ಶುಕ್ರವಾರ, ಮಾರ್ಚ್ 17, 2017

ಗಣೇಶ ಬಂದ…!
‘ಗಣಪ ಬಂದ’ ಎಂದರೆ ಸಾಕು, ಎಲ್ಲೆಲ್ಲೂ ಸಂಭ್ರಮ! ಮನೆಮನೆಯಲ್ಲೂ ಆತನ ಮುದ್ದು ಮೂರ್ತಿಯನ್ನು ಮನಸಾ ಅಲಂಕರಿಸಿ, ಮೋದಕವನ್ನರ್ಪಿಸಿ, ಪೂಜಿಸಿ, ಬಸಕಿ ಹಾಕಿ, ಉಂಡು, ಉಟ್ಟು, ಸಂಭ್ರಮಿಸಿ ನಲಿಯುತ್ತ ಭೂಮಿಗೆ ನಾಕವನ್ನೇ ಇಳಿಸಿಕೊಳ್ಳುತ್ತೇವೆ! ಮಂತ್ರತಂತ್ರಳನ್ನರಿಯದ ಚಿಣ್ಣರೂ ಕೂಡ ಮುಗ್ಧಶ್ರದ್ಧೆಯಿಂದ ಮನೆಮನೆಗೂ ಹೋಗಿ ವಂತಿಗೆ ಎತ್ತಿ, ಬೀದಿ-ವಟಾರಗಳಲ್ಲಿ ಚಪ್ಪರ ಹಾಕಿ, ಗಣಪನನ್ನು ಕುಳ್ಳಿರಿಸಿ, ಹಾಡಿ, ಕುಣಿದು, ಪ್ರಸಾದ ಹಂಚಿ ನಲಿಯುತ್ತಾರೆ! ಪುಟ್ಟಬಾಲಬಾಲೆಯರು ಅಕ್ಷತೆಯ ಬಟ್ಟಲನ್ನು ಕೈಯಲ್ಲಿ ಹಿಡಿದು ‘ನೂರ ಎಂಟು ಮನೆಗಳಿಗೆ ಹೋಗಿ ಗಣಪತಿಯನ್ನು ದರ್ಶಿಸುವ ‘ತಪಸ್ಸ’ನ್ನು ಆಚರಿಸುತ್ತಾರೆ. ಪಾಶ್ಚಾತ್ಯರ ವೈಚಾರಿಕ colonizationಗೆ ಬಲಿಯಾಗಿ ಮ್ಮ ಮೂಲಸಂಸ್ಕೃತಿಯ ಬಗ್ಗೆ ನಿಷ್ಕಾರಣವಾಗಿ ಕೀಳರಿಮೆ ಬೆಳೆಸಿಕೊಂಡಂತಹ ಮನಗಳಲ್ಲಿ ಮನೆಗಳಲ್ಲಿ ಹೊರತು ಬೇರೆಲ್ಲ ಕಡೆಯಲ್ಲೂ ಈ ಮುಗ್ಧಸುಂದರಭಕ್ತಿಯ ವಿಲಾಸವಿದ್ದೇ ಇದೆ ಎನ್ನಿ!
ಗಣೇಶ ಎಂದರೆ ’ದೇವತಾ ಗಣದ ನಾಯಕ’ ಎಂದರ್ಥ. ಅಂಫ಼್ದರೆ ಆತ ಸರ್ವದಿವ್ಯಶಕ್ತಿಗಳ ಒಡೆಯ. ಆದಿಪೂಜಿತ, ವಿಘ್ನನಿವಾರಕ ಹಾಗೂ ಸಿದ್ಧಿದಾಯಕನಾದ ಗಣಪತಿಯನ್ನು ಒಲಿಸಿಕೊಂಡ ಬಳಿಕವೇ ಯಾವುದೇ ಪೂಜೆ ಫಲಿಸುವುದು ಹಾಗೂ ಹಿಡಿದ ಕಾರ್ಯ ಸಿದ್ಧಿಸುವುದು ಎಂದು ನಂಬಲಾಗುತ್ತದೆ. ಈ ನಂಬಿಕೆಗೆ ಒಂದು ಯೌಗಿಕ ಅರ್ಥವಿದೆ- ಗಣಪತಿ ಮೂಲಾಧಾರಚಕ್ರದಲ್ಲಿನ ಮೂಲ ಶಕ್ತಿಸ್ವರೂಪಿ. ಅವನ ಕೃಪೆಯಿಂದ ಇಲ್ಲಿಂದ ನಮ್ಮ ಕುಂಡಲಿನೀ ಜಾಗೃತವಾಗಿ ಮೇಲ್ಮುಖವಾಗಿ ಹರಿದಾಗಲೇ ನಮ್ಮ ಪ್ರಜ್ಞೆಗೆ ಉನ್ನತೋನ್ನತ ಗತಿ ಹಾಗೂ ಕ್ರಿಯೆಗಳಲ್ಲಿ ಸಾಫಲ್ಯ. ಸಾಧಕರು ಎಚ್ಚೆತ್ತಚೇತನರಾದಾಗ ಮೂಲಾಧಾರಚಕ್ರದಲ್ಲಿ ತೇಜೋಮಯವಾದ ತ್ರಿಕೋಣದ ಮಧ್ಯಗತವಾದ ‘ಗಜಕುಂಡಪ್ರದೇಶ’ದ ದಿವ್ಯದರ್ಶನವನ್ನು ಪಡೆಯುತ್ತಾರೆ. ಈ ‘ಗಜ’ ಶಬ್ದದ ಸಂಕೇತವಾಗಿ ಗಣಪತಿಯ ಔಪಾಸನಾತ್ಮಕ ರೂಪಕ್ಕೆ ‘ಗಜ’ದ ಮುಖ ಬಂದಿದೆ. ಇದಕ್ಕೆ ಪೂರಕವಾಗಿ ಪುರಾಣ-ಜಾನಪದ ಕಥೆಗಳೂ ಸಾಗುತ್ತವೆ.
ಡೊಳ್ಳುಹೊಟ್ಟೆ, ಅದಕ್ಕೆ ಕಟ್ಟಿದ ಹಾವು, ಉದ್ದಸೊಂಡಿಲು, ಆನೆಯ ಮೊಗ, ಮೊರದಂತಹ ಕಿವಿ, ಉಬ್ಬಿದ ಗಂಡಸ್ಥಲಗಳು, ಸಣ್ಣ ಕಣ್ಣುಗಳು, ಇಲಿ ಸವಾರಿ, ಕೈಯಲ್ಲಿ ಮೋದಕ - ಗಣಪತಿಯ ಈ ಸುಂದರ ವಿಲಕ್ಷಣರೂಪ ಭಕ್ತರ ಮನಸ್ಸನ್ನು ಸೆಳೆಯುತ್ತದೆ. ಧಾರ್ಮಿಕ ಭಕ್ತಿ ಸಂಕೇತಗಳನ್ನರಿಯದ ಮಕ್ಕಳು ಹಾಗೂ ವಿದೇಶಿಯರೂ ಕೂಡ ಥಟ್ಟನೆ ಗುರುತಿಸಿ ಮುದದಿಂದ ಆಸ್ವಾದಿಸುವ ದೇವತಾ ರೂಪ ಇದು! ಆದರೆ ಈ ರೂಪದಲ್ಲಿ ಹಲವು ಧ್ಯಾನಯೋಗ್ಯ ಸಂಕೇತಗಳಿವೆ ಎನ್ನುವುದನ್ನರಿತಾಗ ನಮ್ಮ ಭಕ್ತಿಗೆ ಜ್ಞಾನದ ಸಂಸ್ಪರ್ಶವೊದಗುತ್ತದೆ.
ಗಣಪತಿಯ ಭೀಮಕಾಯ ಹಾಗೂ ಲಂಬ ಉದರಗಳು ಆತನು ಸಕಲ ಬ್ರಹ್ಮಾಂಡಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿರುವ ಹಿರಣ್ಯಗರ್ಭ ಎನ್ನುವುದನ್ನು ಸಂಕೇತಿಸುತ್ತದೆ. ಗಜವು ಪ್ರಣವದ ಒಂದು ಭಂಗಿ ಎನ್ನುತ್ತವೆ ಯೋಗಶಾಸ್ತ್ರಗಳು. ಅದರ ತಿರುವು (ಇಲ್ಲಿ ಸೊಂಡಿಲೇ ಸಂಕೇತ) ಬಲಕ್ಕೆ ಇದ್ದಾಗ (ಬಲಮುರಿ) ಶ್ರೇಯಸ್ಸನ್ನು (ಮೋಕ್ಷ) ಕೊಡುತ್ತದೆ. ಆ ತಿರುವು ಎಡಕ್ಕೆ ಇದ್ದಾಗ (ಎಡಮುರಿ) ಪ್ರೇಯಸ್ಸನ್ನು (ಲೌಕಿಕವಾದ ಭೋಗ, ಸಿದ್ಧಿ, ವೃದ್ಧಿ, ಬುದ್ಧಿ, ಹಾಗೂ ವಿಘ್ನನಿವಾರಣೆಗಳು) ಪ್ರಸಾದಿಸುತ್ತದೆ. ಅದರಂತೆ ಪ್ರಣವರೂಪಿಯಾದ ಗಣಪತಿ ಬಲಮುರಿ ಅಥವಾ ಎಡಮುರಿ ಗಣಪತಿ ಎನಿಸಿ ಉಪಾಸನಾನುಸಾರವಾಗಿ ಫಲವೀಯುತ್ತಾನೆ.
ಮೂಲಾಧಾರ-ಪದ್ಮದ ವರ್ಣ ಕೆಂಪು. ಆದ್ದರಿಂದ ಆತ ಕೆಂಪು ಕಾಂತಿಯಿಂದ ಶೋಭಿಸುವ ರಕ್ತವಸನಧಾರಿ. ಹೊಟ್ಟೆಗೆ ಕಟ್ಟಿದ ಹಾವು ‘ಜಾಗೃತಕುಂದಲಿನಿ’ಯ ಪ್ರತೀಕ. ಚಂಚಲ ಚಪಲ ಮನಸ್ಸನ್ನು ಸಂಕೇತಿಸುವುದೇ ಮೂಷಕ. ಅದನ್ನು ಸ್ವಾಧೀನದಲ್ಲಿಟ್ಟುಕೊಂಡಿರುವ ಗಣಪತಿಯು ‘ಇಂದ್ರಿಯಜಯಿ’ ಎಂದರ್ಥ. ಜೊತೆಗೆ ಜಗನ್ಮಾನಸವನ್ನು ನಿಯಂತ್ರಿಸುವ ವಿಭುವು ಆತನೇ, ಅವನ ಕೃಪೆಯಿಂದ ಮಾತ್ರ ಮನೋಬುದ್ಧಿಗಳು ನಮ್ಮ ಹಿಡಿತಕ್ಕೆ ಸಿಕ್ಕಾವು ಎನ್ನುವುದೂ ಇಲ್ಲಿ ಸೂಚ್ಯ. ಕರದಲ್ಲಿ ಹಿಡಿದ ಪಾಶ ಆತ ಜೀವಿಗಳನ್ನು ತನ್ನ ಮಾಯಾಪಾಶದಿಂದ ಕಟ್ಟಿ ಲೋಕನಾಟಕವನ್ನು ನಡೆಸುತ್ತಾನೆ ಎನ್ನುವುದನ್ನು ಸಾರಿದರೆ, ಅಂಕುಶವು ಆತ ಜೀವಿಗಳನ್ನು ನಿಯಂತ್ರಿಸುತ್ತಾನೆ ಎನ್ನುವುದನ್ನು ಸೂಚಿಸುತ್ತದೆ. ಅಭಯಹಸ್ತವು ನಮಗೆಲ್ಲ ರಕ್ಷಣೆಯ ಭರವಸೆಯನ್ನು ನೀಡಿದರೆ, ಮೋದಕವು ಆತನ ನಿತ್ಯ ಆನಂದಸ್ವರೂಪವನ್ನು ಸಂಕೇತಿಸುತ್ತದೆ.
ಸಣ್ಣ ಕಣ್ಣುಗಳು ಅವನ ಸೂಕ್ಷ್ಮದರ್ಷಿತ್ವವನ್ನೂ, ಏಕಾಗ್ರತೆಯನ್ನೂ, ಅಂತರ್ಮುಖತೆಯನ್ನು ಸೂಚಿಸಿದರೆ, ಅಗಲವಾದ ಕಿವಿಗಳು ಆತ ‘ಬಹುಶ್ರುತ’ತ್ವವನ್ನು (ವಿದ್ವತ್) ಸೂಚಿಸುತ್ತದೆ. ಆತನ ಉದ್ದನೆಯ ಸೊಂಡಿಲು ಆತನ ತೀಕ್ಷ್ಣ ಜಿಜ್ಞಾಸಾಪ್ರವೃತ್ತಿಯನ್ನು ತೋರಿದರೆ, ಉಬ್ಬಿದ ಗಂದಸ್ಥಲಗಳು ಆತನ ವೈಚಾರಿಕ (IQ) ಹಾಗೂ ಭಾವನಾತ್ಮಕ ಶಕ್ತಿಗಳ (EQ) ಸಮರಸ ವಿಕಾಸವನ್ನು ಸಂಕೇತಿಸುತ್ತವೆ. ಈ ಎರಡೂ ಶಕ್ತಿಗಳ ಸಮರಸವಿಕಾಸವೂ ಪರಿಪೂರ್ಣವ್ಯಕ್ತಿತ್ವದ (perfect personality)ವಿಶೇಷವಲ್ಲವೆ?
ಗಣಪತಿಯ ಕಥೆಗಳಲ್ಲೂ ನಮಗೆ ಸಂದೇಶಗಳಿವೆ. ತಾಯಿಯ ಸೇವೆಗೆ ನಿಂತ ಆತ ತಂದೆಯ ಆಗ್ರಹವನ್ನೂ ಸಹಿಸಿದ, ಪ್ರಾಣವನ್ನೂ ತೆತ್ತ! ಆ ಅವಿಚಲ ಮಾತೃಭಕ್ತಿಯ ಫಲವಾಗಿ ಸರ್ವಮಾನ್ಯನಾದ, ಆದಿಪೂಜಿತನಾದ, ಗಣಗಳ ಆಧಿಪತ್ಯವನ್ನು ಗೆದ್ದು ಗಣಾಧಿಪನಾದ. ಗಣಪತಿ-ಕಾರ್ತಿಕೇಯರ ನಡುವೆ ಮುಲ್ಲೋಕವನ್ನು ಸುತ್ತಿಬರುವ ಸ್ಪರ್ಧೆಯಾಯಿತಂತೆ. ಕಾರ್ತಿಕೇಯನು ನವಿಲನ್ನೇರಿ ಹೊರಟನಂತೆ. ಆದರೆ ಗಣಪ ’ಸಕಲಬ್ರಹ್ಮಾಂಡವನ್ನು ಬಸಿರಲಿ ಧರಿಸಿ ಪೊರೆಯುವ’ ತನ್ನ ತಾಯಿ ಗೌರಿಯನ್ನೇ ಸುತ್ತಿ ಬಂದು ಸ್ಪರ್ಧೆಯನ್ನು ಗೆದ್ದನಂತೆ! ಈ ಮೂಲಕ ಕೇವಲ ದೇಹಬಲಕ್ಕಿಂತ ಭಕ್ತಿಯುಕ್ತಿಗಳು ಮೇಲೆನ್ನುವ ಸಾಮಾನ್ಯನೀತಿಯನ್ನು ಸಾರಿದ ಗಣಪ. ಅದಲ್ಲದೆ ತಾಯಿಯ ಸಾನ್ನಿಧ್ಯ ಸಕಲ ಬ್ರಹ್ಮಾಂಡಗಳಿಗಿಂತಲೂ ಮಿಗಿಲು ಎಂಬುದನ್ನೂ ತೋರಿದ.  
ಹೀಗೆ, ವಿಘ್ನನಿವಾರಣೆ, ಚಾತುರ್ಯ, ನೈಪುಣ್ಯ, ಕಾರ್ಯಸಿದ್ಧಿ, ಹಾಸ್ಯರಸ, ಯೋಗಸಿದ್ಧಿ ಮುಂತಾದ ಹಲವು ವಿಷಯಗಳಿಗೆ ಗಣಪತಿಯೇ ಅಧಿನಾಯಕನೆನಿಸಿದ್ದಾನೆ. ಗಣಿತ ಹಾಗೂ ಸಂಗಣಕಜ್ಞಾನಕ್ಕೆ ಸಂಬಂಧಿಸಿದ mathematical and computational intelligenceಗೂ ಗಣಪತಿಯೇ ಅಧಿದೇವತೆ. ಮೂಲಾಧಾರಸ್ಥನಾದ ಈತನೇ ನಮ್ಮ ಪ್ರಜ್ಞೆಯನ್ನು ಊರ್ಧ್ವಮುಖವಾಗಿ ಪ್ರಚೋದಿಸಿ ಆದ್ಯಾತ್ಮಿಕ ಜೀವನಯಾನಕ್ಕೆ ನಾಂದಿಹಾಕುವವನೂ ಆಗಿದ್ದಾನೆ. ಗಣಪತಿಯ ಶುಭಕರ ಸ್ವರೂಪದ ಧ್ಯಾನದಲ್ಲಿ ಸ್ಫುರಿಸುವ ತತ್ವಾರ್ಥಗಳು ಸಾಧಕರಿಗೆ ಅವರವರ ಯೋಗ್ಯತಾನುಸಾರ ಅರ್ಥವಾಗುತ್ತವೆ, ಫಲವೀಯುತ್ತವೆ.
ಅಂತೂ ಸರ್ವಜನಪ್ರಿಯನಾದ ಗಣೇಶ ಎಂದಿನಂತೆ ದೊಡ್ಡಕೆರೆಯಲ್ಲೆದ್ದು ಬಂದಿದ್ದಾನೆ, ಕಾಯಿ-ಕಡುಬುಗಳನ್ನು ಸವಿದು, ಪೂಜೆಯನ್ನೊಪ್ಪಿಸಿಕೊಂಡು ನಮ್ಮೆಲ್ಲರ ಹೃದಯವೆಂಬ ಚಿಕ್ಕಕೆರೆಯಲ್ಲಿ ಮುಳುಗಿ ತಲ್ಲೀನನಾಗುತ್ತಾನೆ. ಗಣಪನ ಶ್ರೀಕೃಪೆಯು ನಮ್ಮ ವೈಯಕ್ತಿಕ ಹಾಗೂ ವೈಶ್ವಿಕ ಬದುಕನ್ನು ಸಮೃದ್ಧವೂ ಸುಂದರವೂ ಸಾರ್ಥಕವೂ ಪಡೆಸಲಿ ಎಂದು ಪ್ರಾರ್ಥಿಸೋಣ.

ಡಾ ಆರತಿ ವಿ ಬಿ
Publsihed in Samyukta Karnataka, 2014 (Ganesh chaturthi bcakground)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ