ಶುಕ್ರವಾರ, ಮಾರ್ಚ್ 17, 2017

ಅಧ್ಯಾತ್ಮ, ಎಷ್ಟು ಪ್ರಸ್ತುತ?
ಅಧ್ಯಾತ್ಮ ಎಂದರೇನು ಎಂದು ನಿರ್ವಚಿಸುವ, ವ್ಯಾಖ್ಯಾನಿಸುವ ಬುದ್ಧಿಮಟ್ಟ ಹಾಗೂ ಅನುಭವಜ್ಞಾನಗಳಿಲ್ಲದಿದ್ದರೂ, ’ಅದು ನಮ್ಮ ಜೀವನವನ್ನು ಧನ್ಯಗೊಳಿಸುವ, ಆತ್ಮಶಕ್ತಿಯನ್ನು ವರ್ಧಿಸುವ ಅದ್ಭುತ ಯೋಗ’  ಎನ್ನುವ ಗೌರವ, ಶ್ರದ್ಧೆಗಳು ಅಸಂಖ್ಯ ಭಾರತೀಯರಲ್ಲಷ್ಟೇ ಅಲ್ಲ, ನಮ್ಮ ಧರ್ಮಸಂಸ್ಕೃತಿಗಳ ಅನನ್ಯಸಾಧಾರಣ ಸ್ಚರೂಪವನ್ನು ಗಮನಿಸುವ ವಿದೇಶೀಯರಲ್ಲೂ ಬೆಳೆಯುತ್ತಲೇ ಇದೆ. ಆದರೆ ನಮ್ಮ ಆಧುನಿಕನಾಗರೀಕಸಮಾಜದಲ್ಲೇಕೋಅಧ್ಯಾತ್ಮಎಂದಾಕ್ಷಣ  ’ದೊಡ್ಡ ನಾಮ-ಕುಂಕುಮ’, ’ರುದ್ರಾಕ್ಷಮಾಲೆ’, ’ಬಿಳಿಯ ಗಡ್ಡಮುಂತಾದ ಚಿತ್ರಣಗಳಷ್ಟೆ ಕಣ್ಣ ಮುಂದೆ ಬಂದು ನಿಲ್ಲುತ್ತವೆ! ಅಧ್ಯಾತ್ಮ ಎಂದರೆಅದೇನೋ ಅಸಹಜ ವರ್ತನೆಅಥವಾಕಾಣದ ಮುಕ್ತಿಗಾಗಿ ಕಣ್ಣ ಮುಂದಿರುವ ಸುಖವನ್ನು ಕೈಬಿಡುವ ಹುಚ್ಚುಅಥವಾವೃದ್ಧರು ಶಾಂತಿಗಾಗಿ Time passಗಾಗಿ ಕೇಳುವ ಅರ್ಥವಿಲ್ಲದ ಪುರಾಣಅಥವಾಮಾತು ಬಲ್ಲವರು ಸಾಮಾನ್ಯರನ್ನು ಬೆರಗುಗೊಳಿಸಲು ಅತೀಂದ್ರಿಯವೆನ್ನುವ ಯಾವುದರ ಬಗ್ಗೆಯೋ ಮಾಡುವ ವೈಭವೀಕರಣಅಥವಾನನ್ನ ದೇವರು ನಿನ್ನ ದೇವರು ಎಂದು ಒಂದಷ್ಟು uncivilized ಜನರು ಮಾಡುವ ಜಗಳಅಥವಾಗಡಿಬಿಡಿಯ ವೃತ್ತಿಜೀವನದವೆಲ್ಲ ಕಳೆದ ಮೇಳೆ Retired ಆದ ಮೇಲೆ ಬೇಕಾದ ಒಂದು Nice Change, ಅಷ್ಟೆ’------ ಎಂದು ಹೀಗೆ ಏನೇನೋ ಧೋರಣೆಗಳು ಪ್ರಚಲಿತವಿವೆ. ಅಧ್ಯಾತ್ಮದ ಬಗ್ಗೆ ಇಂತಹ ಅವಾಸ್ತವಿಕ ಧೋರಣೆಗಳಿಗೆ ಬಹುಮಟ್ಟಿಗೆ ಕಾರಣ ನಮ್ಮ ಮಾಧ್ಯಮಗಳು, ಚಲನಚಿತ್ರಗಳು, ವಿದೇಶೀಯ ಮೂಲದನಮ್ಮ(?) ಪಠ್ಯ ಹಾಗೂ ನಮ್ಮ ಪರಂಪರೆಯನ್ನು ದೂಷಿಸುವುದನ್ನೇ ಬಂಡವಾಳವಾಗಿಸಿಕೊಂಡಿರುವ ಪೂರ್ವಗ್ರಹಪೀಡಿತರು ರಚಿಸುವ ದಾರಿತಪ್ಪಿಸುವ ವಿಕೃತವಿಚಾರಧಾರೆ!
ಕುಂಕುಮ, ನಾಮ, ಮಾಲೆ, ಕಾವಿ ಮುಂತಾದ ಧಾರ್ಮಿಕ ಚಿಹ್ನೆಗಳಿಗೆ ಅರ್ಥವಿದೆ, ಸ್ವಾರಸ್ಯಗಳಿವೆ. ಆದರೆ ಇವುಗಳು ಹೊರಕಾಣಿಸುವ ಸಂಕೇತಗಳಷ್ಟೇ. ಇವುಗಳ ಹಿನ್ನಲೆಯ ತತ್ವ ಇನ್ನೂ ಬಹಳಷ್ಟಿದೆ ಎನ್ನುವುದು ಅರ್ಥವಾಗಬೇಕಾದರೆ, ನಾವೇ ಸ್ವತಃ  ಆಚಾರ-ವಿಚಾರಗಳನ್ನು ಪಾಲಿಸಿ ಪ್ರಮಾಣಿಕರಿಸಿಕೊಳ್ಳಬೇಕು ಅಥವಾ ಪ್ರಾಮಾಣಿಕ ಮೂಲಗಳಿಂದ ಕೇಳಿ ನೋಡಿ ತಿಳಿಯಬೇಕು.ವಸ್ತುತಃ ಅಧ್ಯಾತ್ಮ ಎಂದರೆ ಏನು? ಅದು ಇಂದಿಗೂ ಎಷ್ಟು ಪ್ರಸ್ತುತ ಎನ್ನುವುದನ್ನು ನೋಡೋಣ.
ಅಧ್ಯಾತ್ಮಎಂದರೆಆತ್ಮಾನಂ ಅಧಿಕೃತ್ಯ’ (ಆತ್ಮ ಸಂಬಂಧಿಯಾದ ಪ್ರವೃತ್ತಿ) ಎಂದು ನಿರ್ವಚಿಸಲಾಗುತ್ತದೆ. ’ಆತ್ಮಎಂದರೆನಾನು’  ಅಥವಾನಮ್ಮೊಳಗಿನ ಮೂಲ ಅಸ್ತಿತ್ವ (Core)’ ಎಂದರ್ಥ. ನಮ್ಮನ್ನು ನಾವು ಅರಿಯುವ ಶೋಧ ಅಥವಾ ವಿಜ್ಞಾನವೇಅಧ್ಯಾತ್ಮ’. ನಮ್ಮನ್ನು ನಾವು ಅರಿಯುತ್ತ ಒಳಮುಖವಾದಾಗ, ನಾವು ಹಾದುಹೋಗುವುದು ನಮ್ಮದೇ ವ್ಯಕ್ತಿತ್ವದ ಐದುಕೋಶಗಳೆಂಬ ಪದರಗಳೊಳಗೊಳಗೆ. ಅಂತರ್ಮುಖ ಯಾನದಿಂದ ಆಗುವ ಉತ್ತಮ ಪರಿಣಾಮಗಳನ್ನಿಲ್ಲಿ ವಿವೇಚಿಸೋಣ ಬನ್ನಿ.  
ಸಾಮಾನ್ಯವಾಗಿನಾನುಎಂದಾಕ್ಷಣ ನಮಗೆ ಬೋಧೆಯಾಗುವುದು ದೇಹವೇ. ಆದರೆ ಅದರೊಳಗಿರುವ ಪ್ರಾಣ, ಅದಕ್ಕೂ ಒಳಗಿರುವ ಮನಸ್ಸು, ಇನ್ನೂ ಒಳಗಿರುವ ಬುದ್ಧಿ ಹಾಗೂ ಮತ್ತೂ ಒಳಗಿರುವಅಹಂಪ್ರಜ್ಞೆಗಳು ಥಟ್ಟನೆ ನೆನಪಾಗದಿದ್ದರೂ, ಸ್ವಲ್ಪ ಚಿಂತನೆ ಗೈದರೆ ತಾವಾಗಿಯೇ ಗೋಚರಿಸುತ್ತವೆ. ಐದು ಪದರಗಳನ್ನೇಪಂಚಕೋಶಗಳೆಂದು ಕರೆದರು ನಮ್ಮ ಋಷಿಗಳು.
ಹೊರಗಡೆ ಕಾಣುವ ನಮ್ಮ ದೇಹವೇ ಅನ್ನಮಯ ಕೋಶ. ಯುಕ್ತ ಆಹಾರ-ವಿಹಾರ-ನಿದ್ರೆ-ಯೋಗಾಭ್ಯಾಸಾದಿ ವ್ಯಾಯಾಮ ಹಾಗೂ ಭೋಗ-ತ್ಯಾಗಗಳ ಹದವರಿತು ಶಿಸ್ತುಬದ್ಧ ಜೀವನ ನಡೆಸುವುದರ ಮೂಲಕ ಕೋಶವನ್ನು ಸುದೃಡಗೊಳಿಸಿಕೊಳ್ಳುವ ವಿಧಾನವಾದ ಯೋಗವನ್ನು ಆವಿಷ್ಕರಿಸಿಕೊಟ್ಟರು ನಮ್ಮ ಯೋಗಿಗಳು. ದೇಹಾರೋಗ್ಯ ಸುದೃಢತೆಗಳು ಎಲ್ಲಕಾಲಕ್ಕೂ ಎಲ್ಲರಿಗೂ ಅನ್ಯಯಿಸುವುದರಲ್ಲಿ ಸಂದೇಹವೇ ಇಲ್ಲ. Fashion ಹುಚ್ಚಿನಲ್ಲಿ ವಿಷಭರಿತ Maggi-Pepsi ಸೇವಿಸುತ್ತ ನಲವತ್ತರ ಹರೆಯದಲ್ಲೇ ಅಕಾಲಿಕ ಮುಪ್ಪಿಗೆ, ರೋಗಗಳಿಗೆ ಬಲಿಯಾಗುವ ನಮ್ಮ ಶೋಕೀಲಾಲ ಯುವಜನರಿಗೆ ಸಂದೇಶ ಹಿಂದೆಂದಿಗಿಂತ ಹೆಚ್ಚು ಪ್ರಸ್ತುತ ಎನ್ನಿಸುವುದಿಲ್ಲವೆ?
ಅನ್ನಮಯಕೋಶದ (ದೇಹದ) ಒಳಗಿರುವುದು ಪ್ರಾಣಮಯಕೋಶ. ನಮ್ಮ ದೇಹ ಹಾಗೂ ಮನಸ್ಸುಗಳನ್ನು ಪೋಷಿಸುವ ನಿಯಂತ್ರಿಸುವ ಮುಖ್ಯ ಕೋಶ ಇದು. ಉಸಿರಾಟವೇ ಇದರ ಗತಿ. ಹಾಗಾಗಿ ಉಸಿರಾಟದ ಕಲೆಯಾದಪ್ರಾಣಾಯಾಮವನ್ನು ಮಾಡುತ್ತ ಇದನ್ನು ಶುದ್ಧವೂ ಶಕ್ತವೂ ಆಗಿಟ್ಟುಕೊಳ್ಳುವ ವಿಧಾನವನ್ನು ನಮ್ಮ ಋಹಿಗಳು ಕಂಡುಕೊಂಡಿದ್ದರು, ತನ್ಮೂಲಕ ಅತ್ಯುತ್ತಮ immunityಯನ್ನು ಸಂಪಾದಿಸಿ, ದೇಹದ ರಕ್ತಸಂಚಲನ, ನರಮಂಡಲ, ಜೀರ್ಣಪ್ರಕ್ರಿಯೆ, ಶ್ವಾಸದ ದೃಢತೆ ಮುಂತಾದ ಅದೆಷ್ಟೋ ಪ್ರಕ್ರಿಯೆಗಳನ್ನು ಹದಕ್ಕೆ ತಂದುಕೊಳ್ಳಬಹುದು. ಹೀಗೆ ಆರೋಗ್ಯವನ್ನು ವರ್ಧಿಸಿಕೊಳ್ಳುವುದು ಎಲ್ಲ ಕಾಲಕ್ಕೂ ಎಲ್ಲರಿಗೂ ಪ್ರಸ್ತುತವೇ ಅಲ್ಲವೆ?
ಪ್ರಾಣಕ್ಕಿಂತ ಒಳಗಿರುವ ಮನೋಮಯಕೋಶ (ಮನಸ್ಸು) ವಿಚಾರಕ್ಕೆ ಬರೋಣ- ’ಬೇಕು-ಬೇಡ, ರಾಗ-ದ್ವೇಷ, ಸುಖ-ದುಃಖ, ಆಸೆ-ನಿರಾಶೆಮುಂತಾದ ದ್ವಂದ್ವಗಳಲ್ಲಿ ಹೊಯ್ದಾಡುವುದೇ ಮನಸ್ಸಿನ ರೀತಿ. ಮನಸ್ಸಿನದೇ ಭಾಗವಾದ ಚಿತ್ತದಲ್ಲಿ ಎಲ್ಲ ಭಾವನೆಗಳು ಮುದ್ರಿತವಾಗಿದ್ದು, ಸುಪ್ತಸಂಸ್ಕಾರಗಳಾಗಿದ್ದರೂ, ಆಗಾಗ ಭುಗಿಲೆದ್ದು ಭಾವನೆಗಳ ಕಲ್ಲೋಲವನ್ನುಂಟುಮಾಡುತ್ತದೆ. ಮನಸ್ಸು ಪ್ರಕ್ಷುಬ್ಧವಾದರೆ ನಮ್ಮ ಅಂತರಂಗವೂ ಕೆಡುತ್ತದೆ, ನಮ್ಮ ಮಾತು-ವರ್ತನೆ ಕೆಟ್ಟು. ಸಂಬಂಧ-ಬಾಂಧವ್ಯಗಳೂ ಏರುಪೇರಾಗುತ್ತವೆ. ಮನಸ್ಸು ನಿಯಂತ್ರಣಕ್ಕೆ ಬರದಿದ್ದಾಗ, ಮನುಷ್ಯನು ಭೂತಕಾಲದ ನೆನಪಿನಲ್ಲಿ ಕೊರಗುತ್ತ, ಭವಿಷ್ಯದ ಆತಂಕದಲ್ಲಿ ಕುಗ್ಗುತ್ತ ವರ್ತಮಾನದಲ್ಲಿ ಏನನ್ನೂ ಮಾಡಲಾಗದೆ ಕೀಳರಿಮೆ ಮಾನಸಿಕ ಒತ್ತಡಗಳಿಗೆ ಬಲಿಯಾಗುತ್ತಾನೆ, ಭಾವುಕ ಮೂರ್ಖನಾಗುತ್ತಾನೆ. ಜೀವನದಲ್ಲಿ ಏನನ್ನೇ ಆಗಲಿ ಸಾಧಿಸಬೇಕಾದರೆ, ಭಾವನೆಗಳ ಮೇಲೆ ನಿಯಂತ್ರಣ ಹಾಗೂ ಮನಶ್ಶಕ್ತಿಗಳು ಅತ್ಯವಶ್ಯಕ. ಇದಕ್ಕಾಗಿಯೇ ಜಪ, ಧ್ಯಾನ, ಪಾರಾಯಣ, ಪೂಜೆ, ದಾನ, ಧರ್ಮ, ನಿಃಸ್ವಾರ್ಥ ಸೇವೆ, ಮುಂತಾದಮಾನಸಿಕ ವ್ಯಯಾಮಗಳನ್ನು ಆವಿಷ್ಕರಿಸಿಕೊಟ್ಟಿದ್ದಾರೆ ನಮ್ಮ ಋಷಿಗಳು. ಇದನ್ನೆಲ್ಲ ಆಸ್ತಿಕರು ಮಾತ್ರ ಮಾಡಬೇಕೆಂದೇನಿಲ್ಲ. ದೇವರ ಹೆಸರಲ್ಲದಿದ್ದರೂ ಕನಿಷ್ಟ ಓಂಕಾರವನ್ನಾದರೂ ನಾಸ್ತಿಕರು ಜಪಿಸುತ್ತ, ಮೌನ, ಪ್ರಾಣಾಯಾಮ, ದಾನ, ನಿಃಸ್ವಾರ್ಥ ಸೇವೆಗಳನ್ನು ಮಾಡಿ ನೋಡಲಿ, ಅವರಿಂದಾಗುವ ಮನಃಪ್ರಸನ್ನತೆಯನ್ನು ಅವರೇ ಅನುಭವಿಸಿಕಂಡುಕೊಳ್ಳಬಹುದು. ಹೀಗೆ ಮನಸ್ಸನ್ನು ಜಯಿಸಿ, ಒಳಗೂ ಹೊರಗೂ ಶಾಂತಿಯನ್ನು ಸಾಧಿಸಿ, ಉನ್ನತ ಧ್ಯೇಯಗಳತ್ತ ಶ್ರಮಿಸಲು ಬೇಕಾದ ಮನೋಭೂಮಿಕೆಯನ್ನು ನಿರ್ಮಿಸಿಕೊಳ್ಳುವುದು ಎಲ್ಲಕಾಲಕ್ಕೂ ಎಲ್ಲರಿಗೂ ಪ್ರಸ್ತುತವಲ್ಲವೆ?
ಮನಸ್ಸಿಗಿಂತಲೂ ಒಲಗಿರುವುದುಬುದ್ಧಿಅಥವಾ ವಿಜ್ಞಾನಮಯ ಕೋಶ. ಬುದ್ಧಿಯು ಅನಿಯಂತ್ರಿತ ಮನಸ್ಸಿನ ಹೊಯ್ದಾಟಕ್ಕೆ ಸಿಲುಕಿದರೆ, ಸದಾ ತಪ್ಪು ನಿರ್ಣಯಗಳನ್ನೇ ಮಾಡುತ್ತದೆ, ಭೋಗ-ದ್ವೇಷಗಳ ಹುಚ್ಚಿನಲ್ಲಿ ಸದಾ ದುಡುಕುತ್ತದೆ, ನಮ್ಮನ್ನು ದಾರಿ ತಪ್ಪಿಸುತ್ತದೆ! ಏನನ್ನೇ ನೋಡಿದರೂ, ಕೇಳಿದರೂ, ಒಮ್ಮೆಲೆ ನಂಬದೆ ಸತ್ಯಕ್ಕೆ ಒರೆಹಚ್ಚಿ ವಿವೇಚಿಸಿ ತಿಳಿಯುವುದೇ ಬುದ್ಧಿಗೆ ವ್ಯಾಯಾಮ. ಸದಾ ಶ್ರವಣ, ಮನನ, ನಿಧಿಧ್ಯಾಸನಗಳ ಮೂಲಕ ಬುದ್ಧಿಯ ಭ್ರಾಂತಿಗಳನ್ನು ನಿವಾರಿಸಿ, ವಿಮರ್ಶೆಯ ತೀಕ್ಷಣತೆಯನ್ನು ಬೆಳೆಸಿ, ಸತ್ಯಾನ್ವೇಷಣೆಯ ಪ್ರವೃತ್ತಿಯನ್ನು ಮೂಡಿಸಿಕೊಳ್ಳಬೇಕೆಂದು ನಮ್ಮ ಋಷಿಗಳು ಒತ್ತಿ ಹೇಳುತ್ತಾರೆ. ಯಾರೋಮಾತಿನ ಚತುರರು’ ಸ್ವಾರಸ್ಯಕರವಾಗಿ ಹೇಳಿದರೆಂದು, ಅದು Fashionable ಎನಿಸುತ್ತದೆಂದು ಅಥವಾ ಯಾರ ಮೇಲೋ ನಮಗಿರುವ ಪೂರ್ವಗ್ರಹ, ದ್ವೇಷ ಭಾವಗಳನ್ನು ತೃಪ್ತಿಪಡಿಸಿಕೊಳ್ಲಲೆಂದು ನಾವು ಹಲವು ವಿಚಾರಗಳ ಬಗ್ಗೆ, (ಅದರಲ್ಲೂ ಅಧ್ಯಾತ್ಮದ ಬಗ್ಗೆ!) ತಾಳುವ ತಪ್ಪು ಧೋರಣೆಗಳು, ಅಪಾರ್ಥಗಳು, ಕೆಟ್ಟಹಟ, ವಾದ ಚಪಲ ಮುಂತಾದವು ಬುದ್ಧಿಯನ್ನು ವಕ್ರವಾಗಿಸುತ್ತವೆ. ಇಂತಹ ಮನಶ್ಶುದ್ಧಿಯಿಲ್ಲದಬುದ್ಧಿವಂತರು’ ಸಮಾಜಕ್ಕೇ ಘಾತಕರಾಗುತ್ತಾರೆ! ಹೀಗಾಗಿ ಬುದ್ಧಿಯನ್ನು ದೃಢವಾಗಿಸಿಕೊಳ್ಳುವಾಗ ಮನಶ್ಶುದ್ಧಿಯೂ ಅತ್ಯವಶ್ಯಕ ಎನ್ನುವುದನ್ನು ಚೆನ್ನಾಗಿ ತಿಳಿದವರು ನಮ್ಮ ಋಷಿಗಳು. ದೃಢಬುದ್ಧಿ ಎಲ್ಲಕಾಲಕ್ಕೂ ಎಲ್ಲರಿಗೂ ಪ್ರಸ್ತುತವೇ ಅಲ್ಲವೆ?
ವಿಜ್ಞಾನಮಯ ಕೋಶಕ್ಕೂ ಒಳಗಿರುವುದು ಆನಂದಮಯ ಕೋಶ, ಅದೆ ನಮ್ಮಅಸ್ಮಿತಾಪ್ರಜ್ಞೆ ಎನ್ನಬಹುದು. ಸದಾ ಹಿನ್ನಲೆಯಲ್ಲಿ ಇದು ಜಾಗೃತವಾಗಿಯೇ ಇದ್ದರೂ ಕೂಡ, ಬುದ್ಧಿಮನಗಳಲ್ಲಿ ನಾವು ತುಂಬಿಕೊಳ್ಳುವ ಅನವಶ್ಯಕ ಭಾವವಿಚಾರಗಳ ಗಲಾಟೆಯಲ್ಲಿ, ನಮಗೆ ನಮ್ಮೊಳಗಿನ ಶಾಂತಿ ಆನಂದಗಳ ನೆಲೆಯಲ್ಲಿ ವಿಶ್ರಮಿಸಲು ವ್ಯವಧಾನವೇ ಸಿಗುವುದಿಲ್ಲ! ಗಾಢನಿದ್ರೆಯಲ್ಲಿ ಕೆಲವು ನಿಮಿಷಗಳ ಕೋಶದ ಆನಂದಾನುಭವವೇ ನಮಗೆ ತುಂಬ ವಿಶ್ರಾಂತಿಯನ್ನು ಕೊಡುತ್ತದೆ. ಹಾಗಿರುವಾಗ, ಜಾಗೃತಾವಸ್ಥೆಯಲ್ಲೂ ಕೋಶವನ್ನು ಹೊಕ್ಕು ಧ್ಯಾನಿಸಿದಲ್ಲಿ, Battery recharge ಮಾಡಿದಂತೆ ನಮ್ಮನ್ನು ನಾವು ಮತ್ತೆ ಮತ್ತೆ ಪುನಶ್ಚೇತನಗೊಳಿಸಿಕೊಳ್ಳುತ್ತಲೇ ಇರಬಹುದು. ಇದನ್ನೇ ಯೋಗನಿದ್ರಾ ಎಂದು ಕರೆದರು ನಮ್ಮ ಋಷಿಗಳು. ಸ್ಥಿತಿಯನ್ನು ಸಿದ್ಧಿಸಿಕೊಳ್ಳಲೆಂದೆ - ಧ್ಯಾನ, ಭಜನೆ, ಪೂಜೆ, ಪಾರಾಯಣ, ಧ್ಯಾನ, ವಿರಕ್ತಿ ಇತ್ಯಾದಿಗಳೆಲ್ಲ ಇರುವಂತಹವು. ಡಿವಿಜಿರವರು ಹೇಳುವಂತೆ-
ದೇವಮಂದಿರಭಜನೆ ಪೂಜೆಪ್ರಸಾದಗಳು ಜೀವನದಲಂಕಾರ ಮನಸಿನುದ್ಧಾರ|
ಭಾವವಂ ಕ್ಷುಲ್ಲ ಜಗದಿಂ ಬಿಡಿಸಿ ಮೇಲೊಯ್ವುದಾವುದಾದೊಡಮೊಳಿತು ಮಂಕುತಿಮ್ಮ||

ಹೀಗೆ ನಮ್ಮೊಳಗಿನ ಶಾಂತಿ-ಶಕ್ತಿಗಳನ್ನು ನಾವೇ ಪುನಶ್ಚೇತನಗೊಳಿಸಿಕೊಳ್ಳುವುದು ಎಲ್ಲ ಕಾಲಕ್ಕೂ ಎಲ್ಲರಿಗೂ ಪ್ರಸ್ತುತವೇ ಅಲ್ಲವೆ? ಇನ್ನು, ಐದುಕೋಶಗಳನ್ನೂ ಅತಿಕ್ರಮಿಸುತ್ತ ಮತ್ತೂ ಒಳಹೋದಾಗ ನಾವು ತಲುಪುವುದೇ ನಮ್ಮ ಅಸ್ತಿತ್ವದ ಮೂಲವನ್ನು, ಆತ್ಮಚೈತನ್ಯವನ್ನು! ಇದು ಸತ್- ಚಿತ್- ಆನಂದ- ಸ್ವರೂಪದ್ದು. ಇದೇ ನಮ್ಮ ಮೂಲ ಅಸ್ತಿತ್ವ, ಜ್ಞಾನದ ಮೂಲ, ಆನಂದದ ಮೂಲ! ಆತ್ಮತತ್ವ ಸರ್ವಸೃಷ್ಟಿಯನ್ನೂ ವ್ಯಾಪಿಸಿರುವ ಪರಮಾತ್ಮ ತತ್ವದ ತುಣುಕು. ( ಪರಮಾತ್ಮನನ್ನೇ ನಾವು ವಿಷ್ಣು, ಶಿವ, ಗಣಪತಿ, ದೇವಿ ಮುಂತಾದ ನಾಮರೂಪಗಳಲ್ಲಿ ಧ್ಯಾನಿಸುತ್ತೇವೆಇದನ್ನು ಅರಿತಾಗ, ಆತ್ಮಚೈತನ್ಯವು ಮನುಷ್ಯನ ಸಕಲ ಕೋಶಗಳನ್ನು ಉಜ್ಜೀವನಗೊಳಿಸಿ, ಅದಮ್ಯ ಶಕ್ತಿ ಉತ್ಸಾಹಗಳನ್ನು ತುಂಬುತ್ತದೆ! ಅಂತಹ ವ್ಯಕ್ತಿಯನ್ನೇಮುಕ್ತ’ , ‘ಸರ್ವಜ್ಞ’ ಎಂದು ಕರೆಯುತ್ತೇವೆ. ಅಂತಹ ವ್ಯಕ್ತಿ ದೇಶ-ಕಾಲ-ಕುಲ-ಮತ-ಲಿಂಗ-ವರ್ಣಭೇದಗಳನ್ನು ಮೀರಿದವಿಶ್ವಮಾನವನಾಗುತ್ತಾನೆ. ಇವನೆಲ್ಲಿದ್ದರೆ ಅಲ್ಲಿ ಶಾಂತಿ ಸಮೃದ್ಧಿ ನೆಲೆಸುತ್ತದೆ! ಈತ ರಾಜನಾದರೆ ರಾಮನಂತಹ, ಹರಿಶ್ಚಂದ್ರನಂತಹ ಉತ್ತಮ ರಾಜನಾಗುತ್ತಾನೆ. ಸಂನ್ಯಾಸಿಯಾದರೆ ಬುದ್ಧಶಂಕರರಂತಾಗಿ ಲೋಕಹಿತವನ್ನು ಸಾಧಿಸುತ್ತಾನೆ. ಈತ ವಿಜ್ಞಾನಿಯೇ ಆಗಿರಲಿ, ತಂತ್ರಜ್ಞನೇ ಆಗಿರಲಿ, ರಾಜನೈತಿಜ್ಞನೇ ಆಗಿರಲಿ, ಕಲಾವಿದನೇ ಆಗಿರಲಿ, ಕೃಷಿಕನೇ ಆಗಿರಲಿ, ಏನೇ ಆಗಿರಲಿ, ಆಯಾ ಕ್ಷೇತ್ರದಲ್ಲೇ ಅದ್ವಿತೀಯ ಸಾಧಕನಾಗುತ್ತಾನೆ, ಲೋಕೋಪಕಾರಕ ಕಾರ್ಯಗಳನ್ನು ಮಾಡುವಲ್ಲಿ ಸಮರ್ಥನಾಗುತ್ತಾನೆ. ಕರ್ಮಯೋಗಿ ಎನಿಸುತ್ತಾನೆ. ಇಂತಹ ಆತ್ಮಬೋಧೆಯ ಫಲ ಎಲ್ಲ ಕಾಲಕ್ಕೂ ಎಲ್ಲರೂ ಬಯಸುವಂತಹದ್ದೇ ಅಲ್ಲವೆ?
ಕೇವಲ ದೇಹವನ್ನು ಸಾಕಿ, ಮನಸ್ಸನ್ನು ಮುದ್ದಿಸಿ, ಬುದ್ಧಿಯನ್ನು ಅನಿಯಂತ್ರಿತವಾಗಿ ಹರಿಯ ಬಿಟ್ಟು, ನಮ್ಮೊಳಗಿನ ಸತ್ವ-ಸಾಮರ್ಥ್ಯ-ಆನಂದಗಳನ್ನು ಕಂದುಕೊಳ್ಳದೇ, ಪಶುಗಳಂತೆ ಜೀವಿಸುವುದು ಯಾವ ಕಲಕ್ಕೆ ತಾನೆ ಸರಿ ಎನಿಸುತ್ತದೆ? ಯಾರಿಗೆ ತಾನೆ ಘನತೆಯನ್ನು ತರುತ್ತದೆ? ’ಅಧ್ಯಾತ್ಮವೆನ್ನುವುದರ ಹಿನ್ನಲೆಯಲ್ಲಿರುವ ಸುಂದರ ಸಾರ್ವಕಲಿಕ ಉದ್ದೇಶವನ್ನು ಕೇಳಿ, ಓದಿ, ತಿಳಿಯುವ ತಾಳ್ಮೆಯನ್ನು ನಮ್ಮ ಯುವಜನತೆ ಬೆಳೆಸಿಕೊಳ್ಳಬೇಕು. ಅದರ ಬದಲು ಬಿಳಿಯ ತೊಗಲಿನ ವಿದೇಶಿಯರು (ಅದರಲ್ಲೂ Racist ಭಾವದವರು, ಮತಾಂಧರು, ನಮ್ಮನ್ನು ಬೌದ್ಧಿಕವಾಗಿ ಆಳಲೆಂದೇ, ಮತಾಂತರಿಸಲೆಂದೇ, ಆರ್ಥಿಕವಾಗಿ ಲೂಟಿಗೈಯಲೆಂದೇ) ತೇಲಿ ಬಿಡುವ ವಿಕೃತವಿಚಾರಗಳನ್ನು ಪ್ರಶ್ನಿಸದೆ, ಪ್ರಮಾಣಿಸದೆ, ’ಸತ್ಯ, fashion, ಪ್ರಗತಿಎಂದು ಕಣ್ಮುಚ್ಚಿ ಒಪ್ಪುವುದರಿಂದ ನಮ್ಮ ಯುವಜನತೆಗಾಗುವ ನಷ್ಟ ಅಪಾರ!
ಸಮಸ್ತ ಮನುಕುಲಕ್ಕೂ ಎಲ್ಲ ಕಾಲಕ್ಕೂ ಅನ್ವಯವಾಗುವ ಜೀವನ ನೀತಿಯ ಆಧ್ಯಾತ್ಮಿಕ ಸಾಧನಾಪಥವನ್ನು ನಿರ್ಮಿಸಿಕೊಟ್ಟಿದ್ದಾರೆ ನ್ಮಮ್ಮ ಋಷಿಗಳು. ಮೋಕ್ಷ ಮಾರ್ಗದ ಹಾದಿಯಲ್ಲಿ ಬುದ್ಧಿ, ಮನಸ್ಸು ಪ್ರಾಣಗಳ ಶಕ್ತಿಗಳೂ ತಾವೇ ತಾವಾಗಿ ವಿಕಾಸವಾಗುತ್ತವೆ. ಕುಲ, ಲಿಂಗ, ವಯಸ್ಸು, ದೇಶ, ಕಾಲಗಳ ಭೇದವಿಲ್ಲದೇ ಎಲ್ಲರೂ ಸ್ವಯಂ ಅಭ್ಯಸಿಸಿ ಪ್ರಮಾಣಿಸಿ ಕಂಡುಕೊಳ್ಳಬಹುದಾದ ಅದ್ಭುತ ಅಧ್ಯಾತ್ಮಮಾರ್ಗವನ್ನು ಜಗತ್ತಿಗೇ ತೋರಿಕೊಟ್ಟ ಜಗದ್ಗುರು ಭಾರತ. ಜ್ಞಾನನಿಧಿಯನ್ನು ನಾವೇ ಕೈಬಿಟ್ಟು ಕೂತರೆ, ನಮಗಿಂತ ಮೂರ್ಖರು, ನತದೃಷ್ಟರು ಮತ್ತಾರಿದ್ದಾರು?
ಲೇಖಕರು
ಡಾ ಆರತಿ ವಿ ಬಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ