ಶುಕ್ರವಾರ, ಮಾರ್ಚ್ 17, 2017

ಬೊಂಬೆಹಬ್ಬ
ಲೇಖಕರು- ಡಾ ಆರತಿ ವಿ ಬಿ
ಶರನ್ನವರಾತ್ರವನ್ನು ’ಬೊಂಬೆ ಹಬ್ಬ’ ಎಂದೆ ಕರೆಯುವ ವಾಡಿಕೆ ನಮ್ಮಲ್ಲಿದೆ. ’ಕೊಲುವು ಪಂಡುಗ’ ಎಂದು ಆಂಧ್ರದಲ್ಲೂ, ’ಕೋಲಂ’ ಎಂದು ತಮಿಳೂನಾಡಿನಲ್ಲೂ ಕರೆಯುತ್ತಾರೆ. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಗಳಲ್ಲಿನ ಭಾಗಗಳಲ್ಲಿ ಪ್ರಚಲಿತವಿರುವ ವಿಶಿಷ್ಟ ಪದ್ಧತಿ ಈ ಬೊಂಬೆ ಜೋಡನೆ. ನವರಾತ್ರದ ಅನೇಕ ಧಾರ್ಮಿಕ ಅಚರಣೆಗಳ, ವಿಧಿವಿಧಾನಗಳ ನಡುವೆ ಜಗತ್ತಿನ ಗಮನವನ್ನೇ ಸೆಳೆದಿರುವ, ಜನಮಾನಸವನ್ನು ಸೂರೆಗೊಂಡಿರುವುದು ಈ ’ಬೊಂಬೆ ಜೋಡಿಸುವ’ ಸುಂದರ ಪದ್ಧತಿ.
ನಮ್ಮ ಮೈಸೂರು ನಗರದ ಜಗತ್ಪ್ರಸಿದ್ಧ ದಸರಾ ಹಬ್ಬದಲ್ಲೂ, ಬಹಳ ಗಮನೀಯವಾದದ್ದು ಅರಮನೆಯ ’ಬೊಂಬೆ ಪ್ರದರ್ಶನ’ವೇ ಆಗಿದೆ. ಈ ಪದ್ಧತಿಗೆ ಆಧಾರವಾಗಿ ಅನೇಕ ಕಥೆಗಳು ಇವೆ. ಅವುಗಳ ಪೈಕಿ ಹೆಚ್ಚು ಜನಜನಿತ ಕಥೆ – ’ಸುರಥನೆಂಬ ಮಹಾರಾಜ ಸುಮೇಧ ಮಹರ್ಷಿಗಳಿಂದ ದೀಕ್ಷಿತನಾಗಿ ದೇವಿಯ ಆರಾಧನೆಯಲ್ಲಿ ತೊಡಗಿದಾಗ, ದೇವಿಯ ಮೃಣ್ಮಯ ವಿಗ್ರಹವನ್ನು ನಿರ್ಮಿಸಿ ಪ್ಯೂಜಿಸಲಾರಂಭಿಸಿದನಂತೆ. ಅಂದಿನಿಂದ ಮಣ್ಣಿನ ಪ್ರತಿಮೆಗಳನ್ನು ಪೂಜಿಸುವ ಪದ್ಧತಿ ಬೆಳೆಯಿತು’ ಎಂದು. ಏನೇ ಇರಲಿ ಮಣ್ಣಿನಲ್ಲಿ ನಿರ್ಮಿಸಿದ ದೇವತಾಮೂರ್ತಿಯನ್ನು ಪೂಜಿಸುವುದು ಅನಾದಿಯಿಂದಲೂ ಬಂದ ಪದ್ಧತಿ. ಆದರೆ ದಸರಾ ಬೊಂಬೆಗಳ ವಿಶೇಷವೆಂದರೆ ಇಲ್ಲಿ ಬಗೆ ಬಗೆಯ ವರ್ಣವಿನ್ಯಾಸಗಳ ಬೊಂಬೆಗಳಿರುತ್ತವೆ. ಭಕ್ತರ ಶಕ್ತಿ ಉತ್ಸಾಹಗಳಿಗನುಗುಣವಾಗಿ ಬೊಂಬೆಗಳ ಸಂಖ್ಯೆ ಹತ್ತರಿಂದ ಸಾವಿರಾರು ತನಕ ಏರಬಲ್ಲದು. ದಶಕಗಳಿಂದ ಮನೆತನದ ಬೊಂಬೆಗಳನ್ನು ಇಂದಿಗೂ ಜೋಪಾನವಾಗಿ ಕಾಪಾಡಿಕೊಳ್ಳುತ್ತ ಬಂದವರು ಅನೇಕರಿದ್ದಾರೆ.
ಬೊಂಬೆ ಜೋಡಿಸುವುದೇ ಒಂದು ದೊಡ್ಡ ಸಂಭ್ರಮ. ಮನೆಮಂದಿಯೆಲ್ಲ ಸೇರಿ ತಮ್ಮ ಮನೆಯ ಪೆಟ್ಟಿಗೆ, ಹಲಗೆ, ಡಬ್ಬಿ, ಇಟ್ಟಿಕೆ,  ಪೀಠೋಪಕರಣ, ಮುಂತಾದವನ್ನೂ ಈ ಸಲುವಾಗಿ ಜಾಣ್ಮೆಯಿಂದ ರಚನಾತ್ಮಕವಾಗಿ ಬಳಸುತ್ತಾರೆ. ಬೊಂಬೆಗಳನ್ನು ಜೊಡಿಸುವಾಗ ಮಕ್ಕಳಿಗಂತೂ ಹೇಳತೀರದ ಸಂಭ್ರಮ! ಪ್ರತಿವರ್ಷವೂ ಒಂದಾದರೂ ಹೊಸಬೊಂಬೆಯನ್ನು ತರುವ ಸಂಭ್ಮವೂ ಒಂದು! ಹಸಿ ಮಣ್ಣನ್ನು ಹಲಗೆಯ ಮೇಲೆ ಅಥವಾ ನೆಲದ ಮೇಲೆ ಹರಡಿ, ಅದರ ಮೇಲೆ ರಾಗಿ ಮುಂತಾದ ಧಾನ್ಯಗಳನ್ನು ಸಿಂಪಡಿಸಿ ಪಾರ್ಕ್, ಹೊಲ-ಗದ್ದೆ, ಕಾಡುಗಳನ್ನು ಬೆಳೆಸುವ ಕೆಲಸವಂತೂ ನಾಲ್ಕಾರು ದಿನಗಳ ಮುಂಚೆಯೇ ಶುರುವಾಗುತ್ತದೆ. ಹಸಿರು ಚಿಗುರು ಬಂತೋ ಇಲ್ಲವೋ ಎಂದು ಘಂಟೆಘಂಟೆಗೂ ಬಳಿಸಾರಿ ನೋಡುವ ಕುತೂಹಲವು ಮಕ್ಕಳಲ್ಲಿರುವಂತೆ ದೊಡ್ಡವರಲ್ಲೂ ಇರದಿರದು! ಕಲಶಸ್ಥಾಪನೆಯಾಗಿ ಪೂಜೆ ಶುರು ಆಗುವವರೆಗೂ ಈ ಬೊಂಬೆಗಳನ್ನು ’ಜೋಡಿಸುವ’ ಕೆಲಸ ಎದಬಿಡದೆ ಸಾಗುತ್ತದೆ! ಎಷ್ಟೇ ’ಕೈಲಾಗದು’, ’ಅನುಕೂಲವಿಲ್ಲ’ ಎನ್ನುವವರೂ ಕೂಡ ಪಟ್ಟದ ಬೊಂಬೆ ಮತು ಕಲಶಗಳನ್ನಾದರೂ ಜೋಡಿಸುವುದನ್ನು ತಪ್ಪಿಸರು. ಒಂಭತ್ತು ದಿನಗಳು ಆಚರಣೆ ಮಾಡಲಾಗದವರು ’ಷಷ್ಟಿ’ ತಿಥಿಯಿಂದ ಅಥವಾ ಅಷ್ಟಮೀ ನವಮೀಗಳಂದಾದರೂ ಒಂದಷ್ಟು ಬೊಂಬೆಗಳನ್ನು ಜೋಡಿಸಿ ಪೂಜೆ ಸಲ್ಲಿಸುತ್ತಾರೆ.
ಈ ಬೊಂಬೆ ಜೋಡನೆಯಲ್ಲಿ ಒಂದು ವಿನ್ಯಾಸವಿದೆ. ಮೆಟ್ಟಿಲುಗಳ ಸಾಲುಗಳನ್ನು ನಿರ್ಮಿಸಿ, ಅದರ ಮೇಲೆ ಶುಭ್ರ ಬಿಳಿಯಬಟ್ಟೆಯನ್ನು ಹಾಸಿ ಮೇಲುಗಡೆಯಿಂದ ಕೆಳಗಿನವರೆಗೆ ಬೊಂಬೆಗಳನ್ನು ಜೋಡಿಸಲಾಗುತ್ತದೆ. ಐದಕ್ಕೊಂದು ನಿರ್ದಿಷ್ಟ ಕ್ರಮವನ್ನು ತಿಳಿದವರು ಪಾಲಿಸುತ್ತಾರೆ. ಅತ್ಯಂತ ಮೇಲಿನ ಸಾಲಿನ ಮಧ್ಯದಲ್ಲಿ ’ಪಟ್ಟದಗೊಂಬೆ’ಗಳನ್ನು ಇಡಲಾಗುತ್ತದೆ. ಇವು ’ಪ್ರಕೃತಿ-ಪುರುಷ’ರ ಸಂಕೇತವೆಂದೂ, ’ರಾಜಾ-ರಾಣಿ’ ಎಂದೂ ಬಗೆ ಬಗೆಯಾಗಿ ಜನರು ವ್ಯಾಖ್ಯಾನಿಸುತ್ತಾರೆ. ಮೇಲಿನ ಸಾಲಿನಲ್ಲಿ ಬ್ರಹ್ಮ-ವಿಷ್ಣು-ರುದ್ರರು, ಅವರ ಶಕ್ತಿಗಳಾದ ಸರಸ್ವತೀ-ಲಕ್ಷ್ಮೀ-ಪಾರ್ವತಿಯರು, ಗಣೇಶ, ಕಾರ್ತಿಕೇಯಾದಿಗಳ ಬೊಂಬೆಗಳನ್ನು ಜೋಡಿಸಲಾಗುತ್ತದೆ. ಅದರ ಕೆಳಗೆ ಇಂದ್ರಾದಿ ದೇವತೆಗಳು, ಋಷಿಗಳು, ಆ ಬಳಿಕ ದಶಾವತಾರಗಳು, ರಾಮಾಯಣ, ಮಹಾಭಾರತ ಅಥವಾ ಪುರಾಣಕಥಾ ಪ್ರಸಂಗಗಳನ್ನು ಬಿಂಬಿಸುವ ಬೊಂಬೆಗಳನ್ನು ಜೋಡಿಸಲಾಗುತ್ತದೆ. ಆ ಬಳಿಕ ಪ್ರಸಿದ್ಧ ಯೋಗಿಗಳು, ರಾಜ-ರಾಣಿಯರು, ಶೂರರು, ದೇಶಭಕ್ತರು, ವಿಜ್ಞಾನಿಗಳು ಮುಂತಾದ ಸಮಾಜದ ಹೆಸರಾಂತ ವ್ಯಕ್ತಿಗಳ ಬೊಂಬೆಗಳನ್ನು ಇಡುತ್ತಾರೆ. ಸಂಗೀತ, ನೃತ್ಯ, ನಾಟಕ, ಪೊಯ್ ಕುದುರೆ, ಮೆರವಣಿಗೆ, ಸೈನ್ಯ, ಅನ್ನ-ಸಮಾರಾಧನೆ, ಮದುವೆ, ವ್ಯಾಪಾರ, ಕೃಷಿ, ಕ್ರೀಡೆ ಮುಂತಾದವುಗಳನ್ನು ಚಿತ್ರಿಸುವ ಬೊಂಬೆಗಳು, ಗೋಸಂಪತ್ತು, ಅಶ್ವ-ಗಜಸಂಪತ್ತು ಹಾಗೂ ಪಶು-ಪಕ್ಷಿಗಳ ಬೊಂಬೆಗಳನ್ನು ಜೋಡಿಸಲಾಗುತ್ತದೆ. ಇದಲ್ಲದೆ ವನ್ಯಸಂಪತ್ತನ್ನು ಬಿಂಬಿಸುವ ಪುಟ್ಟ ಉಪವನಗಳನ್ನು, ಬೆಟ್ಟಗಳನ್ನು, ಕೊಳ, ಬಾವಿ, ಗುಡಿ, ಗೋಪುರ, ಗುಡಿಸಲು, ಅರಮನೆಗಳು, ದಿನೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಅಡುಗೆಮನೆ, ಒಲೆ, ಪಾತ್ರೆ-ಸೌಟುಗಳು, ತಟ್ಟೆ, ಲೋಟಗಳು, ಧಾನ್ಯ, ತರಕಾರಿಗಳು, ಹಣ್ಣು, ಸಿಹಿತಿನಿಸು, ತಾಂಬುಲಾದಿಗಳು, ಕನ್ನಡಿ, ಬಾಚಣಿಗೆ, ಪುಸ್ತಕಗಳು, ಲೇಖನಿಗಳು, ಆಯುಧಗಳು, ವಾದ್ಯಗಳು ---- ಹೀಗೆ ಪಟ್ಟಿ ಕೊನೆಯಿಲ್ಲದೆ ಸಾಗುತ್ತ ಹೋಗುತ್ತದೆ. ಇದಕ್ಕೆ ಆಧುನೀಕರಣದ ಪ್ರಭಾವವೂ ಉಂಟಾಗುತ್ತಿದೆ ಎನ್ನಿ! ಫ್ರಿಡ್ಜ್, ಡೈನಿಂಗ್ ಟೇಬಲ್, ಸೋಫಾ, ಟೀವೀ, ಕಂಪ್ಯೂಟರ್, ಬಸ್, ಕಾರ್, ರೈಲು, ಮೊಬೈಲ್, ಕ್ರಿಕೆಟ್, ಹೋಟೆಲ್, ಸಿನಿಮಾ ಥಿಯೇಟರ್, ಇತಿಹಾಸ ಪ್ರಸಿದ್ಧ ಘಟನೆಗಳು, ಸ್ವಾತಂತ್ರ್ಯಚಳುವಳಿಯ ದೃಶ್ಯಗಳು ಇತ್ಯಾದಿಗಳೂ ಸೇರುತ್ತ ಬಂದಿವೆ! ಕಲ್ಪನಾಲೋಕವು ಬೆಳೆದಂತೆಲ್ಲ ಈ ಬೊಂಬೆಗಳ ಬಗೆಗಳು, ’ಥೀಮ್’ ಗಳು ಬೆಳೆಯುತ್ತವೆ. ಎಲ್ಲವನ್ನೂ ಅಂಗೀಕರಿಸಿ ತನ್ನ ಗರ್ಭದಲ್ಲಿ ಅಡಗಿಸಿಕೊಳ್ಳುವ ಸನಾತನ ಸಂಸ್ಕೃತಿಗೆ ನೂತನಾಂಶಗಳು ಸದಾ ಸ್ವಾಗತಾರ್ಹವೇ. ಒಟ್ಟಿನಲ್ಲಿ ಅಮೂರ್ತವಾದ ಪರತತ್ವದಿಂದ ಹಿಡಿದು ದೇವತೆಗಳು, ಮಾನವರು ಹಾಗೂ ಚರಾಚರಜಗತ್ತಿನ ಎಲ್ಲ ಚಿಕ್ಕಪುಟ್ಟ ಅಸ್ತಿತ್ವಗಳೂ ಒಂದೇ ದಿವ್ಯತತ್ವದ ಅಭಿವ್ಯಕ್ತಿಗಳು’ ಎನ್ನುವ ವೇದಾಂತದ ಭಾವಸ್ವಾರಸ್ಯವನ್ನು ಈ ಬೊಂಬೆಜೋಡನೆಯಲ್ಲಿ ಸಂಕೇತಿಸಲಾಗಿದೆ. ಈ ಎಲ್ಲದರ ಮಧ್ಯದಲ್ಲಿ ಕಲಶ ಸ್ಥಾಪನೆ ಮಾಡಿ ಆರಾಧಿಸಲಾಗುತ್ತದೆ.   
ಇನ್ನು ತಮ್ಮ ತಮ್ಮ ವೃತ್ತಿಗಳಿಗೆ ಸಂಬಂಧಿಸಿದ ವಸ್ತು- ಉಪಕರಣಗಳನ್ನು ದೇವರ ಮುಂದಿಟ್ಟು ಪೂಜಿಸುವ ವಾಡಿಕೆ ಇದೆ. ರೈತರು ತಮ್ಮ ಕೃಷಿ ಸಲಕರಣೆಗಳನ್ನು, ಗೋವಳರು ಹಾಲಿನ ಪದಾರ್ಥಗಳನ್ನು, ಬಡಗಿ, ಅಕ್ಕಸಾಲಿಗ ಮುಂತಾದ ಕಸುಬಿನವರು ತಮ್ಮ ತಮ್ಮ ವೃತ್ತಿಯ ಉಪಕರಣಗಳನ್ನು ದೇವರ ಮುಂದಿಟ್ಟು ಪೂಜಿಸುತ್ತಾರೆ. ಸರಸ್ವತೀ ಪೂಜೆಯಂದು ಮನೆಮನೆಯಲ್ಲೂ ಪುಸ್ತಕಗಳು, ಲೇಕನಿಗಳು, ವಾದ್ಯಗಳು ದೇವಿಯೆದುರು ಸಾಲಂಕೃತವಾಗಿ ಕೂತು ಫೂಜೆಯನ್ನು ಪಡೆಯುತ್ತವೆ. ಆಯುಧಪೂಜೆಯ ದಿನದಂದು, ಮನೆಯ ಎಲ್ಲ ಯಂತ್ರಗಳೂ, ದಿನೋಪಯೋಗಿ ವಸ್ತುಗಳೂ ಹೊಸ ಹೊಳಪನ್ನೂ, ಹೂವು, ಗಂಧ, ಕುಂಕುಮ ಅಥವಾ ವಿಭೂತಿಪಟ್ಟೆಗಳ ಸಿಂಗಾರದಿಂದ ಮಿನುಗುತ್ತವೆ. ಮನೆಮನೆಗಳೆದುರು ಹಾಗೂ ಬೀದಿಗಳಲ್ಲಿ ವಾಹನಗಳು ಶುಭ್ಹ್ರಕಾಂತಿಯಿಂದ ಮಿನುಗುತ್ತಿದ್ದು ಹೂವು ಹಾರ ಬಾಳೆಕಂಬ ಕುಂಕುಮಗಳಿಂದ ನಲಿಯುತ್ತಿರುತ್ತವೆ. ಅಂತೂ ಇವೆಲ್ಲಕ್ಕೂ ಕೃತಜ್ಞತಾಪೂರ್ವಕ ಪೂಜೆ ಸಲ್ಲುತ್ತದೆ.
ಬೊಂಬೆ ಹಬ್ಬಕ್ಕೆ ಹೆಣುಮಕ್ಕಳು ಹೊಸಬಟ್ಟೆ ತೊಟ್ಟು, ಅದಕ್ಕೆ ಒಪ್ಪುವ ಸಿಂಗಾರ ಮಾಡಿಕೊಂಡು, ಗುಂಪುಗಳಲ್ಲಿ ಸೇರಿ ಕೋಲಾಟವಾಡುತ್ತ ಮನೆಮನೆಗೆ ಹೋಗುವ ಸುಂದರ ಸಂಪ್ರದಾಯವಿದೆ. (ದೇವಿಯನ್ನು ’ಹಲ್ಲೀಸಲಾಸ್ಯಸಂತುಷ್ಟಾ’ ಎಂದು ಸ್ತುತಿಸಲಾಗುವುದು ಇಲ್ಲಿ ಸ್ಮರಣೀಯ. ಹಲ್ಲೀಸಕ್ರೀಡೆ ಎಂದರೆ ಕೋಲಾಟ). ಮನೆಮನೆಯಲ್ಲೂ ’ಬೊಂಬೆಹಾಡು’ಗಳನು ಹಾಡಿ, ’ಬೊಂಬೆಬಾಗಿನ’ ಸ್ವೀಕರಿಸುತ್ತಾರೆ. ಅವರಿಗಾಗಿಯೇ ಉಸುಲಿ, ಸಿಹಿತಿನಿಸು, ಬಳೆ ಮತ್ತು ಮಂಗಳದ್ರವ್ಯಗಲನ್ನು ಬಣ್ಣದ ಪುಟ್ಟ ’ಬೊಂಬೆ-ಬಾಗಿನ’ಗಳನ್ನು ಮನೆಮನೆಗಳಲ್ಲಿ ಸಿದ್ಧಪಡಿಸಿಟ್ಟಿರುತ್ತಾರೆ. ಈ ಸುಂದರ ಸಂಪ್ರದಾಯಗಳು ನಾಗರೀಕತೆಯ ಬಿರುಬೆಳಕಿನಲ್ಲಿ ಮಂಕಾಗುತ್ತಿವೆಯಾದರೂ, ಇಂದಿಗೂ ಹಲವು ಗ್ರಾಮಗಳಲ್ಲಿ ಹಾಗೂ ಸಮೂಹಗಳಲ್ಲಿ ಪ್ರಚಲಿತವಿರುವುದು ಸಂತಸದ ಸಂಗತಿ. ಆಸ್ತಿಕರು ಹಾಗೂ ಕಾಲಾಭಿಜ್ಞರು ಈ ಬೊಂಬೆ ಹಬ್ಬವನ್ನು ಕಳೆಗುಂದದಂತೆ ಕಾಪಾಡಲು ಹಲವು ಯತ್ನಗಳನ್ನು ಮಾಡುತ್ತಿದ್ದಾರೆ. ಈಗಂತೂ ನಗರ, ಜಿಲ್ಲ, ರಾಜ್ಯಮಟ್ಟದ ಬೊಂಬೆ ಸ್ಪರ್ಧೆಗಳು ಕಾಣಬರುತ್ತವೆ. ಸ್ಪರ್ಧೆಯ ಆಸಕ್ತಿಯಿಂದ ನಾಸ್ತಿಕರೂ, ಇದಾವುದಕ್ಕೂ ’ಟೈಮ್’ ಇಲ್ಲದ ’ಬುಸಿ’ ಆಧುನಿಕರೂ ಕೂಡ ಬೊಂಬೆ ಹಬ್ಬದ ಸಂಪ್ರದಾಯವನ್ನು ಕಲಿತು ಆಚರಿಸಲಾರಂಭಿಸುತ್ತಿದ್ದಾರೆಂದ ಮೇಲೆ ಇದರ ಸಾರ್ವಕಾಲಿಕ ಆಕರ್ಷಣೆ ಅದೆಷ್ಟೆಂಬುದು ಸ್ವಯಂಸ್ಪಷ್ಟವಾಗುತ್ತದೆ.    
ಬೊಂಬೆ ಜೋಡನೆಯ ಜೊತೆಗೆ ಅವುಗಳಲ್ಲಿನ ಪೌರಾಣಿಕ ಕಥಾವಿಶೇಷಗಳನ್ನೂ, ಭಾವಸ್ವಾರಸ್ಯಗಳನ್ನೂ ಅರಿತು, ಪರಸ್ಪರ ಹೇಳಿಕೊಳ್ಳುತ್ತ ಆನಂದಿಸುವಂತಾದರೆ ಹಬ್ಬವು ಇನ್ನೂ ಸಂತಸದಾಯಕವಾಗುತ್ತದೆ.
ಪುಟ್ಟಮಕ್ಕಳಿಗೆ ಔಷಧಿಯನ್ನು ಜೇನುತುಪ್ಪದಲ್ಲಿ ಬೆರೆಸಿ ತಿನ್ನಿಸುವಂತೆ, ತತ್ವಚಿಂತನೆಯನ್ನು ಇಂತಹ ಸುಂದರ ಕಲಾತ್ಮಿಕ ಸಂಸ್ಕೃತಿಯಲ್ಲಿ ಬೆಸೆದು ಪಾಮರಮನಸ್ಸಿಗೆ ಅಂದಿಸುವ ಈ ಪರಿ ಅರ್ಥಪೂರ್ಣ. ಒಂದೆಡೆ ಧರ್ಮಚಿಂತನೆಯೂ ಹರಡಿದಂತಾಯಿತು, ಮತೊಂದೆಡೆ ಕಲೆ, ಕಲ್ಪನೆ, ಸಂಭ್ರಮ, ಸಂತೋಷಗಳಿಗೂ ಪೋಷಣೆ ಸಿಕ್ಕಂತಾಯಿತು!


Publsihed in Vijayavani 2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ