ಶುಕ್ರವಾರ, ಮಾರ್ಚ್ 17, 2017

ಮಹಾಗುರು-ಮಹಾಶಿಷ್ಯ
ಆಶ್ಚರ್ಯೋ ವಕ್ತಾ ಕುಶಲೋಸ್ಯ ಲಭ್ಧಾ ಎನ್ನುವುದು ವೇದಾಂತದ ಉಕ್ತಿ ‘ಗುರುವು ಆಶ್ಚರ್ಯಕರನಾಗಿರಬೇಕು ಶಿಷ್ಯನು ಕುಶಲನಾಗಿರಬೇಕು’ ಎನ್ನುವ ಸುಂದರ ಆದರ್ಶವನ್ನೇ ನಮ್ಮ ಮುಂದೆ ಸ್ಥಾಪಿಸುತ್ತದೆ. ರಾಮಕೃಷ್ಣ-ವಿವೇಕಾನಂದರ ಸಂಬಂಧ ಇದಕ್ಕೆ ನಿದರ್ಶನದಂತಿದೆ.
ಜಟ್ಟಿಯಂತೆ ಮೈಕಟ್ಟು, ಪೌರ್ವಾತ್ಯ-ಪಾಶ್ಚಾತ್ಯ ಜ್ಞಾನಪ್ರಕಾರಗಳಲ್ಲಿ ನಿಸ್ಸೀಮಪಾಂಡಿತ್ಯ, ಅಪ್ರತಿಮ ವಾದಪ್ರಖರತೆಗಳಿಂದ ಕೂಡಿದ ನರೇಂದ್ರನಿಗೂ, ಶಾಲಮಟ್ಟದ ವಿದ್ಯಾಭ್ಯಾಸವನ್ನೂ ಪಡೆಯದ, ಸರಳ ಹಳ್ಳಿಯ ವ್ಯಕ್ತಿಯಾದ, ಲೋಕಾತೀತಭಾವದಲ್ಲಿ ಮೈಮರೆಯುತ್ತಿದ್ದ, ಬಾಲಕನಂತೆ ಹೆಚ್ಚುಕಡಿಮೆ ದಿಗಂಬರರಾಗಿಯೇ ಇರುತ್ತಿದ್ದ ‘ವಿಚಿತ್ರ ಪೂಜಾರಿ ರಾಮಕುಷ್ಣ’ನಿಗೂ ಎಲ್ಲಿಯ ನಂಟು! ಅವರಿಬ್ಬರ ನಡುವೆ ಅದೆಂತಹ ಆಕರ್ಷಣೆ ಹಾಗೂ ಗಾಢ ಸ್ನೇಹ! ಅದೆಂತಹ ಅನನ್ಯಸಾಧಾರಣ ಗುರು-ಶಿಷ್ಯ ಸಂಬಂಧ ಅದು! ಮಾತುಮಾತಿಗೂ ತೀವ್ರವಾದದಿಂದ ಮೇಲೆರಗುತ್ತಿದ್ದ, ತಮ್ಮ ದರ್ಶನಾನುಭವಗಳನ್ನೇ ತೀವ್ರವಾಗಿ ಪ್ರಶ್ನಿಸುತ್ತಿದ್ದ ನವಯುಗದ ತರುಣ ನರೇಂದ್ರನಲ್ಲಿ ರಾಮಕೃಷ್ಣರಿಗೆ ಅದೇಕಂತಹ ಅತಿಶಯ ಪ್ರೀತಿ, ವಿಶ್ವಾಸಗಳು? ತನ್ನ ತರ್ಕಕ್ಕೆ ಒಪ್ಪಿಗೆಯಾಗದ ಹಾಗೂ ‘ಅಸಹಜವಾಗಿ ವರ್ತಿಸುವ’ ಪರಮಹಂಸರ ಬಗ್ಗೆ ನರೇಂದ್ರನಿಗಾದರೋ ಅದೇಕಷ್ಟು ಆಕರ್ಷಣೆ, ವಿಶ್ವಾಸ ಮತ್ತು ಗೌರವ? ಮೇಲ್ನೋಟಕ್ಕೆ ಉತ್ತರ-ದಕ್ಷಿಣ ಧ್ರುವಗಳಂತೆ ಕಾಣುತ್ತಿದ್ದ ರಾಮಕೃಷ್ಣ-ನರೇಂದ್ರರು, ಅಂತರಂಗದ ಸತ್ಯಾನ್ವೇಷಣೆಯ ನೆಲೆಯಲ್ಲಿ ಸಮಾನತೆಯನ್ನು ಕಂಡುಕೊಂಡರು. ಅವರ ದಿವ್ಯ ಸಂಬಂಧಾರವಿಂದವು ಅರಳಿ ಪಸರಿಸಿದ ಸೌರಭವು ಜಗಜನರನ್ನು ಹರಸಿ ಸಂತೈಸುವ ಲೋಕಕಲ್ಯಾಣಕಾರಿ ಪಾರಮ್ಯವಾಗಿ ಪರಿಣಮಿಸಿತು,  
ಗುರುವರನ ಹಿನ್ನಲೆ
ರಾಮಕೃಷ್ಣರು ಹುಟ್ಟಿದ್ದು ಕುಗ್ರಾಮದಲ್ಲಿ, ಗೀತ, ನೃತ್ಯ, ನಾಟಕ, ಹರಿಕಥೆ, ಚಿತ್ರಕಲೆ, ಮಣ್ಣಿನ ಮೂರ್ತಿಗಳ ನಿರ್ಮಾಣ, ಅಣಕುಕಲೆ ಮುಂತಾದ ಅಭಿಜಾತಪ್ರತಿಭೆಗಳಿದ್ದ ಇವರು ಮಹಾದೈವಭಕ್ತರೂ, ಪ್ರಬುದ್ಧ ಜ್ಞಾನಿಯೂ ಆಗಿದ್ದರು. ಶಾಲಾಶಿಕ್ಷಣವನ್ನು “ಅಕ್ಕಿ-ಬಾಳೆಹಣ್ಣು-ದಕ್ಷಿಣೆ ಮೂಟೆಕಟ್ಟುವ ವಿದ್ಯೆ’ ಎಂದು ಬಾಲ್ಯದಲ್ಲೇ ತಿರಸ್ಕರಿಸಿ ತನ್ನದೇ ಸ್ವತಂತ್ರ ವಿಚಾರ ಸಾಧನಾಪಥವನ್ನು ಕಂಡುಕೊಂಡ ಧೀಮಂತರು. ಒಂಭತ್ತು ವರ್ಷದ ಬಾಲಕನಾಗಿದ್ದಾಗಲೇ ಕಾಡಿನ ಏಕಾಂತದಲ್ಲಿ ಯೋಗಸಾಧನೆಗಳಲ್ಲಿ ಮಗ್ನರಾದರು. ಮುಂದೆ ಕೋಲಕತ್ತೆಯ ದಕ್ಷಿಣೇಶ್ವರದ ದೇಗುಲದಲ್ಲಿ ಅರ್ಚಕ ವೃತ್ತಿಯನ್ನು ಪ್ರವೇಶಿಸಬೇಕಾಯಿತು. ಗರ್ಭಗುಡಿಯ ಕಾಳಿವಿಗ್ರಹವು ಇವರ ಪಾಲಿಗೆ ಕೇವಲ ಮೃಣ್ಮಯಶಿಲೆಯಾಗಿರದೆ, ಪರತತ್ವದ ಚಿನ್ಮಯ ಸಾನ್ನಿಧ್ಯವಾಯಿತು, ಅನಂತ ಆಧ್ಯಾತ್ಮಿಕ ಲೋಕಕ್ಕೆ ಹೆಬ್ಬಾಗಿಲಾಯಿತು. ಶುದ್ಧಚಾರಿತ್ಯ, ಸತ್ಯ, ವಿರಕ್ತಿ, ಮುಮುಕ್ಷುತ್ವಗಳ ಬಲದಿಂದ ಸಾಗಿದ ಇವರಿಗೆ  ದಿವ್ಯದರ್ಶನಾನುಭವಗಳೂ, ಜ್ಞಾನ-ಮಂತ್ರ-ತಂತ್ರ-ಸಿದ್ಧಿಗಳು, ದೇವತಾರಹಸ್ಯಗಳು ಸಾಕ್ಷಾತ್ಕೃತವಾದವು. ಎಲ್ಲ ಯೋಗಮಾರ್ಗಗಳಿಗೂ ಅವರ ವ್ಯಕ್ತಿತ್ವವೇ ಒಂದು ಪ್ರಯೋಗಾಲಯವಾಯಿತು. ‘ಜೀವ-ಬ್ರಹ್ಮಭೇದವಳಿದು, ಅಖಂಡ ಬ್ರಹ್ಮಾನುಭವದ ತುತ್ತತುದಿಯಾದ ನಿರ್ವಿಕಲ್ಪಸಮಾಧಿಯನ್ನು ಮುಟ್ಟಿದರು, ಪರಮಹಂಸರಾದರು.
ದಕ್ಷಿಣೇಶ್ವರದ ಮೂಲೆಯಲ್ಲಿ ಸಡಗರವಿಲ್ಲದೆ ಅರಳಿದ ಈ ದಿವ್ಯ ಗುರು-ಕಮಲವನ್ನರಸಿ ಮುಮುಕ್ಷು-ಭೃಂಗಗಳು ತಂಡತಂಡವಾಗಿ ಬಂದರು. ಅಂತೆಯೇ ತನ್ನ ಸತ್ಯಸಾಕ್ಷಾತ್ಕಾರದ ಮಾರ್ಗವನ್ನೂ, ‘ನೀವು ದೇವರನ್ನು ಕಂಡಿದ್ದೀರಾ’ ಎನ್ನುವ ಪ್ರಶ್ನೆಗೆ ಉತ್ತರವನ್ನು ಅರಸಿ ರಾಮಕೃಷ್ಣರ ಬಳಿಗೆ ಬಂದವನು ನರೇಂದ್ರನಾಥ ದತ್ತ.     
ಶಿಷ್ಯವರನ ಹಿನ್ನಲೆ
ಶ್ರೀಮಂತ ಸುಸಂಸ್ಕೃತ ದತ್ತಮನೆತನದಲ್ಲಿ ಹುಟ್ಟಿದ್ದ ನರೇಂದ್ರನಾಥ ತಂದೆಯಿಂದ ವಿಮರ್ಶಾತ್ಮಕ ಚಿಂತನೆಯನ್ನೂ, ಸಮಾಜಪರ ಕಾಲಜಿಯನ್ನೂ ಅಧ್ಯಯನಶೀಲತೆಯನ್ನೂ ಮೈಗೂಡಿಸಿಕೊಂಡ. ತಾಯಿಯಿಂದ ದೈವಭಕ್ತಿ, ಭಾರತೀಯ ಕಲೆ-ಸಂಸ್ಕೃತಿಗಳ ಒಲವನ್ನು ಹಾಗೂ ಪುರಾಣಪುರುಷರ ಆದರ್ಶಗಳನ್ನು ಮೈಗೂಡಿಸಿಕೊಂಡ. ಮೂರುವರ್ಷದ ಬಾಲನಾಗಿರುವಾಗಿನಿಂದ ಆಗಾಗ ಗಾಢಧ್ಯಾನದಲ್ಲಿ ತಲ್ಲೀನವಾಗುವ, ಮಲಗುವಾಗ ಭ್ರೂಮಧ್ಯದಲಿ ಜ್ಯೋತಿಯನ್ನು ಕಾಣುತ್ತ ಅದರಲ್ಲೇ ತನ್ಮಯವಾಗುವ ಯೋಗಸಿದ್ಧಿಗಳು ಇವನ ಜನ್ಮಜಾತ ಸುಯೋಗಗಳು.
ಎಲೇವಯಸ್ಸಿನಲ್ಲೇ ಸಂಸ್ಕೃತ, ಬಂಗಾಳಿ, ಹಿಂದೀ ಹಾಗೂ ಆಂಗ್ಲಭಾಷೆಗಳಲ್ಲೂ, ಪಾಶ್ಚಾತ್ಯ ಹಾಗೂ ಪೌರ್ವಾತ್ಯ ಸಾಹಿತ್ಯ, ಕಾವ್ಯ, ತತ್ವಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರಾದಿಗಳಲ್ಲೂ ಪಾಂಡಿತ್ಯ ಹಾಗೂ ಸ್ವತಂತ್ರ ಚಿಂತನೆ, ವಾದಪ್ರಾವೀಣ್ಯ. ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ, ನೃತ್ಯ-ನಾಟಕ, ಕುಸ್ತಿ, ಕಸರತ್ತು, ಲಾಟೀಯಾಟ, ಕ್ರಿಕೆಟ್, ಕುದುರೆ ಸವಾರಿ, ಅಡುಗೆ ಮುಂತಾದ ಹಲವು ಕಲಾಪಗಳಲ್ಲಿ ಪರಿಣತಿ, ಆರೋಗ್ಯಶಾಲಿ ಮೈಕಟ್ಟುಗಳು ಇವನ ವ್ಯಕ್ತಿತ್ವದ ಹೆಗ್ಗುರುತುಗಳು! ಧೈರ್ಯ, ಪರೋಪಕಾರ ಹಾಗೂ ಸ್ನೇಹಶೀಲತೆಯಿಂದಾಗಿ ತನ್ನ ಸಂಗಡಿಗರ ‘ಅನಭಿಷಿಕ್ತನಾಯಕ’ನೆನಿಸಿದ. ಪಾಂಡಿತ್ಯ ಪ್ರತಿಭೆಗಳಿಗೆ ನಿಲ್ಲದೆ ಆಧ್ಯಾತ್ಮಿಕಾನುಭವಗಳ ಆಳಕ್ಕೆ ಇಳಿಯುವ ಹಂಬಲ ಕೌಮಾರ್ಯದಲ್ಲೇ. ದೇವರನ್ನು ಕಾಣಬಹುದೆ? ಕಂಡವರಿದ್ದಾರೆಯೆ? ಎನ್ನುವ ಪ್ರಶ್ನೆಗಳನ್ನು ಹೊತ್ತು  ಖ್ಯಾತಿವೆತ್ತ ಹಲವು ಯೋಗಿಗಳನ್ನು, ತತ್ತ್ವಜ್ಞಾನಿಗಳು ಭೇಟಿ ಮಾಡಿ ಕೇಳಿದ- “ನೀವು ದೇವರನ್ನು ಕಂಡಿದ್ದೀರಾ?” ಎಂದು. ಆದರೆ ಪುಸ್ತಕ ಪಾಂಡಿತ್ಯದ ವ್ಯಾಖ್ಯಾನಗಳ, ಮುಗ್ಧನಂಬಿಕೆಗಳು ಕಾಣಬಂದವೆ ಹೊರತು ‘ಹೌದು’ ಎನ್ನುವ ದಿಟ್ಟ ಉತ್ತರ ಮಾತ್ರ ಎಲ್ಲೂ ಸಿಗಲಿಲ್ಲ. ದಿವ್ಯ ‘ಭಾವಸಮಾಧಿಗೆ ಏರುತ್ತಿದ್ದ ದಕ್ಷಿಣೇಶ್ವರದ ಸಂತನ’ ಬಗ್ಗೆ ಆತ ಕಾಲೇಜಿನಲ್ಲಿ ಕೇಳಿದ್ದ, ರಾಮಕೃಷ್ಣರನ್ನು ಅದೇ ಪ್ರಶ್ನೆ ಕೇಳಿದ. ದಿಟ್ಟ ಉತ್ತರವನ್ನು ಪಡೆದನಲ್ಲದೆ, ತನ್ನ ಸ್ವಾನುಭವಕ್ಕೂ ಜೀವನೋದ್ದೇಶದ ಪೂರ್ತಿಗೂ ಅವರ ಪದತಲದಲ್ಲೇ ನೆಲೆಯನ್ನು ಕಂಡುಕೊಂಡ.
ಶಕ್ತಿದ್ವಯದ ಸಂಗಮ
ರಾಮಕೃಷ್ಣರಿಗೆ ಈ ಅಸಾಧಾರಣ ಶಿಷ್ಯನ ಆಗಮನದ ಸೂಚನೆ ಮೊದಲೇ ಸಿಕ್ಕಿತ್ತು. ಅವರು ತಮಗಾದ ದಿವ್ಯದರ್ಶನಗಳಲ್ಲಿ ‘ಸಚ್ಚಿದಾನಂದದ ಕಡಲಲ್ಲಿ ಧ್ಯಾನಮಗ್ನರಾದ ಋಷಿಗಳ ಪೈಕಿ ಒಬ್ಬನು ಭೂಮಿಯಲ್ಲಿ ಹುಟ್ಟಿಬರುವುದಾಗಿ ಕಂಡರು. ಆತನೇ ನರೇಂದ್ರ ಎನ್ನುವುದನ್ನು ಗುರುತಿಸಿದರು. ನರೇಂದ್ರ ಹುಟ್ಟುವ ಪೂರ್ವದಲ್ಲಿ ಕಾಶಿಯ ಕಡೆಯಿಂದ ದಿವ್ಯಬೆಳಕಿನ ಪುಂಜವೊಂದು ಕೋಲಕತ್ತೆಗೆ ಹೊಮ್ಮಿ ಬಂದದನ್ನು ಕಂಡರು. ಭುವನೇಶ್ವರಿ ನರೇಂದ್ರನಂತಹ ಮಗನನ್ನು ಪಡೆಯಲು ಕಾಶಿವೀರೇಶ್ವರನಲ್ಲಿ ಹೊತ್ತ ಹರಕೆಯು ಇಲ್ಲಿ ಸ್ಮರಣಿಯ. “ನರೇಂದ್ರ ಧ್ಯಾನಸಿದ್ಧ ಋಷಿ, ತನ್ನ ನಿಜಸ್ವರೂಪವನ್ನು ತಿಳಿದೊಡನೆಯೇ ಇಚ್ಛಾಮಾತ್ರದಿಂದ ಯೋಗಮುಖೇನ ದೇಹವನ್ನು ತ್ಯಜಿಸಿಬಿಡುತ್ತಾನೆ” ಎಂದರು.
ಸುರೇಂದ್ರನಾಥ ಮಿತ್ರನೆಂಬುವನು ಕೋಲಕತ್ತೆಯ ತನ್ನ ಮನೆಯಲ್ಲಿ ಪರಮಹಂಸರನ್ನು ಆಮಂತ್ರಿಸಿ ಸತ್ಸಂಗಕೂಟವನ್ನು ಏರ್ಪಡಿಸಿದ್ದ. ನೆರೆಮನೆಯಲ್ಲಿದ್ದ ನರೇಂದ್ರನನ್ನು ಹಾಡಲು ಆಹ್ವಾನಿಸಿದ್ದ. ನರೇಂದ್ರ ತಂಬೂರಿ ಮೀಟುತ್ತ ಪಕ್ಕವಾದ್ಯದೊಂದಿಗೆ ಸುಶ್ರಾವ್ಯವಾಗಿ ಹಾಡುತ್ತಿದ್ದಂತೆ ರಾಮಕೃಷ್ಣರು ಭಾವಸಮಾಧಿಗೇರಿಬಿಟ್ಟರು! ಆತನ ಗಾನಪ್ರತಿಭೆ ಹಾಗೂ ಜಾಗೃತಮನಸ್ಸನ್ನು ಮನಸಾ ಮೆಚ್ಚಿದರು. 'ದಕ್ಷಿಣೇಶ್ವರಕ್ಕೆ ಬಾ' ಎಂದು ಪ್ರೀತಿಯಿಂದ ಆಹ್ವಾನಿಸಿದರು.
ನರೇಂದ್ರ ತನ್ನ ಎದೆಯಾಳದ ಪ್ರಶ್ನೆಯನ್ನು ಹೊತ್ತು ಸ್ನೇಹಿತನೊಡನೆ ದಕ್ಷಿಣೇಶ್ವರಕ್ಕೆ ಹೋದ. ರಾಮಕೃಷ್ಣರು ಹೀಗೆ ಸ್ಮರಿಸುತ್ತಾರೆ- “ನರೇಂದ್ರ ಮೊದಲ ಸಲ ಪಶ್ಚಿಮದ ಬಾಗಿಲಿನಿಂದ ಒಳಗೆ ಬಂದ. ಇತರರಂತೆ ಅವನಿಗೆ ದೇಹಭಾವವೇ ಇರಲಿಲ್ಲ, ಬಟ್ಟೆಬರೆಯ ಕಡೆ ಗಮನವಿರಲಿಲ್ಲ, ಅವನ ಕಣ್ಣುಗಳು ಅಂತರ್ಮುಖವಾಗಿದ್ದ ಮನಸ್ಸನ್ನು ಸೂಚಿಸುತ್ತಿದ್ದವು. ‘ಕೋಲಕತ್ತದಂತಹ ಭೋಗದ ನಗರದಿಂದ ಇಂತಹ ಯೋಗಶೀಲವ್ಯಕ್ತಿ ಬರುತ್ತಿದ್ದಾನಲ್ಲ!’ ಎಂದು ಆಶ್ಚರ್ಯಪಟ್ಟೆ. ನಾವು ವಿನಂತಿಸಿಕೊಂಡಾಗ ಆತ ಹಾಡಿದ “ಮನ ಚಲೋ ನಿಜ ನಿಕೇತನೆ (ಓ ಮನವೇ ನಿನ್ನ ನಿಜಧಾಮಕ್ಕೆ ತೆರಳು—) ಆನಂದಪಾರವಶ್ಯದಲ್ಲಿ ನಾನು ಸಮಾಧಿಸ್ಥನಾಗಿಬಿಟ್ಟೆ------“.
ರಾಮಕೃಷ್ಣರು ನರೇಂದ್ರನನ್ನು ಕೈ ಹಿಡಿದು ಪಕ್ಕದ ವರಾಂಡಕ್ಕೆ ಒಯ್ದು ಬಾಗಿಲನ್ನು ಮುಚ್ಚಿ ಧಾರಾಕಾರವಾಗಿ ಪ್ರೇಮಾಶ್ರು ಸುರಿಸುತ್ತ ಕೈಗಳನ್ನು ಹಿಡಿದು ಹೇಳಿದರು “ಯಾಕಪ್ಪಾ ಇಷ್ಟು ತಡಮಾಡಿದೆ? ಯಾಕೆ ಹೀಗೆ ನನ್ನನ್ನು ಸತಾಯಿಸಿದೆ? ಈ ಪ್ರಾಪಂಚಿಕ ಜನರ ಮಾತುಗಳಿಂದ ನನ್ನ ಕಿವಿಗಳು ಸೀದುಹೋಗಿವೆ. ನನ್ನನ್ನು ಅರ್ಥಮಾಡಿಕೊಳ್ಳುವವರ ಬಳಿಯಲ್ಲಿ ಎಲ್ಲವನ್ನೂ ಹೇಳಿಕೊಳ್ಳಲು ಕಾದಿದ್ದೆ!” ಭಾವುಕರಾಗಿ ಮುಂದುವರೆಸಿದರು- “ನನಗೆ ಗೊತ್ತು, ನೀನು ಮಾನವ ಕೋಟಿಯ ಉದ್ಧಾರಕ್ಕಾಗಿ ಬಂದಿರುವ ನರಋಷಿಯ ಅವತಾರ!“ ನರೇಂದ್ರನಿಗೆ ಕಸಿವಿಸಿಯಾಯಿತು. “ಇದೆಂತಹ ವಿಚಿತ್ರವ್ಯಕ್ತಿಯಪ್ಪ ಈತ! ಪೂರ್ಣ ಹುಚ್ಚನೇ ಇರಬೇಕು----“ ಎಂದುಕೊಂಡ. ರಾಮಕೃಷ್ಣರು ಮಿಠಾಯಿ, ಕಲ್ಲುಸಕ್ಕರೆ ಬೆಣ್ಣೆಗಳನ್ನು ತಂದು ಕೈಯಾರೆ ನರೇಂದ್ರನಿಗೆ ತಿನ್ನಿಸಿ  ‘ಮತ್ತೆ ಬರಲೇ ಬೇಕು’ ಎಂದು ಮಾತು ತೆಗೆದುಕೊಂಡರು. ಕೋಣೆಗೆ ಹಿಂದಿರುಗಿದ ಮೇಲೆ ಎಲ್ಲರಿಗೂ ಆತನನ್ನು ತೋರಿಸಿ “ನೋಡಿ ನರೇಂದ್ರನ ಮುಖದಲ್ಲಿ ಹೇಗೆ ಸರಸ್ವತೀ ಬೆಳಗುತ್ತಿದ್ದಾಳೆ!” ಎಂದು ಉದ್ಗರಿಸಿದರು.
ನರೇಂದ್ರ ರಾಮಕೃಷ್ಣರನ್ನು ದಿಟ್ತವಾಗಿ ನೋಡುತ್ತ ಕೇಳಿಯೇಬಿಟ್ಟ- “ನೀವು ದೇವರನ್ನು ಕಂಡಿದ್ದೀರಾ?” ರಾಮಕೃಷ್ಣರು ಶಾಂತವಾಗಿ ದೃಡವಾಗಿ ನುಡಿದರು “ಹೌದು ಕಂಡಿದ್ದೇನೆ. ನಿನಗೂ ತೋರಿಸಬಲ್ಲೆ. ಆದರೆ ದೇವರು ನಿಜಕ್ಕೂ ಯಾರಿಗೆ ತಾನೆ ಬೇಕಿದ್ದಾನೆ?” ನರೇಂದ್ರ ಬೆರಗಾದ. ರಾಮಕೃಷ್ಣರ ಮಾತಿನಲ್ಲಿ ಸರಳತೆ, ದೃಢತೆ ನಿಷ್ಕಪಟತನಗಳಿದ್ದವು. ಸಂತೋಷವಾಯಿತು. ಆದರೆ ಅವರ ವರ್ತನೆ, ಭಾವಸಮಾಧಿಗಳು ಎಲ್ಲ ಒಗಟಾಗಿ ಉಳಿದವು.
ತಿಂಗಳ ಬಳಿಕ ದಕ್ಷಿಣೇಶ್ವರಕ್ಕೆ ಒಬ್ಬನೇ ಹೋದ. ಈ ಬಾರಿ ಹರ್ಷಗೊಂಡ ರಾಮಕೃಷ್ಣರು ತಮ್ಮಷ್ಟಕ್ಕೇ ಏನನ್ನೋ ಹೇಳಿಕೊಳ್ಳುತ್ತ ನರೇಂದ್ರನ ಎದೆಯ ಮೇಲೆ ಪಾದವನ್ನಿಟ್ಟುಬಿಟ್ಟರು. ಆ ದಿವ್ಯಸ್ಪರ್ಶಕ್ಕೆ ನರೇಂದ್ರ ಪುಳಕಗೊಂಡು ವಿಸ್ಮಯಕಾರಿ ಅನುಭವಕ್ಕೆ ಜಾರತೊಡಗಿದ- ಸುತ್ತಲ ದೃಶ್ಯಪ್ರಪಂಚವೆಲ್ಲ ಅಖಂಡದಲ್ಲಿ ಕರಗಿ ಲಯವಾದಂತಾಗಿ ನರೇಂದ್ರ ತಲ್ಲಣಿಸಿದ, ಭಯದಿಂದ ಚೀರಿದ- “ಇದೇನು ಮಾಡುತ್ತಿದ್ದೀರಿ ನೀವು, ಮನೆಯಲ್ಲಿ ತಾಯ್ತಂದೆಯರಿದ್ದಾರೆ---“ ರಾಮಕೃಷ್ಣರು ನಗುತ್ತ- “ಇಂದಿಗಿಷ್ಟು ಸಾಕು. ಎಲ್ಲ ಸಕಾಲದಲ್ಲಿ ಆಗುತ್ತದೆ---“ ಎನ್ನುತ್ತ ಆತನನ್ನು ಸಹಜಸ್ಥಿತಿಗೆ ಬರೆಸಿದರು. ಸಂಮೋಹಿನಿ, ವಶೀಕರಣಗಳಿಗೆಲ್ಲ ತುತ್ತಾಗುವಷ್ಟು ದುರ್ಬಲ ಮನಸ್ಸು ತನ್ನದಲ್ಲ, ಆದರೂ ತನ್ನಂತಹ ದೃಢಬುದ್ಧಿಯವನೂ ಈ ಸಾಮಾನ್ಯ ಪೂಜಾರಿಯ ಮಾಂತ್ರಿಕ ಸ್ಪರ್ಶಕ್ಕೆ ಹೇಗೆತಾನೆ ಒಳಗಾದೆ?! ಛೇ! ಮುಂದಿನ ಸಲ ಹೀಗಾಗಲು ಬಿಡಬಾರದು” ಎಂದು ನಿಶ್ಚಯಿಸಿಕೊಂಡ.
ಮುಂದಿನ ಸಲ ಹೋದಾಗ, ರಾಮಕೃಷ್ಣರು ಭಾವಸ್ಥಿತಿಗೇರುತ್ತಿದ್ದ್ದಗ “ಈ ಸಲ ಯಾವ ಪ್ರಭಾವಕ್ಕೂ ಒಳಗಾಗಬಾರದು” ಎಂದು ದೃಢನಿಶ್ಚಯಮಾಡಿಕೊಂಡಿದ್ದ ನರೇಂದ್ರ ನೋಡುನೋಡುತ್ತಿದ್ದಂತೆ ಅವರ ಸ್ಪರ್ಶಕ್ಕೆ ವಿದ್ಯುತ್ ಬಡಿದಂತಾಗಿ ತಲ್ಲಣಿಸಿದ, ಎಷ್ಟು ಯತ್ನಿಸಿದರೂ ತಡೆಯಲಾಗದೆ ಪ್ರಜ್ಞಾಶೂನ್ಯನಾಗಿಬಿಟ್ಟ! ಬಹಳ ಹೊತ್ತಿನ ಬಳಿಕ ಆತ ಮೈತಿಳಿದೆದ್ದಾಗ ರಾಮಕೃಷ್ಣರು ಆತನ ಎದೆಯನು ನೇವರಿಸುತ್ತಿದ್ದರು. ಇದರ ಬಗ್ಗೆ ರಾಮಕೃಷ್ಣರು ಹೇಳುತ್ತಾರೆ- “ನಾನು ನರೇಂದ್ರನ ಸುಪ್ತಮನಸ್ಸನ್ನು ಪ್ರಶ್ನಿಸಿ ಆತ ಯಾರು, ಯಾವ ಉದ್ದೇಶದಿಂದ ಭುವಿಗೆ ಬಂದಿದ್ದಾನೆ, ಏನೇನು ಕಾರ್ಯಗಳನ್ನು ಮಾಡಲಿದ್ದಾನೆ ಎಂಬುದನ್ನೆಲ್ಲ ತಿಳಿದುಕೊಂಡೆ. ಹಿಂದೆಯೇ ದಿವ್ಯದರ್ಶನದಲ್ಲಿ ಕಂಡದ್ದನ್ನು ಆತನ ಮಾತಿನಿಂದಲೇ ಖಚಿತಪಡಿಸಿಕೊಂಡೆ”.
ಇನ್ನೊಮ್ಮೆ, ಈ ‘ವಿಚಿತ್ರ’ ಪರಮಹಂಸರ ಸಹವಾಸವೇ ಬೇದ ಎಂದು ಬಗೆದು ನರೇಂದ್ರ ತಿಂಗಳಗಟ್ಟಲೇ ಅತ್ತ ಸುಳಿಯಲೇ ಇಲ್ಲ. ಆದರೆ ರಾಮಕೃಷ್ಣರು ಆತನನ್ನು ಮನಸಾ ಕರೆದಾಗ ಮೈಲಿಗಟ್ಟಲೇ ದೂರದಲ್ಲಿದ್ದ ನರೇಂದ್ರ ಚದಪಡಿಸುತ್ತ ಓಡೋಡಿ ಬಂದ. ಕೈಯಲ್ಲಿನ ಪುಸ್ತಕ, ಚಪ್ಪಲಿ, ಉತ್ತರೀಯಗಳೆಲ್ಲೋ ಕಳಚಿ ಬಿದ್ದರು ಗಮನಿಸದೆ ಒಂದೆ ಉಸಿರಿನಲ್ಲಿ ಓಡಿ ಅವರಡಿಯನ್ನು ತಲುಪಿದ. ಅವರ ಐಂದ್ರಜಾಲಿಕ ಆಕರ್ಷಣೆಯಿಂದ ದೂರವಾಗದಾದ.
ಆತನಿಗಾಗುತ್ತಿದ್ದ ‘ಭ್ರೂಮಧ್ಯದ ಜ್ಯೋತಿದರ್ಶನ’ದ ಹೇಳುತ್ತಾರೆ- “ಆಹ! ಎಲ್ಲ ತಾಳೆಯಾಗುತ್ತಿದೆ. ಈತ ಧ್ಯಾನಸಿದ್ಧ!” ಎಂದು. 
ಎಲ್ಲರಂತಲ್ಲ ಈ ನರೇಂದ್ರ
ರಾಮಕೃಷ್ಣರು ತಮ್ಮ ಶಿಷ್ಯರಿಗೆ ಆಹಾರ-ವಿಹಾರಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ವಿಧಿನಿಷೇಧಗಳನ್ನು ನಿರ್ದೇಶಿಸುತ್ತಿದ್ದರು. ಬಾಹ್ಯ ಪ್ರಭಾವಗಳಿಂದ ಅವರ ಸಾಧನಾಪಥವನ್ನು ಕಾಪಾಡುತ್ತಿದ್ದರು. ಆದರೆ ನರೇಂದ್ರನಿಗೆ ಮಾತ್ರ ಯಾವ ನಿಯಮಗಳನ್ನೂ ಹಾಕಲಿಲ್ಲ. ‘ಅದೇಕೆ ನರೇಂದ್ರನ ವಿಷಯದಲ್ಲಿ ನೀವೇನೂ ಹೇಳುವುದಿಲ್ಲ’ ಎಂದು ಕೇಳಿದಾಗ “ಆತ ಬೆಂಕಿಯಂತೆ ಪವಿತ್ರ, ಅವನನ್ನು ಯಾವ ಪಾಪವೂ ತಾಕದು. ಎಲ್ಲವನ್ನು ತನ್ನ ಜ್ಞಾನಾಗ್ನಿಯಲ್ಲಿ ದಹಿಸಿಬಿಡುತ್ತಾನೆ” ಎಂದು ಹೇಳುತ್ತಿದ್ದರು.
ಒಮ್ಮೆ ರಾಮಕೃಷ್ಣರು ನರೇಂದ್ರನನ್ನೇ ಪರೀಕ್ಷೆಗೆ ಒಳಪಡಿಸುತ್ತಾರೆ. ನರೇಂದ್ರನನ್ನು ಏಕಾಂತದಲ್ಲಿ ಕರೆಸಿಕೊಂಡು ಹೇಳುತ್ತಾರೆ “ನರೇನ್! ನನ್ನಲ್ಲಿ ಹಲವಾರು ಸಿದ್ಧಿಗಳು ಶಕ್ತಿಗಳು ಇವೆ. ಅವನ್ನೆಲ್ಲ ನಿನಗೆ ಧಾರೆ ಎರೆಯುತ್ತೇನೆ. ನೀನದನ್ನು ಬಳಸಿಕೊ” ನರೇಂದ್ರ ಪ್ರಶ್ನಿಸಿದ “ಇದರಿಂದ ನನಗೆ ಬ್ರಹ್ಮಾನುಭಾವ ಸಿಗುತ್ತದೆಯೇ?” ರಾಮಕೃಷ್ಣರು “ಇಲ್ಲ” ಎಂದರು. ನರೇಂದ್ರ ಥಟ್ಟನೆ ಹೇಳಿದ- “ಹಾಗಾದರೆ ನನಗದಾವುದೂ ಬೇಡ”. ರಾಮಕೃಷ್ಣರು “ಆದರೆ ನೀನು ಜನರನ್ನು ಉದ್ಧಾರ ಮಾಡಬಹುದು”. ನರೇಂದ್ರ ಹೇಳುತ್ತಾನೆ “ನನಗೇ ಮೊದಲು ಬ್ರಹ್ಮಾನುಭವ ಬೇಕು. ಆಮೇಲೆ ಬೇರೆಲ್ಲ”. ಯಾವ ಸಿದ್ಧಿಗಳಿಗೂ ಆಸೆಪಡದ ನರೇಂದ್ರನ ನಿಶ್ಚಲ-ಬುದ್ಧಿಯನ್ನು ಕಂಡು ರಾಮಕೃಷ್ಣರು ಹಿಗ್ಗಿದರು. ಇಂತಹ ನಿಃಸ್ಪೃಹ ವ್ಯಕ್ತಿಯಿಂದ ಮಾತ್ರವೇ ಅಲ್ಲವೇ ಲೋಕಕಲ್ಯಾಣ ಸಾಧ್ಯವಾದೀತು? ತನ್ನ ಅಪಾರ ಪುಣ್ಯಗಳನ್ನು, ಧಾರೆಯೆರೆದು ಕೊಡುವೆನೆಂದು ಶರಭಂಗ-ಮುನಿಗಳು ಶ್ರೀರಾಮನಿಗೆ ಹೇಳಿದಾಗ ಆತ ವಿನಮ್ರವಾಗಿ ನಿರಾಕರಿಸಿದ ರಾಮಾಯಣದ ಪ್ರಸಂಗ ಇಲ್ಲಿ ಸ್ಮರಣಿಯ.
ಇನ್ನೊಮ್ಮೆ ರಾಮಕೃಷ್ಣರು ಬೇಕೆಂದೇ ನರೇಂದ್ರನನ್ನು ಪರೀಕ್ಷಿಸಲು, ತೀವ್ರ ಉದಾಸೀನ ತೋರಿದರು. ಎಲ್ಲರೊಡನೆ ಮಾತನಾಡಿದರೂ, ಈತನೊಡನೆ ಮಾತ್ರ ನಿರ್ಲಕ್ಷ್ಯಭಾವ ಹಾಗೂ ಕ್ರೂರ ಮೌನ ತೋರಿದರು. ದೀರ್ಘಕಾಲ ಹೀಗೇ ವರ್ತಿಸಿದರು.  ಆದರೆ ನರೇಂದ್ರ ಎಂದಿನಂತೆ ಬಂದು ಹೋಗುತ್ತಿದ್ದ, ಕಿಂಚಿತ್ತೂ ಬೇಸರಿಸದೇ ನಿರಭಿಮಾನ ಹಾಗೂ ನಿರ್ಮಲಾಂತಃಕರ್ಣಗಳನ್ನು ಮೆರೆದು ನರೇಂದ್ರನು ಗುರುವಿತ್ತ ಪರೀಕ್ಷೆಯಲ್ಲಿ ಗೆದ್ದಿದ್ದ!
ಕೇವಲ ಬುದ್ಧಿಯ ಕಸರತ್ತಿನಿಂದಷ್ಟೇ ಎಲ್ಲವನ್ನೂ ವಿಮರ್ಶಿಸುವ ಚಾರಿತ್ರ್ಯಹೀನ, ಧ್ಯಾನವಿಹೀನ ವ್ಯಕ್ತಿಗಳಿಗೆ ಸತ್ಯಾನುಭವಗಳ ನೆಲೆ ಎಂದಿಗೂ ಎಟುಕದ ದ್ರಾಕ್ಷಿಯೇ ಸರಿ. ಅವರ ವಾದ ದ್ವೇಷಜನ್ಯವೂ, ಅಹಂಕಾರದೂಷಿತವೂ ಆಗಿದ್ದು ನಾಸ್ತಿಕತೆ, ಗೊಂದಲಗಳಲ್ಲಿ ಪರ್ಯವಸಾನವಾಗುತ್ತದೆ. ಆದರೆ ನರೇಂದ್ರ ಅಂತಹ ಸಾಲಿಗೆ ಸೇರಿದವನಲ್ಲ. ಪೂವ್ರಾಗ್ರಹವಿಟ್ಟುಕೊಂಡು ವಾದಿಸುವ, ಅಂಹಂಕಾರದ ತೃಪ್ತಿಗಾಗಿ ತೇಜೋವಧೆ ಮಾಡುವ ವಿಕೃತಬುದ್ಧಿಯವನಲ್ಲ ನರೇಂದ್ರ. ಅವನ ವಾದಗಳೆಲ್ಲ ಸತ್ಯಾನ್ವೇಷಣೆಯ ಹಂಬಲದಿಂದ ಮೂಡಿದ ಪ್ರಾಮಾಣಿಕ ಅಭಿವ್ಯಕ್ತಿಗಳು. ಆತನ ಬುದ್ಧಿವಂತಿಕೆ ಶುಷ್ಕವಾಗಿರದೆ ಶುದ್ಧಚಾರಿತ್ರ್ಯ ಹಾಗೂ ಮಾನವೀಯ ಸಂವೇದನೆಗಳಿಂದ ಪಕ್ವವಾಗಿದ್ದವು. ಯೋಗಸಿದ್ಧನಾದ ಆತನ ಅಂತರಂಗವು ಸತ್ಯಾನುಭವಕ್ಕೆ ಸನ್ನದ್ಧವಾಗಿತ್ತು, ಸರಿಯಾದ ಉತ್ತರಕ್ಕಾಗಿ ಕಾಯುತ್ತಿತ್ತು ಅಷ್ಟೇ.
ಚಿನ್ನಕ್ಕೆ ಪುಟ
ನರೇಂದ್ರನನ್ನು ನೋಡಿದ ಮೊದಲ ಬಾರಿಗೆ ಈತನೇ ತನ್ನ ಉತ್ತರಾಧಿಕಾರಿ ಎನ್ನುವುದು ಪರಮಹಂಸರಿಗೆ ಖಚಿತವಾಯಿತು. ಆತ ಅಪ್ಪಟ ಅಪರಂಜಿ, ಆದರೆ ಒಂದಿಷ್ಟು ಪುಟವಿಕ್ಕಿ ಸಂಸ್ಕರಿಸುವ ಕೆಲಸವಾಗಬೇಕಿತ್ತು ಅಷ್ಟೆ. ಆದರೆ ಅವನನ್ನು ಒಪ್ಪಿಸುವ, ಪಳಗಿಸುವ ವಿಷಯದಲ್ಲಿ ಅವರು ಯಾವ ಆತುರವನ್ನೂ ತೋರಲಿಲ್ಲ. ಅವನಿಗೆ ತನ್ನ ಬುದ್ಧಿ-ತರ್ಕಗಳ, ಭಾವನೆ- ವಿಚಾರಗಳ. ಇಷ್ಟಾನಿಷ್ಟಗಳ ಪೂರ್ಣಾಭಿವ್ಯಕ್ತಿಗೆ ವಿಪುಲ ಅವಕಾಶವಿತ್ತರು.
ನರೇಂದ್ರ ಪ್ರಮಾಣಿಕರಿಸದೆ ಏನನ್ನೂ ಒಪ್ಪುತ್ತಿರಲಿಲ್ಲ. ಸತ್ಯಾಸತ್ಯತೆಗಳನ್ನು ಖಾರವಾಗಿಯೇ ವಿಮರ್ಶಿಸುತ್ತಿದ್ದ. ಅವನ ಈ ಗುಣವನ್ನು ಹಲವರು ‘ಅಹಂಕಾರ’, ‘ಹುಡುಗುತನದ ಬಿಸಿ’, ‘ನಾಸ್ತಿಕತೆ’ ಎಂದೆಲ್ಲ ಅರ್ಥಮಾಡಿಕೊಂಡಿದ್ದುಂಟು. ಆದರೆ ಸ್ವತಃ ರಾಮಕೃಷ್ಣರು ಅವನ ಆ ವಾದಶೈಲಿಯನ್ನು ಮೆಚ್ಚುತ್ತಿದ್ದರು. “ರೈತರು ಬಾಲ ಮುಟ್ಟಿದರೆ ಜಾಡಿಸಿ ಒದೆಯುವ ಎತ್ತನ್ನು ಮೆಚ್ಚಿ ಆಯ್ದುಕೊಳ್ಳುತ್ತಾರೆ; ಹಾಗೇ ನಮ್ಮ ನರೇಂದ್ರ ಸ್ವಾಭಿಮಾನಿ. ಅವನ ಮುಂದೆ ಯಾರ ಆಟವೂ ನಡೆಯದು. ಅವನ ಬಳಿ ಸುಳ್ಳು, ಮೋಸ ಸುಳಿಯಲೂ ಸಾಧ್ಯವಿಲ್ಲ” ಎಂದು ದೃಷಾಂತದ ಮೂಲಕ ಅವನನ್ನು ಶ್ಲಾಘಿಸುತ್ತಾರೆ.
ರಾಮಕೃಷ್ಣರ ಪ್ರಾಮಾಣಿಕತೆ ಹಾಗೂ ಪಾರದರ್ಶಕ ವ್ಯಕ್ತಿತ್ವವನ್ನು ನರೇಂದ್ರ ಮನಸಾ ಮೆಚ್ಚಿಕೊಂಡನಾದರೂ ಅವರು ಹೇಳಿದ್ದನ್ನೆಲ್ಲ ಹಾಗೇ ಒಪ್ಪಿಕೊಳ್ಳಲು ಆತ ಸಿದ್ಧನಿರಲಿಲ್ಲ. ಪಾಶ್ಚಾತ್ಯ ವಿಜ್ಞಾನ ಹಾಗೂ ಮನೋವಿಜ್ಞಾನಗಳ ನಿಲುವನ್ನು ಪ್ರಸ್ಥಾಪಿಸುತ್ತ ವಾದಿಸುತ್ತಿದ್ದ, ಅವರ ಪ್ರಾಮಾಣಿಕತೆ ಮತ್ತು ಸ್ವಾನುಭವಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಾಗೂ ಸೂಕ್ಷ್ಮ ಪರೀಕ್ಷಿಸಿದ. ಅವರ ಭಾವಸಮಾಧಿ, ದಿವ್ಯದರ್ಶನಗಳು, ಇತ್ಯಾದಿ ಎಲ್ಲವೂ ಅತಿಯಾದ ಸಾಧನೆ, ಭಾವುಕತೆ ಹಾಗೂ ಅಸಹಜ ಜೀವನದಿಂದಾಗಿ ಆಗಿರುವ ಭ್ರಮಜನ್ಯ-ದೃಶ್ಯಗಳು (hallucinations) ಇರಬಹುದು. ಅವರಿಗೆ ವಿಶ್ರಾಂತಿ, ಪೌಷ್ಟಿಕ ಆಹಾರ ಹಾಗೂ ಚಿಕಿತ್ಸೆಯ ಅಗತ್ಯವಿರಬಹುದು ಎಂದು ತರ್ಕಿಸಿದ.
ಸಂಕಲ್ಪಪೂರ್ವಕವಾಗಿ ಕಾಮಕಾಂಚನ ತ್ಯಾಗವನ್ನು ಮಾಡಿದ ಮೇಲೆ, ರಾಮಕೃಷ್ಣರ ದೇಹವೂ ಲೋಹವನ್ನು ತಾಕಲಾಗುತ್ತಿರಲಿಲ್ಲ. ನರೇಂದ್ರ ಇದನ್ನು ಕೇಳಿದ್ದನಾದರೂ ಪರೀಕ್ಷಿಸಿಯೇ ಬಿಡಬೇಕೆಂದು ಯೋಚಿಸಿದ. ಒಮ್ಮೆ ಅವರು ಕೋಣೆಯಲ್ಲಿಲ್ಲದಿದ್ದಾಗ, ಯಾರ ಗಮನಕ್ಕೂ ಬಾರದಂತೆ ಒಂದು ನಾಣ್ಯವನ್ನು ಅವರ ಹಾಸಿಗೆಯ ಮೇಲೆ ಇಟ್ಟು ಬಂದ. ರಾಮಕೃಷ್ಣರು ಅಲ್ಲಿಗೆ ಬಂದು ಕುಳಿತುಕೊಳ್ಳಲು ಹೊರಟಾಗ, ಅದರ ಸ್ಪರ್ಶವಾಗಿ ಕೈ ತಿರುಟಿಕೊಂಡಿತಂತೆ. ನರೇಂದ್ರ ಅದನ್ನು ನೋಡಿಯೇ ನಂಬಿದ್ದು.
ಒಮ್ಮೆ ಅದ್ವೈತಾನುಭವವನ್ನು ನರೇಂದ್ರ ಆಡಿಕೊಳ್ಳುತ್ತಾನೆ- “ಇದೆಷ್ಟು ಅವಹೇಳನಕಾರಿ! ಇದು ನಾಸ್ತಿಕತೆಯಲ್ಲದೆ ಇನ್ನೇನು!? ಇಂತಹದ್ದನ್ನೆಲ್ಲ ಬರೆದಿಟ್ಟ ಆ ಋಷಿಗಳಿಗೆ ತಲೆ ಸರಿಯಿಲ್ಲ ಅಂತ ಕಾಣುತ್ತದೆ” ರಾಮಕೃಷ್ಣರು ಬಹುವಾಗಿ ಅರ್ಥಪಡಿಸಲು ಯತ್ನಿಸಿದರು. ಆದರೂ ನರೇಂದ್ರ ಹಾಜರಾ ಮಹಾಶಯನೊಂದಿಗೆ ಹರಟುತ್ತ ಮೂದಲಿಸುತ್ತಲೇ ಹೋದ- “ನೋಡಯ್ಯ, ಈ ಪಾತ್ರೆ ಬ್ರಹ್ಮ! ಲೋಟ ಬ್ರಹ! ನಾನು ನೀನು ಎಲ್ಲ ಬ್ರಹ್ಮ! ಹೇಗಿದೆ ಈ ತಮಾಷೆ?!” ರಾಮಕೃಷ್ನರು ಮೌನತಾಳಿ ಭಾವಸ್ಥರಾದರು, ಮೆಲ್ಲನೆ ನಡೆದು ಬಂದು ನರೇಂದ್ರನನ್ನು ಮುಟ್ಟುತ್ತ ಸಮಾಧಿಸ್ಥರಾದರು. ನರೇಂದ್ರನಿಗೆ ವಿದ್ಯುತ್ ಬಡಿದಂತಾಯಿತು, ಒಳಗಣ್ಣು ತೆರೆಯಿತು, ಸುತ್ತಲ ದೃಶ್ಯಪ್ರಪಂಚವೆಲ್ಲ ಅಖಂಡ ಬ್ರಹ್ಮಜ್ಯೋತಿಯಲ್ಲಿ ಕರಗುವುಇದನ್ನು ಕಂಡ, ಇರುವುದೆಲ್ಲ ಕೇವಲ ಬ್ರಹ್ಮವೊಂದೇ ಎನ್ನುವುದು ಅನುಭವವೇದ್ಯವಾಯಿತು. ಅವನ ಪಾಲಿಗೆ ಚರಾಚರವೆಲ್ಲ ಕನಸಿನಂತೆ ಇದ್ದೂ ಇಲ್ಲದ ಅಸ್ತಿತ್ವವಾಯಿತು. ತಿನ್ನುತ್ತಿರಲಿ, ಕುಡಿಯುತ್ತಿರಲಿ, ವಿಶ್ರಮಿಸುತ್ತಿರಲಿ, ನಡೆದಾಡುತ್ತಿರಲಿ, ಅದೇ ಬ್ರಹ್ಮೈಕ-ಬೋಧೆ! ತಿಂದದ್ದು, ಮಲಗಿದ್ದು, ಓಡಾಡಿದ್ದು, ನೋಡಿದ್ದು, ಕೇಳಿದ್ದು ಎಲ್ಲವೂ ಮಿಥ್ಯಾಕಲಾಪದಂತೆ ತೋರಿತು! ಇದೆಲ್ಲ ಭ್ರಮೆಯೋ ಎಂದು ಪರೀಕ್ಷಿಸಲು ರಸ್ತೆಯ ಕಂಬಕ್ಕೆ ತಲೆ ಚಚ್ಚಿಕೊಂಡೂ ನೋಡಿದ! ಹೀಗೆ ಜಗತ್ತೇ ಮಿಥ್ಯೆಯಾಗಿ, ತನ್ನ ಅಸ್ತಿತ್ವವೂ ಕನಸಿನಂತೆ ಕಂಡಿತು. ಈ ಸ್ಥಿತಿಯಲ್ಲಿ ಬಹಳ ದಿನಗಳಿದ್ದ ಬಳಿಕ ನರೇಂದ್ರ ಮೆಲ್ಲನ ಸಹಜಸ್ಥಿತಿಗೆ ಬಂದ. ಆ ಅನುಭವದ ಗಾಢತೆಯಿಂದಾಗಿ ಆತನಿಗೆ ಅದ್ವೈತಜ್ಞಾನದ ಲಕ್ಷಣವು ಸ್ಪಷ್ಟವಾಯಿತು, ಈ ವಿಷಯದ ಶಾಸ್ತ್ರವಾಕ್ಯಗಳ ಸತ್ಯತೆಯಲ್ಲಿ ಗೌರವ ಹುಟ್ಟಿತು. ಪರಮಹಂಸರ ಕೃಪೆಯಿಂದ ಅವನ ಶುದ್ಧಾಂತಃಕರಣದಲ್ಲಿ “ಈಶಾವಾಸ್ಯಮಿದಂ ಸರ್ವಂ, ಅಹಂ ಬ್ರಹ್ಮಾಸ್ಮಿ ಮುಂತಾದ ಉಪನಿಷತ್ತಿನ ತತ್ವಗಳ ಹೊಳಹು ಮಿಂಚಿತು.
ನಿರಾಕಾರತತ್ವಕ್ಕೆ ಮನವೊಲಿದ ನರೇಂದ್ರ ದೇವರ ಸಾಕಾರತ್ವವನ್ನು ಒಪ್ಪುತ್ತಿರಲಿಲ್ಲ. ವಾದ ಪ್ರತಿವಾದ ಪರಿಹಾಸ್ಯಗಳಿಂದ ಅದನ್ನು ನಿರಾಕರಿಸುತ್ತಲೇ ಇದ್ದ. ಆದರೆ ಆ ಮಧ್ಯೆ ಮನೆಯಲ್ಲಿನ ಭಯಂಕರ ಸಮಸ್ಯೆಗಳಿಂದ ವಿಪರೀತವಾಗಿ ನೊಂದ ನರೇಂದ್ರ ಒಮ್ಮೆ ಪರಮಹಂಸರಿಗೆ ಹೇಳಿದ “ನಿಮ್ಮ ಆ ಕಾಳಿಯನ್ನು ಕೇಳಿ ನನಗೆ ಅನುಕೂಲ ಮಾಡಿಸಿಕೊಡಿ” ಆಗ ರಾಮಕೃಷ್ಣರು ಹೇಳುತ್ತಾರೆ “ಆಕೆ ಎಲ್ಲರ ತಾಯಿ, ನೀನೆ ಹೋಗಿ ಕೇಳು. ನೀನೆ ತಾನೆ ಅವಳನ್ನು ನಂಬಲೊಲ್ಲದವನು!” ನರೇಂದ್ರ ನಿಜಕ್ಕೂ ಎದ್ದು ಹೊರಟ. ‘ಅಖಿಲಾಂಡಕೋಟಿಬ್ರಹ್ಮಾಂಡಗಳ ತಾಯಿ’ಯನ್ನು ಸಂದರ್ಶಿಸುವ ಆ ಘಳಿಗೆ ಅವನ ಪಾಲಿಗೆ ರೋಮಾಂಚಕಾರಿ! ಗರ್ಭಗುಡಿಯ ತಾಯಿಯೆದುರು ನಿಂತ, ಶುದ್ಧಾಂತಃಕರಣದ ನರೇಂದ್ರನಿಗೆ ಕಂಡದ್ದು ಶಿಲಾಮೂರ್ತಿಯನ್ನಲ್ಲ, ಚಿನ್ಮಯೀ ಬ್ರಹ್ಮಮಯಿಯನ್ನು! ನರೇಂದ್ರ ಭಾವಪರವಶನಾದ! ಗದ್ಗದ ಕಂಠದಿಂದ ತಾಯಿಯನ್ನು ಸ್ತುತಿಸಿ, ನಮಿಸಿ ಆನಂದಾಶುಧಾರೆಯಿಂದ ಪೂಜಿಸಿದ, ಮೈಮರೆತ, ಆ ಆನಂದಭರದಲ್ಲಿ ತನ್ನ ‘ಬೇಡಿಕೆ’ಯನ್ನೇ ಸಲ್ಲಿಸಲು ಮರೆತಿದ್ದ! ಹಿಮ್ದಿರುಗಿ ಬಂದಾಗ ರಾಮಕೃಷ್ಣರು ನಗುತ್ತ ಕೇಳಿದರು “ಏನಪ್ಪ, ತಾಯಿಯನ್ನು ಕಷ್ಟಪರಿಹಾರಕ್ಕಾಗಿ ಸರಿಯಾಗಿ ಕೇಳಿಕೊಂಡೆಯೋ?” ನರೇಂದ್ರ “ಅಯ್ಯೋ ಮರೆತೇ ಬಿಟ್ಟೆ” ಎಂದ! “ಮೂರ್ಖ ಅಷ್ಟೂ ಮಾಡಲಾಗಲಿಲ್ಲವೆ? ಮತ್ತೆ ಹೋಗು ಕೇಳಿಕೋ” ನರೇಂದ್ರ ಮತ್ತೆ ಹೋದ, ಆದರೆ ಹಿಂದಿನ ಸಲದಂತೆ ಜಗನ್ಮಾತೆಯ ಭವ್ಯದರ್ಶನಾನಂದದಲ್ಲಿ ಮೈಮರೆತ. ಏನನ್ನೂ ಕೇಳದೇ ಹಿಂದಿರುಗಿದ. ಮತ್ತೆ ಮತ್ತೆ ಹೋದರೂ ದೇವಿಯಲ್ಲಿ ‘ಪ್ರಾಪಂಚಿಕ ವರಗಳನ್ನು’ ಬೇಡಲು ಆತನಿಂದ ಸಾಧ್ಯವಾಗಲಿಲ್ಲ, ಬದಲಾಗಿ ಜ್ಞಾನ-ಭಕ್ತಿ-ವಿವೇಕ-ವೈರಾಗ್ಯಗಳನ್ನಷ್ಟೇ ಕೋರಿದ! ಅಂತೂ ನರೇಂದ್ರನಿಗೆ ಕಾಳಿದರ್ಶನದ ಮೂಲಕ ಭಗವಂತನ ಸಾಕಾರ ನಿರಾಕಾರ ಲೀಲೆಗಳ ನೇರ ಝಲಕ್ಕನ್ನೇ ತೋರಿಸಿ ಒಪ್ಪಿಸಿದರು ರಾಮಕೃಷ್ಣರು!
ಹಲವು ತಾತ್ವಿಕ ವಿಚಾರಗಳಲ್ಲಿ ನರೇಂದ್ರನು ತನ್ನ ಪ್ರಬಲವಾದವನ್ನೂ, ಅಸಮ್ಮತಿಯನ್ನು ವ್ಯಕ್ತಪಡಿಸುತ್ತಲೇ ಹೋದ. ರಾಮಕೃಷ್ಣರು ಕೆಲವೊಮ್ಮೆ ಸರಳ, ಸ್ಪಷ್ಟ ವಿವರಣೆ ಹಾಗೂ ದೃಷ್ಟಾಂತಗಳ ಮೂಲಕವೂ, ಕೆಲವೊಮ್ಮೆ ಸ್ವಲ್ಪಮಟ್ಟಿನ ಪ್ರತಿವಾದದ ಮೂಲಕ ಅವನಿಗೆ ಸ್ಪಷ್ಟಪಡಿಸುತ್ತ ಹೋದರು. ಇನ್ನು ಮಾತಿನಿಂದ ಅರ್ಥೈಸಲಾಗದ್ದನ್ನು ಪ್ರಥಮಾಧಿಕಾರಿಯಾದ (ತಿಕರಣಶುದ್ಧಿಯಿಂದಾಗಿ ಅತ್ಯುನ್ನತ ಆಧ್ಯಾತ್ಮಿಕ ಅನುಭವಗಳನ್ನು ದಕ್ಕಿಸಿಕೊಳ್ಳಲು ಈಗಾಗೆ ಯೋಗ್ಯತೆಯನ್ನು ಪಡೆದವನು) ನರೇಂದ್ರನಿಗೆ ತಮ್ಮ ಸ್ಪರ್ಶದಿಂದ ಅನುಭವಮಾಡಿಸುತ್ತಿದ್ದರು ರಾಮಕೃಷ್ಣರು. ರಾಮಕೃಷ್ಣರು ‘Logicನಿಂದ ಆಗದ್ದನ್ನು ತಮ್ಮ ದಿವ್ಯ Magicನಿಂದ ಮಾಡಿಮುಗಿಸಿದರು’(- ಪೂಜ್ಯ ಸ್ವಾಮಿ ಹರ್ಷಾನಂದರು ಕೊದುವ ನಿದರ್ಶನ) ತತ್ಪರಿಣಾಮವಾಗಿ ಆಧ್ಯಾತ್ಮಿಕ ಲೋಕದಲ್ಲಿ ವಾದ ಹಾಗೂ ಬೌದ್ಧಿಕ ಕಸರತ್ತುಗಳ ಇತಿಮಿತಿಯನ್ನು ಅರಿತು,  ತರ್ಕಾತೀತವಾದ ಸತ್ಯಗಳನ್ನು ಒಪ್ಪತೊಡಗಿದ ನರೇಂದ್ರ. ಜೊತೆಗೆ ಈ ಸರಳ ಪೂಜಾರಿ ಕಾಣುವಷ್ಟು ‘ಸರಳ’ನೇನಲ್ಲ ಎನ್ನುವುದು ಸ್ಪಷ್ತವಾಯಿತು. ತನ್ನ ಎದೆಯಾಲದ ಪ್ರಶ್ನೆಗಳಿಗೆ ಸಮಾಧಾನವನ್ನೂ, ಸತ್ಯಾನುಭವದ ಹೊಳಹುಗಲನ್ನು ಪಡೆಯುತ್ತ ಅರಳಿದ ನರೇಂದ್ರನ ಭವ್ಯ ಜೀವನೋದ್ದೇಶದ ದಿವ್ಯಸಿದ್ಧತೆ ರಾಮಕೃಷ್ಣರ ಪದತಲದಲ್ಲಿ ಭರದಿಂದ ಸಾಗಿತು.  
ನರೇಂದ್ರ ಏಕಾಂತದಲ್ಲಿ ಗಂಭೀರ ಧ್ಯಾನಾಭ್ಯಾಸದಲ್ಲಿ ತೊಡಗಿದ. ಕಂಬಳಿ ಹೊದ್ದಿದ್ದಾನೇನೋ ಎಂಬಂತೆ ಅವನ ಮೈ ತುಂಬ ನೂರಾರು ಸೊಳ್ಳೆಗಳು ಕುಳಿತು ಕಚ್ಚುತ್ತಿದ್ದರೂ ಅದರ ಪರಿವೆ ಇಲ್ಲದೆ ಧ್ಯಾನಲೀನನಾಗುತ್ತಿದ್ದ ನರೇಂದ್ರನನ್ನು ಅವನ ಸಂಗಡಿಗರು ನೆನೆಸಿಕೊಳ್ಳುತ್ತಾರೆ. ಸತ್ಯಸಾಕ್ಷಾತ್ಕಾರಕ್ಕಾಗಿ ತೀವ್ರವಾಗಿ ಯತ್ನಿಸುತ್ತಿದ್ದ ನರೇಂದ್ರನಿಗೆ ಹಲವು ದೇವತೆಗಳ, ಮಂತ್ರ-ಸಿದ್ಧಿಗಳ ಸಾಕ್ಷಾತ್ಕಾರವಾಗುತ್ತ ಬಂದಿತು, ಇದಾವುದಕ್ಕೂ ತೃಪ್ತನಾಗದೆ ಪರಮೋಚ್ಛವಾದ ನಿರ್ವಿಕಲ್ಪ-ಸಮಾಧಿಯ ಅನುಭವಕ್ಕಾಗಿ ಹಂಬಲಿಸುತ್ತಿದ್ದ. ಈ ಮಧ್ಯೆ ಮನೆಯಲ್ಲಿ ತಂದೆಯ ಅನಿರೀಕ್ಷಿತ ಸಾವು, ನ್ಯಾಯಾಲಯದಲ್ಲಿ ಆಸ್ತಿಸಂಬಂಧದ ವ್ಯಾಜ್ಯವನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆ, ಹಠಾತ್ತನೆ ಕಡುಬಡತನಕ್ಕಿಳಿದ ದೊಡ್ಡ ಕುಟುಂಬದ ಪೋಷಣೆಯ ದಾಯಿತ್ವ, ವಿದ್ಯಾಭ್ಯಾಸವನ್ನೂ ಮುಂದುವರೆಸಲಾಗದ ಅಸಹಾಯಕ ಸ್ಥಿತಿ, ಉದ್ಯೋಗಕ್ಕಾಗಿ ಅಲೆದಾಟ, ಹಸಿವೆಬಾಯಾರಿಕೆಗಳ ತಾಪ, ಬಂಧುಗಳಿಂದ ವಂಚನೆ, ಅವಮಾನಗಳೂ --- ಈ ಎಲ್ಲ ಕಹಿಗಳ ನಡುವೆ, ಅಖಂಡ ವೈರಾಗ್ಯ ಭಾವ, ಹಿಮಾಲಯದ ಗುಹೆಯಲ್ಲಿ ಧ್ಯಾನಲೀನವಾಗಿ ಬ್ರಹ್ಮಾನುಭವದಲ್ಲಿ ತಣಿಯಬೇಕೆಂಬ ಉತ್ಕಟೇಚ್ಛೆ! ಬಡತನ, ಅನ್ಯಾಯ, ನಿರಾಶೆ, ನೋವುಗಲನ್ನು ಒಟ್ಟೊಟ್ಟಿಗೆ ಉಂಡ ನರೇಂದ್ರನ ಮನಸ್ಸು ಮನುಜಲೋಕದ ಕಹಿಸತ್ಯಗಳನ್ನೂ ಹತ್ತಿರದಿಂದ ಕಾಣತೊಡಗಿತು. ಮನ್ಕುಲದ ಕಷ್ಟಕಾರೊಪಣ್ಯಗಳಿಗಾಗಿ ಮರ್ಗಿತು.
ಒಮ್ಮೆ ರಾಮಕೃಷ್ಣರು ಭಾವಸ್ಥರಾಗಿ ನುಡಿದರು “ಓ ಮನುಷ್ಯ! ಮಾನವರಿಗೆ ‘ಸಹಾಯ’ ಮಾಡುತ್ತೇನೆ’ ಎನ್ನಲು ನೀನಾರು? ಸಹಾಯ ಎನ್ನಬೇಡ, ‘ಸೇವೆ’ ಮಾಡುತ್ತೇನೆ ಎನ್ನು” ನ್ರಂದ್ರನಿಗೆ ಈ ಮಾತು ಅದೆಷ್ಟುಮನಮುಟ್ಟಿತೆಂದರೆ ಆದರ ಆನಂದಾತಿಶಯದಿಂದ ಉದ್ಗರಿಸಿದ “ಆಆಹ ನಾನಿಂದು ಎಂತಹ ಅದ್ಭುತ ಸತ್ಯವನ್ನು ಮನಗಂಡೆ. ಮುಂದೆ ಅವಕಾಶ ಸಿಕ್ಕರೆ ನಾನಿದನ್ನು ಇಡೀ ಜಗತ್ತಿನಲ್ಲಿ ಸಾರಿ ಹೇಳುವೆ- ನಾವು ಮಾಡುವುದು ಸಹಾಯವಲ್ಲ ‘ಸೇವೆ’!!” ಮೊದಲೇ ದಯಾರ್ದ್ರ ಹೃದಯಿಯಾದ ನರೇಂದ್ರನ ಮನದಲ್ಲಿ ಮನುಕುಲದ ಕುರಿತಾದ ಕರುಣೆ ಕಾಲಜಿಗಳು ಭುಗಿಲೆದ್ದದ್ದು ರಾಮಕೃಷ್ಣರ ಪದತಲದಲ್ಲೇ ಎನ್ನಬಹುದು.    
ನರೇಂದ್ರನನ್ನು ರಾಮಕೃಷ್ಣರು ತಯಾರು ಮಾಡಿದ್ದು ಬಹಿರ್ಗೋಚರವಲ್ಲದ ಅಂತರಂಗದ ನೆಲೆಯಲ್ಲೇ. ಕ್ರಮೇಣ ಶಕ್ತನೂ ಯೋಗ್ಯನೂ ಅನುಭವಸಂಪನ್ನನೂ ಆಗಿ ಬೆಳೆದ ನರೇಂದ್ರನಿಗೆ ರಾಮಕೃಷ್ಣರು ತಮ ಕೊನೆಯ ಗಾಲದಲ್ಲಿ ನಿರ್ವಿಕಲ್ಪ ಸಮಾಧಿಯ ಪರಮೋಚ್ಛ ಅನುಭವವನ್ನೂ ಮಾಡಿಸುತ್ತಾರೆ. ದೇಹೇಂದ್ರಿಯಾತೀತವಾದ ಆ ತೀವ್ರಾನುಭವಕ್ಕೆ ರೋಮಾಂಚಗೊಂಡ ನರೇಂದ್ರ, ಆ ಅನುಭವದಲ್ಲೇ ಶಾಶ್ವತವಾಗಿ ಲೀನನಾನಲು ಬಯಸುತ್ತಾನೆ. ಆದರೆ ರಾಮಕೃಷ್ಣರು ಹೇಳುತ್ತಾರೆ “ನಿನ್ನ ಈ ಅನುಭವವನ್ನು ಜಗನ್ಮಾತೆ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿರುತಾಳೆ. ಅವಳ ಕೆಲಸ ಮಾಡಿಮುಗಿಸುವವರೆಗೆ ನಿನಗದು ಸಿಗಲಾರದು”. ತಾನು ಬ್ರಹ್ಮಾನುಭವದಲ್ಲಿ ಲಯವಾಗಬೇಕು ಎಂದು ಹಂಬಲಿಸಿದ ನರೇಂದ್ರನಿಗೆ ರಾಮಕೃಷ್ಣರು ಹೇಲುತ್ತಾರೆ “ಛೆ! ಸ್ವಾರ್ಥಿಯಾಗಬೇಡ. ನೀನೊಂದು ಮಹಾ ವಟವೃಕ್ಷವಾಗಿ ಸಾವಿರಾರು ಜೀವಿಗಳಿಗೆ ಆಶ್ರಯವಾಗಬೇಕು. ಈಗಲೇ ಆ ಅನುಭವದಲ್ಲಿ ಲೀನನಾಗಲಾರೆ” ‘ತಾನು ಈ ಬೋಧನೆ-ಗೀದನೆಯನ್ನೆಲ್ಲ ಮಾಡಲಾರೆ’ ಎಂದು ನರೇಂದ್ರ ವಾದಿಸುತ್ತಾನೆ. ಆದರೆ ರಾಮಕೃಷ್ಣರು ನಕ್ಕು ಹೇಳುತ್ತಾರೆ “ಜಗನ್ಮಾತೆ ನಿನ್ನ ಜುಟ್ಟು ಹಿಡಿದು ಮಾಡಿಸುತ್ತಾಳೆ. ನಿನ್ನ ರಕ್ತದ ಕಣ ಕಣವೂ ಅವಳ ಕೆಲಸವನ್ನು ಮಾಡುತ್ತದೆ”. ಮರಣಶಯ್ಯೆಯಲ್ಲಿದ್ದ ರಾಮಕೃಷ್ಣರು “ನರೇಂದ್ರ ಲೋಕಕಲ್ಯಾಣ ಮಾಡುತ್ತಾನೆ” ಎಂದು ಭವಿಷ್ಯವನ್ನು ಚಿತ್ರಗಳಿಂದ ಸಂಕೇತಿಸಿ ಬರೆದು ಕಾಗದ ಇಂದಿಗೂ ಕಾಣಸಿಗುತ್ತದೆ.
ರಾಮಕೃಷ್ಣರು ಕೊನೆಗಾಲ ಸಮೀಪಿಸುತ್ತಿದ್ದಂತೆ ಏಕಾಂತದಲ್ಲಿ ನರೇಂದ್ರನಿಗೆ ಹಲವು ಬಗೆಯ ಯೌಗಿಕ ಹಾಗೂ ಲೋಕಶಿಕ್ಷಣದ ಸೂಚನೆಗಳನ್ನು, ಭಾವೀನಾಯಕತ್ವದ ನಿರ್ದೇಶನಗಳನ್ನೂ ಮಾಡಿದರು. ನರೇಂದ್ರ ಹಾಗೂ ಇತರ ತರುಣಶಿಷ್ಯರಿಗೆ ಸಾಂಕೇತಿಕವಾಗಿ ಕಾವಿಬಟ್ಟೆಯನ್ನು ಕೊಟ್ಟು ಶಾರದಾದೇವಿಯವರಿಮ್ದ ಮಧುಕರೀ ಭಿಕ್ಷೆಯನ್ನೂ ಕೊಡಿಸಿದರು. ತಮ್ಮ ನಿರ್ಯಾಣದ ಒಂದೆರಡು ದಿನಗಳ ಮುಂಚೆ ನರೇಂದ್ರನನ್ನು ಬರಮಾಡಿಕೊಂಡು ಅವನನ್ನು ಸ್ಪರ್ಶಿಸಿ ಸಮಾಧಿಸ್ಥರಾದರು. ನರೇಂದ್ರ ಪ್ರಜ್ಞಾಶೂನ್ಯನಾದ, ಬಹಿರ್ಮುಖನಾಗುತ್ತಿದ್ದಂತೆ ಅವನ ಎದೆಯನ್ನು ನೇವರಿಸುತ್ತ ರಾಮಕೃಷ್ಣರೆಂದರು “ನರೇನ್! ನಾನೀಗ ಕೇವಲ ಬರಿ-ಗೈ ಫಕೀರನಾಗಿಬಿಟ್ಟೆ! ನನ್ನೆಲ್ಲ ಶಕ್ತಿಸಿದ್ಧಿಗಳನ್ನು ನಿನಗೆ ಧಾರೆಯೆರೆದಿದ್ದೇನೆ!” ಹೀಗೆ ಕಾರಣಪುರುಷನಾಗಿ ಜನ್ಮಿಸಿದ ನರೇಂದ್ರ ಪರಿಪೂರ್ಣಯೋಗಿಯಾಗಿ ಅರಳಿದ, ಲೋಕಗುರುವಾಗಿ ವಿಕಸಿಸಿದ.
ರಾಮಕೃಷ್ಣರ ನಿರ್ಯಾಣದ ಬಳಿಕ ಸಂನ್ಯಾಸವನ್ನು ಸ್ವೀಕರಿಸಿದ ನರೇಂದ್ರ ‘ಸ್ವಾಮಿ ವಿವೇಕಾನಂದ’ನಾದ. ವಿಶಾಲ ಅಧ್ಯಯನ, ಗುರುವಿನ ಮಾರ್ಗದರ್ಶನ ಹಾಗೂ ಯೋಗಾನುಭೂತಿಗಳ ಹಿನ್ನಲೆಯಿದ್ದರೂ ಸ್ವಾಮಿಜಿ ಒಮ್ಮೆಲೆ ತನ್ನ ಕಾರ್ಯರಂಗಕ್ಕಿಳಿಯಲಿಲ್ಲ. ಬದಲಾಗಿ ಕೈಯ್ಯಲಿ ಬಿಡಿಗಾಸ್ ಇಲ್ಲದೆ, ಕೇವಲ ಭಗವದ್ಗೀತೆ ಹಾಗೂ ಎರಡು ಜೊತೆ ಕಾವಿಬಟ್ಟೆಯನ್ನು ಹಿಡಿದು ತಮ್ಮ ಮಾತೃಭೂಮಿಯಾದ ಭಾರತವನ್ನು ಇನ್ನಷ್ಟು ಅರ್ಥಮಾಡಿಕೊಳ್ಳುವ ಸಲುವಾಗಿ ಸುದೀರ್ಘ ಪರಿವ್ರಜನ ಮಾಡಿದರ. ಭಾರತದ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ವ್ಯವಸ್ಥೆ, ವೈವಿಧ್ಯ ಹಾಗೂ ಶಕ್ತಿ, ಸಾಮರ್ಥ್ಯ ಹಾಗೂ ಗುಣ-ದೋಷಗಳನ್ನು ಅಧ್ಯಯನ ಮಾಡಿದರು. ಭಾರತಕ್ಕೆ ತನ್ನದೇ ಆಂತರಿಕ ವಿಕೃತಿಗಳಿಂದ ಉಂಟಾದ ದೌರ್ಬಲ್ಯಗಳನ್ನೂ, ಶತಮಾನಗಳ ಪರಕೀಯ ಆಕ್ರಮಣಗಳಿಂದಾದ ಕಪಟ ವ್ಯಾಖ್ಯಾನಗಳಿಂದಲೂ, ಕ್ರೂರ ಹಸ್ತಕ್ಷೇಪದಿಂದಲೂ ಆದ ಅವ್ಯವಸ್ಥೆ ಹಾಗೂ ಕ್ಷೋಭೆಯನ್ನು ಅರಿತರು. ಭವ್ಯ ಆರ್ಷಧರ್ಮಸಂಸ್ಕೃತಿಗಳ ತವರಾದ ಭಾರತದಲ್ಲಿ ದಾಸ್ಯದ ಪರಿಣಾಮವಾಗಿ ಇಳಿಮುಖವಾಗತೊಡಗಿದ್ದ ಸ್ವಾಭಿಮಾನವನ್ನು ಬಡಿದೆಬ್ಬಿಸ್ದರು, ತ್ಯಾಗಸೇವೆಗಳ ಬೃಹತ್ಕ್ರಾಂತಿಯನ್ನು ಜಾರಿಗೊಳಿಸಿದರು. ವಿಶ್ವವೇದಿಕೆಯ ಅತ್ಯುಚ್ಛ ಸ್ಥಾನದಲ್ಲಿ ಸನಾತನಧರ್ಮದ ಕೀರ್ತಿಪತಾಕೆಯನು ಹಾರಿಸಿದರು. ಪಾಶ್ಚಾತ್ಯರೇ ಭಾರತದ ಆಧ್ಯಾತ್ಮಿಕ ಸಾಂಸ್ಕೃತಿಕ ಮಾಹಾತ್ಮ್ಯಗಳಿಗೆ ಮಣಿದು ಶಿಷ್ಯರಾಗಿ ಬರುವಂತೆ ಮಾಡಿದರು. ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ಹಾಗೂ ಪ್ರೇರಣೆಗಳನ್ನಿತ್ತರು. ಒಟ್ಟಿನಲ್ಲಿ ರಾಷ್ಟ್ರಕುಂಡಲಿನಿಯನ್ನೇ ಜಾಗೃತಗೊಳಿಸಿದ ದಿವ್ಯ ವಿಭೂತಿಪುರುಷರಾದರು. 
ಅವರ ಧೀರೋದಾತ್ತ ಚರಿತೆಯನ್ನೂ, ಬುದ್ಧಿಮನಗಳನ್ನೂ ಜಾಗೃತಗೊಳಿಸಿ ಕಾರ್ಯಪ್ರವೃತ್ತವಾಗಿಸುವ ಅವರ ಋಷಿವಾಕ್ಕುಗಳನ್ನು ನಮ್ಮ ಎಳೆಯರ ಹೃನ್ಮನಗಳಲ್ಲಿ ತುಂಬಬೇಕಾದ ಕರ್ತವ್ಯವನು ನಮ್ಮ ಪೋಷಕರು-ಶಿಕ್ಷಕರು ಅರಿತು ಎಚ್ಚೆತ್ತುಕೊಳ್ಳಬೇಕಾಗಿದೆ ಅಷ್ಟೆ. ಯುಗಪುರುಷನಾದ ಸ್ವಾಮಿವಿವೇಕಾನಂದರೇ ನವಭಾರತದ ಸರ್ವತೋಮುಖ ವಿಕಾಸ ಹಾಗೂ ಪ್ರಗತಿಗೆ ಆದರ್ಶ, ಸ್ಫೂರ್ತಿ ಹಾಗೂ ಗುರುಶಕ್ತಿ.

“ಏಳಿ ಎದ್ದೇಳಿ!” ಎಂಬ ಅವರ ಸಿಂಹವಾಣಿಯು ನಮ್ಮ ಚೇತನವನ್ನು ಅದಮ್ಯಗೊಳಿಸಲಿ, ದೇಶನಿರ್ಮಾಣ ಹಾಗೂ ಧರ್ಮಸಂರಕ್ಷಣೆಯ ಕಾರ್ಯಗಳಲ್ಲಿ ತ್ರಿಕರಣಪೂರ್ವಕವಾಗಿ ತೊಡಗಿಸಲಿ. ಶುಭಮ್ .

Published in Mallara Magazine, 2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ