ಶುಕ್ರವಾರ, ಮಾರ್ಚ್ 17, 2017

ದುರ್ಗಾ ಅವತಾರದ ಕಥೆ
ಪರತತ್ವವನ್ನು ’ಮಾತೆ’ ಎಂದು ಭಾವಿಸಿ ಉಪಾಸನೆ ಮಾಡುವಂತಹದ್ದು ಸನಾತನ ಧರ್ಮದಲ್ಲಿನ ವೈಶಿಷ್ಟ್ಯವೇ ಸರಿ. ಅಪ್ಪನಿಗಿಂತ ಅಮ್ಮನ ಹತ್ತಿರ ಸಲುಗೆ, ಆತ್ಮೀಯತೆ ಜಾಸ್ತಿ, ನಮ್ಮೆಲ್ಲ ತಪ್ಪುಗಳನ್ನು ಅಹೇತುಕವಾಗಿ ಕ್ಷಮಿಸಿ ಮಡಿಲಿಗೆ ಕರೆದುಕೊಳ್ಳುವವಳು ಅಮ್ಮ ಒಬ್ಬಳೆ. ಆದ್ದರಿಂದ ದೇವರನ್ನು ’ಅಮ್ಮ’ ಎಂದು ಕರೆಯುವಲ್ಲಿ ಭಕ್ತನಿಗೆ ಒಂದು ಭಾವನಾತ್ಮಕ ಸೌಕರ್ಯ. ದೇವಿಯನ್ನು ಸ್ತುತಿಸುವ ಪದ್ಧತಿ ವೇದಕಾಲದಿಂದಲೂ ಕಾಣಬರುತ್ತದೆ. ದೇವಿಯನ್ನು ವೇದೋಕ್ತ ಮಂತ್ರಗಳಿಂದಲೂ, ಆಗಮೋಕ್ತ ಶ್ಲೋಕಗಳಿಂದಲೂ, ತಂತ್ರೋಕ್ತ ಬೀಜಾಕ್ಷರಗಳಾದಿಗಳಿಂದಲೂ, ಸರಳ ಸುಂದರ ಜಾನಪದ ಪದ್ಧತಿಗಳಿಂದಲೂ, ಮುಗ್ಧಭಕ್ತಿ, ಸ್ತುತಿ, ಭಜನೆ ಮೂಂತಾದವುಗಳಿಂದಲೂ,. ಇದಲ್ಲದೆ, ಪ್ರಾಂತೀಯ ಪದ್ಧತಿಗಳು ಹಾಗೂ ಸಾಧಕರ ಒಲವುಗಳೂ ಸೇರಿ ಬಗೆಬಗೆಯ ಪೂಜಾಕ್ರಮಗಳು ಮೈದಾಳಿವೆ. ಈ ವೈವಿದಧಯವೇ ಸನಾತನ ಧಮದ ಹೆಗ್ಗುರುತು ಎನ್ನಿ. ಜಗನ್ಮಾತೆಯನ್ನು ಆರಾಧಿಸುವ ವಿಧಗಳು ಹಲವಾದರೂ, ಭಕ್ತಿ-ಸಂಭ್ರಮಗಳು ಒಂದೇ. ಈ ಎಲ್ಲ ಪದ್ಧತಿಗಳಿಗೂ ಕಥಾಧಾರ ದೇವಿಪುರಾಣಗಳೆ. ಗೌರಿಯಂತಹ ಸೌಮ್ಯ ಮಾತೃಮೂರ್ತಿ ಲೋಕರಕ್ಷಣೇಗಾಗಿ ವೀರ ರಸಭರಿತ ದುರ್ಗಾದೇವಿಯಾಗಿ ಬೆಳಗುತ್ತಾಳೆ! ಶ್ರಾವಣ ಮತ್ತು ವಸಂತ ಮಾಸಗಳಲ್ಲಿ ಗೌರಿಯನ್ನು ಆರಾಧಿಸಿದರೆ, ಶರರ್ದೃತುವಿನಲ್ಲಿ ದುರ್ಗಾಸ್ವರೂಪದ ಆರಾಧನೆ ವಿಶೇಷವೆನಿಸುತ್ತದೆ. ಪ್ರಾಚೀನಕಾಲದಿಂದಲೂ ಶರರ್ದೃತುವು ಬೇಟೆ ಹಾಗೂ ವೀರೋಚಿತ ಕಲಾಪಗಳಿಗೆ ಹೇಳಿ ಮಾಡಿಸಿದ ಕಾಲ.
ಮಹಾಲಕ್ಷ್ಮೀ, ಮಹಾಸರಸ್ವತೀ, ಮಹಾಕಾಳಿ, ಚಂಡಿಕಾ, ಬಗಲಾ, ಬ್ರಾಹ್ಮಿ, ಅಪರಾಜಿತಾ, ಮುಂತಾದ ಅನಂತ ರೂಪಗಳಲ್ಲಿ ಅವಳ ದುರ್ಗಾ ರೂಪ ಬಹುಮಾನ್ಯ. ದುರ್ಗಾಸಪ್ತಸತಿಯ ಮಧ್ಯಮ ಚರಿತೆ ಈ ದುರ್ಗಾವತಾರವನ್ನು ಸಾರುತ್ತದೆ. ಇದರ ಸಾರಾಂಶವನ್ನು ನೋಡೋಣ- ಯುಗಾಂತರಗಳ ಹಿಂದೆ ಮಹಿಷಾಸುರ ಎನ್ನುವ ಅತ್ಯಂತ ತಾಮಸಿಕ, ಲೋಕಹಿಂಸಕ ಅಸುರ ಹುಟ್ಟಿ ಬಂದ. ಆತ ತಪಸ್ಸು ಗೈದು ಬ್ರಹ್ಮನಿಂದ ವರವನ್ನೂ ಪಡೆದ - ’ದೇವ-ದಾನವ-ಮಾನವ-ಯಕ್ಷ-ಗಂಧರ್ವ-ಕಿನ್ನರ-ಕಿಂಪುರುಷ-ಸಿದ್ಧ-ವಿದ್ಯಾಧರಾದಿ ಯಾವ ವೀರರಿಂದಲೂ ತನಗೆ ಮೃತ್ಯುವೊದಗಬಾರದು’ ಎಂಬುದಾಗಿ. ಆದರೆ ಇದರಲ್ಲಿ ನಾರಿಯನ್ನು ಹೆಸರಿಸಲಿಲ್ಲ. ’ಅಬಲೆಯಾದ ಯಃಕಶ್ಚಿತ್ ನಾರಿ ತನಗೇನು ಮಾಡಿಯಾಳು?’ ಎನ್ನುವ ದುರಹಂಕಾರ! ಬಲ, ಐಶ್ವರ್ಯ ಹಾಗೂ ವರದಿಂದಲೂ ಕೊಬ್ಬಿದ ಮಹಿಷ ಲೋಕಕಂಠಕನಾದ, ಸ್ವರ್ಗಾದಿ ಎಲ್ಲ ಲೋಕಗಳನ್ನು ಆಕ್ರಮಿಸಿ ದೇವತೆಗಳನ್ನು ಹೊರಗಟ್ಟಿದ, ತನಗಿನ್ನು ಯಾರ ಭಯವೂ ಇಲ್ಲ ಎಂದು ಭ್ರಮಿಸಿ ಅತೀವ ಹಿಂಸಾಚಾರಕ್ಕಿಳಿದ. ಆದರೆ ಭಗವತ್ತತ್ತ್ವವು ಯಾವ ರೂಪದಲ್ಲಾದರೂ ಮೈದಾಳಬಹುದು, ತನ್ನನ್ನು ಹದ್ದಿಕ್ಕಬಹುದು ಎನ್ನುವುದು ಆ ಮೂಢನಿಗೆ ಅರ್ಥವಾಗಿರಲಿಲ್ಲ.
ದೇವತಾಗಣವೆಲ್ಲ ತ್ರಿಮೂರ್ತಿಗಳ ಮುಂದೆ ಸಭೆ ಸೇರಿ, ತಮ್ಮ ದುಗುಡವನ್ನು ತೋಡಿಕೊಂಡರು, ಪರಿಹಾರವನ್ನು ಚಿಂತಿಸಿದರು. ಅಮೂರ್ತಳಾದ ಚಿಛ್ಛಕ್ತಿ ಆದ್ಯಾಶಕ್ತಿಯನ್ನು ಮನಸಾ ಧ್ಯಾನಿಸಿದರು. ಆಗ ಕ್ರೋದಗೊಂಡ ಹರಿ-ಹರ-ಬ್ರಹ್ಮರ ಹಾಗೂ ಆ ಎಲ್ಲ ದೇವತೆಗಳ ದೇಹಗಳಿಂದ ತೇಜಸ್ಸುಗಳು ಹೊಮ್ಮಿದವು. ಆ ಎಲ್ಲ ತೇಜಸ್ಸುಗಳು ಏಕೀಭವಿಸಿ ಪರ್ವತೋಪಮವಾದ ಸುಂದರ ತೇಜೋರಾಶಿಯಾಯಿತು. ಅದೇ ಭವ್ಯ ನಾರೀ ರೂಪತಾಳಿದವು.
ಶಿವನ ತೇಜಸ್ಸೇ ಅವಳ ಮುಖವಾಯಿತಂತೆ, ಯಮನ ತೇಜವೇ ಅವಳ ಕೇಶವಾಗಿ, ವಿಷ್ಣುವಿನ ತೇಜವು ಅವಳ ಬಾಹುಗಳಾಗಿ, ಸೋಮ, ಇಂದ್ರ ವರುಣರ ತೇಜಗಳು ಅವಳ ಸ್ತನ, ನಡುವು ಹಾಗೂ ಮೊಣಕಾಲು ಮತ್ತು ತೊಡೆಗಳಾಗಿ, ಭೂದೇವಿಯ ತೇಜಸ್ಸು ಅವಳ ನಿತಂಬವಾಗ್, ಬ್ರಹ್ಮ, ಸೂರ್ಯ ಹಾಗೂ ವಸುಗಳ ತೇಜಗಳು ಅವಳ ಪಾದಗಳೂ, ಪಾದದ ಬೆರಳುಗಳೂ, ಕೈಬೆರಳುಗಳೂ ಆದವಂತೆ. ಕುಬೇರ, ಪ್ರಜಾಪತಿ ಹಾಗೂ ಅಗ್ನಿಗಳ ತೇಜಸ್ಸುಗಳಿಂದ ಅವಳ ಮೂಗು, ಹಲ್ಲುಗಳೂ ಹಾಗೂ ಮೂರು ಕಣ್ಣುಗಳು ಉಂಟಾದವಂತೆ. ಎರಡು ಸಂಧ್ಯಾಕಾಲಗಳೇ ಅವಳ ಎರಡು ಹುಬ್ಬುಗಳಾದರೆ, ವಾಯುವಿನ ತೇಜಸ್ಸೇ ಅವಳ ಕಿವಿಗಳಾದವಂತೆ. ಇನ್ನೂ ಇತರ ದೇವತಾ ಶಕ್ತಿಗಳಿಂದ ಅವಳ ಸರ್ವಾಂಗಗಳು ರೂಪಗೊಂಡವಂತೆ. ಹೀಗೆ ದೇವತೆಗಳ ಅಂತರಾತ್ಮಸ್ವರೂಪಿಣಿಯಾದ ಜಗನ್ಮಾತೆ ಅನುಪಮ ಸುಂದರ ದುರ್ಗಾರೂಪದಲ್ಲಿ ಮೈದಾಳಿದಳು. ದೇವಕಾರ್ಯವನ್ನು ಸಾಧಿಸಿ ಲೋಕಗಳನ್ನು ಕಷ್ಟದಿಂದ ಪಾರುಮಾಡಲು ಮೈದಾಳಿದ ಆಕೆ ದುರ್ಗ+ಹಾ (ಕಷ್ಟಗಳನ್ನು ಹರಿಸುವವಳು) = ’ದುರ್ಗಾ’ ಎನಿಸಿದಳು. ಆ ಬಳಿಕ ಎಲ್ಲ ದೇವತೆಗಳು ತಮ್ಮ ಶಕ್ತಿಗಳ ಪ್ರತೀಕವಾದ ಆಯುಧಗಳನ್ನು ವಾಹನಗಳನ್ನೂ ಅವಳಿಗೆ ಇತ್ತರಂತೆ. ಶಿವನ ತ್ರಿಶೂಲದಿಂದ ಒಂದು ತ್ರಿಶೂಲ ಹೊಮ್ಮಿ ಅವಳ ಕೈ ಸೇರಿತು. ಹಾಗೆಯೇ ಬ್ರಹ್ಮನಿಂದ ಕಮಂಡಲು, ವಿಷ್ಣುವಿನಿಂದ ಚಕ್ರ, ಯಮನಿಂದ ಕಾಲದಂಡ, ಇಂದ್ರನಿಂದ ವಜ್ರಾಯುಧ, ಐರಾವತದ ಘಂಟೆಗಳು, ವರುಣನಿಂದ ಶಂಖ, ಅಗ್ನಿಯಿಂದ ಶಕ್ತ್ಯಾಯುಧ, ವಾಯುವಿನಿಂದ ಬಿಲ್ಲು ಮತ್ತು ಬಾಣಗಳಿಂದ ತುಂಬಿದ ಬತ್ತಳಿಕೆ, ಸಮುದ್ರದಿಂದ ಪಾಶ, ಪ್ರಜಾಪತಿಯಿಂದ ಅಕ್ಷಮಾಲೆ, ಕಾಲನಿಂದ ಖಡ್ಗ ಮತ್ತು ನಿರ್ಮಲವಾದ ಚರ್ಮ(ಗುರಾಣಿ)ಗಳು  ಅವಳನ್ನು ಸೇರಿದವು. ಸೂರ್ಯನು ಅವಳ ರೋಮಕೂಪಗಳಲ್ಲಿ ತನ್ನ ತೇಜವನ್ನು ತುಂಬಿದನು. ಕ್ಷೀರಸಾಗರಾಭಿಮಾನಿ ದೇವತೆಯು ಆಕೆಗೆ ಶುದ್ಧವಾದ ಹಾರ, ಹೊಸಬಟ್ಟೆಗಳನ್ನೂ, ದಿವ್ಯ ಚೂಡಾಮಣಿಯನ್ನೂ, ಎರಡು ಕರ್ಣಕುಂಡಲಗಳನ್ನೂ, ಕಡಗಗಳನ್ನೂ, ಶುಭ್ರ ಧವಲ ಅರ್ಧಚಂದ್ರನನ್ನೂ, ಎಲ್ಲ ಭುಜಗಳಿಗೆ ಕೇಯೂರಾಭಾಣವನ್ನೂ, ನಿರ್ಮಲವಾದ ಕಾಲ್ಗೆಜ್ಜೆಗಳನ್ನೂ, ಉತ್ತಮ ಕಂಠಾಭಾರಣವನ್ನೂ, ರತ್ನದುಂಗುರಗಳನ್ನೂ ನೀಡಿದನು. ವಿಶ್ವಕರ್ಮನು ಆಕೆಗೆ ಕೊಡಲಿಯನ್ನೂ, ಬಗೆ ಬಗೆಯ ಅಸ್ತ್ರಗಳನ್ನೂ, ಅಭೇದ್ಯವಾದ ದಂಶನವನ್ನೂ ಕೊಟ್ಟನು. ಸಮುದ್ರದೇವನು ಆಕೆಗೆ ಮುಡಿಯಲ್ಲೂ ಕೊರಳಲ್ಲೂ ಧರಿಸಲು ಬಾಡದ ಪದ್ಮಮಾಲೆಯನ್ನು ಕೊಟ್ಟನು, ಹಿಡಿಯಲು ಸುಂದರ ಕಮಲವೊಂದನ್ನು ಕೈಯಲ್ಲಿಟ್ಟನು. ಹಿಮವಂತನು ವಾಹನವಾಗಿ ಸಿಂಹವನ್ನೂ, ವಿವಿಧ ರತ್ನಗಳನ್ನೂ ಕೊಟ್ಟರೆ ಕುಬೇರನು ಅಕ್ಷಯ ಸುರಾಪಾತ್ರೆಯನ್ನೂ, ಶೇಷನು ನಾಗಹಾರವನ್ನೂ ಕೊಟ್ಟನಂತೆ. ಇನ್ನೂ ಹಲವು ದೇವತೆಗಳು ಹಲವು ಅಮೂಲ್ಯ ಭೂಷಣಗಳ್ನನ್ನೂ, ವಸ್ತುಗಳನ್ನೂ ಮತ್ತು ಆಯುಧಗಳನ್ನು ಅವಳಿಗಿತ್ತು ಧನ್ಯರಾದರು.
ಹೀಗೆ ಸರ್ವದೇವತಾತ್ಮಕ ಶಕ್ತಿಯಾಗಿ ಮೈದಾಳಿದ ದುರ್ಗಾದೇವಿ ಹಿಗ್ಗಿ ನಿಂತಳು. ತನ್ನ ಅವತಾರೋದ್ದೇಶವನ್ನು ಸಾಧಿಸಲು ಅನುವಾದಳು. ರುದ್ರಭಯಂಕರ ಅಟ್ಟಹಾಸವನ್ನು ಬೀರಿದಳು! ಆ ನಾದಕ್ಕೆ ಲೋಕಗಳೆಲ್ಲ ತಲ್ಲಣಿಸಿಬಿಟ್ಟವು! ಚರಾಚರಗಳೆಲ್ಲ ನಡುಗಿದವು, ಪಾದದ ಒದೆತದಿಂದ ನೆಲವನ್ನು ಜಜ್ಜಿ, ಕಿರೀಟದ ತುದಿಯಿಂದ ಆಕಾಶವನ್ನು ಕೆರೆದು, ಬಿಲ್ಲಿನ ಹೆಡೆಯೇರಿಸಿದ ಶಬ್ದದಿಂದ ಅಧೋಲೋಕಗಳನ್ನೇ ತಲ್ಲಣಗೊಳಿಸಿದ ಆಕೆ ಹೊಮ್ಮಿಸಿದ ನಾದಾದ ಪ್ರತಿಧ್ವನಿಗಳು ದೂರದ ಮಹಿಷನನ್ನು ತಲುಪಿ ವಿಸ್ಮಯಗೊಳಿಸಿ ಕೆರಳಿಸಿದವು. ತನ್ನ ಸಂಹಾರಕ್ಕಾಗಿಯೇ ದುರ್ಗೆಯ ಅವತಾರವಾದ ಬಗ್ಗೆ ತಿಳಿದ ಆತ ಕೋಪದಿಂದ ಅವಳ ಮೇಲೆ ಯುದ್ಧಗೈಯಲು ಮುಂದಾದ.
ತನ್ನ ಭಯಂಕರ ಸೇನಾನಾಯಕರನ್ನು ಲಕ್ಷೋಪಲಕ್ಷ ಅಸುರಸೈನಿಕರ ಸಮೇತವಾಗಿ ಕಳುಹಿಸಿದ ಮಹಿಷಾಸುರ. ದೇವಿಯಾದರೋ ಕೆಲವರನ್ನು ತನ್ನ ಹೂಂಕಾರಮಾತ್ರದಿಂದಲೂ, ಕೆಲವರನ್ನು ತನ್ನ ಮುಷ್ಟಿಘಾತದಿಂದಲೂ, ಕೆಲವರನ್ನು ವಿವಿಧ ಆಯುಧಗಳಿಂದಲೂ ಲೀಲಾಜಾಲವಾಗಿ ಸಂಹಾರ ಮಾಡಿದಳು. ಇನ್ನು ಅಸುರಸೇನೆಯ ಬಹುಭಾಗವನ್ನು ದೇವಿಯ ಸಿಂಹವು ಸೀಳಿಹಾಕಿತು. ದೇವಿಯ ಕೈಗಳಿಗೆ ಬಲಿಯಾದ ಅಸುರರ ಪೈಕಿ ಚಿಕ್ಷುರ, ಚಾಮರ, ಉದಗ್ರ, ಮಹಾಹನು, ಅಸಿಲೋಮ, ಬಾಷ್ಕಲ, ಉಗ್ರದರ್ಶನ, ಬಿಡಾಲ, ಮುಂತಾದವರು ಕೆಲವರು. ಹೀಗೆ ತನ್ನ ಉತ್ತಮೋತ್ತಮ ಸೇನಾನಾಯಕರೂ, ವೀರರೂ ನಾಶವಾಗುತ್ತಿದ್ದಂತೆ ಮಹಿಷನ ಕೋಪ ಮಿತಿಮೀರಿತು. ಕ್ರುದ್ಧನಾಗಿ ಸ್ವತಃ ದೇವಿಯ ಮೇಲೆ ಯುದ್ಧಕ್ಕೆ ನುಗ್ಗಿದ. ಈರ್ವರ ನಡುವೆ ಭಯಂಕರ ಯುದ್ಧ ನಡೆಯಿತು. ದೇವಿಯ ಮುಷ್ಟಿಘಾತಕ್ಕೆ, ಆಯುಧ ಪ್ರಹಾರಗಳಿಗೆ ಘಾಸಿಗೊಂಡ ಮಹಿಷನು ಕೋಪದಿಂದ ಉಗ್ರಭಯಂಕರವಾಗಿ ಗರ್ಜಿಸತೊಡಗಿದ. ಆಗ ದೇವಿಯು ದಿವ್ಯ ಅಕ್ಷಯಪಾತ್ರೆಯಿಂದ ಮಧುವನ್ನು ಕುಡಿಯುತ್ತ ಹೇಳಿದಳಂತೆ-
’ಗರ್ಜ ಗರ್ಜ ಕ್ಷಣಂ ಮೂಢ ಮಧು ಯಾವತ್ ಪಿಬಾಮ್ಯಹಂ | ಮಯಾ ತ್ವಯಿ ಹತೇsತ್ರೈವ ಗರ್ಜಿಷ್ಯಂತ್ಯಾಶು ದೇವತಾಃ ||
(ಮೂಢನೆ! ನಾನು ಮಧುವನ್ನು ಕುಡಿಯುವ ತನಕ ಒಂದೆರಡು ಕ್ಷಣ ಗರ್ಜಿಸುತ್ತಿರು, ನಿನ್ನನ್ನು ನಾನು ಕೊಂದಮೇಲೆ ದೇವತೆಗಳು ಸಂತೋಷದಿಂದ ಗರ್ಜಿಸುತ್ತಾರೆ)
ಯುದ್ಧ ಮುಂದುವರೆಯಲು, ದೇವಿಯು ಮಹಿಷನ ಸಕಲಾಯುಧಗಳನ್ನು ಸರ್ವ ಯುದ್ಧತಂತ್ರಗಳನ್ನೂ ನಾಶಗೈದಳು. ಕೊನೆಗೆ ಸಿಂಹ, ಆನೆ ಹಾಗೂ ಮಹಿಷರೂಪಗಳಲ್ಲಿ ಮತ್ತೆ ಮತ್ತೆ ರೂಪಾಂತರಗೊಳ್ಳುತ್ತ ದೇವಿಯ ಮೇಲೆ ದ್ವಂದ್ವ ಯುದ್ಧಕ್ಕೆ ತೊಡಗಿದ ಮಹಿಷ. ಅವನು ಯಾವ ಯಾವ ರೂಪಗಳಲ್ಲಿ ಬಂದು ಹೇಗೆಲ್ಲ ಯುದ್ದಗೈದರೂ ದೇವಿಯು ಅವನನ್ನು ಎಡಬಿಡದೆ ಸೋಲಿಸಿಬಿಟ್ಟಳು. ಕೊನೆಗೆ, ಮಹಿಷನು ತನ್ನ ಮಹಿಷರೂಪದಿಂದ ನರರೂಪಕ್ಕೆ ಬದಲಾಗುತ್ತಿರುವಾಗ, ದೇವಿಯು ಶೂಲದಿಂದ ಅವನ ಎದೆಯನ್ನು ಸೀಳಿ ಸಂಹಾರಗೈದಳು. ಹೀಗೆ ರುದ್ರಭಯಂಕರನಾದ ಮಹಿಷನನ್ನು ಅವನ ಲಕ್ಷೋಪಲಕ್ಷ ಸೈನಿಕರನ್ನೂ ನಾಶಗೈದು ಲ್ಕೋಕಗಳಲ್ಲಿ ಪುನಃ ಶಾಂತಿ ಸಮತೋಲನಗಳನ್ನು ಸ್ಥಾಪಿಸಿದಳು. ದೇವತೆಗಳಿಗೆ ಸ್ವರ್ಗವನ್ನು ತಿರುಗಿಸಿಕೊಟ್ಟು, ಮಾನವ, ಯಕ್ಷ ಗಂಧರ್ವಾದಿಗಳೆಲ್ಲರಿಗೂ ಅಭಯವನ್ನಿತ್ತಳು. ಇದರ ಪುಣ್ಯ ಸ್ಮರಣೆಯಲ್ಲಿ ಅಷ್ಟಮೀ ನವಮಿಗಳ ಸಂಧಿಕಾಲದ ದುರ್ಗಾಪೂಜೆಯನ್ನು ಮಾಡುವ ಪದ್ಧತಿ ಪೂರ್ವಭಾರತದಲ್ಲಿದೆ. ಇಂದ್ರಾದಿ ದೇವತೆಗಳು ದೇವಿಯನ್ನು ಸ್ತುತಿಸಿದರು. ಆಪತ್ತು ಒದಗಿದಾಗಲೆಲ್ಲ ಸ್ಮರಿಸಿದಾಗ ಆವಿರ್ಭವಿಸಿ ರಕ್ಷಿಸುವುದಾಗಿ ದೇವಿಯು ಅಭಯವಿತ್ತಳು. ಹಿಂದೆ ಮಧುಕೈಟಭರೆಂಬ ರಕ್ಕಸರನ್ನು ಮಹಾವಿಷ್ಣುವಿನ ಮೂಲಕ ಕೊಲ್ಲಿಸಿದಳು. ಮುಂದೆ ಶುಂಭ-ನಿಶುಂಭ ಹಾಗೂ ಚಂದ-ಮುಂಡ, ರಕ್ತಬೀಜಾದಿ ಭಯಂಕರ ಅಸುರರನ್ನೂ ಕೊಂದು ಅಪಾರಾಜಿತೆ ಎನಿಸಿದಳು. ವಿಂಧ್ಯವಾಸಿನಿಯಾಗಿ ಅವತರಿಸಿ ಕಂಸ ಮತ್ತು ದಂತವಕ್ತ್ರಾಸುರರ ಸಂಹಾರಕ್ಕೆ ಶ್ರೀಕೃಷ್ಣನ ಮೂಲಕ ಕಾರಕಳಾದಳು. ಕಾಲಕಾಲಕ್ಕೆ ಅವತರಿಸಿ ಬಂದು ವೈಪ್ರಚಿತ್ತ, ದುರ್ಗಮ, ಅರುಣ ಮುಂತಾದ ಹಲವು ರಾಕ್ಷಸರನ್ನು ಕೊಂದು ಲೋಕಗಳನ್ನು ರಕ್ಷಿಸಿ ಧರ್ಮವನ್ನು ಸ್ಥಾಪಿಸಿದಳು.
ಇಂತಹ ದುಃಖಹಾರಿಣಿ ದೇವಿಯು ಈ ಚರಿತ್ರೆಗಳನ್ನು ಯಾರು ಆಲಿಸುತ್ತಾರೋ, ಅವತಾರಗಳ ಬಗ್ಗೆ ಧ್ಯಾನಿಸುತ್ತಾರೋ ಅವರಿಗೆ ಸಕಲ ಭೋಗ ಯೋಗಗಳ ಪ್ರಾಪ್ತಿ, ಇಷ್ಟಾರ್ಥಸಿದ್ಧಿ ಮತ್ತು ಪೀಡಾಪರಿಹಾರಗಳು ಉಂಟಾಗುವುದಲ್ಲದೆ ದೇವಿಯ ಈ ಅಭಯಪ್ರಾಪ್ತಿಯೂ ಉಂಟು-  
ಶ್ರುತ್ವಾ ಮಮೈತನ್ಮಾಹಾತ್ಮ್ಯಂ ತಥಾ ಚೋತ್ಪತ್ತಯಾಶ್ಶುಭಾಃ | ಪರಾಕ್ರಮಂ ಚ ಯುದ್ಧೇಷು ಜಾಯತೇ ನಿರ್ಭಯಾಃ ಪುಮಾನ್ ||
(ಯಾರು ನನ್ನ ಅವತಾರಗಳ ಹಾಗೂ ಯುದ್ಧಪರಾಕ್ರಮ ಮತ್ತು ಮಹಾತ್ಮ್ಯಗಳ ಕುರಿತಾಗಿ ಶ್ರವಣ ಮಾಡುತ್ತಾರೋ ಅವರು ಭಯಮುಕ್ತರಾಗುತ್ತಾರೆ)
ಶಕ್ತಿಯ ಆರಾಧನೆ ಕೇವಲ ಮುಗ್ಧಭಕ್ತಿಯ ವಿಷಯವಲ್ಲ. ಅದು ನಮ್ಮ ವ್ಯಕ್ತಿತ್ವದಲ್ಲಿ ತೇಜಸ್ಸು, ಶೌರ್ಯ ಹಾಗೂ ಕ್ರಿಯಾಶೀಲತೆಯನ್ನು ತುಂಬುತ್ತದೆ. ದೇವಿಯ ಈ ಸ್ವರೂಪ ಮಾಹಾತ್ಮ್ಯಗಳ ಬಗ್ಗೆ ಧ್ಯಾನಿಸುವವರಲ್ಲಿ ಶ್ರದ್ಧೆ, ಪ್ರೇಮ, ಧೈರ್ಯ, ಶೌರ್ಯ, ಪರಾಕ್ರಮಾದಿ ಸತ್ವಗಳನ್ನು ದೇವಿ ತುಂಬುತ್ತಾಳೆ. ಅವಳ ಶ್ರೀಕೃಪೆಯಿಂದ ನಮಗೆ ಶತ್ರುಗಳ ನಾಶ, ಕಾರ್ಯ-ಸಿದ್ಧಿ ಹಾಗೂ ಮನಸ್ಸಂತೋಷ ಶಾಂತಿ ಸಮೃದ್ಧಿಗಳು ಒದಗುತ್ತವೆ. 
ಸಾಮಾನ್ಯವಾಗಿ ಜಗನ್ಮಾತೆ ಯೋಗೀಶ್ವರನಾದ ಶಿವನ ಸತಿಯಾಗಿ ಸರಳ ಬಿಚ್ಚೋಲೆ ಗೌರಮ್ಮನಂತೆ ತಾನೂ ತಪೋಭಾವದಲ್ಲಿರುತ್ತಾಳೆ. ಆದರೆ ’ದುಷ್ಟ ದಮನ ಶಿಷ್ಟ ರಕ್ಷಣೆ’ಯ ಅಗತ್ಯ ಬಂದಾಗ ತನ್ನ ದಿವ್ಯ ವಿಭೂತಿಗಳನ್ನು ಮೆರೆದು ಸಕಲಾಯುಧಗಳನ್ನು ಹಿಡಿದು ದುರ್ಗೆಯಾಗಿ ನಿಲ್ಲುತ್ತಾಳೆ! ಪರಮ ಶಾಂತಿಯೇ ಭೀಷಣ ಶಕ್ತಿಯಾಗಿ ಪರಿವರ್ತನೆಗೊಳ್ಳುವ ಈ ಸೋಜಿಗ ಭಾವ್ಯವಾದದ್ದು, ಧ್ಯೇಯವಾದದ್ದು! ದೇವಿಯ ಸ್ವರೂಪವನ್ನು ಧ್ಯಾನಿಸುವ ಸ್ತ್ರೀಯರು ’ತಾವು ಅಬಲೆಯರು, ಕೇವಲ ಅಲಂಕಾರದ ಬೊಂಬೆಗಳು’ ಎನ್ನುವ ಕಲ್ಪಿತ ಭ್ರಮೆಯಿಂದ ಮೇಲೆದ್ದು ಶಕ್ತಿಸ್ವರೂಪಿಣಿಯರಾಗಿ ನಿಲ್ಲುತ್ತಾರೆ. ತಮ್ಮ ಕರ್ತೃತ್ವ, ಮಾತೃತ್ವ ಹಾಗೂ ನೇತೃತ್ವ ಶಕ್ತಿಗಳನ್ನು ಅಭಿವ್ಯಂಜಿಸಿ ತಮಗೂ, ಪರಿವಾರಕ್ಕೂ ಸಮಾಜಕ್ಕೂ, ದೇಶಕ್ಕೂ ಹಾಗೂ ವಿಶ್ವಕ್ಕೂ ಅಪಾರ ಯೋಗದಾನವನ್ನು ನೀಡಲು ಸಮರ್ಥರಾಗುತ್ತಾರೆ. ಆದ್ದರಿಂದಲೇ ನಮ್ಮ ಹೆಣ್ಣು ಮಕ್ಕಳು ಗೌರಿ ಹಾಗೂ ದುರ್ಗಾರೂಪಗಳನ್ನು ಪೂಜಿಸುವ ಪದ್ಧತಿಯನ್ನು ಪ್ರಾಜ್ಞರು ಪ್ರಾಚೀನಕಾಲದಿಂದಲೂ ಕಲ್ಪಿಸಿಕೊಟ್ಟಿದ್ದಾರೆ.  
ಶ್ರೀ ದುರ್ಗಾಮಾತೆಯು ನಮಗೆಲ್ಲ ಸುಖ-ಶಾಂತಿ-ಧೈರ್ಯ-ಧರ್ಮಬುದ್ಧಿ ಹಾಗೂ ಮುಮುಕ್ಷುತ್ವವನ್ನು ದಯಪಾಲಿಸಿ ಕಾಪಾಡಲಿ, ದೇಶಕ್ಕೆ ಸುಭಿಕ್ಷೆಯನ್ನೂ ಉತ್ತಮ ನಾಯಕರನ್ನೂ ಕರುಣಿಸಲಿ ಎಂದು ಹಾರೈಸೋಣ.

ಲೇಖಕರು –
ಡಾ ಆರತಿ ವಿ ಬಿ

Published in Mallara magazine, 2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ