ಶುಕ್ರವಾರ, ಮಾರ್ಚ್ 17, 2017

ಬೆಂಗಳೂರಿನ ಮನೆಯೂಟ
ಬೆಂಗಳೂರು Silicon city ಎಂದೂ, ಕರ್ನಾಟಕದ ರಾಜಧಾನಿ ಎಂದೂ, ಭಾರತದ smart ಸಿಟಿಗಳಲ್ಲೊಂದು ಎಂದೂ ಪ್ರಸಿದ್ದವಾಗಿದೆ. ಆದರೆ ಈ ಬೆಂಗಳೂರಿನ ಜನಜೀವನದಲ್ಲಿ ಸ್ವಾರಸ್ಯಕರವಾದ ಮತ್ತೊಂದು ಗುಣ - ಅದರ ಆಹಾರದ ವೈವಿಧ್ಯ. ‘ಎಡವಿ ಬಿದ್ದಲ್ಲಿ ಹೋಟೆಲ್’ ಎಂಬಂತೆ ಎಲ್ಲೆಲ್ಲೂ ದರ್ಶಿನಿಗಳೂ, ಹೋಟೆಲ್ ಗಳೂ ಕಾಫಿ ಪಾಯಿಂಟ್ ಗಳೂ ಕಂಗೊಳಿಸುತ್ತವೆ. ಎಲ್ಲ ವರ್ಗಗಳಿಗೂ ಅನುಕೂಲಿಸುವ ಸ್ತರ-ದರಗಳ ದಕ್ಷಿಣ-ಉತ್ತರ-ಕಾಂಟಿನೆಂಟಲ್ ಆಹಾರಗಳ Eat-outಗಳು ಹೇರಳವಾಗಿ ಸಿಗುತ್ತವೆ. ಈ Hotelಗಳ ಆಹಾರಗಳಲ್ಲಿ ರುಚಿವೈವಿಧ್ಯಗಳು ಮನಸೆಳೆಯುತ್ತವೆಯಾದರೂ ಶುಚಿ-ಸತ್ವಗಳ ಭರವಸೆ ಇರದು. ಆದರೆ ಮನೆಮನೆಗಳ ಪಾಕಶಾಲೆಗಳೆಂಬ ಪ್ರಯೋಗಾಲಯಗಳಲ್ಲಿ ಮೂಡಿಬರುವ ಆಹಾರಗಳ ಹಿರಿಮೆ ಅಪಾರ ಎನ್ನುವುದನ್ನು ಮನಗಾಣಬೇಕು. ‘ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ ನಾವು ದಿನನಿತ್ಯ ಆಸ್ವಾದಿಸುವ ಈ ಮನೆ-ಅಡುಗೆಯನ್ನು ಮೆಚ್ಚಿ ಪೊಗಳುವುದು ಕಡಿಮೆಯೇ. ಮನೆಯಡುಗೆಯಲ್ಲಿ ಹಿತ, ರುಚಿ, ಶುಚಿ, ಪುಷ್ಟಿ, ವೈವಿಧ್ಯ, ಸರ್ಜನಶೀಲತೆ ಹಾಗೂ ಸ್ನೇಹ ಬಾಂಧವ್ಯಗಳ ಹೂರಣವಿರುತ್ತದೆ.   
ಅದರಲ್ಲೂ ಭಾರತೀಯರ ಅಡುಗೆ ಎಂದರೆ ಅದೊಂದು ವೈಜ್ಞಾನಿಕವಾಗಿ ಕಲಾತ್ಮಿಕವಾಗಿ ಬೆಳೆದು ಬಂದ ಬಹಳ ವಿಶೇಷ ಉದ್ಯಮ. ಕನ್ನಡಿಗರು ಭಾರತೀಯ ಪಾಕಶಾಸ್ತ್ರಕ್ಕೆ ಕೊಟ್ಟಿರುವ ಯೋಗದಾನ ಕಡಿಮೆಯದೇನಲ್ಲ. ಕೇವಲ ಬೆಂಗಳೂರಿನವರ ದೈನಂದಿನ ಆಹಾರ ಶೈಲಿಯನ್ನಷ್ಟೇ ಇಲ್ಲಿ ಗಮನಿಸಿದರೂ ಇದು ವೇದ್ಯವಾಗುತ್ತದೆ.
ಬೆಳಗೆ ಎದ್ದಾಗಲಿಂದ ರಾತ್ರಿ ಮಲಗುವ ತನಕವೂ ಬೆಂಗಳೂರಿನವರಿಗೆ ಸುಖದುಃಖಗಳಲ್ಲಿ ಸಂಗಾತಿಯಾದ ಕಾಫೀ ವಿಷಯವನ್ನು ಮೊದಲು ನೋಡೋಣ. ‘ಸ್ನಾನಾದಿಗಳನ್ನು ಮುಗಿಸಿಯೇ ಅಡುಗೆ ಮನೆಯನ್ನು ಪ್ರವೇಶಿಸಬೇಕೆಂಬ’ ಕಟ್ಟುಪಾಡನ್ನು ಸಡಿಲಿಸುವಂತೆ ಎಷ್ಟೋ ಸಂಪ್ರದಾಯಸ್ಥರನ್ನೂ ಮನವೊಲಿಸಿರುವ ಹೆಗ್ಗಳಿಕೆ ಈ ಕಾಫಿಗಿದೆ! ಎದ್ದ ಕೂಡಲೆ ಒಂದು ಕಪ್ Strong ಕಾಫಿ, ಪೇಪರ್ ಓದುವಾಗ ಇನ್ನೊಂದು informal ಗುಟುಕು ಕಾಫಿ, ತಿಂಡಿಯೊಂದಿಗೆ ಒಂದು Formal cup ಕಾಫಿ, ಕಾರ್ಯಾಲಯದಲ್ಲಿ ಆಗೊಮ್ಮೆ ಈಗೊಮ್ಮೆ ಬೈಟೂ ಕಾಪಿ, ಸಂಜೆ ಮನೆ ಸೇರುತ್ತಲೇ ಮಡದಿಯು ಮುದದಿಂದ ನೀಡುವ ಮೋಹಕ ಕಾಫಿ, ಬಂಧು-ಮಿತ್ರರೊಂದಿಗೆ ‘ಕ್ರಿಕೆಟ್-ಸಿನಿಮಾ-ಪಾಲಿಟಿಕ್ಸ್’ ಗಳ ಬಿರುಸಾದ ಚರ್ಚೆಗಿಳಿದಾಗ ಅಷ್ಟೇ ಬಿರುಸಾಗಿ ಹೀರಲು ಕೈಯಲ್ಲೊಂದು ಕಪ್ ಕಾಫಿ …… ಇವಿಷ್ಟು ನಮ್ಮೆಲ್ಲರ ಮಾಮೂಲಿ ಕಾಫಿ ಸೇವೆಯಾಯಿತು. ಇನ್ನು, ಆಚೆ ತಿರುಗಾದಲು ಹೋಗಿ ಕುರುಕು ಮುರುಕು ತಿಂದಮೇಲೆ ಒಂದು ಗುಟುಕು ಕಾಫಿ ಕುಡಿದೇ ಮಂಗಳ ಹಾಡುವುದು! ರಾತ್ರಿ ಮಲುಗುವ ಮುನ್ನ ‘ಡಿಕಾಕ್ಶನ್ ಮಿಕ್ಕಿದೆ ರೀ, ಕಾಫಿ ಕುಡಿದು ಮುಗಿಸೋಣವೇ?’ ಎಂದು ಹೆಂಡತಿ ಕೇಳಿದರೆ, ಹೆಂಡತಿಗಾಗಲಿ ಕಾಫಿಗಾಗಲಿ ‘ಒಲ್ಲೆ’ ಎನ್ನಲಾಗದೆ ಮತ್ತೊಂದು ಗುಟುಕು ಸ್ವಾಹಾ ಮಾಡಿದಾಗ ಆ ದಿನದ ‘ಕಾಫಿ ಯೋಗ’ ಸಂಪನ್ನವೆನಿಸುತ್ತದೆ! ಅಥವಾ ರಾತ್ರಿ ಎಚ್ಚಾರವಾದಾಗ, ಟಿ ವಿ ಯಲ್ಲಿ ನಡೆಯುತ್ತಿರುವ ಯಾವುದೋ Panel discussion ಮೇಲೆ ಹಾಗೇ ನಿದ್ರೆಗಣ್ಣನ್ನು ಹಾಯಿಸುವಾಗಲೂ ಒಂದಿಷ್ಟು ಬಿಸಿ ಕಾಫಿ ಚೀಪಿದಾಗ ಹಲವರಿಗೆ ಅದೇನೋ ಸಮಾಧಾನ! ‘ಕಾಫಿ’ ಕುಡಿಯೋಣ ಬನ್ನಿ ಎನ್ನುವುದೇ ಸ್ನೇಹಮಿಲನಕ್ಕೆ Formal ಕರೆಯೋಲೆಯಾಗಿಬಿಟ್ಟಿದೆ. ‘ಕಾಫಿಗಾಗಿ ಒಂದೆರಡು ಕಾಸು ಕೊಡಿ ಸಾರ್’ ಎನ್ನುವುದು ಸರ್ಕಾರಿ ಪ್ಯೂನ್, ವಾಚ್ ಮ್ಯಾನ್, ಆಯಾಗಳ ಸರ್ವೇಸಾಮಾನ್ಯ ‘ಡೈಲಾಗ್’ ಆಗಿದೆ. ಬೆಂಗಳೂರಿನವರ ಜೀವನ ಕಾಫಿಯನ್ನು ಇಷ್ಟೊಂದು ನೆಚ್ಚಿಕೊಂಡಿರುವುದನ್ನು ಕಂಡರೆ A Lot happens over coffee ಎನ್ನಿಸದಿರದು!
ಇನ್ನು ತಿಂಡಿ-ಊಟಗಳ ವಿಚಾರಕ್ಕೆ ಬರೋಣ. ನಮ್ಮಲ್ಲಿ ಆಹಾರ ಎಂದರೆ ಅದರಲ್ಲಿ ರುಚಿ ಹಾಗೂ ಪ್ರಕಾರವೈವಿಧ್ಯ ಇರಲೇಬೇಕು. ಅದೇ ನಮಗೆ ಪಥ್ಯ, ಅದೇ ನಮ್ಮ ಅಭಿರುಚಿ. ‘ಉಪ್ಪಿಷ್ಟು ಹುಳಿಯಿಷ್ಟು ಖಾರಸಿಹಿ ಇಷ್ಟಿಷ್ಟು ಒಪ್ಪಿರ್ದೊಡದು ಭೋಜ್ಯಂ----‘ ಎಂದು ಡಿವಿಜಿರವರು ಹೇಳುವಂತೆ ಷಡ್ರಸಗಳೂ ಸೇರಿದ್ದರೇನೆ ನಮಗೆ ಊಟ ಒಪ್ಪುವುದು. ಒಮ್ಮೆ ನಾನು ನನ್ನ ವಿದೇಶಿ ಮಿತ್ರರೊಂದಿಗೆ ಊಟಕ್ಕೆ ಕುಳಿತಾಗ ಆಹಾರ ಪದ್ಧತಿಗಳ ಬಗ್ಗೆ ಲೋಕಾಭಿರಾಮವಾಗಿ ಚರ್ಚೆ ನಡೆಯಿತು. “ನಿಮ್ಮ ಬೆಂಗಳೂರಿನವರ ‘Regular breakfast’ ಏನು?” ಎಂದು ಅವರು ಕೇಳಿದಾಗ ನಾನು ತಕ್ಷಣ ಏನನ್ನೂ ಹೇಳಲಾಗದೆ ಹೋದೆ. ಏಕೆಂದರೆ ‘ಎಲ್ಲಿಂದ’ ಪ್ರಾರಂಭ ಮಾಡುವುದೋ ಗೊತ್ತಾಗಲಿಲ್ಲ! ಇವತ್ತು ಇಡ್ಲಿ ತಿಂದರೆ ನಾಳೆ ದೋಸೆ, ನಾಳಿದ್ದು ಚಪಾತಿ, ಆಚೆನಾಳಿದ್ದು ಹುಗ್ಗಿ, ಆ ಬಳಿಕ ರೊಟ್ಟಿ, ಆಮೇಲೆ ಉಪ್ಪಿಟ್ಟು-ಸಜ್ಜಿಗೆ, ಅದರ ಮಾರೆನೆಯ ದಿನ ಅವಲಕ್ಕಿ, ಪುಳಿಯೋಗರೆ, ಪುಲಾವ್, ಪಡ್ಡು, ಒತ್ತು-ಸಾವಿಗೆ --- ಹೀಗೆ ದಿನಕ್ಕೊಂದು ಎಂಬಂತೆ ಸಾಗುತ್ತದೆ ಪಟ್ಟಿ---! ಇಂದು ಮಾಡಿದ ತಿಂಡಿ ಮತ್ತೆ ಕನಿಷ್ಟ ಒಂದು ವಾರದವರೆಗಾದರೂ ಮರುಕಳಿಸುವಂತಿಲ್ಲ! ಚಪಾತಿಗಳಲ್ಲೂ ಬಗೆಬಗೆ- ಮಾಮೂಲಿ ಚಪಾತಿ, ಮೆಂತ್ಯಸೊಪ್ಪಿನ ಚಪಾತಿ, ಮೂಲಂಗಿ ಚಪಾತಿ ಇತ್ಯಾದಿ. ಮಾಮೂಲಿ ದೋಸೆ, ಸೆಟ್-ದೋಸೆ, ಮಸಾಲೆ-ದೋಸೆ, ಟೊಮ್ಯಾಟೋ-ದೋಸೆ, ರವೆದೋಸೆ, ಅಡೆ, ಊತಪ್ಪಂ, ಪೆಸರಟ್ಟು, ಅಕ್ಕಿಕಾಯಿ-ದೋಸೆ, ರಾಗಿ-ದೋಸೆ ಮುಂತಾಗಿ ದೋಸೆಯೂ ವಿಭಿನ್ನ ರೂಪಗಳಲ್ಲಿ ಅವತರಿಸುತ್ತಿರಬೇಕು! ರೊಟ್ಟಿಯೂ ಅಕ್ಕಿರೊಟ್ಟಿ, ರಾಗಿರೊಟ್ಟಿ, ಗೋದಿರೊಟ್ಟಿ, ರವೆರೊಟ್ಟಿ, ಮಿಶ್ರಧಾನ್ಯಗಳ ರೊಟ್ಟಿ, ತರಕಾರಿರೊಟ್ಟಿ, ಸೊಪ್ಪಿನರೊಟ್ಟಿ, ಹಿಟ್ಟು ಉಕ್ಕರಿಸಿ ಮಾಡಿದ ತೆಳುರೊಟ್ಟಿ (ಶೆಟ್ಟರ ಮನೆಯ ಬಿಲ್ಲಾವಳಿ), ಇತ್ಯಾದಿ ಬಗೆಗಳಾಗಿ ರೂಪಾಂತರವಾಗುತ್ತಿರಬೇಕು! ಇಡ್ಲಿಯೂ ಯಾವಾಗಲೂ ಮಾಮೂಲಿಯಷ್ಟೇ  ಆಗಿರದೆ ರಾಗೀ ಇಡ್ಲಿ, ರವೆ ಇಡ್ಲಿ, ಸಾವಿಗೆ ಇಡ್ಲಿ, ಎಂಬಿತ್ಯಾದಿ ರೂಪಗಳನ್ನು ತಾಳುತ್ತಿರಬೇಕು. ಅವಲಕ್ಕಿಯಲ್ಲೂ ಪ್ರಭೇದಗಳು- ಮಾಮೂಲಿ ಒಗ್ಗರಣೆ ಅವಲಕ್ಕಿ, ಗೊಜ್ಜವಲಕ್ಕಿ, ಕಾಯಿಸಾಸಿವೆ ಅವಲಕ್ಕಿ ಇತ್ಯಾದಿ! ಉಪ್ಪಿಟ್ಟಿನಲ್ಲೂ ತರಕಾರಿ ಉಪ್ಪಿಟ್ಟು, ಅಕ್ಕಿತರಿ ಉಪ್ಪಿಟ್ಟು, ಇಡ್ಲಿ-ಉಪ್ಪಿಟ್ಟು, ಸೇವಿಯಾ ಉಪ್ಪಿಟ್ಟು ಎಂಬುದಾಗಿ ಬಗೆಗಳು! ಆಗೊಮ್ಮೆ ಈಗೊಮ್ಮೆ ಕರಾವಳಿಯ ಗಂಜಿಯೂಟವನ್ನು ಟ್ರೈ ಮಾಡುವುದುಂಟು. ಇನ್ನು ನೆಂಚಿಕೊಳ್ಳೋಕೆ ಬಳಸುವ ಚಟ್ನಿಗಳೂ ಒಂದೇ ತೆರನಾಗಿರುವುದಿಲ್ಲ. ಮಾಮೂಲಿ ಕಾಯಿಚಟ್ನಿ ಎಂಬ ‘ಪಟ್ಟ’ದ ಚಟ್ನಿ ಇಲ್ಲದಿದ್ದರೆ ದಿನನಿತ್ಯದ ದೋಸೆ, ಇಡ್ಲಿಗಳು ಅಪೂರ್ಣವೇ ಸರಿ! ಅದಲ್ಲದೆ ಕಡಲೆಕಾಯಿಚಟ್ಣಿ, ಪುದಿನಾಚಟ್ನಿ, ಕೆಂಪುಚಟ್ನಿ, ಕೊತ್ತಮಿರಿಚಟ್ಣಿ, ಟೊಮ್ಯಾಟೋ-ಚಟ್ನಿ, ಬೇಳೆಚಟ್ನಿ ಹಾಗೂ ಹೀರೆಕಾಯಿ, ಸೀಮೆಬದನೆ, ಸೌತೆಕಾಯಿ ಮುಂತಾದವುಗಳ ಸಿಪ್ಪೆಗಳ Nutricious ಚಟ್ನಿಗಳೂ ತಿಂಡಿಯ ಮೇಜಿನಲ್ಲಿ ಆಗಾಗ ಮೆರೆದಾಡಿ ಹೋಗುತ್ತವೆ.
ಇನ್ನು ಎಷ್ಟೇ ಕಷ್ಟವಾದರೂ ಸರಿ, ತಿಂಗಳಿಗೊಮ್ಮೆಯಾದರೂ ಒತ್ತು-ಸಾವಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ‘ಪದ್ಧತಿ’ ಹಲವು ಮನೆಗಳಲ್ಲಿ ಇನ್ನೂ ಉಳಿದಿದೆ. ಮನೆಯೊಡತಿ ಸರಿಯಾದ ಹದದಲ್ಲಿ ಬೇಯಿಸಿದ ಹಿಟ್ಟನ್ನು ಸಾವಿಗೆ ಮಣೆಯಲ್ಲಿ ಹಾಕಿ ಒತ್ತುವ ‘ಜನ್ಮಸಿದ್ಧ ಹಕ್ಕು’ ಸಾಮಾನ್ಯವಾಗಿ ಮನೆಯ ಪುರುಷರದ್ದು! (ಅಂತೆಯೇ ಕುಂಬಳಕಾಯಿಯನ್ನು ಒಡೆದುಕೊಡುವ ಹಕ್ಕೂ ಮನೆಯ ಗಂಡುಮ್ಮಕ್ಕಳಿಗೇ!) ಭಾನುವಾರ ಅಥವಾ ರಜಾದಿನಗಳಲ್ಲಿ ಪುರುಷರು ಪಂಚೆಯನ್ನು ಮಂಡಿಗೆ ಎತ್ತಿಕಟ್ಟಿಕೊಂಡು ಅಡುಗೆಮನೆಯಲ್ಲಿ ಸಾವಿಗೆಯನ್ನು ಒತ್ತೊತ್ತಿಕೊಡುವ ದೃಶ್ಯ ಸರ್ವೇಸಾಮಾನ್ಯ. ಸಾವಿಗೆಯನ್ನು ‘ಖಾರಕ್ಕೆ’ ಮತ್ತು ‘ಸಿಹಿಗೆ’ ಎಂದು ಇಬ್ಭಾಗಮಾಡಲಾಗುತ್ತದೆ. ಖಾರದ ಭಾಗಕ್ಕೆ ಕಾಯಿ, ತರಕಾರಿ ಹಾಗೂ ಮಸಾಲೆಗಳನ್ನು ಹಾಕಿ ಬಡಿಸಲಾಗುತ್ತದೆ. ಸಿಹಿಯ ಭಾಗವನ್ನು ಹಾಗೆಯೇ ನಾಜೂಕಾಗಿ (ಸಾವಿಗೆಯ ಎಳೆಗಳು ಹೆಚ್ಚಾಗಿ ಮುರಿಯದಂತೆ) ಬಡಿಸಿ, ಪಕ್ಕದಲ್ಲಿ ಬಿಸಿಬಿಸಿ ಗಸಗಸೆ ಪಾಯಸವನ್ನೋ, ಎಳ್ಳು-ಕಾಯಿ-ಬೆಲ್ಲಮಿಶ್ರಣವನ್ನೋ, ಕಾಯಿ-ಸಕ್ಕರೆ ಮಿಶ್ರಣವನ್ನೋ ಬಡಿಸಲಾಗುತ್ತದೆ. ಇನ್ನು ‘ಮನೆಪದ್ಧತಿ’ಗನುಗುಣವಾಗಿ ಈ ಪಕ್ಕದ Itemನ ಸ್ವರೂಪ ಅಷ್ಟಿಷ್ಟು ಬದಲಾಗುತ್ತ ಹೋಗುವುದುಂಟು!
ಪಾಶ್ಚಾತ್ಯರ Bread-bunಗಳು ಈಗೀಗ ನಮ್ಮ Breakfast ಪಟ್ಟಿಯೊಳಗೆ ನುಸುಳಿಕೊಂಡಿವೆ. ಆದರೂ ಅವುಗಳು ನಮ್ಮ ದೇಶೀಯ ಚಟ್ನೀ, ಪಲ್ಯಗಳೊಡನೆ ಸಮರಸವಾಗಿ ಬೆರೆತು ‘ಸ್ಯಾಂದ್ವಿಚ್’ ಆದಾಗಲೇ ಅವಕ್ಕೆ ಇಲ್ಲಿ ಶಾಶ್ವತ ಉಳಿಗಾಲ! ಹಾಗಲ್ಲದಿದ್ದರೆ ಅವು ತಮ್ಮ ‘ಶುದ್ಧ’ ಪಾಶ್ಚಾತ್ಯ ಸ್ವರೂಪದಲ್ಲಿ, ಸಪ್ಪೆಸಪ್ಪೆಯಾಗಿ ಬಂದಿಳಿದರೆ, ಷಡ್ರಸಗಳಲ್ಲಿ ಮಿಂದೆದ್ದು ರಸಗಟ್ಟಿಯಾದ ನಮ್ಮ ‘ದೇಶೀ’ ನಾಲಿಗೆ ಅವನ್ನು ಮೂಸಿಯೂ ನೋಡದು! ಉತ್ತರಭಾರತದ ಪರೋಟ, ಖಿಚ್ಡಿ ಹಾಗೂ ಸಬ್ಜೀಗಳೂ, ಮಹಾರಷ್ಟ್ರದ ಪಾವ್ ಭಾಜಿ, ವಡಾಪಾವ್ ಗಳು, ಕೇರಳದ ಪುಟ್ಟು, ಮಂಗಳೂರಿನ ನೀರ್ ದೋಸೆ, ಧಾರವಾಡದ ಜೋಳದ ರೊಟ್ಟಿ, ಆಂಧ್ರದ ಗೋಂಕೂರಗಳೂ ಮುಂತಾದವು ಈಗೀಗ ಬೆಂಗಳೂರಿನವರ ಮೆನೆಗಳಲ್ಲಿ ಮೆರೆದಾಡತೊಡಗಿವೆ. ಈ ಶ್ರೀಮಂತ ರುಚಿ-ವೈವಿಧ್ಯಗಳ ಜೊತೆಗೆ ಸ್ಪರ್ಧಿಸುವ ಮೊಂಡುಧೈರ್ಯಕ್ಕೆ ಕೈಹಾಕಿದ Oats, ಇದೀಗ ಸೋಲಿನ ಹಾದಿಯನ್ನು ವೇಗವಾಗಿ ಹಿಡಿಯುತ್ತಿದೆ. ಈ ರೀಸೆಂಟ್ ತಿನಿಸು ಆರೋಗ್ಯದ ಟೊಳ್ಳು ಘೋಷಗಳನ್ನು ಮಾಡುತ್ತ ಬಂದಿತಾದರೂ, ಅಪ್ಪಟ ದೇಶಿಯರ ಮನಗೆಲ್ಲಲಾಗದೆ ಇದೀಗ ತನ್ನ ಅಳಿವುಳಿವಿಗಾಗಿ ಉಪ್ಪಿಟ್ಟು, ದೋಸೆ, ರೊಟ್ಟಿ ರೂಪಗಳಲ್ಲಾದರೂ ಉಳಿಯಲು ತಡಕಾಡುತ್ತಿದೆ. ಒಂದಷ್ಟು ‘ಜಾಹಿರಾತು’ ಉಪಜೀವಿಗಳ ಮನೆಗಳಲ್ಲಿ ಈ Oats ಹಾಗೂ ಹೀಗೂ ಪ್ರವೇಶಿಸಿದೆಯೇ ಹೊರತು ಶುಚಿ-ರುಚಿ-ಸತ್ವಗಳಿಗೆ ಮಾತ್ರ ಮಣೆಹಾಕುವ, ಅಚ್ಚುಕಟ್ಟಾದ ಭೋಜನದ ಪ್ರಜ್ಞೆ ಉಳ್ಳಂತಹ ದೇಶೀ ಗ್ರಾಹಕರಲ್ಲಿ ಅದಕ್ಕೆ ಯಾವ ಮಾನ್ಯತೆಯೂ ಸಿಕ್ಕಿಲ್ಲ.   
ಇನ್ನು ಮಧ್ಯಾಹ್ನದ ಊಟಕ್ಕೆ ಅನ್ನ, ಹುಳಿ, ಸಾರು, ಪಲ್ಯ, ಮೊಸರು, ಮಜ್ಜಿಗೆಗಳೇ ಬೆಂಗಳೂರಿನವರ ‘ಮಾಮೂಲಿ’ ತಿನಿಸುಗಳು. ಈ ಮಮೂಲಿ ಪಟ್ಟಿಗೆ ಇದೀಗ ಚಪಾತಿ ಕೂಡ ಸೇರಿ ಹೋಗುತ್ತಿದೆ ಎನ್ನಬಹುದು. ಹುಳಿ, ಸಾರು, ಪಲ್ಯಗಳು ಮಾಮೂಲಾದರೂ ಅದರಲ್ಲಿನ ತರಕಾರಿಯಂತೂ ಪ್ರತಿದಿನವೂ ಬದಲಾಗಲೇಬೇಕು, ಇಲ್ಲದಿದ್ದರೇ ಮನೆಯವರಿಂದಲೇ ‘ನಿನ್ನೆನೂ ಇದೆ, ಇವತ್ತೂ ಇದೇನಾ?’ ಎನ್ನುವ ವ್ಯಂಗ್ಯದೇಟು ತಪ್ಪದು! ಇದಲ್ಲದೆ ಮಧ್ಯೆಮಧ್ಯೆ ಮಜ್ಜಿಗೆಹುಳಿ, ಕೂಟು, ಹಸಿ-ಮಜ್ಜಿಗೆ, ಮೊಸರು-ಬಜ್ಜಿಗಳು ಬಂದು ಹೋಗುತ್ತಿರಬೇಕು, ಇನ್ನು ಮಾಮೂಲಿ ಊಟಕ್ಕೆ ನೆಂಚಿಕೊಳ್ಳೋಕೆ ಅಂತ ಗೊಜ್ಜು, ತೊಕ್ಕು, ಉಪ್ಪಿನಕಾಯಿ, ಚಟ್ನಿಪುಡಿಗಳು, ಮೆಂತಿಟ್ಟುಪುಡಿ ಮುಂತಾದವು ತಟ್ಟೆಯಂಚಿನಲ್ಲಿ ಸಾಲಾಗಿ ಬಂದುಕುಳಿತರೆ ಚೆನ್ನ. ಅಪ್ಪಟ ಕನ್ನಡಿಗರ ಮನೆಗಳಲ್ಲಿ ಇವೆಲ್ಲ ಡಬ್ಬಿಗಳಲ್ಲಿ ಸಮೃದ್ಧವಾಗಿ ತುಂಬಿರುತ್ತವೆ ಎನ್ನಿ! (ನಮ್ಮ ಆಧುನಿಕರು ಅದನ್ನೆಲ್ಲ ಮಾಡಲು ಮೈಬಗ್ಗಿಸದಿದ್ದರೂ ರೆಡಿಮೇಡ್ ಪ್ಯಾಕ್ ಗಳನ್ನಾದರೂ ತಂದಿಟ್ಟುಕೊಂಡು ಚಪಲ ತೀರಿಸಿಕೊಳ್ಳುತ್ತಾರೆ) ನಗರವಾಸಿಗಳ ಮನೆಗಳಲ್ಲಿ ಈಗೀಗ ಜ್ಯಾಮ್, ಕೆಚಪ್, ಸಾಸ್, ಮೀಠಾ, ಇತ್ಯಾದಿಗಳೂ ಈ ಸಾಲಿಗೆ ಸೇರುತ್ತಿವೆ. ಅಂತೆಯೇ ವಾರಕ್ಕೊಮ್ಮೆಯಾದರೂ ಹಪ್ಪಳ, ಸಂಡಿಗೆ, ಬಾಳ್ಕ, ಬೋಟಿಗಳೂ ಕಾದಬಾಂಡಲಿಗಳಲ್ಲಿ ಅರಳಿ ನಮ್ಮ ಬಾಯಲ್ಲಿಳಿದು ಕುರುಕುರನೆ ನಲುಗಿ ಸುಖವೀಯದಿದ್ದರೆ ಅದೇನೋ ಕಳೆದುಕೊಂಡಂತೆಯೇ ಸರಿ! ಇಷ್ಟಾದರೂ ಈ ‘ಮಾಮೂಲಿ’ ಹುಳಿ-ಸಾರುಗಳು ‘ಬೋರ್’ ಆಗಿ, ಆಗಾಗ ‘ಚೇಂಜ್’ ಬೇಕೆನಿಸುತ್ತದೆ- ಹುಳಿ-ಸಾರುಗಳ ಬದಲು ಅಥವಾ ಜೊತೆಯಲ್ಲಿ ನಿಂಬೆಹಣ್ಣು-ಚಿತ್ರಾನ್ನ, ವಾಂಗೀ-ಭಾತ್, ಬಿಸಿಬೇಳೆ-ಭಾತ, ಪುಲಾವ್, ಕಾಯಿಸಾಸಿವೆ-ಅನ್ನ, ತರಕಾರಿ-ಭಾತ್, ಒರಳು-ಚಿತ್ರಾನ್ನ, ಮುಂತಾದವು ಪರ್ಯಾಯವಾಗಿ ಬಂದು ಹೋಗುತ್ತಿರಬೇಕು! ಕೆಲವು ಮನೆಗಳಲ್ಲಂತೂ ಕಲಸಿದನ್ನಕ್ಕೆಂದೇ ವಾರದ ಒಂದೆರಡು ದಿನಗಳನ್ನು ಗುರುತುಮಾಡಿಡುವುದುಂಟು. ಅವರೆಕಾಯಿ ಕಾಲ ಬಂದರಂತೂ ಅದೇನು ಸಂಭ್ರಮ! ಅವರೆಕಾಯಿ ಹಾಕಿದ ರೊಟ್ಟಿ, ಉಪ್ಪಿಟ್ಟು, ಅವಲಕ್ಕಿ, ಗೊಜ್ಜು, ಕೂಟು, ಆಂಬೊಡೆ, ಪಾಯಸ, ಪಲ್ಯ ಮುಂತಾದವು, ಹಾಗೂ ಹಿತಕವರೆಯ ಚೌಚೌ, ಚಾಟ್ ಮುಂತಾದವೂ ನಮ್ಮ ಊಟದ ಮೇಜುಗಳಲ್ಲಿ ಸಾಲುಸಾಲಾಗಿ ದಯಮಾಡಿಸುತ್ತವೆ! ಇದಲ್ಲದೆ ಈ ‘ಮಾಮೂಲಿ’ ಅಡುಗೆಯನ್ನು ಇಂಟ್ರೆಸ್ಟಿಂಗ್ ಮಾಡಿಕೊಳ್ಳುವ ಸಲುವಾಗಿ ತೊಗರಿಕಾಳು, ಬಟಾಣೀ, ಕಾಬೂಲಿ ಚೆನ್ನಾ, ಕಡಲೆಕಾಳು, ಹೆಸರು ಕಾಳು, sweet corn, ಕಡಲೆಕಾಯಿ, ಮುಂತಾದವುಗಳನ್ನೇ ಬಳಸಿ ಮಾಡುವ ಉಸಿಲಿ, ಕೋಸಂಬರಿ, ಸಾಲಡ್ ಮುಂತಾದವುಗಳೂ ಬೆಂಗಳೂರಿನ ಅಡುಗೆಮನೆಗಳಲ್ಲಿ ಸರ್ವೇಸಾಮಾನ್ಯ.
ಇನ್ನು ಯಜಮಾನರ ಅಥವಾ ಮಕ್ಕಳ ಹುಟ್ಟುಹಬ್ಬ, ಪುಣ್ಯಕರವಾದ ಶುಕ್ರವಾರ, ಮೊಮ್ಮಗು ಬೋರಲು ಬಿತ್ತು, ಹಳೆಯ ಗೆಳತಿ ಬರುತ್ತಾಳೆ ಎಂಬ ಸಂದರ್ಭಗಳು ಬಂದಾಗ ಪಾಯಸ ಮಾಡದೇ ಇರಲಾದೀತೆ? ಮಾಮೂಲಿ ಸಾವಿಗೆಪಾಯಸ, ರವೆಪಾಯಸ, ಸಬ್ಬಕ್ಕಿಪಾಯಸ, ಅನ್ನದ ಪಾಯಸ, ಅವಲಕ್ಕಿ-ಪಾಯಸ, ಅಪ್ಪೆ-ಪಾಯಸ, ಗೋದಿತರಿ-ಪಾಯಸ, ಹೆಸರುಬೇಳೆ-ಪಾಯಸ, ಕಡಲೆಬೇಳೆ-ಪಾಯಸ, ಒಬ್ಬಟ್ಟು-ಪಾಯಸ ಮುಂತಾದವುಗಳ ಜೊತೆಗೆ ಕ್ಯಾರಟ್ ಪಾಯಸ, Bread ಪಾಯಸ, ಕೊಬ್ರಿಸಕ್ಕರೆ ಪಾಯಸ ಎಂಬ ಹೊಸ ರೂಪಗಳೂ ಅವತರಿಸಿ ಸಾಕಷ್ಟು ಮೆಚ್ಚುಗೆಯನ್ನು ಗೆಲ್ಲುತ್ತಿವೆ.   
ಹಬ್ಬದ ನೆಪದಲ್ಲಿ ಮಾಡಿಟ್ಟುಕೊಳ್ಳುವ ತಿನಿಸುಗಳೂ ನಮ್ಮ ಮನೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿಯೇ ತಯಾರಾಗುತ್ತವೆ. ಸಂಕ್ರಾಂತಿಯ ಎಳ್ಳುಬೆಲ್ಲವನ್ನು ಯುಗಾದಿವರೆಗೂ ಮೆಲ್ಲುತ್ತಲೇ ಇರುತ್ತೇವೆ, ಕೃಷ್ಣಾಷ್ಟಮಿಯ ಉಂಡೆ-ಚಕ್ಕುಲಿ-ತೇಂಗೋಳು-ಮುಚ್ಚೋರೆ-ಬರ್ಫಿ-ಮಿಠಾಯಿಗಳನ್ನು ಗಣೇಶಚೌತಿ ಕಳೆದರೂ ಕುರುಕುವುದೂ ಇದ್ದೇ ಇರುತ್ತದೆ. ಇನ್ನು ಗಣೇಶಚೌತಿಯ ಕರ್ಜೀಕಾಯಿಗಳೂ ನವರಾತ್ರಿಯ ಸುಮಾರಿಗೇ ಖಾಲಿಯಾಗುವುದು--! ‘ಮನೆಗೆ ಬಂದವರಿಗೆ ಏನಾದರು ಕುರುಕಲು ಕೊಡಲು ಆಗುತ್ತದೆ’ ಎಂದು ಕರೆದಿಟ್ಟ ಹಪ್ಪಳ, ಸಂಡಿಗೆಗಳ ಜೊತೆಗೆ ಕರೆದವಲಕ್ಕಿ, Nylon ಅವಲಕ್ಕಿ, ಮಸಾಲೆ-ಮಂಡಕ್ಕಿ ಹಾಗೂ ಬೇಕರಿಯ cornflakes, ಚೌಚೌ, Biscuitsಗಳನ್ನು ಡಬ್ಬಿಗಳಲ್ಲಿ ಸಿದ್ಧವಾಗಿಯೇ ಇರಿಸಿರುತ್ತೇವೆ. ಮಗಳು-ಅಳಿಯ ಬರುವರೆಂದೋ, ಮೊಮ್ಮಕ್ಕಳೂ ಬರುವರೆಂದೋ, ಊರಿಂದ ನೆಂಟರು ಬರುವರೆಂದೋ ಅಥವಾ ‘ಪುಣ್ಯಕರ-ಮಾಸ’ ಬಂತೆಂದೋ-- ಡಬ್ಬಿ ಭರ್ತಿ ಉಂಡೆ, ಚಕ್ಕುಲಿ, ಕೋಡುಬಳೆ ಮಾಡಿಡುವುದು ‘ಪದ್ಧತಿ’. ನೆಪ ಯಾವುದೇ ಆಗಲಿ, ಅಂತೂ  ಮನೆಮಂದಿಗಂತೂ ಹೋಗ್ತಾ ಬರ್ತಾ ಬಾಯ್ತುಂಬ ಕುರುಕುವ ಯೋಗ ತಪ್ಪದು!
ಇದೆಲ್ಲದರ ಜೊತೆಗೆ ‘ಮಧ್ಯೆಮಧ್ಯೆ ಪಾನೀಯಂ ಸಮರ್ಪಯಾಮಿ----‘ ಎಂಬಂತೆ ಘಮಘಮಿಸುವ ಮಸಾಲೆ ಮಜ್ಜಿಗೆ, ನಿಂಬೆಹಣ್ಣು-ಪಾನಕ, ಕರ್ಬೂಜಪಾನಕ, ಬೇಲ್ಕದಹಣ್ಣಿನ-ಪಾನಕ, ಕೋಕಂ-ಪಾನಕ, , ತರಕಾರಿರಸದ ಸೂಪ್, ಮೂಸಂಬಿ-ರಸ, ಕೆತ್ತಳೆ-ರಸ ಮುಂತಾದವು ನಾಲಿಗೆಯಿಂದ ಹೊಟ್ಟೆಗೆ ಜಾರಿ ತಂಪನ್ನೀಯುತ್ತವೆ. ‘ಯಾಕೋ ಇವೊತ್ತು ಹುಷಾರಿಲ್ಲ, ಏನೂ ಬೇಡ’ ಎನಿಸಿದರೆ ತಕ್ಷಣ ರಾಗಿ ಅಂಬಲಿ, ರವೆ ಗಂಜಿ, ಗಂಜಿಯೂಟ, ತಿಳಿಸಾರುಗಳು ನೆರವಿಗೆ ಬರುತ್ತವೆ!  
ಇದಿಷ್ಟೂ ಸಾಲದು ಎಂಬಂತೆ ಈ ತಿಂಡಿಗಳಿಗೇ ಇನ್ನಷ್ಟು ‘ಸಂಸ್ಕಾರ’ ಮಾಡಿ ಹೊಸನಾಮಕರಣ ಮಾಡಿ ತಂದು ಬಡಿಸುವ ‘ಸರ್ಜನಶೀಲ ಗೃಹಿಣೀಯರಿ’ಗೇನೂ ಕೊರತೆ ಇಲ್ಲ. ಇವರ Creativity ನೆರೆಕೆರಯಲ್ಲಿ ‘ಮೆಚ್ಚುಗೆ ಗಳಿಸಿ’ದಾಗ ಎಲ್ಲರಿಗೂ ಆ Menu ಹೇಳಿಕೊಡುವುದರಲ್ಲಿ ಆ ಪಾಕಶಾಸ್ತ್ರಪ್ರವೀಣೆಯರು ತುಂಬ ಬಿಜ಼ಿ ಆಗುವುದೂ ಉಂಟು. ಯಜಮಾನ್ರು ಮಕ್ಕಳು ಎಲ್ಲರೂ ಹೊರಟಮೇಲೆ, ನಗರದ ಮನೆಮನೆಯ Telephoneಗಳಲ್ಲಿ ‘ಹುಣಿಸೆಹಣ್ಣೂ ಇಷ್ಟು, ಉದ್ದಿನಬೇಳೆ ಅಷ್ಟು, ಬೆಲ್ಲ ಒಂದಿಷ್ಟು’ ಎನ್ನುವ ಪುಣ್ಯವಾಕ್ಯಗಳು ಅನುರಣಿಸುವುದು ಸರ್ವೇ ಸಾಮಾನ್ಯ!
ಇನ್ನು ಪಕ್ಕದಮನೆಯವರು ತಂದುಕೊಟ್ಟ ಹೊಸರುಚಿ, ಅಜ್ಜಿ ಮನೆಯ ಹುಣಿಸೆ ತೊಕ್ಕು, ನಾದಿನಿ TV ಶೋ ನಲ್ಲಿ ನೋಡಿ Try ಮಾಡಿದ Bombat ಸಬ್ಜಿ, ಎದುರು ಮನೆಯವರ ಸತ್ಯನಾರಾಯಣ ಪ್ರಸಾದ, ಮಾಳಿಗೆ ಮನೆಯವರ ಸಂಕಷ್ಟಹರ ಚೌತಿಯ ಮೋದಕ, ಬೀದಿತುದಿಯ ಆಚಾರ್ಯರ ಮನೆಯ ಹಯಗ್ರೀವ, ಅಯ್ಯಂಗಾರ್ ಮಾಮಿಯ ಪುಳಿಯೋಗರೆ, ಸಂಕೇತಿ ಆಂಟಿ ಕಳಿಸಿಕೊಟ್ಟ ಸಾವಿಗೆ, ತಮಿಳ್ ಮಾಮಿ ಮನೆಯ ಸ್ಯಾಂಪಲ್ ಅವಿಯಲ್, ಮೈಯ್ಯರ ಮನೆಯ ಪತ್ರೊಡೆ, ಭಟ್ಟರ ಮನೆಯ ತಂಬುಳ್ಳಿ, ಟೂರ್ ಮುಗಿಸಿಬಂದ ಅಕ್ಕಭಾವ ತಂದುಕೊಟ್ಟ ಶೆಂಗಾ ಒಬ್ಬಟ್, ಧಾರ್ವಾಡ ಫೇಡಾ, ಬೆಳಗಾಂ ಕುಂದಾಗಳೂ, ಕಾಲಕಾಲಕ್ಕೆ ಕೈಸೇರುವ ತಿರುಪತಿ ಲಡ್ಡು-ವಡೆಗಳ ತುಂಡುಗಳ ಪಾತ್ರಪ್ರವೇಶವೂ ನಮ್ಮ ‘ಮಾಮೂಲಿ’ ಮನೆಯೂಟದೊಳಗೆ ಆಗುತ್ತಲೇ ಇರುತ್ತದೆ!   
ಇನ್ನು ರಾತ್ರಿ ಅಡುಗೆಯ ವಿಚಾರ - ಮಿಕ್ಕಿರುವ ಮಧ್ಯಾಹ್ನದ ಅಡುಗೆಯನ್ನೇ ಬಿಸಿಮಾಡಿಕೊಂಡು ‘Adjust’ ಮಾಡಿಕೊಳ್ಳುವ  ಮಂದಿ ಬಹಳ ಇದ್ದರೂ, ರಾತ್ರಿಗಾಗಿ simple ಆದರೂ ಪರವಾಗಿಲ್ಲ ಪ್ರತ್ಯೇಕ ಅಡುಗೆ ಬೇಕೆನ್ನುವವರೂ ಇದ್ದೇ ಇದ್ದಾರೆ. ಅಂತಹ ಮನೆಗಳಲ್ಲಿ ಬೆಳಗಿನ ತಿಂಡಿಯ ಸಡಗರವೇ ರಾತ್ರಿಯೂಟದ ವೇಳೆಯಲ್ಲೂ ಮರುಕಳಿಸುವುದು ಕಾಣುತ್ತದೆ.
ಇಂದಿನ ದಿನಗಳಲ್ಲಂತೂ ಬೆಂಗಳೂರಿನವರ ಮನೆಯಡುಗೆಯ Menuದಲ್ಲಿ ಉತ್ತರ ದಕ್ಷಿಣಭಾರತಗಳ ತಿನಿಸುಗಳನ್ನೂ, ಶೈಲಿಗಳನ್ನೂ ಬೆರೆಸಿ ಹೊಸತನವನ್ನು ತುಂಬುವ ಟ್ರೆಂಡ್ ಹೆಚ್ಚುತ್ತಿದೆ. ವಿದೇಶಿ ತಿನಿಸುಗಳ ಅಂಶಗಳನ್ನೂ ‘ದೇಶೀ’ ನಾಲಿಗೆಗೆ ಒಪ್ಪುವಂತೆ ಅಲವಡಿಸಿ ಜನಪ್ರಿಯವಾಗಿಸುವ ಮಹತ್ತರ ಯತ್ನವೂ ಭರದಿಂದ ಸಾಗಿದೆ! ಎಲ್ಲವನ್ನೂ ‘ಒಮ್ಮೆ Try ಮಾಡಿನೋಡೋಣ ಬನ್ನಿ’ ಎಂದು ಸ್ವಾಗತಿಸುವ ಬೆಂಗಳೂರು ನಗರ ಒಂದು ಪ್ರಸಿದ್ಧ Eater’s hub ಆಗಿ ಬೆಳೆದುನಿಂತಿದೆ! ಇಲ್ಲಿ ಎಲ್ಲ ಪ್ರಯೋಗಗಳಿಗೂ ಸೂಕ್ತ ಅವಕಾಶ, ಮನ್ನಣೆ, ಜಾಹೀರಾತು ಹಾಗೂ ಮಾರ್ಕೆಟ್ ಸಿಗುತ್ತದೆ ಎನ್ನಿ. ಆದರೆ ಕೊನೆಗೂ ಯಾವುವು ಜನಮಾನಸವನ್ನು ಗೆದ್ದಿವೆ, ಆದರೇ ಯಾವುದೇ ಹೊಸ Item ಬರಲಿ ಹೋಗಲಿ, ನಮ್ಮ ಮಾಮೂಲಿ ದೋಸೆ, ರೊಟ್ಟಿ, ಬಿಸಿಬೇಳೆ ಭಾತ್ ಗಳು, ಸಾವಿಗೆ, ಚೌಚೌಭಾತ್ ಹಾಗೂ ಪುಷ್ಕಲ ಮನೆ ಊಟಗಳು ಮಾತ್ರ ತಮ್ಮ ನಿತ್ಯನೂತನತೆಯನ್ನು ಕಳೆದುಕೊಂಡಿಲ್ಲ, ಕಳೆದುಕೊಳ್ಳಲಾರವು ಕೂಡ!
ದೂರದರ್ಶನದ ಎಲ್ಲ ವಾಹಿನಿಗಳಲ್ಲೂ ಅನಾದಿಯಿಂದಲೂ ನಡೆಯುತ್ತಲೇ ಬಂದಿರುವ ಒಂದಲ್ಲ ಒಂದು ಬಗೆಯ ಅಡುಗೆ ಕಾರ್ಯಕ್ರಮಗಳಿಗೆ ವೀಕ್ಷಕರ ಪ್ರೋತ್ಸಾಹ ಎಂದೂ ಕುಂದಿಲ್ಲ. ಹೀಗೆ, ಬೆಂಗಳೂರಿನವರ ಆಹಾರ ಕ್ರಮದ ಬಗ್ಗೆ ಸುಮ್ಮನೆ ಪಕ್ಷಿನೋಟ ಹಾಯಿಸಿದರೆ ಸಾಕು, ಅದೆಷ್ಟು ವೈವಿಧ್ಯಗಳೂ ಸ್ವಾರಸ್ಯಗಳು ಎದ್ದು ಕಾಣುತ್ತವೆ! ಇನ್ನು ಕರ್ನಾಟಕ, ಭಾರತ ಎಂದು ಲೆಕ್ಕಹಾಕಲು ಹೊರಟರೆ ಒಂದು ಉದ್ಗ್ರಂಥವೇ ನಿರ್ಮಾಣವಾದರೂ ಸಾಲದು ಎನಿಸುತ್ತದೆ.
ಇಷ್ಟೊಂದು ವರ್ಣಮಯ ವೈವಿಧ್ಯಮಯ ರುಚಿಕರ ಆಹಾರಗಳನ್ನು ಮನೆಯಲ್ಲಿ ತಯಾರಿಸಿ ಮೆಲ್ಲುವಾಗ, ಮನೆಯೊಡತಿ ಸ್ನೇಹವಾತ್ಸಲ್ಯಗಳಿಂದ ಉಪಚರಿಸುತ್ತ ಬಡಿಸುವಾಗ, ಮನೆಮಂದಿಯೆಲ್ಲ ಸೇರಿ ಹರಟುತ್ತ ನಲಿಯುವಾಗ ಉದಿಸುವ ಬಾಂಧವ್ಯಸುಖ-ಸಂತೋಷಗಳು Hotelಊಟಕ್ಕೆ ಎಲ್ಲಿ ಬರಬೇಕು? ಅಡುಗೆ ಮಾಡುವುದಕ್ಕೂ, ಮಾಡಿದ್ದನ್ನು ತಿನ್ನುವುದಕ್ಕೂ ‘ಟೈಮ್ ಇಲ್ಲದ’. TV ಮುಂದೆಯೋ, ಕಂಪ್ಯೂಟರ್ ಮುಂದೆಯೋ ಕುಳಿತು (ತಂಗಳಿಗೆ ಸಮವಾದ) ಯಾವುದೋ packed foodನ್ನು ನುಂಗಿ ‘ತಿನ್ನುವ ಶಾಸ್ತ್ರ’ ಮುಗಿಸುವ, ಸದಾ ಗಡಿಬಿಡಿಯ Busy ಜನರು ಎಷ್ಟೇ ಗಳಿಸಿಟ್ಟರೇನು?! ಮನೆಮಂದಿಯೊಂದಿಗೆ ಕುಳಿತು ಮನೆಯಡುಗೆಯನ್ನು ಮೆಲ್ಲುವ ಮುದವನ್ನೇ ಕಳೆದುಕೊಂಡ ಮೇಲೆ ಅವರು ನಿಜಕ್ಕೂ ನತದೃಷ್ಟರೇ ಸರಿ!
ಕೊನೆಗೊಂದು ಮಾತು- ಇಷ್ಟೆಲ್ಲ ಆರೋಗ್ಯಕರ ರುಚಿಕರ ವೈವಿಧ್ಯಮಯ ಖಾದ್ಯ-ಪೇಯಗಳನ್ನು ಆವಿಷ್ಜಕರಿಸಿ, ಉಳಿಸಿ ಬೆಳೆಸಿಕೊಂಡು ಬಂದಿರುವವರು ನಮ್ಮ ಅಮ್ಮ, ಅಜ್ಜಿ, ಮುತ್ತಜಿ, ಕೋಲಜ್ಜಿಯರು. ನಾವು ಅಸಡ್ಡೆಯಿಂದ ಮೂದಲಿಸುವಂತೆ ಅವರಾರು ಕೇವಲ ‘ಮನೆಯಲ್ಲಿ ಸುಮ್ಮನೆ ಕುಳಿತ ಉಪಜೀವಿ’ಗಳಲ್ಲ. ಅಡುಗೆಮನೆಯ ನಾಲ್ಕು ಗೋಡೆಗಳೊಳಗೇ ಅದ್ಭುತ ಪ್ರಯೋಗಗಳನ್ನು ಮಾಡಿ ಮನುಕುಲಕ್ಕೆ ಅಮೃತವನ್ನು ಒದಗಿಸಿಕೊಟ್ಟ ಮಹಿಮಾನ್ವಿತರವರು. ಖಾದ್ಯಪದಾರ್ಥಗಳಲ್ಲಿ ದೇಹಕ್ಕೆ ಯಾವುದು ಹಿತ, ಯಾವುದು ಉಷ್ಣಹಾರೀ, ಶೀತಹಾರಿ, ವಾಯುಹಾರಿ, ಪಿತ್ತಹಾರಿ, ಕಫಹಾರಿ, ಯಾವಾಗ-ಯಾವುದನ್ನು-ಎಷ್ಟು-ಹೇಗೆ ಬಳಸಬೇಕು ಎಂಬ ಚಿಕಿತ್ಸಾತ್ಮಕ ಪ್ರಜ್ಞೆಯನ್ನೂ, ಅನುಭವಜ್ಞಾನವನ್ನೂ, ಕೌಶಲಗಳನ್ನೂ ಬೆಳೆಸಿಕೊಂಡಿದ್ದಲ್ಲದೆ ಪೀಳಿಗೆಯಿಂದ ಪೀಳಿಗೆಗೆ ಆ ಜ್ಞಾನವನ್ನು ತಪ್ಪದೆ ಹಸ್ತಾಂತರಿಸುತ್ತ ಬಂದ ನೈಜ ವಿಜ್ಞಾನಿಗಳು, ಕುಶಲ ಡೈಟಿಶಿಯನ್ಸ್ ಹಾಗೂ ನಿಃಸ್ವಾರ್ಥ ಕರ್ಮಯೋಗಿನಿಯರು ಅವರು. ನಮ್ಮ ಹೊಟ್ಟೆಗೆ ಹಿತವನ್ನೂ, ನಾಲಿಗೆಗೆ ಪುಷ್ಜ್ಟಿಯನ್ನೂ ಹಾಗೂ ಔತಣಗಳಿಗೆ ಮೆರುಗನ್ನೂ ವೈವಿಧ್ಯವನ್ನೂ ತಂದುಕೊಟ್ಟ ನಮ್ಮ ಭಾರತದ್ ಎಲ್ಲ ತಾಯಂದಿರಿಗೆ ನಾವೆಲ್ಲರೂ ಮನಸಾ ನಮಿಸೋಣ, ಕೃತಜ್ಞತೆ ಸಾಲಿಸೋಣ. 
**************************************************
ಡಾ ಆರತೀ ವಿ ಬಿ


Composed in 2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ