದ್ದಲ್ಲಿ ರಾಮಯಣದ ಒಮ್ದು ದೊಡ್ಡ ಪಾಠವನ್ನೇ ಕಳೆದುಕೊಂಡಂತೆ.   
ಹಾಗಾಗಿಯೇ ಸೀತಾರಾಮರು ನಮ್ಮೆಲ್ಲರ ಪಾಲಿಗೇ ಅಂದೂ, ಇಂದೂ ಎಂದೆಂದೂ “ರಾಜಾ-ರಾಣಿ”ಯರೇ! ಪರಿಪೂರ್ಣ ನಿರ್ದುಷ್ಟ ರಾಜ್ಯದ ಕಲ್ಪನೆ ಎಂದರೆ ಅದು ರಾಮಾರಜ್ಯವೇ! ಅಲ್ಲಿ ಗುಣಗಳಿಗೆ ಮನ್ನಣೆಯುಂಟು, ಆಶ್ರಯವುಂಟು. ಅಂತಹ ಹನುಮಂತನೇ ರಾಮನ ವ್ಯಕ್ತಿತ್ವಕ್ಕೆ ಮನಸೋತು ಅವನ ಮಿತ್ರನೂ ದೂತನೂ ಆಗಿಬಿಟ್ಟದ್ದು ಈ ಕಾರಣಕ್ಕಾಗಿ.
ರಾಮಚಂದ್ರನ ಗುಣ-ಶೀಲಗಳ ಜೀವನಸಂದರ್ಭಗಲ ಸಿರಿ ಬೆಳಕನ್ನು ಆಗಾಗ ಪಡೆದು ನಾವು ಬೆಳಕಿನಲ್ಲಿ ವಿಕಸಿಸೋಣ.

ಡಾ ಆರತಿ ವಿ ಬಿ

Published in Vijayavani newspaper 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ