ಶುಕ್ರವಾರ, ಮಾರ್ಚ್ 17, 2017

ವಿದ್ವಾನ್ ಶ್ರೀಕಂಠನ್ ರವರಿಗೆ ನುಡಿನಮನಾಂಜಲಿ
‘ಸಿರಿಕಂಠದ ಶ್ರೀಕಂಠ’ ಎಂದೆ ಖ್ಯಾತಿವೆತ್ತ ಪದ್ಮಭೂಷಣ ಸಂಗೀತರತ್ನ ವಿದ್ವಾನ್ ರುದ್ರಪಟ್ನಂ ಕೃಷ್ಣಶಾಸ್ತ್ರಿ ಶ್ರೀಕಂಠನ್ ರವರು ೧೭ ಫೆಬ್ರವರೀ ೨೦೧೪ ರಂದು ನಮ್ಮನ್ನು ಅಗಲಿದ್ದಾರೆ. ಅವರ ಭಾನುತೇಜದಿಂದ ವಂಚಿತವಾದ ಸಂಗೀತಲೋಕದ ಆಕಾಶವು ಮಂಕಾಗಿದೆ. ರುದ್ರಪಟ್ನಂ ಊರು ಹಲವಾರು ಸಂಗೀತ ಪ್ರತಿಭೆಗಳನ್ನು ನಾಡಿಗೆ ನೀಡುತ್ತ ಬಂದಿದೆ. ಅವರುಗಳಲ್ಲಿ ಶಿಖರಪ್ರಾಯರು ಶ್ರೀಕಂಠನ್ ರವರು. ಶ್ರೀಕಂಠನ್ ರವರು ಕರ್ನಾಟಕಕ್ಕಷ್ಟೇ ಅಲ್ಲ, ಭಾರತಕ್ಕೆ ಅಮೂಲ್ಯ ಕಲಾರತ್ನವಾಗಿದ್ದವರು.  
ಜೀವನ-
ಶ್ರೀಕಂಠನ್ ರವರು ಹಾಸನ ಜಿಲ್ಲೆಯ ರುದ್ರಪಟ್ನಂನಲ್ಲಿ ಸಂಕೇತಿ ಬ್ರಾಹ್ಮಣರ ಕುಟುಂಬದಲ್ಲ್ಕಿ ೧೪ ಜನವರೀ ೧೯೨೦ರಲ್ಲಿ ಜನಿಸಿದರು. ಅವರ ತಂದೆ ಕೃಷ್ಣಶಾಸ್ತ್ರಿಗಳು ಉತ್ತಮ ವಾಗ್ಮಿ, ಗಮಕಕಲಾವಿದರು, ಕವಿ, ನಾಟಕಸಾಹಿತ್ಯರಚನೆ ಮಾಡುವವರೂ ಹಾಗೂ ಹರಿಕಥಾವಿದ್ವಾಂಸರೂ ಆಗಿದ್ದರು. ಬೆಟ್ಟದಪುರದ ನಾರಾಯಣಸ್ವಾಮಿ (ವೀಣೆ ನಾರಾಯಣಸ್ವಾಮಿ) ಎಂದು ಪ್ರಸಿದ್ಧರಾಗಿದ್ದ ಅವರ ತಾತ ಉತ್ತಮ ವೈಣಿಕರೂ, ವೀಣೇಶೇಷಣ್ಣನವರ ಹಾಗೂ ವೀಣೇ ಸುಬ್ಬಣ್ಣರ ಸಮಕಾಲೀನರು. ಶ್ರೀಕಂಠನ್ ರವರ ತಾಯಿ ಸಣ್ಣಮ್ಮರವರೂ ಉತ್ತಮ ಗಾಯಕಿಯಾಗಿದ್ದರು. ಆದರೆ ಇವರು ಎರಡು ವರ್ಷದವರಾಗಿದ್ದಾಗಲೇ ಆಕೆ ತೀರಿಕೊಂಡರಂತೆ. ಪ್ರತಿಭೆಯು ಇವರ ಮನೆತನದ ರಕ್ತದ ಗುಣವೇ ಆಗಿದೆ. ಹಾಗಾಗಿ ಶ್ರೀಕಂಠರವರೆಗೂ ಸಂಗೀತಗಂಗೆ ತಾನೇತಾನಾಗಿ ಒಲಿದು ಬಂದಳು.
ಸದ್ವಿದ್ಯಾಪಾಠಶಾಲಾ ಹಾಗೂ ಭಾನುಮೈಯ್ಯಾ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಶ್ರೀಕಂಠನ್ ರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ ಎ ಪದವಿಯನ್ನು ಪಡೆದರು.
ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ತಂದೆ ಕೃಷ್ಣಶಾಸ್ತ್ರಿಗಳ ಮೂಲಕ ಪಡೆದು, ಮುಮ್ದೆ ತಮ್ಮ ಅಣ್ಣ ಆರ್. ಕೆ. ವೇಂಕಟರಮಣ ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಮುಂದುವರೆದರು. ವಿದ್ವಾನ್ ಚೌಡಯ್ಯನವರ ಅಚ್ಚಿನಲ್ಲೂ ಪಳಗುವ ಭಾಗ್ಯ ಇವರದಾಯಿತು. ಸಂತತ್ಯಾಗರಾಜರ ಭವ್ಯಪರಂಪರೆಯಲ್ಲಿ ಅರಳಿದ ಮಹಾಪ್ರತಿಭೆ ಇವರು. ಆ ಪರಂಪರೆ ಹೀಗಿದೆ- “ತ್ಯಾಗರಾಜರು- ವಾಲಾಜಪೇಟೇ ವೇಂಕಟರಮನ ಭಾಗವತರ್- ಮೈಸೂರು ಸದಾಶಿವರಾಯರು- ವೀಣೇ ಶೇಷಣ್ಣ- ಆ ಕೆ ವೇಂಕಟರಾಮಾಶಾಸ್ತ್ರಿ- ಆರ್ ಕೆ ಶ್ರೀಕಂಠನ್ “
ವೊಡೆಯರ ಕಾಲದ ಮೈಸೂರಿನ ಎಲ್ಲ ಸಂಗೀತ ಕಚೇರಿಗಳಿಗೂ ಶ್ರೀಕಂಠನ್ ರವರು ತಪ್ಪದೆ ಹೋಗುತ್ತಿದ್ದರು. ಅವರ ಕಾಲದ ನಾದಸ್ವರ ವಿದ್ವಾಂಸರಿಂದ ತುಂಬ ಪ್ರಭಾವಿತರಾಗಿದ್ದರಂತೆ. ಅಂತೆಯೇ ಸೆಮ್ಮನಗುಡಿ ಶ್ರೀನಿವಾಸ ಐಯರ್, ಅರೈಕುಡಿ ರಾಮಾನುಜ ಐಯಂಗಾರ್, ಜಿ ಎನ್ ಬಾಲಸುಬ್ರಹ್ಮಣ್ಯಂ ಹಾಗೂ ಮಹಾರಾಜಪುರಂ ವಿಶ್ವನಾಥ ಐಯರ್ ಮುಂತಾದ ಮಹಾನ್ ಕಲಾವಿದರ ಪ್ರಭಾವವೂ ಇವರ ಮೇಲಾಯಿತು.
ಐದುವರ್ಷದ ಎಳೆಯವಯಸ್ಸಿನಲ್ಲಿ ಸಂಗೀತಲೋಕಕ್ಕೆ ಪ್ರವೇಶಿಸಿದ ಈ ಜನ್ಮಜಾತಪ್ರತಿಭೆ ಶಿಕ್ಷಣ ಮುಗಿಸಿ ೧೯೩೬ರಲ್ಲಿ ಮದ್ರಾಸ್ ಕಾರ್ಪೋರೇಷನ್ ರೇಡಿಯೋ ಸಂಸ್ಥೆಯಲ್ಲಿ ಉದ್ಯೋಗಸ್ಥರಾದರು. ಇವರ ವೃತ್ತಿಜೀವನವೂ ಕಲೆಯನ್ನು ಅವಲಂಬಿಸಿಯೇ ಬೆಳೆದದ್ದು ಅವರ ಕಲಾಬೆಳವಣಿಗೆಗೆ ಪೋಷಕವಾಯಿತು. ೧೯೪೯ ರಲ್ಲಿ ಬೆಂಗಳೂರಿನ ಆಕಾಶವಾಣಿಯಲ್ಲಿ ಉದ್ಯೋಗನಿರತರಾದರು. ಜಿ ಎನ್ ಬಾಲ್ಸುಬ್ರಹ್ಮಣ್ಯಂ ಹಾಗೂ ಶಾಮಗುಡಿ ಶ್ರೀನಿವಾಸ ಅಯ್ಯರರಂತಹ ಸಂಗೀತದಿಗ್ಗಜರ ಪೋತ್ಸಾಹ ದೊರಕಿ ಉನ್ನತೋನ್ನತ ಸಂಗೀತಶಿಕ್ಷಣವನ್ನು ಪಡೆದರು. ಶ್ತ್ರೀಕಂಠನ್ ರ ಸಿರಿಕಂಠದ ಗಾಯನ ಬಹಳ ಬೇಗ ನಾಡಿನಲ್ಲೆಲ್ಲ ಜನಪ್ರಿಯವಾಗುತ್ತ ಬಂದಿತು. ನಾಡಿನಾದ್ಯಂತ ಹಾಗೂ ದೇಶವಿದೇಷಗಳಲ್ಲಿ ಅವರ ಶ್ರೀಕಂಠವು ಮಿಡಿಮಿಡಿದು ಸಂಗೀತದೌತಣವನ್ನು ಕಲಾರಸಿಕರಿಗೆ ಧಾರಾಳವಾಗಿ ಉಣಬಡಿಸಿತು. ಅವರನ್ನು ಅರಸಿ ಬಂದ ಪ್ರಶಸ್ತಿಗಳು ಗೌರವಗಳು ಅವೆಷ್ಟೋ! ಅವರನ್ನು ಅರಸಿ ಬಂದ ಶಿಷ್ಯರದೆಷ್ಟೋ! ‘ಕರ್ನಾಟಕದ ಸೆಮ್ಮನಗುಡಿ’ ಎಂದು ಅವರನ್ನು ಅಭಿಮಾನದಿಂದ ಕರೆದವರೆಷ್ಟೋ!
ಕೆಲವೇ ವರ್ಷಗಳಲ್ಲಿ ಇವರು ನಾಡಪ್ರತಿಭೆಯಾಗಿ ವಿಶ್ವವಿಖ್ಯಾತರಾದರು. ಶ್ರೀಕಂಠನ್ ರವರು ಉತ್ತಮ ವಾಗ್ಮಿಗಳೂ ಆಗಿದ್ದು ಸುಂದರ ಸುಸಂಸ್ಕೃತ ಕನ್ನದ ಭಾಷೆಯಲ್ಲಿ ಲಲಿತವಾಗಿ ಬರೆದುಕೊಂಡು ಬಂದು ಪ್ರೌಢ ಪತ್ರಿಕೆಗಳನ್ನು ವಿಚಾರಗಳನ್ನು ಅಸ್ಖಲಿತ ವಾಕ್ಶೈಲಿಯಲ್ಲಿ ಒಪ್ಪಿಸುತ್ತಿದ್ದದ್ದೂ ಕೇಳುಗರಿಗೆ ರಸದೌತಣವಾಗಿರುತ್ತಿತ್ತು. ಅವರ ಸಂಗೀತದಷ್ಟೇ ಮಧುರ ಅವರ ಮಾತುಗಳು ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು.
೧೯೮೧ರಲ್ಲಿ ಬೆಂಗಳೂರಿನ ಗಾಯನಸಮಾಜದ ಸಂಗೀತೋತ್ಸವದ ಅಧ್ಯಕ್ಷತೆಯ ಪ್ರತಿಷ್ಠಿತ ಗೌರವ ಅವರಿಗೆ ಸಂದಿತು. ೧೯೯೫ರಲ್ಲಿ ಸಂಗೀತ ಅಕಾಡೆಮೆಯ ಅಧ್ಯಕ್ಷತೆಯ ಹುದ್ದೆಯನ್ನು ಅಲಂಕರಿಸಿದರು. ಸಂಗೀಟ ಕಲಾನಿಧಿ, ನಾದನಿಧಿ ಕನಕಪುರಂದರ ಪ್ರಶಸ್ತಿ, ಕೇಂದ್ರ ಸಂಗೀತ ಅಕಾಡೇಮೆ ಪ್ರಶಸ್ತಿ, ತೊಂಭತ್ತು ವರ್ಷಗಳನ್ನು ಮೀರಿದ ಜೀವನಾವಧಿಯಲ್ಲಿ ಹೆಚ್ಚುಕಡಿಮೆ ಅಷ್ಟೂ ವರ್ಷಗಳೂ ಅವರು ಸ್ವರಸರಸ್ವತಿಯ ಅನುಸಂಧಾನದಲ್ಲೇ ಜನ್ಮವನ್ನು ಸವೆಸಿದ ನಾದಯೋಗಿಗಳು.
ಆಕಾಶವಾಣಿಯಲ್ಲಿ ಅಮೃತವರ್ಷಿಣೀ ಕಾರ್ಯಕ್ರಮದಲ್ಲಿ ಇವರು ಸವಿವರವಾಗಿ ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದ ಸಂಗೀತ ಪಾಠ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಸ್ವತಃ ಖ್ಯಾತಿವೆತ್ತ ವಿದ್ವಾಂಸರು-ವಿದುಷಿಯರೂ ಕೂಡ ಇವರ ಧ್ವನಿ ಮೂಡಿಬಂದಾಕ್ಷಣ ರೇಡಿಯೋ ಪಕ್ಕದಲ್ಲಿ ಕುಳಿತು ಆಲಿಸುವುದನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದ ಮೇಲೆ ಇವರ ಮೇರುವ್ಯಕ್ತಿತ್ವದ ಘನತೆ ಸ್ವಯಂಸ್ಪಷ್ಟವಲ್ಲವೆ?!
ತೊಂಭತ್ತು ದಾಟಿದ ಬಳಿಕವೂ ಕೇವಲ ಒಂದು ವರ್ಷದಲ್ಲಿ ಸುಮಾರು ೭೫ ಕಚೇರಿಗಳನ್ನೂ, ಗಾನ-ವ್ಯಾಖ್ಯಾನ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದ ಅತ್ಯಂತ ಬಿಡುವಿಲ್ಲದ ಕಲಾವಿದರು ಅವರು!
೯೪ ವರ್ಷಗಳ ತುಂಬು ಜೀವನವನ್ನು ಸಾರ್ಥಕವಾಗಿ ಬದುಕಿದ್ದು, ಕೆಲಕಾಲದ ಅಸ್ವಾಸ್ಥ್ಯದಿಂದ ನರಳಿದ್ದ ಶ್ರೀಕಂಠನ್ ರವರು, ೨೦೧೪ ಇಸವಿಯ ೧೭ ಫೆಬ್ರವರೀ ರಂದು ಚಿರನಿದ್ರೆಗೆ ಜಾರಿದರು. ಅವರ ಸಾವಿನ ಕೆಲದಿನಗಳ ಮುಂಚೆ ಅವರ ಜನ್ಮದಿನದಂದು  “Voice of a Generation” ಎಂಬ ಅವರ ಜೀವನಚರಿತೆ ಬಿಡುಗಡೆಯಾಯಿತು. ಬರುವ ತಿಂಗಳಲ್ಲಿ ಆಯೋಜಿತವಾಗಿದ್ದ ಸುಮಾರು ೪೦ ಕಾರ್ಯಕ್ರಮಗಳು ಇವರ ಸಾವಿನಿಂದಾಗಿ ಹಠಾತ್ತನೆ ರದ್ದಾಗಬೇಕಾಯಿತು. ಸಧ್ಯದಲ್ಲೇ ಪುಟ್ರಾಜ ಗವಾಯ್ ಪರ್ಶಸ್ತಿಯೂ ಅವರಿಗೆ ಸಲ್ಲಬೇಕಿತ್ತು.  
ಸತ್ವಸಂಪನ್ನ ಸಂಗೀತಸಾಧನೆ
ಶುದ್ಧ ಸಂಪ್ರದಾಯ ಬದ್ಧ ಗಾನಶೈಲಿಯ, ಅತ್ಯಂತ ಬೇಡಿಕೆ ಅತ್ಯಂತ ಗೌರವಾನ್ವಿತ ಕಲಾವಿದರು ಆರ್ ಕೆ ಶ್ರೀಕಂಟನ್ ರವರು. ಹಾದಲು ಆರಂಭಿಸಿದರೆಂದರೆ ಸಭಾಮಂಟಪವೆಲ್ಲ ಆ ಸುಶ್ರಾವ್ಯ ನಾದದ ತರಂಗಗಳಲ್ಲಿ ಮುಳುಗಿ ತನ್ಮಯವಾಗುತ್ತಿತ್ತು! ಸತ್ವಸಂಪನ್ನ, ಶ್ರೀಮಂತ ಗಂಡು ಧ್ವನಿಯು ಶ್ರೀಕಂಠರಿಗೆ ದೈವದತ್ತ ವರ. ಶ್ರುತಿಶುದ್ಧಿ, ಲಯಕೌಶಲ ಹಾಗೂ ತ್ರಿಸ್ಥಾಯಿಗಳಲ್ಲಿ ಸಲೀಸಾಗಿ ಹಾಡುವ ಪ್ರಾವೀಣ್ಯ ಅವರ ಗಾಯನದ ಹೆಗ್ಗುರುತುಗಳಾಗಿದ್ದವು. ಜೊತೆಗೆ ಸ್ಪಷ್ಟ ಸ್ಪುಟ ಉಚ್ಚಾರ, ಸಾಹಿತ್ಯಶುದ್ಧಿ, ಭಾವಶುದ್ಧಿಗಳು ಹಾಗೂ ರಸಿಕರಂಜನೆಯ ಔಚಿತ್ಯಪ್ರಜ್ಞೆಗಳೂ ಸೇರಿದ್ದು, ಸ್ವರ-ಲಯವಿನ್ಯಾಸಗಳಲ್ಲಿ ನಲಿದು ನರ್ತಿಸುವ ಅವರ ಶಾಸ್ತ್ರೀಯ ಸಂಗೀತ ಗಾಯನ ಶೈಲಿಯು ವಿದ್ವದ್ರಸಿಕರನ್ನು ಮೆಚ್ಚಿಸಿದರೆ, ದೇವರನಾಮಗಳು, ತಿಲ್ಲಾನ, ವಚನ ಮುಂತಾದ ಗೇಯಪ್ರಕಾರಗಳ ಸರಳ ಸುಂದರ ಭಾವಪೂರ್ಣ ಗಾಯನವೂ ಆಬಾಲವೃದ್ಧರೆಲ್ಲರ ಮನಸೂರೆಗೊಳ್ಳುತ್ತಿದ್ದವು. ಅಂತೂ ಬಹುಬೇಗ ಶ್ರೀಕಂಠರ ಸಿರಿಕಂಠವು ಸಂಗಗೀತರಸಿಕರ ಮನಗೆದ್ದಿತು.
ಶ್ರೀಕಂಠನ್ ರವರ ಗಾನಮಂಡನೆ ಅದೆಷ್ಟು ಸೊಗಸೋ ಅವರ ರಾಗಸಂಯೋಜನಾ ಕೌಶಲವೂ ಅಷ್ಟೇ ಸುಂದರ. ಆಯಾ ಗೀತೆಯ ದೇವತೇ, ಭಾವ, ನೀತಿಸಂದೇಶ, ರಸ, ಛಂದಸ್ಸು ಮುಂತಾದ ಗುಣಗಳನ್ನು ಅವಲಂಬಿಸಿ ರಾಗ, ತಾಳ, ಲಯ ಹಾಗೂ ಸ್ವರಸಂಚಾರ, ಕಾಕು (ಶಬ್ದವನ್ನು ಒತ್ತಿಹೇಳುವ ಪರಿ) ಗಳನ್ನು ಅಳವಡಿಸಿ ಹಾಡುವಲ್ಲಿ ಇವರು ನಿಸ್ಸೀಮರು. ಎಷ್ಟೋ ದೇವರನಾಮಗಳು, ವಚನಗಳೂ ಇವರ ಮಂದನೆಗಳಿಂದಲೇ ಪ್ರಸಿದ್ಧವಾದವು ಎಂದರೂ ಅತಿಶಯೋಕ್ತಿಯಲ್ಲ. ದಾಸಸಾಹಿತ್ಯವನ್ನಂತೂ ಮನೆಮನೆಗಳಲ್ಲೂ ಪ್ರತಿಧ್ವನಿಸುವಂತೆ ಮಾಡಿದ ಅನುಪಮ ಸೇವೆ ಇವರದು. ಇದಲ್ಲದೆ ಮಾಸ್ತಿ ಐಯಂಗಾರ್, ಕುವೆಂಪು, ಪು ತಿ ನ, ದರ ಬೇಂದ್ರೆ ಮುಂತಾದ ಕವಿಗಳ ಪದಗಳಿಗೂ ಸ್ವರಸಂಯೋಜನೆ ಮಾಡಿ ಪ್ರಸಿದ್ಧಗೊಳಿಸಿದ್ದಾರೆ.  
ಇವರು ಮಂಡಿಸಿರುವ ‘ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ ಹಾಗೂ ಶ್ಯಾಮಾಶಾಸ್ತ್ರಿಗಳ ಕೃತಿಗಳ ಕುರಿತಾದ ಗಾನ-ವ್ಯಾಖ್ಯಾನ ಕಾರ್ಯಕ್ರಮಗಳು ಹಾಗು ಪ್ರಸುತಪಡಿಸಿರುವ ಇತರ ಸಂಗೀತ ಶಾಸ್ತ್ರೀಯ ವಿಚಾರಗಳೂ, ಚಿಂತನೆಗಳು ಇಂದಿನ ಸಂಗೀತ ವಿದ್ಯಾರ್ಥಿಗಳಿಗೆ ಪಠ್ಯವಿಷಯಗಳೇ ಆಗಿವೆ.
ಸಿರಿಕಂಠದ ಉಪದೇಶ
ಉತ್ತಮ ಜೀವನಶೈಲಿ ಹಾಗೂ ಶಿಸ್ತು ಅವರ ಆರೋಗ್ಯದ ಗುಟ್ಟಗಿತ್ತು. ತನ್ನ ವೃತ್ತಿಜೀವನದ ದಿನಗಳಲ್ಲಿ ಶ್ರೀ ಕಂಠನ್ ರವರು ತಮ್ಮ ಮಿತ್ರರಾದ ದಿವಂಗತ ವೀಣೇ ದೊರೆಸ್ವಾಮಿ ಐಯಂಗಾರರೊಂದಿಗೆ ಮಲ್ಲೇಶ್ವರದಿಂದ ಸುಮಾರು ೫-೬ ಕಿ ಮೀ ಗಳಷ್ಟು ದೂರದ ಆಕಾಶವಾಣಿಗೆ ಪ್ರತಿದಿನವೂ ಗೋವಿಂದರಾವ್ ರಸ್ತೆಯ ಮೂಲಕ ನಡೆದೇ ಹೋಗಿಬರುತ್ತಿದ್ದರಂತೆ! ತಮ್ಮ ಕಂಠವನ್ನು ಹುಷಾರಾಗಿ ಕಾಪಾಡಿಕೊಳ್ಳುವಂತೆ ಶಿಷ್ಯರಿಗೆ ಒತ್ತಿ ಹೇಳುತ್ತಿದ್ದರು. ವಿನಯ, ಶಿಸ್ತು ಹಾಗೂ ಭಕ್ತಿ ಇದ್ದರೆ ಮಾತ್ರ ಸಂಗೀತವನ್ನು ಕಲಿಯಲು ಅರ್ಹತೆ ಬರುತ್ತದೆ ಎನ್ನುವುದು ಅವರ ನಿರಂತರ  ಉಪದೇಶವಾಗಿತ್ತು. ‘ತೋರಾಣಿಕೆ ಮತ್ತು ಟೊಳ್ಳುತನ ಇತ್ತೀಚಿನ ಕಲಾವಿದರ ಕಚೇರಿಧರ್ಮವಾಗುತ್ತಿರುವುದು ದುಃಖಕರ’ ಎನ್ನುವ ಖೇದವನ್ನು ವ್ಯಕ್ತಪಡಿಸುತ್ತಿದ್ದರು.
ಗಾನದಲ್ಲಿ ತನ್ಮಯವಾದರೆ ಜಗತ್ತನ್ನೇ ಮರೆಯುವುದು ನಿಜವಾದ ನಾದಯೋಗಿಯ ಲಕ್ಷಣ. ಶ್ರೀಕಂಠನ್ ರವರ ಜೀವನದಲ್ಲಿ ಇದು ಸತ್ಯವಾಗಿತ್ತು. ೧೯೭೬ರಲ್ಲಿ ಹಂಪೆಯಲ್ಲಿ ನಡೆದ ಪುರಂದರೋತ್ಸವದಲ್ಲಿ ಶ್ರೀಕಂಠನ್ ರವರು ಅದ್ಭುತವಾಗಿ ಹಾಡುತ್ತಿದ್ದಾಗ, ಎಲ್ಲಿಂದಲೋ ಹರಿದು ಬಂದ ಹಾವು ಒಂದು ವೇದಿಕೆಯ ಮುಂದೆ ತಟಸ್ಥವಾಗಿ ಕುಳಿತು ಬಹಳ ಹೊತ್ತು ಹೆಡೆಯಾಡಿಸುತ್ತಲೇ ಇತ್ತಂತೆ! ಆದರೆ ಹಾವು ಬಂದದ್ದು ಗೊತ್ತೇ ಆಗದೆ ಮೈಮರೆತು ಹಾಡುತ್ತಲೇ ಇದ್ದರಂತೆ ಶ್ರೀಕಂಠನ್ ರವರು! ಅವರು ಹಾಡು ನಿಲ್ಲಿಸದೆ ಇದ್ದರಿಂದ ಪಕ್ಕವಾದ್ಯದವರು ನಿಲ್ಲಿಸದೇ ನುಡಿಸುತ್ತಲೇ ಹೋದರಂತೆ. ಆ ಪ್ರಸಂಗದಲ್ಲಿ ಅವರಿಗೆ ಮೃದಂಗದ ಪಕ್ಕವಾದ್ಯ ನುಡಿಸುತ್ತಿದ್ದ ಖ್ಯಾತ ವಿದ್ವಾಂದಸರಾದ ಬಿ ಕೆ ಚಂದ್ರಮೌಳಿರವರು ಈ ಘಟನೆಯನ್ನು ನೆನೆಸಿಕೊಳ್ಳುತ್ತ ಹೇಳುತ್ತಾರೆ “ಸಂಗೀತವೆಂದರೆ ಬಾಯಿಯಿಂದ ಹಾಡುವುದು, ಕಿವಿಯಿಂದ ಕೇಳುವುದು- ಈ ಎರಡು ಕ್ರಿಯೆಗಳಿಗೆ ಸೀಮಿತವಾದ ಸಂಗತಿಯಲ್ಲ. ಇಂದ್ರಿಯಗಳನ್ನು ಮೀರಿದ ಅಂತರಂಗದ ಸಂವಹನ ಸಾಧ್ಯ ಎಂಬುದನ್ನು ಶ್ರೀಕಂಠನ್ ತೋರಿಸಿಕೊಟ್ಟರು. ಅಂತರಂಗವೆಂಬುದು ಎಲ್ಲ ಜೀವಿಗಳಿಗೂ ಇದೆ ಎಂಬುದಕ್ಕೆ ಸಂಗೀತಕ್ಕೆ ಹೆಡೆದೂಗಿದ ಸರ್ಪದ ಪ್ರಕರಣವೇ ಸಾಕ್ಷಿ”.  (‘ಆ ಕಂಠಪಾತ್ರದಲ್ಲಿ ಹರಿಯುತ್ತಿದ್ದಳು ಸಂಗೀತ ಕಾವೇರಿ’ ಎಂಬ ಲೇಖನ, ಉದಯವಾಣಿ ಪತ್ರಿಕೆ, ೨೩-೨-೨೦೧೪)
ಶಿಷ್ಯರತ್ನಗಳ ಕೊಡುಗೆ
ತಂಬೂರಿಯು ತಾನೂ ತನುವಿನೊಳಗೆಲ್ಲ ನಾದವನ್ನು ತುಂಬಿಕೊಂಡು ಮಿಡಿದು ನಲಿಯುತ್ತದೆ. ಜೊತೆಗೆ ಆ ನಾದವನ್ನು ಆಧಾರಶ್ರುತಿಯಾಗಿ ಗಾಯಕರಿಗೂ ವಾದಕರಿಗೂ ಆಸರೆಯಾಗಿ ಒದಗಿಸುತ್ತದೆ. ಅಂತೆಯೇ ಶ್ರೀಕಂಠನ್ ರವರ ವ್ಯಕ್ತಿತ್ವ, ವಿದ್ಯೆ, ಪ್ರತಿಭೆ ಹಾಗೂ ಪಾಠನ ಕೌಶಲಗಳು ನೂರಾರು ಪ್ರತಿಭೆಗಳನ್ನು ಪೋಷಿಸಿವೆ ಬೆಳೆಸಿವೆ.  
ಆಲದ ಮರವೊಂದು ತಾನೂ ಬೃಹದಾಕಾರವಾಗಿ ವ್ಯಾಪಿಸಿ, ನೂರಾರು ಬಿಳಲುಗಳನ್ನು ಹೊಮ್ಮಿಸಿ ಬೆಳೆಸುವಂತೆ, ನೂರಾರು ಲತೆಗಳಿಗೆ ಆಸರೆಯಾಗುವಂತೆ, ಜನರಿಗೆ, ಪಶುಪಕ್ಷಿಗಳಿಗೆ ನೆಳಲನ್ನೂ ತಂಗಾಳಿಯನ್ನೂ ಆಸರೆಯನ್ನೂ ನೀಡುವಂತೆ ಶ್ರೀಕಂಠನ್ ರವರು ಸಂಗೀತಲೋಕದ ಪಿತಾಮಹರಾಗಿ ಬೆಳೆದು ನಿಂತು, ನೂರಾರು ನೂರಾರು ಕಲಾವಿದರನ್ನೂ ಸಂಗೀತ ರಸಿಕರನ್ನೂ ಸಂಗೀತಲೋಕವನ್ನೂ ಪೋಷಿಸಿ ಶ್ರೀಮಂತಗೊಳಿಸಿದ್ದಾರೆ. ಗಾನಕಲಾಶ್ರೀ ಡಾ ಟಿ ಎಸ್ ಸತ್ಯವತೀ, ಗಾನಕಲಾಶ್ರೀ ಎಮ್ ಎಸ್ ಶೀಲಾ, ವಿದ್ವಾನ್ ವಿದ್ಯುಭೂಷಣ, ಆರ್ ಏ ರಮಾಮಣಿ, ಎಂ ಟಿ ಸೆಲ್ವನಾರಾಯಣ್, ಎಚ್ ಕೆ ನಾರಾಯನ್, ಮುಂತಾದ ಸಂಗೀತದ ಮೇರು ಸಾಧಕರೂ ಸೇರಿದಂತೆ ಅನೇಕ ಕಲಾವಿದರನ್ನು ರೂಪಿಸಿದ ಹೆಗ್ಗಳಿಕೆ ಶ್ರೀಕಂಠನ್ ರವರದು. ಇದಲ್ಲದೆ ವಿದುಷಿ ಶಾಂತಿ ರಾವ್, ಚಾರುಲತಾ ರಾಮಾನುಜಂ, ನಳಿನಾ ಮೋಹನ್ ಮುಂತಾದ ಹೆಸರಾಂತ ವೀಣಾ ಹಾಗೂ ಪಿಟೀಳು ಕಲಾವಿದರೂ ಇವರ ಶಿಷ್ಯರೇ. ಇಅವರ ಶಿಷ್ಯರೆನಿಸಿಕೊಂಡವರಲ್ಲಿ ISRO ಸಂಸ್ಥೆಯ ಮುಖ್ಯಸ್ಥರಾದ ಕೆ ರಾಧಾಕೃಷ್ಣರವರೂ ಒಬ್ಬರು!  ಸುಮಾರು ೫೦೦ ಹೆಚ್ಚು ವಿದ್ವಾಂಸರನ್ನು ನೇರವಾಗಿ ಹಾಗೂ ಅಸಂಖ್ಯಾತ ಶಿಷ್ಯರನ್ನು ಆಕಾಶವಾಣಿಯ ‘ಗಾನವಿಹಾರ’ ಪಾಠಗಳ ಮೂಲಕ ತಯಾರು ಮಾಡಿರು ಮಹಾಗುರು ಇವರು.
ಸುಗಮಸಂಗೀತಕ್ಷೇತ್ರದ ಹೆಸರಾಂತ ಗಾಯಕಿ ರತ್ನಮಾಲಪ್ರಕಾಶ್ ರವರೂ ಹಾಗೂ ಹೆಸರಾಂತ ಸಂಗೀತ ವಿದ್ವಾಂಸರಾದ ಆರ್ ಎಸ್ ರಮಾಕಾಂತ್ ರವರು ಇವರ ಮಕ್ಕಳೇ.
ಅವರನ್ನು ಭಾವದುಂಬಿ ಸ್ಮರಿಸುತ್ತ ಡಾ ಟಿ ಎಸ್ ಸತ್ಯವತೀರವರು ಹೇಳುತ್ತಾರೆ- “ಸಂಪ್ರದಾಯವನ್ನು ಎಂದೂ ಉಲ್ಲಂಘಿಸದವರು ನನ್ನ ಗುರುಗಳು. ಶ್ರುತಿಶುದ್ಧಿ-ರಾಗಶುದ್ಧಿ-ಸಾಹಿತ್ಯಶುದ್ಧಿ-ಲಯಶುದ್ಧಿ ಹಾಗೂ ಭಾವಶುದ್ಧಿಗಳೆಂಬ ಪಂಚಶುದ್ಧಿಗಳು. “ಭೇಷ್ ಭೇಷ್ ಧೈರ್ಯವಾಗಿ ಹಾಡು ‘ ಎನ್ನುತ್ತಿದ್ದ ಅವರ ಮಾತುಗಳು ನನ್ನ ಕಿವಿಗಳಲ್ಲಿ ಎಂದೆಂದೂ ರಣಿಸುತ್ತವೆ. ಗುರುವಾಗಿ ಅವರ ಅತ್ಯುತ್ತಮ ಲಕ್ಷಣವೆಂದರೆ ಎಂದೂ ತಮ್ಮ ಶಿಷ್ಯರನ್ನು ಪರಸ್ಪರ ಹೋಲಿಕೆ ಮಾಡುತ್ತಿರಲಿಲ್ಲ”.
ಎಂ ಎಸ್ ಶೀಲಾ ರವರು ಸ್ಮರಿಸುತ್ತಾರೆ- “ಅವರಂತಹ ಗುರು ಯಾರಿಗೂ ಸಿಗಲಾರರು – ನ ಭೋತೋ ನ ಭವಿಷ್ಯತಿ ಎಂದು ವಿದುಷಿ ಎಂ ಎಸ್ ಶಿಲಾರವರು ಭಾವದುಂಬಿ ಹೇಳುತ್ತಾರೆ. ಅವರ ಕಂಠದಲ್ಲೇ ಶ್ರುತಿಪೆಟ್ಟಿಗೆಯೊಂದು ಸೇರಿಕೊಂಡೇ ಇತ್ತು! ಇಳಿ ವಯಸ್ಸಿನಲ್ಲೂ ಇನ್ನೂ ಕಲಿಯುವ ಹುರುಪು ಅವರದು. ತಾವೇ ಬಯಸಿದಂತೆ ಸಾಯುವತನಕವೂ ಹಾಡುತ್ತಲೇ ಸಾಗಿದರು.
ಅವರಿಗೆ ಪಕ್ಕವಾದ್ಯ ನುಡಿಸುವುದೇ ಒಂದು ಸಮ್ಮಾನ ಎಂದು ವಾದ್ಯಕಲಾವಿದರು ಎಣಿಸುತ್ತಿದ್ದರು. ಶ್ರೀಕಂಠನ್ ರವರು ಪಕ್ಕವಾದ್ಯದವರನ್ನು ‘ಹೀಗೆ ನುಡಿಸಿ’ ಇತ್ಯಾದಿಯಾಗಿ ಪೂರ್ವಸೂಚನೆ ಕೊಡಲು ಇಷ್ಟಪಡುತ್ತಿರಲಿಲ್ಲವಂತೆ. ತಾವು ವೇದಿಕ ಮೇಲೆ ಹಾಡುವಾಗಲೇ, ಆ ಸೂಚನೆಯನ್ನು ಅರಿತು ಪಕ್ಕವಾದ್ಯನುಡಿಸುವ ಕೌಶಲವನ್ನು ಅಪೇಕ್ಷಿಸುತ್ತಿದ್ದರಂತೆ. ಸಂಗೀತ ವೈದುಷ್ಯವೇ ಪ್ರಧಾನ ಎಂದು ಬಗೆದು, ಸಾಹಿತ್ಯ ಹೇಗಿದ್ದರೂ ಪರವಾಗಿಲ್ಲ ಎಂಬ ಗರ್ವದ ಧೋರಣೆ ಅವರಲ್ಲಿ ಇನಿತಾದರೂ ಇರಲಿಲ್ಲ. ಎಷ್ಟೇ ಸ್ವರಲಯವಿನ್ಯಾಸಗಲಲ್ಲಿ ಅವರ ಗಾಯನ ವಿಲಸಿಸಿದರೂ, ಸಾಹಿತ್ಯವನ್ನು ಗಮನವಿಟ್ಟು, ಭಾವಪುಷ್ಟಿಯಿಂದ ಹಾಡುವ ನ್ಯಾಯವನ್ನು ತಪ್ಪದೇ ಪಾಲಿಸುತ್ತಿತ್ತು.
ಕರ್ನಾಟಕ ಶಾಸ್ತ್ರೀಯ ಶೈಲಿಯ ರಸಿಕರನ್ನಷ್ಟೇ ಅಲ್ಲ, ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ರಸಿಕರನ್ನೂ ಇವರು ಬೆರಗಾಗಿಸಿದ ಪ್ರಸಂಗಳುಂಟು. ಚಂದ್ರಮೌಳಿರವರು ನೆನೆಸಿಕೊಳ್ಳುತ್ತಾರೆ- ಒಮ್ಮೆ ಕಿತ್ತೂರು ಉತ್ಸವದಲ್ಲಿ ಶ್ರೀಕಂಠನ್ ರವರು ಮಾಯಾಮಾಳವಗೌಳ ರಾಗಾಲಾಪನೆಯನು ಅದೆಷ್ಟು ಅದ್ಭುತವಾಗಿ ಮಂಡಿಸಿದರೆಂದರೆ, ಹಿಂದೂಸ್ಥಾನಿ ರಸಿಕರು ಎದ್ದು ನಿಂತು ಐದು ನಿಮಿಷಗಳ ಕಾಲ ಸತತ ಕರತಾಡನ ಮಾಡಿದರಂತೆ! ಸಂಗೀತವನ್ನು ನಿಜವಾದ ಆಸ್ವಾದದಲ್ಲಿ ಪ್ರಾಂತೀಯ ಶೈಲಿಯ ಭೇದವೂ ಅಡ್ಡಬರಬೇಕಿಲ್ಲ ಎನ್ನುವುದು ಇದರಿಂದ ಸಾಬೀತಾಯಿತಲ್ಲವೆ! 
ಶ್ರೀಕಂಠನ್ ರನ್ನು ಅರಸಿ ಬಂದ ಪ್ರಶಸ್ತಿ-ಸಮ್ಮಾನಗಳಲ್ಲಿ ಕೆಲವು -
·         ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೧೯೭೯
·         ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೧೯೮೧
·         ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ‘ಸಂಗೀತ ಕಲಾನಿಧಿ’ ಬಿರುದು, ೧೯೯೫
·         ಕರ್ನಾಟಕ ಸರ್ಕರದಿಂದ ಕನಕ-ಪುರಂದರ ಪ್ರಶಸ್ತಿ
·         ಕೇಂದ್ರಸರ್ಕಾರದಿಂದ ಪದ್ಮಭೂಷಣ ಪಶಸ್ತಿ, ೨೦೧೧
·         ಬೆಂಗಳುರು ಮಹಾನಗರ ಪಾಲಿಕೆಯ ‘Best Teacher Title’ ೧೯೭೩
·         ಗಾಯಕಚೂಡಾಮಣೀ – ತಿರುವನಂತಪುರಂ, ೧೯೮೩
·         ಮದರಾಸಿನ ಟಿ ಟಿ ಕೆ ಸ್ಮಾರಕ ಪ್ರಶಸ್ತಿ, ೧೯೮೩
·         ಚೌಡಯ್ಯಾ ರಾಷ್ಟ್ರಮಟ್ಟದ ಅಕಾಡೆಮಿ ಆಫ್ ಮ್ಯೂಸಿಕ ಪ್ರಶಸ್ತಿ , ೧೯೯೪
·         ಕರ್ನಾಟಕ ಸರ್ಕಾರದ ‘ಕರ್ನಾಟಕ ರಾಜ್ಯ ಸಂಗೀತ ವಿದ್ವಾನ್; ಬಿರುದು, ೧೯೯೪

ತೊಂಭತ್ತು ವಯಸ್ಸು ದಾಟಿದ ಮೇಲೂ ಅಲುಗದೆ, ಕುಗ್ಗದೆ ಭವ್ಯವಾಗಿ ಮಿಡಿಯುತ್ತಿದ್ದ ಅವರ ‘ಶ್ರೀಕಂಠಗುಣ’ ನಿಜಕ್ಕೂ ಶ್ಲಾಘ್ಯ, ಅವಿಸ್ಮರಣೀಯ. ಸಾಯುವ ಕೆಲವೇ ದಿನಗಳ ಮುಂಚೆಯಷ್ಟೇ ಅದ್ಭುತವಾದ ಸಂಗೀತಕಚೇರಿಯನ್ನು ನಡೆಸಿಕೊಟ್ಟ ಇವರನ್ನು ‘ಉಸಿರಾಡುವ ಕೊಳಲು’ ಎಂದು ವಿದ್ವಾಂಸರು ಕೊಂಡಾಡುತ್ತಾರೆ. ಕಾಲಗರ್ಭದಲ್ಲಿ ಅಡಗಿಹೋದ ಆ ಮೇರು ವ್ಯಕ್ತಿಯು ತನ್ನ ದಿವ್ಯಗಂಭೀರಕಂಠದ ಪ್ರತಿಧ್ವನಿಗಳ ಅನುರಣನೆಯನ್ನು ನಮ್ಮಲ್ಲಿ ಬಿಟ್ಟುಹೋಗಿದ್ದಾರೆ. ತುಂಬಲಾರದ ಶೂನ್ಯವನ್ನು ಅವರು ಬಿಟ್ಟು ಹೋದ ವಿದ್ವಾನ್ ಶ್ರೀಕಂಠನ್ ರವರ ಪಾದಗಳಿಗೆ ಹೃದಯಾಂತರಾಳದ ನುಡಿನಮನಾಂಜಲಿ.
*****
ಡಾ ಆರತಿ ವಿ ಬಿ
Publsihed in a souvenir in honour of Vd R K Srikantan, 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ