ಶುಕ್ರವಾರ, ಮಾರ್ಚ್ 17, 2017

ಭಗವದ್ಗೀತೆ ಮತು ನಿರ್ವಹಣಶಾಸ್ತ್ರ
ಡಾ ಆರತೀ ವಿ ಬಿ
ಭಾರತವು ವಿಶ್ವಕ್ಕೆ ನೀಡಿರುವ ಅತ್ಯಪೂರ್ವಕೊಡುಗೆಯಾದ ಶ್ರೀಮದ್ಭಗವದ್ಗೀತೆಯ ಪ್ರೌಢ ವಿಚಾರಧಾರೆಯೂ ಅದ್ಭುತ ಹೊಳಹುಗಳೂ ಸರ್ವರಿಗೂ ಸರ್ವಕಾಲಗಳಲ್ಲೂ ಪ್ರಸ್ತುತವಾಗಿದ್ದು, ಈ ಗ್ರಂಥ ವಿಶ್ವಗುರುವೆನಿಸಿದೆ. ಮನುಷ್ಯನ ವೈಯಕ್ತಿಕ, ಸಾಮಾಜಿಕ, ವೃತ್ತಿಪರ ಜೀವನಗಳಲ್ಲಿರಬೇಕಾದ ಕರ್ತವ್ಯಪ್ರಜ್ಞೆಯನ್ನು ಸ್ಪಷ್ಟಪಡಿಸುತ್ತಲೇ, ತತ್ಸಂಬಂಧಿಯಾದ ನೀತಿಗಳನ್ನು ಮನಶ್ಶಾಸ್ತ್ರ, ನಿರ್ವಹಣಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜನೀತಿ ಮತ್ತು ಯೋಗಶಾಸ್ತ್ರಗಳ ಹಿನ್ನಲೆಯಿಂದ ಮಂಡಿಸುತ್ತದೆ. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ, ನಿರ್ವಹಣಶಾಸ್ತ್ರದ (management) ಕ್ಷೇತ್ರದವರಿಗಂತೂ ಅತಿ ಪ್ರಸ್ತುತನಿಸುವ ಈ ಗ್ರಂಥವು ಎಳೆಯರ ಪಾಲಿಗೆ ನಿತ್ಯಪಠ್ಯವಾದಲ್ಲಿ ಸುಶಿಕ್ಷಿತ, ಸಶಕ್ತ, ಪ್ರಜ್ಞಾಸಂಪನ್ನ ಪ್ರಜೆಗಳು ನಿರ್ಮಾಣವಾಗಲು ಸಾಧ್ಯವಾಗುತ್ತದೆ.
ಭಗವದ್ಗೀತೆಯ ಯೋಗಶಾಸ್ತ್ರೀಯ ಅಂಶಗಳನ್ನಷ್ಟೇ ಹೆಚ್ಚಾಗಿ ಪ್ರಚಾರ ಮಾಡಲಾಗಿದ್ದು ಅದರಲ್ಲಿ ಐಹಿಕ ಜೀವನಕ್ಕೆ ಪ್ರಸ್ತುತವೆನಿಸುವ ವಿಚಾರಗಳನ್ನು ಹೆಚ್ಚಾಗಿ ಚರ್ಚಿಸದೇ ಹೋಗಿರುವುದು ಶೋಚನೀಯ. ಈ ಕೊರತೆಯನ್ನು ನೀಗಿಸುವತ್ತ ವಿಚಾರವಂತರೂ, ವಿದ್ವಾಂಸರೂ, ಶಿಕ್ಷಕರೂ ಗಮನಹರಿಸಬೇಕಾಗಿದೆ. ಪ್ರಸ್ತುತ ಲೇಖನವು ಭಗವದ್ಗೀತೆಯಲ್ಲಿನ ನಿರ್ವಹಣಶಾಸ್ತ್ರ ಸಂಬಂಧವಾದ ಕೆಲವು ಹೊಳಹುಗಳನ್ನು ಹೆಕ್ಕಿ ತೋರುವ ನಮ್ರ ಯತ್ನವಾಗಿದೆ.
*****
ಪಾಶ್ಚಾತ್ಯರಿಂದ ಎರವಲು ಪಡೆದಿರುವ ಇಂದಿನ ನಿರ್ವಹಣಶಾಸ್ತ್ರದಲ್ಲಿ (Management studies) ವರ್ತನೆ, ಬಾವನೆ ಸಂಬಂಧಗಳ ಬಗ್ಗೆ ಹೇಳಿರುವುದು ಹೌದಾದರೂ, ಹೆಚ್ಚಿನ ಮೀಮಾಂಸೆಯು ಭೌತಿಕ ಹಾಗೂ ಬಾಹ್ಯಗೋಚರವಾದ ಸನ್ನಿವೇಶ, ಸಂದರ್ಭಗಳನ್ನೇ ಆಧರಿಸಿ ನಡೆದಿದೆ. ಆದರೆ ಈ ಎಲ್ಲಕ್ಕೂ ಮುಖ್ಯಕಾರಣವಾದ ಮಾನವನ ಮನಸ್ಸು, ವಿಚಾರ, ದೃಷ್ಟಿಕೋನ ಹಾಗೂ ಸಾರ್ವಕಾಲಿಕ ಸಾರ್ವಜನಿಕ ಹಿತಸಾಧನೆ ಭಾವಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ಹಣಲಾಭ, ಸಂಖ್ಯಾವಿಸ್ತಾರ, ಸ್ಪರ್ಧಾತ್ಮಕಶಕ್ತಿಗಳ ಹೆಚ್ಚಳದ ಕಡೆಗಷ್ಟೇ ಗಮನಹರಿಸುವುದು ಇದರ ಮೂಲತಂತ್ರವಾಗಿದ್ದು, ಇದರಿಂದ ತಾತ್ಕಾಲಿಕ ಲಾಭ ಸಿಕ್ಕಂತೆ ಕಂಡರೂ, ೩೦ಕ್ಕಿಂತ ಹೆಚ್ಚು ವರ್ಷಗಳ ಕಾಲ ತನ್ನಿಂತಾನೆ ಬೆಳೆಯುತ್ತ ಅರಳುತ್ತ ಜನಮಾನಸವನ್ನು ಮೆಚ್ಚಿಸುತ್ತ, ನೀತಿಯ ಚೌಕಟ್ಟನ್ನು ಎಂದೂ ಉಲ್ಲಂಘಿಸದೆ ಸಾರ್ವಜನಿಕಹಿತವನ್ನು ಸಾಧಿಬಲ್ಲಂತಹ ಸಂಸ್ಥೆಗಳನ್ನು ಈ ವ್ಯವಸ್ಥೆಯು ಸೃಷ್ಟಿಸಲು ಸಾದ್ಯವಾಗಿವೇ ಆಗಿಲ್ಲ! ಜಗತ್ತಿನಾದ್ಯಂತ ಎಲ್ಲ Management ದಿಗ್ಗಜರೂ ಇದನ್ನು ಗಮನಿಸಿ ಚಿಂತನೆ ನಡೆಸಲೇಬೇಕಾದ ಸ್ಥಿತಿಯನ್ನು ತಲುಪಿದ್ದಾರೆ ಕೂಡ!
ಅಸ್ವಸ್ಥ ಸ್ಪರ್ಧೆ, ತೋರಾಣಿಕೆ, ಕೃತಿಚೌರ್ಯ, ವಿಶ್ವಾಸಹೀನತೆ, ಕೆಲಸ ಮಾಡಿಸಿಕೊಂಡು ಮುಲಾಜಿಲ್ಲದೇ ಕಿತ್ತೆಸೆಯುವ ತಂತ್ರ, ಹಣ-ಸ್ಥಾನ-ಬಡ್ತಿಗಳೇ ’ಯಶಸ್ಸು’ ಎಂಬ ಧೋರಣೆ, ಅನುಭವ, ವಯಸ್ಸು, ನೈಪುಣ್ಯ ಹಾಗೂ ನಿಷ್ಟೆಗಳ ಕಡೆಗೆ ನಿರ್ಲಕ್ಷ್ಯ, ನೈತಿಕತೆಯನ್ನು ಗಾಳಿಗೆ ತೂರುವುದು, ಸಿಬ್ಬಂದಿಯ ಮೇಲೆ ಅನಿಯಮಿತ ಕಾರ್ಯಚಟುವಟಿಕೆಗಳ ಒತ್ತಡ, ತತ್ಪರಿಣಾಮವಾದ ಮಾನಸಿಕ ಖಿನ್ನತೆ, ದೈಹಿಕ ಶ್ರಮ, ನಿರುತ್ಸಾಹ, ನಿಷ್ಟೆಯ ಕೊರತೆ, ಹಣದಾಸೆಗಾಗಿ ಕೆಲಸದಿಂದ ಕೆಲಸಕ್ಕೆ ಹಾರುವ ವಿಶ್ವಾಸದ್ರೋಹ, ಇತ್ಯಾದಿಗಳು ಈ ಮೂಢವ್ಯವಸ್ಥೆಯ ಪರಿಣಾಮಗಳಾಗಿವೆ. ಒಟ್ಟಿನಲ್ಲಿ ಎಲ್ಲೆಲ್ಲೂ Survival of the Fittest ಎಂಬ ’ಮತ್ಸ್ಯನೀತಿ’ಯೇ (ದೊಡ್ಡ ಮೀನು ಚಿಕ್ಕಮೀನನ್ನು ಕಬಳಿಸುವ ರೀತಿ) ತಾಂಡವವಾಡುತ್ತಿದೆ. ಅಲ್ಲಲ್ಲಿ integrity, values, job satisfaction, excellence, social responsibility, accountability ಮುಂತಾದ ವಿಷಯಗಳ ಬಗ್ಗೆ ಚರ್ಚೆನಡೆದರೂ, ಅನುಷ್ಠಾನಕ್ಕಂತೂ ತರುವಲ್ಲಿ ಹೆಚ್ಚಿನವರು ವಿಫಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ನಿರ್ವಹಣಶಾಸ್ತ್ರದ ಗುಣದೋಷಗಳನ್ನು ಪುನರ್ವಿವೇಚಿಸಿ ನೋಡಬೇಕಾಗಿದೆ. ಭಗವದ್ಗೀತೆಯು ಈ ನಿಟ್ಟಿನಲ್ಲಿ ಬೆಳಕನ್ನು ಚೆಲ್ಲಬಲ್ಲ ಅತ್ಯುತ್ತಮ ಸಾಧನ. ಭಗವದ್ಗೀತೆಯು ಕಾರ್ಯಸಾಧಕನಿಗೆ/ ನಾಯಕನಿಗೆ ಕೊಡುವ ದಿಗ್ದರ್ಶನದ ಒಂದೆರಡು ಅಂಶಗಳನ್ನು ಈಗ ನೋಡೋಣ-  
೧. ಕಾರ್ಯಸಾಧಕ ತನ್ನ ಮನೋನಿಯಂತ್ರಣವನ್ನು ಹೇಗೆ ಮಾಡಬೇಕು ಎನ್ನುವುದನ್ನು ಒತ್ತಿಹೇಳುತ್ತದೆ ಭಗವದ್ಗೀತೆ- ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೆ.’ಯೋಗಸ್ಥ’ನಾಗಿ ಎಂದರೆ ’ತನ್ನ ಲಕ್ಷ್ಯ’ದಲ್ಲಿ ತನ್ನ ಸಂಪೂರ್ಣ ಮನಸ್ಸನ್ನು ನೆಟ್ಟು, ಕಾರ್ಯನಿರ್ವಹಣೆಯ ವಿಧಾನ, ವಿವರಗಳು ಹಾಗೂ ಕಾರ್ಯ ಸಂಬಂಧಗಳಗಳಲ್ಲೇ ಒಮ್ಮನದಿಂದ ತೊಡಗುವುದು’ ಎಂದರ್ಥ. ನಮ್ಮ ಈ ಏಕಾಗ್ರತೆಯನ್ನು ಸಡಿಲಿಸುವ ಅಂಶವೇ ’ಸಂಗ’ ಅಥವಾ ಮಮಕಾರ. ತಂಡದ ಯಾವುದೋ ಲಾಭದ ಮೇಲೆಯೋ, ಅಧಿಕಾರ, ಮನ್ನಣೆ, ವ್ಯಕ್ತಿ ಮುಂತಾದವುಗಳ ಬಗ್ಗೆಯೋ ನಾವು ಮಮಕಾರ ಬೆಳೆಸಿಕೊಳ್ಳುತ್ತೇವೆಯೋ, ಆಗ ನಮ್ಮ ’ಕಾರ್ಯಧ್ಯಾನ; ಹಾಳಾಗುತ್ತ ಹೋಗುತ್ತದೆ. ಕಾರ್ಯಕ್ಕಿಂತ ಹೆಚ್ಚಾಗಿ ರಾಗದ್ವೇಷಗಳು, ವೈಯಕ್ತಿಕ ಇಷ್ಠಾನಿಷ್ಟಗಳೇ ಮುಂದಾಗಿ, ಕಾರ್ಯದಲ್ಲಿ ನಿಷ್ಟೆ, ಪ್ರಾಮಾಣಿಕತೆಗಳು ಕುಗ್ಗುತ್ತವೆ. ಒಬ್ಬಿಬ್ಬರು ಹೀಗಾದರೇನೇ ಕೆಲಸದ ಗುಣಮಟ್ಟ ತಗ್ಗುತ್ತದೆ, ಇನ್ನು ಇದೇ ಭಾವ ತಂಡದಲ್ಲೆಲ್ಲ ಸಂಕ್ರಮಿಸಿದರಂತೂ ಆ ಸಂಸ್ಥೆ ಉದ್ಧಾರವಾದಂತೆಯೇ ಸರಿ! ಕಾರ್ಯಸಾಧಕರಲ್ಲಿ ಈ ಕರ್ಮನಿಷ್ಟೆ ಇಲ್ಲದಿದ್ದಲ್ಲಿ ಸುಮ್ಮನೆ ಹೆದರಿಸಿ ಬೆದರಿಸಿ ಹಣ-ಪಾರಿತೋಷಕಗಳ ಆಮಿಶವೊಡ್ಡಿ ಒಂದಷ್ಟು ಕೆಲಸ ಮಾಡಿಸುವ ತಂತ್ರವು ದೀರ್ಘಕಾಲದ ಬೆಳವಣಿಗೆಗೆ ಸರ್ವಥಾ ನಿಷ್ಪ್ರಯೋಜಕ,
೨. ’ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ……..- ಯಶಸ್ಸಿನ ಹಾದಿಯಲ್ಲಿ ಒಂದಷ್ಟು ಸೋಲು ಗೆಲುವು, ನಿರಾಶೆ, ನಿಂದೆ, ಮೆಚ್ಚುಗೆ, ಇತ್ಯಾದಿಗಳು ಬಂದು ಹೋಗುತ್ತವೆ. ಇವಕ್ಕೆಲ್ಲ ತುಂಬ ಪ್ರಾಮುಖ್ಯತೆ ಕೊಟ್ಟು ಕಾರ್ಯಸಾಧಕನು ಲಕ್ಷ್ಯದಿಂದ ವಿಚಲಿತನಾದಲ್ಲಿ, ಕೆಲಸ ಕೆಡುತ್ತದೆ. ಸಿದ್ಧಿ-ಅಸಿದ್ಧಿಗಳಲ್ಲಿ ಸಮತ್ವವನ್ನು ಸಾಧಿಸುವುದು ಯಾವುದೇ ನಾಯಕನಿಗೆ ಬಹಳ ಅಗತ್ಯವಾದ ಗುಣ. ಈ ಸೋಲು-ಗೆಲುವುಗಳನ್ನು ಜೀರ್ಣಿಸಿಕೊಂಡು, ಅವುಗಳಿಂದ ಪಾಠಕಲಿತು, ಅನುಭವವೃದ್ಧನಾಗುತ್ತಲೇ ಲಕ್ಷ್ಯದತ್ತ ಮುಂದುವರೆಯಬೇಕಾಗುತ್ತದೆ. ಅದೇ ಸಾಫಲ್ಯದ ನೀತಿ ಎನ್ನುವುದು ಶ್ರೀಕೃಷ್ಣನ ನಿರ್ದೇಶನ. ಇದು ಖಂದಿತವಾಗಿಯೂ ಕಷ್ಟಸಾಧ್ಯ. ಆದರೆ ಅಸಾಧ್ಯವಲ್ಲ, ಅಷ್ಟೇ ಅಲ್ಲ, ಇದು ಜೀವನದ ಹಾದಿಯಲ್ಲಿ ಅತ್ಯಗತ್ಯ, ಅನಿವಾರ್ಯ.
೩. ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮಾತ್ ಸ್ವನುಷ್ಠಿತಾತ ---------
    ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹತಿ---
’ಸ್ವಧರ್ಮ’ ಎಂದರೆ ಕರ್ತವ್ಯ ಕರ್ಮ, ಅಥವಾ ನಮ್ಮದೇ ವೃತ್ತಿ-ಪ್ರವೃತ್ತಿಧರ್ಮಗಳು. ಮನುಷ್ಯನು ತನ್ನ ಕರ್ತವ್ಯವನ್ನು ಬಿಡುವಂತೆಯೇ ಇಲ್ಲ, ಪರಧರ್ಮ ಎಂದರೆ ನಮ್ಮದಲ್ಲದ ಕೆಲಸ/ ಬೇರೆಯವರ ಕೆಲಸ/ ನಾವು ಮಾಡಬಾರದಾದ ಕೆಲಸ. ನಮ್ಮ ಕೆಲಸ, ಧರ್ಮ-ಕರ್ಮಗಳಿಗಿಂತ  ಬೇರೆಯವರ ಕೆಲಸವೋ, ವೃತ್ತಿಯೋ, ಪ್ರವೃತ್ತಿಯೋ ಕೆಲವೊಮ್ಮೆ ಆಕರ್ಷಕವೆನಿಸುವುದುಂಟು. ಆದರೆ ಇದು ತಾತಕಾಲಿಕ ಆಕರ್ಷಣೆ, ಹಾಗೆ ಕುರುಡುಮೋಹಕ್ಕೆ ಒಳಗಾಗಬಾರದು. ಕಷ್ಟವೆನಿಸಿದರೂ, ಸತ್ತರೂ ನಮ್ಮ ವೃತ್ತಿ-ಪ್ರವೃತ್ತಿಗಳನ್ನು ಮುಂದಾಲೋಚನೆಯಿಲ್ಲದೆ ಬಿಟ್ಟುಬಿಡಬಾರದು. ಏಕೆಂದರೆ ನಮ್ಮ ಆತ್ಮವಿಕಸನ, ಗುಣೋತ್ಕರ್ಷ ಹಾಗೂ ಸಾಫಲ್ಯಗಳು ನಮಗೆ ಸಿದ್ಧಿಸುವುದು ’ನಮ್ಮ ಹಾದಿ’ಯಲ್ಲಿ ನಾವು ನಡೆದಾಗಲೆ. ಮತ್ತೊಬ್ಬರ ಹೊರತು ಮತ್ತೊಬ್ಬರ ಅನುಕರಣೆ ಮಾಡುವ ಮೂಲಕ ಅಲ್ಲ. ಪರರಿಗೆ ಮನಸೋತು ನಮ್ಮತನವನ್ನು ಮರೆಯುವುದು ಮಾನವನ ವ್ಯಕ್ತಿತ್ವದ ಬೆಳವಣಿಗೆಗೆ ತುಂಬ ಅಪಾಯಕರ. ಸ್ವಧರ್ಮ ಎನ್ನುವುದು ಪ್ರವೃತ್ತಿ, ಪ್ರದೇಶ, ಕುಲ, ಕಸುಬು, ಸ್ವಭಾವ ಮುಂತಾದ ಹಲವಾರು ಅರ್ಥಗಳನ್ನೂ ತನ್ನಲ್ಲಿ ಹೊಂದಿದೆ. ಅದು ಎಷ್ಟೇ ಕಷವೆನಿಸಿದರೂ, ಎಷ್ಟೇ ಸವಾಲುಗಳನ್ನು ಎದುರಿಸಬೇಕಾದರೂ, ಫಲಾನುಭವ ಅದೆಷ್ಟೇ ನಿಧಾನವಾದರೂ, ಮನುಷ್ಯ ತನ್ನ ಸ್ವೋಪಜ್ಞತೆ, ಸ್ವಪ್ರಯತ್ನ, ಸ್ವಪ್ರವೃತ್ತಿ, ಸ್ವವಿಧಾನವನ್ನೇ ನೆಚ್ಚಿ ಸಾಗಬೇಕಾಗುತ್ತದೆ. ಅದನ್ನು ಬಿಟ್ಟು ನಡೆದರೆ ವ್ಯಕ್ತಿಯು ಕುಗ್ಗುತ್ತ ಹೋಗುತ್ತಾನೆ, ಮನೋದಾಸ್ಯಕ್ಕೆ ಒಳಪಡುತ್ತಾನೆ, ಕ್ರಮೇಣ ತನ್ನ ಸತ್ವಸಾಮರೆಥ್ಯಗಳನ್ನು ಮರೆತು ಪರರ ವಶವಾಗುತ್ತ ಹೋಗುತ್ತಾನೆ. ಇದಕ್ಕಿಂತ ಹೇಯವಾದದ್ದು ಏನಿದೆ? ಭಾರತೀಯರನ್ನು ಗುಲಾಮರನ್ನಾಗಿಸಿ ತನ್ನ ಮುಷ್ಟಿಯಲ್ಲಿ ಹಿಡಿದು ಆಡಿಸಲು ಬ್ರಿಟಿಷರು ಮಾಡಿದ್ದು ಇಷ್ಟೇ- ನಮ್ಮ ಎಳೆಯರನ್ನು ಸ್ವಧರ್ಮದಿಂದ ಬಿಡಿಸಿ, ತಮ್ಮನ್ನು ಅನುಕರಣೆ ಮಾಡುವಂತೆ ಮಾಡಿದರು. ಅವರ ನಡೆ-ನುಡಿ-ಹಾವ-ಭಾವಗಳನ್ನು ಅನುಕರಿಸುವುದೇ ’ಪ್ರಗತಿ’ ಎಂಬ ಬ್ರಮೆಗೆ ಒಳಪಟ್ಟು, ತಮ್ಮ ಕುಲ, ಆಚಾರ, ಜ್ಞಾನ, ಭಾಷೆಗಳ ಬಗ್ಗೆ ಕೀಳರಿಮೆ ತಾಳಿದ ಭಾರತೀಯರೆಲ್ಲ ಸುಲಭದಲ್ಲಿ ಅವರ ವಶವಾಗುತ್ತ ಹೋದರು! ಈ ಹಿನ್ನಲೆಯಲ್ಲೂ ಕೃಷ್ಣನು ಒತ್ತಿ ಹೇಳುವ ’ಸ್ವಧರ್ಮನಿಷ್ಠೆಯು’ ಎಷ್ಟು ಮುಖ್ಯ ಎನ್ನುವುದು ಮನವರಿಕೆಯಾಗುತ್ತದೆ. 
೪. ಉದ್ಧರೇದಾತ್ಮನಾತ್ಮಾನಂ  -----(ತನ್ನ ಉದ್ಧಾರಕ್ಕೆ ತಾನೆ ಕಾರಕ).
ಯಾರೋ ಒಡ್ಡುವ ಅವಕಾಶಕ್ಕಾಗಿ, ಯಾರದೋ ಮನ್ನಣೆಗಾಗಿ ಕಾಯುತ್ತ ಹಗಲುಗನಸು ಕಾಣುವವನು ಮೂರ್ಖನೇ ಸರಿ. ನಾವು ಹೊರಗಡೆಯ ಅನುಕೂಲಗಳನ್ನೂ, ವ್ಯಕ್ತಿಗಳನ್ನು ಮಾತ್ರವೇ ನೆಚ್ಚದೆ, ನಮ್ಮ ಆಂತಸ್ಸತ್ತ್ವವನ್ನು ನೆಚ್ಚಿ ಸಾಗಬೇಕು. ಹಾಗೆ ಮಾಡುವಾಗ ಕಷ್ಟಸಹಿಷ್ಣುತೆ, ತಾಳ್ಮೆ, ಪರಿಶ್ರಮ, ಕೌಶಲಗಳನ್ನು ಬೆಳೆಸಿಕೊಳ್ಳುತ್ತ ಮನುಷ್ಯ ಗಟ್ಟಿಯಾಗುತ್ತಾನೆ. ’ನಾನು ನಿಷ್ಪ್ರಯೋಜಕ, ದುರ್ಬಲ, ಇನ್ನೂ ಅಪಕ್ವ, ಅಸಮರ್ಥ, ಅಜ್ಞಾನಿ’ ಎಂಬ ಭಾವವನ್ನು ತಾಳಿ ಕುಗ್ಗುವುದು ಸರಿಯಲ್ಲ ಎನ್ನುತ್ತಾನೆ ಶ್ರೀಕೃಷ್ಣ- "ನ ಆತ್ಮಾನಂ ಅವಸಾದಯೇತ್ಜಗತ್ತಿನ ಹಿರಿಯರ ಮಾಹಾತ್ಮ್ಯವನ್ನು ಮೆಚ್ಚಿ ತಲೆಬಾಗುವುದೇ ವಿನಯವಾದರೆ, ತನ್ನ ಸಾಮರ್ಥ್ಯವನ್ನು ತಾನೆ ಮರೆತು ಕುಗ್ಗಿ ಪರರ ದಾಸ್ಯಕ್ಕೆ ಒಳಗಾಗುವುದು ಮೂರ್ಖತನ. ಈ ’ಆತ್ಮಾವಸಾದನ’ವನ್ನೆಂದೂ ಮಾಡಿಕೊಳ್ಳಬಾರದೆಂಬ ಕೃಷ್ಣನ ಮಾತು ಅತ್ಯಂತ ಅರ್ಥಪೂರ್ಣ.
ಕೃಷ್ಣ ಹೇಳುತ್ತಾನೆ ಆತ್ಮೈವ ಆತ್ಮನಃ ಬಂಧುಃ ಆತ್ಮೈವ ರಿಪುರಾತ್ಮಮನಃ (ನಮ್ಮ ಬಂಧುವೂ ನಾವೇ ನಮ್ಮ ವೈರಿಯೂ ನಾವೆ). ತನ್ನ ಸೋಲು, ತೊಂದರೆ, ಕಷ್ಟ, ಅವಮಾನಗಳಿಗೆ ಸದಾ ಬೇರೊಬ್ಬರೇ ಕಾರಣ ಎಂದು ಬೆಟ್ಟುತೋರಿಸುವುದು ಮಾನವನ ಕುಬುದ್ಧಿ. ಆದರೆ ಈ ಜಗತ್ತಿನಲ್ಲಿ ನಿಂದಾ-ಸ್ತುತಿ/ ಮಾನಾಪಮಾನಗಳು/ ಸೋಲು-ಗೆಲುವುಗಳು ಲೋಕದ ರೀತಿಗಳೆ ಆಗಿವೆ. ಆ ಎಲ್ಲವೂ ನಮಗೆ ಅನುಭವವನ್ನೂ ಪಕ್ವತೆಯನ್ನೂ ಜ್ಞಾನವನ್ನೂ ಕೊಡುವ ಸಲುವಾಗಿ ಬಂದುಹೋಗುತ್ತಲೇ ಇರುತ್ತವೆ. ಅವುಗಳಿಂದ ಪಾಠಕಲಿತು ಮುಂದೆಸಾಗುವ ಬದಲು, "ಅವುಗಳಿಂದಾಗಿ ನಾವು ಉದ್ಧಾರವಾಗುತ್ತಿಲ್ಲ’ ಎಂದು ಕೈಕಟ್ಟಿಕೂರುವುದು ಅಥವಾ ಅವರಿವರತ್ತ ಬೆಟ್ಟು ಮಾಡಿ ನಮ್ಮ ದೋಷದ ಉತ್ತರದಾಯಿತ್ವದಿಂದ ಜಾರಿಕೊಳ್ಳುವುದು ಹೇಡಿತನ. ನಿರ್ವಹಣಶಾಸ್ತ್ರವು ಇದನ್ನೇ accountability ಎನ್ನುವ ಹೆಸರಿನಿಂದ ಚರ್ಚಿಸುತ್ತದೆ.
ಆಧುನಿಕ ಯುಗದಲ್ಲಿ ’ಕಾರ್ಯಸಾಧಕ’ ಎಂದರೆ ಕೇವಲ ’ಹೆಚ್ಚು productivity ಕೊಡುವವನು’ ಎಂಬ ವ್ಯಾಖ್ಯಾನವೇ ಬಂದುಬಿಟ್ಟಿದೆ. ಆ  productivityಯನ್ನೂ ಕೇವಲ ಹಣದ ಲಾಭ, ವೇಗದ ಪ್ರಮಾಣ, graph growth ಇತ್ಯಾದಿಗಳ ಆಧಾರದ ಮೇಲೆ ಗುರುತಿಸುವ, ಹಾಗೂ ಸಿಬ್ಬಂದಿ ಎಂದರೆ ”merchantile products’, ’hirable commodity’, ’used, replaced & discarded at will’ ಎಂಬಂತೆ ಕಾಣುವ ಅಸಮೀಚೀನವಾದ ಕ್ರಮವನ್ನು ಮೈಗೂಡಿಸಿಕೊಂಡಿರುವ ಇಂದಿನ ಔದ್ಯಮಿಕ ಕ್ಷೇತ್ರ ಭಗವದ್ಗೀತೆಯಿಂದ ಕಲಿಯಬೇಕಾದದ್ದು ಬಹಳಷ್ಟು ಇದೆ.
ಭಗವದ್ಗೀತೆಯ ಉದ್ದಗಲಕ್ಕೂ ಇಂತಹ ಹಲವಾರು ಜೀವನನೀತಿಗಳು, ಸಾಫಲ್ಯಸೂತ್ರಗಳು ಇವೆ. ಸ್ಥಲದ ಮಿತಿಯಿಂದಾಗಿ ಇಲ್ಲಿಗೆ ವಿರಮಿಸೋಣ.

 Published in Sampadasalu Magazine- 2016

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ